ಹಳೆಯ ಕಾಲದ ಮನೋಚಿಕಿತ್ಸಕ ಡಾಕ್ಟರ ಕಥೆ

1235088_10151679403248246_1681251253_n

ಈ ನಾಚುಕೆಮುಳ್ಳಿನ ಹೂವಿಗೂ ಎಷ್ಟೊಂದು ಸೌಂದರ್ಯ ಎಂದು ನೋಡುತ್ತಿದ್ದೆ.

ಇದೇನು ಹೀಗೆ ಇದ್ದಕ್ಕಿದ್ದ ಹಾಗೆ ತಿಂದೇ ಬಿಡುವ ಹಾಗೆ ನೋಡುತ್ತಿದ್ದೀಯಲ್ಲ ಎಂದು ಅದೂ ಗಾಳಿಗೆ ಸಣ್ಣಗೆ ತಲೆ ಅಲ್ಲಾಡಿಸುತ್ತಾ ತನ್ನ ಅಸಮ್ಮತಿಯನ್ನು ತೋರಿಸುತ್ತಿತ್ತು.

ಸಣ್ಣದಿರುವಾಗ ಮುಟ್ಟಿದರೆ ಮುನಿಯುತ್ತದೆಯೆಂದು ಮತ್ತೆ ಮತ್ತೆ ಮುಟ್ಟುತ್ತಾ ತುಳಿಯುತ್ತಾ ಗೋಳು ಹೊಯ್ದುಕೊಳ್ಳುತ್ತಿದ್ದ ಅಸಹಾಯಕ ಮುಳ್ಳಿನ ಗಿಡ.

ಆಗ ಇದರ ಹೂವಿನ ಚಂದವನ್ನು ಕಾಣುವ ಸಹನೆಯೆಲ್ಲಿತ್ತು?

ಈಗ ಕಾಲನ ಹೊಡೆತಕ್ಕೆ ಸಿಲುಕಿರುವ ಈ ನಡುಗಾಲದಲ್ಲಿ ಈ ನಾಚುಕೆಮುಳ್ಳಿನ ಹೂವಿನ ವಯ್ಯಾರ ಬೇರೆ!

ನೋಡುನೋಡುತ್ತಿದ್ದಂತೆ ಪುಟ್ಟ ಚಿಟ್ಟೆಯೊಂದು ಕಾಡುಹೂವೊಂದರ ಮೇಲೆ ಕುಳಿತು ತನ್ನ ಕೆಲಸದಲ್ಲಿ ತೊಡಗಿತು.

ನೋಡಿದರೆ ಅದರ ಪಕ್ಕದ ಕಾಡುಹೂವೊಂದರ ಮೇಲೂ ಇನ್ನೊಂದು ಚಿಟ್ಟೆ.

ಒಂದು ವೇಳೆ ಎಲ್ಲಾದರೂ ಇಲ್ಲಿ ನಿಲ್ಲದೇ ಮುಂದೆ ಹೋಗಿದಿದ್ದರೆ ಜೀವನಪೂರ್ತಿ ಕಾಣದೇ ಹೋಗುತ್ತಿದ್ದ ಅಪರಿಮಿತ ಚೆಲುವಿನ ಈ ಹೂಗಳು.

ಒಂದು ಕಾಡು ಗಿಡವಂತೂ ತನ್ನ ಒಂದೊಂದು ಎಲೆಯನ್ನು ಸುರುಟಿ ಇಟ್ಟುಕೊಂಡು ಮೆಲ್ಲಗೆ ಹೂವಂತೆ ಅರಳಿಸಲು ಕಾಯುತ್ತಿತ್ತು.

1236545_10151679404903246_658208540_nಯಾರೋ ಕಾಡು ಸವರುತ್ತಾ ಕಾಲುದಾರಿ ಮಾಡುತ್ತಾ ಹೊರಟವರು ಅದರ ಆ ಗಿಡದ ಅರ್ದದಷ್ಟನ್ನು ಕತ್ತಿಯಿಂದ ಸವರಿ ಮುಂದೆ ಸಾಗಿದ್ದರು.

ಆದರೂ ಹಠಬಿಡದೆ ಉಳಿದಿರುವ ಇನ್ನೊಂದು ಎಲೆಯನ್ನು ಹೂವಂತೆ ಅರಳಿಸಲು ಅದು ಕಷ್ಟಪಡುತ್ತಿರುವಂತೆ ಕಾಣಿಸುತ್ತಿತ್ತು.

ಏನಾಗಿ ಹುಟ್ಟಿದರೂ ಪರವಾಗಿಲ್ಲ, ಅದರೆ ಜನರು ಓಡಾಡುವ ದಾರಿಯಲ್ಲಿ ಗಿಡವಾಗಿ ಹುಟ್ಟುವ ಪಾಡು ಯಾರಿಗೂ ಬೇಡ ಮಾರಾಯಾ ಎಂದು ನಾನು ನಡೆಯುತ್ತಿದ್ದೆ.

ನಾನು ಹೊರಟಿದ್ದುದು ಇಲ್ಲಿ ಮಡಿಕೇರಿಯ ಬಳಿಯ ಇಳಿಜಾರೊಂದರಲ್ಲಿ ಏಕಾಂಗಿಯಾಗಿ ಬದುಕುತ್ತಿರುವ ಹಳೆಯ ಕಾಲದ ಒಬ್ಬರು ಡಾಕ್ಟರನ್ನು ನೋಡಲು.

ಸುಮಾರು ನೂರಾಅರವತ್ತೈದು ವರ್ಷಗಳ ಹಿಂದೆ ಸ್ಕಾಟ್ ಲಾಂಡಿನ ಶ್ರೀಮಂತನೊಬ್ಬ ಕಟ್ಟಿಸಿದ ಕಾಫಿ ತೋಟದ ಬಂಗಲೆಯಲ್ಲಿ ಏಕಾಂಗಿಯಾಗಿ ಬದುಕುತ್ತಿರುವ ಇವರು ಲಂಡನ್ನಿನಲ್ಲಿ ಮನೋಚಿಕಿತ್ಸೆಯನ್ನು ಓದಿದವರು.

ಆದರೆ ಈ ಊರಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಕಡಿಮೆಯಿರುವುದರಿಂದ ಹತ್ತಿರವಿರುವ ಸರಕಾರೀ ಆಸ್ಪತ್ರೆಯಲ್ಲಿ ಹಲವು ವರ್ಷಗಳ ಕಾಲ ಸಾಮಾನ್ಯ ವೈದ್ಯರಾಗಿ ಕೆಲಸ ಮಾಡಿದವರು.

ಇವರಿಗೆ ಈಗ ಹತ್ತಿರ ಹತ್ತಿರ ತೊಂಬತ್ತರ ವಯಸ್ಸು.

ಇವರು ಇಲ್ಲಿನ ಬಹಳ ದೊಡ್ಡ ಮನೆತನಕ್ಕೆ ಸೇರಿದವರು.

ಇವರ ಅಜ್ಜ ಬ್ರಿಟಿಷರ ಕೊಡಗು ರಾಜ್ಯದಲ್ಲಿ ನ್ಯಾಯಾದೀಶರಾಗಿದ್ದವರು.ಇವರ ತಂದೆಯೂ ಅಷ್ಟೇ ನ್ಯಾಯಾದೀಶರಾಗಿದ್ದವರು.

ಆದರೆ ಇವರು ಯಾಕೋ ಲಂಡನ್ನಿಗೆ ತೆರಳಿ ಮನೋಚಿಕಿತ್ಸೆಯನ್ನು ಕಲಿತವರು ಬಡವರಿಗೆ ಔಷದಿ ಕೊಡುತ್ತಾ ಇಲ್ಲಿಯೇ ಉಳಿದರು.

ಹಿಂದೆ ಒಮ್ಮೆ ಇವರ ಬಳಿ ಹಳೆಯ ಕಾಲದ ಕಥೆಗಳನ್ನು ಕೇಳಲು ಹೋದಾಗ ನನ್ನ ಕಥೆಯೆಲ್ಲವೂ ಇದರಲ್ಲೇ ಇದೆ ಎಂದು ಅಚ್ಚುಮಾಡಿದ ಹಾಳೆಯೊಂದನ್ನು ಕೊಟ್ಟಿದ್ದರು.

ಮೊದಲಿಗೆ ತೋಟವನ್ನೂ ಬಂಗಲೆಯನ್ನೂ ಕಟ್ಟಿಸಿದ ಸ್ಕಾಟಿಷ್ ಶ್ರೀಮಂತನ ಕಥೆ.

ನಂತರ ಬ್ರಿಟಿಷರ ಕಾಲದಲ್ಲಿ ನ್ಯಾಯಾದೀಶನಾಗಿದ್ದ ಅಜ್ಜನ ಕತೆ.

ಅವರ ನಂತರ ನ್ಯಾಯಾದೀಶನಾಗಿದ್ದ ಅಪ್ಪನ ಕತೆ.

ನಂತರ ತನ್ನದೇ ಚುಟುಕು ಕಥೆ.

ಕೆಲವು ಹೆಸರುಗಳು, ಕೆಲವು ಇಸವಿಗಳು.ಏನೂ ಅಂತಹ ವಿಶೇಷಗಳಿಲ್ಲದೆ ಏನೂ ಅತಿರೇಕಗಳಿಲ್ಲದೆ ಇದು ಹೀಗೇ ನಡೆಯಬೇಕಾಗಿತ್ತು ಅದರಂತೆ ನಡೆಯಿತು ಎನ್ನುವಂತಹ ಅಚ್ಚು ಮಾಡಿದ ಹಾಳೆ ಅದು.

ಕುತೂಹಲ ತೋರಿಸಿದವರಿಗೆ ಅದನ್ನು ಕೊಟ್ಟು ಸುಮ್ಮನಾಗಿಸುತ್ತಿದ್ದ ಆ ಡಾಕ್ಟರು ನನಗೂ ಅದನ್ನು ಕೊಟ್ಟು ಟೀ ಕುಡಿಸಿ ಕಳಿಸಿದ್ದರು.

3ಎರಡನೆಯ ಸಲ ಹೋದಾಗ ಕತ್ತಲಾಗಿತ್ತು.

ಹೊರಗಡೆ ಆಕಾಶದಲ್ಲಿ ಕೊಂಚವೇ ಬೆಳಕಿತ್ತು.

ಆ ಕೊಂಚ ಬೆಳಕಿನಲ್ಲೇ ಆ ಡಾಕ್ಟರು ತಮ್ಮ ಹಳೆಯ ಬಂಗಲೆಯ ಕದವನ್ನು ತೆರೆದು ಒಳಗೆ ಕರೆದೊಯ್ದಿದ್ದರು.

ಆ ಹಳೆಯ ಕಾಲದ ಬ್ರಿಟಿಷ್ ಬಂಗಲೆಯೊಳಗೆ ನೂರಾರು ವರ್ಷಗಳಷ್ಟು ಹಳೆಯ ಬಿಲಿಯರ್ಡ್ಸ್ ಟೇಬಲ್ಲೂ, ಅಷ್ಟೇ ಹಳೆಯ ಕಾಲದ ಪಿಂಗಾಣಿಯ ಕಲಾಕೃತಿಗಳೂ, ಗೋಡೆಗಳ ಮೇಲೆ ಹಳೆಯ ಕಾಲದ ಬ್ರಿಟಿಷ್ ಚಿತ್ರಗಾರರ ತೈಲವರ್ಣದ ಚಿತ್ರಗಳೂ, ರಾಜಾ ರವಿವರ್ಮನ ಮರಿಮೊಮ್ಮಗಳಾದ ರುಕ್ಮಿಣಿವರ್ಮ ರಚಿಸಿದ ಅರೆನಗ್ನ ಕಲಾಕೃತಿಗಳೂ ಆ ಹೊರಟುಹೋಗುತ್ತಿರುವ ಬೆಳಕಿನಲ್ಲಿ ನಿಟ್ಟುಸಿರುಡುತ್ತಿರುವಂತೆ ಕಾಣಿಸುತ್ತಿದ್ದವು.

ಇತಿಹಾಸದ ಭಾರದಲ್ಲಿ ಜಗ್ಗಿ ಹೋಗಿರುವಂತೆ ಕಾಣಿಸುತ್ತಿದ್ದ ಮನೋಚಿಕಿತ್ಸಕ ಡಾಕ್ಟರು ತಮ್ಮ ಕುರಿತು ಏನೂ ಮಾತಾಡದೆ ಆ ಕಲಾಕೃತಿಗಳ ಕಾಲ ಅವುಗಳ ಹಿನ್ನೆಲೆ ಇತ್ಯಾದಿಗಳನ್ನು ವಿವರಿಸುತ್ತಾ ಆ ಬಂಗಲೆಯೊಳಗೆ ನೆರಳಿನಂತೆ ಓಡಾಡುತ್ತಿದ್ದರು.

ಅವರು ಮಲಗುತ್ತಿದ್ದ ಮಂಚದ ಬಳಿ ಉರಿಯುತ್ತಿದ್ದ ಅಗ್ಗಿಷ್ಟಿಕೆಯ ಬೆಂಕಿ, ಅವರ ತಲೆದಿಂಬಿನ ಬಳಿ ಬಿದ್ದುಕೊಂಡಿದ್ದ ನೋವು ನಿವಾರಕ ತೈಲ ಮತ್ತು ಅವರ ಎದುರಿಗಿದ್ದ ಹಳೆಯಕಾಲದ ಟೀಪಾಯಿಯ ಮೇಲೆ ಹಣ್ಣಾಗದೆ ಉಳಿದಿದ್ದ ರಸಬಾಳೆಯ ಒಂದು ಚಿಪ್ಪು- ಇವು ಮೂರನ್ನು ಬಿಟ್ಟರೆ ಆ ಬಂಗಲೆಯೊಳಗೆ ಉಳಿದಿದ್ದ ಉಳಿದ ಎಲ್ಲವೂ ಕಾಲದ ಯಾವುದೋ ಒಂದು ಕಪಾಟಿನೊಳಗಡೆ ಸೇರಿಹೋಗಿರುವಂತೆ ಅನಿಸುತ್ತಿತ್ತು.

‘ಡಾಕ್ಟರೇ.ನಿಜವಾಗಿಯೂ ನೀವು ಏನು? ಈಗ ನಿಮಗೆ ಏನನಿಸುತ್ತಿದೆ?ಇಲ್ಲಿ ಈ ಕಾಫಿ ಕಾಡೊಳಗೆ ಒಂಟಿಯಾಗಿ ಇರುವಾಗ ನೀವು ಏನನ್ನು ಯೋಚಿಸುತ್ತಿರುತ್ತೀರಿ ಎಂಬುದನ್ನು ಮುಂದೆ ಯಾವತ್ತಾದರೂ ಬೇಟಿಯಾದಾಗ ಹೇಳಿ.ಇನ್ನೊಮ್ಮೆ ಬರುತ್ತೇನೆ.ನಿಮಗೆ ಕಿರಿಕಿರಿ ಮಾಡುತ್ತಿರುವುದ್ದಕ್ಕೆ ಕ್ಷಮಿಸಿ’ ಎಂದು ಹೊರಟು ಬಂದಿದ್ದೆ.

‘ಹಾಗೇನಿಲ್ಲ,ನಾನೊಬ್ಬ ಪೂರ್ತಿಪ್ರಮಾಣದ ಬೆಳೆಗಾರ ಮತ್ತು ಅಲ್ಪಕಾಲೀನ ಮನೋಚಿಕಿತ್ಸಕ.ಅದಲ್ಲದೆ ಬೇರೇನೂ ಹೇಳಲು ನನ್ನ ಬಳಿ ಇಲ್ಲ.ಆದರೂ ನೀನು ಪ್ರಯತ್ನಿಸು’ ಎಂದು ಅವರು ಬೀಳ್ಕೊಟ್ಟಿದ್ದರು.

ನೂರುದಿನಗಳ ಕಾಲ ನಿರಂತರ ಸುರಿದ ಮಳೆಗೆ ಜರ್ಜರಿತವಾಗಿದ್ದ ಕಾಫಿಗಿಡಗಳೂ ನೆರಳಿನಮರಗಳೂ ಹುಲ್ಲುಗರಿಕೆಗಳೂ ನಿದಾನಕ್ಕೆ ಚೇತರಿಸಿಕೊಂಡು ನಸುಬಿಸಿಲಲ್ಲಿ ನಗಲು ನೋಡುತ್ತಿದ್ದವು.

1006067_10151679402448246_809224889_nಹಳೆಯಬಂಗಲೆಯ ಒಂಟಿ ಮನೋಚಿಕಿತ್ಸಕ ಡಾಕ್ಟರನ್ನು ಮತ್ತೆ ಕಾಣಲು ಹೊರಟಿದ್ದ ನಾನು ಕಾಡುಹೂಗಳ ಚೆಲುವಿಗೆ ಸಿಲುಕಿ ನೆಲನೋಡಿ ತಗ್ಗಾದ ಹಾದಿಯಲ್ಲಿ ನಡೆಯುತ್ತಿದ್ದೆ.

ಎದುರಿನ ತಿರುವಿನಲ್ಲಿ ಒಬ್ಬಾತ ಪಾಶ್ಚಿಮಾತ್ಯ ಪ್ರವಾಸಿ ನನ್ನ ಹಾಗೆಯೇ ಒಂಟಿಯಾಗಿ ನೆಲನೋಡುತ್ತಾ ನಡೆದು ಬರುತ್ತಿದ್ದವನು ಹತ್ತಿರ ಬಂದಾಗ ಮುಗುಳ್ನಕ್ಕ.

ಆತ ಮೂಲತಃ ದಕ್ಷಿಣ ಆಫ್ರಿಕಾದವನು.

ಆತನ ಮುತ್ತಾತಂದಿರು ಇನ್ನೂರು ವರ್ಷಗಳ ಹಿಂದೆ ಇಂಗ್ಲೆಂಡಿನಿಂದ ವಲಸೆ ಹೊರಟು ಕೇಪ್ ಟೌನಿನ ಸುತ್ತಮುತ್ತ ಬೇಸಾಯ ಶುರುಮಾಡಿದವರು.

ಆಮೇಲೆ ಬೇಸಾಯ ಬೇಸರವಾಗಿ ನಗರದಲ್ಲಿ ಸಣ್ಣಪುಟ್ಟ ಉದ್ಯೋಗಗಳನ್ನು ಕೈಗೊಂಡು ಬದುಕಿದ್ದವರು.

ಈತನ ಅಜ್ಜನಿಗೆ ಆಫ್ರಿಕಾದ ವರ್ಣಬೇಧ ಅಸಹ್ಯ ಬರಿಸಿತ್ತಂತೆ.ಆತ ಮಹಾತ್ಮಾ ಗಾಂಧಿಯ ಪರಮ ಅನುಯಾಯಿಯಾಗಿದ್ದನಂತೆ.ಹಾಗಾಗಿ ಈತನಿಗೂ ಭಾರತವೆಂದರೆ ಪ್ರೀತಿ.

ವರ್ಷಕ್ಕೆ ಆರು ತಿಂಗಳು ಕಟ್ಟಡ ವಿನ್ಯಾಸಕಾರನಾಗಿ ಆಸ್ಟ್ರೇಲಿಯಾದಲ್ಲಿ ದುಡಿಯುವ ಈತ ಉಳಿದ ಆರು ತಿಂಗಳು ಲೋಕ ಸುತ್ತುತ್ತಿರುತ್ತಾನೆ

ಹತ್ತು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಈತ ಇಲ್ಲಿರುವ ಜಲಪಾತವೊಂದನ್ನು ನೋಡಲು ಬಂದಿದ್ದ.

ಇದೇ ದಾರಿಯಲ್ಲಿ ಈ ಮನೋಚಿಕಿತ್ಸಕ ಡಾಕ್ಟರು ಸಿಕ್ಕಿದ್ದರಂತೆ.ಈತನನ್ನು ಜೀಪಿನಲ್ಲಿ ಹತ್ತಿಸಿಕೊಂಡು ಜಲಪಾತ ತೋರಿಸಿದ್ದರಂತೆ.ತಮ್ಮ ಬಂಗಲೆಗೆ ಕರೆದುಕೊಂಡು ಹೋಗಿ ಟೀ ಕುಡಿಸಿ ತಮ್ಮ ಮನೆತನದ ಕತೆ ಇರುವ ಅಚ್ಚುಮಾಡಿಸಿಟ್ಟಿದ್ದ ಹಾಳೆಯನ್ನು ಕೊಟ್ಟಿದ್ದರಂತೆ.

ಈತನಿಗೂ ಅವರ ಉಳಿದ ಕಥೆಗಳನ್ನು ಕೇಳುವ ಆಸೆ.

ಅದಕ್ಕಾಗಿ ಮತ್ತೆ ಬಂದಿದ್ದ.ಡಾಕ್ಟರಿಲ್ಲದ ಬಂಗಲೆಯನ್ನು ದೂರದಿಂದಲೇ ನೋಡಿ ವಾಪಾಸು ನಡೆದು ಬರುತ್ತಿದ್ದ.

‘ಮನೋಚಿಕಿತ್ಸಕ ಡಾಕ್ಟರಿಗೆ ಹುಷಾರಿಲ್ಲ.ಬೆಂಗಳೂರಲ್ಲಿದ್ದಾರೆ ಎಂದು ಗೇಟಿಂದಲೇ ವಾಪಾಸು ಕಳಿಸಿದರು’ ಎಂದು ಆತ ಬೇಸರದಲ್ಲಿ ನಕ್ಕ.‘ಹಾಗಾದರೆ ನಾನೂ ಹೋಗಿ ಪ್ರಯೋಜನವಿಲ್ಲ.ನಿನ್ನ ಜೊತೆ ವಾಪಾಸು ನಡೆಯುತ್ತೇನೆ’ ಎಂದು ನಾನೂ ವಾಪಾಸು ನಡೆಯತೊಡಗಿದೆ.

‘ನಿಮ್ಮ ಭಾರತದಲ್ಲೂ,ನನ್ನ ದಕ್ಷಿಣ ಆಫ್ರಿಕಾದಲ್ಲೂ ಬ್ರಿಟಿಷರು ಎಷ್ಟೊಂದು ಅವಾಂತರಗಳನ್ನೂ ಏಕಾಂಗಿಗಳನ್ನೂ ಸೃಷ್ಟಿಮಾಡಿರುವರು’ಆತ ಕೊಂಚ ಉದ್ವಿಗ್ನನಾಗಿಯೇ ಅನ್ನುತ್ತಿದ್ದ.

‘ಹೌದು ಮಾರಾಯ ಈ ಕಾಡುಹೂಗಳ ರಾಜ್ಯದಲ್ಲಿ ಇನ್ನೇನೆಲ್ಲ ದುಗುಡಗಳಿವೆಯೋ’ ಎಂದು ನಾನೂ ಅಂದುಕೊಳ್ಳುತ್ತಿದ್ದೆ.

549952_10151286033533246_1029751060_nನಾವಿಬ್ಬರೂ ಆ ಸಂಜೆ ಬಹಳ ಹೊತ್ತು ಈ ಮನೋಚಿಕಿತ್ಸಕ ಡಾಕ್ಟರ ಕುರಿತು ಮಾತನಾಡುತ್ತಾ ಕುಳಿತಿದ್ದೆವು.

ಯಾವ ಕೋನದಿಂದ ಮಾತನಾಡಿದರೂ ಕೊನೆಗೆ ಈ ಡಾಕ್ಟರು ಬಹಳ ಒಳ್ಳೆಯವರಾಗಿಯೇ ಕಾಣಿಸಿಕೊಳ್ಳುತ್ತಿದ್ದರು.

8 September 2013

Photos By the author

Advertisements

ಕಾಲಕಾಲಕ್ಕೆ ಎಣ್ಣೆ ಪಾಲಾದ ಮಗುವಿನ ಕಥೆ

941205_10151561676088246_551561896_n

ಸಂಜೆಯ ಎಳೆಬಿಸಿಲಲ್ಲಿ ಸಣ್ಣಯುವಕನ ಹಾಗೆ ಆ ಹಿರಿಯರು ನಡೆಯುತ್ತಿದ್ದರು.

ಅವರಿಂದ ಒಂದು ಸಣ್ಣ ಅಂತರ ಕಾದುಕೊಂಡು ನಾನೂ ನಡೆಯುತ್ತಿದ್ದೆ.

ಒಳ್ಳೆಯ ಓದುಗನೂ ಮತ್ತು ಸ್ವತಃ ಬರಹಗಾರನೂ ಆಗಿರುವ ಈ ಹಿರಿಯರಿಗೆ ಇರುವ ಒಂದೇ ಒಂದು ಕೆಟ್ಟ ಅಭ್ಯಾಸವೆಂದರೆ ಆಗಾಗ ಏನಾದರೊಂದು ಗಹನ ಸಂಗತಿಯನ್ನು ಹೇಳುವುದು ಮತ್ತು ಗಹನ ಸಂಗತಿ ನಮಗೆ ಅರ್ಥವಾಯಿತೋ ಇಲ್ಲವೋ ಎಂದು ಖಾತರಿ ಪಡಿಸಲು ಕೇಳಿಸಿಕೊಳ್ಳುತ್ತಿರುವವರ ಭುಜವನ್ನೋ ಬೆನ್ನನ್ನೋ ಅಥವಾ ಕಿಬ್ಬೊಟ್ಟೆಯನ್ನೋ ಜೋರಾಗಿ ಜಿಗುಟುವುದು.

ಅದಕ್ಕಾಗಿ ಅವರಿಂದ ಒಂದು ಸಣ್ಣ ಅಂತರ ಕಾದುಕೊಂಡು ನಾನೂ ನಡೆಯುತ್ತಿದ್ದೆ.

ನಾವಿಬ್ಬರೂ ರಾಜಾಸೀಟಿನಿಂದ ಹೊರಟವರು ಜಿಲ್ಲಾ ಮುಖ್ಯ ಅಂಚೆ ಖಚೇರಿಯ ಇಳಿಜಾರನ್ನು ಇಳಿದು ಮಡಿಕೇರಿಯ ಖಾಸಗೀ ಬಸ್ಸು ನಿಲ್ಧಾಣ ತಲುಪಿದ್ದೆವು.

479955_10151241087358246_843059400_nಈ ಹಿರಿಯರು ಸಣ್ಣವರಿರುವಾಗಲೇ ಈ ಬಸ್ಸು ನಿಲ್ಧಾಣ ಹೀಗೇ ಇತ್ತಂತೆ.ಮಂಗಳೂರಿನಿಂದ ಬರುತ್ತಿದ್ದ ಉಗಿ ಇಂಜಿನ್ನಿನ ಸಿಪಿಸಿ ಬಸ್ಸೊಂದು ಸಂಪಾಜೆ ಘಾಟಿಯನ್ನು ಏದುಸಿರು ಬಿಡುತ್ತಾ ಹತ್ತಿ ಇಲ್ಲಿ ಒಂದಿಷ್ಟು ಸುಸ್ತು ನಿವಾರಿಸಿಕೊಂಡು ಆಮೇಲೆ ಮೈಸೂರಿನ ಕಡೆ ಉಲ್ಲಾಸದಿಂದ ಹೊರಡುತ್ತಿತ್ತಂತೆ.

‘ನಾನು ಸಿರಸಿಯ ಕಡೆಯಿಂದ ಹೊಸಬಿ ಹೆಂಡತಿಯನ್ನು ಅದೇ ಸಿ ಪಿ ಸಿ ಬಸ್ಸಲ್ಲಿ ಕರೆದುಕೊಂಡು ಬಂದು ಇಳಿದದ್ದು ಇದೇ ಬಸ್ಸು ನಿಲ್ದಾಣದಲ್ಲಿ ಗೊತ್ತುಂಟಾ ನಿಮಗೆ?’ ಹಿರಿಯರು ಕೇಳಿದರು.

ಅವರ ಮತ್ತು ಎಳವೆಯಲ್ಲೇ ತೀರಿ ಹೋಗಿರುವ ಹೆಂಡತಿಯ ಅಪರಿಮಿತ ಪ್ರೀತಿ ಮತ್ತು ಅಗಾಧ ದ್ವೇಷ ಎರಡನ್ನೂ ಅವರ ಬಾಯಿಂದಲೇ ಅಲ್ಪಸ್ವಲ್ಪ ಕೇಳಿದ್ದ ನಾನು ‘ಹೌದಾ’ ಎಂದು ಅಚ್ಚರಿ ನಟಿಸಿದೆ.

‘ಹೌದು ಮಾರಾಯಾ ಆಗ ಎಂಥಾ ಪ್ರಾಯ!.ಸಿಪಿಸಿ ಬಸ್ಸಿನ ಎಂಜಿನಿಗಿಂತ ನನ್ನ ಎಂಜಿನ್ನೇ ಹೆಚ್ಚು ಬಿಸಿಯಿತ್ತೋ ಏನೋ.ಹಾಗೆ ಅಂಟಿ ಕೂತಿದ್ದಳು ಅವಳು ಆಗ ನನಗೆ’. ಆ ಹಿರಿಯರು ತಮ್ಮ ಕಣ್ಣುಗಳಲ್ಲಿ ಇನ್ನಷ್ಟು ಹೊಳಪು ತುಂಬಿಕೊಂಡು ಗಹಗಹಿಸಿ ನಕ್ಕು ನನ್ನನ್ನು ಜಿಗುಟಲು ನೋಡಿದರು.

ನಾನು ಎಂದಿನಂತೆ ತಪ್ಪಿಸಿಕೊಂಡೆ.

ಈ ಹಿರಿಯರು ಮೊದಲಿನಿಂದಲೂ ಹೀಗೆಯೇ.

ಭಕ್ತಿ, ಪ್ರೇಮ ಇತ್ಯಾದಿ ನವಿರು ನವಿರು ವಿಷಯಗಳನ್ನು ಕಂಡರೆ ಅಷ್ಟಕಷ್ಟೇ.

ಹಾಗೆಯೇ ಮಹಾತ್ಮಾ ಗಾಂಧಿ ಹೇಳಿದ ಸತ್ಯ, ಅಹಿಂಸೆ, ಗ್ರಾಮ ಸ್ವರಾಜ್ಯ ಇತ್ಯಾದಿಗಳನ್ನು ಕಂಡರೂ ಹಾಗೆಯೇ.

ಇವೆಲ್ಲವೂ ನಾಮೂಸು ಅನ್ನುತ್ತಿದ್ದರು.

3ಸುಮಾರು ನಲವತ್ತು ವರ್ಷಗಳ ಇವರ ಮಗ ನಾಲ್ಕನೇ ತರಗತಿಯಲ್ಲಿ ಓದುತ್ತಿರುವಾಗ ಒಂದು ದಿನ ಬೆಳಗ್ಗೆ ಎದ್ದವನು ‘ಈವತ್ತು ನಾನು ಶಾಲೆಗೆ ಹೋಗುವುದಿಲ್ಲ, ಟೀಚರು ಹೊಡಿಯುತ್ತಾರೆ’ ಅಂತ ಹಠ ಹಿಡಿದನಂತೆ.

ಇವರು ತೋಟಕ್ಕೆ ಬರುವ ಕಾಡುಕೋಣಗಳನ್ನು ಓಡಿಸಲು ತಂದಿಟ್ಟಿದ್ದ ಚರೆ ತುಂಬಿದ್ದ ಕೋವಿಯನ್ನು ಹೊರಗೆ ತಂದು ‘ನೀನು ಹೋಗ್ತಿಯೋ ಇಲ್ಲಾ ರಕ್ತಕಾರಿ ಸಾಯ್ತೀಯೋ’ ಎಂದು ಆಕಾಶಕ್ಕೆ ಒಂದು ಸುತ್ತು ಗುಂಡು ಹಾರಿಸಿದರಂತೆ.

‘ಆ ಸದ್ದಿಗೆ ಮಗ ಹೇಗೆ ಓಡಿದ ಗೊತ್ತಾ?ಸಂಜೆ ಶಾಲೆಯಿಂದ ವಾಪಾಸು ಬರುವಾಗಲೂ ಅವನ ಚಡ್ಡಿಯಿಂದ ಉಚ್ಚೆ ವಾಸನೆ ಬರುತ್ತಿತ್ತು.ಹಾಗೆ ಓಡಿದ್ದ ನನ್ನ ಮಗ!ಈಗ ನೋಡಿ ಭಾರತದ ಆದಾಯ ತೆರಿಗೆ ಇಲಾಖೆಯಲ್ಲಿ ಕಮಿಷನರಾಗಿ ನಿವೃತ್ತಿಯಾಗಿ ಹೆಂಡತಿಯ ಜೊತೆ ಬೆಕ್ಕಿನಂತೆ ಬದುಕುತ್ತಿದ್ದಾನೆ’ ಅವರು ನಕ್ಕಿದ್ದರು.

ಬಸ್ಸು ನಿಲ್ದಾಣದ ಕೊನೆಯಲ್ಲಿರುವ ಹಳೆಯ ಕಾಲದ ಅದೇ ಪುಸ್ತಕದ ಅಂಗಡಿಗೆ ಬಂದೆವು.

ಅಂಗಡಿಯಾತ ಹಿರಿಯರನ್ನು ಕಂಡು ಎದ್ದು ನಿಂತು ನಮಸ್ಕರಿಸಿದ.

ಆತನ ತಂದೆಯ ತಂದೆಯ ಕಾಲದಿಂದಲೂ ಹೀಗೆಯೇ ನಡೆದುಕೊಂಡು ಬರುತ್ತಿರುವ ಪುಸ್ತಕ ವ್ಯಾಪಾರ.

ಇತ್ತೀಚೆಗೆ ಈ ಪುಸ್ತಕದಂಗಡಿಯಲ್ಲಿ ಈ ಹಿರಿಯರು ಬರೆದ ಮೂರುನಾಲ್ಕು ಪುಸ್ತಕಗಳೂ ಕ್ಲಿಪ್ಪು ಸಿಕ್ಕಿಸಿಕೊಂಡು ತೂಗಾಡುತ್ತಿದ್ದವು.

ಸೂಫಿ ತತ್ವಗಳ ಕುರಿತೂ, ಶೈವ ಆಚರಣೆಗಳ ಕುರಿತೂ, ಸಹಜ ಕೃಷಿಯ ಕುರಿತೂ ಸರಳ ಭಾಷೆಯಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಬರೆದಿದ್ದ ಇವರ ಹೊತ್ತಗೆಗಳನ್ನು ಆ ಪುಸ್ತಕದಂಗಡಿಯವನು ಪ್ರೀತಿ ಮತ್ತು ಗೌರವದಿಂದ ಇಟ್ಟುಕೊಂಡಿದ್ದ.

ಹಿಂದೆ ಒಂದು ಸಲ ತಾರಾಮಾರ ಮಳೆಗೆ ಈ ಹಳೆಯ ಬಸ್ಸು ನಿಲ್ದಾಣದ ಹಿಂದಿನ ಮಣ್ಣಿನ ಬರೆ ಕುಸಿದು ಬಿದ್ದು ದೊಡ್ಡ ಬಂಡೆಗಲ್ಲೊಂದು ಈ ಪುಸ್ತಕದಂಗಡಿಯೊಳಗೂ ನುಗ್ಗಿ ಸಾಕಷ್ಟು ನಷ್ಟ ಉಂಟಾಗಿತ್ತು.

ಆಗ ಕೊಡಗಿನಲ್ಲಿ ಇದ್ದ ಒಂದೇ ಒಂದು ಪುಸ್ತಕದಂಗಡಿ ಇದು.

ಇದೂ ಹೋದರೆ ಇಲ್ಲಿನವರಿಗೆ ಓದಲು ರದ್ದಿಯೂ ಸಿಕ್ಕುವುದಿಲ್ಲ ಎಂದು ಆಗ ಸಹಕಾರೀ ಬ್ಯಾಂಕಿನ ಹಿರಿಯ ಉದ್ಯೋಗಿಯಾಗಿದ್ದ ಈ ಹಿರಿಯರು ಬ್ಯಾಂಕಿನಿಂದ ವಿಶೇಷ ಸಾಲ ಕೊಡಿಸಿ ಪುಸ್ತಕದಂಗಡಿಯನ್ನು ಮತ್ತೆ ತೆರೆಸಿದ್ದರು.

‘ಆಗ ಆ ಸಾಲ ಕೊಡಿಸಿದ್ದು ಈ ಮಾರಾಯ ಮುಂದೆ ನನ್ನ ಪುಸ್ತಕಗಳನ್ನು ಮಾರಲು ಬೇಕಾಗಬಹುದು ಅಂತ ದೂರಾಲೋಚನೆಯಿಂದ ಅಲ್ಲ ಗೊತ್ತುಂಟಾ,ನೀವು ತಪ್ಪು ತಿಳಿಯಬೇಡಿ’ ಹಿರಿಯರು ಇನ್ನೊಮ್ಮೆ ಗಹಗಹಿಸಿ ನಕ್ಕರು.

270018_10150239509903246_3949622_nಇನ್ನು ನಾವು ಕೊಂಚ ಬಲಕ್ಕೆ ತಿರುಗಿ ಬಾಟಾ ಶಾಫಿನಿಂದಾಗಿ ಚೌಕಿಗೆ ತೆರಳಿ ಅಲ್ಲಿಂದ ಕಾಲೇಜು ರಸ್ತೆಗಾಗಿ ಮುಂದೆ ಹೋಗಬೇಕು.

ಹಿರಿಯರು ಅಲ್ಲೇ ನಿಂತರು.

‘ನಾನು ಯುವಕನಾಗಿರುವಾಗ ಇಲ್ಲೊಂದು ದುರ್ಘಟನೆ ಆಗಿತ್ತು ಗೊತ್ತಾ’ ಎಂದು ಕೇಳಿದರು.

ಏನು ಎಂದು ಅವರನ್ನು ನೋಡಿದೆ.

‘ಇಲ್ಲಿ ಈ ಹಣ್ಣು ಮಾರುವ ಗೂಡಂಗಡಿಗಳು ಇವೆಯಲ್ಲಾ.ಅದೆಲ್ಲಾ ಆಗ ಇರಲಿಲ್ಲ.ಅಲ್ಲಿಯೂ ಬಸ್ಸುಗಳು ನಿಲ್ಲುತ್ತಿದ್ದವು.ಆದರ ಬದಿಯಲ್ಲೇ ದೊಡ್ಡ ತಗ್ಗು.ಆ ತಗ್ಗಿನಲ್ಲಿ ಒಂದು ಸೇಂದಿ ಅಂಗಡಿ.ಆ ಸೇಂದಿ ಅಂಗಡಿಯ ಎದುರು ಒಂದು ಕೋಳಿಕಟ್ಟ.ಪ್ರತಿ ಶುಕ್ರವಾರ ಅಲ್ಲಿ ಕಟ್ಟದ ಕೋಳಿಗಳು ಕಾದಾಡುತ್ತಿದ್ದವು.ಆ ಸೇಂದಿ ಅಂಗಡಿಯ ಎದುರೇ ಒಬ್ಬಳು ಮುದುಕಿ ದೊಡ್ಡ ಬಾಂಡಲಿಯಲ್ಲಿ ವಡೆ ಕಾಯಿಸಿ ಮಾರುತ್ತಿದ್ದಳು.’

