ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ!

 mallikarjun2.jpg

 ‘ಎನ್ನ ಕರದೊಳಗಿದ್ದು ಎನ್ನೊಳೇತಕೆ ಮುನಿವೆ?’ 

 ಮಲ್ಲಿಕಾರ್ಜುನ ಮನ್ಸೂರ್ ಹಾಡುತ್ತಿದ್ದಾರೆ.

‘ಕಾಣುತ್ತ ಕಾಣುತ್ತ ಕಂಗಳ ಮುಚ್ಚಿದೆ ನೋಡವ್ವಾ..ಕೇಳುತ್ತ ಕೇಳುತ್ತ ಮೈಮರೆತೊರಗಿದೆ ನೋಡವ್ವಾ.. ಹಾಸಿದ್ದ ಹಾಸಿಗೆಯಾ ಹಂಗಿಲ್ಲದೇ ಹೋಯಿತ್ತೂ..’ ಇನ್ನೊಂದು ಹಾಡು.

 ಸುಮ್ಮನೆ ಮುಚ್ಚಿಕೊಂಡು ಐದು ನೂರು ಪದಗಳನ್ನು ಬರೆಯಲು ಯಾಕಿಷ್ಟು ಸರ್ಕಸ್ಸು ಅನ್ನಿಸುತ್ತದೆ.ಬರೆಯುವುದು ಒಂದು ತರಹದ ದಿನನಿತ್ಯದ ವ್ಯಾಯಾಮದಂತಿರಬೇಕು.ದಿನಾ ಬೆಳಗಿನ ವಾಕಿಂಗಿನ ಹಾಗೆ.ಮಾಡುತ್ತಾ ಹೋಗಬೇಕು ಎಂದೆಲ್ಲಾ ಹೇಳಿದ್ದು ಎಲ್ಲ ಬರಹಗಾರರ ಗುರು ಸಮಾನನಾದ ಹೆಮಿಂಗ್ವೇ ಇರಬೇಕು.ಅಥವಾ ಇನ್ನೊಬ್ಬ ತೀರ್ಥರೂಪ ಸಮಾನರಾದ ಲಂಕೇಶ್!

 ‘ಎನಗೆ ನಿಮ್ಮ ನೆನಹಾದಗಲೇ ಉದಯ, ಎನಗೆ  ಮರೆವಾದಾಗಲೇ ಅಸ್ತಮಾನ’ ಮನ್ಸೂರ್ ಈಗ ಬಸವಣ್ಣನವರನ್ನು ಎತ್ತಿಕೊಳ್ಳುತ್ತಿದ್ದಾರೆ.ನಾನಾದರೋ ಎಷ್ಟು ಇದ್ದರೂ ನೆಮ್ಮದಿಯೆಂಬುದು ಇಲ್ಲದ ಪ್ರಾಣಿಯಂತೆ ಚಡಪಡಿಸುತ್ತಿದ್ದೇನೆ.ನಮ್ಮಂತಹವರಿಗೆ ಯಾಕೆ ಚನ್ನಮಲ್ಲಿಕಾರ್ಜುನನೂ ಇಲ್ಲ ಕೂಡಲಸಂಗಮನೂ ಇಲ್ಲ ಎಂದೆನಿಸಿ ಪೆಚ್ಚಾಗುತ್ತದೆ.ಅಂತರಂಗ ಶುದ್ಧಿಯೂ ಇಲ್ಲದ ಬಹಿರಂಗ ಶುದ್ಧಿಯೂ ಇಲ್ಲದ ಈ ತಂತಿಯಮೇಲೆ ನಡೆಯುವ ದೊಂಬರಾಟದ ಬಾಲೆಯ ಹಾಗಿನ ದೈನಂದಿನ ಪಾಡು,ಅಲೆದಾಟ,ಕೀಟಲೆ ಮತ್ತೆ ನಡುರಾತ್ರಿ ಕಣ್ಣುಬಿಟ್ಟುಕೊಂಡು ಕೂರುವ ಈ ನಿಶಾಚರ ಬರಹ ನಗು ಬರುತ್ತದೆ.

