The Mysore Post

ಮೈಸೂರು ಪೋಸ್ಟ್ Everything but ಮೈಸೂರು.

ಜೀವನವೆಂಬ ಮನೋಹರ ಆಹಾರ ಚಕ್ರ

madikeri-yesterday4-1ಮಡಿಕೇರಿಯ ಅತ್ಯಂತ ತುದಿಯಲ್ಲಿ ರಾಜಾಸೀಟಿಗಿಂತಲೂ ಮೇಲೆ ಸ್ಟೋನ್ ಹಿಲ್ ಎಂಬ ಗುಡ್ಡವಿದೆ. ಮುಂಜಾನೆ, ಅಪರಾಹ್ನ, ಇರುಳು ಎಲ್ಲ ಹೊತ್ತಲ್ಲೂ ನಾನಿರುವ ಇಲ್ಲಿ ಮಂಜು ಮುಸುಕಿರುತ್ತದೆ. ಮಳೆ ಇರುಚಲು ಹೊಡೆಯುತ್ತಿರುತ್ತದೆ. ಇದೇನು ಹೊಸತಲ್ಲ ಎಂಬಂತೆ ಊಳಿಡುವ ಮಳೆಗಾಳಿ, ಚೀರುವ ಜೀರುಂಡೆ ಮತ್ತು ವಟಗುಟ್ಟುವ ಕಪ್ಪೆಗಳ ಏಕಾಂತ.
ಹಗಲು ಒಮ್ಮೆಲೇ ಹೂಬಿಸಿಲು ಬಿದ್ದು ಎಲ್ಲರೂ ಹೊಳೆಯ ತೊಡಗುತ್ತಾರೆ.
ಎಲ್ಲವೂ ಎಷ್ಟು ಸುಂದರ ಮನುಷ್ಯನ ಸೌಂಧರ್ಯೋಪಾಸನೆಯೊಂದರ ಹೊರತಾಗಿ ಎಂದು ನಾನೂ ಗಡಿಬಿಡಿಯಲ್ಲಿ ಓಡಾಡುತ್ತಿರುತ್ತೇನೆ.

ಮೊನ್ನೆ ಸ್ನೇಹಿತನೊಬ್ಬ ರಾತ್ರಿ ಎರಡನೆಯ ಜಾವಕ್ಕೆ ಎಬ್ಬಿಸಿ ‘ಮೈಸೂರಿನಲ್ಲಿ ಯಾಕೋ ಒಂಟಿತನ, ಒಂದು ನೂರು ಸಲ ಮದುವೆಯಾದರೂ ನನ್ನ ಈ ಒಂದು ಒಂಟಿತನ ಹೋಗಲಾರದು ಮಾರಾಯಾ’ ಎಂದು ಫೋನಿನಲ್ಲಿ ಬಡಬಡಿಸುತ್ತಿದ್ದ. ನಾನು ಏನೋ ಒಂದು ಅನೂಹ್ಯ ಸಂತಸದಲ್ಲಿ ಅವನ ಒಂಟಿತನಕ್ಕೆ ಲವಲೇಸವೂ ಬೆಲೆಕೊಡದೆ ನಿದ್ದೆ ಹೋಗಿದ್ದೆ.
ಪುನಃ ಬೆಳಗಿನ ನಾಲ್ಕನೆಯ ಜಾವದಲ್ಲಿ ಎಬ್ಬಿಸಿ, ‘ಇದೋ ನಿನ್ನ ಬಾಗಿಲಿನ ಎದುರಿದ್ದೇನೆ’ ಎಂದ.
ಏನೋ ಒಂದು ಸ್ವಪ್ನದಲ್ಲಿ ಎಲ್ಲಿ ಮಲಗಿರುವೆ ಎಲ್ಲಿಂದ ಏಳುತ್ತಿರುವೆ ಎಂದು ಒಂದೂ ಗೊತ್ತಾಗದೆ ನಿದ್ದೆಯಲ್ಲಿದ್ದ ನಾನು ಎದ್ದು ನೋಡಿದರೆ ಆತ ಮಂಜಿನ ನಡುವೆ ನೆರಳಿನಂತೆ ಬರುತ್ತಿದ್ದ. ಮನೆ ತ್ಯಜಿಸಿ ಬಂದ ಮಗುವೊಂದನ್ನು ಕಂಡಂತೆ ಅನಿಸಿ ಆತನನ್ನು ಒಳಗೆ ಒಯ್ದು ಕಂಬಳಿ ಹೊದೆಸಿ ಸುಮ್ಮನೆ ಕುಳಿತಿದ್ದೆ.
ಹಾಗೆ ನೋಡಿದರೆ ಆ ಹೊತ್ತಲ್ಲಿ ಆತನ ಒಂಟಿತನವೂ ನನ್ನ ವಾತ್ಸಲ್ಯವೂ ಎಲ್ಲವೂ ಯಕಶ್ಚಿತ್ ಅನಿಸುತ್ತಿತ್ತು.
ಬೋರ್ಗರೆಯುವ ಗಾಳಿ, ಮುತ್ತಿರುವ ಮಂಜು, ರಾಚುತ್ತಿರುವ ಮಳೆ ಮತ್ತು ಎಲ್ಲಿಂದಲೋ ಮೂಡುತ್ತಿರುವ ಸಣ್ಣ ಬೆಳಕು ಈ ಎಲ್ಲದರ ನಡುವೆ ನಾನೂ ಇರುವೆ ಎಂದು ಓಡಾಡುತ್ತಿರುವ ಸಣ್ಣಸಣ್ಣ ಖಾಸಗೀ ನೋವುಗಳು.

