‘ಬೀಜ’-ಒಂದು ಹಳೆಯ ಸಣ್ಣ ಕಥೆ

ಬೀಜ

ಬಂಗಲೆಯೋ ಗೂಡಂಗಡಿಯೋ  ಎಂದು ಗೊತ್ತಾಗದಂತೆ ಮಂದಣ್ಣ ತನ್ನ ತೋಟದ ಮನೆಯನ್ನು ಅರ್ಧಕ್ಕೆ ಕಟ್ಟಿನಿಲ್ಲಿಸಿ ಈಗ ಅದರಲ್ಲೇ ವ್ಯಾಪಾರ ಶುರು ಮಾಡಿದ್ದ.ಕಾಫಿ ಬೆಲೆ ಹೀಗೇ ಆದರೆ ಇನ್ನು ಮುಂದೆ ಮಾಪಿಳ್ಳೆಯಂತೆ ಸೈಕಲ್ಲಿನ ಹಿಂದೆ ಮೀನು ಬುಟ್ಟಿ ಇಟ್ಟುಕೊಂಡು ಆ ವ್ಯಾಪಾರಕ್ಕೂ ಹೊರಡಬೇಕಾಗುತ್ತದೆ ಎಂದು ತನ್ನ ಉದ್ದ ಕಾಗದದ ಕೊನೆಯಲ್ಲಿ ಶರಾ ಬರೆದಿದ್ದ.ಜಾಗತೀಕರಣಕ್ಕೂ ಮುಕ್ತ ಮಾರುಕಟ್ಟೆಗೂ  ಕೊಡಗಿನಲ್ಲಿ ಕಾಫಿ ಬೆಲೆ ಕುಸಿದು ಬೆಳೆಗಾರ ಕಂಗಾಲಾಗಿರುವುದಕ್ಕೂ ಹತ್ತಿರದ ಕೇರಳದಿಂದ ಮಲಯಾಳಿಗಳು ಕೊಡಗಿನ ಭತ್ತದ ಗದ್ದೆಗೆ ನುಗ್ಗಿ ಶುಂಠಿ ಬೆಳೆದು ಕೊಬ್ಬಿಹೋಗಿರುವುದಕ್ಕೂ ಹೇಗೆ ನಿಕಟ ಸಂಬಂಧ ಇದೆ ಎನ್ನುವುದನ್ನು ಮಾರ್ಕ್ಸ್‌ವಾದದ ಹಿನ್ನೆಲೆಯಿಟ್ಟುಕೊಂಡು ಸವಿವರವಾಗಿ ಬರೆದಿದ್ದ.

ಅವನ ನಾಲ್ಕೈದು ಪುಟಗಳ ಪತ್ರದ ಒಂದು ಮೂಲೆಯಲ್ಲಿ ಒಂದಿಷ್ಟು ಜಾಗಮಾಡಿಕೊಂಡು ಅವನ ಸಂಗಾತಿಯೂ ಧರ್ಮಪತ್ನಿಯೂ ಆದ ದಾಕ್ಷಾಯಿಣಿ ನನಗೆ ಕೆಂಪು ಸಲಾಂ ತಿಳಿಸಿದ್ದಳು.ಜೊತೆಗೆ ಸಾಧ್ಯವಾಷ್ಟು ಬೇಗ ನಾನು ಅವರಿಬ್ಬರನ್ನು ಬಂದು ಕಾಣಬೇಕೆಂದೂ ಕೊಡಗಿನ ಈ ಕಾಡಿನೊಳಗಡೆ ತನಗೆ ದಿಕ್ಕು ತೋಚದಾಗಿದೆಯೆಂದೂ ಕೊಡಗಿನ ಕಾಡುಕುರುಬರನ್ನೂ, ಜೇನುಕುರುಬರನ್ನೂ, ಯರವರನ್ನೂ ಸಂಘಟಿಸಬೇಕೆಂದು ಹೊರಟಿದ್ದ ತಾವಿಬ್ಬರು ಈಗ ಅನಿವಾರ್ಯವಾಗಿ ಮಲಯಾಳಿಗಳ ಜೊತೆಗೂ ಮಾಪಿಳ್ಳೆಗಳ ಜೊತೆಗೂ ಕಾದಾಟ ಮಾಡಬೇಕಾಗಿದೆಯೆಂದೂ ಜೊತೆಗೆ ಇತ್ತೀಚೆಗೆ ಸಾವಯವ ಅಜ್ಜ ಎಂಬ ಸಹಜ ಕೃಷಿ ಮಾಡುವ ಮುದುಕನೊಬ್ಬ ಘಟ್ಟದ ಕೆಳಗಿನಿಂದ ಬಂದು ತಮ್ಮೊಡನೆ ಸೇರಿಕೊಂಡಿರುವುದಾಗಿಯೂ ವೈಜ್ನಾನಿಕವಾಗಿ ಆಲೋಚಿಸುವ ತನಗೆ ಈ ಸಾವಯವ ಅಜ್ಜನ ವರ್ತನೆ ವಿZತ್ರವಾಗಿ ತೋರುತ್ತಿರುವುದಾಗಿಯೂ ಈ ಅeನ ಜೊತೆ ಸೇರಿಕೊಂಡು ಮಂದuನೂ ವಿಚಿತ್ರವಾಗಿ ಆಡಲು ತೊಡಗಿರುವನೆಂದೂ ನಾನು ಒಮ್ಮೆಹೋಗಿ ಅವರನ್ನೆಲ್ಲ ನೋಡಬೇಕೆಂತಲೂ ಬರೆದಿದ್ದಳು

ಈಗ ನಾನು ಬಂದು ನೋಡಿದರೆ ಗೇಟಿಗೆ ಎಂದು ಕಟ್ಟಿದ್ದ ರಾಕ್ಷಸ ಗಾತ್ರದ  ಸಿಮೆಂಟ್ ಕಂಬಗಳ ನಡುವೆ ಗೇಟೇ ಇಲ್ಲದೆ ನಾಲ್ಕೈದು ಬಿದಿರು ಗಳಗಳನ್ನು ಉದ್ದಕ್ಕೆ ಎಳೆದು ಗೇಟಿನಂತೆ ಮಾಡಿಕೊಂಡು, ಗೇಟಿನ ಪಕ್ಕದಲ್ಲಿ ಮುಳ್ಳು ತಂತಿಗಳನ್ನು ಕಿತ್ತು ಗೂಡಂಗಡಿಗೆ ಬಂದು ಹೋಗುವವರಿಗೆ ದಾರಿ ಮಾಡಿಕೊಟ್ಟು,ಮನೆಯ ದೊಡ್ಡ ಬಾಗಿಲುಗಳಿಗೆ ದಾಕ್ಷಾಯಿಣಿಯ ಹಳೆಯ ಸೀರೆಯೊಂದನ್ನು ಪರದೆಯಂತೆ ಕಟ್ಟಿ, ಮನೆಯ ಎದುರಿನ ಆಪೀಸು ಕೋಣೆಯನ್ನು ಗೂಡಂಗಡಿಯಂತೆ ಮಾಡಿಕೊಂಡು ಮಂದಣ್ಣ ಮಲಯಾಳಿ ಪಂಚೆಯೊಂದನ್ನು ಮೊಣಕಾಲವರೆಗೆ ಎತ್ತಿಕಟ್ಟಿಕೊಂಡು ತನ್ನ  ಎಂದಿನ ಪರಿಹಾಸ್ಯದ ನಗುವನ್ನು ಮುಖದ ತುಂಬ ಸೂಸಿಕೊಂಡು ಇನ್ನೇನು ಶಿಕ್ಷೆಗೊಳಗಾಗಬೇಕಾದ ಬಾಲಕನ ಹಾಗೆ ದಾಕ್ಷಾಯಿಣಿಯ ಮುಖವನ್ನೊಮ್ಮೆ ನೋಡಿ ನನ್ನ ಸ್ವಾಗತಿಸಲು ಬಂದ.

 ನಗುಬಂತು .ಇವನನ್ನೊಮ್ಮೆ ತಬ್ಬಿಕೊಳ್ಳಬೇಕು ಅನಿಸಿತು. ಮತ್ತೆ ಸಿಕ್ಕಾಪಟ್ಟೆ ಸಿಟ್ಟುಕೂಡಾ ಬಂತು. ಬಡ್ಡಿಮಗ ಸಖತ್ತಾಗಿ ಹೋತದಂತೆ ಬೆಳೆದಿದ್ದ. ದಾಕ್ಷಾಯಿಣಿಯೂ ಕುಳ್ಳಗೆ ವಡೆಯಂತೆ ಊದಿಕೊಂಡಿದ್ದಳು.

