Category Archives: ಷಿಲ್ಲಾಂಗಿನಿಂದ ಲಂಕೇಶ

ಚೆರ್ರಿ ಹೂವು ಮತ್ತು ಚೈನಾದ ಕತೆಗಾರ್ತಿ

 sc00077b1e-1.jpgಕತೆಯೊಂದನ್ನು ಬರೆಯಲು ಹೋರಾಡುತ್ತಾ ಇದೀಗ ಅದರಿಂದ ತಪ್ಪಿಸಿಕೊಳ್ಳಲು ಈ ಕಾಗದವನ್ನು ಬರೆಯುತ್ತಿರುವೆ. ಕತೆಯನ್ನು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾ ಆನಂದಿಸುತ್ತಾ ಮನಸ್ಸಿನಲ್ಲಿಯೇ ಮುಗಿಸಿ ಕೂರುವುದು ಎಂತಹ ಸುಲಭದ ವಿಷಯ. ಆದರೆ ಅದನ್ನೇ ಕಾಗದದಲ್ಲಿ ತರುವುದು,ಪಾತ್ರಗಳನ್ನು ಜೋಡಿಸುವುದು, ಅವುಗಳ ಬಾಯಿಂದ ಮಾತುಗಳನ್ನು ಹೇಳಿಸುವುದು ಎಂತಹ ರೇಜಿಗೆಯ ಕೆಲಸ. ಈ ಮಹಾ ಮಹಾ ಕತೆಗಾರರೆಲ್ಲಾ ಎಂತಹ ಹಠಮಾರಿ ಮಹಾತ್ವಾಕಾಂಕ್ಷೀ ಮನುಷ್ಯರು ಅಂತ ಯೋಚಿಸಿ ಆಶ್ಚರ್ಯವಾಗುತ್ತಿದೆ.

ನಿನ್ನೆ ಮೊನ್ನೆಯೆಲ್ಲಾ ಇಲ್ಲಿ  ಷಿಲ್ಲಾಂಗಿನಲ್ಲಿ ವಿಪರೀತ ಮಳೆ ಸುರಿಯುತ್ತಿತ್ತು. ಅದಕ್ಕೂ ಮೊದಲು ಈ ಊರ ತುಂಬಾ ಕಾಡು ಚೆರ್ರಿ ಮರಗಳು ನಸುಗೆಂಪು ಹೂ ತುಂಬಿಕೊಂಡು ನಿಂತಿದ್ದವು. ಈ ಊರಿನ ತುಂಬಾ ಬರೇ ಈ ಮರಗಳು ಅನ್ನುವ ಹಾಗೆ. ಅಕಾಲ ಮಳೆ ಸುರಿಯಲು ತೊಡಗಿ ಈ ಮರಗಳೆಲ್ಲಾ ಎರಡು ದಿನ ಲಜ್ಜೆಯಿಂದ ಭಾರವಾಗಿ ನೋವು ತುಂಬಿಕೊಂಡು ನಿಂತಿದ್ದವು. ಇಂದು ಬೆಳಿಗ್ಗೆ ಮಳೆ ನಿಂತು ನೋಡಿದರೆ ಎಲ್ಲಾ ಮರಗಳು ನಸುನಗುತ್ತಿದ್ದವು. ಎಲ್ಲೋ ಅಡಗಿದ್ದ ಬಣ್ಣಬಣ್ಣದ ಪಾತರಗಿತ್ತಿಗಳು ಮತ್ತೆ ಉಲ್ಲಾಸದಿಂದ ಹಾರಲು ಶುರುಮಾಡಿದ್ದವು. ಇನ್ನು ಕೆಲವು ದಿನಗಳಲಿ ಪ್ಲಂ ಮರಗಳು ಆಮೇಲೆ ಪೀಚ್  ಮರಗಳು ಹೀಗೆ ಹೂ ಬಿಡಲು ತೊಡಗುತ್ತದೆ. ಇನ್ನೆಷ್ಟು ಚಿಟ್ಟೆಗಳು ಎಂದು ಆಶೆಯಿಂದ ಕಾಯುತ್ತಿದ್ದೇನೆ.

ಆದರೆ ವರ್ಷಗಳಿಂದ ನಾನು ಒಂದು ಕತೆಯನ್ನೂ ಬರೆದಿಲ್ಲ ಎಂದು ಯೋಚಿಸಿಕೊಂಡು ಮುದುಡಿಹೋಗಿದ್ದೇನೆ. 

