ಮೂಷಿಕ ವಿಜ್ಞಾನಿ ಹೇಳಿದ ಸಾಮಾಜಿಕ ಕಾಮಿಡಿಗಳು

270726_10150255802443246_3017879_n
`ಪ್ರವಾಸಿಗಳಿಂದ ತುಳುಕುತ್ತಿರುವ ಈ ಗಿರಿಪಟ್ಟಣದಲ್ಲಿ ಹಳೆಯ ನಾಗರಿಕನ ಹಾಗೆ ಬದುಕುವುದು ಬಹಳ ತಾಪತ್ರಯದ ಕೆಲಸ ಮಾರಾಯಾ’  ಎಂದು ಇಲ್ಲಿನ ಹಿರಿಯರೊಬ್ಬರು ಗೊಣಗುತ್ತಿದ್ದರು.
‘ಪ್ರವಾಸಿಗರು ನಮ್ಮನ್ನು ಕುತೂಹಲದಿಂದ ನೋಡುವುದಕ್ಕಿಂತ ಹೆಚ್ಚಾಗಿ ನಾವು ಅವರನ್ನು ಕಿರಿಕಿರಿಯಿಂದ ದುರುಗುಟ್ಟಿಕೊಂಡು  ನೋಡುತ್ತಿರುತ್ತೇವೆ.ವಾರಾಂತ್ಯದಲ್ಲಿ ಮಿಡತೆಗಳ ಮಹಾಸಮೂಹದಂತೆ ಬರುವ ಇವರು ಇಲ್ಲಿಂದ ತೊಲಗುವ ಮೊದಲೇ ಇಲ್ಲಿನ ತಂಡಾಸಿನ  ಗುಂಡಿಗಳು ತುಂಬಿಕೊಂಡು ನಾತ ಹೊಡೆಯುತ್ತಿರುತ್ತದೆ.ಈ ತಂಡಾಸಿನ ನೀರೂ, ಆಸ್ಪತ್ರೆಗಳ ಹೊಲಸೂ ನಗರದ ನಡುವೆ ಹಾವಿನಂತೆ  ಹರಿಯುತ್ತಿರುವ ತೊರೆಯೊಂದನ್ನು ಸೇರುತ್ತದೆ.ಈ ತೊರೆ ಈ ಎಲ್ಲ ಕೊಳಕುಗಳನ್ನು ತುಂಬಿಕೊಂಡು ಅಪೂರ್ವ ಸುಂದರಿಯಂತೆ ಬಳುಕುತ್ತಾ  ಮಲೆಗಳನ್ನು ಇಳಿಯುತ್ತಾ ಇಲ್ಲೇ ಹತ್ತಿರವಿರುವ ಗುಡ್ಡವೊಂದರಿಂದ ಜಲಪಾತವಾಗಿ ದುಮುಕುತ್ತಾಳೆ.ತಾವೇ ಬೆಳಗ್ಗೆ ವಿಸರ್ಜಿಸಿದ ಜೀವಜಲ  ಇಲ್ಲಿ ಹೀಗೆ ಬೆಳ್ಳಿಯ ಅಬ್ಭಿಯಾಗಿ ಇಳಿಯುತ್ತಿದೆ ಎಂಬ ಅರಿವಿಲ್ಲದೆ ಈ ಪಾಪದ ಪ್ರವಾಸಿಗರು ಕೇಕೆ ಹಾಕುತ್ತಿರುತ್ತಾರೆ’ ಎಂದು ಆ ಹಿರಿಯರು  ನಗುತ್ತಿದ್ದರು.
ಇವರು ಈ ನಗರದಲ್ಲೇ ಹುಟ್ಟಿಬೆಳೆದು ಇಲ್ಲೇ ಶಾಲೆಕಲಿತು ದೊಡ್ಡವರಾಗಿ ದೇಶದ ದೊಡ್ಡ  ಮೂಷಿಕ ವಿಜ್ಞಾನಿಯಾಗಿ ದುಡಿದು ಈಗ ಉಳಿದ  ಆಯಸ್ಸನ್ನು ಈ ತರಹದ ಕಾಮಿಡಿಗಳನ್ನು ನೋಡುತ್ತಾ ಕಳೆಯುತ್ತಿದ್ದಾರೆ.ಅವರಿಗೂ ನನಗೂ ಇರುವ ಸಮಾನ ಅಂಶಗಳೆಂದರೆ ಒಮ್ಮೆಗೇ  ಗಹಗಹಿಸಿ ಬರುವ ನಗು ಮತ್ತು ಆಕಾಶದ ಕುರಿತಾದ ಸಮಾನ ಆಸಕ್ತಿ.
‘ಗುರುಗಳೇ ಸ್ವಲ್ಪ ಹೊರಗೆ ಬಂದು  ಆಕಾಶ ನೋಡಿ. ಆ ಪಶ್ಚಿಮದ ಮೂಲೆಯಲ್ಲಿ ಆ ಬೆಟ್ಟದ ಮೇಲೆ ನಿಂತುಕೊಂಡಿರುವ ಮೋಡ ನೋಡಲಿಕ್ಕೆ  ಒಂದು ರೀತಿಯಲ್ಲಿ ಜಟಾಯುವಿನ ಹಾಗೆ ಕಾಣಿಸುತ್ತಿಲ್ಲವೇ’ ಎಂದು ಅವರು ಫೋನಿನಲ್ಲಿ ಅನ್ನುತ್ತಾರೆ.
ಆಗ ನಾನು ಫೋನು ಹಿಡಿದುಕೊಂಡೇ  ಹೊರಗೆ ಬಂದು ‘ಹೌದು ಹೌದು ಅದರ ಪಕ್ಕದಲ್ಲೇ ಸೂರ್ಯನನ್ನು ಮರೆ ಮಾಡಿಕೊಂಡು ನಿಂತಿರುವ ಆ ಮೋಡಗಳ ಸಮೂಹ ಸೀತೆಯನ್ನು  ಹಾರಿಸಿಕೊಂಡು ಹೊತ್ತೊಯ್ಯುತ್ತಿರುವ ದಶಕಂಠನಂತೆ ಕಾಣಿಸುತ್ತಿದೆ.ನಿಮಗೂ ಹಾಗೆ ಕಾಣಿಸುತ್ತಿದೆಯಾ’ ಎಂದು ಕೇಳುತ್ತೇನೆ.
‘ಹೌದು.ನಿಮಗೆ ರಾಮಾಯಣದ ಹುಚ್ಚು ಇರಬೇಕು.ನನಗೆ ಇಲ್ಲಿ  ಸೀತೆಯೂ ಕಾಣಿಸುತ್ತಿಲ್ಲ ರಾವಣನೂ ಕಾಣಿಸುತ್ತಿಲ್ಲ. ಜೋರು ಮಳೆ  ಬರುತ್ತಿದೆ.ಅಯ್ಯೋ ದೇವರೇ ಇನ್ನು ನನಗೆ ಪೆಗ್ಗೇ ಗತಿ’ ಎಂದು ದಿನದ ಕುಡಿತಕ್ಕೆ ಅಣಿಯಾಗುತ್ತಾರೆ.
285136_10150255791568246_1102444_nಆಮೇಲೆ ನಾವಿಬ್ಬರು ಬಹಳ ಹೊತ್ತು  ದಿನದ ಇನ್ನೂ ಹಲವು ಕಾಮಿಡಿಗಳ ಕುರಿತು ಮಾತನಾಡುತ್ತೇವೆ.ಆ ಮಾತಿನಲ್ಲಿ ಹಳೆಯದು ಕಳೆದು ಹೋಗುತ್ತಿರುವ ಕುರಿತ ಹಳಹಳಿಕೆ, ನುಗ್ಗಿ  ಬರುತ್ತಿರುವ ಹೊಸಹೊಸ ವಿಷಯಗಳ ಕುರಿತ ವಿಸ್ಮಯ, ಹವಾಮಾನ,ವಾಸ್ತುಶಿಲ್ಪ ಎಲ್ಲವೂ ಬರುತ್ತದೆ.ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹೀಗೇ  ಎಂದು ಹೇಳಲಾಗದ ಮನುಷ್ಯ ಸಹಜ ತಿಕ್ಕಲುತನಗಳು ಮತ್ತು ಒಮ್ಮಿಂದೊಮ್ಮಗೆ ಎಲ್ಲವನ್ನೂ ಮೀರಿ ನಡೆಯುವ ಘಟನೆಗಳು.
ಈ ಹಿರಿಯರು ಇಲ್ಲಿ ಶಾಲೆ  ಓದುತ್ತಿರುವಾಗ ತಮ್ಮ ಅಲೆಮಾರಿತನ ಮತ್ತು ತುಂಟಾಟಗಳಿಗೆ ಬಹಳ ಹೆಸರಾದವರು.ಇಲ್ಲಿಯ ರಾಜನ  ಕೋಟೆಯೊಳಗೆ ಇರುವ ಗಣಪತಿ ದೇಗುಲದ ಗೋಡೆಗೆ ಈಡುಗಾಯಾಗಿ ಅಪ್ಪಳಿಸಿ ಬೀಳುವ ತೆಂಗಿನಚೂರುಗಳನ್ನು ಆಗ ಯಾವ ಯಾವ  ಭಂಗಿಯಲ್ಲಿ ಹಾರಿಕೊಂಡು ಹೆಕ್ಕುತ್ತಿದ್ದರು ಎಂಬುದನ್ನು ಇವರು ಈಗಲೂ ಅಭಿನಯಿಸಿ ತೋರಿಸಬಲ್ಲರು.
ಹಾಗೆಯೇ ಈ ಊರಿನ ನಡುವಲ್ಲಿ  ಹಾವಿನಂತೆ ಹರಿಯುತ್ತಿದ್ದ ತೊರೆಯ ಯಾವ ತಿರುವಲ್ಲಿ ಯಾವ ಕಾಡು ಹಣ್ಣಿನ ಮರವಿತ್ತು ಮತ್ತು ಎಲ್ಲೆಲ್ಲಿ ಯಾವಯಾವ ಕಾಡುಹೂಗಳು  ಯಾವ ಕಾಲದಲ್ಲಿ ಅರಳುತ್ತಿದ್ದವು ಮತ್ತು ತಾವು ಎಲ್ಲೆಲ್ಲಿ ಆ ತೊರೆಯಲ್ಲಿ ಬಗ್ಗಿಕೊಂಡು ಬೊಗಸೆಯಿಂದ ನೀರು ಕುಡಿಯುತ್ತಿದ್ದೆ ಎಂಬುದನ್ನು  ಈಗಲೂ ಅವರು ಕಣ್ಣಿಗೆ ಕಟ್ಟುವಂತೆ ಹೇಳಬಲ್ಲರು.ಹಾಗೆಯೇ ಈಗಿನ ಕಾಲದ ಘಟನೆಗಳನ್ನೂ!
ಇವರು ನಿವೃತ್ತರಾಗಿ ಈಗ ಇರುವುದು ಈ ನಗರದ ಪಕ್ಕದ ತಮ್ಮ ಕಾಫಿ ತೋಟದಲ್ಲಿ.ಈ ಕಾಫಿ ತೋಟದಲ್ಲಿ ಇವರು ಮಾಡಿರುವ  ಅವಿಷ್ಕಾರಗಳನ್ನು ನೋಡಲೆಂದೇ ಬಹಳಷ್ಟು ಜನ ಅಲ್ಲಿಗೆ ಹೋಗುತ್ತಿರುತ್ತಾರೆ.
ಉದಾಹರಣೆಗೆ ಬೆಟ್ಟದ ಮೇಲಿನ ಕಾಫಿಗಿಡಗಳ ಸಾಲಿನಿಂದ  ಕೊಯ್ದ ಕಾಫಿ ಹಣ್ಣುಗಳ ಮೂಟೆಗಳನ್ನು ಬೆಟ್ಟದ ಕೆಳಗಿರುವ ಸಂಸ್ಕರಣಾ ಘಟಕಕ್ಕೆ ಆಳುಗಳು ಹೊತ್ತುಕೊಂಡು ಬರುವುದಿಲ್ಲ.ಅದರ ಬದಲಿಗೆ  ಇವರೇ ವಿನ್ಯಾಸ ಮಾಡಿರುವ ರಾಟೆಗಳ ಮೂಲಕ ಹಗ್ಗದಿಂದ  ಮೂಟೆಗಳು ಇಳಿದು ಬರುತ್ತವೆ.
ಇಂತಹದೇ ತುಂಬ ವಿಷಯಗಳು  ಇವರಲ್ಲಿವೆ.ಆದರೆ ಇವುಗಳನ್ನೇನೂ ಇವರು ವಿಶೇಷವೆಂಬಂತೆ ಹೇಳುವುದಿಲ್ಲ.ಇವರು ಹೇಳುವ ವಿಷಯಗಳು ಬೇರೆಯೇ ಇರುತ್ತವೆ.
ಇವರು ದೇಶದ ದೊಡ್ಡ ಮೂಷಿಕ ವಿಜ್ಜಾನಿಗಳಲ್ಲಿ ಒಬ್ಬರು.ಅಂದರೆ ಇಲಿಗಳ ಹತೋಟಿಯ ಕುರಿತಾಗಿ ಅಧಿಕಾರಯುತವಾಗಿ  ಮಾತಾಡಬಲ್ಲವರು. ಹಿಂದೆ ಸೂರತ್ ನಗರದಲ್ಲಿ ಪ್ಲೇಗ್ ಮಾರಿ ನರ್ತಿಸಲು ತೊಡಗಿದಾಗ ಇಲಿಗಳ ಹತೋಟಿಗೆ ಇವರನ್ನೇ  ಕರೆಸಲಾಗಿತ್ತು.
ನಾವೆಲ್ಲರೂ ಇವರನ್ನು ಭಾರತದ ಮೂಷಿಕ ಮನುಷ್ಯ ಎಂದು ಗೌರವದಿಂದ ಕರೆಯುತ್ತಿರುತ್ತೇವೆ.
ಇವರ ಸಂಸಾರ ಮಕ್ಕಳು  ಮೊಮ್ಮಕ್ಕಳು  ಪ್ರಪಂಚದ ಬೇರೆಬೇರೆ ಕಡೆ ಹಂಚಿಹೋಗಿದ್ದಾರೆ.ಇವರು ಒಬ್ಬರೇ ತೋಟದಲ್ಲಿ ಕಾಫಿ ಕಾರ್ಮಿಕರ ಮಕ್ಕಳೊಂದಿಗೆ  ಬದುಕುತ್ತಿದ್ದಾರೆ.ಅವರಲ್ಲಿ ತುಂಟರೂ ಜಾಣರೂ ಆದ ಮಕ್ಕಳನ್ನು ತಮ್ಮ ಮನೆಯಲ್ಲೇ ಇರಿಸಿಕೊಂಡು ಶಾಲೆಗೆ ಕಳಿಸಿ ಓದಿಸುತ್ತಿದ್ದಾರೆ
317007_10150397810298246_351898928_n‘ಮೊನ್ನೆ ಏನಾಯಿತು ಗೊತ್ತಾ’ ಎಂದು ಅವರು ಹೇಳುತ್ತಿದ್ದರು.‘ಸೌತೆಕಾಯಿಯ ಹೋಳುಗಳನ್ನು ಕಣ್ಣಿಗಿಟ್ಟುಕೊಂಡು ಮಲಗಿದರೆ ಕಣ್ಣಿನ ದೃಷ್ಟಿ  ಚುರುಕಾಗುವುದು ಎಂದು ಯಾರೋ ಹೇಳಿದರಾ.ಅದಕ್ಕೆ ನಾನು ಸೌತೆಹೋಳುಗಳನ್ನು ಕಣ್ಣಿನ ಮೇಲೆ ಮಲಗಿಸಿಕೊಂಡು ನಿದ್ದೆ ಹೋಗಿದ್ದೆ.ಎದ್ದು  ನೋಡಿದರೆ ಕಣ್ಣಿನ ಮೇಲಿದ್ದ ಸೌತೆಯ ಹೋಳುಗಳು ಕಾಣಿಸಲಿಲ್ಲ.ಎಲ್ಲಿ ಎಂದು ಹುಡುಕಿದರೆ ಅದನ್ನು ಈ ಹಾಳು ಮಕ್ಕಳು ನನ್ನ ನಿದ್ದೆಗಣ್ಣಿಂದ  ಎತ್ತಿಕೊಂಡು ಕದ್ದು ತಿಂದಿದ್ದರು.ಅದಕ್ಕಾಗಿ ನಾನು ಈಗ ಸೌತೆಹೋಳುಗಳನ್ನು ಒಂದರಮೇಲೊಂದು ಕಣ್ಣಿನ ಮೇಲೆ ಪೇರಿಸಿಟ್ಟು ನಿದ್ದೆ  ಹೋಗುತ್ತೇನೆ.ಅಡಿಯಲ್ಲಿರುವ ಎರಡು ಹೋಳುಗಳನ್ನು ಬಿಟ್ಟು ಉಳಿದೆಲ್ಲವನ್ನೂ ಮಕ್ಕಳು ತಿಂದು ಮುಗಿಸುತ್ತಾರೆ.ಎಷ್ಟು ಒಳ್ಳೆಯ ಐಡಿಯಾ  ಅಲ್ಲವಾ’ ಎಂದು ಅವರು  ನಗುತ್ತಿದ್ದರು.
‘ಈ ಸಲದ ಭಯಂಕರ ಮಳೆ ಮತ್ತು ಭಾರತೀಯ ಕಾಫಿ ಮಂಡಳಿಯ ನವೀನ ಸಬ್ಸಿಡಿ ಯೋಜನೆಯಿಂದಾಗಿ ಇಲ್ಲಿನ ಮೂಳೆ ಮತ್ತು ಕೀಲು  ತಜ್ಞ್ನರ ಕ್ಲಿನಿಕ್ಕುಗಳಲ್ಲಿ ಜನಸಂದಣಿ ಹೆಚ್ಚಾದ ವಿಷಯ ನಿಮಗೆ ಗೊತ್ತಾ’ ಎಂದು ಕೇಳಿದರು.
‘ಇಲ್ಲವಲ್ಲಾ’ ಎಂದೆ.
‘ಈ ಸಲದ ಮಾರಿಮಳೆ  ಭಯಂಕರ ಬೋರು.ಮನೆಯಲ್ಲಿ ಒಬ್ಬರೇ ಕುಳಿತು ಕುಳಿತು ಸಾಯುವಷ್ಟು ಬೇಸರ.ಯಾರಾದರು ಗೇಟಿನ ಬೆಲ್ಲು ಬಾರಿಸಿದರೆ ಎಲ್ಲರೂ ಎದ್ದು  ಗೇಟು ತೆರೆಯಲು ಓಡುವವರೇ.ಮಾತನಾಡಲು ಯಾರೋ ಬಂದರು ಅಂತ.ಹಾಗೆ ಓಡಿದವರು ಬಹಳಷ್ಟು ಜನ ಸಿಮೆಂಟಿನ ಕಾಫಿಕಣದ  ಪಾಚಿಗೆ ಜಾರಿ ಬಿದ್ದು ಸೊಂಟ ಮುರಿದುಕೊಂಡು ಆಸ್ಪತ್ರೆ ಮುಂದೆ ಕ್ಯೂ ನಿಂತರು.ಇದಕ್ಕೆ ಕಾಫಿ ಮಂಡಳಿ ಹೇಗೆ ಕಾರಣ ಗೊತ್ತಾ?’ ಕೇಳಿದರು.
‘ಇಲ್ಲ” ಅಂದೆ.
‘ಕಾಫಿ ಮಂಡಳಿ ಬೆಳೆಗಾರರಿಗೆ ಪ್ರತಿವರ್ಷ ಏನಕ್ಕಾದರೂ ಸಬ್ಸಿಡಿ  ಕೊಡಬೇಕಲ್ಲಾ.ಈ ಸಲ ಹೊಸದಾಗಿ ಯಾವುದಕ್ಕೆ ಸಬ್ಸಿಡಿ ಕೊಡುವುದು  ಎಂದು ಯೋಚಿಸಿ ಯೋಚಿಸಿ ಕೊನೆಗೆ  ಸಿಮೆಂಟಿನ ಕಾಫಿ ಕಣ ಕಟ್ಟಲು ಸಬ್ಸಿಡಿ ಕೊಟ್ಟಿತು.ಎಲ್ಲರೂ ಕಟ್ಟಿದರು.ಅದರಲ್ಲಿ ಕಾಫಿ ಒಣಗಿಸಿದಕ್ಕಿಂತ  ಪಾಚಿ ಕಟ್ಟಿದ್ದೇ ಹೆಚ್ಚು.ಹಾಗಾಗಿ ಕಾಫಿ ಬೆಳೆದವರು ಒಂದು ಕಡೆ ಕಾಫಿ ಇಲ್ಲದೆ ಪಾಪರಾದರು.ಇನ್ನೊಂದು ಕಡೆ ಸಬ್ಸಿಡಿ ಕಾಫಿಕಣದ ಪಾಚಿಯಲ್ಲಿ  ಜಾರಿ ಬಿದ್ದು ಡಾಕ್ಟರ ಕಡೆ ಹೋಗಿ ಪಾಪರಾದರು.ಎಷ್ಟು ತಮಾಷೆ ಅಲ್ಲವಾ ಈ ಭೂಲೋಕ ’ ಅವರು ಗುಡುಗಿದಂತೆ ಗುಡುಗುಡು ನಗುತ್ತಿದ್ದರು.
‘ಬಿಡಿ ಸಾರ್ ಇಲ್ಲಿನ ತಮಾಷೆಗಳೂ ಬಹಳ ಬೋರು ಹೊಡೆಸಲು ಶುರು ಮಾಡಿವೆ.ಬನ್ನಿ  ಇಬ್ಬರೂ ಕೆಲ ತಿಂಗಳುಗಳ ಕಾಲ ಮಂಗಳ ಗ್ರಹಕ್ಕೆ  ಹೋಗಿ ಇದ್ದು ಬರೋಣ.ಅಲ್ಲಿ ಇದಕ್ಕಿಂತ ಗಹನವಾದ ತಮಾಷೆಗಳು ಜರುಗುತ್ತಿರಬಹುದು ಎಂದು ನಾನು ಅವರನ್ನು  ಆಹ್ವಾನಿಸಿದ್ದೇನೆ.72473_447127073245_3929683_n
ಇದೊಂದು ಪೆಗ್ಗು ಮುಗಿಸಿ ಹೊರಡುವಾ ಎಂದು ಅವರೂ ಒಪ್ಪಿದ್ದಾರೆ.
 22 September 2013
 Photos by the author

ಹಳೆಯ ಕಾಲದ ಮನೋಚಿಕಿತ್ಸಕ ಡಾಕ್ಟರ ಕಥೆ

1235088_10151679403248246_1681251253_n

ಈ ನಾಚುಕೆಮುಳ್ಳಿನ ಹೂವಿಗೂ ಎಷ್ಟೊಂದು ಸೌಂದರ್ಯ ಎಂದು ನೋಡುತ್ತಿದ್ದೆ.

