,

ಅಂಕಣಕ್ಕೆ ಸಿಲುಕಿಕೊಂಡ ತಾಯಿಬೆಕ್ಕು

twinkleತುಂಬುಗರ್ಭದ ಹೆಣ್ಣು ಬೆಕ್ಕೊಂದರ ಜೊತೆ ಒಬ್ಬನೇ ಕಾಲ ಕಳೆಯುತ್ತಿದ್ದೆ.
ಅದಕ್ಕಾದರೋ ಇದು ಎರಡನೆಯದೋ ಮೂರನೇಯದೋ ಹೆರಿಗೆ.
ಆದರೆ ನಾನು ಇದೇ ಮೊದಲ ಸಲ ಗಬ್ಬದ ಬೆಕ್ಕೊಂದರ ಬಯಕೆ ಭಯ ಒನಪು ವೈಯ್ಯಾರಗಳನ್ನು ಹತ್ತಿರದಿಂದ ನೋಡುತ್ತಾ ಅದರ ಹಾಗೇ ಅನುಭವಿಸುತ್ತಾ ಬದುಕುತ್ತಿದ್ದೆ.
ಮೊದಲೇ ಅಪ್ರತಿಮ ಸುಂದರಿಯಾಗಿರುವ ಈ ಹೆಣ್ಣು ಮಾರ್ಜಾಲ ಈಗ ಅರವತ್ತು ದಿನಗಳು ತುಂಬಿ ಇನ್ನಷ್ಟು ಚಂದವಾಗಿತ್ತು.ತನ್ನ ಎಂದಿನ ಭಯ ಸಂಕೋಚಗಳನ್ನು ಬದಿಗಿಟ್ಟು ತವರಿಂದ ಬಂದ ತಂದೆಯೊಂದಿಗೆ ಹೇಳಿಕೊಳ್ಳುವ ಹಾಗೆ ಏನೇನೋ ಹೇಳಲು ಯತ್ನಿಸುತ್ತಿತ್ತು.ಅದು ಹೇಳುತ್ತಿರುವುದು ನನಗೆ ಅರಿವಾಗುತ್ತಿಲ್ಲ ಎಂದನಿಸಿದಾಗ ನೇರ ಮೇಲೆ ಬಂದು ನನ್ನ ಹೊಟ್ಟೆಯ ಮೇಲೆ ಮಲಗಿ ತಾನೇ ತನ್ನ ತಲೆಯನ್ನು ನನ್ನ ಕೈಬೆರಳುಗಳ ಬಳಿ ತಂದು ನೇವರಿಸಲು ಹೇಳಿತು.

twinkle2ಹಾಗೆ ನೇವರಿಸುತ್ತ ಯೋಚಿಸುತ್ತಿದ್ದೆ.
ಇನ್ನೇನು ಒಂದು ವಾರದಲ್ಲಿ ಮರಿ ಹಾಕಲಿರುವ ಹೆಣ್ಣು ಬೆಕ್ಕೊಂದರ ಪುಳಕ ಹಾಗೂ ನಡುಕ.ಹಠಾತ್ ಬದಲಾಗಿ ಹೋಗಿರುವ ಅದರ ನಡವಳಿಕೆಗಳು.ಮನುಷ್ಯನಾದ ನನ್ನನ್ನು ಸದಾ ಅನುಮಾನ ಮತ್ತು ಹೆದರಿಕೆಯಿಂದಲೇ ನೋಡುತ್ತಿದ್ದ ಈ ಜಂಬದ ಸುಂದರಿ ಇದೀಗ ಹತ್ತಿರ ಬೇರೆ ಯಾರೂ ಇಲ್ಲದ ಕಾರಣ ಇರುವ ನನ್ನೊಬ್ಬನನ್ನೇ ನಂಬಿಕೊಂಡಿದೆ.ಅದಕ್ಕೆ ಹೊತ್ತು ಹೊತ್ತಿಗೆ ಬೇಕಾದ ಹಾಲು, ಅನ್ನ ಮತ್ತು ಮೀನು, ಅದಕ್ಕೆ ಮರಿ ಹಾಕಲು ಬೇಕಾದ ಒಂದು ಪುಟ್ಟ ಜಾಗ ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಅದು ಬಯಸುತ್ತಿರುವ ಒಂದು ಅಭಯ.
ಹೀಗೂ ನನ್ನನ್ನು ನೆಚ್ಚಿಕೊಂಡಿರುವ ಒಂದು ಜೀವ ಇದೆಯಲ್ಲ ಎಂಬ ಅಚ್ಚರಿಯಿಂದ ನನಗೂ ಯಾಕೋ ಅದರ ಮೇಲೆ ಮಮತೆ ಹೆಚ್ಚಾಗುತ್ತಿದೆ ಎಂದು ಅನಿಸತೊಡಗಿತ್ತು.
ಅದರ ಹೊಟ್ಟೆಯೊಳಗಿಂದ ಒದೆಯುತ್ತಿರುವ ಮರಿಗಳೂ ಹಾಗೇ ನನಗೂ ಕೊಂಚ ಒದ್ದು, ಅದರ ಹೊಟ್ಟೆಯೊಳಗಿಂದ ಹೊರಡುವ ಸದ್ದು ಕೊಂಚ ನನ್ನೊಳಕ್ಕೂ ಹೊರಟು ಅದರ ಹಾಗೇ ಕಣ್ಣುಮುಚ್ಚಿ ಕುಳಿತು ಈ ವಿಶಾಲ ಜಗತ್ತಿನ ಕುರಿತು ಯೋಚಿಸುತ್ತಿದ್ದೆ.

twinkle3ಹಾಗೆ ಕಣ್ಣು ಮುಚ್ಚಿ ಕುಳಿತಾಗ ಮನುಷ್ಯರಾದ ನಮ್ಮ ಮನೋಲೋಕದೊಳಗೆ ಸುಳಿವ ಮುಖಗಳಲ್ಲಿ ನಮ್ಮ ಚಿರಪರಿಚಿತ ಮುಖಗಳೆಷ್ಟು ಮತ್ತು ನಾವು ಕನಸಲ್ಲಿ ಮಾತ್ರ ಬಯಸಬಹುದಾದ ಮುಖಗಳೆಷ್ಟು? ಕಣ್ಣು ಮುಚ್ಚಿಕೊಂಡಿರುವ ಈ ಗಬ್ಬದ ಬೆಕ್ಕಿನ ಮನೋಲೋಕದೊಳಗೆ ಏನೆಲ್ಲ ವ್ಯಾಪಾರಗಳು ಕುದುರುತ್ತಿರಬಹುದು? ಅದರ ಆಸೆ ಲಾಲಸೆಗಳೆಲ್ಲ ಈಗ ಬರೆಯ ಒಂದು ಧ್ಯಾನವಾಗಿ ಮಾರ್ಪಟ್ಟು ಅದು ಅದರ ಹೊಟ್ಟೆಯೊಳಗಿರುವ ಮರಿಗಳ ಸುಖವನ್ನು ಮಾತ್ರ ಬೇಡುತ್ತ ಕಣ್ಣುಮುಚ್ಚಿಕೊಂಡಿರುವಾಗ ಹೊರ ಜಗತ್ತಿನ ಶೇಕಡಾ ಎಷ್ಟು ಆಗುಹೋಗುಗಳು ಅದರ ಕಣ್ಣಾಲಿಯೊಳಗೆ ತೇಲಿಹೋಗುತ್ತಿರಬಹುದು?….. ಎಂದೆಲ್ಲ ಯೋಚಿಸುತ್ತ ನಿದ್ದೆಗೆ ಜಾರುತ್ತಿರುವಾಗ ಹೊಟ್ಟೆಯ ಮೇಲೆ ಮಗುವಂತೆ ಮಲಗಿದ್ದ ಆ ತಾಯಿ ಬೆಕ್ಕು ಸಿಂಹಿಣಿಯಂತೆ ಕೆಳಕ್ಕೆ ಜಿಗಿದು ಕಿಟಕಿಯನ್ನು ದಾಟಿ ಹೊರಕ್ಕೆ ಓಡಿತು.

ಈಗ ಈ ತಾಯಿಬೆಕ್ಕಿನ ಇನ್ನೊಂದು ಕಾದಾಟದ ಸಮಯ ಎಂದು ಕಣ್ಣುಮುಚ್ಚಿಕೊಂಡೇ ಕಿವಿಯಲ್ಲಿ ಆ ಕಾದಾಟದ ಸದ್ದುಗಳನ್ನು ಕೇಳತೊಡಗಿದೆ.
ಈಗ ಅದೇ ಗಂಡು ಬೆಕ್ಕಿನ ಜೊತೆ ಇದರ ಕಾದಾಟದ ಹೊತ್ತು.
ಮಹಾ ಸುಂದರಿಯೂ ಜಾಣೆಯೂ ಆಗಿರುವ ಈಕೆ ತಾನೇ ಆಸೆ ಪಟ್ಟು, ತಾನೇ ಆಯ್ಕೆ ಮಾಡಿ, ತಾನೇ ಕೂಡಿ, ತಾನೇ ಮರಿಗಳನ್ನು ಧಾರಣೆ ಮಾಡಿಕೊಂಡಾದ ಮೇಲೆ ಅದೇ ಗಂಡು ಬೆಕ್ಕಿನ ಜೊತೆ ಕಾದಾಟಕ್ಕಿಳಿದಿದ್ದಾಳೆ.
ಇದಾವುದೂ ಗೊತ್ತಿಲ್ಲದೆ ಕಕ್ಕಾವಿಕ್ಕಿಯಾಗಿರುವ ಆ ಗಂಡು ಬೆಕ್ಕು ತನ್ನ ಪ್ರಾಣ ರಕ್ಷಣೆಗಾಗಿ ಅನಿವಾರ್ಯವಾಗಿ ಕಾದಾಟಕ್ಕಿಳಿದಿದೆ.
ಎದ್ದು ಹೊರಗೆ ಬಂದು ನೋಡಿದರೆ ಹಸಿರು ಹುಲ್ಲುಹಾಸಿನ ನಡುವೆ ಕಾದಾಡುತ್ತಾ ಒಂದೇ ಚೆಂಡಿನ ಹಾಗೆ ತಿರುಗುತ್ತಿರುವ ಎರಡು ಬೆಕ್ಕುಗಳು.
twiಹಿಂದೆ ಒಂದು ಕಾಲದಲ್ಲಿ ಪ್ರಣಯದಲ್ಲೂ ಹೀಗೇ ಒಂದು ಚೆಂಡಿನಂತೆ ಕಾಣಿಸುತ್ತಿದ್ದ ಇದೇ ಬೆಕ್ಕುಗಳು.
ಹೆಣ್ಣು ಎಂಬುದು ಪ್ರಕೃತಿ, ಹೆಣ್ಣು ಎಂಬುದು ಸೃಷ್ಟಿ, ಆದರೆ ಹೆಣ್ಣು ಎಂಬುದು ಮರ್ಧಿನಿಯೂ ಹೌದು ಎಂಬುದು ಮನುಷ್ಯರಾದ ನಮಗೆಲ್ಲ ಗೊತ್ತು.
ಆದರೆ ಬಹುಶಃ ಇದೇನೂ ಗೊತ್ತಿರದ ಆ ಪಾಪದ ಗಂಡು ಬೆಕ್ಕು ಸೋತು ಸುಣ್ಣವಾಗಿ ತನ್ನ ಗಾಯಗಳನ್ನು ನೆಕ್ಕುತ್ತಾ ಓಡಿ ಹೋಯಿತು.
ಅದನ್ನು ಓಡಿಸಿ ತನ್ನ ಸಾಮ್ರಾಜ್ಯದ ಗಡಿಗಳನ್ನು ಗುರುತು ಮಾಡಿಕೊಂಡು ಹಿಂತಿರುಗಿದ ಈ ತಾಯಿ ಬೆಕ್ಕು ತಾನೂ ತನ್ನ ಗಾಯಗಳನ್ನು ನೆಕ್ಕುತ್ತಾ ವಿರಮಿಸಲು ತೊಡಗಿತು.
ಅದಕ್ಕೆ ಯಾಕೋ ನನ್ನ ಕುರಿತು ಇವನೂ ಒಬ್ಬ ಗಂಡಸು ಎಂದು ಅನಿಸಿರಬೇಕು.ಸ್ವಲ್ಪ ಹೊತ್ತು ದೂರವೇ ಉಳಿದಿತ್ತು.
ಸ್ವಲ್ಪ ಹೊತ್ತಿನ ನಂತರ ಹಾಲಿನ ತಟ್ಟೆಯ ಸದ್ದಾದಾಗ ಎಂದಿನಂತೆ ವಾಂಛೆಯಲಿ ಬಂದು ತನ್ನ ಬಾಲದಿಂದ ನನ್ನ ಕಾಲನ್ನು ಉಜ್ಜಲು ತೊಡಗಿತ್ತು

ಈ ಬೆಕ್ಕು ಮೊದಲ ಸಲ ಹೆತ್ತಾಗ ತಾನೊಬ್ಬಳೇ ಈ ಲೋಕದ ಮಹಾತಾಯಿ ಎಂಬಂತೆ ಆಡಿತ್ತು.ಅದುವರೆಗೂ ನಮ್ಮನ್ನು ನೆಕ್ಕುತ್ತಾ ಉಜ್ಜುತ್ತಾ ಇದ್ದ ಈಕೆ ಹೆರಿಗೆ ನೋವು ಉಂಟಾದ ಹೊತ್ತಿಂದ ಅಪರಿಚಿತೆಯಂತೆ ಯಾವುದೋ ಅಟ್ಟ ಹತ್ತಿ ಯಾವುದೋ ಬುಟ್ಟಿಯೊಳಗೆ ಮಾಯಕದಂತೆ ಮರಿ ಹಾಕಿ ಹಸಿವಾದಾಗ ಮಾತ್ರ ತನ್ನ ಉರಿ ಮುಖ ತೋರಿಸಿ ದುರುಗುಟ್ಟುತ್ತಾ ತಿಂದು ಅದೇ ಮಾಯಕದಲ್ಲಿ ಮಾಯವಾಗುತ್ತಿತ್ತು.
twinkl4ಮರಿಗಳು ಕಣ್ಣು ಬಿಟ್ಟು ದೊಡ್ಡವಾದ ಮೇಲೆ ಒಬ್ಬಳು ಸವತಿಯಂತೆ ಮನೆಪಾಲು ಮಾಡಿಕೊಂಡು ನಮ್ಮೊಡನೆ ಬದುಕುತ್ತಿತ್ತು.
ನನ್ನಯ ಮರಿಗಳು ನಿಮ್ಮಯ ಹಂಗಿನಲ್ಲಿರುವುದು ಬೇಡ ಎಂಬಂತೆ ಗಂಟೆಗಟ್ಟಲೆ ಅವುಗಳಿಗೆ ಹಾಲೂಡಿಸುತ್ತಿತ್ತು.ಹಾಲೂ ಸಾಲದಾದಾಗ ತಾನೇ ಒಬ್ಬಳು ನಿಪುಣ ಬೇಟೆಗಾರ್ತಿಯಂತೆ ಇಲಿಗಳನ್ನೂ ಅಳಿಲುಗಳನ್ನೂ ಓತಿಕ್ಯಾತಗಳನ್ನೂ ಬೇಟೆಯಾಡಿ ಅರೆಜೀವದಲ್ಲಿ ಮನೆಯೊಳಗೆ ತಂದು ಮರಿಗಳಿಗೆ ತಿನ್ನಲು ಹಾಕುತ್ತಿತ್ತು.
ನೀವೆಲ್ಲ ನಮಗೆ ಯಾರೂ ಅಲ್ಲ ಎಂಬಂತೆ ನಮ್ಮನ್ನು ಕಡೆಗಣಿಸಿ ಮರಿಗಳನ್ನು ಅವಿರತ ನೆಕ್ಕುತ್ತಾ ಕೂರುತ್ತಿತ್ತು.
‘ ಇರು ಬೆಕ್ಕೇ ನಿನಗೆ ಕಲಿಸುತ್ತೇವೆ’ ಎಂದು ಅದರ ಬೆಳೆದ ಮಕ್ಕಳನ್ನು ಇನ್ನೊಂದು ಊರಿಗೆ ಕೊಟ್ಟಿದ್ದೆವು.
ಆ ಮಕ್ಕಳು ಹೋದ ಮೇಲೂ ಬಹಳ ದಿನ ಈಕೆ ಇಲಿಗಳನ್ನೂ ಅಳಿಲುಗಳನ್ನೂ ಓತಿಕ್ಯಾತಗಳನ್ನೂ ಮನೆಯೊಳಕ್ಕೆ ತಂದು ಅನಾಥೆಯಂತೆ ರೋದಿಸುತ್ತಿದ್ದಳು.
ಆದು ಈಕೆಯ ಒಂದು ರೀತಿಯ ಮೂಕ ಪ್ರತಿಭಟನೆ.
‘ನೀವು ನನ್ನಿಂದ ಮರಿಗಳನ್ನು ದೂರಮಾಡಿದರೂ ಅವುಗಳ ನೆನಪಿಂದ ನನ್ನನ್ನು ದೂರಮಾಡಲಾರಿರಿ’ ಎನ್ನುವುದು ಈಕೆಯ ಆ ಸಾಂಕೇತಿಕ ಪ್ರತಿಭಟನೆಯ ರೀತಿಯಾಗಿತ್ತು.

ಈ ಸಲವೂ ಅಷ್ಟೇ.ಮೂರನೆಯ ಸಲ ಗರ್ಭ ದರಿಸುವವರೆಗೂ ತನ್ನ ಹಳೆಯ ಮರಿಗಳನ್ನು ನೆನಪಿಸಿಕೊಂಡು ಅವುಗಳಿಗೆ ಆಟವಾಡಲು ಎಂದು ಇಲಿಗಳನ್ನೂ ಅಳಿಲುಗಳನ್ನೂ ಓತಿಕ್ಯಾತಗಳನ್ನೂ ಮನೆಯೊಳಕ್ಕೆ ತರುತ್ತಿತ್ತು.twinkvle‘ ಈ ಹುಚ್ಚಿ ಬೆಕ್ಕಿಗೆ ಬುದ್ದಿಯಿಲ್ಲ’ ಎಂದು ಎಷ್ಟು ಬೈದರೂ ಮತ್ತೆ ಮತ್ತೆ ಅದೇ ಕೆಲಸವನ್ನು ಬೇಕೆಂತಲೇ ಮಾಡುತ್ತಿತ್ತು.

ಈ ಸಲ ಮಕ್ಕಳಾದ ಮೇಲೆ ಈಕೆಯ ಈ ರೆಬೆಲ್ ಬುದ್ದಿ ಮಾಯವಾಗಿ ಒಂದು ಸಾಧಾರಣ ಒಳ್ಳೆಯ ಬೆಕ್ಕಿನಂತೆ ಬದುಕು ಸಾಗಿಸಬಹುದು ಎಂದು ನಾವು ಅಂದುಕೊಂಡಿದ್ದೆವು.
ಈ ಸಲ ಸ್ವಲ್ಪ ತಿನ್ನಲು ಇಲ್ಲದೆ ಸ್ವಲ್ಪ ಹಸಿವಾಗಿ ಇಬ್ಬರಿಗೂ ಸ್ವಲ್ಪ ಒಳ್ಳೆಯ ಬುದ್ದಿಯೂ ಬರಲಿ ಎಂದು ನನ್ನನ್ನೂ ಈ ಗಬ್ಬದ ಬೆಕ್ಕನ್ನೂ ಮನೆಯಲ್ಲಿ ಬಿಟ್ಟು ಎಲ್ಲರೂ ಊರಿಗೆ ಹೋಗಿದ್ದರು.
ನಾವು ಇದನ್ನೇ ಹಬ್ಬ ಎಂದು ತಿಳಿದುಕೊಂಡು ಹೊರಗಿಂದ ಮೀನನ್ನೂ, ಬಿರಿಯಾನಿಯನ್ನೂ ತಂದು ಸಂಭ್ರಮದಿಂದ ಬದುಕುತ್ತಿದ್ದೆವು.

ನಾನು ಆಫೀಸು, ಓದು,ಸಿನೆಮಾ, ಫೇಸುಬುಕ್ಕು ಎಂದು ಕಾಲ ಕಳೆದರೆ ಈ ಗಬ್ಬದ ಬೆಕ್ಕು ನಿದ್ದೆ ಮತ್ತು ಗಂಡು ಬೆಕ್ಕುಗಳ ಜೊತೆ ಹೋರಾಟದಲ್ಲಿ ತನ್ನ ತಾಯ್ತನವನ್ನು ಸಂಭ್ರಮಿಸುತ್ತಿತ್ತು.

ಯಾಕೋ ಈ ಬೆಕ್ಕಿಗೆ ಈ ಸಲ ಮಹತ್ತಾದುದು ಏನನ್ನೋ ಸಾಧಿಸಬೇಕು ಎಂಬ ಛಲ ಇದ್ದಂತಿತ್ತು.
ಬಹುಶಃ ನರಮನುಷ್ಯನೊಬ್ಬನ ಬರಹಕ್ಕೆ ವಸ್ತುವಾಗಬೇಕು ಎಂಬ ಆಸೆ ಇದ್ದಿರಬೇಕು.
ಅದಕ್ಕೇ ಇರಬೇಕು ಹೊಟ್ಟೆಯೊಳಗೆ ಐದು ಮರಿಗಳನ್ನು ಇಟ್ಟುಕೊಂಡು ಅದೇ ಗಂಡುಬೆಕ್ಕಿನೊಡನೆ ನಡುರಸ್ತೆಯಲ್ಲಿ ಕಾದಾಡುತ್ತ ಕಾರೊಂದರ ಕೆಳಗೆ ಸಿಲುಕಿ ಸತ್ತೇ ಹೋಯಿತುtww

ಮತ್ತು ಈ ಅಂಕಣಕ್ಕೂ ಸಿಲುಕಿ ನಲುಗುವಂತಾಯಿತು.

15th June 2014

“ಅಂಕಣಕ್ಕೆ ಸಿಲುಕಿಕೊಂಡ ತಾಯಿಬೆಕ್ಕು” ಗೆ ಒಂದು ಪ್ರತಿಕ್ರಿಯೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: