ಮೊದಲು ಮಲ್ಲಮ್ಮ, ನಡುವಲ್ಲಿ ಸರಸ್ವತಿ ಮತ್ತು ಇದೀಗ ಜುಲೈಕಾ

zulika4.jpg

ನೋಡಲು ಚೂಟಿಯಾಗಿದ್ದ ಆದರೆ ಓದಲು ಅಷ್ಟೇನೂ ಚುರುಕಾಗಿರದ ನಮ್ಮ ಸಂಬಂಧಿಕರ ಹುಡುಗಿಯೊಬ್ಬಳನ್ನು ಮನೆಯಲ್ಲಿಟ್ಟುಕೊಂಡು ಓದಿಸುತ್ತಿದ್ದೆ. ಎರಡು ವರ್ಷಗಳ ಹಿಂದೆ ಒಂದು ದಿನ ಸಂಜೆ ಎಲ್ಲಿಯೋ ತಿರುಗಾಡಲು ಹೋಗಿದ್ದ ನಾನು ತಿರುಗಿ ಬಂದಾಗ ಕತ್ತಲಾಗುತ್ತಿತ್ತು. ಆ ಹುಡುಗಿಗೆ ಗಂಡು ಹುಡುಕಿಕೊಂಡು ಬಂದ ಮಹಿಳೆಯರೊಬ್ಬರು ನನಗಾಗಿ ಕಾಯುತ್ತಾ ಕುಳಿತಿದ್ದರು. ಗಂಡು ಹುಡುಕುವುದು, ಮದುವೆ ಮಾಡಿಸುವುದು ಇತ್ಯಾದಿಗಳಲ್ಲಿ ಅಷ್ಟೇನೂ ಆಸಕ್ತಿ ಇರದ ನಾನು ಒಂದು ತರಹದ ನಿರಾಸಕ್ತಿಯಿಂದಲೇ ಆಕೆಯನ್ನು ಏನು ಮಾತಾಡಿಸುವುದು ಎಂದು ಯೋಚಿಸುತ್ತಿದ್ದೆ. ಮದುವೆಯ ವಯಸ್ಸೇನೂ ಆಗಿರದಿದ್ದ ಸಂಬಂಧಿಕರ ಹುಡುಗಿ ಬಿಸಿಲು ಚಾವಣಿಯಲ್ಲಿ ಮಕ್ಕಳೊಡನೆ ಜೂಟಾಟ ಆಡುತ್ತಾ ಕುಳಿತಿದ್ದಳು.

ಒಳಬಂದವನನ್ನು ಕಂಡು ಆ ಮಹಿಳೆ ಎದ್ದು ನಿಂತು ತನ್ನ ಹೆಸರು ಜುಲೈಕಾ ಎಂದೂ ತನ್ನ ಮಗ ಪಶ್ಚಿಮಾ ಆಫ್ರಿಕಾದ ಯಾವುದೋ ದೇಶವೊಂದರಲ್ಲಿ ಕಂಪ್ಯೂಟರ್ ಶಿಕ್ಷಕನಾಗಿರುವನೆಂದೂ, ಅವನು ಒಂದುವರ್ಷದಲ್ಲಿ ಮೈಸೂರಿಗೆ ಬರುತ್ತಿರುವನೆಂದೂ, ನಮ್ಮ ಹುಡುಗಿಯ ಭಾವಚಿತ್ರವೊಂದು ಇದ್ದರೆ ಆತನಿಗೆ ಕಳುಹಿಸಿಕೊಡಬೇಕಿತ್ತೆಂದೂ, ಅದಕ್ಕಾಗಿ ಬಂದಿರುವುದಾಗಿಯೂ ಹೇಳಿದ್ದರು. ಆಕೆಯ ಮುಖ ಚಹರೆ, ನಡೆನುಡಿ, ಹಾವ ಭಾವ ಮತ್ತು ಆಕೆ ಆಡುತ್ತಿದ್ದ ಕನ್ನಡ ನುಡಿಯ ಶೈಲಿ ಇವುಗಳಿಗೂ ಮತ್ತು ಆಕೆಯ ಜುಲೈಕಾ ಎಂಬ ಹೆಸರಿಗೂ ಯವುದೇ ತರಹದ ತಾಳಮೇಳಗಳು ಗೋಚರಿಸುತ್ತಿರಲಿಲ್ಲ.