ಇದೇನು ಹೀಗೆ ಇದ್ದಕ್ಕಿದ್ದ ಹಾಗೆ ತಿಂದೇ ಬಿಡುವ ಹಾಗೆ ನೋಡುತ್ತಿದ್ದೀಯಲ್ಲ ಎಂದು ಅದೂ ಗಾಳಿಗೆ ಸಣ್ಣಗೆ ತಲೆ ಅಲ್ಲಾಡಿಸುತ್ತಾ ತನ್ನ ಅಸಮ್ಮತಿಯನ್ನು ತೋರಿಸುತ್ತಿತ್ತು.

ಸಣ್ಣದಿರುವಾಗ ಮುಟ್ಟಿದರೆ ಮುನಿಯುತ್ತದೆಯೆಂದು ಮತ್ತೆ ಮತ್ತೆ ಮುಟ್ಟುತ್ತಾ ತುಳಿಯುತ್ತಾ ಗೋಳು ಹೊಯ್ದುಕೊಳ್ಳುತ್ತಿದ್ದ ಅಸಹಾಯಕ ಮುಳ್ಳಿನ ಗಿಡ.

ಆಗ ಇದರ ಹೂವಿನ ಚಂದವನ್ನು ಕಾಣುವ ಸಹನೆಯೆಲ್ಲಿತ್ತು?

ಈಗ ಕಾಲನ ಹೊಡೆತಕ್ಕೆ ಸಿಲುಕಿರುವ ಈ ನಡುಗಾಲದಲ್ಲಿ ಈ ನಾಚುಕೆಮುಳ್ಳಿನ ಹೂವಿನ ವಯ್ಯಾರ ಬೇರೆ!

ನೋಡುನೋಡುತ್ತಿದ್ದಂತೆ ಪುಟ್ಟ ಚಿಟ್ಟೆಯೊಂದು ಕಾಡುಹೂವೊಂದರ ಮೇಲೆ ಕುಳಿತು ತನ್ನ ಕೆಲಸದಲ್ಲಿ ತೊಡಗಿತು.

ನೋಡಿದರೆ ಅದರ ಪಕ್ಕದ ಕಾಡುಹೂವೊಂದರ ಮೇಲೂ ಇನ್ನೊಂದು ಚಿಟ್ಟೆ.

ಒಂದು ವೇಳೆ ಎಲ್ಲಾದರೂ ಇಲ್ಲಿ ನಿಲ್ಲದೇ ಮುಂದೆ ಹೋಗಿದಿದ್ದರೆ ಜೀವನಪೂರ್ತಿ ಕಾಣದೇ ಹೋಗುತ್ತಿದ್ದ ಅಪರಿಮಿತ ಚೆಲುವಿನ ಈ ಹೂಗಳು.

ಒಂದು ಕಾಡು ಗಿಡವಂತೂ ತನ್ನ ಒಂದೊಂದು ಎಲೆಯನ್ನು ಸುರುಟಿ ಇಟ್ಟುಕೊಂಡು ಮೆಲ್ಲಗೆ ಹೂವಂತೆ ಅರಳಿಸಲು ಕಾಯುತ್ತಿತ್ತು.

1236545_10151679404903246_658208540_nಯಾರೋ ಕಾಡು ಸವರುತ್ತಾ ಕಾಲುದಾರಿ ಮಾಡುತ್ತಾ ಹೊರಟವರು ಅದರ ಆ ಗಿಡದ ಅರ್ದದಷ್ಟನ್ನು ಕತ್ತಿಯಿಂದ ಸವರಿ ಮುಂದೆ ಸಾಗಿದ್ದರು.

ಆದರೂ ಹಠಬಿಡದೆ ಉಳಿದಿರುವ ಇನ್ನೊಂದು ಎಲೆಯನ್ನು ಹೂವಂತೆ ಅರಳಿಸಲು ಅದು ಕಷ್ಟಪಡುತ್ತಿರುವಂತೆ ಕಾಣಿಸುತ್ತಿತ್ತು.

ಏನಾಗಿ ಹುಟ್ಟಿದರೂ ಪರವಾಗಿಲ್ಲ, ಅದರೆ ಜನರು ಓಡಾಡುವ ದಾರಿಯಲ್ಲಿ ಗಿಡವಾಗಿ ಹುಟ್ಟುವ ಪಾಡು ಯಾರಿಗೂ ಬೇಡ ಮಾರಾಯಾ ಎಂದು ನಾನು ನಡೆಯುತ್ತಿದ್ದೆ.

ನಾನು ಹೊರಟಿದ್ದುದು ಇಲ್ಲಿ ಮಡಿಕೇರಿಯ ಬಳಿಯ ಇಳಿಜಾರೊಂದರಲ್ಲಿ ಏಕಾಂಗಿಯಾಗಿ ಬದುಕುತ್ತಿರುವ ಹಳೆಯ ಕಾಲದ ಒಬ್ಬರು ಡಾಕ್ಟರನ್ನು ನೋಡಲು.

ಸುಮಾರು ನೂರಾಅರವತ್ತೈದು ವರ್ಷಗಳ ಹಿಂದೆ ಸ್ಕಾಟ್ ಲಾಂಡಿನ ಶ್ರೀಮಂತನೊಬ್ಬ ಕಟ್ಟಿಸಿದ ಕಾಫಿ ತೋಟದ ಬಂಗಲೆಯಲ್ಲಿ ಏಕಾಂಗಿಯಾಗಿ ಬದುಕುತ್ತಿರುವ ಇವರು ಲಂಡನ್ನಿನಲ್ಲಿ ಮನೋಚಿಕಿತ್ಸೆಯನ್ನು ಓದಿದವರು.

ಆದರೆ ಈ ಊರಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಕಡಿಮೆಯಿರುವುದರಿಂದ ಹತ್ತಿರವಿರುವ ಸರಕಾರೀ ಆಸ್ಪತ್ರೆಯಲ್ಲಿ ಹಲವು ವರ್ಷಗಳ ಕಾಲ ಸಾಮಾನ್ಯ ವೈದ್ಯರಾಗಿ ಕೆಲಸ ಮಾಡಿದವರು.

ಇವರಿಗೆ ಈಗ ಹತ್ತಿರ ಹತ್ತಿರ ತೊಂಬತ್ತರ ವಯಸ್ಸು.

ಇವರು ಇಲ್ಲಿನ ಬಹಳ ದೊಡ್ಡ ಮನೆತನಕ್ಕೆ ಸೇರಿದವರು.

ಇವರ ಅಜ್ಜ ಬ್ರಿಟಿಷರ ಕೊಡಗು ರಾಜ್ಯದಲ್ಲಿ ನ್ಯಾಯಾದೀಶರಾಗಿದ್ದವರು.ಇವರ ತಂದೆಯೂ ಅಷ್ಟೇ ನ್ಯಾಯಾದೀಶರಾಗಿದ್ದವರು.

ಆದರೆ ಇವರು ಯಾಕೋ ಲಂಡನ್ನಿಗೆ ತೆರಳಿ ಮನೋಚಿಕಿತ್ಸೆಯನ್ನು ಕಲಿತವರು ಬಡವರಿಗೆ ಔಷದಿ ಕೊಡುತ್ತಾ ಇಲ್ಲಿಯೇ ಉಳಿದರು.

ಹಿಂದೆ ಒಮ್ಮೆ ಇವರ ಬಳಿ ಹಳೆಯ ಕಾಲದ ಕಥೆಗಳನ್ನು ಕೇಳಲು ಹೋದಾಗ ನನ್ನ ಕಥೆಯೆಲ್ಲವೂ ಇದರಲ್ಲೇ ಇದೆ ಎಂದು ಅಚ್ಚುಮಾಡಿದ ಹಾಳೆಯೊಂದನ್ನು ಕೊಟ್ಟಿದ್ದರು.

ಮೊದಲಿಗೆ ತೋಟವನ್ನೂ ಬಂಗಲೆಯನ್ನೂ ಕಟ್ಟಿಸಿದ ಸ್ಕಾಟಿಷ್ ಶ್ರೀಮಂತನ ಕಥೆ.

ನಂತರ ಬ್ರಿಟಿಷರ ಕಾಲದಲ್ಲಿ ನ್ಯಾಯಾದೀಶನಾಗಿದ್ದ ಅಜ್ಜನ ಕತೆ.

ಅವರ ನಂತರ ನ್ಯಾಯಾದೀಶನಾಗಿದ್ದ ಅಪ್ಪನ ಕತೆ.

ನಂತರ ತನ್ನದೇ ಚುಟುಕು ಕಥೆ.

ಕೆಲವು ಹೆಸರುಗಳು, ಕೆಲವು ಇಸವಿಗಳು.ಏನೂ ಅಂತಹ ವಿಶೇಷಗಳಿಲ್ಲದೆ ಏನೂ ಅತಿರೇಕಗಳಿಲ್ಲದೆ ಇದು ಹೀಗೇ ನಡೆಯಬೇಕಾಗಿತ್ತು ಅದರಂತೆ ನಡೆಯಿತು ಎನ್ನುವಂತಹ ಅಚ್ಚು ಮಾಡಿದ ಹಾಳೆ ಅದು.

ಕುತೂಹಲ ತೋರಿಸಿದವರಿಗೆ ಅದನ್ನು ಕೊಟ್ಟು ಸುಮ್ಮನಾಗಿಸುತ್ತಿದ್ದ ಆ ಡಾಕ್ಟರು ನನಗೂ ಅದನ್ನು ಕೊಟ್ಟು ಟೀ ಕುಡಿಸಿ ಕಳಿಸಿದ್ದರು.

3ಎರಡನೆಯ ಸಲ ಹೋದಾಗ ಕತ್ತಲಾಗಿತ್ತು.

ಹೊರಗಡೆ ಆಕಾಶದಲ್ಲಿ ಕೊಂಚವೇ ಬೆಳಕಿತ್ತು.

ಆ ಕೊಂಚ ಬೆಳಕಿನಲ್ಲೇ ಆ ಡಾಕ್ಟರು ತಮ್ಮ ಹಳೆಯ ಬಂಗಲೆಯ ಕದವನ್ನು ತೆರೆದು ಒಳಗೆ ಕರೆದೊಯ್ದಿದ್ದರು.

ಆ ಹಳೆಯ ಕಾಲದ ಬ್ರಿಟಿಷ್ ಬಂಗಲೆಯೊಳಗೆ ನೂರಾರು ವರ್ಷಗಳಷ್ಟು ಹಳೆಯ ಬಿಲಿಯರ್ಡ್ಸ್ ಟೇಬಲ್ಲೂ, ಅಷ್ಟೇ ಹಳೆಯ ಕಾಲದ ಪಿಂಗಾಣಿಯ ಕಲಾಕೃತಿಗಳೂ, ಗೋಡೆಗಳ ಮೇಲೆ ಹಳೆಯ ಕಾಲದ ಬ್ರಿಟಿಷ್ ಚಿತ್ರಗಾರರ ತೈಲವರ್ಣದ ಚಿತ್ರಗಳೂ, ರಾಜಾ ರವಿವರ್ಮನ ಮರಿಮೊಮ್ಮಗಳಾದ ರುಕ್ಮಿಣಿವರ್ಮ ರಚಿಸಿದ ಅರೆನಗ್ನ ಕಲಾಕೃತಿಗಳೂ ಆ ಹೊರಟುಹೋಗುತ್ತಿರುವ ಬೆಳಕಿನಲ್ಲಿ ನಿಟ್ಟುಸಿರುಡುತ್ತಿರುವಂತೆ ಕಾಣಿಸುತ್ತಿದ್ದವು.

ಇತಿಹಾಸದ ಭಾರದಲ್ಲಿ ಜಗ್ಗಿ ಹೋಗಿರುವಂತೆ ಕಾಣಿಸುತ್ತಿದ್ದ ಮನೋಚಿಕಿತ್ಸಕ ಡಾಕ್ಟರು ತಮ್ಮ ಕುರಿತು ಏನೂ ಮಾತಾಡದೆ ಆ ಕಲಾಕೃತಿಗಳ ಕಾಲ ಅವುಗಳ ಹಿನ್ನೆಲೆ ಇತ್ಯಾದಿಗಳನ್ನು ವಿವರಿಸುತ್ತಾ ಆ ಬಂಗಲೆಯೊಳಗೆ ನೆರಳಿನಂತೆ ಓಡಾಡುತ್ತಿದ್ದರು.

ಅವರು ಮಲಗುತ್ತಿದ್ದ ಮಂಚದ ಬಳಿ ಉರಿಯುತ್ತಿದ್ದ ಅಗ್ಗಿಷ್ಟಿಕೆಯ ಬೆಂಕಿ, ಅವರ ತಲೆದಿಂಬಿನ ಬಳಿ ಬಿದ್ದುಕೊಂಡಿದ್ದ ನೋವು ನಿವಾರಕ ತೈಲ ಮತ್ತು ಅವರ ಎದುರಿಗಿದ್ದ ಹಳೆಯಕಾಲದ ಟೀಪಾಯಿಯ ಮೇಲೆ ಹಣ್ಣಾಗದೆ ಉಳಿದಿದ್ದ ರಸಬಾಳೆಯ ಒಂದು ಚಿಪ್ಪು- ಇವು ಮೂರನ್ನು ಬಿಟ್ಟರೆ ಆ ಬಂಗಲೆಯೊಳಗೆ ಉಳಿದಿದ್ದ ಉಳಿದ ಎಲ್ಲವೂ ಕಾಲದ ಯಾವುದೋ ಒಂದು ಕಪಾಟಿನೊಳಗಡೆ ಸೇರಿಹೋಗಿರುವಂತೆ ಅನಿಸುತ್ತಿತ್ತು.

‘ಡಾಕ್ಟರೇ.ನಿಜವಾಗಿಯೂ ನೀವು ಏನು? ಈಗ ನಿಮಗೆ ಏನನಿಸುತ್ತಿದೆ?ಇಲ್ಲಿ ಈ ಕಾಫಿ ಕಾಡೊಳಗೆ ಒಂಟಿಯಾಗಿ ಇರುವಾಗ ನೀವು ಏನನ್ನು ಯೋಚಿಸುತ್ತಿರುತ್ತೀರಿ ಎಂಬುದನ್ನು ಮುಂದೆ ಯಾವತ್ತಾದರೂ ಬೇಟಿಯಾದಾಗ ಹೇಳಿ.ಇನ್ನೊಮ್ಮೆ ಬರುತ್ತೇನೆ.ನಿಮಗೆ ಕಿರಿಕಿರಿ ಮಾಡುತ್ತಿರುವುದ್ದಕ್ಕೆ ಕ್ಷಮಿಸಿ’ ಎಂದು ಹೊರಟು ಬಂದಿದ್ದೆ.

‘ಹಾಗೇನಿಲ್ಲ,ನಾನೊಬ್ಬ ಪೂರ್ತಿಪ್ರಮಾಣದ ಬೆಳೆಗಾರ ಮತ್ತು ಅಲ್ಪಕಾಲೀನ ಮನೋಚಿಕಿತ್ಸಕ.ಅದಲ್ಲದೆ ಬೇರೇನೂ ಹೇಳಲು ನನ್ನ ಬಳಿ ಇಲ್ಲ.ಆದರೂ ನೀನು ಪ್ರಯತ್ನಿಸು’ ಎಂದು ಅವರು ಬೀಳ್ಕೊಟ್ಟಿದ್ದರು.

ನೂರುದಿನಗಳ ಕಾಲ ನಿರಂತರ ಸುರಿದ ಮಳೆಗೆ ಜರ್ಜರಿತವಾಗಿದ್ದ ಕಾಫಿಗಿಡಗಳೂ ನೆರಳಿನಮರಗಳೂ ಹುಲ್ಲುಗರಿಕೆಗಳೂ ನಿದಾನಕ್ಕೆ ಚೇತರಿಸಿಕೊಂಡು ನಸುಬಿಸಿಲಲ್ಲಿ ನಗಲು ನೋಡುತ್ತಿದ್ದವು.

1006067_10151679402448246_809224889_nಹಳೆಯಬಂಗಲೆಯ ಒಂಟಿ ಮನೋಚಿಕಿತ್ಸಕ ಡಾಕ್ಟರನ್ನು ಮತ್ತೆ ಕಾಣಲು ಹೊರಟಿದ್ದ ನಾನು ಕಾಡುಹೂಗಳ ಚೆಲುವಿಗೆ ಸಿಲುಕಿ ನೆಲನೋಡಿ ತಗ್ಗಾದ ಹಾದಿಯಲ್ಲಿ ನಡೆಯುತ್ತಿದ್ದೆ.

ಎದುರಿನ ತಿರುವಿನಲ್ಲಿ ಒಬ್ಬಾತ ಪಾಶ್ಚಿಮಾತ್ಯ ಪ್ರವಾಸಿ ನನ್ನ ಹಾಗೆಯೇ ಒಂಟಿಯಾಗಿ ನೆಲನೋಡುತ್ತಾ ನಡೆದು ಬರುತ್ತಿದ್ದವನು ಹತ್ತಿರ ಬಂದಾಗ ಮುಗುಳ್ನಕ್ಕ.

ಆತ ಮೂಲತಃ ದಕ್ಷಿಣ ಆಫ್ರಿಕಾದವನು.

ಆತನ ಮುತ್ತಾತಂದಿರು ಇನ್ನೂರು ವರ್ಷಗಳ ಹಿಂದೆ ಇಂಗ್ಲೆಂಡಿನಿಂದ ವಲಸೆ ಹೊರಟು ಕೇಪ್ ಟೌನಿನ ಸುತ್ತಮುತ್ತ ಬೇಸಾಯ ಶುರುಮಾಡಿದವರು.

ಆಮೇಲೆ ಬೇಸಾಯ ಬೇಸರವಾಗಿ ನಗರದಲ್ಲಿ ಸಣ್ಣಪುಟ್ಟ ಉದ್ಯೋಗಗಳನ್ನು ಕೈಗೊಂಡು ಬದುಕಿದ್ದವರು.

ಈತನ ಅಜ್ಜನಿಗೆ ಆಫ್ರಿಕಾದ ವರ್ಣಬೇಧ ಅಸಹ್ಯ ಬರಿಸಿತ್ತಂತೆ.ಆತ ಮಹಾತ್ಮಾ ಗಾಂಧಿಯ ಪರಮ ಅನುಯಾಯಿಯಾಗಿದ್ದನಂತೆ.ಹಾಗಾಗಿ ಈತನಿಗೂ ಭಾರತವೆಂದರೆ ಪ್ರೀತಿ.

ವರ್ಷಕ್ಕೆ ಆರು ತಿಂಗಳು ಕಟ್ಟಡ ವಿನ್ಯಾಸಕಾರನಾಗಿ ಆಸ್ಟ್ರೇಲಿಯಾದಲ್ಲಿ ದುಡಿಯುವ ಈತ ಉಳಿದ ಆರು ತಿಂಗಳು ಲೋಕ ಸುತ್ತುತ್ತಿರುತ್ತಾನೆ

ಹತ್ತು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಈತ ಇಲ್ಲಿರುವ ಜಲಪಾತವೊಂದನ್ನು ನೋಡಲು ಬಂದಿದ್ದ.

ಇದೇ ದಾರಿಯಲ್ಲಿ ಈ ಮನೋಚಿಕಿತ್ಸಕ ಡಾಕ್ಟರು ಸಿಕ್ಕಿದ್ದರಂತೆ.ಈತನನ್ನು ಜೀಪಿನಲ್ಲಿ ಹತ್ತಿಸಿಕೊಂಡು ಜಲಪಾತ ತೋರಿಸಿದ್ದರಂತೆ.ತಮ್ಮ ಬಂಗಲೆಗೆ ಕರೆದುಕೊಂಡು ಹೋಗಿ ಟೀ ಕುಡಿಸಿ ತಮ್ಮ ಮನೆತನದ ಕತೆ ಇರುವ ಅಚ್ಚುಮಾಡಿಸಿಟ್ಟಿದ್ದ ಹಾಳೆಯನ್ನು ಕೊಟ್ಟಿದ್ದರಂತೆ.

ಈತನಿಗೂ ಅವರ ಉಳಿದ ಕಥೆಗಳನ್ನು ಕೇಳುವ ಆಸೆ.

ಅದಕ್ಕಾಗಿ ಮತ್ತೆ ಬಂದಿದ್ದ.ಡಾಕ್ಟರಿಲ್ಲದ ಬಂಗಲೆಯನ್ನು ದೂರದಿಂದಲೇ ನೋಡಿ ವಾಪಾಸು ನಡೆದು ಬರುತ್ತಿದ್ದ.

‘ಮನೋಚಿಕಿತ್ಸಕ ಡಾಕ್ಟರಿಗೆ ಹುಷಾರಿಲ್ಲ.ಬೆಂಗಳೂರಲ್ಲಿದ್ದಾರೆ ಎಂದು ಗೇಟಿಂದಲೇ ವಾಪಾಸು ಕಳಿಸಿದರು’ ಎಂದು ಆತ ಬೇಸರದಲ್ಲಿ ನಕ್ಕ.‘ಹಾಗಾದರೆ ನಾನೂ ಹೋಗಿ ಪ್ರಯೋಜನವಿಲ್ಲ.ನಿನ್ನ ಜೊತೆ ವಾಪಾಸು ನಡೆಯುತ್ತೇನೆ’ ಎಂದು ನಾನೂ ವಾಪಾಸು ನಡೆಯತೊಡಗಿದೆ.

‘ನಿಮ್ಮ ಭಾರತದಲ್ಲೂ,ನನ್ನ ದಕ್ಷಿಣ ಆಫ್ರಿಕಾದಲ್ಲೂ ಬ್ರಿಟಿಷರು ಎಷ್ಟೊಂದು ಅವಾಂತರಗಳನ್ನೂ ಏಕಾಂಗಿಗಳನ್ನೂ ಸೃಷ್ಟಿಮಾಡಿರುವರು’ಆತ ಕೊಂಚ ಉದ್ವಿಗ್ನನಾಗಿಯೇ ಅನ್ನುತ್ತಿದ್ದ.

‘ಹೌದು ಮಾರಾಯ ಈ ಕಾಡುಹೂಗಳ ರಾಜ್ಯದಲ್ಲಿ ಇನ್ನೇನೆಲ್ಲ ದುಗುಡಗಳಿವೆಯೋ’ ಎಂದು ನಾನೂ ಅಂದುಕೊಳ್ಳುತ್ತಿದ್ದೆ.

549952_10151286033533246_1029751060_nನಾವಿಬ್ಬರೂ ಆ ಸಂಜೆ ಬಹಳ ಹೊತ್ತು ಈ ಮನೋಚಿಕಿತ್ಸಕ ಡಾಕ್ಟರ ಕುರಿತು ಮಾತನಾಡುತ್ತಾ ಕುಳಿತಿದ್ದೆವು.

ಯಾವ ಕೋನದಿಂದ ಮಾತನಾಡಿದರೂ ಕೊನೆಗೆ ಈ ಡಾಕ್ಟರು ಬಹಳ ಒಳ್ಳೆಯವರಾಗಿಯೇ ಕಾಣಿಸಿಕೊಳ್ಳುತ್ತಿದ್ದರು.

8 September 2013

Photos By the author

ಮೊಬೈಲು ಟವರು ಹತ್ತಿದ್ದ ಕಿಶೋರನ ಕಥೆ

DSC_0103

‘ಈ ಸಲ ಮದ್ದಿಗೆ ಅಂತ ಹುಡುಕಿದರೂ ಒಂದು ಜಿಗಣೆ ಸಿಗುವುದಿಲ್ಲ.ಅಷ್ಟು ಮಳೆ ಸಾರ್. ಇರುವೆಗಳೂ ಇಲ್ಲ ಏಡಿಗಳೂ ಇಲ್ಲ ಜಿಗಣೆಗಳೂ ಇಲ್ಲ ಎಲ್ಲ ಖಲಾಸ್’ ಎಂದು ದಾರಿ ತೋರಿಸುತ್ತಾ ನಡೆಯುತ್ತಿದ್ದ ಕಿಶೋರ ಗೊಣಗುತ್ತಿದ್ದ.

ನನಗೆ ಮಾರ್ಗದರ್ಶಿಯಾಗಿರುವನೆಂಬ ಒಂದು ದೊಡ್ಡ ಹೆಮ್ಮೆ, ಆದರೆ ತಾನಿನ್ನೂ ಬಾಲ್ಯಾವಸ್ತೆಯನ್ನ ದಾಟಿ ಪರಿಪೂರ್ಣ ಯುವಕನಾಗಿಲ್ಲವಲ್ಲ ಎಂಬ ಒಂದು ಸಣ್ಣ ಸಂಕೋಚ ಹಾಗೂ ಅದಕ್ಕಿಂತಲೂ ಹೆಚ್ಚಾಗಿ ಈ ಊರಿನಲ್ಲಿ ಯಾರೂ ತನ್ನ ಸಾಹಸಗಳನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲವಲ್ಲ ಎಂಬ ಒಂದು ಶಾಶ್ವತವಾದ ಬೇಸರ ಅವನ ಮುಖದಲ್ಲಿ ಸುಳಿಯುತಿತ್ತು.

ಈ ಊರಿನಲ್ಲಿ ಎಲ್ಲರ ಹಾಗೆ ತಾನಿಲ್ಲ ಎಂದು ತೋರಿಸಿಕೊಳ್ಳಲು ಆತ ಬೆಂಗಳೂರಿನಿಂದ ಬರುವಾಗ ತನ್ನ ಎಡ ತೋಳಿಗೊಂದು ಹಚ್ಚೆ ಹೊಯ್ಯಿಸಿಕೊಂಡಿದ್ದ. ಹಸಿರು ಬಣ್ಣದಲ್ಲಿ ಹೊಯ್ಯಿಸಿಕೊಂಡಿದ್ದ ಚೀನಾದ ಆ ಡ್ರಾಗನ್ ವಿನ್ಯಾಸವೂ ಇಲ್ಲಿನ ಚಳಿಮಳೆಗಾಳಿಗೆ ಸಿಲುಕಿ ತನ್ನ ಒರಿಜಿನಲ್ ರೂಪಬಣ್ಣಗಳನ್ನು ಕಳೆದುಕೊಂಡು ಒಂಥರಾ ತಮಾಷೆಯಾಗಿ ಕಾಣಿಸುತ್ತಿತ್ತು.

ಈ ಕಿಶನ್ ತಾನಾಗಿಯೇ ನನ್ನ ಮಾರ್ಗದರ್ಶಕನಾಗಿರಲು ಮುಂದೆ ಬಂದಿದ್ದ.

ಯಾವುದೋ ದಾರಿಯಲ್ಲಿ ಹೊರಟಿದ್ದ ನಾನು ಆ ದಾರಿಯನ್ನು ತಪ್ಪಿ ಯಾವುದೋ ಕೇರಿಯೊಂದರ ಹೆಸರು ಹುಡುಕುತ್ತಾ ಇನ್ನೊಂದು ಕೇರಿಯನ್ನು ತಲುಪಿದ್ದೆ.

ಇಲ್ಲೇ ಎಲ್ಲೋ ಒಂದು ಕಡೆ ಯಾರೋ ಒಬ್ಬರು ಬಹಳ ಹಳೆಯದಾದ ನಾಲ್ಕುಕಟ್ಟಿನ ತೊಟ್ಟಿಮನೆಯೊಂದನ್ನು ನೆಲಸಮ ಮಾಡಿ ಆ ಜಾಗದಲ್ಲಿ ಐಶಾರಾಮವಾದ ಕಾಂಕ್ರೀಟು ಮನೆಯೊಂದನ್ನು ಕಟ್ಟಿಸಲು ಹೊರಟಿದ್ದಾರೆಂದೂ ಮಡಿಕೇರಿಯ ಸಂತೆಗೆ ಬಂದಿದ್ದವರೊಬ್ಬರು ಹೇಳಿದ್ದರು.

DSC_0185_2ಹಳೆಯ ಮನೆಗಳು, ಹಳೆಯ ಸೇತುವೆಗಳು, ಹಳೆಯ ದಾರಿಗಳು ಮತ್ತು ಹಳೆಯ ಮನುಷ್ಯರು ಇವು ಯಾವುವೂ ಒಮ್ಮೆ ಕಳೆದುಹೋದರೆ ಮತ್ತೆ ಕಾಣಲು ಸಿಗದು ಎಂದು ಕಳೆದುಹೋಗುತ್ತಿರುವ ಹಳೆಯ ಚೌಕಟ್ಟಿನ ಮನೆಯನ್ನು ಹುಡುಕಿಕೊಂಡು ಹೊರಟಿದ್ದೆ.

ಊರ ದನಗಳನ್ನು ಕಾಯುವ ಕೆಲಸದ ಬಾಲಕರನ್ನು ಬಿಟ್ಟರೆ ಉಳಿದವರೆಲ್ಲರೂ ಸುರಿವ ಮಳೆಯಲ್ಲಿ ಬಂಧಿಗಳಾಗಿ ಬಹುಶಃ ಮನೆಯೊಳಗೆ ಚಳಿಕಾಯಿಸಿಕೊಳ್ಳುತ್ತಿದ್ದರು.

ಉಳಿದಂತೆ ಮೂರುದಾರಿ ಸೇರುವಲ್ಲಿ ಇರುವ ಹೆಸರಿಲ್ಲದ ಚಾದಂಗಡಿಗಳಲ್ಲಿ ಸಿಲುಕಿಕೊಂಡಿರುವ ಸಣ್ಣಪುಟ್ಟ ಕುಡುಕರು ಮತ್ತು ಕೆಲವು ಒಳ್ಳೆಯವರು ಬೇರೇನೂ ಕೆಲಸವಿಲ್ಲದೆ ಊರ ಸಮಾಚಾರಗಳನ್ನು ಹರಟುತ್ತಿದ್ದರು.

ಅಂತದೊಂದು ಚಾದಂಗಡಿಯಲ್ಲೇ ನನಗೆ ಎಳೆಯನಾದ ಈ ಕಿಶೋರ ಎಂಬವನು ಸಿಕ್ಕಿದ್ದು.

ಒಂದಿಷ್ಟು ಹಿರಿಯರ ಮತ್ತು ಒಂದಿಷ್ಟು ತರುಣರ ನಡುವೆ ಅವರ ಹಾಗೆಯೇ ಮಾತನಾಡುತ್ತ ಅವರ ಹಾಗೆಯೇ ತುಟಿಯ ನಡುವೆ ಸಿಗರೇಟೊಂದನ್ನು ಸಿಲುಕಿಸಿಕೊಂಡು ತಾನೂ ಅವರಂತೆಯೇ ಲೋಕಾಭಿರಾಮವಾಗಿರುವೆನು ಎಂದು ತೋರಿಸಿಕೊಳ್ಳಲು ಆತನು ಹೆಣಗುತ್ತಿದ್ದ.

ಆದರೆ ಆತನ ತುಟಿಯ ಮೇಲೆ ಇನ್ನೂ ಮೂಡದ ಮೀಸೆ ಮತ್ತು ಆತನ ಕಣ್ಣುಗಳಲ್ಲಿ ಇನ್ನೂ ಉಳಕೊಂಡಿದ್ದ ಹೊಳಪು ಅವನನ್ನು ಅವರೆಲ್ಲರಿಂದ ಬೇರೆಯನ್ನಾಗಿ ಮಾಡಿತ್ತು.

ಅದು ಸಾಲದೇನೋ ಎಂಬಂತೆ ಅವರೆಲ್ಲರೂ ‘ನೋಡಿ ಸಾರ್, ಇವನು ಶಾಲೆಗೂ ಹೋಗುವುದಿಲ್ಲ ಕೆಲಸವನ್ನೂ ಮಾಡುವುದಿಲ್ಲ ಸುಮ್ಮನೆ ಬೀಡಿ ಸೇದಿಕೊಂಡು ಓಡಾಡುತ್ತಿರುತ್ತಾನೆ.ಬೇಕಾದರೆ ನೀವೇ ಇವನನ್ನು ಅಸಿಸ್ಟೆಂಟಾಗಿ ಇಟ್ಟುಕೊಳ್ಳಿ.ಎಲ್ಲ ಕೆಲಸಕ್ಕೂ ಆಗುತ್ತಾನೆ.’ ಎಂದು ಗಹಗಹಿಸಿದ್ದರು.

ಆ ಚಾದಂಗಡಿ ನಡೆಸುತ್ತಿದ್ದ ದೊಡ್ಡ ನಡುವಿನ ಹೆಂಗಸಂತೂ ಅವನ ಕಿವಿಯನ್ನು ಚಿವುಟುತ್ತಾ, ‘ಏನು ಸಾರ್ ಇವನು.ಬೀಡಿ ಸೇದಕ್ಕೂ ಸಾಲ, ಚಾ ಕುಡಿಯಕ್ಕೂ ಸಾಲ.ಇವನಿಗೆ ಸಾಲ ಕೊಟ್ಟೇ ನಾನು ಫುಲ್ ಲಾಸಾಗಿ ಹೋಗಿದ್ದೇನೆ’ ಎಂದು ಅಲವತ್ತುಕೊಂಡಿದ್ದಳು.

ಅವನನ್ನು ಇವರೆಲ್ಲರಿಂದ ಬಚಾವ್ ಮಾಡುವ ಸಲುವಾಗಿ ‘ಬಾರೋ ಕಿಶೋರ ನನಗೆ ಈ ಊರಿನಲ್ಲಿ ದಾರಿ ಗೊತ್ತಿಲ್ಲ.ದಾರಿ ತೋರಿಸು’ಎಂದು ಜೀಪಿನಲ್ಲಿ ಹತ್ತಿಸಿಕೊಂಡು ಹೊರಟಿದ್ದೆ.

2011-11-29_6228ಜೀಪಿನೊಳಗೆ ಕುಳಿತಂತೆ ಆತನಿಗೆ ಜೀವ ಬಂದ ಹಾಗಿತ್ತು.

‘ಜನ ಸರಿ ಇಲ್ಲ ಸಾರ್.ಇವರಿಗೆ ಏನೂ ಗೊತ್ತಿಲ್ಲ.ಎಲ್ಲ ಪುಕ್ಸಾಟೆ ಜನ’ ಅಂದಿದ್ದ

.‘ಸರಿ ಮಾರಾಯ.ಜನ ಪುಕ್ಸಾಟೆ.ನೀನು ಪರ್ಕಟ್ಟೆ.ನಿನಗೆ ಏನು ಗೊತ್ತುಂಟು ಹೇಳು’ ಅಂದಿದ್ದೆ.

‘ಏನು ಬೇಕಾದರೂ ಕೇಳಿ ಸಾರ್.ಈ ಕೋಣನಕೇರಿಯಿಂದ ಹಿಡಿದು ಬೆಂಗಳೂರಿನ ಎಲೆಕ್ಟಾನಿಕ್ ಸಿಟಿಯ ಇನ್ಫೋಸಿಸ್ ತನಕ ಏನು ಬೇಕಾದರೂ ಕೇಳಿ’ ಅಂದಿದ್ದ.

‘ ಮಾರಾಯ ಮೀಸೆಯೇ ಬಾರದ ನಿನಗೆ ಇನ್ಫೋಸಿಸ್ ಏನು ಗೊತ್ತು?’ ಎಂದು ಕೇಳಿದೆ.

‘ಸರ್ ನಾನು ಶಾಲೆ ಬಿಟ್ಟು ಓಡಿ ಹೋಗಿ ಬೆಂಗಳೂರಿನಲ್ಲಿ ಇನ್ಫೋಸಿಸ್ ಹತ್ತಿರ ಪ್ಯಾಂಟ್ರಿ ಅಸಿಸ್ಟೆಂಟ್ ಆಗಿ ಎಂಟು ತಿಂಗಳು ಇದ್ದೆ.ಟಾಟಾ, ಸತ್ಯಂ ಎಲ್ಲ ಗೊತ್ತುಂಟು’ ಅಂದ.

ಆಮೇಲೆ ಮುಖದಲ್ಲಿ ಸುಳ್ಳು ಮೀಸೆ ಬಿಡಿಸಿಕೊಂಡು ಗನ್ ಮ್ಯಾನ್ ಆಗಿಯೂ ಎರಡು ತಿಂಗಳು ಇದ್ದನಂತೆ

.ಅಲ್ಲಿ ಇವನಿಗೆ ವಯಸ್ಸಾಗಿಲ್ಲ ಎಂದು ಗೊತ್ತಾಗಿ ಆಲ್ಲಿಂದ ಓಡಿಸಿದರಂತೆ.

ಆಮೇಲೆ ಅಲ್ಲಿ ಇಲ್ಲಿ ಬಾರಿನಲ್ಲಿ, ಜಿಮ್ಮಿನಲ್ಲಿ ಎಮ್ಮೆಲ್ಲೆ ಒಬ್ಬರ ತೋಟದ ಮನೆಯಲ್ಲಿ ಹೀಗೆ ಎಲ್ಲ ಕಡೆ ದುಡಿದು ಅನುಭವಿಸಿ ಪುನ: ಊರಿಗೆ ಬಂದು ಅಲೆಯುತ್ತಿದ್ದ.

ಬೆಂಗಳೂರಲ್ಲಿ ಜಿಮ್ಮಿನಲ್ಲಿರುವಾಗ ಯಾರದೋ ತೋಳಲ್ಲಿ ಚೈನೀಸ್ ಹಚ್ಚೆಯೊಂದನ್ನು ನೋಡಿ ತಾನೂ ಹಾಕಿಸಿಕೊಂಡು ಬಂದಿದ್ದ.

ಅದನ್ನು ಕಂಡ ಇವನ ಅಪ್ಪ ಕಂಡಾಪಟ್ಟೆ ಸಿಟ್ಟಾಗಿದ್ದರು.

ಅದನ್ನು ತೆಗೆಯದಿದ್ದರೆ ಉಳಿಯಿಂದ ಸಿಗಿದು ಹಾಕುವುದಾಗಿ ಬೊಬ್ಬೆ ಹಾಕಿದ್ದರು.

ಇವನೂ ಅದನ್ನು ತೆಗೆಯಲು ಹೋಗಿ ಏನೆಲ್ಲಾ ಮಾಡಿ ಅದರ ಬಣ್ಣವೂ ರೂಪವೂ ಹಾಳಾಗಿ ಒಂಥರಾ ತಮಾಷೆಯಾಗಿ ಕಾಣುತ್ತಿತ್ತು.

‘ಅಲ್ಲ ಸರ್ ನನ್ನ ತೋಳಲ್ಲಿ ಟಾಟೂ ಇದ್ದರೆ ಇವರಿಗೇನು ಲಾಸು’ ಅವನು ಮಗುವಿನಂತೆ ಕೇಳುತ್ತಿದ್ದ.

‘ಲಾಸೇನಿಲ್ಲ.ಆದರೆ ಈ ಸುರೂಪದಲ್ಲಿ ಇದ್ದು ಲಾಭವೂ ಇಲ್ಲ.ಅದು ಹೋಗಲಿ ಬಿಡು ನಿನ್ನ ಅಪ್ಪ ಏನು ಮಾಡುತ್ತಾರೆ?’ಎಂದು ಕೇಳಿದೆ.

`ಅವರು ವಿಶ್ವಕರ್ಮ’ ಎಂದು ಅವನು ಹೇಳಿದ.

‘ಅಂದರೆ?’ ಎಂದು ಕೇಳಿದೆ.

‘ಅದೇ ಸಾರ್ ಮರದ ಕೆಲಸ’ ಎಂದು ಹೇಳಿದ.

‘ಸರಿ ಹಾಗಾದರೆ ಈ ಕಾಡಿನಲ್ಲಿ ಕಾಣಿಸುವ ಮರಗಳ ಹೆಸರುಗಳನ್ನು ಹೇಳು’ ಎಂದು ಕೇಳಿದೆ.

ಅಚ್ಚರಿಯಾಗುವಂತೆ ಅವನು ಎಲ್ಲ ಮರಗಳ ಹೆಸರುಗಳನ್ನ ಹೇಳಿದ.

ಮರಗಳ ಕುರಿತ ಕೆಲವು ತಮಾಷೆಗಳನ್ನೂ ಹೇಳಿದ.

ಉದಾಹರಣೆಗೆ ಮನೆಕಟ್ಟುವಾಗ ಹಲಸಿನ ಮರವನ್ನೂ ಹೆಬ್ಬಲಸಿನ ಮರವನ್ನೂ ಜೋಡಿಸಬಾರದಂತೆ.

ಯಾಕೆಂದರೆ ಅವು ಅಣ್ಣತಮ್ಮ ಮರಗಳಂತೆ.ಹಾಗಾಗಿ ಅವುಗಳನ್ನು ಜೋಡಿಸಿದರೆ ಆ ಮನೆಯಲ್ಲಿ ಅಣ್ಣತಮ್ಮಂದಿರಿಗೆ ಜಗಳ ನಿಲ್ಲುವುದೇ ಇಲ್ಲವಂತೆ.

ಆದರೆ ಜೋಡಿಸಲೇಬೇಕಾಗಿ ಬಂದರೆ ಒಂದು ಪರಿಹಾರವುಂಟಂತೆ.

ಅದೇನೆಂದರೆ ಹಾಗೆ ಜೋಡಿಸುವಾಗ ಅವೆರಡು ಮರಗಳ ನಡುವೆ ಮೂರನೆಯ ಮರವೊಂದರ ಆಪನ್ನು ಹಾಕಬೇಕಂತೆ.

2011 11 29_6211ಆತ ಇಂತಹದೇ ಹಲವು ಹತ್ತು ಕಥೆಗಳನ್ನು ಹೇಳುತ್ತಿದ್ದ.

ನಡುವಲ್ಲಿ ಕೆಲವು ತಮಾಷೆಗಳನ್ನೂ.

ಜೊತೆಯಲ್ಲಿ ಆತ ಆ ಸುತ್ತಮುತ್ತಲಿನ ಹತ್ತಾರು ಪಾಳುಬಿದ್ದ ಪುರಾತನ ತೊಟ್ಟಿ ಮನೆಗಳನ್ನೂ ತೋರಿಸಿದ್ದ.

‘ಅಯ್ಯೋ ಬಿಡಿ ಸಾರ್ ಇವೆಲ್ಲಾ ಈಗ ಯಾರಿಗೆ ಬೇಕು ಇಲ್ಲಿ.ಜನ ಯಾರೂ ಸರಿಯಿಲ್ಲ.ಎಲ್ಲರಿಗೂ ಬೇಕಾಗಿರುವುದು ಕಾಂಕ್ರೀಟು ಮನೆಗಳೇ’ ಎಂದು ನೆಲಕ್ಕೆ ಉಗುಳಿ ‘ಒಂದು ಸಿಗರೇಟಿದ್ದರೆ ಕೊಡಿ ಸಾರ್’ ಎಂದು ಕೇಳಿದ್ದ

‘ಸಾರ್ ನಿಮ್ಮ ಹತ್ತಿರ ಏನೋ ಹೇಳಬೇಕಿತ್ತು’ ಅಂದ.

‘ಸಾರ್, ನಿಮಗೆ ನನ್ನ ವಿಷಯ ಗೊತ್ತಿರಬಹುದು’ಅಂದ

‘ಸಾರ್ ಅಲ್ಲಿ ಕಾಣ್ತಾ ಇದೆಯಲ್ಲ ಆ ಬಿಎಸ್ಸೆನ್ನೆಲ್ ಮೊಬೈಲ್ ಟವರ್. ಅದರ ಮೇಲೆ ಹತ್ತಿ ಸಾಯಲು ಹೊರಟಿದ್ದೆನಲ್ಲ.ಅದೇ ಕಿಶೋರ್ ಸಾರ್ ನಾನು’ ಅಂದ.

‘ಅಯ್ಯೋ ಮಾರಾಯ ತುಂಬಾ ಜನ ಸಾಯಲು ಮೊಬೈಲು ಟವರ್ ಹತ್ತುತ್ತಾರೆ. ನಿನ್ನ ಕಥೆ ನೆನಪಿಲ್ಲ.ಯಾಕೆ ಸಾಯಲು ಹೊರಟಿದ್ದೆ.ಹೇಳು’ಎಂದು ಬೇಕೆಂತಲೇ ನಿರ್ವಿಕಾರನಾಗಿ ಅಂದೆ.

‘ಗೊತ್ತಿಲ್ಲ ಸಾರ್.ಎಲ್ಲಿ ಬದುಕಬೇಕು. ಹೇಗೆ ಬದುಕಬೇಕು ಗೊತ್ತಿಲ್ಲ.ಅದಕ್ಕೆ ಸಾಯುವ ಅಂತ ಹತ್ತಿದ್ದೆ.ನೀವೂ ರೇಡಿಯೋದಲ್ಲಿ ಈ ಸುದ್ದಿ ಓದಿದ್ದೀರಿ.ಅದಕ್ಕೆ ನಿಮ್ಮ ಜೊತೆ ಹೇಳಬೇಕನಿಸಿತು.ಹೋಗುತ್ತೇನೆ ಬಾಯ್ ಸಾರ್’ ಎಂದು ಹೊರಟ.

`ಅಯ್ಯೋ ಮಾರಾಯ ಹೆಚ್ಚುಕಡಿಮೆ ನನ್ನದೂ ಇಂತಹದೇ ಕಥೆ ಆದರೆ ಮೊಬೈಲು ಟವರು ಹತ್ತುವುದು ಬೋರು ಎಂದು ಗೊಣಗಿಕೊಂದು ನಾನೂ ಅಲ್ಲಿಂದ ಹೊರಟೆ2011 11 29_620125 August 2013   Photos By The author

ಕಣ್ಣಿಲ್ಲದ ಉದ್ಯಾನ, ಸನ್ಮಾರ್ಗಿಯಲ್ಲದ ಗುಲಾಮ

 

DSC_1725

ಸರಿ ಸುಮಾರು ಹತ್ತು ವರ್ಷಗಳ ನಾನು ಬರೆದ ಬರಹವೊಂದರ ಅಂಧ ಗಾಯಕಿಯನ್ನು ನಿನ್ನೆ ಸಂಜೆ ಭೇಟಿಯಾದಾಗ ಆಕೆ ಎಲ್ಲವನ್ನೂ ಮರೆತು ಹೋಗಿದ್ದಳು.

ಎಲ್ಲವನ್ನು ಅಂದರೆ ಎಲ್ಲವನ್ನೂ.

ಆಕೆಯ ತಾಯಿ, ಒಡಹುಟ್ಟಿದ ಮೂವರು ಸಹೋದರಿಯರು, ಭಾಲ್ಯಕಾಲದ ಒಂದಿಬ್ಬರು ಗೆಳತಿಯರ ಹೆಸರುಗಳು ಮತ್ತು ಹೈಸ್ಕೂಲಿನಲ್ಲಿ ಎಲ್ಲರೂ ಒಂದಾಗಿ ಎದ್ದುನಿಂತು ಹಾಡುತ್ತಿದ್ದ ಕನ್ನಡದ ಒಂದು ಪ್ರಾರ್ಥನಾ ಗೀತೆ ಇಷ್ಟು ಬಿಟ್ಟರೆ ಆಕೆ ಬೇರೆಲ್ಲವನ್ನೂ ಮರೆತಿದ್ದಳು.

ಹುಟ್ಟಿನಿಂದಲೇ ಅಂಧಳಾಗಿದ್ದ ಈಕೆಯ ಮಿದುಳಿನ ಒಳಕ್ಕೆ ಸೋಂಕಿನ ವೈರಾಣುಗಳು ಹೊಕ್ಕು ಆಕೆ ಉಳಿದ ಎಲ್ಲವನ್ನೂ ಮರೆತು ಹೋಗಿದ್ದಳು.

ಬಹಳ ಚಿರಪರಿಚಿತನಾಗಿದ್ದ .ನನ್ನ ಹೆಸರನ್ನೂ, ಉದ್ಯೋಗವನ್ನೂ, ವಿದ್ಯಾಭ್ಯಾಸವನ್ನೂ ಮತ್ತು ಆಕೆಗೆ ನಾನು ಹೇಗೆ ಪರಿಚಿತ ಎಂಬುದನ್ನೂ ಮತ್ತೆ ಮತ್ತೆ ಕೇಳಿ ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಳು.ಎಷ್ಟು ನೆನಪಿಟ್ಟುಕೊಂಡರೂ ಅದು ಮರೆತು ಹೋಗುತ್ತಿದೆ ಎಂದು ಗೊತ್ತಾದಾಗ ಆಕೆ ಬೋರೆಂದು ಅಳಲು ಶುರು ಮಾಡಿದ್ದಳು.

ಮೈಸೂರಿನ ಒಂದು ಮುಸಲ್ಮಾನ ಮೊಹಲ್ಲಾದ ಬೀದಿ.

ಆಷಾಡದ ಮೂರನೇ ಶುಕ್ರವಾರವೂ ರಮಜಾನಿನ ಮೂರನೇ ಶುಕ್ರವಾರವೂ ಒಂದಾಗಿರುವ ಜಿಟಿಜಿಟಿಮಳೆಯ ಸಂಜೆ.

ಉಪವಾಸದ ಹಸಿವೂ, ಆಷಾಡದ ಭಕ್ತಿಯೂ ಒಂದಾದಂತಿರುವ ಕೋಣೆಯೊಳಗಿನ ಮಂಕು ಮಂಕು ಬೆಳಕು.

ತನಗೆ ಏನೂ ನೆನಪಾಗುತ್ತಿಲ್ಲ ಎಂದು ಅಳುತ್ತಿದ್ದವಳು ಅಳು ನಿಲ್ಲಿಸಿ ‘ಅದೆಲ್ಲ ಹೋಗಲಿ ಬಿಡಿ, ನಾನು ನೋಡಲು ಚಂದವಿದ್ದೇನಾ ಅದನ್ನಾದರೂ ಹೇಳಿ’ ಎಂದು ಕೇಳಿದಳು.

‘ನೀನು ಮೊದಲಿನಿಂದಲೇ ಚಂದವಿದ್ದವಳು.ಈಗ ಇನ್ನೂ ಚಂದವಾಗಿದ್ದೀಯಾ’ ಎಂದು ಹೇಳಿದೆವು.

‘ಹೌದಾ ಹೌದಾ’ ಎಂದು ಆಕೆ ಸಂಭ್ರಮಿಸತೊಡಗಿದಳು.

ಆಮೇಲೆ ಇದ್ದಕ್ಕಿದ್ದಂತೆ ಮೌನವಾದಳು.

‘ಇಲ್ಲ ಇಲ್ಲ ನಾನು ನಯಾ ಪೈಸ ಚಂದವಿಲ್ಲ.ನಾನು ಚಂದವೂ ಇಲ್ಲ.ಯಾರಿಗೂ ಪ್ರಯೋಜನವೂ ಇಲ್ಲ.ನಾವು ನಾಲ್ಕು ಜನ ಅಂಧ ಹಾಡುಗಾರ್ತಿಯರಲ್ಲಿ ನಾನೇ ಎಲ್ಲರಿಗಿಂತ ನಿಷ್ಪ್ರಯೋಜಕಿ’ ಎಂದು ಎದೆ ಬಡಿದುಕೊಂಡು ಅಳಲು ತೊಡಗಿದ್ದಳು.

‘ ಕಳೆದ ಎರಡು ವರ್ಷಗಳಿಂದ ಇವಳ ಅಳುವೂ ಆಟವೂ ಹೀಗೆಯೇ ದಿನವೂ ನಡೆಯುತ್ತಿದೆ.ನನಗಂತೂ ಸಾಕು ಸಾಕಾಗಿ ಹೋಗಿದೆ..ಅಲ್ಲಾ ಏನು ಮಾಡುವುದೋ ಗೊತ್ತಾಗುತ್ತಿಲ್ಲ. ’ ಎಂದು ಒಂದು ಕಾಲದ ನವಾಬೀ ಸುಂದರಿಯಂತೆ ಕಾಣಿಸುತ್ತಿದ್ದ ಆಕೆಯ ಅಮ್ಮ ತಾನೂ ನಿಟ್ಟುಸಿರುಬಿಟ್ಟಳು.

ಅಮ್ಮನ ನಿಟ್ಟುಸಿರು ಕೇಳಿದ ಮಗಳು ಅಳು ನಿಲ್ಲಿಸಿ.‘ನಿನ್ನ ಹೆಸರೇನು?’ ಎಂದು ಮತ್ತೆ ಕೇಳಿದಳು.

ಹೇಳಿದೆ.‘ನಿಮ್ಮ ಹೆಸರಿನ ಅರ್ಥವೇನು?’ ಎಂದು ಕೇಳಿದಳು.

ಹೇಳಿದೆ.

‘ನನ್ನ ಹೆಸರು ಗೊತ್ತಾ?’ ಕೇಳಿದಳು.

ಹೇಳಿದೆ.

‘ನನ್ನ ಹೆಸರಿನ ಅರ್ಥವೇನು ಗೊತ್ತಾ?” ಕೇಳಿದಳು.

ಅದನ್ನೂ ಮತ್ತೆ ಹೇಳಿದೆ.

‘ನೀವು ನನಗೆ ಏನಾಗಬೇಕು ಹೇಳಿ.ಬೇಸರ ಮಾಡಬೇಡಿ.ನನಗೆ ಏನೋ ಮಿದುಳಿನ ಕಾಯಿಲೆಯಾಗಿದೆ.ಹಾಗಾಗಿ ದಯವಿಟ್ಟು ಹೇಳಿ’ ಎಂದು ಕೇಳಿದಳು.

‘ನಾನು ಒಂದು ಕಾಲದಲ್ಲಿ ನೀವು ಹಾಡುತ್ತಿದ್ದ ಭಾವಗೀತೆಗಳ ಗುಲಾಮನಾಗಿದ್ದೆ.ಕೇಳಲು ಬರುತ್ತಿದ್ದೆ.ನಿಮ್ಮನ್ನು ರೇಡಿಯೋದಲ್ಲಿ ಹಾಡಿಸಿದ್ದೆ.ಅದನ್ನು ಕೇಳಿದ ಬಹಳಷ್ಟು ಜನ ಮೆಚ್ಚಿದ್ದರು.ನೀವು ಮೈಸೂರಿನ ಖ್ಯಾತ ಹಾಡುಗಾರ್ತಿ ಸಹೋದರಿಯಾಗಿದ್ದಿರಿ.ಆಮೇಲೆ ನಿಮ್ಮ ಬಗ್ಗೆ ನಾನು ಅಂಕಣವನ್ನೂ ಬರೆದಿದ್ದೆ.ಓದುಗರು ಅದನ್ನೂ ಓದಿ ಖುಷಿಪಟ್ಟಿದ್ದರು.ಈಗ ನೆನಪಾಗುತ್ತಿದೆಯಾ?’ ಎಂದು ಕೇಳಿದೆ.

ಆಕೆಗೆ ಏನೇನೂ ನೆನಪಾಗುತ್ತಿರಲಿಲ್ಲ.ಆದರೆ ಆಕೆಯ ಅಮ್ಮನೂ ಸಹೋದರಿಯರೂ ನೆನಪಿಟ್ಟುಕೊಂಡು ಈಕೆಯ ಮರೆಗುಳಿತನಕ್ಕೆ ಮರುಗುತ್ತಿದ್ದರು.ಮತ್ತು ಈಕೆಯ ನಿರಂತರ ಪ್ರಶ್ನೆಗಳಿಗೆ ಒಳಗೊಳಗೆ ನಗುತ್ತಿದ್ದರು.

ಏಕೆಂದರೆ ಈಕೆ ಸ್ವಲ್ಪ ಹೊತ್ತಿಗೆ ಮೊದಲು ‘ಓ ನೀನಲ್ಲವಾ ನನಗೆ ಪ್ರೇಮ ಪತ್ರಗಳನ್ನು ಬರೆಯುತ್ತಿದ್ದವನು’ ಎಂದು ತಪ್ಪಿ ಕೇಳಿಬಿಟ್ಟಿದ್ದಳು.

‘ ಅಯ್ಯೋ ಅದು ನಾನಲ್ಲ’ ಎಂದಾಗ ತಪ್ಪಿನ ಅರಿವಾಗಿ ನಾಚಿಕೊಂಡಿದ್ದಳು.

ಸುಮಾರು ಹತ್ತು ವರ್ಷಗಳ ಹಿಂದೆ ಇಂತಹದೇ ಒಂದು ಸಂಜೆ.

ಆಗಲೂ ಆಕೆ ನನ್ನ ಹೆಸರಿನ ಅರ್ಥ ಕೇಳಿದ್ದಳು.

ನಾನು ‘ನನ್ನ ಹೆಸರಿನಲ್ಲಿರುವ ಮೊದಲ ಪದಕ್ಕೆ ಗುಲಾಮ ಎಂಬ ಅರ್ಥ.ಎರಡನೆಯದಕ್ಕೆ ಸನ್ಮಾರ್ಗದಲ್ಲಿ ನಡೆಯುವವನು ಎಂದರ್ಥ ಎಂದಿದ್ದೆ.ಅಂದರೆ ನಾನು ಸನ್ಮಾರ್ಗದಲ್ಲಿ ನಡೆಯುವವರ ಗುಲಾಮ ಆದರೆ ಸ್ವತಃ ಸನ್ಮಾರ್ಗಿ ಅಂತ ಅಲ್ಲ’ ಅಂದಿದ್ದೆ.

ಆಕೆಯೂ ಆಕೆಯ ಹೆಸರು ಹೇಳಿ ಅದರ ಅರ್ಥ ಸ್ವರ್ಗದಲ್ಲಿರುವ ಸುಂದರ ಉದ್ಯಾನವನ ಎಂದು ಎಂದಿದ್ದಳು.

‘ನೋಡುವವರಿಗೆ ಉದ್ಯಾನವನ ಕಾಣಲು ಕಣ್ಣಿದ್ದರೆ ಸಾಕು.ಉದ್ಯಾನವನಕ್ಕೆ ಕಣ್ಣು ಕಾಣಿಸಬೇಕು ಎಂದೇನೂ ಇಲ್ಲವಲ್ಲ’ ಎಂದು ನಕ್ಕಿದ್ದಳು.

‘ಕಣ್ಣು ಕಾಣಿಸದ ಉದ್ಯಾನವನ ಮತ್ತು ಸನ್ಮಾರ್ಗಿಯಲ್ಲದ ಗುಲಾಮ’ ಎಂದು ನಾವೆಲ್ಲರೂ ನಕ್ಕಿದ್ದೆವು.

ಹತ್ತು ವರ್ಷಗಳ ಹಿಂದೆ ನಾನು ಅವರ ಬಳಿ ಹೋಗಿದ್ದು ಇನ್ನು ಮುಂದೆ ಕನ್ನಡದಲ್ಲಿ ಹಾಡುವುದೇ ಇಲ್ಲ ಎಂದು ಹಠತೊಟ್ಟಿದ್ದ ಅವರನ್ನು ಕಾಡಿಬೇಡಿ ಮತ್ತೆ ರೇಡಿಯೋದಲ್ಲಿ ಹಾಡಿಸಲು.ಆದರೆ ಎಷ್ಟು ಬೇಡಿದರೂ ಅವರು ಹಾಡಲು ಒಪ್ಪದೆ ನಿನಗೆ ಬೇಕಾದರೆ ಹಾಡುತ್ತೇವೆ.ಆದರೆ ರೇಡಿಯೋದಲ್ಲಿ ಹಾಡಲಾರೆವು ಎಂದು ಖಡಾಖಂಡಿತವಾಗಿ ನುಡಿದಿದ್ದರು.

ಆ ಸಂಜೆ ನನಗೆ ಇನ್ನೂ ನೆನಪಿದೆ.

ಪರದೆ ಇಳಿಬಿಟ್ಟ ಸಣ್ಣಗಿನ ಬೆಳಕಿನ ಇಂತಹದೇ ಆ ಸಂಜೆ ಈ ಮುಸಲ್ಮಾನ ಸಹೋದರಿಯರು ಒಂದೇ ದನಿಯಲ್ಲಿ ಒಂದೇ ಮನಸ್ಸಿನಲ್ಲಿ ಒಂದೇ ಆತ್ಮ ಹಾಡುತ್ತಿದೆ ಎನ್ನುವ ಹಾಗೆ ಕನ್ನಡದ ಒಂದೊಂದೇ ಹಾಡುಗಳನ್ನು ಮಗುವೊಂದನ್ನು ಎತ್ತಿಕೊಳ್ಳುವಂತೆ, ಆ ಮಗುವನ್ನು ತೋಳಿನಿಂದ ತೋಳಿಗೆ ಬದಲಿಸುತ್ತಿರುವಂತೆ, ಆ ಮಗುವಿನ ಕಣ್ಣುಗಳನ್ನು ಒಬ್ಬೊಬ್ಬರಾಗಿ ದಿಟ್ಟಿಸಿ ನೋಡುತ್ತಿರುವಂತೆ ಹಾಡಿದ್ದರು.

ನಾನು ಕಣ್ಣು ತುಂಬಿಕೊಂಡು ಅವರನ್ನು ನೋಡುತ್ತಿದ್ದೆ.

ಈ ಹಾಡುಗಳು ಯಾವುದೂ ಅರ್ಥವಾಗದೇ ಹೋಗಿದ್ದಿದ್ದರೆ, ಕಣ್ಣುಗಳು ಮಸುಕಾಗಿರುವ ನನಗೆ ಅವರ ಹಾಡಿನ ಕಣ್ಣುಗಳು ಬಂದಿದ್ದರೆ, ಇವರ ಹಾಗೆ ನಾನೂ ಒಂದು ಕೊಳೆಯಿಲ್ಲದ ಆತ್ಮವಾಗಿ ಎಲ್ಲ ಕಡೆ ಸುಳಿದಾಡುವಂತಿದ್ದರೆ ಎಂದು ಹಂಬಲಿಸಿಕೊಂಡು ಕೂತಿದ್ದೆ.

ಅವರು ಹಾಡುವುದನ್ನು ನಿಲ್ಲಿಸಿ ‘ಎಲ್ಲರಿಗಾಗಿ ಇನ್ನು ಹಾಡುವುದಿಲ್ಲ.ನಮ್ಮಷ್ಟಕ್ಕೆ ಹಾಡುತ್ತಿರುತ್ತೇವೆ,ನಿನಗೆ ಬೇಕಿದ್ದರೆ ಬಂದು ಕೇಳಿಕೊಂಡು ಹೋಗು’ ಎಂದು ಕಳಿಸಿದ್ದರು.

ಈ ನಡುವೆ ನಾನೂ ಎಲ್ಲರನ್ನೂ ಎಲ್ಲವನ್ನೂ ಮರೆತು ಯಾವ್ಯಾವುದೋ ಮೋಹಗಳ ಹಿಂದೆ ದನಗಾಹಿಯಂತೆ ಅಲೆಯುತ್ತಾ ಇಷ್ಟು ವರ್ಷಗಳನ್ನು ಕಳೆದುಬಿಟ್ಟಿದ್ದೆ.

ಈ ನಡುವೆ ಕಳೆದು ಹೋಗುತ್ತಿರುವ ಇರುಳುಗಳನ್ನು ಹಿಡಿದಿಟ್ಟುಕೊಳ್ಳಲೋ ಎಂಬಂತೆ ಬಂದಿರುವ ಫೇಸ್ ಬುಕ್.ಫೇಸ್ ಬುಕ್ಕಿನಲ್ಲಿ ನನ್ನನ್ನ ಕಂಡು ಹಿಡಿದ ಹಿರಿಯ ಅಂಧ ಸಹೋದರಿ ನನಗೊಂದು ಸಂದೇಶವನ್ನು ಕಳಿಸಿದ್ದಳು.

ನಿನ್ನನ್ನು ಸದಾ ನೆನೆದುಕೊಳ್ಳುತ್ತಿದ್ದ ನನ್ನ ತಂಗಿ ಉದ್ಯಾನವನದ ಹೆಸರಿನವಳಿಗೆ ಮಿದುಳಿನ ಸೋಂಕು ತಗಲಿ ಎಲ್ಲ ಮರೆತು ಹೋಗಿದೆಯೆಂದೂ ಗುಲಾಮನ ಹೆಸರಿನವನಾದ ನೀನು ಒಂದು ಸಲ ಬಂದು ನೋಡಿದ್ದರೆ ಒಳಿತಾಗುತ್ತಿತ್ತೆಂದೂ ಆ ಸಂದೇಶದಲ್ಲಿ ಹೇಳಿದ್ದಳು.

ನಿನ್ನೆ ಹೋಗಿ ನೋಡಿದರೆ ಆಕೆ ಉದ್ಯಾನವನ್ನೂ ಸನ್ಮಾರ್ಗವನ್ನೂ ಎಲ್ಲವನ್ನೂ ಮರೆತು ಪುಟ್ಟ ಬಾಲಕಿಯಂತೆ ನನಗೆ ಚಾಕೋಲೇಟ್ ತಂದುಕೊಡು ಎಂದು ಪೀಡಿಸುತ್ತಿದ್ದಳು.

`ಒಂದಾದರೂ ಹಾಡು ಹೇಳಿದರೆ ತಂದುಕೊಡುವೆ’ ಅಂದೆ.

ಆಕೆಗೆ ಒಂದು ಹಾಡೂ ನೆನಪಾಗುತ್ತಿರಲಿಲ್ಲ.ರಮಜಾನಿನ ಪವಿತ್ರ ತಿಂಗಳಾದುದರಿಂದ ಉಳಿದ ಸಹೋದರಿಯರೂ ಹಾಡಲಿಲ್ಲ.

ಕೊನೆಗೆ ‘ಆಯಿತು ಹಾಡುತ್ತೇನೆ’ ಎಂದು ಆಕೆ ತನಗೆ ನೆನಪಿದ್ದ ಒಂದೇ ಒಂದು ಚರಣ ಹಾಡಿದಳು.

ಆದು ಆಕೆಯ ಸಹಪಾಠಿ ಎಂಟನೇ ಕ್ಲಾಸಿನಲ್ಲಿ ಹಾಡುತ್ತಿದ್ದ ಹಾಡು

‘ಹರಿ ನೀನೆ ಗತಿಯೆಂದು ನೆರೆನಂಬಿ ಬದುಕಿರುವೆ ಮರೆತಿರುವುದು ನ್ಯಾಯವೇ’

ಅದು ಯಾಕೆ ಗೊತ್ತಿಲ್ಲ,ಆಕೆಗೆ ನೆನಪಿರುವುದು ಅದೊಂದೇ ಹಾಡು.ಅದನ್ನೇ ಮತ್ತೆ ಮತ್ತೆ ಹಾಡಿದಳು.

ಆಕೆಗೆ ಒಂದು ಒಳ್ಳೆಯ ಚಾಕೋಲೇಟು ಕೊಟ್ಟೆ.

ಉಪವಾಸ ಮುಗಿಸಿ ಸಂಜೆ ತಿನ್ನುವೆನೆಂದು ಇಟ್ಟುಕೊಂಡಳು.

ಬೀಳ್ಕೊಡುವಾಗ ತಲೆಯ ಮೇಲೆ ಕೈ ಇಟ್ಟು ಹರಸು ಎಂದು ಕೇಳಿದಳು.

ಆಕೆಯ ತಲೆಯ ಮೇಲೆ ಕೈಯಿಟ್ಟು ಏನೋ ಬೇಡಿಕೊಂಡೆ.DSC_1725

ಅದೇನು ಬೇಡಿಕೊಂಡೆ ಎಂದು ನನ್ನ ಉಸಿರಿರುವರೆಗೆ ಯಾರಿಗೂ ಗೊತ್ತಾಗದಿರಲಿ ಎಂದೂ ಬೇಡಿಕೊಂಡೆ.

JULY 28 2013

Photos by the Author

ಮಹಾದೇವ ಮಾಮನ ಜೊತೆಗೆ

 

1ಭಾರತಕ್ಕೆ ಗಣತಂತ್ರ ಬಂದು ಅರವತ್ಮೂರು ವರ್ಷಗಳಾದವು, ನೀವು ಕುಸುಮಬಾಲೆ ಬರೆದು ಮೂವತ್ತು ವರ್ಷ,ಲಂಕೇಶರು ತೀರಿಹೋಗಿ ಹದಿಮೂರು ವರ್ಷಗಳು.ಹೀಗೆ ವರ್ಷಗಳನ್ನು ನೆನೆನೆನೆದುಕೊಂಡು ನಾವೆಷ್ಟು ದಿನ ಕಾಲ ಕಳೆಯುವುದು?ಇಲ್ಲಿನ ಬಡತನ,ಇಲ್ಲಿನ ಜೀತ,ಇಲ್ಲಿನ ಖದೀಮತನ ಬರೀ ಇವನ್ನೇ ನೆನೆಸಿಕೊಂಡು ಎಷ್ಟು ಅಂತ ಮರುಗುವುದು? ಈ ದೇಶ,ಇಲ್ಲಿನ ಜನ,ಇಲ್ಲಿನ ಖುಷಿ,ಈ ಬಣ್ಣ,ಈ ಮಕ್ಕಳ ನಗು,ಇಲ್ಲಿನ ಕಥೆಗಳು ಇವನ್ನೆಲ್ಲ ನಾವು ಹೇಗೆ ಬರೆಯದಿರುವುದು?’ ಎಂದು ನಾನು ದೇವನೂರು ಮಹಾದೇವರನ್ನು ಒಂದಿಷ್ಟು ಆಕಾಶದ ಕಡೆ ಒಯ್ಯಲು ಹೆಣಗುತ್ತಿದ್ದೆ.

ಆದರೆ ಅವರು ಈ ಯಾವುದೇ ಬಣ್ಣದ ಮಾತುಗಳಿಗೆ ಮರುಳಾಗದೆ ನನ್ನನ್ನು ಮತ್ತೆ ನೆಲದ ಕಡೆ ಎಳೆಯುತ್ತಿದ್ದರು.

‘ನೋಡಿ ಮಾದೇವ,ಭಾರತ ಗಣತಂತ್ರದ ಕೂಸು ನೀವು.ಇಲ್ಲಿರುವ ಅಮಾಸ,ಯಾಡ,ಗಾರೆ ಸಿದ್ಮಾವ,ಕುರಿಯಯ್ಯ ಇವರೆಲ್ಲರೂ ಮೈಮೇಲೆ ಬಂದಂತೆ ಮಾತನಾಡಲು ಆಗಿರುವುದು ನಿಮ್ಮಿಂದಲೇ.ಆದರೂ ನೀವು ಯಾಕೆ ಖುಷಿಯಾಗಿರಬಾರದು’ ಎಂದು ಅವರನ್ನು ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದೆ

ಈ ನನ್ನ ಬೇಡಿಕೆಯು ಅವರಿಗೆ ಯಾಕೋ ಅರಿವಿಲ್ಲದ ಬಾಲಕನೊಬ್ಬನ ಹುಡುಗಾಟದಂತೆ ಅನಿಸಿ ಕೊಂಚ ಹೊತ್ತು ಯೋಚನಾಮಗ್ನರಾದರು.‘ನಿಮ್ಮ ನಿಮ್ಮ ಕನಸು ಮತ್ತು ಭ್ರಮೆಗಳಲ್ಲಿ ಮುಳುಗಲು ನೀವು ಸ್ವತಂತ್ರರು.ಆದರೆ ನಾನು ಪ್ರೀತಿ,ಸಮಾನತೆ ಹಾಗೂ ಸಹನೆಗಳನ್ನು ಹುಡುಕುತ್ತಾ ಇದು ತನಕ ಬದುಕಿ ಬಂದವನು.ಅವು ಈ ತನಕ ಈ ದೇಶದಲ್ಲಿ ನನಗೆ ಕಂಡುಬಂದಿಲ್ಲ.ಹಾಗಾಗಿ ಈ ಬೇಸರದಲ್ಲಿ ಬದುಕಲೂ ನಾನು ಸ್ವತಂತ್ರನು’ ಎಂದು ಅವರು ಅಂದರು.

2‘ಈಗ ನೋಡಿ ನಮ್ಮ ಹಳ್ಳಿ.ಅಲ್ಲಿ ಎಲ್ಲಿಯವರೆಗೆ ಸಮಾನತೆ ಇರಬೇಕು ಅಂತ ಎಚ್ಚರ ಇರೋದಿಲ್ಲವೋ ಅಲ್ಲಿವರೆಗೆ ಸಾಮರಸ್ಯ ಇರುತ್ತದೆ.ಯಾವಾಗ ಎಲ್ಲರೂ ಸಮಾನರು ಅಂತ ಹೊರಡ್ತೀವೋ ಆವಾಗ ಅಲ್ಲಿ ಸಾಮರಸ್ಯ ಕೆಡ್ತದೆ.ಇದು ಇಂಡಿಯಾದ ವಿಚಿತ್ರವಾದ ಸಂಕೀರ್ಣತೆ.ನಾವು ಡಿ ಎಸ್ ಎಸ್ ನಿಂದ ಹಳ್ಳಿ ಕಡೆ ಹೊರಟಾಗ ಇವರೆಲ್ಲ ಊರನ್ನ ವಿಘಟಿಸಕ್ಕೆ ಹೊರಟಿದ್ದಾರೆ ಅನ್ನುವ ಆರೋಪಕ್ಕೆ ಒಳಗಾದೆವು.ಊರಲ್ಲಿ ಜಗಳ ತಂದು ಹಾಕಕ್ಕೆ ಬರ್ತಾ ಇದೀರಿ ಅಂದ್ರು.ಏಕೆಂದ್ರೆ ಅವರ ನ್ಯಾಯವೇ ಬೇರೆ,ನಾವು ಕೇಳ್ತಿರೋ ನ್ಯಾಯವೇ ಬೇರೆ.ಈ ತರಹ ಬೇರೆ ಬೇರೆ ನ್ಯಾಯಗಳು ಇರೋದು ನಮ್ಮ ದೇಶದಲ್ಲಿ ಮಾತ್ರ ಕಾಣುತ್ತೆ.’

“ಯಾವ ಕಾರಣಕ್ಕೆ ಜಾತಿ ಪದ್ಧತಿ ಆಯ್ತೋ,ಯಾವ ಕಾರಣಕ್ಕೆ ಅಸ್ಪ್ರಶ್ಯತೆ ಬಂತೋ ನಮಗೆ ಗೊತ್ತಿಲ್ಲ.ನೂರೆಂಟು ಕಾರಣ ಇರಬಹುದು ಆದರೆ ಅಸ್ಪ್ರಶ್ಯತೆಗೆ ಒಳಗಾದವನೂ ಅದನ್ನು ರೂಡಿಗತ ಮಾಡಿಕೊಂಡು ಹೋದ.ಅದನ್ನು ಆಚರಿಸುವವನೂ ರೂಡಿಗತ ಮಾಡಿಕೊಂಡು ಹೋದ’

‘ಮರಿಸ್ವಾಮಿ ಅಂತ ಒಬ್ರು ಇದ್ರು. ಅವರು ಹಿಂದಿ ಪ್ರೊಫೆಸರ್ ಆಗಿದ್ರು.ಕೊನೆಗೆ ಬೌದ್ಧ ಬಿಕ್ಷುವಾಗಿ ತೀರಿಕೊಂಡ್ರು.ಅವರು ಪ್ರೈಮರಿ ಸ್ಕೂಲಲ್ಲಿ ಮೇಷ್ಟರಾಗಿದ್ದಾಗ ಯಾರದೋ ಜಗುಲಿಯಲ್ಲಿ ಕೂತು ಬಸ್ಸಿಗೆ ಕಾಯ್ತಾ ಇದ್ರು.ಯಾರದೋ ಮೇಲುಜಾತಿಯವರ ಜಗುಲಿ. ಆ ಮನೆಯ ಯಜಮಾನನಿಗೆ ಸ್ವಲ್ಪ ಕಣ್ಣು ಕಾಣಿಸ್ತಿರ್ಲಿಲ್ಲ. ಇವರು ಬಿಳಿ ಬಟ್ಟೆ ಹಾಕಿಕೊಂಡು ಕೂತಿರ್ತಾರೆ.

‘ಯಾರೋ ಅಲ್ಲಿ ಕೂತಿರೋನು?’ಅಂತ ಆ ಯಜಮಾನ ಮಗನಲ್ಲಿ ಕೇಳ್ತಾನೆ.ಅದಕ್ಕೆ ಆ ಮಗ ಹೇಳ್ತಾನೆ, ‘ ಅದು ಮೇಷ್ಟ್ರು ಅಪ್ಪಾ..ಅದೇ ಹೆಂಡ ಮಾರ್ತಾರಲ್ಲ ಮಾರಯ್ಯ ಅಂತ ಅವರ ಮಗ’ ಅಂತ.

‘ಏನು? ನಮ್ಮ ಮನೆ ಮುಂದೆ ಕೂತಿದಾನಾ?ಎದ್ದು ಹೋಗು ಅಂತ ಅನ್ನು’ ಅಂತ ಅಪ್ಪ ಕೂಗು ಹಾಕ್ತಾನೆ.

‘ಪಾಪ ಮರಿಸ್ವಾಮಿ, ಅಯ್ಯೋ ನಮ್ಮ ಹಣೆಬರಹ ಇಷ್ಟೇ ಅಂತ ಎದ್ದು ಬರ್ತಾರೆ.“

‘ಆಮೇಲೆ ಇನ್ನೊಮ್ಮೆ ಇನ್ನೊಂದು ಮೇಲುಜಾತಿಯ ಅವರ ಸಹೋಧ್ಯೋಗಿ ಗೆಳೆಯರೊಬ್ಬರು ಅವರನ್ನ ಮನೆಗೆ ಊಟಕ್ಕೆ ಕರ್ಕೊಂಡು ಹೋಗ್ತಾರೆ.ಹಜಾರದಲ್ಲಿ ಎಲೆ ಹಾಕಿ ಊಟಕ್ಕೆ ಬಡಿಸ್ತಾರೆ. ಊಟಮಾಡಿದ ಮೇಲೆ ಅವ್ರಿಗೆ ಒಂದು ಅನುಮಾನ ಬರುತ್ತೆ. ಎಲೆ ಎತ್ಬೇಕೋ ಬೇಡವೋ ಅಂತ ಸುಮ್ನೆ ನೋಡ್ತಿರ್ತಾರೆ.ಅದಕ್ಕೆ ಆ ಮೇಷ್ಟ್ರ ಅಣ್ಣ,‘ ರೀ ಮೇಷ್ಟ್ರೇ,ನಿಮಗೆ ಊಟ ಹಾಕೋದಲ್ದೇನೇ ಎಲೇನೂ ಎತ್ಬೇಕೇ? ತಗೊಂಡು ಎದ್ದೇಳಯ್ಯಾ’ಅಂತ ಬಹುವಚನದಲ್ಲಿ ಶುರು ಮಾಡಿ ಏಕವಚನದಲ್ಲಿ ಮುಗಿಸ್ತಾರೆ.

“ಆಮೇಲೆ ಮರಿಸ್ವಾಮಿಯವರು ಚಿಕ್ಕಮಗಳೂರಿಗೆ ಬರ್ತಾರೆ.ಅಲ್ಲಿ ಡಿ ಎಸ್ ಎಸ್, ತೇಜಸ್ವಿ,ಆರೆಸ್ಸೆಸ್ ಹೀಗೆ ಎಲ್ರೂ ಪರಿಚಯ ಆಗ್ತಾರೆ.ಎಲ್ರೂ ಸಮಾನರು ಅಂತಾರಲ್ಲಾ ಅಂತ ಆರೆಸ್ಸೆಸ್ಸಿಗೂ ಸೇರ್ತಾರೆ.

ಅದ್ರೆ ಎಲ್ರೂ ಸಮಾನ ಅನ್ನೋವವರು ಸುಳ್ಳು ಹೇಳ್ತಿದಾರೆ ಅಂತ ಗೊತ್ತಾದಾಗ ಅಲ್ಲಿಂದ್ಲೂ ವಾಪಾಸು ಬರ್ತಾರೆ.

‘ಅಂಬೇಡ್ಕರ್ ಪುಸ್ತಕ ಓದ್ತಾರೆ,ಕೊನೆಗೆ ಅವರು ಒಂದು ಮಾತು ಹೇಳ್ತಾರೆ ‘ಆವಾಗ್ಲೆ ನಂಗೆ ಅಸ್ಪ್ರಶ್ಯತೆ ಅಂದ್ರೆ ಗಾಯಾಂತ ಗೊತ್ತಾಗಿದ್ದು’ ಅಂತ.

‘ಅಲ್ಲಿವರೆಗೂ ನಂಗೆ ಗಾಯ ಗಾಯ ಅಂತಾನೇ ಅನಿಸ್ತಿರಲಿಲ್ಲ’ ಅಂತ ಹೇಳ್ತಾರೆ.

3ನನ್ನ ಪ್ರೀತಿಯ ದೇವನೂರು ಮಹಾದೇವ ಕಥೆ ಹೇಳುತ್ತಾ ಮೆಲ್ಲಗೆ ತೀವ್ರವಾಗುತ್ತಿದ್ದರು.

‘ನೋಡಿ ಗಣರಾಜ್ಯ ಸುಂದರವಾಗಿದೆ ಅಂತ ನಿಮಗೆಲ್ಲಾ ಅನಿಸುವ ಸಲುವಾಗಿ ಅಸ್ಪ್ರಶ್ಯತೆಯನ್ನು ಅಸ್ಪ್ರಶ್ಯತೆಯಲ್ಲ ಎಂದು ನಾವು ಅಂದುಕೊಂಡು ಬದುಕಬೇಕು,ನಮಗೆ ಅದು ಅಸ್ಪ್ರಶ್ಯತೆ ಅಂತ ಅನಿಸಿದ ತಕ್ಷಣ ನಿಮ್ಮ ಸಾಮರಸ್ಯ ಕೆಡುತ್ತದೆ.ಇದನ್ನು ನೀವು ಹೆಂಗೆ ಬ್ಯಾಲೆನ್ಸ್ ಮಾಡ್ತೀರಾ? ಮಾದೇವ ಅಚಾನಕ್ಕಾಗಿ ಆ ಪ್ರಶ್ನೆಯನ್ನು ನನ್ನ ಕಡೆಯೇ ಎಸೆದರು.

