ಉಮಿಯಾಮ್ ಎಂಬ ನಿಂತ ನದಿ

ನಿಮ್ಮ ಪತ್ರವಂತೂ ಬರಲೇ ಇಲ್ಲ. ಆದರೂ ನಿಮಗೆ ಬರೆಯುತ್ತಿರುವೆ ಯಾಕೆ ಗೊತ್ತಿಲ್ಲ. ಹೇಗಿತ್ತು ನಿಮ್ಮ ಹುಟ್ಟು ಹಬ್ಬ? ಇಲ್ಲಿ ಈಗ ಹೂ ಅರಳುವ ಕಾಲ ಶುರವಾಗಿದೆ. ಬೋಳುಮರಗಳ ತುಂಬ ಹೂ. ಬೇಲಿಯಲ್ಲಿ ಹೂ, ಹುಲ್ಲಿನ ದಳಗಳಲ್ಲಿ ಹೂ. ಇನ್ನು ಮುಂದೆ ಸೆಪ್ಟೆಂಬರ್‌ವರೆಗೆ ಒಂದಿಲ್ಲೊಂದು ಹೂಗಳು ಅರಳುತ್ತಲೇ ಇರುತ್ತದೆ. ಈವತ್ತು ಸಂಜೆ ಇಡೀ ದಿನ ಮೋಡಕವಿದು ಕೊಂಚ ಹೊತ್ತು ಸೂರ್ಯನ ಬೆಳಕಿತ್ತು. ನಸು ಬೆಳಕಲ್ಲಿ ಬೀಸುವ ಗಾಳಿಗೆ ಪ್ಲಂ ಮರಗಳ ತುದಿಯಲ್ಲಿ ಚೆರ್ರಿಗಿಡಗಳ ತುದಿಯಲ್ಲಿ ಬೆಳ್ಳಗೆ ಕೆಂಪಗೆ ಚಿಟ್ಟೆಗಳಂತೆ ಹಾರುವ ಹೂವಿನ ದಳಗಳು. ಹೂವೋ ಚಿಟ್ಟೆಗಳೋ ಗೊತ್ತಾಗದೆ ನೋಡುತ್ತಲೇ ಇದ್ದೆ. ಕಳೆದವಾರ ನಾವೂ ಇಲ್ಲಿ ಒಂದು ಹುಟ್ಟು ಹಬ್ಬ ಆಚರಿಸಿದೆವು. ಯಾರದ್ದು ಎಂದು ಹೇಳುವುದಿಲ್ಲ.umiam.jpg

ನಾನು, ನನ್ನ ಹೆಂಡತಿ  ಮೋಳಿ, ಮತ್ತೊಬ್ಬಳು ಜಾಣೆಯಾದ ಬೆಂಗಾಲಿ ಹುಡುಗಿ ಮತ್ತು ನಡು ವಯಸ್ಸಿನ ರಸಿಕನಾದ ಕಾವ್ಯ ಮತ್ತು ಸಂಗೀತವನ್ನು ಪ್ರೇಮಿಸುವ ಸರ್ದಾರ್ಜಿ. ನಾವು ನಾಲ್ಕೂ ಜನ ಸರ್ದಾರ್ಜಿಯ ಪುಟ್ಟಕಾರಿನಲ್ಲಿ ಬೆಟ್ಟ ಸಾಲುಗಳನ್ನು ಇಳಿಯುತ್ತಾ ನಡುಮಧ್ಯಾಹ್ನದ ಹೊತ್ತು ಉಮಿಯಾಮ್ ಎಂಬ ನದಿಯ ತೀರದಲ್ಲಿ ಅಲೆಗಳನ್ನು ನೋಡುತ್ತಾ ಕುಳಿತಿದ್ದೆವು. ಸರ್ದಾರ್ಜಿ ಜಸ್‌ಬೀರ್ mouth organ ನಲ್ಲಿ ಸಂಜೆಯ ರಾಗವೊಂದನ್ನು ನುಡಿಸುತ್ತಿದ್ದ. ಬೆಂಗಾಲಿ ಹುಡುಗಿ ನದಿಯೊಳಗೆ ಬಿದ್ದು ಹೋಗುವೆ ಎಂದು ನಮ್ಮನ್ನು ಹೆದರಿಸುತ್ತಿದ್ದಳು. ಮೋಳಿ ನದಿಯ ತೀರಕ್ಕೆ ಬರುವ ಹಕ್ಕಿಗಳನ್ನೂ ಕಾಗೆಗಳನ್ನೂ ಮಾತನಾಡಿಸುತ್ತಾ ಕುಳಿತಿದ್ದಳು. ನದಿಯ ನೀರಿಗೆ ಅಣೆಕಟ್ಟು ಕಟ್ಟಿ ನದಿ ದೊಡ್ಡ ದೊಡ್ಡ ಗುಡ್ಡಗಳನ್ನು ಮುಳುಗಿಸಿ ಸರೋವರದಂತೆ ನಿಂತಿತ್ತು.  ಹಳೆಯ ರಸ್ತೆಗಳು, ಹಳ್ಳಿಗಳು, ಕಾಡು ಎಲ್ಲವೂ ನೀರಲ್ಲಿ ಮುಳುಗಿತ್ತು. ನನಗಂತೂ ಸಿಕ್ಕಾಪಟ್ಟೆ ಹಸಿವಾಗುತ್ತಿತ್ತು. ಈ ಷಿಲ್ಲಾಂಗ್ ಒಂದು ಕಾಲದಲ್ಲಿ ರಸಿಕರ, ಸಂಗೀತ ಪ್ರೇಮಿಗಳ ಊರಾಗಿತ್ತು. ರವೀಂದ್ರನಾಥ ಠಾಗೂರ್ ಎರಡು ಕಾದಂಬರಿಗಳನ್ನು ಈ ಊರಲ್ಲಿ ಕುಳಿತು ಬರೆದಿದ್ದರು. ಈಗ ಎಲ್ಲವೂ ಮುಳುಗಿ ಹೋದ ಹಡಗಿನಂತೆ ಆಗಿದೆ ಎಂದು ವಾಪಸ್ಸು ಬರುವಾಗ ಜಸ್‌ಬೀರ್ ಅನ್ನುತ್ತಿದ್ದರು. ಈ ಜಸ್‌ಬೀರ್ ತುಂಬ ತಮಾಷೆಯ ಪ್ರೀತಿಯ ಮನುಷ್ಯ ಒಮ್ಮೆ ಶಿಲ್ಲಾಂಗ್‌ನಿಂದ ತನ್ನ ಊರಾದ ಪಂಜಾಬಿಗೆ ಒಂದು ಮದುವೆಗೆ ಹೋಗಿದ್ದರಂತೆ. ಮದುವೆಯಲ್ಲಾ ಮುಗಿದ ಮೇಲೆ ಶಿಲ್ಲಾಂಗ್ ನ ಶೈಲಿಯಂತೆ ಮುದ್ದಾದ ಪಂಜಾಬಿ ಹೆಂಗಸೊಬ್ಬಳನ್ನು ನೃತ್ಯ ಮಾಡಲು ಕರೆದರಂತೆ. ಆ ಹೆಂಗಸು ರೇಗಿ ‘ನಿನ್ನ ಅಮ್ಮನ ಕೈ ಹಿಡಿದು dance ಮಾಡು’ ಎಂದು ಬೈದಳಂತೆ. ಆ ಅವಮಾನ ಜಸ್‌ಬೀರ್‌ಗೆ ಇನ್ನೂ ಹೋಗಿಲ್ಲ. ಅದಕ್ಕೇ ಆತನಿಗೆ ಬಯಲು ಭೂಮಿಯ plain ಹೆಂಗಸು ಇಷ್ಟವಾಗುವುದೇ ಇಲ್ಲ. ಗುಡ್ಡಗಾಡಿನ, ನಿಸ್ಸಂಕೋಚದ, ಕಪಟವಿಲ್ಲದ ಮನುಷ್ಯರೇ ಚಂದ ಅಂತ ಅನ್ನುತ್ತಲೇ ಇರುತ್ತಾರೆ. ಈಗ ಇಲ್ಲಿ ಕಿಟಕಿಯಿಂದ ಅರ್ಧಚಂದ್ರ ಮತ್ತು ಅಸಂಖ್ಯಾತ ನಕ್ಷತ್ರಗಳು ಕಾಣಿಸುತ್ತಿವೆ.ಈಗ ನನ್ನ ಬಳಿ ಭೂತಾನದಿಂದ ಬಂದ ಕೇಸರ್ ಕಸ್ತೂರಿ ಎಂಬ ಪೇಯವಿದೆ. cheers! ಇನ್ನೂ ಗಟ್ಟಿ ಮುಟ್ಟಾಗಿ ಇರಿ.

Advertisements