ಸಿಂಹಾಸನವೂ ಹಣೆಯ ಬರೆಹವೂ

buttikorava-4a.jpgನಿನ್ನೆಯ ಇರುಳು ಭರತನ ಹುಣ್ಣಿಮೆ. ಮಾಂತ್ರಿಕ ಕವಿ ಬೇಂದ್ರೆ ಹುಟ್ಟಿದ ದಿನ ಕಳೆದು ಮೂರನೆಯ ರಾತ್ರಿ. ಹದುಳದಲ್ಲಿ ಮೂಡಿದ ಹುಣ್ಣಿಮೆ ಮುಖಕ್ಕೆ ರಾಚುತ್ತಿತ್ತು.

`ಬರೀ ಕಷ್ಟ ಹೇಳಬೇಡಿ ಕಥೆ ಹೇಳಿ, ಸುಖ ಹೇಳಿ, ತಮಾಷೆ ಹೇಳಿ. ನಾನೂ ನಿಮ್ಮ ಹಾಗೆ ಸಾರಾಯಿ ಕುಡಿದಿರುವೆನೆಂದು ಅಂದುಕೊಂಡು ಮಾತನಾಡಿ. ಈ ಲೋಕ ಹುಟ್ಟುವ ಮೊದಲೇ ಹುಟ್ಟಿದಂತಿರುವ ನಿಮ್ಮ ಬುಟ್ಟಿಕೊರಚ ಕುಲ ಹೇಗೆ ಉಂಟಾಯಿತು ಎಂದು ತಿಳಿಸಿ’ ಎಂದು ನಾನು ಅವರ ಬಳಿ ಗೋಗರೆಯುತ್ತಿದ್ದೆ. ಅವರು ಹೇಳ ದಿದ್ದರೂ, ಅಳದಿದ್ದರೂ ಅವರ ಸಂಕಟ ಆ ಬೆಳದಿಂಗಳಿನಂತೆ ನಿಚ್ಚಳ ವಾಗಿತ್ತು. ಮೈಸೂರಿನ ಸಂಸ್ಕೃತಿ, ಸಂಗೀತ, ಸುಖ, ಸಮೃದ್ಧಿ, ಇತಿಹಾ ಎಲ್ಲವನ್ನೂ ಒಟ್ಟಿಗೆ ಸೇರಿಸಿ ತೂಕಕ್ಕೆ ಹಾಕಿದರೂ ಅದು ಏನೇನೂ ಅಲ್ಲ ವೆಂಬಂತೆ ಆ ಬುಟ್ಟಿಕೊರಚರ ಹಸಿವು, ಬೇಸರ, ಏಕಾಂಗಿತನ, ಅಸಹಾಯ ಕತೆ ಕೆನ್ನೆಗೆ ಹೊಡೆದಷ್ಟು ಸ್ಪಷ್ಟವಾಗಿ ಭಾಸವಾಗುತ್ತಿತ್ತು.

ಮೈಸೂರಿನ ಪ್ರಪಾತದಂತಿರುವ ಇಳಿಜಾರೊಂದರಲ್ಲಿ ಏಕಲವ್ಯ ನಗರ ಎಂಬ ಅದ್ಭುತ ಕೊಳಗೇರಿಯೊಂದಿದೆ. ಈ ಕೊಳಗೇರಿಯಲ್ಲಿರುವ ಮುನ್ನೂರು ನಾನೂರು ಗುಡಿಸಲುಗಳಲ್ಲಿ ಶಿಳ್ಳೆ ಕ್ಯಾತರು, ದೊಂಬಿದಾಸರು, ಹಕ್ಕಿ ಪಿಕ್ಕಿಗಳು, ಗೊಂಬೆರಾಮರು, ಇತ್ಯಾದಿ ಕಲಾವಿದರಿದ್ದಾರೆ. ಈ ಗುಡಿಸಲುಗಳನ್ನು ಗುಡಿಸಲು ಎಂದು ಹೇಳುವುದು ತಪ್ಪಾಗುತ್ತದೆ. ಏಕೆಂದರೆ ಈ ತಡಿಕೆಯಂತಹ ಕೋಳಿ ಗೂಡುಗಳೊಳಗೆ ನಾಟಕದ ಸಿಂಹಾಸನಗಳು, ಕಿರೀಟಗಳು, ಗದೆಗಳು, ಹಾರ್ಮೋನಿಯಂ, ಏಕತಾರಿಗಳು ಮತ್ತು ಕಲಾವಿದ ರಾದ ಮನುಷ್ಯರು ಅವರ ಮಕ್ಕಳು, ಬೆಕ್ಕುಗಳು ಮತ್ತು ನಾಯಿಗಳು ಉಸಿರಾಡಿ ಕೊಂಡಿರುತ್ತವೆ. ತಡಿಕೆಗಳ ಹೊರಗೆ ಪಟ್ಟದ ಕುದುರೆಗಳು, ಸಾರೋಟು ಗಾಡಿಗಳು ಮತ್ತು ಬಯಲಲ್ಲಿ ಕೂತವರ ಹಿಂದೆ ಬೀಡಾಡಿ ಹಂದಿಗಳು ಓಡಾಡಿಕೊಂಡಿರುತ್ತವೆ.