ಹಿಂದೆ ಒಂದು ಸಲ ಈ ಮಾದೇವಮಾಮ, ಅನಂತಮೂರ್ತಿ ಮತ್ತು ಆಲನಹಳ್ಳಿ ಕೃಷ್ಣ ಹುಣಸೂರು ಹತ್ತಿರದ ಬಿಳಿಕೆರೆ ಎನ್ನುವ ಹಳ್ಳಿಗೆ ಹೋಗಿದ್ರಂತೆ.ಅಲ್ಲೊಂದು ಜಾತಿ ಜಗಳವಾಗಿತ್ತಂತೆ.ಕುಂಬಾರರ ಹೋಟಲ್ಲಿಗೆ ದಲಿತರಿಗೆ ಪ್ರವೇಶವಿಲ್ಲ ಅನ್ನುವುದು ಜಗಳಕ್ಕೆ ಕಾರಣ.ಅಲ್ಲಿ ಹೋಗಿ ನೋಡಿದರೆ ಆ ಹೋಟಲ್ಲು ಹೋಟಲ್ಲಿನ ತರಹ ಇಲ್ಲದೆ ನೊಣಗಳು ಮುತ್ತಿಕೊಂಡು ಗಲೀಜಾಗಿತ್ತಂತೆ.

ಅದನ್ನು ನೋಡಿದ ಆಲನಹಳ್ಳಿ ಕೃಷ್ಣ,‘ ಅಲ್ಲ ಮಾದೇವ ಈ ಗಲೀಜು ಹೋಟಲ್ಲಿಗೆ ದಲಿತರು ಹೋಗದಿರುವುದೇ ಒಳ್ಳೆಯದಲ್ಲವಾ?’ ಅಂದರಂತೆ.ಅದಕ್ಕೆ ನಮ್ಮ ಮಾದೇವ, ‘ಅಲ್ಲ ಕೃಷ್ಣಾ, ನಾವು ಎಂಟ್ರಿ ಕೇಳುತ್ತಿರುವುದು ಹೋಟಲ್ಲಿನೊಳಕ್ಕೆ ಅಲ್ಲ. ಮನಸ್ಸಿನ ಒಳಕ್ಕೆ’ ಅಂದ್ರಂತೆ.

‘ಅಲ್ಲ ಮಾದೇವ, ಕನ್ನಡ ಸಾಹಿತ್ಯವನ್ನು ಕುಮಾರವ್ಯಾಸನಿಂದ ದೇವನೂರು ಮಹಾದೇವನವರೆಗೆ ಎಂದುಕೊಂಡು ನಾವೆಲ್ಲಾ ಆನಂದಿಸುತ್ತಿರುತ್ತೇವೆ.ನಾನಂತೂ ನಮ್ಮ ಗಣರಾಜ್ಯದ ಅತ್ಯುತ್ತಮ ಫಲ ನೀವು ಎಂದು ದೂರದಿಂದಲೇ ಖುಷಿಪಡುತ್ತಿರುತ್ತೇನೆ.ಆದರೆ ನೀವಾದರೋ ನಾನು ಅಸ್ಪ್ರಶ್ಯ ಅಂತ ಬೇಸರದಲ್ಲಿರುವಿರಿ.ಹೇಳಿ ಮಾಮಾ ನಿಮಗೆ ನಿಜವಾಗಲೂ ನೀವು ಅಸ್ಪ್ರಶ್ಯ ಅಂತ ಅನ್ನಿಸಿದೆಯಾ’ ಎಂದು ತಡೆಯಲಾರದೆ ಕೇಳಿದೆ.

‘ಹಾಗೇನಿಲ್ಲ, ನಮ್ಮಪ್ಪ ಪೋಲೀಸಾಗಿದ್ದರು.ಹಾಗಾಗಿ ಬೇರೆ ಬೇರೆ ಊರುಗಳನ್ನು ಸುತ್ತಿದೆವು.ಜೊತೆಗೆ ನಮಗೆ ಒಳ್ಳೆಒಳ್ಳೆಯ ಮೇಷ್ಟರುಗಳು ಸಿಕ್ಕಿದರು.ಅವರು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾ ಇದ್ದರು.ಮತ್ತೆ ನನ್ನ ಸ್ನೇಹಕ್ಕೆ ಬೇರೆ ಜಾತಿಯ ಹುಡುಗರೇ ಹಾತೊರೆಯುತ್ತಿದ್ದರು. ಹಂಗಾಗಿ ಸಣ್ಣ ಪುಟ್ಟ ಇದು ಇದ್ರೂವೇ ನೇರವಾಗಿ ನನಗೆ ಹಾಗೆ ಹಾಗಿದ್ದು ಕಮ್ಮಿ.ಆದರೆ ಯಾರಿಗಾದರೂ ಅವಮಾನ ಆದರೆ ಅವನಿಗೆ ಆಗದಷ್ಟು ನೋವು ನನಗೆ ಆಗುವುದು.[ಇಲ್ಲಿ ಮಾದೇವ ಕೊಂಚ ನಕ್ಕರು]

ಆಮೇಲೆ ನಾವಿಬ್ಬರೂ ಮುಂದಿನ ಭವಿಷ್ಯ,ಎಳೆತಲೆಮಾರು,ಹಸ್ತಸಾಮುದ್ರಿಕೆ,ಜ್ಯೋತಿಷ್ಯ,ಯಂಡಮೂರಿ ವೀರೇಂದ್ರನಾಥ್,ಆರುಂದತಿರಾಯ್,ಕುಕ್ಕುಟಪಂಚಾಂಗ,ಮೀನಿನ ಉಪ್ಪಿನಕಾಯಿ ಇತ್ಯಾದಿ ನಮಗಿಷ್ಟದ ಬಹಳ ವಿಷಯಗಳ ಬಗ್ಗೆ ಮಾತನಾಡಿದೆವು.

4ಕೊನೆಯಲ್ಲಿ ನಾನು ಅವರಲ್ಲಿ ಕ್ಷಮೆಯನ್ನೂ ಕೇಳಿಕೊಂಡೆ.ಏಕೆಂದರೆ ಅವರ ಜೊತೆಗಿನ ಈ ಸಂದರ್ಶನದ ಉದ್ದಕ್ಕೂ ಅವರನ್ನು ನಾನು ಮಾಮಾ ಮಾಮಾ ಎಂದೇ ಕರೆದು ಬಿಟ್ಟಿದ್ದೆ.

‘ಸಂಬಂಜ ಅನ್ನೋದು ದೊಡ್ಡದು ಕನಾ’ ಎನ್ನುವ ಅವರ ಕಾದಂಬರಿಯ ಸಾಲನ್ನು ಅವರಿಗೇ ತಿರುಗಿಸಿ ಹೇಳಿ ಒಂದು ದೊಡ್ಡ ನಗುವನ್ನೂ ಅವರಿಂದ ಗಿಟ್ಟಿಸಿಕೊಂಡು ವಾಪಸ್ಸು ಬಂದಿದ್ದೆ.

16 June 2013

Photos By the author

ಅಸಹಿಷ್ಣುತೆ ಮತ್ತು ಗೋಲಾನಿನ ಬೆಟ್ಟಗಳು

11081326_10152876693108246_4411904341889138437_n
ಅಸಹಿಷ್ಣುತೆಯ ಕುರಿತು ಮಾತನಾಡುವಾಗ ಸುಮಾರು ಹದಿನಾರು ಹದಿನೆಂಟು ವರ್ಷಗಳ ಹಿಂದಿನ ಸಂಗತಿಯೊಂದು ನೆನಪಾಗುತ್ತದೆ.
ಆಗ ನಾನು ‘ಲಂಕೇಶ್ ಪತ್ರಿಕೆ‘ ಗೆ ಷಿಲ್ಲಾಂಗಿನಿಂದ ಅಂಕಣ ಬರೆಯುತ್ತಿದ್ದೆ.
ಲಂಕೇಶರು ಇಷ್ಟಪಟ್ಟು ಬರೆಸುತ್ತಿದ್ದ ಅಂಕಣ ಅದು.
ಯಾಕೋ ಏನೋ ನನ್ನ ಕಂಡರೆ ವಿಪರೀತ ಮಮತೆ ಅವರಿಗೆ.ಆ ಮಮತೆಯನ್ನು ತಮ್ಮೊಳಗೆ ಇಟ್ಟುಕೊಳ್ಳಲಾಗದೆ ತಮ್ಮ ಪತ್ರಿಕಾ ಖಚೇರಿಗೆ  ಬಂದವರೊಡನೆಯೂ ಹಂಚಿಕೊಳ್ಳುತ್ತಿದ್ದರು.
 ‘ ಈ ಸಾಬಿ ಎಷ್ಟು ಚೆನ್ನಾಗಿ ಬರೀತಾನೆ ನೋಡಿ‘ ಎಂದು ನನ್ನ ಅಂಕಣವನ್ನು ಅವರೆದುರಿಗೆ ಹಿಡಿಯುತ್ತಿದ್ದರು.
ಈ ಸಂಗತಿ ದೂರದ  ಷಿಲ್ಲಾಂಗಿನಲ್ಲಿದ್ದ ನನಗೆ ಗೊತ್ತಾಗಿ ಒಂಥರಾ ಸಂಕಟವಾಗಿತ್ತು.
ಏಕೆಂದರೆ ನಾನು ಕೂಡಾ  ಉರ್ದು ಮಾತನಾಡುವ ಮುಸಲ್ಮಾನರನ್ನು ಸಾಬರು ಎಂದೇ ಕರೆಯುತ್ತಿದ್ದೆ.
ನಮ್ಮ ಊರಿನ ಮುಸಲ್ಮಾನರಲ್ಲಿ ಅರ್ದದಷ್ಟು  ಜನರು ಸಾಬರು.ಟೀಪೂ ಸುಲ್ತಾನನ ಕಾಲದಲ್ಲೋ ಅದಕ್ಕೂ ಹಿಂದೋ ಮೂಡಲ ಸೀಮೆಯ ಕಡೆಯಿಂದ ಬಂದು ಕೊಡಗಿನಲ್ಲಿ ನೆಲೆಸಿದವರು.
ಉಳಿದ ಅರ್ದ ಕೇರಳದ ಕಡೆಯಿಂದ ಬಂದ ಮಾಪಿಳ್ಳೆ ಜನರು, ಕರಾವಳಿಯ ಕಡೆಯಿಂದ ಬಂದ ಬ್ಯಾರಿ ಜನರು, ಕಾಸರಗೋಡಿನ ಕಡೆಯಿಂದ ಬಂದ ಇಚ್ಚಾಗಳು, ಕಾಕಾಗಳು ಇತ್ಯಾದಿ.
ಸಾಬರ ಹುಡುಗರು ಹನಫಿ ಮದರಸಕ್ಕೆ ಹೋಗುತ್ತಿದ್ದರೆ ನಾವು ಶಾಫಿ ಮದರಸಕ್ಕೆ ಹೋಗುತ್ತಿದ್ದೆವು.
ನಮ್ಮ ಆಹಾರದಲ್ಲಿ ಕುಸುಬಲಕ್ಕಿಯ ಅನ್ನ, ಸಮುದ್ರದ ಮೀನು ಹೇರಳವಾಗಿದ್ದರೆ ಸಾಬರಲ್ಲಿ ಬಿರಿಯಾನಿ, ಕುರಿಮಾಂಸ ಧಾರಾಳವಾಗಿರುತ್ತಿದ್ದವು.
ಮಲಯಾಳ, ತುಳು, ಕನ್ನಡ ಮಿಶ್ರಿತವಾದ ಭಾಷೆಯನ್ನು ನಾವು ಆಡುತ್ತಿದ್ದರೆ ಮೂಡುಸೀಮೆಯ ಇಕಾರಾಂತ್ಯದ ದಖನಿಯನ್ನು ಅವರು ನುಡಿಯುತ್ತಿದ್ದರು.
ಅವರನ್ನು ನಮ್ಮ ಹಾಗೆಯೇ ಇರುವ ಮುಸಲ್ಮಾನರು ಎಂದು ಒಪ್ಪಿಕೊಳ್ಳಲು ಹುಡುಗರಾದ ನಮಗೆ ಎಷ್ಟು ಕಷ್ಟವಾಗುತ್ತಿತ್ತೋ ಅದಕ್ಕಿಂತಲೂ ಕಷ್ಟ ನಮ್ಮನ್ನು ಒಪ್ಪಿಕೊಳ್ಳಲು ಸಾಬರ ಹುಡುಗರಿಗೆ ಆಗುತ್ತಿತ್ತೇನೋ!
ಈ ಬಾಲ್ಯವೂ ಕಳೆದು, ಹುಡುಗಾಟವೂ ಮುಗಿದು, ಉರಿಯುವ ಯೌವನವನ್ನೂ ದಾಟಿ ಅಸ್ಸಾಂ ಬಾಂಗ್ಲಾದೇಶಗಳ ನಡುವಿನ ಕಡಿದಾದ ಪ್ರಪಾತದೊಳಗಿರುವ ಷಿಲ್ಲಾಂಗಿನ ಬೆಚ್ಚನೆಯ ಬಿಸಿಲಲ್ಲಿ ಚಳಿ ಕಾಯಿಸುತ್ತಾ  ಅಲ್ಲಿನ ಉಗ್ರಗಾಮಿ ಸಂಘಟನೆಗಳ ಯುವಕರಿಂದ ಇಂಡಿಯನ್ ಎಂದು ಬೈಸಿಕೊಳ್ಳುತ್ತಾ  ಕನ್ನಡದ ಒಂದೊಂದೇ ಅಕ್ಷರಗಳನ್ನು ಪ್ರೀತಿಯಿಂದ ನೇವರಿಸುತ್ತಾ ಬರೆದು ಕಳಿಸುತ್ತಿದ್ದರೆ ಪ್ರೀತಿಯ ಲಂಕೇಶರು ಒಂದೇ ಪದದಲ್ಲಿ `ಸಾಬಿ’ ಎಂದು ಬಿಡುವುದೇ!!
 427108_292290897545800_1202105837_nಸಿಟ್ಟು ಬಂದಿತ್ತು. ಅದೊಂಥರಾ ಅದು ಆ ಕಾಲದ ಅಸಹಿಷ್ಣುತೆಯ ವಿರುದ್ದದ ಸಿಟ್ಟು.ಕುವೆಂಪು ಬರೆದ ಕರಿಮೀನು ಸಾಬರು, ತೇಜಸ್ವಿಯವರ ಪ್ಯಾರ, ಲಂಕೇಶರ ಇಕ್ಬಾಲ್ ನಿಸಾರರ ರಂಗೋಲಿಯ ಮುಂದೆ ನಿಂತ ಮಗ, ಬೊಳುವಾರ ಇಟ್ಟಿಗೆ. ಸಾರಾ ಅವರ ತಲಾಖ್ ಇವರೆಲ್ಲರೂ ಒಂದು ರೀತಿಯ ಪಡಿಯಚ್ಚುಗಳಾಗಿ ತಲೆಯೊಳಗೆ ಸುತ್ತುತ್ತಾ. ಆ ಪಡಿಯಚ್ಚಿನೊಳಗೆ ನಾನೂ ಎರಕಗೊಂಡಂತೆ ಇರಿಟೇಟ್ ಗೊಳ್ಳುತ್ತಾ ಲಂಕೇಶರಿಗೆ,  ‘ನನ್ನನ್ನು ಸಾಬಿ ಎಂದು ಕರೆಯಬೇಡಿ‘ ಎಂಬ ಹೆಸರಿನಲ್ಲಿ ಅಂಕಣ ಬರೆದು ಕಳಿಸಿದ್ದೆ.
ಅದನ್ನು ಅವರು ಹಾಗೇ ಪ್ರಕಟಿಸಿ ಮೆಚ್ಚುಗೆ ಸೂಚಿಸಿದ್ದರು.
ಜೊತೆಗೆ ಒಂದು ಪತ್ರವನ್ನೂ  ಬರೆದಿದ್ದರು. ಕೀರಂ ಜೊತೆಗೆ ಷಿಲ್ಲಾಂಗಿಗೆ ಬರಬೇಕು ಮತ್ತು  ನನ್ನ ಜೊತೆ ಬಿರಿಯಾನಿ ತಿನ್ನಬೇಕು ಅನ್ನುವುದು ಅವರ ಆಶೆ!
ನಾನಾದರೋ ಅಲ್ಲಿ ಹೇರಳವಾಗಿ ಸಿಗುವ ಎಲ್ಲ ಪಶುಪ್ರಾಣಿಗಳ ಕರುಳನ್ನೂ ಲಿವರನ್ನೂ ಸವಿಯುತ್ತಾ,  ಹಾವನ್ನೂ ಶುನಕವನ್ನೂ ಪ್ರೀತಿಯಿಂದ ಸೇವಿಸುವ ಗೆಳೆಯ ಗೆಳತಿಯರ ಮನೆಗಳಿಗೆ ಭೇಟಿ ಕೊಟ್ಟು ಅಲ್ಲಿನ ಅನೂಹ್ಯ ಪರಿಮಳಗಳಿಗೆ ಮಾರು ಹೋಗುತ್ತಿರಬೇಕಾದರೆ ಈ ಲಂಕೇಶರ ಬಿರಿಯಾನಿಯ ಆಶೆಯ ಮುಗ್ದತೆಗೆ ನಗು ಬಂದಿತ್ತು.
ಅಸಹಿಷ್ಣುತೆಯ ಕುರಿತು ಬರೆಯುವ ಹೊತ್ತಲ್ಲಿ ಇದನ್ನೆಲ್ಲ  ಯಾಕೆ ಹೇಳುತ್ತಿರುವೆನೆಂದರೆ ಅಸಹಿಷ್ಣುತೆ ಎಂಬುದು ಎಷ್ಟು ಕ್ರೂರವೋ ಅಷ್ಟೇ ಅದು ಮುಗ್ದ  ಅಜ್ಜಾನವೂ ಆಗಬಲ್ಲುದು ಎಂಬುದನ್ನು ಹೇಳುವುದಕ್ಕಾಗಿ.
ಇನ್ನೊಂದು ಜೀವನ ವಿಧಾನದ ಕುರಿತಾದ ಅಸಹನೆಯಷ್ಟೇ ಅಪಾಯಕಾರಿ ಅದರ ಕುರಿತಾದ ಸ್ಟೀರಿಯೋಟೈಪ್ ಪ್ರೀತಿ ಕೂಡಾ.
ಗೋರಿಯಲ್ಲಿ ಮಲಗಿರುವ ಟೀಪೂ ಸುಲ್ತಾನನ್ನು ಎಬ್ಬಿಸಿ ಕೊಡಗಿನ ಕಣಿವೆಯಲ್ಲಿ ಕೊಲೆಗಳಿಗೆ ಕಾರಣವಾಗುವುದು ಇನ್ನೊಂದು ರೀತಿಯ ಪ್ರಗತಿಪರ ಅಜ್ಞಾನದಿಂದುಂಟಾದ ಅಸಹಿಷ್ಣುತೆ.
2010-10-20_1553ನಾನು ಕೊಡಗಿನಲ್ಲಿ ಓಡಾಡುತ್ತಿರುವಾಗ ಕಲವು ಹಳ್ಳಿಗಳ ಒಳಹೊಕ್ಕು ಕಥೆಗಳನ್ನು ಕೇಳುತ್ತಿದ್ದೆ.
ಅಂತಹದೊಂದು ಹಳ್ಳಿಯ ಹೆಸರನ್ನು ಮಲೆ ಕೇರಿ ಅಂತ ಇಟ್ಟುಕೊಳ್ಳಿ.
ಬಹಳ ಹಿಂದೆ ಮಲೆಯೊಂದರ ಕೆಳಗೆ ಹಬ್ಬಿಕೊಂಡಿದ್ದ ಹಳ್ಳಿಯಾಗಿತ್ತು ಅದು.
ಈಗ ಆ ಹಳ್ಳಿ ಈಸ್ಟ್ ಮಲೆ ಕೇರಿ ಮತ್ತು ವೆಸ್ಟ್ ಮಲೆಕೇರಿ ಎಂದು ಇಬ್ಭಾಗವಾಗಿದೆ.
ನಡುವಲ್ಲಿ ಹಾವಿನಂತೆ ಹರಿಯುತ್ತಿರುವ ಸರಕಾರೀ ರಸ್ತೆ.
ಟೀಪೂ ಸುಲ್ತಾನನ ಕಾಲದಲ್ಲಿ ಮತಾಂತರಗೊಂಡು ಶ್ರೀರಂಗಪಟ್ಟಣದ  ಕಡೆ ಹೋಗಿದ್ದ ತಮ್ಮದೇ ಊರಿನವರು ಟೀಪುವಿನ ಮರಣಾನಂತರ ಮುಸಲ್ಮಾನರಾಗಿ  ಮರಳಿ ಬಂದಾಗ ಈ ಊರವರು ಅವರನ್ನು ಧ್ವೇಷಿಸಿ ಹಿಂದಕ್ಕೆ ಅಟ್ಟುವ ಮನಸ್ಥಿತಿಯಲ್ಲಿರಲಿಲ್ಲ.ಏಕೆಂದರೆ ಅವರೆಲ್ಲರೂ ಅಣ್ಣ ತಮ್ಮಂದಿರೂ, ದಾಯಾದಿಗಳೂ ಆಗಿದ್ದರು.
ಹಾಗಾಗಿ ಅವರಿಗೆ ಮಲೆಯ ಪೂರ್ವ ಕಡೆಗಿದ್ದ ಗದ್ದೆ ಬಯಲುಗಳನ್ನು ನೀಡಿ ಅಲ್ಲೇ ವಾಸಿಸಲು ಹೇಳಿದರು.
ಅವರಾದರೋ ಅತ್ತ ಕಡೆ ಪೂರ್ತ ಮುಸಲ್ಮಾನರೂ ಆಗದೆ ಇತ್ತ ಕಡೆ ಕೊಡವರೂ ಆಗಲಾರದೆ  ಬದುಕಲು ತೊಡಗಿದರು.
ಅದೇ ಮಲೆ , ಅದೇ ಆಕಾಶ,ಅದೇ ಗದ್ದೆ ಬಯಲು ಆದರೆ ಅತಂತ್ರ ಬದುಕು.
ಈ ಹಳ್ಳಿಯ ಹಳೆಯ ಮಸೀದಿಯೊಂದರಲ್ಲಿ ಪುರಾತನವಾಗಿದ್ದ ಧರ್ಮ ಗ್ರಂಥವನ್ನು ಓದುತ್ತಾ ಕುಳಿತಿದ್ದ ಮುದುಕನೊಬ್ಬನನ್ನು ನಾನು ಮಾತನಾಡಿಸಿದ್ದೆ.
2011-07-05_9190ತಲೆತಲಾಂತರಗಳ ಹಿಂದೆ ಮಧ್ಯಪ್ರಾಚ್ಯದಿಂದ ಧಾರ್ಮಿಕ ಅಸಹಿಷ್ಣುತೆಯಿಂದ ತಪ್ಪಿಸಿಕೊಂಡು ಹಾಯಿ ಹಡಗಿನಲ್ಲಿ ಅರಬೀಕಡಲನ್ನು ದಾಟಿ ಇಂಡಿಯಾದ ಕರಾವಳಿಯಲ್ಲಿ ಇಳಿದು ಪಶ್ಚಿಮಘಟ್ಟವನ್ನು ಹತ್ತಿ ಕೊಡಗಿನ ಕಾಡಲ್ಲಿ ನೆಲೆ ಕಂಡುಕೊಂಡವರು ಈತನ ಪೂರ್ವಜರು.
ಅಲ್ಲಿಂದ ಅದನ್ನು ತಪ್ಪಿಸಿಕೊಂಡು ಇಲ್ಲಿಗೆ ಬಂದರೆ ಇಲ್ಲಿ ಅದು ಟಿಪ್ಪುವಿನ ರೂಪದಲ್ಲಿ ನನ್ನ ಹಿರಿಯರನ್ನು ಹಿಡಕೊಂಡಿತು ಎಂದು ಆ ಮುದುಕ ಕುರಾನು ಓದುತ್ತಾ ನಕ್ಕಿತ್ತು.
ಆತನ ನಗುವಲ್ಲಿ ಸಿಟ್ಟೇನೂ ಇರಲಿಲ್ಲ.ಬದಲಾಗಿ ಕಾಲದ ಕೀಟಲೆಗಳ ಕುರಿತ ಒಂದು ತುಂಟ ನಗು!
ಇಂತಹ ನೆಲದಲ್ಲಿ ಟೀಪೂ ಸುಲ್ತಾನನು ಸ್ವಾತಂತ್ರ್ಯ ಸೇನಾನಿಯೂ ಅಲ್ಲ, ಸ್ವಾಭಿಮಾನದ ಸಂಕೇತವೂ ಅಲ್ಲ.ಆತ ಒಬ್ಬ ಸುಲ್ತಾನ.ಎಲ್ಲ ಅರಸರ ಹಾಗಿರುವ ಒಬ್ಬ ಅರಸ.
ಆತನ ಜನ್ಮ ದಿನವನ್ನು ಸರಕಾರೀ ಉತ್ಸವವನ್ನಾಗಿ ಆಚರಿಸುವ ಪ್ರಗತಿಪರವಾದ ಅಜ್ಞಾನದಿಂದಾಗಿ ಕೊಲೆಗಳು ನಡೆದವು.
ದಾಯಾದಿಗಳ ನಡುವೆ ಮೊದಲೇ ಇದ್ದ ಕಂದಕ ಇನ್ನಷ್ಟು ಗಡಬಡಾಯಿಸಿತು.
ಈ ಸೂಕ್ಷ್ಮಗಳನ್ನರಿಯದ    ಆಚಾರವಾದಿಗಳೂ ವಿಚಾರವಾದಿಗಳೂ ಪರಸ್ಪರ ಬೈದಾಡಿಕೊಂಡು ಕೊಡಗಿನ ಹವೆಯಲ್ಲಿ ಚಳಿ ಕಾಯಿಸಿಕೊಂಡರು.
ನನ್ನ ಊರಿನ ಕಣಿವೆಗಳಲ್ಲಿ ಚಲಿಸುವಾಗ ಇದು ನನ್ನ ಊರೇನಾ ಅನಿಸುವ ಹಾಗಿರುವ ಬಿಗಿದುಕೊಂಡ ಮುಖಗಳು.
ಈ ಗಲಾಟೆ ಇರುವಾಗ ನೀನು ಬರಬೇಕಾಗಿತ್ತಾ?? ಗಲಾಟೆ ನಿಂತ ಮೇಲೆ ಬಂದಿದ್ದರೆ ಸಾಕಿತ್ತಲ್ಲವಾ’ ಎಂದು ಬೈಯ್ಯುವ ಉಮ್ಮಾ.
ನಾನು ಯಾರನ್ನು ಬೈಯ್ಯುವುದು?
*************
2013-01-08_11-15-59_994ಸಿರಿಯಾ ಮತ್ತು ಇಸ್ರೇಲಿನ ನಡುವೆ ಗೋಲಾನ್ ಬೆಟ್ಟವಿದೆ.
ಒಂದಾನೊಂದು ಕಾಲದಲ್ಲಿ ಅಂದರೆ ಕಂಚಿನ ಯುಗದ ಕೊನೆಗಾಲದಲ್ಲಿ ಅರಮಾಯಿಕ್ ಜನರು ಇಲ್ಲಿ ವಾಸವಿದ್ದರು.
ಪ್ರಪಂಚದಲ್ಲಿ ಮೊದಲ ಬಾರಿಗೆ ಅಕ್ಷರಗಳನ್ನು ಬಳಸಲು ಶುರುಮಾಡಿದ ಜನರು ಇವರು.
ಆನಂತರ ಸೊಲೊಮನ್ ರಾಜ ಆಳಿದ್ದ ನಾಡಿದು.
ಅಲೆಕ್ಸಾಂಡರ್ ಚಕ್ರವರ್ತಿಯೂ ಇಲ್ಲಿ ಕಾರುಬಾರು ನಡೆಸಿದ್ದ.
ಹಾಗೇ ಕ್ಯಾಲಿಗುಲಾನೂ.ಹರ್ಕ್ಯುಲಸ್ ನೂ ಆಳಿದ್ದರು.
ಮಧ್ಯಕಾಲೀನ ಯುಗದಲ್ಲಿ ಇದು ಪ್ರವಾಧಿ ಮುಹಮ್ಮದರ ಕುರೈಷಿ ಬುಡಕಟ್ಟಿನ ಪಾಲಾಗಿತ್ತು.
ಕ್ರಿಸ್ತಿಯಾನರಿಗೂ ಮುಸಲ್ಮಾನರಿಗೂ ನಡುವೆ ಸುಮಾರು ನಾನೂರು ವರ್ಷಗಳ ಕಾಲ ನಡೆದ ಧರ್ಮ ಯುದ್ದಗಳು ಈ ಬೆಟ್ಟಸಾಲುಗಳ ಆಸುಪಾಸಿನಲ್ಲೇ ಜರುಗಿದವು.
ಆನಂತರ ಅರಬರಿಗೂ ಯಹೂದಿಗಳಿಗೂ ಈ ಬೆಟ್ಟಸಾಲುಗಳಿಗಾಗಿ ಬಹಳಷ್ಟು ಕದನಗಳು ನಡೆದವು.
ಹಲವು ಕದನಗಳ ನಂತರ ಇಸ್ರೇಲ್ ಈ ಬೆಟ್ಟಗಳ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿ ಹನ್ನೆರೆಡು ವರ್ಷಗಳ ಹಿಂದೆ ನಾವು ಅಲ್ಲಿಗೆ ಹೋಗಿದ್ದಾಗ ಇಸ್ರೇಲಿನ ಮಿಲಿಟರಿ ರಾಡಾರುಗಳು ಗೋಲಾನ್ ಬೆಟ್ಟಗಳ ತುದಿಯಿಂದ ನಮ್ಮತ್ತ ಕಣ್ಣು ನೆಟ್ಟು ನೋಡುತ್ತಿದ್ದವು .
ನಾವು ಇದ್ದದ್ದು ಕ್ವಿನೇತ್ರಾ ಎಂಬ ಊರಿನಲ್ಲಿ.
ಆ ಊರಿಗೆ ಊರೇ ಉರಿದು ಬೂದಿಯಾಗಿ ಆ ಇಡೀ ಊರನ್ನು ಸಿರಿಯನ್ ಸರಕಾರ ಜೀವಂತ ಯುದ್ಧ ಸ್ಮಾರಕವನ್ನಾಗಿಸಿ ನಮ್ಮಂತಹ ಪ್ರವಾಸಿಗರನ್ನು ಅಲ್ಲಿಗೆ ಕರೆದೊಯ್ದು ಇಸ್ರೇಲೀ ಪಡೆಗಳ ಅಮಾನುಷತೆಯನ್ನು ನಾನಾ ವಿಧವಾಗಿ ತೋರಿಸುತ್ತಿತ್ತು.
ನಾವು ಅಲ್ಲಿಗೆ ಹೋಗಿದ್ದುದು ಸಿರಿಯನ್ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂಸ್ಕೃತಿ ಇಲಾಖೆಯ ಅಂಗವಾಗಿದ್ದ ಸಿರಿಯನ್ ಬರಹಗಾರರ ಒಕ್ಕೂಟದ ಆಹ್ವಾನದ ಮೇರೆಗೆ.
ಅಲ್ಲಿನ ಬಹುತೇಕ ಬರಹಗಾರರು ಪಾಲೇಸ್ಟೀನ್ ಹೋರಾಟದ ಪರವಾಗಿದ್ದುದರಿಂದ ಅವರೆಲ್ಲರೂ ಪಾಲೆಸ್ಟೀನ್ ಹೋರಾಟದ ಕುರಿತೇ ಹೆಚ್ಚುಕಮ್ಮಿ ಬರೆಯುತ್ತಿದ್ದರು.
ಆಧುನಿಕ ಕನ್ನಡ ಸಾಹಿತ್ಯದ ಬಂಡಾಯದವರಿಗೆ ವರ್ಗ ಶತ್ರು ಇದ್ದಂತೆ ಅವರಿಗೆಲ್ಲ ಒಟ್ಟಾರೆಯಾಗಿ ಇಸ್ರೇಲ್ ವರ್ಗ ಶತ್ರು.
ಹಾಗಾಗಿ ಅವರೆಲ್ಲರೂ ಬಹುತೇಕ ನಟಿಗೆ ಮುರಿಯುತ್ತಾ ಇಸ್ರೇಲನ್ನು ಶಪಿಸುತ್ತಿದ್ದರು.
ಇದು ನಮಗೆ ಸೇರಿದ್ದ ಬೆಟ್ಟ ಯಹೂದಿಗಳ ಪಾಲಾಗಿದೆಯಲ್ಲಾ ಎಂದು ಅಳಲೂ ಶುರು ಮಾಡಿದ್ದರು.
2013-01-27_15-59-55_892ಅಂತಹ ಕಣ್ಣೀರಿನ ಸನ್ನಿವೇಶವನ್ನು ಮುಗಿಸಿ ನಾವು ಸಿರಿಯಾದ ರಾಜದಾನಿ ಡಮಾಸ್ಕಸ್ ಕಡೆಗೆ ಸಾಗುತ್ತಿದ್ದಾಗ ದಾರಿಯಲ್ಲಿ ಟೊಮೇಟೋ ಬೆಳೆಯುತ್ತಿದ್ದ ಹೊಲಗಳು.
ಹೊಲಗಳ ನಡುವೆ ಟೆಂಟಿನಂತಹ  ಗುಡಿಲುಗಳನ್ನು ಕಟ್ಟಿಕೊಂಡು ಬದುಕುತ್ತಿದ್ದ ಅಲ್ಲಿನ ರೈತಾಪಿಗಳು.
ಇಲ್ಲಿನ ಟೊಮೇಟೋ ಎಷ್ಟು ಕೆಂಪಗಿವೆಯಲ್ಲಾ ಎಂದು ನಾನು ಅಚ್ಚರಿ ಸೂಚಿಸಿದ್ದೇ ತಡ ನಮ್ಮ ಜೊತೆಗಿದ್ದ ದುಬಾಷಿ ನಾವು ತೆರಳುತ್ತಿದ್ದ ವಾಹನವನ್ನು ನಿಲ್ಲಿಸಲು ಹೇಳಿದ.
ನಮ್ಮ ಬೆಂಗಾವಲಾಗಿ ಬರುತ್ತಿದ್ದ ಸಿರಿಯನ್ ಮಿಲಿಟರಿ ಪಡೆಯ ವಾಹನವೂ ನಿಂತಿತು.
ನಮ್ಮ ದುಬಾಷಿ ಆ ವಾಹನದ ಸೈನಿಕರ ಕಿವಿಯಲ್ಲಿ ಏನೋ ಉಸುರಿದ.
ಅವರೆಲ್ಲರೂ ಟೊಮೇಟೋ ಹೊಲದೊಳಕ್ಕೆ ನುಗ್ಗಿದರು. ರೈತರು ಹೆದರಿಕೊಂಡು ತಮ್ಮ ಗುಡಿಸಲುಗಳೊಳಗೆ ಕ್ರೇಟಿನಲ್ಲಿ ತುಂಬಿಟ್ಟಿದ್ದ ಟೊಮೇಟೋಗಳನ್ನು ರಾಶಿರಾಶಿಯಾಗಿ ಸೈನಿಕರ ವಾಹನದೊಳಗೆ ತುಂಬಿಸತೊಡಗಿದರು.
ಸೈನಿಕರು ಖುಷಿಯಲ್ಲಿ ಕೇಕೆ ಹಾಕುತ್ತಿದ್ದರು.ಡಮಾಸ್ಕಸ್ ನ ಮಾರುಕಟ್ಟೆಯಲ್ಲಿ ದುಬಾರಿಯಾಗಿ ಹೋಗಿರುವ ಟೊಮೇಟೋ ಈಗ ಭಾರತೀಯ ಬರಹಗಾರರ ನಿಯೋಗದಿಂದಾಗಿ ತಮಗೆ ಮುಫ್ತಾಗಿ ಸಿಗುತ್ತಿರುವುದಕ್ಕೆ ಅವರಿಗೆಲ್ಲ ಸಹಜವಾಗಿಯೇ ಆನಂದವಾಗಿತ್ತು.
ಅವರೆಲ್ಲರೂ ತಮ್ಮ ತಮ್ಮ ಸೇನಾ ವಾಹನಗಳನ್ನು ಟೊಮೆಟೋದಿಂದ ತುಂಬಿಸಿಕೊಂಡ ಮೇಲೆ ಭಾರತೀಯ ಬರಹಗಾರರಾದ ನಮಗೂ ತಿನ್ನಲು ಒಂದೊಂದು ಟೊಮೆಟೋ ಕೊಟ್ಟರು.
ನಾವು ಆ ಟೊಮೆಟೋ ಬೆಳೆದ ಬೆಳಗಾರರನ್ನು ಮಾತನಾಡಿಸಲು ಹೋದರೆ ಅವರು ಹೆದರಿ ನಡುಗುತ್ತಿದ್ದರು.
ಎದುರುಗಡೆ ಅಷ್ಟು ಎತ್ತರಕ್ಕೆ ನಿಂತುಗೊಂಡಿರುವ ಗೊಲಾನ್ ಬೆಟ್ಟಗಳು ಅವುಗಳ ಮೇಲೆ ತಿರುಗುತ್ತಿರುವ ರಾಕ್ಷಸರಂತಹ ಮಿಲಿಟರಿ ರೇಡಾರ್ ಗಳು ಅದರ ಎದುರಲ್ಲಿ ಸಂಜೆಯ ಬೆಳಕಲ್ಲಿ ಟೊಮೆಟೋ ಹೊಲದಲ್ಲಿ ಸಿರಿಯನ್ ಬೆಂಗಾವಲು ಪಡೆಯ ಜೊತೆ ಭಾರತೀಯ ಬರಹಗಾರರು.
ಹೆದರಿಕೊಂಡು ಬಿಳಿಚಿಕೊಂಡಿರುವ ರೈತರು.
2013-01-08_18-12-33_846‘ಇವರು ಹೀಗೆಯೇ ತಮಗೆ ಬೇಕಾದಾಗಲೆಲ್ಲಈ ಪಾಪದ ರೈತರ ಮೇಲೆ ಎರಗುತ್ತಾರೆ.ಅವರಿಗೊಂದು ನೆಪ ಬೇಕು ಅಷ್ಟೇ.ಈ ರೈತಾಪಿ ಜನರು  ಈಗ ಸಿರಿಯಾವನ್ನು ಆಳುತ್ತಿರುವ ಬಷಾರನ ಎದುರು ಪಾರ್ಟಿಗೆ ಸೇರಿದವರು,ಹಾಗಾಗಿ ಬಷಾರನ ಸೈನಿಕರು ಇವರನ್ನು ಹುರಿದು ಮುಕ್ಕುತ್ತಲೇ ಇರುತ್ತಾರೆ.ಆದರೆ ನಾವು ಇದನ್ನು ಬರೆದರೆ ಬದುಕುವ ಹಾಗಿಲ್ಲ.ಹಾಗಾಗಿ ನಾವು ಪಾಲೆಸ್ಟೇಯ್ನ್ ಹೋರಾಟದ ಬಗ್ಗೆಯೇ  ಬಹುತೇಕ ಕೇಂದ್ರೀ ಕರಿಸಿ ಬರೆಯುತ್ತಿರುತ್ತೇವೆ.ಹಾಗಾಗಿ ಪರವಾಗಿಲ್ಲ‘ ಎಂದು ವಾಪಾಸು ಬರುವ ದಾರಿಯಲ್ಲಿ ಅಲ್ಲಿನ ಅಲ್ಪಸಂಖ್ಯಾತ ಕ್ರಿಷ್ಟಿಯನ್ ಜನಾಂಗಕ್ಕೆ ಸೇರಿದ ಬರಹಗಾರರೊಬ್ಬರು ಕಿವಿಯಲ್ಲಿ ಉಸುರಿದರು.
ಹಾಗೆ ನೋಡಿದರೆ ಅವರಿಗೂ ಬಷಾರನ ಆಡಳಿತವೇ ಇಷ್ಟ.ಯಾಕೆಂದರೆ ಎಷ್ಟು ಕ್ರೂರಿಯಾದರೂ ಬಷಾರ ಮತಾಂಧನಲ್ಲ.ಆತ ಸಿರಿಯಾದ ಅಲ್ಪಸಂಖ್ಯಾತ ಸಮುದಾಯವಾದ ಕ್ರಿಸ್ತಿಯನ್ನರನ್ನು ಅಪಾಯದಿಂದ ಕಾಪಾಡುತ್ತಾನೆ.ಆದರೆ ಆತನ ಎದುರಾಳಿಗಳಾದ ಇಸ್ಲಾಮಿಸ್ಟ್ ಪಂಗಡವೇನಾದರೂ ಗೆದ್ದು ಬಿಟ್ಟರೆ ಈ ದೇಶದ ಅಲ್ಪಸಂಖ್ಯಾತರ ಮಾರಣಹೋಮವಾಗಿ ಬಿಡುತ್ತದೆ ಎಂದು ಅವರು ವಿವರಿಸಿದರು.
ಕೊನೆಯಲ್ಲಿ `ನೋಡಿ ನೀವು ಭಾರತದಿಂದ ಬಂದವರು.ಪ್ಯಾಲೇಸ್ಟೀನಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ನೀವು ಮೊದಲಿನಿಂದಲೂ ನಮಗೆ ಬೆಂಬಲ ಇತ್ತವರು.ನೀವು ನಿಮ್ಮ ದೇಶಕ್ಕೆ ತೆರಳಿದ ನಂತರ ನೀವು ಪ್ಯಾಲೇಸ್ಟೀನ್ ಹೋರಾಟದ ಕುರಿತು ಬರೆಯಿರಿ,ಉಳಿದದ್ದೆಲ್ಲವೂ ನಮಗೂ ನಿಮಗೂ ಗೌಣ’ ಅಂದಿದ್ದರು
IMG_20160401_154951
ಈಗ ಸಿರಿಯಾ ಸುಟ್ಟು ಕರಕಲಾಗಿರುವಾಗ, ಸಿರಿಯಾದ ನಿರಾಶ್ರಿತರು ಪ್ರೇತಾತ್ಮಗಳಂತೆ ಯುರೋಪಿನ ತುಂಬ ಓಡಾಡುತ್ತಿರುವಾಗ ಯಾವ ಅಸಹಿಷ್ಣುತೆಯ ಬಗ್ಗೆ ಬರೆಯುವುದು??
(ಸಮಾಹಿತ ಪತ್ರಿಕೆಯ ಶಿಶಿರ ಸಂಚಿಕೆಯಲ್ಲಿ ಪ್ರಕಟಿತ)

ಕಣ್ಣಿಲ್ಲದ ಪ್ರೀತಿ, ಕಣ್ಣಿಲ್ಲದ ಜೀತ

DSC_0489ಆಕೆ ಕೊಡಗಿನ ಯುವತಿ, ಈತ ಬಯಲು ಸೀಮೆಯ ಹುಡುಗ.

ಇಬ್ಬರೂ ಹುಟ್ಟುವಾಗಲೇ ಅಂಧರು.

ಆಕೆ ರೇಡಿಯೋದಲ್ಲಿ ಯಾವತ್ತೋ ಒಂದು ದಿನ ಚಂದವಾಗಿ ಹಾಡಿದ್ದಳು. ಅದನ್ನು ಈತ ನಿಮೀಲಿತನಾಗಿ ಕೇಳಿದ್ದ.ಆಮೇಲೆ ಅವರಿಬ್ಬರು ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದರು. ಒಂದು ದಿನ ಇಬ್ಬರೂ ಯಾವುದೋ ಒಂದು ಬಸ್ಸು ನಿಲ್ದಾಣದಲ್ಲಿ ಭೇಟಿಯಾಗಿದ್ದರು.ಮದುವೆಯಾಗುವಾ ಎಂದು ತೀರ್ಮಾನಿಸಿಕೊಂಡು ದೇಗುಲವೊಂದರಲ್ಲಿ ತಾಳಿಕಟ್ಟಿ ಊರಿಗೆ ವಾಪಸಾಗಿದ್ದರು.ಎಲ್ಲವೂ ಸುಂದರವಾಗಿದೆ ಮತ್ತು ಸುಖವಾಗಿ ಮುಗಿದಿದೆ ಎಂದು ಅವರಿಬ್ಬರೂ ಖುಷಿಯಲ್ಲಿ ತಮ್ಮ ಪ್ರೇಮದ ಕಥೆಯನ್ನು ರೇಡಿಯೋದಲ್ಲಿ ಹೇಳಿದ್ದರು ಮತ್ತು ಅದಕ್ಕೆ ಸರಿ ಹೊಂದುವಂತಹ ಒಂದು ಸಿನೆಮಾ ಹಾಡನ್ನೂ ನಾವು ಪ್ರಸಾರ ಮಾಡಿದ್ದೆವು.

ಕಣ್ಣಿನ ಹಂಗೇ ಇಲ್ಲದ ಅವರಿಬ್ಬರ ಅಮರ ಪ್ರೇಮ!

ಅವರಿಬ್ಬರು ಆ ಬಸ್ಸು ನಿಲ್ದಾಣದಲ್ಲಿ ಒಬ್ಬರನ್ನೊಬ್ಬರು ಹೇಗೆ ಗುರುತು ಹಿಡಿದಿರಬಹುದು? ಹೇಗೋ ಗುರುತು ಹಿಡಿದ ನಂತರ ತಾವಿಬ್ಬರೂ ಹೀಗೆ ಇರುವೆವೆಂದು ಒಬ್ಬರಿಗೊಬ್ಬರು ಹೇಗೆ ಹೇಳಿರಬಹುದು?

ಅವರ ಗುರುತು ಪರಿಚಯದ ವಿಧಾನ ಹೇಗೆ?ಸ್ವರವೇ? ಪರಿಮಳವೇ .. ಎಂದೆಲ್ಲ ಯೋಚಿಸಿಕೊಂಡು ಅವರಿಬ್ಬರನ್ನು ಹುಡುಕಿಕೊಂಡು ಯಾವುದೋ ಹಳ್ಳಿಗಾಡಿನ ಟಾರುರೋಡಿನಲ್ಲಿ ಗಾಡಿ ಓಡಿಸುತ್ತಿದ್ದೆ.

ರೇಡಿಯೋದಲ್ಲಿ ಅವರಿಬ್ಬರು ತಮ್ಮ ಪ್ರೇಮದ ಕಥೆಯನ್ನು ವಿವರಿಸಿ ಹೇಳಿದ ಮೇಲೆ ನನಗೆ ಯಾಕೋ ಹೆದರಿಕೆಯಾಗುತ್ತಿತ್ತು.ಏಕೆಂದರೆ ಅವರಿಬ್ಬರೂ ಬೇರೆಬೇರೆ ಜಾತಿಗಳಿಗೆ ಸೇರಿದವರಾಗಿದ್ದರು.

ನಮ್ಮ ಕೊಡಗಿನ ಕಾಡಿನ ನಡುವಲ್ಲಿ ಬದುಕಿದ್ದ ಕಣ್ಣು ಕಾಣದ ಈ ಬಾಲೆ ದೂರದ ಬಯಲು ಸೀಮೆಯ ಬಿಸಿಲಲ್ಲಿ ಹೇಗೆ ಇರುವಳೋ ಎಂದು ಕಣ್ಣಾರೆ ಕಾಣಬೇಕೆಂದು ನಾನು ಹೊರಟಿದ್ದೆ.

ನನಗೂ ಕಣ್ಣು ಕಾಣಿಸದೇ ಇದ್ದಿದ್ದರೆ ಇದೆಲ್ಲ ಹೇಗೆ ಕಾಣಿಸಬಹುದಿತ್ತು ಎಂದು ಕಣ್ಣುಬಿಟ್ಟುಕೊಂಡೇ ಗಾಡಿ ಓಡಿಸುತ್ತಿದ್ದೆ.

ಹತ್ತಾರು ಸರ್ಕಲ್ಲುಗಳಲ್ಲಿ ನಿಂತು ಅವರಿವರ ಬಳಿ ಕೇಳಿ ನವಿಲೂರು, ಶಾನುಭೋಗರಹಳ್ಳಿ, ಮಲ್ಲಿನಾಥಪುರ, ಮೂಕನಹಳ್ಳಿ, ಎಂದೆಲ್ಲ ತಿರುಗುತ್ತ ಕೊನೆಗೆ ಆ ಊರಿಗೆ ತಲುಪಿದಾಗ ಹಗಲು ನೆತ್ತಿಗೇರುತ್ತಿತ್ತು.

ಎಷ್ಟೋ ಕಾಲಗಳಿಂದ ಹೀಗೇ ಬಿಸಿಲಲ್ಲಿ ಬೇಯುತ್ತಾ ನಿಂತಿದೆಯೇನೋ ಎಂಬಂತೆ ಕುಸಿದು ನಿಂತಿರುವ ಮೂಡುಸೀಮೆಯ ಹಳ್ಳಿ.ಅಲ್ಲಿ ಇರುವ ಎಲ್ಲರೂ ಕಾಲಾನುಕಾಲದಿಂದ ಸುತ್ತಲಿನ ಹತ್ತೂ ಹಳ್ಳಿಗಳಲ್ಲಿ ಜೀತಕ್ಕೆ ಬದುಕುತ್ತಿದ್ದವರು ಇದೀಗ ಕೆಲಕಾಲದಿಂದ ಎಚ್ಚತ್ತು ಮೈಕೊಡವಿಕೊಳ್ಳುತ್ತಿದ್ದರು.

‘ಏನ್ ಸ್ವಾಮೀ, ನಾವು ಎಲ್ಲೂ ಓಡಿ ಹೋಗಬಾರದೆಂದು ಎಲ್ಲಾ ದೊಡ್ಡ ದೊಡ್ಡ ಜಾತಿಯವ್ರ ಹಳ್ಳಿಗಳ ನಡ್ವೆ ನಮ್ಮ ಬದುಕಕ್ಕೆ ಬಿಟ್ಟಿದ್ದಾರೆ,’ ಎಂದು ಅಗಲ ಮುಖದ ಅಪೂರ್ವ ಸುಂದರಿಯಾಗಿದ್ದ ಮುದುಕಿಯೊಬ್ಬಳು ನಕ್ಕಳು.

‘ಕಣ್ಣು ಕಾಣದ ಹೀರೋ ಮತ್ತು ಹೀರೋಯಿನ್ ಇರುವ ಮನೆ ಎಲ್ಲಿ’ಎಂದು ಕೇಳಿದೆ.

ಆಗ ಅವರು ಹೆದರಿದರು.

‘ ಹೆದರಬೇಡಿ ನಾನು ರೇಡಿಯೋದವನು.ನಮ್ಮ ರೇಡಿಯೋ ಹಾಡು ಕೇಳೀನೇ ನಿಂ ಹುಡುಗ ನಂ ಹುಡುಗೀನ ಹಾರಿಸಿಕೊಂಡು ಬಂದಿರೋದು’ ಎಂದು ಜೋಕು ಮಾಡಿದೆ.

‘ಅಯ್ಯೋ ನೀವಾ ಬುದ್ದಿ ಹೆದರಿದ್ದೋ’ ಎಂದು ಮನೆಯೊಳಕ್ಕೆ ಕರೆದುಕೊಂಡು ಹೋದರು.

ಬೆಳಕಿನಿಂದ ಒಳಹೊಕ್ಕರೆ ಒಳಗಡೆ ಗವ್ವನೆ ಕತ್ತಲು.

ನಿಧಾನಕ್ಕೆ ತೋರಿಬರುವ ಬೆಳಕು.

ಅದರೊಳಗಡೆ ಉಸಿರಾಡುವ ಜೀವಗಳು, ಉರಿಯುವ ಒಲೆ ಮತ್ತು ಆ ಮನೆಯ ಸಕಲ ಸೌಭಾಗ್ಯವೆಂಬಂತೆ ಒಳಕೋಣೆಯ ಅರ್ದಕ್ಕಿಂತ ಹೆಚ್ಚು ಜಾಗವನ್ನು ಆವರಿಸಿರುವ ಭತ್ತ,ರಾಗಿ ತುಂಬಿಸಿಟ್ಟಿರುವ ಸುಣಗಲು ಕಣಜ.

ಅದರ ಎದುರಿನ ಕೋಲುಬೆಳಕಲ್ಲಿ ನನ್ನೊಡನೆ ಮಾತನಾಡಿಸುತ್ತಿರುವ ಆ ಕಣ್ಣು ಕಾಣದ ಯುವಕ ಶಿವನಂಜುವಿನ ಅಪ್ಪ ,ಅವ್ವ, ತಂಗಿ, ಚಿಕ್ಕವ್ವ ಚಿಗಪ್ಪ, ಮಾವಂದಿರು.

ಅವರಿಗೆ ಯಾರಿಗೂ ತಮ್ಮ ಮನೆಯ ಕಣ್ಣಿಲ್ಲದ ಯುವಕ ಇನ್ನೊಂದೂರಿನ ಕಣ್ಣಿಲ್ಲದ ಯುವತಿಯನ್ನು ಹಾರಿಸಿಕೊಂಡು ಮದುವೆಯಾಗಿರುವುದು ಸುತರಾಂ ಇಷ್ಟವಿರಲಿಲ್ಲ.

‘ಅಲ್ಲಾ ಸ್ವಾಮಿ, ಇವ್ನತ್ರ ನೂರು ರೂಪಾಯಿ ನೋಟು ಇದೆ ಅಂದ್ಕೊಳ್ಳಿ.ಅದು ಬಸ್ ಸ್ಟೇಂಡಲ್ಲಿ ಬಿದ್ದು ಹೋಯ್ತು ಅಂದ್ಕೊಳ್ಳಿ.ಕಣ್ಣು ಕಾಣೋ ಹೆಂಡ್ತಿ ಇದ್ರೆ ಅಯ್ಯೋ ಕಣ್ರೀ ನೋಟು ಬಿದ್ದೋಯ್ತು ಅಂತ ಎತ್ತಿ ಕೊಡ್ತಾಳೆ.ಆದ್ರೆ ಇವ್ನು ಕಣ್ಣಿಲ್ದವ್ಳೇ ಬೇಕು ಅಂತ ಮದುವೆಯಾಗಿದಾನೆ.ನೋಟು ಬಿದ್ದೋಯ್ತು ತಿಳ್ಕೊಳ್ಳಿ,ಬೇರೆಯವ್ರು ಎತ್ಕೋತಾರೆ.ಅಲ್ವಾ ಸ್ವಾಮೀ, ಎಲ್ಲಾ ನಂ ಗ್ರಾಚಾರ.ಏನ್ಮಾಡೋದು ನಂ ಜೀವ ಇರೋ ತನ್ಕ ಇಬ್ರನ್ನೂ ಕಾಪಾಡ್ತೀವಿ.ಆಮೇಲೆ ತಮ್ಮನ್ನ ತಾವು ಕಾಪಾಡೋದು ಅವ್ರಿಗೆ ಬಿಟ್ಟದ್ದು’

ಪ್ರೀತಿ ಎಂಬುದನ್ನ ಮುಖದ ತುಂಬ ತುಂಬಿಕೊಂಡಿದ್ದ ತಾಯಿ ನಿಟ್ಟುಸಿರು ಬಿಟ್ಟಳು.

`no sir’ 

ಅಂಧ ಯುವಕ ಶಿವನಂಜು ಎದ್ದು ನಿಂತ

`blind should give life to blind, ಕಣ್ಣು ಕಾಣದವರಿಗೆ ಮಾತ್ರ ಕಣ್ಣು ಕಾಣದವರ ಫೀಲಿಂಗ್ಸ್ ಗೊತ್ತಾಗೋದು.ನಮ್ಮ ಅಪ್ಪ ಅವ್ವಂಗೆ ಇದೆಲ್ಲಾ ಗೊತ್ತಾಗಲ್ಲ ಸಾರ್’ ಆತ ಮಾತನಾಡುತ್ತಾ ಹೋದ.

ಅಂಬೇಡ್ಕರ್, ಗಾಂಧಿ, ಹೆಲೆನ್ ಕೆಲ್ಲರ್ ಕುವೆಂಪು ಎಲ್ಲರನ್ನೂ ತಿಳಕೊಂಡಿದ್ದ ಯುವಕ.

ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಡಿಗ್ರಿ ಓದುತ್ತಿರುವವನು.

‘ಆಕೆ ದೊಡ್ಡ ಜಾತಿಯವಳಾದ್ರೇನು ಸರ್.ಕೊನೆಗೂ ಅವಳ ಕಷ್ಟ ಗೊತ್ತಾಗಿದ್ದು ನನ್ನಂತ ಒಬ್ಬ ಕುರುಡಂಗೆ ಮಾತ್ರ ಸಾರ್’ ಆತ ಆವೇಶದಲ್ಲಿ ಹೇಳುತ್ತಾ ಹೋದ ಹಾಗೆ ಅವರೆಲ್ಲರೂ ಆ ಮನೆಯೊಳಗೆ ತುಂಬಿಕೊಳ್ಳುತ್ತಿದ್ದ ಬೆಳಕಿನಲ್ಲಿ ಅದನ್ನು ಕೇಳುತ್ತಾ ಕುಳಿತಿದ್ದರು.

‘ ಬಿಡಿ ಸಾರ್, ಅವನ್ದೇನು ಮಾತು ಕೇಳೀರಿ ನನ್ ಸ್ಟೋರಿ ಕೇಳಿ ಸಾರ್..’ ಅದುವರೆಗೆ ಸುಮ್ಮಗಿದ್ದ ಮನೆಯ ಯಜಮಾನ ತನ್ನ ಕಥೆ ಶುರು ಮಾಡಿದ.ಅದು ಇನ್ನೂ ದೊಡ್ಡ ಕಥೆ. ಸುಮಾರು ಹತ್ತು ವರ್ಷಗಳ ನಿರಂತರ ಜೀತದ ಕಥೆ.

‘ಗೊತ್ತಾ ಸಾರ್, ಆಗ ನಾನು ಮೂರ್ನೇ ಕ್ಲಾಸ್ ಓದ್ತಾ ಇದ್ದೆ.ನಮ್ಮಪ್ಪಂಗೆ ಒಂದು ಹಸಾ ತಗೋಬೇಕಿತ್ತು,ಕಾಸು ಇರ್ಲಿಲ್ಲ.ಪಕ್ಕದೂರಲ್ಲಿ ಒಬ್ರು ಈಡಿಗ್ರೋರು ಯಜಮಾನ್ರಿದ್ರು.ಅವ್ರ ಮುಂದೆ ತಗೊಂಡೋಗಿ ನನ್ನ ನಿಲ್ಲಿಸಿದ್ರು.ಸ್ವಾಮೀ ಹಸಾ ತಗೋಬೇಕು ಇವನ್ನ ಜೀತಕ್ಕಿಟ್ಟು ಕಾಸು ಕೊಡಿ ಅಂದ್ರು.ಅವ್ರು ನೂರು ರೂಪಾಯಿ ಕೊಟ್ಟು ನೂರೈವತ್ತು ರೂಪಾಯಿಗೆ ಪ್ರಾಮಿಸರಿ ನೋಟು ಬರ್ಸಿ ನನ್ನ ಜೀತಕ್ಕೆ ಇಟ್ಕೊಂಡಿದ್ರು.ಹತ್ತು ವರ್ಷ ಜೀತಕ್ಕಿದ್ದೆ ಸಾ.ಒಂಥರಾ ಅಲ್ಲೇ ಚೆನ್ನಾಗಿತ್ತು.ಹೊಟ್ಟೆ ತುಂಬಾ ಮುದ್ದೆನಾದ್ರೂ ಸಿಗ್ತಿತ್ತು. ಜೀತ ಬಿಟ್ಟು ಬರುವಾಗ್ಲೂ ಒಂಥರಾ ಆಯ್ತು’ ಅಪ್ಪ ಹಳೆಯ ವ್ಯಥೆಯನ್ನ ನೆನಪಿಸಿಕೊಳ್ಳುತ್ತಿದ್ದ.

‘ನನಗೇನೂ ತೊಂದರೆ ಇಲ್ಲ ಸಾರ್, ಇಲ್ಲಿ ಇವರು ಜೀವಕ್ಕಿಂತ ಜಾಸ್ತಿಯಾಗಿ ನೋಡಿಕೊಳ್ಳುತ್ತಿದ್ದಾರೆ.ಅಲ್ಲಿಯಾದ್ರೆ ಒಂಟಿ ಮನೆ. ಒಬ್ಬಳೇ ಒಂಥರಾ ಆಗುತ್ತಿತ್ತು.ಇಲ್ಲಿ ನೋಡಿ ಎಷ್ಟು ಜನ! ಖುಷಿಯಾಗುತ್ತಿದೆ’ ಕೊಡಗಿನ ಯುವತಿ ಎಲ್ಲವನ್ನೂ ಕಂಡವಳ ಹಾಗೆ ಸಂಭ್ರಮಿಸುತ್ತಿದ್ದಳು.

ಅವರಿಬ್ಬರಿಗೆ ಮದುವೆಯ ಶುಭಾಶಯಗಳನ್ನು ಹೇಳಿ ಬರುವಾಗ ಅಂಧನಾಗಿದ್ದ ಮಗನೂ ಜೀತಕ್ಕಿದ್ದ ತಂದೆಯೂ ಹುಣಸೂರು ಸರ್ಕಲ್ಲಿನ ತನಕ ನನ್ನನ್ನ ಬೀಳ್ಕೊಡಲು ಬಂದರು.
‘ಸಾರ್ ನಿಮ್ಮ ಕೊಡಗಿನವರಿಗೆ ಹೇಳಿ ಸಾರ್, ಜಾತಿಗೀತಿ ಮುಖ್ಯ ಅಲ್ಲ.ಕುರುಡರ ಕಷ್ಟ ಕುರುಡರಿಗೆ ಮಾತ್ರ ಗೊತ್ತಾಗೋದು ಅಂತ ಹೇಳಿ ಸಾರ್’ ಶಿವನಂಜು ದಾರಿಯುದ್ದಕ್ಕೂ ಇದನ್ನೇ ಹೇಳುತ್ತಿದ್ದ.

‘ಅದೇ ಸಾ ನೋಡಿ ನಾ ಜೀತಕ್ಕಿದ್ದ ಮನೆ’ ಶಿವನಂಜುವಿನ ಅಪ್ಪ ದಾರಿಯಲ್ಲಿ ಕಂಡ ಹಳ್ಳಿಯೊಂದರ ಬಿದ್ದು ಹೋಗುವಂತಿದ್ದ ಒಂದು ಮನೆಯನ್ನ ತೋರಿಸಿದ.

ಜೀತಕ್ಕಿದ್ದ ಈತನ ಮನೆಗಿಂತ ಬಹಳ ದೊಡ್ಡದೇನೂ ಅಲ್ಲದ ಊರ ಯಜಮಾನರ ಆ ಮನೆಯೂ ಆ ಬಿಸಿಲಲ್ಲಿ ಹಾಗೇ ಒಣಗಿಕೊಂಡಿತ್ತು.

ಆ ಹಳ್ಳಿಯೂ ಹಾಗೇ ಇತ್ತು.

ಜೀತಕ್ಕಿದ್ದವರ ಹಳ್ಳಿಗಿಂತ ಅದೇನೂ ಭಿನ್ನವಾಗಿರಲಿಲ್ಲ.DSC_048221,April 2013

Photos by Author