ನಯೀಭ್ ಮೆಹಫೂಝನ ಆತ್ಮ ಕಥೆಯ ಕೆಲವು ಕಬಾಬ್ ತುಂಡುಗಳು

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ತೀರಿಕೊಂಡ ಈಜಿಪ್ಟ್ ಧೇಶದ ಅರಬಿ ಭಾಷೆಯ ಮಹಾನ್ ಬರಹಗಾರನ ಆತ್ಮ ಕಥೆಯ ಕೆಲವು ತುಂಡುಗಳು ನಿಮಗಾಗಿ

naguib_mahfouz_1.jpg

 

-1-
ಒಂದು ಪ್ರಾರ್ಥನೆ

ಕ್ರಾಂತಿಯಾಗಲೆಂದು ಪ್ರಾರ್ಥಿಸುತ್ತಿದ್ದಾಗ ನನಗಿನ್ನೂ ಏಳು ವರ್ಷವೂ ಆಗಿರಲಿಲ್ಲ.

ಆವತ್ತು ಬೆಳಗ್ಗೆ ಕೆಲಸದ ಹುಡುಗಿಯ ಕೈ ಹಿಡಕೊಂಡು ಶಾಲೆಗೆ ಕಾಲೆಳೆಯುತ್ತಾ ನಡೆಯುತ್ತಿದ್ದೆ. ಜೈಲಿಗೆ ಎಳೆದುಕೊಂಡು ಹೋಗುವ ಹಾಗೆ ಅನಿಸುತ್ತಿತ್ತು.ಕೈಯಲ್ಲೊಂದು ಕಾಪಿ ಪುಸ್ತಕ,ಕಣ್ಣುಗಳಲ್ಲಿ ಜಿಗುಪ್ಸೆ,ಎದೆಯೊಳಗೆ ಏನೋ ಅರಾಜಕತೆಯ ಆಸೆ. ತಣ್ಣನೆಯ ಕುಳಿರು ಚಡ್ಡಿಯ ಕೆಳಗೆ ಬತ್ತಲೆಕಾಲುಗಳನ್ನು ತಿವಿಯುತ್ತಿತ್ತು. ನೋಡಿದರೆ ಶಾಲೆಯ ಬಾಗಿಲು ಹಾಕಿತ್ತು. ಶಾಲೆಯ ಕಾವಲುಗಾರ ಗಟ್ಟಿ ದನಿಯಲ್ಲಿ ಹೇಳುತ್ತಿದ್ದ. “ಮುಷ್ಕರದಿಂದಾಗಿ ಈವತ್ತೂ ಶಾಲೆಯಿಲ್ಲ”
ಖುಷಿಯ ಅಲೆಯೊಂದು ನನ್ನೊಳಗೆ ಹರಿದು ಆನಂದ ತೀರದಲ್ಲಿ ತೇಲಾಡಿಸಿತು.
ಕ್ರಾಂತಿ ಚಿರಾಯುವಾಗಿರಲೆಂದು ಹೃದಯಾಂತರಾಳದಿಂದ ಪಡೆದವನಲ್ಲಿ ಪ್ರಾರ್ಥಿಸಿದೆ.

naguib3.jpg

-2-

ಒಂದು ಅಳಲು

ಸಾವೆಂಬುದು ಮೊದಲ ಸಲ ನಮ್ಮ ಮನೆಗೆ ನುಗ್ಗಿದ್ದು ನನ್ನ ಅಜ್ಜಿ ಉಮ್ಮಾಮ ತೀರಿಕೊಂಡಾಗ. ಸಾವು ಎಂಬುದು ಆಗ ನನಗೆ ತೀರಾಹೊಸದ್ದು.ದಾರಿಯಲ್ಲಿ ಹಾದು ಬರುವಾಗ ಕಂಡದ್ದು ಬಿಟ್ಟರೆ ಸಾವು ನನಗೆ ಗೊತ್ತೇಇರಲಿಲ್ಲ.ಅದು ಅನಿವಾರ್ಯ,ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಅಂತ ವಯಸ್ಸಾದವರು ಆಡಿಕೊಳ್ಳುವುದ ಕೇಳಿದ್ದು ಬಿಟ್ಟರೆ ನನ್ನ ಮನಸ್ಸಿಗೆ ಅದು ಭೂಮಿಆಕಾಶದಷ್ಟು ದೂರದಲ್ಲಿತ್ತು. ಆದರೆ ಮಂದಿಯ ಅಳು ನನ್ನ ಸಮಾಧಾನವನ್ನೆಲ್ಲ ಕಿತ್ತುಕೊಂಡಿತ್ತು ಅದು ಯಾರಿಗೂ ಗೊತ್ತಿಲ್ಲದೆ ನನ್ನ ಮನೆಯೊಳಗೆ ಬಂದು ಅಷ್ಟೊಂದು ಚಂದದ ಕತೆಗಳನ್ನು ಹೇಳುತ್ತಿದ್ದ ಉಮ್ಮಾಮನ ಕೋಣೆಯಳಗೇ ನುಗ್ಗಿಬಿಟ್ಟಿತು.
ನನಗೆ ನಾನು ತೀರಾ ಸಣ್ಣವನಂತೆ ಸಾವು ರಾಕ್ಷಸನಂತೆ ಅದರ ಉಸಿರು ಎಲ್ಲ ಕೋಣೆಗಳೊಳಗೆ ಹೋಗಿ ಬರುತ್ತಿರುವಂತೆ ಕಂಡಿತ್ತು.ಎಲ್ಲರೂ ಅದರ ಕುರಿತೇ ಮಾತಾಡುತ್ತಾ ಅದನ್ನೇ ನೆನಪಿಸಿಕೊಳ್ಳುತ್ತಾ ಕೂತಿದ್ದರು.
ಒಂದು ನಿಮಿಷ ತಪ್ಪಿಸಿಕೊಂಡು ಒಂದಿಷ್ಟು ಉಸಿರು ಎಳೆದುಕೊಳ್ಳಲು ನನ್ನ ಕೋಣೆಗೆ ಹೋಗಿ ಕುಳಿತಿದ್ದೆ. ಬಾಗಿಲು ತೆರೆಯುವ ಸದ್ದಾಗಿ ನೋಡಿದರೆ ಉದ್ದಗೆ ಜಡೆ ಹಾಕಿಕೊಂಡ ಸುಂದರಿ ಹುಡುಗಿಯೊಬ್ಬಳು ಬಂದು ಮೆಲ್ಲಗೆ “ಒಬ್ಬನೇ ಇರಬೇಡ” ಎಂದು ಉಸುರಿದಳು. ಏನೋ ಒಂದು ತರ ಆಕ್ರೋಶ ಬಂದಂತಾಯಿತು.ಏನೋ ಕ್ರೋದ ಏನೋ ಹುಚ್ಚು. ಅವಳ ಕೈಗಳನ್ನು ಬರಸೆಳೆದು ನನ್ನ ಎದೆಯ ಹತ್ತಿರ ತಂದೆ,ಒಳಗೆ ಹೊಗೆಯಾಡುತ್ತಿದ್ದ ಅಷ್ಟು ಸಂಕಟ ಭಯಗಳ ನಡುವೆ.

naguib4.jpg

 

-೩-

ಒಂದು ಹಳೆಯ ಸಾಲ

ಬಾಲ್ಯದಲ್ಲೊಮ್ಮೆ ತಿಂಗಳುಗಟ್ಟಲೆ ಕಾಯಿಲೆ ಬಿದ್ದೆ.ಸುತ್ತಲಿನ ಲೋಕವೇ ಬದಲಾಗಿಬಿಟ್ಟಿತು.ಮಂದಿ ನನ್ನನ್ನ ನೋಡುವ ರೀತಿ ಕೂಡಾ.ಗದರಿಸುತ್ತಿದ್ದವರೆಲ್ಲಆರೈಕೆಗೆ ತೊಡಗಿದ್ದರು.ಅಮ್ಮ ಹತ್ತಿರವೇ ಇರುತ್ತಿದ್ದಳು.ಅಪ್ಪ ಹೋಗಿ ಬರುವಾಗ ಬೊಂದು ನಿಂತು ನೋಡಿ ಹೋಗುತ್ತಿದ್ದರು.ಅಣ್ಣಂದಿರು ಅಕ್ಕಂದಿರು ಏನಾದರೂ ತಂದು ಕೊಡುತ್ತಿದ್ದರು.ಪರೀಕ್ಷೆಯಲ್ಲಿ ಗೋತಾ ಹೊಡೆದರೂ ಯಾರೂ ಏನೂ ಅನ್ನುತ್ತಿರಲಿಲ್ಲ.

ಕಾಯಿಲೆ ಹುಷಾರಾಗುತ್ತಾ ಬಂದಂತೆ ಮತ್ತೆ ನರಕಕ್ಕೆ ಹೋಗಬೇಕಲ್ಲಾ ಎಂದು ಹೆದರತೊಡಗಿದೆ.ಆ ಹೆದರಿಕೆಯಲ್ಲೇ ನನ್ನೊಳಗೆ ಇನ್ನೊಬ್ಬನನ್ನು ಹುಟ್ಟುಹಾಕಿದೆ,ಸದಾ ಮಮತೆ ಮತ್ತು ಗೌರವಗಳಿರುವಂತೆ ನೋಡಿಕೊಳ್ಳುವವನನ್ನು.ಸಂತೋಷಕ್ಕೆ ಅರ್ಜಿ ಹಾಕಿಕೊಳ್ಳಬೇಕೆಂದಿದ್ದರೆ ಯಾಕಾಗಬಾರದಂತೆ,ಎಷ್ಟು ಕಷ್ಟವಾದರೇನಂತೆ; ಒಂದರ ಹಿಂದೆ ಒಂದರಂತೆ ಗೆಲ್ಲುತ್ತಾಹೋದೆ.ಎಲ್ಲರೂ ಗೆಳೆಯರಾದರು,ಪ್ರೀತಿಸಿದರು.
ಒಂದು ಕಾಯಿಲೆ ಹೀಗೆ ಇಷ್ಟೊಂದು ಚಂದದ ಗೆಲುವುಗಳನ್ನು ಕರುಣಿಸುವುದು ಎಷ್ಟೊಂದು ಅಪರೂಪ.

naguib5.jpg

-3-

ಮರೆವು

ಯಾರು ಈ ಮುದುಕ ಇಷ್ಟು ಮುಂಜಾವಿನಲಿ ಮನೆಯಿಂದ ಹೊರಬಿದ್ದು ಇಷ್ಟು ದೂರ ನಡೆದು ಸಾಧ್ಯವಾದಷ್ಟೂ ವ್ಯಾಯಾಮ ಮಾಡುತ್ತಿರುವುದು?.

ಆವರು ನಮ್ಮ ಮುಲ್ಲಾ.ಅರಭಿಕ್ ಕಲಿಸುತ್ತಿದ್ದವರು.ಈಗ ನಿವೃತ್ತರಾಗಿ ಇಪ್ಪತ್ತು ವರ್ಷಗಳೇ ಕಳೆದಿವೆ
ಸುಸ್ತಾದಾಗ ನೆಲದಲ್ಲಿ ಕೂತುಕೊಳ್ಳುವರು,ಅಥವಾ ಕಂಪೌಂಡಿನ ಗೋಡೆಗೆ ಒರಗುವರು.ಊರುಗೋಲಿಗೆ ಒರಗಿಕೊಂಡು ಮುಖದ ಬೆವರನ್ನು ಮುಂಡಾಸಿನಿಂದ ಒರೆಸಿಕೊಳ್ಳುವರು.
ಊರವರಿಗೆಲ್ಲಾಅವರನ್ನು ಗೊತ್ತು ಮತ್ತು ಇಷ್ಟ.ಆದರೆ ಯಾರೂ ಸಲಾಂ ಹೇಳುವುದು ಕಡಿಮೆ,ಏಕೆಂದರೆ ಮುದುಕನಿಗೆ ನೆನಪಿನ ಶಕ್ತಿ ಕಡಿಮೆ ಬುದ್ಧಿಯೂ ಕಡಿಮೆ.ಹತ್ತಿರದವರನ್ನು ಸಂಬಂಧಿಕರನ್ನು,ಶಿಷ್ಯರನ್ನು ಮತ್ತು ವ್ಯಾಕರಣ ಎಲ್ಲವನ್ನೂ ಮರೆತು ಬಿಟ್ಟಿದ್ದಾರೆ.

naguib21.jpg

*******

Advertisements