DSC_9639

ನಿನ್ನೆಯ ಇರುಳು ಯಾರೂ ಓಡಾಡದ ಹೊತ್ತಿನಲ್ಲಿ ಮಂಜು ಮಳೆಯ ನಡುವೆ ಇಲ್ಲೊಂದು ದಾರಿಯಲ್ಲಿ ಗಾಡಿ ಓಡಿಸುತ್ತಿದ್ದೆ. ಎಂತಹ ಪ್ರಖರ ಬೆಳಕಿನಲ್ಲೂ ಕಾಣದ ಇಳಿಜಾರಿನ ದಾರಿ. ಬೆಚ್ಚಗಿರುವುದು ಉಸಿರು ಮಾತ್ರ.
‘ಆಹಾ ನನ್ನ ಸಖಿಯಂತಹ ಇರುಳೇ’ ಎಂದು ಹೋಗುತ್ತಿದ್ದೆ. ಇಳಿಜಾರಿನಲ್ಲಿ ನಡುರೋಡಿನಲ್ಲಿ ಮುದುಕನೊಬ್ಬ ಮಳೆಯ ನಡುವೆ ಎರಡೂ ಕೈಗಳನ್ನು ಚಾಚಿಕೊಂಡು ಬಲಗೈಯಲ್ಲಿ ತನ್ನ ಕಳಚಿದ ಅಂಗಿಯನ್ನು ಒದ್ದೆಮಾಡಿ ನೆನೆಯುತ್ತಾ ಹಾದಿಗೆ ಅಡ್ಡವಾಗಿ ನಿಂತಿದ್ದ. ನೋಡಿದರೆ ಅವನ ಬಲಗಣ್ಣಿನ ಜಾಗದಲ್ಲಿ ಕಣ್ಣುಗಳಿರಲಿಲ್ಲ. ಕಣ್ಣಿರಬೇಕಾದ ಜಾಗದಲ್ಲಿ ಒಂದು ಪೊಟರೆಯ ಹಾಗೆ ಕಾಣಿಸುತ್ತಿತ್ತು.
‘ಇದು ನನ್ನ ಜಮ್ಮಾ ಜಾಗ ಯಾರಿಗೂ ಬಿಡಲಾಗುವುದಿಲ್ಲ.ನಿನಗೂ ಬಿಡುವುದಿಲ್ಲ’ ಎಂದು ಅವನ ಮಾತೃ ಭಾಷೆಯಲ್ಲಿ ಹೇಳುತ್ತಿದ್ದ.
‘ಆಯ್ತು ಯಜಮಾನರೇ ಇದು ನಿಮ್ಮದೇ ಜಮ್ಮಾ ಜಾಗ. ದಯವಿಟ್ಟು ನಿಮ್ಮ ಎಡಗೈಯನ್ನು ಸ್ವಲ್ಪ ಈ ಬಡವನಿಗಾಗಿ ಸರಿಸಿ.ಹೋಗಿಬಿಡುತ್ತೇನೆ. ತುಂಬಾ ಹಸಿವಾಗುತ್ತಿದೆ’ ಅಂತ ಬೇಡಿಕೊಂಡೆ.
‘ಆಯ್ತು’ ಅಂತ ಕರುಣೆಯಿಂದ ಸ್ವಲ್ಪ ಕೈ ಸರಿಸಿ ಹೋಗಲು ಅನುವು ಮಾಡಿಕೊಟ್ಟ.
ಆಮೇಲೆ ಯಾರೋ ಹೇಳಿದರು ‘ಅದು ಸ್ಮಶಾನವಾಗಿದ್ದ ಜಾಗ. ನೀವು ನೋಡಿದ್ದು ಯಾರದಾದರೂ ದೆವ್ವವಾಗಿರಬಹುದು’ ಅಂತ.
