ಒಂದು ರೇಡಿಯೋ ಕವಿತೆ

ಆಗ ರೇಡಿಯೋ ಇರಲಿಲ್ಲ . ಅದರ ದೊಡ್ಡ ಬೀಟೆಯ ಮರದ ಪೆಟ್ಟಿಗೆ ಮಾತ್ರ ಉಳಿದಿತ್ತು.

ಒಳಗೆ ಅಪ್ಪನ ಬೀಡಿ ಪೊಟ್ಟಣ, ಅರಬಿ ಪುಸ್ತಕ, ಕೆಮ್ಮಿನ ಔಷದಿ,

ಮೊಲದ ಬೇಟೆಗೆ ತಂದು ಇಟ್ಟಿದ್ದ ನಾಡಕೋವಿಯ ತೋಟೆ,

ಅವರ ಕನ್ನಡಕ,ಅಂಗಡಿಯ ಸಾಲದ ಪುಸ್ತಕ, ನಮಗೆ ಕದ್ದು ಮುಚ್ಚಿ

ಮುದ್ದು ಮಾಡಲು ತಂದಿಟ್ಟಿದ್ದ ಮಿಠಾಯಿ  ಮತ್ತು ಅವರ ಮೂಗು ಒರೆಸಿಟ್ಟ ಕರ್ಚೀಪು.

ನಮ್ಮಷ್ಟಕ್ಕೆ ನಮಗೆ ಯಾವುದೂ ಎಟುಕುತ್ತಿರಲಿಲ್ಲ. . . . .

ಮತ್ತು ರೇಡಿಯೋ ಅಂದರೆ ಏನು ಅಂತ ಗೊತ್ತಿರಲಿಲ್ಲ.

ಈಗ ರೇಡಿಯೋ ಕೈಗೆಟುಕುತ್ತಿದೆ. ಅಪ್ಪ ನೋಡಲು ಸಿಗುತ್ತಿಲ್ಲ

ಅವರ ಸದ್ದು, ಆಕಾರ, ರೇಡಿಯೋ ಪೆಟ್ಟಿಗೆ ಯಂತಿರುವ ಅವರ ನೆನಪುಗಳು

ಎಲ್ಲ ಕೇಳಿಸುತ್ತಿದೆ.. ಅವರ ಕೈ ಹಿಡಿದು ಕೊಳ್ಳಲು ಸಿಗುತ್ತಿಲ್ಲ.

ಆಗ `ಆ’ ಹೇಗೆ  `ಹಾ’ ಹೇಗೆ

`ಕ’ ಹೇಗೆ `ಖ’ ಹೇಗೆ ಹೇಳಲಾಗದೆ ಪಂಡಿತರು ಒದೆಯುತ್ತಿದ್ದರು.

ಪಂಡಿತರ ಹೆಂಡತಿ ಭಾಗವತರ ಜೊತೆ ಊರು ಬಿಟ್ಟಾಗ

ಅವರ ಒದೆತಕ್ಕೆ ಕಾರಣ ಗೊತ್ತಾಗಿ ಅವರ ಮುಖ ನೋಡಿ ಅಳು ಬಂದಿತ್ತು.

ಈಗ ಒಮ್ಮೊಮ್ಮೆ `ಅ’ ಮತ್ತು `ಹ’ ಕೆಟ್ಟು ಹೋದಾಗ ಸಣ್ಣಗೆ ಖುಷಿಯಾಗುತ್ತದೆ .

ಪಂಡಿತರ ಓದು, ಭಾಗವತರ ಹಾಡು ಮತ್ತು ಓಡಿಹೋದವಳ ನೆಲೆಯಿಲ್ಲದ ಪ್ರಣಯ!

ಯಾವ ದನಿಯೂ ಕೇಳಿಸದೆ ಸುಮ್ಮನೆ ಮುಖ ನೋಡುತ್ತ ನಿಂತು ಬಿಡುತ್ತೇನೆ.

ಓಡಿಹೋಗುವ ಖುಷಿ ಇನ್ನೆಲ್ಲಿದೆ ಅನಿಸುತ್ತದೆ.

ರೇಡಿಯೋ ಮಾತನಾಡುತ್ತಿರುತ್ತದೆ.. .. .. ..

ಕಣ್ಣುತುಂಬುತ್ತದೆ ಮತ್ತು ಎಂತಹದೋ ಮಂದಹಾಸ!

ಸಣ್ಣದಿರುವಾಗ ಖಾಲಿ ರೇಡಿಯೋ ಪೆಟ್ಟಿಗೆಯೊಳಕ್ಕೆ

ಕೈ ಎಟುಕುವುದು ಯಾವಾಗ..ಕಾಲುಗಳು..ಕೈಗಳು..ಬೆರಳುಗಳು

ಬೆಳೆದು ದೊಡ್ಡದಾಗುವುದು ಯಾವಾಗ ಎಂದು ಅಪ್ಪನನ್ನು ನೋಡಿ

ನೊಂದುಕೊಳ್ಳುತ್ತಿದುದು ನೆನಪಾಗುತ್ತಿದೆ.

Advertisements