ಮೈಸೂರಿನ ಶ್ರೀಮಂತ ಕಾಮ್ರೇಡ್ ಒಬ್ಬರ ತೋಟದ ಮನೆಯಲ್ಲಿ ಭೂಕ್ರಾಂತಿಯ ಕುರಿತ ರಾಜಕೀಯ ಶಿಬಿರದಲ್ಲಿ ಎರಡು ಜಡೆ ಹಾಕಿಕೊಂಡು ಕಸಬರಿಕೆ ಕಡ್ಡಿಯಂತೆ ಓಡಾಡಿಕೊಂಡಿದ್ದ ದಾಕ್ಷಾಯಿಣಿಯನ್ನು ಮಂದಣ್ಣ ಮತ್ತು ನಾನು ದ್ರಾಕ್ಷಿ ಎಂತಲೇ ಕರೆಯುತ್ತಿದ್ದೆವು. ತರಗತಿಯೆಲ್ಲ ಮುಗಿದು ಕತ್ತಲಾಗಿ ಊಟಮುಗಿಸಿ ಬೀಡಿಸೇದಿಕೊಂಡು ಹಳ್ಳಿಯವರ ಹಾಗೆ ಬಯಲಲ್ಲಿ ಕುಳಿತು ಪಾಯಿಖಾನೆಯ ಸುಖವನ್ನು ಅನುಭವಿಸುತ್ತ ಆದಿನದ ರಾಜಕೀಯ ಪಾಟವನ್ನು ಮನನ ಮಾಡಿಕೊಳ್ಳುತ್ತಲೇ ದಾಕ್ಷಾಯಣಿಯನ್ನ್ನೂ ನೆನಸಿಕೊಳ್ಳುತಿದ್ದೆವು.
 
ಕೊಡಗಿನವರಾದ ನನಗೆ ಮತ್ತು ಮಂದಣ್ಣನಿಗೆ ರಾಜಕೀಯ ಪಾಟವೂ ಹೊಸತು, ಬಯಲಲ್ಲಿ ಪಾಯೀಖಾನೆಯೂ ಹೊಸತು, ಜೊತೆಯಲ್ಲಿ ಅಕ್ಕ  ತಂಗಿ ನೆಂಟರ ಹುಡುಗಿಯರು ಬಿಟ್ಟರೆ ಈರೀತಿ ಹತ್ತಿರ ಹತ್ತಿರ ಸುಳಿದಾಡುತ್ತಿದ್ದ ದಾಕ್ಷಾಯಿಣಿಯ ರೀತಿಯೂ ಹೊಸತು.

ರಾತ್ರಿ ನಿದ್ದೆ ಹೋಗುವ ಮೊದಲು ಮಂಡಣ್ಣ ಕೊಡಗಿನ ವಿಶೇಷ ಶೈಲಿಯಲ್ಲಿ ದಾಕ್ಷಾಯಿಣಿಯನ್ನು ತನಗೇ ಹಂಚಿಕೊಂಡಿದ್ದ.

ಆತ ಬೇಟೆಗಾರ ಮೂಲನಿವಾಸಿಯಂತೆ. ನಾನು ವ್ಯಾಪಾರಕ್ಕೆ ಕೊಡಗಿಗೆ ಆಗಮಿಸಿದ ಮಾಪಿಳ್ಳೆ ಜನಾಂಗದ ಕುಡಿಯಂತೆ. ಈಗ ಬೇಟೆಯನ್ನು ಹಂಚಿಕೊಳ್ಳಬೇಕಾಗಿದೆಯಂತೆ.

“ಹಂದಿ ಮಾಪಿಳ್ಳೆ ತಿನ್ನೋದಿಲ್ಲ, ಕಡವೆಯನ್ನು ನಾನು ಕೊಡುವುದಿಲ್ಲ. ಉಡ ಮದ್ದಿಗೆ ಬೇಕು. ಮೊಲ ಮೂರು ಪಾಲಾಗಬೇಕು. ಒಂದು ಪಾಲು ನಾಯಿಗೆ, ಒಂದು ಪಾಲು ನನಗೆ, ಉಳಿದ ಒಂದು ಪಾಲು ಮಾಪಿಳ್ಳೆಗೆ” ಎಂದು ನಕ್ಕಿದ್ದ. ಕೊನೆಗೆ ದಾಕ್ಷಾಯಿಣಿ ತನಗೇ ಎಂದು ತೀರ್ಮಾನಿಸಿ ನಿದ್ದೆ ಹೋಗಿದ್ದ.

ಈಗ ನೋಡಿದರೆ ಹುಟ್ಟುವಾಗಲೇ ಜೊತೆಗಿದ್ದವರಂತೆ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು, ಕೊಂಚ ಸಂಕೋಚವನ್ನೂ ತೋರಿಸಿಕೊಂಡು, ಮೈಗೆ ಮೈ ಅಂಟಿಸಿಕೊಂಡು ಕುಳಿತಲ್ಲಿಂದ ಎದ್ದು ನನ್ನ ಕಡೆ ಬರುತಿದ್ದರು.

 ದಾಕ್ಷಾಯಣಿ ತನಗೇ ಎಂದು ತೀರ್ಮಾನಿಸಿ ನಿದ್ದೆ ಹೋಗಿದ್ದ ಮಂದಣ್ಣ ಮಾರನೆಯ ದಿನ ಮುಂಜಾನೆಯೇ ಎಲ್ಲರ ಎದುರಿಗೇ ಅವಳಿಂದ ಒದೆಸಿಕೊಂಡು ನಗೆಪಾಟಲಾಗಿ ಬಿಟ್ಟಿದ್ದ. ಬೆಳಗೆ ಟವಲ್ಲು ಎತ್ತಿಕೊಂಡು ಕೆರೆಯ ಕಡೆಗೆ ಹೊರಟಿದ್ದವಳನ್ನು ಇವನು ಏನೋ ಮಾಡಲು ಹೋಗಿ ಅವಳು ಕಡ್ಡಿಯ ಹಾಗಿದ್ದರೂ ಇವನನ್ನು ನೆಲಕ್ಕೆ ಬೀಳಿಸಿ ಒದ್ದಿದ್ದಳು.

ಆನಂತರ ಆ ದಿನವಿಡೀ ರಾಜಕೀಯ ತರಗತಿ ರದ್ದಾಗಿ ನಾವೆಲ್ಲರೂ ಮಂದಣ್ಣ ನಿಂದಾಗಿ ವಿಮರ್ಶೆ ಮತ್ತು ಸ್ವವಿಮರ್ಶೆ ಮಾಡಬೇಕಾಗಿ ಬಂದಿತ್ತು. ಊಳಿಗಮಾನ್ಯ ವ್ಯವಸ್ಥೆಯಿಂದ ಬಂದಿರುವ ನಮ್ಮಂತಹ ಹುಡುಗರು ಹುಡುಗಿಯರನ್ನು ಕಾಮುಕರಂತೆ ನೋಡುವುದು ಸಹಜವೆಂದೂ ಸರಿಯಾದ ರಾಜಕೀಯ ಶಿಕ್ಷಣ ದೊರೆತರೆ ನಮಗೆಲ್ಲರಿಗೂ ಕ್ರಾಂತಿಯಲ್ಲಿ ಹೆಣ್ಣಿನ ಪಾತ್ರವೇನು ಎಂಬುದು ಅರಿವಾಗುವುದೆಂದೂ, ಕೊಲಂಬಿಯ, ಫಿಲಿಪ್ಪೈನ್ಸ್ ಮುಂತಾದಕಡೆ ಹೇಗೆ ಕ್ರಾಂತಿಕಾರಿಗಳಾದ ಹುಡುಗಿಯರು ಮತ್ತು ಹುಡುಗರು ಒಂದೇಕೆರೆಯಲ್ಲಿ ಅರೆ ಬೆತ್ತಲೆಯಾದರೂ ಹೇಗೆ ಸಹಜವಾಗಿ ಮೀಯುತ್ತಾರೆಂದೂ ನಮಗೆ ವಿವರಿಸಿ ವಿವರಿಸಿ ಹೇಳಿದ್ದರು.

ಸಂಜೆಕತ್ತಲೆಯಲ್ಲಿ ಮತ್ತೆ ಬಯಲಲ್ಲಿ ಕುಳಿತಾಗ ಮಂದಣ್ಣ ಅವಮಾನದಲ್ಲಿ ಕೆಂಡಾಮಂಡಲವಾಗಿ ತನ್ನ ಕೈಯಲ್ಲೇನಾದರೂ ತೋಟೆ ಕೋವಿಯಿದ್ದಿದ್ದರೆ ಅವಳನ್ನು ಹೇಗೆ ಮುಗಿಸುತ್ತಿದ್ದೆನೆಂದೂ ಕೋವಿ ಬೇಕಾಗಿರುವುದು ಕ್ರಾಂತಿಗಾಗಿ ಅಲ್ಲವೆಂದೂ ಈ ಅವಮಾನ ಸಹಿಸಿಕೊಂಡಿದ್ದರೆ ತಾನು ಕೊಡಗಿನವನೇ ಅಲ್ಲವೆಂದೂ ಜೋರಾಗಿ ಮಗುವಿನಂತೆ ಅತ್ತುಬಿಟ್ಟಿದ್ದ.