mansur1.jpg

 ಮನ್ಸೂರ್ ಅಕ್ಕಮಹಾದೇವಿಯನ್ನು ಹಾಡಿ,ಬಸವಣ್ಣನವರನ್ನ ಹಾಡಿಮುಗಿಸಿ ‘ಕೂಸನು ಕಂಡೀರಾ.. ಮಾನವರೆಲ್ಲ ಕೂಸನು ಕಂಡೀರಾ‘ಎಂದು ಪುರಂದರ ದಾಸರನ್ನು ಮುಗಿಸಿ ಈಗ ‘ಮನಕೆ ಮನೋಹರನಲ್ಲದ ಗಂಡರು ಮನಕೆ ಬಾರದು ನೋಡವ್ವ ಗೆಳತಿ’ಎಂದು ಹಾಡುತ್ತಿದ್ದಾರೆ. ‘ಕನ್ನೆಯಂದಿರ ಕೂಟ ಚಿಕ್ಕಂದಿನ ಬಾಳ್ವೆ’ ಕನ್ನೆಯೊಬ್ಬಳ ಅಳಲನ್ನ ಕೇಳುತ್ತ ಆಕೆಯ ‘ಪನ್ನಗಭೂಷಣ’ ಯಾರಿದ್ದಿರಬಹುದು ಎಂದು ಈ ಮಳೆಗಾಲದ ಮೈಸೂರಿನ ರಾತ್ರಿಯಲ್ಲಿ ರೋಮಾಂಚನಗೊಳ್ಳುತ್ತಿದ್ದೇನೆ.ಮನಸ್ಸು ಯಾಕೋ ಬೆಚ್ಚಗಾಗುತ್ತಿದೆ.

 ಈ ಮನ್ಸೂರರು ನನ್ನ ಸಂಗೀತ ರಸಯಾತ್ರೆ ಎಂಬ ಪುಸ್ತಕದಲ್ಲಿ ತಮ್ಮ ನೆನಪುಗಳನ್ನು ಹೇಳಿಕೊಂಡಿದ್ದಾರೆ.ಈ ನೆನಪುಗಳಲ್ಲಿ ಈಗಲೂ ಕಾಡುವುದು ಅವರು ಸಣ್ಣವರಿದ್ದಾಗ ಚಕ್ಕಡಿಯಲ್ಲಿ ಶ್ರೀಶೈಲಕ್ಕೆ ಯಾತ್ರೆಹೊರಟ ನೆನಪು.ಆಗ ಮನ್ಸೂರರು ನಾಟಕ ಕಂಪನಿಯಲ್ಲಿ ಹಾಡುತ್ತಿದ್ದರು ಅಂತ ಕಾಣುತ್ತದೆ.ಶ್ರೀಶೈಲದಲ್ಲಿ ಜಾತ್ರೆಮುಗಿಸಿ ಹೊರಡುವಾಗ ಚಕ್ಕಡಿಯ ಗಾಲಿ ಹರಿದು ಬಹುಶಃ ಮನ್ಸೂರರ ತಂದೆ ತೀರಿಹೋಗುತ್ತಾರೆ.ವಿವರಗಳು ನೆನಪಾಗುತ್ತಿಲ್ಲ.ಇನ್ನೊಮ್ಮೆ ಓದಬೇಕು.ಆದರೆ ಮನ್ಸೂರರ ಆ ಹೊತ್ತಿನ ಮನಃಸ್ಥಿತಿ ಯಾವ ಸಂಗೀತಕ್ಕಿಂತ ಕಡಿಮೆಯಿಲ್ಲ.ಮನ್ಸೂರ್ ಶ್ರೀಶೈಲದಿಂದ ಮರಳಿ ಬಂದು ನಾಟಕ ಕಂಪನಿಯ ಖಾಲಿ ಪರದೆಯ ಮುಂದೆ ರೋಧಿಸುತ್ತಾ ಕೂರುತ್ತಾರೆ.ಆ ಅಳುವೇ ಮನ್ಸೂರರ ಸಂಗೀತದ ಆಲಾಪ.ಅಲ್ಲಿಂದ ಅವರು ಗಾಯಕರಾಗುತ್ತಾರೆ.

