Category Archives: Uncategorized

ತೀರಿಹೋದ ಜೀವವೊಂದರ ದೇವಸೌಂದರ್ಯ

dsc_0163ನಿನ್ನೆ ನಡು ಮಧ್ಯಾಹ್ನ ಇಂತಹದೇ ಹೊತ್ತು.ಮಳೆಗಾಲದ ಮೋಡಗಳನ್ನು ಚದುರಿಸಿ ಚಲ್ಲಾಪಿಲ್ಲಿ ಮಾಡಿದ್ದ ತುಂಟ ಸೂರ್ಯ ಬೇಕು ಬೇಕೆಂತಲೇ ಇನ್ನಷ್ಟು ವಯ್ಯಾರದಿಂದ ಹೊಳೆಯುತ್ತಿದ್ದ.
ಕಡು ನೀಲಿ ಆಕಾಶದ ಪ್ರಖರತೆಗೆ ಬೆದರಿ ಹಿಮ್ಮೆಟ್ಟುವಂತೆ ಚಲಿಸುತ್ತಿದ್ದ ಕರಿಯ ಬಿಳಿಯ ಮಳೆಯ ಮೋಡಗಳು.ಮಿನುಗುತ್ತಿದ್ದ ಭೂಮಿ, ದೂರದಲ್ಲಿ ದೊಡ್ಡದೊಂದು ದೇವರಂತೆ ಲೋಕಕ್ಕೆಲ್ಲಾ ಅಭಯದಂತೆ ನಿಂತುಕೊಂಡಿದ್ದ ನನ್ನ ಪ್ರೀತಿಯ ಅದೇ ಪರ್ವತ!
ಭೂಮಿಯ ಮೇಲೆ ಚಲಿಸುತ್ತಿದ್ದ ಮನುಷ್ಯರು,ಎದ್ದು ನಿಂತಿದ್ದ ಕಟ್ಟಡಗಳು, ಎಷ್ಟು ಬೆಳೆದು ಬದಲಾಗಿದ್ದರೂ ಕಂಡೊಡನೆ ಮತ್ತೆ ಅದೇ ವಾತ್ಸಲ್ಯ ಸೂಸುವ ಕಣ್ಣುಗಳು.

ಅಲ್ಲಿ ತೀರಿಹೋದ ಜೀವವೊಂದು ಅಂತ್ಯಸಂಸ್ಕಾರಕ್ಕಾಗಿ ಕೊನೆಯ ಸ್ನಾನ ಮಾಡಿಸಿಕೊಂಡು, ಸುತ್ತಿದ್ದ ಬಿಳಿ ಬಟ್ಟೆಯ ಮೇಲೆಲ್ಲ ಅತ್ತರು ಪೂಸಿಸಿಕೊಂಡು ಆ ಅಪೂರ್ವ ಹೊತ್ತಿಗೆ ಎಲ್ಲದಕ್ಕು ಸಾಕ್ಷಿಯಂತೆ, ಎಲ್ಲವನ್ನೂ ಒಂದೆಡೆಗೆ ಸೇರಿಸಿದ್ದಕ್ಕೆ ಕಾರಣೀಭೂತನಂತೆ ಒಳಗೊಳಗೆ ಖುಷಿ ಪಟ್ಟುಕೊಂಡವನಂತೆ ಉಸಿರಿಲ್ಲದೆ ಸುಮ್ಮನೆ ಮಲಗಿತ್ತು.
ನಾನು ತಲುಪುವ ಹೊತ್ತಿಗೆ ಮುಖವನ್ನೂ ಹತ್ತಿಯಿಂದ ಮುಚ್ಚಿ ಬಿಳಿಬಟ್ಟೆಯಿಂದ ಸುತ್ತಿ ಎತ್ತಿಕೊಂಡು ಹೋಗಲು ತಯಾರಾಗಿದ್ದರು.
ಆಯ್ತು ಇದೊಂದು ಸಲ ಕೊನೆಯ ಸಲ ಎಂಬಂತೆ ಮುಚ್ಚಿದ್ದ ಮುಖವನ್ನು ಸ್ವಲ್ಪ ತೋರಿಸಿದರು.
ಯಾವತ್ತೂ ಇದ್ದ ಹಾಗಿನ ಅದೇ ಮುಖ.
ಹೌದು ನನ್ನದೇ ಎಲ್ಲಾ ತಪ್ಪು ಆದರೆ ಯಾವುದಕ್ಕೂ ನಾನು ಕಾರಣನಲ್ಲ ಎಂದು ಹೇಳುವಂತಿದ್ದ ಅದೇ ಅಮಾಯಕ ತುಂಟ ಮುಖ.ತುಟಿಗಳ ನಡುವೆ ವಿನಾಕಾರಣವೆಂಬಂತೆ ಕ್ಷೀಣವಾಗಿ ಹೊಳೆಯುತ್ತಿದ್ದ ಕಟ್ಟಿಸಿಕೊಂಡಿದ್ದ ಒಂದು ಬೆಳ್ಳಿಯ ಹಲ್ಲು.
ಶೋಕತಪ್ತರ ನಡುವೆ ಕುಸಿಯುವಂತೆ ನಿಂತುಕೊಂಡಿದ್ದ ಮಡದಿ ಮತ್ತೆ ಕೊನೆಯ ಸಲ ನೋಡಲೆಂಬಂತೆ ಓಡಿಬಂದಾಗ ಆ ಮುಖವನ್ನು ಮತ್ತೆ ಮುಚ್ಚಲಾಯಿತು ಮತ್ತು ಪ್ರಾರ್ಥನಾ ಮಂದಿರದತ್ತ ಕೊನೆಯ ಪ್ರಾರ್ಥನೆಗಾಗಿ ಎತ್ತಿಕೊಂಡು ಹೋಗಲಾಯಿತು.

2011-04-20_7321ನಾನು ಜೀವನದಲ್ಲಿ ಇದೇ ಮೊದಲ ಸಲ ಎಂಬಂತೆ ಆ ಪ್ರಾರ್ಥನಾ ಮಂದಿರದಲ್ಲಿ ಕೈಕಟ್ಟಿಕೊಂಡು ಪ್ರಾರ್ಥಿಸುತ್ತಿದ್ದೆ.ಸಣ್ಣದಿರುವಾಗ ಹೀಗೆಯೇ ಪ್ರಾರ್ಥನಾ ಮಂದಿರದಲ್ಲಿ ಕೈಕಟ್ಟಿಕೊಂಡು ನಿಂತುಕೊಂಡಾಗ ತಲೆಯೊಳಗೆ ಬಂದು ಸೇರುತ್ತಿದ್ದ ಕಥೆಗಳು, ಕವಿತೆಗಳು!
ಭಕ್ತಿಯೂ ಇಲ್ಲದೆ ಭಯವೂ ಹುಟ್ಟದೆ ಅದರ ಬದಲು ನದಿಯಂತೆ ಎದೆಯಲ್ಲಿ ಹರಿದುಹೋಗುತ್ತಿದ್ದ ತುಂಟತುಂಟ ಆಲೋಚನೆಗಳು.
ಆ ದೇವರು ಇರುವುದಾದರೆ, ಅವನಿಗೆ ಎಲ್ಲವ ಕರುಣಿಸುವ ಕಾರುಣ್ಯ ಇರುವುದಾದರೆ ನಡುಹೊತ್ತಿನ ತಂಗಾಳಿಯ ಸುಖದಂತಹ ಅವಳೊಬ್ಬಳ ಸಾಮೀಪ್ಯ ಸಿಗಲೆಂದು ಅಮಾಯಕನಾಗಿ ಪ್ರಾರ್ಥಿಸುತ್ತಿದ್ದ ಹುಚ್ಚುಹುಚ್ಚು ದಿನಗಳು.
ಅದರಿಂದ ಹುಟ್ಟುತ್ತಿದ್ದ ಹುಚ್ಚುಹುಚ್ಚು ಆಲೋಚನೆಗಳು.
ಪುಂಖಾನುಪುಂಖವಾಗಿ ಹುಟ್ಟುತ್ತಿದ್ದ ಕಥೆಗಳು ಕವಿತೆಗಳು.
ಆದರೆ ದೇವರು ಇರುವುದು ಇಂತಹ ಹುಚ್ಚುಹುಚ್ಚು ಬೇಡಿಕೆಗಳಿಗಾಗಿ ಅಲ್ಲ ಎಂದು ಅರಿವಾಗಿ ಪ್ರಾರ್ಥಿಸುವುದನ್ನು ನಿಲ್ಲಿಸಿದ್ದೆ. ಅದರ ಬದಲು ಪ್ರಾರ್ಥಿಸುತ್ತಿದ್ದವನೊಬ್ಬನ ಮನಸ್ಸನ್ನು ಹೊಕ್ಕು ಅವನೇನು ಪ್ರಾರ್ಥಿಸುತ್ತಿರುವನು ಎಂದು ಅರಿಯಲು ನೋಡುತ್ತಿದ್ದೆ.
ಮಸೀದಿಗಳ ಅಗಾಧ ಏಕಾಂತದಂತಹ ಮೌನದ ಒಳಗೆ, ಗರ್ಭಗುಡಿಗಳ ಒಳಗೆ ಹೊಳೆಯುತ್ತ ನಿಂತಿರುವ ದೇವಾನುದೇವತೆಗಳ ಕಣ್ಣುಗಳಲ್ಲಿ. ಗಗನದ ಕಡೆ ತಲೆ ಎತ್ತಿಕೊಂಡು ನಿಂತಿರುವ ಇಗರ್ಜಿಗಳ ಬಲಿಪೀಠಗಳಲ್ಲಿ, ಕಾಡುಗಳ ಒಳಗಿನ ಭೂತಸ್ಥಾನಗಳಲ್ಲಿ, ರಾಕ್ಷಸನ ಹಾಗಿರುವ ಮರಗಳ ಅನೂಹ್ಯ ಪೊಟರೆಗಳಲ್ಲಿ ನೆಲೆಸಿರುವ ಮಾತೃದೇವತೆಗಳ ಸನ್ನಿಧಿಯಲ್ಲಿ ಎಲ್ಲ ಕಡೆಯೂ ಧೀನನಾಗಿ ಪ್ರಾರ್ಥಿಸುತ್ತಿರುವ ಬಹುತೇಕ ನರಮನುಷ್ಯರ ಬೇಡಿಕೆಗಳಲ್ಲಿ ನನಗೆ ಆಧ್ಯಾತ್ಮಗಳೇನೂ ಕಂಡು ಬರದೆ ಕಥೆಗಳಿಗೂ ಕಾದಂಬರಿಗಳಿಗೂ ವಸ್ತುವಾಗಬಲ್ಲ ಗಂಭೀರವೂ ರಸಭರಿತವೂ ಆದ ಕಥಾಪ್ರಸಂಗಗಳೇ ಕಾಣಿಸತೊಡಗಿ ಪ್ರಾರ್ಥಿಸದಿರುವುದು ಅಷ್ಟೇನೂ ಕೆಟ್ಟದೇನೂ ಅಲ್ಲ ಎಂದು ಸುಮ್ಮನೆ ಓಡಾಡುತ್ತಿದ್ದೆ.2010-11-03_2197

ನಿನ್ನೆ ಮಳೆ ನಿಂತ ಮೇಲಿನ ನಡು ಹಗಲ ಆ ಹೊತ್ತಲ್ಲಿ ತೀರಿಹೋದ ಆ ದೇಹವನ್ನು ಬೆಳ್ಳನೆಯ ಬಟ್ಟೆಯಲ್ಲಿ ಸುತ್ತಿ, ಅತ್ತರು ಪೂಸಿ, ಹೆಗಲಲ್ಲಿ ಹೊತ್ತುಕೊಂಡು ನಿದಾನಕ್ಕೆ ನಡೆದು, ನೋವಾಗದಂತೆ ಮೆಲ್ಲಗೆ ಅದನ್ನು ಪ್ರಾರ್ಥನಾ ಮಂದಿರದ ನಿಶ್ಯಭ್ಧ ಮೌನದಲ್ಲಿ ಇರಿಸಿ ಅದರ ಇರವಿನ ಅರಿವಿನಲ್ಲಿ ಪ್ರಾರ್ಥಿಸುತ್ತಿರುವಾಗ ಏನೂ ಮರೆತೇ ಇಲ್ಲವೆಂಬಂತೆ ಕೈಕಾಲುಗಳು ಚಲಿಸುತ್ತಿದ್ದವು.
ನಿನ್ನೆ ತಾನೇ ಇಲ್ಲಿ ಪ್ರಾರ್ಥಿಸಿ ಮುಗಿಸಿ ಎದ್ದು ಹೋಗಿರುವೆನೋ ಎಂಬಂತೆ ತುಟಿಯಿಂದ ಹೊರಡುತ್ತಿರುವ ಆರಾಧನೆಯ ವಾಕ್ಯಗಳು.
ಎಲ್ಲ ಮೊದಲೇ ನಿರ್ದರಿಸಿರುವಂತೆ ಚಲಿಸುತ್ತಿರುವ ಆವಯವಗಳು.
ತಲೆಯ ತುಂಬ ತುಂಬಿಕೊಂಡಿರುವ ಪಡೆದವನ ರೂಪವಿಲ್ಲದ ರೂಪ.
ನಾನೂ ಎಲ್ಲರೊಡನೆ ತೀರಿಹೋದವನನ್ನು ನರಕದ ಶಿಕ್ಷೆಯಿಂದ ಪಾರು ಮಾಡು ಪಡೆದವನೇ ಎಂದು ಕೇಳಿಕೊಳ್ಳುತ್ತಿದ್ದೆ. ಆಯ್ತು ಸರಿ ಸರಿ ಅನ್ನುವ ಹಾಗೆ ಪ್ರಾರ್ಥನಾ ಮಂದಿರದ ಗೋಪುರದ ಮೇಲಿಂದ ಹಾದು ಹೋಗುತ್ತಿರುವ ಮಳೆಯ ಮೋಡಗಳು.
ಹೌದು ನನ್ನ ಹಾಗೆಯೇ ನರಕದ ಶಿಕ್ಷೆಯಿಂದ ಪಾರು ಮಾಡಲೇ ಬೇಕಾದ ಈ ಜೀವವೇ ಎಂದು ನಡು ನಡುವಲ್ಲಿ ಸೇರಿಸಿಕೊಳ್ಳುತ್ತಿದ್ದೆ.
ಪಡೆದವನೇ ಈ ಭೂಮ್ಯಾಕಾಶ ಮತ್ತು ಅದರಲ್ಲಿ ಅಡಗಿರುವ ಎಲ್ಲ ಅಸ್ತಿತ್ವಗಳಿಗೂ ನೀನೇ ಪ್ರಕಾಶಕನಾಗಿರುವಿ.ನಿನ್ನ ಅಸ್ತಿತ್ವ ಸತ್ಯ, ನಿನ್ನ ವಾಗ್ದಾನ ಸತ್ಯ ಮತ್ತು ನಿನ್ನ ವಚನಗಳೆಲ್ಲವೂ ಸತ್ಯವಾಗಿರುತ್ತದೆ.ನನ್ನ ಮೊರೆಯನ್ನು ನಿನ್ನ ಮುಂದಿಟ್ಟಿರುವೆ.ನನ್ನ ಕಳೆದುಹೋದದ್ದೂ, ಬಹಿರಂಗಗೊಳ್ಳದ್ದೂ ಮತ್ತು ಬಾಹ್ಯವಾದದ್ದೂ ಆದ ಪಾಪಗಳ ಅರಿವಿರುವ ನೀನು ನರಕದ ಶಿಕ್ಷೆಯಿಂದ ಪಾರು ಮಾಡು ಪಡೆದವನೇ ಎಂದು ಜೀವವಿಲ್ಲದ ಆ ದೇಹವೂ ನನ್ನೊಡನೆ ಬೇಡಿಕೊಳ್ಳುತ್ತಿರುವಂತೆ ಮತ್ತೆ ತಲೆಯೊಳಗೆ ಕಥಾಪ್ರಸಂಗಗಳು ಓಡಾಡತೊಡಗಿ ಸಣ್ಣಗೆ ನಗುವೂ ಬೇಸರವೂ ಮೆಲ್ಲಗಿನ ಹೆದರಿಕೆಗಳೂ ತುಂಬಿಕೊಳ್ಳುತ್ತಿದ್ದವು.dsc_0167

ಒಬ್ಬ ಪ್ರೇಮಿಯಂತೆ, ಒಬ್ಬ ವಿರಹಿಯಂತೆ, ಒಬ್ಬ ಬಂಡಾಯಗಾರನಂತೆ, ಒಂದು ಕೆಟ್ಟ ಗಂಡಸಿನಂತೆ, ಕುಡುಕನಂತೆ, ಕಥೆಗಾರನಂತೆ, ಅಪರೂಪಕ್ಕೆ ವಾತ್ಸಲ್ಯಮಯಿ ನೆಂಟನಂತೆ ಬದುಕಿದ್ದ ಮನುಷ್ಯ ತನ್ನ ಇನ್ನೇನು ಒಂದು ವರ್ಷದಲ್ಲಿ ತನ್ನ ಕೊನೆಗಾಲ ಬಂದಿತು ಅನಿಸಿದಾಗ ಇದ್ದಕ್ಕಿದ್ದಂತೆ ಸರಿಯಾಗಿದ್ದರು.
ಪ್ರಾರ್ಥನಾ ಮಂದಿರಕ್ಕೆ ತೆರಳಿ ಪ್ರಾರ್ಥಿಸಲು ತೊಡಗಿದ್ದರು.
ಅದೆಲ್ಲಿ ಇತ್ತೋ ಮಿದುಳಲ್ಲಿ ಧಾರ್ಮಿಕವಾದ ಕಥಾಪ್ರಸಂಗಗಳು ಎದುರು ಬಂದವರಿಗೆ ಹೇಳಲು ತೊಡಗಿದ್ದರು.
ಖಾಸಗಿ ಬಿಕ್ಕಟ್ಟುಗಳನ್ನು ಪರಿಹರಿಸುವಾಗ ಅನುಸರಿಸಬೇಕಾದ ಧಾರ್ಮಿಕ ಕಟ್ಟುಕಟ್ಟಲೆಗಳು, ಮರಣದ ಹೊತ್ತಲ್ಲಿ ಪಾಲಿಸಬೇಕಾದ ಅಂತ್ಯ ಸಂಸ್ಕಾರಗಳು ಎಲ್ಲವನ್ನು ಆ ಊರಿನ ಅರಿಯದವರಿಗೆ ಹೇಳಬಲ್ಲವರಾಗಿದ್ದರು.
ಹಾಗಾಗಿ ಅದುವರೆಗೆ ಅವರನ್ನು ಧ್ವೇಷಿಸುತ್ತಿದ್ದವರೂ ಮರಣದ ಹೊತ್ತಲ್ಲಿ ಅವರ ಅಭಿಮಾನಿಗಳಾಗಿ ನರಕದ ಶಿಕ್ಷೆಯಿಂದ ಅವರನ್ನು ಪಾರುಮಾಡುವಂತೆ ಒಕ್ಕೊರಲಲ್ಲಿ ನಿಶ್ಯಬ್ಧವಾಗಿ ಆ ಪ್ರಾರ್ಥನಾ ಮಂದಿರದ ನೀರವತೆಯಲ್ಲಿ ಪ್ರಾರ್ಥಿಸುತ್ತಿದ್ದರು.

