ಬರ್ಕೆ ಹಲಸಿನ ಹಣ್ಣು ಮತ್ತು ಬರ್ಮುಡಾ ಚಡ್ಡಿ

thota.jpg

        ಬರ್ಕೆ ಹಲಸಿನ ಹಣ್ಣು ಬೀಳುತ್ತದೆ ಎಂದು ಅಂದುಕೊಂದು ನಾವು ಹಲಸಿನ ಮರದ ಕೆಳಗೆ ನಿಂತುಕೊಂಡಿದ್ದರೆ ಹಣ್ಣು ಕೊಯ್ಯಲು ಹತ್ತಿದ್ದ ಕುಂಞಮ್ಮದ್ ತಾನೇ ದೊಪ್ಪೆಂದು ಬಿದ್ದುಬಿಟ್ಟಿದ್ದ.ಆಸೆ ಕಣ್ಣು ಬಿಟ್ಟುಕೊಂಡು ಮಳೆಗಾಳಿಯ ನಡುವೆ ಸೊಳ್ಳೆ ಕಚ್ಚಿಸಿಕೊಂಡು ಪಿಚಿಪಿಚಿ ಕೆಸರಿನಲ್ಲಿ ಕಾಲು ಊರಲಾರದೆ ಒಂಟಿಕಾಲಿನಲ್ಲಿ ನಿಂತುಕೊಂಡಿದ್ದ ಪುಡಿಮಕ್ಕಳಾದ ನಾವು ಉಡದಂತೆ ಮರ ಏರಿದ್ದ ಕುಂಞಮ್ಮದ್ ಇನ್ನೇನು ಹಣ್ಣು ಬೀಳಿಸುತ್ತಾನೆ ಎಂದುಕೊಂಡಿದ್ದರೆ ಆತನೇ ಹಲಸಿನ ಹಣ್ಣಂತೆ ಉರುಳಿ ಕೆಸರಲ್ಲಿ ಮುಖ ಮುಚ್ಚಿ ಬಿದ್ದು ತೀರಿಕೊಂಡವನಂತೆ ನಿಶ್ಚಲನಾಗಿದ್ದ. ಆಮೇಲೆ ನಿದಾನಕ್ಕೆ ಎದ್ದು ಕುಂಟುತ್ತಾ ನಡೆದು ಏನೋ ಆಣತಿ ಸಿಕ್ಕಿದವನಂತೆ ಮುಖಮಾಡಿಕೊಂಡು ನಮ್ಮೆಲ್ಲರನ್ನು ಮರದಡಿಯಲ್ಲೇ ಮಳೆಯಲ್ಲಿಯೇ ಬಿಟ್ಟು ಬರೆ ಹತ್ತಿ ಹೋದವನು ಮತ್ತೆ ಕಾಣಿಸಿಕೊಳ್ಳಲೇ ಇಲ್ಲ.ಆತ ಬೊಂಬಾಯಿಗೆ ಓಡಿಹೋಗಿಬಿಟ್ಟಿದ್ದ.
ಆತ ಮತ್ತೆ ಕಾಣಿಸಿಕೊಂಡಿದ್ದು ಎಷ್ಟೋ ವರ್ಷಗಳ ನಂತರ ಮದುಮಗನಾಗಿ.

ಆತನ ಮದುವೆಯ ನಿಶ್ಚಿತಾರ್ಥಕ್ಕೂ, ಅಲ್ಲೋಲ ಕಲ್ಲೋಲವಾದ ಆತನ ಮದುವೆ ಸಮಾರಂಭಕ್ಕೂ ನಾನು ಸಾಕ್ಷಿಯಾಗಿದ್ದೆ.ಮದುವೆಯ ಅಲ್ಲೋಲ ಕಲ್ಲೋಲ ಕಳೆದು ಮತ್ತೆ ಓಡಿಹೋದವನನ್ನು ಮತ್ತೆ ನೋಡಿದ್ದು ಹತ್ತಾರು ವರ್ಷಗಳ ಬಳಿಕ ನಾನು ಬೊಂಬಾಯಿಯಲ್ಲಿ ಬೇರೆ ಏನೂ ಕೆಲಸವಿಲ್ಲದೆ ಬರ್ಮುಡಾ ಚಡ್ಡಿ ಹುಡುಕಿಕೊಂಡು ತಿರುಗುತ್ತಿದ್ದಾಗ ಅಚಾನಕ್ಕಾಗಿ ಆತ ಮುಂಬಯಿಯ ಮಹಮ್ಮದಾಲಿ ರಸ್ತೆಯಲ್ಲಿ ಮಲಯಾಳಿ ರೆಸ್ಟೋರೆಂಟರೊಂದರಲ್ಲಿ ಸಿಕ್ಕಿದ್ದ.ಸಿಕ್ಕಿದವನು ಅಷ್ಟುದೂರದಿಂದಲೇ ನನ್ನ ಗುರುತು ಹಿಡಿದು ತಾನೇ ಆ ಹೋಟಲ್ಲಿನ ಮಾಲಕ ಎಂಬಂತೆ ನನಗೆ ಬಿರಿಯಾನಿ ತಿನ್ನಿಸಿದ್ದ.ಬರುವಾಗ ಬಸ್ಸಿಗೆ ದುಡ್ಡಿದೆಯೇ ಎಂದು ಕೇಳಿದ್ದ.ನಿನ್ನ ಅಪ್ಪ ಅಮ್ಮ ತಮ್ಮ ತಂಗಿಯರಿಗೆ ಸಲಾಂ ಹೇಳು ಅಂದಿದ್ದ. ನಾನು ಕಾಫಿ ತೋಟದ ನನ್ನ ಬಾಲ್ಯಕಾಲದ ಹೀರೋ ಈಗ ಬೊಂಬಾಯಿಯಲ್ಲೂ ಹೀರೋನಂತೆ ಮೆರೆಯುತ್ತಿರುವುದನ್ನು ಕಣ್ಣ ತುಂಬ ತುಂಬಿ ಕೊಂಡು ಆತನಿಂದ ಬೀಳುಕೊಂಡಿದ್ದೆ. ಆತ ಲೋಟ ತೊಳೆಯಲು ಪುನಃ ಹೋಟಲಿನ ಒಳ ಸೇರಿದ್ದ.
ಈ ಕುಂಞಮ್ಮದ್ ಎಂತ ಮಳೆಗಾಲದಲ್ಲೂ ಎಂತಹ ಜಾರುವ ಮರವನ್ನಾದರೂ ಉಡದಂತೆ ಹತ್ತುತ್ತಾನೆ ಎಂದು ಇಡೀ ಕಾಫಿತೋಟದಲ್ಲಿ ಹೆಸರು ಪಡೆದಿದ್ದ.ಆತ ಹತ್ತದ ಮರವಿಲ್ಲ ಆತ ಕಾಣದ ಹಣ್ಣಿಲ್ಲ ಎಂದು ಎಲ್ಲರೂ ಅನ್ನುತ್ತಿದ್ದರು.ಬಕರ್ೆಹಲಸಿನ ಹಣ್ಣು, ತುಳುವ ಹಲಸಿನ ಹಣ್ಣು, ದೀಗುಜ್ಜೆ,ಪತ್ರೊಡೆಯ ಎಲೆ ನೇರಳೆಹಣ್ಣಿನ ಗೊಂಚಲು ಏನು ಬೇಕಾದರೂ ನಮ್ಮ ಕಾಫಿತೋಟದ ಸಾಹುಕಾರರು ಕುಂಞಮ್ಮದನ್ನು ಕರೆಯುತ್ತಿದ್ದರು. ಸಾಹುಕಾರರು ನೋಡದೇ ಉಳಿದ ಹಣ್ಣೇನಾದರೂ ಕೂಲಿ ಆಳುಗಳ ಕಣ್ಣಿಗೇನಾದರೂ ಅಕಸ್ಮಾತ್ ಬಿದ್ದುಬಿಟ್ಟರೆ ಅವರೂ ಕುಂಞಮ್ಮದನ್ನು ಗುಟ್ಟಾಗಿ ಕರೆದು ಕೊಯ್ಯಿಸುತ್ತಿದ್ದರು,ಅದೇನಾದರೂ ಸಾಹುಕಾರರಿಗೆ ಗೊತ್ತಾದರೆ ಕೂಲಿ ಆಳುಗಳ ಜೊತೆ ಕುಂಞಮ್ಮದನಿಗೂ ಸಂಬಳ ಕಟ್ಟಾಗುತಿತ್ತು.ಕಟ್ಟಾಗಲು ಆತನಿಗೆ ಸಂಬಳ ತುಂಬಾ ಏನೂ ಇರಲಿಲ್ಲ.ಅವನಿಗೆ ಸಿಗುತ್ತಿದ್ದುದು ದನ ಮೇಯಿಸುವವರ ಸಂಬಳ.ಆ ಸಂಬಳದಲ್ಲಿ ಆತ ಪ್ರತಿವಾರ ಸುಂಟಿಕೊಪ್ಪ ಸಂತೆಯ ದಿನ ಹೋಟೆಲ್ ಬ್ಲೂಸ್ಟಾರ್ನಲ್ಲಿ ಪರಾಟ ಚಾಪ್ಸ್ ತಿನ್ನುತ್ತಿದ್ದ. ತಿಂಗಳಿಗೊಮ್ಮೆ ನನಗೂ ಕೊಡಿಸುತ್ತಿದ್ದ.
ಆಮೇಲೆ ಗಣೇಶ ಥಿಯೇಟರಿನಲ್ಲಿ ಸಿನೆಮಾ ನೋಡುತ್ತಿದ್ದ.ನೋಡಿ ಬಂದವನು ದನಗಳನ್ನು ಮೇಯಿಸಲು ಬಿಟ್ಟು ನನಗೆ ಸಿನೆಮಾ ಕಥೆ ಹೇಳುತ್ತಿದ್ದ.ಹುಲ್ಲುಗಾವಲಿನಲ್ಲಿ ಬೀಸುವ ತಂಗಾಳಿಯಲ್ಲಿ ದನಕರುಗಳ ಗೊರಸಿನ ಸದ್ದಿನ ನಡುವೆ ಆತ ಎಂ ಜಿ ಆರ್ ರಾಜಕುಮಾರ್ ವಿಷ್ಣುವರ್ದನ್ ದ್ವಾರಕೀಶ್ ಜಯಲಲಿತಾ ಇವರ ಸಿನೆಮಾಗಳ ಕಥೆ ಹೇಳುತ್ತಿದ್ದರೆ ನಾನು ನನ್ನ ತಲೆಯನ್ನೇ ಸಿನೆಮಾ ಪರದೆಯನ್ನಾಗಿ ಮಾಡಿಕೊಂಡು ಎಲ್ಲವನ್ನು ಒಳಗೆ ತುಂಬಿಸಿ ಕೊಳ್ಳುತ್ತಿದ್ದೆ. ಕುಂಞಮ್ಮದ್ ಯಾವತ್ತೂ ಸಿನೆಮಾಗಳ ಪಾತ್ರಗಳ ಹೆಸರು ಹೇಳುತ್ತಿರಲಿಲ್ಲ.ಆತನಿಗೆ ನಟರ ಹೆಸರೇ ಪಾತ್ರಗಳ ಹೆಸರೂ ಆಗಿತ್ತು.
ನಮ್ಮ ಸಾಹುಕಾರರು ನಮ್ಮ ಬಿಡಾರದ ಮುಂದಿದ್ದ ಬಕರ್ೆ ಹಲಸಿನ ಮರದಿಂದ ಹಣ್ಣುಗಳನ್ನು ಕೊಯ್ಯುವ ಅನುಮತಿಯನ್ನು ನಮಗೆ ಕೊಟ್ಟಿದ್ದರು. ಏಕೆಂದರೆ ನಮ್ಮ ತಂದೆ ಆ ತೋಟದಲ್ಲಿ ರೈಟರಾಗಿದ್ದರು.ರೈಟರು ಅಂದರೆ ಕಾಫಿ ತೋಟದಲ್ಲಿ ಲೆಕ್ಕಪತ್ರ ಬರೆಯುತ್ತ ಮೇಲ್ವಚಾರಣೆ ನೋಡಿಕೊಳ್ಳುವವರು ಎಂದರ್ಥ.ನಾವೆಲ್ಲ ನಮಗೆ ಅನುಮತಿಸಲ್ಪಟ್ಟ ಹಲಸಿನ ಮರದಲ್ಲಿ ಕಾಯಿ ಹಣ್ಣಾಗುವುದನ್ನೇ ಕಾಯುತ್ತಾ ಮಳೆಗಾಲ ಹಿಡಿದರೂ ಆ ಮರದಲ್ಲಿ ಹಣ್ಣಾಗುತ್ತಿಲ್ಲವಲ್ಲಾ ಎಂದು ಕೊರಗುತ್ತಾ ಇದ್ದೆವು.ಅಷ್ಟು ಹೊತ್ತಿಗೆ ಮಳೆಗಾಲ ಶನಿಯಂತೆ ಹಿಡಿದು ಬಿಟ್ಟಿತ್ತು.ಆ ಮರದಲ್ಲಿ ಹಣ್ಣಾಗದೆ ಕಾಯಿಗಳು ಕೊಳೆಯಲು ಶುರುವಾಗಿ ನಮಗೆಲ್ಲ ಅಳು ಬರಲು ತೊಡಗಿತ್ತು.ಮಳೆಗಾಲ ಮುಗಿಯದೆ ಎಲ್ಲ ಕಾಯಿಗಳೂ ಕೊಳೆತು ಕೊನೆಗೆ ಆ ಮರದ ತುದಿಯಲ್ಲಿ ಒಂದೇ ಒಂದು ಕಾಯಿ ಹಠಹಿಡಿದು ಬೆಳೆದು ಹಣ್ಣಾಗಲು ತೊಡಗಿ ನಾವು ಕೊನೆಗೆ ಈ ಶನಿ ಮಳೆಯಲ್ಲಿ ಆ ಜಾರುವ ಬಕರ್ೆ ಮರ ಹತ್ತಿ ಕೊಯ್ಯಲು ಇನ್ನು ಯಾರನ್ನು ಕರೆಯುವುದು ಎಂದು ತಲೆಯ ಮೇಲೆ ಕೈ ಹೊತ್ತು ಕಾಯುತ್ತಿದ್ದೆವು.
ಯಾಕೆಂದರೆ ನಮ್ಮ ಸಾಹುಕಾರರು ಕುಂಞಮ್ಮದನ್ನು ತೋಟದಿಂದ ಹೊರಗೆ ಹಾಕಿದ್ದರು.ಯಾಕೆಂದರೆ ಆತ ಹಸು ಕರುವಿನ ಚಿತ್ರ ಬಿಡಿಸುತ್ತಾ ಇಂದಿರಾ ಗಾಂಧಿಯ ಪಕ್ಷದಲ್ಲಿಯೇ ಉಳಿದು ಬಿಟ್ಟಿದ್ದ.ಸಾಹುಕಾರರು ಮತ್ತು ನಾವೆಲ್ಲಾ ದೇವರಾಜ ಅರಸರ ಪಕ್ಷ ಸೇರಿದ್ದೆವು.ನಮಗೆಲ್ಲ ತಂದೆಯಂತೆ ಇದ್ದ ಸಾಹುಕಾರರಿಗೆ ಆತ ಕೈಕೊಟ್ಟದ್ದರಿಂದ ಆತನನ್ನು ತೋಟದಿಂದ ಓಡಿಸಿಬಿಟ್ಟಿದ್ದೆವು.ಆತ ಯಾರಿಗೂ ಕ್ಯಾರೇ ಮಾಡದೆ ಪೇಟೆಯಲ್ಲಿ ಹಸು ಕರು ಗುರುತಿಗೆ ಜೈ ಹೇಳುತ್ತಾ ತಿರುಗಾಡುತ್ತಾ ನಮಗೆ ಅನುಮತಿಸಲ್ಪಟ್ಟ ಹಲಸಿನ ಮರದಲ್ಲಿ ಕೊಳೆಯಲು ಶುರುವಾಗಿದ್ದ ಆ ಏಕೈಕ ಹಣ್ಣನ್ನ ಕೊಯ್ಯುವವರಿಲ್ಲದೆ ನಾವೆಲ್ಲ ತಲೆ ಮೇಲೆ ಕೈ ಹೊತ್ತು ಕೂತಿದ್ದೆವು.
ನಾನೇ ಆ ಮಳೆಯಲ್ಲಿ ನೆನೆದು ಪೇಟೆಗೆ ಹೋಗಿ ಏನೆಲ್ಲಾ ಹೇಳಿ ಪುಸಲಾಯಿಸಿ ಕುಂಞಮ್ಮದನ್ನು ಹೇಗೋ ಮಾಡಿ ಕರೆತಂದು ಹಲಸಿನ ಮರ ಹತ್ತಿಸಿ ನಾವೆಲ್ಲಾ ಮರದ ಕೆಳಗೆ ಮಳೆಯಲ್ಲಿ ನಿಂತುಕೊಂಡು ಕಾಯುತ್ತಿದ್ದರೆ ಹಣ್ಣಿನ ಬದಲು ಆತನೇ ಮರದಿಂದ ದೊಪ್ಪನೆ ಬಿದ್ದುಬಿಟ್ಟಿದ್ದ.ನಮಗೆ ಆತ ಸತ್ತೇ ಹೋದನೆಂದು ಹೆದರಿಕೆಯಾಗಿತ್ತು. ನೋಡಿದರೆ ಆತ ಕೆಸರಿಂದ ಏನೂ ಆಗದವನಂತೆ ಎದ್ದು ಏನೋ ದುದರ್ಾನ ತೆಗೆದುಕೊಂಡವನಂತೆ ನಮಗೆ ಬೆನ್ನು ತಿರುಗಿಸಿ ಬರೆ ಹತ್ತಿ ಮರೆಯಾಗಿದ್ದ. ಕುಂಞಮ್ಮದ್ ತೋಟಕ್ಕೆ ಅನುಮತಿಯಿಲ್ಲದೆ ಬಂದು ಅನುಮತಿಯಿಲ್ಲದೆ ಹಲಸಿನ ಮರ ಹತ್ತಿರುವುದು ಗೊತ್ತಾದರೆ ಸಾಹುಕಾರರು ಏನು ಮಾಡುತ್ತಾರೋ ಎಂದು ಹೆದರಿ ಈ ವಿಷಯ ವನ್ನು ಇದುವರೆಗೆ ನಾನು ಯಾರಿಗೂ ಹೇಳಿರಲಿಲ್ಲ.
