Saturday December 15, 2007 – 11:04 pm
ಕತೆಯೊಂದನ್ನು ಬರೆಯಲು ಹೋರಾಡುತ್ತಾ ಇದೀಗ ಅದರಿಂದ ತಪ್ಪಿಸಿಕೊಳ್ಳಲು ಈ ಕಾಗದವನ್ನು ಬರೆಯುತ್ತಿರುವೆ. ಕತೆಯನ್ನು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾ ಆನಂದಿಸುತ್ತಾ ಮನಸ್ಸಿನಲ್ಲಿಯೇ ಮುಗಿಸಿ ಕೂರುವುದು ಎಂತಹ ಸುಲಭದ ವಿಷಯ. ಆದರೆ ಅದನ್ನೇ ಕಾಗದದಲ್ಲಿ ತರುವುದು,ಪಾತ್ರಗಳನ್ನು ಜೋಡಿಸುವುದು, ಅವುಗಳ ಬಾಯಿಂದ ಮಾತುಗಳನ್ನು ಹೇಳಿಸುವುದು ಎಂತಹ ರೇಜಿಗೆಯ ಕೆಲಸ. ಈ ಮಹಾ ಮಹಾ ಕತೆಗಾರರೆಲ್ಲಾ ಎಂತಹ ಹಠಮಾರಿ ಮಹಾತ್ವಾಕಾಂಕ್ಷೀ ಮನುಷ್ಯರು ಅಂತ ಯೋಚಿಸಿ ಆಶ್ಚರ್ಯವಾಗುತ್ತಿದೆ.
ನಿನ್ನೆ ಮೊನ್ನೆಯೆಲ್ಲಾ ಇಲ್ಲಿ ಷಿಲ್ಲಾಂಗಿನಲ್ಲಿ ವಿಪರೀತ ಮಳೆ ಸುರಿಯುತ್ತಿತ್ತು. ಅದಕ್ಕೂ ಮೊದಲು ಈ ಊರ ತುಂಬಾ ಕಾಡು ಚೆರ್ರಿ ಮರಗಳು ನಸುಗೆಂಪು ಹೂ ತುಂಬಿಕೊಂಡು ನಿಂತಿದ್ದವು. ಈ ಊರಿನ ತುಂಬಾ ಬರೇ ಈ ಮರಗಳು ಅನ್ನುವ ಹಾಗೆ. ಅಕಾಲ ಮಳೆ ಸುರಿಯಲು ತೊಡಗಿ ಈ ಮರಗಳೆಲ್ಲಾ ಎರಡು ದಿನ ಲಜ್ಜೆಯಿಂದ ಭಾರವಾಗಿ ನೋವು ತುಂಬಿಕೊಂಡು ನಿಂತಿದ್ದವು. ಇಂದು ಬೆಳಿಗ್ಗೆ ಮಳೆ ನಿಂತು ನೋಡಿದರೆ ಎಲ್ಲಾ ಮರಗಳು ನಸುನಗುತ್ತಿದ್ದವು. ಎಲ್ಲೋ ಅಡಗಿದ್ದ ಬಣ್ಣಬಣ್ಣದ ಪಾತರಗಿತ್ತಿಗಳು ಮತ್ತೆ ಉಲ್ಲಾಸದಿಂದ ಹಾರಲು ಶುರುಮಾಡಿದ್ದವು. ಇನ್ನು ಕೆಲವು ದಿನಗಳಲಿ ಪ್ಲಂ ಮರಗಳು ಆಮೇಲೆ ಪೀಚ್ ಮರಗಳು ಹೀಗೆ ಹೂ ಬಿಡಲು ತೊಡಗುತ್ತದೆ. ಇನ್ನೆಷ್ಟು ಚಿಟ್ಟೆಗಳು ಎಂದು ಆಶೆಯಿಂದ ಕಾಯುತ್ತಿದ್ದೇನೆ.
ಆದರೆ ವರ್ಷಗಳಿಂದ ನಾನು ಒಂದು ಕತೆಯನ್ನೂ ಬರೆದಿಲ್ಲ ಎಂದು ಯೋಚಿಸಿಕೊಂಡು ಮುದುಡಿಹೋಗಿದ್ದೇನೆ.
Read More »
Sunday December 9, 2007 – 1:22 am

-೧-
ನೀರೊಳಗೆ ತಿರುಗುತ್ತಿದೆ ನೀರ ಗಾಲಿ,
ತಾರೆ ತಿರುಗುತ್ತಿದೆ ಚಂದ್ರನೊಡನೆ.
ಚಕಿತ ನಾವು ಈ ಇರುಳಲ್ಲಿ,ಅದು ಹೇಗೆ
ಇಷ್ಟೊಂದು ಬೆಳಕು ಇಲ್ಲಿ !
Read More »
Wednesday November 28, 2007 – 7:31 pm
ನನ್ನ ತೀರಾ ಹತ್ತಿರದ ಗೆಳೆಯನ ತಂದೆ ಇಂದು ಮುಂಜಾನೆ ತೀರಿ ಹೋದರು.ಒಂದು ವಾರದ ಹಿಂದೆ ನನ್ನ ಮಾವ ತೀರಿ ಹೋದರು.ಇಬ್ಬರಿಗೂ ವಯಸ್ಸಾಗಿತ್ತು. ಮತ್ತು ಇಬ್ಬರೂ ಅವರವರ ರೀತಿಯಲ್ಲಿ ಬೆರಗು ಹುಟ್ಟಿಸುವಷ್ಟು ಸಮರ್ಥರಾಗಿದ್ದರುಎರಡು ಮೂರು ದಿನಗಳ ಹಿಂದೆ ನನ್ನ ಗೆಳೆಯ Dylan Thomas ಬರೆದ ಈ ಕವಿತೆಯನ್ನು ನೆನಪಿಸಿಕೊಂಡು ಮಾತನಾಡುತ್ತಿದ್ದ. ಅದನ್ನು ಈಗ ಕೂತು ಕನ್ನಡಕ್ಕೆ ಅನುವಾದಿಸಿರುವೆ. ಹೋಗದಿರಿ ಹೀಗೆ ಮೆಲ್ಲಗೆ ಆ ಸುಖದ ಇರುಳಿನೊಳಗೆ
Read More »
Monday November 26, 2007 – 7:29 pm
ಹಲವು ವರುಷಗಳ ಮೊದಲು ಒಂದು ಸಂಕ್ರಾಂತಿಯ ಮಾರನೇ ದಿನ ವಿಮರ್ಶಕ ಪ್ರೊಫೆಸರ್ ಕಿ.ರಂ.ನಾಗರಾಜರನ್ನ ಬೈಕಿನಲ್ಲಿ ಕೂರಿಸಿಕೋಂಡು ಮಂಗಳೂರಿನ ಬೆನ್ನ ಹಿಂದೆ ಇರುವ ಒಂದು ಅಪರೂಪದ ಜಾಗಕ್ಕೆ ಕರೆದುಕೊಂಡು ಹೋಗಿದ್ದೆ. ಈ ಜಾಗ ತುಂಬಾ ಅಪರೂಪ.ಯಾಕೆಂದರೆ ಈ ಜಾಗ ಕೆಲವೇ ಕೆಲವರಿಗೆ ಗೊತ್ತಿದೆ ಮತ್ತು ಇಲ್ಲಿ ಎರಡು ದೊಡ್ಡ ನದಿಗಳು ಕಡಲನ್ನು ಸೇರುತ್ತದೆ.ಇಲ್ಲಿ ನಿಂತರೆ ಯಾವುದು ಯಾವ ನದಿ ಮತ್ತು ಯಾವುದು ಕಡಲು ಎಂದು ಗೊತ್ತಾಗುವುದಿಲ್ಲ. ಮುಳುಗುತ್ತಿರುವ ಸೂರ್ಯ ಇದೇ ಹೊತ್ತಲ್ಲಿ ಎಲ್ಲಿ ಉದಯಿಸುತ್ತಿರುವ ಎಂದು ಗೊತ್ತಾಗುತ್ತಿದೆ ಎಂದು ಅನಿಸುತ್ತದೆ. ಯಾವುದೋ ಒಂದು ದೇಶ, ಯಾವುದೋ ಒಂದು ಕಾಲ ಕಣ್ಣ ಮುಂದೆ ಕಾಣುತ್ತದೆ. ಕಣ್ಣು ಮುಚ್ಚಿದರೆ ಮುಚ್ಚಿದ ಕಣ್ಣೊಳಗೆ ಹಸಿರು ತೇಪೆಗಳು ಸರಿದಾಡುತ್ತವೆ. ಮೀನುಗಾರರ ದೋಣಿಗಳು ಮತ್ತು ಕಡಲ ಹಕ್ಕಿಗಳು ಅಲೆದಾಡುತ್ತಿರುವ ಆತ್ಮಗಳಂತೆ ಓಡಾಡುತ್ತಿರುತ್ತವೆ.
ಇಲ್ಲಿ ಕೂತುಕೊಂಡು ಕನ್ನಡದ ಖ್ಯಾತ ವಿಮರ್ಶಕರಾದ ಪ್ರೊಫೆಸರ್ ಕಿ.ರಂ.ನಾಗರಾಜ್ ಪುಟ್ಟ ಬಾಲಕನಂತೆ ಮಳೆಗಾಲದಲ್ಲಿ ಈ ಕಡಲು ಹೇಗಿರುತ್ತದೆ ಎಂದು ಕೇಳುತ್ತಿದ್ದರು. ನಾನು ಮಹಾ ಮಳೆಗಾಲದಲ್ಲಿ ಕಡಲನ್ನು ನೋಡಿದವನಂತೆ ಭೂಮಿ ಆಕಾಶ ಕಡಲು ಎಲ್ಲಾ ಒಂದೇ ಆಗಿಬಿಟ್ಟಿರುತ್ತದೆ. ಎಲ್ಲವೂ ಮಂಜು ಮುಸುಕಿದಂತೆ… ಎಂದು ಹೇಳುತ್ತಿದ್ದೆ.
