ಒಂದು ಶುಕ್ರವಾರದ ಬೆಳಗು

ಶುಕ್ರವಾರದ ಬೆಳಗು ಹೂವಂತೆ ಹಗುರಾಗಿದೆ.ರಾತ್ರಿ ಹಾಜರಾಗಿ ಅತ್ತು  ಹಂಗಿಸಿ ಕಿರಿಕಿರಿ ಮಾಡಿ ನಾನು ಬದುಕಿರುವುದೇ ತಪ್ಪು ಎನ್ನುವಂತೆ ಶಪಿಸಿ ನಟಿಕೆ ಮುರಿದು ಕೊನೆಗೆ ಹೋಗುವಾಗ ಕರುಣೆಯಿಂದ ಒಮ್ಮೆ ನೋಡಿ
ನಕ್ಕು ಹೋದ ಪ್ರತಿಮೆಗಳಂತಹ ಕಥಾ ಪಾತ್ರಗಳು ಈ ಬೆಳ್ಳನೆಯ ಬೆಳಗಿನಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಲು ನಾಚಿಕೊಂಡು ಸುಮ್ಮಗಿವೆ.ನಾನಾದರೋ ಹಿಂದೆ ಎಂದೂ ಇಲ್ಲದ ಹಾಗೆ ಇಂದು ಆಹ್ಲಾದಕರವಾಗಿರಬೇಕು ಎಂದುಕೊಂಡು ಕನಸು ಕಾಣುತ್ತಿದ್ದೇನೆ.ನಖಗಳನ್ನು ಕಡಿಯುತ್ತಿದ್ದೇನೆ.waiting.jpg ಅವಳು ಹಾಸಿಗೆಯಲ್ಲಿ ಮಲಗಿಕೊಂಡು ಅಲ್ಲೇ ಹೊರಳಾಡುತ್ತಾ,ಚಲಿಸುವ ಕಣ್ಣುಗಳಿಂದಲೇ ಸಮಸ್ತ ಮನೆಯನ್ನೂ, ಮಕ್ಕಳನ್ನೂ, ಆಗಾಗ ಕೊಕ್ಕರಿಸುತ್ತ ಒಳಬಂದು ಹಿಕ್ಕೆ ಹಾಕಿ ಹೋಗುವ ಕೋಳಿ ಸಂಸಾರವನ್ನೂ ಕಂಟ್ರೋಲ್ ಮಾಡುತ್ತಾ,ಟೀವಿ ನೋಡುತ್ತಾ,ರೇಡಿಯೋ ಕೇಳುತ್ತಾ,ಕನ್ನಡ ಮಲಯಾಳಂ ಪತ್ರಿಕೆಗಳನ್ನು ಓದುತ್ತಾ ಮುಂದಿನ ಪೂಜ್ಯ ಪೋಪ್ ಯಾರಾಗಬಹುದೆಂದು ಊಹಿಸಿಕೊಂಡು ಈಗಿನ ಪೂಜ್ಯ ಪೋಪ್ ನಿಜವಾಗಿಯೂ ತೀರಿ ಹೋಗುವರಾ ಎಂದು ಹೆದರಿಕೊಂಡು ಒಂದು ಕಾಲನ್ನು ಮೆಲ್ಲಗೆ ಎತ್ತಿ ಎತ್ತಲಾಗದ ಇನ್ನೊಂದು ಕಾಲಿನ ಮೇಲೆ ಮೆತ್ತಗೆ ಇಡುತ್ತಾಳೆ.

 ಈ ಬಲಗಾಲಿಗೆ ಇನ್ನೆಂದೂ ಜೀವ ಬರಲಿಕ್ಕಿಲ್ಲ ಅನ್ನಿಸುತ್ತದೆ. Continue reading “ಒಂದು ಶುಕ್ರವಾರದ ಬೆಳಗು”

Advertisements

ಒಂದು ದಶಕದ ಹಿಂದಿನ ಒಂದು ಪ್ರಬಂದ…..

 ಯಾಕೆ ಈ ಪ್ರೇಮದ ಜೀವಕೆ ಸಾವಿನ ಚಿಂತೆ…..

young3.jpg

  ಪುಟ್ಟ ಹುಡುಗಿಯಾಗಿದ್ದ ಈ ಚಂದದ ಹುಡುಗಿ ಈಗ ದೊಡ್ಡವಳಾದ ಮೇಲೂ ಮರೆಯದೆ ಸುಂದರವಾದ ರಾಖಿಯೊಂದನ್ನು ಅಂಚೆಯಲ್ಲಿ ಕಳುಹಿಸಿದ್ದಾಳೆ. ಪತ್ರದಲ್ಲಿ ಏನು ಏನೆಲ್ಲ ಹುಚ್ಚು ಹುಚ್ಚಾಗಿ ಮೊದ್ದು ಮೊದ್ದಾಗಿ ತುಂಟತನದಿಂದ ಬರೆದಿದ್ದಾಳೆ. ಅವಳು ಕಳುಹಿಸಿದ ಈ ಪಂಚವರ್ಣದ ರಾಖಿ ಮಳೆಯಲ್ಲಿ ನೆನೆದು ಬಿಸಿಲಲ್ಲಿ ಒಣಗಿ ಕೈಯ ಮೊಣಗಂಟಿನ ಬಳಿಯಲ್ಲಿ ವಿಚಿತ್ರವಾದ ಚಿತ್ರಗಳನ್ನು ಮೂಡಿಸಿದೆ. ನಾನು ಇವಳ ವೈಖರಿಯ ಕುರಿತು ಯೋಚಿಸುತ್ತಿದ್ದೇನೆ. ಚಂದದ ಪುಟ್ಟ ಹುಡುಗಿಯಾಗಿದ್ದ ಇವಳು ಬೆಳೆದು ಪುಟ್ಟ ಹೆಂಗಸಾಗಿರುವುದು ಚಂದಕ್ಕೆ ಏನೆಲ್ಲ ಗೀಚುತ್ತಾ, ಏನೆಲ್ಲ ಹರಟುತ್ತಾ, ಗೆಳತಿಯರ ಜೊತೆ ಸಿನಿಮಾ ನೋಡಿಬಂದು ಅದರ ಕತೆಯ ಕುರಿತು ಅವರೊಡನೆ ಹರಟುತ್ತಿದ್ದ ಇವಳು ಈಗ ಬೆಳೆದಿರುವುದು. ಕವಿತೆ ಬರೆಯುತ್ತಿರುವುದು, ಹಲವು ಹುಡುಗರ ನಿದ್ದೆಗೆಡಿಸಿ ಏನೂ ಆಗಿಯೇ ಇಲ್ಲವೆಂಬಂತೆ ಮೊದ್ದು ಮೊದ್ದಾಗಿ ತೊದಲುವುದು, ಅವರು ಅವಳ ಕುರಿತು ಹಲವು ಮಾತನ್ನಾಡಿ ಬಸವಳಿದು ಹೋಗುವುದು ಎಲ್ಲವೂ ನನ್ನ ಕಣ್ಣೆದುರೇ ನಡೆಯುತ್ತಿದೆ. ನನಗೆ ವಯಸ್ಸಾಗಿ ಹೋಗುತ್ತಿದೆ ಅನಿಸಿ ಸಣ್ಣಗೆ ಕಂಪಿಸುತ್ತೇನೆ.        ಹಾಗೇ ಇಲ್ಲ ಎಂದು ಜೋರಾಗಿ ನಕ್ಕುಬಿಡುತ್ತೇನೆ.

ದೂರದ ಊರಿಗೆ ಓದಲು ಹೋಗಿರುವ ಈ ಹುಡುಗಿ ಅಲ್ಲಿಂದ ನನಗೆ ಬರೆದಿದ್ದಾಳೆ: ‘ಇಲ್ಲಿ ನನಗೆ ತುಂಬಾ ಜನ ಗುರುತಾಗಿದ್ದಾರೆ. ಎಲ್ಲರೂ ನಾನು ಪ್ರಶ್ನೆಯಾಗಿ ಕಾಡಿದೀನೋ ಅನ್ನೋ ಹಾಗೆ ನಡೀತಾರೆ. ನಂಗೆ ಎಲ್ಲಾ ತಮಾಷೆ ಅನ್ಸುತ್ತೆ…. ಹೇಗಿದ್ದಿಯಾ? ಅತ್ತಿಗೆ ಹೇಗಿದ್ದಾರೆ. ಮತ್ತೇನು ವಿಶೇಷ ?…. ರಾಖಿ ಕಳಿಸ್ತಿದೀನಿ.  ರಾಖಿಯ ಬಣ್ಣಗಳು ನಿನ್ನ ಕೈಮೇಲೆ ಹರಡೋದನ್ನ ನೆನಸ್ಕೊಂಡ್ರೆ ಒಂಥರಾ ಮಜ’ ಎಂದು ಮುಗಿಸಿದ್ದಾಳೆ. ನಾನು ಅವಳು ಬರೆದ ಹಾಗೆ ಕೈಯ ಮೇಲೆ ರಾಖಿಯ ಬಣ್ಣ ಹರಡಿಕೊಂಡು ಎಲ್ಲ ಯೋಜಿಸಿಕೊಂಡು ಸುಸ್ತಾಗಿ ಕುಳಿತಿದ್ದೇನೆ. ಅಲ್ಲಿ ತಂಗಿ, ಅತ್ತಿಗೆ, ತಾಯಿ, ಮಗಳು, ಹೆಂಡತಿ ಹೀಗೆ ಈ ಹುಡುಗಿಯರ ಪಂಚವರ್ಣದ ಚಕ್ರ ಅಂಗೈಯಲ್ಲಿ ಗಿರ್ರನೆ ತಿರುಗಿ ಎಲ್ಲವೂ ದಿಗ್ಭ್ರಮೆಯಂತೆ ಕಾಣಿಸುತ್ತಿದೆ.

young2.jpg

ಈ ಹುಡುಗಿ ತಾನು ಓದುತ್ತಿರುವ ಕ್ಯಾಂಪಸ್ಸಲ್ಲಿ ಹಲವು ಹುಡುಗರ, ಹಲವು ಕವಿಗಳ, ಹಲವು ಪ್ರೇಮಿಗಳ, ಹಲವು ಮುದುಕು ಗಂಡಸರ, ಹಲವು ಒಂಟಿ ಹೆಂಗಸರ ನಡುವೆ ತಂಗಾಳಿಯಂತೆ, ನಿಟ್ಟುಸಿರಿನಂತೆ ಓಡಾಡುತ್ತಿದ್ದಾಳೆ. Continue reading “ಒಂದು ದಶಕದ ಹಿಂದಿನ ಒಂದು ಪ್ರಬಂದ…..”

ಮಾರ್ಕ್ವೆಜ್ ಬದುಕಿ ಉಳಿಯಲಿ ದೇವರೇ…

having a drink

ಗಲೂ ಬರೆಯಲಿಕ್ಕಾಗಿಯೇ ಬದುಕಿರುವ ಈ ಶತಮಾನದ ಅದ್ಭುತ ಕಥೆಗಾರ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್.ಇನ್ನೂ ಉಳಿದಿರುವ ಕಥೆಗಳನ್ನು ಹೇಳಿ ಮುಗಿಸಲಿಕ್ಕಾಗಿಯೇ ಬದುಕಿ ಉಳಿದಿದ್ದಾನೆ. ಆತನ ಆತ್ಮ ಚರಿತ್ರೆಯ ಉಳಿದಿರುವ ಎರಡು ಸಂಪುಟಗಳನ್ನು ಬರೆದ ನಂತರವೂ ಆತ ಬದುಕಿರಲಿ ಎಂದು ನಾನೂ ಪ್ರಾರ್ಥಿಸುತ್ತಿದ್ದೇನೆ. Continue reading “ಮಾರ್ಕ್ವೆಜ್ ಬದುಕಿ ಉಳಿಯಲಿ ದೇವರೇ…”

ಅಂತ್ಯಸಂಸ್ಕಾರ ಮತ್ತು ಭೂಮಿ ವ್ಯವಹಾರ

ಆಮಿತಾತ ತೀರಿಹೋಗುವ ದಿನದವರೆಗೂ ತನಗೆ ಕಾಫಿತೋಟವೊ೦ದರ ಅರ್ಧಪಾಲು ಸಿಗುವುದು ಎಂದು ನಂಬಿಕೊಂಡು ಬದುಕಿದ್ದಳು.ನೂರಾರು ವರ್ಷಗಳ ಹಿಂದೆ ಬ್ರಿಟಿಶ್ ದೊರೆಯೊಬ್ಬ ಆಕೆಗೆ ಈ ಆಸೆ ಕೊಟ್ಟು ಕೊಡಗಿಗೆ ಕರೆದು ಕೊಂಡು ಬಂದನಂತೆ. ಆ ತೋಟ ಹಲವು ಸಾಹುಕಾರರ ಕೈದಾಟಿದ್ದರೂ ಆ ಪಾಲು ತನಗೆ ಸಿಗುವುದು ಎಂದು ಆಕೆ ನಂಬಿದ್ದಳು.ಅದರಲ್ಲಿ ಒಂದು ಪಾಲು ನನಗೂ ನೀಡುವುದಾಗಿ ಆಕೆ ಆಸೆ ಕೊಟ್ಟಿದ್ದಳು. ಇಂದು ಆಮಿತಾತ ತೀರಿಹೋಗುವವರೆಗೆ ನನಗೂ ಆ ನಂಬಿಕೆ ಇತ್ತು. ಇನ್ನು ಇಲ್ಲ.

ನ್ನ ಪ್ರೀತಿಯ ಆಮಿತಾತ ಎಂಬ ಅಜ್ಜಿ ತೀರಿಹೋದರು ಎಂದು ನಿರ್ವಿಕಾರವಾಗಿ ಆಕೆಗೆ ಹೇಳಿ ಆಕೆಂದ ಅನುಕಂಪಭರಿತ ಸಾಂತ್ವನದ ಮಾತುಗಳನ್ನು ನಿರೀಕ್ಷಿಸುತ್ತಿದ್ದೆ. ಆದರೆ ಆಕೆಯೂ ಅಷ್ಟೇ ನಿರ್ವಿಕಾರವಾಗಿ ‘you lost your character’ ಅಂದಳು. ನನ್ನನ್ನು ಬಹಳ ಬಲ್ಲವಳಾಗಿದ್ದರಿಂದ ಸುಮ್ಮಗಾದೆ. ನಿನ್ನ ಪಾತ್ರಗಳು ನಿನಗೆ ಆನೆ ಇದ್ದಂತೆ. ಬದುಕಿರುವಾಗಲೂ ತೀರಿಹೋದಮೇಲೂ ನಿನಗೆ ಅವುಗಳು ಅಷ್ಟೇ ಬೆಲೆ ಬಾಳುತ್ತದೆ ಎನ್ನುವುದು ಅವಳ ಮಾತಿನ ಮರ್ಮವಾಗಿತ್ತು.

ಅವಳ ಮಾತುಗಳು ಯಾವಾಗಲೂ ಹೀಗೆಯೇ.ಮರ್ಮಕ್ಕೆ ತಾಗುವ ಹಾಗೇ ಮಾತನಾಡುತ್ತಾಳೆ.ಅವಳ ಮಾತು ನೂರಕ್ಕೆ ನೂರು ಸತ್ಯದ ಹಾಗೆ ಇರುತ್ತದೆ.ನಾನು ಬರೆದದ್ದನ್ನ ಕೆಲವೊಮ್ಮೆ ಓದಿ bull shit ಅನ್ನುತ್ತಾಳೆ. ಅಂದರೆ ಸಗಣಿ ಅಂತ ಅರ್ಥ. Continue reading “ಅಂತ್ಯಸಂಸ್ಕಾರ ಮತ್ತು ಭೂಮಿ ವ್ಯವಹಾರ”