ನೆನಪಿನ ಹಳ್ಳಿಯ ಬಾಲಕನಿಗೆ ಈಗ ಎಂಬತ್ತೊಂದು ವರ್ಷ

ಜವರಪ್ಪ ಮತ್ತು ಎಂ,ಎನ್.ಶ್ರೀನಿವಾಸ ಎಪ್ಪತ್ತು ವರ್ಷಗಳ ಹಿಂದೆ
ಜವರಪ್ಪ ಮತ್ತು ಎಂ,ಎನ್.ಶ್ರೀನಿವಾಸ ಎಪ್ಪತ್ತು ವರ್ಷಗಳ ಹಿಂದೆ

ಮೈಸೂರು ಸೀಮೆ ಮತ್ತು ಸುತ್ತಮುತ್ತಲಿನ ಹಳೆಯ ಪಳೆಯ ಪುರಾತನ ಛಾಯಾಚಿತ್ರಗಳನ್ನು  ಹುಡುಕಿಕೊಂಡು ಓಡಾಡುತ್ತಿದ್ದವನಿಗೆ  ಲೇಖಕಿ ಪದ್ಮಾ ಶ್ರೀರಾಂ ಸುಮಾರು ಎಪ್ಪತ್ತು ವರ್ಷಗಳಷ್ಟು ಹಿಂದಿನ ಕಪ್ಪು ಬಿಳುಪು   ಫೋಟೋವೊಂದನ್ನು ತಮ್ಮ ಚೀಲದೊಳಗಿಂದ ತೆಗೆದು ತೋರಿಸಿದರು. ಆಗ ತಾನೇ ಹದಿಹರೆಯಕ್ಕೆ ತಿರುಗುತ್ತಿರುವ ಬಾಲಕನೊಬ್ಬ  ಸುಮಾರು ಮೂವತ್ತರ ಆಜುಬಾಜಿನಲ್ಲಿರುವ  ತರುಣನ ಜೊತೆ ಹರಿಯುತ್ತಿರುವ ನದಿಯೊಂದರ ದಡದಲ್ಲಿ ನೀರಲ್ಲಿ ಕಾಲಿಳಿಬಿಟ್ಟುಕೊಂಡು ಕೂತಿರುವ ಫೋಟೋ. ಬಾಲಕನ ಮುಖದಲ್ಲಿ ಸಣ್ಣಗಿನ ಗೌರವ ಮಿಶ್ರಿತ ಭಯ ಮತ್ತು ಕುತೂಹಲ. ದಪ್ಪ ಚಾಳೀಸು ದರಿಸಿರುವ ತರುಣನ ಮುಖದಲ್ಲಿ ಎಂತಹದೋ ಲೋಚನಾ ಲಹರಿ. ಯಾರು ನೋಡಿದರೂ ಅವರಿಬ್ಬರೂ ಅವರದೇ ಆದ ಬೇರೆ ಬೇರೆ ಲೋಕದಲ್ಲಿ ಯೋಚಿಸುತ್ತಾ ಕುಳಿತಿರುವುದು ಗೊತ್ತಾಗುವುದು. ‘ಈ ಫೋಟೋದಲ್ಲಿ ಇರುವವರು ಯಾರು ಗೊತ್ತಾ?’ ಎಂದು ಕೇಳಿದರು ಪದ್ಮಾ . ‘ಇಲ್ಲ’ ಅಂದೆ. ‘ರಿಮೆಂಬರ್ ಡ್ ವಿಲೇಜ್’ ಎಂಬ ಪುಸ್ತಕ ಬರೆದ ಡಾ. ಎಂ.ಎನ್.ಶ್ರೀನಿವಾಸ್ ಅವರು ನಿಮಗೆ ಗೊತ್ತಾ?’ ಎಂದು ಕೇಳಿದರು. ನನ್ನ ಕಣ್ಣುಗಳು ಅರಳಿದವು. `ಅವರೇ ಇವರು’ ಎಂದು ಹೇಳಿದರು.

`ಈ ಫೋಟೋದಲ್ಲಿರುವ ಬಾಲಕನಿಗೆ ಈಗ ೮೨ ವರ್ಷ. ಅವರ  ಹೆಸರು ಜವರಪ್ಪ ಅಂತ. ಶ್ರೀರಂಗಪಟ್ಟಣ ಬನ್ನೂರು ರಸ್ತೆಯಲ್ಲಿರುವ ಕೊಡಗಳ್ಳಿಯ ಈಗಿನ ಪಟೇಲರು ಅವರು. ಮೈಸೂರಿನ ಮಂಡಿ ಮೊಹಲ್ಲದ ಶ್ರೀ ಚಿತ್ರ ಮಂದಿರದ ಮಾಲೀಕರಾಗಿದ್ದವರು. ಇದೇ ಚಿತ್ರಮಂದಿರದಲ್ಲಿ ಕುವೆಂಪು ಅವರು ಒಬ್ಬರೇ ಬೂತಯ್ಯನ ಮಗ ಅಯ್ಯು ಎಂಬ ಸಿನೆಮಾವನ್ನು ನೋಡಿದ್ದರು. ಇದೇ ಜವರಪ್ಪನವರ ಬೆಂಜ್ ಕಾರಿನಲ್ಲಿ ಕುವೆಂಪು ಅವರನ್ನು ಚಿತ್ರಮಂದಿರಕ್ಕೆ ಕರೆದೊಯ್ಯಲಾಗಿತ್ತು.  ಹಿಂದೆ ಮೈಸೂರಿನಿಂದ ಬನ್ನೂರಿಗೆ ಕೊಡಗಳ್ಳಿ ಮೋಟಾರ್ ಸರ್ವೀಸ್ ಎಂಬ ಬಸ್ಸು ಓಡುತ್ತಿತ್ತು .ಅದರ ಮಾಲಕರೂ ಇದೇ ಜವರಪ್ಪನವರು. ೭೦ ವರ್ಷಗಳ ಹಿಂದೆ ಕೊಡಗಳ್ಳಿಗೆ ಬಂದು ಹನ್ನೊಂದು ತಿಂಗಳು ತಂಗಿದ್ದ ಎಂ.ಎನ್.ಶ್ರೀನಿವಾಸ್ ಅವರು ಇದೇ ಜವರಪ್ಪನವರ ತಂದೆ ಪಟೇಲ್ ಜವರೇಗೌಡರ ಆಶ್ರಯದಲ್ಲಿದ್ದು ಲೋಕವಿಖ್ಯಾತವಾದ ಈ ಪುಸ್ತಕವನ್ನು ಬರೆದರು. ಅವರು ಈ  ಪುಸ್ತಕಕ್ಕೆ  ವಿಷಯಗಳನ್ನು ಹುಡುಕಿಕೊಂಡು ಓಡಾಡುತ್ತಿದ್ದಾಗ ಅವರ ಹಿಂದೆ ಕುತೂಹಲದಿಂದ ಓಡಾಡುತ್ತಿದ್ದ ಬಾಲಕನೇ ಈ ಜವರಪ್ಪ. ವರ್ಷ ಎಂಬತ್ತೊಂದಾದರೂ ಇನ್ನೂ ಯುವಕನಂತೆ ಗಟ್ಟಿಮುಟ್ಟಾಗಿ ಓಡಾಡುತ್ತಿದ್ದಾರೆ. ಅವರೇ ಈ ಫೋಟೋದಲ್ಲಿರುವ ಬಾಲಕ’ ಎಂದು ಇನ್ನಷ್ಟು ಕಥೆಗಳನ್ನು ಹೇಳತೊಡಗಿದರು.

MNSನಾನು ಒಂದು ಕ್ಷಣ ತಬ್ಬಿಬ್ಬಾದೆ.ಇದು ಲೋಕ ವಿಖ್ಯಾತ ಸಮಾಜ ಶಾಸ್ತ್ರಜ್ಞ ಮೈಸೂರು ನರಸಿಂಹಾಚಾರ್ ಶ್ರೀನಿವಾಸ್  ಅವರ ಹಳೆಯ ಫೋಟೋ. ಭಾರತ ದೇಶದ ಜಾತಿ ವ್ಯವಸ್ಥೆಯ ಕುರಿತು ಅದುವರೆಗೆ ಬಂದಿದ್ದ ಯುರೋಪ್ ಪ್ರೇರಿತ, ಅಮೇರಿಕಾ ಪ್ರೇರಿತ ಅಧ್ಯಯನಗಳ ತಲೆಯ ಮೇಲೆ ಮೊಟಕುವಂತೆ ಪುಸ್ತಕಗಳನ್ನು ಬರೆದ ಶ್ರೀನಿವಾಸ್ ಮತ್ತು ಅವರ ಜೊತೆ ನದಿಯ ನೀರಲ್ಲಿ ಕಾಲಾಡಿಸುತ್ತಾ ಕುಳಿತಿರುವ ಜವರಪ್ಪ ಎಂಬ ಕೊಡಗಳ್ಳಿಯ ಬಾಲಕ. ಬಾರತದ ಜಾತಿ ಆದಾರಿತ ಗ್ರಾಮೀಣ ಚುನಾವಣಾ ರಾಜಕೀಯದ ಕುರಿತು ನಿರರ್ಗಳವಾದ ಅರಿವು ಹೊಂದಿದ್ದ ಶ್ರೀನಿವಾಸನ್ ಅವರನ್ನು ಅವರ ತಾರುಣ್ಯದ ದಿನಗಳಲ್ಲಿ ಕುತೂಹಲದ ಕಣ್ಣಿಂದ ನೋಡಿದ್ದ ಬಾಲಕ ಈಗ ಜವರಪ್ಪನಾಗಿ, ಪಟೇಲರೂ ಆಗಿ, ಸಿನೆಮಾ ಮಂದಿರ, ಬಸ್ಸುಗಳ ಮಾಲೀಕನೂ ಆಗಿ ಅಷ್ಟೊಂದು ವಯಸ್ಸಾಗಿದ್ದರೂ  ಯುವಕನಂತೆ ಓಡಾಡುತ್ತಿರುವುದು!
`ಕೊಡಗಳ್ಳಿಗೆ ಹೋಗೋಣ್ವಾ ಮೇಡಂ’ ಅಂತ ಕೇಳಿದೆ.`ನಾನು ರೆಡಿ’ ಅಂದರು. ಹಾಗೆ ನಾವಿಬ್ಬರೂ ಕೊಡಗಳ್ಳಿಗೆ ಹೋಗಿ ಪಟೇಲ್ ಜವರಪ್ಪನವರನ್ನು ಮಾತನಾಡಿಸಿ, ಕಣ್ತುಂಬ ನೋಡಿಕೊಂಡು ಬಂದೆವು.
DSC_6606ಒಂದು ಚೂರೂ ಭಾವುಕರಾಗದ, ಈಗಲೂ ಅಷ್ಟೇ ಖಡಕ್ಕಾಗಿರುವ ಜವರಪ್ಪನವರು ನಮಗಂತೂ ಇಷ್ಟವಾದರು. ಇನ್ನೂರು ವರ್ಷಗಳಿಗಿಂತಲೂ ಹಳೆಯದಾದ ಅದೇ ತೊಟ್ಟಿಯ ಮನೆ. ಅದೇ ನ್ಯಾಯ ಪಂಚಾಯ್ತಿಯ ಚಾವಡಿ, ಅದೇ ದನದ ಕೊಟ್ಟಿಗೆ, ಐದು ಜನ ಸಹೋದರರು ಬದುಕಿದ್ದ ಐದು ಹಳೆಯ ಕಟ್ಟಡಗಳು. ಅದೇ ನಾಡಹೆಂಚಿನ ಮಾಡುಗಳು. ಅವೇ ತೊಲೆಗಳು, ಅವೇ ಬಾಗಿಲುಗಳು.ಇಲ್ಲಿ ಕಾಲವೇ ಸರಿದು ಹೋಗಿಲ್ಲವೇನೋ ಎಂಬಂತೆ ಬೀಸದೇ ನಿಂತು ಕೊಂಡಿರುವ ಗಾಳಿ. ಒಂದು ಕಾಲದಲ್ಲಿ ೧೯೬೭ರ ಮಾಡೆಲ್ಲಿನ ಬೆಂಜ್ ಕಾರಿನಲ್ಲಿ ಓಡಾಡುತ್ತಿದ್ದ ಜವರಪ್ಪನವರು ಅದನ್ನು ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯಕ್ಕೆ ದಾನವಾಗಿ ಕೊಟ್ಟು ಈಗ ಒಂದು ಸಾಧಾರಣ ಸರಳ ಕಾರು ಚಾಲಿಸಿಕೊಂಡು ಓಡಾಡುತ್ತಾರೆ. ಮನೆಯೊಳಗೆ ಆಳುಕಾಳುಗಳು, ಅಡುಗೆಯ ಹೆಂಗಸರು ಒಂದು ಕಾಲದ ಕೊಡಗಳ್ಳಿ ಈಗಲೂ ಹಾಗೇ ಇದೆಯೇನೋ ಎಂಬಂತೆ  ಸದ್ದಿಲ್ಲದೆ ಚಲಿಸುತ್ತಿರುತ್ತಾರೆ. ‘ಸರ್, ಎಂ.ಎನ್.ಶ್ರೀನಿವಾಸ್ ನಿಮ್ಮ ಊರಲ್ಲಿ ವರ್ಷದಷ್ಟು ಕಾಲ ಇದ್ದು ಲೋಕವಿಖ್ಯಾತ ಪುಸ್ತಕವನ್ನು ಬರೆದರು, ಆದರೆ ನಿಮ್ಮ ಊರಿಗೆ ರಾಮಾಪುರ ಅಂತ ಹೆಸರಿಟ್ಟರು. ಆದರೆ ಕೊಡಗಳ್ಳಿ ಎಂದು ಕರೆದಿದ್ದರೆ ನಿಮ್ಮ ಊರೂ ಲೋಕ ವಿಖ್ಯಾತವಾಗುತ್ತಿತ್ತು. ಅಲ್ಲವೇ?’ ಎಂದು ಕೇಳಿದೆ.
ಜವರಪ್ಪನವರು ಈ ಪ್ರಶ್ನೆಯಿಂದೇನೂ ವಿಚಲಿತರಾಗಲಿಲ್ಲ.
javarapa‘ಅವರಿಗೆ ಅವರದೇ ಕಾರಣಗಳಿರಬಹುದು. ಕಾನೂನು ಕಟ್ಟಲೆಗಳಿರಬಹುದು. ಅದರಲ್ಲಿ ಬರುವ ನಮ್ಮ ಊರಿನ ಜನರ ಹೆಸರುಗಳನ್ನೂ ಬದಲಿಸಿದ್ದಾರೆ, ನಮ್ಮ  ಅಣ್ಣ ತಮ್ಮಂದಿರ ಹೆಸರುಗಳನ್ನೂ ಬದಲಿಸಿದ್ದಾರೆ .ಉದಾಹರಣೆಗೆ ನನ್ನ ದೊಡ್ಡ ಅಣ್ಣ ಮರಿಗೌಡರ ಹೆಸರನ್ನು ರಾಮೇಗೌಡನೆಂದೂ, ಎರಡನೆಯ ಅಣ್ಣ ರಾಮಸ್ವಾಮಿಯನ್ನು ಲಕ್ಷ್ಮಣನೆಂದೂ, ಮೂರನೆಯ ಅಣ್ಣ ಚೆನ್ನಿಗರಾಯಪ್ಪನನ್ನು ಭರತನೆಂದೂ ಹಾಗೂ ಜವರಪ್ಪನಾಗಿರುವ ನನ್ನ ಹೆಸರನ್ನು ಬರೀ ಹುಡುಗನೆಂದೂ ಬರೆದಿದ್ದಾರೆ.ಅವರ ಲೆಕ್ಕಾಚಾರಗಳು ಅವರದ್ದು.ನಮ್ಮ ಬದುಕು ನಮ್ಮದು’ ಎಂದು ಖಡಕ್ಕಾಗಿ ಅಂದರು.
ಹಾಗೆ ನೋಡಿದರೆ ಜವರಪ್ಪನವರು ಎಂ.ಎನ್.ಶ್ರೀನಿವಾಸ್ ಅವರ ದೊಡ್ಡ ಪುಸ್ತಕವನ್ನು ಸಂಪೂರ್ಣವಾಗಿ ಓದಿಕೊಂದಿರುವ ಹಾಗೆ ಕಾಣಿಸುತ್ತಿತ್ತು. ಆ ಪುಸ್ತಕದ ಕುರಿತು ಅವರಿಗೆ ಅವರದೇ ಆದ ಅಭಿಪ್ರಾಯಗಳೂ ಇದ್ದ ಹಾಗಿತ್ತು. ಪುಸ್ತಕವೊಂದನ್ನು ಬರೆಯಲು ಕೊಡಗಳ್ಳಿಯಲ್ಲಿ ಹನ್ನೊಂದು ತಿಂಗಳು ವಾಸವಿದ್ದ ಸಮಾಜಶಾಸ್ತ್ರಜ್ಞ ಶ್ರೀನಿವಾಸ್ ಮತ್ತು ಅವರನ್ನು ಕುತೂಹಲದಿಂದ ಹಿಂಬಾಲಿಸುತ್ತಿದ್ದ ಬಾಲಕ ಜವರಪ್ಪ. ಎಪ್ಪತ್ತು ವರ್ಷಗಳ ನಂತರ ಅದೇ ಊರಲ್ಲಿ, ಅದೇ ತೊಟ್ಟಿಯ ಮನೆಯಲ್ಲಿ  ಆಗ ಬಾಲಕನಾಗಿದ್ದ ಜವರಪ್ಪ ಈಗ ಪಟೇಲ್ ಜವರಪ್ಪನವರಾಗಿ ರೂಪಾಂತರಗೊಂಡಿರುವಾಗ ಅವರೊಡನೆ ಹಳೆಯ ಕತೆಗಳನ್ನು ಕೇಳುತ್ತಾ ಹೋಗುವುದು ಒಂದು ಅಪೂರ್ವ ಅನುಭವವಾಗಿತ್ತು.
javarapa 2.jpgಈ ಜವರಪ್ಪನವರನ್ನು ಪುಸ್ತಕದಲ್ಲಿ ಕೇವಲ ಹುಡುಗನೆಂದು ನಮೂದಿಸಿರುವ ಎಂ.ಎನ್.ಶ್ರೀನಿವಾಸ್ ಪ್ರಸಂಗವೊಂದನ್ನು ಬರೆಯುತ್ತಾರೆ. ರಾಮಾಪುರವೆಂದು ಕರೆಯಲ್ಪಟ್ಟಿರುವ ಕೊಡಗಳ್ಳಿಯಲ್ಲಿ  ಬೈಗುಳದಲ್ಲೂ, ಜೋರು ಬಾಯಲ್ಲೂ,ಶಾಪ ಹಾಕುವುದರಲ್ಲೂ ಖ್ಯಾತಳಾಗಿದ್ದ ಒಬ್ಬಳು ವಿದವೆ ಮುದುಕಿ ಇದ್ದಳು. ಈ ಮುದುಕಿಯ ಶಾಪ ಮತ್ತು ಬೈಗುಳಗಳ ನಿಜವಾದ ವೈಖರಿ ಗೊತ್ತಾಗಬೇಕಿದ್ದರೆ ಆಕೆಯ ಕೋಳಿಯೊಂದನ್ನು ಅಪಹರಿಸಬೇಕೆಂದೂ, ಸಂಶೋಧನೆಗೆ ಸಹಾಯವಾಗುವುದಾದರೆ ಕೋಳಿಯನ್ನು ಕದಿಯುವ ಕೆಲಸವನ್ನು ತಾನು ಮಾಡಲು ರೆಡಿಯೆಂದೂ  ಬಾಲಕನಾಗಿದ್ದ ಇದೇ ಜವರಪ್ಪ ಸಮಾಜಶಾಸ್ತ್ರಜ್ಞ ಶ್ರೀನಿವಾಸ್ ರಿಗೆ ಸಲಹೆ ಕೊಡುತ್ತಾನೆ. ಆದರೆ ಜವರಪ್ಪ ಕೋಳಿ ಕದ್ದರೋ ಇಲ್ಲವೋ ಎಂಬುದು ಆ ಪುಸ್ತಕದಲ್ಲಿ ಬರೆದಿಲ್ಲ. `ಜವರಪ್ಪನವರೇ ನೀವು ನಿಜವಾಗಿ ಕೋಳಿ ಕದ್ದು ಶ್ರೀನಿವಾಸ್ ಅವರ ಸಂಶೋಧನೆಗೆ ಸಹಾಯ ಮಾಡಿದಿರಾ?’ ಎಂದು ಕೇಳಬೇಕೆಂದಿದ್ದೆ. ಆದರೆ ಅವರ ಗಂಭೀರ ನಡೆ ನುಡಿ, ಶಿಸ್ತು ಇತ್ಯಾದಿಗಳನ್ನು ಕಂಡು ಆಪ್ರಶ್ನೆಯನ್ನು ಕೇಳಲು ಮನಸೂ ಬರಲಿಲ್ಲ. ಜೊತೆಗೆ ಸಮಯವೂ ಇರಲಿಲ್ಲ. ಅದಲ್ಲದೆ ಎಂ.ಎನ್.ಶ್ರೀನಿವಾಸ್ ಸಂಶೋಧನೆಗಾಗಿ ವಾಸವಿದ್ದ  ಕೊಡಗಳ್ಳಿಯ ಪಟೇಲರ ಕೊಟ್ಟಿಗೆ  ಮನೆಯನ್ನೂ ನೋಡಬೇಕಿತ್ತು. ಆದರೆ ಯಾಕೋ ಜವರಪ್ಪನವರು ಆ ಕೊಟ್ಟಿಗೆ ಮನೆಯನ್ನು ನಮಗೆ ದೂರದಿಂದಲೇ ತೋರಿಸಿದರು. ಒಂದು ಕಾಲದಲ್ಲಿ ಗೋವುಗಳಿಂದಲೂ, ಗಂಜಲ ಸಗಣಿಗಳ ಪರಿಮಳದಿಂದಲೂ, ನಾನಾ ಬಗೆಯ ಕ್ರಿಮಿಕೀಟಗಳಿಂದಲೂ, ರಕ್ತ ಹೀರುವ ಉಣ್ಣಿ ಇತ್ಯಾದಿ ಹುಳ ಹುಪ್ಪಟೆಗಳಿಂದಲೂ, ಜೀತದಾಳುಗಳಿಂದಲೂ ಜೀವಂತವಾಗಿದ್ದ ಆ ಕೊಟ್ಟಿಗೆ ಎಪ್ಪತ್ತು ವರ್ಷಗಳ ನಂತರ ನೋಡಿದರೆ ಒಂದು ಭಾಗದಲ್ಲಿ  ಕುಸಿದು ಶಿಥಿಲವಾಗಿ ಮರುಕ ಹುಟ್ಟಿಸುವಂತೆ ನಿಂತಿತ್ತು. ರಾಮಾಪುರವೆಂದೇ ಜಗತ್ ವಿಖ್ಯಾತವಾಗಿರುವ ಕೊಡಗಳ್ಳಿಯ ಪಟೇಲರ ಮನೆತನದ ಕೊಟ್ಟಿಗೆ ಮನೆ. ಆ ಕಾಲದ ಎಲ್ಲ ವೈಭವ ಹಾಗೂ ನರಕಗಳ ಸಂಕೇತವಾಗಿರುವ ಕೊಟ್ಟಿಗೆ ಮನೆ. ಎಂ.ಎನ್,ಶ್ರೀನಿವಾಸ್ ಹನ್ನೊಂದು ತಿಂಗಳ ಕಾಲ ಊಟವನ್ನೂ, ಶೌಚವನ್ನೂ, ಅಧ್ಯಯನವನ್ನೂ, ನಿದ್ರೆಯನ್ನೂ ಮಾಡಿದ್ದ ಕೊಟ್ಟಿಗೆ ಮನೆ.
ಯಾಕೋ ಬಿಸಿಲಲ್ಲಿ ಬಸವಳಿದು ಮಲಗಿತ್ತು.

ಎಂ.ಎನ್.ಶ್ರೀನಿವಾಸ್ ಮೂಲತ: ಕೊಡಗಳ್ಳಿಗೆ ಮೂರು ಮೈಲು ದೂರವಿರುವ ಇನ್ನೊಂದು ಹಳ್ಳಿಯವರು.ಆದರೆ ಆಕ್ಸ್ ಪರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ಮಾಡುತ್ತಿದ್ದವರು. ಅವರಿಗೆ ಒಂದು ವರ್ಷದ ಕ್ಷೇತ್ರಾಧ್ಯಯನದ ಅವಕಾಶ ಸಿಕ್ಕಿದಾಗ ಕೊಡಗಳ್ಳಿಯನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಹನ್ನೊಂದು ತಿಂಗಳು ಕಳೆದರು.ಅವರು ಕೊಡಗಳ್ಳಿಯನ್ನು ಆಯ್ಕೆ ಮಾಡಲೂ ಕೆಲವು ಕಾರಣಗಳಿದ್ದವು. ಒಂದನೆಯದಾಗಿ ಕೊಡಗಳ್ಳಿ ಬಹುಜಾತಿಗಳ ಒಂದು ಹಳ್ಳಿಯಾಗಿತ್ತು.ಮತ್ತು ಕನ್ನಡ ಬಾಷಿಕರ ಹಳ್ಳಿಯಾಗಿದ್ದರಿಂದ ಕನ್ನಡಿಗರೇ ಆದ ಶ್ರೀನಿವಾಸ್ ರಿಗೆ ಅನುಕೂಲವಾಗಿತ್ತು. ಮೂರನೆಯದಾಗಿ ಶ್ರೀನಿವಾಸರ ಪೂರ್ವಜರು ತಮಿಳುನಾಡಿನಿಂದ ಬಂದು ಆ ಹಳ್ಳಿಯ ಸುತ್ತಮುತ್ತ ನೆಲೆಸಿದ್ದರಿಂದ ತಮ್ಮ ಪೂರ್ವಜರ ಸಾಂಸ್ಕೃತಿಕ ನೆಲೆಗಳೂ ಅವರಿಗೆ ಗೊತ್ತಾಗಬಹುದಿತ್ತು.ಮೈಸೂರು ಸುತ್ತಮುತ್ತಲಿನ ಬ್ರಾಹ್ಮಣ ಕುಟುಂಬಗಳು ಯಾಕೆ ತಮ್ಮ ಹಳ್ಳಿಯನ್ನು ಬಿಟ್ಟು ಮೈಸೂರು ಸೇರಿಕೊಂಡು ವಿದ್ಯಾವಂತರಾಗಿ ಇಂಗ್ಲಿಷು ಕಲಿತುಕೊಂಡು, ಉದ್ಯೋಗವನ್ನೂ ಹೊಂದಿ ಮೇಲಕ್ಕೆ ಬಂದರು ಎಂಬುದನ್ನೂ ಅವರಿಗೆ ಅರಿಯಬೇಕಿತ್ತು. ಜೊತೆಗೆ ನೀರಾವರಿಯ ಲಾಭ ಪಡೆದು ಭತ್ತ ಬೆಳೆಯುತ್ತಿರುವ ಹಳ್ಳಿಯಾಗಿರಬೇಕು. ಆ ಹಳ್ಳಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಮ್ಮಾರರು, ಬಡಗಿಗಳು, ಕ್ಷೌರಿಕರು, ಅಗಸರು, ಕುಂಬಾರರು ಮತ್ತು ಪುರೋಹಿತರು ಇರಬೇಕು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಆ ಹಳ್ಳಿ ಮುಖ್ಯ ರಸ್ತೆಯಿಂದ ದೂರವಿರಬೇಕು ಆದರೆ ದಿನಕ್ಕೊಂದು ಬಸ್ಸಾದರೂ ಬಂದು ಹೋಗಬೇಕು. ಹೀಗೆ ಇಂತಿಪ್ಪ ಎಲ್ಲ ಅರ್ಹತೆಗಳನ್ನೂ ಹೊಂದಿದ್ದ ಕೊಡಗಳ್ಳಿಯನ್ನು ಅವರು ಆಯ್ಕೆ ಮಾಡಿಕೊಂಡು ಅಲ್ಲಿದ್ದರು.

ಎಂ.ಎನ್.ಶ್ರೀನಿವಾಸ್ ಕೊಡಗಳ್ಳಿಯಲ್ಲಿ ವಾಸವಿದ್ದ ಪಟೇಲರ ಕೊಟ್ಟಿಗೆ ಮನೆ
ಎಂ.ಎನ್.ಶ್ರೀನಿವಾಸ್ ಕೊಡಗಳ್ಳಿಯಲ್ಲಿ ವಾಸವಿದ್ದ ಪಟೇಲರ ಕೊಟ್ಟಿಗೆ ಮನೆ
ಅಂತಹ ಹಳ್ಳಿಯಲ್ಲಿ ಅವರಿಗೆ ಸಿಕ್ಕಿದ್ದು ಪಟೇಲರ ನಾಲ್ಕನೆಯ ಮಗ ಜವರಪ್ಪ.ಆಗ ಜವರಪ್ಪನವರಿಗೆ ಹನ್ನೆರಡು ವರ್ಷ. ಈಗ ಎಂಬತ್ತೊಂದು. ಮಹಾತ್ಮಾ ಗಾಂಧಿಯವರ ಕಗ್ಗೊಲೆಯಾದ ಹದಿಮೂರನೆಯ ದಿನದಂದು ಕೊಡಗಳ್ಳಿಯಲ್ಲೊಂದು ಸಭೆ ನಡೆಯುತ್ತದೆ. ಅದು ಗಾಂಧಿಯವರ ಸಾವಿಗೆ ಸಂತಾಪ ಸೂಚಿಸುವ ಸಭೆ. ಆ ಸಭೆಯಲ್ಲಿ ಕಾಫಿ ತಿಂಡಿಯ ಸರಬರಾಜೂ ಇರುತ್ತದೆ. ಗ್ರೂಫ್ ಪೋಟೋವನ್ನೂ ತೆಗೆಯುತ್ತಾರೆ. ಅದಾದ ಕೆಲವೇ ದಿನಗಳಲ್ಲಿ ಆ ಹಳ್ಳಿಯಲ್ಲಿ  ಸಂಶೋಧನೆಯನ್ನು ನಡೆಸಲು ಶ್ರೀನಿವಾಸರಿಗೆ ಅನುಮತಿ ಮತ್ತು ಆಹ್ವಾನವೂ ಸಿಗುತ್ತದೆ. ಜೊತೆಗೆ ವಾಸಮಾಡಲು ಕೊಟ್ಟಿಗೆಮನೆಯೂ ಸಿಗುತ್ತದೆ. TRSಹನ್ನೊಂದು ತಿಂಗಳು ಆ ಹಳ್ಳಿಯಲ್ಲಿದ್ದು ಅಧ್ಯಯನ ನಡೆಸಿ ಬಹಳ ವಿಸ್ತಾರವಾದ ಟಿಪ್ಪಣಿಗಳನ್ನು ಹಗಲು ರಾತ್ರಿ ನಿದ್ದೆಗೆಟ್ಟು ಬರೆಯುತ್ತಾರೆ.
ಕೊಡಗಳ್ಳಿಯ ಕುರಿತು ಅವರು ಹದಿನೆಂಟು ವರ್ಷಗಳಿಂದ ಪರಿಷ್ಕರಿಸುತ್ತಿದ್ದ ಟಿಪ್ಪಣಿಗಳ ಕಂತೆ ಕ್ಯಾಲಿಫೋರ್ನಿಯಾದ ಸ್ಟಾನ್ಫರ್ಡ್ ವಿಶ್ವವಿದ್ಯಾನಿಲಯದ ಅವರ ಅಧ್ಯಯನ  ಕೊಠಡಿಯಲ್ಲಿ ಇರುತ್ತದೆ. ೧೯೭೦ ರ ಏಪ್ರಿಲ್ ೨೪ ರಂದು ಗಲಬೆಕೋರರ ಬೆಂಕಿಗೆ ಬಲಿಯಾಗುತ್ತದೆ.ಅಮೇರಿಕಾ ವಿಯಟ್ನಾಂನಲ್ಲಿ ನಡೆಸುತ್ತಿದ್ದ ಯುದ್ಧವನ್ನು ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳು ಎಸೆದ ಮೋಲೋಟೋವ್ ಕಾಕ್ ಟೈಲ್ ಬಾಂಬೊಂದು ಇವರ ಕೊಠಡಿಯ ಗಾಜನ್ನು ಭೇದಿಸಿ ಇವರ ಟಿಪ್ಪಣಿಗಳನ್ನು ಸುಟ್ಟು ಹಾಕುತ್ತದೆ. ಇದರಿಂದ ತತ್ತರಿಸಿದ ಶ್ರೀನಿವಾಸ್ ಹಲವು ಕಾಲ ಮಾನಸಿಕವಾಗಿ ಖಿನ್ನರಾಗಿ ಕುಗ್ಗಿಹೋಗುತ್ತಾರೆ.
ಆನಂತರ ಐದಾರು ವರ್ಷಗಳ ನಂತರ ಸುಟ್ಟ ಬೆಂಕಿಯಿಂದ ಹೊರಬಂದ ಹಕ್ಕಿಯಂತೆ ಶ್ರೀನಿವಾಸ್ ತಮ್ಮ ನೆನಪಿನ ಹಂಗಿನಿಂದಲೇ ‘ ದಿ ರಿಮೆಂಬರ್ ಡ್ ವಿಲೇಜ್’  ಎಂಬ ಅದ್ಭುತವಾದ,  ಅಜರಾಮರವಾದ  ಸಮಾಜಶಾಸ್ತ್ರ ಅದ್ಯಯನದ ಪುಸ್ತಕ ಬರೆಯುತ್ತಾರೆ. ಈ ಪುಸ್ತಕವನ್ನ ಟಿ.ಆರ್.ಶಾಮಭಟ್ಟರು ಅಷ್ಟೇ ಅದ್ಭುತವಾಗಿ ‘ನೆನಪಿನ ಹಳ್ಳಿ’  ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ (ಐ ಬಿ ಎಚ್ ಪ್ರಕಾಶನ, ಬೆಲೆ:ರೂ.೪೫೦). ನಾನಂತೂ ಓದುತ್ತಾ ಶ್ರೀನಿವಾಸನ್ ರ ನಿರೂಪಣೆಗೂ, ಶಾಮಭಟ್ಟರ ಅನುವಾದಕ್ಕೂ ಮರಳಾಗಿ ಹೋಗಿದ್ದೇನೆ.
ಲೇಖಕಿ ಪದ್ಮಾ ಶ್ರೀರಾಂ ತಮ್ಮ ಚೀಲದೊಳಗಿಂದ ತೆಗೆದು ತೋರಿಸಿದ ಹಳೆಯ ಫೋಟೋವೊಂದು ಕೊಡಗಳ್ಳಿಯನ್ನೂ, ಜವರಪ್ಪನವರನ್ನೂ, ಶ್ರೀನಿವಾಸರನ್ನೂ ಮತ್ತು ಶಾಮಭಟ್ಟರನ್ನೂ ಒಂದು ವೃತ್ತದ ಸುತ್ತ ಕೈಹಿಡಿದು ತಿರುಗಿಸುತ್ತಿದೆ.
(ಫೋಟೋಗಳು: ಲೇಖಕರದು)

(ಆಂದೋಲನದ ಹಾಡುಪಾಡು ಸಂಚಿಕೆಯಲ್ಲಿ ಪ್ರಕಟಿತ)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s