ಹಾಲು ಕುಡಿದ ಹುಡುಗಾ- ಒಂದು ಕತೆ

 [ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬರೆದ ಈ ನಾಚುಗೆಯ ಕತೆಯನ್ನು ಈಗಲೂ ಅಷ್ಟೇ ನಾಚುಗೆಯಿಂದ ಈ ಬ್ಲಾಗಿನಲ್ಲಿ ಅಡಗಿಸಿಡುತ್ತಿರುವೆ. ಈ ಕತೆಗೆ ಹೊಸತಾಗಿ ಚಿತ್ರಗಳನ್ನು ಬರೆದ ಚರಿತಾ ರಿಗೆ ಈ ಕಥೆಗಾರ ಚಿರಋಣಿ ]

 

 

hkh-1241.jpg

     ಆ ಮೂರು ಜನ ಹೆಂಗಸರು ನದಿಬಟ್ಟೆಯ ಗಂಟು ಹೊತ್ತು ಒಂದು ಮೆಟ್ಟಲು, ಎರಡು ಮೆಟ್ಟಲು, ಮೂರು ಮೆಟ್ಟಲು ಜರಿದ ಬರೆ ಇಳಿದು ಸೊಂಟಕ್ಕೆ ಸೊಂಟಕುಕ್ಕಿ ನನ್ನ ಕರೆದರು.

‘ಹಾ ಹುಡುಗ, ಏ ಹುಡುಗ, ಏ ಹಾಳು ಗಂಡಾದವನೇ, ಬಾ ಬಾಲ್ಯಕಾರ ಹುಡುಗನೇ ಬಾ, ನಮ್ಮ ಹುಡುಗಿಯ ಬಾಳು ಮೂರಾಬಟ್ಟೆ ಮಾಡಿದವನೇ ಬಾ’ ಎಂದು ಗಂಟು ಬಿಚ್ಚಿ ಕಲ್ಲು ಪಾರೆಯ ಮೇಲೆ ಬಟ್ಟಕ್ಕೆ ಕೂತರು. ‘ಬಾ, ಬಟ್ಟೆಯೇ ಬಾ, ಇದು ಆ ಹುಡುಗಿಯ ಮುಂಡು ಬಟ್ಟೆ, ಇದು ಅವಳು ಶೀಗೆ ನೆನೆಸಿಟ್ಟ ಮುಡಿಲೇಸು, ಇದು ಅವಳ ರವಿಕೆಯ ಬಟ್ಟೆ, ಬಾ ಹುಡುಗನೇ, ಬಂದು ಮುಟ್ಟಿ ಇಲ್ಲ ಎಂದು ಹೋಗು ಬಾ ನೋಡುವಾ. ಬಾ ಹಾಳಾದವನೇ. ಹುಡುಗ, ಈ ನಡು ಮಧ್ಯಾಹ್ನ ಶುಕ್ರವಾರ ಗಂಡಸರೆಲ್ಲ ಪಡೆದವನಿಗೆ ಬಾಗುವ ಹೊತ್ತು ಹಾಳಾದವನೇ ನದಿಗಿಳಿದಿದ್ದೀಯಾ ಬಾ, ನಡಿ ನಮ್ಮ ಹುಡುಗಿಯ ಕಟ್ಟು ಬಾ ಹಾಳಾದವನೇ’ ಅಂತ ನದಿಯ ನೀರಿಗೆ ಆ ಹುಡುಗಿಯ ಅರ್ಧ ಸೀರೆಯ ತೇಲಿಸಿ ತೊರಿಸಿದರು.

ಸೀರೆ ತೇಲುತ್ತಾ ನನ್ನ ಬಳಿಗೆ ಬಂದಿತು. ನೀರಲ್ಲಿ ಅವಳ ಸೀರಯ ಒಂದು ಸೆರಗು ತೇಲಿ, ಅದರಲ್ಲಿ ಅವಳ ಸೀರೆಯ ಎಣ್ಣೆಯ ಗಮನ ಮೂಗಿಗೆ ತೇಲಿ ನನಗೆ ನೀರಲ್ಲಿ ಅವಳ ನೆನಪು ಬಂದಿತು. ಪುಸಕ್ಕನೇ ನದಿಗೆ ಮುಳುಗಿ ಆ ಹೆಂಗಸರಿಗೆ ಕೈ ತೋರಿಸಿ ಗೇಲಿ ಮಾಡಿ, ಒಂದಾಳಕ್ಕೆ ಮುಳುಗಿ ಆ ಹೆಂಗಸು ದೊಡ್ಡವಳು ಆ ಹುಡುಗಿಯ ತಾಯಿಯೇ , ಎರಡಾಳಕ್ಕೆ ಮುಳುಗಿ ನಡುವಿನವಳು ಅವಳ ಅಕ್ಕನೇ, ಮೂರಾಳಕ್ಕೆ ಮುಳುಗಿ ಕೊನೆಯವಳು ನೆರೆಮನೆಯವಳೇ.. ಎಂದು ಹಾಗೇ ನೀರಲ್ಲಿ ಕಣ್ಣುಬಿಟ್ಟು ಹಾಗೇ ತಳದ ಮರಳ ಸವರಿ ಮರಳಿಗೆ ಮೂಗು ತಾಗಿಸಿ ತಿರುಗಿ ಅಂಗಾತನಾಗಿ ಕಣ್ಣ ಮೇಲೆತ್ತಿದರೆ ನದಿಯಲ್ಲೆಲ್ಲಾ ಅವಳ ಸೀರೆಯ ಸೆರಗು ಆಕಾಶದಂತೆ ಹರಡಿತು. ಸೀರೆಯ ಹೂವು ಹೂವಿನಂತೆ, ನಡುವಿನಲ್ಲಿ ಸೂರ್ಯ ಮಿನುಗಿಸಿ ನಗುವ ನಕ್ಕಂತೆ, ಹಾಗೇ ನೀರಲ್ಲಿ ಉಳಿದು ಉಸಿರು ಇನ್ನೂ ಹಿಡಿದು ತೇಲುತ್ತಾ ಮೇಲಕ್ಕೆ ರಬ್ಬರಿನ ಚೆಂಡಿನಂತೆ ಚಿಮ್ಮಿ ತಲೆಯೆತ್ತಿದರೆ ಸೀರೆಯ ಸೆರಗು ಮೈಯನ್ನು ನೀರಿನಂತೆ ಸುತ್ತಿಕೊಂಡಿತು. ಕಣ್ಣ ಮಂಜ ಮಂಜಲ್ಲಿ ಹೆಂಗಸರು ಮೊದಲು ಹಾಗೇ ನೋಡಿ ಆಮೇಲೆ ಕುಹಕಕ್ಕೆ ನಕ್ಕು ಆಮೇಲೆ ಮೂವರು ಪೋಲಿ ಪೋಲಿಯರಂತೆ ನಾಚಿಕೊಂಡು ‘ಹಾ! ಮುಳುಗುತ್ತೀಯಾ ನೀರಿನೊಳಗೆ ಹಾಗೆ! ಪೋಲಿಯಾದವನೇ ಬಾ ಇಲ್ಲಿಗೆ. ನಿನ್ನ ಹಿಡಿದು ಕಟ್ಟಿ ಹಾಕಿ ಹಿಡಿದು ಮೊಣಕಾಲಿಗೆ ಸಿಕ್ಕಿಸಿಕೊಂಡು ಮೀಯಿಸಿ ಬಿಡುತ್ತೇವೆ ಬಾ ಮಗನೇ…. ನಮ್ಮ ಹುಡುಗಿಗೆ ಏನು ಮಾಡಿದೆಯೋ ಅದ ಮಾಡುವಿಯಂತೆ ಬಾ’ ಎಂದು ನಾಚಿಕೊಂಡರು.

ಅವರು ನಾಚಿಕೊಂಡು ಕಲ್ಲು ಪಾರೆಯ ಮೇಲೆ ಆ ಮೂವರು ಕುಕ್ಕರ ಕಾಲಲ್ಲಿ ನನ್ನ ಕಾಯುತ್ತ ಆಅವರ ಮೂವರ ದೇಹವೂ ನನ್ನ ಹಿಡಿದಿಡಲು ಕಾದಂತೆ ಕಂಡಿತು. ಇವರು ಇನ್ನೇನು ನೀರಿಗೆ ಇಳಿದು ನನ್ನ ಅಮುಕಿ ಕೊಲ್ಲುವರೋ ಎಂದು ಹೆದರಿದರೆ, ಆ ಹೆಂಗಸರು ತಮ್ಮ ಸೀರೆಯ ಮಂಡಿಗೆ ಸರಿಸಿ, ಆಮೇಲೆ ಮೊಣಕಾಲಿಗೆ ಸರಿಸಿ, ತಲೆಯಿಂದ ತಟ್ಟದ ಬಟ್ಟೆಯ ತೆಗೆದು ಪಾರೆಯ ಮೇಲಿಟ್ಟು ಮೆಲ್ಲಗೇ ಮೊಣಕಾಲವರೆಗೆ ಕಾಲನ್ನು ನೀರಿಗೆ ಬಿಟ್ಟು ಆಡಿಸುತ್ತಾ, ‘ಬಾ ಮಗನೇ, ಬಾ ಮೀಯಿಸುತ್ತೇವೆ. ನಮ್ಮ ಹುಡುಗಿಗೆ ಏನು ಮಾಡಿ ಬಂದಿದ್ದೀಯಾ ಮಿಡುಕನೇ’ ಅಂತ ಕರೆದರು.

‘ಏ, ಹೆಂಗಸರೇ, ನಾನು ನೀರ ಮೇಲೇರಿ ಬರಲಾರೆ. ಉಟ್ಟಬಟ್ಟೆಯಲ್ಲಿಲ್ಲ ನಾನು. ಬಿಡುತ್ತೀರ ನನ್ನ ಈ ನೀರಿಗೆ. ಹೆಂಗಸರೇ, ನಾನು ನಿಮ್ಮ ಹುಡುಗಿಗೇನೂ ಮಾಡಿಲ್ಲ. ನಾನು ಹುಡುಗ, ಏನೂ ಗೊತ್ತಿಲ್ಲ. ನಾನು ಏನೂ ಮಾಡಿಲ್ಲ.’ ಆಳು ಬಂದಂತೆ ಅತ್ತೆ. ಹೆಂಗಸರು ಬಿಡಲಿಲ್ಲ. ಮೊದಲಿನವಳು ಚಪ್ಪಾಳೆ ಹೊಡೆದು ನಡುವಿನವಳಿಗೆ ‘ಏ ಇವಳೇ, ಆ ಹುಡುಗಿಯ ರವಿಕೆಯ ತೆಗಿ, ತೋರಿಸಿ ಇವನಿಗೆ, ಅಂದರೆ ನಡುವಿನವಳು ಗಂಟಿನಿಂದ ಹುಡುಗಿಯ ರವಿಕೆಯ ತೆಗೆದು ಗಾಳಿಗೆ ಕೊಡವಿ, ನೀರಿಗೆ ಬಿಟ್ಟಳು. ಅದು ಹರಿಯುತ್ತಾ ನನ್ನ ಬಳಿಗೆ ಬಂದು ನಿಂತಂತೆ ನಾನು ಅವುಚಿ ಹಿಡಿದು ಹಾಗೆಯೇ ನಾಚಿಕೊಂಡು ಹಿಡಿದು ನೀರಿಗೆ ಮುಳುಗಿ ಆಳಕ್ಕೆ ಹೋದೆ. ಆಳದಲ್ಲಿ ನನ್ನ ಕೈಯಲ್ಲಿ ಆ ಹುಡುಗಿಯ ರವಿಕೆ, ಕತ್ತಿನ ಸುತ್ತ ಅವಳ ಕಸೂತಿ ನೀರಲ್ಲಿ ಮಿಂಚಿ ಹಾಗೇ ಅದನ್ನು ನೀರ ಒಳಕ್ಕೆ ಕೊಂಡೊಯ್ದ ಹಾಗೇ ಆಳದಲ್ಲಿ ಕಲ್ಲೊಂದರ ಮಾಟೆಯೊಂದರಲ್ಲಿ ಅವಿತಿಟ್ಟು ಹಾಗೇ ತೇಲುತ್ತಾ ಮೇಲಕ್ಕೆ ಬಂದು ‘ಏನೂ ಇಲ್ಲವಲ್ಲಾ ಹೆಂಗಸರೇ’ ಅಂತ ನಕ್ಕೆ.hkh-2.jpg

‘ಏ ಹುಡುಗಾ ಇಷ್ಟು ನೀರು ಕುಡಿದುಂಡು ಉಂಟಾದ ಈ ಹೆಂಗಸರ ಜೊತೆಗೆ ನೀರಾಟ ಆಡುತ್ತೀಯಾ? ಆ ಹುಡುಗಿಯ ರವಿಕೆ ಅವಿತಿಟ್ಟೆಯಾ? ಬಾ ನೀರಿಂದ ಮೇಲಕ್ಕೆ’ ನಡುವಿನವಳು ಮಿಡುಕಿದಳು. ನಾನು ಹೆದರಿ ನಕ್ಕೆ. ‘ಮಾಡೋದು ಮಾಡಿ ನಗುತ್ತೀಯಾ? ನಕ್ಕೋತಿ ಹುಡುಗ! ಬಿಡಿರೇ ಇವನ ನಾನು ನೋಡುತ್ತೇನೆ?’ ಅಂದವಳೇ ಕೊನೆಯವಳು ಅರೆವಯಸ್ಸಿನವಳು ನೀರಿಗೆ ಹಾರಿ ನನ್ನ ಅಟ್ಟಿಸಿಕೊಂಡು ಈಸ ತೊಡಗಿದಳು.

ನಾನು ಹೆದರಿ ಅವಳ ಈಸಾಟಕ್ಕೆ ಹೆದರಿ ನದಿಯ ನಾಲ್ಕು ಕಡೆಗೂ ಈಜಿ ಹರಿದಾಡಲು ನೋಡಿದೆ. ಅವಳು ಬಿಡದೆ, ಉಸಿರು ಬಿಡುತ್ತಾ ಉಟ್ಟ ಬಟ್ಟೆಯಲ್ಲೇ ಈಸುತ್ತಾ, ಬಾಯಿಂದ ಕುಡಿದ ನೀರನ್ನು ಚಿಮ್ಮಿಸಿ ಬಿಡುತ್ತಾ ಕೋಪದಲ್ಲಿ ಅವಳ ಮುಖವು ನೀರಲ್ಲಿ ಕೆಂಪಾಗಿ, ಸೂರ್ಯನಿಗೆ ಅವಳ ಕೆನ್ನೆ ಹೊಳೆದು ಅವಳು ನಾಲ್ಕು ಮೂಲೆಗೂ ಅಟ್ಟಿಸುತ್ತಾ ಮೀನಂತೆ ಬಿಡದೆ ನನ್ನ ಅಟ್ಟಿಸಿಕೊಂಡು ನಾನು ಯಾಕೋ ಹೆದರಿ ನದಿಯ ನಡುವಿನ ಇನ್ನೊಂದು ಬಂಡೆಯೇರಿ ಸುಸ್ತಾಗಿ ಕುಳಿತೆ. ಅವಳೂ ಸುಸ್ತಾಗಿ ನಾ ಏರಿದ ಬಂಡೆಯನೇರಲಾಗದೇ ‘ಏ ಬನ್ನಿರೇ’ ಅಂತ ಅವರ ಕರೆದಳು.

ಆ ಎರಡು ಹೆಂಗಸರು ನೀರಿಗೆ ಹಾರಿ, ಎರಡು ಹಾವು ಮೀನುಗಳಂತೆ ಕಪ್ಪಗೆ ಒಮ್ಮೆ ಬೆಳ್ಳಗೆ ಒಮ್ಮೆ ಕಾಣುತ್ತಾ ಈಸಿ, ನನ್ನ ಬಂಡೆಯ ಇನ್ನು ಎರಡು ಬದಿ ಹಿಡಿದು ನಿಂತು ‘ಹುಡುಗಾ ಆಟ ಆಡಿಸುತ್ತೀಯಾ? ಬಾ ಹೋಗೋಣ ನಡಿ’ ಅಂದರು. ನಾನು ಬಂಡೆಯನೇರಲಾರದ ಅವರ ಒದ್ದೆ ಮೈಯ ಕಂಡು ಈ ನಡು ಮಧ್ಯಾಹ್ನದ ಬಿಸಿಲಲ್ಲಿ ಗಾಳಿ ತೇಲಿ, ಮೈಯ ಮೇಲೆ ಹರಿದು ಹಾಯಾಗಿ ‘ಏ, ಹೆಂಗಸರೇ, ನಾನು ಏನು ಮಾಡಿದೆ ಅಂತ ನೀವು ಹಾಗೆ ಮಾಡುತ್ತಿರುವಿರಿ?’ ಎಂದು ನಕ್ಕೆ.

ಆ ಹೆಂಗಸರಿಗೆ ಈ ಉರಿಬಿಸಿಲಿಗೆ, ಈಸಿದ ಸಿಟ್ಟಲ್ಲೂ ನಾಚುಗೆ ತಡೆಯಲಾಗಲಿಲ್ಲ. ಕೊನೆಯವಳು ನಾಚಿ ನಕ್ಕಳು. ನಡುವಿನವಳು ತನ್ನ ನೆನೆದ ರವಿಕೆಯ ನೋಡಿ ಹೆದರಿದವಳಂತೆ ಸುತ್ತಲೂ ನೋಡಿ ಮೆಲ್ಲ ಮೈಯಲ್ಲೇ ಹಿಂಡಿನಾಚಿದಳು. ಮೊದಲಿನವಳು ಮೊದಲು ಸ್ವಲ್ಪ ನಾಚಿ, ಮೆಲ್ಲಗೆ ಮುಖವ ಬಿಗಿಮಾಡಿಕೊಂಡು, ಮೆಲ್ಲಗೆ ಕಣ್ಣು ಕೆಂಪಗೆ ಮಾಡಿ ನೋಡಿಕೊಂಡು ‘ಏ ಚುರುಕಾ, ನನ್ನ ಹುಡುಗಿಗೇನು ಮಾಡಿದೆ? ಅವಳು ಮನೆಯಲ್ಲಿ ಬಟ್ಟೆ ಹರಿದು ಹಾಕಿಕೊಂಡು ಒದ್ದಾಡುತ್ತಿರುವಳು’ ಅಂದಳು. ಮೊದಲು ನಾಚಿದವಳು ಈಗ ಇನ್ನೂ ನಾಚಿಕೊಂಡು ಮುಖ ಮರೆಸಿದಳು. ಎರಡನೆಯವಳು ನಿಟ್ಟುಸಿರು ಬಿಟ್ಟಳು. ಆಮೇಲೆ ಮೂವರೂ ಒಮ್ಮೆಗೇ ಮನಸ್ಸು ಮಾಡಿದವರಂತೆ ತಟ್ಟನೇ ಸುಧಾರಿಸಿಕೊಂಡು ಬಂಡೆಗೆ ಚಿಮ್ಮಿಹಾರಿ ನನ್ನ ನೀರಿಗೆ ಎಳೆದು ಅಮುಕಿ ಹಿಡಿದರು.

‘ಈಗ ಹೇಳುತ್ತೀಯಾ ಹೇಳು’

ನೀರಲ್ಲಿ ಒಂದು ಸಲ ನಾ ಮಾತಾಡಲಿಲ್ಲ. ಎರಡನೆಯ ಸಲ ನಾಚಿಕೊಂಡವನು ಮೂರನೆಯ ಸಲ ‘ಈಗ ಹೇಳದಿದರೆ ನೀನು ಹೋದೆ ಅಂತಿಟ್ಟುಕೋ’ ಅಂದಾಗ ಉಸಿರು ಬಿಗಿ ಹಿಡಿದು ಆಮೇಲೆ ಮೆಲ್ಲಗೇ ತಲೆ ಮೇಲೆತ್ತಿ ಅವರ ನೋಡಲಾಗದೇ ಹೆದರಿ ‘ನಾ ಮಾಡಿದುದು ಹೌದು’ ಅಂದುಬಿಟ್ಟೆ.

‘ಹೌದಾ!’ ಅವರು ನಂಬಲಾಗದೇ ನಂಬಿ ಹಾಗೇ ಸಾವರಿಸಿಕೊಂಡು ನಂಬಿ ಒಮ್ಮೆಗೆ ‘ಹೋ ನಮ್ಮ ಮಗಳೇ’ ಎಂದು ಕೂಗಿಕೊಂಡರು. ನಾ ಒಮ್ಮೆಲೇ ಅವಳ ಅಳುವಿಗೆ ಹೆದರಿ ‘ನಾ ಮಾಡಿರುವುದು ಅದಲ್ಲ’ ಎಂದುಬಿಟ್ಟೆ. ಅವರು ಮೂವರೂ ಒಮ್ಮೆಗೇ ಉಸಿರು ಉಳಿದುಬಿಟ್ಟು ‘ಇನ್ನು ಏನು ಮಾಡಿದೆಯೋ ಏ ಮಗನೇ’ ಅಂತ ನನ್ನ ನೀರಿಂದೆತ್ತಿ ಹಾಗೆಯೇ ಬಂಡೆಯ ಮೇಲೆ ಕುಳ್ಳಿರಿಸಿ ನನ್ನ ಬರಿ ಮೈಯ ಹಾಗೇ ನೋಡತೊಡಗಿದರು. ನಾನು ನಾಚಿಕೈಯಲ್ಲಿ ಮುಚ್ಚಿಕೊಂಡೆ. ಕೊನೆಯವಳು ನೋಡಲಾಗದೆ ಮುಖವ ತಿರುಗಿಸಿ ಮೆಲ್ಲಗೆ ಇಣುಕಿದಳು. ಮೊದಲನೆಯವಳು ಹಾಗೇ ನನ್ನ ನೋಡುತ್ತಾ ನನ್ನ ಭುಜದ ಮೇಲೆ ಅವಳ ನೀರು ನೆನೆದ ಕೈಯ ಇಟ್ಟು ‘ಏನು ಮಾಡಿದೆ ಹೇಳು. ನಾವು ಏನೂ ಮಾಡುವುದಿಲ್ಲ’ ಎಂದು ಇನ್ನೊಂದು ಕೈಯ ತೊಡೆಯ ಮೇಲಿಟ್ಟು ಕೇಳಿದಳು. ನಾ ಹೆದರಿ ನಾಚಿಕೊಂಡು ನನ್ನ ಕಾಲುಗಳನ್ನು ಹತ್ತಿರಕ್ಕೆ ಸರಿಸಿ ಮುದುಡಿಕೊಂಡಂತೆ ಅವಳು ‘ಏ ಕೈ ತೆಗಿಯೋ ಹುಡುಗಾ, ನಾ ನೋಡಿದರೆ ನಿನ್ನ ತಾಯಿ ಸಮಾನ’ ಅಂದಳು. ನಾ ಕೈ ಸವರಿ ಮೆಲ್ಲಗೆ ಕೈ ಕಿತ್ತು ‘ನೋಡಿರೇ, ಈ ಹುಡುಗನಾ ಅಂದಂತೆ ಉಳಿದಿಬ್ಬರು ಅಂಜಿಕೊಂಡು ನೋಡತೊಡಗಿದರು.
ಅವರು ನೋಡುತ್ತಾ ನೋಡುತ್ತಾ ಹಾಗೇ ಮನಸ್ಸು ಸಿದ್ಧಮಾಡಿಕೊಂಡು ಒಬ್ಬಳು ‘ಇದರಲ್ಲಿ ಏನು ಮಾಡಿದೆ’? ಎಂದು ಕೈಯ ತೋರಿಸಿ ಕೇಳಿದಳು. ‘ಏನೂ ಇಲ್ಲ’ ಎಂದೆ! ಇದರಲ್ಲೇನು….? ನಡುವಿನವಳು ಕಾಲು ಮುಟ್ಟಿ ಕೇಳಿದಳೂ. ‘ಇಲ್ಲ’ ಎಂದೆ. ಮೊಣಕಾಲು ಮುಟ್ಟಿದರು. ಕಿಬ್ಬೊಟ್ಟೆ ಮುಟ್ಟಿದರು. ‘ಇಲ್ಲಾ’ ಎಂದೆ. ಅಅವರು ಹೆದರಿಕೊಂಡಂತೆ ಹಾಗೆ ಹೆದರಿ ಹೆದರುತ್ತಾ ‘ಅದರಲ್ಲೇನು ಮಾಡಿದೆಯೋ?’ ಅಂತ ಕೇಳಿದರು.

hkh-34.jpg

ನಾನು ನಾಚಿ ಹೆದರಿಕೊಂಡು ‘ಅದರಲ್ಲಿ ಇಲ್ಲವೇ ಇಲ್ಲ’ ಅಂದಂತೆ ಅವರು ಇನ್ನೊಮ್ಮೆ ನಿಟ್ಟುಸಿರುಬಿಟ್ಟು ಮುಖ ಮುಖ ನೋಡಿಕೊಂಡು ‘ಏ ಹುಡುಗಾ ಕಳ್ಳ ಆಡುತ್ತೀಯಾ? ಮತ್ತೆಲ್ಲಿಂದ ಏನು ಮಾಡಿದೆ? ಎಂದು ಗದರಿಸಿದರು. ನಾ ಹೆದರಿ ಪುಸಕ್ಕನೇ ಅವರ ಕೈಯಿಂದ ಜಾರಿ ನೀರಾಳಕ್ಕೆ ಇಳಿದು ತಳಕ್ಕೆ ಈಸುತ್ತಾ ಆ ಹುಡುಗಿಯ ರವಿಕೆ ಅವಿಸಿಟ್ಟಿದ್ದ ಕಲ್ಲಿನ ಮಾಟೆಗೆ ಕೈತೋರಿಸಿ ರವಿಕೆ ಹೊರತೆಗೆದು ಮೂಗಿನ ಹತ್ತಿರ ತಂದು ಮೆಲ್ಲಗೇ ಮುಖ ಸವರಿ ಹಾಗೆಯೇ ಇಟ್ಟು ಮೆಲ್ಲಗೇ ನೀರೊಳಕ್ಕೆ ಈಚೆ ಕರೆಯ ದಾಟಿ ಪಾರೆಕಲ್ಲಿನ ಮೇಲೆ ಹತ್ತಿ ಆಚೆ ಕಡೆಯ ಅವರಿಗೆ ಕೈತೋರಿಸಿ ಗೇಲಿ ಮಾಡುತ್ತಾ ನಕ್ಕು, ಮೆಲ್ಲಗೇ ಲುಂಗಿ ಸಿಕ್ಕಿಸಿಕೊಂಡು ಹಾಗೇ ಆ ಹೆಂಗಸರಿಗೆ ಕೂಗಿ, ‘ಏ ಹೆಂಗಸರೇ ನಿಮ್ಮ ಹುಡುಗಿಯ ಹಾಲು ಕುಡಿದೇ…’ ಅಂತ ತುಟಿ ತೋರಿಸಿ ನಕ್ಕು ನಡುಗುತ್ತಾ ಮನೆಯ ಕಡೆ ಓಡಿದೆ.

 ‘ನಿನ್ನ ಬಿಡುವುದಿಲ್ಲಾ ಕಳ್ಳ ಹಾಲು ಕುಡಿದವನೇ’ ಎಂದು ಅವರೂ ನೀರಿಗೆ ಹಾರಿ ಈಚೆ ಕೆರೆಗೆ ಈಜತೊಡಗಿದರು.
ನಾ ಉಟ್ಟ ಲುಂಗಿಯ ಉಟ್ಟು, ಮೈಯೊರೆಸುವ ಬಟ್ಟೆಯ ಕೈಗೆ ಎತ್ತಿ ಓಡಿ ಬಂದಂತೆ, ದಾರಿಯಲ್ಲೇ ಮರಳು ಕಳೆದು ತೋಟ ಕಳೆದು ಬಿಸಿಲಲ್ಲೇ ಟಾರು ರಸ್ತೆ ಹೊಳೆದು ಮನೆ ಬಂತು. ಮನೆಯೆಲ್ಲಾ ಶುಕ್ರವಾರ ತೊಳೆದು ನಾನು ಹೆದರಿಕೊಂಡು ಒಳಕ್ಕೆ ಹೋದಂತೆ ನೆಲದ ಮೇಲೆ ನದಿಯ ಹನಿಗಳು ಮೈಯಿಂದ ಬಿದ್ದು ಉಮ್ಮ ಮಲಗುವ ಕೋಣೆಗೆ ಇಣುಕಿದೆ. ಉಮ್ಮ ಮುಖ ಎತ್ತಿದಳು. ಉಮ್ಮ ಮುಖ ಎತ್ತಿ ಅವಳ ನಮಾಜಿನ ಕಮೀಸಿನ ಬಟ್ಟೆಯ ಒಳಗಡೆ ಹಾಲು ಕುಡಿಯುತ್ತಿದ್ದ ಮಗುವಿನ ಕಾಲು ಹೊರಕಂಡಿತು. ಉಮ್ಮ ನನ್ನ ಕಂಡು ಮಗುವನ್ನು ಎತ್ತಿ ಮಡಿಲಲ್ಲಿ ಕೂರಿಸಿ ಹಾಗೇ ಅದರ ಬೆನ್ನು ತಡವುತ್ತಾ ನನ್ನ ನೋಡಿದಂತೆ ನನಗೆ ಹೆದರಿಕೆಯಾಗಿ ‘ಉಮ್ಮಾ ಮಗುವ ಕೊಡು’ ಅಂದೆ. ಉಮ್ಮ ಮಾತಾಡದೆ ಮಗುವ ಕೊಟ್ಟಳು. ಮಗು ನಕ್ಕಿತು. ನಾನು ಮಗುವ ಎತ್ತಿ ಆಡಿಸುತ್ತಾ ಬಾಗಿಲ ಬಳಿ ಬಂದು ಬಾಗಿಲ ದಾರಂದದ ಕಡೆ ನೋಡುತ್ತಾ ಮಗುವಿಗೆ ಬಿಸಿಲು ತೋರಿಸಿದೆ. ಮಗು ಬಿಸಿಲಿಗೆ ನಕ್ಕತು. ಹಾಗೇ ಗಾಳಿಗೆ ತೆಂಗಿನ ಓಲೆ ಅಲ್ಲಾಡಿ ಮಗು ಆ ಕಡೆ ನೋಡಿತು. ನಾನು ಮಗುವಿಗೆ ನೆಲದಿಂದ ಬಿದ್ದ ತೆಂಗಿನ ಗರಿಯ ತುಂಡು ಕೊಟ್ಟೆ. ಮಗು ಆಟವಾಡಿದಂತೆ ನನಗೆ ಹೆದರಿಕೆಯಾಗಿ ಟಾರು ರಸ್ತೆಯ ಕಡೆ ನೋಡಿದೆ. ಅದರಾಚೆಯ ತೋಟ, ಅದರಾಜೆಯ ನದಿಯ ಅಂಚು ಕಾಣಿಸುತು. ನದಿಯಂಚಿನಿಂದ ಆ ಹೆಂಗಸರು ನಗುವುದ ಕೇಳಿಸಿತು. ಆ ಹೆಂಗಸರು ನಗುತ್ತಾ, ಅವರ ನಗು ತೋಟದೊಳಗೆ ಸುಳಿದಾಡಿ ರಸ್ತೆಗೂ ಬಂದು, ಆ ಹೆಂಗಸರು ನಗುತ್ತಾ ಕಾಣಿಸತೊಡಗಿ ಮನೆಯೊಳಗೆ ಉಮ್ಮ ಚಾಪೆಯ ಮೇಲೆ ಕುರಾನು ಓದುವುದು ಕೇಳಿಸಿತು. ಆ ಮೂರು ಜನ ಹೆಂಗಸರು ಓಡುತ್ತಾ ಬರುವುದು ಕಾಣಿಸಿತು.

ಆ ಹೆಂಗಸ ರ ಮೈ ಒಣಗಿ, ಅವರ ಮುಡಿಯೂ ಒಣಗಿ ಬಿಸಿಲಿಗೆ ಬಿಡಿಬಿಡಿಯಾಗಿ ಹೊಳೆಯುತ್ತಾ ಅವರ ಬಿಳಿ ಪಾದಗಳಿಂದ ಮರಳು ಉದುರುತ್ತಾ ಬಂದವರು ಹಾಗೇ ಮನೆಯ ತೋಟಕ್ಕೆ ಬಂದು, ಹಾಗೇ ನಗುತ್ತಾ ಬಂದು ‘ಮಗನೇ ಕದ್ದು ಹಾಲು ಕುಡಿದು ಕಳ್ಳನ ಹಾಗೆ ಮಗುವ ಆಡಿಸುತ್ತಿರುವೆಯಾ, ಹೊಳೆಯಿಂದ ಕದ್ದು ಬಂದೆಯಾ. ಇರು ನಿನ್ನ ಉಮ್ಮನಿಗೆ ಹೇಳಿ ನಿನ್ನ ಆಟ ಬದಲಿಸುತ್ತೇನೆ’ ಅಂದವರೇ ಕೈಯಲ್ಲಿನ ಬಟ್ಟೆಯ ಗಂಟನ್ನು ಕೈಯಿಂದ ಕೈಗೆ ಬದಲಾಯಿಸಿ, ಹಾಗೇ ನನ್ನ ತಲೆಯ ಮೇಲೆ ನಟಿಕೆ ಮುರಿದು ಮಗುವಿನ ಕೆನ್ನೆ ಹಿಂಡಿ ನನ್ನ ಕಿವಿ ಹಿಂಡಿದರು. ನನಗೆ ಹೆದರಿಕೆಯಾಗಿ ಅಳು ಬಂದಂತಾಗಿ ಹಾಗೇ ಮೆಲ್ಲಗೆ ‘ಹೆಂಗಸರೇ ಉಮ್ಮ ನಮಾಜು ಮಾಡುತ್ತಿದ್ದಾರೆ. ಏನು ಹೇಳುತ್ತಿರೋ ಹೇಳಿ ಮಾಡಿಸಿ’ ಅಂದೆ. ಹೆಂಗಸರು ಬಟ್ಟೆಯ ಗಂಟನ್ನು ಜಗಲಿಯ ಮೇಲಿಟ್ಟರು. ಒದ್ದೆ ಬಟ್ಟೆಯ ವಾಸನೆ ಮನೆಯೆಲ್ಲಾ ತುಂಬಿ ಮಗು ಆ ಹೆಂಗಸರ ನೋಡಿ ಕಾಲು ಕುಣಿದಾಡಿಸಿ ತೋರಿಸಿತು. ಕಿವಿ ಹಿಂಡಿದ ಹೆಂಗಸು ನನ್ನ ಕೆನ್ನೆಗೆ ಅವಳ ಒದ್ದೆ ಕೈ ವರೆಸಿ ಚಳಿ ಚಳಿ ಮಾಡಿದಳು.

 ಇರು ಹುಡುಗ, ಈಗ ನೋಡುವಿಯಂತೆ’ ಅಂದವರೇ ಹೆಂಗಸರು ಉಮ್ಮಾನ ಬಳಿ ಹೋದರು. ನಾ ಹೆದರಿ ಹೆದರುತ್ತಲೇ ಮಗುವ ಎತ್ತಿಕೊಂಡು ಮೆಲ್ಲಗೆ ನಡೆದು ಬಟ್ಟೆಯ ಗಂಟಿನ ಬಳಿ ಹೋದೆ. ನನ್ನ ಬಟ್ಟೆಯ ಗಂಟಿಗೆ ಕೈ ತೂರಿಸಿ ಹಿಂಡಿ ಗಂಟು ಗಂಟಾಗಿ ಸುತ್ತಿ ಬಿದ್ದಿದ್ದ ಬಟ್ಟೆಗಳೆಲ್ಲವೂ ಬೇರೆ ಬೇರೆಯಾಗಿ ಹರಡಿ ಕೂತಿತು. ಹೆಂಗಸರ ಉಟ್ಟಿದ್ದ ಬಟ್ಟೆಯೆಲ್ಲವೂ ಹಗ್ಗದಂತೆ ಅದರ ನಡುವೆ ಅವರು ತೇಲಿಬಿಟ್ಟಿದ್ದ ಆ ಹುಡುಗಿಯ ಸೀರೆ ಇಣುಕಿತು. ಸೀರೆಯ ಮೇಲೆ ಆ ಹುಡುಗಿಯ ರವಿಕೆಯ ಬಣ್ಣಕ್ಕೆ ಮಗು ಕೈತೋರಿಸಿ ಎತ್ತಿಹಾಕಿತು. ನಾ ಮೆಲ್ಲಗೆ ರವಿಕೆಯ ಎತ್ತಿ ಹಾಗೇ ಕೊಡವಿ ಕಲ್ಲು ಮೇಲೆ ಹರಡಿ ನೋಡಿ ಕೂತೆ. ಹಾಲು ವಾಸನೆಯ ಜಾಗ ಕಂಡಿತು. ಹಾಲು ವಾಸನೆಯ ಜಾಗದಲ್ಲಿ ಹರಡಿದ ಕಪ್ಪು ಬಾಳೆಯ ಕರೆಯ ಕಲೆ ಹಾಗೇ ಇಳಿದು ರವಿಕೆಯ ತಳದವರೆಗೂ ಕಾಣಿಸಿತು. ರವಿಕೆಯ ತಿರುಗಿಸಿ ಕಲ್ಲ ಮೇಲೆ ಹರಡಿ ಮಗುವ ಕಲ್ಲ ಮೂಲೆಗೆ ಕೂರಿಸಿ ಹಾಗೆ ಮಗುವಿನ ಮುಖ ನೋಡಿ ನಾಚಿ ನಕ್ಕೆ. ಮಗು ಸದ್ದು ಮಾಡಲಿಲ್ಲ. ರವಿಕೆಯ ಬೆನ್ನ ಹಿಂದಿನ ಒಂದು ಕೊಂಡಿ ಸಿಕ್ಕಿಸಿ ಮೆಲ್ಲಗೆ ಮನೆಯ ಒಳಗೆ ನೋಡಿದೆ. ಒಳಗೆ ಬಿಸಿಲಿಗೆ ಕತ್ತಲು ಮುಸುಕಿ ಏನೂ ಕಾಣಲಿಲ್ಲ. ಕೆಳಗಿನ ಕೊಂಡಿ ಸಿಕ್ಕಿಸಿದೆ. ಮೂರೂ ಕೊಂಡಿ ಸಿಕ್ಕಿಸಿ ಹಾಗೇ ಅದನ್ನು ಎತ್ತಿ ನನ್ನ ಎದೆಯ ಮೇಲೆ ಜೋಡಿಸಿದೆ. ಎದೆ ತಣ್ಣಗಾಗಿ ಮೆಲ್ಲಗೇ ಒದ್ದೆಯಾಗಿ ಹಾಗೇ ಒಣಗಿ ರವಿಕೆಯ ಎಣ್ಣೆ ಎಣ್ಣೆಯ ವಾಸನೆ ಮೂಗಿಎ ಬಡಿದು ಹೆದರಿ ಮನೆಯೊಳಕ್ಕೆ ನೋಡಿದೆ, ಯಾರೂ ಕಾಣಲಿಲ್ಲ. ರವಿಕೆಯ ಎದೆಯಿಂದ ಎತ್ತಿ ಹಾಗೇ ಕಣ್ಣಿಗೆ ತಂದು ಕೈಯಲ್ಲಿ ಎತ್ತಿ ಸೂರ್ಯನ ಎದುರಿಗೆ ಹಿಡಿದು ನೋಡಿದೆ. ಏನೂ ಕಾಣಿಸದೆ ಆಮೇಲೆ ಅದರ ನೂಲಿನೆಡೆಯಲ್ಲಿ ಸೂರ್ಯ ಕಾಣಿಸಿ ಹಾಗೇ ತಿರುಗಿಸಿ ಮನೆಯ ನೋಡಿದೆ. ಯಾರೂ ಕಾಣಿಸದೆ ಮನೆಯ ಆಚೆ ಬಾಗಿಲಿನಿಂದ ಈಚೆಗೆ ಇಣುಕುವ ಬಿಸಿಲು ಬೆಳ್ಳಗೆ ಕಾಣಿಸಿ, ಆ ಬೆಳಕಲ್ಲೇ ಅ ಮೂರು ಜನ ಹೆಂಗಸರು ಕಪ್ಪಗೆ ಕಂಡು ಒಮ್ಮೆಲೇ ನಾಚಿ, ರವಿಕೆಯ ಮೆಲ್ಲಗೇ ಕಲ್ಲ ಮೇಲಿಟ್ಟು ಮಗುವ ಎತ್ತಿದರೆ ಮಗುವು ಕೈಯಲ್ಲೇ ಸೀರೆಯ ಎತ್ತಿ ಹಿಡಿಯಿತು. ಹೆದರಿ ಸೀರೆಯ ಮಗುವಿನ ಕೈಯಿಂದ ಕಿತ್ತುಕೊಂಡಂತೆ ಮಗು ಅಳತೊಡಗಿತು.

ಮಗು ಅಳು ನಿಲ್ಲಿಸಲಿಲ್ಲ. ಒಂದು ಹೂವು ಕಿತ್ತು ಕೊಟ್ಟೆ. ಮಗು ನಿಲ್ಲಿಸಲಿಲ್ಲ. ಹೆದರಿಕೆಯಾಗಿ ಮಗು ಅಳುವುದು ಜೋರು ಮಾಡಿದಂತೆ ಮನೆಯ ಒಳಕ್ಕೆ ಬಂದೆ. ಮಗು ಕಿರುಚತೊಡಗಿತು. ಮಗುವ ಹಾಗೇ ಎತ್ತಿಕೊಂಡು ಉಮ್ಮನ ಬಳಿ ಮಲಗುವ ಕೋಣೆಗೆ ಬಂದೆ. ಉಮ್ಮ ಬಿಳಿಯ ಕಮೀಜು ತೊಟ್ಟುಕೊಂಡು ನಮಾಜಿಗೆ ನಿಂತಿದ್ದಳು. ಅವಳ ಹಿಂದೆ ಆ ಮೂರು ಜನ ಹೆಂಗಸರು ಸಾಲಾಗಿ ನಿಂತು ನನ್ನ ತಿನ್ನುವವರಂತೆ ನೋಡಿ, ಮಗುವಿನ ಕಡೆ ನೋಡಿ ನಕ್ಕರು. ಉಮ್ಮ ಅಳುವ ಮಗುವನ್ನೊಮ್ಮೆ ನೋಡಿ ನಕ್ಕು ಕೈಯಿಂದ ಎತ್ತಿ ಮುತ್ತಿಟ್ಟು ನನ್ನ ಕೈಗೆ ಕೊಟ್ಟು ‘ಅಲ್ಲಾಹು ಅಕ್‌ಬರ್’ ಎಂದು ಕೈಕಟ್ಟಿದಳು. ಹೆಂಗಸರು ನನ್ನ ನೋಡಿ, ನಾನೂ ಅವರ ನೋಡಿ, ಹೆದರಿದಂತೆ ಮಾಡಿ, ಕೊನೆಯವಳ ನೋಡಿ ನಕ್ಕು ತುಟಿ ತಿರುವಿ ಗೇಲಿಮಾಡಿ ಹಾಗೇ ಮಗುವನನು ಎತ್ತಿ ಭುಜದ ಮೇಲೆ ಕೂರಿಸಿದೆ. ಆ ಹೆಂಗಸು ನಿಂತಲ್ಲಿಂದ ಮೆಲ್ಲಗೇ ಸರಿದು ನನ್ನ ಬಳಿ ಬಂದು ಮಗುವ ಕೆನ್ನೆ ತಟ್ಟಿದಂತೆ ಮಾಡಿ ನನ್ನ ಕಿವಿಯ ಬಳಿ ‘ಇರು ಮಗನೇ ನಮಾಜು ಮುಗಿಸಿ ಮಾಡಿಸುತ್ತೇವೆ ನೋಡು ಗಂಡೇ’ ಅಂದವಳು ಹಾಗೇ ಹಿಂದಕ್ಕೆ ಹೋಗಿ ಹೆಂಗಸರ ಸಾಲಲ್ಲಿ ನಿಂತು ತಾನೂ ತುಟಿಕಚ್ಚಿ ಕೈಕಟ್ಟಿ ನಿಂತಳು.

ಅವರು ಹಾಗೆ ಮಹಾ ದೊಡ್ಡ ಒಳ್ಳೆಯ ಹೆಂಗಸರಂತೆ ನಮಾಜು ಮಾಡುವುದು ನೋಡಿ ನಗು ಬಂದು ಹೆದರಿಕೆಯಕಾಗಿ ಮೆಲ್ಲಗೇ ಅಲ್ಲಿಂದ ಜಾಗ ಖಾಲಿ ಮಾಡಿ ಮಗುವ ಭುಜದಲ್ಲೇ ಕುಣಿಸುತ್ತಾ ಅಡಿಗೆ ಮನೆಗೆ ಬಂದೆ. ಮಗು ಭುಜದ ಮೇಲಿಂದ ಕಾಲು ಒದ್ದು ಕೈ ಆಡಿಸಿ ಕಪಾಟಿನ ಬಾಗಿಲು ಸರಿಸಿ ಹಾಲು ಚೊಂಬಿನ ಕಡೆ ಕೈ ತೋರಿಸಿ ಕೇಕೆ ಹಾಕಿತು. ನಾನು ಒಂದು ಕೈಯಿಂದ ಹಾಲು ಚೊಂಬು ಎತ್ತಿ ಹಾಗೇ ನೋಡಿದೆ. ಹಾಲು ತಳದಲ್ಲಿ ಕಂಡಿತು. ಹಾಗೇ ಚೊಂಬು ಎತ್ತಿ ಹಾಲನ್ನು ಮಗುವಿನ ಹಾಲು ಕುಪ್ಪಿಗೆ ಸುರಿದು ಹಾಲು ತೊಟ್ಟು ಸಿಕ್ಕಿಸಿ ಮಗುವ ಮಡಿಲಿಗೆ ತಕ್ಕೊಂಡು ತುಟಿಗೆ ಕೊಟ್ಟೆ. ಮಗು ಸೀಪತೊಡಗಿ, ಚಪ್ಪರಿಸತೊಡಗಿ ಹಾಗೇ ಹಾಲುಕುಪ್ಪಿಯನ್ನು ಎತ್ತಿಹಿಡಿದು ಕುಡಿಯುವುದ ನಿಲ್ಲಿಸಿ ನನ್ನ ಕಡೆ ನೋಡಿ ನಕ್ಕಿತು. ನನಗೆ ನಾಚುಗೆಯಾಗಿ ಹಾಗೇ ಕುಪ್ಪಿಯನ್ನು ಮಗುವಿನ ಕೈಯಿಂದ ಬಿಡಿಸಿ ಅದರ ತೊಟ್ಟನ್ನು ನನ್ನ ಮೂಗ ಬಳಿ ಸವರಿದೆ. ಹಾಲುಹನಿ ಮೂಗಿನ ಕೆಳಗಿನ ಕೂದಲಿಗೆ ಅಂಟಿ, ಅಂಟು ಅಂಟಾಗಿ ಸಿಹಿ ತುಟಿಗೆ ಸವರಿ ಹಾಗೇ ಒಂದು ಗುಟುಕು ಹೀರಿ ಮಗುವಿನ ಕಡೆ ನೋಡಿದೆ. ಅದು ಕೈಯಿಂದ ಬಾಟಲಿಯನ್ನು ಸವರಿ ಕೇಳಿತು. ಅದಕ್ಕೂ ಒಂದು ಗುಟುಕು ಹೀರಲು ಕೊಟ್ಟೆ. ನನಗೆ ಆಸೆಯಾಗಿ ಇನ್ನೊಂದು ಗುಟುಕು ಹೀರಿದೆ. ಹಾಲು ತಳಕ್ಕೆ ಬಂದು ಮುಗಿದಂತಾಗಿ, ತೊಟ್ಟನ್ನು ತುಟಿಯ ತುಂಬಾ ಸವರಿ ಮಗುವಿನ ಹೊಕ್ಕುಳ ಬಳಿ ಆಡಿಸಿದೆ. ಮಗು ಕಚಗುಳಿಗೆ ಕಿಲಕಿಲ ನಕ್ಕಿತು. ಹಾಗೇ ಆಡಿಸುತ್ತಾ ಮಗು ನಗುತ್ತಾ ಜೋರಾಗಿ ಕೂಗು ಹಾಕಿ ಒಮ್ಮೆಲೇ ಕೆಮ್ಮಿ ನೆತ್ತಿಗೆ ಹಾಲು ಹತ್ತಿ ಕೆಮ್ಮತೊಡಗಿದಂತೆ ನಾ ಗಾಬರಿಯಿಂದ ಮಗುವಿನ ಬೆನ್ನ ಸವರುತ್ತಾ ‘ಉಮ್ಮಾ’ ಎಂದು ಕರೆದೆ. ‘ಉಮ್ಮಾ’ ಎಂದು ಒಳಕ್ಕೆ ಹೋದೆ. ಉಮ್ಮ ಬರದೆ ನನಗೆ ಹೆದರಿಕೆಯಾಗಿ ‘ಉಮ್ಮಾ’ ಎಂದು ಕೂಗಿ ಓಡಿದೆ. ಉಮ್ಮಾ ನಮಾಜು ಮಾಡುತ್ತಾ ಕೂತಿದ್ದಳು. ‘ಉಮ್ಮಾ’ ಎಂದು ಒಳಕ್ಕೆ ಹೋದೆ. ಉಮ್ಮಾ ಏಳದೆ ಆ ಮೂರು ಜನ ಎದ್ದು ಮಗುವಿಗೆ ಮುತ್ತಿಕೊಂಡು ಒಬ್ಬಳು ಕೈಯಲ್ಲಿ ಎತ್ತಿ ನೆತ್ತಿ ತಟ್ಟಿದಳು. ಇನ್ನೊಬ್ಬಳು ಮಗುವಿನ ಮೂಗಲ್ಲಿ ಊದಿದಳು. ಕೊನೆಯವಳು ಮೆಲ್ಲಗೆ ಒಳಗೆ ಬಂದು ‘ಮಗುವಿನ ನೆತ್ತಿಗೆ ಹತ್ತಿಸಿದೆಯ ಮೂದೇವಿ’ ಎಂದು ಬೈದಂತೆ ನನಗೆ ಸಿಟ್ಟು ಬಂದು ‘ಹಾಳಾದವಳೇ’ ಅಂದೆ. ಹಾಳಾದವಳು ಅಂದಿದ್ದು ಕೇಳಿಸಿ ಉಮ್ಮಾ ನಮಾಜು ಮುಗಿಸಿ ಎದ್ದು ಬಂದು ‘ಏನಾಯಿತು ಮಗುವೇ’ ಎಂದು ಮಗುವ ಎತ್ತಿ ತಲೆ ಕೆಳಗುಮಾಡಿ ಮೆಲ್ಲಗೆ ತಿರುಗಿಸಿ ಹಿಡಿದು ಅವಚಿಕೊಂಡು ‘ಏ ಮೋನೇ ಮಸೀದಿಗೆ ಹೋಗು ಅಂದರೆ ಇಲ್ಲಿ ಮನೆ ಹಾಳು ಮಾಡಲು ಬಂದಿ ಸೈತಾನೇ’ ಅಂತ ಬೈದಳು.

ಉಮ್ಮ ‘ಸೈತಾನೇ’ ಅಂದಿದ್ದು ಬೇಜಾರಾಗಿ, ಈ ಹೆಂಗಸರು ಎಲ್ಲಾ ಹೇಳಿರಬಹುದು ಅಂತ ಹೆದರಿಕೆಯಾಗಿ ‘ಇಲ್ಲ ಉಮ್ಮ ಮಗುವಿಗೆ ಹಾಲು ಕುಡಿಸಿದೆ. ನೆತ್ತಿಗೆ ಹತ್ತಿತು’ ಅಂದೆ. ಒಬ್ಬಳು ಹೆಂಗಸು ಜೋರಾಗಿ ಮೆಲ್ಲಗೆ ನಕ್ಕು ‘ಏ ಉಮ್ಮಾ, ನಿನ್ನ ಮಗ ಬಹಳ ಕಳ್ಳ ಆಗಿರುವ ಗೊತ್ತಾ?’ ಅಂದಳು. . ಆ ಎರಡನೆಯವಳು ಅದಕ್ಕೆ ಕೂಡಿಕೊಂಡು ‘ಅವನ ಅಪ್ಪನಿಗಿಂತ ಜೋರಾಗಿ ಆಗಿಬಿಡುವ ಕಳ್ಳ, ಹುಷಾರು’ ಅಂದಂತೆ ಉಮ್ಮ ನಾಚಿಕೊಂಡು ಮೊದಲನೆಯವಳ ಮುಖ ನೋಡಿದಂತೆ ಕೊನೆಯವಳು ನನ್ನ ಮುಖ ನೋಡಿ ನಾಚಿದಳು.

‘ಏ ಉಮ್ಮಾ, ನಿನ್ನ ಮಗ ಶುಕ್ರವಾರ ಮಸೀದಿಗೆ ಹೋಗದೆ ನದಿಯಲ್ಲಿ ಏನು ಮಾಡಿಕೊಂಡಿರುವ ಗೊತ್ತಾ?’ ಮೊದಲನೆಯವಳು ಮಾತು ತಿರುಗಿಸಿದಳು.

‘ಅವನು ಮೀನು ಹಿಡಿಯುತ್ತಾನೆ, ಹಾಲೂ ಕದಿಯುತ್ತಾನೆ. ಹಾಳಾದವನು ಶುಕ್ರವಾರ ನಮಾಜಿಗೆ ಹೋಗದೆ ಮಂಗನಂತಾಗಿ ಬಿಡುವಾ’ ಎರಡನೆಯವಳು ಅಂದಂತೆ, ಮೊದಲನೆಯವಳು ಧೈರ್ಯತಂದುಕೊಂಡು ‘ಉಮ್ಮಾ, ನಿನ್ನ ಮಗ ನಿಜಕ್ಕೂ ಏನು ಮಾಡಿದ್ದಾನೆ ಗೊತ್ತುಂಟಾ?’ ಎಂದು ಕೇಳಿ ಆಮೇಲೆ ಮಾತುನುಂಗಿ ತಡೆದು ‘ಹಾಲು ಕದ್ದು ಕುಡಿಯುತ್ತಾನಂತೆ ಹೌದಾ?’ ಎಂದು ನಾಚಿಕೊಂಡು ಕೇಳಿದಳು.