ಓದನ್ನು ಮುಂದುವರೆಸಿ

ಶನ್ಯಾಶಿ ಸಿಕ್ಕಿದಳು

 

ಕೆಲವು ವರುಷಗಳ ಹಿಂದೆ world cup football ನಡೆಯುತ್ತಿದ್ದಾಗ ಒಬ್ಬನಿಗೇ ಬೇಸರವಾಗಿ ಎಂದಿನ ಹಾಗೆ ಮಂಗಳೂರಿನ ಬೀದಿಗಳಲ್ಲಿ ತಲೆ ತಗ್ಗಿಸಿಕೊಂಡು ನಡೆಯುತ್ತಿದ್ದೆ. ಹಾಗೇ ನೋಡಿದರೆ ನೆಹರೂ ಮೈದಾನದಲ್ಲಿ football ಆಡುತ್ತಿದ್ದರು. ಜನ ಸೇರಿದ್ದರುshanyasi2.jpg. ಮೈದಾನದ ಕೊನೆಯಲ್ಲಿ ರಾಜಸ್ತಾನದ ದೊಂಬರಾಟದ ಕುಟುಂಬವೊಂದು ಡೇರೆ ಬಿಚ್ಚಿ ನೆಲದಲ್ಲಿ ಹರವಿಕೊಂಡು  ಆಕಾಶವನ್ನು  ನೋಡುತ್ತಾ ಕೂತಿತ್ತು. ಹೆಂಗಸೊಬ್ಬಳು ಬಾಯಿ ಬಡಿಯುತ್ತಾ  ಅಳುತ್ತಿದ್ದಳು .ಏಕೆಂದರೆ ಆಕೆಯ ಆರು ವರ್ಷದ ಮಗಳು ಕಾಣೆಯಾಗಿದ್ದಳು. ಕಾಣೆಯಾದ ಆ ಬಾಲಕಿಯ ಹೆಸರು ಶನ್ಯಾಶಿ. ಇದ್ದಕ್ಕಿದ್ದಂತೆಯೇ ಆಕೆ ಜನಜಂಗುಳಿಯಲ್ಲಿ ಕಾಣೆಯಾಗಿದ್ದಳು. ಆಕೆಯಿಲ್ಲದೆಯೇ ತಿರುಗಿ ಹೋಗುವುದು ಹೇಗೆಂದು ಆ ದೊಂಬರಾಟದ ಕುಟುಂಬಗವೇ ಅಲವತ್ತುಕೊಂಡು ಕೂತಿತ್ತು.

ಮಂಗಳೂರಿನ ನನ್ನ ಗೆಳೆಯರು, ನಾನು ಮತ್ತು ನನ್ನ ಹೆಂಡತಿ ಸುಮಾರು ಇಪ್ಪತ್ತು ದಿನಗಳ ಕಾಲ ಕಾಣೆಯಾದ ಈ ಹುಡುಗಿಯ ಜಾಡನ್ನು ನೋಡುತ್ತಾ ಒಂದು ಪ್ರಪಂಚವನ್ನೇ ಕಂಡೆವು. ಮಗುವನ್ನು ಬೀದಿಸೂಳೆಯರು ಕದ್ದು ಮಾರಿದ್ದಾರೆಂದು ಅವರ ಹಿಂದೆ, ಭಿಕ್ಷುಕರು ಸಾಕುತ್ತಿದ್ದಾರೆಂದು ಅವರ ಹಿಂದೆ, ರೈಲ್ವೆ ನಿಲ್ದಾಣದಲ್ಲಿ ಗಾಂಜಾ ಮಾರುವ ಮಲಯಾಳೀ ಕುಂಟನೊಬ್ಬನ ಹಿಂದೆ,ಪೊಲೀಸರ ಹಿಂದೆ, ಪತ್ರಕರ್ತರ ಹಿಂದೆ ಹೀಗೇ ತಿರುಗಾಡಿದೆವು.shanyasi.jpg

ಇಪ್ಪತ್ತು ದಿನಗಳು ಕಳೆದು ಬೀದಿ ಗುಡಿಸುವ ದಲಿತ ಹೆಂಗಸೊಬ್ಬಳ ಮನೆಯಲ್ಲಿ ಶನ್ಯಾಶಿ ದೊರಕಿದಳು. ಮಗು ದೊರಕಿದ ರಾತ್ರಿ ಬೆಳದಿಂಗಳಲ್ಲಿ ಆ ದೊಂಬರಾಟದ ತಂಡ ನಮ್ಮ ಸುತ್ತು ಸೇರಿಕೊಂಡು ಹಾಡಿಕೊಂಡು ಕುಣಿದುಕೊಂಡು ನಮಗೆಲ್ಲ ನಾವು ಇರುವುದು ಯಾವ ಕಾಲವೋ ಎಂದು ಅನಿಸಲಿಕ್ಕೆ ಹತ್ತಿತ್ತು.

ಈ ಹುಡುಕಾಟದ ಸಮಯದಲ್ಲಿ ನಮಗೆ ಅಬ್ದುಲ್ ರಜಾಕ್ ಎಂಬ ಭಿಕ್ಷುಕನೂ, ಮಾದೇವಿ ಎಂಬ ಆತನ ಹೆಂಡತಿ ಭಿಕ್ಷುಕಿಯೂ ಪರಿಚಯವಾಗಿದ್ದರು. ಅಬ್ದುಲ್ ರಜಾಕ್ ಎಂಬುವನು ಹರಪನಹಳ್ಳಿಯಲ್ಲಿ ಬಿರಿಯಾನಿ ಹೋಟೆಲಲ್ಲಿ ಕೆಲಸಕ್ಕಿದ್ದನಂತೆ. ಮಾದೇವಿ ಬೆಸ್ತರ ಹೆಂಗಸು. ಇಬ್ಬರೂ ನಡು ವಯಸ್ಸಲ್ಲಿ ಜೊತೆಗೆ ಜೀವಿಸಲು ತೊಡಗಿದರು. ಅಷ್ಟರಲ್ಲಿ ಈ ರಜಾಕ್‌ಗೆ ಒಲೆಯ ಬೆಂಕಿ ಅಲರ್ಜಿಯಾಗಿ ಬಿರಿಯಾನಿ ಕೆಲಸ ಮಾಡಲಾಗದೆ ಅವರಿಬ್ಬರು ಊರೂರು ಭಿಕ್ಷೆ ಬೇಡುತ್ತಾ ತಿರುಗುತ್ತಿದ್ದರು. ಮಂಗಳೂರಿಗೆ ಬಂದವರು ಮಳೆಯಲ್ಲಿ ಸಿಕ್ಕಿಹಾಕಿಕೊಂಡು, ನಂತರ ದೊಂಬರಾಟದವರ ಹುಡುಗಿಯನ್ನು ಹುಡುಕುವ ಕೆಲಸದಲ್ಲಿ ನಮ್ಮ ಜೊತೆ ಸೇರಿಕೊಂಡು ನಮಗೂ ಗೆಳೆಯರಾಗಿಬಿಟ್ಟಿದ್ದರು.

ಆ ಮಗು ಸಿಕ್ಕಿದ ಮೇಲೆ ಅವರೂ ಕಾಣೆಯಾಗಿಬಿಟ್ಟರು. ನಾನೀಗ ಮಂಗಳೂರಲ್ಲಿ ಒಂದೊಂದು ಸಲ ಈ ಅಬ್ದುಲ್ ರಜಾಕ್ ಎಂಬ ಭಿಕ್ಷುಕನನ್ನೂ ಅವನ ಹೆಂಡತಿ ಮಾದೇವಿಯನ್ನೂ ಹುಡುಕುತ್ತಿರುತ್ತೇನೆ.

ಆ ದೊಂಬರಾಟದ ಕುಟುಂಬದ ಹಿರಿಯ ರಾಮೇಶ್ವರ್ ಎಂಬಾತ ಕಳೆದ ವಾರ ರಾಜಸ್ತಾನದ ಆಲ್ವಾರ್‌ನಿಂದ ಫೋನಲ್ಲಿ ಮಾತನಾಡಿದ. ಕಳೆದು ಹೋದ ಬಾಲಕಿ ಸಿಕ್ಕಿದ ಕತೆ ಅವನ ಊರಲ್ಲೆಲ್ಲಾ ದೊಡ್ಡ ಸಂಗತಿಯಾಗಿದೆಯೆಂದೂ ನಾವೆಲ್ಲ ಅವನ ಊರಿಗೆ ಹೋಗಬೇಕೆಂದೂ ಹೋದರೆ ಆತ ಕಿಶನ್‌ಗಡ್ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿರುತ್ತಾನೆಂದೂ ಹೇಳುತ್ತಿದ್ದ.

ನಾನು ಸುಮ್ಮನೇ ಕಾಲದಲ್ಲಿ ಕಳೆದುಹೋಗಿದ್ದೆ.