ನೋಡಿದರೆ ಅವರು ಯಾವುದೋ ಹಳೆಯ ಕಾಲದ ಅಭಿನೇತ್ರಿಯಂತೆ ಕಾಣಿಸುತ್ತಿದ್ದರು. ಆಮೇಲೆ ಆಕೆ ತೀರಿಹೋಗಿರುವ ತನ್ನ ಪತಿಯ ಹೆಸರನ್ನು ಹೇಳಿದರು. ಆ ಹೆಸರು ಕೇಳಿದ ಮೇಲೆ ನನಗೆ ಅದು ಖಾತರಿಯಾಯಿತು. ‘ನಿಮ್ಮ ಹಳೆಯ ಹೆಸರು ಸರಸ್ವತಿ ಎಂದಿರಬೇಕಲ್ಲವೇ?’ ಅಂದೆ. ‘ಹೌದು’ ಎಂದು ಆಕೆ ನಾಚಿಕೊಂಡರು. ‘ನಿಮ್ಮ ಮಕ್ಕಳ ತಂದೆ ಬಿ. ಶೇಖ್ ಚಾಂದ್ ತೀರಿ ಹೋಗಿದ್ದಾರೆ ಅಲ್ಲವೇ’ ಅಂದೆ. ‘ಹೌದು’ ಎಂದರು ‘ಹಾಗಾದರೆ ಕೂತುಕೊಳ್ಳಿ ಒಂದು ನಿಮಿಷ’ ಎಂದು ಒಳಕ್ಕೆ ಹೋಗಿ ಮುಖ ತೊಳೆದುಕೊಂಡು ಬಂದು ಅವರ ಜೊತೆ ಬಹಳ ಹೊತ್ತು ಮಾತನಾಡಿದೆ.

ನಿನ್ನೆ ಸಂಜೆ ಆಫೀಸಿನಲ್ಲಿ ಕುಳಿತಿರುವಾಗ ಸರಸ್ವತಿ ಅಲಿಯಾಸ್ ಜುಲೈಕಾ ಅವರ ಮಗ ಆಫ್ರಿಕಾದಿಂದ ಬಂದವನು ನನ್ನನ್ನು ಕಾಣಲು ಬಂದಿದ್ದ. ಆತನಿಗೆ ಕಂಪ್ಯೂಟರ್ ಅನಿಮೇಷನ್ಗಾಗಿ ಒಳ್ಳೆಯ ಇಂಗ್ಲಿಷ್ ದ್ವನಿಯುಳ್ಳ ಯಾರಾದರೂ ಬೇಕಾಗಿತ್ತು. ನನಗೆ ಯಾರಾದರೂ ಗೊತ್ತಿರಬಹುದು ಎಂದು ಬಂದಿದ್ದ. ನನಗೆ ಈತ ಜುಲೈಕಾ ಅವರ ಪುತ್ರ ಎಂದು ಗೊತ್ತಾಯಿತು. ನನಗೆ ಸಂಬಂಧಿಕನಾಗಬೇಕಿದ್ದವನು. ‘ತಾಯಿ ಜುಲೈಕಾ ಹೇಗಿದ್ದಾರೆ?’ಎಂದು ಕೇಳಿದೆ. ‘ಆರಾಮವಾಗಿದ್ದಾರೆ’ ಎಂದು ಹೇಳಿದ.

ಆತನನ್ನು ಸುಮ್ಮನೇ ಮಾತನಾಡಿಸಿ ಕಳಿಸಿದವನು ನಿನ್ನೆ ರಾತ್ರಿ ಜುಲೈಕಾರವರನ್ನು ಕಾಣಲು ಹೋದೆ. ಹೋದವನು ಅವರ ಕಥೆಯನ್ನು ಇನ್ನೊಮ್ಮೆ ಕೇಳಿ ಬಂದೆ. ಅವರು ಹೇಳಿದ್ದನ್ನು ಹಾಗೆಯೇ ನಿಮ್ಮ ಮುಂದಿಡುತ್ತಿದ್ದೇನೆ.

