ಡಾರ್ಕ್ ರೂಮಿನಲ್ಲಿ ಸುಬ್ಬಣ್ಣಿಯವರು ಹೇಳಿದ ಹಳೆಯ ಸಂಗತಿಗಳು

DSC_8947ಅರವತ್ತರ ದಶಕದಲ್ಲಿ ಮೈಸೂರಿನಲ್ಲಿ ಫೋಟೋಫ್ಲಾಷ್ ಸುಬ್ಬಣ್ಣಿ ಎಂದೇ ಹೆಸರಾಗಿದ್ದ ಕೆ.ವಿ.ಸುಬ್ಬರಾವ್ ಅವರು ಇದೀಗ ಸ್ವಲ್ಪ ಮೊದಲು ಮಹಡಿಯ ಮೇಲಿನ ತಮ್ಮ ಡಾರ್ಕ್ ರೂಂನಲ್ಲಿ ಕುಳ್ಳಿರಿಸಿಕೊಂಡು ಆ ಕಾಲದ ಮೈಸೂರಿನ ಕಥೆಗಳನ್ನು ಹೇಳುತ್ತಿದ್ದರು.
ಅವರಿಗೀಗ ಸುಮಾರು ಎಂಬತ್ತಮೂರು ವರ್ಷ.
ಅವರ ಹಳೆಯ ಕಾಲದ ಆ ಫೋಟೋಫ್ಲಾಷ್ ಸ್ಟುಡಿಯೋ ಮೈಸೂರಿನ ಧನ್ವಂತರಿ ರಸ್ತೆಯ ಮೂಲೆಯಲ್ಲಿತ್ತು.ಮಹಾ ಸಂಗೀತಗಾರರಾದ ಮೈಸೂರು ವಾಸುದೇವಾಚಾರ್ಯರೂ, ಬಹಳ ದೊಡ್ಡ ಬರಹಗಾರರಾದ ಆರ್.ಕೆ.ನಾರಾಯಣ್ ಅವರೂ, ಛಾಯಾಚಿತ್ರಗ್ರಾಹಕರಾದ ಸತ್ಯನ್ನರೂ ಆ ಕಾಲದಲ್ಲಿ ಇವರ ಸ್ಟುಡಿಯೋಕ್ಕೆ ಹರಟೆ ಹೊಡೆಯಲು ಹೋಗುತ್ತಿದ್ದರು.ಈ ಸ್ಟುಡಿಯೋ ಮೈಸೂರಿನ ದೇವರಾಜ ಮಾರುಕಟ್ಟೆಗೂ, ಕೃಷ್ಣರಾಜ ಆಸ್ಪತ್ರೆಗೂ ಬಹಳ ಹತ್ತಿರ ಇದ್ದ ಕಾರಣ ರೈತಾಪಿ ಜನರೂ ಈ ಸ್ಟುಡಿಯೋಕ್ಕೆ ಮುಗಿ ಬೀಳುತ್ತಿದ್ದರು. ಅದೂ ಅಲ್ಲದೆ ಆ ಕಾಲದಲ್ಲಿ ಮೈಸೂರಿನ ಮಹಾರಾಜರನ್ನು ಕಾಣಲು ದೇಶ ವಿದೇಶಗಳ ಗಣ್ಯರು ಆಗಮಿಸುತ್ತಿದ್ದುದರಿಂದ ಮಹಾರಾಜರ ಬಹಳ ಹತ್ತಿರಕ್ಕೆ ಹೋಗಿ ಆ ಗಣ್ಯರುಗಳ ಫೋಟೋ ತೆಗೆದವರೂ ಇದೇ ಸುಬ್ಬಣ್ಣಿಯವರಾಗಿದ್ದರು.
ಇಂತಹ ಗಣ್ಯರಲ್ಲಿ ಲಾರ್ಡ್ ಮೌಂಟ್ ಬ್ಯಾಟನ್, ಪಂಡಿತ್ ನೆಹರೂ, ರಾಜಾಜಿಯವರು, ರಾಜೇಂದ್ರಪ್ರಸಾದರು ಮೊದಲಾದವರು ಸೇರಿದ್ದಾರೆ.ಸೌದಿ ಅರೇಬಿಯಾದ ಸುಲ್ತಾನ ಮೈಸೂರಿಗೆ ಬಂದಾಗ ಸರ್ಕಾರಿ ಭವನದಲ್ಲಿ ಶ್ರೀಮಾನ್ ಮಹಾರಾಜರ ಜೊತೆ ಫೋಟೋ ತೆಗೆಸಿಕೊಂಡರಂತೆ.ತೆಗೆದವರು ಫೋಟೋ ನೋಡಿ ಖುಷಿಯಾಗಿ ಹತ್ತು ಸಾವಿರ ರೂಪಾಯಿ ಮತ್ತು ಒಂದು ಸವರನ್ ಚಿನ್ನ ಕೊಟ್ಟು ಶಹಬಾಸ್ ಅಂದರಂತೆ.

ಸುಬ್ಬಣ್ಣಿಯವರು ಇದೆಲ್ಲಾ ಕಥೆಗಳನ್ನು ಹೇಳುತ್ತಿದ್ದುದು ಧನ್ವಂತರಿ ರಸ್ತೆಯ ಅವರ ಹಳೆಯ ಕಾಲದ ಸ್ಟುಡಿಯೋದ ಡಾರ್ಕ್ ರೂಂನಲ್ಲಿ ಅಲ್ಲ.ಬದಲಾಗಿ ಅವರು ಇತ್ತೀಚೆಗೆ ಮೂರು ವರ್ಷಗಳ ಹಿಂದೆ ಹೊಸದಾಗಿ ಮೈಸೂರಿನ ಬಡಾವಣೆಯೊಂದರಲ್ಲಿ ಕಟ್ಟಿಸಿಕೊಂಡಿರುವ ಮನೆಯ ಮಹಡಿಯ ಮೇಲಿನ ಡಾರ್ಕ್ ರೂಮಿನಲ್ಲಿ.
ಅವರ ಐತಿಹಾಸಿಕ ಹಳೆಯ ಸ್ಟುಡಿಯೋ ಈಗ ಇಲ್ಲ.
ಅವರು ಆ ಸ್ಟುಡಿಯೋದಲ್ಲಿದ್ದ ಆ ಡಾರ್ಕ್ ರೂಮನ್ನು ಯಥಾವತ್ತಾಗಿ ಈ ಮಹಡಿಯ ಮೇಲಕ್ಕೆ ರೂಪಾಂತರಿಸಿದ್ದಾರೆ.ಹಾಗೇ ಕತ್ತಲು ಕತ್ತಲಾಗಿರುವ ಡಾರ್ಕ್ ರೂಂ.ನಡುವಲ್ಲಿ ನಿಗೂಢವಾಗಿ ಉರಿಯುತ್ತಿರುವ ಎರಡು ಮಂಕು ಬೆಳಕಿನ ಕೆಂಪು ದೀಪಗಳು.ಹಳೆಯ ಕಾಲದ ಫ್ಲಾಷ್ ಬಲ್ಬುಗಳು.ನೆಗೆಟಿವ್ ಗಳನ್ನು ಸಂಸ್ಕರಿಸಲು ಬೇಕಾದ ಅಗಲ ತಳದ ಮೂರು ದೊಡ್ಡ ಬಟ್ಟಲುಗಳು.ಮೂಲೆಯಲ್ಲಿ ಒಂದು ಗೋಣಿಚೀಲದಲ್ಲಿ ಹಾಗೇ ಬಿದ್ದುಕೊಂಡಿರುವ ರಾಸಾಯನಿಕಗಳು.ನಾನಾ ನಮೂನೆಯ ಎನ್ ಲಾರ್ಜರುಗಳು, ಫಿಲ್ಟರುಗಳು, ಮುಖದ ಮೇಲೆ ಹಾಕಲು ಬೇಕಾದ ಮುಸುಕುಗಳು ಮತ್ತು ಒಂದೊಂದು ಯುಗದ ಕಥೆ ಹೇಳುವ ಹಳೆಯ ಕಾಲದ ಹತ್ತಾರು ನಿರುಪಯುಕ್ತ ಕ್ಯಾಮರಾಗಳು.
ಒಂದು ಕಾಲದಲ್ಲಿ ಫೋಟೋಗ್ರಾಫರನೊಬ್ಬನ ಮೈಮೇಲಿನ ರತ್ನಖಚಿತ ಮಣಿಹಾರಗಳಂತೆ ಕಂಗೊಳಿಸುತ್ತಿದ್ದ ಈ ಎಲ್ಲ ಪರಿಕರಗಳೂ ಈಗ ಈ ಅಣುಕು ಡಾರ್ಕ್ ರೂಮಿನಲ್ಲಿ ಕಾಲನ ಹೊಡೆತಕ್ಕೆ ಸಿಲುಕಿ ಸುಸ್ತಾಗಿ ಬಿದ್ದುಕೊಂಡಿದ್ದವು.