ಮಾಜಿ ಮುಖ್ಯಮಂತ್ರಿಯ ಕಾದಂಬರಿಯೂ, ಬುರುಖಾ ಹಾಕಿದ ಹೆಂಗಸೂ

ಮಂಗಳೂರಲ್ಲಿ ಹಳೆಯ ಮುಖ್ಯಮಂತ್ರಿಯೊಬ್ಬರ ಇನ್ನೊಂದು ಕಾದಂಬರಿಯ ಬಿಡುಗಡೆಯಿತ್ತು. ಕಾದಂಬರಿ ಬರೆದು ಮುಗಿಸಿದ ಮಾಜಿ ಮುಖ್ಯಮಂತ್ರಿ ಖುಷಿಯಿಂದ ಕಂಗೊಳಿಸುತ್ತಿದ್ದರು. ಕನ್ನಡ ಸಾಹಿತ್ಯಕ್ಕೆ ನಿಮ್ಮ ಮುಂದಿನ ಕೊಡುಗೆ ಏನು ಎಂದು ಕೇಳಿದರೆ ಒಂದು ಮಹಾಕಾವ್ಯಕ್ಕೆ ಸ್ಕೆಚ್ ಹಾಕಿಕೊಂಡಿರುವೆ ಎಂದು ಹೇಳಿದರು. ‘ಮಹಾಕಾವ್ಯ ಅಂದರೆ ಹದಿನೆಂಟು ಬಗೆಯ ವರ್ಣನೆಗಳು ಇರುತ್ತದಂತಲ್ಲಾ ಅದೆಲ್ಲವೂ ಇರುತ್ತದಾ?’ ಎಂದು ಕೇಳಿದೆ. ‘ಎಲ್ಲವೂ ಸಿದ್ಧವಾಗಿದೆ’ ಎಂದು ಹೇಳಿದರು. ‘ಇದಕ್ಕೆಲ್ಲ ಸಂಸ್ಕೃತ, ಪಾಲಿ ಇತ್ಯಾದಿ ಓದಿಕೊಂಡಿರಬೇಕಲ್ಲ’ ಎಂದು ಕೇಳಿದೆ. ‘ಎಲ್ಲವೂ ಆಗಿದೆ’ ಎಂದು ಹೇಳಿದರು. ‘ಹಾಗಾದರೆ ನಾವೆಲ್ಲ ಕನ್ನಡಕ್ಕೆ ಬರಲಿರುವ ಇನ್ನೊಂದು ಮಹಾಕಾವ್ಯಕ್ಕಾಗಿ ಕಾದುಕೊಂಡಿರುತ್ತೇವೆ’ ಎಂದೆ. ಅವರು ನಗುಮುಖದಿಂದ ಕೈಕುಲುಕಿ ಎದ್ದು ತಮ್ಮ ಹತ್ತಾರು ಹಿಂಬಾಲಕರೊಡನೆ ಹೊರಟುಹೋದರು.ayesha1.jpg

ಆಮೇಲೆ ನಾನು ತಲೆಗೆ ಏಟುಬಿದ್ದವನಂತೆ ಮಂಗಳೂರಿನ ಬೀದಿಗಳಲ್ಲಿ ಬೈಕು ಓಡಿಸುತ್ತಿದ್ದೆ. ಕೊಂಚ ಹೊತ್ತಲ್ಲಿ ಏನೇನೋ ನೋಡಿದೆ.

ಆದಿನ ರಂಜಾನ್ ಹಬ್ಬವಾಗಿತ್ತು. ಊರಿಗೆ  ಹೋಗಿ ತಾಯಿಯನ್ನು ನೋಡಿರಲಿಲ್ಲ. ಗುರುಪುರ ನದಿಯ ತೀರಕ್ಕೆ ಹೋಗಿ ದೋಣಿಯಲ್ಲಿ ನದಿ ದಾಟುತ್ತಿರುವ ಗಂಡಸರನ್ನು ಹೆಂಗಸರನ್ನು ನೋಡುತ್ತ ಕುಳಿತೆ. ಹೆಂಗಸರು ಬುರುಕ ಹಾಕಿಕೊಂಡು, ಗಂಡಸರು ಮಕ್ಕಳು ಅತ್ತರು ಪೂಸಿಕೊಂಡು ಹೊಸಬಟ್ಟೆ ಹಾಕಿಕೊಂಡು ದೋಣಿಯಲ್ಲಿ ಕುಳಿತು ಹೋಗಿ ಬರುತ್ತಿದ್ದರು.

 ಸಂಕಟಪಡಬಾರದು ಎಂದು ಎಲ್ಲರನ್ನೂ ನಗುಮುಖ ಮಾಡಿಕೊಂಡು ನೋಡಿಕೊಂಡು ಕುಳಿತೆ. ಇವನು ಯಾರೋ ಹೆಂಗಸರನ್ನು ನೋಡುವವನು ಎಂದು ಗಂಡಸರು ದುರುಗುಟ್ಟಿಕೊಂಡು ನೋಡುತ್ತಿದ್ದರು. ಅಲ್ಲಿ ನಿಲ್ಲಲಾಗದ ಮತ್ತೆ ತಿರುಗಾಡಲು ತೊಡಗಿದೆ. ಓದನ್ನು ಮುಂದುವರೆಸಿ

ಸಿಂಗರ್ ಮತ್ತು ಫಾಹಿಯಾನ್ ಯಾನೆ ಗಂಡಸರ ಕಷ್ಟಗಳು!