ಜುಲೈಕಾ ಅವರ ಮೂಲದ ಹೆಸರು ಮಲ್ಲಮ್ಮ. ಅವರ ಮನೆ ದೇವರು ಮಲ್ಲಿಕಾರ್ಜುನ ನಿಂದಾಗಿ ಅವರಿಗೆ ಆ ಹೆಸರು ಬಂದಿದೆ. ಕುರುವತ್ತಿ ಮಲ್ಲಯ್ಯ, ಮೈಲಾರಿ ಲಿಂಗ ಎಂದೂ ಆತನನ್ನು ಪೂಜಿಸುತ್ತಾನೆ. ಮಲ್ಲಮ್ಮ ಕೊಪ್ಪಳದ ಬಳಿಯ ಒಂದು ಹಳೆಯ ಗ್ರಾಮದ ಹಳೆಯ ವೀರಶೈವ ಕುಟುಂಬಕ್ಕೆ ಸೇರಿದವರು. ಆ ಊರಿನಲ್ಲಿ ನಡೆಯುವ ಮಹಮ್ಮಾಯಿಯ ಜಾತ್ರೆ ಇತಿಹಾಸ ಪ್ರಸಿದ್ಧ.

ಮಲ್ಲಮ್ಮನಿಗೆ ಆರುವರ್ಷದಿಂದಲೂ ನಾಟಕದ ಹುಚ್ಚು. ಪುಟ್ಟ ಬಾಲಕಿಯಾಗಿರುವಾಗಲೇ ಜಂಪರ್ ಲಂಗವನ್ನು ಉಲ್ಟಾ ಮಾಡಿ ಕಚ್ಚೆಯಂತೆ ಕಟ್ಟಿಕೊಂಡು, ತಂದೆಯ ರುಮಾಲನ್ನು ಉರಿಹೊಡೆದು ಸೊಂಟದ ಸುತ್ತ ನೆರಿಗೆ ಮಾಡಿ ಸುತ್ತಿಕೊಂಡು, ರೊಟ್ಟಿ ತಟ್ಟುವ ಹಂಚಿನ ತಳದ ಮಸಿಯನ್ನು ವಿಭೂತಿಯಂತೆ ಬಳಿದುಕೊಂಡು, ಮುಖವನ್ನು ಉಫ್ ಅಂತ ಹನುಮಂತನ ಹಾಗೆ ಮಾಡಿಕೊಂಡು ಪುಟ್ಟ ಆಂಜನೇಯಳಾಗಿ ಕುಣಿಯುತ್ತಿದ್ದಳಂತೆ. ಅವರ ತಾತನ ಕಾಲಕ್ಕೆ ಎಂಟು ಎತ್ತಿನ ಕಟ್ಟೆಯಿತ್ತಂತೆ. ಅದು ಪಾಲಾಗಿ ನಾಲ್ಕು ಎತ್ತಿನ ಕಟ್ಟೆಯೊಂದು ತಂದೆಯ ಪಾಲಿಗೆ ಬಂದಿತ್ತಂತೆ. ಮಲ್ಲಮ್ಮ ದಿನವಿಡೀ ಅದರ ಮೇಲೆ ಹತ್ತಿ ಹನುಮಂತನಂತೆ ಜಿಗಿಯುತ್ತಿದ್ದಳಂತೆ. ಮನೆಗೆ ಬಂದು ಹೋಗುವವರೆಲ್ಲರೂ ಅವಳನ್ನು ನೋಡಿ ನಗುತ್ತಿದ್ದರಂತೆ.

