The Mysore Post

ಮೈಸೂರು ಪೋಸ್ಟ್ Everything but ಮೈಸೂರು.

ಚೆರ್ರಿ ಹೂವು ಮತ್ತು ಚೈನಾದ ಕತೆಗಾರ್ತಿ

 sc00077b1e-1.jpgಕತೆಯೊಂದನ್ನು ಬರೆಯಲು ಹೋರಾಡುತ್ತಾ ಇದೀಗ ಅದರಿಂದ ತಪ್ಪಿಸಿಕೊಳ್ಳಲು ಈ ಕಾಗದವನ್ನು ಬರೆಯುತ್ತಿರುವೆ. ಕತೆಯನ್ನು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾ ಆನಂದಿಸುತ್ತಾ ಮನಸ್ಸಿನಲ್ಲಿಯೇ ಮುಗಿಸಿ ಕೂರುವುದು ಎಂತಹ ಸುಲಭದ ವಿಷಯ. ಆದರೆ ಅದನ್ನೇ ಕಾಗದದಲ್ಲಿ ತರುವುದು,ಪಾತ್ರಗಳನ್ನು ಜೋಡಿಸುವುದು, ಅವುಗಳ ಬಾಯಿಂದ ಮಾತುಗಳನ್ನು ಹೇಳಿಸುವುದು ಎಂತಹ ರೇಜಿಗೆಯ ಕೆಲಸ. ಈ ಮಹಾ ಮಹಾ ಕತೆಗಾರರೆಲ್ಲಾ ಎಂತಹ ಹಠಮಾರಿ ಮಹಾತ್ವಾಕಾಂಕ್ಷೀ ಮನುಷ್ಯರು ಅಂತ ಯೋಚಿಸಿ ಆಶ್ಚರ್ಯವಾಗುತ್ತಿದೆ.

ನಿನ್ನೆ ಮೊನ್ನೆಯೆಲ್ಲಾ ಇಲ್ಲಿ  ಷಿಲ್ಲಾಂಗಿನಲ್ಲಿ ವಿಪರೀತ ಮಳೆ ಸುರಿಯುತ್ತಿತ್ತು. ಅದಕ್ಕೂ ಮೊದಲು ಈ ಊರ ತುಂಬಾ ಕಾಡು ಚೆರ್ರಿ ಮರಗಳು ನಸುಗೆಂಪು ಹೂ ತುಂಬಿಕೊಂಡು ನಿಂತಿದ್ದವು. ಈ ಊರಿನ ತುಂಬಾ ಬರೇ ಈ ಮರಗಳು ಅನ್ನುವ ಹಾಗೆ. ಅಕಾಲ ಮಳೆ ಸುರಿಯಲು ತೊಡಗಿ ಈ ಮರಗಳೆಲ್ಲಾ ಎರಡು ದಿನ ಲಜ್ಜೆಯಿಂದ ಭಾರವಾಗಿ ನೋವು ತುಂಬಿಕೊಂಡು ನಿಂತಿದ್ದವು. ಇಂದು ಬೆಳಿಗ್ಗೆ ಮಳೆ ನಿಂತು ನೋಡಿದರೆ ಎಲ್ಲಾ ಮರಗಳು ನಸುನಗುತ್ತಿದ್ದವು. ಎಲ್ಲೋ ಅಡಗಿದ್ದ ಬಣ್ಣಬಣ್ಣದ ಪಾತರಗಿತ್ತಿಗಳು ಮತ್ತೆ ಉಲ್ಲಾಸದಿಂದ ಹಾರಲು ಶುರುಮಾಡಿದ್ದವು. ಇನ್ನು ಕೆಲವು ದಿನಗಳಲಿ ಪ್ಲಂ ಮರಗಳು ಆಮೇಲೆ ಪೀಚ್  ಮರಗಳು ಹೀಗೆ ಹೂ ಬಿಡಲು ತೊಡಗುತ್ತದೆ. ಇನ್ನೆಷ್ಟು ಚಿಟ್ಟೆಗಳು ಎಂದು ಆಶೆಯಿಂದ ಕಾಯುತ್ತಿದ್ದೇನೆ.

ಆದರೆ ವರ್ಷಗಳಿಂದ ನಾನು ಒಂದು ಕತೆಯನ್ನೂ ಬರೆದಿಲ್ಲ ಎಂದು ಯೋಚಿಸಿಕೊಂಡು ಮುದುಡಿಹೋಗಿದ್ದೇನೆ. 

ಪರವಾಗಿಲ್ಲ ಮಾರಾಯಾ ? ನೀನು ಬರೆಯದಿದ್ದರೆ   ಹಡಗು ಏನೂ ಮುಳುಗುವುದಿಲ್ಲ ಅಂತ ಯಾರಾದರೂ ಒಳ್ಳೆಯವರು ಎರಡು ಮಾತು ಹೇಳಿದರೆ ಹಗುರಾಗಿ ಬಿಡುತ್ತೇನೆ.

ಸ್ವೀಡನ್ ಗೆ ಹೋಗಿದ್ದಾಗ ಅಲ್ಲಿ ಗುತನ್ಬರ್ಗ್  ಎಂಬಲ್ಲಿ ಒಂದು ಅಂತರರಾಷ್ಟ್ರೀಯ ಪುಸ್ತಕ ಮೇಳದಲ್ಲಿ ನಾನೊಂದು ಕತೆ ಓದಬೇಕಾಗಿತ್ತು.ಕತೆ ಓದುವುದಿಲ್ಲ ಎಂದು ನನ್ನ ಮನಸ್ಸು ಹಠ ಹಡಿಯುತ್ತಿತ್ತು. ಅಲ್ಲಿ ಒಂದು ಪುಸ್ತಕದ ಅಂಗಡಿಯಲ್ಲಿ  ಸ್ಟೂಲ್ ಹಾಕಿಕೊಂಡು ಮೈಕಿನ ಮುಂದೆ ಗಟ್ಟಿಯಾಗಿ ನನ್ನ ಕನ್ನಡದ ಕತೆಯನ್ನು ಒದರಬೇಕಾಗಿತ್ತು. ನನ್ನ ಹಾಗೆ ಬೇರೆ ಬೇರೆ ಅಂಗಡಿಗಳಲ್ಲಿ ಪ್ರಪಂಚದ ಬೇರೆ ಬೇರೆ ಕತೆಗಾರರು, ಕವಿಗಳು, ಅವರವರ ಭಾಷೆಯಲ್ಲಿ ಜೋರಾಗಿ ಹರಿಹಾಯಬೇಕಾಗಿತ್ತು.sc0007c783-1.jpg

 ಒಬ್ಬಳು ಚೈನಾದ ದೇಶಭ್ರಷ್ಟ ಕತೆಗಾರ್ತಿ ಒಂದು ಕತೆ ಹೇಳಿದಳು. ಅವಳು ನೋಡಲು ತುಂಬಾ ಸುಂದರವಾಗಿದ್ದಳು ಮತ್ತು ತುಂಡು ಲಂಗ ಹಾಕಿಕೊಂಡು ಸ್ಟೂಲ್ ನಲ್ಲಿ ಕಾಲಮೇಲೆ ಕಾಲ್ ಹಾಕಿಕೊಂಡು  ಚೆಂದದ ತೊಡೆ ತೋರಿಸಿಕೊಂಡು ಒಂದು ಕತೆ ಹೇಳಿದ್ದಳು. ಅವಳ ತಂದೆ ಮಾವೋನ ಕೆಂಪು ಸೇನೆಯಲ್ಲಿ ದೊಡ್ಡ ಅಧಿಕಾರಿಯಾಗಿದ್ದನಂತೆ. ಇವಳು ಸಣ್ಣ ಹುಡುಗಿ. ಆಗ ಒಂದು ನಾಯಿ ಸಾಕಿದ್ದಳಂತೆ. ಅವಳ ತಂದೆಯೂ ಆ ನಾಯಿಯನ್ನು ತುಂಬಾ ಪ್ರೀತಿಸುತ್ತಿದ್ದನಂತೆ. ಆದರೆ ಒಂದು ದಿನ ಅನಿವಾರ್ಯವಾಗಿ ಅವರು ಆ ನಾಯಿಯನ್ನು ಕೊಂದುಹಾಕಬೇಕಾಯಿತಂತೆ. ಯಾಕೆಂದರೆ ಚೀನಾದಲ್ಲಿ ಆ ಕಾಲದಲ್ಲಿ ಮಾವೋ ಒಬ್ಬನನ್ನು ಬಿಟ್ಟು ಬೇರೆ ಯಾರನ್ನೂ, ಯಾವುದನ್ನೂ ಅತಿಯಾಗಿ ಪ್ರೀತಿಸುವುದು ಅಪರಾಧವಾಗಿತ್ತಂತೆ. ಅವಳು ಕತೆ ಹೇಳುತ್ತಾ ಭಾವುಕಳಾಗಿ ತಾನು ಅಂದಿನಿಂದ ಕತೆ ಬರೆಯಲು ತೊಡಗಿದೆ. ಅಂದಿನಿಂದ ಚೀನಾವನ್ನು ಬಿಟ್ಟು ಹೋಗಬೇಕು ಅಂತ ಯೋಚಿಸಲು ತೊಡಗಿದೆ ಅಂತ ಹೇಳುತ್ತಿದ್ದಳು

. ಅವಳು ಹೇಳುವುದನ್ನು ನೋಡಿದರೆ ಸುಳ್ಳು ಹೇಳುತ್ತಿದ್ದಾಳೆ ಅನ್ನಿಸುತ್ತಿರಲಿಲ್ಲ. ಆಮೇಲೆ ವಿಮರ್ಶಕರು ಅದನ್ನು ವಿಶ್ಲೇಷಣೆ ಮಾಡುತ್ತಿದ್ದಂತೆ ನನಗೆ ಅದು ಸುಳ್ಳಿರಬೇಕು ಅಂತ ಅನ್ನಿಸಲು ತೊಡಗಿತು. ನಾನು ಕತೆ ಓದಲಿಲ್ಲ.ಏಕೆಂದರೆ ಅದು ನನ್ನ ಮೊದಲ ಪ್ರೇಮದ ತೀರಾ ಮುಜುಗರದ ಕಥೆಯಾಗಿತ್ತು.ಮ ತ್ತು ಕನ್ನಡದಲ್ಲಿತ್ತು 

`ಪ್ರಶ್ನೆಗಳನ್ನು ಕೇಳಿ ಉತ್ತರಿಸುತ್ತೇನೆ’ ಅಂತ ಹೇಳಿದೆ.

ನೀನು ಯಾಕೆ ಕತೆ ಬರೆಯುತ್ತೀಯ ಅಂತ ಕೇಳಿದರು. `ಗೊತ್ತಿಲ್ಲ’ ಅಂತ ಹೇಳಿದೆ.

 ಆಮೇಲೆ ಯಾರೂ ಏನೂ ಕೇಳಲಿಲ್ಲ.

 ನಿನ್ನೆ ಇಲ್ಲಿ ಏನಾಯಿತು ಗೊತ್ತಾ ? ಜೋರಾಗಿ ಮಳೆ ಬರುತ್ತಿತ್ತು. ನಮ್ಮ ಮನೆಯ ಹಿಂದಿನಿಂದ ಯಾರೋ ಜೋರಾಗಿ ಅಳುವುದು ಕೇಳಿಸುತ್ತಿತ್ತು. ನನಗೆ ಹೊರಗೆ ಹೋಗಿ ನೋಡಲು ಹೆದರಿಕೆಯಾಗುತ್ತಿತ್ತು. ಬೆಳಿಗ್ಗೆ ನೋಡಿದರೆ ಆ ಮನೆಯಲ್ಲಿ ಎರಡು ಕೊಲೆಯಾಗಿತ್ತು. ರಾತ್ರಿ ದರೋಡೆಕೋರರು ಬಂದಿದ್ದರಂತೆ. ಯಜಮಾನ ದೊಡ್ಡ ಟೀ ಪ್ಲಾಂಟರ್ ಕೋವಿ ಹಿಡಕೊಂಡು ಹೊರಗೆ ಬಂದಿದ್ದ. ಕತ್ತಲಲ್ಲಿ ಅಡಗಿದ್ದ ದರೋಡೆಕೋರರು ಆತನನ್ನು ಕತ್ತರಿಸಿ ಹಾಕಿದ್ದಾರೆ. ಆತನ ಹಿಂದೆಯೇ ಬಂದ ಮುದುಕ ಮಾವನನ್ನು ಹಾಗೆಯೇ ಮಾಡಿದ್ದಾರೆ.

ನಾನು ಇಡೀ ದಿನ ಎಲ್ಲೂ ಹೋಗದೆ ಕಿಟಕಿಯಿಂದ ಹೂ ಬಿಟ್ಟ ಚೆರ್ರಿ ಮರಗಳನ್ನೇ ನೋಡುತ್ತಾ ನಿಂತಿದ್ದೆ. ಈ ಊರು ಏನೂ ಆಗದ ಹಾಗೇ ಇದೆ.

ಊರಲ್ಲಿ ಇದನ್ನೆಲ್ಲಾ ಓದಿ ಕೇಳಿಸಿಕೊಂಡು ನನ್ನ ಉಮ್ಮ `ಅಯ್ಯೋ’ ಅಂತ ನನ್ನ ಬಗ್ಗೆ ಕಳವಳಪಡುತ್ತಾಳೆ.

 ನಾನೂ ಅವಳ ಬಗ್ಗೆ ಒಂದು ಪೇಜ್  ಕತೆ ಬರೆದು ಇನ್ನೇನು ಬರೆಯುವುದು ಎಂದು ನಿಮಗೆ ಬರೆಯುತ್ತಿದ್ದೇನೆ.

ನೋಡಿ ಏನೆಲ್ಲಾ ಕತೆ !

“ಚೆರ್ರಿ ಹೂವು ಮತ್ತು ಚೈನಾದ ಕತೆಗಾರ್ತಿ” ಗೆ 5 ಪ್ರತಿಕ್ರಿಯೆಗಳು

  1. ನಿಮ್ಮ ಲೇಖನಗಳೆಲ್ಲ ಷಿಲ್ಲಾಂಗ್ ಹಿಂದೆ ಸುತ್ತುತ್ತಿದೆಯಲ್ಲಾ?

  2. ಆಹಾ ಏನೆಲ್ಲಾ ಕತೆ..
    ಈ ಚಳಿಯಲ್ಲಿ ಒಂದೊಂದೇ ಕತೆಯೂ ಬೆಚ್ಚಗೆ ಆವರಿಸಿಕೊಳ್ಳುತ್ತದೆ.
    ಕಿಟಕಿಯಿಂದ ಕಾಣಿಸಿದ ಹೂಬಿಟ್ಟ ಚೆರ್ರಿ ಮರಗಳು, ಚಿಟ್ಟೆಸಾಲು ಮತ್ತಷ್ಟು ಚಿಟ್ಟೆಯ ಆಸೆ.. ಕತೆ ಓದಿದ್ದು ಮತ್ತು ಓದದೇ ಇರುವುದೂ ಎಲ್ಲ ಸೊಗಸಾಗಿ ಬರೆದಿದ್ದೀರ.

    ಪ್ರೀತಿಯಿಂದ
    ಸಿಂಧು

  3. ಏನೇ ಬರೆದರೂ ಚೆನ್ನಾಗಿರುವುದು, ಇದೆಂತಹ ಕೈಚಳಕ?!

  4. ಸರ್,
    ಕಥೆ ಹೇಳ್ತಿನಿ ಅನ್ನೊದೇ ಸುಂದರ ಕತೆಯಾಗಿ ಮೂಡಿದೆ ಅಲ್ಲ. ನಿಮ್ ಬ್ಲಾಗ್ ನನಗೆ ಪರಿಚಯವಾಗಿದ್ದು ಇತ್ತೀಚೆಗೆ. ನೋಡಿದ ಮೇಲೆ ಎಷ್ಟು ಮಿಸ್ ಮಾಡ್ಕೊಂಡೆ ಅನಿಸ್ತು. ನಿಮ್ ಕತೆನೂ ಓದಿ, ಇಲ್ಲಿ ನಮಗೂ ಸ್ವಲ್ಪ ಹೇಳ್ತಾ ಇದ್ರೆ…ನಮಗಿನ್ನೂ ಖುಷಿಯಾಗುತ್ತಿತ್ತಾ ಅಲ್ವಾ ಸರ್?

  5. Dear Rashid,

    Nimma website odide, aadre nimma font tumba chikkadu so i cannot read nicely, karana niwu swalpa font size doddadu madabeku, ide nanna vinanti.

ನಿಮ್ಮ ಟಿಪ್ಪಣಿ ಬರೆಯಿರಿ