 ನನಗಂತೂ ಮನ್ಸೂರರನ್ನು ಕೇಳುವಾಗಲೆಲ್ಲಾ ಶ್ರೀಶೈಲದಲ್ಲಿ ಹರಿದ ಚಕ್ಕಡಿಯ ಗಾಲಿಯದೇ ಚಿತ್ರ ಕಣ್ಣೆದುರು ಬರುತ್ತದೆ. ಜೊತೆಗೆ ದಾರವಾಡ ವಿಶ್ವವಿದ್ಯಾನಿಲಯದ ಹಿಂಬಾಗದಲ್ಲಿರುವ ಮನ್ಸೂರು ಎಂಬ ಹಳ್ಳಿಯ ಹಸಿರು ಗುಡ್ಡ.ಅಲ್ಲಿಯ ರಾಗ ಮಾಲಿಕಾ ಚಿತ್ರದಂತಹ ಹುಲ್ಲುಗಾವಲಲ್ಲಿ ಪ್ರೇಮಿಸುತ್ತಾ ಮೈಮರೆತಿದ್ದ ಜೋಡಿ.ಅವರಿಬ್ಬರಿಗೂ ಮದುವೆಯಾಗಿ ಮಕ್ಕಳೂ ಇದ್ದರು.ಇಬ್ಬರೂ ಒಂದು ಕಾಲದಲ್ಲಿ ಪ್ರೇಮಿಸಿದ್ದರು.ಸೀಳು ನಾಯಿಗಳಂತೆ ಕಾಮಿಸಿದ್ದರು.ಆಕೆ ಸಸ್ಯಾಹಾರಿ ಮತ್ತು ಆತ ಮಾಂಸಾಹಾರಿ ಎಂಬ ಒಂದೇ ಕಾರಣಕ್ಕೆ ಅವರು ಮದುವೆ ಯಾಗದಿರಲು ತೀರ್ಮಾನಿಸಿದ್ದರು.ಬೇರೆ ಬೇರೆ ಮದುವೆಯಾಗಿದ್ದರು.ಮತ್ತೆ ಯಾವಾಗಲೋ ಮನ್ಸೂರರು ಹುಟ್ಟಿದ್ದ ಹಳ್ಳಿ ನೋಡಲು ಇಬ್ಬರೂ ಹೋಗಿದ್ದರು.ಹೋದವರು ಮನ್ಸೂರರನ್ನು ನೋಡದೆ ಗುಡ್ಡ ಹತ್ತಿ ರಾಗಮಾಲಿಕೆ ಚಿತ್ರದಂತಿರುವ ಮೋಟು ಮರದ ಕೆಳಗೆ ಮತ್ತೆ ಸೀಳು ನಾಯಿಗಳ ಹಾಗೆ ಪ್ರೇಮಿಸುತ್ತಾ ಕುಳಿತಿದ್ದರು.ಎಷ್ಟು ಮೈಮರೆತ್ತಿದ್ದರು ಅಂದರೆ ಆ ಗುಡ್ಡದಲ್ಲಿ ಕುರಿಮೇಯಿಸುತ್ತಾ ಅಂಡಲೆಯುತ್ತಿದ್ದ ರಾಗಮಾಲಿಕಾ ಚಿತ್ರದಲ್ಲಿಯ ದನಗಾಹಿ ಗಳಂತಿದ್ದ ಹುಡುಗರು ಈ ಇಬ್ಬರು ನಡುವಯಸ್ಸಿನ ಪ್ರೇಮಿಗಳನ್ನು ಕಲ್ಲು ಹೊಡೆದು ಓಡಿಸಿಬಿಟ್ಟಿದ್ದರು.

 ಆತ ಮಲ್ಲಿಕಾರ್ಜುನ ಮನ್ಸೂರರ ಪರಮ ಭಕ್ತ.ಈಗಲೂ ಅವರ ಹಾಡಿನ ಸುರುಳಿಗಳಿಗಾಗಿ ಊರೂರು ಅಲೆಯುತ್ತಾನೆ.ಜೊತೆಗೆ ಸಿಕ್ಕಾಪಟ್ಟೆ ತುಂಟ.ತೀರ್ಥಯಾತ್ರೆಗೈಯ್ಯುವವನಂತೆ ಯಾವುದೋ ಊರಿನಲ್ಲಿ ಯಾವುದೋ ಜಾತ್ರೆಯಲ್ಲಿ ಯಾವುದೋ ಸೆಮಿನಾರಿನಲ್ಲಿ ತನ್ನ ಸಖಿಯರನ್ನೆಲ್ಲ ಮತ್ತೆ ಸಂಧಿಸುತ್ತಾನೆ.ಮನ್ಸೂರರ ಗುಡ್ಡದಲ್ಲಿ ದನಗಾಹಿಗಳ ಕಲ್ಲೇಟಿನಿಂದ ಪಾರಾದ ಕತೆಯನ್ನ ಯಾರದೋ ಕಥೆಯೆಂಬಂತೆ ವಿವರಿಸುತ್ತಾನೆ.