ಆ ಮೇಲೆ ಈ ಜಾಗಕ್ಕೆ ಬೆಳದಿಂಗಳ ರಾತ್ರಿಯಲ್ಲಿ ಬರಬೇಕು ಎಂದು ವಿಷಯ ಬದಲಿಸಿದೆ.
ತಿರುಗಿ ಬರುವಾಗ ಅವರಿಗೆ ಒಂದು ಮುಳುಗಿದ ಹಡಗನ್ನು ತೋರಿಸಿದೆ ಮತ್ತು ಮಹಮ್ಮದ್ ಆಲಿ ಎಂಬ ಸಾಹಸಿ ಈಜುಗಾರನ ಕತೆ ಹೇಳಿದೆ. ಈ ಮುಳುಗಿದ ಹಡಗು ಅಲ್ಲಿ ಮುಳುಗಿ ಆಗಲೇ ಆರೇಳು ವರ್ಷಗಳಾಗಿತ್ತು. ಇಲ್ಲಿ ಮುಳುಗುವ ಮೊದಲು ಇದು ಹಾಂಕಾಗಿನ ಒಬ್ಬ ಚೀನೀ ವರ್ತಕನಿಗೆ ಸೇರಿತ್ತು. ಅದು ಎಲ್ಲೋ ಸಾಗರದ ನಡುವಲ್ಲಿ ಇನ್ನೊಂದು ಹಡಗಿಗೆ ಡಿಕ್ಕಿ ಹೊಡೆದು ಹಾಳಾಗಿ ಅದನ್ನು ಒಡೆದು ತೂಕಕ್ಕೆ ಕಬ್ಬಿಣವನ್ನಾಗಿ ಮಾರಲು ಈ ಕಡಲ ತಡಿಗೆ ತಂದಿದ್ದರು. ದಡದ ಹತ್ತಿರ ಬಂದಂತೆ ಅದು ಕಡಲ ಕೊರೆತಕ್ಕೆ ಸಿಲುಕಿ ಮರಳಿನೊಳಗೆ ಹೂತು ಹೋಗಲು ತೊಡಗಿ ನಾನು ಅದನ್ನು ಕಿ.ರಂ ಗೆ ತೋರಿಸುವಾಗ ಅದರ ಚಾವಣಿ ಮಾತ್ರ ಕಾಣುತ್ತಿತ್ತು. Read More »
Sunday November 18, 2007 – 10:42 pm
ಹಲವು ವರ್ಷಗಳ ಹಿಂದೆ ಮಂಗಳೂರಿನ ಬಳಿ ಐದು ಮಂದಿ ಬಾಲಕಿಯರು ಕೊಳದಲ್ಲಿದೋಣಿ ಮಗುಚಿ ನೀರಲ್ಲಿ ಮುಳುಗಿ ತೀರಿಹೋದರು. ನಾನು ಅವರಲ್ಲಿ ಇಬ್ಬರ ಮೃತದೇಹವನ್ನು ಆಸ್ಪತ್ರೆಯ ಶವ ಕೊಠಡಿಯಲ್ಲಿ ನೋಡಿ ಬಂದಿದ್ದೆ.
ಮೂಲೆಯಲ್ಲಿ ಇನ್ನೊಬ್ಬ ಗಂಡಸಿನ ಮೃತ ದೇಹವೂ ಇತ್ತು. ಆತ ಮಧ್ಯಾಹ್ನ ಹನ್ನೆರಡು ಗಂಟೆಗೆ ಮನೆಯಲ್ಲಿ ಬಾಗಿಲು ಮುಂದೆ ಮಾಡಿಕೊಂಡು ಉಣ್ಣುತ್ತಾ ಇದ್ದನಂತೆ. ಮುಳುಗಿ ಹೋಗುತ್ತಿರುವ ಬಾಲಕಿಯರು ಕೂಗಿಕೊಳ್ಳುವುದು ಕೇಳಿಸಿಕೊಂಡವನಂತೆ ಉಣ್ಣುತ್ತಿದ್ದಲ್ಲಿಂದ ಹಾರಿ ಎದ್ದು ಕೆರೆಯ ಕಡೆಗೆ ಓಡಿ ನೀರಿಗೆ ಹಾರಿ ತೀರಿಕೊಂಡುಬಿಟ್ಟ. ಅವನಿಗೆ ತುಂಬಾ ಚೆನ್ನಾಗಿ ಈಜಲು ಬರುತ್ತಿತ್ತಂತೆ. ಸಣ್ಣದಿರುವಾಗ ಸೀಬೆಮರದ ಗೆಲ್ಲಿನಿಂದ ಕೆಳಗಿನ ಬಾವಿಗೆ ಹಾರಿ ಮುಳುಗಿ ಮುಷ್ಟಿಯಲ್ಲಿ ಬಾವಿಯ ತಳದ ಮರಳು ಹಿಡಿದುಕೊಂಡು ಮೇಲೆ ಬರುತ್ತಿದ್ದನಂತೆ.
ಆತನ ಬಾಲ್ಯ ಕಾಲದ ಗೆಳೆಯ ಶವಾಗಾರದೊಳಗೆ ಗೆಳೆಯನ ಮೃತದೇಹದ ಮುಂದೆ ಕಥೆ ಹೇಳುತ್ತಾ ಅಳುತ್ತಿದ್ದ. ತೀರಿ ಹೋದವನ ಹೆಂಡತಿ ಅಳಲು ಬಾರದೆ ಪೆಚ್ಚುಪೆಚ್ಚಾಗಿ ಏನೋ ಹೇಳುತ್ತಿದ್ದಳು.
`ಅವರಿಗೆ ಈಜು ಬರುತ್ತಿತ್ತು ಎಂದು ನಾನು ಹೇಳಲು ಬರುವುದಿಲ್ಲ.. .. ಆದರೆ ಅವರು ಕಡಲಿಗೆ ಹೋಗುತ್ತಿದ್ದರು.. .. ಆದರೆ ನಾನು ಅವರ ಜೊತೆಗೆ ಕಡಲಿಗೆ ಹೋಗಿರಲಿಲ್ಲ.. ..’ ಅನ್ನುತ್ತಿದ್ದಳು. ಕೊನೆಗೆ ಏನೋ ನೆನಪಾದವಳಂತೆ ಅಳಲು ತೊಡಗಿದಳು. Read More »
Monday November 5, 2007 – 10:24 pm

[ಚಿತ್ರ:ಚರಿತಾ]
ಯಾರು ಯಾರೆಂದು ಗೊತ್ತಾಗದಂತೆ ಸುರಿಯುತ್ತಿರುವ ಬೆಳ್ಳನೆಯ ಮಳೆಯಲ್ಲಿ ಪಾತು ತಲೆಯ ಮೇಲೊಂದು ಗೊರಬೆ ಹಾಕಿಕೊಂಡು ನಡೆದು ಹೋಗುತ್ತಿದ್ದಳು. ಗೊರಬೆಯ ಒಳಗೆ ಅವಳ ಮುಖ ಬೆವರಿಕೊಂಡು, ಅವಳ ಕೆನ್ನೆ, ಮೂಗು, ತುಟಿಯ ಮೇಲೆಲ್ಲಾ ಮಳೆಯ ಹನಿಗಳು ಸಿಡಿದು ಅವಳು ಮಳೆಗೆ ಮುಖ ಓರೆ ಮಾಡಿಕೊಂಡು ಕೆಸರಲ್ಲಿ ಹೆಜ್ಜೆ ಹಾಕುತ್ತಿದ್ದಳು. ಅವಳ ನಡುವಲ್ಲಿ ಸೀರೆಯ ಮೇಲೆ ಬಿಗಿದು ಕಟ್ಟಿರುವ ಗೋಣಿಯ ಚೀಲ, ಅವಳ ಕೈಯ್ಯಲ್ಲಿನ ಕಚ್ಚರೆ ತೆಗೆಯುವ ದಬ್ಬೆ ಕತ್ತಿ, ಅವಳ ಕುಳ್ಳನೆ ಕಾಲಿನ ದಪ್ಪಮೀನಖಂಡಗಳು, ಅತ್ತು ಮುಗಿಸಿದಂತೆ ಕೆಂಪಗೆ ಇರುವ ಅವಳ ಮೂಗು, ಕಾದಾಡಿ ಬಂದಂತೆ ಇರುವ ಅವಳ ಕಣ್ಣುಗಳು – ಪಾತು ಇಷ್ಟು ವರ್ಷವಾದರೂ ಅದೇ ಹಳೆಯ ಮದುಮಗಳಂತೆ ಸೊಂಟ ಬಳುಕಿಸಿಕೊಂಡು, ಗೋಣಿ ಸುತ್ತಿದ್ದ ಅವಳ ಕುಂಡೆ ಅಲ್ಲಾಡುತ್ತಾ ಅವಳು ಕೊಂಚ ಬೆನ್ನು ಬಾಗಿಸಿಕೊಂಡು ಏನೂ ಆಗಿಯೇ ಇಲ್ಲವೆಂಬಂತೆ ಬರೆಇಳಿದು ತಿರುವಲ್ಲಿ ಮರೆಯಾಗಿ ಹೋಗುತ್ತಿದ್ದಳು.ಹಾಗೆಯೇ ಹನಿಯುತ್ತಿರುವ ಮಳೆ, ಹಾಗೇ ಇರುವ ಈ ಮಣ್ಣಿನ ಬರೆ. ಹಾಗೇ ತುಂಬಿಕೊಂಡಿರುವ ಭತ್ತದ ಗದ್ದೆ. ಅದೇ ಇಳಿದುಹೋಗುವ ರಸ್ತೆಯ ತಿರುವು. ರಸ್ತೆಯ ಆಚೆ ಕತ್ತಲು ತುಂಬಿಕೊಂಡಿರುವ ಕಾಫಿಯ ತೋಟ. ತೋಟದ ಆಚೆ ತೀರಿಹೊದವರು ಮಲಗಿರುವ ಮೈದಾನಿಯ ಕಾಡು. ಕಾಡೊಳಗೆ ಕಾಣಿಸುವ ಗೋರಿಯ ಕಲ್ಲುಗಳು. ಕಾಡಿನ ನಡುವೆ ಬಿದ್ದುಹೋಗಿರುವಂತೆ ಕಾಣಿಸುವ ಅರಬಿ ಕಲಿಸುವ ಮದರಸದ ಹಂಚಿನ ಮಾಡು. ಮದರಸದ ಮೇಲೆ ನಿಂತುಕೊಂಡಿರುವ ದೂಪದ ಮರ…