ಕೊನೆಯಲ್ಲಿ ಅವರ ಮರಣಿಸಿದ ದೇಹವನ್ನು ಆ ಊರಿನ ಅಡವಿಯೊಳಗಿನ ಖಬರಸ್ಥಾನದಲ್ಲಿ ಮಣ್ಣಿನೊಳಗಡೆ ಇಳಿಸಲಾಯಿತು.
ಎಲ್ಲಿಂದಲೋ ಬಂದು ಹಾಡಲು ತೊಡಗಿದ ಪಂಚವರ್ಣದ ಗಿಳಿಗಳು, ಕಾಡು ಮೈನಾ ಹಕ್ಕಿಗಳು, ಜೀಕುವ ಜೀರುಂಡೆಗಳು ಮತ್ತು ಈ ನೆಲದ ನಿಜದ ವಾರಸುದಾರರು ನಾವೇ ಎಂಬಂತೆ ಹರಿದಾಡುತ್ತಿದ್ದ ಇರುವೆಗಳು.ಅದಾಗಲೇ ಮಣ್ಣಲ್ಲಿ ಮಣ್ಣಾಗಿ ಹೋದವರ ತಲೆಯ ದಿಕ್ಕಿಗೆ ನೆಟ್ಟಿದ್ದ ಗೋರಿಕಲ್ಲುಗಳ ಮೇಲೆ ಬಲೆ ಹರಡಿಕೊಂಡು ಉಲ್ಲಾಸದಲ್ಲಿ ಕಾಯುತ್ತಿದ್ದ ವಿವಿದ ಜಾತಿಗಳ ಜೇಡಗಳು.
ಯಾವ ಚಕ್ರವರ್ತಿಗೂ, ಕವಿಗೂ ಸಿಗದಂತಹ ಅಂತಿಮ ವಿಶ್ರಮದ ಜಾಗ ಈ ನನ್ನ ಕಥಾನಾಯಕನ ಪಾಲಾಗಿತ್ತು.
ನಾನು ಇದುವರೆಗೆ ಗಮನಿಸಿರದ ನುಣುಪು ಕೊಂಬೆಗಳ ನಸು ಹಸಿರು ಬಣ್ಣದ ಉದ್ದನೆಯ ಎಲೆಯಿರುವ ಆಕಾಶಕ್ಕೆ ತಲೆಯೆತ್ತಿ ನಿಂತಿರುವ ಸುಂದರಿಯ ಹಾಗಿರುವ ಮರ.
ಅದರ ಕೆಳಗಿನ ತಣ್ಣನೆಯ ಮಣ್ಣಲ್ಲಿ ಇನ್ನು ಅಂತಿಮ ತೀರ್ಮಾನದವರೆಗೆ ಇರುವ ಅವಕಾಶ ಈ ನನ್ನ ಕಥಾ ನಾಯಕನಿಗೆ.
ಪಡೆದವನ ಕರುಣೆಗಳ ಯೋಚಿಸುತ್ತಾ ಅಲ್ಲಿ ನಿಂತುಕೊಂಡಿದ್ದೆdsc_0034

3rd July 2015

Photos By the Author

ಅಸಹಿಷ್ಣುತೆ ಮತ್ತು ಗೋಲಾನಿನ ಬೆಟ್ಟಗಳು

11081326_10152876693108246_4411904341889138437_n
ಅಸಹಿಷ್ಣುತೆಯ ಕುರಿತು ಮಾತನಾಡುವಾಗ ಸುಮಾರು ಹದಿನಾರು ಹದಿನೆಂಟು ವರ್ಷಗಳ ಹಿಂದಿನ ಸಂಗತಿಯೊಂದು ನೆನಪಾಗುತ್ತದೆ.
ಆಗ ನಾನು ‘ಲಂಕೇಶ್ ಪತ್ರಿಕೆ‘ ಗೆ ಷಿಲ್ಲಾಂಗಿನಿಂದ ಅಂಕಣ ಬರೆಯುತ್ತಿದ್ದೆ.
ಲಂಕೇಶರು ಇಷ್ಟಪಟ್ಟು ಬರೆಸುತ್ತಿದ್ದ ಅಂಕಣ ಅದು.
ಯಾಕೋ ಏನೋ ನನ್ನ ಕಂಡರೆ ವಿಪರೀತ ಮಮತೆ ಅವರಿಗೆ.ಆ ಮಮತೆಯನ್ನು ತಮ್ಮೊಳಗೆ ಇಟ್ಟುಕೊಳ್ಳಲಾಗದೆ ತಮ್ಮ ಪತ್ರಿಕಾ ಖಚೇರಿಗೆ  ಬಂದವರೊಡನೆಯೂ ಹಂಚಿಕೊಳ್ಳುತ್ತಿದ್ದರು.
 ‘ ಈ ಸಾಬಿ ಎಷ್ಟು ಚೆನ್ನಾಗಿ ಬರೀತಾನೆ ನೋಡಿ‘ ಎಂದು ನನ್ನ ಅಂಕಣವನ್ನು ಅವರೆದುರಿಗೆ ಹಿಡಿಯುತ್ತಿದ್ದರು.
ಈ ಸಂಗತಿ ದೂರದ  ಷಿಲ್ಲಾಂಗಿನಲ್ಲಿದ್ದ ನನಗೆ ಗೊತ್ತಾಗಿ ಒಂಥರಾ ಸಂಕಟವಾಗಿತ್ತು.
ಏಕೆಂದರೆ ನಾನು ಕೂಡಾ  ಉರ್ದು ಮಾತನಾಡುವ ಮುಸಲ್ಮಾನರನ್ನು ಸಾಬರು ಎಂದೇ ಕರೆಯುತ್ತಿದ್ದೆ.
ನಮ್ಮ ಊರಿನ ಮುಸಲ್ಮಾನರಲ್ಲಿ ಅರ್ದದಷ್ಟು  ಜನರು ಸಾಬರು.ಟೀಪೂ ಸುಲ್ತಾನನ ಕಾಲದಲ್ಲೋ ಅದಕ್ಕೂ ಹಿಂದೋ ಮೂಡಲ ಸೀಮೆಯ ಕಡೆಯಿಂದ ಬಂದು ಕೊಡಗಿನಲ್ಲಿ ನೆಲೆಸಿದವರು.
ಉಳಿದ ಅರ್ದ ಕೇರಳದ ಕಡೆಯಿಂದ ಬಂದ ಮಾಪಿಳ್ಳೆ ಜನರು, ಕರಾವಳಿಯ ಕಡೆಯಿಂದ ಬಂದ ಬ್ಯಾರಿ ಜನರು, ಕಾಸರಗೋಡಿನ ಕಡೆಯಿಂದ ಬಂದ ಇಚ್ಚಾಗಳು, ಕಾಕಾಗಳು ಇತ್ಯಾದಿ.
ಸಾಬರ ಹುಡುಗರು ಹನಫಿ ಮದರಸಕ್ಕೆ ಹೋಗುತ್ತಿದ್ದರೆ ನಾವು ಶಾಫಿ ಮದರಸಕ್ಕೆ ಹೋಗುತ್ತಿದ್ದೆವು.
ನಮ್ಮ ಆಹಾರದಲ್ಲಿ ಕುಸುಬಲಕ್ಕಿಯ ಅನ್ನ, ಸಮುದ್ರದ ಮೀನು ಹೇರಳವಾಗಿದ್ದರೆ ಸಾಬರಲ್ಲಿ ಬಿರಿಯಾನಿ, ಕುರಿಮಾಂಸ ಧಾರಾಳವಾಗಿರುತ್ತಿದ್ದವು.
ಮಲಯಾಳ, ತುಳು, ಕನ್ನಡ ಮಿಶ್ರಿತವಾದ ಭಾಷೆಯನ್ನು ನಾವು ಆಡುತ್ತಿದ್ದರೆ ಮೂಡುಸೀಮೆಯ ಇಕಾರಾಂತ್ಯದ ದಖನಿಯನ್ನು ಅವರು ನುಡಿಯುತ್ತಿದ್ದರು.
ಅವರನ್ನು ನಮ್ಮ ಹಾಗೆಯೇ ಇರುವ ಮುಸಲ್ಮಾನರು ಎಂದು ಒಪ್ಪಿಕೊಳ್ಳಲು ಹುಡುಗರಾದ ನಮಗೆ ಎಷ್ಟು ಕಷ್ಟವಾಗುತ್ತಿತ್ತೋ ಅದಕ್ಕಿಂತಲೂ ಕಷ್ಟ ನಮ್ಮನ್ನು ಒಪ್ಪಿಕೊಳ್ಳಲು ಸಾಬರ ಹುಡುಗರಿಗೆ ಆಗುತ್ತಿತ್ತೇನೋ!
ಈ ಬಾಲ್ಯವೂ ಕಳೆದು, ಹುಡುಗಾಟವೂ ಮುಗಿದು, ಉರಿಯುವ ಯೌವನವನ್ನೂ ದಾಟಿ ಅಸ್ಸಾಂ ಬಾಂಗ್ಲಾದೇಶಗಳ ನಡುವಿನ ಕಡಿದಾದ ಪ್ರಪಾತದೊಳಗಿರುವ ಷಿಲ್ಲಾಂಗಿನ ಬೆಚ್ಚನೆಯ ಬಿಸಿಲಲ್ಲಿ ಚಳಿ ಕಾಯಿಸುತ್ತಾ  ಅಲ್ಲಿನ ಉಗ್ರಗಾಮಿ ಸಂಘಟನೆಗಳ ಯುವಕರಿಂದ ಇಂಡಿಯನ್ ಎಂದು ಬೈಸಿಕೊಳ್ಳುತ್ತಾ  ಕನ್ನಡದ ಒಂದೊಂದೇ ಅಕ್ಷರಗಳನ್ನು ಪ್ರೀತಿಯಿಂದ ನೇವರಿಸುತ್ತಾ ಬರೆದು ಕಳಿಸುತ್ತಿದ್ದರೆ ಪ್ರೀತಿಯ ಲಂಕೇಶರು ಒಂದೇ ಪದದಲ್ಲಿ `ಸಾಬಿ’ ಎಂದು ಬಿಡುವುದೇ!!
 427108_292290897545800_1202105837_nಸಿಟ್ಟು ಬಂದಿತ್ತು. ಅದೊಂಥರಾ ಅದು ಆ ಕಾಲದ ಅಸಹಿಷ್ಣುತೆಯ ವಿರುದ್ದದ ಸಿಟ್ಟು.ಕುವೆಂಪು ಬರೆದ ಕರಿಮೀನು ಸಾಬರು, ತೇಜಸ್ವಿಯವರ ಪ್ಯಾರ, ಲಂಕೇಶರ ಇಕ್ಬಾಲ್ ನಿಸಾರರ ರಂಗೋಲಿಯ ಮುಂದೆ ನಿಂತ ಮಗ, ಬೊಳುವಾರ ಇಟ್ಟಿಗೆ. ಸಾರಾ ಅವರ ತಲಾಖ್ ಇವರೆಲ್ಲರೂ ಒಂದು ರೀತಿಯ ಪಡಿಯಚ್ಚುಗಳಾಗಿ ತಲೆಯೊಳಗೆ ಸುತ್ತುತ್ತಾ. ಆ ಪಡಿಯಚ್ಚಿನೊಳಗೆ ನಾನೂ ಎರಕಗೊಂಡಂತೆ ಇರಿಟೇಟ್ ಗೊಳ್ಳುತ್ತಾ ಲಂಕೇಶರಿಗೆ,  ‘ನನ್ನನ್ನು ಸಾಬಿ ಎಂದು ಕರೆಯಬೇಡಿ‘ ಎಂಬ ಹೆಸರಿನಲ್ಲಿ ಅಂಕಣ ಬರೆದು ಕಳಿಸಿದ್ದೆ.
ಅದನ್ನು ಅವರು ಹಾಗೇ ಪ್ರಕಟಿಸಿ ಮೆಚ್ಚುಗೆ ಸೂಚಿಸಿದ್ದರು.
ಜೊತೆಗೆ ಒಂದು ಪತ್ರವನ್ನೂ  ಬರೆದಿದ್ದರು. ಕೀರಂ ಜೊತೆಗೆ ಷಿಲ್ಲಾಂಗಿಗೆ ಬರಬೇಕು ಮತ್ತು  ನನ್ನ ಜೊತೆ ಬಿರಿಯಾನಿ ತಿನ್ನಬೇಕು ಅನ್ನುವುದು ಅವರ ಆಶೆ!
ನಾನಾದರೋ ಅಲ್ಲಿ ಹೇರಳವಾಗಿ ಸಿಗುವ ಎಲ್ಲ ಪಶುಪ್ರಾಣಿಗಳ ಕರುಳನ್ನೂ ಲಿವರನ್ನೂ ಸವಿಯುತ್ತಾ,  ಹಾವನ್ನೂ ಶುನಕವನ್ನೂ ಪ್ರೀತಿಯಿಂದ ಸೇವಿಸುವ ಗೆಳೆಯ ಗೆಳತಿಯರ ಮನೆಗಳಿಗೆ ಭೇಟಿ ಕೊಟ್ಟು ಅಲ್ಲಿನ ಅನೂಹ್ಯ ಪರಿಮಳಗಳಿಗೆ ಮಾರು ಹೋಗುತ್ತಿರಬೇಕಾದರೆ ಈ ಲಂಕೇಶರ ಬಿರಿಯಾನಿಯ ಆಶೆಯ ಮುಗ್ದತೆಗೆ ನಗು ಬಂದಿತ್ತು.
ಅಸಹಿಷ್ಣುತೆಯ ಕುರಿತು ಬರೆಯುವ ಹೊತ್ತಲ್ಲಿ ಇದನ್ನೆಲ್ಲ  ಯಾಕೆ ಹೇಳುತ್ತಿರುವೆನೆಂದರೆ ಅಸಹಿಷ್ಣುತೆ ಎಂಬುದು ಎಷ್ಟು ಕ್ರೂರವೋ ಅಷ್ಟೇ ಅದು ಮುಗ್ದ  ಅಜ್ಜಾನವೂ ಆಗಬಲ್ಲುದು ಎಂಬುದನ್ನು ಹೇಳುವುದಕ್ಕಾಗಿ.
ಇನ್ನೊಂದು ಜೀವನ ವಿಧಾನದ ಕುರಿತಾದ ಅಸಹನೆಯಷ್ಟೇ ಅಪಾಯಕಾರಿ ಅದರ ಕುರಿತಾದ ಸ್ಟೀರಿಯೋಟೈಪ್ ಪ್ರೀತಿ ಕೂಡಾ.
ಗೋರಿಯಲ್ಲಿ ಮಲಗಿರುವ ಟೀಪೂ ಸುಲ್ತಾನನ್ನು ಎಬ್ಬಿಸಿ ಕೊಡಗಿನ ಕಣಿವೆಯಲ್ಲಿ ಕೊಲೆಗಳಿಗೆ ಕಾರಣವಾಗುವುದು ಇನ್ನೊಂದು ರೀತಿಯ ಪ್ರಗತಿಪರ ಅಜ್ಞಾನದಿಂದುಂಟಾದ ಅಸಹಿಷ್ಣುತೆ.
2010-10-20_1553ನಾನು ಕೊಡಗಿನಲ್ಲಿ ಓಡಾಡುತ್ತಿರುವಾಗ ಕಲವು ಹಳ್ಳಿಗಳ ಒಳಹೊಕ್ಕು ಕಥೆಗಳನ್ನು ಕೇಳುತ್ತಿದ್ದೆ.
ಅಂತಹದೊಂದು ಹಳ್ಳಿಯ ಹೆಸರನ್ನು ಮಲೆ ಕೇರಿ ಅಂತ ಇಟ್ಟುಕೊಳ್ಳಿ.
ಬಹಳ ಹಿಂದೆ ಮಲೆಯೊಂದರ ಕೆಳಗೆ ಹಬ್ಬಿಕೊಂಡಿದ್ದ ಹಳ್ಳಿಯಾಗಿತ್ತು ಅದು.
ಈಗ ಆ ಹಳ್ಳಿ ಈಸ್ಟ್ ಮಲೆ ಕೇರಿ ಮತ್ತು ವೆಸ್ಟ್ ಮಲೆಕೇರಿ ಎಂದು ಇಬ್ಭಾಗವಾಗಿದೆ.
ನಡುವಲ್ಲಿ ಹಾವಿನಂತೆ ಹರಿಯುತ್ತಿರುವ ಸರಕಾರೀ ರಸ್ತೆ.
ಟೀಪೂ ಸುಲ್ತಾನನ ಕಾಲದಲ್ಲಿ ಮತಾಂತರಗೊಂಡು ಶ್ರೀರಂಗಪಟ್ಟಣದ  ಕಡೆ ಹೋಗಿದ್ದ ತಮ್ಮದೇ ಊರಿನವರು ಟೀಪುವಿನ ಮರಣಾನಂತರ ಮುಸಲ್ಮಾನರಾಗಿ  ಮರಳಿ ಬಂದಾಗ ಈ ಊರವರು ಅವರನ್ನು ಧ್ವೇಷಿಸಿ ಹಿಂದಕ್ಕೆ ಅಟ್ಟುವ ಮನಸ್ಥಿತಿಯಲ್ಲಿರಲಿಲ್ಲ.ಏಕೆಂದರೆ ಅವರೆಲ್ಲರೂ ಅಣ್ಣ ತಮ್ಮಂದಿರೂ, ದಾಯಾದಿಗಳೂ ಆಗಿದ್ದರು.
ಹಾಗಾಗಿ ಅವರಿಗೆ ಮಲೆಯ ಪೂರ್ವ ಕಡೆಗಿದ್ದ ಗದ್ದೆ ಬಯಲುಗಳನ್ನು ನೀಡಿ ಅಲ್ಲೇ ವಾಸಿಸಲು ಹೇಳಿದರು.
ಅವರಾದರೋ ಅತ್ತ ಕಡೆ ಪೂರ್ತ ಮುಸಲ್ಮಾನರೂ ಆಗದೆ ಇತ್ತ ಕಡೆ ಕೊಡವರೂ ಆಗಲಾರದೆ  ಬದುಕಲು ತೊಡಗಿದರು.
ಅದೇ ಮಲೆ , ಅದೇ ಆಕಾಶ,ಅದೇ ಗದ್ದೆ ಬಯಲು ಆದರೆ ಅತಂತ್ರ ಬದುಕು.
ಈ ಹಳ್ಳಿಯ ಹಳೆಯ ಮಸೀದಿಯೊಂದರಲ್ಲಿ ಪುರಾತನವಾಗಿದ್ದ ಧರ್ಮ ಗ್ರಂಥವನ್ನು ಓದುತ್ತಾ ಕುಳಿತಿದ್ದ ಮುದುಕನೊಬ್ಬನನ್ನು ನಾನು ಮಾತನಾಡಿಸಿದ್ದೆ.
2011-07-05_9190ತಲೆತಲಾಂತರಗಳ ಹಿಂದೆ ಮಧ್ಯಪ್ರಾಚ್ಯದಿಂದ ಧಾರ್ಮಿಕ ಅಸಹಿಷ್ಣುತೆಯಿಂದ ತಪ್ಪಿಸಿಕೊಂಡು ಹಾಯಿ ಹಡಗಿನಲ್ಲಿ ಅರಬೀಕಡಲನ್ನು ದಾಟಿ ಇಂಡಿಯಾದ ಕರಾವಳಿಯಲ್ಲಿ ಇಳಿದು ಪಶ್ಚಿಮಘಟ್ಟವನ್ನು ಹತ್ತಿ ಕೊಡಗಿನ ಕಾಡಲ್ಲಿ ನೆಲೆ ಕಂಡುಕೊಂಡವರು ಈತನ ಪೂರ್ವಜರು.
ಅಲ್ಲಿಂದ ಅದನ್ನು ತಪ್ಪಿಸಿಕೊಂಡು ಇಲ್ಲಿಗೆ ಬಂದರೆ ಇಲ್ಲಿ ಅದು ಟಿಪ್ಪುವಿನ ರೂಪದಲ್ಲಿ ನನ್ನ ಹಿರಿಯರನ್ನು ಹಿಡಕೊಂಡಿತು ಎಂದು ಆ ಮುದುಕ ಕುರಾನು ಓದುತ್ತಾ ನಕ್ಕಿತ್ತು.
ಆತನ ನಗುವಲ್ಲಿ ಸಿಟ್ಟೇನೂ ಇರಲಿಲ್ಲ.ಬದಲಾಗಿ ಕಾಲದ ಕೀಟಲೆಗಳ ಕುರಿತ ಒಂದು ತುಂಟ ನಗು!
ಇಂತಹ ನೆಲದಲ್ಲಿ ಟೀಪೂ ಸುಲ್ತಾನನು ಸ್ವಾತಂತ್ರ್ಯ ಸೇನಾನಿಯೂ ಅಲ್ಲ, ಸ್ವಾಭಿಮಾನದ ಸಂಕೇತವೂ ಅಲ್ಲ.ಆತ ಒಬ್ಬ ಸುಲ್ತಾನ.ಎಲ್ಲ ಅರಸರ ಹಾಗಿರುವ ಒಬ್ಬ ಅರಸ.
ಆತನ ಜನ್ಮ ದಿನವನ್ನು ಸರಕಾರೀ ಉತ್ಸವವನ್ನಾಗಿ ಆಚರಿಸುವ ಪ್ರಗತಿಪರವಾದ ಅಜ್ಞಾನದಿಂದಾಗಿ ಕೊಲೆಗಳು ನಡೆದವು.
ದಾಯಾದಿಗಳ ನಡುವೆ ಮೊದಲೇ ಇದ್ದ ಕಂದಕ ಇನ್ನಷ್ಟು ಗಡಬಡಾಯಿಸಿತು.
ಈ ಸೂಕ್ಷ್ಮಗಳನ್ನರಿಯದ    ಆಚಾರವಾದಿಗಳೂ ವಿಚಾರವಾದಿಗಳೂ ಪರಸ್ಪರ ಬೈದಾಡಿಕೊಂಡು ಕೊಡಗಿನ ಹವೆಯಲ್ಲಿ ಚಳಿ ಕಾಯಿಸಿಕೊಂಡರು.
ನನ್ನ ಊರಿನ ಕಣಿವೆಗಳಲ್ಲಿ ಚಲಿಸುವಾಗ ಇದು ನನ್ನ ಊರೇನಾ ಅನಿಸುವ ಹಾಗಿರುವ ಬಿಗಿದುಕೊಂಡ ಮುಖಗಳು.
ಈ ಗಲಾಟೆ ಇರುವಾಗ ನೀನು ಬರಬೇಕಾಗಿತ್ತಾ?? ಗಲಾಟೆ ನಿಂತ ಮೇಲೆ ಬಂದಿದ್ದರೆ ಸಾಕಿತ್ತಲ್ಲವಾ’ ಎಂದು ಬೈಯ್ಯುವ ಉಮ್ಮಾ.
ನಾನು ಯಾರನ್ನು ಬೈಯ್ಯುವುದು?
*************
2013-01-08_11-15-59_994ಸಿರಿಯಾ ಮತ್ತು ಇಸ್ರೇಲಿನ ನಡುವೆ ಗೋಲಾನ್ ಬೆಟ್ಟವಿದೆ.
ಒಂದಾನೊಂದು ಕಾಲದಲ್ಲಿ ಅಂದರೆ ಕಂಚಿನ ಯುಗದ ಕೊನೆಗಾಲದಲ್ಲಿ ಅರಮಾಯಿಕ್ ಜನರು ಇಲ್ಲಿ ವಾಸವಿದ್ದರು.
ಪ್ರಪಂಚದಲ್ಲಿ ಮೊದಲ ಬಾರಿಗೆ ಅಕ್ಷರಗಳನ್ನು ಬಳಸಲು ಶುರುಮಾಡಿದ ಜನರು ಇವರು.
ಆನಂತರ ಸೊಲೊಮನ್ ರಾಜ ಆಳಿದ್ದ ನಾಡಿದು.
ಅಲೆಕ್ಸಾಂಡರ್ ಚಕ್ರವರ್ತಿಯೂ ಇಲ್ಲಿ ಕಾರುಬಾರು ನಡೆಸಿದ್ದ.
ಹಾಗೇ ಕ್ಯಾಲಿಗುಲಾನೂ.ಹರ್ಕ್ಯುಲಸ್ ನೂ ಆಳಿದ್ದರು.
ಮಧ್ಯಕಾಲೀನ ಯುಗದಲ್ಲಿ ಇದು ಪ್ರವಾಧಿ ಮುಹಮ್ಮದರ ಕುರೈಷಿ ಬುಡಕಟ್ಟಿನ ಪಾಲಾಗಿತ್ತು.
ಕ್ರಿಸ್ತಿಯಾನರಿಗೂ ಮುಸಲ್ಮಾನರಿಗೂ ನಡುವೆ ಸುಮಾರು ನಾನೂರು ವರ್ಷಗಳ ಕಾಲ ನಡೆದ ಧರ್ಮ ಯುದ್ದಗಳು ಈ ಬೆಟ್ಟಸಾಲುಗಳ ಆಸುಪಾಸಿನಲ್ಲೇ ಜರುಗಿದವು.
ಆನಂತರ ಅರಬರಿಗೂ ಯಹೂದಿಗಳಿಗೂ ಈ ಬೆಟ್ಟಸಾಲುಗಳಿಗಾಗಿ ಬಹಳಷ್ಟು ಕದನಗಳು ನಡೆದವು.
ಹಲವು ಕದನಗಳ ನಂತರ ಇಸ್ರೇಲ್ ಈ ಬೆಟ್ಟಗಳ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿ ಹನ್ನೆರೆಡು ವರ್ಷಗಳ ಹಿಂದೆ ನಾವು ಅಲ್ಲಿಗೆ ಹೋಗಿದ್ದಾಗ ಇಸ್ರೇಲಿನ ಮಿಲಿಟರಿ ರಾಡಾರುಗಳು ಗೋಲಾನ್ ಬೆಟ್ಟಗಳ ತುದಿಯಿಂದ ನಮ್ಮತ್ತ ಕಣ್ಣು ನೆಟ್ಟು ನೋಡುತ್ತಿದ್ದವು .
ನಾವು ಇದ್ದದ್ದು ಕ್ವಿನೇತ್ರಾ ಎಂಬ ಊರಿನಲ್ಲಿ.
ಆ ಊರಿಗೆ ಊರೇ ಉರಿದು ಬೂದಿಯಾಗಿ ಆ ಇಡೀ ಊರನ್ನು ಸಿರಿಯನ್ ಸರಕಾರ ಜೀವಂತ ಯುದ್ಧ ಸ್ಮಾರಕವನ್ನಾಗಿಸಿ ನಮ್ಮಂತಹ ಪ್ರವಾಸಿಗರನ್ನು ಅಲ್ಲಿಗೆ ಕರೆದೊಯ್ದು ಇಸ್ರೇಲೀ ಪಡೆಗಳ ಅಮಾನುಷತೆಯನ್ನು ನಾನಾ ವಿಧವಾಗಿ ತೋರಿಸುತ್ತಿತ್ತು.
ನಾವು ಅಲ್ಲಿಗೆ ಹೋಗಿದ್ದುದು ಸಿರಿಯನ್ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂಸ್ಕೃತಿ ಇಲಾಖೆಯ ಅಂಗವಾಗಿದ್ದ ಸಿರಿಯನ್ ಬರಹಗಾರರ ಒಕ್ಕೂಟದ ಆಹ್ವಾನದ ಮೇರೆಗೆ.
ಅಲ್ಲಿನ ಬಹುತೇಕ ಬರಹಗಾರರು ಪಾಲೇಸ್ಟೀನ್ ಹೋರಾಟದ ಪರವಾಗಿದ್ದುದರಿಂದ ಅವರೆಲ್ಲರೂ ಪಾಲೆಸ್ಟೀನ್ ಹೋರಾಟದ ಕುರಿತೇ ಹೆಚ್ಚುಕಮ್ಮಿ ಬರೆಯುತ್ತಿದ್ದರು.
ಆಧುನಿಕ ಕನ್ನಡ ಸಾಹಿತ್ಯದ ಬಂಡಾಯದವರಿಗೆ ವರ್ಗ ಶತ್ರು ಇದ್ದಂತೆ ಅವರಿಗೆಲ್ಲ ಒಟ್ಟಾರೆಯಾಗಿ ಇಸ್ರೇಲ್ ವರ್ಗ ಶತ್ರು.
ಹಾಗಾಗಿ ಅವರೆಲ್ಲರೂ ಬಹುತೇಕ ನಟಿಗೆ ಮುರಿಯುತ್ತಾ ಇಸ್ರೇಲನ್ನು ಶಪಿಸುತ್ತಿದ್ದರು.
ಇದು ನಮಗೆ ಸೇರಿದ್ದ ಬೆಟ್ಟ ಯಹೂದಿಗಳ ಪಾಲಾಗಿದೆಯಲ್ಲಾ ಎಂದು ಅಳಲೂ ಶುರು ಮಾಡಿದ್ದರು.
2013-01-27_15-59-55_892ಅಂತಹ ಕಣ್ಣೀರಿನ ಸನ್ನಿವೇಶವನ್ನು ಮುಗಿಸಿ ನಾವು ಸಿರಿಯಾದ ರಾಜದಾನಿ ಡಮಾಸ್ಕಸ್ ಕಡೆಗೆ ಸಾಗುತ್ತಿದ್ದಾಗ ದಾರಿಯಲ್ಲಿ ಟೊಮೇಟೋ ಬೆಳೆಯುತ್ತಿದ್ದ ಹೊಲಗಳು.
ಹೊಲಗಳ ನಡುವೆ ಟೆಂಟಿನಂತಹ  ಗುಡಿಲುಗಳನ್ನು ಕಟ್ಟಿಕೊಂಡು ಬದುಕುತ್ತಿದ್ದ ಅಲ್ಲಿನ ರೈತಾಪಿಗಳು.
ಇಲ್ಲಿನ ಟೊಮೇಟೋ ಎಷ್ಟು ಕೆಂಪಗಿವೆಯಲ್ಲಾ ಎಂದು ನಾನು ಅಚ್ಚರಿ ಸೂಚಿಸಿದ್ದೇ ತಡ ನಮ್ಮ ಜೊತೆಗಿದ್ದ ದುಬಾಷಿ ನಾವು ತೆರಳುತ್ತಿದ್ದ ವಾಹನವನ್ನು ನಿಲ್ಲಿಸಲು ಹೇಳಿದ.
ನಮ್ಮ ಬೆಂಗಾವಲಾಗಿ ಬರುತ್ತಿದ್ದ ಸಿರಿಯನ್ ಮಿಲಿಟರಿ ಪಡೆಯ ವಾಹನವೂ ನಿಂತಿತು.
ನಮ್ಮ ದುಬಾಷಿ ಆ ವಾಹನದ ಸೈನಿಕರ ಕಿವಿಯಲ್ಲಿ ಏನೋ ಉಸುರಿದ.
ಅವರೆಲ್ಲರೂ ಟೊಮೇಟೋ ಹೊಲದೊಳಕ್ಕೆ ನುಗ್ಗಿದರು. ರೈತರು ಹೆದರಿಕೊಂಡು ತಮ್ಮ ಗುಡಿಸಲುಗಳೊಳಗೆ ಕ್ರೇಟಿನಲ್ಲಿ ತುಂಬಿಟ್ಟಿದ್ದ ಟೊಮೇಟೋಗಳನ್ನು ರಾಶಿರಾಶಿಯಾಗಿ ಸೈನಿಕರ ವಾಹನದೊಳಗೆ ತುಂಬಿಸತೊಡಗಿದರು.
ಸೈನಿಕರು ಖುಷಿಯಲ್ಲಿ ಕೇಕೆ ಹಾಕುತ್ತಿದ್ದರು.ಡಮಾಸ್ಕಸ್ ನ ಮಾರುಕಟ್ಟೆಯಲ್ಲಿ ದುಬಾರಿಯಾಗಿ ಹೋಗಿರುವ ಟೊಮೇಟೋ ಈಗ ಭಾರತೀಯ ಬರಹಗಾರರ ನಿಯೋಗದಿಂದಾಗಿ ತಮಗೆ ಮುಫ್ತಾಗಿ ಸಿಗುತ್ತಿರುವುದಕ್ಕೆ ಅವರಿಗೆಲ್ಲ ಸಹಜವಾಗಿಯೇ ಆನಂದವಾಗಿತ್ತು.
ಅವರೆಲ್ಲರೂ ತಮ್ಮ ತಮ್ಮ ಸೇನಾ ವಾಹನಗಳನ್ನು ಟೊಮೆಟೋದಿಂದ ತುಂಬಿಸಿಕೊಂಡ ಮೇಲೆ ಭಾರತೀಯ ಬರಹಗಾರರಾದ ನಮಗೂ ತಿನ್ನಲು ಒಂದೊಂದು ಟೊಮೆಟೋ ಕೊಟ್ಟರು.
ನಾವು ಆ ಟೊಮೆಟೋ ಬೆಳೆದ ಬೆಳಗಾರರನ್ನು ಮಾತನಾಡಿಸಲು ಹೋದರೆ ಅವರು ಹೆದರಿ ನಡುಗುತ್ತಿದ್ದರು.
ಎದುರುಗಡೆ ಅಷ್ಟು ಎತ್ತರಕ್ಕೆ ನಿಂತುಗೊಂಡಿರುವ ಗೊಲಾನ್ ಬೆಟ್ಟಗಳು ಅವುಗಳ ಮೇಲೆ ತಿರುಗುತ್ತಿರುವ ರಾಕ್ಷಸರಂತಹ ಮಿಲಿಟರಿ ರೇಡಾರ್ ಗಳು ಅದರ ಎದುರಲ್ಲಿ ಸಂಜೆಯ ಬೆಳಕಲ್ಲಿ ಟೊಮೆಟೋ ಹೊಲದಲ್ಲಿ ಸಿರಿಯನ್ ಬೆಂಗಾವಲು ಪಡೆಯ ಜೊತೆ ಭಾರತೀಯ ಬರಹಗಾರರು.
ಹೆದರಿಕೊಂಡು ಬಿಳಿಚಿಕೊಂಡಿರುವ ರೈತರು.
2013-01-08_18-12-33_846‘ಇವರು ಹೀಗೆಯೇ ತಮಗೆ ಬೇಕಾದಾಗಲೆಲ್ಲಈ ಪಾಪದ ರೈತರ ಮೇಲೆ ಎರಗುತ್ತಾರೆ.ಅವರಿಗೊಂದು ನೆಪ ಬೇಕು ಅಷ್ಟೇ.ಈ ರೈತಾಪಿ ಜನರು  ಈಗ ಸಿರಿಯಾವನ್ನು ಆಳುತ್ತಿರುವ ಬಷಾರನ ಎದುರು ಪಾರ್ಟಿಗೆ ಸೇರಿದವರು,ಹಾಗಾಗಿ ಬಷಾರನ ಸೈನಿಕರು ಇವರನ್ನು ಹುರಿದು ಮುಕ್ಕುತ್ತಲೇ ಇರುತ್ತಾರೆ.ಆದರೆ ನಾವು ಇದನ್ನು ಬರೆದರೆ ಬದುಕುವ ಹಾಗಿಲ್ಲ.ಹಾಗಾಗಿ ನಾವು ಪಾಲೆಸ್ಟೇಯ್ನ್ ಹೋರಾಟದ ಬಗ್ಗೆಯೇ  ಬಹುತೇಕ ಕೇಂದ್ರೀ ಕರಿಸಿ ಬರೆಯುತ್ತಿರುತ್ತೇವೆ.ಹಾಗಾಗಿ ಪರವಾಗಿಲ್ಲ‘ ಎಂದು ವಾಪಾಸು ಬರುವ ದಾರಿಯಲ್ಲಿ ಅಲ್ಲಿನ ಅಲ್ಪಸಂಖ್ಯಾತ ಕ್ರಿಷ್ಟಿಯನ್ ಜನಾಂಗಕ್ಕೆ ಸೇರಿದ ಬರಹಗಾರರೊಬ್ಬರು ಕಿವಿಯಲ್ಲಿ ಉಸುರಿದರು.
ಹಾಗೆ ನೋಡಿದರೆ ಅವರಿಗೂ ಬಷಾರನ ಆಡಳಿತವೇ ಇಷ್ಟ.ಯಾಕೆಂದರೆ ಎಷ್ಟು ಕ್ರೂರಿಯಾದರೂ ಬಷಾರ ಮತಾಂಧನಲ್ಲ.ಆತ ಸಿರಿಯಾದ ಅಲ್ಪಸಂಖ್ಯಾತ ಸಮುದಾಯವಾದ ಕ್ರಿಸ್ತಿಯನ್ನರನ್ನು ಅಪಾಯದಿಂದ ಕಾಪಾಡುತ್ತಾನೆ.ಆದರೆ ಆತನ ಎದುರಾಳಿಗಳಾದ ಇಸ್ಲಾಮಿಸ್ಟ್ ಪಂಗಡವೇನಾದರೂ ಗೆದ್ದು ಬಿಟ್ಟರೆ ಈ ದೇಶದ ಅಲ್ಪಸಂಖ್ಯಾತರ ಮಾರಣಹೋಮವಾಗಿ ಬಿಡುತ್ತದೆ ಎಂದು ಅವರು ವಿವರಿಸಿದರು.
ಕೊನೆಯಲ್ಲಿ `ನೋಡಿ ನೀವು ಭಾರತದಿಂದ ಬಂದವರು.ಪ್ಯಾಲೇಸ್ಟೀನಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ನೀವು ಮೊದಲಿನಿಂದಲೂ ನಮಗೆ ಬೆಂಬಲ ಇತ್ತವರು.ನೀವು ನಿಮ್ಮ ದೇಶಕ್ಕೆ ತೆರಳಿದ ನಂತರ ನೀವು ಪ್ಯಾಲೇಸ್ಟೀನ್ ಹೋರಾಟದ ಕುರಿತು ಬರೆಯಿರಿ,ಉಳಿದದ್ದೆಲ್ಲವೂ ನಮಗೂ ನಿಮಗೂ ಗೌಣ’ ಅಂದಿದ್ದರು
IMG_20160401_154951
ಈಗ ಸಿರಿಯಾ ಸುಟ್ಟು ಕರಕಲಾಗಿರುವಾಗ, ಸಿರಿಯಾದ ನಿರಾಶ್ರಿತರು ಪ್ರೇತಾತ್ಮಗಳಂತೆ ಯುರೋಪಿನ ತುಂಬ ಓಡಾಡುತ್ತಿರುವಾಗ ಯಾವ ಅಸಹಿಷ್ಣುತೆಯ ಬಗ್ಗೆ ಬರೆಯುವುದು??
(ಸಮಾಹಿತ ಪತ್ರಿಕೆಯ ಶಿಶಿರ ಸಂಚಿಕೆಯಲ್ಲಿ ಪ್ರಕಟಿತ)