 `ಅಕ್ಕ ಕೇಳವ್ವಾ ನಾನೊಂದ ಕನಸು ಕಂಡೆ..ಅಕ್ಕಿ ಅಡಕಿ ತೆಂಗಿನಕಾಯಿ ಕಂಡೆನವ್ವಾ.ಚಿಕ್ಕ ಚಿಕ್ಕ ಜಡೆಗಳಾ ಸುಲಿಪಲ್ಲ ಗೊರವನು ಬಿಕ್ಷಕೆ ಬಂದುದ ಕಂಡೆ.ಮಿಕ್ಕಿಮೀರಿ ಹೋವನಾ ಬೆಂಬತ್ತಿ ಕರೆದೆನೂ..ಚನ್ನಮಲ್ಲಿಕಾರ್ಜುನನಾ ಕಣ್ತೆರೆದು ಕರೆದೆನವ್ವಾ..’ ಮನ್ಸೂರರು ಪ್ರತಿ ಪದವನ್ನೂ ತೀಡಿ ತೀಡಿ ಹಾಡುತ್ತಿದ್ದಾರೆ.ಯಾಕೋ ಚಿಕ್ಕಚಿಕ್ಕ ಜಡೆಗಳ ಸುಲಿಪಲ್ಲ ಗೊರವ ಶಿವ ಈ ಅಪರಾತ್ರಿಯಲ್ಲಿ  ಎಷ್ಟು ಮನೋಹರನಾಗಿ ತಲೆಯೊಳಗೆ ತುಂಬಿಕೊಳ್ಳುತ್ತಿದ್ದಾನಂದರೆ ನನಗೇ ಆತನ ಎದೆಗೆ ಒರಗಬೇಕು ಅನ್ನಿಸುತ್ತಿದೆ.ಮತ್ತೆ ಆಕೆಗೆ ಎಷ್ಟೋ ವರುಷಗಳ ನಂತರ ಆತನನ್ನು ಎಷ್ಟು ಹೊತ್ತಾದರೂ ಎದೆಗೆ ಒರಗಿಸಿಕೊಂಡೇ ಇರಬೇಕೆಂದು ಅನಿಸಿದ್ದರಲ್ಲಿ ಅಚ್ಚರಿಯೇನು ಅನ್ನಿಸುತ್ತದೆ.ಅವರಿಬ್ಬರನ್ನು ನೆನೆದು ಸಿಕ್ಕಾಪಟ್ಟೆ ಹೊಟ್ಟೆ ಉರಿದು ಹೋಗುತ್ತಿದೆ.

 `ಅಳಿ ಸಂಕುಲವೇ ಮಾಮರವೇ ಬೆಳದಿಂಗಳೇ ಕೋಗಿಲೆಯೇ ನಿಮ್ಮೆಲರನು ಒಂದು ಬೇಡುವೆನು ಚನ್ನಮಲ್ಲಿಕಾರ್ಜುನನ ಕಂಡರೆ ಕರೆದು ತೋರಿರೇ..‘ಇದು ಎಲ್ಲಿಯ ಭಕ್ತಿ ಇದು ಎಲ್ಲಿಯ ಪ್ರೀತಿ ಇದು ಯಾತರ ಬಯಕೆ ಇದರಲ್ಲಿ ಯಾವ ಸಾಮಾಜಿಕ ನೈತಿಕ ಆಧ್ಯಾತ್ಮಿಕ..

ಬಹುಶಃ ಮನ್ಸೂರರೂ ಈ ಇಬ್ಬರು ನಾಚಿಕೆಯಿಲ್ಲದ ಪ್ರೇಮಿಗಳನ್ನು ತಮ್ಮ ಊರಿನ ಗುಡ್ಡದ ಚೋಟು ಮರದ ಬುಡದಲ್ಲಿ ಊಹಿಸಿಕೊಂಡಿರಲಾರರು ಅನ್ನಿಸುತ್ತದೆ.ಆದರೂ ಶ್ರೀಶೈಲದಲ್ಲಿ ಚನ್ನಮಲ್ಲಿಕಾರ್ಜುನನ ಜಾತ್ರೆಯಲ್ಲಿ ಹರಿದ ಗಾಡಿಯ ಗಾಲಿಯ ನೆನಪು

ನಾಟಕದ ಖಾಲಿಪರದೆಯ ಮುಂದೆ ಅತ್ತಿದ್ದು ಮತ್ತೆ ಕೆಲವೊಮ್ಮೆ ಚಿಲ್ಲರೆ ಅಂತ ಅವರಿಗೂ ಅನ್ನಿಸಿರಬಹುದಾದ ಪ್ರೀತಿ  ಯಾಕೋ ಯಾವುಯಾವುದಕ್ಕೂ ಯಾವುಯಾವುದರ ಜೊತೆಗೂ ಏನೂ ಕೊಡುಕೊಳ್ಳುವಿಕೆ ಇಲ್ಲ.ಎಲ್ಲಎಲ್ಲವೂ ಅವುಗಳಷ್ಟೇ ಗಹನದ್ದೂ ಮೂರ್ಖತನದ್ದೂ ಆಗಿರಬಹುದು ಎಂಬುದಾಗಿ ಅಂದುಕೊಳ್ಳುತ್ತೇನೆ.

 ‘ಕಳಬೇಡ  ಕೊಲ್ಲಬೇಡ ಹುಸಿಯ ನುಡಿಯಲು ಬೇಡ ತನ್ನ ಬಣ್ಣಿಸಬೇಡ  ಇದಿರು ಹಳಿಯಲು ಬೇಡ ಇದುವೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ’ ಈಗ ಮನ್ಸೂರರು ಎಲ್ಲರೂ ಒಪ್ಪಲೇ ಬೇಕಾದ ಹಾಡನ್ನು ಹಾಡುತ್ತಿದ್ದಾರೆ. ಒಪ್ಪಲೇ ಬೇಕಾದ ಹಾಡು ಎಂದು ವಿಚಿತ್ರವಾಗಿ ನೃತ್ಯ ಮಾಡಬೇಕೆನ್ನಿಸುತ್ತದೆ.

 ಮೊನ್ನೆ ಹಾಗೇ ಆಯಿತು.ಅದ್ಭುತ ಸ್ವರವಿಸ್ತಾರ ವಿರುವ ಗಾಯಕಿಯೊಬ್ಬರು ಎಷ್ಟೋ ವರುಷಗಳ ನಂತರ ಮತ್ತೆ ಹಾರ್ಮೋನಿಯಂ ಎತ್ತಿಕೊಂಡು ಹಾಡಲು ನೋಡುತ್ತಿದ್ದರು. ಮದುವೆ,ಮಕ್ಕಳು, ಹರ್ನಿಯಾ ಆಪರೇಷನ್ ಆದ ಗಂಡ ಸಕ್ಕರೆ ಕಾಯಿಲೆಯ ಅತ್ತೆ ಮಾವ ಈ ಎಲ್ಲದರ ನಡುವೆ ಎಷ್ಟೋ ವರ್ಷಗಳಾದ ನಂತರ ನೆನಪಾದ ಸಂಗೀತ.ಹಾರ್ಮೋನಿಯಂ ಎತ್ತಿಕೊಂಡು ಹಾಡಲು ತೊಡಗಿದರು

 `ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ…

ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೆ.ಗಂಗೂ ಬಾಯಿಯವರನ್ನೂ ಮೀರಿಸಬಹುದಾದ ಸ್ವರವಿಸ್ತಾರ.ಅಷ್ಟು ಆಳ.ಅಷ್ಟು ಹರವು.ಆದರೆ ಹಾರ್ಮೋನಿಯಂ ಶೃತಿಸೇರಿಸಲು ಹೋಗಿ ಸಂಗೀತದ ರಾಗ ತಾಳಕ್ಕೆ ಸರಿಹೊ೦ದಲು ಹೆಣಗಾಡಿ  ಯಾಕೋ `ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ…’ ಸರಿಯಾಗಿ ಕೇಳುತ್ತಿಲ್ಲ ಅನ್ನಿಸಿ ಖೇದವಾಗುತ್ತಿತ್ತು.
 ಹೋಗಲಿ ಬಿಡಿ. ಮನ್ಸೂರ್ ಈಗ `ಪಂಪಾನಗರ ನಿವಾಸಶ್ರೀ..’ ಎಂದು ಹರಿಹರನ ರಗಳೆಯ ಸಾಲುಗಳನ್ನ ಹಾಡುತ್ತಿದ್ದಾರೆ.ಕೇಳಿಸಿಕೊಂಡು ನಿದ್ದೆ ಹೋಗುತ್ತೇನೆ.

3 thoughts on “ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ!

 1. ರಶೀದ್,
  “-ನಮ್ಮಂತಹವರಿಗೆ ಯಾಕೆ ಚನ್ನಮಲ್ಲಿಕಾರ್ಜುನನೂ ಇಲ್ಲ ಕೂಡಲಸಂಗಮನೂ ಇಲ್ಲ ಎಂದೆನಿಸಿ ಪೆಚ್ಚಾಗುತ್ತದೆ.ಅಂತರಂಗ ಶುದ್ಧಿಯೂ ಇಲ್ಲದ ಬಹಿರಂಗ ಶುದ್ಧಿಯೂ ಇಲ್ಲದ ಈ ತಂತಿಯಮೇಲೆ ನಡೆಯುವ ದೊಂಬರಾಟದ ಬಾಲೆಯ ಹಾಗಿನ ದೈನಂದಿನ ಪಾಡು,ಅಲೆದಾಟ,ಕೀಟಲೆ ಮತ್ತೆ ನಡುರಾತ್ರಿ ಕಣ್ಣುಬಿಟ್ಟುಕೊಂಡು ಕೂರುವ ಈ ನಿಶಾಚರ ಬರಹ ನಗು ಬರುತ್ತದೆ.-”
  ಹೌದು, ರಶೀದ್, ಈ ನಂಬಿಕೆ ಇಲ್ಲದ ಬದುಕು ಬಲು ಕ್ರೂರ. ನಾವು ನಮ್ಮನ್ನೇ ಕೇಂದ್ರವಾಗಿಸಿಕೊಂಡು ಬದುಕ ಬೇಕಾಗಿ, ಅದರ ಹೊಣೆ ಹೊರಲು ಪಾಡುಪಡುತ್ತಲಿರುತ್ತೇವೆ. ಇದರ ಇನ್ನೊಂದು ತೊಂದರೆ ಎಂದರೆ ಯಾವುದೇ ಹೊರ ನಿಯತ್ತು ನಿಯಂತ್ರಿಸದಂತ ಬದುಕಲ್ಲಿ, ನಮ್ಮ ಇಗೋ ಅತಿಯಾಗಿ ನಮ್ಮನ್ನು ತುಂಬಿ ಬಿಡುವುದು. ಹಾಗೆ ನೋಡಿದರೆ, ನಂಬಿ ಬದುಕುವುದು ಸುಲಭವೇನೋ. ನಂಬಿಕೆಯಿಲ್ಲದೇ ಬದುಕುವ (ನೀವನ್ನುವ) ದೊಂಬರಾಟದಲ್ಲಿ ಸಮತೋಲ ಇರಿಸಿಕೊಂಡಿರುವ ಜೀವಗಳು ಎಷ್ಟು ಕಮ್ಮಿ ಅಲ್ಲವೇ. ನಮ್ಮ ದೇವನೂರರಂತ ಎಷ್ಟು ಮಂದಿ ಸಿಗ್ತಾರೆ.
  ಅಂಬೇಡ್ಕರ ಕೂಡಾ ಸಾಮಾಜಿಕ ಬದುಕಲ್ಲಿ ನಂಬಿಕೆ ಮುಖ್ಯವೆಂದೇ ಬೌದ್ಧರಾದರಲ್ಲವೇ.
  ಹಾಗಾಗಿಯೇ ಇತ್ತೀಚೆ ಬೌದ್ಧಿಕ ವಲಯಗಳಲ್ಲೂ ನಾಸ್ತಿಕತೆಯ ಮೋಹ ಕಮ್ಮಿಯಾಗಿ, ಆಸ್ತಿಕತೆಯನ್ನು ಗಂಭೀರವಾಗಿ ಅಭ್ಯಸಿಸುವ ಪ್ರತಗಳು ಶುರುವಾಗಿವೆ ಅನ್ನಿಸ್ತದೆ. ಈ ಬೆಳವಣಿಗೆಯ ಒಂದೇ ತೊಂದರೆ ಎಂದರೆ ನಂಬಿಕೆಯ ಮುಗ್ಧತೆಯ ಜತೆಜತೆ ಡೋಂಗೀತನವೂ ಅತಿಯಾಗಿ ಕೊಳಕಾಗುವುದು. ಅಂತ ಕೊಳಕಲ್ಲಿನ ಹಿಂಸೆ ಅಬ್ಬಬ್ಬಾ. ಈಗ ನಮ್ಮ ಟಿವಿ ಗಳನ್ನೇ ನೋಡಿ. ಒಂದು ಕಡೆ ಗಂಟೆಗಟ್ಟಲೇ ‘ಗೃಹಚಾರ’ ಹೇಳುತ್ತಾರೆ, ಇನ್ನೊಂದುಕಡೆ ಹಳ್ಳಿ ಪೇಟೆಗಳ ಸಾಮಾನ್ಯರ ಸಾಮಾನ್ಯ ನಂಬಿಕೆಗಳನ್ನು ಟೀಕಿಸುತ್ತಾರೆ. ಅಮಿತಾಭ ಶನಿ ಕಳೆಯಲು ಬಾಲಾಜಿಗೆ ಹೋದರೆ ಮುಖ್ಯ ಸುದ್ದಿ,
  ಸಾಮಾನ್ಯರು ಅದೇ ತರದ ಹರಕೆ ಹೊತ್ತರೆ ಸನಾಸನಿ ಯಂತ ಅಪರಾಧದ ಸುದ್ದಿಯಾಗುತ್ತದೆ.
  ಭಕ್ತಿಗೆ ಇಂದಿನ ನಮ್ಮ ಬದುಕಲ್ಲಿ ಯಾವ ಜಾಗ ಎಂದು ದಿನದಿನವೂ ಕೇಳುತ್ತಲಿರಬೇಕಾಗಿದೆ. ಭಕ್ತಿಯ ಸ್ವವಿಮರ್ಶೆಯಂತೂ ಈಗ ಸಕ್ತ ಜರೂರತ್.
  ಮನ್ಸೂರ ಗಾಯನದ ಬಗ್ಗೆ ನಿಮ್ಮ ಬರಹ ಓದಿ ಖುಶಿಯಾಯಿತು.
  ಕಮಲಾಕರ

 2. ಪ್ರಿಯ ರಶೀದ್,

  ನಮ್ಮಂತಹವರಿಗೆ ಯಾಕೆ ಚನ್ನಮಲ್ಲಿಕಾರ್ಜುನನೂ ಇಲ್ಲ ಕೂಡಲಸಂಗಮನೂ ಇಲ್ಲ ಎಂದೆನಿಸಿ … ತುಂಬ ನಿಜವಾದ ಮಾತು.
  ಅಂತರಂಗ ಶುದ್ಧಿಯೂ ಇಲ್ಲದ ಬಹಿರಂಗ ಶುದ್ಧಿಯೂ ಇಲ್ಲದ ಈ ತಂತಿಯಮೇಲೆ ನಡೆಯುವ ದೊಂಬರಾಟದ ಬಾಲೆ…ನಾವು ಆಧುನಿಕ ಮಂದಿ ಬದುಕುವ ಪರಿಯನ್ನ ಸರಳ ವಾಕ್ಯಗಳಲ್ಲಿ ಬರೆದಿದ್ದೀರ.. ಒಬ್ಬ ರಶೀದನಲ್ಲದ ಈ ಮಾತು, ನಮ್ಮೆಲ್ಲರ ಬದುಕಿನ ಸಮಾನ ಸತ್ಯ.

  ಬರಹ ವ್ಯಾಯಾಮದಂತೆ?!.. ಇದು ನನಗೆ ಹೊಸ ದೃಷ್ಟಿ ವಿಸ್ತಾರ.. ಇನ್ನೂ ಮೆಲುಕು ಹಾಕುತ್ತಿದ್ದೇನೆ. ಒಪ್ಪಿಕೊಳ್ಳಲು ತಯಾರಿಲ್ಲ ನಾನು.. 🙂

  ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವಶಿವನ ಮನೋಹರ ಚಿತ್ರವನ್ನು ಅರ್ಧರಾತ್ರಿಯಲ್ಲಿ ಸವಿದು ಪೂರ್ಣವಾಗಿ ಕಟ್ಟಿಕೊಟ್ಟಿದ್ದೀರ.

  ಯಾಕೋ ಯಾವುಯಾವುದಕ್ಕೂ ಯಾವುಯಾವುದರ ಜೊತೆಗೂ ಏನೂ ಕೊಡುಕೊಳ್ಳುವಿಕೆ ಇಲ್ಲ.”ಎಲ್ಲಎಲ್ಲವೂ ಅವುಗಳಷ್ಟೇ ಗಹನದ್ದೂ ಮೂರ್ಖತನದ್ದೂ ಆಗಿರಬಹುದು ಎಂಬುದಾಗಿ ಅಂದುಕೊಳ್ಳುತ್ತೇನೆ”…. ಹೀಗೆಲ್ಲ ಬರೆದು ನನ್ನ ಎಡಬಿಡಂಗಿತನವನ್ನು ಇನ್ನೂ ಆಳವಾಗಿಸುತ್ತಿದ್ದೀರಿ.. ಪಾಮರಳಲ್ಲಿ ಕರುಣೆಯಿರಲಿ..

  ನಿನ್ನೆಯ ಮಳೆಯಲ್ಲಿ ಬರಿಯ ಮೊಣಕಾಲವರೆಗಷ್ಟೆ ತೋಯ್ದಿದ್ದೆ ನಾನು..ಮನ್ಸೂರ್ ಗುಡ್ಡದ ಹಸಿರು ನೆನಪು ಮತ್ತು ಚಕ್ಕಡಿಗಾಲಿಯ ಕೆಂಪು ನೆನಪುಗಳ ಸಂಯೋಜನೆ ಮನಸ್ಸನ್ನು ಆರ್ದ್ರಗೊಳಿಸುತ್ತಿದೆ..

  ಶರಣೆನ್ನುತ್ತೇನೆ ನಿಮ್ಮ ಕಥನಶಕ್ತಿಗೆ, ಭಾವೋದ್ದೀಪನಕ್ಕೆ.

  ರಾಗಮಾಲಿಕಾ ಗುಡ್ಡದ ಪ್ರೇಮಿಗಳನ್ನ ಯಾರದೋ ಕತೆಯೆನ್ನುವಂತೆ ಆತ-ಮನ್ಸೂರರ ಪರಮಭಕ್ತ, ಬ್ಲಾಗಿನಲ್ಲೂ ವಿವರಿಸುತ್ತಾನಾ? ! 🙂

  ಪ್ರೀತಿಯಿರಲಿ,
  ಸಿಂಧು

 3. ಸಿಂಧು, ನಿಮಗೆ ಕೊನೆಗೆ ಕಾಡಿದ ಪ್ರಶ್ನೆ ನನಗೂ ಕಾಡಿದ್ದು, ಮೈಸೂರು ಬಿಟ್ಟುಳಿದ ವಿಷಯಗಳಿಗಿರುವ ಈ ಬ್ಲಾಗಿನಲ್ಲಿ ಹಂಚಿಕೊಳ್ಳುತ್ತಿರುವ ಭಾವನೆಗಳಷ್ಟು, ಕಥೆಗಳಷ್ಟು ಸತ್ಯ… 🙂 (ಸದ್ಯ ಈ ಕಮೆಂಟ್ ಸೆನ್ಸಾರ್ ಆಗದಿದ್ದರೆ ಸಾಕು :p )

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s