DSC_8939ಈ ಸುಬ್ಬರಾಯರು ಒಂದು ಕಾಲದಲ್ಲಿ ಮೈಸೂರಿನ ಬಹಳ ಒಳ್ಳೆಯ ಹಾಕಿ ಆಟಗಾರರಾಗಿದ್ದವರು.ಜೊತೆಗೆ ಫುಟ್ಬಾಲನ್ನೂ ಆಡುತ್ತಿದ್ದವರು.ಶಾಸ್ತ್ರೀಯ ಸಂಗೀತವನ್ನೂ ಚೆನ್ನಾಗಿ ತಿಳಿದುಕೊಂಡಿದ್ದರು.ಹಾಗಾಗಿ ಸಂಗೀತ ಕಲಾನಿದಿ ಮೈಸೂರು ವಾಸುದೇವಾಚಾರ್ಯರೇ ಇವರ ಸ್ಟುಡಿಯೋವನ್ನು ಉದ್ಘಾಟಿಸಿ ಆಶೀರ್ವದಿಸಿದ್ದರು.ಅಷ್ಟೇ ಅಲ್ಲದೆ ಮೂಡು ಬಂದಾಗ ಇವರ ಸ್ಟುಡಿಯೋದಲ್ಲೇ ಹಾಡಿಯೂ ಬಿಡುತ್ತಿದ್ದರು.ಹಾಗಾಗಿ ಯುವಕನಾಗಿದ್ದ ಸುಬ್ಬಣ್ಣಿಯವರಿಗೆ ಸ್ಟುಡಿಯೋದಲ್ಲಿ ಸುಮ್ಮನೆ ಕುಳಿತಿದ್ದಾಗ ಆ ದಾರಿಯಲ್ಲಿ ಅಕಸ್ಮಾತ್ತಾಗಿ ಮೈಸೂರು ವಾಸುದೇವಾಚಾರ್ಯರು ಬರಬಾರದೇ, ಬಂದು ಹಾಡಬಾರದೇ ಎಂಬ ಆಸೆಯಾಗುತ್ತಿತ್ತು.ಆಗ ಅಲ್ಲೇ ಹತ್ತಿರ ಯಾದವಗಿರಿಯಲ್ಲಿ ವಾಸವಿದ್ದ ಆಂಗ್ಲ ಲೇಖಕ ಆರ್.ಕೆ.ನಾರಾಯಣರು ಮೈಸೂರಿನ ಜನಸಾಮಾನ್ಯರನ್ನು ಹತ್ತಿರದಿಂದ ನೋಡಲು ದೇವರಾಜ ಮಾರುಕಟ್ಟೆಯ ಬಳಿ ಹೋಗುತ್ತಿದ್ದವರು ವಾಪಾಸು ಹೋಗುವಾಗ ಇವರಲ್ಲಿ ಬಂದು ಹರಟೆಗೆ ಕುಳಿತುಕೊಳ್ಳುತ್ತಿದ್ದರು.ಜೊತೆಗೆ ಹಿರಿಯ ಛಾಯಾಚಿತ್ರಗ್ರಾಹಕ ಟಿ.ಎಸ್.ಸತ್ಯನ್ ಇರುತ್ತಿದ್ದರು. ಅವರಿಬ್ಬರು ಕೂತು ಕಂಡ ಕತೆಗಳನ್ನು ಹಂಚಿಕೊಳ್ಳುತ್ತಿರುವಾಗ ಸುಬ್ಬಣ್ಣಿಯವರೂ ಅವುಗಳನ್ನು ಕೇಳಿಸಿಕೊಳ್ಳುತ್ತಿದ್ದರು.ಜೊತೆಗೆ ತಾವು ಹತ್ತಿರದಿಂದ ಕೇಳಿದ ರೈತಾಪಿ ಜನರ ಕಥೆಗಳನ್ನು ಅವರಿಬ್ಬರಲ್ಲಿ ಹಂಚಿಕೊಳ್ಳುತ್ತಿದ್ದರು.
ಹಾಗಾಗಿ ಕಥೆ ಯಾವುದು ಮತ್ತು ನಿಜ ಯಾವುದು.ಕಥೆಯೊಂದು ಹೊರಬಂದಾಗ ಅದರಲ್ಲಿ ನಿಜದ ರಕ್ತ ಎಷ್ಟಿರುತ್ತದೆ ಮತ್ತು ಕಲ್ಪನೆಯ ಬಣ್ಣ ಎಷ್ಟಿರುತ್ತದೆ ಎಂಬುದು ಸುಬ್ಬಣ್ಣಿಯವರಿಗೆ ನಿಖರವಾಗಿ ಗೊತ್ತಿತ್ತು.
ಕಥೆಗಾರರು ಹಾಗೆ ಮಾಡುವುದು ಬಹುಶಃ ಸರಿ ಎಂಬುದಾಗಿ ಅವರು ಇದೀಗ ಸ್ವಲ್ಪ ಮೊದಲು ತಮ್ಮ ರೂಪಾಂತರಿಸಿದ ಡಾರ್ಕ್ ರೂಮಿನಲ್ಲಿ ಕುಳಿತಿದ್ದಾಗ ಹೇಳಿದರು.
ಕಥೆಯನ್ನು ಇದ್ದ ಹಾಗೆಯೇ ಬರೆದರೆ ಅದು ನಿರ್ಜೀವವಾಗಿರುವುದಿಲ್ಲವೇ.. ಹಾಗೆಯೇ ನಾವು ಫೋಟೋಗ್ರಾಫರುಗಳೂ ಕೂಡಾ ಟಚ್ ಅಪ್ ಮಾಡುವುದಿಲ್ಲವೇ ಎಂದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಡೆದ ನಿಜ ಘಟನೆಯೊಂದನ್ನು ಹೇಳಿದರು.

DSC_8932ನಂಜನಗೂಡಿನ ಕಡೆಯ ರೈತನೊಬ್ಬನ ತಾಯಿ ವಯಸ್ಸಾಗಿ ತೀರಿಹೋದರಂತೆ.
ತಾಯಿ ತೀರಿಹೋದ ಮೇಲೆ ಮಗನಿಗೆ ತಾಯಿಯ ನೆನಪನ್ನು ಶಾಶ್ವತವಾಗಿ ಇಟ್ಟುಕೊಳ್ಳುವ ಆಸೆ.
ಹಾಗಾಗಿ ತಾಯಿಯ ಶವಸಂಸ್ಕಾರದಲ್ಲಿ ಯಾರೋ ತೆಗೆದ ಸಣ್ಣ ಫೋಟೋ ಒಂದನ್ನುತೆಗೆದುಕೊಂಡು ಬಂದು ‘ಸುಬ್ಬಣ್ಣಿಯವರೇ ಇದು ನನ್ನ ತಾಯಿ.ಆದರೆ ಅವರು ಬದುಕಿರುವಾಗ ಅವರ ಮುಖ ಹೀಗೆ ಸತ್ತ ಹಾಗೆ ಇರಲಿಲ್ಲ.ಅವರ ಮುಖದಲ್ಲಿ ಯಾವಾಗಲೂ ಲಕ್ಷ್ಮಿಯ ಹಾಗೆ ಇರುವ ನಗುವಿತ್ತು.ದೊಡ್ಡ ಮೂಗು ಬೊಟ್ಟಿತ್ತು.ಚಿನ್ನದ ಬೆಂಡಿನ ಸರ ಇತ್ತು. ನಮ್ಮ ಅವ್ವ ತುಂಬ ಚೆನ್ನಾಗಿದ್ದಳು.ಈ ಫೋಟೋವನ್ನು ದೊಡ್ಡದು ಮಾಡಿಕೊಡಿ.ಆದರೆ ಮುಖ ಸತ್ತ ಹಾಗೆ ಇರಬಾರದು.ಲಕ್ಷ್ಮಿಯ ಹಾಗಿರಬೇಕು’ ಎಂದು ದುಂಬಾಲು ಬಿದ್ದನಂತೆ.
ಸುಬ್ಬಣಿಯವರು ‘ಹಾಗೆಲ್ಲಾ ಮಾಡಲು ನಾನೇನು ದೇವರಾ ಆಗುವುದಿಲ್ಲ ಹೋಗು’ ಎಂದು ಆಚೆ ಕಳಿಸಿದರಂತೆ.
ಆದರೆ ಆ ರೈತ ಅಳುತ್ತಾ ಕಾಲಿಗೆ ಬಿದ್ದನಂತೆ.
ಇನ್ನೇನು ಮಾಡುವುದು ಎಂದು ಸುಬ್ಬಣ್ಣಿಯವರು ಹಗಲೂ ರಾತ್ರಿ ಡಾರ್ಕ್ ರೂಮಿನಲ್ಲಿ ಕುಳಿತು ಆ ರೈತನ ತಾಯಿಯ ಫೋಟೋವನ್ನು ಮರುಸೃಷ್ಠಿಸಿದರಂತೆ.
ಅದು ಹೇಗೆ ಅಂದರೆ ತೀರಿಹೋದ ತಮ್ಮದೇ ತಾಯಿಯ ಮುಖದಲ್ಲಿದ್ದ ಫೋಟೋದ ನೆಗೆಟಿವ್ ನಲ್ಲಿದ್ದ ನಗುವನ್ನೂ, ದೊಡ್ಡ ಮೂಗಿನ ಬೊಟ್ಟನ್ನೂ,ಚಿನ್ನದ ಬೆಂಡಿನ ಸರವನ್ನೂ ರೈತನ ತಾಯಿಯ ಫೋಟೋದ ಮೇಲೆ ಡಾರ್ಕ್ ರೂಮಿನಲ್ಲಿ ಹಾಯಿಸಿ ಹಾಯಿಸಿ ಹತ್ತಾರು ಪ್ರಿಂಟುಗಳನ್ನು ತೆಗೆದು ಕೊನೆಗೆ ಈಗ ಇದು ರೈತನ ತಾಯಿಯೇ ಆಗಿದೆ ಅನಿಸಿದಾಗ ನಿಲ್ಲಿಸಿದರಂತೆ.
ಆ ರೈತನೂ ಕೊನೆಯ ಆ ಪ್ರಿಂಟನ್ನು ಎತ್ತಿಕೊಂಡು ಕಣ್ಣಿಗೊತ್ತಿಕೊಂಡು ನನ್ನ ತಾಯಿ ಹೀಗೇ ಲಕ್ಷ್ಮಿಯ ಹಾಗೇ ಇದ್ದಳು ಎಂದು ಸಂಭ್ರಮಿಸಿ ಕಣ್ಣೀರು ಹಾಕಿದನಂತೆ.DSC_8951

ಕಥೆ ಹೇಳಿದ ಸುಬ್ಬಣ್ಣಿಯವರು ಕಥೆ ಕೊನೆಯಾಗುವಾಗ ತಾವೂ ಕಣ್ಣು ತುಂಬಿಕೊಂಡಿದ್ದರು.
ಕಥೆಗಾರರಾದರೂ ಫೋಟೋಗ್ರಾಫರಾದರೂ ನಮ್ಮ ಎಲ್ಲರ ಕಥೆಯೂ ಹೀಗೇ ಅಲ್ಲವೇ.ಹೇಳಲು ಹೋದರೆ ನನ್ನದೂ ಇಂತಹದೇ ಇನ್ನೊಂದು ಕಥೆ. ಮುಂದೆ ಯಾವತ್ತಾದರೂ ಹೇಳುವೆ’ ಎಂದು ಭಾರವಾದ ಹಸ್ತಲಾಘವ ಇತ್ತು ಬೀಳ್ಕೊಟ್ಟರು.

27 July 2014

Photos By the author

Advertisements

ಖ್ಯಾತ ಸಹಾಯಕ ನಿರ್ದೇಶಕರ ಕಥೆ

904209_10151883979658246_454476290_oಸಾಕಷ್ಟು ಹೆಸರುವಾಸಿಯಾಗಿರುವ ಸಹಾಯಕ ನಿರ್ದೇಶಕರೊಬ್ಬರು ಬೆಳಬೆಳಗೆಯೇ ಫೋನು ಮಾಡಿದ್ದರು.

ಈ ಸಹಾಯಕ ನಿರ್ದೇಶನ ಎಂಬುದು ಅವರ ಬೃಹತ್ ಜೀವನ ಗಾಥೆಯ ಹತ್ತನೆಯದೋ ಹನ್ನೊಂದನೆಯದೋ ಅವತಾರ ಇರಬೇಕು.

ಇದಕ್ಕೂ ಮೊದಲು ಅವರು ಕವಿಯಾಗಿ, ನಟರಾಗಿ, ಬಾತ್ಮೀದಾರರಾಗಿ, ಸಂಸಾರಸ್ತರಾಗಿ,ಕೆಲವು ಕಾಲ ಯೋಗಿಯಾಗಿ ಹಲವು ಅವತಾರಗಳನ್ನು ತಳೆದಿದ್ದರು.

ಎಲ್ಲದರಲ್ಲೂ ತಮ್ಮ ವಿಶಿಷ್ಟ ಚಾಪನ್ನು ಮೂಡಿಸುವ ಹಠ ಅವರದ್ದು.ಹಾಗಾಗಿ ಅವರಿಂದ ಕೆಲಸ ತೆಗೆಯಬೇಕಾದ ಯಜಮಾನರುಗಳು ಅವರ ಬಗ್ಗೆ ಅಸಹನೆಯೋ ಅಥವಾ ಅಸೂಯೆಯೋ ಏನೋ ಒಂದನ್ನು ಬೆಳೆಸಿಕೊಂಡು ಅವರನ್ನು ಮನೆಗೆ ಕಳಿಸುತ್ತಿದ್ದರು.

ಹಾಗೆ ಕಳಿಸಿದಾಗಲೆಲ್ಲ ಅವರ ಹೊಸ ಅವತಾರವೊಂದು ರೆಡಿಯಾಗುತ್ತಿತ್ತು,ಹೀಗೆ ಹಲವು ಹತ್ತು ಅವತಾರಗಳನ್ನು ಎತ್ತಿದ್ದ ಅವರು ಈಗ ತಮ್ಮ ಹನ್ನೊಂದನೇ ಅವತಾರವನ್ನು ಮೈಮೇಲೆ ಬರಿಸಿಕೊಂಡು ಬೆಳಬೆಳಗೆಯೇ ಫೋನು ಮಾಡಿದ್ದರು.

ಅವರನ್ನು ನಾನು ತಮಾಷೆಯಾಗಿ ‘ಗುರೂ’ ಎಂದು ಕರೆದರೆ ಅವರು ಆ ತಮಾಷೆಯನ್ನೇ ಗಂಭೀರವಾಗಿ ತೆಗೆದುಕೊಂಡು ನನ್ನನ್ನು ಶಿಷ್ಯ ಎಂತಲೇ ತಿಳಿದುಕೊಂಡಿದ್ದರು.

‘ ಗುರುಗಳೇ ಇದೇನು ಬೆಳಗೆ ಬೆಳಗೆ.ಬೇಗ ಬೇಗ ಅರುಹಿ’ಅಂದೆ.

ಅದಕ್ಕೆ ಅವರು ‘ಮೂಳೆ ಮತ್ತು ಚಕ್ಕಳ ಮಾತ್ರ ಕಾಣಿಸುತ್ತಿರುವ, ನೀಳವಾಗಿ ಕೃಶವಾಗಿರುವ, ಮುಖದಲ್ಲಿ ಕ್ಷಯರೋಗದ ಲಕ್ಷಣವಿರುವ ನಾಲ್ಕೈದಾರು ಮಂದಿ ಗಂಡಸರು ಚಿತ್ರೀಕರಣಕ್ಕಾಗಿ ಬೇಕಾಗಿದ್ದಾರೆ.ಒಂದು ಗ್ರೂಪ್ ಶಾಟ್.ಅಭಿನಯಿಸಬೇಕಾಗಿಲ್ಲ.ಗುಂಪಿನಲ್ಲಿ ಬಂದು ಹೋದರೆ ಸಾಕು,ಗೊತ್ತಿದ್ದರೆ ರೈಲು ಹತ್ತಿಸಿ ಕಳಿಸಿ.ಸ್ಥಳದಲ್ಲೇ ಸಂಬಳ.ಊಟ ಮತ್ತು ವಸತಿಯೂ ಇದೆ.ದಯವಿಟ್ಟು ಇದ್ದರೆ ತಿಳಿಸಿ.ನಾನು ಸಿಕ್ಕಾಪಟ್ಟೆ ಟೆನ್ಸನ್ ನಲ್ಲಿರುವೆ’ ಅಂದರು.

ನನಗೆ ಗೊತ್ತಿರುವ ಗೆಳೆಯರಲ್ಲಿ ಅವರು ಹೇಳಿದ ಲಕ್ಷಣಗಳು ಇರುವವರು ಯಾರಿರುವರು ಎಂದು ಯೋಚಿಸಿದೆ.ಯಾರೂ ಕಾಣಲಿಲ್ಲ

1402136_10151883979908246_1067453178_o‘ಗುರುಗಳೇ ಒಂದು ಕಾಲದಲ್ಲಿ ನಿಮ್ಮನ್ನೂ ಸೇರಿಸಿದಂತೆ ನಾವೆಲ್ಲರೂ ಹಾಗೇ ಇದ್ದೆವು.ಆದರೆ ಈಗ ಸುಖವಾಗಿ ತಿಂದುಂಡು ನಾವೆಲ್ಲರೂ ಖಳನಾಯಕರ ಪಾತ್ರಕ್ಕೆ ಮಾತ್ರ ಲಾಯಖ್ಖಾಗಿರುವ ದುರಂತಕ್ಕೆ ತಲುಪಿರುವೆವು.ಏನು ಮಾಡುವುದು’ ಎಂದೆ.

‘ಹಾಗಾದರೆ ಇನ್ನೊಂದು ಸಹಾಯ ಮಾಡಬಹುದಾ.ಅದೇ ಚಿತ್ರಕ್ಕೆ ಒಂದಿಷ್ಟು ಯುರೋಪಿಯನ್ ಮುಖಗಳೂ ಬೇಕು.ಅದೂ ಗುಂಪಲ್ಲಿ ಬಂದು ಹೋಗುವ ಮುಖಗಳು.ಆದರೆ ಯುರೋಪಿಯನ್ನರಿಗಾದರೆ ಸಣ್ಣ ಸಣ್ಣ ಸೀನಿಗೂ ಸಾಕಷ್ಟು ದುಡ್ಡು ಚೆಲ್ಲಬೇಕು.ಅದಕ್ಕೆ ನಾನೊಂದು ಐಡಿಯಾ ಮಾಡಿರುವೆ.ನಿಮ್ಮ ಕಡೆಯ ಸಾಬರ ಮುಖಗಳೂ ಹೆಚ್ಚು ಕಡಿಮೆ ಯುರೋಪಿಯನ್ನರ ಹಾಗೇ ಇದೆಯಲ್ಲಾ.ಇರದಿದ್ದರೂ ಪರವಾಗಿಲ್ಲ.ಕೊಂಚ ಬಣ್ಣ ಹಚ್ಚಿದರೆ ಸಾಕು.ಹಾಗೇ ಕಾಣುತ್ತಾರೆ.ಅವರನ್ನಾದರೂ ರೈಲು ಹತ್ತಿಸಿ ಕಳಿಸುತ್ತೀರಾ’ ಎಂದು ಕೇಳಿದರು.

ಆಗ ನನಗೆ ಅನುಮಾನಗಳು ಶುರುವಾದವು.

ಇವರು ಸಿನೆಮಾಗಳಿಗೆ ಎಕ್ಸ್ ಟ್ರಾಗಳನ್ನು ಪೂರೈಸುವ ಬೇರೆ ಯಾರಿಗೋ ಕರೆ ಮಾಡಬೇಕಿದ್ದವರು ತಪ್ಪಾಗಿ ನನಗೆ ಮಾಡಿದ್ದಾರೆ,

ಇಷ್ಟು ಹೊತ್ತು ಮಾತಾಡಿದರೂ ಆ ತಪ್ಪು ಗೊತ್ತಾಗದೆ ಅದೇ ಮಾತನ್ನು ಮುಂದುವರಿಸುತ್ತಿದ್ದಾರೆ.

ಆದರೆ ಅವರ ತಪ್ಪನ್ನು ಅವರ ಗಮನಕ್ಕೆ ತಂದರೆ ಅವರು ಬೆಳಬೆಳಗೆಯೇ ಖಿನ್ನತೆಗೆ ಒಳಗಾಗಿ ತಮ್ಮ ಹನ್ನೊಂದನೆಯ ಅವತಾರದಿಂದಲೂ ಹೊರಹಾಕಲ್ಪಡುವ ಎಲ್ಲಾ ಸಂಭವಗಳಿವೆ.

ಹಾಗೆ ನೋಡಿದರೆ ಅವರೂ ನಾನೂ ಇವರೂ ಎಲ್ಲರೂ ಹೀಗೆಯೇ ಜೀವನವೆಂಬ ಗ್ರೂಪ್ ಶಾಟ್ ನಲ್ಲಿ ಮುಖ ತೋರಿಸಿ ಹೋಗಲೆಂದೇ ಜನ್ಮ ತಳೆದವರಲ್ಲವೇ.

ಪರವಾಗಿಲ್ಲ.ಕವಿಯಾದರೇನು, ಕಥೆಗಾರನಾದರೇನು, ಬಾತ್ಮೀದಾರನಾದರೇನು ನಾವೆಲ್ಲರೂ ಅಲ್ಲದ ಜನರನ್ನೆಲ್ಲ ಅದೇ ಎಂದು ತೋರಿಸಿ ಹೊಟ್ಟೆಪಾಡಿಗಾಗಿ ಬದುಕುತ್ತಿಲ್ಲವೇ.

ಇವರು ಹಾಗೆ ಮಾಡುವುದರಲ್ಲಿ ತಪ್ಪೇನಿದೆ.

ಜೀವನವೆಂದರೆ ತಪ್ಪಾಗಿ ತಿಳಕೊಂಡವರ ಜೊತೆ ಹೊಂದಿಕೊಂಡು ಬಾಳುವುದೇ ಅಲ್ಲವೇ ಎಂದುಕೊಂಡು ಅವರ ಜೊತೆ ದೊಡ್ಡ ದೊಡ್ಡ ನಾಯಕರ ಬಗ್ಗೆ, ಚಂದ ಚಂದದ ನಾಯಕಿಯರ ಬಗ್ಗೆ ಹರಟಿದೆ.

1483544_10151883980033246_1978426725_o‘ಗುರುಗಳೇ ನಿಮ್ಮ ಕಾಲು ಹಿಡಿಯುತ್ತೇನೆ.ಐಶ್ವರ್ಯಾ ರೈ ಅಥವಾ ವಿದ್ಯಾಬಾಲನ್ ಈ ಇಬ್ಬರಲ್ಲಿ ಯಾರಾದರೂ ಒಬ್ಬರು ನಿಮ್ಮ ಚಿತ್ರದಲ್ಲಿ ಕಾಣಿಸಿಕೊಳ್ಳುವುದಾದರೆ ದಯವಿಟ್ಟು ಹತ್ತಿರದಿಂದ ಶೂಟಿಂಗ್ ನೋಡಲಿಕ್ಕಾದರೂ ನನ್ನನ್ನು ಬಿಡುತ್ತೀರಾ? ಹಾಗೆ ಬಿಡುವುದಾದಲ್ಲಿ ನಿಮಗೆ ಲೋಡುಗಟ್ಟಲೆ ಕ್ಷಯರೋಗಿಗಳ ಹಾಗೆ ಕಾಣುವವರನ್ನೂ ಯುರೋಪಿಯನ್ನರ ಹಾಗೆ ಕಾಣಿಸುವ ಸಾಬರನ್ನೂ ರೈಲು ಹತ್ತಿಸಿ ಕಳಿಸುತ್ತೇನೆ.ಸಹಾಯಕ ನಿರ್ದೇಶಕರಾದ ನಿಮ್ಮ ಗುಲಾಮನಾಗಲೂ ನಾನು ರೆಡಿ’ ಅಂದೆ.

ಆಗ ಅವರಿಗೆ ಅನುಮಾನ ಬರಲು ಶುರುವಾಯಿತು.‘ನನ್ನೊಡನೆ ಮಾತಾಡುತ್ತಿರುವ ನೀನು ಯಾರು ಎಂದು ಹೇಳು’ ಎಂದು ಗುಡುಗಿದರು.

‘ಗುರುಗಳೇ ನೀವು ಯಾರೊಡನೆ ಮಾತಾಡುತ್ತಿದ್ದೀರೋ ನಾನೇ ಅವನು’ ಅಂದೆ.

1462634_10151883980653246_1321526223_o‘ಅಯ್ಯಾ ದಯವಿಟ್ಟು ನೀವು ಯಾರು ಎಂದು ಹೇಳಿ’ಎಂದು ಬೇಡಿಕೊಂಡರು.

‘ಯಾರಾದರೂ ಅದರಲ್ಲೇನಿದೆ ಗುರುಗಳೇ ನಾಳೆ ಬೆಳಗ್ಗೆ ನಿಮ್ಮ ಶೂಟಿಂಗ್ ಜಾಗಕ್ಕೆ ಗುಂಪಿನಲ್ಲಿ ಮುಖ ತೋರಿಸಲು ಬೇಕಾದ ಒಂದು ಲಾರಿ ಲೋಡಿನಷ್ಟು ಜನ ಬಂದರೆ ಸಾಕಲ್ಲವೇ’ಎಂದು ನಾನೇ ಫೋನ್ ಇಟ್ಟೆ.

(July 8 2012)

ಕಡಲು, ಕನ್ನಡ ಮತ್ತು ಮುಳುಗುತ್ತಿರುವ ಹಡಗು

ಹಲವು ವರುಷಗಳ ಮೊದಲು ಒಂದು ಸಂಕ್ರಾಂತಿಯ ಮಾರನೇ ದಿನ ವಿಮರ್ಶಕ ಪ್ರೊಫೆಸರ್ ಕಿ.ರಂ.ನಾಗರಾಜರನ್ನ ಬೈಕಿನಲ್ಲಿ ಕೂರಿಸಿಕೋಂಡು ಮಂಗಳೂರಿನ ಬೆನ್ನ ಹಿಂದೆ ಇರುವ ಒಂದು ಅಪರೂಪದ ಜಾಗಕ್ಕೆ ಕರೆದುಕೊಂಡು ಹೋಗಿದ್ದೆ. ಈ ಜಾಗ ತುಂಬಾ ಅಪರೂಪ.ಯಾಕೆಂದರೆ ಈ ಜಾಗ ಕೆಲವೇ ಕೆಲವರಿಗೆ ಗೊತ್ತಿದೆ ಮತ್ತು ಇಲ್ಲಿ ಎರಡು ದೊಡ್ಡ ನದಿಗಳು ಕಡಲನ್ನು ಸೇರುತ್ತದೆ.ಇಲ್ಲಿ ನಿಂತರೆ ಯಾವುದು ಯಾವ ನದಿ ಮತ್ತು ಯಾವುದು ಕಡಲು ಎಂದು ಗೊತ್ತಾಗುವುದಿಲ್ಲ. ಮುಳುಗುತ್ತಿರುವ ಸೂರ್ಯ ಇದೇ ಹೊತ್ತಲ್ಲಿ ಎಲ್ಲಿ ಉದಯಿಸುತ್ತಿರುವ ಎಂದು ಗೊತ್ತಾಗುತ್ತಿದೆ ಎಂದು ಅನಿಸುತ್ತದೆ. ಯಾವುದೋ ಒಂದು ದೇಶ, ಯಾವುದೋ ಒಂದು ಕಾಲ ಕಣ್ಣ ಮುಂದೆ ಕಾಣುತ್ತದೆ. ಕಣ್ಣು ಮುಚ್ಚಿದರೆ ಮುಚ್ಚಿದ ಕಣ್ಣೊಳಗೆ ಹಸಿರು ತೇಪೆಗಳು ಸರಿದಾಡುತ್ತವೆ. ಮೀನುಗಾರರ ದೋಣಿಗಳು ಮತ್ತು ಕಡಲ ಹಕ್ಕಿಗಳು ಅಲೆದಾಡುತ್ತಿರುವ ಆತ್ಮಗಳಂತೆ ಓಡಾಡುತ್ತಿರುತ್ತವೆ.kiram.jpg

ಇಲ್ಲಿ ಕೂತುಕೊಂಡು ಕನ್ನಡದ ಖ್ಯಾತ ವಿಮರ್ಶಕರಾದ ಪ್ರೊಫೆಸರ್ ಕಿ.ರಂ.ನಾಗರಾಜ್  ಪುಟ್ಟ ಬಾಲಕನಂತೆ ಮಳೆಗಾಲದಲ್ಲಿ ಈ ಕಡಲು ಹೇಗಿರುತ್ತದೆ ಎಂದು ಕೇಳುತ್ತಿದ್ದರು. ನಾನು ಮಹಾ ಮಳೆಗಾಲದಲ್ಲಿ ಕಡಲನ್ನು ನೋಡಿದವನಂತೆ ಭೂಮಿ ಆಕಾಶ ಕಡಲು ಎಲ್ಲಾ ಒಂದೇ ಆಗಿಬಿಟ್ಟಿರುತ್ತದೆ. ಎಲ್ಲವೂ ಮಂಜು ಮುಸುಕಿದಂತೆ… ಎಂದು ಹೇಳುತ್ತಿದ್ದೆ.

ಆ ಮೇಲೆ ಈ ಜಾಗಕ್ಕೆ ಬೆಳದಿಂಗಳ ರಾತ್ರಿಯಲ್ಲಿ ಬರಬೇಕು  ಎಂದು ವಿಷಯ ಬದಲಿಸಿದೆ.

ತಿರುಗಿ ಬರುವಾಗ ಅವರಿಗೆ ಒಂದು ಮುಳುಗಿದ ಹಡಗನ್ನು ತೋರಿಸಿದೆ ಮತ್ತು ಮಹಮ್ಮದ್ ಆಲಿ ಎಂಬ ಸಾಹಸಿ ಈಜುಗಾರನ ಕತೆ ಹೇಳಿದೆ. ಈ ಮುಳುಗಿದ ಹಡಗು ಅಲ್ಲಿ ಮುಳುಗಿ ಆಗಲೇ ಆರೇಳು ವರ್ಷಗಳಾಗಿತ್ತು. ಇಲ್ಲಿ ಮುಳುಗುವ ಮೊದಲು ಇದು ಹಾಂಕಾಗಿನ ಒಬ್ಬ ಚೀನೀ ವರ್ತಕನಿಗೆ ಸೇರಿತ್ತು. ಅದು ಎಲ್ಲೋ ಸಾಗರದ ನಡುವಲ್ಲಿ ಇನ್ನೊಂದು ಹಡಗಿಗೆ ಡಿಕ್ಕಿ ಹೊಡೆದು ಹಾಳಾಗಿ ಅದನ್ನು ಒಡೆದು ತೂಕಕ್ಕೆ ಕಬ್ಬಿಣವನ್ನಾಗಿ ಮಾರಲು ಈ ಕಡಲ ತಡಿಗೆ ತಂದಿದ್ದರು. ದಡದ ಹತ್ತಿರ ಬಂದಂತೆ ಅದು ಕಡಲ ಕೊರೆತಕ್ಕೆ ಸಿಲುಕಿ ಮರಳಿನೊಳಗೆ ಹೂತು ಹೋಗಲು ತೊಡಗಿ ನಾನು ಅದನ್ನು ಕಿ.ರಂ ಗೆ ತೋರಿಸುವಾಗ ಅದರ ಚಾವಣಿ ಮಾತ್ರ ಕಾಣುತ್ತಿತ್ತು. Continue reading “ಕಡಲು, ಕನ್ನಡ ಮತ್ತು ಮುಳುಗುತ್ತಿರುವ ಹಡಗು”

ರೂಮಿಯ ಸಹವಾಸ

  ಒಬ್ಬ ಸಾಧಾರಣ ಮತ ಪಂಡಿತ. ಇನ್ನೊಬ್ಬ ಅಲೆಮಾರೀ ದರ್ವೇಶಿ. ಒಬ್ಬ ದರ್ಮಗ್ರಂಥಗಳನ್ನು ಅರೆದು ಕುಡಿದವನು.ಇನ್ನೊಬ್ಬ ಕಾಡು ಮೇಡು ಗುಹೆ ಹೆಂಡದ ಪಡಶಾಲೆ ಇಲ್ಲೆಲ್ಲ ಅಲೆದಾಡಿ ಪಡೆದವನನ್ನು ಹುಡುಕುವ ದಾರಿಯಲ್ಲಿ ನನಗೆ ಸಾಂಗತ್ಯ ನೀಡುವವನೊಬ್ಬ ಬೇಕೆಂದು ಕಂಡಕಂಡಲ್ಲಿ ಅರಲುವವನು.sufi.jpg

 `ಸಂಗಾತಿ ದೊರಕಿದರೆ ಏನು ನೀಡುತ್ತೀ?’
 `ನನ್ನ ಶಿರವನ್ನು’
 `ಹಾಗಾದರೆ ನಿನಗೆ ಸಾಂಗತ್ಯ ಬೇಕಾಗಿರುವುದು ಜಲಾಲುದ್ದೀನ್ ರೂಮಿಯದ್ದು’ 

ಹೀಗೆ ಅಫಘಾನಿಸ್ತಾನದ ತಬ್ರೀಜ ಎಂಬಲ್ಲಿನ ಶಂಷ್ ಎಂಬ ಸಂತ ಜಲಾಲುದ್ದೀನ್ ರೂಮಿ ಎಂಬವನನ್ನು ಆತ್ಮಸಾಂಗತ್ಯಕ್ಕಾಗಿ ಸುಮಾರು ಏಳುನೂರ ಐವತ್ತು ವರ್ಷಗಳ ಹಿಂದೆ ಒಂದು ಸಂಜೆ ಭೇಟಿಯಾದ ಅಂತ ಕತೆ ಹೇಳುತ್ತದೆ.

ಆಮೇಲೆ ಅವರಿಬ್ಬರು ಇಹಲೋಕದ ಪರಿವೆಯಿಲ್ಲದೆ ಪರಮಾತ್ಮನ ಕುರಿತು ಮಾತಿನಲ್ಲಿ ಮುಳುಗಿದ್ದು,ಲೋಕ ಏನನ್ನುತ್ತದೆ ಎಂಬ ಗೋಚರವಿಲ್ಲದೆಯೆ ಆತ್ಮಸಾಂಗತ್ಯದಲ್ಲಿಲೀನವಾಗಿದ್ದು,ಇವರಿಬ್ಬರ ಗೆಳೆತನ ಸಹಿಸಲಾಗದೆ ಊರವರು ಆಡಿಕೊಳ್ಳತೊಡಗಿದ್ದು, ಕೊನೆಗೆ ಶಂಷ್ ಗೆಳೆಯನ ಒಳಿತಿಗೆ ಬೇಕಾಗಿ ಅವನನ್ನು ತ್ಯಜಿಸಿ ದೂರವಾಗಿದ್ದು, ಗೆಳೆಯನ ಅಗಲಿಕೆ ಸಹಿಸಲಾಗದೆ ರೂಮಿ ಕವಿತೆಗಳನ್ನು ಬರೆಯಲು ಶುರು ಮಾಡಿದ್ದು,ಗೆಳೆಯನ ಅಗಲಿಕೆಯ ಕುರಿತ ಈ ಕವಿತೆಗಳೇ ಪರಮಾತ್ಮನ ಹುಡುಕುವ ಪರಮಶ್ರೇಷ್ಟ ಸೂಫಿ ಕಾವ್ಯವಾಗಿದ್ದು -ಇದೆಲ್ಲ ರೂಮಿಯ ಕುರಿತ ಕತೆಗಳನ್ನು ಕೇಳಿದರೆ ತಿಳಿಯುತ್ತದೆ. Continue reading “ರೂಮಿಯ ಸಹವಾಸ”

ಮೈಸೂರಿನ ಮುದುಕನ ಬೆರಳ ಪರಿಮಳ

sabir_small.jpg

 ಎಷ್ಟೇ ಕೀಟಲೆ ಮಾಡಬಾರದೆಂದಿಟ್ಟುಕೊಂಡರೂ ಹಾಗೆ ಮಾಡಲಾಗದಿರುವುದೇ ಇಲ್ಲ  ಎಲ್ಲ ಕೀಟಲೆ ಮುಗಿಸಿ ಇನ್ನು ಗಂಭೀರವಾಗಿರಬೇಕೆಂದುಕೊಂಡರೆ ಆತ ಫೋನ್ ಮಾಡಿ ‘ಎಲ್ಲಿದ್ದೀಯಾ?’ ಎಂದು ಕೇಳುತ್ತಾನೆ.

 ‘ಇಲ್ಲೇ ಕಣೋ ಮುಂಬೈನಲ್ಲಿ’ ಎಂದು   ಸುಳ್ಳು ಹೇಳಿ ಆತನಿಗೆ ಫೋನ್ ನಲ್ಲಿ ಮೈಸೂರು ನಗರದ ನಾನಾ ಸದ್ದುಗಳನ್ನು ಕೇಳಿಸುತ್ತೇನೆ.ಆತ ಇದು ಮುಂಬೈ ಎಂದೇ ತಿಳಿದು ಸಖ ತ್ ಸಂಕಟ ಪಟ್ಟುಕೊಳ್ಳುತ್ತಾನೆ. ‘ನೀನು ಬಿಡು ಮಾರಾಯ ಸಖತ್ ಸುತ್ತುತ್ತೀಯಾ .ನಾನಾದರೋ ನೋಡು ಪಾಠ ಮುಗಿಸಿ ಪರೀಕ್ಷೆ ಮುಗಿಸಿ ಈಗ ಮೌಲ್ಯಮಾಪನ ಮುಗಿಸಿ ಟ್ಯಾಬುಲೇಷನ್ ನಡೆಸುತ್ತಾ ಇರುವೆ . ಇನ್ನು ಬರುವ ವಾರ ಗೃಹ ಪ್ರವೇಶ. ಮನೆಗೆ ಬಾಗಿಲೇ ಆಗಿಲ್ಲ . ಮರ ತರಲಿಕ್ಕೆ ತೀರ್ಥಹಳ್ಳಿಗೆ ಹೋಗಬೇಕು.ತುಂಬಾ ಹಳ್ಳಿ ಮಾದರಿಯಲ್ಲಿ ಕಟ್ಟಿಸ್ತಾ ಇದೀನಿ ಕಣೋ.ನೀನು ಬರಬೇಕು’ ಅನ್ನುತ್ತಾನೆ.

 ‘ಇಲ್ಲ ಮಾರಾಯ ಇಲ್ಲಿ ಮುಂಬೈನಲ್ಲಿ ಇನ್ನು ಏಳು ದಿನ ಸುತ್ತಲಿಕ್ಕಿದೆ.ಆಮೇಲೆ ಹಡಗಿನಲ್ಲಿ ಕುಳಿತು ಗೋವಾಕ್ಕೆ ಬಂದು ನಂತರ ಕೊಂಕಣ ರೈಲಿನಲ್ಲಿ ಮಂಗಳೂರು. ಅಲ್ಲಿ ಫ್ರೆಂಡ್ ಮನೆಯಲ್ಲಿದ್ದು ಆನಂತರ ಮೈಸೂರು’ಎಂದು ಆತನನ್ನು ಇನ್ನಷ್ಟು ಮೈ ಉರಿಸಿ ಮೈಸೂರಿನ ಬೀದಿಗಳನ್ನು ಹೊಕ್ಕು ಬಿಡುತ್ತೇನೆ. ನಿಜಕ್ಕೂ ನಾನೆಲ್ಲಿದ್ದೇನೆ ಎಂದು ನನಗೇ ಗೊತ್ತಾಗುವುದಿಲ್ಲ.

 ಮೊನ್ನೆ ಒಂದು ಇರುಳು ಹೆಂಡತಿ ಮಕ್ಕಳನ್ನು ಮದುವೆ ಮನೆಗೆ ಬಿಟ್ಟು ಮದುವೆ ಮುಗಿಯುವವರೆಗೆ ಏನು ಮಾಡುವುದು ಎಂದು ಗೊತ್ತಾಗದೆ ಮೈಸೂರಿನ ಗಾಂಧಿ ಚೌಕದ ನನ್ನ ನೆಚ್ಚಿನ ಮೂಲೆಯಲ್ಲಿ ನಿಂತಿದ್ದೆ. Continue reading “ಮೈಸೂರಿನ ಮುದುಕನ ಬೆರಳ ಪರಿಮಳ”

ಒಂದು ಹಳೆಯ ಪತ್ರ

 

ಪ್ರಿಯ ಸಖ,
ಈ ಕಾಲಂ-ಗೀಲಂ ಎಲ್ಲ ಬಿಟ್ಟು ಸುಮ್ಮನೆ ಒಂದು ಪತ್ರ ಬರೆಯುತ್ತಾ ನಡುನಡುವೆ ನಿಂಬೂ ಟೀ ಹೀರುತ್ತಾ ಆಷಾಡದ ಈ ಜಡಿಮಳೆಯಲ್ಲೂ ಬೆವರುತ್ತಾ ಈ ನಡುವೆ ನಡೆದ ಸುಖ-ಸಂತೋಷಗಳನ್ನು ನೆನೆಸಿಕೊಳ್ಳುವುದು ಎಷ್ಟೊಂದು ಆಹ್ಲಾದದ ಕೆಲಸ ಗೊತ್ತಾ!kaadu-maavina-marada-getu.jpgಯಾಕೋ  ಈಗ ಯಾರಾದರು ಏನಾದರು ಬರೆಯಲು ಹೇಳಿದರೆ ಕೊಲ್ಲಲು ಕರೆದುಕೊಂಡುಹೋಗುವ ಹಾಗೆ ಅನಿಸುತ್ತದೆ.

ಸಣ್ಣದಿರುವಾಗ ಕೊಡಗಿನ ಆ ಚಳಿಯಲ್ಲಿ ಬೆಳಗ್ಗೆ ಎದ್ದು ಅರಬೀ ಮದರ್ರಸಕ್ಕೆ ಕುರಾನ್ ಕಲಿಯಲು ಹೋಗಬೇಕಿತ್ತು.ಆಗಲೂ ಹೀಗೇ ಅನಿಸುತ್ತಿತ್ತು.ಆಗಲಾದರೆ ಕೈ ಹಿಡಿದು ಕರೆದೊಯ್ಯುತ್ತಿದ್ದ ಅಕ್ಕನಿಗೆ ಏನೋ ಸುಳ್ಳು ಹೇಳಿ ತಪ್ಪಿಸಿಕೊಳ್ಳಬಹುದಿತ್ತು.ಈಗ ನಿಜ ಹೇಳಿದರೂ ಅದನ್ನು ನೀನು ಕಟ್ಟು ಕಥೆಯೆಂದು ಬಗೆದು ಬಿಡುತ್ತೀಯಾ .ಅದಕ್ಕೇ ಸುಮ್ಮನೆ ಒಂದು ಪತ್ರ ಬರೆಯುತ್ತಿದ್ದೇನೆ.  ನಾನು ಕಳೆದ ಹತ್ತು ಹದಿನೈದು ದಿನ ನನ್ನ ಪುಟ್ಟ ಮಗಳ ಜೊತೆ ಕೊಡಗಿನ ನಾಗರಹೊಳೆ ಕಾಡಿನ ಬದಿಯಲ್ಲಿ ಕಾಪಿ ತೋಟದ ನಡುವಲ್ಲಿ ಬೆಳಗೆ ಬಿಸಿಲು ಕಾಯುತ್ತಾ, ಹಗಲೆಲ್ಲ ಅವಳನ್ನು ಹೆಗಲಲ್ಲಿ ತಟ್ಟಿ ಮಲಗಿಸುತ್ತಾ,ಅವಳು ನಿದ್ದೆ ಹೋಗುವುದನ್ನು ಕಾಯುತ್ತಾ, ಅವಳು ನಿದ್ದೆಯಲ್ಲಿಏನೋ ಸುಖವನ್ನು ಉಂಡಂತೆ ನಗುವನ್ನು ಮೆಲುಕುಹಾಕುವುದನ್ನು ಕಂಡು ಕರುಬುತ್ತಾ ಕಳೆದೆ!

ಹೀಗೆ ನಮ್ಮ ಮಾಮೂಲು ಕಾಮ ಕ್ರೋಧ ಮಧ ಮತ್ಸರಗಳನ್ನು ಮರೆತು ಮಗುವೊಂದರ ಸುಖದಲ್ಲಿ ಪಾಲುಗೊಳ್ಳಬಹುದು ಎಂಬ ಕಲ್ಪನೆಯೇ ನನಗಿರಲಿಲ್ಲ.ಈಗಲೂ ಆ ಸುಖದ ಮಂಪರು ನನ್ನನ್ನು ಬಿಡುತ್ತಿಲ್ಲ. ಅದು ಯಾಕೋ ನನ್ನನ್ನು ಆಲಸಿಯನ್ನಾಗಿಸಿಬಿಟ್ಟಿದೆ.ನಿನಗೆ, ನಾವೆಲ್ಲಾ ಓದಿದ lotus eaters ಪದ್ಯ ನೆನಪಾಗುತ್ತಿದೆಯಾ?…….. Continue reading “ಒಂದು ಹಳೆಯ ಪತ್ರ”

ವಿಶ್ವನಾಥನ ಚಪ್ಪಲಿಯನ್ನು ಬಡವರು ಕದಿಯದೇ ಇದ್ದಿದ್ದರೆ

 ಇಪ್ಪತ್ತು ವರ್ಷಗಳಹಿಂದೆ ಒಂದುದಿನ ವಿಶ್ವನಾಥನ ಚಪ್ಪಲಿಯನ್ನು ಬಡವರು ಕದಿಯದೇ ಇದ್ದಿದ್ದರೆ ಬಹುಶಃ ಆತ ಈ ದಿನಗಳಲ್ಲಿ ಒಂದು ದಿನ ಪೋಲೀಸರ ಗುಂಡಿಗೆ ಬಲಿಯಾಗುತ್ತಿದ್ದ ಅನಿಸುತ್ತಿದೆ.767897.jpg ಆತನ ಅಕ್ಕ ಹಸಿಹಸಿ ರೊಮಾಂಟಿಕ್ ಕವಿತೆ ಗಳನ್ನೂ ಕಡುಬಡವರ ಕುರಿತು ಲೇಖನಗಳನ್ನೂ ಬರೆಯುತ್ತಿದ್ದವಳು ಹೆಸರು ಮೀನಾಕ್ಷಿ ಅಂತ ಇಟ್ಟುಕೊಳ್ಳಿ ಆಂದ್ರದ ಪೋಲೀಸರ ಗುಂಡಿಗೆ ಈಗಾಗಲೇ ಆಹುತಿಯಾಗಿ ವರ್ಷಗಳೇ ಕಳೆದಿವೆ. ಮೀನಾಕ್ಷಿಯನ್ನು ಮದುವೆಯಾಗಿದ್ದ  ಕಾಮ್ರೇಡ್ ಕೂಡಾ ಇತ್ತೀಚೆಗಷ್ಟೇ ಪೋಲೀಸರ ಗುಂಡಿಗೆ ಬಲಿಯಾದ.

ಆದರೆ ಅದೃಷ್ಟವಶಾತ್ ಇಪ್ಪತ್ತು ವರ್ಷಗಳ ಹಿಂದೆ ಒಂದು ದಿನ ಒಂದು ಹಾಡಿಯಲ್ಲಿ ಬಡವರು ವಿಶ್ವನಾಥನ ಹೊಸಾ ಚಪ್ಪಲಿಯನ್ನು ಕದ್ದದ್ದರಿಂದ ಆತ ಪೋಲೀಸರ ಗುಂಡಿನಿಂದ ಬಚಾವಾದ.ಅದಕ್ಕಾಗಿ ಆ ಹಾಡಿಯ ಬಡಗಿರಿಜನರಿಗೆ ನಾನು ಈ ಮೂಲಕ ಕೃತಜ್ನತೆಗಳನ್ನು ಸಲ್ಲಿಸುತ್ತಿದ್ದೇನೆ.

 ವಿಶ್ವನಾಥ ಮೈಸೂರಿನ ಸರಸ್ವತಿಪುರಂ ನಂತಹ ಮದ್ಯಮ ವರ್ಗದ ಬಹುತೇಕ ಒಳ್ಳೆಯ ಆಸೆಗಳನ್ನೇ ಇಟ್ಟುಕೊಂಡಿರುವ ಜನರಿಂದ ತುಂಬಿಕೊಂಡಿರುವ ಬಡಾವಣೆಯಂತಹ ಬಡಾವಣೆಯ ಹುಡುಗ.ಆತನ ಅಪ್ಪ ಮೈಸೂರಿನ ಸರಕಾರೀ ಮುದ್ರಣಾಲಯದಲ್ಲಿ ಅಚ್ಚು ಜೋಡಿಸುತ್ತಾ ಇದ್ದ ಮಾಮೂಲೀ  ಮನುಷ್ಯನಂತಿದ್ದ ಅಪ್ಪ. ಅಮ್ಮ ವಿಶಾಲಾಕ್ಷಮ್ಮ ಎಂಬ ಹಾಗೇ ಕೇಳಿಸುತ್ತಿದ್ದ ಹೆಸರಿನ ಹೆಂಗಸು. ಮನೆ ತುಂಬಾ ದೇವರ ಪಟಗಳನ್ನು ಇಟ್ಟುಕೊಂಡಿದ್ದರು.ಅವರು ಬಹುಷಃ ತಿರುಪತಿ ಒಕ್ಕಲು ಅಂತ ಕೇಳಿದ ನೆನಪು. ಆದರೆ ಅವರು ನೋಡಲು ತುಂಬಾ  ಮುಂದುವರಿದ ಜಾತಿಗೆ ಸೇರಿದವರು ಇದ್ದ ಹಾಗೆ ಇದ್ದರು.

 ಹಾಗೆ ನೋಡಿದರೆ ವಿಶ್ವನಾಥನಿಗೆ ಸರಸ್ವತಿಪುರಂ ಪಕ್ಕದಲ್ಲೇ ಇದ್ದ  ಕುಕ್ಕರಹಳ್ಳಿಯ ಹುಡುಗರ ಜೊತೆಗೂ ಸರಸ್ವತಿ ಪುರಂ ಒಂದನೇ ಮೈನ್ ನಲ್ಲಿದ್ದ ಮುಸ್ಲಿಂ ಹಾಸ್ಟೆಲಲ್ಲಿ ತಿಂದುಂಡು ಚೆನ್ನಾಗಿ ಬೆಳೆಯುತ್ತಿದ್ದ ನನ್ನ ಜೊತೆಗೂ ಅವಿನಾಭಾವ ಸಂಬಂಧ  ಕೂಡಿ ಬಂದಿದ್ದು ಕ್ರಾಂತಿಯ ಪಾಠ ಹೇಳಿಕೊಡುತ್ತಿದ್ದ ಕಾಮ್ರೆಡ್ ನಿಂದಾಗಿ. 

 ಒಂಟಿಕೊಪ್ಪಲಲ್ಲಿದ್ದ ನಿವೃತ್ತ ಸೇನಾದಿಕಾರಿಯೊಬ್ಬರ ಮಗನಾಗಿದ್ದ ಕಾಮ್ರೇಡ್ ಸಿಕ್ಕಾಪಟ್ಟೆ ಒಳ್ಳೆ ಮನುಷ್ಯ.ಆದರೆ ಸಶಸ್ತ್ರ  ಕ್ರಾಂತಿಯ ವಿಷಯದಲ್ಲಿ ಅಷ್ಟೇ ಕಟ್ಟುನಿಟ್ಟಿನ ಮನುಷ್ಯ.ಬಡವರ ಕಷ್ಟದ ಬಗ್ಗೆ ಆತನಿಗೆ ಸಣ್ಣದಿರುವಾಗಲೇ ಎಷ್ಟು ಕಾಳಜಿ ಇತ್ತು ಅಂದರೆ ಮನೆಕೆಲಸದವಳು ಒಗೆದು ಒಗೆದು ಸೊರಗಬಾರದು ಎಂದು ಎರಡೇ ಜೊತೆ ಬಟ್ಟೆ ಇಟ್ಟುಕೊಂಡು ತಾನೇ ಅಪ್ಪನ ಕಣ್ಣು ತಪ್ಪಿಸಿ ಒಗೆಯುತ್ತಿದ್ದ.ಅಮ್ಮನಿಗೆ ಕಷ್ಟವಾಗದಿರಲಿ ಎಂದು ಅಮ್ಮ ದೋಸೆಗೆ ಅರೆಯುತ್ತಿದ್ದರೆ ತಾನು ತರಕಾರಿ ಹಚ್ಚಿಕೊಡುತ್ತಿದ್ದ.ಇದನ್ನೆಲ್ಲ ನನಗೆ ಹೇಳಿದ್ದು ಕಾಮ್ರೇಡ್ ಗುಂಡಿಗೆ ಬಲಿಯಾಗಿ ೨೪ ಗಂಟೆ ಕಳೆದ ಮೇಲೆ ಹಳೆಯದನ್ನೆಲ್ಲ ನೆನಪು ಮಾಡಿಕೊಳ್ಳುತ್ತಿದ್ದ ಆತನ ಅಮ್ಮ.

 ಅದೆಲ್ಲ ಇರಲಿ ನಾನು ಈಗ ವಿಶ್ವನಾಥನ ವಿಷಯ ಹೇಳುತ್ತೇನೆ. Continue reading “ವಿಶ್ವನಾಥನ ಚಪ್ಪಲಿಯನ್ನು ಬಡವರು ಕದಿಯದೇ ಇದ್ದಿದ್ದರೆ”