ಈಗ ನೋಡಿದರೆ ಒಬ್ಬರು ಇನ್ನೊಬ್ಬರ ಸಾಕು ಪ್ರಾಣಿಗಳ ಹಾಗೆ ನನ್ನೆಡೆಗೆ ನಡೆದು ಬರುತ್ತಿದ್ದರು. ಅವರ ಕಾಲ ಸಂಧಿಯಿಂದ ನುಸುಳಿಕೊಂಡು ಕೆಸರು ದೂಳು ಮೆತ್ತಿಕೊಂಡಿದ್ದ ಬಡಕಲು ನಾಯಿಯೊಂದು ಬಾಲವಾಡಿಸುತ್ತಾ ತಲೆದೂಗುತ್ತಾ ಪ್ರೀತಿತುಂಬಿಕೊಂಡು ನನ್ನೆಡೆಗೆ ಬರುತ್ತಿತ್ತು.

“ಥೂ! ಟೈಗರ್, ನಿನ್ನ ಹುಲಿ ಹಿಡಿಯಾ.. .. .. ದಾಕ್ಷಾಯಿಣಿ ಥೇಟ್ ಕೊಡಗಿನ ಶೈಲಿಯಲ್ಲಿ ಬೈದು ಕೋಲೆತ್ತಿಕೊಂಡು ಅದನ್ನು ಓಡಿಸಲು ಹೋದವಳು ಏನೋ ನೆನೆಸಿಕೊಂಡು ಸುಮ್ಮಗಾದಳು.

“ಏನು ಮಾರಾಯ ಈಗಲಾದರೂ ನಮ್ಮ ಗ್ಯಾನ ಬಂತಾ?” ಮಂದಣ್ಣ ಕೇಳಿದ.ನಾನು ಮಾತಾಡಲಿಲ್ಲ. ದುರುಗುಟ್ಟಿಕೊಂಡು ನೋಡಿದೆ. ಹೀಗೆ ನಾನು ದುರುಗುಟ್ಟಿದರೆ ಅದರ ಅರ್ಥ ಏನು ಅನ್ನುವುದು ಅವನಿಗೆ ಮಾತ್ರ ಗೊತ್ತು. ಅವನು ತಟ್ಟನೆ ಸುಮ್ಮನಾದ. ದಾಕ್ಷಾಯಿಣಿ ಪೆಚ್ಚಾಗಿ ನಗುತ್ತಿದ್ದಳು. ಅದೇ ಪೆಚ್ಚು ನಗು.

ರಾಜಕೀಯ ತರಗತಿಯಲ್ಲಿ ಮೊಲೆಗೆ ಕೈಹಾಕಲು ಬಂದನೆಂಬ ಕಾರಣಕ್ಕೆ ಸಿಕ್ಕಾಪಟ್ಟೆ ಒದ್ದು  ಮಂದಣ್ಣನನ್ನು ನೆಲಕ್ಕೆ ಕೆಡವಿದ್ದ ದಾಕ್ಷಾಯಿಣಿ ಅದೇ ಮಂದಣ್ಣನನ್ನು ಆರು ವರ್‍ಷಗಳ ಬಳಿಕ ಅಂತರ್ಜಾತೀಯ ವಿವಾಹವಾಗಿದ್ದಳು. ಮಾನಸಗಂಗೋತ್ರಿಯ ಗಾಂಧಿ ಮಂಟಪದಲ್ಲಿ ನಡೆದ ಅವರಿಬ್ಬರ ಸರಳ ವಿವಾಹದಲ್ಲಿ ನಾನೇ ಮಂತ್ರ ಮಾಂಗಲ್ಯ ಓದಿ ಹೇಳಿದ್ದೆ. ದಾಕ್ಷಾಯಿಣಿಯ ತಂದೆ ನಿವೃತ್ತ ಬ್ರಾಂಚ್ ಪೋಸ್ಟ್ ಮಾಸ್ಟರ್ ಆಗಿದ್ದವರು ನಾನು ಮಂತ್ರ ಮಾಂಗಲ್ಯ ಓದುತ್ತಿದ್ದಂತೆ ರೋಧಿಸಲು ತೊಡಗಿ ಕಣ್ಣೀರು ಒರೆಸಿಕೊಂಡು ಎದ್ದು ಹೋಗಿದ್ದರು. ಆಗಲೂ ಈ ದಾಕ್ಷಾಯಿಣಿ ಹೀಗೇ ಪೆಚ್ಚಾಗಿ ನಕ್ಕಿದ್ದಳು.

“ಅವ್ವನಿಗೆ ಹಂದಿ ಮರಿ ಉಳಿಯಿತು”

ಮಂದಣ್ಣ ಸರಳ ಮದುವೆಯ ಮಾರನೆಯ ದಿನ ನಗುತ್ತಾ ಅಂದಿದ್ದ. ಅವನ ಅವ್ವ ಮಗನ ಮದುವೆಗೆ ಕಡಿಯಲಿಕ್ಕೆಂದು ಹಂದಿ ಮರಿಯೊಂದನ್ನು ಜತನದಿಂದ ಸಾಕಿ ಬೆಳೆಸುವುದು ಅದು ಬೆಳೆದು ದೊಡ್ಡದಾಗುವುದು, ಮಗ ಮದುವೆ ಮಾಡಿಕೊಳ್ಳದೆ ಹಂದಿ ಬೆಳೆದು ಆನೆ ಮರಿಯಂತೆ ದೊಡ್ಡದಾಗಿ ಹಂದಿ ದೊಡ್ಡಿಯಲ್ಲೆಲ್ಲಾ ದಾಂದಲೆ ನಡೆಸಿ ತಲೆನೋವಾಗುವುದು, ಅವ್ವನಿಗೆ ಸಾಕಾಗಿ ಹೋಗಿ ಅದನ್ನು ಮಾಂಸಕ್ಕೆ ಮಾರಿ ಮಗ ಮಂದಣ್ಣನ ಮದುವೆಗೆ ಅಂತ ಇನ್ನೊಂದು ಮರಿಯನ್ನು ಮುದ್ದಿನಿಂದ ಸಾಕುವುದು, ಹೀಗೆ ಅವ್ವ ಇಲ್ಲಿಯವರೆಗೆ ನಾಲ್ಕೈದು ಹಂದಿ ಮರಿಗಳನ್ನಾದರೂ ಸಾಕಿ  ಮಾಂಸಕ್ಕೆ ಮಾರಿರಬಹುದು ಎಂದು ಆತ ನಿರ್ವಿಕಾರನಾಗಿ ಅಂದಿದ್ದ.

“ಅಲ್ಲ ಮಾರಾಯ.ಹಂದಿ ಉಳಿದರೆ ಉಳಿಯಿತು ಬಿಡು.ಅದು ಹೇಗೆ ಈ ದಾಕ್ಷಾಯಿಣಿಯನ್ನು ಉಡಾಯಿಸಿದೆ”ನಾನು ಅರ್ದ ಕುತೂಹಲದಲ್ಲಿ ಕೇಳಿದ್ದೆ.

“ಅದು ಸಶಸ್ತ್ರ ಕ್ರಾಂತಿಗೆ ಸಂಬಂಧಿಸಿದ ವಿಷಯ”