‘ಒಂದು ಶುಕ್ರವಾರ ಏನಾಯಿತು ಗೊತ್ತಾ?’ ಹಿರಿಯರು ನನ್ನನ್ನು ಕೇಳಿದರು.

ನನಗೆ ಗೊತ್ತಿತ್ತು.ಒಂದು ಶುಕ್ರವಾರ ಒಬ್ಬಳು ಹೆಂಗಸು ತನ್ನ ಕೈಕೂಸನ್ನು ಎತ್ತಿಕೊಂಡು ಈ ತಗ್ಗಿನ ಬದಿಯಲ್ಲಿ ಹೊರಡಲು ರೆಡಿಯಾಗಿ ನಿಂತಿದ್ದ ಬಸ್ಸು ಹತ್ತಿ ಕುಳಿತಿದ್ದಳು.ಕೈಕೂಸು ತಾಯಿಯ ಎದೆಯ ಮೇಲೆ ಹೊರಳಿಕೊಂಡು ಆಟವಾಡುತ್ತಿತ್ತು.ಬಸ್ಸು ಇನ್ನೇನು ಹೊರಡಬೇಕು ಎನ್ನುವಾಗ ಆ ಕೂಸು ಬಸ್ಸಿನ ಆ ಸದ್ದಿಗೆ ಉಧ್ವಿಗ್ನಗೊಂಡು ತಾಯಿಯ ಕೈಯಿಂದ ಜಾರಿ ಕೆಳಕ್ಕೆ ಬಿದ್ದು ವಡೆಯ ಬಾಂಡಲಿಗೆ ಬಿದ್ದು ಕರಕಲಾಗಿ ಹೋಯಿತು.

ಈ ಕಥೆಯನ್ನು ನನ್ನ ತಂದೆಯೂ ಹೇಳಿದ್ದರು.

ಆದರೆ ಅದು ಅವರ ಯೌವನದ ಕಾಲದಲ್ಲಿ ನಡೆದದ್ದು ಎಂದು ಹೇಳಿದ್ದರು..

ನಾವು ಏಳನೇ ತರಗತಿಯಲ್ಲಿ ಓದುತ್ತಿರುವಾಗ ಇತಿಹಾಸ ಹೇಳಿಕೊಡುತ್ತಿದ್ದ ಟೀಚರೊಬ್ಬರು ದಿನಾ ಮಡಿಕೇರಿಯಿಂದ ಬಸ್ಸು ಹತ್ತಿ ಬರುತ್ತಿದ್ದವರು ‘ಇವತ್ತು ಬಸ್ ಸ್ಟಾಂಡಲ್ಲಿ ಏನಾಯ್ತು ಗೊತ್ತಾ ಮಕ್ಕಳೇ’ ಎಂದು ಇದೇ ಕಥೆಯನ್ನು ಹೇಳಿದ್ದರು.

kaadu-maavina-marada-getu.jpgಎಲ್ಲ ಕಾಲಘಟ್ಟದಲ್ಲೂ ನಡೆದಿರುವ ಕೈಕೂಸೊಂದು ವಡೆಯ ಬಾಂಡಲಿಯಲ್ಲಿ ಕರಕಲಾದ ಇದೇ ಕಥೆ!

ನಾನು ಹಿರಿಯರಿಗೆ ಇದನ್ನೇ ಹೇಳಿದೆ.

‘ಅಯ್ಯೋ ಅದು ನಿಮಗೆ ಗೊತ್ತಿಲ್ಲವಾ?

ಆ ಹಿರಿಯರು ತುಂಬ ಸಹಜವಾಗಿ ನಕ್ಕರು.

‘ತ್ರೇತಾಯುಗದಲ್ಲೂ ಈ ಆಧುನಿಕ್ಕೋತ್ತರ ಯುಗದಲ್ಲೂ ಮತ್ತು ಎಲ್ಲ ಕಾಲದೇಶಗಳಲ್ಲೂ ಪ್ರತಿಯೊಬ್ಬನ ಬದುಕಿನಲ್ಲೂ ಇಂತಹದೊಂದು ಜೀವಂತ ಸುಟ್ಟ ಘಟನೆ ನಡೆದಿರುತ್ತದೆ.ಅದು ಮಗುವಾಗಿರಬಹುದು, ತಾಯಿಯಾಗಿರಬಹುದು ಅಥವಾ ಹೆಂಡತಿಯಾಗಿರಬಹುದು ಅಥವಾ ಒಂದು ಬೆಕ್ಕಿನ ಮರಿಯಾಗಿರಬಹುದು.ಉದಾಹರಣೆಗೆ ನನ್ನನ್ನೇ ನೋಡಿ.ಒಂದು ದಿನ ಬೆಳಗ್ಗೆ ಏನೋ ಕೆಟ್ಟ ವಾಸನೆ ಬಂದು ಎದ್ದು ನೋಡಿದಾಗ ನನ್ನ ಹೆಂಡತಿ ಬಚ್ಚಲ ಒಲೆಯ ಮುಂದೆ ಸದ್ದಿಲ್ಲದೆ ಸುಟ್ಟು ಕರಕಲಾಗಿ ಹೋಗುತ್ತಿದ್ದಳು’

‘ಜನ ಏನೇನೋ ಮಾತನಾಡುತ್ತಾರೆ.ನಾನೇ ಅವಳನ್ನು ಒಲೆಯಲ್ಲಿ ಸುಟ್ಟೆ ಅಂತಲೂ ಬೇಕಾದರೆ ಅನ್ನಬಹುದು.ಜನರಿಗೇನು.ಅವರಿಗೆ ಬೇಕಾದ ಹಾಗೆ ಒಂದೊಂದು ಕಥೆ ಮಾಡಿಕೊಳ್ಳುತ್ತಾರೆ.ಅಂತಹದೇ ಒಂದು ಕಥೆ ವಡೆಬಾಂಡಲಿಯಲ್ಲಿ ಸುಟ್ಟುಹೋದ ಒಂದು ಮಗುವಿನ ಕಥೆ.ನಿಮಗೇನಾದರೂ ಅರ್ಥವಾಯಿತಾ?’ ಹಿರಿಯರು ಜೋರಾಗಿ ಕಿರುಚಿಕೊಂಡರು.

1009733_10151561675508246_169725674_nಅವರು ಈ ಸಲ ಗಹಗಹಿಸಿ ನಗಲೂ ಇಲ್ಲ.ಚಿವುಟಲೂ ಬರಲಿಲ್ಲ.ಯಾಕೋ ಅವರು ತುಂಬ ಸುಸ್ತಾಗಿ ಹೋದಂತೆ ಕಾಣಿಸುತ್ತಿದ್ದರು.

24 February 2013

(Photos by the author)

 

 

ರುಕ್ಮಿಣಿ ಎಂಬ ಮಹಿಳಾ ರೈಟರ್

padmini 1 copyಕೆಲವು ತಿಂಗಳುಗಳ ಹಿಂದೆ ಖಾಕಿ ಉಡುಪು ಧರಿಸಿದ ಕಟ್ಟುಮಸ್ತಾದ ಸ್ತ್ರೀಯೊಬ್ಬರು ದೇವರಕೊಲ್ಲಿಯ ಸಾಬರ ಹೋಟಲಿನ ಮುಂದೆ ಮಳೆಯನ್ನು ನೋಡುತ್ತ ನಿಂತಿದ್ದರು. ಅವರ ನೋಟ, ಹೋಟೆಲ್ಲಿನಲ್ಲಿ ಕುಳಿತಿದ್ದ ಇತರ ಮಂದಿ ಅವರ ಕಡೆ ತೋರಿಸುತ್ತಿದ್ದ ಗೌರವ ಬೆರೆತ ದೃಷ್ಟಿ ಇವೆಲ್ಲವನ್ನೂ ಕಂಡು ನನಗೆ ಕುತೂಹಲವಾಯಿತು.

‘ಏನ್ ಮೇಡಂ ನೀವು ಪೊಲೀಸ್ ಡಿಪಾರ್ಟ್‌ಮೆಂಟಾ ಇಲ್ಲಾ ಫಾರೆಸ್ಟ್ ಡಿಪಾರ್ಟ್‌ಮೆಂಟಾ?’ ಎಂದು ಕೊಂಚ ಸಲುಗೆ ತೆಗೆದುಕೊಂಡು ಕೇಳಿದೆ.

‘ಇಲ್ಲಾ ಇಲ್ಲಿ ಏಲಕ್ಕಿ ಮಲೆಯಲ್ಲಿ ಎಸ್ಟೇಟ್ ರೈಟರು’ ಎಂದು ಹೇಳಿದರು.

‘ಯಾವ ಎಸ್ಟೇಟ್’ ಎಂದು ಕೇಳಿದೆ.

ಆ ಎಸ್ಟೇಟಿನ ಹೆಸರು ಹೇಳಿದರು. ಅದನ್ನು ಕೇಳಿ ನನಗೆ ತಲೆ ತಿರುಗಿದಂತಾಯಿತು.ಅಲ್ಲಿ ಆನೆಗಳೂ, ಕಾಡಾಡುಗಳೂ ಸದಾ ಸಂಚರಿಸುತ್ತಿರುತ್ತವೆ ಎಂದು ಗೊತ್ತಿತ್ತು.

ಅವರು ನನ್ನ ಹೆಸರು ಕೇಳಿದರು. ನಾನು ಹೇಳಿದೆ.

’ಗೊತ್ತು ನೀವು ಕಥೆಗಳನ್ನು ಬರೆಯುತ್ತೀರಲ್ಲವಾ ಓದಿದ್ದೇನೆ’ ಅಂದರು.

ಅದಾಗಿ ಕಳೆದ ವಾರ ಒಂದು ದಿನ ಅವರು ಪೋನ್ ಮಾಡಿದರು. ನನ್ನ ನೆನಪಾಯಿತಾ ಎಂದು ಕೇಳಿದರು. ಅವರ ಧ್ವನಿ ಕೇಳಿದೊಡನೆ ನನಗೆ ಗೊತ್ತಾಯಿತು.

‘ರುಕ್ಮಿಣಿ ರೈಟರ್ ಅಲ್ಲವಾ’ ಎಂದು ಕೇಳಿದೆ.

’ಹೌದು’ ಎಂದು ಖುಷಿಪಟ್ಟರು.

‘ನಿಮಗೆ ಮಾತನಾಡಲು ಸಮಯವಿದೆಯಾ’ ಎಂದು ಕೇಳಿದರು.

‘ಓ ಬೇಕಾದಷ್ಟಿದೆ’ ಎಂದು ಹೇಳಿದೆ.

’ನನ್ನದೊಂದು ದೊಡ್ಡ ಕಣ್ಣೀರಿನ ಕಥೆ ಹೇಳಿದರೆ ನೀವು ಬರೆಯುತ್ತೀರಾ’ ಎಂದು ಕೇಳಿದರು.

‘ನನಗೆ ಕಣ್ಣೀರಿನ ಕಥೆ ಬರೆದು ಗೊತ್ತಿಲ್ಲ. ಆದರೂ ಹೇಳಿ ಹೇಗೆ ತೋಚುತ್ತದೋ ಹಾಗೆ ಬರೆಯುತ್ತೇನೆ’ ಎಂದು ಹೇಳಿದೆ.

ಅವರು ಅವರ ಕಥೆಯನ್ನು ಹೇಳಿದರು.

ಅವರು ಹೇಳಿದ ಕಥೆ ಅವರು ಹೇಳಿದಷ್ಟೇ ಚುಟುಕಾಗಿ ಇಲ್ಲಿದೆ.

_DSC1014 “ನಾವು ಕೇರಳದವರು. ನನ್ನ ತಂದೆ-ತಾಯಿಗೆ ನಾವು ಒಂಬತ್ತು ಮಂದಿ ಮಕ್ಕಳು. ಹುಡುಗಿಯರಲ್ಲಿ ನಾನು ಎರಡನೆಯವಳು. ನನ್ನ ಹೆಸರು ರುಕ್ಮಿಣಿ. ನಮ್ಮ ತಂದೆ ಬಹಳ ಕಾಲದ ಹಿಂದೆ ಕೇರಳದ ದಕ್ಷಿಣ ಭಾಗದಿಂದ ವಲಸೆ ಬಂದು ಕೊಡಗಿನ ಗೋಣಿಕೊಪ್ಪದ ಬಳಿ ಹೋಟೆಲು ಅಂಗಡಿ ಬೇಕರಿ ಎಲ್ಲಾ ಸೇರಿಕೊಂಡ ಒಂದು ವ್ಯಾಪಾರ ನಡೆಸುತ್ತಿದ್ದರು. ಮೂರು ಏಕರೆ ತೋಟವೂ ಇತ್ತು. ಒಂದು ತರಹದ ಸುಖದಲ್ಲೇ ನಾವೆಲ್ಲಾ ಜೀವಿಸುತ್ತಿದ್ದೆವು”

“ನಾನು ಆಗ ಆರನೆಯ ತರಗತಿಯಲ್ಲಿ ಶಾಲೆಗೆ ಹೋಗುತ್ತಿದ್ದೆ. ಒಟ್ಟು ಮಕ್ಕಳಲ್ಲಿ ನಾನು ಐದನೆಯವಳು. ಹೀಗಿರುವಾಗ ನನ್ನ ಅಕ್ಕ ಸ್ವಲ್ಪ ದೊಡ್ಡವಳು ಇದ್ದಕ್ಕಿದ್ದಂತೆ ಕೊಡವ ಜನಾಂಗದ ಹುಡುಗನೊಬ್ಬನನ್ನು ಪ್ರೀತಿಸಿ ಮದುವೆಯಾಗಿ ಬಿಟ್ಟಳು. ಅದು ಆಕಾಲದಲ್ಲಿ ಆ ಪ್ರದೇಶದಲ್ಲಿ ಒಂದು ದೊಡ್ಡ ಕಲಹವನ್ನೇ ಉಂಟುಮಾಡಿಬಿಟ್ಟಿತ್ತು. ನಮ್ಮ ಮನೆಯಲ್ಲೂ ಆ ಕೊಡವರ ಮನೆಯಲ್ಲೂ ಬಹಳ ಕೋಲಾಹಲವೇ ನಡೆದು ಹೋಯಿತು.”

“ನನ್ನ ಅಮ್ಮನ ತಮ್ಮ ಅಂದರೆ ನನ್ನ ಸೋದರಮಾವ ಇನ್ನು ಈ ಮನೆಯಲ್ಲಿ ಇಂತಹ ಕೋಲಾಹಲವೇ ಬೇಡ ಅಂದುಕೊಂಡು ತಕ್ಷಣ ಗಂಡೊಂದನ್ನು ಗೊತ್ತುಮಾಡಿ ಶಾಲೆಯಿಂದ ಬರುತ್ತಿದ್ದ ನನ್ನನ್ನು ಹಿಡಿದು ಮದುವೆ ಮಾಡಿಯೇ ಬಿಟ್ಟರು. ಆಗ ನನಗೆ ಹನ್ನೆರಡು ವರ್ಷ. ನಾನು ಮದುವೆಯಾದ ಗಂಡಸಿಗೆ ಮೂವತ್ತು ವರ್ಷ ಪ್ರಾಯ”

“ನನಗೆ ಗೊತ್ತೇ ಇರಲಿಲ್ಲ. ನನ್ನನ್ನು ಮದುವೆಯಾದ ಗಂಡಸು ಆಗಲೇ ಒಂದು ಮದುವೆಯಾಗಿದ್ದರು. ಅದು ಅಲ್ಲದೆ ಬಹಳ ಹೆಂಗಸರನ್ನು ಇಟ್ಟುಕೊಂಡಿದ್ದರು. ಅವರಿಗೆ ಮನೆಯಲ್ಲಿ ಕಳ್ಳಬಟ್ಟಿ ಕಾಯಿಸುವ ಅಭ್ಯಾಸವೂ ಇತ್ತು. ಆಗಾಗ ಅಬಕಾರೀ ಪೊಲೀಸರು ಬರುತ್ತಿದ್ದರು. ಅವರು ಬಂದರೆ ಎಲ್ಲರೂ ಕಾಡಿಗೆ ಓಡಿಹೋಗುತ್ತಿದ್ದರು. ನಾನು ಯಾಕೆ ಓಡಬೇಕು ಏನೂ ತಪ್ಪುಮಾಡಿಲ್ಲವಲ್ಲ ಎಂದು ಓಡದೇ ನಿಲ್ಲುತ್ತಿದ್ದೆ. ಅವರು ನನ್ನನ್ನೇ ಎತ್ತಿಕೊಂಡು ಹೋಗುತ್ತಿದ್ದರು. ಹೀಗೇ ಅಲ್ಲಿ ನಾಲ್ಕು ವರ್ಷ ಕಳೆಯಿತು. ಎರಡು ಗಂಡು ಮಕ್ಕಳೂ ಹುಟ್ಟಿದರು. ಹಾಗಿರುವಾಗ ಒಂದುದಿನ ಅಬಕಾರಿ ಪೊಲೀಸರ ದಾಳಿ ನಡೆಯಿತು. ಆ ಅಬಕಾರೀ ಪೊಲೀಸರಲ್ಲಿ ಒಬ್ಬರು ನನ್ನ ತಂದೆಯನ್ನು ಗೊತ್ತಿದ್ದವರು. ಅವರು ‘ಯಾಕಮ್ಮಾ ನೀನಿಲ್ಲಿ’ ಎಂದು ಕೇಳಿದರು. ನನಗೆ ನಾಚಿಗೆಯಾಯಿತು. ‘ನನ್ನ ತಂದೆ ಮದುವೆ ಮಾಡಿಕೊಟ್ಟಿದ್ದಾರೆ ಏನು ಮಾಡಲಿ’ ಎಂದು ಹೇಳಿದೆ. ಅವರು ಏನೂ ಹೇಳಲಿಲ್ಲ. ಆಮೇಲೆ ನನಗೇ ಅನಿಸಲಿಕ್ಕೆ ಶುರುವಾಯಿತು. ಇಲ್ಲಿಂದ ಹೋಗಬೇಕು ಅನಿಸಿತು. ನಾನು ನನ್ನ ಗಂಡನನ್ನು ಪ್ರೀತಿಸುತ್ತಲೂ ಇಲ್ಲ ಅಂತಲೂ ಅನಿಸಲು ಶುರುವಾಯಿತು”

_DSC1015“ಹಾಗಿರುವಾಗ ಒಂದುದಿನ ಇವರು ಒಂದು ಹೆಂಗಸನ್ನು ಮನೆಗೆ ಕರೆತಂದರು. ಅವಳ ಮುಂದೆಯೇ ನನ್ನ ಕಣ್ಣಗುಡ್ಡೆ ಹೊರ ಬರುವ ಹಾಗೆ ಹೊಡೆದು ಮನೆಯಿಂದ ಹೊರಗೆ ಹಾಕಿದರು. ಮಳೆಯಲ್ಲೇ ಕಣ್ಣೀರು ಸುರಿಸುತ್ತಾ ಅಂಗಳದಲ್ಲಿ ರಾತ್ರಿಯಿಡೀ ಕುಳಿತಿದ್ದೆ. ಬೆಳಗ್ಗೆ ನೆರೆಮನೆಯವರ ಬಾಗಿಲು ತಟ್ಟಿ ಐದುರೂಪಾಯಿ ಸಾಲ ತೆಗೆದುಕೊಂಡು ಬಸ್ಸು ಹತ್ತಿ ತಾಯಿಯ ಬಳಿ ಬಂದೆ. ಅವರೂ ಮನೆಗೆ ಸೇರಿಸಿಕೊಳ್ಳಲಿಲ್ಲ”

“ಇನ್ನು ಎಲ್ಲಿಗೆ ಹೋಗುವುದು ಎಂದು ಗೊತ್ತಾಗದೆ ನೇರವಾಗಿ ಕೊಡವನನ್ನು ಮದುವೆಯಾದ ನನ್ನ ಅಕ್ಕನ ಬಳಿ ಹೋದೆ. ಅಲ್ಲಿ ಎರಡು ವರ್ಷ ಇದ್ದೆ. ತಿನ್ನಲಿಕ್ಕೆ ಹುಲ್ಲು ಚೆನ್ನಾಗಿ ಸಿಕ್ಕಿದಾಗ ದನಗಳು ಚಿಗುರುತ್ತವಲ್ಲ ಹಾಗೆ ಮೂಳೆಮೂಳೆಯಾಗಿದ್ದ ನಾನು ಚಿಗುರಲು ತೊಡಗಿದೆ. ತುಂಬಾ ಚಂದವಾಗಿ ಹೋದೆ. ಎಷ್ಟು ಚಂದಾ ಅಂದರೆ ನನ್ನ ಅಕ್ಕನನ್ನು ಮದುವೆಯಾಗಿದ್ದ ನನ್ನ ಬಾವ ನನ್ನನ್ನು ಉಪದ್ರವಿಸಲು ತೊಡಗಿದರು. ಅಕ್ಕನಿಗೆ ಇದನ್ನ ಹೇಳಿದೆ. ಇದರಿಂದ ಅವರಲ್ಲೂ ಬಿರುಕುಂಟಾಯಿತು”

“ಅವರ ಮನೆಯಲ್ಲಿರುವಾಗ ನನಗೆ ಪ್ರತೀದಿನ ಎರಡು ರೂಪಾಯಿ ಕೊಡುತ್ತಿದ್ದರು. ಅದನ್ನು ನಾನು ಹಾಗೇ ತೆಗೆದಿಟ್ಟುಕೊಳ್ಳುತ್ತಿದ್ದೆ. ಅದು ಈಗ ಉಪಯೋಗಕ್ಕೆ ಬಂತು. ಅದನ್ನು ಎತ್ತಿಕೊಂಡು ಧರ್ಮಸ್ಥಳಕ್ಕೆ ಹೋದೆ. ಅವರು ಸೇರಿಸಿಕೊಳ್ಳಲು ಒಪ್ಪಿಕೊಳ್ಳಲಿಲ್ಲ. ಏಕೆಂದರೆ ಹದಿನೆಂಟು ವರ್ಷ ತುಂಬಿರಲಿಲ್ಲ.ವಾಪಾಸು ಕೊಡಗಿಗೆ ಹೋಗು ಅಂದರು.ಹಾಗಾದರೆ ನನ್ನನ್ನು ನಾನೇ ಕೊಂದುಕೊಳ್ಳುತ್ತೇನೆ ಎಂದು ಹೇಳಿದೆ. ಅದಕ್ಕೆ ಅವರು ನನ್ನನ್ನು ಅನಾಥಾಶ್ರಮಕ್ಕೆ ಸೇರಿಸಿದರು”

“ಅನಾಥಾಶ್ರಮದಲ್ಲಿ ಎಲ್ಲ ಕೆಲಸ ಕಲಿತುಕೊಂಡೆ. ಹದಿನೆಂಟು ವರ್ಷ ತುಂಬಿದಾಗ ಅಲ್ಲಿಂದ ಹೊರಟು ಭಾಗಮಂಡಲದ ಹತ್ತಿರ ಏಲಕ್ಕಿ ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿ ಹತ್ತುವರ್ಷ ಒಬ್ಬಳೇ ಮೇಸ್ತ್ರಿಯಾಗಿ ಕೆಲಸ ಮಾಡಿದೆ”

“ನಡುವಲ್ಲಿ ಒಂದು ದಿನ ಮಕ್ಕಳನ್ನು ನೋಡಲು ಹೋದೆ. ಮಕ್ಕಳು ಮಲಗಿದ್ದರು. ನನ್ನನ್ನು ನೋಡಿದೊಡನೆ ಎದ್ದು ಓಡಿಹೋಗಿ ಮರವೊಂದನ್ನು ಹತ್ತಿ ಕುಳಿತರು. ‘ಅಮ್ಮ ನಮ್ಮನ್ನು ಮುಟ್ಟಿದರೆ ಮರದಿಂದ ಬಿದ್ದು ಸಾಯುತ್ತೇವೆ’ ಅಂದರು. ‘ಅಪಾಯ ಬಂದಾಗ ಬೆಕ್ಕು ಕೂಡಾ ತನ್ನ ಮರಿಗಳನ್ನು ಬಾಯಲ್ಲಿ ಕಚ್ಚಿಕೊಂಡು ಓಡುತ್ತದೆ. ಆದರೆ ನೀನು ನಮ್ಮನ್ನು ಬಿಟ್ಟು ಓಡಿಹೋದೆ’ ಎಂದು ಚೀರಾಡಿದರು. ಆಮೇಲೆ ನಾನು ಅವರನ್ನು ನೋಡಲು ಹೋಗಲಿಲ್ಲ”

_DSC1017“ಆಮೇಲೆ ಎಷ್ಟೋ ವರ್ಷಗಳು ಕಳೆದು ತಾಯಿಯ ಮನೆಗೆ ಹೋದೆ. ತಂದೆ ತೀರಿ ಹೋಗಿದ್ದರು. ಅಕ್ಕನ ಮನೆಗೆ ಹೋದೆ. ಬಾವ ಖಾಯಿಲೆ ಬಂದು ತೀರಿಹೋಗಿದ್ದರು. ಉಳಿದವರೆಲ್ಲರೂ ಸೇರಿ ನಮ್ಮ ಸಂಬಂಧದಲ್ಲೇ ಒಬ್ಬರು ಇದ್ದರು. ಅವರನ್ನು ಮದುವೆ ಮಾಡಿಕೊಳ್ಳಲು ಹೇಳಿದರು. ಬೇಡಾ ಅಂದೆ. ‘ಮದುವೆ ಆಗದಿದ್ದರೆ ಬೇಡ. ಒಬ್ಬಳೇ ಇರಬೇಡ, ಕೆಟ್ಟ ಗಂಡಸರಿರುವ ಪ್ರಪಂಚ. ಅವನ ಜೊತೆ ಬದುಕು ಅಂದರು.’ ಅದಕ್ಕೆ ಈಗ ಅವರ ಜೊತೆ ಬದುಕುತ್ತಿದ್ದೇನೆ”

“ಇವರು ತುಂಬ ಒಳ್ಳೆಯವರು. ಆದರೆ ನಾನು ಎರಡನೇ ಮಗುವಾದ ಕೂಡಲೇ ಇನ್ನು ಮುಂದೆ ಮಕ್ಕಳಾಗುವುದು ಬೇಡ ಎಂದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೆ.

ಎಷ್ಟೋ ವರ್ಷಗಳ ನಂತರ ಅವರಿಗೆ ಮಕ್ಕಳು ಬೇಕು ಅನ್ನಿಸಬಹುದು. ಆದರೆ ಆಗ ಆಗಲಿಕ್ಕಿಲ್ಲ.

ಹಾಗಾಗಿ ನಾನೇ ಕಾಡಿಬೇಡಿ ಅವರಿಗೆ ಇನ್ನೊಂದು ಮದುವೆ ಮಾಡಿಸಿದೆ.

ಆ ಹೆಂಡತಿ ಇನ್ನೂ ಚಿಕ್ಕವಳು. ಇಬ್ಬರು ಮಕ್ಕಳಿದ್ದಾರೆ. ಇವರು ಯಾಕೋ ಅವಳಿಗಿಂತ ನನ್ನನ್ನೇ ಹೆಚ್ಚು ಪ್ರೀತ್ತಿದ್ದಾರೆ ಅನ್ನಿಸುತ್ತದೆ.

ಹಾಗಾಗಿ ನಾನು ಸ್ವಲ್ಪ ದೂರ ಇರಲು ತೊಡಗುತ್ತಿದ್ದೇನೆ.

ಅವಳಿನ್ನೂ ಚಿಕ್ಕವಳು. ಅವಳೂ ನನ್ನ ಹಾಗೆ ತೋಟದಲ್ಲಿ ರೈಟರಾಗುವುದು ಬೇಡವಲ್ಲವಾ. ನೋಡಿ ನನ್ನ ಕಥೆ ಹೇಗಿದೆ”ಎಂದು ಪದ್ಮಿನಿ ನಕ್ಕರು.

Padmini copyನಾನು ಸುಮ್ಮನೇ ನೋಡುತ್ತಿದ್ದೆ. ಮಳೆ ನಿಂತ ರಸ್ತೆಯಲ್ಲಿ ನೀಲವರ್ಣದ ಪಾತರಗಿತ್ತಿಯೊಂದು ನೀರು ಕುಡಿಯಲು ಬಿದ್ದ ಮಳೆಹನಿಗಳನ್ನು ಚುಂಬಿಸುತ್ತಿತ್ತು.

‘ರುಕ್ಮಿಣಿಯವರೇ ಬರಲಾ… ನಿಮ್ಮ ಕಥೆ ಕಣ್ಣೀರು ಬರುವ ಹಾಗೇನೂ ಇಲ್ಲ. ಧೈರ್ಯ ಮತ್ತು ಪ್ರೀತಿ ತುಂಬುವ ಹಾಗಿದೆ. ನಿಮ್ಮ ಕಥೆಯನ್ನು ಓದಿ ಏಲಕ್ಕಿ ಮಲೆಗಳಲ್ಲಿ ಇನ್ನಷ್ಟು ಮಹಿಳಾ ರೈಟರುಗಳು ಸೇರಿಕೊಳ್ಳಲಿ’ ಎಂದೆ.

‘ಬರಲಿ ಬರಲಿ ಆನೆಗಳ ಕಾಲಿಗೆ ಸಿಕ್ಕಿಹಾಕಿಕೊಂಡು ಜಿಗಣೆಗಳ ಕೈಯಲ್ಲಿ ಸಿಕ್ಕಿಹಾಕಿಕೊಂಡು ಅನುಭವಿಸಲಿ’ ಎಂದು ಅವರು ನಕ್ಕರು.

(ಜನವರಿ ೧, ೨೦೧೨)

(ಫೋಟೋಗಳು: ಶಮಂತ್ ಪಾಟೀಲ್ ಽ ರಶೀದ್)

ರೇಡಿಯೋ ನೇರ ಪ್ರಸಾರದಲ್ಲಿ ಮಂದಣ್ಣ ಅರೆಸ್ಟಾದ ನೈಜ ಕಥೆ

2011-01-05_4037ಮಲೆ ಕುಡಿಯರ ಮನೆಯೊಂದರಲ್ಲಿ ರಾತ್ರಿಯೆಲ್ಲಾ ಕಥೆ ಕೇಳುತ್ತಾ ಕುಳಿತಿದ್ದೆ. ಬೆಟ್ಟದ ತುದಿಯಲ್ಲಿ ಗಾಳಿ ಹುಯ್ಯಲಿಡುತ್ತಿತ್ತು. ನಕ್ಷತ್ರಗಳು ದೀವಟಿಕೆಗಳಂತೆ ಗೋಚರಿಸುತ್ತಿದ್ದವು.ಹೊಟ್ಟೆಯಲ್ಲಿ ಮೊಟ್ಟೆ ಇರುವ ನಾಟಿ ಹೇಂಟೆ ಕೋಳಿಯೊಂದನ್ನು ಹಿಡಿದು ತರಲು ಹೋಗಿದ್ದ ಮಂದಣ್ಣ ಯಾಕೆ ಇನ್ನೂ ಬಂದಿಲ್ಲ ಎಂದು ಆತಂಕದಿಂದ ನಾವೆಲ್ಲ ಕಾಯುತ್ತಿದ್ದೆವು.

ಮಂದಣ್ಣ ಸಂಜೆ ನಾಲ್ಕರಿಂದಲೇ ನಮ್ಮ ಜೊತೆಗಿದ್ದ.ಅವನ ಮುಖದ ಮೇಲಿನ ಗೀರುಗಾಯಗಳು, ಉಡುಪಲ್ಲಿ ಸಿಕ್ಕಿಕೊಂಡಿದ್ದ ನುಗ್ಗು ಮುಳ್ಳುಗಳಿಂದಲೇ ಅವನ ಅದುವರೆಗಿನ ಜೀವನ ಪ್ರಮಾದಗಳು ಗೋಚರಿಸುತ್ತಿದ್ದವು. ಅವನ ಕೈಯಲ್ಲಿ ಹೊಗೆಹಿಡಿದು ಕರಟಿಹೋದಂತಿರುವ ರೆವಿನ್ಯೂ ಇಲಾಖೆಯ ಹಲವು ಕಾಗದ ಪತ್ರಗಳು ಗಾಳಿಯಲ್ಲಿ ಹಾರಾಡುತ್ತಿದ್ದವು. ಯಾರೂ ಕೇಳಿರದಿದ್ದರೂ ಅವನು ಅವುಗಳನ್ನು ಹಿಡಿದುಕೊಂಡು ಬಂದಿರುವ ರೀತಿ ನಗು ತರಿಸುವಂತಿತ್ತು. ಅವುಗಳೆಲ್ಲಾ ಆ ಪ್ರದೇಶದ ಜಮಾಬಂದಿಗಳೂ, ಅರಣ್ಯ, ಪೈಸಾರಿ ಜಾಗಗಳ ಗಡಿರೇಖೆಗಳೂ ಆಗಿದ್ದವು. ಅವನು ಆ ಪ್ರದೇಶದ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷನಾಗಿರುವುದನ್ನು ಒತ್ತಿಹೇಳಲು ಆ ಕಾಗದ ಪತ್ರಗಳು ಗಾಳಿಯಲ್ಲಿ ಪಟಪಟನೆ ಹಾರುತ್ತಿದ್ದವು.

2011-01-04_4104ಅಂತಹ ಮಂದಣ್ಣ ತನ್ನ ಕೈಯಲ್ಲಿ ಆ ಕಾಗದ ಪತ್ರಗಳನ್ನು ಅವುಚಿ ಹಿಡಿದುಕೊಂಡು ನಮ್ಮನ್ನು ಬೆಟ್ಟ ಹತ್ತಿಸಿಕೊಂಡು ರಾತ್ರಿ ಕತ್ತಲಾಗುವವರೆಗೆ ಆ ಸೀಮೆಯ ಒಂದೊಂದೇ ಒಂಟಿಮನೆಗಳ ದಣಪೆ ಬಾಗಿಲುಗಳನ್ನು ತೆರೆದು, ಕೆಲವೆಡೆಗಳಲ್ಲಿ ಬೇಲಿ ಹಾರಿಸಿ, ಸಿಂಹಗಳಂತೆ ಓಡಿ ಬರುವ ಬೇಟೆನಾಯಿಗಳನ್ನು ಬೈದು ಸುಮ್ಮನಾಗಿಸಿ ಎಲ್ಲರ ಪರಿಚಯ ಮಾಡಿಕೊಟ್ಟಿದ್ದ.

ನಾವು ಮನೆಗಳನ್ನು ತಿರುಗುತ್ತಾ ಹೋದಹಾಗೆ ನನಗೆ ಈ ಮಂದಣ್ಣನ ಕೆಲವು ಜೀವನ ವಿವರಗಳೂ ಗೊತ್ತಾಗುತ್ತಾ ಹೋದವು. ಮೊದಲನೆಯದಾಗಿ ಮಂದಣ್ಣನ ಮ್ಯಾರೇಜು ಜೀವನವು ಯಾಕೋ ಸರಿಯಾಗಿಲ್ಲ ಎಂಬುದು. ಏಕೆಂದರೆ ಎಲ್ಲ ಮನೆಗಳಿಗೂ ನಮ್ಮನ್ನು ಸುತ್ತಾಡಿಸಿದ ಮಂದಣ್ಣ ತನ್ನ ಮನೆ ಮಾತ್ರ ಯಾರೂ ಹತ್ತಲಾರದ ಗುಡ್ಡವೊಂದರ ಮೇಲಿರುವುದೆಂದೂ, ಅಲ್ಲಿ ಹೋಗಬೇಕಾದರೆ ಕೆಸರು ಗದ್ದೆ ದಾಟಬೇಕೆಂದೂ, ಕಳೆದ ವಾರವಷ್ಟೇ ಎತ್ತೊಂದು ಆ ಕೆಸರಲ್ಲಿ ಸಿಕ್ಕಿ ಸತ್ತು ಹೋಯಿತೆಂದೂ ತನ್ನ ಸಂಸಾರದ ಕಷ್ಟಗಳನ್ನು ಪ್ರತಿಮೆಗಳ ಮೂಲಕ ವಿವರಿಸುತ್ತಿದ್ದ.

ಅವನ ಪ್ರತಿಮೆಗಳ ಜಾಡುಹಿಡಿದು ಪ್ರಶ್ನೆಗಳನ್ನು ಕೇಳುತ್ತಾ ಕತ್ತಲಲ್ಲಿ ಕಲ್ಲುಗಳನ್ನೂ, ಕಾಡುಬಳ್ಳಿಗಳನ್ನೂ ಎಡವುತ್ತಾ ಸಾಗುತ್ತಿದ್ದ ನನ್ನ ಕಷ್ಟವನ್ನು ಅರಿತ ಅವನು ‘ಸಾರ್, ಈ ಕಾಲದಲ್ಲಿ ಗಂಡಸರ ಮಾತನ್ನು ಹೆಂಗಸರು ಎಲ್ಲಿ ಕೇಳುತ್ತಾರೆ. ಎಲ್ಲ ಕಡೆಯೂ ಸ್ತ್ರೀಶಕ್ತಿ ಬಂದು ಗಂಡಸರ ಪಾಡು ಯಾರಿಗೂ ಬೇಡ’ ಅಂದುಬಿಟ್ಟಿದ್ದ.

2011-01-04_4112ಮಂದಣ್ಣನ ಸಾಮಾಜಿಕ ಜೀವನವೂ ಯಾಕೋ ಆತನ ಸಾಂಸಾರಿಕದಂತೆಯೇ ಯಡವಟ್ಟಾಗಿದೆ ಎಂದು ನನಗೆ ಅರಿವಾಗಿದ್ದು ಆತನು ಊರು ಪರಿಚಯ ಮಾಡಿಕೊಡುತ್ತಾ ಕೆಲವು ಒಂಟಿಮನೆಗಳು ಬಂದಾಕ್ಷಣ ಕ್ಯಾಕರಿಸಿ ಕೆಮ್ಮಿ ‘ಸಾರ್. ಅಲ್ಲಿ ಸರಿಯಿಲ್ಲ. ಅವರಿಗೆ ತಲೆ ಸರಿಯಿಲ್ಲ, ಹುಚ್ಚುನಾಯಿಗಳ ಹಾಗೆ ಕಚ್ಚಲು ಬರುತ್ತಾರೆ’ ಎಂದು ನಮ್ಮನ್ನು ಹೆದರಿಸುತ್ತಿದ್ದ ರೀತಿಯಿಂದ.

‘ಹೆದರಬೇಡ ಮಂದಣ್ಣಾಎಂದು ನಾನೇ ಅವನ ಬೆನ್ನು ತಟ್ಟಿ ಆ ಮನೆಗಳೊಳಕ್ಕೆ ಹೋಗುತ್ತಿದ್ದೆ.

ನೋಡಿದರೆ ಆ ಮನೆಗಳವರೂ ಎಲ್ಲರ ಹಾಗೆ ಸ್ವಲ್ಪ ಒಳ್ಳೆಯವರೂ, ಸ್ವಲ್ಪ ಕೆಟ್ಟವರೂ, ಬಹಳ ತಮಾಷೆಗಾರರೂ ಆಗಿದ್ದರು. ಅವರಲ್ಲಿ ಕೆಲವರು ಮಂದಣ್ಣನನ್ನು ಮೊದಲು ಕುಹಕದಲ್ಲಿ ನೋಡಿದರೂ ಆನಂತರ ನನ್ನೊಡನೆ ತಮಾಷೆಯಲ್ಲಿ ಸೇರಿಕೊಂಡು ಅವನನ್ನೂ ಗೇಲಿಮಾಡುತ್ತಾ ಸರಿ ಆಗಿದ್ದರು.

ಈ ತಮಾಷೆ ಮಾತುಕತೆಗಳಲ್ಲಿ ಗೊತ್ತಾದ ಹಲವು ರಹಸ್ಯಗಳಲ್ಲಿ ಒಂದನ್ನು ಇಲ್ಲಿ ಹೇಳುತ್ತೇನೆ.

ಅದೇನೆಂದರೆ ಈ ಮಂದಣ್ಣನು ತನ್ನ ನೆಂಟನೇ ಆದವಳೊಬ್ಬಳ ಹಸುವಿಗೆ ವಿಷಹಾಕಿ ಸಾಯಿಸಿದ್ದು ಮತ್ತು ಆ ವಿಷಯ ಪಂಚಾಯ್ತಿಗೆ ಹೋಗಿ ಮಂದಣ್ಣನು ಪರಿಹಾರ ಕಟ್ಟಲಾಗದೇ ಕಾಡಲ್ಲಿ ಅಡಗಿಕೊಂಡು ಆತನ ಹೆಂಡತಿಯೇ ಈಗಲೂ ಕಂತಲ್ಲಿ ಆ ಪರಿಹಾರ ಕಟ್ಟಲು ಹೆಣಗುತ್ತಿರುವುದು.

2011-01-04_4107ಇಂತಹ ಮಂದಣ್ಣನ ಇಂತಹ ಹಲವಾರು ಕಥೆಗಳನ್ನು ಕೇಳುತ್ತಾ, ಆತನು ಹಿಡಿದುಕೊಂಡು ಬರಬಹುದಾದ ಹೊಟ್ಟೆಯಲ್ಲಿ ಮೊಟ್ಟೆ ಇರುವ ನಾಟಿ ಹೇಂಟೆಕೋಳಿಗಾಗಿ ಕಾಯುತ್ತಾ ನಾವೆಲ್ಲ ಅನ್ನಬೇಯುತ್ತಿದ್ದ ಒಲೆಯ ಮುಂದೆ ಕುಳಿತಿದ್ದೆವು. ಅಷ್ಟರಲ್ಲಿ ಆ ಮನೆಯಲ್ಲಿ ಇನ್ನಷ್ಟು ನೆಂಟರೂ ನೆರೆಯವರೂ ಸೇರಿಕೊಂಡು ಅವರ ಸಮಯ ಕಳೆಯಲು ನಾನೂ ಅವರಿಗೆ ಕೆಲವು ತಮಾಷೆಗಳನ್ನೂ ಹೇಳುತ್ತಾ, ನಡುನಡುವೆ
ಹೊರಬಂದು ಆಕಾಶದಲ್ಲಿ ದೇವತೆಗಳಂತೆ ಮಿನುಗುತ್ತಿದ್ದ ನಕ್ಷತ್ರಗಳನ್ನು ನೋಡಿ ಹೊಟ್ಟೆತುಂಬಿಸಿಕೊಳ್ಳುತ್ತಿದ್ದೆ.

ಸ್ವಲ್ಪ ಹೊತ್ತಲ್ಲಿ ಮಂದಣ್ಣ ತನ್ನ ಶರ್ಟಿನೊಳಗಡೆ ಹೇಂಟೆಯೊಂದನ್ನು ತುರುಕಿಸಿಕೊಂಡು ತಂದ. ಆ ರಾತ್ರಿಯಲ್ಲಿ, ಆ ಕುಳಿರಿನಲ್ಲಿ, ಆ ಒಲೆಯ ಬೆಂಕಿಯ ಬೆಳಕಿನಾಟದಲ್ಲಿ ಮಂದಣ್ಣ ಆ ಕೋಳಿಯನ್ನು ತಂದ ರೀತಿ ಅನನ್ಯವಾಗಿತ್ತು. ಬೇರೆ ಬೇರೆ ಕಾಲದಲ್ಲಿ ಬೇರೆಬೇರೆ ಪ್ರದೇಶಗಳಲ್ಲಿ ಬೇರೆಬೇರೆ ರೀತಿಯಲ್ಲಿ ಕೋಳಿಗಳನ್ನು ಹಿಡಿಯುವುದನ್ನೂ ಕೊಲ್ಲುವುದನ್ನೂ ಕಂಡಿರುವ ನಾನು ಆ ಇರುಳು ಮಂದಣ್ಣ ಕೋಳಿ ತಂದ ರೀತಿಯನ್ನು ಜೀವ ಇರುವವರೆಗೆ ಮರೆಯುವ ಹಾಗಿಲ್ಲ.

ಮಂದಣ್ಣ ಆ ಹೇಂಟೆ ಕೋಳಿಯನ್ನು ತನ್ನ ಅಂಗಿಯೊಳಗೆ ಹೊಟ್ಟೆಯೊಳಗೆ ಎಂಬಂತೆ ಅಡಗಿಸಿಕೊಂಡು ತಂದಿದ್ದ. ಮೌನವಾಗಿ ಅದನ್ನು ಕೊಂಚಕೊಂಚವೇ ಹೊರಗೆಳೆದು ತೆಗೆದ. ಆ ಹೇಂಟೆಯೂ ಮಂದಣ್ಣನ ಅಂಗಿಯೊಳಗಿಂದ ಬರುವಾಗ ಮೌನವಾಗಿತ್ತು. ಕತ್ತು ಮುರಿದು ಸಾಯುವಾಗ ಮಾತ್ರ ಆ ಹೇಂಟೆ ಕೊಂಚ ಸದ್ದು ಮಾಡಿತ್ತು ಅಷ್ಟೇ. ಆದರೆ ಮಂದಣ್ಣ ಮಾತ್ರ ಆನಂತರ ಬಹಳ ರಾತ್ರಿಯವರೆಗೆ ಬಹಳ ಕಥೆಗಳನ್ನು ಹೇಳಿದ್ದ.

2011-01-05_4041ಅದೆಲ್ಲಾ ಇರಲಿ ಬಿಡಿ. ಈಗ ಸಮಯವಿಲ್ಲ. ಈಗ ಹೇಳಬೇಕಾಗಿರುವುದು ಕಥೆಯ ಅಂತ್ಯ.

ಮಾರನೆಯ ದಿನ ಬೆಳಗೆ ಆ ಊರಿನಿಂದ ರೇಡಿಯೋದಲ್ಲಿ ನೇರಪ್ರಸಾರವಿತ್ತು. ಆ ಊರಿನ ಎಲ್ಲರೂ ಹೊಳೆಯುತ್ತಿರುವ ಚುಮುಚುಮು ಬಿಸಿಲಿನಲ್ಲಿ ರೇಡಿಯೋದಲ್ಲಿ ಮಾತನಾಡಿದ್ದರು. ಚಂದವಿರುವ, ಎತ್ತರವಿರುವ ಹಸಿರು ಬೆಟ್ಟವೊಂದರ ಮೇಲಿನಿಂದ ನೇರಪ್ರಸಾರ.

ಆ ಊರಿನ ಮುದುಕರೂ ಹೆಂಗಸರೂ ಮಕ್ಕಳೂ ತಮ್ಮ ಅತ್ಯುತ್ತಮ ಉಡುಪುಗಳನ್ನು ಹಾಕಿಕೊಂಡು ಹಬ್ಬದಂತೆ ಖುಷಿಯಲ್ಲಿ ರೇಡಿಯೋದಲ್ಲಿ ಹಾಡಿ ಮಾತಾಡಿ ಕುಣಿದು ಕುಪ್ಪಳಿಸುತ್ತಿದ್ದರು. ಮಂದಣ್ಣನೂ ತನ್ನ ಶಕ್ತ್ಯಾನುಸಾರ ಮಾತನಾಡಿದನು. ಅರಣ್ಯವಾಸಿಗಳ ಅರಣ್ಯಹಕ್ಕುಗಳ ಕುರಿತು ತುಂಬಾ ಚೆನ್ನಾಗಿ ಮಾತನಾಡಿ ನಾನು ಆತನ ಮಾತುಗಳ ನಂತರ ಎಲ್ಲರಿಗೂ ನಮಸ್ಕಾರ ಹೇಳಿ, ಮುಂದಿನ ವಾರ ಇನ್ನೊಂದು ಊರಿನಿಂದ ಮಾತನಾಡುವುದಾಗಿ ಕೇಳುಗರಿಗೆ ಬಾಯ್ ಬಾಯ್ ಹೇಳಿ ಒಣಗಿದ್ದ ಗಂಟಲನ್ನು ಸರಿಪಡಿಸುತ್ತಿದ್ದೆ.

2011-01-05_4044ಅಷ್ಟು ಹೊತ್ತಿಗೆ ಸರಿಯಾಗಿ ನಾನು ಅದುವರೆಗೆ ನೋಡಿರದಿದ್ದ ಮಂದಣ್ಣನ ಹೆಂಡತಿ ಪೋಲೀಸನೊಬ್ಬನನ್ನು ಕರೆದುಕೊಂಡು ಬಂದಳು. ಬೆಟ್ಟ ಹತ್ತಿ ಸುಸ್ತಾಗಿದ್ದ ಚಿಗುರು ಮೀಸೆಯ ಪೋಲೀಸನೊಬ್ಬನು, ‘ಸಾರ್, ನೇರಪ್ರಸಾರ ಮುಗಿಯಿತಾ. ಇನ್ನು ನಾನು ಇವನನ್ನು ಕಸ್ಟಡಿಗೆ ತೆಗೆದುಕೊಳ್ಳಬಹುದಾ’ ಎಂದು ಮಂದಣ್ಣನನ್ನು ಎರೆಸ್ಟು ಮಾಡಿಕೊಂಡು ಹೋದನು.

ಜಾಣೆಯಂತೆ ಇದ್ದ ಮಂದಣ್ಣನ ಹೆಂಡತಿ ಚೂಟಿಯಾಗಿಯೂ ಕಾಣಿಸುತ್ತಿದ್ದಳು. ಮಂದಣ್ಣನಿಂದ ಪ್ರತಿನಿತ್ಯ ಹೊಡೆತಗಳನ್ನೂ ಅಪವಾದಗಳನ್ನೂ ಸಹಿಸಿ ಸಾಕಾಗಿ ಹೋಗಿದ್ದ ಆಕೆ ಬಹಳ ದಿನಗಳ ಹಿಂದೆಯೇ ಆತನ ಮೇಲೆ ಕೌಟುಂಬಿಕ ದೌರ್ಜನ್ಯ ಕಾಯಿದೆಯ ಅಡಿಯಲ್ಲಿ ಮೊಕದ್ದಮೆಯನ್ನೂ ಹೂಡಿದ್ದಳು. ಕಾಡುಮೇಡುಗಳಲ್ಲಿ ಅಡಗಿ ಸಿಗದೆ ಓಡಾಡುತ್ತಿದ್ದ ಅವನ ಧ್ವನಿಯನ್ನು ರೇಡಿಯೋದಲ್ಲಿ ಕೇಳಿಸಿಕೊಂಡ ಆಕೆ ಪೋಲೀಸರಿಗೆ ಮಾಹಿತಿ ರವಾನಿಸಿ ಇದೀಗ ಅರೆಸ್ಟೂ ಮಾಡಿಸಿಬಿಟ್ಟಳು.

ನನಗೆ ಯಾಕೋ ಈಗ ಅಪರಾಧ ಪ್ರಜ್ಞೆ ಜಾಸ್ತಿಯಾಗಿ ಇದನ್ನೆಲ್ಲಾ ಬರೆದಿರುವೆ.

2011-01-05_4065ಮಂದಣ್ಣನ ಜಾಗದಲ್ಲಿ ನನ್ನನ್ನು ಊಹಿಸಿಕೊಂಡು ಬೆವರುತ್ತಿರುವೆ.ಮಂದಣ್ಣನೆಂಬ ಈ ಕಥಾನಾಯಕ ಪೋಲೀಸರಿಗೆ ಸಿಕ್ಕಿ ಹಾಕಿಕೊಂಡಿರುವುದು ಆತನ ಸ್ವಯಂಕೃತ ಪ್ರಮಾದವೋ, ನನ್ನಿಂದಾದ ಎಡವಟ್ಟೋ ಗೊತ್ತಾಗುತ್ತಿಲ್ಲ.

ತಿಳಿದವರಾದ ನೀವೇ ಹೇಳಬೇಕು.

(೪, ಸೆಪ್ಟೆಂಬರ್, ೨೦೧೧)

(ಫೋಟೋಗಳೂ ಲೇಖಕರವು)

ಶೀನಪ್ಪ ಗೌಡರು ಹೇಳಿದ ಧರ್ಮರಾಯನ ಕಥೆ

‘ಅಂತೂ ಹೇಗೋ ಧರ್ಮರಾಯ ಆ ಸೇತುವೆಯನ್ನು ದಾಟಿ ಸ್ವರ್ಗಕ್ಕೆ ಹೋದ ಮಾರಾಯರೇ.ನಮ್ಮಿಂದೆಲ್ಲ ಅದನ್ನು ದಾಟಲು ಆಗುತ್ತದೆಯಾ.ಸುಮ್ಮನೆ’ ಎಂದು ಶೀನಪ್ಪಗೌಡರು ತಮ್ಮ ದೇಹವನ್ನು ಹಿಂಡಿ ಹಿಪ್ಪೆ ಮಾಡಿ ಆ ಕಥೆ ಹೇಳಿ ಮುಗಿಸಿದರು.
ಅವರಿಂದ ಖಂಡಿತ ಆಗುತ್ತದೆ ಎಂಬಂತೆ ಅಲ್ಲಿ ನೆರೆದಿದ್ದ ಬಹುತೇಕರು ಕಣ್ಣೀರು ತುಂಬಿಕೊಂಡು ಕುಳಿತಿದ್ದರು.
ಆಮೇಲೆ ವಿಷಯ ಬದಲಿಸಲು ನಾನು ಕೆಲವು ತಮಾಷೆಗಳನ್ನು ಹೇಳಿದೆ.ಅವರೂ ಹೇಳಿದರು

2011-04-06_6733ಈ ಊರ ದಾರಿಯ ಪರಿಮಳವೇ ಹಾಗೆ!ಸುತ್ತಿ ಸುರುಳಿ ಏರುತ್ತ ಮೆಲ್ಲಗೆ ಬಾಲ್ಯಕಾಲದ ಸುಖದೊಳಕ್ಕೆ ಕರೆದೊಯ್ಯುತ್ತಿರುವ ಹಳೆಯ ಮಣ್ಣಿನ ರಸ್ತೆ.ರಸ್ತೆ ಶುರುವಾಗುತ್ತಿದ್ದಂತೆ ಎಡಕ್ಕೆ ಎತ್ತರಕ್ಕಿರುವ ಬರೆಯ ಮೇಲೆ ಈಗಲೂ ಹಾಗೇ ಇರುವ ಶೇಂದಿ ಮಾರುವ ಆ ಮಲಯಾಳೀ ಮುದುಕಿಯ ಗುಡಿಸಲು. ಆಕೆ ನಾವು ಮಕ್ಕಳಾಗಿರುವಾಗ ಎತ್ತರಕ್ಕೆ ಕಟ್ಟು ಮಸ್ತಾಗಿ ನಡುಗಾಲದ ಜಗದೇಕ ಸುಂದರಿಯಂತಿದ್ದಳು.ಇಪ್ಪತ್ತು ವರ್ಷಗಳ ಹಿಂದೊಮ್ಮೆ ದಾರಿ ತಪ್ಪಿದ ಅಪರಿಚಿತನಂತೆ ಅವಳ ಗುಡಿಸಲೊಳಗೆ ಹೊಕ್ಕಾಗ ಬೊಚ್ಚು ಬೊಚ್ಚು ಬಾಯಿಯ ಮುದುಕಿಯಾಗಿದ್ದಳು ಮೊನ್ನೆ ಬುಧವಾರ ಇನ್ನೊಮ್ಮೆ ಅಲ್ಲಿ ಹೊಕ್ಕಾಗ ಆಕೆ ತೀರಿ ಹೋಗಿ ವರ್ಷಗಳೇ ಆಗಿದ್ದವು.ಬೇರೆ ಯಾವುದೋ ಹೆಂಗಸೊಂದು ಚಂದವಾಗಿ ನೆಲದ ಮೇಲೆ ಕುಕ್ಕುರುಗಾಲಲ್ಲಿ ಕುಳಿತು, ಬೆಕ್ಕೊಂದರ ಮೈಸವರುತ್ತಾ, ತನ್ನ ಸೇಂದಿಯ ತಾಜಾತನದ ಗುಣಗಾನ ಮಾಡುತ್ತಿದ್ದಳು.
ಅದನ್ನೆಲ್ಲಾ ಕೇಳಿಸಿಕೊಂಡು, ಅಲ್ಲೆಲ್ಲಾ ಅಲೆದಾಡಿ, ಕತ್ತಲಾಗುವ ಹೊತ್ತಲ್ಲಿ ಶೀನಪ್ಪ ಗೌಡರ ಹಳೆಯ ಕಾಲದ ಮನೆಯ ಮುಂದಿನ ಅಡಿಕೆ ಚಪ್ಪರದಲ್ಲಿ ಹರಟುತ್ತಾ ಕುಳಿತಿದ್ದೆವು.ಶೀನಪ್ಪ ಗೌಡರು ಆ ಊರಿಗೆ ಹಿರಿಯರು.ಜೊತೆಗೆ ತಾಳಮದ್ದಲೆಯ ಕಲಾವಿದರೂ ಕೂಡ.ರಾಮ, ರಾವಣ, ಕರ್ಣ, ಮಹಿಷಾಸುರ ಎಲ್ಲವನ್ನೂ ಮಾಡಿದವರು.ಜೀವನದಲ್ಲೂ ತುಂಬಾ ಅನುಭವಿಸಿದವರು.ಸಣ್ಣ ವಯಸ್ಸಲ್ಲೇ ಟೈಲರಾಗಿ ಖುಷಿಯಲ್ಲಿದ್ದ ಅವರನ್ನು ಮದುವೆ ಮಾಡಿಸಿ ಬಿಟ್ಟಿದ್ದರು.ಆಮೇಲೇನು ಮಾಡುವುದು ಎಂದು ಗೊತ್ತಾಗದೆ ಅವರು ಅಲ್ಲೇ ಬೆಟ್ಟದ ಮೇಲೆ ಇದ್ದ ಬ್ರಿಟಿಷ್ ದೊರೆಗಳ ತೋಟದಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ದೊಡ್ಡ ದೊರೆ,ದೊರೆಯ ತಂಗಿ,ದೊರೆಯ ತಮ್ಮ. ಮೂವರೂ ಮದುವೆಯಾಗಿರಲಿಲ್ಲ.ಹ್ಯಾಟು,ಬೂಟು ಹಾಕಿಕೊಂಡು ಕುದುರೆಯ ಮೇಲೆ ಅಲ್ಲೆಲ್ಲಾ ಓಡಾಡಿಕೊಂಡಿದ್ದರು.ಒಂದು ಸಲ ದೊರೆಯ ತಮ್ಮ ಕುದುರೆಯ ಮೇಲೆ ಹೋಗುತ್ತಿರುವಾಗ ಮಲಯಾಳಿ ತರುಣಿಯೊಬ್ಬಳು ಆತನನ್ನು ನೋಡಿ ನಗಾಡಿದಳಂತೆ.‘ಏನು ನಗುತ್ತೀಯಾ’ಎಂದು ಆ ದೊರೆ ಆಕೆಯನ್ನು ಕಟ್ಟಿಕೊಂಡನಂತೆ. ಆಕೆ ಗರ್ಭವತಿಯೂ ಆದಳಂತೆ.ಗರ್ಭವತಿಯಾದವಳಿಗೆ ಹೆರಿಗೆಯಲ್ಲಿ ತೊಂದರೆಯಾಗಿ ಆಕೆಯ ಹೊಟ್ಟೆಯನ್ನು ಕೊಯ್ದು ಮಗುವನ್ನು ಹೊರಗೆ ತೆಗೆಯಬೇಕಾಯಿತಂತೆ. ಹಾಗೆ ಕೊಯ್ಯುವಾಗ ಆ ಮಗುವಿನ ತಲೆಗೆ ಗಾಯವಾಗಿ ಆ ಮಗುವು ಬೆಳೆದು ದೊಡ್ಡವನಾದಾರೂ ತಲೆ ಕೆಟ್ಟವನಂತೆ ಆಡುತ್ತಿದ್ದನಂತೆ.‘ಅಯ್ಯೋ ಈ ಇಂಡಿಯಾದ ಸಹವಾಸವೇ ಬೇಡ’ ಎಂದು ಆ ದೊರೆಗಳು ಆ ಮಗುವಿನ ಸಮೇತ ಲಂಡನ್ನಿಗೇ ಹೊರಟು ಹೋದರಂತೆ.
ಶೀನಪ್ಪ ಗೌಡರು ಈ ಕಥೆ ಹೇಳುವಾಗ ಆ ಕತ್ತಲಲ್ಲಿ ಚಿಮಿಣಿಯ ದೀಪವೊಂದು ಮಾತ್ರ ಉರಿಯುತ್ತಿತ್ತು.ಅವರ ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ಪುಡಿಮಕ್ಕಳು, ನೆರೆಯವರು ಎಲ್ಲಾ ಆ ಬೆಳಕಲ್ಲಿ ಕುಳಿತು ಆ ಕಥೆ ಕೇಳುತ್ತಿದ್ದರು.ಶೀನಪ್ಪ ಗೌಡರು ಆ ದೊರೆಗಳ ಮುಖದ ಬಣ್ಣವನ್ನೂ,ಅವರ ಅಹಂಕಾರವನ್ನೂ,ಔದಾರ್ಯವನ್ನೂ,ಅವರ ಆಹಾರ,ವಿಹಾರ,ಹಾದರ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾ ತಮ್ಮ ಕಷ್ಟಗಳನ್ನು ಒಂದು ರೀತಿಯ ನಗುವಿನಿಂದ ಮರೆಸಲು ನೋಡುತ್ತಿದ್ದರು.
‘ಇವರ ಕಥೆಯೇನು ಕಮ್ಮಿಯಾ,ಹೇಳಿ ಗೌಡರೇ’ಎಂದು ನೆರೆ ಮನೆಯ ಇನ್ನೊಬ್ಬ ಮುದುಕ ಪುಸಲಾಯಿಸಲು ನೋಡುತ್ತಿದ್ದರು.
‘ಬೇರೆ ಏನಿಲ್ಲ ಸರ್ಪ ದೋಷವೊಂದು ಬಿಟ್ಟರೆ’ ಎಂದು ಶೀನಪ್ಪ ಗೌಡರು ಮಾತು ತಪ್ಪಿಸಲು ಹೆಣಗುತ್ತಿದ್ದರು..ಮದುವೆಯಾಗಿ, ತಂದೆ ತಾಯಿಯರನ್ನೂ, ತಮ್ಮ ತಂಗಿಯರನ್ನೂ, ಹೆಂಡತಿ ಮಕ್ಕಳನ್ನೂ ಸಲಹಿ ಹೈರಾಣಾಗಿದ್ದ ಶೀನಪ್ಪ ಗೌಡರ ಕೊಟ್ಟಿಗೆಯೊಳಕ್ಕೆ ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಮರಿ ನಾಗರವೊಂದು ಬಂದು ಸೇರಿಕೊಂಡಿತ್ತು.ಯಾರದೋ ಮಾತು ಕೇಳಿದ ಗೌಡರ ಮಗ ಹಾವು ಸೇರಿಕೊಂಡಿದ್ದ ಜಾಗಕ್ಕೆ ಸೀಮೆಣ್ಣೆ ಎರಚಿ ಬೆಂಕಿ ಹಾಕಿದ್ದ .ಆ ಮರಿ ಹಾವು ಬೆಂದು ವಿಲವಿಲ ಒದ್ದಾಡುತ್ತಾ ಹೊರಬಂದು ಗೌಡರ ಕಾಲಕೆಳಗೆ ಒಂದು ದೊಡ್ಡ ನಿಟ್ಟುಸಿರು ಬಿಟ್ಟು ಪ್ರಾಣ ಬಿಟ್ಟಿತ್ತು.
ಅದಾದ ನಂತರ ಗೌಡರ ಮಗ ಅಡಿಕೆ ಮರದಿಂದ ಬಿದ್ದು ಅರೆ ಜೀವವಾಗಿದ್ದ.ಹೆಂಡತಿಗೆ ಸೀಕು ಹಿಡಿದಿತ್ತು.ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಕಷ್ಟವಾಗಿತ್ತು.ಅಷ್ಟು ಹೊತ್ತಿಗೆ ಇನ್ನಷ್ಟು ಹಾವುಗಳು ಅಲ್ಲೆಲ್ಲ ಕಾಣಿಸಿಕೊಳ್ಳಲು ತೊಡಗಿತ್ತು.ಕೊನೆಗೆ ಅವರಿರುವ ಮನೆ ಒಂದು ಕಾಲದಲ್ಲಿ ನಾಗಸ್ಥಾನವಾಗಿತ್ತು ಎಂಬುದೂ ಗೊತ್ತಾಗಿಬಿಟ್ಟಿತ್ತು.ಆಮೇಲೆ ಅವರು ಆ ಮನೆಯನ್ನು ನಾಗಸ್ಥಾನವನ್ನಾಗಿ ಮಾಡಿ, ಇನ್ನೊಂದು ಕಡೆ ಮನೆ ಮಾಡಿ ಹೇಗೋ ಬದುಕುತ್ತಿರುವಾಗ ಇನ್ನಷ್ಟು ತೊಂದರೆಗಳು ಕಾಣಿಸಿಕೊಂಡು,ಅಡಿಕೆ ತೋಟಕ್ಕೆ ಹಳದಿ ರೋಗವೂ ಬಂದು ಇದೆಲ್ಲಾ ವಾಸ್ತು ದೋಷ ಎಂದು ಗೊತ್ತಾಗಿ ಆ ಮನೆಯ ದೊಡ್ಡ ದೊಡ್ಡ ಕೋಣೆಗಳನ್ನು ಕತ್ತರಿಸಿ ತುಂಡು ತುಂಡು ಗೋಡೆಗಳನ್ನಾಗಿ ಮಾಡಿ ಆ ಮನೆಯೇ ಒಂದು ದೊಡ್ಡ ಚಕ್ರವ್ಯೂಹದಂತೆ ತಮಾಷೆಯಾಗಿ ಕಾಣುತ್ತಿತ್ತು.
2011-04-05_6942‘ಹೋಗಲಿ ಬಿಡಿ ಶೀನಪ್ಪ ಗೌಡರೇ, ಹೇಳಿಕೊಳ್ಳಲು ಇಷ್ಟವಿಲ್ಲದಿದ್ದರೂ ನಿಮ್ಮಿಂದ ಕಷ್ಟಗಳನ್ನು ಹೇಳಿಸಿಬಿಟ್ಟೆ.ನಿಮಗೆ ಯಕ್ಷಗಾನ ತಾಳ ಮದ್ದಲೆಯ ಯಾವ ಪಾತ್ರ ಇಷ್ಟ ಹೇಳಿ’ ಎಂದೆ.
‘ಇಷ್ಟ ಎಲ್ಲವೂ ಇಷ್ಟವೇ,ಯಾವುದು ಇಷ್ಟ ಎಂದು ಹೇಳುವುದು’ಎಂದು ಗೌಡರು ನಾಚಿಕೊಂಡರು.
‘ಇವರದು ಧರ್ಮರಾಯನ ಪಾತ್ರ ಚಂದ’ ಎಂದು ಅದಾಗಲೇ ಸಾಕಷ್ಟು ವಯಸ್ಸಾಗಿ ಹೋಗಿದ್ದ ಆಕೆಯ ಮಗಳು ಅಂದಳು.
‘ಅಯ್ಯೋ ಭಾರೀ ಕಷ್ಟ ಪಟ್ಟಿದ್ದಾರೆ ಜೀವನದಲ್ಲಿ ಇವರು ಬಿಡಿ’ ಎಂದು ನೆರೆಮನೆಯ ಮುದುಕನೂ ತಲೆ ಆಡಿಸಿದ.
ಹೇಳಿ ಹೇಳಿ ಎಂದು ಉಳಿದವರೆಲ್ಲರೂ ಅವರನ್ನು ಪೂಸಿ ಹೊಡೆಯಲು ತೊಡಗಿದರು.
‘ಹೇಳುತ್ತೇನೆ ಕೇಳಿ.ಆದರೆ ಮೊದಲಿಂದ ಅಲ್ಲ.ಕೊನೆಗೆ ರಾಜ್ಯಬಾರವೆಲ್ಲ ಮುಗಿಸಿ ಪಂಚ ಪಾಂಡವರು ದ್ರೌಪದಿಯನ್ನು ಸೇರಿಸಿಕೊಂಡು ಸ್ವರ್ಗಕ್ಕೆ ಹೋಗುತ್ತಾರಲ್ಲ ಅಲ್ಲಿಂದ’ ಎಂದು ಶೀನಪ್ಪ ಗೌಡರು ಶುರು ಮಾಡಿದರು.
ಸ್ವರ್ಗದ ಕಡೆ ನಡೆಯುತ್ತಿದ್ದ ಧರ್ಮರಾಯ ಹಿಂದೆ ತಿರುಗಿದಾಗ ದ್ರೌಪದಿ ದಾರಿಯಲ್ಲೇ ತೀರಿ ಹೋಗಿದ್ದಳಂತೆ.ಅಯ್ಯೋ ಹೋದಳಲ್ಲಾ ಎಂದು ಮರುಗಿ ಇನ್ನೂ ಮುಂದೆ ನಡೆದು ತಿರುಗಿ ನೋಡಲು ಇನ್ನೂ ಒಬ್ಬೊಬ್ಬರಾಗಿ ತೀರಿ ಹೋಗಿದ್ದರಂತೆ.
‘ಅಯ್ಯೋ ಭೀಮಾ.ಎಲ್ಲರೂ ಹೋದರಲ್ಲಾ’ ಎಂದು ತಿರುಗಿ ನೋಡಿದರೆ ಆತನೂ ಸತ್ತು ಬಿದ್ದಿದ್ದನಂತೆ.
‘ ಅಯ್ಯೋ ಸ್ವರ್ಗದಲ್ಲಿ ನೀನಾದರೂ ಇರು ಮಾರಾಯ ಹೆದರಿಕೆಯಾಗುತ್ತದೆ’ ಎಂದು ಧರ್ಮರಾಯ ಭೀಮನ ತೀರಿಹೋದ ದೇಹವನ್ನು ಬೆನ್ನ ಮೇಲೆ ಎತ್ತಿಕೊಂಡು ಸ್ವರ್ಗದ ಕಡೆ ನಡೆಯುತ್ತಿದ್ದನಂತೆ.
ಹಾಗೆ ನಡೆಯುತ್ತಿರಲು ಅವನ ಹಿಂದೆ ನಡೆಯುತ್ತಿದ್ದುದು ಒಂದು ಬಡಕಲು ನಾಯಿಯೊಂದು ಮಾತ್ರವಂತೆ.
ಆಗ ಮುಂದೆ ದಾರಿಯಲ್ಲಿ ಒಬ್ಬ ಬಡ ಬ್ರಾಹ್ಮಣ ಒಂದು ತುಳಸಿಗಿಡವನ್ನು ತಲೆಕೆಳಗಾಗಿ ಮಣ್ಣಲ್ಲಿ ನೆಟ್ಟು ತೆಂಗಿನ ಚಿಪ್ಪಿನ ತೂತದಿಂದ ಅದಕ್ಕೆ ನೀರು ಹೊಯ್ಯುತ್ತಿದ್ದನಂತೆ.ಅದನ್ನು ನೋಡಿದ ಧರ್ಮರಾಯನಿಗೆ ನಗು ಬಂತಂತೆ.
ಅದನ್ನು ನೋಡಿದ ಆ ಬ್ರಾಹ್ಮಣನಿಗೂ ಸಿಟ್ಟು ಬಂತಂತೆ.
‘ಅಲ್ಲಾ ಮಾರಾಯ ನೀನು ಸತ್ತು ಹೋದ ಹೆಣವನ್ನು ಹೊತ್ತುಕೊಂಡು ಸ್ವರ್ಗಕ್ಕೆ ಹೋಗುತ್ತಿದ್ದೀಯಲ್ಲಾ.ನಾನು ತಲೆಕೆಳಗಾದ ತುಳಸಿಯನ್ನು ಬದುಕಿಸಬಾರದಾ’ ಎಂದು ಕೇಳಿ ಆತನೂ ನಕ್ಕನಂತೆ.
ಆಗ ಧರ್ಮರಾಯನು ಭೀಮನ ದೇಹವನ್ನು ಬೆನ್ನಿಂದ ಬಿಸುಟು ಒಬ್ಬನೇ ಆ ನಾಯಿಯ ಜೊತೆ ಮುಂದೆ ನಡೆದನಂತೆ.
ಮುಂದೆ ಒಂದು ಸರೋವರ.ಅದು ಕಳೆದರೆ ಸ್ವರ್ಗ.ಆ ಸರೋವರದ ಮೇಲೆ ಒಂದು ಸೇತುವೆ.ಅಂತಿಂಥ ಸೇತುವೆಯಲ್ಲ.ಒಂದು ಬಾಳೆಯ ನಾರನ್ನು ಏಳು ಸೀಳುಗಳನ್ನಾಗಿ ಮಾಡಿ ಅದರ ಒಂದು ಸೀಳಿಂದ ಮಾಡಿದ ಸೇತುವೆ.
‘ಅಂತೂ ಹೇಗೋ ಧರ್ಮರಾಯ ಆ ಸೇತುವೆಯನ್ನು ದಾಟಿ ಸ್ವರ್ಗಕ್ಕೆ ಹೋದ ಮಾರಾಯರೇ.ನಮ್ಮಿಂದೆಲ್ಲ ಅದನ್ನು ದಾಟಲು ಆಗುತ್ತದೆಯಾ.ಸುಮ್ಮನೆ’ ಎಂದು ಶೀನಪ್ಪಗೌಡರು ತಮ್ಮ ದೇಹವನ್ನು ಹಿಂಡಿ ಹಿಪ್ಪೆ ಮಾಡಿ ಆ ಕಥೆ ಹೇಳಿ ಮುಗಿಸಿದರು.
ಅವರಿಂದ ಖಂಡಿತ ಆಗುತ್ತದೆ ಎಂಬಂತೆ ಅಲ್ಲಿ ನೆರೆದಿದ್ದ ಬಹುತೇಕರು ಕಣ್ಣೀರು ತುಂಬಿಕೊಂಡು ಕುಳಿತಿದ್ದರು.
ಆಮೇಲೆ ವಿಷಯ ಬದಲಿಸಲು ನಾನು ಕೆಲವು ತಮಾಷೆಗಳನ್ನು ಹೇಳಿದೆ.ಅವರೂ ಹೇಳಿದರು.
ಅದರಲ್ಲಿ ಒಂದು ತಮಾಷೆ ಸುಮಾರು ಇನ್ನೂರು ವರುಷಗಳ ಹಿಂದೆ ನಡೆದ ಒಂದು ಜಗಳದ ಕಥೆ.
ಅದೂ ಒಂದು ಹಲಸಿನ ಹಣ್ಣಿನ ವಿಷಯಕ್ಕೆ ನಡೆದ ಜಗಳ.ಆ ಕಥೆಯನ್ನು ಹೇಳಿದವರು ಶೀನಪ್ಪ ಗೌಡರ ನೆರೆಮನೆಯ ಮುದುಕ.
ಆ ಮುದುಕನ ಅಜ್ಜನ ಅಜ್ಜ ಒಂದು ಹಲಸಿನ ಹಣ್ಣು ಕೊಯ್ಯುವಾಗ ಆದ ಜಗಳದಿಂದಾಗಿ ಘಟ್ಟದ ಕೆಳಗಿನ ತನ್ನ ಮೂಲ ಮನೆಯಿಂದ ಸಿಟ್ಟು ಮಾಡಿಕೊಂಡು ಬಂದು ಇಲ್ಲಿ ನೆಲಸಿದನಂತೆ.ಜಗಳಕ್ಕೆ ಕಾರಣವಾದ ಆ ಹಲಸಿನ ಮರ ಇನ್ನೂ ಅಲ್ಲಿ ಘಟ್ಟದ ಕೆಳಗೆ ಹಣ್ಣು ಬಿಟ್ಟುಕೊಂಡು ನಿಂತಿದೆಯಂತೆ
ಆ ಮುದುಕನ ಮನೆತನದ ಹೆಸರಿನಿಂದಲೇ ಈ ಊರಿಗೆ ಈ ಹೆಸರು ಬಂದಿದೆ.ಅವರದೇ ಆ ಕಾಡಿನೊಳಗಡೆಯ ಮೊದಲ ಮನೆ ಆಗಿತ್ತಂತೆ.

ಆನಂತರ ಬಂದವರು ಬ್ರಿಟಿಷ್ ದೊರೆಗಳು.ಅವರು ತಮ್ಮ ಬಂಗಲೆಯನ್ನು ಬ್ಯಾರಿಗಳಿಗೂ,ತೋಟವನ್ನು ಅಡಿಕೆ ಭಟ್ಟರೊಬ್ಬರಿಗೂ ಮಾರಿ ಲಂಡನ್ನಿಗೆ ಹೊರಟು ಹೋದರಂತೆ.ಹೋಗುವಾಗ ಮಲಯಾಳಿ ಹೆಂಗಸನ್ನು ಬಿಟ್ಟೇ ಹೋದರಂತೆ.
ಆಕೆ ಕೆಲವು ವರ್ಷ ಕೋರ್ಟು ಖಚೇರಿಗೆ ಓಡಾಡಿ ಸುಸ್ತಾಗಿ ಒಂದು ಸೇಂದಿ ಗುಡಿಸಲು ಇಟ್ಟುಕೊಂಡು ಬದುಕುತ್ತಿದ್ದಳಂತೆ. ಆಮೇಲೆ ತಾನೂ ತೀರಿ ಹೋದಳಂತೆ.
ಸಣ್ಣವನಿರುವಾಗ ಇದು ಯಾವುದೂ ಗೊತ್ತಿಲ್ಲದೆ ಸೇಂದಿ ಮಾರುವ ಮಲಯಾಳಿ ಹೆಂಗಸಿನ ಮುಖವನ್ನು ಕದ್ದು ಮುಚ್ಚಿ ನೋಡುತ್ತಾ ಓಡಾಡುತ್ತಿದ್ದ ನಾನು.ಈಗ ವDSC_0080ಯಸ್ಸುಗಾಲದಲ್ಲಿ ಗೊತ್ತಾಗುತ್ತಿರುವ ಕಥೆಗಳು!
ವಾಪಾಸು ಬರುವಾಗ ದಾರಿಯಲ್ಲಿ ಆ ಸೇಂದಿಯ ಅಂಗಡಿ ಹಾಗೇ ನಿಂತಿತ್ತು.
ಸೇಂದಿ ಅಂಗಡಿಯ ಹೆಂಗಸು ಗೇರು ಮರವೊಂದರ ಕೆಳಗೆ ನಿಂತುಕೊಂಡು ರಸ್ತೆಯನ್ನು ನೋಡುತ್ತಿದ್ದಳು.
ಒಂದೆರೆಡು ದನಗಳೂ ಆ ನೆರಳಲ್ಲಿ ನಿಂತುಕೊಂಡು ಬಾಯಿ ಅಲ್ಲಾಡಿಸುತ್ತಿದ್ದವು.

`ಕೈವಿಷ’ ಎಂಬ ಕಥೆಯು

ನೋಡಿದರೆ ಅವರು ಮೂವರೂ ಸಹಪಾಠಿಗಳಂತಿದ್ದರು. ಅರಚುತ್ತಿದ್ದ ಆ ನಾಟಿಕೋಳಿಯನ್ನು ಆತ ಶಾಸ್ತ್ರೋಕ್ತವಾಗಿ ಕೊಯ್ಯುವಾಗ ಮೊದಲ ಹೆಂಡತಿಯು ಅದರ ಕಾಲುಗಳನ್ನು ಹಿಡಿದುಕೊಂಡಿದ್ದಳು.ಎರಡನೆಯ ಹೆಂಡತಿಯು ತಪ್ಪಲೆಯಲ್ಲಿ ಕುದಿಯುವ ನೀರನ್ನು ತಂದು ಅದರಲ್ಲಿ ಆ ತೀರಿಹೋದ ಕೋಳಿಯನ್ನು ಮುಳುಗಿಸಿ ಅದರ ತುಪ್ಪಳವನ್ನು ಕಿತ್ತು ತೆಗೆದಳು.ಮೊದಲನೆಯ ಹೆಂಡತಿಯು ತುಪ್ಪಳವನ್ನೆಲ್ಲ ಕಳೆದುಕೊಂಡು ಬೆತ್ತಲೆಯಾಗಿದ್ದ ಆ ಪಾಪದ ಕೋಳಿಯನ್ನು ಬೆಂಕಿಯ ಉರಿಯಲ್ಲಿ ಸಣ್ಣಗೆ ಸುಟ್ಟಳು.ಅವರಿಬ್ಬರ ಆ ಪಾಪದ ಗಂಡನು ಆ ಪಾಪದ ಕೋಳಿಯನ್ನು ಕತ್ತರಿಸಿ ತುಂಡುತುಂಡುಗಳಾಗಿ ಮಾಡಿದನು.

ಹೀಗೆ ಅವರು ಮೂವರು ನಗುತ್ತಾ,ಒಬ್ಬರನ್ನೊಬ್ಬರು ಛೇಡಿಸುತ್ತಾ,ವಿಮರ್ಶಿಸುತ್ತಾ ಯಾವುದೋ ಒಂದು ಪುರಾತನ ಯಂತ್ರದ ಕೀಲುಗಳಂತೆ ಮಸಾಲೆ ಅರೆಯದೇ ಕೇವಲ ಮನೆಯಲ್ಲೇ ಕುಟ್ಟಿಮಾಡಿದ ಮಸಾಲೆ ಪುಡಿಯಿಂದ ಅದ್ಭುತವಾದ ನಾಟಿಕೋಳಿಯ ಸಾರು ಮಾಡಿದರು

ಸುಮ್ಮನೆ ಹರಿಯುವ ಕಾವೇರಿಯ ಈ ಕಡೆ ನಿಂತು ಅಸಹಾಯಕನಾಗಿ ನೀವು ಒಂದು ದೊಡ್ಡ ಕೂಗು ಹಾಕಿದರೆ, ಅಥವಾ ನಿಮಗೆ ಜೋರಾಗಿ ಸಿಳ್ಳೆ ಹಾಕಲು ಗೊತ್ತಿದ್ದರೆ ಆ ಕಡೆಯಿಂದ ಒಬ್ಬಳು ಪುಟ್ಟ ಹುಡುಗಿ ಕರುವಿನಂತೆ ಓಡುತ್ತಾ ಬಂದು ಕಟ್ಟಿ ಹಾಕಿರುವ ಬಿದಿರಿನ ತೆಪ್ಪವನ್ನು ಬಿಚ್ಚಿ ಈ ಕಡೆ ಹುಟ್ಟು ಹಾಕುತ್ತಾ ಬಂದು ನಿಮ್ಮನ್ನು ಕರೆದೊಯ್ಯುತ್ತಾಳೆ.ನಿಮಗೆ ಹೆದರಿಕೆಯಾದರೆ, ಆ ಬಾಲಕಿಯ ಹೆಸರನ್ನೂ,ವಯಸ್ಸನ್ನೂ,ಓದುತ್ತಿರುವ ಕ್ಲಾಸನ್ನೂ ಕೇಳುತ್ತಾ ನೀವೆಷ್ಟು ಆಳದ ಮೇಲೆ ತೇಲುತ್ತಿರುವಿರಿ ಎಂಬುದನ್ನು ಊಹಿಸುವುದ ಮರೆ2010-12-14_3680ತು ಈ ಕಡೆ ತಲುಪಬಹುದು.ನೀವು ಮಾತುಗಾರರಾಗಿದ್ದರೆ ಆ ಬಾಲಕಿ ನಿಮಗಿಂತ ಚುರುಕಿನ ಮಾತುಗಾರಳಾಗಿ ದಡ ತಲುಪಿಸುತ್ತಾಳೆ.ನೀವು ಗಂಭೀರ ಮನುಷ್ಯಳಾದರೆ ಆಕೆಯೂ ಗಂಭೀರವೇ.ದಡ ತಲುಪಿಸಿ ಮಾಯವಾಗುತ್ತಾಳೆ.

ಆವತ್ತು ಯಾಕೋ ನಾನೂ ಕೊಂಚ ಗಂಭೀರವಾಗಿ ಈ ಕಡೆ ತಲುಪಿದ್ದೆ.ಶಾಲೆಗೆ ಹೋಗುವ ಈ ಬಾಲಕಿ,ಹರಿಯುತ್ತಿರುವ ಈ ನೀರು,ಅವಳ ಊರಿಗೊಂದು ಕಾಲು ಸೇತುವೆಯನ್ನಾದರೂ ಕರುಣಿಸದ ಸರಕಾರ, ಅವಳ ಊರಿನ ಬಡತನ, ಕಷ್ಟಗಳು, ಇದನ್ನೆಲ್ಲ ಬರಿಯ ಬಾಯಿ ಮಾತಲ್ಲಿ ವರದಿ ಮಾಡಿ ಹೋಗಬೇಕಾಗಿರುವ ನನ್ನ ಎಡಬಿಡಂಗಿ ಜೀವಿತ- ಇದನ್ನೆಲ್ಲ ಯೋಚಿಸುತ್ತಾ ಆ ಬಾಲಕಿಯೂ ಮನದಿಂದ ಮಾಯವಾಗಿದ್ದಳು.ಆ ಊರಿನವರೂ ಅವರವರ ಕೆಲಸಗಳಲ್ಲಿ ಮುಳುಗಿದ್ದರು.ಕೊಯ್ಲು ಮುಗಿಸಿದ ಗದ್ದೆಯಿಂದ ಒಣ ಹುಲ್ಲನ್ನು ಪೇರಿಸಿಡುವುದು,ಕರೆದು ಮುಗಿಸಿದ ಎಮ್ಮೆ ಹಸುಗಳನ್ನು ಕಟ್ಟಿ ಹಾಕುವುದು,ಸುಮ್ಮನೇ ತಲೆ ಕೆರೆಯುತ್ತಾ ಆಕಳಿಸುವುದು ಇತ್ಯಾದಿ.

ಆ ಊರಲ್ಲಿ ನನ್ನನ್ನು ತಿರುಗಾಡಿಸಬೇಕಾದ ಆ ಹೆಂಗಸು ಇನ್ನೂ ಬಂದಿರಲಿಲ್ಲ. ಆಕೆ ಆ ಊರಿನ ಸೂಲಗಿತ್ತಿಯೆಂದೂ,ಎಲ್ಲೋ ಎಡವಟ್ಟಾಗಿರುವ ಹೆರಿಗೆ ಕೇಸೊಂದನ್ನು ಸರಕಾರೀ ಆಸ್ಪತ್ರೆಗೆ ಸೇರಿಸಲು ಹೋಗಿರುವಳೆಂದೂ,ಆಕೆ ಬರುವವರೆಗೆ ನಾನು ಕಾಯಲೇ ಬೇಕಾಗುತ್ತದೆಂದೂ ಅವರೆಲ್ಲರು ಅವರವರ ಕೆಲಸದಲ್ಲಿ ಮುಳುಗಿದ್ದರು.

ಕತ್ತಲು ಕವಿಯುತ್ತಿದ್ದಂತೆ ಆ ಕತ್ತಲನ್ನು ಇನ್ನಷ್ಟು ಕತ್ತಲು ಮಾಡುವಂತೆ ಕಪ್ಪು ಬುರುಖಾ ಹಾಕಿಕೊಂಡಿದ್ದ ಹೆಂಗಸೊಬ್ಬಳು ‘ಅಯ್ಯೋ ಅಣ್ಣಾ, ಬಂದು ತುಂಬಾ ಹೊತ್ತಾಯಿತಾ.sorry ಎಮರ್ಜೆನ್ಸಿ ಹೆರಿಗೆ, ಆಸ್ಪತ್ರೆಗೆ ಹೋಗಬೇಕಾಯಿತು.ನಿಮ್ಮನ್ನು ಕಾಯಿಸಿದೆ ಗಂಡು ಮಗು,sorry’ ಎಂದು ಆ ಕತ್ತಲಲ್ಲಿ ಪಟಪಟ ಮಾತನಾಡುತ್ತಾ ಅಲ್ಲೆಲ್ಲಾ ಜೀವ ತುಂಬ ತೊಡಗಿದಳು.ಅವಳಾರೆಂದು ಕೇಳುವ ಮೊದಲೇ ತಾನು ಯಾರೆಂದು ಮಾತಲ್ಲೇ ತೋರಿ ಮಾಯಾವಿಯಂತೆ ಬುರುಖಾದೊಳಗಿಂದಲೇ ಅಲ್ಲೆಲ್ಲ ಜೀವ ತುಂಬಿಸುತ್ತಿದ್ದಳು.
ಅದುವರೆಗೆ ಕೊಂಚ ಬಿಗಿದುಕೊಂಡೇ ಇದ್ದ ಅಲ್ಲಿನ ಗಂಡಸರು,ಮುದುಕರು,ಮಕ್ಕಳು ಆಕೆಯ ಆಗಮನವಾಗುತ್ತಿದ್ದಂತೆ ನನ್ನನ್ನೂ ಪರಿಚಿತರಂತೆ ನೋಡತೊಡಗಿದ್ದರು.‘ ಓ ಏನಯ್ಯಾ, ಏನಕ್ಕಾ ,ಏನಪ್ಪಾ ಮುದುಕಾ’ ಎಂದೆಲ್ಲ ಬುರುಕಾದೊಳಗಿಂದಲೇ ಚುರುಕಾಗಿ ನಗುತ್ತಾ ಮಾತನಾಡಿಸುತ್ತಾ ಆಕೆ ಅವರೆಲ್ಲರನ್ನೂ ಸಡಿಲಗೊಳಿಸಿ, ‘ಬನ್ನಿ ಹೋಗುವಾ’ ಎಂದು ನನ್ನನ್ನೂ ಆ ಊರೊಳಗೆ ಒಂದು ಸುತ್ತು ಹಾಕಿಸಿಬಿಟ್ಟಳು.

ಅಚ್ಚರಿಯಾಗುತ್ತಿತ್ತು.ಬಹುಪಾಲು ಸೋಲಿಗರೂ, ಜೇನು ಕುರುಬರೂ, ಒಕ್ಕಲಿಗರೂ, ಲಿಂಗಾಯಿತರೂ ಹಾಗೂ ಕಡು ಬಡವರೂ ಆಗಿರುವ ಆ ಊರಿನ ಮನೆಗಳೊಳಕ್ಕೆ ಬುರುಕಾ ಹಾಕಿರುವ ಈ ಹೆಂಗಸಿನ ಪ್ರವೇಶವಾಗುತ್ತಿದ್ದಂತೆ ಪುಟಿದೇಳುತ್ತಿದ್ದ ನಗು, ಹೊರಬರುತ್ತಿದ್ದ ಹಳೆಯ ತಮಾಷೆಗಳು, ಹೊಸ ಕಾಯಿಲೆಗಳ ವಿಷಯ, ಅದಕ್ಕೆ ಅವಳು ನೀಡುತ್ತಿದ್ದ ಗುಳಿಗೆಗಳಂತಹ ಉತ್ತರಗಳು, ಅವಳ ಕೀಟಲೆಯ ಕನ್ನಡ ಎಲ್ಲವೂ ಸಖತ್ ಮಜಾ ನೀಡುತ್ತಿದ್ದವು.

ಆ ಕತ್ತಲಲ್ಲಿ ಎಲ್ಲ ಮನೆಗಳನ್ನೂ, ಮನುಷ್ಯರನ್ನೂ ತೋರಿಸಿ ಮುಗಿಸಿದ ಆಕೆ, ‘ಸ್ವಲ್ಪ ಹೊತ್ತು ಕುಳಿತುಕೊಳ್ಳೋಣವಾ, ನನಗೆ ಕಾಲುನೋವು’ ಎಂದು ಸೋಲಿಗನೊಬ್ಬನ ಮನೆಯ ಮುಂದಿನ ತಡಿಕೆಯ ಬೆಂಚಲ್ಲಿ ಕುಳಿತು ಸುಧಾರಿಸಿಕೊಂಡು ಎದ್ದಳು.ಆ ಸೋಲಿಗ ಯಜಮಾನನು ಆ ಕತ್ತಲಲ್ಲಿ ತಂದು ಕೊಟ್ಟ ಕಪ್ಪು ಕಾಫಿಯನ್ನು ಕುಡಿದು ನಾವು ಮತ್ತೆ ಆ ಕತ್ತಲಲ್ಲಿ ನಡೆಯತೊಡಗಿದೆವು.

ಹೂ ಬಿಟ್ಟು ಸಾಯಲು ಸಿದ್ದವಾಗುತ್ತಿರುವ ಬಿದಿರು ಮೆಳೆಗಳು,ಕೊಂಬೆಗಳನ್ನು ಕತ್ತರಿಸಿಕೊಂಡ ತೇಗದ ಮರಗಳು,ಬೊಗಳುವ ಸಾಕು ನಾಯಿಗಳು,ದೂರದಲ್ಲೆಲ್ಲೋ ಕಾಡಾನೆಗಳು ಊರೊಳಗೆ ನುಗ್ಗಲು ಚಡಪಡಿಸುವ ಸದ್ದು,ಮೇಲೆ ಅರ್ದ ಚಂದ್ರ.ಮುಂದೆ ನೆರಳಿನಂತೆ ಬುರುಕಾ ಹಾಕಿಕೊಂಡು ನಡೆಯುತ್ತಿರುವ ಅವಳು.ಹಿಂದೆ ಎಡವುತ್ತಾ ನಡೆಯುತ್ತಿರುವ ನಾನು.

‘ನೀವು ಈ ಊರಲ್ಲಿ ತಂಗುವುದಾದರೆ ನಮ್ಮಲ್ಲೇ ತಂಗಲು ನನ್ನ ಗಂಡ ಹೇಳಿರುವರು.ಅವರು ಮನೆಯಲ್ಲಿ ಒಂದು ನಾಟಿ ಕೋಳಿಯನ್ನು ಇಟ್ಟುಕೊಂಡು ನಿಮಗೆ ಕಾಯುತ್ತಿರುವರು’ ಎಂದು ಅವಳು ಅಂದಳು.‘ನೀವು ತಂಗುವುದಾದರೆ ಬೇರೆಲ್ಲೂ ತಂಗಬಾರದು ಈ ಊರಲ್ಲಿ ಬಹಳ ಜನ ಕೈವಿಷ ಹಾಕುವವರು’ ಎಂದಳು.

‘ಆದರೆ ತಂಗುವುದಾದರೆ ಒಂದು ವಿಷಯ ಮೊದಲೇ ಹೇಳಿ ಬಿಡುತ್ತೇನೆ.ನಮ್ಮ ಯಜಮಾನರಿಗೆ ನಾವಿಬ್ಬರು ಹೆಂಡತಿಯರು.ಮೂವರೂ ಜೊತೆಗಿರುವೆವು.ಆಮೇಲೆ ಅಲ್ಲಿಗೆ ಬಂದು ನಿಮಗೆ ಗೊಂದಲವಾಗಬಾರದು ಮೊದಲೇ ಹೇಳಿ ಕರಕೊಂಡು ಬರಲು ಹೇಳಿದ್ದಾರೆ ನಮ್ಮ ಯಜಮಾನರು’ ಎಂದೂ ಹೇಳಿದಳು.

ನಾವಿಬ್ಬರೂ ನಡೆದು ಅಲ್ಲಿಗೆ ತಲುಪಿದಾಗ ಯಜಮಾನರು ನಸುನಗುತ್ತಾ ಎದುರುಗೊಂಡರು.ತೀರಾ ಸೌಜನ್ಯದ ಸಂಕೋಚದ ಆ ಮನುಷ್ಯ ನೋಡಲು ನನಗಿಂತ ಸಣ್ಣವನೂ ಒಳ್ಳೆಯವನೂ ಆಗಿ ಕಾಣಿಸುತ್ತಿದ್ದರು ಮತ್ತು ಈ ಹಿಂದೆ ಎಲ್ಲಿಯೋ ನೋಡಿದಂತಿದ್ದರು.ಆತನಿಗಿಂತಲೂ ಹೆಚ್ಚು ಸೌಜನ್ಯವೂ, ಸಂಕೋಚವೂ,ಕೊಂಚಪ್ರಾಯವೂ ಆದಂತಿದ್ದ ಅವರ ಮೊದಲ ಹೆಂಡತಿಯೂ ಗಂಡನ ಹಿಂದೆ ನಗುತ್ತಾ ಬಂದು ಸಲಾಂ ಹೇಳಿದರು.

ಬುರುಖಾ ಹಾಕಿದ್ದ ಇವಳು ಮನೆಯೊಳಕ್ಕೆ ಹೋಗಿ ಬುರುಕಾ ಬಿಚ್ಚಿ ಹೊರಬಂದು ‘ಇದೇ ನನ್ನ ಫ್ಯಾಮಿಲಿ’ ಎಂದು ತನ್ನ ಸವತಿಯನ್ನೂ, ಗಂಡನನ್ನೂ ಪರಿಚಯಿಸಿದಳು.

ನೋಡಿದರೆ ಅವರು ಮೂವರೂ ಸಹಪಾಠಿಗಳಂತಿದ್ದರು. ಅರಚುತ್ತಿದ್ದ ಆ ನಾಟಿಕೋಳಿಯನ್ನು ಆತ ಶಾಸ್ತ್ರೋಕ್ತವಾಗಿ ಕೊಯ್ಯುವಾಗ ಮೊದಲ ಹೆಂಡತಿಯು ಅದರ ಕಾಲುಗಳನ್ನು ಹಿಡಿದುಕೊಂಡಿದ್ದಳು.ಎರಡನೆಯ ಹೆಂಡತಿಯು ತಪ್ಪಲೆಯಲ್ಲಿ ಕುದಿಯುವ ನೀರನ್ನು ತಂದು ಅದರಲ್ಲಿ ಆ ತೀರಿಹೋದ ಕೋಳಿಯನ್ನು ಮುಳುಗಿಸಿ ಅದರ ತುಪ್ಪಳವನ್ನು ಕಿತ್ತು ತೆಗೆದಳು.ಮೊದಲನೆಯ ಹೆಂಡತಿಯು ತುಪ್ಪಳವನ್ನೆಲ್ಲ ಕಳೆದುಕೊಂಡು ಬೆತ್ತಲೆಯಾಗಿದ್ದ ಆ ಪಾಪದ ಕೋಳಿಯನ್ನು ಬೆಂಕಿಯ ಉರಿಯಲ್ಲಿ ಸಣ್ಣಗೆ ಸುಟ್ಟಳು.ಅವರಿಬ್ಬರ ಆ ಪಾಪದ ಗಂಡನು ಆ ಪಾಪದ ಕೋಳಿಯನ್ನು ಕತ್ತರಿಸಿ ತುಂಡುತುಂಡುಗಳಾಗಿ ಮಾಡಿದನು.

ಹೀಗೆ ಅವರು ಮೂವರು ನಗುತ್ತಾ,ಒಬ್ಬರನ್ನೊಬ್ಬರು ಛೇಡಿಸುತ್ತಾ,ವಿಮರ್ಶಿಸುತ್ತಾ ಯಾವುದೋ ಒಂದು ಪುರಾತನ ಯಂತ್ರದ ಕೀಲುಗಳಂತೆ ಮಸಾಲೆ ಅರೆಯದೇ ಕೇವಲ ಮನೆಯಲ್ಲೇ ಕುಟ್ಟಿಮಾಡಿದ ಮಸಾಲೆ ಪುಡಿಯಿಂದ ಅದ್ಭುತವಾದ ನಾಟಿಕೋಳಿಯ ಸಾರು ಮಾಡಿದರು
2010-12-14_3589ಹೊಗೆ ಬೆಂಕಿಯ ಒಲೆಯಲ್ಲಿ ಆ ಸಾರು ಬೆಂದು ರೆಡಿಯಾಗುವ ಮೊದಲು ಆ ಗಂಡಸು ರಾತ್ರಿಯ ಪ್ರಾರ್ಥನೆ ಮುಗಿಸಿ ಬಂದರು.ಬಂದವರು, ‘ಊಟ ಮಾಡುವ ಮೊದಲು ನನ್ನ ವಿಷಯವನ್ನು ಹೇಳಿ ಬಿಡುತ್ತೇನೆ.ಊಟ ಮಾಡಿದ ಮೇಲೆ ನಿಮಗೆ ಅಸಹ್ಯವಾಗಬಾರದು ಅದಕ್ಕೆ’ ಅಂದರು.ಅದು ಹೌದು ಅನ್ನುವಂತೆ ಎಲೆಯಡಿಕೆ ಜಗಿಯುತ್ತಾ ಅವರ ಇಬ್ಬರು ಹೆಂಡತಿಯರೂ ತಲೆ ಆಡಿಸಿದರು.

‘ಅದಕ್ಕೇನು ಹೇಳಿಯೇ ಬಿಡಿ’ ಅಂದೆ.
‘ನಾನು ಎರಡು ಕೊಲೆ ಮಾಡಿದ್ದೇನೆ.ಅದಕ್ಕಾಗಿ ಎಂಟು ವರ್ಷ ಜೈಲಿಗೂ ಹೋಗಿ ಬಂದು ಈಗ ೧೦ ವರ್ಷಗಳಾದವು’ ಎಂದು ತಣ್ಣನೆಯ ಧ್ವನಿಯಲ್ಲಿ ಅಂದರು.

‘ಅದು ಬೇರೆ ಯಾರನ್ನೂ ಅಲ್ಲ.ಒಬ್ಬಳು ಇವರದೇ ತಂಗಿ.ಇನ್ನೊಬ್ಬ ಬೇರೊಂದು ಧರ್ಮದವನು’ ಎಂದು ಎರಡನೆಯ ಹೆಂಡತಿ ಅಂದಳು.‘ಅವರು ಇವರನ್ನು ಮುಗಿಸುವ ಮೊದಲು ಇವರೇ ಅವರನ್ನು ಮುಗಿಸಿದರು’ ಎಂದು ಮೊದಲ ಹೆಂಡತಿ ಅಂದಳು.
ಊಟ ಮುಗಿಸಿದ ಮೇಲೆ ಅವರು ಮೂವರೂ ಸೇರಿ ಆ ಕಥೆಯನ್ನು ಪೂರ್ತಿಯಾಗಿ ಹೇಳಿ ಮುಗಿಸಿದರು.

ಅದು ತುಂಬ ದೊಡ್ಡ ಕಥೆ.

ಅದು ಒಬ್ಬ ಒಳ್ಳೆಯ ಅಣ್ಣ ಒಬ್ಬಳು ಒಳ್ಳೆಯ ತಂಗಿಯನ್ನು ಕೊಂದ ಕೆಟ್ಟ ಕಥೆ.ಒಂದಿಷ್ಟು ಕೆಟ್ಟ ಮನುಷ್ಯರಿಂದಾಗಿ ವಿನಾ ಕಾರಣ ನಡೆದ ಮರಣಗಳ ಕಥೆ.

ಆ ಕಥೆ ಹೇಳಿ ಮುಗಿಸಿದ ಆ ಗಂಡಸು ‘ಈಗ ಹೇಳಿ ನಿಮಗೇನನಿಸುತ್ತದೆ’ ಎಂದು ಕೇಳಿದರು.

ಬೇರೇನೂ ಹೇಳದೆ ‘ಊಟ ಬಡಿಸಿ’ ಎಂದೆ.

ಬೆಳಗೆ ಎದ್ದಾಗ ಆ ಮನುಷ್ಯ ಪ್ರಾರ್ಥಿಸುತ್ತಾ ಕುಳಿತಿರುವುದು ಕಾಣಿಸಿತು.ಮೊದಲನೆಯ ಹೆಂಡತಿ ಕೋಳಿಗಳನ್ನು ಗೂಡಿನಿಂದ ಹೊರ ಬಿಡುತ್ತಿದ್ದರು.

ಎರಡನೆಯ ಹೆಂಡತಿ ಮೂಗಿನ ತುದಿಗೆ ಕನ್ನಡಕ ಏರಿಸಿಕೊಂಡು ಮಡಿಲಲ್ಲಿ ಒಂದು ಹಳೆಯ ನೋಟು ಬುಕ್ಕು ಹಿಡಿದುಕೊಂಡು ಏನೋ ಬರೆಯುತ್ತಿದ್ದಳು.

ನನ್ನನ್ನು ನೋಡಿ ಆ ಪುಸ್ತಕವನ್ನು ಮುಚ್ಚಿಟ್ಟಳು. ‘ದಿನಾ ಬೆಳಗೆ ಹಿಂದಿನ ದಿನ ಏನೆಲ್ಲಾ ಆಯ್ತು ಎಂದು ಬರೆದಿಡುತ್ತೇನೆ, ಹೀಗೆ ಬರೆದು ತುಂಬಾ ಪುಸ್ತಕಗಳು ಮುಗಿದಿವೆ’ ಅಂದಳು.

ನಾನು ಆ ದಿನದ ವರದಿಗಾರಿಕೆಯ ಕೆಲಸ ಮುಗಿಸಿ ಅಲ್ಲಿಂದ ಹೊರಡುವಾಗ ಆಕೆ ಬುರುಕಾ ಹಾಕಿಕೊಂಡು ಹೊಳೆಯವರೆಗೆ ಬಂದಳು.ತೆಪ್ಪವನ್ನು ಹತ್ತುವ ಮೊದಲು ‘ನಿಮ್ಮಲ್ಲಿ ಒಂದು ವಿಷಯ ಹೇಳಲಾ’ ಅಂದಳು.

‘ನಾವಿಬ್ಬರು ಮದುವೆಯಾಗಿದ್ದೇವೆ.ಆದರೆ ಗಂಡ ಹೆಂಡತಿಯರ ಹಾಗೆ ಇಲ್ಲ,ನನಗೆ ಗಂಡಸರನ್ನು ಕಂಡರೆ ಆಗುವುದಿಲ್ಲ’ ಎಂದಳು.

‘ಬೇರೆ ಗಂಡಸರಿಗೆ ಇವರನ್ನು ಕಂಡರೆ ಹೆದರಿಕೆ.ಕೊಲೆ ಮಾಡಿ ಬಂದವನು ಎಂದು. ಹಾಗಾಗಿ ನಾವಿಬ್ಬರೂ 2010-12-14_3584ಮದುವೆಯಾಗಿದ್ದೇವೆ.ಇವರು ನನಗೆ ರಕ್ಷಣೆ ನೀಡುತ್ತಾರೆ.ಬೇರೇನೂ ಇಲ್ಲ’ ಎಂದಳು

‘ಅದನ್ನೂ ಬೇಗ ಒಂದು ಸಲ ಮುಗಿಸಿ ಬಿಡಿ.ಸಂಗತಿ ಅದಲ್ಲ.ಈ ಊರಿನ ಕೈ ವಿಷದ ವಿಷಯದ ಕುರಿತು ಏನೋ ಕೇಳಬೇಕಿತ್ತು.ಆಗಲೇ ಇಲ್ಲ.ಆದರೆ ನನಗೆ ಈಗ ಸಮಯವಿಲ್ಲ, ಹೋಗಬೇಕಲ್ಲ’ ಎಂದು ಆ ಬಾಲಕಿ ನಡೆಸುತ್ತಿದ್ದ ತೆಪ್ಪ ಹತ್ತಿದೆ.

‘ಪಾತು’ – ಒಂದು ಸಣ್ಣ ಕತೆ

paatu-10.jpg

[ಚಿತ್ರ:ಚರಿತಾ]

ಯಾರು ಯಾರೆಂದು ಗೊತ್ತಾಗದಂತೆ ಸುರಿಯುತ್ತಿರುವ ಬೆಳ್ಳನೆಯ ಮಳೆಯಲ್ಲಿ ಪಾತು ತಲೆಯ ಮೇಲೊಂದು ಗೊರಬೆ ಹಾಕಿಕೊಂಡು ನಡೆದು ಹೋಗುತ್ತಿದ್ದಳು. ಗೊರಬೆಯ ಒಳಗೆ ಅವಳ ಮುಖ ಬೆವರಿಕೊಂಡು, ಅವಳ ಕೆನ್ನೆ, ಮೂಗು, ತುಟಿಯ ಮೇಲೆಲ್ಲಾ ಮಳೆಯ ಹನಿಗಳು ಸಿಡಿದು ಅವಳು ಮಳೆಗೆ ಮುಖ ಓರೆ ಮಾಡಿಕೊಂಡು ಕೆಸರಲ್ಲಿ ಹೆಜ್ಜೆ ಹಾಕುತ್ತಿದ್ದಳು. ಅವಳ ನಡುವಲ್ಲಿ ಸೀರೆಯ ಮೇಲೆ ಬಿಗಿದು ಕಟ್ಟಿರುವ ಗೋಣಿಯ ಚೀಲ, ಅವಳ ಕೈಯ್ಯಲ್ಲಿನ ಕಚ್ಚರೆ ತೆಗೆಯುವ ದಬ್ಬೆ ಕತ್ತಿ, ಅವಳ ಕುಳ್ಳನೆ ಕಾಲಿನ ದಪ್ಪಮೀನಖಂಡಗಳು, ಅತ್ತು ಮುಗಿಸಿದಂತೆ ಕೆಂಪಗೆ ಇರುವ ಅವಳ ಮೂಗು, ಕಾದಾಡಿ ಬಂದಂತೆ ಇರುವ ಅವಳ ಕಣ್ಣುಗಳು – ಪಾತು ಇಷ್ಟು ವರ್ಷವಾದರೂ ಅದೇ ಹಳೆಯ ಮದುಮಗಳಂತೆ ಸೊಂಟ     ಬಳುಕಿಸಿಕೊಂಡು, ಗೋಣಿ ಸುತ್ತಿದ್ದ ಅವಳ ಕುಂಡೆ ಅಲ್ಲಾಡುತ್ತಾ ಅವಳು ಕೊಂಚ ಬೆನ್ನು ಬಾಗಿಸಿಕೊಂಡು ಏನೂ ಆಗಿಯೇ ಇಲ್ಲವೆಂಬಂತೆ ಬರೆಇಳಿದು ತಿರುವಲ್ಲಿ ಮರೆಯಾಗಿ ಹೋಗುತ್ತಿದ್ದಳು.ಹಾಗೆಯೇ ಹನಿಯುತ್ತಿರುವ ಮಳೆ, ಹಾಗೇ ಇರುವ ಈ ಮಣ್ಣಿನ ಬರೆ. ಹಾಗೇ ತುಂಬಿಕೊಂಡಿರುವ ಭತ್ತದ ಗದ್ದೆ. ಅದೇ ಇಳಿದುಹೋಗುವ ರಸ್ತೆಯ ತಿರುವು. ರಸ್ತೆಯ ಆಚೆ ಕತ್ತಲು ತುಂಬಿಕೊಂಡಿರುವ ಕಾಫಿಯ ತೋಟ. ತೋಟದ ಆಚೆ ತೀರಿಹೊದವರು ಮಲಗಿರುವ ಮೈದಾನಿಯ ಕಾಡು. ಕಾಡೊಳಗೆ ಕಾಣಿಸುವ ಗೋರಿಯ ಕಲ್ಲುಗಳು. ಕಾಡಿನ ನಡುವೆ ಬಿದ್ದುಹೋಗಿರುವಂತೆ ಕಾಣಿಸುವ ಅರಬಿ ಕಲಿಸುವ ಮದರಸದ ಹಂಚಿನ ಮಾಡು. ಮದರಸದ ಮೇಲೆ ನಿಂತುಕೊಂಡಿರುವ ದೂಪದ ಮರ…

ನಗು ಬಂತು. ಸಣ್ಣದಿರುವಾಗ ಪಾತುವಿನ ಕೊಡೆಯೊಳಗೆ ಸೇರಿಕೊಂಡು ಅರಬಿ ಮದರಸಕ್ಕೆ ಕಾಡು ದಾರಿಯಲ್ಲಿ ನಡೆದು ಹೋಗುವಾಗ ತೋರುಬೆರಳಿಂದ ಗೋರಿಯ ಕಲ್ಲುಗಳನ್ನು ತೋರಿಸಿದಾಗ ಪಾತು ನನ್ನ ತೋರು ಬೆರಳನ್ನು ಕಚ್ಚಿ ರಕ್ತ ಚೀಪಿದ್ದಳು. ತೀರಿಹೋದ ತನ್ನ ತಂದೆ ತಾಯಿ ಮಣ್ಣಲ್ಲಿ ಮಣ್ಣಾಗಿ ಮಲಗಿರುವ ಮೈದಾನಿ ಕಾಡನ್ನು ತೋರುಬೆರಳಿನಿಂದ ತೋರಿಸಬಾರದು ಎಂದು ಬೆನ್ನಿಗೆ ಗುದ್ದಿದ್ದಳುಈಗ ನೋಡಿದರೆ ಏನೂ ಅಲ್ಲದವಳ ಹಾಗೆ ಕೈಯಲ್ಲಿ ಕಾಡು ಕಡಿಯುವ ದಬ್ಬೆ ಕತ್ತಿ ಹಿಡಿದುಕೊಂಡು ಮೈದಾನಿ ಕಾಡಿನ ಕಡೆ ನಡೆದುಹೋಗುತ್ತಿದ್ದಳು.

 

ಪಾತು ಕಾಫಿ ತೋಟದ ಕಾವಲುಗಾರ ಕೊಂಬಿನ ಮೀಸೆ ಪೋಕರ್‌ಕಾಕನ ಮೊದಲನೇ ಹೆಂಡತಿಯ ಮಗಳು. ಪೋಕರ್‌ಕಾಕ ಬಂದರು ಎಂದರೆ ನಾವು ಹುಡುಗರು ಕಾಫಿಯ ತೋಟದ ಗಿಡಗಳ ಕೆಳಗೆ ಚೆಲ್ಲಾಪಿಲ್ಲಿಯಾಗುತ್ತಿದ್ದೆವು. ಪೋಕರ್‌ಕಾಕ ಮುಖದ ತುಂಬ ಆನೆಯ ಕೊಂಬಿನಂತೆ ಮೀಸೆ ಬೆಳೆಸಿಕೊಂಡು, ಕಣ್ಣುಗಳನ್ನು ಹಾರಿಸಿಕೊಂಡು, ತೋಟದ ಗಿಳಿಗಳನ್ನೂಇಣಚಿಗಳನ್ನೂ ಜೋರು ಮಾಡುತ್ತಾ, ಕಾಫಿ ತೋಟದ ಕಾಲುದಾರಿಗಳಲ್ಲಿ ಗಂಬೂಟಿನ ಹೆಜ್ಜೆ ಸದ್ದು ಮಾಡಿಕೊಂಡು ಕಿತ್ತಳೆ ಕದಿಯಲು ಬರುವ ಹುಡುಗರನ್ನು ಓಡಿಸುತ್ತಾ ನಡೆದಾಡುತ್ತಿದ್ದರು. ತೋಟದೊಳಗೆ ಮಂಗಗಳ ವಾಸನೆ ಬಂದರೆ ಸಾಕು ಮಂಗಗಳನ್ನು ಬೈಯುತ್ತಾ, ಮನುಷ್ಯರ ವಾಸನೆ ಬಂದರೆ ಹುಡುಗರನ್ನು ಬೈಯುತ್ತಾ ಪೋಕರ್‌ಕಾಕ ನಡೆದಾಡುತ್ತಿದ್ದರೆ, ಪಾತು ಹುಡುಗರ ಜೊತೆ ಸೇರಿಕೊಂಡು ತಂದೆ ಪೋಕರ್‌ಕಾಕನ ಗಂಬೂಟಿನ ಗುರುತುಗಳನ್ನು ನೆಲದಲ್ಲಿ ಪತ್ತೆ ಹಿಡಿಯುತ್ತಾ ಗಾಳಿಯಲ್ಲಿ ತಂದೆಯ ಮೈಯ ವಾಸನೆಯನ್ನು ಕಂಡು ಹಿಡಿಯುತ್ತಾ ತಂದೆ ಆ ಕಡೆ ನಡೆಯಲು ಈ ಕಡೆ ನುಸುಳುತ್ತಾ, ತಂದೆ ಈ ಕಡೆ ಬರಲು ಆ ಕಡೆ ಅಡಗುತ್ತಾ ಕಾಡುಕೋಳಿಯಂತೆ ಕಾಫಿ ತೋಟದೊಳಗೆ ನಡೆದಾಡುತ್ತಿದ್ದಳು.

Continue reading “‘ಪಾತು’ – ಒಂದು ಸಣ್ಣ ಕತೆ”