ಈಗ ಆ ಕರುಣಾಳು ದೆವ್ವವನ್ನು ನೆನೆದುಕೊಂಡು ಖುಷಿಯಾಗುತ್ತಿದೆ. ಆದರೆ ಮಳೆಯಲ್ಲಿ ನೆನೆಯುತ್ತಾ ನಿಂತಿದ್ದ ಅದರ ಅವಸ್ಥೆಯನ್ನು ನೆನೆದು ಮಮತೆಯೂ ಬರುತ್ತಿದೆ.
ನಾನು ದೆವ್ವ ನೋಡಿದ್ದು ಇಲ್ಲಿ ಸಣ್ಣಗೆ ಸುದ್ದಿಯಾಗುತ್ತಿದೆ.
ಇವತ್ತು ಬೆಳಗ್ಗೆ ಹೆಂಗಸೊಬ್ಬರು ‘ದೆವ್ವ ನೋಡಿದ್ರಾ ಸಾರ್’ ಅಂತ ಕೇಳಿದಳು.
‘ಹೌದು’ ಅಂತ ಖುಷಿಯಲ್ಲಿ ಅಂದೆ.
‘ಅಯ್ಯೋ ನನಗೆ ಯಾಕೋ ಬೇಜಾರಾಗುತ್ತಿದೆ ಸಾರ್’ಅಂದಳು.
‘ಯಾಕೆ’ ಅಂತ ಕೇಳಿದೆ.
ಆಕೆಯ ಗಂಡ ತುಂಬಾ ಒಳ್ಳೆಯವನಂತೆ. ಚೆನ್ನಾಗಿಯೂ ಇದ್ದಾನೆ. ಆದರೆ ಒಮ್ಮೊಮ್ಮೆ ತಾರಾಮಾರಾ ಹೊಡೆಯುತ್ತಾನಂತೆ.
‘ಯಾಕೆ ಹೊಡೆಯುತ್ತಾನೆ’ ಎಂದು ಕೇಳಿದೆ.
ಯಾವಾಗಲಾದರೂ ಒಮ್ಮೊಮ್ಮೆ ಆತನ ಕಿವಿಯಲ್ಲಿ ಎರಡು ಹಕ್ಕಿಗಳು ಮಾತನಾಡುತ್ತವಂತೆ. ಹೆಂಡತಿಯ ಕುರಿತು ಇಲ್ಲಸಲ್ಲದ ಮಾತುಗಳನ್ನು ಕಿವಿಯಲ್ಲಿ ಹೇಳುತ್ತವಂತೆ. ಅದನ್ನು ಕೇಳಿ ಕುಪಿತನಾಗುವ ಆತ ಹೊಡೆಯಲು ಶುರುಮಾಡುತ್ತಾನಂತೆ. ಆಮೇಲೆ ರಮಿಸುತ್ತಾನಂತೆ.

‘ಸಾರ್, ಇದುವರೆಗೆ ಗಂಡ ಹೊಡೆದಾದ ಮೇಲೆ ಕತ್ತಲಲ್ಲಿ ಒಬ್ಬಳೇ ಹೊರಗಿನ ಕಲ್ಲು ಬೆಂಚಿನಲ್ಲಿ ಅಳುತ್ತಾ ಕೂರುತ್ತಿದ್ದೆ. ಆದರೆ ಈಗ ನೀವು ದೆವ್ವವನ್ನು ನೋಡಿದ ಮೇಲೆ ಹೊರಗೆ ಕತ್ತಲಲ್ಲಿ ಕೂರಲೂ ಹೆದರಿಕೆ ಸಾರ್. ಏನ್ಮಾಡೋದು’ ಅಂತ ಕೇಳುತ್ತಿದ್ದಳು.
ಆ ದೆವ್ವವನ್ನು ನಾನು ನೋಡಿದ್ದೇ ತಪ್ಪಾಯಿತು ಅನ್ನುವ ಹಾಗೆ ಆಕೆಯ ಮುಖಭಾವವಿತ್ತು.

DSC_2545
ಕಳೆದ ವಾರ ಇನ್ನೊಮ್ಮೆ ಇಲ್ಲಿನ ಸರಕಾರೀ ಆಸ್ಪತ್ರೆಗೆ ಹೋಗಿದ್ದೆ. ತುಂಬಾ ದೊಡ್ಡ ಕಟ್ಟಡ. ಗಂಟೆಗಟ್ಟಲೆ ತಿರುಗಿದರೂ ಹೊರಕ್ಕೆ ಹೋಗುವ ದಾರಿ ಕಾಣುವುದಿಲ್ಲ. ಹೋದಾಗ ನನ್ನ ಪರಿಚಿತರೊಬ್ಬರು ಮೆಟ್ಟಲು ಇಳಿದು ಮೆಟ್ಟಲು ಹತ್ತಿ ಕಂಗೆಟ್ಟು ಓಡಾಡುತ್ತಿದ್ದರು.
‘ಏನ್ಸಮಾಚಾರ..’ ಎಂದೆ.
ನೋಡಿದರೆ ಅವರೂ ನನ್ನ ಹಾಗೆಯೇ ದಾರಿ ತಪ್ಪಿ ತಿರುಗಾಡುತ್ತಿದ್ದರು.
ಆಮೇಲೆ ನಾವಿಬ್ಬರೂ ಹೊರಗೆ ಬಂದು ದಾರಿ ತಪ್ಪಿದ್ದನ್ನು ಯೋಚಿಸಿಕೊಂಡು ನಗಾಡಿದೆವು. ಮತ್ತು ದಾರಿ ತಪ್ಪಿಸುವ ಸರಕಾರೀ ವಾಸ್ತುಶಿಲ್ಪವನ್ನು ಬೈಯುತ್ತಾ ಟೀ ಕುಡಿದೆವು.
ನಾನು ಆಸ್ಪತ್ರೆಗೆ ಹೋಗಿದ್ದ ಉದ್ದೇಶ ವಯಸ್ಸಾದ ಮುದುಕರೊಬ್ಬರನ್ನು ನೋಡುವುದಾಗಿತ್ತು.
ಅವರು ಸ್ವಲ್ಪ ಶ್ರೀಮಂತರೇ ಆಗಿದ್ದ ಪ್ಲಾಂಟರ್.. ಆದರೆ ಈಗ ವಯಸ್ಸಾಗಿ ತಲೆ ಸ್ವಲ್ಪ ಹೆಚ್ಚುಕಡಿಮೆಯಾಗಿ ಅವರನ್ನು ಮಕ್ಕಳು ಈ ಆಸ್ಪತ್ರೆಗೆ ಸೇರಿಸಿದ್ದರು.
ಎಷ್ಟು ಕಾಲ ಕಳೆದರೂ ಆ ಮುದುಕನನ್ನು ಆಸ್ಪತ್ರೆಯಿಂದ ಬಿಡಿಸಿಕೊಂಡು ಹೋಗುತ್ತಿಲ್ಲವಂತೆ ಅಂತ ಯಾರೋ ಹೇಳಿದ್ದರು.
ಹೋಗಿ ನೋಡಿದರೆ ಅವರನ್ನು ಅವರ ಅಣ್ಣನೋ ತಮ್ಮನೋ ಬಿಡಿಸಿಕೊಂಡು ಹೋಗಿದ್ದರು.
ಅವರು ಮಲಗಿದ್ದ ಜಾಗದಲ್ಲಿ ಬಿಕ್ಷುಕನೊಬ್ಬನನ್ನು ಕಾಲು ಕತ್ತರಿಸಿ ಮಲಗಿಸಿದ್ದರು.
ಆತನ ಹೆಂಡತಿಯೂ ಮತ್ತು ನಾಲ್ಕು ಜನ ಸಾಲುಸಾಲು ಮಕ್ಕಳೂ ಇವನೊಬ್ಬನನ್ನೇ ವಾರ್ಡಿನಲ್ಲಿ ಬಿಟ್ಟು ಬಿಕ್ಷೆ ಎತ್ತಲು ಹೋಗಿದ್ದರು.
ಅವರು ಬಿಕ್ಷೆ ಬೇಡಿ ಬರುವಾಗ ಹಣ್ಣುಹಂಪಲು ತರುತ್ತಾರಂತೆ. ವಾರಕ್ಕೊಮ್ಮೆ ಬರುತ್ತಾರಂತೆ. ಉಳಿದಂತೆ ಅವನ ಪಕ್ಕದಲ್ಲಿರುವ ರೋಗಿಗಳೇ ಆತನನ್ನು ತಮ್ಮನಂತೆ ನೋಡಿಕೊಳ್ಳುತ್ತಿದ್ದರು.
‘ನಮ್ಮದು ಬಿಕ್ಷೆ ಬೇಡುವ ಕುಲ ಅಲ್ಲ ಸಾರ್,ಚಪ್ಪಲಿ ಹೊಲಿಯುವ ಜಾತಿ. ಸಣ್ಣದಿನಲ್ಲೇ ಅಪ್ಪ ಅಮ್ಮ ಬಿಟ್ಟು ಹೋದರು. ಆಮೇಲೆ ನಾನು ಬಿಕ್ಷುಕನಾದೆ. ಆಮೇಲೆ ಚಿಂದಿ ಹೆಕ್ಕುವ ಜಾತಿಯ ಬಿಕ್ಷುಕಿಯನ್ನು ಮದುವೆಯಾದೆ. ಈಗ ನಾವು ಐದೂ ಜನ ಬಿಕ್ಷೆ ಎತ್ತುತ್ತೇವೆ’ ಎಂದು ನಗುತ್ತಲೇ ಹೇಳುತ್ತಿದ್ದ.
ತನ್ನ ಕಾಲು ಕತ್ತರಿಸಲ್ಪಟ್ಟಿರುವುದೂ ಆತನಿಗೆ ಹೇಳಲು ದೊಡ್ಡ ಸಂಗತಿಯಾಗಿರುವಂತೆ ಅನಿಸುತ್ತಿತ್ತು.

DSC_8291

ನಿನ್ನೆ ಇಲ್ಲೊಬ್ಬರು ಹಿರಿಯರ ಮನೆಗೆ ಹೋಗಿದ್ದೆ. ಕಾಡಿನ ನಡುವೆ ಏಲಕ್ಕಿ ತೋಟ ಮಾಡಿಕೊಂಡಿದ್ದಾರೆ.
ಅವರು ಹಳ್ಳಿಶಾಲೆಯ ಮೇಷ್ಟರಾಗಿ ನಿವೃತ್ತರಾಗಿ ದಶಕಗಳೇ ಕಳೆದಿವೆ. ಮದುವೆಯಾಗಿ ಅರ್ಧಶತಮಾನಗಳೂ ಉರುಳಿವೆ. ಅವರಿಗೆ ಕನ್ನಡ ಅಂದರೆ ಪ್ರಾಣ. ಎಷ್ಟೋ ನೂರು ವರ್ಷಗಳ ಹಿಂದೆ ಕನ್ನಡನಾಡಿನ ಎಲ್ಲಿಂದಲೋ ಈ ಕೊಡಗು ದೇಶಕ್ಕೆ ಗುಳೆಬಂದ ಜನಾಂಗಕ್ಕೆ ಸೇರಿದವರು ಇವರು. ಹಳಗನ್ನಡದ ಹಾಗಿರುವ ಭಾಷೆಯೊಂದರಲ್ಲಿ ಮಾತನಾಡುತ್ತಾರೆ.
ಇಲ್ಲಿನವರು ಕೊಡಗು ರಾಜ್ಯ ಬೇಕು ಎನ್ನುವಾಗ ಇವರ ಕಣ್ಣುಗಳಲ್ಲಿ ನೀರು ಹನಿಯುತ್ತದೆ.
‘ಅಯ್ಯೋ,ನಮ್ಮ ಹಳಗನ್ನಡದ ಗತಿಯೇನು’ ಎಂದು ಅಳುತ್ತಾರೆ.
‘ ಯಜಮಾನರೇ ಈ ಲೋಕಕ್ಕೆ ಹಳಗನ್ನಡಕ್ಕಿಂತಲೂ ಬಹಳ ಹಿಂದೆ ಬಂದದ್ದು ಈಗ ನಿಮ್ಮ ಮನೆಯ ಮುಂದೆ ಮೇಯುತ್ತಿರುವ ಈ ಹಂದಿ ಮತ್ತು ಕೋಳಿ ಇತ್ಯಾದಿಗಳು. ನಾವೆಲ್ಲರೂ ಯಾವುಯಾವುದೋ ಕಾಲದಲ್ಲಿ ಎಲ್ಲೆಲ್ಲಿಂದಲೋ ಬಂದವರೇ. ನೀವು ಸುಮ್ಮನೇ ಈ ವಯಸ್ಸು ಕಾಲದಲ್ಲಿ ಟೆನ್ಸನ್ ಮಾಡಿಕೊಳ್ಳಬೇಡಿ. ಒಂದು ಖಾಲಿ ಟೀ ಮಾಡಿಕೊಡಿ ಕುಡಿದು ಹೋಗುತ್ತೇನೆ’ ಅನ್ನುತ್ತೇನೆ.
‘ಇದ್ದು ಹೋಗಿ, ನಾಳೆ ಹಬ್ಬ. ಈ ಹಂದಿಯನ್ನೂ ಕೋಳಿಯನ್ನೂ ಕಡಿಯುತ್ತಿದ್ದೇವೆ’ ಎಂದು ಪ್ರೀತಿಯಿಂದ ಕರೆಯುತ್ತಾರೆ.

ಮನೋಹರವಾಗಿ ಕಾಣಿಸುವ ಈ ಹೆಣ್ಣುಕೋಳಿ ಮತ್ತು ಲಿಂಗ ಗೊತ್ತಾಗದಂತೆ ನಿಂತಿರುವ ಹಂದಿ.

marriage-thought

ಹಂದಿ ತನ್ನ ಮೂತಿಯಿಂದ ಒದ್ದೆ ನೆಲವನ್ನು ಅಗೆದು ತೆಗೆದು ಮಣ್ಣನ್ನು ಹರಡುತ್ತಿದೆ. ಹೆಣ್ಣು ಕೋಳಿ ಅದರಿಂದ ಹೊರಬರುತ್ತಿರುವ ಎರೆಹುಳಗಳನ್ನೂ. ಹುಳ ಹುಪ್ಪಡಿಗಳನ್ನೂ ಕುಟುಕುತ್ತಾ ತಿಂದು ಹಂದಿಯನ್ನು ಕೃತಜ್ನತೆಯಿಂದ ನೋಡುತ್ತಿದೆ. ಸುಖದಲ್ಲಿ ತಿಂದುಂಡು ಪೊಗದಸ್ತಾಗಿ ಬೆಳೆಯುತ್ತಿರುವ ಅವೆರಡನ್ನು ಮಾಂಸದ ಆಸೆಯಿಂದ ಮನುಜರಾದ ನಾವು ನೋಡುತ್ತಿದ್ದೇವೆ.
‘ಆಹಾ ಜೀವನವೆಂಬ ಮನೋಹರ ಆಹಾರ ಚಕ್ರವೇ’ ಎಂದು ನಾನು ಅಲ್ಲಿಂದ ಹೊರಟು ಬಂದಿದ್ದೆ.

6th March 2012

Photos By author

“ಜೀವನವೆಂಬ ಮನೋಹರ ಆಹಾರ ಚಕ್ರ” ಗೆ 3 ಪ್ರತಿಕ್ರಿಯೆಗಳು

  1. Beautiful narration, beautiful title. Yet to visit Stone Hill.

  2. Tharamara khusi aythu.. linga gotthagadanthe nintiruva handi.. papa eshtu maryade utadakke alva sir.. super baraha 😀

  3. Rasgeed sir, i read most of your articles and pages. really pleasant reading and feel like reading more and more

    Revathi Shetty

ನಿಮ್ಮ ಟಿಪ್ಪಣಿ ಬರೆಯಿರಿ