 

faxian.jpg

ಇವತ್ತು ಇಲ್ಲೇ ತುರಾದ ಹತ್ತಿರದ ಒಂದು ಹಳ್ಳಿಗೆ ಹೋಗಿದ್ದೆ. ಯಾರೋ ಒಬ್ಬರು ‘ಬನ್ನೀ, ವಿಶ್ವ ಸ್ತನ್ಯಪಾನ ವಾರಾಚರಣೆ ಆಚರಿಸುತ್ತಿದ್ದೀವಿ’ ಅಂತ ಕರೆದಿದ್ದರು. ದಾರಿಯೇನೋ ತುಂಬಾ ಚೆನ್ನಾಗಿತ್ತು. ಮಳೆ ನಿಂತು ಬಿಸಿಲು ಚಾಚಿಕೊಂಡು ನೆಲದಿಂದ ಮೇಲಕ್ಕೆ ಮೋಡಗಳು ಎದ್ದು ನಿಂತು ಹಸಿರು ಬೆಟ್ಟಗಳು ಮೇಲೆ ಹರಡಿಕೊಂಡು ಎಲ್ಲಾ ಕನಸಿನ ಹಾಗೆ ಕಾಣುತ್ತಿತ್ತು. ಹಳ್ಳಿಗೆ ಹೋಗಿ ನೋಡಿದರೆ ಒಂದು ಸಣ್ಣ ಕೋಣೆಯ ಒಳಗೆ ಹತ್ತಾರು ಗ್ರಾಮಗಳ ತಾಯಂದಿರನ್ನು ಕೂರಿಸಿಕೊಂಡು ಒಬ್ಬ ಅಧಿಕಾರಿ ಇಂಗ್ಲೀಷಿನಲ್ಲಿ ಭಾಷಣ ಹೊಡೆಯುತ್ತಿದ್ದ. ಮಗುವಿಗೆ ಎದೆ ಹಾಲು ಉಣ್ಣಿಸುವುದು ಎಷ್ಟು  ಆರೋಗ್ಯಕಾರಿಮತ್ತು ಎಷ್ಟು ಮಿತವ್ಯಯಕಾರಿಅಂತ ವಿವರಿಸುತ್ತಿದ್ದ. ಅರ್ಥವಾಗದಿದ್ದರೂ ತಾಯಂದಿರು ತಲೆಯಾಡಿಸುತ್ತಿದ್ದರು.

ನನಗೆ ಯಾಕೋ ತಲೆನೋವು ಶುರುವಾಗಿತ್ತು. ಆ ತಲೆನೋವು ಇನ್ನೂ ಹೋಗಿಲ್ಲ. ಇಲ್ಲಿ ತಾಯಂದಿರು ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ ಅಂದರೆ ಗಂಡಂದಿರನ್ನು ಕೇರೇ ಮಾಡುವುದಿಲ್ಲ. ಹಗಲಿಡೀ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಇರುಳಿಡೀ ಎದೆಗೆ ಒತ್ತಿಕೊಂಡು ನಮ್ಮನ್ನು ಹೇಳುವವರು ಕೇಳುವವರು ಯಾರು ಇಲ್ಲ ಎಂದು ಗಂಡಸೊಬ್ಬ ಮೊನ್ನೆ ಗೋಳು ಹೇಳಿಕೊಳ್ಳುತ್ತಿದ್ದ. ಓದನ್ನು ಮುಂದುವರೆಸಿ

ಕತೆ ಮತ್ತು ಮಹಾತ್ವಾಕಾಂಕ್ಷೆ

ಅಲ್ಲಿ ನಿಮ್ಮನ್ನೆಲ್ಲ ನೋಡಿ ತಿರುಗಿ ಬಂದು ಇಲ್ಲಿ ಷಿಲ್ಲಾಂಗ್ ಎಂಬ ನನ್ನ ಕನಸಿನ ಲೋಕದಲ್ಲಿ ಒಬ್ಬನೇ ಕುಳಿತು ಕೊಂಡಿದ್ದೇನೆ. ಹೂಬಿಟ್ಟಿದ್ದ ಮರಗಳಲ್ಲೆಲ್ಲಾ ಈಗ ಹಣ್ಣುಗಳು ತುಂಬಿಕೊಂಡಿವೆ. ಕಿತ್ತಳೆ ಮಾರುತ್ತಿದ್ದ ಹುಡುಗಿಯರೆಲ್ಲಾ ಈಗ ಎಂತ ಎಂತಹದೋ ಹಣ್ಣುಗಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಕುಳಿತಿದ್ದಾರೆ. ಮಳೆಬಿಟ್ಟು ಮತ್ತೆ ಮಳೆ ಸುರಿಯುತ್ತಿದೆ. ಇಂದು ಸಂಜೆ ಮಳೆಯ ನಡುವೆ ದಾರಿ ಮಾಡಿಕೊಂಡು ಎಲ್ಲ ಕಡೆ ಸುತ್ತಾಡಿ ಹಲವು ಬಗೆಯ ಹಣ್ಣುಗಳನ್ನು ಕೊಂಡು ಒಂದೊಂದನ್ನೇ ತಿನ್ನುತ್ತಾ ಕುಳಿತೆ. ಒಂದು ಹಣ್ಣಿನ ಹೆಸರು ಮಾತ್ರ ಗೊತ್ತಾಯಿತು. ಅದು ‘ಪ್ಲಂ’ ಹಣ್ಣು.plum.jpg ಬಾಕಿಯೆಲ್ಲಾ ಹೆಸರೇ ಗೊತ್ತಿಲ್ಲದ ಹಣ್ಣುಗಳು ನನ್ನ ಬಾಯಿಯಲ್ಲಿ. ನಗುಬಂತು. ಮತ್ತು ನೀವು ಬರೆದ ಪತ್ರಗಳ ಸಾಲುಗಳು ನೆನಪಾಯಿತು. “ನೀನು ಬರೆಯುವಾಗ ಹುಷಾರಿಗಿರಬೇಕು, ತುಂಬಾ ಜನ ನಿನ್ನ ಪತ್ರಗಳನ್ನು ಓದುತ್ತಾರೆ” ಅಂತ ಬರೆದಿದ್ದೀರಿ.

. ಇಲ್ಲಿ ನನಗೆ ಯಾರೂ ಇಲ್ಲ. ಇರುವುದು ನಿಮಗೆ ಪತ್ರ ಬರೆಯುವ ಖುಷಿ. ಇನ್ನೊಂದು ಎಲ್ಲಿ ಬೇಕೆಂದರಲ್ಲಿ ಎಗ್ಗಿಲ್ಲದೆ ಓಡಾಡುವ ಆನಂದ. ಇರುವ ಒಬ್ಬಳು ಹೆಂಡತಿಯನ್ನೂ ಯಾಕೋ ಕನ್ನಡ ನಾಡಿನಲ್ಲೇ ಬಿಟ್ಟು ಬಂದಿರುವೆ. ಬಂದು ಇಲ್ಲಿ ನೋಡಿದರೆ ಮೊದಲು ಚೆನ್ನಾಗಿ ಮಾತನಾಡುತ್ತಿದ್ದ ನಗುತ್ತಿದ್ದ ಹುಡುಗಿಯರೂ ಬಿಗುಮಾನದಿಂದ ಓಡಾಡುತ್ತಿದ್ದಾರೆ. ಯಾಕೋ ಒಂಟಿ ಗಂಡಸಿನ ಕುರಿತು ಈ ಊರಿನವರಿಗೆ ಸಲ್ಲದ ಅನುಮಾನ ಇರುವಂತಿದೆ. ಓದನ್ನು ಮುಂದುವರೆಸಿ

ದೇವದೂತರ ಆಡುಭಾಷೆ!

ಮೇಘಾಲಯ ಎಂಬ ಈ ಪುಟ್ಟ ರಾಜ್ಯದ ರಾಜಕೀಯ ಇಡೀ-ವಾರ ನನ್ನ ತಲೆಯನ್ನು ತಿಂದು ಹಾಕಿಬಿಟ್ಟಿತು. ಮೂವರು ಮಂತ್ರಿಗಳು ಹೇಳದೆ ಕೇಳದೆ ಮುಖ್ಯಮಂತ್ರಿಯನ್ನು ಬಿಟ್ಟು ಎದುರುಪಾರ್ಟಿಯನ್ನು ಸೇರಿಕೊಂಡು ಬಿಟ್ಟಿದ್ದಾರೆ. ಎಪ್ಪತ್ತೇಳು ವರ್ಷದ ಮುಖ್ಯಮಂತ್ರಿ ಬಿದ್ದು ಹೋಗುವ ಸ್ಥಿತಿಯಲ್ಲಿದ್ದಾರೆ. ನಾನು ‘ಏನು ಕತೆ ನಿಮ್ಮ ಪರಿಸ್ಥಿತಿ ವೀಕ್ ಆಗಿ ಬಿಟ್ಟಿದೆಯಲ್ಲ’ ಅಂತ ಕೆಣಕಿದೆ. ಅವರು ತಟ್ಟನೆ ಶರಟಿನ ತೋಳು ಮಡಚಿ ತೋಳು ಬಲ ತೋರಿಸುತ್ತಾ ‘ಏನು ವೀಕ್ ಆಗಿದ್ದೇನಾ ನೋಡು’ ಅಂತ ನನ್ನ ಹೊಟ್ಟೆಗೆ ಪಂಚ್ ಮಾಡಲು ಬಂದರು. ನಾನು ನಗುತ್ತಾ ಬದಿಗೆ ಸೇರಿದೆ.meghalaya-map.gifಇಲ್ಲಿನ ಜನ ಹೀಗೆಯೇ. ಎಂತಹ ಅತಂತ್ರ ಸ್ಥಿತಿಯಲ್ಲೂ, ಎಂತಹ ಮುಖ್ಯ ಮಂತ್ರಿಯಾದರೂ ನಗು ಮತ್ತು ಚೇಷ್ಟೆ ಬಿಡುವುದಿಲ್ಲ.  ಇವರೆಲ್ಲರ ಹಿಂದೆ ತಿರುಗಾಡಿ ನನಗಂತೂ ತಲೆಕೆಟ್ಟು ಹೋಗಿತ್ತು. ಬಾಯಿತೆಗೆದರೆ ಮಂತ್ರಿಗಳ ಹೆಸರು. ತಲೆಯೊಳಗೆ ಎಂ.ಎಲ್.ಎಗಳು ಯಾವ ಸಹವಾಸವೂ ಬೇಡ ಅಂತ ಈವತ್ತು ಮಧ್ಯಾಹ್ನ ಬಾಗಿಲು ಹಾಕಿಕೊಂಡು ಕಿಟಕಿ ತೆಗೆದು ಬಿಸಿಲನ್ನು ಒಳಗೆ ಬಿಟ್ಟುಕೊಂಡು ಸುಮ್ಮನೆ ಕುಳಿತಿದ್ದೆ. ಎಂತಹ ಒಳ್ಳೆಯ ಬಿಸಿಲು! ಮಟಮಟಮಧ್ಯಾಹ್ನದಲ್ಲೂ ಮೈಮೇಲೆ ಹರಡಿಕೊಂಡು ಕೂರಬಹುದು. ಹಾಗೇ ತುಂಬಾ ಹೊತ್ತು ಕೂತಿದ್ದೆ. ಆಮೇಲೆ ಮಳೆ ಬರಲು ತೊಡಗಿತು.ಹೋಗಲಿ ಬಿಡಿ ಪ್ರತಿವಾರ ಮೋಡ  ಬಿಸಿಲು ಮಳೆ ಹೂವು ಅಂತ ಬರೆದು ನಾನೂ ನಿಮ್ಮ ತಲೆ ಹಾಳು ಮಾಡುತ್ತಿದ್ದೇನೆ. ಶಿವಮೊಗ್ಗದ ನಿಮ್ಮ ಊರಿನ ಹತ್ತಿರ ಹನುಮಂತಪ್ಪ ಅಂತ ನನ್ನ ಸಖನೊಬ್ಬನಿದ್ದಾನೆ. ಈ ಸಲ ಭತ್ತ ಮಾರಿ ಆ ಹಣದಲ್ಲಿ ವಿಮಾನ ಹತ್ತಿ ನಿನ್ನ ಹತ್ತಿರ ಬರುತ್ತೇನೆ ಅಂದವನು ಪತ್ತೆಯೇ ಇಲ್ಲ. ನನಗೆ ಯಾಕೋ ಅವನ ಭತ್ತ ಏನಾಯಿತು ಅಂತ ಚಿಂತೆ ಶುರುವಾಗಿದೆ.ಆಮೇಲೆ ಇನ್ನೊಂದು ವಿಷಯ. ನೀವು ನನ್ನನ್ನು ಕಳೆದವಾರ ‘ಸಾಬಿ’ ಅಂತ ಬರೆದಿದ್ದೀರಂತೆ. ಓದನ್ನು ಮುಂದುವರೆಸಿ

ಟರ್ಕಿ ಕೋಳಿಗಳ ನೆನಪು

male-turkey.jpgಯಾಕೋ ಸಣ್ಣಗೆ ನಗುಬರುತ್ತಿದೆ. ನಾನು ಪ್ರತಿವಾರವೂ ಕುಡುಮಿಯ ಹಾಗೆ ಹಠ ಹಿಡಿದು ನಿಮಗೆ ಪತ್ರಬರೆಯುವುದು.  ಕೆಲವರು  ಗೆಳೆಯರು ಇನ್ನು ಈತ ಕತೆಯೂ ಬರೆಯಲಾರ ಕವಿತೆಯೂ ಬರೆಯಲಾರ ಬರೀ ಪತ್ರ ಬರೆದು ಹಾಳಾಗಿ ಹೋಗುತ್ತಿರುವ, ಎಂದು ವಿನಾಕಾರಣ ಹಲುಬುವುದು,- ಎಲ್ಲವನ್ನೂ ಯೋಚಿಸಿ ಯೋಚಿಸಿ ಈವತ್ತು ಚಪಾತಿ ಲಟ್ಟಿಸಿತ್ತಾ ಕೂತಿದ್ದೆ. ಆಗಲೂ ನಗುಬರುತ್ತಿತ್ತು. ಚಪಾತಿ ನಾನು ಮಾಡಿದರೂ ಗುಂಡಗೆ ಆಗುತ್ತದೆ. ನಾನು ಮಾಡಿದ ದೋಸೆಯಲ್ಲೂ ತೂತುಗಳಿರುತ್ತದೆ ಎಂದೆಲ್ಲಾ ಗುನುಗುತ್ತಿದ್ದೆ.ಊರಿಗೆ ಹೋಗಿದ್ದಾಗ ನನ್ನ ಉಮ್ಮನಿಗೆ ಇಲ್ಲಿ ಷಿಲ್ಲಾಂಗಿನಲ್ಲಿ  ಒಳ್ಳೆ ಒಳ್ಳೆಯ ಬಾತುಕೋಳಿಗಳಿವೆ ಅಂತ ಹೇಳಿಬಿಟ್ಟಿದ್ದೆ. ಆಕೆ ಬೇರೆ ಏನೂ ಕೇಳದವಳು `ಅಯ್ಯೋ ನೀನು ಬರುವಾಗ ಬಾತುಕೋಳಿಯ ಮೊಟ್ಟೆಗಳನ್ನು ತರಬೇಕಾಗಿತ್ತು. ಇಲ್ಲಿ ಕಾವು ಕೊಟ್ಟು ಮರಿ ಮಾಡುತ್ತಿದ್ದೆ’ ಅಂತ ಹಂಬಲಿಸಿದ್ದಳು.ತುಂಬಾ ವರ್ಷಗಳ ಹಿಂದೆ ನನ್ನ ಬಾಪಾ ಎಲ್ಲಿಂದಲೋ ಟರ್ಕಿ ಕೋಳಿಯ ಮೊಟ್ಟೆಗಳನ್ನು ಹೀಗೇ ತಂದುಕೊಟ್ಟಿದ್ದರು. ಉಮ್ಮ ಅವುಗಳನ್ನು ಕಾವಿಗೆ ಬಂದ ಊರು ಕೋಳಿಯ ಹೊಟ್ಟೆಯ ಕೆಳಗೆ ಇಟ್ಟು ಕೊನೆಗೆ ಒಂದೇ ಒಂದು ಮರಿ ಹೊರಗೆ ಬಂದಿತ್ತು. ನೋಡಿದರೆ ಅದೊಂದು ಗಂಡು ಟರ್ಕಿ ಕೋಳಿಮರಿ. ಬಹುಶಃ ನೀವು ಟರ್ಕಿಕೋಳಿ ನೋಡಿರಲಿಕ್ಕಿಲ್ಲ.ತುಂಬಾ ಎತ್ತರಕ್ಕೆ ಬೆಳೆಯುತ್ತದೆ. ಆ ಗಂಡು ಟರ್ಕಿಕೋಳಿಯಂತೂ ತುಂಬಾ ಬೆಳೆದು ಅದರ ಕೊರಳೆಲ್ಲಾ ಕೆಂಪುಕೆಂಪಗೆ ಮಾಂಸದ ಗಂಟುಗಳಿಂದ ತುಂಬಿಕೊಂಡು ಅದಕ್ಕೆ ಸಿಟ್ಟು ಬಂದಾಗ ಇನ್ನಷ್ಟು ಕೆಂಪಾಗಿ, ಹೋಗುವವರನ್ನು ಬರುವವರನ್ನು ಅಟ್ಟಿಸಿಕೊಂಡು ಓಡಾಡುತ್ತಿತ್ತು. ಹೆಣ್ಣು ಮಕ್ಕಳನ್ನಂತೂ ಅದಕ್ಕೆ ಕಂಡರಾಗುತ್ತಿರಲಿಲ್ಲ. ನನ್ನ ಸಣ್ಣ ಸಣ್ಣ ತಂಗಿಯಂದಿರನ್ನು ಅಟ್ಟಿಸಿ ಅವರು ಬಿದ್ದು ಗಾಯ ಮಾಡಿಕೊಂಡು, ನನ್ನ ಉಮ್ಮನಿಗೆ ತಲೆಕೆಟ್ಟು ಹೋಗಿ ಆಮೇಲೆ ಬಾಪಾ ಎಲ್ಲಿಂದಲೋ ಒಂದು ಹೆಣ್ಣು ಟರ್ಕಿಕೋಳಿಯನ್ನು ತಂದು ಬಿಟ್ಟಿದ್ದರು. ಆಮೇಲೆ ಅವುಗಳು ತುಂಬಾ ಕಾಲ ಅನ್ಯೋನ್ಯವಾಗಿದ್ದವು.ಆಮೇಲೆ ಏನಾಯಿತು ಎಂಬುದು ನೆನಪಾಗುತ್ತಿಲ್ಲ.  ಓದನ್ನು ಮುಂದುವರೆಸಿ