ಆವತ್ತು ಊರು ಬಿಟ್ಟು ಹೋದ ಕುಂಞಮ್ಮದ್ ಆಮೇಲೆ ಕಾಣಿಸಿಕೊಂಡದ್ದು ಮದುಮಗನಾಗಿ.ಆದರೆ ಆ ಮದುವೆಯೂ ಕೋಲಾಹಲದಲ್ಲಿ ಕೊನೆಯಾಯಿತು.ಆ ಕೋಲಾಹಲದ ಮದುವೆಯ ವಿಷಯ ಬರೆದರೆ ಅದೇ ದೊಡ್ಡ ಕಾದಂಬರಿ.ಬಿಡುವಿರುವಾಗ ಯಾರಾದರೂ ಕೇಳಿದರೆ ಹೇಳಬಹುದು.
ಆಮೇಲೆ ಕುಂಞಮ್ಮದ್ ಕಾಣಿಸಿಕೊಂಡದ್ದು ಬೊಂಬಾಯಿಯ ಮಹಮ್ಮದಾಲಿ ರಸ್ತೆಯ ಮಲಯಾಳೀ ರೆಸ್ಟೋರೆಂಟಿನಲ್ಲಿ.
ನಮಗೆಲ್ಲರಿಗೂ ಅಣ್ಣನಂತಿರುವ ಕಥೆಗಾರ ಜಯಂತ ಕಾಯ್ಕಿಣಿ ಆಗ ನನಗೆ ಬೊಂಬಾಯಿಯಲ್ಲಿ ಆಶ್ರಯ ಕೊಟ್ಟಿದ್ದರು.ನಾನು ಯಾಕೆ ಬರೆಯುವುದನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಆಗಾಗ ಬೇಜಾರು ಮಾಡಿಕೊಳ್ಳುತ್ತಿದ್ದರು.
ಗಂಭೀರವಾಗಿ ಬರೆಯಬೇಕಾದರೆ ದೊಡ್ಡದಾಗಿರುವ ಬರ್ಮುಡಾ ಚಡ್ಡಿಹಾಕಿಕೊಂಡು ಕೂರಬೇಕು.ಅದು ನನ್ನ ಬಳಿ ಇಲ್ಲ ಅಂದಿದ್ದೆ. ಆಮೇಲೆ ಬೇರೆ ಏನೂ ಕೆಲಸವಿಲ್ಲದೆ ಬರ್ಮುಡಾ ಚಡ್ಡಿ ಹುಡುಕಿಕೊಂಡು ಬೊಂಬಾಯಿಯಲ್ಲಿ ಅಲೆಯುತ್ತಿದ್ದೆ. ಹಾಗೆ ಅಲೆಯುತ್ತಿರುವಾಗಲೇ ಕುಂಞಮ್ಮದ್ ನನಗೆ ಬೊಂಬಾಯಿಯ ಮಹಮ್ಮದಾಲಿ ರಸ್ತೆಯ ಮಲಯಾಳೀ ರೆಸ್ಟೋರೆಂಟಿನಲ್ಲಿ ಅಚಾನಕ್ಕಾಗಿ ಸಿಕ್ಕಿದ್ದು.
ಯಾಕೋ ಇದೆಲ್ಲಾ ಮರೆತೇ ಹೋಗಿತ್ತು.ನಿನ್ನೆ ಹೀಗೆ ಸುಮ್ಮನೆ ಏನೋ ಓದುತ್ತಿದ್ದಾಗ ನೆನಪಾಯಿತು.

Advertisements