ಉಮ್ಮನಿಗೆ ಗೊತ್ತಾಗದೆ ಏನೋ ಗೊತ್ತಾದಂತಾಗಿ ಮೆಲ್ಲಗೆ ನಕ್ಕು ‘ಹಾಳಾದವನು ಆರು ವರುಷ ಮೊಲೆ ಬಿಡಲೇ ಇಲ್ಲ’ ಎಂದು ಮಗುವಿನ ಕಡೆ ನೋಡಿ ನನ್ನ ಕಡೆ ನೋಡಿ ‘ಇವನ ಹಾಲು ಬಿಡಿಸಬೇಕಾದರೆ ಮೊಲೆಗೆ ಕಾಯಾರ ಕಾಯಿಯ ಕಹಿ ಹಾಕಬೇಕಾಯಿತು. ಆದರೂ ಬಿಟ್ಟನಾ ಕೇಳಿ’ ಅಂದಂತೆ ನಡುವಿನವಳು ‘ಈಗಲೂ ಬಿಟ್ಟಿಲ್ಲವಂತೆ ಹೌದು ಉಮ್ಮ ನಿನ್ನ ಮಗ’ ಅಂದುಬಿಟ್ಟಳು.

ಉಮ್ಮನಿಗೆ ಗೊತ್ತಾಗದೆ ‘ಈಗ ಬಿಡದೆ ಏನು ಮಾಡುತ್ತಾನೆ? ಮೀಸೆ ಬಂದು ತುಟಿ ಕಪ್ಪಾದ ಮೇಲೆ ಇನ್ನೂ ಹಾಲು ಕುಡಿಯುತ್ತಾನ’ ಎಂದು ನಕ್ಕಳು.

ಹೆಂಗಸರು ಇನ್ನು ಹೇಗೆ ಹೇಳುವುದು ಎಂದು ಗೊತ್ತಾಗದೆ ನಾಚಿ ನಿಂತಿದ್ದ ನನ್ನ ನೋಡಿ ಸಿಟ್ಟು ಬಂದು, ‘ಉಮ್ಮಾ ಇವ ಬಗ್ಗೆ ಜಾಗ್ರತೆ ಮಾಡಬೇಕು. ಮೀರಿಬಿಡುವ ಕಳ್ಳಾ ದೊಡ್ಡ ಗಂಡಸಾಗುತ್ತಿರುವ’ ಅಂದು ನನ್ನ ನೋಡಿ ‘ನಾಚುಗೆಯಿಲ್ಲವೆ ಹುಡುಗಾ ನಿನಗೆ? ಎಲ್ಲ ಹೇಳಿ ನಿನ್ನ ಗತಿ ಬಿಡಿಸಿ ಬಿಡಲಾ’? ಎಂದು ಹೆಸರಿಸಿದಳು. ನನಗೆ ಹೆದರಿಕೆಯಾಗಿ ಸಿಟ್ಟು ಬಂದು ‘ಹೇಳಿದರೆ ಹೇಳಿ ಏನು ಮಾಡುತ್ತೀರಾ ಚಾಡಿ? ನೀವು ಗಂಡಸರಂತೆ ಹೊಳೆಯಲ್ಲಿ ಈಜಿ ಆಡಿದ್ದು ನಾನು ಟಾಂ ಟಾಂ ಹೊಡೆದು ಊರಲ್ಲಿ ಹಬ್ಬಿಸಿ ಬಿಡುವೆ ಗೊತ್ತಾ’ ಎಂದು ಹೆದರಿಸಿದೆ. ಹೆಂಗಸರು ಹೆದರಿಕೊಂಡಂತೆ, ಆಮೇಲೆ ನಾಚಿಕೊಂಡಂತೆ ಉಮ್ಮನ ಮುಖ ನೋಡಿ ಕೊನೆಯವಳು ನಾಚಿ ‘ಇಲ್ಲ ಉಮ್ಮಾ ಬಟ್ಟೆ ಹೊಗೆಯಲು ಹೋದೆವು. ಅಲ್ಲಿ ಈ ಮಂಗ ಈಸುತ್ತಿದ್ದ. ಸೋಪು ನೀರಿಗೆ ಬಿತ್ತು. ತೆಗೆದು ಕೊಡಾ ಅಂದರೆ ತೆಗೆಯದೆ ಆಟ ಆಡಿಸಿದ. ಆಮೇಲೆ ನಾನೇ ಮುಳುಗಿ ತೆಗೆದೆ – ಉಮ್ಮಾ ಅಷ್ಟೇ’ ಎಂದು ನಾಚಿದಳು.

‘ಶುಕ್ರವಾರ ಅಲ್ಲವಾ ಉಮ್ಮ, ಗಂಡಸರೆಲ್ಲಾ ಮಸೀದಿಯಲ್ಲಿರುತ್ತಾರೆ. ಈಜಿದರೆ ತಪ್ಪಾ ಉಮ್ಮಾ? ನಿಮ್ಮ ಮಗ ಮಂಗನಂತರ ಅಲ್ಲಿರುತ್ತಾನೆ ಅಂತ ನಮಗೆ ಅಲ್ಲಾ ಹೇಳಿತ್ತು?’ ಅಂತ ದೊಡ್ಡವಳು ಅಂದು ಮಾತು ತಿರುಗಿ ಹೋಗಿದ್ದಕ್ಕೆ ಸುಸ್ತಾಗಿ ಆಮೇಲೆ ಮೆಲ್ಲಗೆ ನನ್ನ ಕಡೆ ನೋಡಿ ಹೆದರಿಸಿ ‘ಉಮ್ಮಾ ನಮ್ಮ ಮನೆಯ ಹಾಲು ತರುವ ಹುಡುಗಿಗೆ ಮೈಗೆ ಏನೋ ಆಗಿದೆ. ಆವಾಗಿನಿಂದ ಒಂದು ಥರಾ ಆಡುತ್ತಿದೆ ಪಾಪ’ ಎಂದಳು.

ಉಮ್ಮ ಮೆಲ್ಲಗೆ ಮಗುವನನು ತೊಟ್ಟಿಲಲ್ಲಿ ಎತ್ತಿ ಮಲಗಿಸಿ ‘ಪಾಪ, ಆ ಹುಡುಗಿ ದೊಡ್ಡವಳಾಗಲಿಕ್ಕೆ ಆಗುತ್ತಾ ಬಂತಲ್ಲವಾ? ಈ ಇವನಿಗಿಂತ ಎಂಟು ತಿಂಗಳು ಸಣ್ನವಳಲ್ಲವಾ? ಇವನಿಗೆ ಬರುವ ಕರ್ಕಡ ಮಾಸಕ್ಕೆ ಹದಿನೈದು ತುಂಬಿ ಹದಿನಾರು ಹಿಡಿಯುತ್ತದೆ’ ಅಂತ ಎಣಿಸಿ ನನ್ನ ಕಡೆ ನೋಡಿದಳು. ನಾನು ನಾಚಿಕೊಂಡು ಆ ಹೆಂಗಸರ ಕಡೆ ನೋಡುತ್ತಾ ತಲೆ ತಗ್ಗಿಸಿದಂತೆ ಆ ಹೆಂಗಸು ತಿವಿದು ನೋಡುತ್ತಾ ‘ಈ ಇವನಿಗೂ ಹದಕ್ಕೆ ಬರಲಿಕ್ಕೆ ಆಯಿತು. ಬೀಜ ಹೊಡೆಯಿಸಬೇಕು. ಗಾಣಹೊಡೆಸಲಿಕ್ಕೆ ಆಗುತ್ತದೆ. ಹೋರಿಯಂತೆ ಬೆಳೆಯುವ ದೊಡ್ಡ ಗಂಡಸು. ಅದೇನೋ ಉಮ್ಮಾ ನಮ್ಮ ಹುಡುಗಿಗೆ. ಮೈಗೆ ಏನಾಯಿತು ಅಂದರೆ ಹಸು ಒದ್ದು ಹಾಲು ಚೆಲ್ಲಿ ಹೆದರಿಸಿತು ಅನ್ನುತ್ತಾಳೆ. ಬೇರೆ ಮಾತಿಲ್ಲ, ಕತೆಯಿಲ್ಲ’ ಅಂದಳು.

‘ಹೋ ಇಲ್ಲಿಗೂ ಅವಳು ಹಾಲು ತರದೆ ಮೂರು ದಿನ ಆಯಿತು ಅಲ್ಲವಾ. ಮೂರು ದಿನದಿಂದ ಇವನೇ ಅಲ್ಲವಾ ಹಾಲಿಗೆ ಬರುತ್ತಿರುವುದು’ ಅಂತ ಉಮ್ಮ ಅಂದಂತೆ ‘ಹೌದು ಅದಕ್ಕೇ ಆಗಿರೋದು. ಇವನು ಹೀಗೆ ದಾರಿಯಲ್ಲಿ ಹಾಲು ಕುಡಿದು. ಹುಡುಗ ಬಾಯಿ ಒರಸಲೂ ಗೊತ್ತಿಲ್ಲ. ಮಹಾ ಆಡುತ್ತಾನೆ ಆಟ ಮಿಡುಕ. ಉಮ್ಮ ಇನ್ನು ಇವನ ಹಾಲಿಗೆ ಕಳಿಸಬೇಡಿ. ಆಯಸ್ಸಿದ್ದರೆ ಆ ಹುಡುಗಿ ಬದುಕಿಕೊಳ್ಳುತ್ತಾಳೆ ಪಾಪ’ ನಡುವವಳು ಅಂದಳು. ಮೊದಲವಳು ಅದಕ್ಕೆ ಕೂಡಿಕೊಂಡು ಬಾಯಿ ತೆರೆಯಲು ನೋಡಿದಂತೆ ಉಮ್ಮ ಮಾತಾಡಲು ಬಿಡದೆ ‘ಪಾಪ, ಅದಕ್ಕೊಂದು ಮದುವೆ ಮಾಡಿಸಿಬಿಡಿ. ಅವಳೂ ಅಷ್ಟೆ, ಎಷ್ಟು ಅಂತ ನಾಕಾಲಿಗಳ ಜೊತೆ ಬಾಳೋದು. ಗಂಡನ ಜೊತೆ ಚಂದವಾಗಿರಬೇಕಾದ ಹುಡುಗಿ ಅದು’ ಅಂದು ‘ಬನ್ನಿ ಹೆಂಗಸರೇ, ಊಟಮಾಡಿ ಹೋಗುವಿರಂತೆ ಕೂರಿ. ಇವನ ಬಾಪಾ ಬರಲಿಕ್ಕೆ ಆಯಿತು. ಏ ಇವನೇ, ಅಲ್ಲಿಯವರೆಗೆ ಈ ಹೆಂಗಸರಿಗೆ ಕಡಿಯಲಿಕ್ಕೆ ಎಲೆಯಡಿಕೆ ಹರಿವಾಣ ತಂದು ಕೊಡು’ ಅಂದಳು. ನಾನು ಸಿಟ್ಟಲ್ಲೇ ತಿರುಗಿ ಅಟ್ಟಕ್ಕೆ ಹತ್ತಿ ಅಟ್ಟದ ಮೇಲಿನ ಕೋಣೆಯಿಂದ ಹರಿವಾಣ ತೆಗೆದು ಆ ಹೆಂಗಸರ ಮುಂದೆ ಇಟ್ಟೆ. ಆ ಹೆಂಗಸರು ಮೂವರೂ ಜಗಿಯುತ್ತಾ ಮೊದಲನೆಯವಳು ಅಡಿಕೆ ಬಾಯಿಗೆ ಎಸೆದು ನನ್ನ ಕಡೆ ನೋಡಿದಂತೆ. ಎರಡನೆಯವಳು ಜಗಿದು ಜಗಿಯುತ್ತಾ ಹಿತ್ತಲಿಗೆ ಹೋಗಿ ಸರಕ್ಕೆಂದು ರಾಚಿ ಉಗಿದು ಬಂದು ಕೂತವಳು ಹಾಗೇ ಜೊಲ್ಲು ಬಾಯಲ್ಲಿ ತೊದಲುತ್ತಾ ‘ಏ ಬಾರೋ ಇಲ್ಲಿ ಕೂತುಕೊ. ಸರಿ ಹೇಳೋ ಹಾಲು ಎಲ್ಲಿಂದ ಕುಡಿದೆ ಚೊಂಬಿನಿಂದಲೋ, ಕೆಚ್ಚಲಿನಿಂದಲೋ…’ ಅಂದಳು, ನಾನು ಸಿಟ್ಟಾಗಿ ‘ಕುಪ್ಪಿಯಿಂದ’ ಎಂದೆ. ಮೊದಲನೆಯವಳು ‘ಹೋ ಕುಪ್ಪಿಯಿಂದಲೋ? ನಿನ್ನಲ್ಲಿ ಕುಪ್ಪಿಯಿಂದ ಹಾಲು ಬರುತ್ತದೆಯೋ? ಹೋ ಮಿಡುಕ ಎಲ್ಲ ಕಲಿತು ಅರೆದು ಕುಡಿದಿದ್ದಾನೆ’ ಅಂದಳು. ನಾನು ‘ಕುಡಿಯದೇ…’ ಅಂತ ಹೇಳಿದವನು ಮೆಲ್ಲಗೇ ಅವರ ಬಳಿಗೆ ಹೋಗಿ ‘ನೀವು ನಾ ಮಾಡಿದ್ದನ್ನು ಮಾಡಿ ತೋರಿಸಿದರೂ ನನ್ನ ಉಮ್ಮ ನಂಬುವುದಿಲ್ಲ ಹೆಂಗಸರೇ’ ಎಂದು ಅವರ ಹರಿವಾಣದಿಂದ ಅಡಿಕೆ ಚೂರು ಬಾಯಿಗೆ ಎಸೆದು ನಕ್ಕು ತಿರುಗಿ ನೋಡುತ್ತಾ ಅಡಿಗೆ ಮನೆಗೆ ಹೋಗಿ ಉಮ್ಮನ ಹಿಂದೆ ನಿಂತೆ.

ಉಮ್ಮ ಒಲೆ ಊದುತ್ತಾ, ಒಲೆಯಿಂದ ಏಳುವ ಹೊಗೆ ಕಣ್ಣು ತುಂಬಿಕೊಂಡು ನೀರು ಬಂದು, ಒರೆಸಿ ನನ್ನ ಕಡೆ ನೋಡಿ ಮೆಲ್ಲಗೆ ‘ಏ ಇಲ್ಲಿ ಬಾ’ ಅಂದಳು. ‘ಹೋಗಿ ಹೋಗಿ ಆ ಹೆಂಗಸರ ಬಾಯಿಗೆ ಕೈಹಾಕಲಿಕ್ಕೆ ಹೋಗುತ್ತೀಯಲ್ಲಾ’ ಅಂದಳು. ‘ನಾನು ಏನು ಮಾಡಿದೆ ಅಂತ ಉಮ್ಮಾ’ ನಾ ಉಮ್ಮನ ಸೆರಗಲ್ಲಿ ಅತ್ತಂತೆ ಆಡಿದೆ. ಉಮ್ಮ ಮೆಲ್ಲಗೆ ‘ನೋಡು ನೀನು ಶಾಲೆಗೆ ಹೋಗುವ ಹುಡುಗ, ಈ ಹೆಂಗಸರ ಬಾಯಿಗೆ ಬೀಳಬಾರದು’ ಅಂದವಳು ‘ಬಾ ಇಲ್ಲಿ, ನೋಡು ಇದನ್ನು ಆ ಹುಡುಗಿಗೆ ಓಡಿಹೋಗಿ ಕೊಟ್ಟು ಬಾ. ಗೊತ್ತಾದರೆ ಇವರು ಅವಳದೆಲ್ಲವನ್ನು ಹರಿದು ಮುಕ್ಕಿ ತಿನ್ನುವ ಜಾತಿಯವರು, ಬೇಗ ಓಡಿಹೋಗಿ ಕೊಟ್ಟು ಬಾ’ ಅಂದವಳೇ ಕಪಾಟಿನಿಂದ ಶೀಷೆ ತೆಗೆದು ಅದರೊಳಗಿಂದ ಬೆಣ್ಣೆಯನ್ನು ಲೋಟವೊಂದಕ್ಕೆ ಸುರಿದು ಅದಕ್ಕೆ ಬಟ್ಟೆಮುಚ್ಚಿ ‘ಬರುವಾಗ ಇದರಲ್ಲೇ ಮಗುವಿಗೆ ಹಾಲು ತಕ್ಕೊಂಡು ಬಾ’ ಅಂತ ಕಿವಿಯಲ್ಲಿ ಉಸುರಿ ಹಿತ್ತಲ ಬಾಗಿಲಿಂದ ಕಳಿಸಿದಳು.

ನನಗೆ ನಾಚುಗೆಯಾಗಿ, ನಾಚುಗೆಯ ಹೇಳಲಾರದೆ ಹೆದರಿ ಹಾಗೇ ಹಿತ್ತಲಿಂದ ಅವಿಸಿಕೊಂಡು ಮೆಲ್ಲಗೇ ಜಗುಲಿಯ ಬಳಿ ಹೋಗಿ ಹಾಗೇ ಗೊತ್ತಾಗದಂತೆ ಜಗುಲಿ ಕಲ್ಲಿನಿಂದ ಒಣಗಿ ಹಸುರಿಗೆ ಬಾಳೆ ಎಲೆಯಂತೆ ಬಿದ್ದಿದ್ದ ಅವಳ ರವಿಕೆಯ ಎತ್ತಿ ಮೂಸಿ ಹಾಗೇ ಬೆಣ್ಣೆಯ ಬಟ್ಟಲನ್ನು ಅದರೊಳಗೆ ಮುಚ್ಚಿಕೊಂಡು ಹಾಗೇ ತೋಟದಾಚೆ ಮೆಲ್ಲಗೇ ಗೇಟ್ ಕಿರ್ರ್ ಎಂದು ಸದ್ದಾಗಿ ಬೆಣ್ಣೆಸುತ್ತಿದ್ದ ರವಿಕೆಯ ಮೂಗ ಬಳಿ ತಂದು ಗುಡ್ಡ ಹತ್ತಿ ಆ ಹುಡುಗಿಯ ಮನೆ ಕಡೆ ಓಡಿದೆ.

ಓಡಿ ಅವಳ ಮನೆಯೊಳಕ್ಕೆ ನುಗ್ಗುತ್ತಿದ್ದಂತೆ ಮಾಡಿನ ಮುಳಿ ಹುಲ್ಲು ಬಿಸಿಲಿಗೆ ಒಣಗಿ ಪುಡಿಪುಡಿಯಾಗಿರುವುದು ಮೆಲ್ಲಗೇ ಉದುರುತ್ತಾ ತಲೆಯ ಮೇಲೆ ನಾಲ್ಕಾರು ಪುಡಿ ಬಿತ್ತು. ಅವಳು ಮುಂದಿನ ಬಾಗಿಲಿಗೆ ಚಿಲಕ ಹಾಕಿಕೊಂಡಿದ್ದಳು. ಒಳಗೆ ಒಲೆಯಿಂದ ಬೆಂಕಿಯ ಸದ್ದು ಚಿಟಿಚಿಟಿ ಅನ್ನುವುದು ಕೇಳಿಸುತ್ತಾ ಇಣುಕು ನೋಡಿದೆ.hkh666-1.jpg ಅವಳು ಬೆಂಕಿಯ ಮುಂದೆ  ಮುಖಮಾಡಿಕೊಂಡು ಕುಕ್ಕರ ಕಾಲಲ್ಲಿ ಕೂತು ಬೆಂಕಿಯ ಮುಂದೆ ನೆಲ ಬಗೆಯುತ್ತ ಬೆಂಕಿಯ ಬೆಳಕು ಅವಳ ಮುಂದಿಂದ ಕೂದಲಿಗೆ ರಾಚಿ ಹಿಂದಿಂದ ಅದು ಹೊಳೆಯುತ್ತಾ ಕೆನ್ನೆಯ ಒಂದು ಬದಿಯ ಕಿವಿ, ಕಿವಿಯ ಬೆಳ್ಳಿಯ ಓಲೆ ಅವಳ ಲೇಸಿನೊಳಗಡೆ ಮಿನುಗುತ್ತಾ ಕಾಣಿಸಿ ನಾನು ಚಿಲಕ ತಟ್ಟಿ ನೋಡಿದೆ. ಅವಳು ಬೆಚ್ಚಿದವಳು ಮೆಲ್ಲಗೆ ಯಾರು ಎಂದವಳು ಹಾಗೆ ಸುತ್ತಾ ಮುತ್ತಾ ನೋಡುತ್ತಾ ಒಂದು ತಡಿಕೆಯಲ್ಲಿ ಇಣುಕಿ ನನ್ನ ಕಂಡು ನಾಚುಗೆಯಾಗಿ ತಟ್ಟನೆ ಬಾಗಿಲು ತೆಗೆದು ಕೈಯಲ್ಲಿ ಅವಳ ರವಿಕೆಯ ಕಂಡು ಚಿಟ್ಟನೇ ಚೀರಿದಂತೆ ಕೂಗಿ ಕೂಗಲಾರದೇ ಬಾಯಿ ತೆಗೆದು ಹಾಗೇ ನಿಂತು ಮೆಲ್ಲಗೇ ನನ್ನ ಬಳಿ ಬಂದು ಮುಖ ಎತ್ತದೇ ಹಾಗೇ ಕೈಗೆ ಕೈ ಚಾಚಿ ರವಿಕೆ ಕಿತ್ತುಕೊಳ್ಳಲು ನೋಡಿ ಹಾಗೇ ನಿಂತುಕೊಂಡಳು.
ನಾ ಮಾತಾಡಲಾಗದೆ ನಾಚಿ ‘ಬೆಣ್ಣೆಯಿದೆ ತಗೋ. ನನ್ನ ಉಮ್ಮ ಕಳಿಸಿದ್ದು’ ಎಂದು ಅವಳ ರವಿಕೆಯೊಳಗಿಂದ ಲೋಟವ ಕೈಗೆ ತೆಗೆದುಕೊಟ್ಟೆ. ಅವಳು ರವಿಕೆಗೇ ಕೈಚಾಚಿ ಕಿತ್ತು ಒಳಕ್ಕೆ ಓಡಿ ಒಲೆಯ ಮುಂದೆ ಕುಳಿತು ನಡುಗತೊಡಗಿದಳು. ‘ನಾ ಬರಲಾ ಅಲ್ಲಿಗೆ’ ಅಂದೆ. ಅವಳು ಮಾತನಾಡಲಿಲ್ಲ. ಅವಳು ಮಾತಾಡದೇ ಒಲೆಯ ಮುಂದೆ ರವಿಕೆಯ ಬಿಡಿಸಿ ನೋಡಿ ಮುಖ ಮುಚ್ಚಿಕೊಂಡು ಬೆಂಕಿಯ ಮುಂದೆ ಬಿಕ್ಕತೊಡಗಿದಳು.

ನನಗೆ ಅವಳು ಬಿಕ್ಕುವುದು ಗಾಬರಿಯಾಗಿ ಒಲೆಯ ಹತ್ತಿರದಿಂದ ಹೊರಕ್ಕೆ ನೋಡಿದೆ. ತಡಿಕೆಯೊಳಗಿಂದ ಹೊರಗಿನ ಗಿಡ ಮರ, ಕೆಳಗೆ ತಗ್ಗಲ್ಲಿ ಕಾಣಿಸುತ್ತಿದ್ದ ತೋಟ, ಅದರ ಕೆಳಗಡೆ ನದಿ, ತಡಿಕೆಯ ಹತ್ತಿರದಲ್ಲೇ ನಾಲ್ಕೈದು ಕೋಳಿಗಳು ಮೇಯುತ್ತಿದ್ದವು. ಅಡಿಗೆಯ ಕೋಣೆಯೊಳಕ್ಕೆ ಮಾಡಿನಿಂದ ಇಳಿಯುತ್ತಿದ್ದ ಸೂರ್ಯ ಹೊಗೆಯಲ್ಲಿ ಬೆಳ್ಳನೆಯ ಕೋಲಾಗಿ ಇವಳು ಬಿಕ್ಕುತ್ತಾ ಮೆಲ್ಲಗೆ ಬಿಕ್ಕುತ್ತಾ ಮೆಲ್ಲಗೆ ನಿಲ್ಲಿಸಿ ಮುಖ ಮುಚ್ಚಿಕೊಂಡು ಅಲ್ಲಿಂದಲೇ ಹೇಳಿದಳು.

‘ನೀನು ಯಾಕೆ ಸುಳ್ಳು ಹೇಳಿ ನಂಬಿಸಿದ್ದು?’

ನಾ ಮಾತಾಡಲಿಲ್ಲ.

 ‘ಹಾಲು ಬರುತ್ತದೆ ಅಂತ, ಹಾಲುಬೇಕು ಅಂತ ಹೇಳಿ ಕುಡಿದವನು ನೀ ಅಲ್ಲವೇ?’ ಅಂದಳು. ನಾನು ನಾಚುಗೆಯಿಂದ ತಲೆ ತಿರುಗಿಸಿದೆ. ಹೊರಗಡೆ ಕೊಟ್ಟಿಗೆಯಲ್ಲಿ ದಣಿದು ಬಂದ ಹಸುಗಳು ಮಲಗಿ ಮೆಲುಕ ಹಾಕುತ್ತಿದ್ದವು. ಇವಳು ಅಳುವ ನಿಲ್ಲಿಸಿದವಳು ಮತ್ತೆ ಬಿಕ್ಕುತ್ತಾ ‘ನೋಡು ಇಲ್ಲಿ, ಏನಾಗಿದೆ ನೋಡು ನೀನು ಮಾಡಿದ್ದು’ ಎಂದಂತೆ ನನಗೆ ಆಕಡೆ ನೋಡಲಾಗದೆ ಮೊಣಕಾಲೊಳಗೆ ಮುಖ ಮುಚ್ಚಿ ಮೆಲ್ಲಗೆ ಉಸಿರುಬಿಡುತ್ತಾ ಕಾಲ ಸಂಧಿನಿಂದ ನೋಡಿದಂತೆ ಅವಳು ಪಕ್ಕನೆ ನಾಚಿ ಅದನ್ನು ರವಿಕೆಯೊಳಗೆ ಸೇರಿಸಿಕೊಂಡಂತೆ ಬೆಳ್ಳನೆಯ ಅದರ ಮೇಲೆ ಕೆಂಪಗಿನ ಗುರುತೊಂದು ಕಚ್ಚಿದಂತೆ ಹೊಳೆದು ಒಳಕ್ಕೆ ಹೊರಟುಹೋಯಿತು.

ಅವಳು ನಾಚಿ ಕೆಂಪಾಗಿ ನನ್ನ ನೋಡಲಾಗದೆ ಓಡಿ ಕೊಟ್ಟಿಗೆಗೆ ಹೋಗಿ ಹಸುಗಳ ನಡುವೆ ನಿಂತುಕೊಂಡಳು. ನಾನೂ ನಾಚಿ ಕೆಂಪಾಗಿ ಏನೂ ಹೇಳಲಾಗದೆ ಅವಳ ಹಿಂದಕ್ಕೆ ಓಡಿ ಹಸುಗಳ ಬೆನ್ನು ಸವರುತ್ತಾ ಕೊಟ್ಟಿಗೆಯ ಕಂಬಕ್ಕೆ ಕೈ ಕಟ್ಟಿ ನಿಂತು ‘ಅಷ್ಟೇನಾ? ಅಷ್ಟಕ್ಕೆ ಇಷ್ಟು ಆಟ ಆಡೋದಾ?’ ಅಂದೆ. ಅವಳು ಸಿಟ್ಟು ತೋರಿಸಿ ‘ಅಷ್ಟೇನಾ ಅಂತ ಇನ್ನು ಹಾಲು ಹಾಲು ಅಂತ ಬಾ, ಹಿಡಿದು ಆ ಕೆಂಚಿ ಹಸುವಿನ ಕೆಚ್ಚಲಿಗೆ ನಿನ್ನ ಮೂಗು ತೂರಿಸುತ್ತೇನೆ’ ಅಂತ ನಕ್ಕು ನನ್ನ ಕಡೆ ನೋಡಿದಳು. ನಾನು ನಕ್ಕು ಮೆಲ್ಲಗೆ ಕಣ್ಣು ಮುಚ್ಚಿ ತೆರೆದು ಕಣ್ಣು ಹೊಡೆದು ನಕ್ಕೆ.

“ಹಾಲು ಕುಡಿದ ಹುಡುಗಾ- ಒಂದು ಕತೆ” ಗೆ 14 ಪ್ರತಿಕ್ರಿಯೆಗಳು

  1. ನಮಸ್ಕಾರ ಸಾರ್!
    ಬಹಳ ದಿನಗಳ ಬಳಿಕ ಮತ್ತೆ ಹಾಲು ಕುಡಿದ ಹುಡುಗನ ಸಂಗ ಮಾಡಿದ ಖುಷಿ.ಮತ್ತೆ ನಿಮ್ಮ ಷಿಲ್ಲಾಂಗ್ ಸ್ಪಂದನ ಓದುತ್ತಾ ಕುವೆಂಪು ವಿವಿಯ ಎದುರಿನ ಪುಟ್ಟ ಪಾರ್ಕಿನಲ್ಲಿ ಕೂತು ಹರಟುತಿದ್ದ ನೆನಪಾಯಿತು. ಹಾಗೆ ಮಂಗಳೂರಿನ ಉರ್ವಾ ಸ್ಟೋರ್ ಮನೆಯಲ್ಲಿ ಮೀನು ಊಟ ಮಾಡುತ್ತಾ ಶೇಕ್ಸ್ ಪಿಯರ್ ಇನ್ ಲವ್ ನೋಡಿದ್ದೂ.ಥ್ಯಾಂಕ್ಯೂ.. ಫಾರ್ ಯುವರ್ ಫ್ರೆಶ್ನೆಸ್ ಆಫ್ ಸ್ಟೋರಿ ಟೆಲ್ಲಿಂಗ್!!
    http//shashisampalli.wordpress.com

  2. ಶಶಿ,
    ಇದು ನೀನಾ? ಗುರುತೇ ಸಿಗದಹಾಗೆ ಆಗಿಬಿಟ್ಟಿದೀಯ!!(ಇದು ಬೇರೆಯಾರಾದ್ರು ಶಶಿ ಆಗಿದ್ರೆ ಏಕವಚನ ಕ್ಷಮಿಸಿ.)ಅಲ್ಲ, ಸ್ಕೆಲಿಟನ್ ಥರ ಇದ್ದವ ಬರೀ ’ಟನ್’ ಆಗಿರೋಹಾಗಿದೆ!! ಕುವೆಂಪು ವಿವಿಯ ಪಾರ್ಕಿನ ಘಳಿಗೆಗಳ ಬಗ್ಗೆ ಓದಿದಾಗ ಇದು ನೀನೆ ಅಮ್ತ ಖಾತ್ರಿಯಾದ್ರೂ, ಫೋಟೋ ನೋಡಿ ಕನ್ಫ್ಯೂಶನ್.

  3. ರಶೀದರಿಗೆ,
    ಅಲ್ಲ ಸ್ವಾಮಿ, ಬ್ಲಾಗಿನಲ್ಲಿ ಹಾಕೋದು ಹಾಕಿ ಜಗತ್ತಿಗೇ ಸಾರಿ ಆಮೇಲೆ ನಾಚುಗೆಯಿಂದ ಅಡಗಿಸಿಡುತ್ತಿದೇನೆ ಅಂದ್ರೆ, contradictory statement ಕೊಟ್ಟಹಾಗಾಗುತ್ತೆ. ಹೀಗೆಲ್ಲ ಬರೆದು ನನ್ನಂತಹ ಜಗಳಗಂಟಿಗೆ ಜಗಳವಾಡಲು ಅವಕಾಶ ಮಾಡಿಕೊಡದಿರಿ. ಕಥೆ ಚೆನ್ನಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: