ಚೀನಾದ ಕಥೆಗಾರ್ತಿ, ಗುಜರಾತಿನ ಕವಿಮಿತ್ರ

2013-01-08_11-14-29_110ಹಲವು ವರ್ಷಗಳ ಹಿಂದೆ ಸ್ವೀಡನ್ ಗೆ ಹೋಗಿದ್ದಾಗ ಅಲ್ಲಿ ಗುತನ್ಬರ್ಗ್ ಎಂಬಲ್ಲಿ ಒಂದು ಅಂತರರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಒಂದು ಪುಸ್ತಕದ ಅಂಗಡಿಯಲ್ಲಿ ಸ್ಟೂಲ್ ಹಾಕಿಕೊಂಡು ಮೈಕಿನ ಮುಂದೆ ಗಟ್ಟಿಯಾಗಿ ನನ್ನ ಕನ್ನಡದ ಕತೆಯನ್ನು ಓದಬೇಕಾಗಿತ್ತು ಮತ್ತು ಓದಿದ ಮೇಲೆ ಆಕಥೆಯ ಸಾರಾಂಶವನ್ನು ಇಂಗ್ಲಿಷಿನಲ್ಲಿ ಪುಟ್ಟದಾಗಿ ವಿವರಿಸಬೇಕಿತ್ತು.

ನನ್ನ ಹಾಗೆ ಬೇರೆ ಬೇರೆ ಅಂಗಡಿಗಳಲ್ಲಿ ಪ್ರಪಂಚದ ಬೇರೆ ಬೇರೆ ಕತೆಗಾರರು, ಕವಿಗಳು, ಅವರವರ ಭಾಷೆಯಲ್ಲಿ ಜೋರಾಗಿ ಹರಿಹಾಯಬೇಕಾಗಿತ್ತು.

ಚೈನಾದ ದೇಶಭ್ರಷ್ಟ ಬರಹಗಾರ್ತಿ,ಇರಾನಿಂದ ಹೊರಹಾಕಲ್ಪಟ್ಟ ಬರಹಗಾರ, ಲೆಬನಾನಿನ ಬೆಂಕಿಯಂತಹ ಕವಿ ಒಬ್ಬೊಬ್ಬರೂ ಒಂದೊಂದು ಅಂಗಡಿಯ ಮುಂದೆ ಅವರವರ ಭಾಷೆಯಲ್ಲಿ ಜೋರಾಗಿ ಒದರುತ್ತಿರುವುದು ಒಂದು ತರಹದ ಸಂತೋಷವನ್ನೂ, ಸಂಕಟವನ್ನೂ ತಮಾಷೆಯನ್ನೂ ತಂದೊದಗಿಸುತ್ತಿತ್ತು.

ಮೊದಲಿಗೆ ಒಬ್ಬಳು ಚೈನಾದ ದೇಶಭ್ರಷ್ಟ ಕತೆಗಾರ್ತಿ ಒಂದು ಕತೆ ಹೇಳಿದಳು.

ಅವಳು ನೋಡಲು ಸಣ್ಣಕ್ಕೆ ಸುಂದರವಾಗಿದ್ದಳು ಮತ್ತು ತುಂಡು ಲಂಗ ಹಾಕಿಕೊಂಡು ಸ್ಟೂಲ್ ನಲ್ಲಿ ಕಾಲಮೇಲೆ ಕಾಲ್ ಹಾಕಿಕೊಂಡು ಆ ಕತೆಯನ್ನು ಹೇಳಿದ್ದಳು.msid-17810914,width-400,resizemode-4,getattachment_30

ಅವಳ ತಂದೆ ಚೈನಾದಲ್ಲಿ ಅಧ್ಯಕ್ಷ ಮಾವೋನ ಕೆಂಪು ಸೇನೆಯಲ್ಲಿ ದೊಡ್ಡ ಅಧಿಕಾರಿಯಾಗಿದ್ದನಂತೆ. ಆಗ ಇವಳು ಇನ್ನೂ ಸಣ್ಣ ಹುಡುಗಿಯಾಗಿದ್ದಳಂತೆ ಜೊತೆಗೆ ಒಂದು ನಾಯಿಯನ್ನೂ ಸಾಕಿದ್ದಳಂತೆ. ಅವಳ ತಂದೆಯೂ ಆ ನಾಯಿಯನ್ನು ತುಂಬಾ ಪ್ರೀತಿಸುತ್ತಿದ್ದನಂತೆ. ಆದರೆ ಒಂದು ದಿನ ಅನಿವಾರ್ಯವಾಗಿ ಅವರು ಆ ನಾಯಿಯನ್ನು ಕೊಂದುಹಾಕಬೇಕಾಯಿತಂತೆ. ಯಾಕೆಂದರೆ ಚೀನಾದಲ್ಲಿ ಆ ಕಾಲದಲ್ಲಿ ಅಧ್ಯಕ್ಷ ಮಾವೋ ಅವರನ್ನು ಬಿಟ್ಟು ಬೇರೆ ಯಾರನ್ನೂ, ಯಾವುದನ್ನೂ ಅತಿಯಾಗಿ ಪ್ರೀತಿಸುವುದು ಅಪರಾಧವಾಗಿತ್ತಂತೆ.ಆಕೆಯೂ, ಆಕೆಯ ತಂದೆಯೂ ನಾಯಿಯೊಂದನ್ನು ತಮ್ಮದೇ ಜೀವಕ್ಕಿಂತ ಅತಿಯಾಗಿ ಪ್ರೀತಿಸುತ್ತಿರುವುದು ಅದು ಹೇಗೋ ಗಾಳಿಸುದ್ದಿಯಾಗಿ ಹರಡಿ ಅದು ಚೈನಾದ ಸೇನಾವಲಯದಲ್ಲೂ ಹರಿದಾಡಲು ತೊಡಗಿ ಅವರಿಬ್ಬರೂ ಅಯ್ಯೋ ದೇವರೇ ಇನ್ನೇನಾಗುತ್ತೋ ಎಂದು ಹೆದರಿಯೇಬಿಟ್ಟಿದ್ದರಂತೆ.ಕೊನೆಗೆ ಏನುಬೇಕಾದರೂ ಆಗಲಿ ಎಂದು ಸೇನಾಧಿಕಾರಿಯಾಗಿದ್ದ ಆಕೆಯ ತಂದೆ ತನ್ನ ಬಳಿಯಿದ್ದ ಸರ್ವೀಸ್ ರಿವಾಲ್ವರ್ ನಿಂದ ಆ ಮುದ್ದಿನ ಸಾಕುನಾಯಿಯನ್ನು ಹೊಡೆದುರುಳಿಸಿದನಂತೆ.

ಚೈನಾದ ಆ ಕಥೆಗಾರ್ತಿ ಆವತ್ತು ಕತೆ ಹೇಳುತ್ತಾ ಹೇಳುತ್ತಾ ಭಾವುಕಳಾಗಿಬಿಟ್ಟಿದ್ದಳು. ತಾನು ಅಂದಿನಿಂದ ಕತೆ ಬರೆಯಲು ತೊಡಗಿದೆ. ಅಂದಿನಿಂದ ಚೀನಾವನ್ನು ಬಿಟ್ಟು ಹೋಗಬೇಕು ಅಂತ ಯೋಚಿಸಲು ತೊಡಗಿದೆ ಅಂತ ಪರವಶಳಾಗಿ ಹೇಳುತ್ತಿದ್ದಳು.

ಅವಳು ಹೇಳುವುದನ್ನು ನೋಡಿದರೆ ಸುಳ್ಳು ಹೇಳುತ್ತಿದ್ದಾಳೆ ಅನ್ನಿಸುತ್ತಿರಲಿಲ್ಲ. ಆಮೇಲೆ ಆಕೆಯೇ ಅದನ್ನು ವಿಶ್ಲೇಷಣೆ ಮಾಡುತ್ತಿದ್ದಂತೆ ನನಗೆ ಅದು ಸುಳ್ಳಿರಬೇಕು ಅಂತ ಅನ್ನಿಸಲು ತೊಡಗಿತು.

ಆಮೇಲೆ ನನ್ನನ್ನ ಕತೆ ಓದಲು ಕೇಳಿದರು.ನಾನು ಕತೆ ಓದಲಿಲ್ಲ.ಏಕೆಂದರೆ ಅದು ನನ್ನ ಮೊದಲ ಪ್ರೇಮದ ವಿವರಗಳಿರುವ ತೀರಾ ಮುಜುಗರದ ಕಥೆಯಾಗಿತ್ತು.ಅದನ್ನು ಪುಸ್ತಕದಂಗಡಿಯ ಮುಂದೆ ಜೋರಾಗಿ ಓದುವುದು ಯಾಕೋ ಸರಿ ಎನಿಸಲಿಲ್ಲ.ಓದಿದರೂ ಅಲ್ಲಿ ಕನ್ನಡ ಬಲ್ಲವರು ಯಾರೂ ಇರಲಿಲ್ಲ.ಇನ್ನೇನು ಮಾಡುವುದು ಎಂದು ಇಂಗ್ಲಿಷಿನಲ್ಲಿ ಅದರ ಸಾರಾಂಶವನ್ನು ಸಂಕ್ಷಿಪ್ತವಾಗಿ ಹೇಳಲು ಹೊರಟರೆ ನನಗೇ ನಗು ಬರಲು ಶುರುವಾಯಿತು.2013-01-08_18-08-26_357

‘ಅಷ್ಟು ಸಣ್ಣ ವಯಸಿನಲ್ಲಿ ನಡೆದ ಆ ಕೋಮಲವಾದ ಮತ್ತು ಸಾರಾಂಶಗೊಳಿಸಿ ಹೇಳಿದರೆ ಪೋಲಿಪೋಲಿಯಾಗಿ ಕೇಳಬಹುದಾದ ಆ ಕಥೆಯನ್ನು ಇಂಗ್ಲೀಷಿನಲ್ಲೂ ಹೇಳಲಾಗುವುದಿಲ್ಲ.ಬೇಕಾದರೆ ಪ್ರಶ್ನೆಗಳನ್ನು ಕೇಳಿ ಉತ್ತರಿಸುತ್ತೇನೆ’ ಅಂತ ಹೇಳಿದೆ.

ಪುಣ್ಯಕ್ಕೆ ಯಾರೂ ಪ್ರಶ್ನೆಗಳನ್ನೂ ಕೇಳಲಿಲ್ಲ.

ಸ್ವಲ್ಪ ಹೊತ್ತಿನ ನಂತರ ಆ ಪುಸ್ತಕದಂಗಡಿಯಲ್ಲಿ ತರುಣ ಗುಜರಾತೀ ಕವಿಯೊಬ್ಬನ ಕವಿತಾ ವಾಚನ ಪ್ರಾರಂಭವಾಯಿತು.

ಆತ ಒಳ್ಳೆಯ ಮನುಷ್ಯನಾಗಿದ್ದ ಮತ್ತು ಆಗತಾನೇ ಮದುವೆಯಾಗಿದ್ದ.ಏರೋಪ್ಲೇನು ಹತ್ತುವ ಮೊದಲು ಆತನನ್ನು ಬೀಳುಕೊಡಲು ಬಂದಿದ್ದ ಆತನ ಹೆಂಡತಿ ಆಕಾಶನೋಡಿ ಗಳಗಳ ಅತ್ತಿದ್ದಳು ಮತ್ತು ಒಂದು ಚೀಲದ ತುಂಬ ಮೆಣಸಿನಪುಡಿ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಕುರುಕಲು ತಿಂಡಿ ಮತ್ತು ಒಣರೋಟಿಗಳನ್ನು ತನ್ನ ಪ್ರೀತಿಯ ನೆನಪಿಗಾಗಿ ಕೊಟ್ಟು ಕಳಿಸಿದ್ದಳು.

ಈತ ಇಲ್ಲಿ ಆಕೆಯ ನೆನಪಾದಾಗಲೆಲ್ಲ ಆ ಚೀಲವನ್ನು ಬಿಚ್ಚಿ ಏನಾದರೊಂದನ್ನು ಬಾಯಿಗೆ ಹಾಕಿ ಜಗಿಯುತ್ತಿದ್ದ ಮತ್ತು ಆಕೆಯ ನೆನಪಿನಲ್ಲಿ ಪುಟ್ಟಪುಟ್ಟ ದಾಂಪತ್ಯಗೀತೆಗಳನ್ನು ಸ್ಥಳದಲ್ಲೇ ರಚಿಸುತ್ತಿದ್ದ ಮತ್ತು ಅವುಗಳನ್ನು ನಮಗೆ ಓದಿ ಹೇಳುತ್ತಿದ್ದ.ಇಂತಹದೇ ದಾಂಪತ್ಯ ಗೀತೆಯೊಂದನ್ನು ಆತ ಅಂದು ಆ ಪುಸ್ತಕದಂಗಡಿಯಲ್ಲಿ ಓದುವವನಿದ್ದ.ಸುಂದರವೂ ಮಧುರವೂ ಕೊಂಚ ಏಕತಾನತೆಯಿಂದ ಕೂಡಿದವೂ ಆದ ಈ ಕವಿತೆಗಳನ್ನು ಆತ ಹೇಗೆ ಓದಬಹುದು ಎಂದು ಊಹಿಸುತ್ತಾ ನಾವೂ ಕಾಯುತ್ತಿದ್ದೆವು.ಏಕೆಂದರೆ ಆತ ಈಗಾಗಲೇ ತಾನು ತಂದಿದ್ದ ಮೆಣಸಿನಪುಡಿಯನ್ನು ಸ್ವೀಡನ್ನಿನ ಬರಹಗಾರರ ತಟ್ಟೆಗೆ ಬಲವಂತವಾಗಿ ಉದುರಿಸಿ ಅವರ ಅಚ್ಚರಿಗೂ ಅಸಹನೆಗೂ ಕಾರಣನಾಗಿದ್ದ.

Bokmässan_i_Göteborg_20130928_(vy)ಗಂಟಲು ಸರಿಪಡಿಸಿಕೊಂಡ ಆ ಗುಜರಾತೀ ತರುಣ ಕವಿ ಯಾವ ಪೂರ್ವಮಾಹಿತಿಯನ್ನೂ ಕೊಡದೆ ಏರು ಧ್ವನಿಯಲ್ಲಿ ಆಕಾಶವೇ ಹರಿದುಹೋಗುವಂತಹ ಅಳುದನಿಯಲ್ಲಿ ಕವಿತೆ ಓದತೊಡಗಿದ.ಆತನ ಕವಿತಾ ವಾಚನದ ಪರಿಣಾಮ ಎಷ್ಟು ರೋಚಕವಾಗಿತ್ತೆಂದರೆ ಅಕ್ಕಪಕ್ಕದ ಎಲ್ಲ ಪುಸ್ತಕದಂಗಡಿಗಳಲ್ಲಿ ಕಥೆಯನ್ನೋ ಕವಿತೆಯನ್ನೋ ಕೇಳುತ್ತಿದ್ದ ಜನ ಅಲ್ಲಿಂದ ಎದ್ದು ದಾವಿಸಿಬಂದು ಈತನ ಕವಿತಾವಾಚನದ ಸದ್ದಿಗೆ ಹೆದರಿ ಆತನ ರೋಧನದಂತಹ ಧ್ವನಿಗೆ ಮರುಗಿ ತಲೆದೂಗತೊಡಗಿದರು.

ಹತ್ತು ಹದಿನೈದು ನಿಮಿಷಗಳ ಅವಿರತ ಅಳುವಿನಂತಹ ಆತನ ಕವಿತಾ ವಾಚನ ಮುಗಿದಾಗ ಅಲ್ಲಿ ಒಂದು ದೊಡ್ಡ ಮೌನವಿತ್ತು.ನಂತರ ಜೋರಾಗಿ ಕರತಾಡನವೂ ನಡೆಯಿತು.

‘ಅಲ್ಲಾ ಮಾರಾಯ ಆ ದಾಂಪತ್ಯ ಗೀತೆಯನ್ನು ಹಾಡುವಾಗ ನೀನು ಹಾಗೆ ರೋಧಿಸುತ್ತಿದ್ದೆ ಯಾಕೆ?’ಎಂದು ಎಲ್ಲ ಮುಗಿದು ಹೊರಬಂದ ಮೇಲೆ ಆ ಗುಜರಾತೀ ತರುಣ ಕವಿಯೊಡನೆ ಕೇಳಿದ್ದೆ.

ಆತ ಅದೊಂದು ರಹಸ್ಯ ಅನ್ನುವ ಹಾಗೆ ನಕ್ಕು ಹೇಳಿದ್ದ.

ಈ ಯುರೋಪಿನವರಿಗೆ ಬಾರತೀಯ ದಾಂಪತ್ಯದ ನವಿರು ಅರಿವಾಗಬೇಕಾದರೆ ಅದನ್ನು ದೊಡ್ಡ ಗಂಟಲಲ್ಲೇ ಹೇಳಬೇಕು ಎಂದು ಆತನಿಗೆ ಗೊತ್ತಿತ್ತಂತೆ.ಅದಕ್ಕಾಗಿ ಆತ ಗುಜರಾತಿನ ಆದಿವಾಸಿ ಸಮುದಾಯದವರು ತಮ್ಮ ಹಾಡಿಯಲ್ಲಿ ಯಾರಾದರೂ ತೀರಿಹೋದಾಗ ಹಾಡುವ ಸಾವಿನ ಹಾಡಿನ ಟ್ಯೂನಿನಲ್ಲಿ ತನ್ನ ಕವಿತೆಯನ್ನು ಓದಿದನಂತೆ.

ವಸ್ತು ಏನಾದರಾಗಲಿ ಅದು ಜನತೆಗೆ ತಲುಪಬೇಕಾದರೆ ನಾವು ಜಾನಪದರ ಸೊಲ್ಲುಗಳನ್ನು ಬಳಸಿಕೊಳ್ಳಬೇಕು ಎಂದು ಆತ ನನಗೆ ಬುದ್ದಿವಾದವನ್ನೂ ಹೇಳಿದ್ದ.

ನೀನು ಕಥೆಯನ್ನು ಹೇಳಲು ಸಂಕೋಚಪಡುವವನು ಮತ್ತೆ ಯಾವ ಸುಖಕ್ಕಾಗಿ ಅದನ್ನು ಬರೆಯುತ್ತೀಯಾ ಎಂದು ನನಗೂ ಬೈದಿದ್ದ.

‘ಹೌದು ಗುರುವೇ, ನಿನ್ನದು ಸರಿ ನನ್ನದು ತಪ್ಪು’ ಎಂದು ಆತನಲ್ಲಿ ಒಪ್ಪಿಕೊಂಡಿದ್ದೆ.

ಮೊನ್ನೆ ಇರುಳು ಅಂತರ್ಜಾಲದಲ್ಲಿ ಹರಟೆ ಹೊಡೆಯುತ್ತಿರುವಾಗ ಸ್ವೀಡನ್ನಿನ ಹಳೆಯ ಕವಿಮಿತ್ರರೊಬ್ಬರು ಸಿಕ್ಕಿದ್ದರು.‘ಹೇಗಿದೆ ಮಾರಾಯ ಈಗಿನ ನಿನ್ನ ದೇಶ?’ ಎಂದು ಹೀಗೇ ಲೋಕಾಭಿರಾಮವಾಗಿ ಕೇಳಿದ್ದೆ.

‘ಅಯ್ಯೋ ಎಲ್ಲಾ ನಾಯಿಪಾಡು’ ಅಂದ.

‘ಏನಾಯಿತು?’ ಎಂದು ಕೇಳಿದೆ.

‘ಏನಿಲ್ಲ ನಾವು ದುಡಿಯಬೇಕು, ನಾವು ತಿನ್ನಬೇಕು.ಅದು ಬಿಟ್ಟು ಹಿಂದಿನ ಹಾಗೆ ಕಥೆ, ಕವಿತೆ, ಪುಸ್ತಕ, ತೃತೀಯ ಜಗತ್ತು, ನಿರಾಶ್ರಿತರ ಸಮಸ್ಯೆ ಅಂತ ಇಲ್ಲಿ ಈಗ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.ಬಹುತೇಕ ಲೇಖಕ ಕಲಾವಿದರು ತಲೆಕೆಟ್ಟುಹೋದವರ ಹಾಗೆ ಆಗಿದ್ದೇವೆ.ಬಹುತೇಕ ನಾವೆಲ್ಲರೂ ಏಕಾಂಗಿಗಳಾಗಿ ತಲೆ ತಗ್ಗಿಸಿಕೊಂಡು ನಡೆಯುತ್ತಿದ್ದೇವೆ’ಅಂದ.

‘ಯಾಕೆ ಹೀಗಾಯಿತು ಮಾರಾಯಾ’ ಅಂತ ಕೇಳಿದೆ.

‘ನೀವೆಲ್ಲ ಬಂದಿದ್ದಾಗ ನಮ್ಮಲ್ಲಿ ಸಮಾಜವಾದೀ ಸರ್ಕಾರವಿತ್ತು.ಆಮೇಲೆ ಕೊಂಚ ಅಲ್ಪಬಲಪಂಥೀಯ ಸರಕಾರ ಬಂತು.ಈಗ ಪೂರಾ ಬಲಪಂಥೀಯರದೇ ಕಾರುಬಾರು.2013-01-08_18-13-56_578ಇನ್ನು ಮುಂದೆ ಎಡಪಂಥೀಯರೇ ಬರಬಹುದು.ಆದರೆ ಅವರು ಕಟ್ಟಾ ಬಲಪಂಥೀಯರಿಗಿಂತಲೂ ಹೆಚ್ಚು ಆರ್ಥಿಕ ಕಟ್ಟುಪಾಡುಗಳನ್ನು ಹೇರಬಹುದು.ಇನ್ನೇನಿದ್ದರೂ ನಾವು ದುಡಿಯಬೇಕು ನಾವು ತಿನ್ನಬೇಕು,ಸರಕಾರದಿಂದ ಏನೂ ಸಿಗುವುದಿಲ್ಲ.ಕಷ್ಟಕಷ್ಟ’ ಎಂದು ಆತ ನಕ್ಕ.

ಚೈನಾದ ಕಥೆಗಾರ್ತಿಯನ್ನೂ, ಗುಜರಾತಿನ ಕವಿಯನ್ನೂ, ನನ್ನ ಮೊದಲ ಪ್ರೇಮದ ಕಥೆಯನ್ನೂ ನೆನೆದುಕೊಂಡು ನಾನೂ ನಕ್ಕೆ.

30th Dec 2012

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: