ಇಂದೆನಗೆ ಆಹಾರ ಸಿಕ್ಕಿತು!

ಎಷ್ಟು ಬರೆಯಬೇಕೆಂದು ಕುಳಿತರೂ ಏನೂ ಬರೆಯಲಾಗುತ್ತಲೇ ಇಲ್ಲ. ಇಷ್ಟು ಹೊತ್ತಾದರೂ ಬೆಳಗು ಇನ್ನೂ ದಿಕ್ಕೆಟ್ಟು ಮಲಗಿರುವಂತೆ ಕಾಣಿಸುತ್ತಿದೆ. ಯಾವಾಗಲೂ ಎದ್ದೊಡನೆ ಕಾಣಿಸುತ್ತಿದ್ದ ಅರಬೀ ಕಡಲಿನ ಒಂದು ಚೂರು ನೀಲಿ ಇನ್ನೂ ಮಂಜಿನಲ್ಲೇ ಮಲಗಿಕೊಂಡಿದೆ. ನದಿ ದಾಟುತ್ತಿರುವ ಕಾಡಾನೆಯಂತೆ ಉದ್ದದ ಹಡಗೊಂದು ನದೀ ಮುಖವಾಗಿ ಬಂದರಿನ ಕಡೆಗೆ ನಿಧಾನಕ್ಕೆ ನಿಂತುಕೊಂಡೇ ಇರುವಂತೆ ಚಲಿಸುತ್ತಿದೆ.sea.jpg ನಿಂತೇ ಹೋಗಿದ್ದ ಮುಂಗಾರು ಮಳೆ  ಇದೀಗ ನೋಡಿದರೆ ಬೆಳಿಗ್ಗೆಯೇ ಬೆಳಕನ್ನು ನುಂಗಿಕೊಂಡು ಮೋಡವಾಗಿ, ಕಾವಳವಾಗಿ ಆಕಾಶದಲ್ಲಿ ಹಾಗೇ ನಿಂತುಕೊಂಡಿದೆ. ನಿಂತ ಗಾಳಿ, ನಿಂತ ಆಕಾಶ ಎಂತಹ ಅಸ್ವಸ್ಥ ಮನಸ್ಸಿಗೂ ಸಕಾರಣ ಹೇಳಬಲ್ಲ ಹಾಗಿರುವ ಮಂಗಳೂರಿನ  ಈವತ್ತಿನ ಬೆಳಗು, ನಗು ಬರುತ್ತದೆ. ಈ ಹವಾಮಾನ, ಈ ವಾತಾವರಣ, ಈ ನಿಂತ ನೀರಿನಂತಿರುವ ಬೆಳಗು ಇವೆಲ್ಲವೂ ನಮಗೆ ಏನನ್ನೋ ಹೇಳಲೆಂದೇ ಹೀಗೆ ನಿಂತುಕೊಂಡಿದೆ ಎಂದು ಭ್ರಮಿಸುವ ನಮ್ಮ ತಿಕ್ಕಲುತನಗಳು!

 ನೆಲಕ್ಕೆ ಸವರಿಕೊಂಡೇ ಹಾರಾಡುತ್ತಿರುವ ಹೆಲಿಕಾಪ್ಟರ್ ಚೆಟ್ಟೆಗಳು, ಮಾಡಿನ ಮೇಲೆ, ತೆಂಗಿನ ಗರಿಗಳ ಮೇಲೆ ಸಾಲಾಗಿ ಕುಳಿತುಕೊಂಡು ಈ ಹಾರುತ್ತಿರುವ ದೇವ ದೂತರಂತಹ ಚಿಟ್ಟೆಗಳನ್ನು ಅಟ್ಟಿಸಿಕೊಂಡು ತಿಂದುಹಾಕಲು ಹೊಂಚುಹಾಕುತ್ತಿರುವ ಕಾಗೆಗಳು, ಈ ದಿನದ ಬೆಳಗಿನ ಆಲಸ್ಯ ಅವುಗಳನ್ನೂ ಬಿಟ್ಟಿರುವಂತೆ ಅನಿಸುತ್ತಿಲ್ಲ. ಬೇಟೆಯನ್ನೂ  ಮರೆತು ಸುಮ್ಮನೆ ಕತ್ತು ಗರಿಗಳನ್ನು ಕೆರೆದುಕೊಂಡು, ಕೊಕ್ಕಿನಿಂದ ತಮ್ಮ ಮೈಯನ್ನೇ ವೈಯಾರದಿಂದ ಸವರುತ್ತಿರುವ ಈ ಕಾಗೆಗಳು, ಹಾರುತ್ತಲೇ ಇರುವ ಈ ಚಿಟ್ಟೆಗಳು ಮತ್ತು ಎಂದಿನ ಹಾಗೇ ರಸ್ತೆಗಳಲ್ಲಿ ಚಲಿಸಲು ತೊಡಗಿರುವ ಮನುಷ್ಯ ಮಾತ್ರರಾದ ನಾವು.

Continue reading “ಇಂದೆನಗೆ ಆಹಾರ ಸಿಕ್ಕಿತು!”

Advertisements

ಹತ್ತು ವರುಷದ ಹಿಂದೆ ಮನೆಯೊಳಗೆ ಬಂದ ಪ್ರೀತಿಯ ಬಸ್ಸು

suntikoppa-morning.jpgಮಂಗಳೂರಿನ ಮಳೆಗೆ ಬೇಜಾರು ಬಂದು ಹೋಗಿ, ರಜೆ ಹಾಕಿ ಬಸ್ಸಿನಲ್ಲಿ ಕುಳಿತು, ಮಳೆಯ ಮಂಗಳೂರನ್ನು ದಾಟಿ, ಮಳೆ ಬೀಳುತ್ತಲೇ ಇರುವ ಕೊಡಗನ್ನು ದಾಟಿ, ಮಳೆಯ ಮೋಡ ಗುಮ್ಮನ ಹಾಗೆ ಸುಮ್ಮನೇ ನಿಂತಿರುವ ಮೈಸೂರಿನಲ್ಲಿ ಬೆಚ್ಚಗೆ ಹೊದ್ದುಕೊಂಡು ಕೈಗೆ ಸಿಕ್ಕಿದ ಪೇಪರುಗಳನ್ನೆಲ್ಲ ನಿರುಕಿಸುತ್ತ ಕೂತಿದ್ದೆ.

ಹುಬ್ಬು ಗಂಟು ಮಾಡಿಕೊಂಡು ಕಣ್ಣುಗಳನ್ನು ಕಿರಿದುಗೊಳಿಸಿ ನೆತ್ತಿಯನ್ನೆಲ್ಲ ನೆರಿಗೆ ಮಾಡಿಕೊಂಡು ಪೇಪರುಗಳನ್ನು ತಿನ್ನುವ ಹಾಗೆ ಓದುವುದು ನನಗೆ ಸಣ್ಣದಿರುವಾಗಿನಿಂದಲೇ ಬೆಳೆದು ಬಂದಿರುವ ಕೆಟ್ಟಚಾಳಿ. ಈ ಕೆಟ್ಟಚಾಳಿಯಿಂದಲೇ ನಾನು ಹಾಳಾಗಿರುವುನೆಂದೂ, ತಲೆ ಬೇನೆ ಬಂದು ನರಳುವುದೆಂದೂ, ತಲೆಯೊಳಗೆ ನಾನಾ ಸಂಗತಿಗಳನ್ನು ತುಂಬಿಕೊಂಡು ಅವುಗಳನ್ನೆಲ್ಲಾ ಬರೆದು ನಾನು ಬರೆದವುಗಳೆಲ್ಲ ಒಮ್ಮೊಮ್ಮೆ ಅಚ್ಚಾಗಿ ಬಂದು ಅವುಗಳನ್ನು ಓದಿದವರ ತಲೆಯೂ ಹಾಳಾಗುತ್ತಿರುವುದೆಂದೂ ತುಂಬ ವರ್ಷಗಳಿಂದ ನನ್ನ ತಾಯಿ ಅನ್ನುತ್ತಿದ್ದರು.

Continue reading “ಹತ್ತು ವರುಷದ ಹಿಂದೆ ಮನೆಯೊಳಗೆ ಬಂದ ಪ್ರೀತಿಯ ಬಸ್ಸು”

ಲಂಕೇಶ್ ಪತ್ರಿಕೆಗೆ ಹದಿನೈದು ತುಂಬಿದಾಗ

 lankesh.jpg[೧೯೯೫ ರಲ್ಲಿ ಬರೆದದ್ದು]

ಆಗ ನಾವು ಹುಡುಗರು.

ಹೈಸ್ಕೂಲಿನ ನಡುವಿನ ಕಾಲ.

ಸಿಕ್ಕ ಸಿಕ್ಕ ಚಂದಮಾಮ. ಬಾಲಮಿತ್ರಗಳನ್ನೂ ಕಾಡಿ,ಬೇಡಿ. ಕಡತಂದು,ಓದಿ ಮುಗಿಸಿ, ಫ್ಯಾಂಟಮ್, ಶೂಜಾ, ಮಜನೂ, ಶೂರಿಗಳು ಇನ್ನೊಂದು ಕಂತಿನಲ್ಲಿ ಏನು ಸಾಹಸ ಮಾಡುವರು ಎಂದು ಊಹಿಸಿ ಕಾದು ಕುಳಿತು ಮೊಣಕಾಲುಗಳ ನಡುವೆ ಅವರ ಚಿತ್ರಗಳನ್ನಿಟ್ಟುಕೊಂಡು ಕುಕ್ಕರಗಾಲ್ಲಲ್ಲೇ ನೋಡಿ ಮುಗಿಸಿ ಇನ್ನೇನು ಇನ್ನೇನು ಎಂದು ತಲ್ಲಣಗೊಳ್ಳುತ್ತಿದ್ದ ದಿನಗಳು.p_lankesh2.jpg

 ಎಲ್ಲವೂ ಬೇಕಾಗಿತ್ತು. ಏನೂ ಬೇಡವಾಗುತ್ತಿತ್ತು. ಜೊತೆಯಲ್ಲಿ ಓದುತ್ತಿದ್ದ ಹುಡುಗಿಯರೂ ಬೆಳೆದು ಅವರ ಆಕಾರಗಳು ಬದಲುಗೊಂಡು ನಾವು ಬೆಳೆಯುತ್ತ ಉಟ್ಟ ಅಂಗಿಚಡ್ಡಿ ಬಿಗಿಯುತ್ತ ಇನ್ನೂ ಚಡ್ಡಿ ಹಾಕಿಕೊಂಡು ಶಾಲೆಗೆ ಹೋಗಲು ನಾಚುಗೆಯಾಗಿ ಪ್ಯಾಂಟಿಗೋ, ಪಂಚೆಗೋ ಮೊರೆ ಹೋಗುತ್ತಿದ್ದ ದಿನಗಳು.

ಆಗ ಪೇಟೆ ಪಟ್ಟಣಗಳಿಂದ ಕಾಲೇಜಿನ್ನೋ, ಕೆಲಸವನ್ನೋ ಮುಗಿಸಿಕೊಂಡು ಊರಿಗೆ ಸಂಜೆ ಬರುತ್ತಿದ್ದ ನಮ್ಮ ಹಿರಿಯ ಯುವಕ ಗೆಳೆಯರ ಕೈಯಲ್ಲಿ ನಾಲ್ಕು ಪುಟಗಳ ಕಪ್ಪು ಬಿಳಿ ಅಕ್ಷರಗಳ ಪತ್ರಿಕೆಯೊಂದು ಕಂಗೊಳಿಸುತ್ತಿತ್ತು. ಅವರು ಅದನ್ನು ಹೆಮ್ಮೆಯಿಂದಲೂ ಮುಜುಗರದಿಂದಲೂ ಓದುತ್ತಾ ಕೆಲವು ಪುಟಗಳತ್ತ ಮರೆಯಾಗಿ ಕಣ್ಣಾಡಿಸುತ್ತಾ ನಮ್ಮಲ್ಲಿ ಕುತೂಹಲ ಹುಟ್ಟಿಸಿಬಿಟ್ಟಿದ್ದರು. ಲಂಕೇಶ್ ಪತ್ರಿಕೆ ಆರಂಭಿಸಿದ್ದರು. ನಮ್ಮ ಊರಿನ ಕಡೆಗೆ ಲಂಕೇಶ್ ಅನ್ನುವುದು ಕೊಂಚ ವಿಚಿತ್ರ. ತಮಿಳಿನ ಹಾಗೆ ಕಾಣಿಸುವ ಹೆಸರು. ಆದರೂ ಇರುವವರ ಕೈಯಿಂದ ಲಂಕೇಶ್ ಪತ್ರಿಕೆಯನ್ನು ಕಸಿದು ಓದುತ್ತ ಹೋದಂತೆ ನಮ್ಮ ಅದುವರೆಗೆ ಕಲಿತ ಭಾಷೆಗೆ ,ನಮ್ಮ ಅದುವರೆಗಿನ ಯೋಚನೆಗಳಿಗೆ, ನಮ್ಮ ತುಂಟು ತುಂಟು ಬುದ್ಧಿಗಳಿಗೆ, ಎಲ್ಲದಕ್ಕೂ ರೇಗಿ ಮನೆಯಿಂದಲೂ ಶಾಲೆಯಿಂದಲೂ ಉಗಿಸಿಕೊಳ್ಳುತ್ತಿದ್ದ ನಮ್ಮ ರೇಜಿಗೆಳಿಗೆ ಅರ್ಥವಿರುವಂತೆ ಕಾಣಿಸುತ್ತಿತ್ತು. Continue reading “ಲಂಕೇಶ್ ಪತ್ರಿಕೆಗೆ ಹದಿನೈದು ತುಂಬಿದಾಗ”

ಶಾಲೆಯೆಂಬ ಲೋಕದ ಎಳೆಯರಾದ ನಾಯಕರು

 

dsc_0046-2.jpgಈ ವಾರದಲ್ಲಿ ಪುಟ್ಟ ಹುಡಗರಿಬ್ಬರ ಭಾವಚಿತ್ರಗಳಿರುವ ಜಾಹೀರಾತುಗಳೆರಡು ಪತ್ರಿಕೆಯೊಂದರ ಮೂಲೆಯಲ್ಲಿ ಬಂತು. ಹುಟ್ಟುಹಬ್ಬ, ವಿವಾಹ, ವಿವಾಹ ವಾರ್ಷಿಕ, ವಿಧೇಶ ಪ್ರವಾಸ ಇತ್ಯಾದಿಗಳಿಗೆ ಸಂತೋಷ ಸೂಚಿಸಿ ಬರುವ ಜಾಹೀರಾತುಗಳನ್ನೂ, ಮರಣ ವಾರ್ಷಿಕ ಇತ್ಯಾದಿಗಳಿಗೆ ಕಂಬನಿಯಿಡುವ ಶ್ರದ್ಧಾಂಜಲಿಗಳನ್ನೂ ನೋಡಿ ಈ ಚಿತ್ರಗಳ ಜೊತೆ ಸಂತೋಷವನ್ನೋ, ಬೇಸರವನ್ನೋ ಹಂಚಿಕೊಳ್ಳುವ ನನಗೆ ಈ ಹುಡುಗರ ಚಿತ್ರವನ್ನೂ, ಅದರ ಕೆಳಗೆ ಬರೆದಿರುವ ಅಕ್ಷರಗಳನ್ನೂ ಓದಿ ಸಂತೋಷ ಪಡಬೇಕೋ, ಬೇಜಾರುಮಾಡಿಕೊಳ್ಳಬೇಕೋ ಗೊತ್ತಾಗಲಿಲ್ಲ. ಈ ಹುಡುಗರಿಬ್ಬರೂ ಎರಡು ಪುಟ್ಟ ಶಾಲೆಗಳ, ಪುಟ್ಟ ಚುನಾವಣೆಯಲ್ಲಿ ಗೆದ್ದು ಬಂದ ಶಾಲಾ ನಾಯಕರುಗಳಾಗಿದ್ದರು. ಹುಟ್ಟಿ ಹತ್ತೋ ಹದಿನಾರೋ ವರ್ಷಗಳಾಗಿರುವ ಈ ಹುಡುಗರು ಶಾಲಾ ನಾಯಕರುಗಳಾಗಿರುವುದು ಖುಷಿಯ ವಿಷಯವಾದರೂ ಇವರ ಚಿತ್ರಗಳು ಸಾಧಾರಣವಾಗಿ ನಾಯಕ ಮಣಿಗಳೂ. ತೀರಿ ಹೋದವರೂ ಆಗಿರುವವರ ಚಿತ್ರಗಳ ಜೊತೆ ಕಂಗೊಳಿಸುತ್ತಿರುವುದು ಕೊಂಚ ಹೆದರಿಕೆಯ ಅದಕ್ಕಿಂತಲೂ ತೀರಾ ಮುಜುಗರದ ಸಂಗತಿಯಾಗಿ ಕಂಡಿತು.

ಪ್ರಪಂಚ ಬದಲಾಗುತ್ತಿರುವುದು ನಿಜವಾದರೂ, ಈ ನಿಮಿಷದ ಸಂಗತಿಗಳು ಇನ್ನೊಂದು ನಿಮಿಷಕ್ಕೆ ಅಸಂಗತವಾಗುವಷ್ಟು  ಪ್ರಪಂಚ ಬೆಳೆಯುತ್ತಿರುವುದು ಸತ್ಯವಾದರೂ, ನಿನ್ನೆ ಮೊನ್ನೆಯಷ್ಟೇ ಶಾಲೆಯ ಸಾಲು ಬೆಂಚುಗಳಲ್ಲಿ ಕೂತು ನಮ್ಮ ಟೀಚರುಗಳನ್ನೂ, ಅವರು ಹೇಳುತ್ತಿರುವ ಸಂಗತಿಗಳನ್ನೂ ದೊಡ್ಡ ಕಣ್ಣು ದೊಡ್ಡ ಕಿವಿಗಳಿಂದ ಕೇಳುತ್ತಿದ್ದಂತೆ ಈಗಲೂ ಅನಿಸುತ್ತಿರುವ ನನಗೆ ಈ ಹುಡುಗರು ಶಾಲ ನಾಯಕರುಗಳಾದುದನ್ನು ಡಂಗುರ ಬಾರಿಸಿ ಸಾರುತ್ತಿರುವ ಈ ಚಿತ್ರಗಳು ಕೊಂಚ ಅಸಹಜವಾಗಿಯೂ, ಅತಿರೇಕವಾಗಿಯೂ ಕಂಡು ದುಃಖವೆನಿಸಿತು. ಶಾಲೆಯೆಂಬ ಪುಟ್ಟ ಜಗತ್ತಿನೊಳಗೆ ನಾಯಕರಾಗಿಯೂ, ಮಂತ್ರಿಗಳಾಗಿಯೂ ಖುಷಿ ಮುಜುಗರದಿಂದ ಓಡಾಡುವ ಈ ಹುಡುಗರ ಚಿತ್ರಗಳು ಅಧಿಕಾರ, ಪ್ರಚಾರ, ಆಮಿಷಗಳಿಂದ ಕೂಡಿದ ದೊಡ್ಡವರ ಪ್ರಪಂಚದಲ್ಲಿ ಹೀಗೆ ಅನಾಯಾಸವಾಗಿ ಅಚ್ಚಾಗಿರುವುದು ಕಂಡು ನಗುವೂ ಬಂತು. Continue reading “ಶಾಲೆಯೆಂಬ ಲೋಕದ ಎಳೆಯರಾದ ನಾಯಕರು”

ಲಾರೆನ್ಸ್ ಮೆನೆಜಸ್, ಗ್ರೇಸಿ ಮತ್ತು ಹಸಿವು

ಮಧ್ಯಾಹ್ನ ಹಠಹಿಡಿದು ಊಟ ಮಾಡದೆ ನಿದ್ದೆ ಹೋಗಿ ಎದ್ದರೆ ಕತ್ತಲಾಗುತ್ತಿತ್ತು. ಮನೆಯೊಳಗೆ ಸಂಜೆಯ ಕೊಂಚ ಬೆಳಕು ಇನ್ನೂ ಉಳಿದು ಅದೂ ಹೊರಟು ಹೋಗಲು ಹವಣಿಸುತ್ತಿತ್ತು. ಈ ಸಂಜೆಯ ಬೆಳಕು ಪ್ರೀತಿಯಂತೆ. ಆದರೆ ಅದೂ ನನ್ನನ್ನು ಬಿಟ್ಟು ಹೋಗಲು ರೆಡಿಯಾಗಿರುವುದನ್ನು ಕಂಡು ಸಂಕಟವಾಗುತ್ತಿತ್ತು. pctheater_35.jpgಎಲ್ಲರ ಮೇಲೆ ಇಡೀ ಪ್ರಪಂಚದ ಕುರಿತೇ ರೇಜಿಗೆಯಾಗುವಷ್ಟು ಹಸಿವು. ಇಡೀ ಮನಸ್ಸನ್ನೇ ಇಡಿ ಇಡಿಯಾಗಿ ತಿಂದು ಬಿಡುವ ಈ ಹಸಿವು! ಮನುಷ್ಯರ ಕೆಟ್ಟ ಹಠ! ಕದ್ದು ಹೋಗಲು ನೋಡುತ್ತಿರುವ ಈ ಚಂದದ ಬೆಳಕು! ಯಾರೂ ಯಾರ ಜೊತೆಗೂ ಸರಿಯಾಗಿ ಮಾತನಾಡುತ್ತಿಲ್ಲ. ಎಲ್ಲರೂ ಎಲ್ಲರ ಜೊತೆ ಹಠಹಿಡುದು ಕುಂತಿರುವುದು ಕಂಡು, ತಿಂದು ಬಿಡುವಷ್ಟು ಹಠ ಬಂದು ಒಬ್ಬನೇ ತಟ್ಟೆಯಲ್ಲಿರುವುದ ಕಬಳಿಸುತ್ತ ಕೂತಿದ್ದೆ. ಎಲ್ಲರೂ ನೋಡುತ್ತಿದ್ದರು. ಖಾಲಿಯಾಗುತ್ತಿರುವ ತಟ್ಟೆಯ ಮೇಲೆ ರಾತ್ರಿಯ ಕತ್ತಲೆ ಬಂದು ಕೂತುಕೊಳ್ಳಲು ನೋಡುತ್ತಿತ್ತು. ಈ ಕೆಟ್ಟ ಪ್ರಪಂಚ. ಈ ಸಂಸಾರ ಇವೆಲ್ಲವನ್ನೂ ನೀಗಿಕೊಳ್ಳುತ್ತಿರುವನಂತೆ ಒಬ್ಬನೇ ಕೂತು ತಿನ್ನುತ್ತಿರುವ ನಾನು ತಿನ್ನುತ್ತ ತಿನ್ನುತ್ತಾ ಜಠರ ತುಂಬುತ್ತಿದ್ದಂತೆ ಮನಸ್ಸು ಹಾಯಾಗುತ್ತಿರುವಂತೆ ಅನಿಸುತ್ತಿತ್ತು. ನಗು ಬಂತು. ಎಲ್ಲರೂ ಸಿಟ್ಟುಮಾಡಿಕೊಂಡು ದಿನಗಟ್ಟಲೆ ಊಟಮಾಡದೆ ಮೊಂಡು ಹಿಡಿದರೆ ನಾನಾದರೊ ಇಲ್ಲಿ ಅನ್ನದ ಗುಡ್ಡೆಯನ್ನು ಕರಗಿಸಿಕೊಂಡು ತೇಗುತ್ತ ಕೊನೆ ಕೊನೆಯ ಅನ್ನದ ಅಗುಳುಗಳನ್ನು ಹೆಕ್ಕಿ ತಿನ್ನುತ್ತ ಪ್ರಸನ್ನನಾಗಿಬಿಡುತ್ತಿದ್ದೇನೆ. .  Continue reading “ಲಾರೆನ್ಸ್ ಮೆನೆಜಸ್, ಗ್ರೇಸಿ ಮತ್ತು ಹಸಿವು”

ಮಾಸ್ಕೋದಿಂದ ಪ್ರೀತಿ ಪೂರ್ವಕ-ಒಂದು ಬಹಳ ಹಳೆಯ ನೆನಪು

ಸಂಪಾಜೆಯ ಬಳಿಯ ಕೊಯನಾಡಿನ  ಅಂದುಕಾಕನ ಮಸಿ ಹಿಡಿದ ಹೋಟೆಲಿನ ಅಡ್ಡಾದಿಡ್ಡಿ ಬೆಂಚುಗಳಲ್ಲಿ ಕೂತ ನಾವು ತಿಂಡಿ ಕಪಾಟಿನ ಮೇಲಿಟ್ಟಿದ್ದ ಹೊಗೆ ಬಣ್ಣದ ರೇಡಿಯೋ ಒಂದರಿಂದ ವಿಚಿತ್ರ ಸ್ವರದ ರಷ್ಯನ್ ಹೆಂಗಸಿನ ಗಂಟಲಿನಿಂದ ನಮ್ಮ ಹೆಸರುಗಳನ್ನು ಕೇಳಿಸಿಕೊಳ್ಳುತ್ತಿದ್ದೆವು. radio11.jpgಅವಳ ವಿಚಿತ್ರ ಕನ್ನಡದಲ್ಲಿ ನಮ್ಮ ಹೆಸರುಗಳು ಗಂಟಲು ಅದುಮಿಸಿಕೊಂಡು, ಮೂಗು ಮುಚ್ಚಿಸಿಕೊಂಡು, ರೊಟ್ಟಿಗೆ ಅಕ್ಕಿಯ ಹಿಟ್ಟು ನಾದುವಂತೆ ನಾದಿಸಿಕೊಂಡು ಅಂದು ಕಾಕನ ತಿಂಡಿಯ ಪರಿಮಳ ತುಂಬಿದ ಹೋಟೇಲಿನೊಳಗೆ ಸಂಜೆಯ ಬಿಸಿಲು ಕೋಲಿನ ಹಾಗೆ ಬಂದು ಕೇಳುತ್ತಿತ್ತು. ಅಂದುಕಾಕ ಗಲ್ಲದ ಮೇಲೆ ಗಡ್ಡ ಕೆರೆಯುತ್ತಾ ಕೂತು ಒಂದು ಬೀಡಿ ಹಚ್ಚಿ ಗಂಟಲಿನ ಒಂದು ನಾಳದಿಂದ ಹೊಗೆ ತೆಗೆದುಕೊಂಡು ಇನ್ನೊಂದು ನಾಳದ ಮೂಲಕ ಹೊಗೆ ಮೇಲಕ್ಕೆ ತಂದು ಮೂಗಿನ ಒಂದೇ ಹೊಳ್ಳೆಯ ಮೂಲಕ ಹೊರಗೆ ಬಿಡಲು ನೋಡುತ್ತಿದ್ದರು.

ನಮಗೆ ನಗು ಬರುತ್ತಿತ್ತು. ಆಕಾಶದಲ್ಲಿ ರಷ್ಯಾದಿಂದ ರೇಡಿಯೋ ಮಾಸ್ಕೋ ಮೂಲಕ ಕೇಳಿ ಬರುತ್ತಿರುವ ಈ ಪುಡಿ ಹುಡುಗರ ಹೆಸರುಗಳನ್ನು ಕೇಳಿ ಸಹಿಸಲಾಗದೆ ಅಂದು ಕಾಕ ಬೀಡಿಯ ಹೊಗೆಯ ಜೊತೆ ಪ್ರಾಣಾಯಮ ನಡೆಸಲು ಹೋಗಿ ಆಗದೆ ಗಡ್ಡ ಕೆರೆದುಕೊಂಡು ನಮ್ಮನ್ನೇ ನೋಡುತ್ತಿದ್ದರು. ರೇಡಿಯೋ ಮಾಸ್ಕೋದಲ್ಲಿ ನಮ್ಮ ಹೆಸರು ಹೇಳಿ ಮುಗಿಸಿದ ಆ ರಷ್ಯನ್ ಹೆಂಗಸು ಇನ್ನು ಯಾವುದೇ ಊರಿನ ಇನ್ನು ಯಾರದೋ ಹೆಸರುಗಳನ್ನು ಹೇಳಲು ತೊಡಗುತ್ತಿದ್ದಳು. ನಾವು ಅರ್ಥಗರ್ಬಿತವಾಗಿ ಒಬ್ಬರನೊಬ್ಬರು ನೋಡಿ ನಕ್ಕು ಹೊರಗೆ ಬರುತ್ತಿದ್ದೆವು. ಅಂದು ಕಾಕ ಎದ್ದು ರೇಡಿಯೋವನ್ನು ಸಿಲೋನಿಗೆ ತಿರುಗಿಸಿ ತಮಿಳು ಹಾಡು ಹಾಕುತ್ತಿದ್ದರು. ಹೋಟೆಲಿನೊಳಗೆ ಪೊರಾಟ, ಚಾಪೀಸಿನ ಪರಿಮಳ ಹೊಗೆಯ ಜೊತೆ ಹೋರಾಡಲು ಶುರು ಮಾಡುತ್ತಿತ್ತು. Continue reading “ಮಾಸ್ಕೋದಿಂದ ಪ್ರೀತಿ ಪೂರ್ವಕ-ಒಂದು ಬಹಳ ಹಳೆಯ ನೆನಪು”

ತಸ್ಲಿಮಾ ಕುರಿತು-ಹತ್ತು ವರ್ಷದ ಹಿಂದೆ

ಧ್ಯಾನ, ತಪಸ್ಸು, ಪ್ರೀತಿ ಮತ್ತು ಕೊಂಚ ತಮಾಷೆ

ಈ ತಸ್ಲೀಮಾ ಎಂಬ ಡಾಕ್ಟರ್ ಹೆಣ್ಣು ಮಗಳು, ಬೆಂಗಾಲಿ ಬರಹಗಾರ್ತಿ. ಮೊದಲು ಧರ್ಮಭ್ರಷ್ಟಳಾಗಿ ಈಗ ದೇಶಭ್ರಷ್ಟಳಾಗಿ ತಲೆದಂಡ ವಿಧಿಸಿಕೊಂಡು ದೇಶ ವಿದೇಶಗಳಲ್ಲಿ ತಲೆಮರೆಸಿಕೊಂಡು ಓಡಾಡುತ್ತಿರುವುದು ಒಂದು ಪೂರ್ವಯೋಜಿತ ಪ್ರಹಸನದಂತೆ ನಡೆದುಹೋಗಿದೆ. ಆಕೆಗೆ ದೂರದ ದೇಶವೊಂದು ಆಶ್ರಯ ಕೊಟ್ಟಿದೆ. ತಲೆದಂಡ ವಿಧಿಸಿದವರು ಹಲ್ಲು ಕಚ್ಚಿ ಸುಮ್ಮನಾಗಿದ್ದಾರೆ. ತಲೆದಂಡದ ವಿರುದ್ಧ ಮಾತನಾಡಿ ಪ್ರಜ್ಞಾವಂತರಾದ, ಬುದ್ಧಿಜೀವಿಗಳಾದ, ಜಾತ್ಯತೀತರಾದ ಜನ ಕೂಡಾ ಸುಮ್ಮನಾಗಿದ್ದಾರೆ. ಆಕೆಯನ್ನು ಬೈದವರು, ಹೊಗಳಿದವರು ಉಪಯೋಗಿಸಿಕೊಂಡವರು ಎಲ್ಲರೂ ಇಂತಹದೇ ಇನ್ನೊಂದು ಪ್ರಹಸನಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ. ಜಗತ್ತೂ ಏನೂ ಆಗಿಯೇ ಇಲ್ಲ ಎನ್ನುವ ಹಾಗೆ ನಡೆಯುತ್ತಿದೆ.ಈ ಎಲ್ಲದರ ನಡುವೆ ಒಂದೆರಡು ಚಿತ್ರಗಳು, ಸಂಗತಿಗಳು ಮಾತ್ರ ಹಾಗೇ ಎದೆಯ ಒಳಕ್ಕೆ ನಿಧಾನವಾಗಿ ಅಮರಿಕೊಳ್ಳುತ್ತದೆ. ಎಂದೂ ಮಾದುಹೋಗದ ಹಾಗೆ ಹೊಕ್ಕು ಕೂತಿರುವ ಈ ಚಿತ್ರ ಸಂಗತಿಗಳು ಈ ತಸ್ಮೀಮಾ ಎಂಬ ಹೆಣ್ಣುಮಗಳು ಬರೆದ್ದನ್ನೂ ಮೀರಿ ಆಕೆಯ ಉದ್ಗಾರಗಳನ್ನೂ ಮೀರಿ, ಆಕೆಗೆ ತಲೆದಂಡ ವಿಧಿಸಿದವರ ಅಟ್ಟಹಾಸ, ಆಕೆಯನ್ನು ಹೊಗಳಿ ಹಾಳು ಮಾಡಿದವರ ಅವಿವೇಕವನ್ನೂ ಮೀರಿ ಹಾಗೇ ಉಳಿದುಕೊಳ್ಳುತ್ತವೆ.

ಒಂದನೆಯ ಚಿತ್ರ ತಸ್ಲೀಮಾ ಭೂಗತಳಾಗಿ ತಿರುಗುತ್ತಿರುವಾಗ ಆತಂಕಗೊಂಡು ಅಳುತ್ತಿರುವ ಆಕೆಯ ತಾಯಿಯ ಚಿತ್ರ. ಎರಡನೆಯದು ಸೆರಗು ಹೊದ್ದುಕೊಂಡು ಕೋರ್ಟ್ ನಲ್ಲಿ ಹಾಜರಾದ ತಸ್ಲೀಮಾಳ ಚಿತ್ರ. ಮೂರನೆಯದು ಅಡಗಿದಲ್ಲಿಂದ ಹೊರಬಂದು ತಾಯಿಯನ್ನು ತಬ್ಬಿಕೊಂಡು ಅಳುತ್ತಿರುವ ಇದೇ ಲೇಖಕಿಯ ಚಿತ್ರ. ಕೊನೆಯದ್ದು ಯಾವುದೋ ದೂರದ ಊರಿನಲ್ಲಿ ಆರಾಮವಾಗಿ ಡಾಕ್ಟರ್ ಕೆಲಸ ಮಾಡಿಕೊಂಡಿರುವ ತಸ್ಲೀಮಾಳ ತಂದೆ ತನ್ನ ಚಿಕಿತ್ಸಾಲಯಕ್ಕೆ ಕಲ್ಲು ಹೊಡೆಯಲು ಬಂದವರ ಕುರಿತು ಖೇದದಿಂದ, ಅಷ್ಟೇ ದುಗುಡದಿಂದ ವಿವರಿಸುತ್ತಿರುವ ಚಿತ್ರ. Continue reading “ತಸ್ಲಿಮಾ ಕುರಿತು-ಹತ್ತು ವರ್ಷದ ಹಿಂದೆ”