ನಗು ಬಂತು. ಸಣ್ಣದಿರುವಾಗ ಪಾತುವಿನ ಕೊಡೆಯೊಳಗೆ ಸೇರಿಕೊಂಡು ಅರಬಿ ಮದರಸಕ್ಕೆ ಕಾಡು ದಾರಿಯಲ್ಲಿ ನಡೆದು ಹೋಗುವಾಗ ತೋರುಬೆರಳಿಂದ ಗೋರಿಯ ಕಲ್ಲುಗಳನ್ನು ತೋರಿಸಿದಾಗ ಪಾತು ನನ್ನ ತೋರು ಬೆರಳನ್ನು ಕಚ್ಚಿ ರಕ್ತ ಚೀಪಿದ್ದಳು. ತೀರಿಹೋದ ತನ್ನ ತಂದೆ ತಾಯಿ ಮಣ್ಣಲ್ಲಿ ಮಣ್ಣಾಗಿ ಮಲಗಿರುವ ಮೈದಾನಿ ಕಾಡನ್ನು ತೋರುಬೆರಳಿನಿಂದ ತೋರಿಸಬಾರದು ಎಂದು ಬೆನ್ನಿಗೆ ಗುದ್ದಿದ್ದಳುಈಗ ನೋಡಿದರೆ ಏನೂ ಅಲ್ಲದವಳ ಹಾಗೆ ಕೈಯಲ್ಲಿ ಕಾಡು ಕಡಿಯುವ ದಬ್ಬೆ ಕತ್ತಿ ಹಿಡಿದುಕೊಂಡು ಮೈದಾನಿ ಕಾಡಿನ ಕಡೆ ನಡೆದುಹೋಗುತ್ತಿದ್ದಳು.
ಪಾತು ಕಾಫಿ ತೋಟದ ಕಾವಲುಗಾರ ಕೊಂಬಿನ ಮೀಸೆ ಪೋಕರ್‌ಕಾಕನ ಮೊದಲನೇ ಹೆಂಡತಿಯ ಮಗಳು. ಪೋಕರ್‌ಕಾಕ ಬಂದರು ಎಂದರೆ ನಾವು ಹುಡುಗರು ಕಾಫಿಯ ತೋಟದ ಗಿಡಗಳ ಕೆಳಗೆ ಚೆಲ್ಲಾಪಿಲ್ಲಿಯಾಗುತ್ತಿದ್ದೆವು. ಪೋಕರ್‌ಕಾಕ ಮುಖದ ತುಂಬ ಆನೆಯ ಕೊಂಬಿನಂತೆ ಮೀಸೆ ಬೆಳೆಸಿಕೊಂಡು, ಕಣ್ಣುಗಳನ್ನು ಹಾರಿಸಿಕೊಂಡು, ತೋಟದ ಗಿಳಿಗಳನ್ನೂಇಣಚಿಗಳನ್ನೂ ಜೋರು ಮಾಡುತ್ತಾ, ಕಾಫಿ ತೋಟದ ಕಾಲುದಾರಿಗಳಲ್ಲಿ ಗಂಬೂಟಿನ ಹೆಜ್ಜೆ ಸದ್ದು ಮಾಡಿಕೊಂಡು ಕಿತ್ತಳೆ ಕದಿಯಲು ಬರುವ ಹುಡುಗರನ್ನು ಓಡಿಸುತ್ತಾ ನಡೆದಾಡುತ್ತಿದ್ದರು. ತೋಟದೊಳಗೆ ಮಂಗಗಳ ವಾಸನೆ ಬಂದರೆ ಸಾಕು ಮಂಗಗಳನ್ನು ಬೈಯುತ್ತಾ, ಮನುಷ್ಯರ ವಾಸನೆ ಬಂದರೆ ಹುಡುಗರನ್ನು ಬೈಯುತ್ತಾ ಪೋಕರ್‌ಕಾಕ ನಡೆದಾಡುತ್ತಿದ್ದರೆ, ಪಾತು ಹುಡುಗರ ಜೊತೆ ಸೇರಿಕೊಂಡು ತಂದೆ ಪೋಕರ್‌ಕಾಕನ ಗಂಬೂಟಿನ ಗುರುತುಗಳನ್ನು ನೆಲದಲ್ಲಿ ಪತ್ತೆ ಹಿಡಿಯುತ್ತಾ ಗಾಳಿಯಲ್ಲಿ ತಂದೆಯ ಮೈಯ ವಾಸನೆಯನ್ನು ಕಂಡು ಹಿಡಿಯುತ್ತಾ ತಂದೆ ಆ ಕಡೆ ನಡೆಯಲು ಈ ಕಡೆ ನುಸುಳುತ್ತಾ, ತಂದೆ ಈ ಕಡೆ ಬರಲು ಆ ಕಡೆ ಅಡಗುತ್ತಾ ಕಾಡುಕೋಳಿಯಂತೆ ಕಾಫಿ ತೋಟದೊಳಗೆ ನಡೆದಾಡುತ್ತಿದ್ದಳು.
Read More »
Monday October 29, 2007 – 10:32 pm
ಕೆಲವು ವರುಷಗಳ ಹಿಂದೆ world cup football ನಡೆಯುತ್ತಿದ್ದಾಗ ಒಬ್ಬನಿಗೇ ಬೇಸರವಾಗಿ ಎಂದಿನ ಹಾಗೆ ಮಂಗಳೂರಿನ ಬೀದಿಗಳಲ್ಲಿ ತಲೆ ತಗ್ಗಿಸಿಕೊಂಡು ನಡೆಯುತ್ತಿದ್ದೆ. ಹಾಗೇ ನೋಡಿದರೆ ನೆಹರೂ ಮೈದಾನದಲ್ಲಿ football ಆಡುತ್ತಿದ್ದರು. ಜನ ಸೇರಿದ್ದರು
. ಮೈದಾನದ ಕೊನೆಯಲ್ಲಿ ರಾಜಸ್ತಾನದ ದೊಂಬರಾಟದ ಕುಟುಂಬವೊಂದು ಡೇರೆ ಬಿಚ್ಚಿ ನೆಲದಲ್ಲಿ ಹರವಿಕೊಂಡು ಆಕಾಶವನ್ನು ನೋಡುತ್ತಾ ಕೂತಿತ್ತು. ಹೆಂಗಸೊಬ್ಬಳು ಬಾಯಿ ಬಡಿಯುತ್ತಾ ಅಳುತ್ತಿದ್ದಳು .ಏಕೆಂದರೆ ಆಕೆಯ ಆರು ವರ್ಷದ ಮಗಳು ಕಾಣೆಯಾಗಿದ್ದಳು. ಕಾಣೆಯಾದ ಆ ಬಾಲಕಿಯ ಹೆಸರು ಶನ್ಯಾಶಿ. ಇದ್ದಕ್ಕಿದ್ದಂತೆಯೇ ಆಕೆ ಜನಜಂಗುಳಿಯಲ್ಲಿ ಕಾಣೆಯಾಗಿದ್ದಳು. ಆಕೆಯಿಲ್ಲದೆಯೇ ತಿರುಗಿ ಹೋಗುವುದು ಹೇಗೆಂದು ಆ ದೊಂಬರಾಟದ ಕುಟುಂಬಗವೇ ಅಲವತ್ತುಕೊಂಡು ಕೂತಿತ್ತು.
ಮಂಗಳೂರಿನ ನನ್ನ ಗೆಳೆಯರು, ನಾನು ಮತ್ತು ನನ್ನ ಹೆಂಡತಿ ಸುಮಾರು ಇಪ್ಪತ್ತು ದಿನಗಳ ಕಾಲ ಕಾಣೆಯಾದ ಈ ಹುಡುಗಿಯ ಜಾಡನ್ನು ನೋಡುತ್ತಾ ಒಂದು ಪ್ರಪಂಚವನ್ನೇ ಕಂಡೆವು. ಮಗುವನ್ನು ಬೀದಿಸೂಳೆಯರು ಕದ್ದು ಮಾರಿದ್ದಾರೆಂದು ಅವರ ಹಿಂದೆ, ಭಿಕ್ಷುಕರು ಸಾಕುತ್ತಿದ್ದಾರೆಂದು ಅವರ ಹಿಂದೆ, ರೈಲ್ವೆ ನಿಲ್ದಾಣದಲ್ಲಿ ಗಾಂಜಾ ಮಾರುವ ಮಲಯಾಳೀ ಕುಂಟನೊಬ್ಬನ ಹಿಂದೆ,ಪೊಲೀಸರ ಹಿಂದೆ, ಪತ್ರಕರ್ತರ ಹಿಂದೆ ಹೀಗೇ ತಿರುಗಾಡಿದೆವು.
