The Mysore Post

ಮೈಸೂರು ಪೋಸ್ಟ್ Everything but ಮೈಸೂರು.

ಕತ್ರೀನಾಳ ಕಣ್ಣಲ್ಲಿ ಕಂಡ ಕಥೆಗಳು

2012-01-25_0560ಕಂಡದ್ದನ್ನೆಲ್ಲ ಮುಟ್ಟುತ್ತ, ಮೂಸುತ್ತ, ಮೇಯುತ್ತಾ ಒಂದು ಗಂಡಾಡಿನಂತೆ ಒಬ್ಬನೇ ಅಂಡಲೆಯುವುದು ಒಂದು ತರಹ ಚಂದ.

ಹೆಗಲ ಮೇಲೊಂದು ಮಗುವನ್ನು ಕುಳ್ಳಿರಿಸಿಕೊಂಡು ತಣ್ಣಗಿನ ನೀರ ಆಳದಲ್ಲಿ ಇಂಚಿಂಚು ಇಳಿಯುವುದು ಬೇರೆಯದೇ ಚಂದ.

ನಿಮ್ಮ ಭುಜವೇ ನೀರಲ್ಲಿ ಮುಳುಗುತ್ತಿದ್ದರೂ ಮಗುವಿನ ಪುಟ್ಟಪಾದಗಳು ಮಾತ್ರ ನೀರಲ್ಲಿ ತೊಯ್ದು ಅದು ಕೇಕೆ ಹಾಕುತ್ತಿರುತ್ತದೆ.ನಾವು ಕಾಣುತ್ತಿರುವುದು ನಮಗೆಷ್ಟು ಆಪ್ಯಾಯಮಾನ ಅನಿಸುತ್ತಿದ್ದರೂ ಮಗುವೊಂದು ಲೋಕವನ್ನು ಕಾಣುತ್ತಿರುವ ಸಂಭ್ರಮ, ಹೊಸ ಕಣ್ಣುಗಳೆರಡು ಜೀವಪ್ರೀತಿಯಿಂದ ಹೊಳೆಯುತ್ತಿರುವುದು, ನಮಗೆ ಸಿಲುಕದ ಅಚ್ಚರಿಗಳು ಅದಕ್ಕೆ ಎಟುಕುತ್ತಿರುವುದು ಇವೆಲ್ಲವೂ ವಿವರಿಸಲಾಗದ್ದು.

ಕಳೆದ ವಾರ ಹಾಗೆಯೇ ಆಯಿತು.

ಇಂಗ್ಲೆಂಡಿನಿಂದ ಬಂದಿದ್ದ ಜರ್ಮನ್ ಸಂಜಾತೆ ಯಕ್ಷಗಾನ ಕಲಾವಿದೆ ಕತ್ರೀನ್ ಮತ್ತು ಆಕೆಯ ಗೆಳತಿ ಸೂಜಾನ್ ಇವರಿಬ್ಬರನ್ನು ಕಟ್ಟಿಕೊಂಡು ನನ್ನ ನಿತ್ಯ ಅಲೆದಾಟದ ದಾರಿಗಳಲ್ಲಿ ಇನ್ನೊಮ್ಮೆ ಹೋದೆ.

ಮೊದಲೇ ನಿರ್ಧರಿಸದ ದಾರಿ, ಹೀಗೇ ಎಂದು ವಿವರಿಸಲಾಗದ ಭೂಮಿ, ಯಾರು ಹೇಗೆ ಎಂದು ಹೇಳಲಾಗದ ಮುಖಗಳು, ಪುರಾಣವೋ ಕನಸೋ ಎಂದು ವ್ಯಾಖ್ಯಾನಿಸಲಾಗದ ಹಾಗುಹೋಗುಗಳು, ಆದರೆ ಎಲ್ಲವೂ ಹಗಲಿನಷ್ಟೇ ನಿಖರ ಮತ್ತು ಸತ್ಯ.

ಎಲ್ಲವನ್ನೂ ಕಂಡು ಪುನಹ ಇಂಗ್ಲೆಂಡಿಗೆ ಹಿಂತಿರುಗಿದ ಕತ್ರೀನ್ ಗೆ ಈಗ ಅಲ್ಲಿಯೂ ಎಲ್ಲವೂ ಹಾಗೇ ಅನಿಸುತ್ತಿದೆಯಂತೆ.

‘ಇದುವರೆಗೆ ಇದ್ದ ನಾನು ನಾನಲ್ಲ ಎಂದು ಅನಿಸುತ್ತಿದೆ.ಈಗ ನಾನು ಯಾರೆಂದು ತಿಳಿದುಕೊಳ್ಳಲಿ.ಕಷ್ಟವಾಗುತ್ತಿದೆ’ ಎಂದು ಇಮೇಲ್ ನಲ್ಲಿ ತಿಳಿಸಿ ಅದೃಶ್ಯಳಾಗಿದ್ದಾಳೆ.

P1030508ನಾವು ಮೊದಲು ಹೋದ ಜಾಗ ಕೇರಳದ ಬೈತೂರಪ್ಪನ ದೇಗುಲ.ಅದು ತ್ರೇತಾಯುಗದಲ್ಲಿ ಶಿವನಿಗೂ ಅರ್ಜುನನಿಗೂ ಕಾಳಗ ನಡೆದ ಜಾಗ.ಅರ್ಜುನನ ಬೆನ್ನು ನೋಡಬೇಕೆಂಬ ಪಾರ್ವತಿಯ ಬಯಕೆಗೆ ಶಿವನು ಮಣಿದು ಒಂದು ಕಾಡುಹಂದಿಯ ರೂಪವನ್ನು ಸೃಷ್ಟಿಸಿ ಆ ಹಂದಿಗಾಗಿ ಅರ್ಜುನನಿಗೂ ಆತನಿಗೂ ರಣರಂಪ ಹೋರಾಟ ನಡೆದು ಶಿವನು ಬೇಕೆಂತಲೇ ಸೋತವನಂತೆ ನಟಿಸಿದ್ದ.ಆಗ ಶಿವನ ಮೇಲೇರಿದ ಅರ್ಜುನನ ಬೆನ್ನು ಪಾರ್ವತಿಗೆ ಕಾಣಿಸಿ ಆಕೆಯ ಖುಷಿಕಂಡು ಶಿವ ತಾನೂ ಸಂಭ್ರಮಿಸಿದ್ದ ಜಾಗವದು.

ತ್ರೇತಾಯುಗವೂ ಕಳೆದು,ದ್ವಾಪರ ಯುಗವೂ ಕಳೆದು ಕಲಿಯುಗದಲ್ಲಿ ಕೇರಳದ ಇರಿಟ್ಟಿಯ ಬಳಿಯಲ್ಲಿ ಯಾರೋ ಕಾಡು ಕಡಿಯುತ್ತಿದ್ದಾಗ ಈ ಹೋರಾಟದ ಕುರುಹುಗಳು ಕಂಡುಬಂದು ಅಲ್ಲಿ ಅವರು ಶಿವನ ದೇಗುಲವನ್ನು ಕಟ್ಟಿಸಿದ್ದರು.

ನಮ್ಮ ಕೊಡಗಿನವರಿಗೂ ಕೇರಳದ ಮಲಯಾಳಿಗಳಿಗಳಿಗೂ ಕಲಿಗಾಲದ ಮೊದಲಿಂದಲೂ ಕೊಂಡುಕೊಡುವ ಅವಿನಾಭಾವ ಸಂಬಂಧವಿದೆ.ಎತ್ತುಗಳ ಮೇಲೆ ಅಕ್ಕಿಮೂಟೆಗಳನ್ನು ಹೇರಿ ಕಾಡು ಕಂಡಿಗಳನ್ನಿಳಿದು ಅಕ್ಕಿ ಮಾರಿ ವಾಪಾಸು ಬರುವಾಗ ಉಪ್ಪುಮೂಟೆಗಳನ್ನೂ ಮೆಣಸು ಖಾರಗಳನ್ನೂ ಆಗಿನಿಂದಲೇ ತರುತ್ತಿದ್ದರಂತೆ.

ಆ ಬರುವ ದಾರಿಯಲ್ಲಿ ಬಹಳಷ್ಟು ದೇವತೆಯರೂ, ಭಗವತಿ, ಭೂತಗಣಗಳೂ ಅವರನ್ನು ಹಿಂಬಾಲಿಸಿ ಬಂದು ಕೊಡಗಿನ ಸ್ವರ್ಗಸದೃಶ ಹುಲ್ಲುಗಾವಲುಗಳಲ್ಲಿ ನೆಲೆಸಿಯೂ ಆಗಿದೆ.

ಕಲಿಗಾಲದ ಒಂದು ದಿನ ಕೊಡಗಿನ ಒಂದು ಸೀಮೆಯ ಒಬ್ಬ ಒಳ್ಳೆಯ ಯಜಮಾನನ ಮೇಲೆ ಇನ್ನೊಂದು ಸೀಮೆಯ ಇನ್ನೊಬ್ಬ ಕೆಟ್ಟ ಯಜಮಾನ ಹೊಡೆದಾಟಕ್ಕೆ ಬಂದನಂತೆ.

ಪಾಪ! ಒಳ್ಳೆಯವರು ಯಾವಾಗಲೂ ಬಲಹೀನರಾಗಿರುತ್ತಾರೆ.ಕೆಟ್ಟವರಲ್ಲಿ ಆಯುಧಗಳೂ,ಕಾಲಾಳುಗಳೂ,ಕೊಬ್ಬೂ ಹೆಚ್ಚಿರುತ್ತದೆ.

ಏನು ಮಾಡುವುದೆಂದು ತೋಚದ ಒಳ್ಳೆಯ ಯಜಮಾನ ಕೇರಳಕ್ಕೆ ಓಡಿ ಹೋಗಿ ಬೈತೂರಿನ ಈ ಶಿವನ ಕಾಲಿಗೆ ಬಿದ್ದನಂತೆ.

ಶಿವ ‘ನೀನು ಸುಮ್ಮನೆ ಮನೆಯಲ್ಲಿರು.ಏನೂ ಮಾಡಬೇಡ.ಎಲ್ಲವನ್ನೂ ನಾನೇ ನೋಡಿಕೊಳ್ಳುತ್ತೇನೆ’ಅಂದನಂತೆ.ವಾಪಾಸು ಬಂದ ಒಳ್ಳೆಯ ಯಜಮಾನ ಸುಮ್ಮನೇ ಮನೆಯಲ್ಲಿ ಕುಳಿತಿದ್ದನಂತೆ.ಶಿವ ಕಳಿಸಿದ ಗಣಗಳು ಹೊಡೆದಾಟಕ್ಕೆ ಬಂದ ಕೆಟ್ಟ ಯಜಮಾನನ ಮೇಲೆ ಬೆಂಕಿಕೊಳ್ಳಿಯ ಮಳೆ ಸುರಿಸಿ ಅವನು ಸೋತು ಸುಣ್ಣವಾಗಿ ಓಡಿ ಹೋಗುವಂತೆ ಮಾಡಿದನಂತೆ.

ಆ ಒಳ್ಳೆಯ ಯಜಮಾನನ ಸಂತತಿಯವರು ಈಗಲೂ ವರ್ಷಕ್ಕೊಮ್ಮೆ ನಡೆಯುವ ಬೈತೂರಪ್ಪನ ಉತ್ಸವದಂದು ಎತ್ತುಗಳ ಮೇಲೆ ಅಕ್ಕಿ ಹೇರಿ ಶಿವನಿಗೆ ಒಪ್ಪಿಸಿ ಬರುತ್ತಾರೆ.ಮೊದಲಾದರೆ ಅವರೇ ಸ್ವತಃ ಎತ್ತಿನ ಮೇಲೆ ಅಕ್ಕಿ ಹೇರಿಕೊಂಡು ಕೊಟ್ಟು ಬರುತ್ತಿದ್ದರು.ಈಗ ಕಾಫಿ ಏಲಕ್ಕಿಗೆ ರೇಟು ಬಂದ ಮೇಲೆ ಆಳುಗಳು ಎತ್ತಿನ ಮೇಲೆ ಹೇರಿಕೊಂಡು ಕೊಟ್ಟು ಬರುತ್ತಾರೆ.ಇವರು ಕಾರೋ ಜೀಪೋ ಹತ್ತಿಹೋಗಿ ಅಲ್ಲಿ ಒಂದು ಇರುಳು ಇದ್ದು ಮೈದಣಿಯುವಂತೆ ಶಿವನ ಮುಂದೆ ನರ್ತಿಸಿ ಬರುತ್ತಾರೆ.

P1030521ದಾರಿಯಲ್ಲೆಲ್ಲ ಈ ಕತೆಗಳನ್ನೂ, ಇಂತಹದೇ ಇನ್ನಷ್ಟು ಕತೆಗಳನ್ನೂ ತಮಾಶೆಗಳನ್ನೂ ಹೇಳಿಕೊಂಡು ನಾನೂ ಕ್ಯಾತ್ರೀನಳೂ,ಸೂಜಾನಳೂ ಬೈತೂರು ತಲುಪುವಾಗ ಕತ್ತಲಾಗಿತ್ತು.ಅಕ್ಕಿಯನ್ನು ಕೊಟ್ಟು ವಾಪಾಸಾಗುತ್ತಿದ್ದ ಎತ್ತುಗಳೂ ಆಳುಗಳೂ ಸುಸ್ತಾಗಿ ಬೆಟ್ಟಹತ್ತಿ ಕೊರಕಲು ರಸ್ತೆಯಲ್ಲಿ ಹಿಂತಿರುಗುತ್ತಿದ್ದರು.ನಾವು ಹೋದಾಗ ಬೈತೂರಪ್ಪನ ದೇಗುಲ ಸಂಜೆಯ ಹೊಂಬೆಳಕಲ್ಲಿ ಹೊಳೆಯುತ್ತ ನಿಂತಿತ್ತು.ಪಾತ್ರಿಯೊಬ್ಬನ ಮೈಮೇಲೆ ಬಂದಿದ್ದ ಶಿವ ಮನೋಹರನಾಗಿ ಕಾಣಿಸುತ್ತಿದ್ದ.ಅದಾಗ ತಾನೇ ಅಲ್ಲಿಗೆ ಯಕ್ಷಿಯರಂತೆ ತಲುಪಿದ ಕ್ಯಾತ್ರಿನಳನ್ನೂ ಆಕೆಯ ಗೆಳತಿ ಸೂಜಾನ್ನಳನ್ನೂ ಕೇರಳದ ಮಂದಿ ಭಯವಿಸ್ಮಯದಿಂದ ನೋಡುತ್ತಿದ್ದರು.

ಅವರ ಜೊತೆ ದೊಣನಾಯಕನಂತೆ ಕಾಣುತ್ತಿದ್ದ ನನ್ನನ್ನೂ ನೋಡುತ್ತಿದ್ದರು.ಅವರನ್ನೇ ತದೇಕಚಿತ್ತಳಾಗಿ ನೋಡುತ್ತಿದ್ದ ಕೇರಳದ ಬಾಲೆಯೊಬ್ಬಳು ‘ಇವರ ಕೂದಲೂ ಚಿನ್ನದಲ್ಲೇ ಮಾಡಿದ್ದಾ’ ಎಂದು ಮುಟ್ಟಿನೋಡಿದಳು.

P1030528ಕೇರಳದ ನಾರಿಯರ ಸ್ವರ್ಣದ ಮೋಹವನ್ನು ಮೊದಲೇ ಅರಿತಿರುವ ನಾನು ‘ಇಲ್ಲಾ ಇದು ಚೌರಿಯ ಕೂದಲು.ಚಿನ್ನದ ಕೂದಲನ್ನು ಅಲ್ಲಿಯೇ ಬಿಟ್ಟು ಬಂದಿದ್ದಾರೆ ನೀನು ಎಲ್ಲಾದರೂ ಕದಿಯಬಹುದು ಎಂದು ಹೆದರಿ’ ಎಂದು ಜೋಕು ಮಾಡಿದ್ದೆ.

ಐತಿಹ್ಯ,ಇತಿಹಾಸ,ಪಾರ್ವತಿಯ ಮಮಕಾರ,ಶಿವನ ವಾತ್ಸಲ್ಯ, ಅರ್ಜುನನ ಠೇಂಕಾರ, ಆ ಬಾಲಕಿಯ ಚಿನ್ನದ ಮೋಹ, ಕರಗುತ್ತಿರುವ ಚಿನ್ನದಂತಹ ಬೆಳಕು, ಒಂದು ತರಹದ ಗಾಂಭೀರ್ಯದಿಂದಲೇ ತನ್ನ ಕುಣಿತದ ಕೊನೆಯ ಹೆಜ್ಜೆ ಹಾಕುತ್ತಿದ್ದ ಶಿವನ ಪಾತ್ರಿಯ ಕಿವಿಯ ಝಮಕಿ ಎಲ್ಲಕ್ಕಿಂತ ಚಂದ ಕಾಣಿಸುತ್ತಿತ್ತು.

ಜೊತೆಗೆ ಇದನ್ನೆಲ್ಲ ಭಕ್ತಿನಿಮೀಲಿತಳಾಗಿ ನಿರುಕಿಸುತ್ತಿದ್ದ ಜರ್ಮನ್ ಸುಂದರಿ ಕತ್ರೀನಳೂ.

ಈ ಕತ್ರೀನ್ ಯಕ್ಷಗಾನದಲ್ಲಿ ಅರ್ಜುನನ ಪಾತ್ರವನ್ನೂ, ಕರ್ಣನ ಪಾತ್ರವನ್ನೂ,ಶಿವನಪಾತ್ರವನ್ನೂ ಲೀಲಾಜಾಲವಾಗಿ ಮಾಡುವಾಕೆ.ಚಂಡೆಮದ್ದಲೆಯ ರಿಂಗಣಕ್ಕೆ ಮರುಳಾಗಿ ಕನ್ನಡ ಕರಾವಳಿಗೆ ಮರಳಿ ಬರುತ್ತಲೇ ಇರುತ್ತಾಳೆ.ಇಬ್ಬರು ಹೆಣ್ಣು ಮಕ್ಕಳ ತಾಯಿ.ಒಬ್ಬಳಿಗೆ ಉಷಾ ಎಂದು ಹೆಸರಿಟ್ಟಿದ್ದಾಳೆ.ಇನ್ನೊಬ್ಬಳು ಯಶೋಧರಾ.ಅವರೂ ತಾಯಿಯ ಹಾಗೆ ಚಂಡೆಯ ಪೆಟ್ಟಿಗೆ ಕುಣಿಯಲು ನೋಡುತ್ತಾರೆ.

‘ಯಾಕೋ ನಿನ್ನ ದೇಹದಲ್ಲಿ ಮೋಕ್ಷ ಮುಲ್ಲರ ಮಹರ್ಷಿಯ ಆತ್ಮ ನೆಲೆಸಿರುವ ಹಾಗೆ ಅನಿಸುತ್ತಿದೆ.ಅದಕ್ಕಾಗಿಯೇ ನೀನು ಇವೆಲ್ಲವನ್ನೂ ಹೀಗೆ ನೋಡುತ್ತಿರುವೆ’ ಎಂದು ನಾನು ಆಕೆಗೆ ಛೇಡಿಸಿದ್ದೆ.

ಆಕೆ ಸುಮ್ಮಗೆ ನಕ್ಕಿದ್ದಳು.

2012-01-25_0581ದೇವದೇವತೆಯರು ನಡೆದಾಡಿದ ತಡಿಯಂಡ ಮೋಳು ಬೆಟ್ಟವನ್ನು ಅವರಿಬ್ಬರು ಹತ್ತಿದರು.ಬೆಟ್ಟಕುರುಬರ ಕರಿಂಗಾಳಿ ದೇವತೆಯ ದೇಗುಲವನ್ನೂ ನೋಡಿದರು.ಟೀಪು ಸುಲ್ತಾನನ ಸೆರೆಯಿಂದ ಪಾರಾದ ಮಂಗಳೂರಿನ ಕ್ರೈಸ್ತರಿಗಾಗಿ ಕೊಡಗಿನ ರಾಜ ವೀರಾಜಪೇಟೆಯಲ್ಲಿ ಕಟ್ಟಿಸಿದ ಹಳೆಯ ಇಗರ್ಜಿಯನ್ನೂ ಕಂಡರು.ಹೋಗುವ ಮೊದಲು ದುಬಾರೆಯಲ್ಲಿ ಆನೆಯೊಂದರ ಮೇಲೆ ಲೀಲಾಜಾಲವಾಗಿ ಏರಿ ಕಾಡಿಗೊಂದು ಸಣ್ಣ ಸುತ್ತೂ ಬಂದರು.

ಹೋಗುವ ಮೊದಲು ಕನ್ನಡದ ಟೀವಿ ಚಾನೆಲ್ಲಿಗರು ಕತ್ರೀನ್ ಳ ಯಕ್ಷಗಾನದ ಮೋಹದ ಕುರಿತು ಪ್ರಸಾರಮಾಡಿದರು.ಭಾರತೀಯ ಸಂಸ್ಕೃತಿಗೆ ಮರುಳಾಗಿರುವ ಜರ್ಮನ್ ಮಹಿಳೆ ಎಂದು ತೋರಿಸುತ್ತಿದ್ದರು.

ಯಾಕೋ ಕತ್ರೀನ್ ಗೆ ಸುಸ್ತಾದ ಹಾಗಿತ್ತು.ಎಲ್ಲವನ್ನು ಕಂಡು ಹಿಂತಿರುಗುವ ಮೊದಲು ಆಕೆ ನಿತ್ರಾಣಗೊಂಡಿದ್ದಳು.

‘ನಾನು ಏನೆಂದು ನನಗೇ ಈಗ ಗೊತ್ತಾಗುತ್ತಿಲ್ಲ.ನೀವೆಲ್ಲ ತಿಳಿದಿರುವ ಯಾವುದೂ ನಾನಲ್ಲ, ನಾನಲ್ಲ’ ಎನ್ನುತ್ತಿದ್ದಳು.

‘ಅಯ್ಯೋ ಜರ್ಮನ್ ಮಹಿಳೆಯೇ ಸುಸ್ತಾಗದಿರು.ನಮ್ಮ ಕಡೆ ಸ್ವಲ್ಪ ವೇದಾಂತ ಹೆಚ್ಚು.ಭಾವನೆಗಳೂ ಹೆಚ್ಚು.ಕಥೆಗಳೂ,ಪುರಾಣಗಳೂ ವ್ಯಾಖ್ಯಾನಗಳೂ ನೆಮ್ಮದಿ ಕೆಡಿಸುವಷ್ಟು ಹೆಚ್ಚು.ಬೆಟ್ಟದ ಮೇಲೆ ಹಾಯುವ ಗಾಳಿಯ ಹಾಗೆ ಏನಕ್ಕೂ ತಾಗದ ಹಾಗೆ ಸಣ್ಣಗೆ ಚಲಿಸುತ್ತಿರಬೇಕು.ನೀನು ಹೋದ ಮೇಲೆ ಒಂದು ಕಾದಂಬರಿ ಬರಿ.ಅಕಸ್ಮಾತ್ ಬರೆಯದಿದ್ದರೆ ನಾನೇ ಬರೆದು ಬಿಡುತ್ತೇನೆ.ಜಾಗ್ರತೆ’ ಎಂದು ಬೀಳ್ಕೊಟ್ಟಿದ್ದೆ.

***********

P1030642ಕತ್ರೀನ್ ಹೋಗುವ ಮೊದಲು ಸಂಜೆಗತ್ತಲಲ್ಲಿ ನೋಡಿದ ಬೆಟ್ಟಕುರುಬರ ಕರಿಂಗಾಳಿ ದೇವತೆಯ ದೇಗುಲ ಬೇರೆಯೇ ತರಹ ಕಾಣಿಸುತ್ತಿತ್ತು.ಅದರ ಕಥೆಯೂ ಕೂಡಾ.ಬಂಡೆಯ ರೂಪದ ಶ್ರೀಕೃಷ್ಣ ಪರಮಾತ್ಮನಿಗೆ ಹಸುಗಳ ಕೈಯಿಂದ ಹಾಲು ಕುಡಿಸುತ್ತಿದ್ದ ಕರಿಂಗಾಳಿ ದೇವತೆಯ ಕಥೆ ಅದು.

ತೊಂಬತ್ತು ವರ್ಷದ ಹಣ್ಣುಹಣ್ಣು ಬೆಟ್ಟಕುರುಬರ ಮುದುಕಿಯೊಬ್ಬಳು ಈ ಕಥೆಯನ್ನು ಹೇಳಿದ್ದಳು.ಸಾಯಲು ತಯಾರಾಗಿ ನಿಂತಿರುವ ಈ ಅಜ್ಜಿ ಅನ್ನವಿಲ್ಲದೆ ಅಂಗಿಯಿಲ್ಲದೆ ನಿತ್ರಾಣವಾಗಿದ್ದಳು.ಆಕೆಯ ಮೈಯಿಂದ ಕಡುಬಡತನದ ಕೆಟ್ಟ ಪರಿಮಳಗಳೂ, ಆಕೆಯ ಬಾಯಿಂದ ದೇವಾನುದೇವತೆಯರ ಅಮೋಘ ಕಥೆಗಳೂ ಏಕಕಾಲಕ್ಕೆ ಹೊರಟು ಬರುತ್ತಿದ್ದವು. ನಾವು ದೇವತೆಯಂತೆ ಪೂಜಿಸಬೇಕಾಗಿದ್ದ ಆ ತಾಯಿ ಹಸಿವು ತಡೆಯಲಾರದೆ ಸಾಯಲು ಹೊರಟಿದ್ದಳು.ಆಕೆಯ ಹಟ್ಟಿಯಲ್ಲಿ ಹಸಿವಿನಲ್ಲಿ ಕುಳಿತಿದ್ದ ಕಂದಮ್ಮಗಳು ಈ ಕಥೆಗೂ ತಮಗೂ ಸಂಬಂಧವೇ ಇಲ್ಲದಂತೆ ವಿಷಣ್ಣರಾಗಿ ನೋಡುತ್ತಿದ್ದರು.

‘ಬಾ ಕತ್ರಿನ್, ಹೋಗುವಾ ನಮ್ಮ ಕಥೆಗಳೇನೋ ಕೇಳಲು ಮಜಬೂತಾಗಿರುತ್ತದೆ.ಆದರೆ ಕಾಡಿನೊಳಗಡೆ ಬದುಕುತ್ತಿರುವ ಈ ಬೆಟ್ಟಕುರುಬರನ್ನೂ ಅವರ ಕಥೆಗಳನ್ನೂ ನಾವು ಹಿಂಡಿ ಹಿಪ್ಪೆ ಮಾಡಿಬಿಟ್ಟಿದ್ದೇವೆ’ ಎಂದು ವ್ಯಘ್ರನಾಗಿ ಹೇಳಿದ್ದೆ.

ಕತ್ರೀನ್ ಕಣ್ಣೀರು ತುಂಬಿಕೊಂಡು ‘ಹೌದು’ಅಂದಿದ್ದಳು.2012-01-26_0957

Photos By the Author

January 2012

 

ನಿಮ್ಮ ಟಿಪ್ಪಣಿ ಬರೆಯಿರಿ