ಕಾರ್ಗಿಲ್ಲಿನ ದಾರಿಯಲ್ಲಿ

RAS_0257_3429ಕಳೆದ ವರ್ಷ ದ್ರಾಸ್,ಕಾರ್ಗಿಲ್ ,ಲೇಹ್ ದಾರಿಯಲ್ಲಿ ಹೋಗುತ್ತಿರುವಾಗ ದಾರಿಯ ಉದ್ದಕ್ಕೂ ಅಲ್ಲಲ್ಲಿ ‘`you are under enemy observation’ಎಂಬ ಪಲಕಗಳನ್ನು ಹಾಕಿದ್ದರು.

ದೂರದೂರದಲ್ಲಿ ಎತ್ತರಕ್ಕೆ ಹಿಮ ತುಂಬಿಕೊಂಡಿರುವ ಪರ್ವತ ಶ್ರೇಣಿಗಳತ್ತ ಕೈತೋರಿಸಿ ನಮ್ಮನ್ನು ಕರೆದೊಯ್ಯುತ್ತಿದ್ದ ಚಾಲಕ ಅದು ಪಾಕಿಸ್ತಾನದ ಬೆಟ್ಟ, ಇದು ಇಂಡಿಯಾದ ಬೆಟ್ಟ ಎಂದು ತೋರಿಸುತ್ತಿದ್ದ.

ಎಲ್ಲ ಕಡೆಯೂ ಒಂದೇ ತರಹ ಹಿಮತುಂಬಿಕೊಂಡು ಬಿಸಿಲಲ್ಲಿ ಹೊಳೆಯುತ್ತಿರುವ ಈ ಬೆಟ್ಟಗಳು ಆತನ ಮಾತುಗಳ ನಂತರ ಬೇರೆಯೇ ತರಹ ಕಾಣಿಸಿಕೊಳ್ಳುತ್ತಿತ್ತು.

ಜೊತೆಯಲ್ಲಿದ್ದ ಮಕ್ಕಳಂತೂ ಆಮೇಲೆ ಅದನ್ನೇ ಕಸುಬನ್ನಾಗಿ ಮಾಡಿಕೊಂಡು ಪಾಕಿಸ್ತಾನದ ಬೆಟ್ಟ ಯಾವುದು ನಮ್ಮ ಬೆಟ್ಟ ಯಾವುದು ಅಂತ ಪುನಹ ಪುನಹ ಕೇಳುತ್ತಾ ತಲೆ ಚಿಟ್ಟು ಹಿಡಿಸಲು ಶುರು ಮಾಡಿದ್ದರು. ಆಚೆ ಕಡೆಯ ಪರ್ವತದ ಮೇಲೆ ಸಣ್ಣದೊಂದು ಶಿಲೆ ಎದ್ದು ನಿಂತಿದ್ದರೂ ಅದನ್ನು ಮನುಷ್ಯಾಕೃತಿಯೆಂದು ಗೃಹಿಸಿ `ಅಯ್ಯೋ ಅಲ್ಲಿಂದ ಪಾಕಿಸ್ತಾನದ ಸೋಲ್ಜರ್ ನಮ್ಮನ್ನು ಶೂಟ್ ಮಾಡುತ್ತಾನೆ’ ಎಂದು ಉಣ್ಣೆಯ ಟೋಪಿಯಿಂದ ತಲೆ ಮುಚ್ಚಿಕೊಳ್ಳುತ್ತಿದ್ದರು.

gumri5ನಮ್ಮೊಡನಿದ್ದ ಕಾಶ್ಮೀರಿ ಚಾಲಕನಿಗೆ ಕಳೆದ ಮೂವತ್ತು ವರ್ಷಗಳ ಇತಿಹಾಸ ಮಾತ್ರ ಗೊತ್ತಿತ್ತು. ಮತ್ತು ಆತ ಕಳೆದ ಮೂವತ್ತು ವರ್ಷಗಳಲ್ಲಿ ಕತ್ತಲಲ್ಲಿ ನಡೆಯುವಾಗ ಎಷ್ಟೋ ಹೆಣಗಳನ್ನು ಎಡವಿ ಬಿದ್ದಿದ್ದರಿಂದ ವಿಷಣ್ಣನಾಗಿ ತನಗೆ ಗೊತ್ತಿರುವ ಕಥೆಗಳನ್ನು ಹೇಳುತ್ತಿದ್ದ.

ಆತನ ಪ್ರಕಾರ ಬಹುತೇಕ ಮರಣಗಳಿಗೆ ಮನುಷ್ಯರಿಗಿಂತ ದೆವ್ವಗಳೇ ಹೆಚ್ಚು ಕಾರಣವಾಗಿದ್ದವು.

ನಾನು ಮಕ್ಕಳಿಗೆ ನನಗೆ ಗೊತ್ತಿರುವ ಇತಿಹಾಸವನ್ನು ಹೇಳುತ್ತಿದ್ದೆ.ಗಾಂಧಿ ನೆಹರು ಗಲಾಟೆ ಮಾಡಿ ಬ್ರಿಟಿಷರನ್ನು ಓಡಿಸಿದ್ದು,ಬ್ರಿಟಿಷರು ಬಿಟ್ಟು ಓಡಿ ಹೋಗುವಾಗ ಎರಡು ತುಂಡು ಮಾಡಿ ನಮಗೊಂದು ತುಂಡು,ಪಾಕಿಸ್ತಾನಕ್ಕೊಂದು ತುಂಡು ಮಾಡಿಕೊಟ್ಟು ಹೋಗಿದ್ದು, ಸಿಕ್ಕಿದ ಆ ತುಂಡು ಸರಿಯಿಲ್ಲವೆಂದು ಅವರು ಈಗಲೂ ಜಗಳವಾಡುತ್ತಿರುವುದು ಎಲ್ಲವನ್ನೂ ಆ ಮಕ್ಕಳಿಬ್ಬರ ದಿನನಿತ್ಯದ ಹೋರಾಟದ ಉದಾಹರಣೆಗಳ ಮೂಲಕವೇ ಹೇಳುತ್ತಿದ್ದೆ.

ಕಾಶ್ಮೀರಿ ಚಾಲಕ ಸುಮ್ಮನೇ ನಗುತ್ತಾ ತಾನೂ ಕಥೆ ಕೇಳುವ ಬಾಲಕನಂತಾಗಿದ್ದ.

RAS_0322_3492‘ಮತ್ತೆ ಯಾಕೆ ಪಾಕಿಸ್ತಾನ ಈಗಲೂ ಜಗಳ ಮಾಡೋದು ತುಂಡು ಮಾಡಿ ಕೊಟ್ಟು ಆಯ್ತಲ್ಲಾ. bad people’ ಎಂದು ಮಗ ಕೇಳಿದ.

‘‘ಅವರಿಗೆ ಕಾಶ್ಮೀರ ಖಂಡಿತ ಕೊಡೋದು ಬೇಡ ’ ಮಗಳು ಹೇಳಿದಳು. ಕಾಶ್ಮೀರ ಇಂಡಿಯಾದಲ್ಲಿ ಇರಲಾರದು ಎಂದು ಊಹಿಸಿಯೇ  ಅವಳಿಗೆ ಅಳುವೇ ಬಂದು ಬಿಟ್ಟಿತ್ತು. ಕಾಶ್ಮೀರ  ಕೊಡೋದು ಬೇಡವೇ ಬೇಡ ಎಂದು ಮತ್ತೆ ಮತ್ತೆ ಗೊಣಗುತ್ತಿದ್ದಳು.

ಕಾರಣ ಆಮೇಲೆ ಗೊತ್ತಾಯಿತು.ಕಾಶ್ಮೀರ ಹೋದರೆ ಇಂಡಿಯಾದ ಶೇಪ್ ಹೊರಟು ಹೋಗುತ್ತದೆ ಅಂತ ಅವಳ ಅಳು.ತುಂಬ ಕಷ್ಟಪಟ್ಟು ಆಕೆ ಭಾರತದ ನಕ್ಷೆ ಮಾಡಲು ಕಲಿತಿದ್ದಳು.ಈಗ ಕಾಶ್ಮೀರ ಹೋದರೆ ಪುನಹ ಕಲಿಯಬೇಕಲ್ಲಾ ಅನ್ನುವುದು ಆಕೆಯ ಟೆನ್ಸನ್ .ಕಾಶ್ಮೀರ ಹೋಗಬಾರದು ಮತ್ತು ಅರುಣಾಚಲ ಹೋಗಬಾರದು ಹೋದರೆ ಶೇಪ್ ಹೋಗುತ್ತದೆ ಎನ್ನುವುದು ಅವಳ ಕಾಳಜಿಯಾಗಿತ್ತು.

‘ ಜಾಸ್ತಿ ಮಾತನಾಡಬೇಡಿ,ನೋಡಿ ಅದೋ ಅಲ್ಲಿ ಪಾಕಿಸ್ತಾನದ ಸೋಲ್ಜರ್ ನಮ್ಮನ್ನೇ ದುರ್ಬೀನಿನಲ್ಲಿ ನೋಡುತ್ತಿದ್ದಾನೆ’ ಎಂದು ದೂರದಲ್ಲಿ ಎತ್ತರದಲ್ಲಿ ಖಾಲಿಯಾಗಿ ಮಲಗಿದ್ದ ಬೆಟ್ಟವೊಂದರ ಮೇಲಿನ ಪೊದೆಯನ್ನು ಕ್ಯಾಮೆರಾ ಜೂಃಮ್ ಮಾಡಿ ತೋರಿಸಿ ಹೆದರಿಸಿ ಅವಳ ಬಾಯಿ ಬಂದ್ ಮಾಡಿದೆ.

serene-ice-dollಆದರೂ ಅವಳು ಗೊಣಗುತ್ತಲೇ ಇದ್ದಳು.

‘ದೊಡ್ಡವಳಾದ ಮೇಲೆ ನಾನೂ ಬಾಂಬರ್ ಪೈಲಟ್ ಆಗುತ್ತೇನೆ’ ಅನ್ನುತ್ತಿದ್ದಳು.

ಆದರೆ ಈಗಾಗಲೇ ಕಂಪ್ಯೂಟರಿನಲ್ಲಿ ಸಾಕಷ್ಟು ಬಾಂಬ್ ಆಟಗಳನ್ನು ಆದಿ ಹೈರಾಣಾಗಿರುವ ಮಗ ಸುಮ್ಮಗಿದ್ದ.

(೨೯ ಜನವರಿ ೨೦೧೨)

(ಫೋಟೋಗಳೂ ಲೇಖಕರವು)

ವಿಮಾನ ರೆಕ್ಕೆಯ ಮೇಲೆ ಮರದ ಆನೆ

2011 11 04_4321ದೆಹಲಿ ವಿಮಾನ ನಿಲ್ದಾಣದ ಕೋಸ್ಟಾ ಕಾಫಿಯಂಗಡಿಯ ಟೇಬಲ್ಲೊಂದರ ಮೇಲೆ ಅಂಗೈಯಗಲದ ತರಕಾರೀ ಸ್ಯಾಂಡ್ ವಿಚ್ ಮತ್ತು ಕಾಗದದ ಲೋಟವೊಂದರಲ್ಲಿ ಹಾಲಿಲ್ಲದ ಖಾಲೀ ಟೀ ಇಟ್ಟುಕೊಂಡು ಆತ ಎಲ್ಲವನ್ನೂ ದಿಟ್ಟಿಸಿ ನೋಡುತ್ತಿದ್ದ.ಕೀಟಲೆಯ ಹುಡುಗನಂತಹ ಆತನ ಕಣ್ಣುಗಳು,ಆಗ ತಾನೇ ಎಣ್ಣೆಹಚ್ಚಿ ಮಿರಿಮಿರಿ ಮಿಂಚುತ್ತಿದ್ದ ಆತನ ಗಡ್ಡಮೀಸೆ ಮತ್ತು ಜಗತ್ತೆಲ್ಲವನ್ನೂ ಘ್ರಾಣಿಸಬಲ್ಲೆ ಎಂಬಂತಿದ್ದ ಆತನ ನೀಳ ನಾಸಿಕ.ನಾನೂ ಆತನ ಹಾಗೆಯೇ ಇನ್ನೂರೈವತ್ತು ರೂಪಾಯಿಗೆ ಒಂದು ಒಣ ಸ್ಯಾಂಡ್ ವಿಚ್ಚು ಮತ್ತು ಚಾ ಲೋಟ ಇಟ್ಟುಕೊಂಡು ಎಲ್ಲರನ್ನೂ ನೋಡುತ್ತಿದ್ದೆ.

ಶ್ರೀನಗರಕ್ಕೆ ತೆರಳುವ ಏರೋಪ್ಲೇನು ಹೊರಡಲು ಇನ್ನೂ ಬಹಳ ಸಮಯವಿತ್ತು.ಏರೋಪ್ಲೇನು ಹತ್ತಲು ಬರುವ ಕೆಲವು ಮನುಷ್ಯರ ಮುಖಗಳು ಒಂದು ತರಹಾ ಒಣ ಗಾಂಭೀರ್ಯದಿಂದ ತುಂಬಿ ತಮಾಷೆಯಾಗಿರುತ್ತದೆ.ಬಹುಶಃ ಆತನಿಗೂ ನನ್ನ ಹಾಗೆಯೇ ಅನಿಸುತ್ತಿದ್ದಿರಬೇಕು.ಎಲ್ಲರನ್ನೂ ಒಂದು ಸುತ್ತು ಗಮನಿಸಿ ಕೊನೆಯದಾಗಿ ನನ್ನ ಮುಖ ನೋಡಿ ಮುಗುಳ್ನಗುತ್ತಿದ್ದ.ನಾನೂ ಹಾಗೆಯೇ ಮಾಡುತ್ತಿದ್ದೆ.

ಸ್ಯಾಂಡ್ ವಿಚ್ಚಿನ ಒಂದು ತುಂಡನ್ನು ನುಂಗಿ ಅದು ಗಂಟಲಿಗೆ ಸಿಕ್ಕಿಕೊಳ್ಳದ ಹಾಗೆ ಒಂದು ಗುಟುಕು ಟೀಯನ್ನೂ ಇಳಿಸಿ ‘ಬಹುತ್ ಮೆಹಂಗಾಯಿ ಹೋಗಯೀ ಯಾರ್’ ಎಂದು ನಕ್ಕ.
ಹೌದೆಂದು ತಲೆಯಾಡಿಸಿದೆ.
ಇನ್ನೂರ ಐವತ್ತು ರೂಪಾಯಿ ಅವನಿಗೆ ಒಂದು ತಿಂಗಳ ಚಹಾ ಖರ್ಚಿನ ಹಣವಂತೆ.ಒಂದೇ ಗುಟುಕಿಗೆ ಮುಗಿಯಿತಲ್ಲಾ ಎಂದು ಮತ್ತೂ ನಕ್ಕ.
ಇಲ್ಲಿ ಒಂದು ತುಂಡು ಬ್ರೆಡ್ಡಿಗಾಗಿ ಇನ್ನೂರೈವತ್ತು ಕೊಟ್ಟಿದ್ದು ಗೊತ್ತಾದರೆ ಹೆಂಡತಿ ಮಕ್ಕಳು ದೊಣ್ಣೆಯಿಂದ ಬಡಿದು ಸಾಯಿಸುತ್ತಾರೆ ಅಂದ.
ನನ್ನ ಕಥೆಯೂ ಹಾಗೇ ಎಂದು ಹೇಳಿದೆ.
ಎಲ್ಲಿಗೆ ಹೊರಟಿದ್ದೀಯಾ ಎಂದು ಕೇಳಿದ.
‘ಶ್ರೀನಗರಕ್ಕೆ’ ಎಂದು ಹೇಳಿದೆ.
‘ಏನು ವ್ಯಾಪಾರವಾ’ ಎಂದು ಕೇಳಿದ.
‘ಇಲ್ಲ ಶ್ರೀನಗರದ ಗೆಳೆಯನೊಬ್ಬನಿಗೆ ಮೈಸೂರಿನಿಂದ ಒಂದು ಆನೆ ಕೊಡಬೇಕಾಗಿತ್ತು’ ಎಂದು ಬ್ಯಾಗಿನ ಜಿಪ್ಪು ತೆಗೆದು ಅದರೊಳಗೆ ಹೆಂಡತಿಯ ಒಗೆದ ಹಳೆಯ ಸೀರೆಯ ತುಂಡಲ್ಲಿ ನೋವಾಗದಂತೆ ಸುತ್ತಿಟ್ಟಿದ್ದ ಮರದ ಆನೆಯೊಂದನ್ನು ತೋರಿಸಿದೆ.
ಐದು ಕೇಜಿಗಿಂತಲೂ ದೊಡ್ಡದಾಗಿದ್ದ ಬೀಟೆ ಮರದಲ್ಲಿ ಕೆತ್ತಿದ್ದ ಆ ಆನೆ ಆತನ ಗಡ್ಡಮೀಸೆಗಿಂತಲೂ ಕಪ್ಪಾಗಿ ಮಿರಮಿರನೆ ಮಿಂಚುತ್ತ ನಿಜದ ಕಾಡಾನೆಗಿಂತಲೂ ನೈಜವಾಗಿ ವಿಮಾನ ನಿಲ್ದಾಣದ ಆ ರೆಸ್ಟೋರೆಂಟಿನ ಟೇಬಲ್ಲಿನ ಮೇಲೆ ತಲೆ ತಗ್ಗಿಸಿ ನಿಂತುಕೊಂಡಿತ್ತು.

ಅಷ್ಟು ಹೊತ್ತಿಗೆ ವಿಮಾನ ನಿಲ್ದಾಣದಲ್ಲಿ ಕಾಯುತ್ತಾ ಜೂಟಾಟವಾಡಿಕೊಂಡಿದ್ದ ಒಂದಿಷ್ಟು ಮಕ್ಕಳು ‘ಆನೆ ಆನೆ’ ಎಂದು ಕೈ ಚಪ್ಪಾಳೆ ತಟ್ಟುತ್ತಾ ಅದರ ಮುಂದೆ ನಿಂತುಕೊಂಡರು.
‘ಇದು ಬರೀ ಆನೆಯಲ್ಲ.ಒಂದು ಗಂಡಾನೆ’ ಎಂದು ಪ್ಯಾಂಟಿನ ಜೇಬಿನೊಳಗಿಂದ ಪೊಟ್ಟಣವೊಂದರಲ್ಲಿ ಇಟ್ಟುಕೊಂಡಿದ್ದ ಪ್ಲಾಸ್ಟಿಕ್ಕಿನ ದಂತಗಳನ್ನು ಹೊರತೆಗೆದು ಅದರ ಸೊಂಡಿಲಿನ ಬದಿಯ ತೂತಕ್ಕೆ ಸಿಗಿಸಿದೆ.
ಈಗ ಆ ಆನೆ ನಿಜಕ್ಕೂ ಒಂದು ಒಂಟಿ ಸಲಗದಂತೆ ಒಂದಿಷ್ಟು ಗಂಡಸ್ತನವನ್ನು ಮುಖದಲ್ಲಿ ಆವಾಹಿಸಿಕೊಂಡು ಮಕ್ಕಳು ‘ಗಂಡಾನೆ, ಗಂಡಾನೆ’ ಎಂದು ಇನ್ನಷ್ಟು ಖುಷಿ ಪಟ್ಟರು.

2011 11 04_4323ಅವನ ಹೆಸರು ಜಸ್ವಂತ್ ಸಿಂಗ್.ಪಂಜಾಬಿನ ಫಿರೋಜ್ ಪುರ ಜಿಲ್ಲೆಯ ಜೀರಾ ಎಂಬ ಹಳ್ಳಿಯವನು.
ಫಿರೋಜ್ ಪುರ ಅಮೃತಸರದ ಬಳಿಯಲ್ಲಿದೆ.
ಭತ್ತ ಮತ್ತು ಗೋದಿ ಬೆಳೆಯುವ ಸಿಖ್ ಕುಟುಂಬಕ್ಕೆ ಸೇರಿದವನು ಅವನು.
ಅವನ ಕುಟುಂಬದಲ್ಲಿ ಬಹುತೇಕ ಜನರು ಅಮೇರಿಕಾ, ಕೆನಡಾದಲ್ಲಿ ಇದ್ದಾರಂತೆ.
ಆದರೆ ಅವನಿಗೆ ಗೋದಿ ಬೆಳೆಯುವುದಕ್ಕೂ ಇಷ್ಟವಿಲ್ಲ,ಅಮೇರಿಕಾಕ್ಕೆ ಹೋಗುವುದಕ್ಕೂ ಮನಸ್ಸಿಲ್ಲ,ಶಾಲೆಗೆ ಹೋಗಲೂ ಖುಷಿಯಿರಲಿಲ್ಲವಂತೆ.ಆದರೆ ಹಾಡುವುದು ಅವನಿಗೆ ಇಷ್ಟ.
ಅದರಲ್ಲೂ ಸಿಖ್ಖರ ಪವಿತ್ರ ಗುರುಬಾನಿಯನ್ನೂ ಹಾಡುತ್ತಾ ಅದರ ಅರ್ಥ ವಿವರಿಸುತ್ತಾ ದೇಶದ ನಾನಾ ಗುರುಧ್ವಾರಗಳಿಗೆ ಅಲೆಯುವುದು ಅವನಿಗೆ ಖುಷಿಯಂತೆ.ಹಾಗಾಗಿ ಅವನು ಲಾರಿ ಡ್ರೈವರನ ಕೆಲಸ ಮಾಡುತ್ತಿದ್ದ.
ಲಾರಿ ಓಡಿಸುವುದರಿಂದ ಹೊಟ್ಟೆಪಾಡೂ ಆಗುತ್ತದೆ.ಊರೂರು ಅಲೆದ ಹಾಗೆಯೂ ಆಗುತ್ತದೆ.ಲಾರಿ ಲೋಡಿಗಾಗಿ ದಿನಗಟ್ಟಲೆ ಕಾಯುವಾಗ ಅಲ್ಲೆಲ್ಲೋ ಹತ್ತಿರ ಇರುವ ಗುರುಧ್ವಾರಕ್ಕೆ ತೆರಳಿ ಹಾಡುತ್ತಾ ಕೂರುತ್ತಾನೆ.
ಅವನ ಜೊತೆಗಿರುವ ಕ್ಲೀನರ್ ಹುಡುಗ ತಬಲಾ ಬಾರಿಸುವುದನ್ನೂ ಕಲಿತಿದ್ದಾನಂತೆ.
‘ನಿಮ್ಮ ಮೈಸೂರಿನಲ್ಲೂ ಹಾಡಿದ್ದೇನೆ.ಬೀದರಿನಲ್ಲೂ ಹಾಡಿದ್ದೇನೆ.ಬೆಂಗಳೂರಿನಲ್ಲೂ ಹಾಡಿದ್ದೇನೆ.ಮುಂದಿನ ಸಲ ಮೈಸೂರಿಗೆ ಬಂದಾಗ ನೀನೂ ಕೇಳು’ ಅಂದ.
‘ಹಾಡುವ ಸಲುವಾಗಿಯೂ ಲಾರಿ ಬಿಡುತ್ತಾರೆ ಎಂದು ಗೊತ್ತೇ ಇರಲಿಲ್ಲ.ಖುಷಿಯಾಯಿತು.ಆದರೆ ಲಾರಿ ಓಡಿಸುವ ನೀನು ವಿಮಾನ ನಿಲ್ದಾಣಕ್ಕೆ ಯಾಕೆ ಬಂದಿರುವೆ’ಎಂದು ಕೇಳಿದೆ.

‘ಅಯ್ಯೋ ಅದು ದೊಡ್ಡ ಕಥೆ’ ಅಂದ.
ಇವನ ಜೊತೆ ಲಾರಿ ಓಡಿಸುತ್ತಿದ್ದ ಕ್ಲೀನರ್ ಹುಡುಗ ಈ ಸಲ ನಾನೇ ಓಡಿಸಿಕೊಂಡು ಹೋಗುತ್ತೇನೆ ಎಂದು ಅಸ್ಸಾಮಿನ ಗೌಹಾಟಿಗೆ ಹೋಗಿದ್ದಾನಂತೆ.ಅಲ್ಲಿ ಎಲ್ಲೋ ಹೆದ್ದಾರಿಯಲ್ಲಿ ಯಾವುದೋ ಹಳ್ಳಿಯವನಿಗೆ ಗುದ್ದಿ ಹಳ್ಳಿಯವರು ಸಾಯುವ ಹಾಗೆ ಹೊಡೆದಿದ್ದಾರಂತೆ.ಅದಕ್ಕಾಗಿ ಅವನು ನಿನ್ನೆಯೇ ಅಮೃತಸರದಲ್ಲಿ ರೈಲು ಹತ್ತಿ ಬೆಳಗ್ಗೆ ದಿಲ್ಲಿಯಲ್ಲಿಳಿದು ಈಗ ವಿಮಾನ ನಿಲ್ದಾಣಕ್ಕೆ ಬಂದು ಗೌಹಾಟಿಗೆ ತೆರಳುವ ವಿಮಾನಕ್ಕಾಗಿ ಕಾಯುತ್ತಿದ್ದಾನಂತೆ.
ಕ್ಲೀನರನ್ನು ಬಿಡಿಸಿಕೊಂಡು ಬರಲು ಇವನು ಹೊರಟಿರುವುದು ಹೆಂಡತಿಗೂ ಗೊತ್ತಿಲ್ಲವಂತೆ.
‘ಇಷ್ಟೆಲ್ಲ ಖರ್ಚು ಮಾಡುತ್ತಿರುವುದು ಗೊತ್ತಾದರೆ ಹೆಂಡತಿ ಬಡಿದು ಹಾಕುತ್ತಾಳೆ’ ಅಂದ.
‘ನೀನೇ ಗಡ್ಡ ಮೀಸೆ ಬಿಟ್ಟು ಇಷ್ಟು ಜೋರಾಗಿ ಕಾಣಿಸುತ್ತಿದ್ದೀಯಾ.ಇನ್ನು ಮಾತುಮಾತಿಗೆ ನಿನ್ನನ್ನು ಬಡಿದು ಹಾಕುವ ಹೆಂಡತಿ ಎಷ್ಟು ಜೋರಾಗಿದ್ದಿರಬಹುದು’ ಎಂದು ನಕ್ಕೆ.
‘ಅಯ್ಯೋ ಅವಳು ಬಹಳ ಪಾಪ.ನಿಜವಾಗಿಯೂ ಬಡಿಯವುದಿಲ್ಲ.ಸುಮ್ಮನೆ ಹೆದರಿಸುತ್ತಾಳೆ ಅಷ್ಟೇ’ ಅಂದ.
‘ಅದು ನಿಜ .ಎಲ್ಲರ ಹೆಂಡತಿಯರೂ ಹಾಗೆಯೇ.ಸುಮ್ಮನೇ ಹೆದರಿಸುತ್ತಾರೆ.ಅವರು ನಿಜಕ್ಕೂ ಬಡಿದು ಹಾಕಿದರೆ ಇಂಡಿಯಾದಲ್ಲಿ ಪುರುಷ ಸಂತತಿಯೇ ಇರುತ್ತಿರಲಿಲ್ಲ’ ಎಂದು ನಕ್ಕೆ.
ಅದಕ್ಕೆ ಅವನಿಗೆ ಭಯಂಕರ ಖುಷಿಯಾಗಿ ಮೀಸೆ ತಿರುವಿ ನಕ್ಕ.
‘ಹೌದು ಯಾರ್, ಎಲ್ಲರ ಮನೆಯ ಬೇಳೆಯಲ್ಲೂ ಕಲ್ಲು ಇದ್ದೇ ಇರುತ್ತದೆ.ಆದರೆ ಈ ವಿಮಾನ, ಈ ಸ್ಯಾಂಡ್ ವಿಚ್ಚು ಇವೆಲ್ಲಾ ದುಬಾರಿ ದುಬಾರಿ ಅಂತ ನಾವು ದೂರ ಇದ್ದರೆ ಬರೀ ದುಡ್ಡು ಇರುವವರೇ ಮಜಾ ಮಾಡುತ್ತಿರುತ್ತಾರೆ.ಯಾವಾಗಲೋ ಒಂದು ಸಲ ನಾವೂ ಮಜಾ ಮಾಡಬೇಕಲ್ಲವಾ’ ಅಂದ.

‘ನನ್ನ ಶ್ರೀನಗರದ ವಿಮಾನ ಹೊರಡುವ ಹೊತ್ತಾಗುತ್ತಾ ಬಂತು.ಇನ್ನೊಮ್ಮೆ ಸಿಗುವಾ’ಎಂದು ಅವನ ಫೋನ್ ನಂಬರನ್ನು ಕೇಳಿಕೊಂಡೆ.
ಸುಮಾರು ಹತ್ತು ನಂಬರುಗಳನ್ನು ಕೊಟ್ಟ.ಒಂದು ಪಂಜಾಬಿನ ಹಳ್ಳಿಯಲ್ಲಿರುವಾಗ ಐಡಿಯಾ ನಂಬರ್.
ಇನ್ನೊಂದು ದೆಹಲಿಯಲಿರುವಾಗ ಟಾಟಾ ಡೋಕೋಮೋ.
ಹೀಗೆ ಹತ್ತಾರು ಸಂಖ್ಯೆಗಳು.
`ಎಲ್ಲವನ್ನೂ ಟ್ರೈಮಾಡು ಯಾವುದರಲ್ಲಾದರೂ ಒಂದರಲ್ಲಿ ಸಿಗುವೆ.‘ಆದರೆ ಈ ಅಪರಿಚಿತ ಗೆಳೆಯನನ್ನು ಮರೆಯಬೇಡಾ’ ಅಂದ.
‘ಇಲ್ಲಾ’ ಎಂದೆ.
ಇನ್ನು ಯಾವತ್ತಾದರೂ ಅಮೃತಸರದ ನಿನ್ನ ಹಳ್ಳಿಗೆ ಬಂದಾಗ ನಿನಗೂ ಇಂತಹದೇ ಒಂದು ಆನೆಯನ್ನು ತಂದುಕೊಡುತ್ತೇನೆ ಎಂದು ಮಾತು ಕೊಟ್ಟು ಆ ಆನೆಯನ್ನು ಹೆಂಡತಿಯ ಹಳೆಯ ಸೀರೆಯಲ್ಲಿ ಜೋಪಾನವಾಗಿ ಸುತ್ತಿ ಬ್ಯಾಗಿನೊಳಗಡೆ ಮಗುವಿನಂತೆ ಮಲಗಿಸಿದೆ.

2011 11 04_4324‘ಅಯ್ಯೋ ಯಾರ್ ಮರೆತೇ ಬಿಟ್ಟೆ.ನಿನ್ನ ಹೆಸರು ಹೇಳಲೇ ಇಲ್ಲ.ನಿನ್ನ ಕೆಲಸವೇನು ಅಂತಲೂ ಕೇಳಲಿಲ್ಲ’ ಎಂದು ಎದ್ದು ನಿಂತ.
ಹೆಸರು ಹೇಳಿದೆ.
ಹೊಟ್ಟೆಪಾಡಿಗಾಗಿ ನಾನು ಮಾಡುವ ಕೆಲಸಗಳನ್ನೂ ಹೇಳಿದೆ.
‘ಇರು ನಿನ್ನದೊಂದು ಫೋಟೋ ತೆಗೆಯುತ್ತೇನೆ.ಮನೆಯಲ್ಲಿರುವ ನಿನ್ನ ಪಾಪದ ಹೆಂಡತಿಯನ್ನು ಮನಸ್ಸಿಗೆ ತಂದುಕೊಂಡು ನಗು.ಆಗ ಚಂದ ಕಾಣಿಸುತ್ತೀಯಾ’ ಅಂದೆ.
ಚಂದವಾಗಿ ನಾಚಿಕೊಂಡ.

ಆಮೇಲೆ ಏನೋ ನೆನಪಿಸಿಕೊಂಡು ‘ನೀನು ನನ್ನ ಊರಿಗೆ ಆನೆ ತೆಗೆದುಕೊಂಡು ಬರುವಾಗ ನಾನೂ ನಿನಗೊಂದು ವಸ್ತು ಕೊಡುವೆ’ ಅಂದ.

ಕೆನಡಾದಲ್ಲಿರುವ ಅವನ ಅಂಕಲ್ ಬಹಳ ಒಳ್ಳೆಯ ಬೈನಾಕುಲರ್ ಒಂದನ್ನು ತಂದುಕೊಟ್ಟಿದ್ದಾನಂತೆ.ಏನು ಬೇಕಾದರೂ ಕಾಣುತ್ತದಂತೆ.

ಆತ ವಿಮಾನ ನಿಲ್ದಾಣದ ಹೊರಗೆ ಎಲ್ಲಿಗೋ ಹಾರಿ ಹೋಗಲು ಕಾದು ನಿಂತಿದ್ದ ವಿಮಾನವೊಂದರ ಅಸ್ಪಷ್ಟ ರೆಕ್ಕೆಯೊಂದನ್ನು ತೋರು ಬೆರಳಿಂದ ತೋರಿಸಿ ‘ಆ ವಿಮಾನದ ರೆಕ್ಕೆ ಕಾಣಿಸುತ್ತಿದೆಯಾ’ ಅಂತ ಕೇಳಿದ.
`ಸ್ವಲ್ಪಸ್ವಲ್ಪ ಕಾಣಿಸುತ್ತಿದೆ’ ಅಂದೆ.
‘ಒಂದು ವೇಳೆ ನಿನ್ನ ಬ್ಯಾಗಿನಲ್ಲಿರುವ ಆನೆ ಆ ವಿಮಾನದ ರೆಕ್ಕೆಯ ಮೇಲೆ ನಿಂತಿದೆ ಅಂತ ಅಂತಿಟ್ಟುಕೋ, ನನ್ನ ಅಂಕಲ್ ಕೊಟ್ಟಿರುವ ಬೈನಾಕುಲರ್ ನಿಂದ ನೋಡಿದರೆ ಆ ಆನೆಯ ದಂತದ ಮೇಲೆ ಕೂತಿರುವ ಇರುವೆಯ ಕಾಲೂ ಇಷ್ಟು ದಪ್ಪವಾಗಿ ಕಾಣಿಸುತ್ತದೆ’ ಎಂದು ತನ್ನ ತೋರು ಬೆರಳನ್ನು ಹೆಬ್ಬೆರೆಳಿಗೆ ಅಮುಕಿ ಹಿಡಿದು ತೋರಿಸಿದ.2011 11 04_4323

ವಿಮಾನದ ರೆಕ್ಕೆಯ ಮೇಲೆ ಕುಳಿತಿರುವ ಆನೆ.ಅದರ ದಂತದ ಮೇಲೆ ಕೂತಿರುವ ಇರುವೆಯ ಕಾಲು.ಜೊತೆಗೆ ನಾನು ಮತ್ತು ಇವನು!
ಅವನ ಬಲಿಷ್ಠ ಕೈಗಳನ್ನು ಒತ್ತಿ ಹಿಡಿದು ಕುಲುಕಿ, ‘ಎಲ್ಲಾದರೂ ಹೇಗಾದರೂ ಯಾವತ್ತಾದರೂ ಸಿಗುವಾ.ಈ ಆನೆ ದೋಸ್ತನ್ನು ಮಾತ್ರ ಮರೆಯಬೇಡಾ’ ಎಂದು ಆನೆಯ ಚೀಲ ಎತ್ತಿಕೊಂಡು ಸರತಿಯ ಸಾಲಿನತ್ತ ನಡೆದೆ.

(ನವಂಬರ್ ೧೮ ೨೦೧೧)

(ಫೋಟೋಗಳೂ ಲೇಖಕರವು )

ಈತನ ಹೆಸರು ಬಂಗಾರಪ್ಪ.

2011-11-17_5958ಈತನ ಹೆಸರು ಬಂಗಾರಪ್ಪ.

ಈತ ಹುಟ್ಟಿದ್ದೂ ಸೊರಬದಲ್ಲಿ.

ಸಾರೇಕೊಪ್ಪದ ಮಾನ್ಯ ಬಂಗಾರಪ್ಪನವರು ಮುಖ್ಯಮಂತ್ರಿಯಾದ ದಿನವೇ ಈತ ಸೊರಬದಲ್ಲಿ   ಶ್ರೀ ಮಂಜುನಾಥೇಶ್ವರ ಡ್ರಾಮಾ ಕಂಪೆನಿಯಲ್ಲಿ ಹುಟ್ಟಿದ್ದರಿಂದ ಈತನಿಗೂ  ಬಂಗಾರಪ್ಪ ಎಂಬ ಹೆಸರಿಟ್ಟಿದ್ದಾರೆ.

ನೋಡಲು ತಾನು ಜೋಗಿ ಚಿತ್ರದ ಶಿವಣ್ಣನ ತರ ಇರುವುದಾಗಿಯೂ,ತನ್ನ ಎಳೆಯ ಹೆಂಡತಿ ದೀಪಾಗೆ ಒಂಚೂರು ಬೆಕ್ಕಿನ ಕಣ್ಣು ಇರುವುದರಿಂದ ಎಲ್ಲರೂ ಆಕೆಯನ್ನು ಐಶ್ವರ್ಯಾ ರೈ ಎಂದು ಕರೆಯುವುದಾಗಿಯೂ ಈತ ಹೇಳುತ್ತಾನೆ.

ಈತನಿಗೆ ಇಬ್ಬರು ಹೆಣ್ಣು ಮಕ್ಕಳು.ದೊಡ್ಡವಳು ಸೇವಂತಿ.ಅಜ್ಜಿಯ ಗುಡಿಸಲಲ್ಲಿ ಇದ್ದುಕೊಂಡು ಶಾಲೆಗೆ ಹೋಗುತ್ತಾಳೆ.ಸಣ್ಣವಳು ಸ್ಪೂರ್ತಿ. ಈತನ ವಾಹನವಾದ ಹೀರೋ ಸ್ಟ್ರೀಟ್ ಬೈಕಿನ ಎದುರು ಒಂದು ಕುಸುಮದಂತೆ ಕೂತಿರುತ್ತಾಳೆ.

ಐಶ್ವರ್ಯಾ  ರೈಗಿಂತಲೂ ಚೆನ್ನಾಗಿರುವ ಹೆಂಡತಿ ದೀಪಾ ಬೈಕಿನ ಹಿಂದೆ ಈತನ ಬೆನ್ನಿಗಂಟಿಕೊಂಡಿರುತ್ತಾಳೆ.

ನಾಟಕ ಕಂಪೆನಿಯಿಂದ ಈತನ ಪಾಲಿಗೆ ಬಂದ ಕಾಲು ಪಾಲು ಸಾಮಾನುಗಳು, ಸೀರಿಯಲ್ ಸೆಟ್ಟು, ನೀರಿನ ಕೊಡಪಾನ, ಸೀಮೆಣ್ಣೆ ಸ್ಟೌ,ಬೆಳ್ಳಿ ತೆರೆಯ ಹರಿದ ಪರದೆಗಳು, ರಾಗಿಯ ಹಿಟ್ಟಿನ ಗೋಣಿ, ನಾಟಕದ ಲಾಂಗು ಮಚ್ಚು ತಲವಾರು ಇತ್ಯಾದಿಗಳನ್ನು ಹೇರಿಕೊಂಡ ಒಂದು ಹಳೆಯ ಪೆಟಾರಿ ಈತನ ಈ ಬೈಕಿನ ಅಂಗಾಂಗಗಳಂತೆ ಅಚ್ಚುಕಟ್ಟಾಗಿ ತೂಗುತ್ತಿರುತ್ತವೆ.

ಬೈಕಿನ ಹಿಂದೆ ಒಂದು ಹಳೆಯ ಮೆಘಾಫೋನ್..ಅದರ ಬಾಯೊಳಗೆ  ‘ಬಂಗಾರಪ್ಪ ನಾಟಕ ಕಂಪೆನಿ.ಒಂದೇ ಶೋ. ರಾತ್ರಿ ಎಂಟು ಗಂಟೆಗೆ’ ಎಂದು ಎದ್ದು ಕಾಣುವ ಹಾಗೆ ತಾನೇ ಕೆಂಪು ಬಣ್ಣದಲ್ಲಿ ಬರೆದಿದ್ದಾನೆ.

ಮೂರು ತಿಂಗಳ ಹಿಂದೆ ಆರು ಸಾವಿರಕ್ಕೆ ಈತ ಕೊಂಡಿರುವ ಈ ಹಳೆಯ ಬೈಕ್ ಈಗಲೂ ಮಿಂಚುತ್ತಿದೆ.ಇದಕ್ಕೂ ಮೊದಲು ಈತ ಎಂ ೮೦ ಗಾಡಿಯಲ್ಲಿ ಹೀಗೇ ಹೋಗುತ್ತಿದ್ದನಂತೆ.ಅದಕ್ಕೂ ಮೊದಲು ಸೈಕಲಲ್ಲಿ.ಒಂದಲ್ಲ ಒಂದು ದಿನ ಕನ್ನಡ ಬೆಳ್ಳಿ ತೆರೆಯ ಹೊಸ ಹೀರೋ ತಾನಾಗುತ್ತೇನೆ ಎಂದು ಈತ ಕಣ್ಣನ್ನೆಲ್ಲಾ ಮಿಂಚು ಮಾಡಿಕೊಂಡು ಹೇಳುತ್ತಾನೆ.

ಹಾಗೆ ಹೀರೋ ಆದಾಗ ದಯವಿಟ್ಟು ಈ ಬಡಪಾಯಿಯನ್ನು ಮರೆಯಬೇಡ ಎಂದು ನಾನು ನಾಟಕದ ಶೈಲಿಯಲ್ಲಿ ಗೋಗರೆಯುತ್ತೇನೆ ‘ಅಯ್ಯೋ ಇಲ್ಲಾ ಸಾರ್, ಹೀರೋ ಆದರೂ ಈ ಬಂಗಾರಪ್ಪ ಒಬ್ಬೊಬ್ಬ ಅಭಿಮಾನಿಯ ಮನೆಗೂ ಹೋಗಿ ಅವರು ಕೊಟ್ಟ ಅಂಬಲಿಯನ್ನೋ ಮುದ್ದೆಯನ್ನೋ ತಿಂದು ಅವರ ಅಭಿಮಾನಕ್ಕೆ  ವಂದನೆ ಹೇಳುತ್ತೇನೆ ಸಾರ್,ಖಂಡಿತ’ ಎಂದು ಆತ ಹೇಳುತ್ತಾನೆ.

‘ಹೀರೋ ಆದ ಮೇಲೆ ಬೇರೆ ನಾಯಕರ ತರಹ ಸ್ವಂತ ಹೆಂಡತಿಯನ್ನು ಹೊಡೆಯುವುದು, ಬಡಿಯುವುದು,ಸಿಗರೇಟಿನಿಂದ ಸುಡುವುದು ಇತ್ಯಾದಿಗಳನ್ನು ಮಾಡಬೇಡ ಮಾರಾಯ, ನಿನಗೆ ಖಂಡಿತ ಒಳ್ಳೆಯದಾಗುವುದಿಲ್ಲ’ ಎಂದು ನಾನು ಹೇಳುತ್ತೇನೆ.

ಅದನ್ನು ಕೇಳಿದ ಆತನ ಹೆಂಡತಿ ಕಣ್ಣು ತುಂಬಿಕೊಳ್ಳುತ್ತಾಳೆ.2011-11-17_5954

ಅದನ್ನು ನೋಡಿದ ಬಂಗಾರಪ್ಪನಿಗೂ ಕಣ್ಣು ತುಂಬಿ ಬರುತ್ತದೆ.

‘ಅಯ್ಯೋ ಸಾರ್ ಈಕೆ ನನ್ನ ಬಾಳಿನ ಐಶ್ವರ್ಯ.ಹಾಗೆಲ್ಲಾದರೂ ಮಾಡುತ್ತೀನಾ.ಪಿಚ್ಚರ್ ಅಂದ್ರೆ ಬೇರೆ ಹೀರೋಯಿನ್ನೂ ಇರುತ್ತಾರೆ.ಆದರೆ ಹೆಂಡತಿಯನ್ನು ಯಾರಾದರೂ ಹೊಡೆಯುತ್ತಾರಾ’ ಎಂದು ಆಕೆಯ ತಲೆಯನ್ನು ನನ್ನೆದುರೇ ನೇವರಿಸುತ್ತಾನೆ.

ಎಲ್ಲೋ ರಸ್ತೆ ಬದಿಯಲ್ಲಿ ಹಾಳು ಕಟ್ಟಡದೊಳಗೆ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಕಳೆದ ರಾತ್ರಿ ಕಳೆದಿರುವ ಅವರಿಬ್ಬರ ಮುಖದಲ್ಲಿ ಹಸಿವು ಕಂಗೊಳಿಸುತ್ತಿದೆ.ಅರ್ದ ತಿಂದು ಉಳಿದ ಬನ್ನೊಂದನ್ನು ಬಾಯಿಗಿಟ್ಟುಕೊಂಡು ಮಗಳು ಸ್ಪೂರ್ತಿ ಏನನ್ನೋ ತೊದಲುತ್ತಿದೆ.ಸೊರಗಿ ಸುಸ್ತಾಗಿರುವ ಐಶ್ವರ್ಯಾ ರೈಯಂತಹ ಹೆಂಡತಿ ದೀಪಾ ಕಳೆದ ಒಂದು ವಾರದಿಂದ ಜ್ವರದಲ್ಲಿ ಬಳಲುತ್ತಿದ್ದಾಳೆ.

ಎಷ್ಟು ಅಂತ ಆಕೆ ಖುಷಿಯನ್ನು ನಟಿಸಿಕೊಂಡಿರುವುದು?ದುಃಖ ಉಮ್ಮಳಿಸಿದಂತೆ ವಾಂತಿ ಒತ್ತರಿಸಿಕೊಂಡು ಬಂದು ಆಕೆ ಅಲ್ಲೇ ಮುಖ ತಿರುಗಿಸಿಕೊಂಡು ಕೂತು ವಾಂತಿ ಮಾಡತೊಡಗುತ್ತಾಳೆ.

ಮೈಸೂರು-ಮಡಿಕೇರಿ ರಸ್ತೆಯಲ್ಲಿ ಕಂಡವರು ನೊಂದುಕೊಳ್ಳುವಷ್ಟು ನಿಧಾನವಾಗಿ ಬೈಕು ಓಡಿಸಿಕೊಂಡು ಹೋಗುವ ನಾನು ಕೆಲವು ಸಮಯದಿಂದ ಬಂಗಾರಪ್ಪನ ಈ ಬೈಕಿನ ಮೇಲೆ ಸಾಗುವ ನಾಟಕ ಕಂಪೆನಿಯನ್ನು ಗಮನಿಸುತ್ತಿದ್ದೆ.

ಯಾರೋ ಬಿಟ್ಟಿರುವ ಬಾಣದಂತೆ ಒಂದಿನಿತೂ ಬಳುಕದೆ,ಒಂದಿಷ್ಟೂ ಅಳುಕದೆ ಯಾವುದೋ ಘನ ಕಾರ್ಯಕ್ಕೆ ಧಾವಿಸುತ್ತಿರುವ ಆತನ ಮಿಂಚಿನ ಬಳ್ಳಿಯಂತಹ ಆ ಬೈಕು ಒಮ್ಮೊಮ್ಮೆ ಹಿಂದಿನಿಂದ ಮುಂದಿಕ್ಕಿ ಹೋಗುತ್ತಿತ್ತು.ಒಮ್ಮೊಮ್ಮೆ ಎದುರಿನಿಂದಲೂ ಮಿಂಚಿ ಮಾಯವಾಗುತ್ತಿತ್ತು.

ಯಾರನ್ನೂ ಹಿಂದಿಕ್ಕುವ ಉಮೇದಿಲ್ಲದೆ, ಜೀವನಕ್ಕೊಂದು ಗುರಿಯೂ ಇಲ್ಲದೆ ಕಂಡದ್ದನ್ನೆಲ್ಲಾ ಬೇಕಾದಕ್ಕಿಂತ ಹೆಚ್ಚು ಅವಲೋಕಿಸುತ್ತಾ, ಉದ್ದೇಶವಿಲ್ಲದೆ ಗೊಣಗುತ್ತಾ, ಕೆಲವೊಮ್ಮೆ ಹಿಂದಿಕ್ಕಿದವರನ್ನೂ, ಮುನ್ನುಗ್ಗುವವರನ್ನೂ ಸಣ್ಣಗೆ ಪೋಲಿಪೋಲಿಯಾಗಿ ಬೈಯುತ್ತಾ ಜೀವನ ಎತ್ತಿನ ಗಾಡಿ ಎಂಬ ಭ್ರಮೆಯಲ್ಲಿ  ಸಾಗುವ ನನಗೆ  ಬೈಕಿನಲ್ಲಿ ಹೀಗೆ ದೌಡಾಯಿಸುವ ಮನುಷ್ಯನ ಹೆಸರು ಬಂಗಾರಪ್ಪ ಎಂಬ ಕಲ್ಪನೆಯೂ ಇರಲಿಲ್ಲ.

ಬೈಕಿನ ಮುಂದೆ ಮಗುವನ್ನು ಸಿಕ್ಕಿಸಿಕೊಂಡು ಬೈಕಿನ ಹಿಂದೆ ಸುಂದರಿಯಾದ ಹೆಂಡತಿಯನ್ನೂ, ಊಹಾತೀತವಾದ ಸರಂಜಾಮುಗಳನ್ನೂ ನೇತಾಡಿಸಿಕೊಂಡು ಮುನ್ನುಗ್ಗುತ್ತಿರುವ ಈತ ಒಂದಲ್ಲ ಒಂದು ದಿನ ತಾನು ಕನ್ನಡನಾಡಿನ ನಾಯಕಮಣಿಯಾಗಬೇಕು ಎಂಬ ಕನಸಿನಲ್ಲೇ ಈ ದಾರಿಯಲ್ಲಿ ಸಾಗುತ್ತಿರುವನು ಎಂದಂತೂ ಊಹಿಸಲೂ ಸಾಧ್ಯವಿರಲಿಲ್ಲ.

ಹಾಗೆ ನೋಡಿದರೆ ಬೈಕಿನ ಹಿಂದೆ ನಾಲ್ಕೈದು ಮೀಟರ್ ಎತ್ತರಕ್ಕೆ ಪ್ಲಾಸ್ಟಿಕ್ ಚೇರುಗಳನ್ನು ಪೇರಿಸಿಕೊಂಡು ಹೋಗುವ ತಮಿಳುನಾಡಿನ ಕಡೆಯ ಅಣ್ಣಾಚಿಗಳೂ, ಬೈಕಿನಲ್ಲಿ ಕುರಿಗಳನ್ನು ಮಗುವಿನಂತೆ ನಡುವಲ್ಲಿ ಕೂರಿಸಿಕೊಂಡು ಸಾಗುವ ರೈತಾಪಿ ಜನರೂ, ಶಾಲೆಗೆ ಹೋಗಲು ಒಲ್ಲದೆ ಅಳುತ್ತಿರುವ ಮಕ್ಕಳಂತೆ ಕಿರುಚಿಕೊಳ್ಳುವ ನಾಟಿಕೋಳಿಗಳನ್ನು ಬೈಕಿನ ತುಂಬಾ ನೇತಾಡಿಸಿಕೊಂಡು ಸಾಗುವ ಸಂತೆ ವ್ಯಾಪಾರಿಗಳನ್ನೂ ಈ ಹಾದಿಯಲ್ಲಿ ನೋಡುತ್ತಲೇ ಇರುವ ನಾನು ಈ ಬಂಗಾರಪ್ಪನೂ ಅಂತಹದೇ ಒಂದು ನೈಜ ಜೀವನ ನಾಟಕದಲ್ಲಿ ಪಾಲುಗೊಳ್ಳಲು ತೆರಳುತ್ತಿರುವ ಮನುಷ್ಯನಾಗಿ ಕಂಡಿದ್ದನು.

2011-11-17_5966ಮೊನ್ನೆ ಸುಮ್ಮನೆ  ಯಾರನ್ನೋ ಹೀಗೇ ವಿನಾಕಾರಣ ಸ್ಮರಿಸಿಕೊಂಡು ಸಾಗುತ್ತಿರುವಾಗ ಈ ಬಂಗಾರಪ್ಪನು ಮತ್ತೆ ಅದೇ ಸ್ಪೀಡಿನಲ್ಲಿ ಹಿಂದಿಕ್ಕಿ ಮುಂದೆ ಸಾಗಿದ್ದು ಕಂಡು ಇವನು ಹೀಗೆ ಯಾವಾಗಲೂ ನನ್ನನ್ನು ಸೈಡ್ ಹೊಡೆಯುತ್ತಿರುವುದು ಸರಿಯಲ್ಲ ಇವನನ್ನು ವಿಚಾರಿಸಿಕೊಳ್ಳಬೇಕು ಅನಿಸಿ ಒಂದೇ ಕ್ಷಣದಲ್ಲಿ ಅವನನ್ನು ಹಿಂದಿಕ್ಕಿ ಮುಂದೆ ದೂರ ಸಾಗಿ  ಒಂದು ಮರದ ಕೆಳಗೆ ನಿಂತುಕೊಂಡು ಅವನಿಗಾಗಿ ಕಾದೆ.

ಅವನು ಅವನದೇ ವೇಗದಲ್ಲಿ ನಗುತ್ತಾ ಬರುತ್ತಿದ್ದ.ಮಾರಾಯ ಯಾವಾಗಲೂ ನಗುತ್ತಿರುತ್ತಾನಲ್ಲಾ ಅನಿಸಿತು.ಪೆಟ್ರೋಲು ಮುಗಿಯಿತೆಂಬಂತೆ ಅಭಿನಯಿಸುತ್ತಾ ಒಂದು ಖಾಲಿ ಬಾಟಲನ್ನು ತೋರಿಸಿ ನಿಲ್ಲಿಸುವಂತೆ ಆತನನ್ನು ಕೋರಿದೆ.

ಅಷ್ಟು ಸಂಸಾರ ಭಾರವಿದ್ದರೂ ಒಂದಿನಿತೂ ವಾಲದೆ ಆತ ಆ ಬೈಕನ್ನು ನಿಲ್ಲಿಸಿದ.

‘ಅಲ್ಲಾ ಮಾರಾಯ ಯಾವಾಗಲೂ ಸೈಡ್ ಹೊಡೆಯುತ್ತಲೇ ಇರುತ್ತೀಯಾ.ಹಾಗಾದರೆ ನಮ್ಮಂತವರು ಜೀವನದಲ್ಲಿ ಮುಂದುವರಿಯಲೇ ಬಾರದೇ?’ಎಂದು ಡೈಲಾಗು ಹೊಡೆದೆ.

ಆತ ನಾಚಿಕೊಂಡ.

‘ಇಲ್ಲಾ ಸಾರ್.ಹೊಟ್ಟೆಪಾಡು. ಹಳ್ಳಿಹಳ್ಳಿಗೆ ಹೋಗಿ ನಾಟಕ ಮಾಡಿ ಹಳ್ಳಿಯವರು ಕೊಟ್ಟಿದ್ದು ಎಂಟಾಣೇನೋ ಎರಡು ರೂಪಾಯಿಯೋ ಹೊಟ್ಟೆಗೆ ಹಾಕಿಕೊಂಡು ಬದುಕ್ತೀವಿ. ಸಾರ್,ಹೆಂಡ್ತೀಗೆ ಹುಷಾರಿರಲಿಲ್ಲ.ಡಾಕ್ಟರು ನೂರು ರೂಪಾಯಿ ಇಸಕೊಂಡ್ರು.ಅವ್ಳು ಹೀರೋಯಿನ್ನು.ನಾನು ಹೀರೋ.ಒಬ್ರಿಗೆ ಹುಷಾರಿಲ್ಲಾಂದ್ರೆ ನಾಟಕ ಆಗೋದೇ ಇಲ್ಲ.ಸಾರ್, ಸೀರಿಯಲ್ ಬಲ್ಬ್ ಹಾಕಿ, ಪರದೆ ಕಟ್ಟಿ ಮ್ಯೂಸಿಕ್ ಹಾಕಿ ನಾವು ಡೇನ್ಸ್ ಮಾಡ್ತೀವಿ ಸಾರ್’ಅಂದ.

‘ ಮಾರಾಯ ನೋಡಕ್ಕೆ ಕಿಚ್ಚ ಸುದೀಪ್ ತರಾ ಇದೀಯಾ.ಎಂತೆಂತವ್ರೆಲ್ಲಾ ಹೀರೋ ಆದ್ರು.ನೀನ್ಯಾವಾಗ ಹೀರೋ ಆಗೋದು.ಬಾ ಮಾತಾಡೋಣ.ನಿಮ್ಮ ಒಂದಿನದ ನಾಟಕದ ಫೀಸು ನಾನೇ ಕೊಡ್ತೀನಿ.ಎಲ್ಲಾ ಕಥೆ ಹೇಳು’ ಅಂತ ತುಂಬಾ ಹೊತ್ತು ಮರವೊಂದರ ಕೆಳಗೆ ಕೆರೆಯೊಂದರ ಪಕ್ಕ ನಿಂತುಕೊಂಡು ಮಾತನಾಡಿದೆವು.

‘ಸಾರ್ ಸುದೀಪ್ ಅಲ್ಲ ಸಾರ್. ನಾನು ನೋಡಕ್ಕೆ ಜೋಗಿ ಶಿವಣ್ಣನ ಥರಾನೇ ಸಾರ್.ಎಲ್ಲಾ ಹೇಳ್ತಾರೆ.ನೋಡಿ ಬೇಕಾದ್ರೆ’ ಅಂತ ತನ್ನ ಪೆಟಾರಿಯಿಂದ ಒಂದು ಬೇಗಡೆಯ ಡೂಪ್ಲಿಕೇಟ್ ಲಾಂಗು ಹೊರ ತೆಗೆದು ಝಳಪಿಸಿ  ‘ಊರಿಂದ ಓಡಿ ಬಂದ ಜೋಗಿ ನಾ ಅಲ್ಲಾರೀ’ ಅಂತ ಹಾಡು ಹೇಳಿದ.

‘ಸಾರ್ ಸ್ವಲ್ಪ ತಲೆಗೆ ಎಣ್ಣೆ ಹಾಕಿ ಕೆದರಿದ್ರೆ ನಾ ಥೇಟ್ ಶಿವಣ್ಣಾನೇ’ ಅಂತ ಹೇಳಿದ.

‘ಸಾರ್, ಎಣ್ಣೆ ಸಿಗದಿದ್ರೆ ಸ್ವಲ್ಪ ನೀರು ತಗೊಂಡು ತಲೆಗೆ ಹಾಕಿ ಕೆದರಿದ್ರೂ ನಾ ಥೇಟ್ ಶಿವಣ್ಣೋರ ತರಾನೇ’ ಅಂತ ಹೇಳಿದ.

‘ಸರ್ ನೋಡಿ ಇವ್ಳು ಸ್ವಲ್ಪ ಬೆಕ್ಕಿನ್ ಕಣ್ಣು.ನೋಡಕ್ಕೆ ಐಶ್ವರ್ಯಾ ರೈ ತರಾನೇ ಅಲ್ವಾ ಸಾರ್’ಅಂತ ನನ್ನನ್ನೇ ಕೇಳಿದ.

‘ನಿಜ ಒಂಥರಾ ಹಾಗೇನೇ. ಇನ್ನೊಂದ್ಸಲಾ ಐಶ್ವರ್ಯಾ ಕಣ್ಣು ನೋಡಿ ಆಮೇಲೆ ಹೇಳ್ತೀನಿ’ ಅಂದೆ.

ಯಾಕೋ ಆಕೆಗೆ ಸಂಕಟವಾಗುತ್ತಿದೆ ಅನ್ನಿಸುತ್ತಿತ್ತು.ಆಕೆ ಆಗಾಗ ನೋವು ಉಮ್ಮಳಿಸುತ್ತಿರುವಂತೆ ಮುಖ ಮಾಡುತ್ತಿದ್ದಳು.

ಅಮೇಲೆ ತಡೆಯಲಾರದೆ ಅಲ್ಲೇ ನೆರಳಲ್ಲಿ ಮುಖ ತಿರುಗಿಸಿಕೊಂಡು ಕೂತು ವಾಂತಿ ಮಾಡತೊಡಗಿದಳು.

ಅವಳು ವಾಂತಿ ಮಾಡುತ್ತಿರುವುದನ್ನು ನೋವಿನಿಂದಲೇ ನೋಡುತ್ತಾ ಬಂಗಾರಪ್ಪ ಇನ್ನೂ ಕೆಲವು ಅಭಿನಯಗಳನ್ನೂ, ಡಯಲಾಗುಗಳನ್ನೂ ಮಾಡಿ ತೋರಿಸಿದನು.

2011-11-17_5962‘ಕನ್ನಡ ಕುಲಬಾಂಧವರೇ’ಎಂದು ಡಾಕ್ಟರ್ ರಾಜ್ ಕುಮಾರ್ ಶೈಲಿಯಲ್ಲಿ, ‘ಈ ಜೀವನ ಬರೀ ಓಳು.ಬರೋದು ಹೋಗೋದು ಅಷ್ಟೇ’ ಎಂದು ಉಪ್ಪಿ ಸ್ಟೈಲಲ್ಲಿ ತೋರಿಸಿದನು.

ನಾನು ಮನದಲ್ಲೇ ಆತನಿಗಾಗಿ ಬೇಡಿಕೊಂಡೆ.

2011-11-17_5958ಯಾರು ಏನು ಬೇಕಾದರೂ ಆಗಬಲ್ಲ ಈ ಅನಂತ ಅವಕಾಶದಲ್ಲಿ ನಮ್ಮ ಈ ಬೈಕ್ ಬಂಗಾರಪ್ಪನೂ ನಾಯಕಮಣಿಯಾಗಲಿ ಎಂದು ಬೇಡಿಕೊಂಡೆ.ನೀವೂ ಬೇಡಿಕೊಳ್ಳಿ.ನನಗೂ ಜೀವನಕ್ಕೊಂದು  ಉದ್ದೇಶ ಇಟ್ಟುಕೊಳ್ಳುವ ಬುದ್ದಿ ಬರಲಿ ಎಂದೂ ಆ ಮರದ ಅಡಿಯಲ್ಲಿ ಬೇಡಿಕೊಂಡೆ.ನನಗಾಗಿಯೂ ನೀವು ಬೇಡಿಕೊಳ್ಳಿ.

(೨೦೧೧, ನವಂಬರ್ ೨೦ )

(ಫೋಟೋಗಳೂ ಲೇಖಕರವು)

ಕಾಶ್ಮೀರದ ಮೌಲ್ವಿಯವರ ಮುದ್ದಿನ ಮಡದಿ

2011-11-06_5212ಬೆಳಬೆಳಗೆಯೇ ತೊಟ್ಟು ಕಳಚಿಕೊಂಡು ಉದುರುತ್ತಿರುವ ಹಳದಿ ಹಳದಿ ಚಿನಾರ್ ಎಲೆಗಳು, ಎಲ್ಲೋ ಮೇಲಿಂದ ಪಡೆದವನ ಕರುಣೆ ಇನ್ನೂ ಉಳಿದಿದೆ ಎಂಬ ಆಸೆ ಹುಟ್ಟಿಸಲೋ ಎಂಬಂತೆ ದಾರಿಯ ಮೇಲೆ ಬೀಳುತ್ತಿರುವ ಮಂಕು ಮಂಕು ಬೆಳಕು, ಮುಸುಕು ಹೊತ್ತ ಅದೃಶ್ಯ ಮುಖಗಳು, ಇನ್ನು ಇಪ್ಪತ್ತು ದಿನದೊಳಗೆ ಈ ಹಾದಿಯಲ್ಲಿ ಮೂರಡಿ ಹಿಮ ಬೆಳ್ಳಗೆ ಸುರಿದುಕೊಂಡಿರುವುದಲ್ಲಾ.. ಆಗ ಅದರೊಡನೆ ಇರಲು ನಾನು ಇಲ್ಲಿ ಇರುವುದಿಲ್ಲವಲ್ಲಾ ಎಂದು ಮನಸು ಒದ್ದೆ ಒದ್ದೆ ಮಾಡಿಕೊಂಡು ಶ್ರೀನಗರದಿಂದ ಹಿಂತಿರುಗುತ್ತಿದ್ದೆ.

ಕೋಟಿ ವರ್ಷಗಳಿಂದ ಹೀಗೇ ಎಲೆಯ ಬಣ್ಣ ಬದಲಿಸಿಕೊಂಡು, ಎಲೆಯ ತೊಟ್ಟು ಕಳಚಿಸಿಕೊಂಡು, ಎಲೆಗಳನ್ನೆಲ್ಲಾ ಕಳೆದುಕೊಂಡು ಹಿಮರಾಣಿಯ ಶೀತಲ ಅಪ್ಪುಗೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಈ ಮರಗಳು, ಸಾವಿರಾರು ವರ್ಷಗಳಿಂದ ಹೀಗೇ 2011-11-06_4972ಚಳಿಗೆ ಮುದುಡಿಕೊಂಡು, ಬಿಸಿಲು ಕಾಯಿಸಿಕೊಂಡು, ಮಳೆಗೆ ಒಡ್ಡಿಕೊಂಡು ಪ್ರತಿಮೆಗಳಂತೆ ನಡೆಯುತ್ತಿರುವ ಈ ಮನುಷ್ಯರು.ಅವರ ಸುಂದರ ಶೀತಲ ಮುಖಗಳು, ನಮ್ಮ ಹಾಗೇ ಇರುವ ಅವರ ಸಣ್ಣಪುಟ್ಟ ಕಷ್ಟಸುಖಗಳು, ಮೋಸ, ತಟವಟ , ಅತಿಆಸೆ, ವಾತ್ಸಲ್ಯಗಳು.

ಎಲ್ಲವನ್ನೂ ಇದ್ದ ಒಂದೆರೆಡು ದಿನಗಳಲ್ಲಿ ಆಗುವಷ್ಟು ಅನುಭವಿಸಿ ಹಿಂತಿರುಗಿ ಹೊರಟಾಗ ಯಾಕೋ ಕಣ್ಣು ತುಂಬಿಕೊಳ್ಳುತ್ತಿತ್ತು.ಆ ಉರಿಗೆ ಇನ್ನೂ ಸ್ವಲ್ಪ ಉಪ್ಪು ಸವರಲೋ ಎಂಬಂತೆ ಬೀಳುಕೊಡಲು ಬಂದಿದ್ದ ಕಾಶ್ಮೀರಿ ಟ್ಯಾಕ್ಸಿ ಚಾಲಕ ಸೂಫಿ ಹಾಡೊಂದನ್ನು ಜೋರಾಗಿ ಹಾಕಿದ್ದ.‘ಈ ಸಂಸಾರ ಯಾಕಾಗಿ, ಈ ವ್ಯವಹಾರ ಯಾಕಾಗಿ ಮೇಲೆ ಭಗವಂತನಿರುವಾಗ ಸುಡದು ಯಾವುದೂ ಬೆಂಕಿ’ಎಂಬ ಅರ್ಥದ ಹಾಡು.

ಮಾಮೂಲಿ ಹೊತ್ತಲ್ಲಾಗಿದ್ದರೆ ಭಾವುಕನಾಗಿ ಕೇಳಬಹುದಾಗಿದ್ದ ಹಾಡು.ಈಗ ಮೊದಲೇ ಅಳುಬುರುಕನಾಗಿರುವಾಗ ಇನ್ನಷ್ಟು ನೋಯಿಸುವ ಹಾಡು.

‘ಬಂದು ಮಾಡು ಮಾರಾಯ’ ಎಂದು ಚಲಿಸುವ ವಾಹನದಿಂದಲೇ ಫೋಟೋ ಕ್ಲಿಕ್ಕಿಸತೊಡಗಿದೆ.

2011-11-06_5266ಹೇಗೆ ಬಂದರೂ ಪರವಾಗಿಲ್ಲ ವಿದಾಯದ ಈ ಚಿತ್ರಗಳು ಎಂದು ಕ್ಲಿಕ್ಕಿಸುತ್ತಲೇ ಇದ್ದೆ.

ರಸ್ತೆಗೆ ಬ್ಯಾರಿಕೇಡ್ ಎಳೆದು ಯಾವುದೋ ರಾಜಕಾರಣಿಗೆ ಹೋಗಲು ಅನುವು ಮಾಡಿಕೊಡುತ್ತಿದ್ದ ಪೋಲೀಸನೊಬ್ಬ ನಮ್ಮ ವಾಹನಕ್ಕೆ ಕೈತೋರಿಸಿ ನಿಲ್ಲಲು ಹೇಳಿದ.

ವಾಹನ ನಿಂತಿತು.

ಇನ್ನೊಬ್ಬ ಪೋಲೀಸು ತನ್ನ ಬಂದೂಕನ್ನು ನನ್ನೆಡೆಗೆ ಗುರಿಯಿಟ್ಟು ಕ್ಯಾಮರಾ ಒಳಗಿಡಲು ಹೇಳಿದ.

ಹೋಗುವುದಾದರೆ ಈ ಪ್ರಾಣ ಹೋಗಲಿ ಇಲ್ಲೇ ಎಂದು ನಾನು ಅವನನ್ನು ನೋಡಿ ಮುಗುಳ್ನಕ್ಕೆ.

ಆತನಿಗೇನೂ ನಗು ಬರಲಿಲ್ಲ.

2011-11-04_4411ಇನ್ನೊಮ್ಮೆ ಬಂದೂಕು ತೋರಿಸಿದ.

ಕ್ಯಾಮರಾ ಒಳಗಿಟ್ಟೆ.

‘ಯಾಕೋ ಆ ಪೋಲೀಸನಿಗೆ ಬಕ್ರೀದಿಗೆ ಸರಿಯಾಗಿ ಮಟನ್ ಸಿಕ್ಕಿರಲಿಕ್ಕಿಲ್ಲ.ಅದಕ್ಕೇ ಉದ್ರೇಕಗೊಂಡಿದ್ದಾನೆ’ ಎಂದು ವಾತಾವರಣವನ್ನು ತಿಳಿಗೊಳಿಸಲು ನೋಡಿದೆ.

ಟ್ಯಾಕ್ಸಿ ಚಾಲಕ ನನ್ನ ಸಮಾಧಾನಕ್ಕೋ ಎಂಬಂತೆ ಗಹಗಹಿಸಿ ನಕ್ಕ.

ಅಮೇಲೆ ‘ಇಲ್ಲ ಸಾರ್ ಇಲ್ಲಿ ಕೇವಲ ಬಂದೂಕಿನ ಭಾಷೆ ಪರಿಣಾಮಕಾರಿಯಾಗಿರುತ್ತದೆ.ಮತ್ತು ಜನರೂ ಹೆದರುತ್ತಾರೆ’ ಎಂದ.

ಈತನಿಗೆ ಈಗ ಬಹುಶ: ಮೂವತ್ತು ವರ್ಷವಾಗಿರಬಹುದು.ಕಳೆದ ಇಪ್ಪತ್ತು ವರ್ಷಗಳಿಂದ ಬಂದೂಕುಗಳನ್ನು ನೋಡುತ್ತಲೇ ಬಂದಿದ್ದಾನೆ.ಸಣ್ಣವನಿರುವಾಗಲೇ ಮನೆ ಬಿಟ್ಟು ಚಾಲಕನಾಗಿ ದುಡಿಯುತ್ತಿದ್ದಾನೆ.ಹತ್ತನೇ ವಯಸ್ಸಲ್ಲೇ ಟ್ರಕ್ ಡ್ರೈವರನೊಬ್ಬನ ಜೊತೆ ಕಲಾಸಿಯಾಗಿ ಕೆಲಸ ಮಾಡುತ್ತಿದ್ದನಂತೆ.ಒಂದು ದಿನ ಆ ಟ್ರಕ್ಕು ನಡು ರಸ್ತೆಯಲ್ಲಿ ಗುಂಡಿನ ಕಾಳಗದ ನಡುವೆ ಸಿಕ್ಕಿ ಹಾಕಿಕೊಂಡಿತ್ತಂತೆ.ಟ್ರಕ್ ಡ್ರೈವರ್ ಬಾಗಿಲು ತೆಗೆದು ಓಡು ಎಂದು ಇವನನ್ನು ನೂಕಿ ಬಿಟ್ಟನಂತೆ.ಇವನು ಓಡುವಾಗ ಹಾದಿಯಲ್ಲಿ ಮೃತ ದೇಹಗಳು ಬಿದ್ದಿದ್ದವಂತೆ.ಇವನು ಬಹಳಷ್ಟು ಮೃತ ದೇಹಗಳನ್ನು ಎಡವಿಕೊಂಡು ಬಿದ್ದು, ಓಡಿ ಬದುಕಿಕೊಂಡನಂತೆ.ಆಮೇಲೂ ಈತ ಬಹಳಷ್ಟು ಮೃತ ದೇಹಗಳನ್ನು ನೋಡಿದ್ದಾನೆ.

2011-11-06_5237ಅದಕ್ಕೋ ಏನೋ ಅಥವಾ ಇಲ್ಲಿನ ಭಯಂಕರ ಚಳಿಯ ಪರಿಣಾಮವೋ ಈತ ಇನ್ನೂ ಮದುವೆಯಾಗಿಲ್ಲ ಮತ್ತು ಬಹಳಷ್ಟು ಪ್ರೇಮಗಳನ್ನು ತಿರಸ್ಕರಿಸಿದ್ದಾನೆ.

ಪ್ರೇಮ ಯಾಚಿಸಿ ಬಂದ ಸುಂದರಿಯರಿಗೆ ಈತ ಸಹೋದರಿಯಾಗುವುದಾದರೆ ಮಾತ್ರ ಪ್ರೀತಿಸುತ್ತೇನೆ ಎಂಬ ಶರತ್ತನ್ನು ಹಾಕುತ್ತಾನಂತೆ.

ಹಾಗಾಗಿ ಮದುವೆಯೇ ಆಗದ ಇವನನ್ನು ಈತನ ಸ್ವಂತ ಸಹೋದರಿಯೂ ದ್ವೇಷಿಸುತ್ತಾಳೆ.ಮತ್ತು ತಾಯಿಯೂ ಕೂಡಾ.

ವಾರಗಟ್ಟಲೇ ಟ್ಯಾಕ್ಸಿಯಲ್ಲಿ ಊರೂರು ತಿರುಗಿ ಯಾವಾಗಲೋ ನಡು ರಾತ್ರಿಯಲ್ಲಿ ಬರುವ ಈತನ ಉಪಚಾರವನ್ನು ಅವರೇ ಮಾಡಬೇಕಾಗುತ್ತದೆ ಎಂದು ಅವರಿಗೆ ಸಿಟ್ಟು.

2011-11-06_5166_01’ಅಯ್ಯೋ ಮಾರಾಯ ನಿನ್ನ ಜಾಗದಲ್ಲಿ ನನ್ನಂತಹವರು ಇದ್ದಿದ್ದರೆ ಒಬ್ಬಳೇ ಒಬ್ಬಳು ಸುಂದರಿಯ ಪ್ರೇಮಯಾಚನೆಯನ್ನೂ ತಿರಸ್ಕರಿಸುತ್ತಿರಲಿಲ್ಲ.ಒಂದೇ ದಿನದಲ್ಲಿ ಹಲವು ಜನ್ಮಗಳನ್ನು ತಳೆದು ಪಾವನರಾಗುತ್ತಿದ್ದೆವು’ ಎಂದು ಆತನಿಗೆ ಹೇಳಿದೆ.

ಆತ ಏನೂ ಗೊತ್ತಾಗದವನಂತೆ ನಕ್ಕಿದ್ದ.

ನಿಜವೋ ಅಥವಾ ನಟನೆಯೋ ಎಂದು ಗೊತ್ತಾಗದ ಈತನ ಈ ತರಹದ ನಿಷ್ಕಲ್ಮಶ ನಗು, ಕ್ಷಣಕ್ಕೊಮ್ಮೆ ಬಣ್ಣ ಬದಲಿಸುವ ಇಲ್ಲಿನ ಶರದೃತುವಿನ ಆಕಾಶ, ಬೀಳುತ್ತಲೇ ಇರುವ ಚಿನಾರಿನ ಎಲೆಗಳು, ಇರುವ ಒಂದೆರೆಡು ದಿನಗಳಲ್ಲೇ ಇಲ್ಲಿನ ಎಲ್ಲವನ್ನೂ ಪುಪ್ಪುಸದೊಳಗೆ ತುಂಬಿ ಬಿಡಬೇಕೆನ್ನುವ ನನ್ನ ಹಠಮಾರಿ ಆತ್ಮ.

`ಹೋಗಲಿ ಬಿಡು, ನೀನು ಇಲ್ಲಿಯವರೆಗೆ ಯಾರನ್ನೂ ಕೊಂಡೊಯ್ಯದ ಎಡೆಗಳಿಗೆ ನನ್ನ ಕೊಂಡೊಯ್ಯು ಮಾರಾಯಾ’ಎಂದು ಆಗಾಗ ಆತನಿಗೆ ದುಂಬಾಲು ಬೀಳುತ್ತಿದ್ದೆ.

‘ಚಲೋ ಸಾಬ್’ ಎಂದು ಆತ ಹೊರಟು ಬಿಡುತ್ತಿದ್ದ.

2011 11 05_4724ಹೀಗೆ ಹೊರಟ ದಾರಿಯಲ್ಲಿ ಸಿಕ್ಕಿದವಳು ಈಕೆ. ಮೂರು ದಾರಿಗಳು ಸೇರುವ ಯಾರೂ ಇಲ್ಲದ ಜಾಗದಲ್ಲಿ ಎಲೆ ಕಳಚಿಕೊಂಡ ಮರವೊಂದರ ಕೆಳಗೆ ಇಬ್ಬರು ಮಕ್ಕಳ ಜೊತೆ ನಿಂತಿದ್ದ ಈಕೆ ಕೈತೋರಿ ನಮ್ಮನ್ನು ನಿಲ್ಲಿಸಿದಳು.

ನಾವು ಬೆಟ್ಟದ ಮೇಲಿರುವ ಬಾಬಾ ಫಕೀರನ ಪುರಾತನ ದರ್ಗಾಕ್ಕೆ ಹೊರಟಿದ್ದೆವು.

‘ನಾನೂ ಅಲ್ಲಿಗೆ ಹೊರಟವಳು’ ಎಂದು ಟ್ಯಾಕ್ಸಿ ಹತ್ತಿ ಕುಳಿತಳು.ಒಳಕ್ಕೆ ಹತ್ತಿದೊಡನೆ ಮಕ್ಕಳು ಹೊಸ ಮನೆ ಹೊಕ್ಕಂತೆ ಗಲಗಲ ಗಲಾಟೆ ಮಾಡಲು ತೊಡಗಿದರು. ಆಕೆಯೂ ಒಂದು ತರಹದ ನಿರ್ವಿಣ್ಣ ಧ್ವನಿಯಲ್ಲಿ ಆಲಾಪದಂತಹ ದಾಟಿಯಲ್ಲಿ ಚಾಲಕನೊಡನೆ ಹರಟಲು ತೊಡಗಿದಳು.

ಅವಳು ಹೇಳುತ್ತಿದ್ದ ರೀತಿ ನೋಡಿದರೆ ಕಥೆ ಜೋರಾಗಿಯೇ ಇದ್ದಂತಿತ್ತು.‘ನನಗೂ ಸ್ವಲ್ಪ ಭಾಷಾಂತರಿಸು ಮಾರಾಯ’ ಎಂದು ನಾನು ಗೋಗರೆಯುತ್ತಿದ್ದೆ.‘ ಎಲ್ಲ ಕೇಳಿ ಮುಗಿಸಿ ಹೇಳುತ್ತೇನೆ ಸಾಬ್.ಈಗ ಸುಮ್ಮನೆ ಕೇಳಲು ಬಿಡಿ’ ಎಂದು ಆತ ಗದರಿದ.

2011-11-05_4750ಆಮೇಲೆ ಬಾಷಾಂತರಿಸಿದ.

ಆಕೆ ಅಲ್ಲಿನ ಸರೋವರ ತಟವೊಂದರ ಮೀನುಗಾರ ಹೆಂಗಸು.ದೋಣಿಯಲ್ಲಿ ಹೊರಟು ಮೀನು ಹಿಡಿಯುವವಳು.ಅವಳಿಗೆ ಸಣ್ಣ ವಯಸ್ಸಿನಿಂದಲೇ ಬೆಟ್ಟದ ಮೇಲಿರುವ ಈ ಬಾಬಾ ಫಕೀರನ ಗುಂಗು.ಮನೆ ಬಿಟ್ಟು ಏಕಾಂಗಿಯಾಗಿ ಎಲ್ಲೆಲ್ಲೋ ಹೋಗುತ್ತಿದ್ದಳಂತೆ.ಹೀಗೆ ಅಲೆಯುತ್ತಿರುವ ಇವಳಿಗೆ ಮದುವೆಯಾದರೆ ಸರಿಯಾಗಬಹುದು ಎಂದು ಮನೆಯವರು ಅದಕ್ಕಾಗಿ ಹರಸಾಹಸ ಪಟ್ಟರಂತೆ.

ಮದುವೆಯಾಗುವುದೇ ಇಲ್ಲ ಎಂದು ಇವಳೂ ಹಠ ತೊಟ್ಟಳಂತೆ.

ಕೊನೆಗೆ ಮನೆಯವರ ಕಾಟ ತಡೆಯಲಾಗದೇ ‘ಮದುವೆಯಾಗುವುದಾದರೆ ಹೆಂಡತಿ ತೀರಿಕೊಂಡ ಗಂಡಸಿನ ಜೊತೆ ಮಾತ್ರ.ಜೊತೆಗೆ ಅವನಿಗೆ ಮಕ್ಕಳೂ ಇರಬೇಕು’ಎಂದು ಶರತ್ತು ಹಾಕಿದಳಂತೆ.

2011 11 05_4730ಹಾಗೇ ಹೆಂಡತಿ ತೀರಿಕೊಂಡ ಹಳ್ಳಿಯ ಮೌಲ್ವಿಯೊಬ್ಬನನ್ನು ಮದುವೆಯಾಗಿ, ಆತನ ಮಕ್ಕಳಿಬ್ಬರ ಜೊತೆ ಈಕೆ ಬೆಟ್ಟ ಹತ್ತುತ್ತಾ ಬಂದಿದ್ದಳು.

ನೋಡಲು ಅಲೌಕಿಕ ಸುಂದರಿಯಂತಿದ್ದ ಈಕೆ ಚಳಿಗಾಳಿಯ ಆ ಮಟಮಟ ಮದ್ಯಾಹ್ನ ಅಪರಿಚಿತರಾದ ನಮ್ಮ ವಾಹನದಲ್ಲಿ ಕುಳಿತುಕೊಂಡು ಕಥೆ ಹೇಳುತ್ತಿದ್ದಳು.

ಆಕೆಯ ಕಥೆಗೆ ಕ್ಯಾರೇ ಅನ್ನದ ಆ ಮಕ್ಕಳು ವಾಹನದ ಇಂಚಿಂಚನ್ನೂ ಆಹ್ಲಾದಿಸುತ್ತಿದ್ದರು.

ಬೆಟ್ಟ ಇಳಿದು ವಾಪಾಸು ಹೋಗುವಾಗ ಆಕೆ ತಾನೂ ಬರುವೆ ಅಂದಳು.

‘ನಾವು ಹೋಗುವಲ್ಲೆಲ್ಲಾ ಬರುವೆಯಾ’ ಎಂದು ಕೇಳಿದೆ.

‘ಹೌದು, ನೀವು ಹೋಗುವಾಗ ನಿಮ್ಮ ಜೊತೆ ನಿಮ್ಮ ಮನೆಗೂ ಬರುವೆ’ ಅಂದಳು.

‘ಅಯ್ಯೋ ಹಾಗಾದರೆ ನಿನ್ನ ಕಟ್ಟಿಕೊಂಡ ಮೌಲವಿಯ ಕಥೆಯೇನು’ ಅಂತ ಕೇಳಿದೆ.

‘ಹೋ, ಹೇಗೂ ಅವರಿಗೆ ನನ್ನಿಂದ ಏನೂ ಸುಖವಿಲ್ಲ.ಕೇಳಿದರೆ ತಾನಾಗಿಯೇ ಬಿಟ್ಟುಕೊಡುತ್ತಾನೆ’’ ಅಂತ ಹೇಳಿದಳು.

‘ವ್ಹಾವ್, ಹಾಗಾದರೆ ಆ ಮಹಾ ಪುರುಷನನ್ನು ನೋಡಬೇಕಲ್ಲಾ.ನಿನ್ನ ಮನೆಗೆ ಕರೆದುಕೊಂಡು ಹೋಗು’ ಎಂದು ಕೇಳಿದೆ.‘ಹೋ ಅದಕ್ಕೇನು’ಎಂದು ಆಕೆ ಕತ್ತಲು ಕತ್ತಲು ಹೊತ್ತಲ್ಲಿ ಕಾಲುವೆಯೊಂದರ ಬದಿಯಲ್ಲಿದ್ದ ತನ್ನ ಪುಟ್ಟ ಮನೆಯೊಳಕ್ಕೆ ಕರೆದೊಯ್ದಳು.

2011 11 05_4802ಆಕೆಯ ಯಜಮಾನ ಆಕೆಗಿಂತಲೂ ಸುಂದರನಾಗಿ ಕಾಣಿಸುತ್ತಿದ್ದ.ಆಕೆಗಿಂತಲೂ ಚುರುಕಾಗಿದ್ದ.ಆಕೆಯ ಹುಡುಗಾಟಗಳನ್ನು ಅರ್ಥ ಮಾಡಿಕೊಂಡಿರುವ ತಾಯಿಯಂತೆ ಆತ ಸಲಾಂ ಹೇಳಿ ನಮ್ಮನ್ನು ಸ್ವಾಗತಿಸಿದ.ಪುಟ್ಟ ಹುಡುಗಿಯಂತೆ ಆಕೆ ಬೆಟ್ಟದಲ್ಲಿ ನಾವು ಸಿಕ್ಕ ಕಥೆಯನ್ನು ಸಂಭ್ರಮದಲ್ಲಿ ಗಂಡನಿಗೆ ವಿವರಿಸುತ್ತಿದ್ದರೆ ಆತ ಸುಮ್ಮನೇ ಕೇಳಿಸಿಕೊಳ್ಳುತ್ತಿದ್ದ.

‘ಮೌಲ್ವಿಗಳೇ, ಇನ್ನೊಂದು ವಿಷಯ. ನಿಮ್ಮ ಹೆಂಡತಿ ನಿಮ್ಮನ್ನು ಬಿಟ್ಟು ನನ್ನೊಡನೆ ಬೆಂಗಳೂರಿಗೆ ಬರಲು ತಯಾರಾಗಿದ್ದಾಳೆ.ನೀವು ಏನು ಹೇಳುತ್ತೀರಿ ಎಂದು ಕೇಳಿದೆ.

ಆತ ಮಗುವಿನಂತೆ ನಕ್ಕ.

2011-11-06_4886‘ಈಕೆ ನರಕಕ್ಕೆ ಬೇಕಾದರೂ ಸಲೀಸಾಗಿ ಹೊರಟು ಬಿಡುತ್ತಾಳೆ.ಆದರೆ ಆಕೆಗೆ ಕಷ್ಟವಾಗಬಹುದು ಎಂದು ನಾನು ಬಿಡುತ್ತಿಲ್ಲ.ಹಾಗೆ ನಿಮಗೆ ಬೇಕೇಬೇಕು ಅಂತ ಇದ್ದರೆ ಯಾರೂ ಏನೂ ಮಾಡಲಾಗುವುದಿಲ್ಲ’

ನಮ್ಮ ಮಾತುಕತೆಗಳನ್ನು ಭಾಷಾಂತರ ಮಾಡುತ್ತಿದ್ದ ಚಾಲಕ ‘ಸಾಬ್ , ನಿಮ್ಮ ಹೆಂಡತಿಯ ಫೋನ್ ನಂಬರ್ ಕೊಡಿ. ಅವರನ್ನೂ ಒಂದು ಮಾತು ಕೇಳೋಣ ’ಎಂದು ನಡುವಲ್ಲಿ ಬಾಯಿ ಹಾಕಿದ.

‘ಸುಮ್ಮಗಿರು ಮಾರಾಯ’ಎಂದು ನಾನು ಗಂಭೀರನಾದೆ.

ಆಮೇಲೆ ಆ ಪುಟ್ಟ ಮನೆಯಲ್ಲಿ ನಾವೆಲ್ಲರೂ ಬಹಳ ಹೊತ್ತು ಕಷ್ಟಸುಖ ಮಾತಾಡಿಕೊಂಡೆವು.

ಆ ನಡುವೆ ಮೌಲ್ವಿಯ ಮಡದಿ ನಾಲ್ಕಾರು ಬಗೆಯ ಮೀನುಗಳನ್ನು ಕಾಯಿಸಿ ಬಿಸ್ಕತ್ತುಗಳಂತೆ ಚಾದ ಜೊತೆ ತಂದಿಟ್ಟಳು.

ಕಾಲಿಗೆ ಕಂಬಳಿ ಹೊದೆಸಿ ನಡುವೆ ಅಗ್ಗಿಷ್ಟಿಕೆ ಇಟ್ಟು ಆ ಕೋಣೆಯನ್ನು ಬೆಚ್ಚಗೆ ಮಾಡಿದಳು.

ಅವರನ್ನು ಕತ್ತಲಲ್ಲಿ ಬೀಳ್ಕೊಡುವ ಮೊದಲು ಮೌಲ್ವಿಯವರು ‘ನಿಮಗೆ ಇನ್ನೊಂದು ವಿಷಯ ಗೊತ್ತಾ, ನನ್ನ ಹೆಂಡತಿ ಕೈರೇಖೆಗಳನ್ನು ಓದಿ ಅದೃಷ್ಟ ಹೇಳುತ್ತಾಳೆ’ ಎಂದು ಹೇಳಿದರು.

2011-11-07_5480‘ಹೌದಾ’ ಎಂದು ನಾನು ಬಲ ಹಸ್ತವನ್ನು ಆಕೆಯ ಮುಂದೆ ಚಾಚಿದೆ.‘ಬಲ ಹಸ್ತವನ್ನಲ್ಲ, ನಿಮ್ಮ ಎಡ ಹಸ್ತವನ್ನು ಮುಷ್ಟಿ ಮಾಡಿ ತೋರಿಸಿ’ ಎಂದು ಹೇಳಿದಳು.ತೋರಿಸಿದೆ.ಅವಳು ದೂರದಿಂದಲೇ ನನ್ನ ಮುಷ್ಟಿಯನ್ನು ಬಹಳ ಹೊತ್ತು ಪರಿಶೀಲಿಸಿದಳು.ಆಮೇಲೆ ನಕ್ಕಳು.‘ನಗುವುದು ಯಾಕೆ’ ಎಂದು ಕೇಳಿದೆ.‘ಏನಿಲ್ಲ.ನಿಮ್ಮ ಅದೃಷ್ಟ ನೀವು ಅಂದುಕೊಂಡಷ್ಟು ಚೆನ್ನಾಗಿಲ್ಲ’ ಎಂದು ಇನ್ನೊಮ್ಮೆ ನಕ್ಕಳು.

