Category Archives: ಮೈಸೂರಿನಿಂದ ಅಂಕಣ

ಜಿ. ಎಲ್. ಎನ್ ಅಯ್ಯನವರ ಹೂಬಿಟ್ಟ ಮರಗಳು

DSC_9166

ಮೈಸೂರಿನ ಶಾಂತಲಾ ಥಿಯೇಟರಿನ ಎದುರಿಗೆ ಸುಬ್ಬರಾಯನಕೆರೆ ಉಧ್ಯಾನವನವಿದೆ.

ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಮೈಸೂರಿನ ಆ ಕಾಲದ ಆದರ್ಶವಾದಿ ತರುಣರ ಆಡೊಂಬಲದಂತಿದ್ದ ಈ ಮೈದಾನ ಆನಂತರ ಕಸಕಡ್ಡಿ ಬಿಸಾಕುವ ತೊಪ್ಪೆಯಂತಾಗಿ, ಪೋಲಿದನಗಳಿಗೂ ಅಪಾಪೋಲಿ ಹುಡುಗರಿಗೂ ಆಶ್ರಯತಾಣದಂತಾಗಿದೆ ಎಂದು ಇಲ್ಲಿನ ನಾಗರಿಕರು ದೂರಿದ್ದರು.

ನಂತರದ ಕಾಲದಲ್ಲಿ ಮುಖ್ಯಮಂತ್ರಿಯೊಬ್ಬರ ಅನುಗ್ರಹದಿಂದಾಗಿ ಇಲ್ಲಿ ಒಂದು ಉಧ್ಯಾನವನವೂ, ದಂಡಿ ಸತ್ಯಾಗ್ರಾಹಿಗಳ ಶಿಲಾವಿಗ್ರಹಗಳೂ, ಮಕ್ಕಳಿಗೆ ಆಡಲು ಸಿಮೆಂಟಿನ ಅಂಗಳವೂ ಮತ್ತು ಅದೆಲ್ಲಕ್ಕಿಂತ ಮುಖ್ಯವಾಗಿ ಮೈಸೂರಿನ ಸ್ವಾತಂತ್ರ ಹೋರಾಟಗಾರರಿಗೆ ಒಂದು ಸ್ಮಾರಕಭವನವೂ ಮಂಜೂರಾಯಿತು.

ನಾನು ಇಲ್ಲಿ ಹೇಳಲು ಹೊರಟಿರುವುದು ಈ ಉಧ್ಯಾನವನದ ಕುರಿತಾಗಿಯೋ ಅಥವಾ ಈ ಸ್ಮಾರಕ ಭವನದ ಕುರಿತಾಗಿಯೋ ಅಲ್ಲ.

ಬದಲಿಗೆ ಪ್ರತಿ ಶುಕ್ರವಾರ ಸಂಜೆ ನಾಲಕ್ಕು ಗಂಟೆಗೆ ಸರಿಯಾಗಿ ಸರಸ್ವತಿಪುರಂನ ಒಂಬತ್ತನೇ ಮೇನ್ ನಲ್ಲಿರುವ ತಮ್ಮ ನಿವಾಸದಿಂದ ತಮ್ಮ ೧೯೭೩ನೇ ಮಾಡೆಲ್ಲಿನ ಹಳೆಯ ಫಿಯಟ್ ಕಾರನ್ನು ಚಾಲಿಸುತ್ತಾ ಹದಿನೈದು ನಿಮಿಷದಲ್ಲಿ ಈ ಉಧ್ಯಾನವನವನ್ನು ತಲುಪಿ, ಮೆಟ್ಟಿಲು ಇಳಿದು ಈ ಸ್ಮಾರಕ ಭವನವನ್ನು ಹೊಕ್ಕು ಸರ್ವಧರ್ಮ ಪ್ರಾರ್ಥನೆಗೆ ಸೇರಿಕೊಳ್ಳುವ ೯೨ ವರ್ಷ ವಯಸ್ಸಿನ ಶ್ರೀಯುತ ಕೆ.ಎಲ್.ಎನ್.ಅಯ್ಯ ಅವರ ಅತೀವ ಒಳ್ಳೆಯತನ ಮತ್ತು ಅಷ್ಟೇ ಸಹಜ ಸರಳತೆಯ ಕುರಿತು.

ಅದು ಅವರಾಗಿಯೇ ಯಾರಿಗೂ ಹೇಳಿಕೊಳ್ಳದ ಒಳ್ಳೆಯತನ ಮತ್ತು ಅದಾಗೇ ಬಂದಿರುವ ಸಹಜ ಸರಳತೆ.

‘ಅದು ಹೇಗೆ ಇಷ್ಟು ವಯಸ್ಸಾದರೂ ನೀವು ಒಳ್ಳೆಯವರಾಗೇ ಉಳಿದಿದ್ದೀರಿ ಅಯ್ಯನವರೇ?’ ಎಂದು ಕೇಳಿದರೆ ನೀನು ಕೇಳಿದ ಪ್ರಶ್ನೆಯಲ್ಲೇ ಏನೋ ವ್ಯಾಕರಣ ದೋಷವಿದೆ ಅನ್ನುವ ಹಾಗೆ ಅವರು ನಕ್ಕರು.

‘ ನೀವು ಯಾವಾಗಲೂ ಸಂತೋಷದಲ್ಲೇ ಇರುವ ಹಾಗೆ ಕಾಣಿಸುತ್ತಿರುವಿರಲ್ಲಾ ಅಯ್ಯನವರೇ.ಏನು ಇದರ ಹಿಂದಿನ ಗುಟ್ಟು’ ಎಂದು ಕೇಳಿದರೆ ಅದಕ್ಕೂ ಅವರದು ಅದೇ ನಗು.

‘ನೀವು ಹೀಗೆ ಎಲ್ಲದಕ್ಕೂ ನಕ್ಕರೆ ನಮಗೆ ಏನೂ ಗೊತ್ತಾಗುವುದಿಲ್ಲ ಅಯ್ಯನವರೇ .ದಯವಿಟ್ಟು ಹೇಳಿ, ಅಂದಾಗ ಅವರು ಚುಟುಕಾಗಿ ಹೇಳಿದ್ದು ಇಷ್ಟೇ

DSC_9178‘ನೋಡಿ ಇವರೇ.ನಾನು ಈ ದೇಶದ ಈಶಾನ್ಯ ಭಾಗದಲ್ಲಿ ತುಂಬ ಆಯಕಟ್ಟಾದ ಜಾಗದಲ್ಲಿ ಬಹಳ ವರ್ಷಗಳ ಕಾಲ ದೊಡ್ಡ ಎಂಜಿನಿಯರನಾಗಿದ್ದೆ.ಯಾರನ್ನಾದರೂ ಭ್ರಷ್ಟನನ್ನಾಗಿಸಬಹುದಾಗಿದ್ದ ಹುದ್ದೆ ಅದು.ಆದರೆ ಕೊನೆಯವರೆಗೂ ನನಗೆ ಭ್ರಷ್ಟನಾಗದೇ ಇರಲು ಆ ದೇವರ ದಯೆಯಿಂದಲೂ ತಂದೆ ತಾಯಂದಿರ ಆಶೀರ್ವಾದದಿಂದಲೂ ಸಾಧ್ಯವಾಯಿತು.ಹಾಗಾಗಿಯೇ ನನಗೆ ಈ ತೊಂಬತ್ತು ವರ್ಷಗಳಾದರೂ ನಗುತ್ತಾ ಆರೋಗ್ಯದಲ್ಲಿ ಬದುಕಲು ಅನುಕೂಲವಾಯಿತು.ಇದೇ ನನ್ನ ಸಂತೋಷದ ಗುಟ್ಟು’ ಎಂದು ಅವರು ತನ್ನದೇ ಗುಟ್ಟನ್ನು ತಾನೇ ರಟ್ಟು ಮಾಡಿದ ಮಗುವಿನಂತೆ ಮತ್ತೆ ನಕ್ಕರು.

ನಾವೀಗ ನೇರವಾಗಿ ೧೯೩೪ನೇ ಇಸವಿಗೆ ಹೋಗೋಣ.

ಆ ವರ್ಷ ಮಹಾತ್ಮಾ ಗಾಂಧಿಯವರು ಮೈಸೂರಿಗೆ ಬಂದಿದ್ದರು.

ಆಗ ನಮ್ಮ ಅಯ್ಯನವರು ಲಕ್ಷ್ಮೀಪುರಂನಲ್ಲಿದ್ದ ಮಿಡ್ಲ್ ಸ್ಕೂಲಿನಲ್ಲಿ ಓದುತ್ತಿದ್ದ ಹುಡುಗ.ಈ ಹುಡುಗನ ಪೂರ್ತಿ ಹೆಸರು ಕೆ.ಜಿ.ಲಕ್ಷ್ಮೀನರಸಿಂಹಯ್ಯ.

ತಂದೆ ಕೆ.ಪಿ.ಗುಂಡಪ್ಪ.ಮೈಸೂರು ಮಹಾರಾಜರ ಸರಕಾರದಲ್ಲಿ ಎಂಜಿನಿಯರ್ ಆಗಿದ್ದವರು.

ಲಲಿತಮಹಲ್ ಅರಮನೆಯನ್ನೂ, ಸರಕಾರೀ ಅತಿಥಿಗೃಹವನ್ನೂ ಕಟ್ಟಲು ದೊಡ್ಡ ಪಾತ್ರ ವಹಿಸಿದ್ದವರು.

ನಿವೃತ್ತಿಯ ಕಾಲದಲ್ಲಿ ಕೃಷ್ಣರಾಜಸಾಗರ ಜಲಾಶಯದಲ್ಲೂ ಹಿರಿಯ ಹುದ್ದೆಯನ್ನು ನಿರ್ವಹಿಸಿದ್ದವರು.

DSC_9151ಇಂತಹ ದೊಡ್ಡ ಎಂಜಿನಿಯರರ ಮಗನಿಗೆ ಆ ಸಣ್ಣ ಪ್ರಾಯದಲ್ಲೇ ಗಾಂಧಿಯ ಹೋರಾಟದ ಹುಚ್ಚು.ಎಷ್ಟು ಹುಚ್ಚು ಅಂದರೆ ಸೈಕಲ್ ಸ್ಕ್ವಾಡ್ ಅಂತ ಮಾಡಿಕೊಂಡು ಮೈಸೂರಿನ ಓಣಿಗಳಲ್ಲಿ ಸ್ವರಾಜ್ಯದ ಪ್ರಚಾರ.ಜೊತೆಗೆ ಹೆಂಡದಂಗಡಿಗಳ ಮುಂದೆ ಹರತಾಳ.ಇವರಿಗೆ ಇದಕ್ಕೆಲ್ಲ ನಾಯಕರಂತಿದ್ದವರು ಆಮೇಲೆ ಹೆಸರಾಂತ ಸಿನೆಮಾ ಛಾಯಾಚಿತ್ರಗಾರರಾಗಿ ಫಾಲ್ಕೆ ಪ್ರಶಸ್ತಿಯನ್ನೂ ಪಡೆದ ವಿ.ಕೆ.ಮೂರ್ತಿಯವರು.

ಮೈಸೂರಿನ ಓಣಿಗಳಲ್ಲಿ ಪೋಲೀಸರಿಂದ ತಪ್ಪಿಸಿಕೊಂಡು ಸೈಕಲ್ಲು ಓಡಿಸುವ ಹುಡುಗರ ಸ್ವಾತಂತ್ರ್ಯದ ಖುಷಿಯನ್ನು ನೀವು ಅಯ್ಯನವರ ಮಾತುಗಳಲ್ಲೇ ಕೇಳಬೇಕು.

ಅಷ್ಟು ಖುಷಿ!

ಆದರೆ ಅಯ್ಯನವರ ತಂದೆ ಗುಂಡಪ್ಪನವರಿಗೆ ಮಗನ ಸಾಹಸಗಳು ಒಂದಿನಿತು ಖುಷಿಯನ್ನೂ ನೀಡಿರಲಿಲ್ಲ.ಮಗನ ಮೇಲೆ ಅವರಿಗೆ ಎಷ್ಟು ಸಿಟ್ಟಿತ್ತು ಅಂದರೆ ೧೯೪೨ ರಲ್ಲಿ ಮಗ ಲಕ್ಷ್ಮೀನರಸಿಂಹಯ್ಯ ಮೈಸೂರಿನ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿದ್ದಾಗ ತಂದೆ ಗುಂಡಪ್ಪನವರು ಆ ಜೇಲಿನ ಕಟ್ಟಡದ ದುರಸ್ತಿಯ ಮೇಲ್ವಿಚಾರಣೆಗಾಗಿ ಆಗಾಗ ಬಂದು ಹೋಗುತ್ತಿದ್ದರು.ಸರಳುಗಳ ಹಿಂದೆ ಬಂಧಿಯಾಗಿದ್ದ ಮಗ ಅಪ್ಪ ಒಮ್ಮೆಯಾದರೂ ನೋಡಲಿ ಎಂದು ಕೊರಳು ಎತ್ತಿ ನಿಂತಿದ್ದರೆ ಸಿಟ್ಟಿನ ಅಪ್ಪ ಮುಖ ತಿರುಗಿಸಿ ಕಂಡೂಕಾಣದಂತೆ ಮುಂದೆ ನಡೆಯುತ್ತಿದ್ದರಂತೆ.

‘ಪಾಪ ಅಪ್ಪ’ ಎಂದು ಅದನ್ನು ನೆನಪಿಸಿಕೊಂಡು ಈ ತೊಂಬತ್ತೊಂದನೆಯ ವಯಸ್ಸಿನಲ್ಲಿ ಅಯ್ಯನವರು ನಗುತ್ತಾರೆ.

‘ಅಲ್ಲ ಅಯ್ಯನವರೇ ನಿಮಗೆ ಆಕಾಲದಲ್ಲಿ ಎಲ್ಲ ಸಂತೋಷಗಳೂ ಇದ್ದವು.ಅಪ್ಪ ಬಹಳ ದೊಡ್ಡ ಎಂಜಿನಿಯರಾಗಿದ್ದರು.ಆದರೂ ನೀವು ಬಡಪಾಯಿಯಂತೆ ಕಾಣಿಸುತ್ತಿದ್ದ ಮಹಾತ್ಮನ ಹಿಂದೆ ಯಾಕೆ ಹೋದಿರಿ?’ ಎಂದು ಕೇಳಿದರೆ ಅದಕ್ಕೂ ಅವರು ಭುಜ ಕುಣಿಸಿ ನಗುತ್ತಾರೆ.

‘ ‘ಗಾಂಧೀಜಿಯವರ ಚಳುವಳಿಯ ಉದ್ದೇಶ ಅಷ್ಟೊಂದು ಘನವಾಗಿತ್ತು’ ಎಂದು ತಣ್ಣಗಿನ ಆದರೆ ಅಷ್ಟೇ ಕಡುವಾದ ಕನ್ನಡದಲ್ಲಿ ಉತ್ತರಿಸುತ್ತಾರೆ.

DSC_9185ಕೆ.ಜಿ.ಲಕ್ಷ್ಮೀನರಸಿಂಹಯ್ಯ ಅವರ ಹೆಸರು ಜಿ.ಎಲ್.ಎನ್.ಅಯ್ಯ ಎಂದು ಆಗಿದ್ದರ ಹಿಂದೆಯೂ ಒಂದು ಕಥೆಯಿದೆ. ಇವರು ತಮ್ಮ ಸೇವಾಜೀವಿತದ ಕೊನೆಯ ಮೂರು ದಶಕಗಳನ್ನು ಅಸ್ಸಾಂ ಅರುಣಾಚಲ ಗಡಿಯ ದುಲಿಯಾಜಾನ್ ಎಂಬಲ್ಲಿ ತೈಲಶೋಧ ಕಂಪೆನಿಯೊಂದರಲ್ಲಿ ಸಿವಿಲ್ ಎಂಜಿನಿಯರಾಗಿ ಕಳೆದರು.ಅಲ್ಲಿನವರದು ಸಣ್ಣ ಸಣ್ಣ ಹೆಸರುಗಳು.ಅಲ್ಲಿನವರಿಗೆ ಇವರ ಉದ್ದದ ಹೆಸರು ಉಚ್ಛರಿಸಲು ಕಷ್ಟವಾಗುತಿತ್ತು.ಅದಕ್ಕಾಗಿ ಅವರು ಅದನ್ನು ಕತ್ತರಿಸಿ ಸಣ್ಣದಾಗಿ ಕರೆದರು.ಅದು ಅಯ್ಯನವರಿಗೂ ಇಷ್ಟವಾಗಿ ಅವರೂ ಅದನ್ನೇ ಇಟ್ಟುಕೊಂಡರು.

ಜೊತೆಗೆ ಅಲ್ಲಿಯೇ ಖರೀದಿಸಿದ ಮಾಡೆಲ್ಲಿನ ಫಿಯೆಟ್ ಕಾರು.

ನಿವೃತ್ತಿಯಾದ ಮೇಲೆ ಮೈಸೂರಿಗೆ ಅದನ್ನು ತಂದು ಕಳೆದ ಮೂವತ್ತು ವರ್ಷಗಳಿಂದ ಅದನ್ನೇ ಓಡಿಸುತ್ತಿರುವರು.

ಒಂದೇ ಜೀವನ, ಒಂದೇ ಕಾರು,ಒಬ್ಬಳೇ ಹೆಂಡತಿ ಮತ್ತು ಅಪರಿಮಿತವಾದ ಪ್ರಾಮಾಣಿಕತೆ!

ಜೀವನ ಎಂದರೆ ಸುಂದರವೂ ಸುರಬಿಲವೂ ಆಗಿರಲು ಇನ್ನೇನು ಬೇಕು ಎಂದು ಇಂದು ಬೆಳಗ್ಗೆ ಕ್ವಿಟ್ ಇಂಡಿಯಾ ಚಳವಳಿಯ ನೆನಪಿಗಾಗಿ ಅದೇ ಹಳೆಯ ಕಾರು ಚಾಲಿಸಿಕೊಂಡು ಸುಬ್ಬರಾಯನಕೆರೆಗೆ ಹೋಗಿ ಧ್ವಜಾರೋಹಣಗೈದು ಬಂದ ಅಯ್ಯನವರನ್ನೂ ಅವರ ಎದುರಿಗೆ ಕುಳಿತಿದ್ದ ಅವರ ಮಡದಿಯನ್ನೂ ನೋಡುತ್ತಾ ಯೋಚಿಸುತ್ತಾ ಕುಳಿತಿದ್ದೆ.

ಇದು ಯಾವುದು ಇಲ್ಲದೆಯೂ ಸುಖಪುರುಷರಂತೆ ಬದುಕುತ್ತಿರುವ ನನ್ನಂತಹ ಖಳರು!

ಮೂರು ವರ್ಷಗಳ ಹಿಂದೆ ಅಯ್ಯನವರೂ, ಮಡದಿಯೂ ವಿದೇಶದಲ್ಲಿರುವ ಮಕ್ಕಳು ಮೊಮ್ಮಕ್ಕಳನ್ನು ಕಟ್ಟಿಕೊಂಡು ಅಸ್ಸಾಂ ಅರುಣಾಚಲ ಗಡಿಯ ದುಲಿಯಾಜಾನ್ ಗೆ ಹೋಗಿ ಬಂದರಂತೆ.

ಮೂವತ್ತು ವರುಷಗಳ ಕಾಲ ದುಡಿಯುತ್ತಾ ಬದುಕಿದ್ದ ಊರು ಮೂವತ್ತು ವರ್ಷಗಳಾದರೂ ಹಾಗೇ ಇತ್ತಂತೆ.

ಅಯ್ಯನವರೇ ನಿರ್ಮಿಸಿದ್ದ ತೈಲಶೋಧ ಕಂಪನಿಯ ನೌಕರರ ಸಾಲು ಸಾಲು ವಸತಿಗೃಹಗಳು.

ತೈಲಕ್ಕಾಗಿ ಭೂಮಿಯನ್ನು ಕೊರೆಯುವ ರಿಗ್ ಯಂತ್ರಗಳ ಚಲನೆಗಾಗಿ ಅಯ್ಯನವರೇ ನಿರ್ಮಿಸಿದ್ದ ಟಾರು ರಸ್ತೆಗಳು.

DSC_9170ರಸ್ತೆಯ ಎರಡೂ ಬದಿ, ಮನೆಗಳ ಸುತ್ತಮುತ್ತ ಅಯ್ಯನವರೇ ನೆಡಿಸಿದ್ದ ಹೂಬಿಡುವ ಸಾಲುಸಾಲು ಮರಗಳು.

‘ಯಾವಾಗಲೂ ಹೂವು, ಯಾವಾಗಲೂ ಹೂವು, ಇದ್ದಾಗಲೂ ಹೂವು, ಮೂರು ವರ್ಷಗಳ ಹಿಂದೆ ಹೋದಾಗಲೂ ಹೂವು..’ ಅಯ್ಯನವರು ಯಾವುದೇ ಉಧ್ವೇಗ ತೋರಿಸಬಾರದೆಂದು ಅನ್ನುತ್ತಿದ್ದರೂ ಅವರ ಕಣ್ಣುಗಳಲ್ಲಿ ಕಾಣಿಸುತ್ತಿದ್ದ ಹೂ ಬಿಟ್ಟ ಮರಗಳು.

ದೇವರೇ ಇವರ ಹಾಗೆ ಯಾವಾಗಲೂ ಒಳ್ಳೆಯವನಾಗಿರುವುದು ಹೇಗೆ ಎಂದು ಈಗಲೂ ಯೋಚಿಸುತ್ತಿರುವೆ.

(10 August 2014)

(Photos by the author)

ಮೈಸೂರಿನ ಹುಲಿಸಂಪಾದಕರು

bಮೈಸೂರಿನಲ್ಲಿ ನಾವು ಕಾಲೇಜು ಕಲಿಯುತ್ತಿದ್ದಾಗ ಒಂದು ಹುಲಿ ಒಂದೇ ಹಾಳೆಯ ಪತ್ರಿಕೆಯೊಂದನ್ನು ನಡೆಸುತ್ತಿತ್ತು.ಪತ್ರಿಕೆಯ ಹೆಸರು ‘ಹುಲಿ ಪತ್ರಿಕೆ’. ಸಂಪಾದಕರು ತಮ್ಮ ನಿಜದ ಹೆಸರನ್ನು ಎಲ್ಲೂ ಹಾಕುತ್ತಿರಲಿಲ್ಲ.ಬದಲಾಗಿ ತಮ್ಮನ್ನು ‘ಹುಲಿ’ ಎಂದೇ ಎಲ್ಲ ಕಡೆಯೂ ಕರೆದುಕೊಳ್ಳುತ್ತಿತ್ತು.ಆಗ ಮೈಸೂರಿನಲ್ಲಿ ಸಣ್ಣ ಪತ್ರಿಕೆಗಳದೇ ಕಾಲ.ಸಿಟ್ಟು ಬಂದರೆ ಒಂದು ಪತ್ರಿಕೆ. ಪ್ರೀತಿ ಹುಟ್ಟಿದರೆ ಇನ್ನೊಂದು ಪತ್ರಿಕೆ, ವಿರಹ ಉಂಟಾದರೆ ಒಂದು ಸಣ್ಣ ಪ್ರಿಂಟಿಂಗ್ ಪ್ರೆಸ್ಸು. ಹೀಗೆ ತರಹಾವರಿ ಪತ್ರಿಕೋಧ್ಯಮ ಸಾಹಸಗಳಿಗೆ ಹೆಸರು ವಾಸಿಯಾಗಿದ್ದ ಆ ಕಾಲದಲ್ಲಿ ಹುಲಿಯೂ ಕೂಡಾ ಪತ್ರಿಕೆಯೊಂದನ್ನು ನಡೆಸುತ್ತಿದೆ ಎಂಬುದು ನಮಗೆ ಅಂತಹ ದೊಡ್ಡ ಅಚ್ಚರಿಯನ್ನೇನೂ ಉಂಟು ಮಾಡುತ್ತಿರಲಿಲ್ಲ.ಕೈಯಲ್ಲಿ ಸ್ವಲ್ಪ ಕಾಸಿದ್ದರೆ ನಾವೂ ಕೂಡಾ ಅಂತಹದೊಂದು ಸಾಹಸವನ್ನು ನಡೆಸುತ್ತಿದ್ದೇವೋ ಏನೋ ಆದರೆ ಅಪ್ಪ ಕಳಿಸುತ್ತಿದ್ದ ಹಣ ಹಾಸ್ಟೆಲಿನ ಮೆಸ್ಸು ಬಿಲ್ಲಿಗೆ ಮಾತ್ರ ಆಗುತ್ತಿದ್ದುದರಿಂದ ಅಳಿದುಳಿದ ಮೊತ್ತದಲ್ಲಿ ಬೈಟೂಟೀ ಕುಡಿಯುತ್ತಾ ಹುಲಿ ಪತ್ರಿಕೆಯನ್ನು ಓದುತ್ತಾ ಕಾಲ ಕಳೆಯುತ್ತಿದ್ದೆವು.

ಆ ಪತ್ರಿಕೆಯ ಹೆಡ್ಡಿಂಗುಗಳೂ ರೋಚಕವಾಗಿರುತ್ತಿದ್ದವು.‘ಹುಲಿ ಸಂಚಾರ’ ‘ಹುಲಿಯ ಸಿಟ್ಟು’ ‘ಹುಲಿ ಗರ್ಜನೆ’ ಇತ್ಯಾದಿಗಳ ನಡುವೆ ‘ಹುಲಿ ವಿಷಾದಿಸುತ್ತದೆ’ ‘ಹುಲಿಗೆ ಬೇಕಾಗಿದ್ದಾರೆ’ ಮೊದಲಾದ ಪ್ರಕಟಣೆಗಳೂ ಇರುತ್ತಿದ್ದವು.ಆ ಎರಡು ಪುಟಗಳ ಪತ್ರಿಕೆಯ ಎಲ್ಲ ವರದಿಗಳೂ, ಸಂಪಾದಕೀಯವೂ, ಪ್ರಕಟಣೆಯೂ ಜಾಹೀರಾತೂ ಹೀಗೆ ಎಲ್ಲವೂ ಸಾಕ್ಷಾತ್ ಹುಲಿಯೇ ಯಾರೋ ನರಮನುಷ್ಯನಾದ ಉಪ ಸಂಪಾದಕನೊಬ್ಬನ ಕೈಲಿ ಹೇಳಿ ಬರೆಸಿದಂತೆ ಓದಿಸಿಕೊಂಡು ಸಖತ್ ಮಜಾ ನೀಡುತ್ತಿತ್ತು.

‘ಈ ದಿನ ಹುಲಿಯು ಮೈಸೂರಿನ ಅಠಾರಾ ಕಚೇರಿಯನ್ನು ಒಂದು ಸುತ್ತು ಹಾಕಿ ಬಂದಿತು.ಅಲ್ಲಿ ಕಂಡ ದೃಶ್ಯಗಳಿಂದಾಗಿ ಹುಲಿಗೆ ತುಂಬಾ ಸಿಟ್ಟು ಬಂದಿತ್ತು.ಇದು ಹೀಗೇ ಮುಂದುವರಿದರೆ ಹುಲಿಯು ಇನ್ನು ಸುಮ್ಮನಿರಲು ಸಾಧ್ಯವಿಲ್ಲ .ಮುಂದಿನ ವಾರವೂ ಹುಲಿಯು ಆ ಕಚೇರಿಗೆ ಹೋಗಬೇಕೆಂಬ ನಿರ್ದಾರಕ್ಕೆ ಬಂದಿದೆ.ಈ ದಿನ ನೋಡಿದ ದೃಶ್ಯಗಳು ಹುಲಿಯ ಮುಂದಿನ ಭೇಟಿಯಲ್ಲೂ ಕಂಡು ಬಂದರೆ ಹುಲಿಯು ಕಠಿಣವಾದ ಕ್ರಮವನ್ನೇ ತೆಗೆದುಕೊಳ್ಳುತ್ತದೆ.ಅಠಾರಾ ಕಚೇರಿಯ ನೌಕರರಿಗೆ ಇದು ಹುಲಿಯ ಕೊನೆಯ ಎಚ್ಚರಿಕೆ’

‘ಈ ದಿನ ಹುಲಿಯು ಮೈಸೂರಿನ ಸಯ್ಯಾಜಿರಾವ್ ರಸ್ತೆಯ … ಭವನಕ್ಕೆ ಟೀ ಸೇವನೆಗೆ ಹೋಗಿತ್ತು.ಅಲ್ಲಿನ ಮಾಲೀಕರು ಗ್ರಾಹಕರಿಂದ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿರುವುದು ಹುಲಿಯ ಗಮನಕ್ಕೆ ಬಂದಿದೆ.ಅದೂ ಅಲ್ಲದೆ ಅಲ್ಲಿ ರುಚಿ ಮತ್ತು ಶುಚಿಗೆ ಹೆಚ್ಚಿನ ಗಮನ ಕೊಡುತ್ತಿಲ್ಲ ಎಂಬುದನ್ನೂ ಹುಲಿಯು ಗಮನಿಸಿದೆ.ಮುಂದಿನ ವಾರವೂ ಈ ಹುಲಿಯು … ಭವನಕ್ಕೆ ಭೇಟಿ ನೀಡಲಿದೆ.ಆ ಸಮಯದಲ್ಲೂ ಈ ಹೋಟೆಲಿನ ವ್ಯವಸ್ಥೆಗಳು ಹೀಗೇ ಮುಂದುವರಿದರೆ ಹುಲಿಯು ತಕ್ಕದಾದ ಕ್ರಮವನ್ನು ತೆಗೆದುಕೊಳ್ಳುತ್ತದೆ.ಇನ್ನು ಈ ಹುಲಿಗೆ ಸುಮ್ಮನಿರಲು ಸಾಧ್ಯವಿಲ್ಲ.ಅದು ಖಂಡಿತವಾಗಿಯೂ ಗರ್ಜಿಸುತ್ತದೆ.ಇದು … ಭವನದ ಮಾಲಿಕರಿಗೆ ಈ ಹುಲಿಯ ಎಚ್ಚರಿಕೆ’

ಇವು ಈಗ ನನಗೆ ನೆನಪಾಗುತ್ತಿರುವ ಮೈಸೂರಿನ ‘ಹುಲಿ ಪತ್ರಿಕೆ’ಯ ಆ ಕಾಲದ ಕೆಲವು ಸ್ಯಾಂಪಲ್ಲುಗಳು.ನಿಜಕ್ಕೂ ಹುಲಿಯೊಂದು ಸಂಪಾದಕನಾಗಿ ಮೈಸೂರಿನ ಅಂಗುಲ ಅಂಗುಲ ತಿರುಗುತ್ತ ಎಲ್ಲವನ್ನೂ ಗಮನಿಸುತ್ತ ಅದನ್ನು ಬರೆಯುತ್ತ ಎಲ್ಲರನ್ನೂ ಎರಡು ಪುಟದಲ್ಲಿ ಎಚ್ಚರಿಸುತ್ತ ಇರುತ್ತಿದೆ ಎಂಬುದು ನಮಗೆ ಆ ಕಾಲದಲ್ಲಿ ರೋಮಾಂಚನವನ್ನೂ, ನಗುವನ್ನೂ, ವಿಷಾದವನ್ನೂ ಏಕಕಾಲದಲ್ಲಿ ಉಂಟು ಮಾಡುತ್ತಿತ್ತು.ಮೈಸೂರಿನ ಲ್ಯಾಂಡ್ಸ್ ಡೌನ್ ಕಟ್ಟಡದ ಅತಿ ಪುರಾತನ ಪತ್ರಿಕಾ ಮಳಿಗೆಯೊಂದರಲ್ಲಿ ಮಾತ್ರ ಸಿಗುತ್ತಿದ್ದ ಇದರ ಪ್ರತಿಯೊಂದನ್ನು ಯಾರು ಅಷ್ಟು ದೂರ ಹೋಗಿ ತರುವುದು ಎಂದು ಗೆಳೆಯರಾದ ನಮ್ಮಲ್ಲಿ ಸಣ್ಣ ಮಟ್ಟಿಗಿನ ಜಗಳಾಟವೂ ನಡೆಯುತ್ತಿತ್ತು.ಆದರೆ ತಪ್ಪದೆ ನಮ್ಮಲ್ಲಿ ಯಾರಾದರೊಬ್ಬರು ವಾರಕ್ಕೊಂದು ಪ್ರತಿಯನ್ನು ತಂದಿಟ್ಟಿರುತ್ತಿದ್ದರು ಮತ್ತು ನಾವೆಲ್ಲರೂ ಅದನ್ನು ಜೋರಾಗಿ ಓದುತ್ತಾ ಬೈಟೂಟೀ ಕುಡಿಯುತ್ತಾ ಸಿಗರೇಟು ಸೇದುತ್ತಾ ಮಜಾ ತೆಗೆದುಕೊಳ್ಳುತ್ತಿದ್ದೆವು.ಆ ಪತ್ರಿಕೆಯಲ್ಲಿ ಬರದೇ ಇರುವ ವಿಷಯಗಳನ್ನೂ ನಾವು ಹುಲಿಯ ಶೈಲಿಯಲ್ಲೇ ಗಮನಿಸುತ್ತಾ ಹುಲಿಯ ರೀತಿಯಲ್ಲೇ ವಿಶ್ಲೇಷಿಸುತ್ತಾ ಹುಲಿಯ ಶೈಲಿಯಲ್ಲೇ ಬರೆದಂತೆ ಓದುತ್ತಿದ್ದೆವು.

ಉದಾಹರಣೆಗೆ ‘ಹುಲಿಯು ಇಂದು ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಇಂಗ್ಲಿಷ್ ವಿಭಾಗದ ಮೊದಲನೆಯ ಎಂಎ ತರಗತಿಗೆ ಹೋಗಿ ಸುಮ್ಮನೆ ಕುಳಿತಿತ್ತು.ಅಲ್ಲಿ ಪೋಲಂಕಿ ರಾಮಮೂರ್ತಿಯವರು ವಿಲಿಯಂ ಬ್ಲೇಕನ ಟೈಗರ್ ಕವಿತೆಯನ್ನು ಪಾಠ ಮಾಡುತ್ತಿದ್ದ ಶೈಲಿಯನ್ನು ಸುಮ್ಮನೆ ಗಮನಿಸುತ್ತಿತ್ತು. ಈ ಹುಲಿಗೆ ಅವರ ಬ್ಲೇಕನ ಆ ಹುಲಿಯ ಕುರಿತ ವ್ಯಾಖ್ಯಾನಗಳು ಇಷ್ಟವಾಗಿಲ್ಲ.ಈ ಹುಲಿಗೆ ಉಗ್ರವಾಗಿ ಸಿಟ್ಟು ಬಂದಿದೆ.ಅವರು ತಮ್ಮ ಶೈಲಿಯನ್ನು ತಿದ್ದಿಕೊಳ್ಳತಕ್ಕದ್ದು.ಇಲ್ಲವಾದಲ್ಲಿ ಈ ಹುಲಿಯು ಮುಂದಿನ ವಾರ ಅವರ ತರಗತಿಗೆ ಹೋಗಿ ಜೋರಾಗಿ ಗರ್ಜಿಸುತ್ತದೆ’

aಹೀಗೆ ಇನ್ನೂ ಹಲವು ಆ ಕಾಲದ ಪ್ರಚಲಿತ ಸಂಗತಿಗಳನ್ನು ಹುಲಿಸಂಪಾದಕರ ದೃಷ್ಟಿಕೋನದಿಂದ ನೋಡುತ್ತ, ಗಮನಿಸುತ್ತ ಮನಸಿನಲ್ಲೇ ಬರೆಯುತ್ತ ನಾವೂ ಸ್ವಲ್ಪಹೊತ್ತು ಹುಲಿಯೇ ಆಗಿ ಹೋಗುತ್ತಿದ್ದವು.ಆಗ ಮೈಸೂರಿನಲ್ಲಿ ಸಮಾಜವನ್ನು ಎಡಪಂಥದ ದೃಷ್ಟಿಕೋನದಿಂದ, ಸಮಾಜವಾದಿ ದೃಷ್ಟಿಕೋನದಿಂದ, ಗಾಂಧಿ ದೃಷ್ಟಿಕೋನದಿಂದ ಹಾಗೂ ಇನ್ನೂ ಹಲವು ದೃಷ್ಟಿಕೋನಗಳಿಂದ ನೋಡುತ್ತಿದ್ದವರೇ ಹೆಚ್ಚಾಗಿದ್ದ ಕಾಲದಲ್ಲಿ ಹುಲಿಯೊಂದರ ದೃಷ್ಟಿಕೋನ ನಮಗೆ ಬೇಕಾದ ವಿರಾಮವನ್ನೂ ಆರಾಮವನ್ನೂ ಹಾಗೂ ವಿಪುಲವಾದ ಸಾಧ್ಯತೆಗಳನ್ನೂ ನೀಡುತ್ತಿತ್ತು.

ನಾನಂತೂ ಈ ಹುಲಿ ಸಂಪಾದಕನ ಉಪ ಸಂಪಾದಕನಾಗಬೇಕೆಂಬ ಕನಸನ್ನೂ ಕಾಣುತ್ತಿದ್ದೆ.ಹೇಗಾದರೂ ಆ ಹುಲಿಯನ್ನು ಕಾಣಬೇಕೆಂದು ಹಂಬಲಿಸುತ್ತಿದ್ದೆ.ಆದರೂ ನೋಡಲು ಹೆದರುತ್ತಿದ್ದೆ.ಒಂದು ಸಲ ಲ್ಯಾನ್ಸ್ ಡೌನಿನ ಪೇಪರಂಗಡಿಯಲ್ಲಿ ವಿಚಾರಿಸಲಾಗಿ ವಯಸ್ಸಾಗಿರುವ ಸಣಕಲನಾಗಿರುವ ಮನುಷ್ಯರೊಬ್ಬರು ಆ ಪತ್ರಿಕೆಯ ಕೆಲವು ಪ್ರತಿಗಳನ್ನು ಕೊಟ್ಟುಹೋಗುವುದಾಗಿಯೂ ಅದಕ್ಕೆ ಪ್ರತಿಯಾಗಿ ಅವರು ಹಣವನ್ನೂ ತೆಗೆದುಕೊಳ್ಳುವುದಿಲ್ಲವೆಂದೂ ಹೇಳಿದ್ದರು.ನೋಡುತ್ತನೋಡುತ್ತ ಆ ಹುಲಿಪತ್ರಿಕೆಯೂ ನಿಂತು ಹೋಗಿತ್ತು.ಪಾಪ ಎಲ್ಲವನ್ನೂ ಗಮನಿಸುತ್ತಾ ಎಲ್ಲರನ್ನೂ ಗಮನಿಸುತ್ತಾ ಬರೆಯುತ್ತಿದ್ದ ಮೈಸೂರಿನ ಆ ಹುಲಿ ಪತ್ರಿಕೆಯನ್ನು ನಮ್ಮಂತಹ ತರಲೆಗಳನ್ನು ಬಿಟ್ಟು ಬೇರೆ ಯಾರೂ ಗಂಭೀರವಾಗಿ ಗಮನಿಸುತ್ತಿರಲಿಲ್ಲವೇನೋ.ಹಾಗಾಗಿ ಯಾರ ಗಮನಕ್ಕೂ ಬಾರದೇ ಸೊರಗಿ ಸೊರಗಿ ಆ ಪತ್ರಿಕೆ ನಿಂತೇ ಹೋಗಿತ್ತು.ಆ ಪತ್ರಿಕೆಯ ಸಂಪಾದಕ ಹುಲಿ ಯಾರು ಮತ್ತು ಅದು ಎತ್ತ ಹೋಯಿತು ಎಂಬುದು ಎಂಬುದು ನನಗೆ ಈ ಮೂರು ದಶಕಗಳ ನಂತರವೂ ಒಂದು ಆಧುನಿಕೋತ್ತರ ಅಚ್ಚರಿಯಾಗಿಯೇ ಉಳಿದಿದೆ

ಮೊನ್ನೆ ಸಂಜೆ ಕತ್ತಲಾಗುತ್ತಿದ್ದ ಹೊತ್ತಲ್ಲಿ ಮೈಸೂರು ಬೋಗಾದಿ ರಸ್ತೆಯಲ್ಲಿ ಹೋಗುತ್ತಿದ್ದೆ.ಹಳೆಯ ಕಾಲದ ಲ್ಯಾಂಬ್ರೆಟಾ ಸ್ಕೂಟರಿನ ಹಿಂಬಾಗಕ್ಕೆ ಹನ್ನೆರಡಡಿ ಉದ್ದದ ದೊಡ್ಡದೊಂದು ರಟ್ಟಿನ ಗೋಪುರವೊಂದನ್ನು ಏರಿಸಿಕೊಂಡು ಆ ಗೋಪುರದ ಮೇಲೆ ಎಲ್ಲ ದೇವರು ಎಲ್ಲ ಧರ್ಮಗಳ ಚಿಹ್ನೆಗಳನ್ನು ಅಂಟಿಸಿಕೊಂಡು ‘ದಯವಿಟ್ಟು ಮತದಾನ ಮಾಡಿ’ ಎಂದು ಬಣ್ಣದ ಬೇಗಡೆಯಲ್ಲಿ ಬರೆಸಿಕೊಂಡು ಸಣಕಲು ವ್ಯಕ್ತಿಯೊಬ್ಬರು ಹೋಗುತ್ತಿದ್ದರು.ಜೋರಾಗಿ ಬೀಸುತ್ತಿದ್ದ ಗಾಳಿಯಲ್ಲಿ ಗೋಪುರದ ಸಮೇತ ವಾಲಾಡುತ್ತಾ ಬಿದ್ದೇ ಹೋಗುವ ಹಾಗೆ ಸಾಗುತ್ತಿದ್ದರು.ನಡುನಡುವಲ್ಲಿ ರಸ್ತೆಗೆ ಕಾಲುಕೊಟ್ಟು ಸಾವರಿಸಿಕೊಂಡು ಬೆವರು ಒರೆಸಿಕೊಂಡು ಮುಂದೆ ಹೋಗುತ್ತಿದ್ದರು.ಅವರು ಹಾಗೆ ಒಂದು ಕಡೆ ನಿಲ್ಲಿಸಿದಾಗ ಮಾತನಾಡಿಸಿದೆ.ಅವರು ಮೈಸೂರಿನ ಹಳೆಯ ಕಾಲದ ಪ್ರತಿಷ್ಟಿತ ಮುಸಲ್ಮಾನ ಕುಟುಂಬಕ್ಕೆ ಸೇರಿದವರಾಗಿದ್ದರು.ದಾನ ಧರ್ಮ ಕೋರ್ಟು ಕಚೇರಿ ಸಂಸಾರ ಮೋಸ ಇತ್ಯಾದಿಗಳಿಂದ ಅವರು ಸಖತ್ತಾಗಿ ಲಾಸು ಮಾಡಿಕೊಂಡು ಈಗ ಎಲ್ಲರೂ ಮತದಾನ ಮಾಡಿದರೆ ದೇಶದಲ್ಲಿ ಶಾಂತಿ ನೆಲೆಸುತ್ತದೆ ಎಂಬ ಸಂದೇಶದೊಂದಿಗೆ ಸ್ಕೂಟರಿಗೆ ಬಡ್ಡಿ ಸಾಲದ ಹಣದಲ್ಲಿ ಪೆಟ್ರೋಲು ಹಾಕಿಸಿಕೊಂಡು ಸಾಗುತ್ತಿದ್ದರು.

cನನಗೆ ಯಾಕೋ ಹಳೆಯ ಕಾಲದ ಆ ಹುಲಿ ಸಂಪಾದಕರನ್ನು ಮತ್ತೆ ಇನ್ನೊಂದು ರೂಪದಲ್ಲಿ ನೋಡಿದಂತಾಯಿತು.

ಪಕ್ಷಿ ಫೋಟೋಗ್ರಾಫಿಯ ಕುರಿತು

DSC_7233ಹಕ್ಕಿಗಳ ಫೋಟೋ ತೆಗೆಯುವ ಹವ್ಯಾಸವುಳ್ಳ ಗೆಳೆಯರೊಬ್ಬರು ಬೆಳಬೆಳಗೆಯೇ ಕಾವೇರಿ ನದೀತೀರಕ್ಕೆ ಕರೆದುಕೊಂಡು ಹೋಗಿದ್ದರು.ಅವರ ಜೊತೆಗೆ ಹಕ್ಕಿಗಳ ಗುರುತು ಪರಿಚಯ ವಿವರಿಸಬಲ್ಲ ಇನ್ನೊಬ್ಬರು ಹಿರಿಯರೂ ಇದ್ದರು.ಮೈಸೂರಿನಿಂದ ಅಷ್ಟು ದೂರವೇನೂ ಅಲ್ಲದ ನದೀತೀರ ಅದು.ಟಾರಿನ ರೋಡು ಮುಗಿದು, ಹಸುರು ಭತ್ತದ ಗದ್ದೆಗಳು ಕಳೆದು, ಕೊಂಚದೂರ ಕಚ್ಚಾದಾರಿಯಲ್ಲಿ ಸಾಗಿದರೆ ಕಾವಳವನ್ನು ಉಟ್ಟುಕೊಂಡ ಮಾಯಕಾತಿಯಂತೆ ಮುಖಕ್ಕೆ ಮುಸುಕೆಳೆದು ಕಾವೇರಿ ತಣ್ಣಗೆ ಹರಿಯುತ್ತಿತ್ತು.

ಹಿಂದಿನ ದಿನ ಆ ಊರಲ್ಲಿ ಯಾರೋ ತೀರಿಹೋಗಿದ್ದರು.ತೀರಿಹೋದ ಆ ದೇಹವನ್ನು ಸುಟ್ಟ ಜಾಗದಲ್ಲಿ ಆ ದೇಹವನ್ನು ಹೊತ್ತುಕೊಂಡು ತಂದಿದ್ದ ಚಟ್ಟವು ಅನಾಥವಾಗಿ ಬಿದ್ದುಕೊಂಡಿತ್ತು.ಆ ತೀರಿಹೋದಾತನ ಮನೆಯವರು ಒಂದು ಚಕ್ಕಡಿಯ ತುಂಬ ಸಾವಿನ ಮನೆಯ ಪಾತ್ರೆಪಗಡಿ ಸೀರೆ ಬಟ್ಟೆ ಚಾಪೆ ಲುಂಗಿ ಶರಟು ಲಂಗ ಚಡ್ಡಿ ಕಾಲೊರಸು ಕಂಬಳಿ ಎಲ್ಲವನ್ನು ತುಂಬಿಕೊಂಡು ಬಂದು ನದೀ ತೀರದಲ್ಲಿ ತಿಕ್ಕಿ ತಿಕ್ಕಿ ತೊಳೆಯುತ್ತಿದ್ದರು.ತೀರಿಹೋದವನ ಒಂದು ಸಣ್ಣ ಪರಿಮಳವೂ ಅಲ್ಲೆಲ್ಲೂ ಉಳಿದುಬಿಡಬಾರದು ಎಂಬಂತೆ ಉತ್ಸಾಹದಲ್ಲಿ ತೊಳೆಯುತ್ತಿದ್ದ ಹೆಂಗಸರು ಮತ್ತು ಮಕ್ಕಳು.ಬಹುಶಃ ತೀರಿಹೋದ ಜೀವ ಇವರೆಲ್ಲರನ್ನು ತುಂಬ ಕಾಯಿಸಿ ಕಾಯಿಸಿ ಬಹಳ ತಡವಾಗಿ ಸತ್ತು ಹೋಗಿರಬೇಕು.ಹಾಗಾಗಿ ಅವರೆಲ್ಲರ ವರ್ತನೆಯಲ್ಲಿ ಒಂದು ತರಹದ ಬಿಡುಗಡೆಯ ಭಾವವೇ ದುಃಖಕ್ಕಿಂತ ಹೆಚ್ಚಾಗಿ ಕಾಣಿಸುತ್ತಿತ್ತು.ಅವರಿಗಿಂತ ಅನತಿ ದೂರದಲ್ಲಿ ಆ ಊರಿನ ಅಗಸ ತನ್ನ ಬಡವಾದ ಕತ್ತೆಗಳನ್ನು ಮೇಯಿಸಲು ಬಿಟ್ಟು ತಾನು ನದಿಯಲ್ಲಿ ಇಳಿದು ಕಲ್ಲೊಂದಕ್ಕೆ ಬಟ್ಟೆಗಳನ್ನು ಕುಕ್ಕುತ್ತಿದ್ದ.ಆ ಅಗಸನ ಸಣ್ಣ ಪ್ರಾಯದ ಮಗನೋ ಮೊಮ್ಮಗನೋ ಇರಬೇಕು.ಒಗೆದ ಬಟ್ಟೆಗಳನ್ನು ಒಣಗಲು ಹರವಿ ಹಾಕುವ ಮೊದಲು ಅವುಗಳ ಎಲ್ಲ ಜೇಬುಗಳನ್ನು ಚಿಲ್ಲರೆ ಕಾಸಿಗಾಗಿ ಶೋಧಿಸುತ್ತ ಸುಸ್ತಾಗಿದ್ದ.ಆ ಊರಲ್ಲಿ ಚಿಲ್ಲರೆ ಕಾಸನ್ನಾದರೂ ಜೇಬಿನಲ್ಲಿ ಮರೆತುಬಿಡುವ ಹವ್ಯಾಸವುಳ್ಳವರು ಯಾರೂ ಇಲ್ಲವೆಂಬ ವ್ಯಗ್ರತೆ ಆತನ ಮುಖದಲ್ಲಿ ಎದ್ದು ಕಾಣುತ್ತಿತ್ತು.ನದಿಯ ನಡುವಲ್ಲಿ ಎದೆಮಟ್ಟ ನೀರಲ್ಲಿ ಎತ್ತಿನ ಗಾಡಿಯೊಂದನ್ನು ನಿಲ್ಲಿಸಿಕೊಂಡು ಮರಳು ಕಳ್ಳರಿಬ್ಬರು ಬೆಳಬೆಳಗೆಯೇ ಮರಳು ದೋಚುತ್ತಿದ್ದರು.ಇವರು ಮಾಡುತ್ತಿರುವುದು ಕಳ್ಳತನವಾದರೇನು ಒಳ್ಳೆತನವಾದರೇನು ತಾವು ಮಾಡಬೇಕಾದ ಗುಲಾಮಗಿರಿ ಈ ಜನ್ಮದಲ್ಲಿ ಮುಗಿಯಲಾರದು ಎಂದುಕೊಂಡು ಆ ಗಾಡಿಯ ಜೋಡೆತ್ತುಗಳು ಜಲಯೋಗಿಗಳಂತೆ ಕಣ್ಮುಚ್ಚಿ ನಿಂತಿದ್ದವು.ನದಿಯ ದಡದಲ್ಲೂ ಅಲ್ಲಲ್ಲಿ ಸಣ್ಣಸಣ್ಣ ಉಲ್ಕಾಪಾತಗಳಾದಂತೆ ಮರಳು ತೋಡಿದ ಗುಳಿಗಳು, ಆ ಗುಳಿಗಳ ಮರಳು ಕಟವಾಯಿಯಲ್ಲಿ ತೂತ ಕೊರೆದು ಗೂಡು ಮಾಡಿಕೊಂಡಿರುವ ಕೆಲವು ಅಪರೂಪದ ಹಕ್ಕಿಗಳು.

DSC_7241ಕಾವೇರಿ ನದೀತೀರದ ಆ ಬೆಳಗಿನ ಆ ಕಾವಳದಲ್ಲಿ ಆ ಹಕ್ಕಿಗಳೂ, ಈ ಮನುಷ್ಯರೂ, ಆ ಎತ್ತುಗಳೂ,ಈ ಕತ್ತೆಗಳೂ ಮತ್ತು ಫೋಟೋಗ್ರಾಫಿಗೆಂದು ಹೊರಟ ನಾವೂ ಒಂದು ತರಹ ಅಸಹಜವಾಗಿ ಕಾಣಿಸುತ್ತಿದ್ದವು.ಕತ್ತೆಗಳ ಲದ್ದಿ, ಜಾನುವಾರಗಳ ಸಗಣಿ, ಮನುಷ್ಯರ ವಿಸರ್ಜನೆ, ನಡುನಡುವೆ ತೀರಿಹೋದವರನ್ನು ಸುಟ್ಟುಹಾಕಿರುವ ಕುರುಹುಗಳು, ಸುಡದೇ ಉಳಿದುಹೋಗಿರುವ ಕೆಲವು ಮಾನವ ಎಲುಬುಗಳು, ಈ ಎಲ್ಲದರ ನಡುವೆ ನಮ್ಮ ಹಾಗೆಯೇ ವಾರಾಂತ್ಯದ ಹಕ್ಕಿ ಫೋಟೋಗ್ರಾಫಿಗಾಗಿ ದೂರದೂರದ ಮಹಾನಗರಗಳಿಂದ ಐಷಾರಾಮಿ ಕಾರು ಜೀಪುಗಳಲ್ಲಿ ಮಣಭಾರದ ಕ್ಯಾಮರಾಗಳನ್ನೂ, ಫಿರಂಗಿಗಳಂತಹ ಲೆನ್ಸುಗಳನ್ನೂ, ಯುದ್ದಕಾಲದಲ್ಲಿ ಬಳಸುವಂತಹ ಅಡಗುಗೂಡುಗಳನ್ನೂ ಹಿಡಿದುಕೊಂಡು ಬರುತ್ತಿರುವ ಯುವ ಛಾಯಾಗ್ರಾಹಕರ ಸಮೂಹ.ನನಗೆ ಯಾಕೋ ಗಾಭರಿಯಾಗಲು ತೊಡಗಿತು.

‘ಅಲ್ಲ ಮಾರಾಯರೇ, ಮನಷ್ಯರು ಮರಳು ತೆಗೆದು ಉಳಿದಿರುವ ಈ ನೂರುಕುಂಟೆ ಜಾಗದಲ್ಲಿ ಕೆಲವು ದೂರದ ಹಕ್ಕಿಗಳು ಸಂಸಾರ ಮಾಡಿಕೊಂಡಿರಲು ಬಂದರೆ ನಾವು ಫೋಟೋಗ್ರಾಫರುಗಳು ಹೀಗೆ ಸೈನಿಕರ ಹಾಗೆ ಅವುಗಳ ಮುಂದೆ ಕ್ಯಾಮರಾಗಳನ್ನು ಕೋವಿಯಂತೆ ಹಿಡಿಯುವುದು ತರವೇ?’ ಎಂದು ಜಗಳವಾಡಲು ತೊಡಗಿದೆ.

‘ ಇಲ್ಲ ಗುರುವೇ ಈ ಹಳ್ಳಿಗರಿಗೆ ಈ ಹಕ್ಕಿಗಳ ಬಗ್ಗೆ ಒಂದು ಚೂರು ಪ್ರೀತಿಯೂ ಇರಲಿಲ್ಲ.ಬಟ್ಟೆ ಒಗೆಯುತ್ತಿರುವ ಆ ಅಗಸನನ್ನೇ ನೋಡಿ.ಒಗೆದ ಬಟ್ಟೆಗಳನ್ನು ಹಕ್ಕಿ ಗೂಡುಗಳ ಮೇಲೇ ಹರವಿ ಹಾಕುತ್ತಿದ್ದ.ಈತನ ಬಟ್ಟೆಗಳ ಅಡಿಯಲ್ಲಿ ಸಿಲುಕಿಯೇ ಎಷ್ಟೋ ಮೊಟ್ಟೆಗಳು ನಾಶವಾಗುತ್ತಿದ್ದವು.ಅಲ್ಲಿ ನೋಡಿ ಈಗ ನದಿಯಲ್ಲಿ ಇಳಿದು ಮರಳು ದೋಚುತ್ತಿದ್ದಾರಲ್ಲಾ.ಮೊದಲಾಗಿದ್ದರೆ ಇಲ್ಲೇ ಲಾರಿಗಳನ್ನು ತಂದು ಹಕ್ಕಿ ಮರಿಗಳ ಸಮೇತ ಗೋರಿಕೊಂಡು ಹೋಗುತ್ತಿದ್ದರು. ಈಗ ನಾವೆಲ್ಲ ಸಿಟಿಗಳಿಂದ ಹಕ್ಕಿ ಫೋಟೋಗ್ರಾಫಿಗಾಗಿ ಬರುತ್ತಿರುವುದರಿಂದ ಅವರಿಗೂ ಹಕ್ಕಿಗಳ ಬಗ್ಗೆ ಗೌರವ ಬಂದಿದೆ.ಅರಿವೂ ಮೂಡಿದೆ.ಗೂಡುಗಳನ್ನು ಹಾಳೂ ಮಾಡುತ್ತಿಲ್ಲ’ ಎಂದು ಸಬೂಬು ಹೇಳತೊಡಗಿದರು.

DSC_7266ಅದೇನೋ ನನಗೆ ಗೊತ್ತಿಲ್ಲ.ಈ ಹಕ್ಕಿಗಳು ದೂರದೂರದ ದೇಶಗಳಿಂದ ಹಾರಿ ಬಂದಿವೆ.ಯಾಕೆ ಬಂದಿವೆ? ತಮಗೆ ಸಂಸಾರ ನಡೆಸಿ ಮೊಟ್ಟೆ ಇಕ್ಕಿ ಮರಿಗಳನ್ನು ಬೆಳೆಸಿ ಹಾರಿಹೋಗಲು ಇದು ಒಳ್ಳೆಯ ಜಾಗ ಎಂದು ಇಲ್ಲಿಗೆ ಬಂದಿವೆ.ಇಂತಹ ಹೊತ್ತಲ್ಲಿ ಅವುಗಳ ಖಾಸಗೀ ಕ್ಷಣಗಳಲ್ಲಿ ಇದು ನೆಸ್ಟಿಂಗು ಇದು ಮೇಟಿಂಗು ಇದು ಫೀಡಿಂಗು ಎಂದು ಕ್ಯಾಮರಾ ಫಿರಂಗಿಗಳಿಂದ ಸೆರೆಹಿಡಿಯಲು ನಮಗೇನು ಹಕ್ಕಿದೆ. ನಮಗಾದರೋ ಒಂಚೂರೂ ನಾಚಿಕೆ ಮಾನ ಮರ್ಯಾದೆ ಇಲ್ಲ.ಹಕ್ಕಿಗಳಿಗಾದರೂ ಸಂಕೋಚ ನಾಚಿಕೆ ಇರುತ್ತೆ ಅನ್ನುವ ಅರಿವು ನಮಗೆ ಬೇಡವಾ’ ಎಂದು ಬೆಳಬೆಳಗೆಯೇ ಅವರೊಡನೆ ಮೊಂಡುಹಿಡಿಯಲು ತೊಡಗಿದೆ.

‘ನಿಮಗೆ ಇದೆಲ್ಲಾ ಗೊತ್ತಾಗೋದಿಲ್ಲ ಗುರುಗಳೇ, ನೀವು ಹೋಗಿಹೋಗಿ ಕವಿಗಳು.ಎಲ್ಲವನ್ನೂ ಭಾವುಕರಾಗಿ ನೋಡುತ್ತೀರಿ.ಹಕ್ಕಿಗಳು ಮನುಷ್ಯರು ನೋಡ್ತಾರೆ ಅಂತ ಮೇಟಿಂಗು ಮಾಡದೆ ಕುಳಿತಿದ್ದರೆ ಈ ಪ್ರಪಂಚದಲ್ಲಿ ಪಕ್ಷಿ ಸಂಕುಲವೇ ಇರುತ್ತಿರಲಿಲ್ಲ.ಎಲ್ಲ ವಿಷಯದಲ್ಲೂ ಮುಕ್ತಮುಕ್ತ ಎನ್ನುವ ನೀವು ಹಕ್ಕಿಗಳ ವಿಷಯದಲ್ಲಿ ಮಾತ್ರ ಗುಪ್ತಗುಪ್ತ ಅನ್ನುತ್ತಿರುವುದು ಸ್ವಲ್ಪ ತಮಾಷೆಯಾಗಿದೆ’ ಎಂದು ಅವರು ಸಿಗರೇಟೊಂದನ್ನು ಹಚ್ಚಿಕೊಂಡರು.

ಅಷ್ಟು ಹೊತ್ತಿಗೆ ಆ ಪುಟ್ಟ ನದೀತೀರದಲ್ಲಿ ಗಾಭರಿ ಹುಟ್ಟಿಸುವಷ್ಟು ಫೋಟೋಗ್ರಾಫರುಗಳ ಜಂಗುಳಿ ಶುರುವಾಗಿತ್ತು.ಅಪರೂಪದ ಹಕ್ಕಿ ಸಂಸಾರವೊಂದು ಮರಳಿನ ಗುಳಿಯಲ್ಲಿ ಮರಿಹಕ್ಕಿಗೆ ಗುಟುಕು ತಿನ್ನಿಸುತ್ತಿರುವ ವಿಷಯವನ್ನು ಹಳ್ಳಿಗನೊಬ್ಬ ಮೊಬೈಲಿನ ಮೂಲಕ ಬೆಂಗಳೂರಿನ ವೀಕೆಂಡ್ ಹಕ್ಕಿ ಛಾಯಾಚಿತ್ರಗಾರನೊಬ್ಬರಿಗೆ ತಿಳಿಸಿದ್ದ.ಆತ ತನ್ನ ಗೆಳೆಯಗೆಳತಿಯರನ್ನು ಐಷಾರಾಮಿ ಜೀಪೊಂದರಲ್ಲಿ ಹತ್ತಿಸಿಕೊಂಡು ಬಂದಿದ್ದ.ಬಂದ ಅಷ್ಟೂ ಜನರ ಕೈಯಲ್ಲೂ ಅತ್ಯುತ್ತಮ ಕ್ಯಾಮರಾಗಳೂ, ಸರ್ವೋತ್ತಮ ಲೆನ್ಸುಗಳೂ, ಅದಕ್ಕಿಂತಲೂ ದಿವಿನಾದ
ಟ್ರೈಪಾಡುಗಳೂ, ಬೀಮರ್ ಫ್ಲಾಷುಗಳೂ, ಹೈಡುಗಳೂ ಇದ್ದವು.ಬಹುಶ: ಹೊಸತಾಗಿ ಮದುವೆಯಾಗಿದ್ದ ಟೆಕ್ಕಿಯೊಬ್ಬ ತನ್ನ ಕೋಮಲೆ ಹೆಂಡತಿಯನ್ನು ಫೋಟೋಗ್ರಾಫಿ ಕಲಿಸಲು ತಂದಿದ್ದವನು ಅವಳ ಅಷ್ಟೂ ಸರಂಜಾಮುಗಳನ್ನು ಹೊತ್ತು ಸುಸ್ತಾದವನು ಷಿಟ್ ಅಂತ ಆಗಾಗ ಬೈಯುತ್ತಾ ಕತ್ತೆಗಳ ಲದ್ದಿಯ ನಡುವಿಂದ ಅವಳ ಕೈಹಿಡಿದು ನಡೆಸುತ್ತಿದ್ದ.ಇನ್ನೊಬ್ಬಾತ ಬರುವ ದಾರಿಯಲ್ಲಿ ಕುರುಚಲು ಕಾಡಿನಿಂದ ಒಂದಿಷ್ಟು ಕಡ್ಡಿಗಳನ್ನು ಮುರಿದು ತಂದಿದ್ದ.ಬಹಳ ಒಳ್ಳೆಯ ವಿನ್ಯಾಸದ ಆ ಕಡ್ಡಿಗಳನ್ನು ಹಕ್ಕಿ ಗೂಡುಗಳಿರುವ ಬಳಿ ಮರಳಿನಲ್ಲಿ ಹೂತರೆ ಮರಿಗಳಿಗೆ ಗುಟುಕುಹೊತ್ತು ಬರುವ ತಂದೆತಾಯಿ ಹಕ್ಕಿಗಳು ಆ ಕಡ್ಡಿಯಲ್ಲಿ ಕೂತರೆ ಆಗ ಫೋಟೋ ತೆಗೆದರೆ ಅದರ ಫ್ರೇಂ ಸಖತ್ತಾಗಿ ಬರುತ್ತದೆ ಎಂಬುದು ಆತನ ಐಡಿಯಾ ಆಗಿತ್ತು.ಅವನ ಹಾಗೆಯೇ ಹಲವು ಹತ್ತು ಐಡಿಯಾಗಳನ್ನು ಇಟ್ಟುಕೊಂಡು ಬರುತ್ತಿರುವ ಆಧುನಿಕ ನಗರಗಳ ಯುವಛಾಯಾಗ್ರಾಹಕ ಸೇನೆ.ಇನ್ನು ಸ್ವಲ್ಪ ಹೊತ್ತು ಇಲ್ಲಿದ್ದರೆ ಇವರೊಡನೆ ನಾನೊಂದು ಗೆರಿಲ್ಲಾ ಯುದ್ಧವನ್ನೇ ಹೂಡಬೇಕಾಗುತ್ತದೆ ಎಂದು ನನ್ನ ಮಿತ್ರರಿಗೆ ಎಚ್ಚರಿಸಿದೆ.

DSC_7244‘ಇವರದು ಇಷ್ಟೇ ಅಲ್ಲ ಗುರುಗಳೇ, ಕೆಲವೊಮ್ಮೆ ಹಕ್ಕಿಗಳ ಗೂಡಿಗೇ ಇವರು ತಾವು ತಂದ ಕಡ್ಡಿಗಳನ್ನು ಚುಚ್ಚಿ ಫೋಟೋ ತೆಗೆದುಕೊಂಡು ಹೋಗುತ್ತಾರೆ.ಕೆಲವೊಮ್ಮೆ ನೆನಪಿಗೆ ಅಂತ ಆ ಗೂಡುಗಳನ್ನೂ ಕಿತ್ತುಕೊಂಡು ಹೋಗುತ್ತಾರೆ.ಈ ಪಕ್ಷಿ ಫೋಟೋಗ್ರಾಫರುಗಳ ಕಥೆ ಒಂದಲ್ಲ ಎರಡಲ್ಲ. ಅಂತ ಅವರೂ ಹಲವು ಕಥೆಗಳನ್ನು ಹೇಳಿದರು.

ನೂರಾ ಐದು ವರ್ಷಗಳನ್ನು ಕಂಡು ತೀರಿಹೋದರು ರಾಮಣ್ಣ

 

ramanna1.jpg

ಕುವೆಂಪು ಅವರಿಗೂ ಸೀನಿಯರ್ ಆಗಿದ್ದ ಹಾಸನ ಅಠಾಣಾ ರಾಮಣ್ಣನವರು ೧೦೫ ವರ್ಷ ಬದುಕಿ ನಿನ್ನೆ ರಾತ್ರಿ ಮೈಸೂರಿನಲ್ಲಿ ತೀರಿಹೋದರು.

ramanna-4.jpg

 ಅವರ ಕುರಿತು ಈ ಹಿಂದೆ ಬರೆದ ಬರಹಕ್ಕಾಗಿ ಇಲ್ಲಿ ಓದಿ

ಯೋಗಾಚಾರ್ಯ ನಾಗರಾಜ ಸೂರ್ಯನಾರಾಯಣ ಪಾಂಡೆ

 nagaraja-pandey.jpg

ನಿನ್ನೆ ಸಂಜೆ ಮೈಸೂರಿನಲ್ಲಿ ಇನ್ನೇನು ಮಳೆ ಸುರಿಯುವ ಹಾಗೆ ಇತ್ತು. ಆದರೆ ಹಾಗೇನೂ ಆಗಲಿಲ್ಲ.  ನಾನು ಸುಮಾರು ಎರಡು ಗಂಟೆಗಳ ಹೊತ್ತು ಯೋಗಾಚಾರ್ಯ ನಾಗರಾಜ ಸೂರ್ಯನಾರಾಯಣ ಪಾಂಡೆಯವರ ಬಳಿ ಕಥೆ ಕೇಳುತ್ತಾ ಕುಳಿತಿದ್ದೆ.  ಒಂದಂತೂ ನಿಜ.  ಇನ್ನು ನೂರಾರು ವರ್ಷಗಳಷ್ಟು ಕಾಲ ಬರೆಯುವಷ್ಟು ವಿಷಯಗಳು ಅವರ ಬಳಿ ಇರುವುದು ಗೊತ್ತಾಯಿತು. ನನಗೆ ಮೈಸೂರಿನಲ್ಲಿ ಮಾತನಾಡಲು, ನನ್ನನ್ನು ಹರಸಲು ಇನ್ನೊಬ್ಬರು ಮಹಾ ಗುರುಗಳು ದೊರಕಿದರು ಎಂಬ ಆನಂದದಿಂದ ಅವರ ಬಳಿಯಿಂದ ಹೊರಟು ಬಂದು ಇದನ್ನು ಬರೆಯುತ್ತಿರುವೆ

 ನಾಗರಾಜ ಸೂರ್ಜನಾರಾಯಣ ಪಾಂಡೆಯವರು ನನಗೆ ಮೊದಲು ಪರಿಚಯವಾಗಿದ್ದು ಸುಮಾರು ಆರು ತಿಂಗಳುಗಳ ಹಿಂದೆ ಆಕಸ್ಮಿಕವಾಗಿ. ಹಳೆಯಕಾಲದ ಕೀ ಕೊಡುವ ಕೈಗಡಿಯಾರಗಳನ್ನು ಸರಿಪಡಿಸುವ ತಜ್ಞರು ಯಾರಾದರೂ ಇದ್ದಾರೆಯೇ ಎಂದು ಮೈಸೂರಿನ ಮಕ್ಕಾಜಿ ಚೌಕದ ಬಳಿಯಿರುವ ಒಲಂಪಿಯಾ ಥಿಯೇಟರಿನ ಅಕ್ಕ ಪಕ್ಕ ಹುಡುಕುತ್ತಿದ್ದೆ ಆಗ ಯಾರೋ ಪಾಂಡಯವರ ಹೆಸರು ಹೇಳಿದರು.  ಹೋಗಿ ನೋಡಿದರೆ ಆ ಹಳೆಯ ಗಡಿಯಾರದ ಅಂಗಡಿಯಲ್ಲಿ ಪಾಂಡೆಯವರ ಪುತ್ರ ಇದ್ದರು.  ಪಾಂಡೆಯವರು ಈಗ ಗಡಿಯಾರಗಳ ಗೊಡವೆಗೆ ಹೋಗುವುದಿಲ್ಲವೆಂದೂ ಈಗ ಅವರು ಪತಂಜಲೀ ಯೋಗವನ್ನು ಅರ್ಹರಿಗೆ ಹೇಳಿಕೊಡುತ್ತಿದ್ದಾರೆಂದೂ ಗೊತ್ತಾಯಿತು.  ದೂರವಾಣಿಯಲ್ಲಿ ಪಾಂಡೆಯವರನ್ನು ಮಾತನಾಡಿಸಿ ‘ಏನು ಪಾಂಡೆಯವರೇ ಗಡಿಯಾರದ ಸಹವಾಸ ತೊರೆದು ಯೋಗಾಚಾರ್ಯರಾಗಿದ್ದೀರಲ್ಲಾ..?’ ಎಂದು ಕೇಳಿದೆ ‘ಈಗ ಯೋಗದ ಮೂಲಕ ಕಾಲವನ್ನು ಅಳೆಯುತ್ತಿದ್ದೇನೆ’ ಎಂದು ತೀರಾ ಅಪರೂಪದ, ಆಳದ ಧ್ವನಿಯಲ್ಲಿ ಹೇಳಿದರು. ಅವರ ಧ್ವನಿ ಕೇಳಿದರೇ ಪುಳಕಿತವಾಗುವ ಹಾಗೆ ಇತ್ತು.  ಆಮೇಲೆ ಅವರ ಜೊತೆ ರಾಜಯೋಗದ ಕುರಿತು, ಪತಂಜಲಿಯ ಕುರಿತು ಕೇಳಿದೆ. ಅವರ ಜೊತೆ ಮಾತನಾಡುತ್ತಾ ಈ ಮನುಷ್ಯ ಬಹಳ ದೊಡ್ಡವರು ಅನಿಸಿತು. ಹುಡುಗನಾಗಿರುವಾಗ ಬಹಳ ಕಷ್ಟಪಟ್ಟಿದ್ದಾರೆ ಅನಿಸಿತು. ಓದನ್ನು ಮುಂದುವರೆಸಿ

ಪ್ರೊಫೆಸರ್ ವಿಕ್ರಂ ಹೇಳಿದ ‘ಚತುರಂಗ ಭವನ’ದ ಕಥೆ

chadurangaa.jpgನನ್ನ ಪ್ರೀತಿಯ ಬರಹಗಾರ ದಿವಂಗತ ಚದುರಂಗ ಅವರ ನಿಜವಾದ ಹೆಸರು ಎಂ. ಸುಬ್ರಹ್ಮಣ್ಯ ರಾಜೇ ಅರಸ್ ಎಂಬುದು ಬಹಳ ಕಾಲದವರೆಗೆ ನನಗೆ ತಿಳಿದಿರಲಿಲ್ಲ. ಎಂ. ಅಂದರೆ ಮುದ್ದುರಾಜ ಅರಸ್. ಮುದ್ದುರಾಜ ಅರಸರು ಚದುರಂಗರ ತಂದೆ. ಅವರು ತಲಕಾಡಿನ ರಾಜವಂಶಕ್ಕೆ ಸೇರಿದವರು. ತಲಕಾಡು ಮರಳಿನಿಂದ ಮುಚ್ಚಿದಾಗ ಇವರ ಹಿರಿಯರು ಅಲ್ಲಿಂದ ಸಮೀಪದ ಪಾಳ್ಯಕ್ಕೆ ಹೋಗಿ ನೆಲೆಸಿ ಪಾಳ್ಯದ ಚತುರಂಗ ಅರಸು ಮನೆತನದವರು ಅಂತ ಹೆಸರಾದವರು. ಈ ಮನೆತನದ ಅರಸರು ಚದುರಂಗ ಕ್ರೀಡೆಯಲ್ಲಿ ಪ್ರವೀಣರಾಗಿದ್ದರಿಂದ ಇವರಿಗೆ ಆ ಹೆಸರು ವಂಶಪಾರಂಪರ್ಯವಾಗಿ ಬಂದಿತ್ತು.
ನಾನು ಬಹಳ ಕಾಲದವರೆಗೆ ಚದುರಂಗ ಎನ್ನುವುದು ಒಂದು ಕಾವ್ಯನಾಮ ಎಂದೇ ತಿಳಿದಿದ್ದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಯುವಕನಾಗಿದ್ದ ನನ್ನನ್ನು ಬೆಂಗಳೂರಿನ ಚಾಮರಾಜಪೇಟೆಯ ಹಳೆಯ ಕಾಲದ ಪಬ್ ಒಂದರಲ್ಲಿ ಪ್ರೀತಿಯಿಂದ ಕೂರಿಸಿಕೊಂಡು ಚದುರಂಗರು ಕಥೆ ಬರೆಯುವುದು ಹೇಗೆ ಎಂದು ಸೊಗಸಾಗಿ ಪಾಠ ಹೇಳಿಕೊಟ್ಟಿದ್ದರು. ಅರೆಬಿಯನ್ ರಾತ್ರಿಗಳ ಶಹಜéಾದೆಯ ಕಥೆ ಹೇಳಿ `ಕಥೆಯೆಂದರೆ ಹೀಗಿರಬೇಕಯ್ಯ’ ಎಂದು ಬೆನ್ನು ತಟ್ಟಿದ್ದರು. ಜುಲೈಕಾ ಮತ್ತು ಯೂಸುಫ್ ಎಂಬ ಅಮರ ಪ್ರೇಮಿಗಳ ಕಥೆ ಹೇಳಿದ್ದರು. ನಾನು ನನ್ನ ಮೊದಲ ಕಥೆ ಬರೆದಾಗ ಅದರಲ್ಲಿ ಈ ಕತೆಯನ್ನೂ ಒಂದು ಚೂರು ಸೇರಿಸಿ ಖುಷಿ ಪಟ್ಟಿದ್ದೆ. ಅದನ್ನು ಓದಲು ಚದುರಂಗರಿಗೆ ಕೊಡಲು ಮರೆತುಬಿಟ್ಟಿದ್ದೆ. ಓದನ್ನು ಮುಂದುವರೆಸಿ

ಬೈಕು ಪಾಲಿಸುವ ಮರಳು ಗೋಪಾಲ

             gopalafirst.jpg

ಬೈಕಿನ ರಿಮ್ಮು ಒರೆಸುವ ಮರಳು ಗೋಪಾಲನ ಕುರಿತು ಗದ್ಯದಲ್ಲಿ ಬರೆಯುವುದೋ ಪದ್ಯದಲ್ಲಿ ಬರೆಯುವದೋ ಎಂದು ನನಗೆ ಇನ್ನೂ ಗೊತ್ತಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಈ ತರಹದ ಸಂದಿಗ್ಧತೆ ಎಂದೂ ಎದುರಾಗಿಯೂ ಇರಲಿಲ್ಲ. ನನ್ನ ಬೈಕಿನ ಬೇರೆ ಎಲ್ಲಾ ಭಾಗಗಳೂ ಕೊಳೆಯಿಂದ ತುಂಬಿದ್ದರೂ ಚಕ್ರಗಳ ನಡುವಿನ ಲೋಹದ ರಿಮ್ಮುಗಳು ಯಾವಾಗಲೂ ಪಳಪಳನೆ ಹೊಳೆಯುತ್ತಿರುವ ಹಿಂದಿನ ಗುಟ್ಟು ಈವತ್ತಿನವರೆಗೆ ನನ್ನ ಹೆಂಡತಿಗೂ ಗೊತ್ತಿರಲಿಲ್ಲ. ಈವತ್ತು ಬರೆಯುವ ಮೊದಲು ಈ ಕುರಿತು ನನ್ನೊಳಗೂ ಇರುವ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಆಕೆಗೆ ಮರಳು ಗೋಪಾಲನ ಕತೆ ಹೇಳಿ ಮುಗಿಸಿ ಆತನ ಚಿತ್ರಗಳನ್ನು ತೋರಿಸಿ ಬರೆಯಲು ಕುಳಿತಿರುವೆ.

ದಿನವೂ ನನ್ನ ಬೈಕಿನ ರಿಮ್ಮನ್ನು ಮಾತ್ರ ಒರೆಸಿ ಪಳಪಳ ಮಾಡಿ ಒಂದು ರೂಪಾಯಿ ನಾಣ್ಯವನ್ನು ಇಸಕೊಂಡು ತನ್ನ ನಾಯಿ ಕರಿಯನ ಜೊತೆ ಮರೆಯಾಗುವ ಈ ಗೋಪಾಲ ಉಳಿದ ಸಮಯದಲ್ಲಿ ಎಲ್ಲಿರುತ್ತಾನೆ ಹೇಗಿರುತ್ತಾನೆ ಎಂಬುದು ಇದುವರೆಗೆ ನನಗೂ ಗೊತ್ತಿರಲಿಲ್ಲ. ನಿನ್ನೆ ಮಧ್ಯಾಹ್ನದ ನಂತರ ಈತನನ್ನು ಹುಡುಕುತ್ತಾ ಒಂಟಿಕೊಪ್ಪಲಿನ ಓಣಿ ಓಣಿಗಳಲ್ಲಿ  ಆತನನ್ನೂ ಆತ ಸಾಕಿರುವ ಇತರ ನಾಲ್ಕು ನಾಯಿಗಳನ್ನು ನೋಡಿ ಆತನೊಡನೆ ಮಾತನಾಡಿ ಏನೂ ಗೊತ್ತಾಗದೆ ಬಂದು ಕೂತಿರುವೆ.

gopala-2.jpg

ಮೈಸೂರಿನ ಯಾದವಗಿರಿಯಲ್ಲಿರುವ ತ.ರಾ.ಸು. ವೃತ್ತದ ಒಂದು ಮೂಲೆಯಲ್ಲಿರುವ ಗೂಡಂಗಡಿಯ ಮುಂದೆ ಟೀ ಕುಡಿಯಲು, ಸಿಗರೇಟು ಸೇದಲು, ಲಾಟರಿ ಟಿಕೇಟುಗಳನ್ನು ಕೊಳ್ಳಲು ಹತ್ತಾರು ಜನ ಬರುತ್ತಾ ಹೋಗುತ್ತಾ ಇರುತ್ತಾರೆ. ಕೆಲವರು ದಿನವಿಡೀ ಅಲ್ಲಿ ಮರದ ಕೆಳಗೆ ಸುಮ್ಮನೆ ಕುಳಿತಿರುತ್ತಾರೆ. ಬೆಳಗಿನ ಸುಮಾರು ಎಂಟು ಗಂಟೆಯಿಂದ ಹತ್ತುಗಂಟೆಯವರೆಗೆ ಈ ಗೋಪಾಲ ಕೈಯಲ್ಲಿ ಒಂದು ಮಾಸಿದ ಬಟ್ಟೆ ಹಿಡಿದುಕೊಂಡು ಬಾಯಲ್ಲಿ ಯಾರೋ ಎಳೆದು ಬಿಸಾಕಿದ ಸಿಗರೇಟು ತುಂಡನ್ನು ಕಚ್ಚಿಕೊಂಡು ಯಾರದಾದರೂ ಬೈಕಿನ ರಿಮ್ಮನ್ನು ಒರೆಸುತ್ತಾ ಕುಳಿತಿರುತ್ತಾನೆ. ಆತನ ಕರಿಯ ಎಂಬ ಹೆಸರಿನ ನಾಯಿ ಆತನ ಪಕ್ಕದಲ್ಲಿ ಧ್ಯಾನ ಮಾಡುವಂತೆ ಮಲಗಿರುತ್ತದೆ. ರಿಮ್ಮ ಒರೆಸುವ ಗೋಪಾಲ ಕೆಲವೊಮ್ಮೆ ವಿನಾಕಾರಣ ಕಿರುಚುತ್ತಾನೆ. ನಾಟಕದ ಹಾಡುಗಳನ್ನು ಹಾಡುತ್ತಿರುತ್ತಾನೆ. ತನ್ನಷ್ಟಕ್ಕೆ ಯಾರಾದರೂ ಜೊತೆ ವಾಗ್ವಾದದಲ್ಲಿ ತೊಡಗಿರುತ್ತಾನೆ. ಆತನ ಮುಖ ಸದಾ ವ್ಯಗ್ರವಾಗಿರುತ್ತದೆ. ಏನಾದರೂ ಮಾತನಾಡಿಸಿದರೆ ಎದ್ದು ಪರಚುವಂತೆ ಕಾಣುತ್ತಾನೆ. ಹಾಗಾಗಿ ಈತನ ಸಹವಾಸವೂ ಬೇಡ, ಈತನ ಕಥೆಯೂ ಬೇಡ ಎಂದು ಯಾವಾಗಲೂ ಈತ ಒರೆಸಿ ಮುಗಿಸಿದೊಡನೆ ಒಂದು ರುಪಾಯಿ ನಾಣ್ಯವನ್ನು ಕೈಗಿತ್ತು ಬೈಕು ಸ್ಟಾರ್ಟ್ ಮಾಡುತ್ತಿದ್ದೆ. ನಿನ್ನೆಯೂ ಹಾಗೆಯೇ ಮಾಡಲು ಹೊರಟಿದ್ದೆ. ಓದನ್ನು ಮುಂದುವರೆಸಿ