ಇಪ್ಪತ್ತು ದಿನಗಳು ಕಳೆದು ಬೀದಿ ಗುಡಿಸುವ ದಲಿತ ಹೆಂಗಸೊಬ್ಬಳ ಮನೆಯಲ್ಲಿ ಶನ್ಯಾಶಿ ದೊರಕಿದಳು. ಮಗು ದೊರಕಿದ ರಾತ್ರಿ ಬೆಳದಿಂಗಳಲ್ಲಿ ಆ ದೊಂಬರಾಟದ ತಂಡ ನಮ್ಮ ಸುತ್ತು ಸೇರಿಕೊಂಡು ಹಾಡಿಕೊಂಡು ಕುಣಿದುಕೊಂಡು ನಮಗೆಲ್ಲ ನಾವು ಇರುವುದು ಯಾವ ಕಾಲವೋ ಎಂದು ಅನಿಸಲಿಕ್ಕೆ ಹತ್ತಿತ್ತು.
ಈ ಹುಡುಕಾಟದ ಸಮಯದಲ್ಲಿ ನಮಗೆ ಅಬ್ದುಲ್ ರಜಾಕ್ ಎಂಬ ಭಿಕ್ಷುಕನೂ, ಮಾದೇವಿ ಎಂಬ ಆತನ ಹೆಂಡತಿ ಭಿಕ್ಷುಕಿಯೂ ಪರಿಚಯವಾಗಿದ್ದರು. ಅಬ್ದುಲ್ ರಜಾಕ್ ಎಂಬುವನು ಹರಪನಹಳ್ಳಿಯಲ್ಲಿ ಬಿರಿಯಾನಿ ಹೋಟೆಲಲ್ಲಿ ಕೆಲಸಕ್ಕಿದ್ದನಂತೆ. ಮಾದೇವಿ ಬೆಸ್ತರ ಹೆಂಗಸು. ಇಬ್ಬರೂ ನಡು ವಯಸ್ಸಲ್ಲಿ ಜೊತೆಗೆ ಜೀವಿಸಲು ತೊಡಗಿದರು. ಅಷ್ಟರಲ್ಲಿ ಈ ರಜಾಕ್‌ಗೆ ಒಲೆಯ ಬೆಂಕಿ ಅಲರ್ಜಿಯಾಗಿ ಬಿರಿಯಾನಿ ಕೆಲಸ ಮಾಡಲಾಗದೆ ಅವರಿಬ್ಬರು ಊರೂರು ಭಿಕ್ಷೆ ಬೇಡುತ್ತಾ ತಿರುಗುತ್ತಿದ್ದರು. ಮಂಗಳೂರಿಗೆ ಬಂದವರು ಮಳೆಯಲ್ಲಿ ಸಿಕ್ಕಿಹಾಕಿಕೊಂಡು, ನಂತರ ದೊಂಬರಾಟದವರ ಹುಡುಗಿಯನ್ನು ಹುಡುಕುವ ಕೆಲಸದಲ್ಲಿ ನಮ್ಮ ಜೊತೆ ಸೇರಿಕೊಂಡು ನಮಗೂ ಗೆಳೆಯರಾಗಿಬಿಟ್ಟಿದ್ದರು.
ಆ ಮಗು ಸಿಕ್ಕಿದ ಮೇಲೆ ಅವರೂ ಕಾಣೆಯಾಗಿಬಿಟ್ಟರು. ನಾನೀಗ ಮಂಗಳೂರಲ್ಲಿ ಒಂದೊಂದು ಸಲ ಈ ಅಬ್ದುಲ್ ರಜಾಕ್ ಎಂಬ ಭಿಕ್ಷುಕನನ್ನೂ ಅವನ ಹೆಂಡತಿ ಮಾದೇವಿಯನ್ನೂ ಹುಡುಕುತ್ತಿರುತ್ತೇನೆ.
ಆ ದೊಂಬರಾಟದ ಕುಟುಂಬದ ಹಿರಿಯ ರಾಮೇಶ್ವರ್ ಎಂಬಾತ ಕಳೆದ ವಾರ ರಾಜಸ್ತಾನದ ಆಲ್ವಾರ್‌ನಿಂದ ಫೋನಲ್ಲಿ ಮಾತನಾಡಿದ. ಕಳೆದು ಹೋದ ಬಾಲಕಿ ಸಿಕ್ಕಿದ ಕತೆ ಅವನ ಊರಲ್ಲೆಲ್ಲಾ ದೊಡ್ಡ ಸಂಗತಿಯಾಗಿದೆಯೆಂದೂ ನಾವೆಲ್ಲ ಅವನ ಊರಿಗೆ ಹೋಗಬೇಕೆಂದೂ ಹೋದರೆ ಆತ ಕಿಶನ್‌ಗಡ್ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿರುತ್ತಾನೆಂದೂ ಹೇಳುತ್ತಿದ್ದ.
ನಾನು ಸುಮ್ಮನೇ ಕಾಲದಲ್ಲಿ ಕಳೆದುಹೋಗಿದ್ದೆ.
Wednesday October 24, 2007 – 6:55 pm

ಕುವೆಂಪು ಅವರಿಗೂ ಸೀನಿಯರ್ ಆಗಿದ್ದ ಹಾಸನ ಅಠಾಣಾ ರಾಮಣ್ಣನವರು ೧೦೫ ವರ್ಷ ಬದುಕಿ ನಿನ್ನೆ ರಾತ್ರಿ ಮೈಸೂರಿನಲ್ಲಿ ತೀರಿಹೋದರು.

ಅವರ ಕುರಿತು ಈ ಹಿಂದೆ ಬರೆದ ಬರಹಕ್ಕಾಗಿ ಇಲ್ಲಿ ಓದಿ
Monday October 22, 2007 – 10:17 pm
ಮಂಗಳೂರಲ್ಲಿ ಹಳೆಯ ಮುಖ್ಯಮಂತ್ರಿಯೊಬ್ಬರ ಇನ್ನೊಂದು ಕಾದಂಬರಿಯ ಬಿಡುಗಡೆಯಿತ್ತು. ಕಾದಂಬರಿ ಬರೆದು ಮುಗಿಸಿದ ಮಾಜಿ ಮುಖ್ಯಮಂತ್ರಿ ಖುಷಿಯಿಂದ ಕಂಗೊಳಿಸುತ್ತಿದ್ದರು. ಕನ್ನಡ ಸಾಹಿತ್ಯಕ್ಕೆ ನಿಮ್ಮ ಮುಂದಿನ ಕೊಡುಗೆ ಏನು ಎಂದು ಕೇಳಿದರೆ ಒಂದು ಮಹಾಕಾವ್ಯಕ್ಕೆ ಸ್ಕೆಚ್ ಹಾಕಿಕೊಂಡಿರುವೆ ಎಂದು ಹೇಳಿದರು. ‘ಮಹಾಕಾವ್ಯ ಅಂದರೆ ಹದಿನೆಂಟು ಬಗೆಯ ವರ್ಣನೆಗಳು ಇರುತ್ತದಂತಲ್ಲಾ ಅದೆಲ್ಲವೂ ಇರುತ್ತದಾ?’ ಎಂದು ಕೇಳಿದೆ. ‘ಎಲ್ಲವೂ ಸಿದ್ಧವಾಗಿದೆ’ ಎಂದು ಹೇಳಿದರು. ‘ಇದಕ್ಕೆಲ್ಲ ಸಂಸ್ಕೃತ, ಪಾಲಿ ಇತ್ಯಾದಿ ಓದಿಕೊಂಡಿರಬೇಕಲ್ಲ’ ಎಂದು ಕೇಳಿದೆ. ‘ಎಲ್ಲವೂ ಆಗಿದೆ’ ಎಂದು ಹೇಳಿದರು. ‘ಹಾಗಾದರೆ ನಾವೆಲ್ಲ ಕನ್ನಡಕ್ಕೆ ಬರಲಿರುವ ಇನ್ನೊಂದು ಮಹಾಕಾವ್ಯಕ್ಕಾಗಿ ಕಾದುಕೊಂಡಿರುತ್ತೇವೆ’ ಎಂದೆ. ಅವರು ನಗುಮುಖದಿಂದ ಕೈಕುಲುಕಿ ಎದ್ದು ತಮ್ಮ ಹತ್ತಾರು ಹಿಂಬಾಲಕರೊಡನೆ ಹೊರಟುಹೋದರು.
ಆಮೇಲೆ ನಾನು ತಲೆಗೆ ಏಟುಬಿದ್ದವನಂತೆ ಮಂಗಳೂರಿನ ಬೀದಿಗಳಲ್ಲಿ ಬೈಕು ಓಡಿಸುತ್ತಿದ್ದೆ. ಕೊಂಚ ಹೊತ್ತಲ್ಲಿ ಏನೇನೋ ನೋಡಿದೆ.
ಆದಿನ ರಂಜಾನ್ ಹಬ್ಬವಾಗಿತ್ತು. ಊರಿಗೆ ಹೋಗಿ ತಾಯಿಯನ್ನು ನೋಡಿರಲಿಲ್ಲ. ಗುರುಪುರ ನದಿಯ ತೀರಕ್ಕೆ ಹೋಗಿ ದೋಣಿಯಲ್ಲಿ ನದಿ ದಾಟುತ್ತಿರುವ ಗಂಡಸರನ್ನು ಹೆಂಗಸರನ್ನು ನೋಡುತ್ತ ಕುಳಿತೆ. ಹೆಂಗಸರು ಬುರುಕ ಹಾಕಿಕೊಂಡು, ಗಂಡಸರು ಮಕ್ಕಳು ಅತ್ತರು ಪೂಸಿಕೊಂಡು ಹೊಸಬಟ್ಟೆ ಹಾಕಿಕೊಂಡು ದೋಣಿಯಲ್ಲಿ ಕುಳಿತು ಹೋಗಿ ಬರುತ್ತಿದ್ದರು.
ಸಂಕಟಪಡಬಾರದು ಎಂದು ಎಲ್ಲರನ್ನೂ ನಗುಮುಖ ಮಾಡಿಕೊಂಡು ನೋಡಿಕೊಂಡು ಕುಳಿತೆ. ಇವನು ಯಾರೋ ಹೆಂಗಸರನ್ನು ನೋಡುವವನು ಎಂದು ಗಂಡಸರು ದುರುಗುಟ್ಟಿಕೊಂಡು ನೋಡುತ್ತಿದ್ದರು. ಅಲ್ಲಿ ನಿಲ್ಲಲಾಗದ ಮತ್ತೆ ತಿರುಗಾಡಲು ತೊಡಗಿದೆ. Read More »
Monday October 15, 2007 – 10:28 pm
ಅವಳು

ಚಂದವಿದ್ದಳು ಗೆಳೆಯ ಅವಳು
ಒಳ್ಳೆ ಮಜಬೂತು ಕುದುರೆ.
ಹಾರಂಗಿ ಅಣೆಕಟ್ಟು ಕಟ್ಟಿಟ್ಟ ನೀರು
ಬಿಟ್ಟಾಗ ನಗುವ ನಕ್ಷತ್ರ ಮೀನು.
ಅವಳು ಕೂದಲು ಬಿಚ್ಚಿಟ್ಟು ತುಟಿಯಲ್ಲಿ
ಕಚ್ಚಿ ಹೇರುಪಿನ್ನು, ನಗುವ ಹಾಗೆ
ಗಲ್ಲದಲ್ಲೊಂದು ಗುಳಿಯಿತ್ತು ಗೆಳೆಯ,
ತುಂಬು ಕೊರಳಿನ ತುಂಬ ಕಾಡು ಹಾಡು.
ಅವಳ ತಟ್ಟನೆಯ ತಿರುವು ತಿರುವುತ್ತ
ಹರಿವ ಕಪ್ಪು ಟಾರಿನ ದಾರಿ ತಗ್ಗು ಕೆಳಗೆ
ಅಲ್ಲಿ ಏಲಕ್ಕಿ ಮಲೆ ಕೆಂಪು ಕಾಫಿಯ ತೋಟ
ಹಸಿರು ಗಾಳಿಗೆ ಉಲಿವ ಬೇಲಿಯೊಳಗೆ
ಚೀಲ ಬುತ್ತಿಯ ತೋಳೆ ಬರಿ ಕಿತ್ತಳೆ.
Friday October 5, 2007 – 10:45 pm

ಇವತ್ತು ಇಲ್ಲೇ ತುರಾದ ಹತ್ತಿರದ ಒಂದು ಹಳ್ಳಿಗೆ ಹೋಗಿದ್ದೆ. ಯಾರೋ ಒಬ್ಬರು ‘ಬನ್ನೀ, ವಿಶ್ವ ಸ್ತನ್ಯಪಾನ ವಾರಾಚರಣೆ ಆಚರಿಸುತ್ತಿದ್ದೀವಿ’ ಅಂತ ಕರೆದಿದ್ದರು. ದಾರಿಯೇನೋ ತುಂಬಾ ಚೆನ್ನಾಗಿತ್ತು. ಮಳೆ ನಿಂತು ಬಿಸಿಲು ಚಾಚಿಕೊಂಡು ನೆಲದಿಂದ ಮೇಲಕ್ಕೆ ಮೋಡಗಳು ಎದ್ದು ನಿಂತು ಹಸಿರು ಬೆಟ್ಟಗಳು ಮೇಲೆ ಹರಡಿಕೊಂಡು ಎಲ್ಲಾ ಕನಸಿನ ಹಾಗೆ ಕಾಣುತ್ತಿತ್ತು. ಹಳ್ಳಿಗೆ ಹೋಗಿ ನೋಡಿದರೆ ಒಂದು ಸಣ್ಣ ಕೋಣೆಯ ಒಳಗೆ ಹತ್ತಾರು ಗ್ರಾಮಗಳ ತಾಯಂದಿರನ್ನು ಕೂರಿಸಿಕೊಂಡು ಒಬ್ಬ ಅಧಿಕಾರಿ ಇಂಗ್ಲೀಷಿನಲ್ಲಿ ಭಾಷಣ ಹೊಡೆಯುತ್ತಿದ್ದ. ಮಗುವಿಗೆ ಎದೆ ಹಾಲು ಉಣ್ಣಿಸುವುದು ಎಷ್ಟು ಆರೋಗ್ಯಕಾರಿಮತ್ತು ಎಷ್ಟು ಮಿತವ್ಯಯಕಾರಿಅಂತ ವಿವರಿಸುತ್ತಿದ್ದ. ಅರ್ಥವಾಗದಿದ್ದರೂ ತಾಯಂದಿರು ತಲೆಯಾಡಿಸುತ್ತಿದ್ದರು.
ನನಗೆ ಯಾಕೋ ತಲೆನೋವು ಶುರುವಾಗಿತ್ತು. ಆ ತಲೆನೋವು ಇನ್ನೂ ಹೋಗಿಲ್ಲ. ಇಲ್ಲಿ ತಾಯಂದಿರು ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ ಅಂದರೆ ಗಂಡಂದಿರನ್ನು ಕೇರೇ ಮಾಡುವುದಿಲ್ಲ. ಹಗಲಿಡೀ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಇರುಳಿಡೀ ಎದೆಗೆ ಒತ್ತಿಕೊಂಡು ನಮ್ಮನ್ನು ಹೇಳುವವರು ಕೇಳುವವರು ಯಾರು ಇಲ್ಲ ಎಂದು ಗಂಡಸೊಬ್ಬ ಮೊನ್ನೆ ಗೋಳು ಹೇಳಿಕೊಳ್ಳುತ್ತಿದ್ದ. Read More »
Saturday September 29, 2007 – 11:54 pm
[ಮೌಲಾನಾ ಜಲಾಲುದ್ದೀನ್ ರೂಮಿ ಬದುಕಿದ್ದರೆ ಅವರಿಗೆ ನಾಳೆ ಭಾನುವಾರಕ್ಕೆ ಎಂಟುನೂರು ವರ್ಷಗಳಾಗುತ್ತಿತ್ತು.ರೂಮಿಯ ಕುರಿತು, ಅವರ ಹುಟ್ಟೂರಿನ ಕುರಿತು, ಈಗ ಆ ಊರು ಹೇಗಿದೆ ಎಂಬುದರ ಕುರಿತು ನೀವು ಬಿ.ಬಿ.ಸಿ ಯ ಈ ತಾಣವನ್ನು ನೋಡಬಹುದು .]
Read More »
Wednesday September 26, 2007 – 11:47 pm
ಅಲ್ಲಿ ನಿಮ್ಮನ್ನೆಲ್ಲ ನೋಡಿ ತಿರುಗಿ ಬಂದು ಇಲ್ಲಿ ಷಿಲ್ಲಾಂಗ್ ಎಂಬ ನನ್ನ ಕನಸಿನ ಲೋಕದಲ್ಲಿ ಒಬ್ಬನೇ ಕುಳಿತು ಕೊಂಡಿದ್ದೇನೆ. ಹೂಬಿಟ್ಟಿದ್ದ ಮರಗಳಲ್ಲೆಲ್ಲಾ ಈಗ ಹಣ್ಣುಗಳು ತುಂಬಿಕೊಂಡಿವೆ. ಕಿತ್ತಳೆ ಮಾರುತ್ತಿದ್ದ ಹುಡುಗಿಯರೆಲ್ಲಾ ಈಗ ಎಂತ ಎಂತಹದೋ ಹಣ್ಣುಗಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಕುಳಿತಿದ್ದಾರೆ. ಮಳೆಬಿಟ್ಟು ಮತ್ತೆ ಮಳೆ ಸುರಿಯುತ್ತಿದೆ. ಇಂದು ಸಂಜೆ ಮಳೆಯ ನಡುವೆ ದಾರಿ ಮಾಡಿಕೊಂಡು ಎಲ್ಲ ಕಡೆ ಸುತ್ತಾಡಿ ಹಲವು ಬಗೆಯ ಹಣ್ಣುಗಳನ್ನು ಕೊಂಡು ಒಂದೊಂದನ್ನೇ ತಿನ್ನುತ್ತಾ ಕುಳಿತೆ. ಒಂದು ಹಣ್ಣಿನ ಹೆಸರು ಮಾತ್ರ ಗೊತ್ತಾಯಿತು. ಅದು ‘ಪ್ಲಂ’ ಹಣ್ಣು.
ಬಾಕಿಯೆಲ್ಲಾ ಹೆಸರೇ ಗೊತ್ತಿಲ್ಲದ ಹಣ್ಣುಗಳು ನನ್ನ ಬಾಯಿಯಲ್ಲಿ. ನಗುಬಂತು. ಮತ್ತು ನೀವು ಬರೆದ ಪತ್ರಗಳ ಸಾಲುಗಳು ನೆನಪಾಯಿತು. “ನೀನು ಬರೆಯುವಾಗ ಹುಷಾರಿಗಿರಬೇಕು, ತುಂಬಾ ಜನ ನಿನ್ನ ಪತ್ರಗಳನ್ನು ಓದುತ್ತಾರೆ” ಅಂತ ಬರೆದಿದ್ದೀರಿ.
. ಇಲ್ಲಿ ನನಗೆ ಯಾರೂ ಇಲ್ಲ. ಇರುವುದು ನಿಮಗೆ ಪತ್ರ ಬರೆಯುವ ಖುಷಿ. ಇನ್ನೊಂದು ಎಲ್ಲಿ ಬೇಕೆಂದರಲ್ಲಿ ಎಗ್ಗಿಲ್ಲದೆ ಓಡಾಡುವ ಆನಂದ. ಇರುವ ಒಬ್ಬಳು ಹೆಂಡತಿಯನ್ನೂ ಯಾಕೋ ಕನ್ನಡ ನಾಡಿನಲ್ಲೇ ಬಿಟ್ಟು ಬಂದಿರುವೆ. ಬಂದು ಇಲ್ಲಿ ನೋಡಿದರೆ ಮೊದಲು ಚೆನ್ನಾಗಿ ಮಾತನಾಡುತ್ತಿದ್ದ ನಗುತ್ತಿದ್ದ ಹುಡುಗಿಯರೂ ಬಿಗುಮಾನದಿಂದ ಓಡಾಡುತ್ತಿದ್ದಾರೆ. ಯಾಕೋ ಒಂಟಿ ಗಂಡಸಿನ ಕುರಿತು ಈ ಊರಿನವರಿಗೆ ಸಲ್ಲದ ಅನುಮಾನ ಇರುವಂತಿದೆ. Read More »
Saturday September 22, 2007 – 12:10 am
ಈ ಹೊತ್ತು ಒಬ್ಬಳು ಸುಂದರಿಯ ಕುರಿತು ಯೋಚಿಸುತ್ತಾ ಕುಳಿತಿರುವೆ. ನಾಳೆ ಅವಳ ಹುಟ್ಟು ಹಬ್ಬ. ಹಾಗಾಗಿ ಸಲೀಸಾಗಿ ನಿಮಗೆ ಬರೆಯಲೂ ಆಗುತ್ತಿಲ್ಲ. ಒಂದು ಕವಿತೆ ಬರೆಯಲಾ ಅನಿಸುತ್ತಿದೆ. ಹೋಗಲಿ ಬಿಡಿ ಅದೂ ಬೇಡ. ಸುಮ್ಮನೇ ಬರೆಯುತ್ತಾ ಸಲೀಸಾಗುತ್ತಾ ಹೋಗುತ್ತೇನೆ.
ಆಕೆಯನ್ನು ನಾನೂ ಕಂಡದ್ದು ಎರಡೇ ಸಲ. ಅದೂ ಸ್ವೀಡನ್ ನ ಸ್ಟಾಕ್ ಹೋಂ ಎಂಬ ಮಹಾನಗರದಲ್ಲಿ . ಎರಡೂ ಬಾರಿಯೂ ಅವಳು ಎಡಕಣ್ಣಿನ ಕೆಳಗೆ ಬೆಳ್ಳಿಯ ಬಣ್ಣದಿಂದ ನಕ್ಷತ್ರಗಳನ್ನು ಬರೆದುಕೊಂಡಿದ್ದಳು. ಅವಳ ಮೂಗಲ್ಲಿ ನತ್ತು ಇದ್ದಿರಬಹುದ ಎಂದು ಈಗ ನನಗೆ ಅನ್ನಿಸುತ್ತಿದೆ. ಒಂದು ಸಲ ಆಕೆ ನನ್ನನ್ನು ‘ಲೋಟಸ್’ ಎಂಬ ಪಬ್ ನಲ್ಲಿ ಕೂರಿಸಿ ಮಾತನಾಡಿದಳು. ಇನ್ನೊಂದು ಸಲ ಸ್ಟಾಕ್ ಹೋಮ್ ನ ಅರಮನೆಯ ಪಕ್ಕದ ಬೀದಿಯೊಂದರಲ್ಲಿ ನಡೆಸಿಕೊಂಡು ಹೋಗಿ ಆಮೇಲೆ ರೈಲು ಹತ್ತಿಸಿ ಮರೆಯಾದಳು.ಆಕೆ ಆ ನಗರದಲ್ಲಿ ಒಂಟಿ ಹುಡುಗಿ. ಆಕೆಯ ತಂದೆ ಪೋಲೆಂಡ್ ನಿಂದ ವಸಲೆ ಬಂದ ಯಹೂದಿ. ತಾಯಿ ಸ್ಕಾಂಡಿನೇವಿಯನ್ ಸುಂದರಿ. ತಂದೆಯ ಕಡೆಯವರೆಲ್ಲಾ ಹಿಟ್ಲರನ ಮಾರಾಣಹೋಮದ ಬೆಂಕಿಯಲ್ಲಿ ಬೆಂದು ಹೋದವರು.ಈ ಅಂದದ ಸುಂದರಿ ಹುಡುಗಿ ನನ್ನ ಜೊತೆನ ಮಾತನಾಡುವಾಗ ಕಂಪಿಸುತ್ತಾ ಅವಳ ಕೈಯಲ್ಲಿದ್ದ ಕಾಫಿಯ ಬಟ್ಟಲು ಅಲುಗಿ ಮೈಯೆಲ್ಲಾ ಚೆಲ್ಲಿ ಆಮೇಲೆ ಸ್ಸಾರಿ ಅಂತ ನಕ್ಕಿದ್ದಳು. ನಾನು ಆಕೆಯ ಕೈಯಲ್ಲಿ ಕನ್ನಡದ ನನ್ನ ಕತೆಯ ಪುಸ್ತಕವೊಂದನ್ನು ಕೊಟ್ಟು ‘ಪ್ರೀತಿಯಿಂದ’ ಅಂತ ಸಹಿ ಮಾಡಿ ಕಂಪಿಸುತ್ತಾ ಆ ಮಹಾ ಆಕಾಶದ ಕೆಳಗೆ ಒಬ್ಬನೇ ಕಣ್ಣು ತುಂಬಿಕೊಂಡು ಬಂದಿದ್ದೆ.ಯಾಕೋಈಗ ಅವಳ ನೆನಪಾಗುತ್ತಿದೆ. ಸುಮ್ಮನೇ ಕುಳಿತು ರಿಲ್ಕ್ ಕವಿಯನ್ನು ಅನುವಾದಿಸುತ್ತಿರುವೆ. Read More »
Monday September 17, 2007 – 9:47 pm
ಮತ್ತೇ ಬರುವೆನು ಹೆಣ್ಣೇ..
ಮತ್ತೆ ಬರುವೆನು ಹೆಣ್ಣೆ ಮರಳಿ ನಿನ್ನಲ್ಲಿಗೆನಿನ್ನ ಬೆಳ್ಳಿ ಉಡಿಪಟ್ಟ ಎದೆ ತುಂಬಿತುಳುಕುವ ಕುಪ್ಪಾಯ, ಮುಂಡು ತುಣಿಯೊಳಗುಕ್ಕುವ ಕಾವ್ಯಕ್ಕೆ ರೇಕು ತುಂಬಿಸಲಿಕ್ಕೆ. Read More »
Monday September 10, 2007 – 11:09 pm
ಮೇಘಾಲಯ ಎಂಬ ಈ ಪುಟ್ಟ ರಾಜ್ಯದ ರಾಜಕೀಯ ಇಡೀ-ವಾರ ನನ್ನ ತಲೆಯನ್ನು ತಿಂದು ಹಾಕಿಬಿಟ್ಟಿತು. ಮೂವರು ಮಂತ್ರಿಗಳು ಹೇಳದೆ ಕೇಳದೆ ಮುಖ್ಯಮಂತ್ರಿಯನ್ನು ಬಿಟ್ಟು ಎದುರುಪಾರ್ಟಿಯನ್ನು ಸೇರಿಕೊಂಡು ಬಿಟ್ಟಿದ್ದಾರೆ. ಎಪ್ಪತ್ತೇಳು ವರ್ಷದ ಮುಖ್ಯಮಂತ್ರಿ ಬಿದ್ದು ಹೋಗುವ ಸ್ಥಿತಿಯಲ್ಲಿದ್ದಾರೆ. ನಾನು ‘ಏನು ಕತೆ ನಿಮ್ಮ ಪರಿಸ್ಥಿತಿ ವೀಕ್ ಆಗಿ ಬಿಟ್ಟಿದೆಯಲ್ಲ’ ಅಂತ ಕೆಣಕಿದೆ. ಅವರು ತಟ್ಟನೆ ಶರಟಿನ ತೋಳು ಮಡಚಿ ತೋಳು ಬಲ ತೋರಿಸುತ್ತಾ ‘ಏನು ವೀಕ್ ಆಗಿದ್ದೇನಾ ನೋಡು’ ಅಂತ ನನ್ನ ಹೊಟ್ಟೆಗೆ ಪಂಚ್ ಮಾಡಲು ಬಂದರು. ನಾನು ನಗುತ್ತಾ ಬದಿಗೆ ಸೇರಿದೆ.
ಇಲ್ಲಿನ ಜನ ಹೀಗೆಯೇ. ಎಂತಹ ಅತಂತ್ರ ಸ್ಥಿತಿಯಲ್ಲೂ, ಎಂತಹ ಮುಖ್ಯ ಮಂತ್ರಿಯಾದರೂ ನಗು ಮತ್ತು ಚೇಷ್ಟೆ ಬಿಡುವುದಿಲ್ಲ. ಇವರೆಲ್ಲರ ಹಿಂದೆ ತಿರುಗಾಡಿ ನನಗಂತೂ ತಲೆಕೆಟ್ಟು ಹೋಗಿತ್ತು. ಬಾಯಿತೆಗೆದರೆ ಮಂತ್ರಿಗಳ ಹೆಸರು. ತಲೆಯೊಳಗೆ ಎಂ.ಎಲ್.ಎಗಳು ಯಾವ ಸಹವಾಸವೂ ಬೇಡ ಅಂತ ಈವತ್ತು ಮಧ್ಯಾಹ್ನ ಬಾಗಿಲು ಹಾಕಿಕೊಂಡು ಕಿಟಕಿ ತೆಗೆದು ಬಿಸಿಲನ್ನು ಒಳಗೆ ಬಿಟ್ಟುಕೊಂಡು ಸುಮ್ಮನೆ ಕುಳಿತಿದ್ದೆ. ಎಂತಹ ಒಳ್ಳೆಯ ಬಿಸಿಲು! ಮಟಮಟಮಧ್ಯಾಹ್ನದಲ್ಲೂ ಮೈಮೇಲೆ ಹರಡಿಕೊಂಡು ಕೂರಬಹುದು. ಹಾಗೇ ತುಂಬಾ ಹೊತ್ತು ಕೂತಿದ್ದೆ. ಆಮೇಲೆ ಮಳೆ ಬರಲು ತೊಡಗಿತು.ಹೋಗಲಿ ಬಿಡಿ ಪ್ರತಿವಾರ ಮೋಡ ಬಿಸಿಲು ಮಳೆ ಹೂವು ಅಂತ ಬರೆದು ನಾನೂ ನಿಮ್ಮ ತಲೆ ಹಾಳು ಮಾಡುತ್ತಿದ್ದೇನೆ. ಶಿವಮೊಗ್ಗದ ನಿಮ್ಮ ಊರಿನ ಹತ್ತಿರ ಹನುಮಂತಪ್ಪ ಅಂತ ನನ್ನ ಸಖನೊಬ್ಬನಿದ್ದಾನೆ. ಈ ಸಲ ಭತ್ತ ಮಾರಿ ಆ ಹಣದಲ್ಲಿ ವಿಮಾನ ಹತ್ತಿ ನಿನ್ನ ಹತ್ತಿರ ಬರುತ್ತೇನೆ ಅಂದವನು ಪತ್ತೆಯೇ ಇಲ್ಲ. ನನಗೆ ಯಾಕೋ ಅವನ ಭತ್ತ ಏನಾಯಿತು ಅಂತ ಚಿಂತೆ ಶುರುವಾಗಿದೆ.ಆಮೇಲೆ ಇನ್ನೊಂದು ವಿಷಯ. ನೀವು ನನ್ನನ್ನು ಕಳೆದವಾರ ‘ಸಾಬಿ’ ಅಂತ ಬರೆದಿದ್ದೀರಂತೆ. Read More »
Thursday September 6, 2007 – 10:52 pm
ಅಷ್ಟೊಂದು ಅರಿತೆ
ಅರಿತೆ
ಅಷ್ಟೊಂದು
ಪಡೆದವನಿಂದ
ಇನ್ನು ನನ್ನ ನಾ
ಅರಿಯೆ
ಕ್ರೈಸ್ತ, ಹಿಂದು,ಮುಸಲ್ಮಾನ
ಬೌದ್ಧ, ಯಹೂದ್ಯ ಏನೆಂದೂ.
ಸತ್ಯ ಅಷ್ಟೊಂದು
ಹಂಚಿಕೊಡಿತು ಒಳಗೆ
ಇನ್ನು ಕರೆಯಲಾರೆ ಎನ್ನ
ಗಂಡೆಂದು,ಹೆಣ್ಣೆಂದು,ಜಿನ್ನೆಂದು
ಅಥವಾ ಬರಿಯ
ಆತ್ಮವೆಂದೂ.
ಪ್ರೇಮವೆಂಬುದು ಅಷ್ಟೊಂದು
ಹಚ್ಚಿಕೊಂಡಿದೆ ಹಫೀಝನನ್ನು
ಅದು ಬೂದಿಯಾಗಿದೆ ನಾನು
ನಿರ್ಬಂಧಿ
ಸಕಲ ತತ್ವಗಳಿಂದ,ಪ್ರತಿಮೆಗಳಿಂದ
ಇದುವರೆಗೆ ಅರಿತದ್ದರಿಂದ.
Wednesday September 5, 2007 – 7:39 pm
ಯಾಕೋ ಸಣ್ಣಗೆ ನಗುಬರುತ್ತಿದೆ. ನಾನು ಪ್ರತಿವಾರವೂ ಕುಡುಮಿಯ ಹಾಗೆ ಹಠ ಹಿಡಿದು ನಿಮಗೆ ಪತ್ರಬರೆಯುವುದು. ಕೆಲವರು ಗೆಳೆಯರು ಇನ್ನು ಈತ ಕತೆಯೂ ಬರೆಯಲಾರ ಕವಿತೆಯೂ ಬರೆಯಲಾರ ಬರೀ ಪತ್ರ ಬರೆದು ಹಾಳಾಗಿ ಹೋಗುತ್ತಿರುವ, ಎಂದು ವಿನಾಕಾರಣ ಹಲುಬುವುದು,- ಎಲ್ಲವನ್ನೂ ಯೋಚಿಸಿ ಯೋಚಿಸಿ ಈವತ್ತು ಚಪಾತಿ ಲಟ್ಟಿಸಿತ್ತಾ ಕೂತಿದ್ದೆ. ಆಗಲೂ ನಗುಬರುತ್ತಿತ್ತು. ಚಪಾತಿ ನಾನು ಮಾಡಿದರೂ ಗುಂಡಗೆ ಆಗುತ್ತದೆ. ನಾನು ಮಾಡಿದ ದೋಸೆಯಲ್ಲೂ ತೂತುಗಳಿರುತ್ತದೆ ಎಂದೆಲ್ಲಾ ಗುನುಗುತ್ತಿದ್ದೆ.ಊರಿಗೆ ಹೋಗಿದ್ದಾಗ ನನ್ನ ಉಮ್ಮನಿಗೆ ಇಲ್ಲಿ ಷಿಲ್ಲಾಂಗಿನಲ್ಲಿ ಒಳ್ಳೆ ಒಳ್ಳೆಯ ಬಾತುಕೋಳಿಗಳಿವೆ ಅಂತ ಹೇಳಿಬಿಟ್ಟಿದ್ದೆ. ಆಕೆ ಬೇರೆ ಏನೂ ಕೇಳದವಳು `ಅಯ್ಯೋ ನೀನು ಬರುವಾಗ ಬಾತುಕೋಳಿಯ ಮೊಟ್ಟೆಗಳನ್ನು ತರಬೇಕಾಗಿತ್ತು. ಇಲ್ಲಿ ಕಾವು ಕೊಟ್ಟು ಮರಿ ಮಾಡುತ್ತಿದ್ದೆ’ ಅಂತ ಹಂಬಲಿಸಿದ್ದಳು.ತುಂಬಾ ವರ್ಷಗಳ ಹಿಂದೆ ನನ್ನ ಬಾಪಾ ಎಲ್ಲಿಂದಲೋ ಟರ್ಕಿ ಕೋಳಿಯ ಮೊಟ್ಟೆಗಳನ್ನು ಹೀಗೇ ತಂದುಕೊಟ್ಟಿದ್ದರು. ಉಮ್ಮ ಅವುಗಳನ್ನು ಕಾವಿಗೆ ಬಂದ ಊರು ಕೋಳಿಯ ಹೊಟ್ಟೆಯ ಕೆಳಗೆ ಇಟ್ಟು ಕೊನೆಗೆ ಒಂದೇ ಒಂದು ಮರಿ ಹೊರಗೆ ಬಂದಿತ್ತು. ನೋಡಿದರೆ ಅದೊಂದು ಗಂಡು ಟರ್ಕಿ ಕೋಳಿಮರಿ. ಬಹುಶಃ ನೀವು ಟರ್ಕಿಕೋಳಿ ನೋಡಿರಲಿಕ್ಕಿಲ್ಲ.ತುಂಬಾ ಎತ್ತರಕ್ಕೆ ಬೆಳೆಯುತ್ತದೆ. ಆ ಗಂಡು ಟರ್ಕಿಕೋಳಿಯಂತೂ ತುಂಬಾ ಬೆಳೆದು ಅದರ ಕೊರಳೆಲ್ಲಾ ಕೆಂಪುಕೆಂಪಗೆ ಮಾಂಸದ ಗಂಟುಗಳಿಂದ ತುಂಬಿಕೊಂಡು ಅದಕ್ಕೆ ಸಿಟ್ಟು ಬಂದಾಗ ಇನ್ನಷ್ಟು ಕೆಂಪಾಗಿ, ಹೋಗುವವರನ್ನು ಬರುವವರನ್ನು ಅಟ್ಟಿಸಿಕೊಂಡು ಓಡಾಡುತ್ತಿತ್ತು. ಹೆಣ್ಣು ಮಕ್ಕಳನ್ನಂತೂ ಅದಕ್ಕೆ ಕಂಡರಾಗುತ್ತಿರಲಿಲ್ಲ. ನನ್ನ ಸಣ್ಣ ಸಣ್ಣ ತಂಗಿಯಂದಿರನ್ನು ಅಟ್ಟಿಸಿ ಅವರು ಬಿದ್ದು ಗಾಯ ಮಾಡಿಕೊಂಡು, ನನ್ನ ಉಮ್ಮನಿಗೆ ತಲೆಕೆಟ್ಟು ಹೋಗಿ ಆಮೇಲೆ ಬಾಪಾ ಎಲ್ಲಿಂದಲೋ ಒಂದು ಹೆಣ್ಣು ಟರ್ಕಿಕೋಳಿಯನ್ನು ತಂದು ಬಿಟ್ಟಿದ್ದರು. ಆಮೇಲೆ ಅವುಗಳು ತುಂಬಾ ಕಾಲ ಅನ್ಯೋನ್ಯವಾಗಿದ್ದವು.ಆಮೇಲೆ ಏನಾಯಿತು ಎಂಬುದು ನೆನಪಾಗುತ್ತಿಲ್ಲ. Read More »
Saturday September 1, 2007 – 11:52 pm
ನನ್ನ ತೋಳುಗಳಲ್ಲಿ

ನನ್ನ ತೆರೆದ ತೋಳುಗಳಲ್ಲಿ ನಿನ್ನ ಎಳೆ ಚೆಲುವು
ಸೆರೆಯಾಗಿದೆ ಓ ದೇವತೆಯೇ…
ನನ್ನ ತುಟಿಯ ನಡುವಿಂದ ಮುತ್ತುಗಳ ನಡುನಡುವೆ
ಪ್ರೀತಿಮಾತುಗಳು ಸೆಲೆಯೊಡೆಯುತ್ತಿವೆ.
ನನ್ನ ಬಿಗಿ ಅಪ್ಪುಗೆಯಿಂದ ಮಾತಿಲ್ಲದೆಯೆ
ನಿನ್ನ ತೆಳ್ಳಗಿನ ದೇಹ ಸರಿಯುತ್ತಿದೆ ದೂರ
ಸಂಶಯದೊಂದು ಸಣ್ಣ ನಡುವಿನ ಹುಡುಗೀ..
ನೀ ಕೊಂಕು ಮಾತಾಡುತಿರುವೆ.
ಮೋಸದ ನೋವಿನ ಸಾಲುಮಾತುಗಳು ನೆನಪಾಗುತಿದೆ
ನಿನಗೆ. ಸುಮ್ಮನೆ ಕೇಳಿಸಿಕೊಳ್ಳುತಿರುವೆ
ಏನೂ ಕೇಳಿಸದೆಯೇ..
ಶಪಿಸುತ್ತಿರುವೆ ನನ್ನ ಹುಮ್ಮಸ್ಸಿಗೆ ನಾನೇ
ನನ್ನ ನಯದ ಲಲ್ಲೆಯಾಟಗಳಿಗೆ,
ಯೌವನಕ್ಕೆ, ನಿತ್ಯ ಬೇಟಗಳಿಗೆ,
ಹೂತೋಟದ ಸದ್ದಿಲ್ಲದ ಆಟಗಳಿಗೆ
ಪ್ರೇಮದ ಹೆಸರಿಲ್ಲದ ಪಿಸುಮಾತಿನ ಹೇಳಿಕೆಗಳಿಗೆ.
ಶಪಿಸುತ್ತಿರುವೆ ಕವಿತೆಗಳ ಮಾಂತ್ರಿಕ ಮೋಡಿಗಳಿಗೆ,
ಅರಿಯದ ಸಣ್ಣ ಹುಡುಗಿಯರ ಸ್ಪರ್ಶಗಳಿಗೆ,
ಅವರ ಕಣ್ಣೀರಿಗೆ, ಕಾಲ ಮೀರಿದ ವಿಷಾದಗಳಿಗೆ.
Thursday August 30, 2007 – 7:48 pm
‘ಆತನನ್ನು ಇವರೆಲ್ಲಾದರೂ ಕೊಂದುಬಿಟ್ಟರೆ ಮಾರನೇ ದಿನವೇ ನಾನು ನಮ್ಮ ಧರ್ಮ ಬಿಟ್ಟುಬಿಡುವೆ’.
ನಾನು ನನ್ನ ಉಮ್ಮನ ಮುಂದೆ ಜಗಳಕ್ಕೆ ಹೋಗುವವನಂತೆ ಹಠ ಹಿಡಿಯುತ್ತಾ ಕೂತುಬಿಟ್ಟೆ. ಆಕೆ ಒಲೆಯ ಮುಂದೆ ಅನ್ನಕ್ಕೆ ನೀರಿಟ್ಟು ಸುಮ್ಮನೇ ನಿಂತಿದ್ದಳು. ಬೆಳಗ್ಗೆಯೇ ಪೇಪರ್ ಓದಿದ್ದ ನನ್ನ ಬಾಪಾ ಸಲ್ಮನ್ ರಷ್ದಿ ಎಂಬುವನು ಸೈತಾನನ ಅಡಿಯಾಳಿನಂತೆ ದೇವರನ್ನು ಮಹಮದ್ ನೆಬಿ ಪ್ರವಾದಿಯನ್ನೂ ಹಾಗೂ ಇಷ್ಟೂ ಸಾಲದೆಂಬಂತೆ ಇಡೀ ಇಸ್ಲಾಂ ಧರ್ಮವನ್ನೂ ತಮಾಷೆ ಮಾಡಿ ಕಥೆಯೋ ಮಣ್ಣಾಂಗಟ್ಟಿ ಏನನ್ನೋ ಬರೆದಿರುವುದು ಹಾಗೂ ಇರಾನ್ ಎಂಬ ದೇಶದ ಆಯತುಲ್ಲಾ ಖೋಮೇನಿ ಎಂಬುವವನು ಈ ತರಲೆ ಬರಹಗಾರನ ತಲೆ ತಂದೊಪ್ಪಿಸಿದವರಿಗೆ ಲಕ್ಷಾಂತರ ರೂ. ಬಹುಮಾನ ಕೊಡುವೆನೆಂದು ಹೇಳಿರುವುದನ್ನೂ ಒಳ್ಳೆ ಕಥೆ ಹೇಳಿದಂತೆ ಈಕೆಯ ಬಳಿ ಹೇಳಿ ಹೊರಟುಹೋಗಿದ್ದರು.
ಇರಾನೋ, ಇರಾಕೋ, ರಷ್ದಿಯೋ, ಕಥೆಯೋ, ಮಸಾಲೆಯೋ ಏನೂ ಅರ್ಥಮಾಡಿಕೊಳ್ಳಲಿಕ್ಕೆ ಹೋಗದಿದ್ದ ನನ್ನ ಉಮ್ಮ ಈಗ ನಾನೂ ತಲೆಕೆಟ್ಟವನಂತೆ ಮಟಮಟ ಮಧ್ಯಾಹ್ನ ಜಗಳಕ್ಕೆ ನಿಂತಿರುವುದನ್ನು ನೋಡಿಯೂ ಸುಮ್ಮನೇ ಇರುವುದು ನನಗೆ ಆಗಲಿಲ್ಲ.
‘ಅವನ್ನು ಅವರು ಎಲ್ಲಾದರೂ ಕೊಂದರೆ ನಾನು ನಿಜಕ್ಕೂ ಜಾತಿ ಬಿಟ್ಟು ಹೋಗುವೆ’ ನಾನು ಈ ‘ನಿಜಕ್ಕೂ’ ಅನ್ನುವುದನ್ನು ಎರಡು ಮೂರು ಬಾರಿ ಒತ್ತಿ ಒತ್ತಿ ಹೇಳಿ ಆಕೆಯ ಮುಖ ನೋಡಿದೆ.
ನಾನು ‘ನಿಜಕ್ಕೂ’ ಎನ್ನುವುದನ್ನು ಗಟ್ಟಿಯಾಗಿ ಹೇಳಿದ್ದು ಆಕೆಗೆ ಸರಿ ಕಾಣಲಿಲ್ಲವೆಂದು ಕಂಡಿತು.
‘ನಿಜಕ್ಕೂ, ಸುಳ್ಳಿಗೂ ಅಂತ ಬೇರೆ ಬೇರೆ ಇದೆಯಾ? ನಿಜಕ್ಕೂ ಅಂತಲೇ ತಿಳಕೋ. ಅಲ್ಲಿ ಇವರು ಯಾರೋ ಯಾವನೋ ಒಬ್ಬನನ್ನು ಕೊಂದರೆ ನೀನು ಇಲ್ಲಿ ಯಾಕೆ ಉರಿಬರುತ್ತಾ ಇದೀಯಾ? ಅಷ್ಟಕ್ಕೂ ನೀನು ಯಾರು ಜಾತಿ ಬಿಡಲಿಕ್ಕೆ’.
ನನ್ನ ಉಮ್ಮನಿಗೂ ಕೆಲಸದ ನಡುವೆ ಜಗಳ ಮಾಡಲಿಕ್ಕೆ ಖುಷಿಯಾಗುತ್ತಿರುವಂತೆ ಕಂಡಿತು. Read More »