ವಾಪಾಸು ಬರುವ ದಾರಿಯಲ್ಲಿ ಟ್ಯಾಕ್ಸಿ ಚಾಲಕ ಸ್ವಲ್ಪ ಮ್ನಾನವದನನಂತೆ ಮೌನವಾಗಿದ್ದ.‘ಯಾಕೆ ದೋಸ್ತ್ ಗಂಭೀರವಾಗಿರುವೆ’ ಎಂದು ಕೇಳಿದೆ.2011-11-05_4655

‘ಏನಿಲ್ಲ.ಆಕೆಯೂ ನನ್ನ ಹಾಗೆಯೇ ಅಲೆಮಾರಿ.ಎಲ್ಲಿಯೂ ನಿಲ್ಲುವವಳಲ್ಲ.ಏನನ್ನೂ ಕಟ್ಟಿಕೊಳ್ಳುವವಳಲ್ಲ.ನನಗೆ ದಾರಿಯಲ್ಲಿ ಸಿಗುವವರೆಲ್ಲ ಹೀಗೆಯೇ.ಬಹುಶಃ ನೀವೂ ಹೀಗೆಯೇ’ ಎಂದು ಅವನ ಆ ದಿನದ ಇಪ್ಪತ್ತನೆಯ ಸಿಗರೇಟು ಹಚ್ಚಿದ.

(೨೦೧೧ ,ನವಂಬರ್ ೧೩, )

(ಫೋಟೋಗಳೂ ಲೇಖಕರವು)

ಸೂಫಿಬ್ಯಾರಿಗಳ ಕುಂಬಳಕಾಯಿ ಹಲ್ವಾ

Scan_20150716ಸೂಫಿ ಬ್ಯಾರಿ ಎಂಬ ಕೃಷಿ ಮಾಂತ್ರಿಕರೊಬ್ಬರಿದ್ದರು.

ಅವರು ತೀರಿ ಹೋಗಿ ಹತ್ತಿರ ಹತ್ತಿರ ಹದಿನೈದುವರ್ಷ ಕಳೆಯುತ್ತಾ ಬಂತು.

ಅವರ ಜೀವನದ ಕೊನೆಯ ಕೆಲವು ವರ್ಷಗಳಲ್ಲಿ ಅವರ ಜೊತೆ ಕಳೆಯುವ ಭಾಗ್ಯ ನಮ್ಮದಾಗಿತ್ತು.

ತುಂಬ ಆದರ್ಶಗಳನ್ನೂ ಅದಕ್ಕಿಂತಲೂ ಹೆಚ್ಚು ಹಠಮಾರಿತನವನ್ನೂ ಹೊಂದಿದ್ದ ಸೂಫಿ ಬ್ಯಾರಿಗಳು ಕಣ್ಣೆದುರೇ ಕೆಲವು ಕೃಷಿ ಪವಾಡಗಳನ್ನು ಮಾಡಿ ತೋರಿಸುತ್ತಿದ್ದರು.

ಅದರಲ್ಲಿ ಒಂದು ಹೂವೇ ಬಿಡದ ಗೊಡ್ಡು ತೆಂಗಿನ ಮರಗಳಲ್ಲಿ ನಾಲ್ಕೇ ಗಂಟೆಗಳಲ್ಲಿ ಹೂವು ಅರಳಿಸುವುದು. ಅವರ ಪ್ರಕಾರ ಆ ತೆಂಗಿನ ಮರಗಳ ಬುಡ ಸರಿ ಇರುತ್ತಿರಲಿಲ್ಲ. ಹಾಗಾಗಿ ಅವರು ಆ ಮರಗಳ ಬುಡಗಳನ್ನು ಸ್ವಚ್ಚಗೊಳಿಸಿ ಅವುಗಳ ಬೇರನ್ನು ಸಡಿಲಗೊಳಿಸಿ ಒಂದೆರೆಡು ಗಂಟೆಗಳ ಕಾಲ ನೀರುಣಿಸಿ ಒಂದು ಬೀಡಿ ಹಚ್ಚಿ ಹೊಗೆಬಿಟ್ಟು ಊಟಕ್ಕೆ ಹೋಗುತ್ತಿದ್ದರು.

ಊಟ ಮುಗಿಸಿ ವಾಪಾಸು ಬಂದಾಗ ಆ ಮರದಲ್ಲಿ ಹೂವುಗಳರಳಿ ಒಂದೆರೆಡು ಹೂವುಗಳು ನೆಲದಲ್ಲೂ ಬಿದ್ದಿರುತ್ತಿದ್ದವು.

‘ನೋಡಿದಿರಾ? ಬುಡ ಸರಿ ಇಲ್ಲದಿದ್ದರೆ ಆಗುವುದೇ ಹೀಗೆ’ ಎಂದು ಅವರು ಈ ಉದಾಹರಣೆಯ ಮೂಲಕ ನಮ್ಮ ದೇಶದ, ನಮ್ಮ ವ್ಯವಸ್ಥೆಯ, ನಮ್ಮ ಆರ್ಥಿಕ ಪರಿಸ್ಥಿತಿಯ,ನಮ್ಮ ಆಹಾರ ಪದ್ದತಿಯ ವಿಶ್ಲೇಷಣೆ ಮಾಡುತ್ತಿದ್ದರು.
ಎಲ್ಲವನ್ನೂ ಬುಡದಿಂದಲೇ ಸರಿ ಮಾಡಬೇಕು ಎನ್ನುವುದು ಅವರ ನಂಬಿಕೆಯಾಗಿತ್ತು.

ಅವರು ಊಟವಾದ ಮೇಲೆ ನೀರು ಕುಡಿಯುತ್ತಿರಲಿಲ್ಲ.ಊಟಕ್ಕೆ ಮೊದಲೂ ನೀರು ಕುಡಿಯುತ್ತಿರಲ್ಲಿಲ್ಲ. ನೀರಿನ ಜೊತೆ ಊಟ ಮಾಡುವುದೆಂದರೆ ಕೆಸರುಗದ್ದೆಯಲ್ಲಿ ಕಂಬ ನೆಟ್ಟಂತೆ, ಆಹಾರ ಜೀರ್ಣವಾಗದೆ ವ್ಯರ್ಥವಾಗುತ್ತದೆ ಎಂಬುದು ಅವರ ವಾದವಾಗಿತ್ತು.

ಹಾಗಾಗಿ ನಾನು ಆದಷ್ಟೂ ಅವರ ಜೊತೆಯಲ್ಲಿ ಊಟಮಾಡುವುದರಿಂದ ತಪ್ಪಿಸಿಕೊಳ್ಳುತ್ತಿದ್ದೆ.
ಏಕೆಂದರೆ ಅವರ ಜೊತೆಗಿನ ಊಟ ಜೀರ್ಣಕ್ರಿಯೆಯ ಕುರಿತ ಪಾಠವಾಗಿ ತಿನ್ನುವ ಮಜಾವೇ ಹೊರಟು ಹೋಗುತ್ತಿತ್ತು.

ಸೂಫಿಬ್ಯಾರಿಗಳು ಕುಂಬಳಕಾಯಿ ಹಲ್ವಾವನ್ನು ತುಂಬ ಚೆನ್ನಾಗಿ ಮಾಡುತ್ತಿದ್ದರು.

ದೊಡ್ಡಕುಂಬಳಕಾಯೊಂದನ್ನು ಎರಡು ಹೋಳುಗಳನ್ನಾಗಿ ಮಾಡಿ, ತೆಂಗಿನಕಾಯಿಯಂತೆ ತುರಿದು, ಆಮೇಲೆ ಶುದ್ಧ ಹಸುವಿನ ತುಪ್ಪದಲ್ಲಿ ಹುರಿದು, ಸಕ್ಕರೆ ಸುರಿದು ಪಾಕಮಾಡಿ, ಗಂಟೆಗಟ್ಟಲೆ ಒಲೆಯ ಮುಂದೆ ಕುಳಿತು ತಳ ಹಿಡಿಯದಂತೆ ತಿರುವಿದರೆ ಸೂಫಿ ಬ್ಯಾರಿಗಳ ಕುಂಬಳಕಾಯಿ ಹಲ್ವಾ ರೆಡಿಯಾಗುತ್ತಿತ್ತು.

ಆದರೆ ಮೂಲಭೂತವಾದ ಸಮಸ್ಯೆ ಇದ್ದುದು ಅದಕ್ಕೆ ಬೇಕಾದ ಉತ್ಕೃಷ್ಟ ಕುಂಬಳಕಾಯಿ ಮತ್ತು ಶುದ್ಧ ಹಸುವಿನ ತುಪ್ಪವನ್ನು ಹುಡುಕುವುದರಲ್ಲಿ.

ಸೂಫಿ ಬ್ಯಾರಿಗಳು ಯಾವುದನ್ನೂ ಅಷ್ಟು ಸುಲಭವಾಗಿ ಉತ್ಕೃಷ್ಟ ಎಂದು ಒಪ್ಪಲು ತಯಾರಿರಲಿಲ್ಲ.
ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯಲ್ಲಿ ಸೂಫಿ ಬ್ಯಾರಿಯವರ ಜೊತೆ ನಾನೂ ಗಂಟೆಗಟ್ಟಲೆ ಈ ಉತ್ಕೃಷ್ಟ ಕುಂಬಳ ಕಾಯಿಗಾಗಿ ಹುಡುಕಬೇಕಾಗಿತ್ತು.

ಸಾಧಾರಣವಾಗಿ ತಿಥಿಗಳಿಗೋ, ಮಾಟಮಂತ್ರ ಮಾಡಿಸಲೋ ಕುಂಬಳಕಾಯಿಯನ್ನು ಒಯ್ಯುವ ಜನ ಅದರ ಉತ್ಕೃಷ್ಟತೆಯ ಕುರಿತು ತಲೆಗೆ ಹಚ್ಚಿಕೊಳ್ಳುತ್ತಿರಲಿಲ್ಲ.

ಆದರೆ ಹಲ್ವಾ ಮಾಡಲು ಹೊರಟ ಸೂಫಿ ಬ್ಯಾರಿಯವರು ಸೆಂಟ್ರಲ್ ಮಾರುಕಟ್ಟೆಯ ಒಂದೊಂದು ಕುಂಬಳಕಾಯಿಯನ್ನೂ ಹಿಡಿದು ಅಲ್ಲಾಡಿಸಿ, ಬೆರಳಿಂದ ಕುಟ್ಟಿ ನೋಡಿ, ಕಿವಿಯ ಬಳಿ ತಂದು ಅದರ ಉದರದೊಳಗಿನ ಸದ್ದನ್ನು ಆಲಿಸಿ,ಅದರ ಮೈಮೇಲೆ ಬೂದು ಹುಲುಸಾಗಿ ಬೆಳೆದಿದೆಯೋ ಎಂದೂ ಪರೀಕ್ಷಿಸಿ ಕೊನೆಗೆ ಸರಿಯಿಲ್ಲ ಎಂದು ತಿರಸ್ಕರಿಸಿಬಿಡುತ್ತಿದ್ದರು.

ಇವರ ಪರೀಕ್ಷೆಯಿಂದ ಬೇಸತ್ತ ಸೆಂಟ್ರಲ್ ಮಾರ್ಕೆಟ್ಟಿನ ಬೂದುಗುಂಬಳಕಾಯಿ ವ್ಯಾಪಾರಸ್ತರು ನಮ್ಮನ್ನು ಕೆಕ್ಕರಿಸಿ ನೋಡುತ್ತಿದ್ದರು.

ಆಮೇಲೆ ಶುದ್ಧ ಹಸುವಿನ ತುಪ್ಪಕ್ಕಾಗಿ ನಮ್ಮ ಹುಡುಕಾಟ ಶುರುವಾಗುತ್ತಿತ್ತು.ಸೆಂಟ್ರಲ್ ಮಾರುಕಟ್ಟೆಯಲ್ಲಿ ಕೆಸದ ಎಲೆಯಲ್ಲಿ ಹಸುವಿನ ತುಪ್ಪವನ್ನು ಇಟ್ಟುಕೊಂಡು ಮಾರುತ್ತಿದ್ದ ಹೆಂಗಸರ ಜೊತೆ ಸೂಫಿ ಬ್ಯಾರಿಗಳ ಅಗ್ನಿ ಪರೀಕ್ಷೆ ಶುರುವಾಗುತ್ತಿತ್ತು.ಇವರ ಪ್ರಶ್ನೆಗಳಿಂದ ಬೇಸತ್ತ ಆ ಬಾಯಮ್ಮಂದಿರು ನಮ್ಮಿಬ್ಬರನ್ನೂ ಬೈದು ಓಡಿಸುತ್ತಿದ್ದರು.

ಸಂಜೆಯ ಹೊತ್ತಿಗೆ ಸೋತು ಹೈರಾಣಾಗಿ ಅಗ್ನಿಪರೀಕ್ಷೆಯಲ್ಲಿ ಗೆದ್ದ ಕುಂಬಳಕಾಯಿ ಮತ್ತು ಶುದ್ಧ ತುಪ್ಪದ ಜೊತೆ ನಾವು ಮನೆಗೆ ಮರಳುತ್ತಿದ್ದೆವು.ಆನಂತರ ಅಡುಗೆ ಮನೆಯಲ್ಲಿ ಸೂಫಿ ಬ್ಯಾರಿಗಳ ಅಗ್ನಿಧಿವ್ಯ ಶುರುವಾಗುತ್ತಿತ್ತು.ಶುದ್ಧವಾಗಿ ಒರೆಸಿದ ತುರಿಮಣೆ, ಪರಿಶುದ್ಧವಾಗಿ ಒರೆಸಿದ ಬಾಣಲೆ, ಒಂದಿಷ್ಟೂ ಕಸವಿಲ್ಲದ ಸಕ್ಕರೆ ಎಲ್ಲವೂ ದೊರಕಿದ ಬಳಿಕ ಸೂಫಿ ಬ್ಯಾರಿಗಳ ಹಲ್ವಯಜ್ಞ ನಡುರಾತ್ರಿಯವರೆಗೆ ನಡೆಯುತ್ತಿತ್ತು.

ಪಾಪ! ನನ್ನ ಮಡದಿಯೂ, ತಂಗಿಯರೂ ಆ ಯಜ್ಞದಲ್ಲಿ ಅಸಹಾಯಕರಾಗಿ ಬೇಯುತ್ತಿದ್ದರು.

ಬೆಳಗೆ ಎದ್ದರೆ ಮನೆಯ ತುಂಬ ಶುದ್ಧ ಹಸುವಿನ ತುಪ್ಪದ ಸುಟ್ಟ ಪರಿಮಳ.ಸೂಫಿ ಬ್ಯಾರಿಗಳು ಕೊಂಚ ಮಂಕಾಗಿ ಬೀಡಿ ಸೇದುತ್ತಾ ಕುಳಿತಿರುತ್ತಿದ್ದರು.

‘ನಾ ಮೊದಲೇ ಹೇಳಿರಲಿಲ್ಲವಾ ಈ ಕಾಲದಲ್ಲಿ ಒಳ್ಳೆಯ ಕುಂಬಳಕಾಯಿಯೂ ಸಿಗುವುದಿಲ್ಲ, ಶುದ್ಧ ತುಪ್ಪವೂ ಸಿಗುವುದಿಲ್ಲ, ಎಲ್ಲ ಕಂಪೆನಿ ಗೊಬ್ಬರಗಳಿಂದಾಗಿ ನಮ್ಮ ದೇಶಕ್ಕೆ ಈ ಗತಿ ಬಂದಿದ್ದು .ನಮ್ಮ ಕಾಲದಲ್ಲಿ ಚಿನ್ನಕ್ಕೂ ಪರಿಮಳ ಇರುತ್ತಿತ್ತು.ಈಗ ಎಲ್ಲ ಎಲ್ಲ ಬೇಗಡೆ ಚಿನ್ನದ ಕಾಲ’ ಎಂದು ಸರಕಾರವನ್ನೂ, ಅಮೇರಿಕಾವನ್ನೂ ಬೈಯುತ್ತ ಕೂತಿರುತ್ತಿದ್ದರು.

ನಮಗೆ ಅವರನ್ನು ಆ ಸ್ಥಿತಿಯಲ್ಲಿ ನೋಡಿ ಮಗ್ಗಿ ಕಲಿಯಲು ಮರೆತ ಮಗುವನ್ನು ನೋಡಿದ ಹಾಗಾಗುತ್ತಿತ್ತು.ಅವರ ಮುದ್ದು ಹಠ ಮತ್ತು ಒಳ್ಳೆಯ ಆದರ್ಶಗಳ ನಡುವೆ ಸುಟ್ಟುಹೋದ ಕುಂಬಳಕಾಯಿಯ ಹಲ್ವಾ!

ಜೀವನವೆಂಬುದು ಒಂದು ಒಳ್ಳೆಯ ನಗೆ ಪಾಟಲಿನಂತಿದೆ ಅನಿಸಿ ಖುಷಿಯಾಗುತ್ತಿತ್ತು.

ಸೂಫಿ ಬ್ಯಾರಿಯವರು ಹೀಗೆ ಒಬ್ಬ ಮಹಾತ್ಮನಂತೆ, ಕೆಲವೊಮ್ಮೆ ತಪ್ಪು ಮಾಡಿದ ತುಂಟ ಬಾಲಕನಂತೆ ನಮ್ಮ ಜೊತೆ ಬದುಕಿದ್ದರು.

ಅವರು ಯಾಕೆ ಮದುವೆಯೇ ಆಗದೆ ಬ್ರಹ್ಮಚಾರಿಯಂತೆ ಇದ್ದರು ಎನ್ನುವ ಬಗ್ಗೆ ನನಗೆ ಬಹಳ ಕುತೂಹಲವಿತ್ತು.

‘ಮದುವೆಯ ವಯಸ್ಸಲ್ಲಿ ಸೌಕರ್ಯಗಳಿರಲಿಲ್ಲ. ಆಮೇಲೆ ಆ ಕುರಿತು ಯೋಚಿಸಲು ಪುರುಸೊತ್ತೂ ಸಿಗಲಿಲ್ಲ’ ಎಂದು ಅವರು ಆ ಪ್ರಶ್ನೆಯನ್ನು ಹಗುರವಾಗಿ ತೇಲಿಸಿ ಬಿಡುತ್ತಿದ್ದರು.

ಅವರು ಮರಣಶಯ್ಯೆಯಲ್ಲಿ ಮಲಗಿರುವಾಗ ಹೆಂಗಸೊಬ್ಬರು ಅಚಾನಕ್ಕಾಗಿ ಸಿಕ್ಕಿ ನಾನೇ ಇವರು ಕಟ್ಟಿಕೊಂಡ ಹೆಂಡತಿ ಎಂದು ಪರಿಚಯ ಮಾಡಿಕೊಂಡಿದ್ದರು.

ಜೊತೆಯಲ್ಲಿ ಸೂಫಿ ಬ್ಯಾರಿಗಳ ಹಾಗೇ ಕಾಣಿಸುವ ಮಗಳೂ ಇದ್ದಳು.
‘ಇದೇನು ಸೂಫಿ ಬ್ಯಾರಿಗಳೇ ಹೀಗೆ?’ ಎಂದು ಕೇಳಬೇಕೆನಿಸಿ ಅವರು ಮಲಗಿರುವ ಹಾಸಿಗೆಯ ಬಳಿ ಹೋದರೆ ಅವರು ಆಗಲೇ ಮರಣದ ಬಳಿ ತಲುಪಿ ಬಿಟ್ಟಿದ್ದರು.

sufi1.jpgಎಲ್ಲವನ್ನೂ ಆಮೇಲೆ ಹೇಳುವೆ ಎನ್ನುವಂತೆ ಕಣ್ಣುಗಳನ್ನು ಆಡಿಸಿದ್ದರು.ಆಮೇಲೆ ಅವರು ತೀರಿಯೇ ಹೋದರು.

ಈಗ ಯಾಕೋ ಅವರು ಮಾಡಿದ್ದ ಕುಂಬಳಕಾಯಿ ಹಲ್ವಾ ನೆನಪಾಗುತ್ತಿದೆ.ಜೊತೆಗೆ ಅವರ ಇನ್ನೂ ಅಂತಹದೇ ಹಲವು ಪ್ರಯೋಗಗಳೂ.

‘ನಿನಗೆ ಇಷ್ಟು ವಯಸ್ಸಾಗಿದ್ದರೂ ಹುಡುಗಾಟ ಇನ್ನೂ ಬಿಟ್ಟಿಲ್ಲ’ ಎಂದು ಅವರು ಬೈಯುತ್ತಿದ್ದರು.‘ಹುಡುಗಾಟ ಬಿಟ್ಟಿದ್ದರೆ ನಿಮ್ಮ ಜೊತೆ ಬಾಲದಂತೆ ಅಲೆದಾಡುತ್ತಲೂ ಇರಲಿಲ್ಲವಲ್ಲ ಬ್ಯಾರಿಗಳೇ’ ಎಂದು ನಾನೂ ಉತ್ತರಿಸುತ್ತಿದ್ದೆ.

(ಆಗಸ್ಟ್ ೨೧, ೨೦೧೧)