ಅವರ ಹಳ್ಳಿಯಲ್ಲಿ ಒಬ್ಬಾಕೆ ನಾಟಕದ ನಟಿಯೊಬ್ಬಳು ಹೋಟೆಲ್ಲು ಇಟ್ಟುಕೊಂಡಿದ್ದಳಂತೆ. ಅವಳ ಒಬ್ಬ ತಮ್ಮ ಸನ್ಯಾಸಿಯಾಗಿ ಊರು ಬಿಟ್ಟು ಹೋಗಿದ್ದನಂತೆ. ಇನ್ನೊಬ್ಬಾತ ಹಾಮರ್ೋನಿಯಂ ಕಲಿತು ಅಕ್ಕನ ಹಾಡಿಗೆ ಸಾಥ್ ನಿಡುತ್ತಿದ್ದನಂತೆ. ಆ ನಟಿ ಆರುವರ್ಷದ ಮಲ್ಲಮ್ಮನ ಆಂಜನೇಯ ವೇಷವನ್ನು ಮೆಚ್ಚಿಕೊಂಡು ಈಗಲೇ ಸುರಸುಂದರಿಯಂತಿರುವ ಈ ಬಾಲಕಿ ದೊಡ್ಡವಳಾದ ಮೇಲೆ ಖ್ಯಾತ ಅಭಿನೇತ್ರಿಯಾಗುವಳು ಎಂದು ಭವಿಷ್ಯ ನುಡಿದು ಆಕೆಯನ್ನು ಕರೆದುಕೊಂಡು ಹೋಗಿ ನಾಟಕದಲ್ಲಿ ಲೋಹಿತಾಶ್ವನ ಪಾತ್ರ ಕೊಟ್ಟಳಂತೆ.
ಆ ನಾಟಕ ನಡೆದದ್ದು ಮಾನ್ಷಿಯಲ್ಲಿ. ತಾಯಿ ತಾರಾವತಿಯ ಪಾತ್ರವನ್ನು ಮುರುಗೋಡು ರೇಣಮ್ಮ ವಹಿಸಿದ್ದರಂತೆ. ತಾಯಿಯಿಂದ ಅಗಲುವಾಗ ಬಾಲಕ ಲೋಹಿತಾಶ್ವ ‘ಅಮ್ಮಾ ನನ್ನನ್ನು ಅಗಲಬೇಡ. ನಿನ್ನ ಬಿಟ್ಟು ನಾನು ಇರಲಾರೆ’ ಎಂದು ಅಳುತ್ತಾ ಹೇಳಬೇಕಿತ್ತಂತೆ. ಮಲ್ಲಮ್ಮ ತಾಯಿಯನ್ನು ಬಿಟ್ಟು ಬಂದ ಖುಷಿಯಿಂದ ಅದನ್ನು ನಗುತ್ತಾ ಹೇಳಿದಳಂತೆ. ರೇಣುಕಮ್ಮ ಪ್ರೇಕ್ಷಕರಿಗೆ ಗೊತ್ತಾಗದೆ ಹಾಗೆ ಮಲ್ಲಮ್ಮನನ್ನು ಜೋರಾಗಿ ಗಿಂಡಿದಳಂತೆ. ಲೋಹಿತಾಶ್ವ ಆಗ ‘ಅಮ್ಮಾ ಹೋಗಬೇಡ’ ಎಂದು ಅಳುತ್ತಾ ಹೇಳಿದಳಂತೆ. ನಾಟಕ ಮುಗಿಸಿ ಊರಿಗೆ ಬಂದ ಮಲ್ಲಮ್ಮ ಶಾಲೆಯಲ್ಲಿ ಈ ಘಟನೆಯನ್ನು ನಗುತ್ತಾ ತನ್ನ ಗೆಳತಿಯರ ಬಳಿ ಹೇಳುತ್ತಿದ್ದಳಂತೆ.

ಇನ್ನೊಂದು ದೃಶ್ಯದಲ್ಲಿ ಲೋಹಿತಾಶ್ವ ಸಾಯಬೇಕು – ಸತ್ತು ಒಂದು ಗಂಟೆಯ ಬಳಿಕ ಮುನಿಗಳೊಬ್ಬರು ಕಮಂಡಲದಿಂದ ನೀರು ಚಿಮುಕಿಸುವಾಗ ಲೋಹಿತಾಶ್ವ ಜೀವ ತಳೆದು ಏಳಬೇಕು. ಆದರೆ ಆ ಪಾತ್ರ ಮಾಡುತ್ತಿದ್ದ ಮಲ್ಲಮ್ಮ ಸ್ಟೇಜಿನಲ್ಲಿ ನಿದ್ದೆ ಹೋಗಿದ್ದಳಂತೆ. ನೀರು ಚಿಮುಕಿಸಿದರೂ ಲೋಹಿತಾಶ್ವ ಏಳದಿರುವುದನ್ನು ನೋಡಿ ಮುನಿಗಳು ಕಾಲಿನ ಹೆಬ್ಬೆರೆಳಿನಿಂದ ಮಲ್ಲಮ್ಮಳ ತೊಡೆಯನ್ನು ತುಳಿದರಂತೆ. ಆಗ ಮಲ್ಲಮ್ಮ ಕಿರುಚುತ್ತಾ ಎದ್ದು ನಿಂತಳಂತೆ.
ನಿನ್ನೆಯ ಇರುಳು ಮೈಸೂರಿನಲ್ಲಿ ಮಳೆ ಬರುತ್ತಿತ್ತು. ಜುಲೈಕಾ ತಮ್ಮ ಪುಟ್ಟ ಮನೆಯಲ್ಲಿ ನನ್ನನ್ನು ಕುಳ್ಳಿರಿಸಿಕೊಂಡು, ನಡುನಡುವಲ್ಲಿ ಅಳುತ್ತಾ, ಒಮ್ಮೊಮ್ಮೆ ನಗುತ್ತಾ, ಕಣ್ಣೀರು ಒರೆಸಿಕೊಳ್ಳುತ್ತಾ, ಕೆಲವೊಮ್ಮೆ ವೇದಾಂತಿಯಂತೆ ಮಾತನಾಡುತ್ತಾ ಮಲ್ಲಮ್ಮ ಎಂಬ ಹುಡುಗಿ ಸರಸ್ವತಿ ಎಂಬ ಹೆಸರಿನಲ್ಲಿ ಅಭಿನೇತ್ರಿಯಾಗಿದ್ದು, ಆಮೇಲೆ ಶೇಖ್ಚಾಂದ್ ಎಂಬ ರಂಗನಟನನ್ನು ಮದುವೆಯಾಗಿಜ ಜುಲೈಕಾ ಆಗಿದ್ದು ಎಲ್ಲವನ್ನು ನಾಟಕವೊಂದರ ದೃಶ್ಯಗಳಂತೆ ನನಗೆ ಹಾವಭಾವ ಗಳ ಸಮೇತ ವಿವರಿಸುತ್ತಿದ್ದರು.sheikchand-julika.jpg ಗಂಡನಿಗೆ ಪ್ರೇಮಿಯಾಗಿ’ ಹೆಂಡತಿಯಾಗಿ, ಮಗಳಾಗಿ, ತಾಯಿಯಾಗಿ, ಊರೂರು ತಿರುಗುತ್ತಾ ನಾನಾ ಪಾತ್ರಗಳ್ಲಿ ಅಭಿನಯಿಸಿದ್ದು, ನಾಟಕದ ಡೇರೆಗಳಲ್ಲಿಯೇ ಮೂವರು ಗಂಡುಮಕ್ಕಳು ಹುಟ್ಟಿದ್ದು ಬೆಳೆದದ್ದು, ಅವರನ್ನು ಓದಿಸಿ ದೊಡ್ಡವರನ್ನಾಗಿ ಮಾಡಿದ್ದು ಕೊನೆಯ ಮಗ ಮಹಾ ಪ್ರತಿಭಾವಂತನಾಗಿದ್ದ ಸಿಕಂದರ್ ಪಾಷಾ ಕಾಮಾಲೆ ಕಾಯಿಲೆ ಬಂದು, ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ತೀರಿ ಹೋಗಿದ್ದು, ಅದರಿಂದ ತಮಗೆ ಮತಿಭ್ರಮಣೆಯಾಗಿದ್ದು, ಆ ಮತಿಭ್ರಮಣೆಯನ್ನು ಮರೆಸಲೋ ಎಂಬಂತ ಸರ್ವಶಕ್ತನಾದ ಆ ಭಗವಂತ ಈಗ ಏಳುವರ್ಷಗಳ ಹಿಂದೆ ಪತಿ ಶೇಖ್ ಚಾಂದರ ಪ್ರಾಣವನ್ನು ಕಿತ್ತುಕೊಂಡಿದ್ದು ಎಲ್ಲವನ್ನೂ ಹೇಳುತ್ತಿದ್ದರು. ನಡುನಡುವೆ ಪಾತ್ರಗಳ ಸಾಲುಗಳನ್ನು ಹೇಳುತ್ತಿದ್ದರು. ನಾಟಕದ ಹಾಡುಗಳನ್ನು ಹಾಡುತ್ತಿದ್ದರು. ಕೊನೆಯಲ್ಲಿ ನೀನು ಏನು ಬೇಕಾದರೂ ಬರಿ. ನಾನು ಹೇಳಿದ್ದೆಲ್ಲವನ್ನೂ ಬರಿ. ಆದರೆ ಕೊಪ್ಪಳದ ಬಳಿಯ ತನ್ನ ಹಳ್ಳಿಯ ಹೆಸರನ್ನು ಮಾತ್ರ ಬರೆಯಬೇಡ ಎಂದು ಹೇಳಿ ಆ ಮಳೆಯಲ್ಲಿಯೇ ನನ್ನನ್ನು ಕಳಿಸಿದ್ದರು.

ಮಲ್ಲಮ್ಮನ ಮೈನೆರೆದಾಗ ಆಕೆ ಗದಗಿನಲ್ಲಿರುವ ಬಸಯ್ಯನವರ ಪಟ್ಟದ ಕಲ್ಲು ನಾಟಕ ಕಂಪೆನಿಯಲ್ಲಿದ್ದಳು. ಆಕೆ ತನ್ನ ಎಂಟು ವರ್ಷದಲ್ಲಿಯೇ ಮನೆಯಿಂದ ಹೇಳದೆ ಕೇಳದೆ ಓಡಿಹೋಗಿದ್ದಳಂತೆ. ಹೋಗುವ ಖಚರ್ಿಗೆ ಕಾಲಿನ ಕಡಗ, ಕೈಯ ಬಳೆ, ಜುಮುಕಿ, ಉಂಗುರ, ಸರ ಎಲ್ಲವನ್ನೂ ಮೂವತ್ತು ರೂಪಾಯಿಗ ಮಾರಿ ತನಗೆ ಯಾರೂ ಇಲ್ಲ ತಾನು ಅನಾಥೆ ಎಂದು ಸುಳ್ಳು ಹೇಳಿ ಬಸಯ್ಯನವರ ಕಾಲಿಗೆ ಬಿದ್ದಳಂತೆ. ಹಾಗೆ ಕಾಲಿಗೆ ಬಿದ್ದ ಮಲ್ಲಮ್ಮನಿಗೆ ಸರಸ್ವತಿ ಎಂಬ ಹೆಸರಿಟ್ಟು ಸಾಕುಮಗಳನ್ನಾಗಿ ಬೆಳೆಸಿ ಅಭಿನೇತ್ರಿಯನ್ನಾಗಿ ಮಾಡಿದರಂತೆ. ಹನ್ನರೆಡು ವರ್ಷಕ್ಕೆ ಸರಸ್ವತಿ ಮೈನೆರೆದಾಗ ಬಸಯ್ಯನವರು ನಿಜ ಹೇಳು ಎಂದು ಹೇಳಿ ಅವಳ ತಂದೆ ತಾಯಿಯರ ಹೆಸರು ತಿಳಿದುಕೊಂಡು ಪುನಃ ಊರಿಗೆ ಕಳುಹಿಸಿದರಂತೆ.
ಊರಿಗೆ ಬಂದ ಮಗಳನ್ನು ಸೇರಿಸಿಕೊಂಡ ಆ ವೀರಶೈವ ತಂದೆ ಆಕೆಗೆ ಹೊಲಿಗೆಯ ಯಂತ್ರವೊಂದನ್ನು ಕೊಡಿಸಿ ಹೊಲಿದು ಕೊಂಡಿರು ಅಂತ ಕೂಡಿಸಿದರಂತೆ. ಯಾರಾದರೂ ಮಗಳು ಇಷ್ಟು ವರ್ಷ ಎಲ್ಲಿ ಕಾಣೆಿಯಾಗಿದ್ದಳು ಎಂದು ಕೇಳಿದರೆ ಕೊಪ್ಪಳಕ್ಕೆ ಹೊಲಿಗೆ ಕಲಿಯಲು ಹೋಗಿದ್ದಳು ಎಂದು ಸುಳ್ಳು ಹೇಳುತ್ತಿದ್ದರಂತೆ.
ಹೀಗೆ ಹೊಲಿಯುತ್ತಾ ಕೂತ ಮಲ್ಲಮ್ಮ ಎಂಬ ಸರಸ್ವತಿಯ ಮುಂದೆ ಒಂದು ದಿನ ಶೇಖ್ ಚಾಂದ್ ಪ್ರತಕ್ಷರಾಗುತ್ತಾರೆ. ನಾಟಕದ ಹುಚ್ಚು ತಲೆಗೆ ಹತ್ತಿಸಿಕೊಂಡಿದ್ದ ಶೇಖ್ ಚಾಂದ್ ಆಗ ಇನ್ನೂ ಚಿಗುರು ಮಿಸೆಯ ಚೆಲುವ. ಆತನನ್ನು ನೋಡಿಯೂ ನೋಡದವಳಂತೆ ಹೊಲಿಯುತ್ತಾ ಕುಳಿತಿದ್ದವಳನ್ನೂ ಆತನೇ ಮಾತನಾಡಿಸಿದನಂತೆ. ಗದಗಿನ ನಾಟಕದ ಕಂಪೆನಿ ಸೇರಿ ಮಲ್ಲಮ್ಮ ಸರಸ್ವತಿ ಎಂಬ ಹೆಸರಿನಲ್ಲಿ ಖ್ಯಾತಳಾಗಿ ಈಗ ಏನೂ ಆಗದವಳಂತೆ ಹೊಲಿಯುತ್ತಾ ಕೂತಿರುವುದು ಚಾಂದ್ಪಾಷಾನಿಗೆ ಗೊತ್ತಾಗಿತ್ತು. ತನ್ನ ಕನಸಿನ ನಾಟಕ ಕಂಪನಿಯ ನಾಯಕಿಯನ್ನು ಹುಡುಕಿಕೊಂಡು ಆತ ದೂರದ ಕಲಬುರ್ಗಿಯಿಂದ ಕೊಪ್ಪಳದ ಬಳಿಯ ಆ ಹಳ್ಳಿಗೆ ಬಂದಿದ್ದ. ಆತನನ್ನು ಕಡೆಗಣ್ಣಿನಿಂದ ಗಮನಿಸುತ್ತಿದ್ದ ಸರಸ್ವತಿಗೆ ಕಲ್ಬುರ್ಗಿಯ ಬಸವೇಶ್ವರ ದೇವಾಲಯವೂ ಬಿಜಾಪುರದ ಗೋಳಗುಮ್ಮಟವೂ ಏಕಕಾಲಕ್ಕೆ ನೆನಪಾದವಂತೆ.

ಆನಂತರ ನಡೆದದ್ದು ಒಂದು ದೊಡ್ಡ ಕತೆ. ನಾಟಕಕ್ಕಿಂತಲೂ ಮಿಗಿಲಾದ, ಕಥೆಗಿಂತಲೂ ರುಧ್ರ ಭಯಂಕರವಾದ, ಆಕಸ್ಮಿಕಗಳಿಗಿಂತಲೂ ಆಕಸ್ಮಿಕಗಳು ತುಂಬಿ ಕೊಂಡಿರುವ ಕಥಾನಕ ಅದು. ಈ ಕಥಾನಕದ ನಾಯಕ ಶೇಖ್ ಚಾಂದ್ ಭೀಮರಾಯನ ಗುಡಿ ಎಂಬ ಊರಿನಲ್ಲಿ ತನ್ನ ಪ್ರಾಣ ಸ್ನೇಹಿತನ ಮಗುವೊಂದನ್ನು ಉಳಿಸಲು ಹೋಗಿ ತಾನು ಆಟೋರಿಕ್ಷಾವೊಂದಕ್ಕೆ ಸಿಲುಕಿ ತೀರಿಹೋದರು. ಅದಕ್ಕಿಂತಲೂ ಮೊದಲು ಕಾಮಾಲೆಗೆ ಸಿಲುಕಿ ಮಗ ಸಿಕಂದರ್ ತೀರಿಹೋಗಿದ್ದ. zulika5.jpgಈಗ ಜುಲೈಕಾ ಎಂಬ ಹೆಸರಿನಿಂದ ಕರೆಯಲ್ಪಡುತ್ತಿರುವ, ಹಿಂದೆ ಸರಸ್ವತಿ ಎಂಬ ಹೆಸರಿದ್ದ, ಅದಕ್ಕೂ ಮೊದಲು ಮಲ್ಲಮ್ಮ ಎಂಬ ಬಾಲಕಿಯಾಗಿದ್ದ ಈ ಮಹಿಳೆ ಈಗಲೂ ಪುಟ್ಟ ಹುಡುಗಿಯ ಹಾಗೆ ನಗುತ್ತಾರೆ. ಅವಕಾಶ ಸಿಕ್ಕರೆ ಈಗಲೂ ಆಂಜನೇಯನ ಹಾಗೆ ಕುಣಿಯಬಲ್ಲೆ ಎಂದು ಅವರ ಕಣ್ಣುಗಳು ಹೇಳುತ್ತವೆ.

`ನೋಡಿ ಮದುವೆ ಸಂಬಂದಕ್ಕಾಗಿ ಬಂದಿದ್ದ ನಿಮ್ಮನ್ನು ಮಾತನಾಡಿಸಲು ಹೋಗಿ ನಿಮ್ಮ ಏನೆಲ್ಲಾ ಸಂಕಟಗಳನ್ನು ನೆನಪಿಸಿಕೊಳ್ಳುವಂತೆ ಮಾಡಿದ ನನ್ನನ್ನು ಕ್ಷಮಿಸಿ ಎಂದು ಕೇಳಿದೆ.ಅವರು ನಕ್ಕರು. ‘ಈಗಲೂ ಕಾಲ ಮೀರಿಲ್ಲ ಆಫ್ರಿಕಾದಿಂದ ಬಂದಿರುವ ನನ್ನ ಮಗನಿಗೆ ಇನ್ನೂ ಹೆಣ್ಣು ಹುಡುಕುತ್ತಿದ್ದೇನೆ,ಯಾರಾದರೂ ಸಾಬರ ಹುಡುಗಿಯರು ಇದ್ದರೆ ಹೇಳಿ’ ಎಂದು ಹೇಳಿದರು.

‘ಹೇಳುತ್ತೆನೆ. ಆದರೂ ಈ ಮದುವೆ ಗಿದುವೆ ಹುಟ್ಟು ಸಾವು ಇತ್ಯಾದಿ ಆಕಸ್ಮಿಕಗಳು ನನಗೆ ಯಾಕೋ ಸರಿಯಾಗುವುದಿಲ್ಲ ನಾನು ಯಾವಾಗಲೂ ಇವುಗಳಿಂದ ದೂರ ಇರುತ್ತೇನೆ ಎಂದು ಹೇಳಿ ಅವರಿಂದ ಬೀಳು ಕೊಂಡು ಮಳೆಯಲ್ಲಿ ಬೈಕು ಓಡಿಸುತ್ತಾ ಬಂದಿದ್ದೆ. ನಗುತ್ತಾ ನಟಿಸುತ್ತಿದ್ದ ಈ ನಟಿಯನ್ನು ಭಯಂಕರವಾಗಿ ಗಿಂಡಿ ಅಳುತ್ತಾ ನಟಿಸುವಂತೆ ಮಾಡಿದ ಆ ಭಗವಂತನ ಯೋಚನೆ ಯಾಗುತ್ತಿತ್ತು.
ಈಗ ಇರುಳಲ್ಲಿ ಕುಳಿತುಕೊಂಡು ಯಾವುದೋ ಭಾಷೆಯ ಸಂಗೀತ ಕೇಳುತ್ತಾ ಇದನ್ನೆಲ್ಲಾ ಬರೆಯುತ್ತಿರುವೆ.

Advertisements