ತೇಜಸ್ವಿ ನನ್ನ ಮೊಬೈಲ್ ನಂಬರ್ ಮರೆಯದಿರಲಿ ದೇವರೇ….

tejaswi.jpg

[ವ್ಯಂಗ್ಯಚಿತ್ರ ಕೃಪೆ:ಗುಜ್ಜಾರಪ್ಪ]

ಗೊಂದಲಗೇರಿಯ ಕ್ಯಾಂಟೀನ್ ಹೋಟ್ಲಿನಿಂದ ಪಾರ್ಸಲ್ ತಂದ ಬಿರಿಯಾನಿ ತಿಂದು ಮುಗಿಸಿ ಕೈತೊಳೆದು ಮುಖ ನೋಡಿ ಕನ್ನಡಿಯಲ್ಲಿ ಯಾವುದೋ ಅಜ್ಞಾತ ಹಲ್ಲಿಯನ್ನು ಕಂಡ ತೇಜಸ್ವಿ ಅದರ ಜಾಡನ್ನು ಹಿಡಿದು ಈ ದೇಹವನ್ನು ಇಲ್ಲೇ ಬಿಟ್ಟು ಹೊರಟು ಹೋಗಿದ್ದಾರೆ. ಬಹುಶಃ ಮರಳಿಬರುವುದಿಲ್ಲ. ಅವರ ಮಾಯಾಲೋಕದ ಮುಂದಿನ ಅಷ್ಟೂ ಭಾಗಗಳು ಬಹುಶಃ ಅಲ್ಲೇ ಪ್ರಕಟಗೊಂಡು ಮರು ಮುದ್ರಣಗೊಂಡು ಅಲ್ಲೇ ಶಾಲೆಗೆ ಹೋಗುವ ಹುಡುಗರಿಗೆ ಪಾಠ ಪುಸ್ತಕಗಳಾಗಿ ಅಲ್ಲಿನ ವಿಮರ್ಶಕರ ಕಠಿಣ ಹಲ್ಲುಗಳ ನಡುವೆ ಮೀನಿನ ಮುಳ್ಳುಗಳ ಹಾಗೆ ಸಿಲುಕಿಕೊಂಡು ಅದನ್ನು ಅವರು ತೆಗೆಯಲೂ ಆಗದೆ ಜಗಿಯಲೂ ಆಗದೆ ಯಾವ ಪರಿಭಾಷೆಗಳಿಂದ ಅದನ್ನು ನಿರ್ವಹಿಸುವುದು ಎಂಬ ಅರಿವಾಗದೆ ಅವರೆಲ್ಲರೂ ಅಲ್ಲಿ ಒಂದು ದೊಡ್ಡ ಹಾಹಾಕಾರದಲ್ಲಿ ಸಿಲುಕಿಕೊಂಡು ಬಿಡಲಿದ್ದಾರೆ.

ತೇಜಸ್ವಿಯವರು ಹೋಗುವ ಎರಡು ದಿನ ಮೊದಲು ಮಂಗಳವಾರ ಬೆಳಿಗ್ಗೆ ನನ್ನ ಮೊಬೈಲ್ ತೆಗೆದುಕೊಂಡು ನಿನ್ನ ಜೊತೆ ಏನೋ ಮಾತಾಡಬೇಕು ಎಂದು ಮೆಲು ದನಿಯಲ್ಲಿ ಹೇಳಿದ್ದರು. ನಾನು ಆಯ್ತು ಎಂದು ಹೇಳಿ ತೇಜಸ್ವಿಯವರ ಮಡದಿ ಆರ್. ರಾಜೇಶ್ವರಿಯವರ ಜೊತೆ ರೇಡಿಯೋ ಸಂಭಾಷಣೆಯಲ್ಲಿ ತೊಡಗಿದ್ದೆ. ವಿಷಯ : `ನಮ್ಮ ಯಜಮಾನರ ಕೈ ಅಡುಗೆಯ ಬಾಯಿ ರುಚಿ’. ರಾಜೇಶ್ವರಿಯವರು ದೂರವಾಣಿಯಲ್ಲಿ ಮೂಡಿಗೆರೆ ಹ್ಯಾಂಡ್ ಪೋಸ್ಟಿನಿಂದ ತೇಜಸ್ವಿಯವರ ಬಿರಿಯಾನಿ ಮಾಡುವ ತಪಸ್ಸನ್ನು ಬಹಳ ಹೆಮ್ಮಯಿಂದ, ಕೊಂಚ ಸಂಕೋಚದಿಂದ ಹಾಗೂ ಸಾಕಷ್ಟು ನಾಚಿಕೊಂಡು ಮಾತನಾಡುತ್ತಿದ್ದರು. ಅದು ಹೇಗೆ ತೇಜಸ್ವಿಯವರು ತಾವೇ ಮೂಡಿಗೆರೆ ಪೇಟೆಗೆ ಹೋಗಿ ಮಟನ್ ಕೊಂಡುಕೊಂಡು ಬಂದು, ತೊಳೆದು, ಕತ್ತರಿಸಿ ಮೇರಿನೇಟ್ ಮಾಡಿಟ್ಟುಕೊಂಡು ಅಡುಗೆ ಮನೆಯ ಬಾಗಿಲು ಓರೆ ಮಾಡಿಕೊಂಡು ಸ್ವರ್ಗ ಸದೃಶ ಬಿರಿಯಾನಿ ತಯಾರುಮಾಡುತ್ತಾರೆ ಎಂಬುದನ್ನು ವಿವರಿಸುತ್ತಿದ್ದರು.

ಬಿರಿಯಾನಿ ಮಾಡುವ ಮೊದಲು ಅವರು ಹೇಗೆ ಅದಕ್ಕೆ ಬೇಕಾದ ಎಲ್ಲ ಪರಿಕರಗಳನ್ನೂ ಯಂತ್ರೋಪಕರಣಗಳನ್ನೂ ತತ್ವಜ್ಞಾನಿಯಂತೆ ಪರಿಶೀಲಿಸಿ, ಮಿಕ್ಸಿಯ ಮಾಮೂಲು ಸದ್ದಿನಲ್ಲಿ ಏನಾದರೂ ಅಸಹಜತೆ ಕಂಡುಬಂದರೆ ಅದನ್ನು ಬಿಚ್ಚಿ ಸರಿಮಾಡಿಕೊಂಡು, ಯಾರನ್ನೂ ಹತ್ತಿರ ಸೇರಿಸಿಕೊಳ್ಳದೆ ಬಿರಿಯಾನಿ ಯಾಗದಲ್ಲಿ ಮಗ್ನರಾಗುತ್ತಿದ್ದರು ಎಂದು ವಿವರಿಸುತ್ತಿದ್ದರು. ಅದಕ್ಕೆ ಬೇಕಾಗುವ ಬೆಳ್ಳುಳ್ಳಿ, ಅದಕ್ಕೆ ಬೇಕಾಗುವ ಶುಂಠಿ, ಅದಕ್ಕೆ ಬೇಕಾಗುವ ಗರಂ ಮಸಾಲ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅದಕ್ಕೆ ಬೇಕಾಗುವ ಕಾದಂಬರಿಕಾರನ ಮನಸ್ಸು ಇವೆಲ್ಲವನ್ನೂ ಅವರು ಹೇಗೆ ಹೊಂದಿಸಿಕೊಳ್ಳುತ್ತಿದ್ದರು ಮತ್ತುಅವುಗಳು ಇಲ್ಲವಾದಾಗ ಹೇಗೆ ಸಿಡಿಮಿಡಿಗೊಳ್ಳುತ್ತಿದ್ದರು ಎಂಬುದನ್ನು ರಾಜೇಶ್ವರಿಯವರು ದೂರವಾಣಿಯಲ್ಲಿ ಮಲೆಗಳಲ್ಲಿ ಮದುಮಗಳ ಹಾಗೆ ವಿವರಿಸುತ್ತಿದ್ದರು. ಮೈಸೂರು ಆಕಾಶವಾಣಿಯ ಕೇಳುಗರು ಕನ್ನಡನಾಡಿನ ಮೇರುಸದೃಶ ಲೇಖಕನ ಅಡುಗೆಯ ಕೈಚಳಕವನ್ನು ತದೇಕಚಿತ್ತರಾಗಿ ಆಲಿಸುತ್ತಿದ್ದರು. ಬಹುಶಃ ತೇಜಸ್ವಿಯವರು ಹೆಂಡತಿಯ ಮಾತುಗಳನ್ನು ಹಿಂದಿನಿಂದ ಕೇಳಿಸಿಕೊಂಡು ನಗುತಿದ್ದರು.

‘ಏನು ಮೇಡಂ ತೇಜಸ್ವಿಯವರು, ಬಿರಿಯಾನಿ ಕರಿಯನಿಗಿಂತಲೂ ಮಿಗಿಲಾದ ಬಿರಿಯಾನಿ ಮಾಡುತ್ತಾರಾ?’ ಎಂದು ಕೇಳಿದ್ದೆ. ‘ಏನು ಮೇಡಂ ತೇಜಸ್ವಿಯವರ ಬಿರಿಯಾನಿಯಿಂದಾಗಿಯೇ ನೀವು ಅವರ ಪ್ರೇಮದಲ್ಲಿ ಸಿಲುಕಿಕೊಂಡಿರಾ’ ಎಂದು ಚೇಷ್ಟೆ ಮಾಡಿದ್ದೆ. ‘ಏನು ಮೇಡಂ ತೇಜಸ್ವಿಯವರು ಅಡುಗೆ ಮುಗಿಸಿದ ಮೇಲೆ ಅಡುಗೆ ಮನೆ ರಣರಂಗವಾಗಿ ಹೋಗುವುದಾ’ ಎಂದೂ ಕೇಳಿದ್ದೆ. ಎಲ್ಲದಕ್ಕೂ ರಾಜೇಶ್ವರಿಯವರು ಎದೆ ತುಂಬಿ ವಿಶಾಲವಾಗಿ ನಗುತ್ತಾ ವಿವರಿಸುತ್ತಿದ್ದರು. ರೇಡಿಯೋದಲ್ಲಿ ನಮ್ಮ ಮಾತು ಮುಗಿದ ಮೇಲೆ ತೇಜಸ್ವಿಯವರು ಪೋನ್ ತೆಗೆದುಕೊಂಡು ಆಮೇಲೆ ಮಾತಾಡುತ್ತೇನೆ ಅಂದಿದ್ದರು. ಅವರು ಹಾಗೆ ಅಂದದ್ದು ನನಗೆ ಆಕಾಶ ನೋಡಿದಷ್ಟು ಖುಷಿಯಾಗಿ ಸ್ಟುಡಿಯೋದೊಳಗೇ ಹೆಮ್ಮೆಯಿಂದ ಬೀಗಿದ್ದೆ.

ಈಗ ನೋಡಿದರೆ ನನ್ನ ಮನಸ್ಸನ್ನು ಕುರುಕ್ಷೇತ್ರದ ಕೊನೆಯ ದಿನದ ನಂತರದ ಬೆಳಗಿನ ರಣರಂಗವನ್ನಾಗಿ ಮಾಡಿ ಅವರು ಅಂತರ್ಜಾಲದ ಯಾವುದೋ ತತ್ರಾಂಶವನ್ನು ಹುಡುಕಿಕೊಂಡು ಕೈತೊಳೆದು, ಮುಖನೋಡಿ, ಕನ್ನಡಿಯೊಳಗೆ ಹೊರಟು ಹೋಗಿದ್ದಾರೆ. ಬಹುಶಃ ತೇಜಸ್ವಿಯಂತಹ ದೈತ್ಯನನ್ನು ಸಾಕುವುದು ಕನ್ನಡ ಸಾರಸ್ವತ ಲೋಕಕ್ಕೆ ಆಗುತ್ತಿಲ್ಲ. ಕೃಷ್ಣೇಗೌಡನ ಆನೆಯನ್ನೇ ಸರಿಯಾಗಿ ಅರ್ಥಮಾಡಿಕೊಳ್ಳಲಾಗದೆ, ಬಹಳಷ್ಟು ಅನರ್ಥಮಾಡಿಕೊಂಡ ಹುಲು ಓದುಗರಾದ ನಾವು. ತೇಜಸ್ವಿಯಂತಹ ಅಲೌಕಿಕ ಹಕ್ಕಿಯನ್ನು ಏನೇನೆಂದೆಲ್ಲಾ ಕರೆದು ಅನರ್ಥಮಾಡಿಕೊಂಡಿರಬಹುದು. ಅದಕ್ಕಾಗಿ ಅವರು ಯಾರದ್ದೇನೂ ಹರಿಯಕ್ಕಿಲ್ಲ ಯಾರದೇನೂ ಮುರಿಯಕ್ಕಿಲ್ಲ ಎಂದು ಕ್ಯಾರೇ ಮಾಡದೇ ಹೊರಟು ಹೋಗಿದ್ದಾರೆ.

ನಾನೂ ಸುಮಾರು 25 ವರ್ಷಗಳ ಹಿಂದೆ ಬೇರೆಯದೇ ಒಬ್ಬರನ್ನು ತೇಜಸ್ವಿ ಎಂದು ಅನರ್ಥ ಮಾಡಿಕೊಂಡು ಅದರಿಂದಾದ ಅನಾಹುತದಿಂದಾಗಿ ಕನ್ನಡದ ಬರಹಗಾರರನಾಗಿ ಬಿಟ್ಟಿದ್ದೇನೆ. ಆ ದುರಂತದ ಪರಿಣಾಮವನ್ನು ಈಗಲೂ ತುಂಬ ಮಂದಿ ಅನುಭವಿಸುತ್ತಿದ್ದಾರೆ.

ಅದು ಬಹುಶಃ 1982 ರಲ್ಲಿ ಇರಬೇಕು. ಆಗ ನಾವೆಲ್ಲರೂ ಕೊಡಗಿನ ಸಂಪಾಜೆ ಶಾಲೆಯಲ್ಲಿ ಓದುತ್ತಿದ್ದೆವು. ಆಗ ಮಡಿಕೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಶಂ. ಬಾ. ಜೋಷಿ ಅಧ್ಯಕ್ಷರಾಗಿದ್ದರು. ಅದಕ್ಕೆ ಪರ್ಯಾಯವಾಗಿ ಬಂಡಾಯ ಸಾಹಿತ್ಯ ಸಮ್ಮೇಳನವೂ ನಡೆದಿತ್ತು. ಆದರೆ ಅಲ್ಲಿ ಊಟದ ಟಿಕೆಟ್ ಇಲ್ಲದಿರುವುದರಿಂದ ನಾವು ಊಟದ ಟಿಕೆಟ್ಟು ಹುಡುಕಿಕೊಂಡು ಭಾಷಣಗಳ ನಡುವೆ ದಾರಿಮಾಡಿಕೊಂಡು ಕ.ಸಾ.ಪ.ಸಭಾಂಗಣದೊಳಕ್ಕೆ ತಿರುಗಾಡಿಕೊಂಡಿದ್ದೆವು. ಯಾರೋ ಒಬ್ಬರು ವಯಸ್ಸಾದ ಸಾಹಿತಿಗಳೊಬ್ಬರು ಊಟದ ಟಿಕೆಟು ಕೊಡಿಸುತ್ತೇವೆಂದು ನಮ್ಮನ್ನು ಅವರ ಕೋಣೆಗೆ ಕರೆದುಕೊಂಡು ಹೋಗಿ ನಮ್ಮೊಡನೆ ವಿಚಿತ್ರವಾಗಿ ವರ್ತಿಸಿದ್ದರು. ಅವರು ನೋಡಲು ಆಕರ್ಷಕವಾಗಿಯೂ ಇರಲಿಲ್ಲ.

ನಾವು ಹೆದರಿಕೊಂಡು ಅಲ್ಲಿಂದ ಪರಾರಿಯಾಗಿ ಕೆಂಪು ಬಸ್ಸೊಂದನ್ನು ಹತ್ತಿ ಮಡಿಕೇರಿಯಿಂದ ಬಸ್ಸಿನಲ್ಲಿ ನೇತಾಡುತ್ತಾ ಸಂಪಾಜೆ ಘಾಟಿಯನ್ನು ಇಳಿಯುತ್ತಿದ್ದೆವು. ಸಾಹಿತ್ಯ ಸಮ್ಮೇಳನದಲ್ಲಿ ತೇಜಸ್ವಿಯವರು ಇರುತ್ತಾರಾ ಎಂದು ಹುಡುಕಿ ನಾನು ನಿರಾಶೆಗೊಂಡಿದ್ದೆ. ತೇಜಸ್ವಿಯವರ ನಿಗೂಢ ಮನುಷ್ಯರು ಕಾದಂಬರಿಯನ್ನು ಓದಿ ನಾನು ಆಗಲೇ ಸಾಕಷ್ಟು ಹೆದರಿಕೆಗಳನ್ನೂ ಅನುಭವಿಸಿದ್ದೆ.

ಸಾಹಿತ್ಯ ಸಮ್ಮೇಳನದಲ್ಲಿ ತೇಜಸ್ವಿಯವರನ್ನು ಕಾಣದ ನನಗೆ ಬಸ್ಸಿನ ಮುಂದಿನ ಸೀಟಿನಲ್ಲಿ ಅಕಸ್ಮಾತ್ತಾಗಿ ತೇಜಸ್ವಿಯವರು ಮರೀಚಿಕೆಯಂತೆ ಕಾಣಿಸಿಕೊಂಡಿದ್ದರು. ಅವರು ಡ್ರೈವರನ ಹಿಂದೆ, ಮುಂದಿನ ಸೀಟಿನ ಮೂಲೆಯಲ್ಲಿ ಕಾಲಮೇಲೆ ಕಾಲು ಹಾಕಿಕೊಂಡು ಯಾವುದೋ ದಪ್ಪದ ಪುಸ್ತಕವನ್ನು ಓದುತ್ತಿದ್ದರು. ನೋಡಲು ಅವರು ತೇಜಸ್ವಿಯವರ ಹಾಗೇ ಕಾಣಿಸುತ್ತಿದ್ದರು. ಹೆದರಿಕೊಂಡೇ `ಸರ್ ನೀವು ತೇಜಸ್ವಿಯವರಾ’ ಎಂದು ಕೇಳಿದ್ದೆ. ‘ಇಲ್ಲ ಏನು ಬೇಕಾಗಿತ್ತು’ ಎಂದು ಕೊಂಚ ಸರಿದು ಕೂರಲು ಜಾಗಕೊಟ್ಟಿದ್ದರು. `ನೀವು ತೇಜಸ್ವಿ ಅಲ್ಲವಾ’ ಎಂದು ಮುಖವನ್ನು ನಿರಾಶೆ ಮಾಡಿಕೊಂಡಿದ್ದೆ `ಅಲ್ಲ ಮಗೂ ಆದರೂ ನಿನಗೆ ಏನು ಬೇಕಾಗಿತ್ತು’ ಎಂದು ಕೇಳಿದ್ದರು. ‘ಏನೂ ಇಲ್ಲ ನಾನು ಕನ್ನಡದಲ್ಲಿ ಕವಿತೆ ಬರೀತಾ ಇದೀನಿ ಮುಂದೆ ಏನು ಮಾಡಬೇಕು ಗೊತ್ತಾಗ್ತಾ ಇಲ್ಲ’ ಎಂದೆಲ್ಲಾ ತೊದಲಿದ್ದೆ.

ಆ ಮಹಾನುಭಾವರು ನಮ್ಮ ಬಸ್ಸು ಸಂಪಾಜೆ ಗೇಟು ತಲುಪುವವರೆಗೆ ಸಾಹಿತ್ಯದ ಅನಂತ ಸಾಧ್ಯತೆಗಳನ್ನು ವಿವರಿಸಿದ್ದರು. ಕನ್ನಡದಲ್ಲಿ ಕವಿತೆ ಬರೆಯಲು ಏನೆಲ್ಲಾ ಮಾಡಬೇಕೆಂದೂ ವಯಸ್ಸಾದ ತಂದೆ ತಾಯಿಯರನ್ನೂ ತಮ್ಮ ತಂಗಿಯಂದಿರನ್ನು ಸಾಕಬೇಕಾದರೆ ಏನೆಲ್ಲಾ ಮಾಡಬೇಕೆಂದೂ ಎರಡೂ ಬೇಕಾದರೆ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದಬೇಕೆಂದೂ ಬೆನ್ನುತಟ್ಟಿ ಬಸ್ಸು ಇಳಿಸಿದ್ದರು. ನಾನು ತೇಜಸ್ವಿ ಅಲ್ಲ ಅದಕ್ಕಾಗಿ ಸಾರಿ ಎಂದಿದ್ದರು.
ಆ ಮಹಾನುಭಾವರ ಹೆಸರು ಪ್ರೊಪೆಸರ್ ಪಂಡಿತಾರಾದ್ಯ ಎಂದು. ಅವರು ಈಗ ಮೈಸೂರಿನಲ್ಲಿದ್ದಾರೆ. ಅವರನ್ನು ಕಂಡಾಗಲೆಲ್ಲ ನಾನು ಮನಸ್ಸಿನಲ್ಲೇ ತೇಜಸ್ವಿಯವರನ್ನೂ ನೆನೆಯುತ್ತೇನೆ. ತೇಜಸ್ವಿಯವರ ದೆಸೆಯಿಂದಾಗಿ ನನ್ನ ಬದುಕಿನಲ್ಲಿ ಏನೇನೆಲ್ಲಾ ಆಯಿತು ಎಂದು ಕೊಳ್ಳುತ್ತೇನೆ.ನನ್ನ ಬಾಪಾನಂತೆಯೇ ಕಾಪಿ ತೋಟದ ರೈಟರಾಗಬೇಕಾಗಿದ್ದ ನಾನು ತೇಜಸ್ವಿಯವರ ದೆಸೆಯಿಂದಾಗಿ ಕನ್ನಡದ ರೈಟರಾಗಿ ಅಸಹಾಯಕತೆಯಿಂದ ಜೋಲು ಮುಖ ಹಾಕಿಕೊಂಡು ನಡೆಯುತ್ತಿರುವುದನ್ನು ನೆನೆದು ಒಂಥರಾ ಆನಂದವಾಗುತ್ತಿದೆ.

ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ತೇಜಸ್ವಿಯವರ ಸಾಹಿತ್ಯದ ಕುರಿತು ವಿಚಾರ ಸಂಕಿರಣವೊಂದು ನಡೆಯುತ್ತಿತ್ತು. ಪ್ರಾಂಜಲರಾದ ವಿದ್ವಾಂಸರುಗಳೂ ವಿಮರ್ಶಕರುಗಳೂ ಅಲ್ಲಿದ್ದರು. ನಾನೂ ಮಾತಾಡಬೇಕಿತ್ತು ತೇಜಸ್ವಿಯವರ ಮಾಯಾಲೋಕದ ಕುರಿತು ಕೆಲವು ಮೂಲಭೂತ ತಕರಾರುಗಳನ್ನು ನಾನು ಎತ್ತಬೇಕಿತ್ತು. ಹಾಗೇ ನೋಡಿದರೆ ಮಾಯಾಲೋಕದ ಕುರಿತು ಯಾವುದೇ ಮೂಲವಾಗಲೀ ಆದ ಭೂತವಾಗಲೀ ಆದ ತಕರಾರುಗಳು ನನಗಿರಲಿಲ್ಲ. ಮನಸ್ಸಿನ ತುಂಬ ಬಜ್ಜಿ ಮಾಡಿ ಮಾರುವ ಬಜ್ಜಿ ಪಾತಿಮಾ ತುಂಬಿಕೊಂಡಿದ್ದಳು. ತೇಜಸ್ವಿ ಅಂತ ನಾನು ಪಂಡಿತಾರಾದ್ಯರನ್ನು ತಪ್ಪು ತಿಳಿಕೊಂಡ ದೆಸೆಯಿಂದಾಗಿ ಕಾಪಿತೋಟದ ರೈಟರಾಗಬೇಕಾಗಿದ್ದ ನಾನು ಕನ್ನಡದ ರೈಟರಾದ ಕುಚೇಷ್ಟೆಯನ್ನು ಯೋಚಿಸಿ ನಗುಬರುತ್ತಿತ್ತು. ತೋಟದ ಸಾಹುಕಾರರೇನಾದರು ಸಿಟ್ಟುಮಾಡಿಕೊಂಡು ನನ್ನನ್ನು ಹೊರಹಾಕಿದ್ದರೆ ನಾನೂ ಸುಂಟಿಕೊಪ್ಪ ಸಂತೆಯಲ್ಲಿ ಬಜ್ಜಿ ಮಾರಿಕೊಂಡಿರುತ್ತಿದ್ದೆ ಎಂದು ಖುಷಿಯಾಗುತ್ತಿತ್ತು.

‘ಅಲ್ಲ ಮಹಾರಾಯರೇ, ತೇಜಸ್ವಿಯವರ ಮೂಲ ದ್ರವ್ಯವೇ ಒಂದು ಪಕ್ಷಿ ಇನ್ನೊಂದು ಪಕ್ಷಿಯನ್ನು ಅನರ್ಥ ಮಾಡಿಕೊಳ್ಳುವುದರಿಂದ ಆಗುವ ಅನಾಹುತಗಳ ಕುರಿತು ಇದೆ. ಬಿರಿಯಾನಿ ಕರಿಯನನ್ನು ಹಾವುಗೊಲ್ಲರ ನಾಗನೂ ಕರ್ವಾಲೋ ಸಾಹೇಬರನ್ನು ಊರವರೂ, ಭಿಕ್ಷುಕನನ್ನು ಹುಚ್ಚನೂ, ಓತಿಯನ್ನು ಕಿವಿ ಎಂಬ ನಾಯಿಯೂ, ಪ್ಯಾರನನ್ನು ಲೇಖಕರೂ – ಹೀಗೆ ಪ್ರತಿಯೊಬ್ಬರನ್ನೂ ಇನ್ನೊಬ್ಬರು ಅನರ್ಥಮಾಡಿಕೊಂಡು ಆಗುವ ಅನಾಹುತಗಳನ್ನು ತೇಜಸ್ವಿಯವರು ನಮಗೆ ಹೇಳಿದ್ದಾರೆ. ನಾವಾದರೋ ಅವರನ್ನು ಎಲ್ಲರೂ ಸೇರಿ ಅನಾಮತ್ತಾಗಿ ಅನರ್ಥಮಾಡಿಕೊಂಡು ರಾದ್ದಾಂತ ಮಾಡುತ್ತಿದ್ದೇವೆ’ ಎಂದು ಮಾತುಮುಗಿಸಿದ್ದೆ.

ಈಗ ನೋಡಿದರೆ ತೇಜಸ್ವಿಯವರು ನನ್ನ ಮೊಬೈಲ್ ನಂಬರು ಕೇಳಿ ಪಡೆದು ಏನನ್ನೂ ಹೇಳದೆ ಹೊರಟು ಹೋಗಿದ್ದಾರೆ. ಹೀಗೆಲ್ಲಾ ಬರೆದದ್ದಕ್ಕೆ ನನ್ನನ್ನು ಅವರು ಫೋನಿನಲ್ಲಿ ತರಾಟೆಗೆ ತೆಗೆದುಕೊಳ್ಳಲಿ ಎಂದು ಕಾಯುತ್ತಿದ್ದೇನೆ. ನನ್ನ ದೂರವಾಣಿ ಸಂಖ್ಯೆ ಅವರಿಗೆ ಮರೆತು ಹೋಗದಿರಲಿ ದೇವರೇ, ದೇವರಾದರೂ ಅದನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಸಾಕು ದೇವರೇ ಎಂದು ಪ್ರಾರ್ಥಿಸುತ್ತಿದ್ದೇನೆ.

“ತೇಜಸ್ವಿ ನನ್ನ ಮೊಬೈಲ್ ನಂಬರ್ ಮರೆಯದಿರಲಿ ದೇವರೇ….” ಗೆ 11 ಪ್ರತಿಕ್ರಿಯೆಗಳು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: