ಪಕ್ಷಿ ಫೋಟೋಗ್ರಾಫಿಯ ಕುರಿತು

DSC_7233ಹಕ್ಕಿಗಳ ಫೋಟೋ ತೆಗೆಯುವ ಹವ್ಯಾಸವುಳ್ಳ ಗೆಳೆಯರೊಬ್ಬರು ಬೆಳಬೆಳಗೆಯೇ ಕಾವೇರಿ ನದೀತೀರಕ್ಕೆ ಕರೆದುಕೊಂಡು ಹೋಗಿದ್ದರು.ಅವರ ಜೊತೆಗೆ ಹಕ್ಕಿಗಳ ಗುರುತು ಪರಿಚಯ ವಿವರಿಸಬಲ್ಲ ಇನ್ನೊಬ್ಬರು ಹಿರಿಯರೂ ಇದ್ದರು.ಮೈಸೂರಿನಿಂದ ಅಷ್ಟು ದೂರವೇನೂ ಅಲ್ಲದ ನದೀತೀರ ಅದು.ಟಾರಿನ ರೋಡು ಮುಗಿದು, ಹಸುರು ಭತ್ತದ ಗದ್ದೆಗಳು ಕಳೆದು, ಕೊಂಚದೂರ ಕಚ್ಚಾದಾರಿಯಲ್ಲಿ ಸಾಗಿದರೆ ಕಾವಳವನ್ನು ಉಟ್ಟುಕೊಂಡ ಮಾಯಕಾತಿಯಂತೆ ಮುಖಕ್ಕೆ ಮುಸುಕೆಳೆದು ಕಾವೇರಿ ತಣ್ಣಗೆ ಹರಿಯುತ್ತಿತ್ತು.

ಹಿಂದಿನ ದಿನ ಆ ಊರಲ್ಲಿ ಯಾರೋ ತೀರಿಹೋಗಿದ್ದರು.ತೀರಿಹೋದ ಆ ದೇಹವನ್ನು ಸುಟ್ಟ ಜಾಗದಲ್ಲಿ ಆ ದೇಹವನ್ನು ಹೊತ್ತುಕೊಂಡು ತಂದಿದ್ದ ಚಟ್ಟವು ಅನಾಥವಾಗಿ ಬಿದ್ದುಕೊಂಡಿತ್ತು.ಆ ತೀರಿಹೋದಾತನ ಮನೆಯವರು ಒಂದು ಚಕ್ಕಡಿಯ ತುಂಬ ಸಾವಿನ ಮನೆಯ ಪಾತ್ರೆಪಗಡಿ ಸೀರೆ ಬಟ್ಟೆ ಚಾಪೆ ಲುಂಗಿ ಶರಟು ಲಂಗ ಚಡ್ಡಿ ಕಾಲೊರಸು ಕಂಬಳಿ ಎಲ್ಲವನ್ನು ತುಂಬಿಕೊಂಡು ಬಂದು ನದೀ ತೀರದಲ್ಲಿ ತಿಕ್ಕಿ ತಿಕ್ಕಿ ತೊಳೆಯುತ್ತಿದ್ದರು.ತೀರಿಹೋದವನ ಒಂದು ಸಣ್ಣ ಪರಿಮಳವೂ ಅಲ್ಲೆಲ್ಲೂ ಉಳಿದುಬಿಡಬಾರದು ಎಂಬಂತೆ ಉತ್ಸಾಹದಲ್ಲಿ ತೊಳೆಯುತ್ತಿದ್ದ ಹೆಂಗಸರು ಮತ್ತು ಮಕ್ಕಳು.ಬಹುಶಃ ತೀರಿಹೋದ ಜೀವ ಇವರೆಲ್ಲರನ್ನು ತುಂಬ ಕಾಯಿಸಿ ಕಾಯಿಸಿ ಬಹಳ ತಡವಾಗಿ ಸತ್ತು ಹೋಗಿರಬೇಕು.ಹಾಗಾಗಿ ಅವರೆಲ್ಲರ ವರ್ತನೆಯಲ್ಲಿ ಒಂದು ತರಹದ ಬಿಡುಗಡೆಯ ಭಾವವೇ ದುಃಖಕ್ಕಿಂತ ಹೆಚ್ಚಾಗಿ ಕಾಣಿಸುತ್ತಿತ್ತು.ಅವರಿಗಿಂತ ಅನತಿ ದೂರದಲ್ಲಿ ಆ ಊರಿನ ಅಗಸ ತನ್ನ ಬಡವಾದ ಕತ್ತೆಗಳನ್ನು ಮೇಯಿಸಲು ಬಿಟ್ಟು ತಾನು ನದಿಯಲ್ಲಿ ಇಳಿದು ಕಲ್ಲೊಂದಕ್ಕೆ ಬಟ್ಟೆಗಳನ್ನು ಕುಕ್ಕುತ್ತಿದ್ದ.ಆ ಅಗಸನ ಸಣ್ಣ ಪ್ರಾಯದ ಮಗನೋ ಮೊಮ್ಮಗನೋ ಇರಬೇಕು.ಒಗೆದ ಬಟ್ಟೆಗಳನ್ನು ಒಣಗಲು ಹರವಿ ಹಾಕುವ ಮೊದಲು ಅವುಗಳ ಎಲ್ಲ ಜೇಬುಗಳನ್ನು ಚಿಲ್ಲರೆ ಕಾಸಿಗಾಗಿ ಶೋಧಿಸುತ್ತ ಸುಸ್ತಾಗಿದ್ದ.ಆ ಊರಲ್ಲಿ ಚಿಲ್ಲರೆ ಕಾಸನ್ನಾದರೂ ಜೇಬಿನಲ್ಲಿ ಮರೆತುಬಿಡುವ ಹವ್ಯಾಸವುಳ್ಳವರು ಯಾರೂ ಇಲ್ಲವೆಂಬ ವ್ಯಗ್ರತೆ ಆತನ ಮುಖದಲ್ಲಿ ಎದ್ದು ಕಾಣುತ್ತಿತ್ತು.ನದಿಯ ನಡುವಲ್ಲಿ ಎದೆಮಟ್ಟ ನೀರಲ್ಲಿ ಎತ್ತಿನ ಗಾಡಿಯೊಂದನ್ನು ನಿಲ್ಲಿಸಿಕೊಂಡು ಮರಳು ಕಳ್ಳರಿಬ್ಬರು ಬೆಳಬೆಳಗೆಯೇ ಮರಳು ದೋಚುತ್ತಿದ್ದರು.ಇವರು ಮಾಡುತ್ತಿರುವುದು ಕಳ್ಳತನವಾದರೇನು ಒಳ್ಳೆತನವಾದರೇನು ತಾವು ಮಾಡಬೇಕಾದ ಗುಲಾಮಗಿರಿ ಈ ಜನ್ಮದಲ್ಲಿ ಮುಗಿಯಲಾರದು ಎಂದುಕೊಂಡು ಆ ಗಾಡಿಯ ಜೋಡೆತ್ತುಗಳು ಜಲಯೋಗಿಗಳಂತೆ ಕಣ್ಮುಚ್ಚಿ ನಿಂತಿದ್ದವು.ನದಿಯ ದಡದಲ್ಲೂ ಅಲ್ಲಲ್ಲಿ ಸಣ್ಣಸಣ್ಣ ಉಲ್ಕಾಪಾತಗಳಾದಂತೆ ಮರಳು ತೋಡಿದ ಗುಳಿಗಳು, ಆ ಗುಳಿಗಳ ಮರಳು ಕಟವಾಯಿಯಲ್ಲಿ ತೂತ ಕೊರೆದು ಗೂಡು ಮಾಡಿಕೊಂಡಿರುವ ಕೆಲವು ಅಪರೂಪದ ಹಕ್ಕಿಗಳು.

DSC_7241ಕಾವೇರಿ ನದೀತೀರದ ಆ ಬೆಳಗಿನ ಆ ಕಾವಳದಲ್ಲಿ ಆ ಹಕ್ಕಿಗಳೂ, ಈ ಮನುಷ್ಯರೂ, ಆ ಎತ್ತುಗಳೂ,ಈ ಕತ್ತೆಗಳೂ ಮತ್ತು ಫೋಟೋಗ್ರಾಫಿಗೆಂದು ಹೊರಟ ನಾವೂ ಒಂದು ತರಹ ಅಸಹಜವಾಗಿ ಕಾಣಿಸುತ್ತಿದ್ದವು.ಕತ್ತೆಗಳ ಲದ್ದಿ, ಜಾನುವಾರಗಳ ಸಗಣಿ, ಮನುಷ್ಯರ ವಿಸರ್ಜನೆ, ನಡುನಡುವೆ ತೀರಿಹೋದವರನ್ನು ಸುಟ್ಟುಹಾಕಿರುವ ಕುರುಹುಗಳು, ಸುಡದೇ ಉಳಿದುಹೋಗಿರುವ ಕೆಲವು ಮಾನವ ಎಲುಬುಗಳು, ಈ ಎಲ್ಲದರ ನಡುವೆ ನಮ್ಮ ಹಾಗೆಯೇ ವಾರಾಂತ್ಯದ ಹಕ್ಕಿ ಫೋಟೋಗ್ರಾಫಿಗಾಗಿ ದೂರದೂರದ ಮಹಾನಗರಗಳಿಂದ ಐಷಾರಾಮಿ ಕಾರು ಜೀಪುಗಳಲ್ಲಿ ಮಣಭಾರದ ಕ್ಯಾಮರಾಗಳನ್ನೂ, ಫಿರಂಗಿಗಳಂತಹ ಲೆನ್ಸುಗಳನ್ನೂ, ಯುದ್ದಕಾಲದಲ್ಲಿ ಬಳಸುವಂತಹ ಅಡಗುಗೂಡುಗಳನ್ನೂ ಹಿಡಿದುಕೊಂಡು ಬರುತ್ತಿರುವ ಯುವ ಛಾಯಾಗ್ರಾಹಕರ ಸಮೂಹ.ನನಗೆ ಯಾಕೋ ಗಾಭರಿಯಾಗಲು ತೊಡಗಿತು.

‘ಅಲ್ಲ ಮಾರಾಯರೇ, ಮನಷ್ಯರು ಮರಳು ತೆಗೆದು ಉಳಿದಿರುವ ಈ ನೂರುಕುಂಟೆ ಜಾಗದಲ್ಲಿ ಕೆಲವು ದೂರದ ಹಕ್ಕಿಗಳು ಸಂಸಾರ ಮಾಡಿಕೊಂಡಿರಲು ಬಂದರೆ ನಾವು ಫೋಟೋಗ್ರಾಫರುಗಳು ಹೀಗೆ ಸೈನಿಕರ ಹಾಗೆ ಅವುಗಳ ಮುಂದೆ ಕ್ಯಾಮರಾಗಳನ್ನು ಕೋವಿಯಂತೆ ಹಿಡಿಯುವುದು ತರವೇ?’ ಎಂದು ಜಗಳವಾಡಲು ತೊಡಗಿದೆ.

‘ ಇಲ್ಲ ಗುರುವೇ ಈ ಹಳ್ಳಿಗರಿಗೆ ಈ ಹಕ್ಕಿಗಳ ಬಗ್ಗೆ ಒಂದು ಚೂರು ಪ್ರೀತಿಯೂ ಇರಲಿಲ್ಲ.ಬಟ್ಟೆ ಒಗೆಯುತ್ತಿರುವ ಆ ಅಗಸನನ್ನೇ ನೋಡಿ.ಒಗೆದ ಬಟ್ಟೆಗಳನ್ನು ಹಕ್ಕಿ ಗೂಡುಗಳ ಮೇಲೇ ಹರವಿ ಹಾಕುತ್ತಿದ್ದ.ಈತನ ಬಟ್ಟೆಗಳ ಅಡಿಯಲ್ಲಿ ಸಿಲುಕಿಯೇ ಎಷ್ಟೋ ಮೊಟ್ಟೆಗಳು ನಾಶವಾಗುತ್ತಿದ್ದವು.ಅಲ್ಲಿ ನೋಡಿ ಈಗ ನದಿಯಲ್ಲಿ ಇಳಿದು ಮರಳು ದೋಚುತ್ತಿದ್ದಾರಲ್ಲಾ.ಮೊದಲಾಗಿದ್ದರೆ ಇಲ್ಲೇ ಲಾರಿಗಳನ್ನು ತಂದು ಹಕ್ಕಿ ಮರಿಗಳ ಸಮೇತ ಗೋರಿಕೊಂಡು ಹೋಗುತ್ತಿದ್ದರು. ಈಗ ನಾವೆಲ್ಲ ಸಿಟಿಗಳಿಂದ ಹಕ್ಕಿ ಫೋಟೋಗ್ರಾಫಿಗಾಗಿ ಬರುತ್ತಿರುವುದರಿಂದ ಅವರಿಗೂ ಹಕ್ಕಿಗಳ ಬಗ್ಗೆ ಗೌರವ ಬಂದಿದೆ.ಅರಿವೂ ಮೂಡಿದೆ.ಗೂಡುಗಳನ್ನು ಹಾಳೂ ಮಾಡುತ್ತಿಲ್ಲ’ ಎಂದು ಸಬೂಬು ಹೇಳತೊಡಗಿದರು.

DSC_7266ಅದೇನೋ ನನಗೆ ಗೊತ್ತಿಲ್ಲ.ಈ ಹಕ್ಕಿಗಳು ದೂರದೂರದ ದೇಶಗಳಿಂದ ಹಾರಿ ಬಂದಿವೆ.ಯಾಕೆ ಬಂದಿವೆ? ತಮಗೆ ಸಂಸಾರ ನಡೆಸಿ ಮೊಟ್ಟೆ ಇಕ್ಕಿ ಮರಿಗಳನ್ನು ಬೆಳೆಸಿ ಹಾರಿಹೋಗಲು ಇದು ಒಳ್ಳೆಯ ಜಾಗ ಎಂದು ಇಲ್ಲಿಗೆ ಬಂದಿವೆ.ಇಂತಹ ಹೊತ್ತಲ್ಲಿ ಅವುಗಳ ಖಾಸಗೀ ಕ್ಷಣಗಳಲ್ಲಿ ಇದು ನೆಸ್ಟಿಂಗು ಇದು ಮೇಟಿಂಗು ಇದು ಫೀಡಿಂಗು ಎಂದು ಕ್ಯಾಮರಾ ಫಿರಂಗಿಗಳಿಂದ ಸೆರೆಹಿಡಿಯಲು ನಮಗೇನು ಹಕ್ಕಿದೆ. ನಮಗಾದರೋ ಒಂಚೂರೂ ನಾಚಿಕೆ ಮಾನ ಮರ್ಯಾದೆ ಇಲ್ಲ.ಹಕ್ಕಿಗಳಿಗಾದರೂ ಸಂಕೋಚ ನಾಚಿಕೆ ಇರುತ್ತೆ ಅನ್ನುವ ಅರಿವು ನಮಗೆ ಬೇಡವಾ’ ಎಂದು ಬೆಳಬೆಳಗೆಯೇ ಅವರೊಡನೆ ಮೊಂಡುಹಿಡಿಯಲು ತೊಡಗಿದೆ.

‘ನಿಮಗೆ ಇದೆಲ್ಲಾ ಗೊತ್ತಾಗೋದಿಲ್ಲ ಗುರುಗಳೇ, ನೀವು ಹೋಗಿಹೋಗಿ ಕವಿಗಳು.ಎಲ್ಲವನ್ನೂ ಭಾವುಕರಾಗಿ ನೋಡುತ್ತೀರಿ.ಹಕ್ಕಿಗಳು ಮನುಷ್ಯರು ನೋಡ್ತಾರೆ ಅಂತ ಮೇಟಿಂಗು ಮಾಡದೆ ಕುಳಿತಿದ್ದರೆ ಈ ಪ್ರಪಂಚದಲ್ಲಿ ಪಕ್ಷಿ ಸಂಕುಲವೇ ಇರುತ್ತಿರಲಿಲ್ಲ.ಎಲ್ಲ ವಿಷಯದಲ್ಲೂ ಮುಕ್ತಮುಕ್ತ ಎನ್ನುವ ನೀವು ಹಕ್ಕಿಗಳ ವಿಷಯದಲ್ಲಿ ಮಾತ್ರ ಗುಪ್ತಗುಪ್ತ ಅನ್ನುತ್ತಿರುವುದು ಸ್ವಲ್ಪ ತಮಾಷೆಯಾಗಿದೆ’ ಎಂದು ಅವರು ಸಿಗರೇಟೊಂದನ್ನು ಹಚ್ಚಿಕೊಂಡರು.

ಅಷ್ಟು ಹೊತ್ತಿಗೆ ಆ ಪುಟ್ಟ ನದೀತೀರದಲ್ಲಿ ಗಾಭರಿ ಹುಟ್ಟಿಸುವಷ್ಟು ಫೋಟೋಗ್ರಾಫರುಗಳ ಜಂಗುಳಿ ಶುರುವಾಗಿತ್ತು.ಅಪರೂಪದ ಹಕ್ಕಿ ಸಂಸಾರವೊಂದು ಮರಳಿನ ಗುಳಿಯಲ್ಲಿ ಮರಿಹಕ್ಕಿಗೆ ಗುಟುಕು ತಿನ್ನಿಸುತ್ತಿರುವ ವಿಷಯವನ್ನು ಹಳ್ಳಿಗನೊಬ್ಬ ಮೊಬೈಲಿನ ಮೂಲಕ ಬೆಂಗಳೂರಿನ ವೀಕೆಂಡ್ ಹಕ್ಕಿ ಛಾಯಾಚಿತ್ರಗಾರನೊಬ್ಬರಿಗೆ ತಿಳಿಸಿದ್ದ.ಆತ ತನ್ನ ಗೆಳೆಯಗೆಳತಿಯರನ್ನು ಐಷಾರಾಮಿ ಜೀಪೊಂದರಲ್ಲಿ ಹತ್ತಿಸಿಕೊಂಡು ಬಂದಿದ್ದ.ಬಂದ ಅಷ್ಟೂ ಜನರ ಕೈಯಲ್ಲೂ ಅತ್ಯುತ್ತಮ ಕ್ಯಾಮರಾಗಳೂ, ಸರ್ವೋತ್ತಮ ಲೆನ್ಸುಗಳೂ, ಅದಕ್ಕಿಂತಲೂ ದಿವಿನಾದ
ಟ್ರೈಪಾಡುಗಳೂ, ಬೀಮರ್ ಫ್ಲಾಷುಗಳೂ, ಹೈಡುಗಳೂ ಇದ್ದವು.ಬಹುಶ: ಹೊಸತಾಗಿ ಮದುವೆಯಾಗಿದ್ದ ಟೆಕ್ಕಿಯೊಬ್ಬ ತನ್ನ ಕೋಮಲೆ ಹೆಂಡತಿಯನ್ನು ಫೋಟೋಗ್ರಾಫಿ ಕಲಿಸಲು ತಂದಿದ್ದವನು ಅವಳ ಅಷ್ಟೂ ಸರಂಜಾಮುಗಳನ್ನು ಹೊತ್ತು ಸುಸ್ತಾದವನು ಷಿಟ್ ಅಂತ ಆಗಾಗ ಬೈಯುತ್ತಾ ಕತ್ತೆಗಳ ಲದ್ದಿಯ ನಡುವಿಂದ ಅವಳ ಕೈಹಿಡಿದು ನಡೆಸುತ್ತಿದ್ದ.ಇನ್ನೊಬ್ಬಾತ ಬರುವ ದಾರಿಯಲ್ಲಿ ಕುರುಚಲು ಕಾಡಿನಿಂದ ಒಂದಿಷ್ಟು ಕಡ್ಡಿಗಳನ್ನು ಮುರಿದು ತಂದಿದ್ದ.ಬಹಳ ಒಳ್ಳೆಯ ವಿನ್ಯಾಸದ ಆ ಕಡ್ಡಿಗಳನ್ನು ಹಕ್ಕಿ ಗೂಡುಗಳಿರುವ ಬಳಿ ಮರಳಿನಲ್ಲಿ ಹೂತರೆ ಮರಿಗಳಿಗೆ ಗುಟುಕುಹೊತ್ತು ಬರುವ ತಂದೆತಾಯಿ ಹಕ್ಕಿಗಳು ಆ ಕಡ್ಡಿಯಲ್ಲಿ ಕೂತರೆ ಆಗ ಫೋಟೋ ತೆಗೆದರೆ ಅದರ ಫ್ರೇಂ ಸಖತ್ತಾಗಿ ಬರುತ್ತದೆ ಎಂಬುದು ಆತನ ಐಡಿಯಾ ಆಗಿತ್ತು.ಅವನ ಹಾಗೆಯೇ ಹಲವು ಹತ್ತು ಐಡಿಯಾಗಳನ್ನು ಇಟ್ಟುಕೊಂಡು ಬರುತ್ತಿರುವ ಆಧುನಿಕ ನಗರಗಳ ಯುವಛಾಯಾಗ್ರಾಹಕ ಸೇನೆ.ಇನ್ನು ಸ್ವಲ್ಪ ಹೊತ್ತು ಇಲ್ಲಿದ್ದರೆ ಇವರೊಡನೆ ನಾನೊಂದು ಗೆರಿಲ್ಲಾ ಯುದ್ಧವನ್ನೇ ಹೂಡಬೇಕಾಗುತ್ತದೆ ಎಂದು ನನ್ನ ಮಿತ್ರರಿಗೆ ಎಚ್ಚರಿಸಿದೆ.

DSC_7244‘ಇವರದು ಇಷ್ಟೇ ಅಲ್ಲ ಗುರುಗಳೇ, ಕೆಲವೊಮ್ಮೆ ಹಕ್ಕಿಗಳ ಗೂಡಿಗೇ ಇವರು ತಾವು ತಂದ ಕಡ್ಡಿಗಳನ್ನು ಚುಚ್ಚಿ ಫೋಟೋ ತೆಗೆದುಕೊಂಡು ಹೋಗುತ್ತಾರೆ.ಕೆಲವೊಮ್ಮೆ ನೆನಪಿಗೆ ಅಂತ ಆ ಗೂಡುಗಳನ್ನೂ ಕಿತ್ತುಕೊಂಡು ಹೋಗುತ್ತಾರೆ.ಈ ಪಕ್ಷಿ ಫೋಟೋಗ್ರಾಫರುಗಳ ಕಥೆ ಒಂದಲ್ಲ ಎರಡಲ್ಲ. ಅಂತ ಅವರೂ ಹಲವು ಕಥೆಗಳನ್ನು ಹೇಳಿದರು.

Advertisements