The Mysore Post

ಮೈಸೂರು ಪೋಸ್ಟ್ Everything but ಮೈಸೂರು.

ದೇಬಾ ತೋರಿದ ಕಾಲುದಾರಿಗಳು

megha2ಇದು ಸುಮಾರು ಹತ್ತಿಪ್ಪತ್ತು ವರ್ಷಗಳ ಹಿಂದಿನ ಸಂಗತಿ.
ಆಕಾಶವಾಣಿಯ ಸುದ್ದಿ ವಿಭಾಗಕ್ಕಾಗಿ ಮೇಘಾಲಯದ ಷಿಲ್ಲಾಂಗಿನಲ್ಲಿ ಕೆಲಸ ಮಾಡುತ್ತಿದ್ದ ನಾನು ಕನ್ನಡನಾಡಿನ ಪರಿಚಿತ ಮುಖಗಳನ್ನು ಯೋಚಿಸುತ್ತಾ ತೂರಾದ ಬಳಿಯ ಯಾವುದೋ ಹಳ್ಳಿಯೊಂದರ ಹೋಟೆಲ್ಲಿನಲ್ಲಿ ಆಗುಂತಕನಂತೆ ಕುಳಿತಿದ್ದೆ.
ಭತ್ತವನ್ನು ನೀರಲ್ಲಿ ನೆನೆಸಿಟ್ಟು ಹುಳಿ ಬರಿಸಿ ಉಂಟುಮಾಡಿದ ಹಳ್ಳಿ ಬಿಯರು.ಆಡಿನ ಕರುಳನ್ನು ಅದರದೇ ನೆತ್ತರಿನಲ್ಲಿ ಕುದಿಸಿ ಬೇಯಿಸಿ ಅಕ್ಕಿಯ ರೊಟ್ಟಿಯೊಡನೆ ಮುರುಕಲು ಟೇಬಲ್ಲಿನ ಮೇಲೆ ತಿನ್ನಲು ಇಡುತ್ತಿರುವ ಹೋಟೆಲಿನ ಹುಡುಗಿ. ಹಾಲುಗಲ್ಲದ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಉರಿಯದ ಕಟ್ಟಿಗೆಯನ್ನು ಒಲೆಯ ಒಳಕ್ಕೆ ನೂಕುತ್ತಿರುವ ಇನ್ನೂ ಸ್ವಲ್ಪ ದೊಡ್ಡ ವಯಸ್ಸಿನ ಇನ್ನೊಬ್ಬಳು ಹುಡುಗಿ .
ಅವರಿಬ್ಬರ ತಾಯಿಯಾದವಳು ಕಟ್ಟಿಗೆ ತರಲು ಕಾಡಿಗೆ ಹೋಗಿದ್ದವಳು ಹೊರಗೆ ಮುಸುಕಿದ್ದ ಮಂಜನ್ನು ಸರಿಸಿ ಒಳಬಂದವಳು ನನ್ನ ಜೊತೆಗಿದ್ದ ಟ್ಯಾಕ್ಸಿ ಡ್ರೈವರ್ ದೇಬಾನನ್ನು ಕಂಡವಳೇ ಗಲಗಲ ಮಾತನಾಡಲು ಶುರು ಮಾಡಿದಳು.
ಅಷ್ಟು ಹೊತ್ತು ಅಲ್ಲಿ ನೆಲೆಸಿದ್ದ ಮೌನ ಮಾಯವಾಗಿ ಆ ಜಾಗದಲ್ಲಿ ಅವರು ನಾಲ್ವರ ಕೇಕೆಯೂ, ಕೀಟಲೆಗಳೂ, ನಗುವೂ, ರಾಜಕೀಯ ವಿಶ್ಲೇಷಣೆಗಳೂ ತುಂಬಿಕೊಂಡವು.
‘ಇವರೆಲ್ಲರೂ ನನಗೆ ಗೊತ್ತು ಎಂದು ನಾನು ಮೊದಲೇ ಹೇಳಿರಲಿಲ್ಲವಾ ಸಾಬ್.ನಾನು ಮೊದಲೇ ಹೇಳಿರಲಿಲ್ಲವಾ ಸಾಬ್ ಇವರೆಲ್ಲರೂ ನನಗೆ ನೆಂಟರಾಗಬೇಕು ಎಂದು’ ಎಂದು ಟ್ಯಾಕ್ಸಿ ಡ್ರೈವರ್ ದೇಬಾ ತಾನೇ ಎಲೆಕ್ಷನ್ನಿನಲ್ಲಿ ಗೆದ್ದುಬಿಟ್ಟವನಂತೆ ಆ ಗುಡಿಸಲಿನಂತಹ ಹೋಟೆಲಿನೊಳಗೆ ಸಂಭ್ರಮಿಸಲು ತೊಡಗಿದ್ದ.
‘ ಹೌದು’ ಅನ್ನುವಂತೆ ಆ ತಾಯಿ ಮತ್ತು ಅವಳ ಇಬ್ಬರು ಹೆಣ್ಣು ಮಕ್ಕಳೂ ತಲೆಯಾಡಿಸಿ ಸಂಭ್ರಮಿಸಿದರು.

3ಅದು ಮೇಘಾಲಯವೆಂಬ ಆ ಪುಟ್ಟ ರಾಜ್ಯದ ವಿದಾನಸಭಾ ಚುನಾವಣೆಯ ಸಮಯ.
ಆ ರಾಜ್ಯದಲ್ಲಿ ವರದಿಗಾರನಾಗಿದ್ದ ನಾನು ಚುನಾವಣಾ ಸಮೀಕ್ಷೆಗೆಂದು ಈ ದೇಬಾ ಎಂಬ ಮಹಾ ತುಂಟನೂ ಸಾಹಸಿಯೂ ಆದ ಟ್ಯಾಕ್ಸಿ ಡ್ರೈವರನ ಆ ಕಾಲದ ಅಂಬಾಸಿಡರ್ ಕಾರು ಹತ್ತಿ ಹಳ್ಳಿ ಸಮೀಕ್ಷೆಗೆ ಹೊರಟಿದ್ದೆ.
ಈ ದೇಬಾನ ಕಾರು ಹತ್ತಿದರೆ ಅದು ಚುನಾವಣಾ ಸಮೀಕ್ಷೆಯೆಂಬ ಮಿತಿಯನ್ನೂ ಮೀರಿ ಆ ಪ್ರಾಂತ್ಯದ ಸಾಮಾಜಿಕ, ನೈತಿಕ, ಸಾಂಸಾರಿಕ ಏಳುಬೀಳುಗಳ ಸಾಕ್ಷಾತ್ ದರ್ಶನವೂ ಆಗುವುದೆಂದು ನನಗೆ ಹಿರಿಯರೊಬ್ಬರು ಹೇಳಿದ್ದರು.
ಆ ರಾಜ್ಯದ ಪ್ರತ್ಯೇಕ ಪ್ರಾಂತ್ಯವೊಂದರ ಜನಪ್ರಿಯ ನಾಯಕನಾಗಿದ್ದುಕೊಂಡು ನಂತರ ಆ ರಾಜ್ಯದ ಮುಖ್ಯಮಂತ್ರಿಯೂ ಆದ ನಾಯಕರೊಬ್ಬರ ಅಂಗರಕ್ಷಕನೂ, ಚಾಲಕನೂ ಆಗಿದ್ದ ಈ ದೇಬಾ ನೋಡಲೂ ಮೋಹಕವಾಗಿದ್ದ.ಜೊತೆಗೆಸಾಕಷ್ಟು ರಸಿಕನೂ ಆಗಿದ್ದ ಈತ ಹೋದ ಬಹುತೇಕ ಕಡೆ ಗೆಳತಿಯರನ್ನೂ ಹೊಂದಿದ್ದ.ಅವರಲ್ಲಿ ಕೆಲವರಿಗೆ ರಾಜಕೀಯ ಆಮಿಷವನ್ನೂ ತೋರಿ ಅವರನ್ನು ಹಳ್ಳಿಗಳಿಂದ ರಾಜಧಾನಿಗೆ ಹಾರಿಸಿಕೊಂಡೂ ಬರುತ್ತಿದ್ದ.ತಾಲೂಕು ಮಂಡಳಿಯ ಸದಸ್ಯೆಯರಾಗುವೆವೆಂದೂ, ಜಿಲ್ಲಾ ಅಭಿವೃದ್ಧಿ ಮಂಡಳಿಯ ಮೆಂಬರಾರಾಗುವೆವೆಂದೂ ಕನಸು ಕಂಡು ತಮ್ಮ ಸ್ವಂತದ್ದೆಲ್ಲವನ್ನೂ ತೊರೆದು ರಾಜಧಾನಿಗೆ ಬರುತ್ತಿದ್ದ ಈ ಮಹಿಳೆಯರು ಅದೇನೂ ಆಗದೆ ಸತ್ಯವನ್ನು ಒಪ್ಪಿಕೊಂಡು ದೇಬಾನನ್ನು ಬೈದುಕೊಂಡು ಸಣ್ಣಪುಟ್ಟ ವ್ಯಾಪಾರ ವಹಿವಾಟು ಮಾಡಿಕೊಂಡು ಇಲ್ಲೇ ಉಳಿದುಬಿಡುತ್ತಿದ್ದರು.ಸ್ವಲ್ಪ ಸಮಯದ ನಂತರ ತಮ್ಮ ಪತಿಯಂದಿರನ್ನೂ ಮಕ್ಕಳನ್ನೂ ಹಳ್ಳಿಯಿಂದ ಕರೆಸಿಕೊಂಡು ರಾಜಧಾನಿಯವರೇ ಆಗಿಬಿಡುತ್ತಿದ್ದರು.
ಅಷ್ಟೇನೂ ಕೆಟ್ಟವನಲ್ಲದ ದೇಬಾ ಅವರ ಸಣ್ಣಪುಟ್ಟ ಕಷ್ಟಗಳಿಗೆ ನೆರವಾಗುತ್ತಾ, ಕೈಗಡ ನೀಡುತ್ತಾ, ತನ್ನ ಅಂಬಾಸಿಡರ್ ಕಾರಿನಲ್ಲೇ ಅವರ ಸಣ್ಣಪುಟ್ಟ ಅಗತ್ಯಗಳಿಗೆ ತಿರುಗಾಡಿಸುತ್ತಾ ಆಪತ್ಬಾಂಧವನೂ ಆಗಿರುತ್ತಿದ್ದ.
ಹಾಗಾಗಿ ಅವರು ದೇಬಾನನ್ನು ಧ್ವೇಷಿಸಿದರೂ ಒಳಗೊಳಗೆ ಪ್ರೀತಿಸುತ್ತಿದ್ದರು.ಹಿಂದಿನಿಂದ ಅವನನ್ನು ಬೈದರೂ ಆತ ಎದುರು ಬಂದಾಗ ಅವರ ಕಣ್ಣುಗಳು ಅರಳುತ್ತಿದ್ದವು.
ಆದರೂ ಅವರು ದೇಬಾನ ಬಗ್ಗೆ ಜಾಗ್ರತೆಯಲ್ಲಿರು ಎಂದು ತಮ್ಮ ಹತ್ತಿರದ ಹೆಣ್ಣು ಮಕ್ಕಳಿಗೆ ಜಾಗ್ರತೆ ಹೇಳುತ್ತಿದ್ದರು.

ಈ ಹೋಟೆಲ್ಲಿನಲ್ಲಿ ಆಗಿದ್ದೂ ಇಷ್ಟೇ:
megha3ಯಾವುದೋ ಒಂದು ಕಾಲದಲ್ಲಿ ದೇಬಾನ ಗಿಲೀಟು ಮಾತುಗಳಿಂದ ಮೋಸ ಹೋಗಿದ್ದ ಈ ಗುಡಿಸಲು ಹೋಟೆಲಿನ ಒಡತಿ ತಾನು ರಾಜಧಾನಿ ಸೇರಿ ರಾಜಕಾರಣಿಯಾಗಿ, ಮುಖ್ಯಮಂತ್ರಿಗೂ ಹತ್ತಿರವಾಗಿ, ರಾಜಧಾನಿಯಲ್ಲೇ ದೊಡ್ಡ ಹೋಟೆಲ್ಲೊಂದನ್ನೂ ಶುರುಮಾಡಿ ತಂದೆಯಿಲ್ಲದ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಅಲ್ಲೇ ದೊಡ್ಡ ಕಾಲೇಜಿನಲ್ಲಿ ಓದಿಸಿ ಅವರನ್ನು ದೊಡ್ಡ ಆಫೀಸರುಗಳನ್ನಾಗಿ ಮಾಡುತ್ತೇನೆಂಬ ಕನಸು ಕಂಡಿದ್ದಳು.
ಆದರೆ ಅದೇನೂ ಆಗದೆ ತನ್ನ ಹಾಗೆಯೇ ತನ್ನ ಹೆಣ್ಣು ಮಕ್ಕಳೂ ಹಾಳಾಗುವುದು ಬೇಡವೆಂದು ತನ್ನ ಗುಡಿಸಲು ಹೋಟೆಲ್ಲಿಗೆ ವಾಪಾಸು ಬಂದಿದ್ದಳು.ಆದರೆ ಅವಳ ಹತೋಟಿಯನ್ನೂ ಮೀರಿ ಅವಳ ದೊಡ್ಡ ಮಗಳು ಹೆದ್ದಾರಿಯ ಲಾರಿ ಚಾಲಕನೊಬ್ಬನ ಜೊತೆ ಓಡಿಹೋಗಿ ಬಸುರಾಗಿ ಮಗುವಿನ ಜೊತೆ ವಾಪಾಸು ಬಂದು ಅಮ್ಮನೊಡನೆ ಹೋಟೆಲ್ಲು ಕೆಲಸ ಮಾಡಿಕೊಂಡಿದ್ದಳು.ಇನ್ನೊಬ್ಬಳು ನಾಲ್ಕು ಹೊತ್ತೂ ಕನ್ನಡಿ ನೋಡುತ್ತಾ, ಬಂದು ಹೋಗುವವರನ್ನು ಕದ್ದು ನೋಡುತ್ತಾ ಅಮ್ಮನ ಎದೆಯಲ್ಲಿ ನಾನಾ ಹೆದರಿಕೆಗಳನ್ನು ಹುಟ್ಟಿಸುತ್ತಿದ್ದಳು.ಹಾಗಾಗಿ ಆ ತಾಯಿ ತಾನಿಲ್ಲದಿರುವಾಗ ಯಾವುದೇ ಗಂಡಸರೊಡನೆ ಅವರು ಎಷ್ಟೇ ಗೊತ್ತಿದ್ದರೂ ಸರಿಯೆ ನಗುವುದನ್ನಾಗಲೀ ಮಾತನಾಡುವುದನ್ನಾಗಲೀ ಮಾಡಬಾರದೆಂದು ತಾಕೀತು ಮಾಡಿ ಕಟ್ಟಿಗೆ ತರಲು ಕಾಡಿಗೆ ಹೋಗಿದ್ದಳು.
ಹಾಗಾಗಿ ಅದುವರೆಗೆ ನಮ್ಮೊಡನೆ ಮುಗುಂ ಆಗಿದ್ದ ಆ ಸೋದರಿಯರು ಅಮ್ಮ ಬಂದೊಡನೆ ಸಲೀಸಾಗಿ ಮಾತನಾಡಲು ತೊಡಗಿದರು.ಅವರೆಲ್ಲರೂ ಎಷ್ಟೋ ಯುಗಗಳಿಂದ ಒಂದೇ ತಟ್ಟೆಯಲ್ಲಿ ತಿಂದುಕೊಂಡು ಬದುಕಿದ್ದವರಂತೆ ನನ್ನ ಇರವನ್ನೂ ಮರೆತು ತಮ್ಮ ಮಾತುಗಳಲ್ಲಿ ಮುಳುಗಿ ಹೋಗಿದ್ದರು.

ಅವರ ಎಲ್ಲ ಉಳಿದ ಮಾತುಗಳ ನಡುವಲ್ಲಿ ನನಗೆ ಗೊತ್ತಾದ ರಾಜಕೀಯ ಸತ್ಯವೆಂದರೆ ಈ ಚುನಾವಣೆಯಲ್ಲಿ ಅವರೆಲ್ಲರೂ ಪಕ್ಷಬೇಧ ಮರೆತು ಒಟ್ಟಾಗಿ ಅವರದೇ ಬುಡಕಟ್ಟಿನ ಅಭ್ಯರ್ಥಿಯೊಬ್ಬನಿಗೆ ಮತ ಹಾಕಲು ತೀರ್ಮಾನಿಸಿದ್ದರು.ಏಕೆಂದರೆ ಕಳೆದ ಚುನಾವಣೆಯಲ್ಲಿ ಅವರೆಲ್ಲರೂ ಸೇರಿ ತಮ್ಮ ಮೆಚ್ಚಿನ ಪಕ್ಷದ ಆದರೆ ಇನ್ನೊಂದು ಬುಡಕಟ್ಟಿಗೆ ಸೇರಿದ ಅಭ್ಯರ್ಥಿಯನ್ನು ಗೆಲ್ಲಿಸಿ ಕಳಿಸಿದರೆ ಆತ ರಾಜಧಾನಿಗೆ ತೆರಳಿದವನು ತನ್ನ ಪಕ್ಷವನ್ನೇ ಬದಲಿಸಿ ಎದುರು ಪಕ್ಷದ ಆದರೆ ತನ್ನದೇ ಬುಡಕಟ್ಟಿಗೆ ಸೇರಿದ ವೃದ್ಧರೊಬ್ಬರನ್ನು ಮುಖ್ಯಮಂತ್ರಿ ಮಾಡಲು ನೆರವಾಗಿದ್ದನು.ಹೀಗೆ ಇಂತಹದೇ ಕುಟಿಲ ಕಾರಣಗಳಿಂದಾಗಿ ತಮ್ಮ ಬುಡಕಟ್ಟಿನ ಮಂದಿ ಮುಖ್ಯಮಂತ್ರಿಯಾಗುವುದು ತಪ್ಪಿ ಹೋಗುತ್ತಿರುವುದನ್ನು ಮನಗಂಡ ಆ ಪ್ರಾಂತ್ಯದ ಅವರೆಲ್ಲರೂ ಪಕ್ಷಬೇಧ ಮರೆತು ತಮ್ಮದೇ ತರಹದ ಮೂಗು ಕಣ್ಣು ಮತ್ತು ಬಣ್ಣ ಇರುವ ಮನುಷ್ಯನಿಗೆ ವೋಟು ಹಾಕಲು ತೀರ್ಮಾನಿಸಿದ್ದರು.ಹೀಗೆ ಮೇಘಾಲಯ ಎಂಬ ಆ ರಾಜ್ಯದ ಬೇರೆಬೇರೆ ಪ್ರಾಂತ್ಯಗಳಿಗೆ ಸೇರಿದ ಬೇರೆ ಬೇರೆ ಬುಡಕಟ್ಟಿನವರೂ ಇದೇ ತರಹ ತೀರ್ಮಾನಿಸಿಕೊಂಡಿರುವುದು ದೇಬಾನ ಟ್ಯಾಕ್ಸಿಯಲ್ಲಿ ತಿರುಗಾಡಿದಾಗ ನನಗೆ ಅರಿವಾಗುತ್ತಿತ್ತು.
ಏಕೆಂದರೆ ಆ ಯಾವುದೇ ದೊಡ್ಡ ಬುಡಕಟ್ಟಿಗೆ ಸೇರದೆ ಅಸ್ಸಾಮಿನ ಸಣ್ಣದೊಂದು ಪಂಗಡಕ್ಕೆ ಸೇರಿದ್ದ ದೇಬಾ ಎಲ್ಲರಿಗೂ ಬೇಕಾದವನಾಗಿದ್ದ ಮತ್ತು ಒಬ್ಬರ ವಿಷಯವನ್ನು ಇನ್ನೊಬ್ಬರಲ್ಲಿ ಹಂಚಿಕೊಳ್ಳುತ್ತಿರಲಿಲ್ಲ.ಹಾಗಾಗಿ ಎಲ್ಲರೂ ದೇಬಾನನ್ನು ತಮ್ಮವನೆಂದೇ ತಿಳಿದು ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದರು.
ಆ ರಾಜ್ಯದ ಮುಖ್ಯಮಂತ್ರಿಗೂ ಇದೇ ಕಾರಣಕ್ಕಾಗಿ ದೇಬಾ ಇಷ್ಟವಾಗಿದ್ದ.ಅದಕ್ಕಾಗಿಯೇ ದೇಬಾ ಆ ಮುಖ್ಯಮಂತ್ರಿಯ ಚಾಲಕ ಮತ್ತು ಅಂಗರಕ್ಷಕನೂ ಆಗಿದ್ದ.ಆದರೆ ಯಾವಾಗ ಮುಖ್ಯಮಂತ್ರಿಯ ಹತ್ತಿರದ ಹೆಂಗಸೊಬ್ಬಳೂ ದೇಬಾನಿಂದ ಮೋಸ ಹೋದಳೋ ಆ ತಕ್ಷಣವೇ ದೇಬಾ ತನ್ನ ಕೆಲಸ ಕಳೆದುಕೊಂಡು ತಂದೆ ಓಡಿಸುತ್ತಿದ್ದ ಹಳೆಯ ಅಂಬಾಸೆಡರ್ ಟ್ಯಾಕ್ಸಿಯನ್ನು ಓಡಿಸಬೇಕಾಗಿತ್ತು.megha 1

ಹೀಗೆ ಟ್ಯಾಕ್ಸಿ ಓಡಿಸುತ್ತಿದ್ದ ದೇಬಾನನ್ನು ಹಿರಿಯರೂ ಅನುಭವಿಗಳೂ ಆದ ಪತ್ರಕರ್ತರೊಬ್ಬರು ನನಗೆ ಪರಿಚಯಿಸಿದ್ದರು.‘ಈತನೊಡನೆ ಓಡಾಡು.ನಿನಗೆ ಲೋಕ ದರ್ಶನವಾಗುವುದು ಜೊತೆಗೆ ಕರಾರುವಕ್ಕಾದ ಚುನಾವಣಾ ವಿಶ್ಲೇಷಣೆಯೂ ಸಿಗುವುದು.ಆದರೆ ಆತನ ಗೆಳತಿಯರಿಂದ ದೂರವಿರು.ಇಲ್ಲದಿದ್ದರೆ ನಿನ್ನ ಕೊಲೆಯಾಗುವುದು’ ಎಂದಿದ್ದರು.

ಅ ಸಲ ದೇಬಾನ ಜೊತೆ ಓಡಾಡಿ ಬಂದು ನಾನು ಮಾಡಿದ್ದ ವಿಶ್ಲೇಷಣೆ ಹೆಚ್ಚುಕಡಿಮೆ ಕರಾರುವಕ್ಕಾಗಿತ್ತು.
ಅದಕ್ಕಿಂತ ಹೆಚ್ಚಾಗಿ ನಾನು ಕಂಡ ಸಾಮಾಜಿಕ ನೈತಿಕ ಸಾಂಸಾರಿಕ ತಮಾಷೆಗಳು ಅದಕ್ಕಿಂತಲೂ ಮಜವಾಗಿತ್ತು.

ನಿಮ್ಮ ಟಿಪ್ಪಣಿ ಬರೆಯಿರಿ