ಮಂದಣ್ಣ ಏನೋ ಭಾರೀ ವಿಷಯದಂತೆ ಹೇಳಿ ಅಲ್ಲಿಯೆ ನಿಲ್ಲಿಸಿ ದಾಕ್ಷಾಯಿಣಿಯ ಹತ್ತಿರ ಹೋಗಿದ್ದ. ಆನಂತರ ಅವರಿಬ್ಬರು ಬರೆದ ಪತ್ರಗಳಿಂದಲೇ ಅವರ ಸಶಸ್ತ್ರ ಕ್ರಾಂತಿಯ ವಿಷಯ ನನಗೆ ಅಷ್ಟಿಷ್ಟಾದರೂ ಅರಿವಾಗಲು ತೊಡಗಿದ್ದು ಅವರಿಬ್ಬರ ವಿವಾಹ ಕೇವಲ ದೈಹಿಕ ಅಥವಾ ಭಾವನಾತ್ಮಕ ಅಗತ್ಯಗಳ ಫಲವಲ್ಲವೆಂದೂ ದಕ್ಷಿಣ ಏಶ್ಯಾದಲ್ಲಿ ಒಂದಲ್ಲ ಒಂದು ದಿನ ಭುಗಿಲೇಳಬಹುದಾದ ಬಡಜನ ಕೂಲಿ ಕಾರ್‍ಮಿಕರ ಸಶಸ್ತ್ರ ದಂಗೆಯಲ್ಲಿಅವರಿಬ್ಬರ ಕರಾರುವಕ್ಕಾದ ಪಾತ್ರವಿದೆಯೆಂದೂ ನೇಪಾಳ ಬಿಹಾರ ಒರಿಸ್ಸಾ ಆಂದ್ರ ಕರ್ನಾಟಕಗಳನ್ನು ದಾಟಿ ಬರುವ ಕ್ರಾಂತಿಯನ್ನು ಕೊಡಗಿನ ಕಾಡಿನ ಮೂಲಕ ಕೇರಳದ ಕರಾವಳಿಗೆ ದಾಟಿಸುವ ಜವಾಬ್ದಾರಿ ತಮಗಿದೆಯೆಂದೂ ಇದರಲ್ಲಿ ತಾವು ಬಹುತೇಕ ಯಶಸ್ವಿಯಾಗುವುದಾಗಿಯೂ ದಾಕ್ಷಾಯಿಣಿ ಕೆಂಪು ಅಕ್ಷರಗಳಲ್ಲಿ ಬರೆದ ಪತ್ರದಲ್ಲಿ ಬರೆದಿದ್ದಳು. ಮಂದಣ್ಣನೂ ಹೆಚ್ಚು ಕಡಿಮೆ ಇದೇ ವರಸೆಯಲ್ಲಿ ಬರೆದಿದ್ದ. ಕಾಗದದ ಕೊನೆಯಲ್ಲಿ ಹಂದಿ ಸಾಕುವ ವಿಷಯದಲ್ಲಿ ತನ್ನ ತಾಯಿಗೂ ದಾಕ್ಷಾಯಿಣಿಗೂ ಜಟಾಪಟಿಯಾಗಿರುವುದಾಗಿಯೂ ತಾಯಿ ಸಿಟ್ಟುಮಾಡಿಕೊಂಡು ಸೋಮವಾರಪೇಟೆಯ ತನ್ನ ಕೊನೆಯ ಮಗಳ ಮನೆಗೆ ಹೋಗಿರುವುದಾಗಿಯೂ ಬರೆದಿದ್ದ. ಕ್ರಾಂತಿಯ ದಾರಿ ದುರ್ಗಮವಾಗಿದ್ದರೂ ಭವಿಷ್ಯ ಉಜ್ವಲವಾಗಿರುವುದು ಎಂಬುದನ್ನು ನನಗೆ ನೆನಪಿಸಿದ್ದ.

“ಮಂದಾ,ಸಾವಯವ ಅಜ್ಜನ ಬರಕ್ಕೆ ಹೇಳೊದಾ?”ದಾಕ್ಷಾಯಿಣಿ ಕಾಫಿ ತೋಟz  ಕಡೆ ನಿರುಕಿಸಿ ನೋಡುತ್ತಾಒಂದು ತರಹದ ಅಸಹನೆಯಿಂದ ಕೇಳಿದಳು.

ದಾಕ್ಷಾಯಿಣಿ ಕಸಬರಿಕೆ ಕಡ್ಡಿಯಂತಿದ್ದವಳು ಈಗ ಅಗಾಧವಾಗಿ ಊದಿಕೊಂಡಿದ್ದರೂ ಮಂದಣ್ಣ ಈಗಲೂ ಆಕೆಯನ್ನು ‘ದ್ರಾಕ್ಷಿ’ ಅಂತಲೇ ಕರೆಯುತ್ತಿದ್ದಂತೆ ಆಕೆಯೂ ಈತನನ್ನು ಅದೇ ಸಲುಗೆ ಬೆರೆತ ನಿರ್ಲಕ್ಷ್ಯದಿಂದ ‘ಮಂದಾ’ ಎಂತಲೇ ಕರೆಯುತ್ತಿರುವುದನ್ನು ಕೇಳಿ ಅವರಿಬ್ಬರ ಬಗ್ಗೆ ಮಮತೆ ಉಕ್ಕಿ  ಬಂತು.ಜೊತೆಗೆ ನಾನು ಇವರಿಬ್ಬರಿಂದ ಇದುವರೆಗೆ ಕ್ಷೀಣವಾಗಿ ಕೇಳಿಸಿಕೊಂಡಿದ್ದ ಸಾವಯವ ಅಜ್ಜನ ವಿಚಾರ ಈಗ ದಾಕ್ಷಾಯಿಣಿಯ ಬಾಯಿಯಿಂದ ಕೊಂಚ ಉದ್ದೇಶಪೂರ್ವಕವಾಗಿ ಹಾಗೂ ಕಟುವಾಗಿ ಕೇಳಿಸುತ್ತಿರುವಂತೆ ಅನಿಸಿ ಕುತೂಹಲವೂ ಮೂಡಿತು.

ಮೈಸೂರಿನಲ್ಲಿ ರಾಜಕೀಯ ತರಗತಿಯಲ್ಲಿ ಮಹಾತ್ಮಾ ಗಾಂಧೀಜಿಯವರ ವಿಷಯ ಚರ್ಚೆಗೆ ಬಂದಾಗ ಸಾವಯವ ಕೃಷಿ ಹಾಗೂ ರೈತ ಕ್ರಾಂತಿಯ ಕುರಿತು ಮಾತನಾಡುತ್ತ ಮಣ್ಣಿನ ಕುಡಿಕೆಯಲ್ಲಿ ಆಡಿನಹಾಲು ಕುಡಿದು, ಕಡಲೆ ಬೀಜ ತಿಂದು ಮಲಗಿದರೆ ಕ್ರಾಂತಿಯಾಗುವುದಿಲ್ಲವೆಂದೂ ವೈಜ್ನಾನಿಕವಾಗಿ ಸಾಮೂಹಿಕ ಕೃಷಿ ಕೈಗೊಳ್ಳಬೇಕೆಂದೂ ಮಣ್ಣಿನ ಮಡಕೆಗಳನ್ನೆಲ್ಲ ಪುಡಿಪುಡಿಮಾಡಿ ಸಾವಿರ ಸಾವಿರ ಸಂಖ್ಯೆಯಲ್ಲಿ ಅಲ್ಯುಮಿನಿಯಂ ಕುಡಿಕೆಗಳನ್ನು ತಯಾರುಮಾಡಿ ರೈತರಿಗೆಲ್ಲ ಹಂಚಿ ಬಿಡಬೇಕೆಂದೂ ಗಾಂಧಿ ಬರೇ ಬೋಗಸ್ ಎಂದೂ ನಮಗೆ ತಲೆಯೊಳಕ್ಕೆ ಹೊಕ್ಕುವಂತೆ ಹೇಳಿಕೊಟ್ಟಿದ್ದರು.
ಯಾವಾಗಲೂ ಏನು ಹೇಳಿದರೂ ಬರೇ ಕಣ್ಣು ಪಿಳಿ ಪಿಳಿ ಮಾಡಿಕೊಂಡು ಕೂತಿರುತ್ತಿದ್ದ ನನಗೆ ಅವರು ಗಾಂಧಿಯನ್ನು ಬೈದದ್ದು ಕೇಳಿ ಸುಮ್ಮನಾಗಿರಲಾಗಲಿಲ್ಲ.
“ನೀವು ಬೇಕಾದರೆ ನನ್ನ ಅಪ್ಪನಿಗೆ  ಬೇಕಾದರೆ ಬಯ್ಯಿರಿ.ಆದರೆ ಗಾಂಧಿಗೆ ಬೈದರೆ ಮಾತ್ರ ಸುಮ್ಮನಿರುವುದಿಲ್ಲ” ಅಂದು ಬಿಟ್ಟಿದ್ದೆ.

ರಾತ್ರಿ ಮಲಗುವಾಗ ಮಂದಣ್ಣ ನನಗೆ ಗಾಂಧಿಯ ವಿಷಯವಾಗಿ ತುಂಬ ಪಿರಿ ಪಿರಿ ಮಾಡಿದ್ದ.

ಮಂದಣ್ಣನ ಅಪ್ಪ ಬ್ರಿಟಿಷರ ಸೇನೆಯಲ್ಲಿ ಜಮಾದಾರರಾಗಿದ್ದರೆಂದೂ, ಸುಭಾಷ್ ಚಂದ್ರ ಬೋಸರ ಮಾತುಕೇಳಿ ದಂಗೆ ಏಳಲು ತಯಾರಾಗಿದ್ದರೆಂದೂ, ಬ್ರಿಟಿಷರು ಗಾಂಧಿಯ ಕೈಗೆ ಸ್ವಾತಂತ್ರ ಕೊಟ್ಟು ಕೋವಿ ಹಿಡಿದಿದ್ದವರನ್ನು ಗತಿಯಿಲ್ಲದ ಹಾಗೆ ಮಾಡಿದರೆಂದೂ ಇದರಿಂದೆಲ್ಲ ತಲೆ ಕೆಡಿಸಿಕೊಂಡ ತನ್ನ ಅಪ್ಪ ಊರು ಬಿಟ್ಟು ಕಾಶಿಗೋ ಹರಿದ್ವಾರಕ್ಕೋ ಹೊರಟೇ ಹೋದರೆಂದೂ, ಗಾಂಧಿಯಿಂದಾಗೆಯೇ  ತನ್ನ ಅವ್ವ  ಹಂದಿ ಸಾಕಿ ಬಾಳು ಸಾಗಿಸಬೇಕಾಗಿ ಬಂತೆಂದೂ, ನಾನು ಗಾಂಧಿಯ ಪರವಾಗಿ ಮಾತನಾಡಿದ್ದು ಸರಿಯಲ್ಲವೆಂದೂ ಗಾಂಧಿಯಿಂದಲೇ ಪಾಕಿಸ್ತಾನ ಹುಟ್ಟಿತೆಂತಲೂ ಹೇಳಿ ನನ್ನನ್ನೇ ಅನುಮಾನದಿಂದ ನೋಡಿದ್ದ.

ನಾನು ಅವನಿಗೆ ನನ್ನ ಮತ್ತು ಗಾಂಧಿಯ ವಿಷಯ ಹೇಳ ಬೇಕಾಗಿ ಬಂದಿತ್ತು. ಹಾಗೆ ನೋಡಿದರೆ ನನಗೆ ಗಾಂಧಿಯ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ.ಸುಳ್ಯದ ಹತ್ತಿರ ನಮ್ಮ ನೆಂಟರ ಪೈಕಿ ಗಾಂಧಿ ಅಜ್ಜ ಎನ್ನುವ ಹೆಸರಿನ ಬ್ಯಾರಿಯೊಬ್ಬರು ವಯಸ್ಸಾದವರು ಇದ್ದರು.ನಾವು ಮಕ್ಕಳು ಬೇಸಗೆ ರಜೆಯಲ್ಲಿ ಊರಿಗೆ ಹೋದಾಗ ಅವರ ತೋಟಕ್ಕೆ ಕಣ್ಣಾಮುಚ್ಚಾಲೆಯಾಡಲು ಹೋದರೆ ಅವರು ತೋಟದಲ್ಲಿ ಆಡು ಮೇಯಿಸುತ್ತ ಕೂತಿದ್ದವರು ನಮ್ಮಿಂದ ಒತ್ತಾಯಪೂರ್ವಕವಾಗಿ ತೆಂಗಿನ ಮರದ ಬುಡಕ್ಕೆ ಉಚ್ಚೆ ಉಯ್ಯಿಕೊಳ್ಳುತ್ತಿದ್ದರು. ತೆಂಗಿನ ಮರಗಳಿಗೆ ಉಪ್ಪು ಬೇಕಾಗುತ್ತದೆಂತಲೂ ಮನುಷ್ಯರ ಮೂತ್ರದಲ್ಲಿ ಉಪ್ಪು ಸಾಕಷ್ಟು ಇರುತ್ತದೆಂತಲೂ ಮನುಷ್ಯರೆಲ್ಲರೂ ತೆಂಗಿನ ಬುಡಕ್ಕೇ ಉಯ್ಯಬೇಕೆಂದೂ ಹೇಳಿದ್ದರು. ಜೊತೆಗೆ ನಮಗೆಲ್ಲ  ಸ್ಥಳದಲ್ಲೇ ಆಡಿನ ಹಾಲು ಕರೆದು ಕುಡಿಸಿ ತಿನ್ನಲು ಹಸಿಕಡಲೆ ಕೊಟ್ಟು ಕಳಿಸಿದ್ದರು.ತಾವೂ ಉಡುಪಿಗೆ ಗಾಂಧೀಜಿ ಬಂದಿದ್ದಾಗ ಹೋಗಿದ್ದಾಗಿಯೂ ಕಡಲಿನ ಬದಿಯಲ್ಲಿ ಉಪ್ಪು ತಯಾರು ಮಾಡಿದ್ದಾಗಿಯೂ ಹೇಳಿದ್ದರು.

ನಾವು ಮೈಸೂರಿನಲ್ಲಿ ಓದುತ್ತಿದ್ದಾಗ ರಾತ್ರಿ ಕತ್ತಲಲ್ಲಿ ತೆಂಗಿನ ತೋಟದಲ್ಲಿ ಎಡವಿ ಬಿದ್ದು ಗಾಯ ಮಾಡಿಕೊಂಡು ಹುಣ್ಣಾಗಿ ಆ ಅಜ್ಜ ತೀರಿ ಹೋಗಿದ್ದಾಗಿ ಒಂದು ದಿನ ಸುದ್ದಿ ಬಂದಿತ್ತು. ಆ ಅಜ್ಜನಿಂದಾಗಿ ನನಗೆ ಗಾಂಧೀಜಿ ಇಷ್ಟವಾಗಿ ಬಿಟ್ಟಿದ್ದರು. ಇದನ್ನೆಲ್ಲ ಮಂದಣ್ಣನಿಗೆ ಹೇಳಿದರೆ ಆತನಿಗೆ ತನ್ನ ಕತೆಯ ಮುಂದೆ ನನ್ನ ಕತೆ ದೊಡ್ಡದಾಗಿ ಕಾಣಿಸದೆ ಸುಮ್ಮನೆ ಮುಚ್ಚಿಕೊಂಡಿರಲು ಹೇಳಿ ಆ ಕಡೆ ತಿರುಗಿ ಮಲಗಿದ್ದ.

“ಯಾರು ಮಾರಾಯ ಈ ಸಾವಯವ ಅಜ್ಜ?”

“ಒಳಗೆ ಬಾ ಹೇಳ್ತೀನಿ ಆ ಸೂಳೆಮಗನ ಸಾವಯವ”

ಮಂದಣ್ಣ ತೀರಾ ಖಿನ್ನನಾಗಿ ಹೇಳಿದ. ಒಬ್ಬ ಮನುಷ್ಯ ಇನ್ನೊಬ್ಬನನ್ನು ಅಷ್ಟೊಂದು ಅಶ್ಲೀಲವಾಗಿ ಅಷ್ಟೊಂದು ದೈನ್ಯವಾಗಿ ಅಂದದ್ದ ನಾನು ಕೇಳಿದ್ದು ಅದೇ ಮೊದಲು. ಜೊತೆಗೆ ಸಾವಯವದಂತಹ ಗಂಭೀರ ಚರ್ಚೆಗೊಳಗಾಗಬೇಕಾದ ವಿಷಯವನ್ನು ಅಷ್ಟು ಸಲೀಸಾಗಿಯೂ ಅರ್ಥ ಮಾಡಿಕೊಳ್ಳಬಹುದು ಎಂದು ಅರಿವಾಗಿದ್ದೂ ಆಗಲೇ.

 “ಅಲ್ಲ ರಶೀದಾ, ನಾನೇ ಅವನ ಅಪ್ಪ ಅಂತ ಹೇಳ್ಕೊಂಡು ಆಮುದುಕ ತಿರುಗಾಡ್ತಾನಲ್ಲ,ಏನು ಮಾಡಲಿ ಮಾರಾಯ…”ಮಂದಣ್ಣ ಹಡಗು ಮುಳುಗಿಹೋದವನಂತೆ ಅಸಾಧ್ಯ ಸಿಟ್ಟು ಸಂಕಟ ತುಂಬಿಕೊಂಡು ದಾಕ್ಷಾಯಿಣಿ ಇದ್ದಾಳಾ ಅಂತ ಹಿಂದಕ್ಕೆ ಒಮ್ಮೆ ತಿರುಗಿ ನನ್ನನ್ನ ದೀನವಾಗಿ ನೋಡಿದ.

 ನನಗೆ ಏನೂ ತೋಚಲಿಲ್ಲ. ಜೊತೆಗೆ ಅವನ  ಸಂಕಟ ತಟ್ಟನೆ ತಲೆಯೊಳಗೂ ತಟ್ಟಲಿಲ್ಲ. ಹಾಗೆ ನೋಡಿದರೆ ಅವನ ಅವ್ವ ಹಂದಿ ಸಾಕುವುದು, ಮತ್ತು ಅಪ್ಪ ಗಾಂಧೀಜಿಯ ದೆಸೆಯಿಂದಾಗಿ ಊರು ಬಿಟ್ಟು ತೀರ್ಥ ಯಾತ್ರೆಗೆ ಹೋಗಿದ್ದನ್ನು ಬಿಟ್ಟರೆ ಅವನ ಮನೆಯ ಹೆಚ್ಚಿನ ವಿಷಯ ನನಗೆ ಹೇಳಿರಲೂ ಇಲ್ಲ. ಹೇಳುವುದನ್ನು ಅವನು ಬೇಕೆಂತಲೇ ಮುಂದೂಡುತ್ತಿದ್ದ ಎಂದು ನನಗೆ ಅನಿಸುತ್ತಿತ್ತು. ಜೊತೆಗೆ ನನ್ನ ಮನೆಯ ಸಂಗತಿಯೂ ಆಷ್ಟೊಂದು ಹೇಳಿಕೊಳ್ಳುವ ಹಾಗೆ ಇರಲಿಲ್ಲ. ಹಾಗಾಗಿ ನಾವಿಬ್ಬರೂ ಆ ಕುರಿತು ಹೆಚ್ಚೇನೂ ಮಾತಾಡದೆ ಕ್ರಾಂತಿ, ಹುಡುಗಿಯರು, ಸಮಾಜ ಇತ್ಯಾದಿ ಮಾತನಾಡುತ್ತಾ ಕಾಲ ತಳ್ಳುತ್ತಿದ್ದೆವು. ಮೈಸೂರಿನ ಸರಸ್ವತಿಪುರಂ  ಮೊದಲನೇ ಮೈನ್‌ನಲ್ಲಿರುವ ಅಗ್ನಿಶಾಮಕ ಠಾಣೆಯ ಎದುರಿಗಿರುವ ರೈಲ್ವೇ ಕ್ರಾಸಿಂಗ್ ಹಳಿಗಳ ಪಕ್ಕ ಬಿದ್ಡ ಮರದ ತುಂಡಿನ ಮೇಲೆ ಕುಳಿತುಕೊಂಡು ಗಂಟೆಗೊಮ್ಮೆಯೋ, ಎರಡು ಗಂಟೆಗೊಮ್ಮೆಯೋ ಬರುವ ಉಗಿ ಬಂಡಿಗಾಗಿ ಕಾಯುತ್ತ ಮಾತನಾಡುತ್ತಿದ್ದೆವು. ಉಗಿಬಂಡಿಯ ಸದ್ದು ಕೇಳಿಸುತ್ತಿದ್ದಂತೆ ಎಲ್ಲ ಮಾತನ್ನೂ ಮರೆತು ತದೇಕಚಿತ್ತರಾಗಿ ಉಗಿಬಂಡಿ ಮಿದುಳಿಂದ ಮರೆಯಾಗುವವರೆಗೂ ನೋಡುತ್ತಿದ್ದೆವು.

‘ಅಪ್ಪ  ಜಮ್ಮು ತಾವಿಗೆ ಟ್ರೈನಲ್ಲಿ ಕರಕೊಂಡು ಹೋಗ್ಬೇಕಿತ್ತು.ಹೋಗಲೇ ಇಲ್ಲ’ ಮಂದಣ್ಣ ಬೇಸರದಲ್ಲಿ ಅರ್ದ ನಗು ಬೆರೆಸಿ ಅಂದಿದ್ದ. ‘ನಾನೂ ಈವರೆಗೆ  ಟ್ರೈನಲ್ಲಿ ಕೂತಿಲ್ಲ’ನಗುತ್ತಾ ಹೇಳಿದ್ದೆ. ಅವನಿಗೂ ಖುಷಿಯಾಗಿತ್ತು. ಆವತ್ತಿನಿಂದ ನನಗೆ ಅವನು ತೀರಾ ಹತ್ತಿರವಾಗಿದ್ದ. ಹಾಗೆ ನೋಡಿದರೆ ಕೊಡಗಿನವರಾದ ನಾವು ಟ್ರೈನನ್ನು ಅಷ್ಟು ಹತ್ತಿರದಿಂದ ನೋಡುತ್ತಿರುವುದು ಅದೇ ಮೊದಲು. ಬೇರೆ ಯಾರಿಗೂ ಈ ವಿಷಯ ಗೊತ್ತಾಗ ಬಾರದೆಂದು ಅದೂ ಇದೂ ಮಾತಾನಾಡುತ್ತಾ ಓರೆಗಣ್ಣಲ್ಲಿ ಉಗಿಬಂಡಿಯನ್ನು ನೋಡುತ್ತಾ ಕೂರುತ್ತಿದ್ದೆವು.  ರೈಲು ಬಂಡಿಗಳೆಲ್ಲ ಹೋಗುವುದು ಮುಗಿದು ಮೈಸೂರಿನ ಆಕಾಶ ಕೆಂಪುಬಣ್ಣದಿಂದ ಕತ್ತಲೆಗೆ ತಿರುಗಿ ಬೀದಿ ದೀಪಗಳು ಹೊತ್ತಿಕೊಳ್ಳುತಿದ್ದಂತೆ ನಮಗಿಬ್ಬರಿಗೂ ಸಖತ್ ಸಂಕಟವಾಗಲು ತೊಡಗುತ್ತಿತ್ತು.
ಆ ಸಂಕಟದಲ್ಲೇ ನಾವು ಕ್ರಾಂತಿಕಾರಿಗಳಾಗಿದ್ದು. ಕ್ರಾಂತಿಕಾರಿಗಳು ರೈಲಲ್ಲಿ ದುಡ್ಡು ಕೊಡದೆ ಓಡಾಡಬಹುದೆಂತಲೂ, ಜನತೆಗಾಗಿ ನಾವು ಓಡಾಡುವುದರಿಂದ ಜನರದೇ ಆದ ರೈಲಿನಲ್ಲಿ ನಮಗೆ ಹಕ್ಕಿದೆಯೆಂತಲೂ, ಒಂದು ವೇಳೆ ಕ್ರಾಂತಿಯಾದರೆ ಕೊಡಗನ್ನು ಒಂದು ದೇಶವನ್ನಾಗಿ ಮಾಡಲಾಗುವುದೆಂದೂ, ಹಾಗೇನಾದರೂ ಆದರೆ ಎಲ್ಲ ದೇಶಗಳಿಂದ ರೈಲುಗಳು ಕೊಡಗಿಗೆ ಓಡಾಡುತ್ತದೆಂತಲೂ ನಮಗೆ ರಾಜಕೀಯ ತರಗತಿಯಲ್ಲಿ ಹೇಳಿದ್ದರು ಮಾತ್ರವಲ್ಲ, ನಮ್ಮನ್ನು ಟಿಕೆಟಿಲ್ಲದೆ ರೈಲಿನಲ್ಲಿ ರಾಯಚೂರು, ಆಂದ್ರ, ಮುಂಬಯಿಗಳಿಗೆ ಕರೆದುಕೊಂಡು ಹೋಗಿದ್ದರು. ಹಾಗಾಗಿ ನಮಗೆ ಕ್ರಾಂತಿಯಲ್ಲಿ ಬಹುತೇಕ ನಂಬಿಕೆ ಬಂದು ಮೈಸೂರಿನಲ್ಲಿ ತಲೆಯೆತ್ತಿಕೊಂಡು,  ಎದೆ ಸೆಟೆಸಿಕೊಂಡು ಓಡಾಡಲು ತೊಡಗಿದ್ದೆವು.

 ಹಾಗಿರುವಾಗಲೇ ಒಂದು ನಡುರಾತ್ರಿಯಲ್ಲಿ ಮಂದಣ್ಣ ನಿದ್ರೆಯಲ್ಲಿ ಎದ್ದು ಕುಳಿತು ಆತನ ಹಳೆಯದಾದ ಕೊಡೆಯ ತುದಿಯಿಂದ ನನ್ನ ತಲೆಗೆ ಗುರಿಯಿರಿಸಿ ನಿದ್ರೆಯಲ್ಲಿ ಶಸ್ತ್ರಾಭ್ಯಾಸ ಮಾಡಿದ್ದು. ರಾತ್ರಿಯೆಲ್ಲಾ ಮೈಸೂರಿನ ಗೋಡೆಗಳಲ್ಲಿ ಸಶಸ್ತ್ರ ಹೋರಾಟದ ಕುರಿತು ಕೆಂಪು ಅಕ್ಷರಗಳಲ್ಲಿ ಬರೆದು ಸುಸ್ತಾಗಿ ಮಲಗಿದ್ದ ನಾನು ತಿವಿತದಿಂದ ಎಚ್ಚರಾಗಿ ಎದ್ದು ನೋಡಿದರೆ ಮಂದಣ್ಣ ತನ್ನ ಹಳೆಯ ಕೊಡೆಯ ಚೂಪಾದ ತುದಿಯಿಂದ ನನ್ನ ತಲೆಬುರುಡೆಗೆ ಗುರಿಯಿಟ್ಟು ಅಭ್ಯಾಸ ಮಾಡುತ್ತಿದ್ದ. ಜೊತೆಯಲ್ಲಿ ಗೊರಕೆಯನ್ನೂ ಹೊಡೆಯುತ್ತಿದ್ದ. ನಾನು ಹೆದರಿ ಬಾಯಿ ಬಾರದಂತಾಗಿ ಎದ್ದು ಕೋಣೆಯ ಹೊರಗೆ ಓಡಿಹೋಗಿದ್ದೆ. ಸ್ವಲ್ಪ ಹೊತ್ತಿನ ನಂತರ ಕಿಟಕಿಯಿಂದ ಇಣುಕಿ ನೋಡಿದರೆ ಕೊಡೆ ಹಿಡಕೊಂಡೇ ನಿದ್ದೆ ಹೋಗಿದ್ದ. ಬೆಳಗ್ಗೆ ಎದ್ದವನೇ ನಾನು ಅವನನ್ನು ಕೋಣೆಯಿಂದ ಓಡಿಸಿ ಬಿಟ್ಟಿದ್ದೆ.

ಆನಂತರ ಸುಮಾರು ವರ್ಷಗಳ ನಂತರ ದಾಕ್ಷಾಯಿಣಿ ಇದೇ ಕಾರಣಕ್ಕಾಗಿ ಆತನನ್ನ ಕೊಡಗಿನಿಂದ ಮಂಗಳೂರಿನ ಕಂಕನಾಡಿ ಆಸ್ಪತ್ರೆಗೆ ಕರೆತಂದು ತೋರಿಸಿದ್ದಳು. ಅವಳಿಗೆ ಸಶಸ್ತ್ರ ಕ್ರಾಂತಿಯಲ್ಲಿ ನಂಬಿಕೆಯಿದ್ದರೂ ಮಂದಣ್ಣ ಹಳೆಯ ಕೊಡೆಯ ಚೂಪಿನಿಂದ ತನ್ನ ತಲೆ ಬುರುಡೆಗೆ ಗುರಿಯಿಡುವುದು ತೀರಾ ಅಸಹಜವಾಗಿ ಕಂಡಿತ್ತು. ಆ ಕೊಡೆ ಮಂದಣ್ಣನ ಅಪ್ಪ ಸೈನ್ಯಲ್ಲಿರುವಾಗ ತಂದ ಕೊಡೆಯೆಂದೂ, ಅದು ಹರಿದು ಚಿಂದಿಯಾಗಿದ್ದರೂ ಮಂದಣ್ಣ ಅದನ್ನ ಇನ್ನೂ ಜೋಪಾನವಾಗಿಟ್ಟಿರುವುದು ತೀರಾ ಭಾವುಕತೆಯಾಯಿತೆಂತಲೂ, ಆತನಿಗೆ ಬೇಕಿದ್ದರೆ ತನ್ನ ಅವ್ವನ ಇಷ್ಟದಂತೆ ಹಂದಿ ಸಾಂಬಾರ್ ಮಾಡುವ ಹುಡುಗಿಯನ್ನು ಮದುವೆಯಾಗ ಬಹುದಿತ್ತೆಂತಲೂ, ಅದು ಆಗಲಿಲ್ಲ ಎನ್ನುವ ಕಾರಣಕ್ಕೆ ಕೊಡೆಯಿಂದ ತನ್ನನ್ನು ಸಾಯಿಸಲು ಹೊರಟಿರುವುದು ತೀರಾ ಊಳಿಗಮಾನ್ಯ ಸಂಪ್ರದಾಯವಾಯಿತೆಂತಲೂ ಅತ್ತಿದ್ದಳು. ನಾನೇ ಅವಳಿಗೆ ಮಂದಣ್ಣ ಸಾಯಿಸಲು ಹೊರಟಿದ್ದಲ್ಲವೆಂದೂ ಅದು ನಿದ್ದೆಯಲ್ಲಿ ಆತ ನಡೆಸುವ ಅಭ್ಯಾಸವೆಂತಲೂ, ಮಗುವಿನಂತಹ ಮನಸ್ಸಿನ ಮಂದಣ್ಣನನ್ನು ಹೀಗೆ ಅನುಮಾನಿಸುವುದು ತೀರಾ ಅಮಾನವೀಯವೆಂತಲೂ ಹೇಳಬೇಕಾಯಿತು.

ಆಮೇಲೆ ಯಾವತ್ತೋ ಒಂದು ದಿನ ಮಂದಣ್ಣ ಮಡಿಕೇರಿಯಲ್ಲಿ ಸಂತೆಗೆ ಬಂದಾಗ ಸಿಕ್ಕಿದ್ದ.ಮಳೆಯಲ್ಲಿ ಮಡಚುವ ಕೊಡೆ ಹಿಡಕೊಂಡು ನಿಂತಿದ್ದ.

`ಏನು ಮಾರಾಯ ಕೊಡೆ ಶಸ್ತ್ರಾಭ್ಯಾಸ ಹೇಗಿದೆ’ ಅಂತ ತಮಾಶೆ ಮಾಡಿದ್ದೆ.`ಬಾ ರಾಜಾ ಸೀಟಲ್ಲಿ ಕೂತು ಮಾತಾಡೋಣ’ಅಂತ ಕರಕೊಂಡು ಹೋಗಿ ತುಂಬ ಹೊತ್ತು ಮಾತಾಡಿದ್ದ. ನಡುವಲ್ಲಿ ಒಂದೆರಡು ಸಲ ಕಣ್ಣೀರು ಹಾಕಿದ್ದ. ದಾಕ್ಷಾಯಿಣಿ ಎಲ್ಲವನ್ನೂ ತೀರಾ ವ್ಯಾವಹಾರಿಕವಾಗಿ ನೋಡುತ್ತಾಳೆಂದೂ ಅವ್ವ ಮನೆಬಿಟ್ಟು ಹೋಗಲು ಕಾರಣ ಅವಳ ವ್ಯಾಪಾರೀ ದೃಷ್ಟಿಯೆಂತಲೂ, ಈಗ ನೋಡಿದರೆ ಅಪ್ಪನ ನೆನಪಲ್ಲಿ ಇಟ್ಟಿದ್ದ  ಕೊಡೆಯನ್ನು ಹಳೆ- ಸಾಮಾನು ವ್ಯಾಪಾರಿ ಮಾಪಿಳ್ಳೆಗೆ ಮಾರಿದ್ದಾಳೆಂದೂ, ಈಗ ತನಗೆ ತನ್ನವರು ಎಂಬವರು ಯಾರೂ ಇಲ್ಲವೆಂದೂ, ಕೊಡಗಿಗೆ ಕ್ರಾಂತಿಯೂ ಬರುವುದಿಲ್ಲ, ರೈಲೂ ಬರುವುದಿಲ್ಲ ಬರುತ್ತಿರುವುದು ಬರಿಯ ಮಲಯಾಳಿಗಳೂ, ಮಾಪಿಳ್ಳೆಗಳೂ, ಶುಂಠಿಯೂ, ನೇಂದ್ರವೂ ಮಾತ್ರವೆಂದೂ ಹೇಳಿದ್ದ. ಜೊತೆಗೆ ತಾನೀಗ ಮಾರ್ಕ್ಸ್ ವಾದದಲ್ಲಿ ನಂಬಿಕೆ ಕಳಕೊಂಡಿರುವುದಾಗಿಯೂ, ಸ್ವದೇಶೀ ಚಳವಳಿಯಲ್ಲಿ ತೊಡಗಿಸಿಕೊಂಡಿರುವುದಾಗಿಯೂ, ಕೊಡಗಿನ ಜೇನು ಹುಳಗಳ ಮೇಲೆ ವಿದೇಶೀ ಸಂಸ್ಥೆಯೊಂದು ತಳಿ ಸಂಶೋಧನೆ ನಡೆಸುತ್ತಿದೆಯೆಂದೂ ಅದರ ವಿರುದ್ಧ ಘೇರಾವ್ ಮಾಡಲು ಮಡಿಕೇರಿಗೆ ಬಂದಿರುವುದಾಗಿಯೂ ಆದರೆ ಮಳೆಯಿಂದಾಗಿ ಬಹುತೇಕ ಮಂದಿ ಬಂದಿಲ್ಲವೆಂದೂ ಬಂದವರಲ್ಲಿ ಬಹುಸಂಖ್ಯಾತರು ಚಳಿಯಿಂದಾಗಿ ಬಾರಿನಲ್ಲಿ ಕುಳಿತಿರುವುದಾಗಿಯೂ ಹೀಗಾದರೆ ಬದಲಾವಣೆ ಹೇಗೆ ಸಾಧ್ಯ ಅಂತ ಹೇಳಿದ್ದ.

ದಾಕ್ಷಾಯಿಣಿ ಏಕೆ ಬರಲಿಲ್ಲವೆಂದು ಕೇಳಿದ್ದೆ. ಒಣಗಲು ಇಟ್ಟಿದ್ದ ಕಾಫಿರಾಶಿ ಹಠಾತ್ತಾಗಿ ಬಂದ ಮಳೆಯಿಂದಾಗಿ ಕೊಚ್ಚಿಹೋಗಿದೆಯೆಂದೂ ದಾಕ್ಷಾಯಿಣಿಯೂ ಮತ್ತು ಈಗತಾನೇ ಹೊಸದಾಗಿ ಬಂದಿರುವ ಸಾವಯವ ಅಜ್ಜನೂ ಸೇರಿಕೊಂಡು ಕಾಫಿರಾಶಿ ಮಾಡುತ್ತಿದ್ದಾರೆಂದೂ ಹೇಳಿದ್ದ. ತಮಗೆ ಅಚಾನಕ್ಕಾಗಿ ದೊರೆತಿರುವ ಸಾವಯವ ಅಜ್ಜ  ಒಬ್ಬ ಅವಧೂತನೆಂತಲೂ ಏಕಕಾಲದಲ್ಲಿ ಆತ ಕೃಷಿ ಕೆಲಸವನ್ನೂ, ನಾಟಿ ಮದ್ದನ್ನೂ, ಆಧ್ಯಾತ್ಮವನ್ನೂ ಹೇಳಿಕೊಡುತ್ತನೆಂದೂ, ಮಕ್ಕಳಾಗದ ತಮಗೆ ಮಕ್ಕಳಾಗುವ ಹಾಗೆ ಯೋಗ ಕ್ರಿಯೆಯೊಂದನ್ನು ಹೇಳಿ ಕೊಡಲಿದ್ದಾನೆಂದೂ ಹೇಳಿ ಮಳೆಯಲ್ಲಿ ಮಾಯವಾಗಿದ್ದ.

ಈಗ ನೋಡಿದರೆ ದಾಕ್ಷಾಯಿಣಿ ಇದ್ದಾಳಾ ಎಂದು ತಿರುಗಿ ನೋಡುತ್ತಾ ಸಾವಯವ ಅಜ್ಜನಿಗೆ ಬಾಯಿಗೆ ಬಂದಂತೆ ಬಯ್ಯುತ್ತಿದ್ದ. ದಾಕ್ಷಾಯಿಣಿ ಅಜ್ಜನನ್ನು ಹೆಡೆಮುರಿಗೆ ಕಟ್ಟಿ ತರುವವಳಂತೆ ಕಾಫಿತೋಟದೊಳಕ್ಕೆ ಧಾವಿಸುತ್ತಿದ್ದಳು.

 ಮನೆಯೊಳಗೆ ಹೊಕ್ಕರೆ ಒಂದು ತರಹ ದನದ ಕೊಟ್ಟಿಗೆಯಿಂದ ಬರುವಂತಹ ಪರಿಮಳ, ಮನುಷ್ಯನ ಬೆವರು, ಆಡಿನ ವಾಸನೆ, ಬೇಯುತ್ತಿರುವ ತರಕಾರಿಯ ಗಮಲು ಎಲ್ಲ ಸೇರಿಕೊಂಡು ಒಂದು ಅನೂಹ್ಯ ವಾಸನಾ ಜಗತ್ತಿನೊಳಕ್ಕೆ ಹೊಕ್ಕಂತೆ ಅನಿಸಿತು.

`ಸ್ಸಾರಿ ಮಾರಾಯ ಈ ಬಡ್ಡಿಮಗ ಅಜ್ಜ ವಾರಕ್ಕೆ ಒಂದು ಸಲಾನೂ ಸ್ನಾನ ಮಾಡೋದಿಲ್ಲ. ಸ್ಸಾರಿ ಫಾರ್ ದ ಸ್ಮೆಲ್’ ಅಂದ.

‘ಅಲ್ಲ ಮಾರಾಯ. ಪೇಟೆಗೆ ಹೋಗ್ಲಿಕ್ಕೆ ನಾಚಿಕೆಯಾಗುತ್ತೆ. ಎಲ್ರೂ ತಬ್ಬಲಿಯನ್ನ ನೋಡುವ ಹಾಗೆ ನೋಡ್ತಾರೆ. ಇವನು ಎಲ್ಲ ಕಡೆ ಹೋಗಿ ಹೇಳ್ತಾ ಇದ್ದಾನೆ. ಸಾವಾಸ ಸಾಕಾಯ್ತು ಮಾರಾಯ. ನಿನ್ನ ಹಾಗೆ ಮೈಸೂರಲ್ಲೇ ಇರ್ಬೇಕಿತ್ತು. ಇಷ್ಟು ಹೊತ್ತಿಗೆ ರೀಡರ್ ಆದ್ರೂ ಆಗ್ತಿದ್ದೆ’ಅಂದ.

`ಸೂಳೆಮಗ ಘಟ್ಟದ ಕೆಳಗಿನ ಮುದುಕ. ಕಾವೇರಿ ಸಂಕ್ರಮಣಕ್ಕೆ ನಡ್ಕೊಂಡು ಬರ್ತಿದ್ದ. ಅನ್ನ ನೀರಿಲ್ದೆ ತಲೆ ತಿರುಗಿ ಬಿದ್ದು ರಸ್ತೆಯಲ್ಲಿ ಸಾಯ್ತಾ ಇದ್ದ. ಆಳು ಇರಲಿ ಅಂತ ಇಟ್ಟುಕೊಂಡ್ರೆ ಈಗ ನನಗೇ ಬಿಸಿನೀರು ಕಾಯಿಸ್ತಾ ಇದ್ದಾನಲ್ಲ ಮಾರಾಯ’

ಮಂದಣ್ಣ ಸುಮ್ಮನೇ ಗೊಣಗಿಕೊಂಡು ಅವನಷ್ಟಕ್ಕೆ ಮಾತನಾಡುತ್ತಿದ್ದ. ನಾನು ಸುಮ್ಮನೇ ಕೇಳಿಸಿಕೊಳ್ಳುತ್ತಿದ್ದೆ.

`ಸಾಕಾಯ್ತು ಮಾರಾಯ.ಒದ್ದು ಮನೆಯಿಂದ ಹೊರಗೆ ಹಾಕಕ್ಕೆ ಹೋದ್ರೆ ಬೀಜ ಅಮುಕಕ್ಕೆ ಬರ್ತಾನೆ ಮಾರಾಯ.ಉಡದ ಹಾಗೆ ಹಿಡೀತಾನೆ. ಸಾಯುವ ಹಾಗೆ ಹಿಡೀತಾನೆ.ಬಿಡೋದಿಲ್ಲ.’

`ದಿನಾ ಇದೇ ಜಗಳ.  ಮದ್ಯಾನ ಇಷ್ಟೊತ್ತಿಗೆ ಶುರುವಾಗ್ತದೆ. ನೋಡ್ಲಿಕ್ಕೆ ಜನಾ ಸೇರ್ತಾರೆ. ಅವರಿಗೆ ತಮಾಷೆ. ಏನು ಮಾಡೋದು ಮಾರಾಯ?’

ಮದ್ಯಾಹ್ನವಾಗುತ್ತಿತ್ತು. ಹಸಿವಾಗುತ್ತಿತ್ತು. ತೋಟದೊಳಗಿಂದ ಕಾಫಿ ಹೂವಿನ ಪರಿಮಳ, ಜೇನು ನೊಣಗಳು ಪರಾಗ ಹೊತ್ತು ಹಾರುವ ಪರಿಮಳ, ಬೇರೆಲ್ಲೂ ಕಾಣಲಾಗದ ಬಣ್ಣಗಳ ಪಾತರಗಿತ್ತಿಗಳು ಮನೆ ಮುಂದಿನ ಚರಂಡಿ ಹೊಂಡದ ನೀರಿಗೆ ಮುತ್ತಿಕ್ಕುತ ಹಾರುತ್ತಿದ್ದವು.

`ಸರಿ ಮಂದಣ್ಣ ಈಗ ಸಮಸ್ಯೆಯೇನು?’ನಾನು ಹಸಿವು ತಡೆಯಲಾರದೆ ಕೇಳಿದೆ.

‘ಇಲ್ಲ ಮಾರಾಯ. ಈಗ ದಾಕ್ಷಾಯಿಣಿಯೂ ಮುದುಕನಿಂದ ಸಾಕಷ್ಟು ಕಲಿತಿದ್ದಾಳೆ. ಜಗಳ ಶುರುವಾದರೆ ಅವಳೂ ಸೇರಿಕೊಳ್ಳುತ್ತಾಳೆ. ಮುದುಕ ನನ್ನನ್ನು ಅಮುಕಿದರೆ ಅವಳು ಮುದುಕನನ್ನು ಅಮುಕುತ್ತಾಳೆ. ಅವಳು ಇಲ್ಲದಿದ್ದರೆ ಮುದುಕ ಇಷ್ಟು ಹೊತ್ತಿಗೆ ನನ್ನ ಸಾಯಿಸ್ತಿದ್ದ ಮಾರಾಯ.’

‘ದೊಡ್ಡ ಸಿನಿಮಾ ಆಗಿಬಿಟ್ಟಿದೆ ಮಾರಾಯಾ…’

ಮಂದಣ್ಣ ಅರ್ಧ ಉತ್ಸಾಹದಲ್ಲಿ ಅರ್ಧ ಖಿನ್ನತೆಯಲ್ಲಿ ವಿವರಿಸುತ್ತಿದ್ದ.

ದೂರದಿಂದ ಕಾಫಿ ಗಿಡಗಳ ನಡುವಿಂದ ದಾಕ್ಷಾಯಿಣಿ ಜೊತೆಗೆ ಮಾತನಾಡುತ್ತಾ ನಗುತ್ತಾ ಸಾವಯವ ಅಜ್ಜ ನಡೆದು ಬರುತ್ತಿದ್ದ.

[ಶುಭಂ-ಮಂಗಳಂ]

[ಅಬ್ದುಲ್ ರಶೀದ್]
 

Advertisements