ಈಗ ನಾನು ಪಂಜರಿ ಯರವ!

2010-09-08_jungle-haadi7ಇಲ್ಲಿ ನಾನು ರೇಡಿಯೋ ಕೈಯಲ್ಲಿ ಹಿಡಿದುಕೊಂಡು ಹಾಡಿ, ಹಳ್ಳಿ ಎಂದು ಸುತ್ತುತ್ತಿರುತ್ತೇನೆ.

ಕತ್ತಲು ಕತ್ತಲಾಗುವ ಹೊತ್ತಲ್ಲಿ ಮಳೆಯ ನಡುವೆ ನಡೆದು ಯಾವುದೋ ಊರೋ, ಹಾಡಿಯೋ ಕಂಡಲ್ಲಿ ನಿಲ್ಲುವುದು, ‘ಈ ಸ್ಥಳದ ಹೆಸರು ಇದೇನಾ?’ ಎಂದು ಕೇಳುವುದು.

‘ಈ ಇರುಳು ಇರಲು ಸ್ವಲ್ಪ ಜಾಗ ಮತ್ತು ತಿನ್ನಲು ಏನಾದರೂ..’ ಎಂದು ಸಂಕೋಚವನ್ನು ಅತಿ ಮಾಡಿಕೊಂಡು ಕೇಳುವುದು.

ಅವರು ಕೊಟ್ಟದ್ದನ್ನು ತಿಂದು, ಅವರು ತೋರಿಸಿದ ಎಡೆಯಲ್ಲಿ ಮಲಗಿ, ಈ ನಡುವಿನ ಹೊತ್ತಲ್ಲಿ ಅವರು ಹೇಳುವ ಕಥೆಗಳನ್ನೂ, ಕಷ್ಟಗಳನ್ನೂ ಕೇಳಿಸಿಕೊಂಡು ಅವುಗಳನ್ನು ಮನಸ್ಸಿನಲ್ಲೇ ನೋಟು ಮಾಡಿಕೊಂಡು ನಿದ್ದೆ ಮಾಡುವುದು. ನಿದ್ದೆಯ ನಡುನಡುವೆ ಮೈಪರಚಿಕೊಂಡು ಎದ್ದು, ನಾನೆಲ್ಲಿರುವೆ ಎಂದು ಖಾತರಿ ಮಾಡಿಕೊಂಡು, ಬೀಳುವ ಮಳೆಯನ್ನೂ, ಬೀಸುವ ಗಾಳಿಯನ್ನೂ. ಜೀರುಂಡೆಗಳ ಸದ್ದನ್ನೂ ಕೇಳಿಸಿಕೊಂಡು ಮೈತುಂಬಾ ಹೊದ್ದುಕೊಂಡು ಪುನಃ ನಿದ್ದೆಗೆ ಜಾರುವುದು.

ಆ ನಿದ್ದೆಯ ಸುಖದಲ್ಲೇ ಏನೋ ಒಂದು ಮೆಲ್ಲುಸಿರಿನಂತಹದು ಬಂದು ಮೈಸವರುವುದು. ಮನಸ್ಸು ಏನೇನೋ ನೆನೆದುಕೊಂಡು ಸುಖ ಪಡುವುದು. ಒಬ್ಬ ಬಾಲಕನ ನಗುವ ಮುಖ, ಒಂದು ಮಗುವಿನ ಕಾಲ ಸಪ್ಪಳ, ಒಬ್ಬಳು ತಾಯಿಯ ಸಡಗರ ಮತ್ತು ಎಲ್ಲಿಂದಲೋ ಕೇಳಿಸುವ ಒಂದು ನೀಳ ನಿಟ್ಟುಸಿರು. ‘ನನ್ಮಗನೇ ಯಾಕೆ ಹೀಗೆ ಕಾಡು ಸುತ್ತುತ್ತಿರುವೆ’ ಎಂದು ನನಗೆ ನಾನೇ ಬೈದುಕೊಂಡು ಮತ್ತೆ ಕನಸು ಕಾಣುವುದು. ಬೆಳಗು ಬೆಳ್ಳಗಾಗುವ ಮೊದಲೇ ಕಣ್ಣು ಬಿಟ್ಟುಕೊಂಡು ಗೊತ್ತಿಲ್ಲದ ಆ ಜಾಗ ಬೆಳಗಿಗೆ ಹೊಂದಿಕೊಳ್ಳುವುದನ್ನು ನೋಡುವುದು.

2010-09-08_jungle-haadi13ಒಬ್ಬ ಹಾದಿಹೋಕನಂತೆ, ಯಾರೂ ಇಲ್ಲದವನಂತೆ ಯಾರಾದರೂ ತಂದುಕೊಡುವ ಕಪ್ಪು ಚಾಗೋ, ಬೆಲ್ಲದ ಕಾಫಿಗೋ ಕಾಯುವುದು. ಅವರಿವರ ಗುಡಿಸಲೋ, ಮನೆಯೋ, ಅದರ ಅಂಗಳದಲ್ಲಿ ನಿಂತು ಕಷ್ಟ ಸುಖಗಳನ್ನು ಮಾತನಾಡಿಸುವುದು. ಆಮೇಲೆ ಗಂಟಲು ಸರಿಮಾಡಿಕೊಂಡು ಅವರೆಲ್ಲರನ್ನೂ ಸುತ್ತ ಕೂರಿಸಿಕೊಂಡು ರಾತ್ರಿಯೆಲ್ಲಾ ಕೇಳಿದ ಕಥೆಗಳನ್ನೂ, ಕಷ್ಟಗಳನ್ನೂ ಒಂದು ಮಾಡಿಕೊಂಡು ಅವರೆಲ್ಲರನ್ನೂ ಮಾತನಾಡಿಸುತ್ತಾ ರೇಡಿಯೋದಲ್ಲಿ ಒಂದು ಗಂಟೆ ಸಮಯ ನೇರ ಪ್ರಸಾರ ಮಾಡುವುದು. ಅವರ ಬಾಯಿಂದ ಹೊರಡುವ ಅವರದೇ ಸದ್ದು ಹೀಗೆ ರೇಡಿಯೋದಲ್ಲಿ ಕಥೆಯಾಗಿ ಹರಿಯುವುದನ್ನು ಕೇಳಿಸಿಕೊಳ್ಳುವ ಅವರ ಖುಷಿಗೆ ನಾನೂ ಸಖತ್ ಖುಷಿಪಟ್ಟುಕೊಂಡು ಅವರಿಗೆ ಟಾಟಾ ಹೇಳುವ ಹೊತ್ತಿಗೆ ನನ್ನ ಗಂಟಲೂ ಭಾರವಾಗುವುದು.

ಅಷ್ಟು ಹೊತ್ತಿಗೆ ಇರುಳು ಆಗುಂತಕನಾಗಿ ಬಂದಿದ್ದ ನಾನು ಈಗ ನೆಂಟನಂತಾಗಿ ಅವರ ಕಣ್ಣುಗಳೂ ತುಂಬಿಕೊಳ್ಳುವುದು. ಅವರೆಲ್ಲರೂ ಊರಿನ ಅಂಚಿನವರೆಗೆ ಬಂದು ಬೀಳುಕೊಳ್ಳುವುದು. ವಾಪಾಸಾಗುವ ಹಾದಿಯಲ್ಲಿ ನನ್ನ ಕಣ್ಣೂ ತುಂಬಿಕೊಳ್ಳುವುದು.

ಗಹನ ಮಾತುಗಳೂ ಇಲ್ಲ. ಕೆಟ್ಟ ಕೀಟಲೆಗಳೂ ಇಲ್ಲ. ಒಂದು ಹಳ್ಳಿ ಹೊಕ್ಕು, ಒಂದು ಅಡವಿ ಮುಗಿದು, ಒಂದು ದೊಡ್ಡ ತಿರುವಿನ ತಗ್ಗು ರಸ್ತೆ ಕಳೆದು ಎಷ್ಟೆಲ್ಲ ಕಥೆಗಳು, ಎಷ್ಟೊಂದು ಮುಖಗಳು… ಎಲ್ಲವನ್ನೂ ಒಳಗೇ ಇಟ್ಟುಕೊಂಡು ಯಾರಾದರೂ ಏನಾದರೂ ಕೇಳಿದರೆ ಸುಮ್ಮನೆ ತಲೆ ಅಲ್ಲಾಡಿಸುವುದು, ನಕ್ಕರೆ ನಗುವುದು, ಮಕ್ಕಳ ಜೊತೆ ಆಡುವುದು. ಅಷ್ಟು ಹೊತ್ತಿಗೆ ಆ ವಾರ ಮುಗಿದು ಇನ್ನೊಂದು ಹಾಡಿಯನ್ನೋ ಹಳ್ಳಿಯನ್ನೋ ಹೊಕ್ಕು ಬಿಡುವುದು. ಒಂದು ದೊಡ್ಡ ಸಂಗೀತದೊಳಗೆ ಹೊಕ್ಕಂತೆ ಈ ಬದುಕು ಕಳೆಯುತ್ತಿದೆ ಅನಿಸುವುದು.

2010-09-08_jungle-haadi3ಕಳೆದವಾರ ಹೀಗೇ ಇಲ್ಲೊಂದು ಹಾಡಿಯೊಳಕ್ಕೆ ಹೊಕ್ಕು ಕತ್ತಲು ಕತ್ತಲು ಹೊತ್ತಲ್ಲಿ ಅವರ ಜೊತೆ ಜಗಳಾಡುತ್ತಾ ನಿಂತಿದ್ದೆ.

‘ನೀವು ಹೀಗೆ ಹೊತ್ತಲ್ಲದ ಹೊತ್ತಲ್ಲಿ ಬಂದು ತಿನ್ನಲು ಆಹಾರವನ್ನೂ ಮಲಗಲು ಜಾಗವನ್ನೂ ಕೇಳಿದರೆ ನಾವು ಏನು ಮಾಡುವುದು. ನಾವು ಕಾಡಿನಲ್ಲಿರುವ ಪಂಜರಿಯರವರು. ನಮಗೆ ಕುಂಡೆ ತುರಿಸಲೂ ಪುರುಸೊತ್ತಿಲ್ಲ. ರಾತ್ರಿಯೆಲ್ಲಾ ಅಟ್ಟಣಿಗೆಯಲ್ಲಿ ಕಳೆದು ಆನೆಗಳಿಂದಲೂ ಹಂದಿಗಳಿಂದಲೂ ನಮ್ಮನ್ನು ನಾವು ಕಾಪಾಡಬೇಕು. ಇಂತ ಬಡವರ ಹಾಡಿಗೆ ನೀವು ಹೇಳದೆ ಕೇಳದೇ ಬಂದರೆ ಹೇಗೆ ಸ್ವಾಮೀ.. ನೀವು ನಮ್ಮ ಹಬ್ಬಕ್ಕೆ ಬನ್ನಿ. ಈಗ ಹೋಗೀ’ ಎಂದು ಅವರು ನನ್ನನ್ನು ವಾಪಾಸು ಹೋಗಲು ಪುಸಲಾಯಿಸುತ್ತಿದ್ದರು.

‘ಈ ರಾತ್ರಿಯಲ್ಲಿ ವಾಪಾಸು ಹೋಗುವುದು ಹೇಗೆ. ಅಟ್ಟಣಿಗೆಯಲ್ಲಾದರೂ ಜಾಗ ಕೊಡಿ ಬೆಳಗ್ಗೆ ಎದ್ದು ರೇಡಿಯೋದಲ್ಲಿ ಹೇಗೆ ಮಾತನಾಡುತ್ತೇನೆ ನೋಡಿ’ ಎಂದು ನಾನೂ ಪುಸಲಾಯಿಸಿ ಅಲ್ಲೇ ಉಳಕೊಂಡಿದ್ದೆ.

2010-09-08_jungle-haadiಅವರಿಗೂ ನನ್ನ ಮೊಂಡುತನ ನೋಡಿ ಪ್ರೀತಿ ಬಂದು ಹಾಡಿಯಲ್ಲಿ ಉಳಿಸಿಕೊಂಡಿದ್ದರು. ಅಟ್ಟಣಿಗೆಯಲ್ಲಿ ಜಾಗವಿಲ್ಲ ಎಂದು ಹಾಡಿಯ ಜಗಲಿಯಲ್ಲಿ ಮಲಗಲು ಜಾಗಕೊಟ್ಟಿದ್ದರು. ತಿನ್ನಲೂ ಕೊಟ್ಟಿದ್ದರು. ಸಾಹೇಬರು ಅಲ್ಲಾ ಮಾಡದ ಕೋಳಿಯನ್ನು ತಿನ್ನುವುದಿಲ್ಲ ಎಂದು ಅವರು ನನಗೆ ಕೊಡದೆ ಅವರೇ ತಿನ್ನಲು ನೋಡುತ್ತಿದ್ದರೆ ನಾನು ಅದರ ಪರಿಮಳಕ್ಕೆ ಮಾರು ಹೋಗಿ ನಾಚುಗೆಯಿಲ್ಲದೆ ಪರವಾಗಿಲ್ಲ ಎಂದು ಕೇಳಿ ತಿಂದುಬಿಟ್ಟಿದ್ದೆ.

‘ ಸಾಹೇಬರ ಹತ್ತಿರ ಹಂದಿಮಾಂಸ ಕೊಂಡು ಹೋಗಬೇಡಿ ಎಂದು ಆ ಪಂಜರಿಯರವರ ಯಜಮಾನನೊಬ್ಬ ಬೊಬ್ಬೆ ಹೊಡೆಯುತ್ತಾ ತಾನೊಬ್ಬನೇ ಅದನ್ನು ಮುಕ್ಕಲು ಹವಣಿಸುತ್ತಿರುವುದನ್ನು ನೋಡಿ ಮನಸ್ಸಲ್ಲೇ ನಗುತ್ತಿದ್ದೆ.

‘ ಯಾರು ತಾಯೀ ಈ ಕಾಡನಡುವೆ ಇಷ್ಟು ಪರಿಮಳದ ಸಾರು ಮಾಡಿರುವುದು?’ ಎಂದು ನಾನು ಕೇಳಿದರೆ ಚಂದವಿರುವ ತಾಯಿಯೊಬ್ಬಳು ಚಿಮಿಣಿ ದೀಪದ ಬೆಳಕಿನಲ್ಲಿ ತಲೆ ತಗ್ಗಿಸಿಕೊಂಡು ನಿಂತುಕೊಂಡಿದ್ದಳು. ಆಮೇಲೆ ಆಕೆಯ ಗಂಡ ಆಕೆಯ ಕಥೆಯನ್ನೂ ಹೇಳಿದ್ದ.

2010-09-08_jungle-haadi10ಆಕೆ ಆಸ್ಪತ್ರೆಯಲ್ಲಿ ಸಿಕ್ಕಿದ್ದ ಮಗುವಂತೆ. ಮಗುವಿಲ್ಲದ ಪಂಜರಿ ಯರವತಿಯೊಬ್ಬಳು ಆಕೆಯನ್ನು ತಂದು ಬೆಳೆಸಿ ದೊಡ್ಡವಳನ್ನಾಗಿ ಮಾಡಿ ಈತನಿಗೆ ಮದುವೆ ಮಾಡಿಕೊಟ್ಟಿದ್ದಂತೆ. ಆಕೆ ಮಾಡಿದ ಹಂದಿಯ ಅಡುಗೆ.

‘ನೋಡಲು ನನ್ನ ಹಾಗೆಯೇ ಇರುವಳಲ್ಲಾ. ನಮ್ಮ ಪೈಕಿಯ ಮಗುವೊಂದು ನೂರಾರು ವರ್ಷಗಳ ಹಿಂದೆ ಆಸ್ಪತ್ರೆಯಿಂದ ಕಾಣೆಯಾಗಿತ್ತಲ್ಲಾ. ಹಾಗಾದರೆ ನಾನೂ ನಿಮ್ಮವನೇ ಅಲ್ಲವಾ. ಮುಲಾಜಿಲ್ಲದೆ ಬಡಿಸು ತಾಯೀ’ ಎಂದು ಅವರನ್ನೆಲ್ಲ ಸಿಕ್ಕಾಪಟ್ಟೆ ನಗಿಸಿ ಇನ್ನೂ ಇಂತಹದೇ ನೂರಾರು ಕಥೆಗಳನ್ನು ಕೇಳಿ ನಿದ್ದೆ ಹೋಗಿದ್ದೆ.

ನಿದ್ದೆಯಲ್ಲಿ ಬೆಳಗಾಗುವ ಸದ್ದು. ಕಾಡುಕೋಳಿಗಳು ಕೊಕ್ಕರಿಸುವುದು, ಬಿದಿರು ಮೆಳೆಗಳು ಒಂದಕ್ಕೊಂದು ಉಜ್ಜಿ ಉಂಟಾಗುವ ಸಂಗೀತ. ದೂರದಲ್ಲೆಲ್ಲೋ ಕಾಡಾನೆಗಳು ಓಡಾಡುವ ಸದ್ದಿಗೆ ಬೊಗಳುವ ಹಾಡಿಯ ಕರ್ತವ್ಯನಿಷ್ಟ ನಾಯಿಗಳು. ‘ಎಲ್ಲಿ ಹಾಳಾಗಿ ಹೋಗಿದ್ದೀಯಾ’ ಎಂದು ಕೇಳುತ್ತಾ ಬಂದು ಬಿದ್ದಿರುವ ಎಸ್ಸೆಮ್ಮೆಸ್ ವಾಕ್ಯಗಳು. ತುಟಿಯಿಂದ ಹೊರಬರದೆ ನಿಂತಿರುವ ತುಂಡುತುಂಡು ಕವಿತೆಗಳು.

ವಾಪಾಸಾಗುವ ಮೊದಲು ನನ್ನನ್ನೂ ಪಂಜರಿಯರವನ್ನಾಗಿ ಮಾಡಿ ಎಂದು ಅವರನ್ನು ನೇರಪ್ರಸಾರದಲ್ಲೇ ಕೇಳಿಕೊಂಡೆ. ಅವರೂ ನೇರಪ್ರಸಾರದಲ್ಲೇ ಪಂಜರಿಯರವನಾಗುವುದು ಹೇಗೆ ಎಂದು ಹೇಳಿಕೊಟ್ಟರು.
ನದಿಯೊಂದಕ್ಕೆ ಏಳು ಕಟ್ಟೆಗಳನ್ನು ಕಟ್ಟಿ. ಆ ಏಳು ನೀರಿನಲ್ಲಿ ನಡುವಿನವರೆಗೆ ನಿಲ್ಲಿಸಿ, ಬಿದಿರಿನ ಮುಳ್ಳಿಂದ ನಾಲಗೆಯನ್ನು ಗೀರಿ ಗಾಯಮಾಡಿ ತಪ್ಪು ತೆರ ಕಟ್ಟಿಸಿಕೊಂಡು ಪಂಜರಿಯರವನನ್ನಾಗಿ ಮಾಡುವುದಂತೆ. ಆಮೇಲೆ ಪಂಜರಿಯರವನಾಗಿಯೇ ಇರುವುದಂತೆ.

ನಾನೂ ಆಗಲಿ ಎಂದಿರುವೆ. ಅದಕ್ಕೆ ಮುನ್ನುಡಿಯಾಗಿ ಅವರದೊಂದು ಬಳೆಯನ್ನು ನನಗೆ ಇತ್ತಿದ್ದಾರೆ. ಈ ಬಳೆಗೆ ಇವರು ‘ಪೇಯಿಬಳೆ’ ಎನ್ನುತ್ತಾರೆ. ಬಹಳ ಪುರಾತನ ಬಳೆ. ಇದು ಇದ್ದವನ ಬಳಿ ಆನೆಯೂ ಬರುವುದಿಲ್ಲ, ಜ್ವರವೂ ಇರುವುದಿಲ್ಲ, ದೆವ್ವಗಳೂ ಸುಳಿಯುವುದಿಲ್ಲವಂತೆ.

ನಾ2010-09-08_jungle-haadi4ನು ಈಗ ಈ ಬಳೆಯನ್ನು ತೊಟ್ಟುಕೊಂಡೇ ಓಡಾಡುತ್ತಿರುವೆ. ಎಲ್ಲ ಆನೆಗಳೂ, ದೆವ್ವಗಳೂ, ಕೀಟಲೆಗಳೂ, ಗಹನಾತಿಗಹನ ಮಾತುಗಳೂ ದೂರದಿಂದಲೇ ನೋಡಿ ಹತ್ತಿರ ಬರದೆ ಹೋಗುತ್ತಿವೆ.

(ಆಗಸ್ಟ್ ೨೮, ೨೦೧೧)

(ಫೋಟೋಗಳೂ ಲೇಖಕರವು)

Advertisements