ಇದೊಂದು ತರಹದ ನಿತ್ಯನರಕ ರಂಗಭೂಮಿ. ಹಸಿವು, ಕಷ್ಟ, ಕತೆ, ನಾಟಕ, ಹಾಡು, ನೃತ್ಯ, ರೋಗ, ರುಜಿನ, ಸಾವು, ವೇದಾಂತ ಇತ್ಯಾದಿ ಮನಸ್ಸನ್ನು ಉಲ್ಲಾಸಗೊಳಿಸುವ ದರಿದ್ರ ಮನೋರಂಜನೆಗಳು ಬೇಕೆನಿಸಿದಾಗಲೆಲ್ಲ ನಾವು- ನೀವು ಇಲ್ಲಿಗೆ ಬಂದು ಹುಣ್ಣಿಮೆಯ ಬೆಳಕಿನಲ್ಲಿ ಒಂದಿಷ್ಟು ಮನವನ್ನು ಮುದ ಗೊಳಿಸಿ ಹೋಗಬಹುದಾಗಿದೆ. ನನಗೆ ಯಾಕೋ ನಿನ್ನೆ ಇರುಳು ನನ್ನ ಮನುಷ್ಯ ಜನ್ಮದ ಕುರಿತೇ ಅಸಹ್ಯವಾಗಲು ತೊಡಗಿತ್ತು.

ಹಾಗೆ ನೋಡಿದರೆ ರಾಮಾಯಣ, ಮಹಾಭಾರತ, ಪುರಾಣ, ಇತಿಹಾಸ, ಎಚ್ಚಮ ನಾಯಕ, ಹೇಮರೆಡ್ಡಿ ಮಲ್ಲಮ್ಮ, ಟಿಪ್ಪೂಸುಲ್ತಾನ, ಈ ಎಲ್ಲದರ ಬಗ್ಗೆ ನಾಟಕಗಳನ್ನೂ ಲಾವಣಿಗಳನ್ನೂ ಗೊಂಬೆಯಾಟಗಳನ್ನೂ ಆಡಿ ಆಡಿ ಸುಸ್ತಾಗಿ ಹೋಗಿದ್ದ ಈ ದೊಂಬಿದಾಸ ಶಿಳ್ಳೆಕ್ಯಾತ ಮತ್ತಿತರ ಅಭಿಜಾತ ಕಲಾವಿದರ ಗುಡಿಸಲುಗಳೊಳಗೆ ನಿನ್ನೆ ಭರತಹುಣ್ಣಿಮೆಯ ಇರುಳು ಹಸಿವು ಮತ್ತು ಚಂದಿರನ ಬೆಳಕು ಏಕಪ್ರಕಾರವಾಗಿ ತುಂಬಿಕೊಂಡಿತ್ತು. ಜಾನಪದ ಅಕಾಡೆಮಿಯ ಪ್ರಶಸಿ್ತ ಪಡೆದು ಅದಕ್ಕಾಗಿ ಮಂತ್ರಿಗಳಿಂದಲೂ, ಗಣ್ಯರಿಂದಲೂ ಅಭಿನಂದನಾ ಪತ್ರ ಗಳನ್ನೂ ಪಡೆದು ಅವುಗಳನ್ನು ಗುಡಿಸಲೊಳಗೆ ಗಾಳಿಗೆ ಹಾರಿಹೋಗದಂತೆ ಜೋಪಾನವಾಗಿಡಲು ಪ್ರಯತ್ನಿಸುತ್ತಿದ್ದ ಮುನಿಯಮ್ಮ ಎಂಬ ಮುದುಕಿ `ಸಾರ್‌ ನನಗೆ ಒಂದೇ ಒಂದು ಆಸೆ’ ಅಂದಿದ್ದಳು. ಏನು? ಎಂದು ಕೇಳಿದ್ದೆ. `ಸಾರ್‌ ವಾರಕ್ಕೊಮ್ಮೆ ಹೊಟ್ಟೆಗೆ ಹಸಿವು ಆಗುವಂತಿದ್ದರೆ ಎಷ್ಟು ಚೆನ್ನಾಗಿತ್ತು ಸಾರ್‌, ಅದೇ ನನ್ನ ಆಸೆ ಸಾರ್‌, ದಿನಕ್ಕೊಂದು ಸಲ ಹಸಿವೆಯಾಗುವ ಹಾಗೆ ಮಾಡಿ ಆ ಭಗವಂತ ಏನು ಅನ್ಯಾಯ ಮಾಡಿಬಿಟ್ಟ ಸಾರ್‌’ ಎಂದು ನಗಾಡಿದ್ದಳು.

ದಿನಕ್ಕೆ ನಾಲ್ಕು ಬಾರಿ ಹಸಿವಾಗುವ ನನ್ನ ಕಷ್ಟ ಈಕೆಗಿಂತ ಇನ್ನೂ ಗಹನವಾ ಗಿದೆ ಎಂದು ನನಗೆ ನಗುಬಂದು ಅವಳ ಗುಡಿಸಲಿನಿಂದ ತೆವಳುತ್ತಾ ಹೊರ ಬಂದು ಏಕಲವ್ಯ ನಗರದ ವಾಯವ್ಯ ಮೂಲೆಯಲ್ಲಿರುವ ನನ್ನ ಪ್ರೀತಿ ಪಾತ್ರ ರಾದ ಬುಟ್ಟಿಕೊರಚರ ಗುಡಿಸಲುಗಳ ಬಳಿ ಬಂದಿದ್ದೆ.

ಈ ಬುಟ್ಟಿಕೊರಚರು ಹೆಚ್ಚು ಕಡಿಮೆ ನನ್ನ ಹಾಗೆಯೇ. ಇವರಿಗೂ ವಿಪರೀತ ಹಸಿವು. ಜೊತೆಗೆ ಇವರಿಗೂ ನಾಟಕ, ಇತಿಹಾಸ, ಪುರಾಣ, ನೆನಪು ಇತ್ಯಾದಿ ಗಳು ಕೈಕೊಟ್ಟು ಎಷ್ಟೋ ಶತಮಾನಗಳಾಗಿವೆ. ಇವರಿಗೆ ಈಚಲು ಕಡ್ಡಿಯಿಂದ ಬುಟ್ಟಿ ಹೆಣೆಯುವುದು ಬಿಟ್ಟರೆ ಬೇರೆ ಯಾವ ಕಲೆಯೂ ಗೊತ್ತಿಲ್ಲ. ಸುಳ್ಳು, ಮೋಸ, ತಟವಟ ಗೊತ್ತಿಲ್ಲ ಅನ್ನುತ್ತಾರೆ. ಅವರಿಗೆ ಬೇಕಿರುವುದು ಬಂಡಿಗಟ್ಟಲೆ ಈಚಲು ಕಡ್ಡಿ ಮತ್ತು ಅದರಿಂದ ಹೆಣೆದ ಬುಟ್ಟಿಗಳನ್ನು ಕೊಳ್ಳುವ ಮಂದಿ. `ಸರ್‌ ನಾವು ಬಡವರು ಸರ್‌ ಸುಳ್ಳಲ್ಲ ಸಾರ್‌. ಈಚಲು ಕಡ್ಡಿ ಕೊಡಿಸಿ ಸಾರ್‌. ಸಾಲ ಬೇಡಿ ಸಾರ್‌ ಬುಟ್ಟಿ ತಗೊಂಡು ಹಣ ಕೊಡಿ ಸಾರ್‌’ ಎಂದು ಅಂಗಲಾಚು ತ್ತಿದ್ದರು. ಆ ಕತ್ತಲಲ್ಲಿ ಆ ಹುಣ್ಣಿಮೆಯ ಬೆಳಕಿನಲ್ಲೂ ಅವರ ಮುಖಗಳು ಕಾಣಿಸದೆ ಅವರು ಚಿಮಣಿ ದೀಪವೊಂದನ್ನು ತಂದು ನಡುವಲ್ಲಿಟ್ಟು ಮಾತನಾಡು ತ್ತಿದ್ದರು. ಆ ದೀಪ ಈ ಚಂದಿರನಿಗೆ ತಾನೇನು ಕಮ್ಮಿ ಎನ್ನುವಂತೆ ಲಾಸ್ಯ ವಾಡುತ್ತಾ ಉರಿಯುತ್ತಿತ್ತು.buttikorava-1a.jpg

ಕಟ್ಟನರಸಯ್ಯ, ಅವನ ಮಗ ಕಟ್ಟ ಪೋಲಯ್ಯ, ಚಿಕ್ಕಮ್ಮ ಡೊಗ್ಗರ ನಾಗಮ್ಮ, ಚಿಕ್ಕಪ್ಪ ದಾಸರಿ ಚಿನ್ನಯ್ಯ, ಮಾವ ಬಂಡಿನರಸಯ್ಯ, ಅವರ ಮಕ್ಕಳು, ಮೊಮ್ಮಕ್ಕಳು, ಬೀಗರು, ಷಡ್ಡಕರು, ನಾದಿನಿಯರು, ಶಾಲೆಯ ಮುಖವನ್ನೇ ಕಾಣದ ಮಕ್ಕಳು, ಒಂದು ಹನಿ ಎಣ್ಣೆಯನ್ನೂ ಕಾಣದ ಜಡೆಗಟ್ಟಿದ ಮುಡಿಯ ಸುಂದರಿಯರಾದ ಯುವತಿ ಯರು, ಕ್ರಾಂತಿಕಾರಿಗಳಂತೆ ಆ ಕತ್ತಲಲ್ಲಿ ಕಾಣುತ್ತಿದ್ದ ತೀಕ್ಷ್ಣ ಕಣ್ಣಿನ ಜವ್ವನಿಗರು- ಎಲ್ಲರೂ ಈಚಲು ಕಡ್ಡಿಗಳ ಅರ್ಧಮುಗಿದ ಬುಟ್ಟಿಗಳನ್ನು ತಮ್ಮ ಸುತ್ತ ನಾನಾ ವಿನ್ಯಾಸಗಳಲ್ಲಿ ಚೆಲ್ಲಾಡಿಕೊಂಡು ಯಾರಾದರೂ ಮೊದಲು ಮಾತಾಡಲಿ ಎಂದು ಕಾಯುತ್ತಿದ್ದರು.

`ವೀರಾಧಿವೀರ ಯಾರು? ಅರ್ಜುನ! ಅವನನ್ನೇ ಸೋಲಿಸಿ ಬಿಟ್ಟ ಸಾರ್‌ ನಮ್ಮ ಜಾತಿಯ ಏಕವೀರ-ಏಕಲವ್ಯ! ಅವನಿಗೇ ಆ ದ್ರೋಣ ಸಾರ್‌ ಮೋಸ ಮಾಡಿ ಬಿಟ್ಟ ಸಾರ್‌; ಆ ಮೇಲೆ ನಾವು ಈ ಕೆಲಸ ಶುರುಮಾಡಿದೆವು ಸಾರ್‌’ ಎಂದು ಕುಕ್ಕೆ ಕೊರವರ ಅಘೋಷಿ ನಾಯಕ ಕಟ್ಟಪೋಲಯ್ಯ ಒಂದು ಪೊಟ್ಟಣ ಸಾರಾಯಿ ಕುಡಿದಿದ್ದರೂ ತೆಲುಗು ತಮಿಳು ಕನ್ನಡ ಮಿಶ್ರಿತ ಭಾಷೆಯಲ್ಲಿ ಸ್ಪಷ್ಟವಾಗಿ ಕಾಲಜ್ಞಾನಿ ಯಂತೆ ಹೇಳುತ್ತಿದ್ದ. `ನಾವು ವಾನರರ ಸೈಡಿನವರ ಕಡೆಯವರು ಸಾರ್‌, ಆಂಜನೇಯ, ವಾಲಿ, ುಗ್ರೀವ, ಜಾಂಬವಂತ ಎಲ್ಲರೂ ನಮ್ಮ ಲೀಡರುಗಳು ಸಾರ್‌. ನಮಗೆ ದೇವರು ಗಳು ಮೋಸ ಮಾಡಿದರು ಸಾರ್‌. ಯಾರೋ ನಮ್ಮ ತಲೆಯಲ್ಲಿ ಸಿಂಹಾಸನ ಭಾ್ಯ ಅಂತ ಹಣೆ ಬರಹ ಬರೆದಿದ್ರು ಸಾರ್‌. ಅದಕ್ಕೆ ಯಾರೋ ನಮ್ಮ ತಲೆ ಕಡಿದು ಸಿಂಹಾಸನದ ಮೇಲಿಟ್ಟರು ಸಾರ್‌. ಸಾರ್‌ ಮೋಸ ಮಾಡಿದ್ರು ಸಾರ್‌, ಹಣೆ ಯಲ್ಲಿ ಬರೆದಿದೆ ಅಂತ ತಲೆ ಕಡಿದು ಸಿಂಹಾಸನದ ಮೇಲಿಡಬಹುದಾ ಸಾರ್‌, ಮೋಸ ಸಾರ್‌’ ಎಂದು ಅವನು ಗೊಣಗುತ್ತಿದ್ದ. `ಸಾರ್‌ ಸಾರಾಯಿ ಕುಡಿದಿ ದ್ದೇನೆ ಸಾರ್‌, ಕುಡಿಯದಿದ್ರೆ ನನ್ನ ಮೈಂಡ್‌ ಕೆಲಸ ಮಾಡೋದಿಲ್ಲ ಸಾರ್‌ ನಾವು ಬಡವರು ಸಾರ್‌, ಸಹಾಯ ಮಾಡಿ ಸಾರ್‌’ ಎಂದು ಗೋಗರೆಯುತ್ತಿದ್ದ.

`ಸಾರ್‌ ಆ ಕಡಿದ ತಲೆಯಲ್ಲಿ ಆ ಮೇಲೆ ನೋಡಿದರೆ ಸಿಂಹಾಸನ ಭಾಗ್ಯ ಅಂತ ಹಣೆ ಬರಹ ತುಂಬಾ ಕಡೆ ಬರೆದಿತ್ತು ಸಾರ್‌. ಆ ದೊಡ್ಡ ದೊಡ್ಡ ದೇವರು ಗಳೆಲ್ಲ ಸೇರಿ ಮೋಸ ಮಾಡಿದರು ಸಾರ್‌ ಎಲ್ಲಾದರೂ ಈಚಲ ಕಡ್ಡಿ ಇದ್ದರೆ ಹೇಳಿ ಸಾರ್‌’ ಎಂದು ದೊಗ್ಗರ ನಾಗಮ್ಮ ಎಂಬ ಅವರಲ್ಲೇ ಪ್ರಭಾವಶಾಲಿ ಯಾಗಿರುವಂತೆ ಕಾಣಿಸುತ್ತಿದ್ದ ಹೆಂಗಸು ಬೇಡಿಕೊಂಡಳು. ಅಷ್ಟರಲ್ಲಿ ಅವಳ ಹರಕು ಸೀರೆಯೊಳಗೆ ಜೋಪಾನವಾಗಿಟ್ಟಿದ್ದ ಮೊಬೈಲ್‌ ಸದ್ದು ಮಾಡಿತು.

ಆ ಸದ್ದಿಗೆ ಅವಳ ಮಡಿಲಲ್ಲಿ ವಾನರನಂತೆ ಅಂಟಿಕೊಂಡಿದ್ದ ಹತ್ತು ವರ್ಷದ ಮಗ ಕಣ್ಣು ಬಿಟ್ಟ. ಆ ಹುಡುಗ ನೋಡಲು ಇನ್ನೂ ಆರು ತಿಂಗಳ ಹಸುಗೂಸಿನಂತೆ ಇದ್ದ. ಅವನಿಗೆ ಹುಟ್ಟಿದಾಗಲೇ ಗೂರಲು ರೋಗ. ಕೆಮ್ಮಿ ಕೆಮ್ಮಿ ಹೈರಾಣವಾಗಿ ಹೋಗಿದ್ದ. ಕಣ್ಣು ಬಿಟ್ಟವನು ಆ ಕತ್ತಲಲ್ಲಿ ನನ್ನನ್ನು ಮಿಣಿ ಮಿಣಿ ನೋಡಲು ತೊಡಗಿದ.

ದೊಗ್ಗರ ನಾಗಮ್ಮನ ಮೊಬೈಲಿನಲ್ಲಿ ಬ್ಯಾಟರಿ ಚಾರ್ಜ್‌ ಇರಲಿಲ್ಲ. ಚಾರ್ಜ್‌ ಮಾಡಲು ಅವರಿಗೆ ವಿದ್ಯುತ್‌ ಇಲ್ಲ. ಹಾಗಾಗಿ ಅದನ್ನು ಚಾರ್ಜ್‌ ಮಾಡಲು ಆಕೆ ವಿಕ್ರಾಂತ್‌ ಟೈರ್ಸ್‌ ಎದುರುಗಡೆ ಇರುವ ಹೊಟೇಲಿಗೆ ಒಂದು ಮೈಲು ನಡೆಯುತ್ತಾ ಹೋದಳು.

`ಅರ್ಧ ಗಂಟೆ ಚಾರ್ಜ್‌ ಮಾಡಲು ಹತ್ತು ರೂಪಾಯಿ ಸಾರ್‌ ಈಚಲು ಕಡ್ಡಿ ಇಲ್ಲದಿದ್ದರೆ ಹೇಗೆ ಸಾರ್‌ ಬುಟ್ಟಿ ಹಣೆಯೋದು’ ಎಂದು ಹೋಗುವಾಗ ಆಕೆಯೂ ಗೊಣಗುತ್ತಾ ಹೋದಳು. ಅವಳ ಮೊಬೈಲಿಗೆ ಬಂದ ಕರೆ ಅವಳ ದೊಡ್ಡ ಮಗನದಂತೆ. ಆತ ಆಂಧ್ರದ ವಿಜಯನಗರಕ್ಕೆ ಹೆಣ್ಣು ನೋಡಲು ಹೋಗುವುದೂ, ಆ ಹುಡುಗಿಯ ತಂದೆ ಸಾಯುವುದೂ ಒಂದೇ ದಿನ ಸಂಭವಿಸಿ ಹುಡುಗಿಯ ಕಡೆಯವರು ಆತನನ್ನು ಅಪಶಕುನ ಎಂದು ಭಾವಿಸಿಕೊಂಡು ಕಟ್ಟಿ ಹಾಕಿ ಹೊಡೆಯುತ್ತಿದ್ದಾರಂತೆ. ಅವನನ್ನು ರಕ್ಷಿಸಿಕೊಂಡು ಬರಲು ಅವನ ಅಪ್ಪ ಹೋಗಿದ್ದಾನಂತೆ. ಹೋದವನು ಮಗನನ್ನೂ ಆ ಹುಡುಗಿಯನ್ನೂ ರಕ್ಷಿಸಿಕೊಂಡು ಬರುತ್ತಾನಂತೆ. ಆ ಮೇಲೆ ಇಲ್ಲೇ ಪುರೋಹಿತರ ಬಳಿ ಹೋಗಿ ಜಾತಕ ನೋಡಿ ಕೊಂಡು ಮದುವೆಯಂತೆ. ಆ ಮದುವೆಗೆ ನಾನೂ ತಪ್ಪದೆ ಹೋಗಲೇ ಬೇಕಂತೆ!

ನಾನು ಹೋಗದೆ ಇರುವುದು ಹೇಗೆ ಎಂದು ಅವರನ್ನು ಪ್ರೀತಿಯಿಂದ ನೋಡುತ್ತಿದ್ದೆ. ಬಂಡಿನರಸಯ್ಯ ಎಂಬ ಮುದುಕನ ಎರಡನೇ ಹೆಂಡತಿ ಮೂಕಿ. ಆಕೆಗೆ ಬಾಯಿ ಬಾರದಿದ್ದರೂ ಎಲ್ಲವೂ ಅರ್ಥವಾಗುತ್ತಿತ್ತು. ಆಕೆ ನನ್ನನ್ನೂ ಅರ್ಥ ಮಾಡಿಕೊಂಡು ಆ ಬೆಳದಿಂಗಳಿನಲ್ಲಿ ನಾಚಿಕೊಂಡು ನಗುತ್ತಿದ್ದಳು. ಹೀಗೆ ನಿನ್ನೆ ಇರುಳು ಭರತ ಹುಣ್ಣಿಮೆಯ ಚಂದ್ರ ನೆತ್ತಿಗೇರುವವರೆಗೂ ನಾನು ಅವರ ಜೊತೆಯಲ್ಲೇ ನಗಾಡಿಕೊಂಡು ಇದ್ದೆ. ಬಹಳ ಹೊತ್ತಿನ ಆನಂತರ ಬಂದೆ.

Advertisements