ಪುಣ್ಯಪುರುಷನ ಪುರಾತನ ಸಖಿ

DSC_8920

`ಪರಮಾತ್ಮನ ಸಂಸತ್ತಿನಲ್ಲಿ ವಿಶೇಷ ಪೂಜೆ ಇದೆ. ದಯವಿಟ್ಟು ಬಂದು ಪ್ರಸಾದ ಸ್ವೀಕರಿಸಿಕೊಂಡು ಹೋಗಿ. ಸ್ವತಃ ಪರಮಾತ್ಮನ ಅವತಾರವಾದ ನಮ್ಮ ಗುರುಗಳೇ ನಿಮ್ಮನ್ನು ಆಹ್ವಾನಿಸಿರುವರು’ ಎಂದು ಎದುರಿಗೆ ಕುಳಿತಿದ್ದ ವಯಸ್ಸಾದ ಆ ಮಹಿಳೆ ಕೇಳಿಕೊಳ್ಳುತ್ತಿದ್ದರು.

ನೋಡಿದ ಕೂಡಲೇ ಗೌರವ ಹುಟ್ಟುವಂತಿದ್ದ ಆಕೆಯ ಮುಖ. ಸ್ವಲ್ಪ ಭಯವನ್ನೂ ಹುಟ್ಟಿಸುವಂತಿದ್ದ ಜಡೆಗಟ್ಟಿದ ಅವರ ಮುಡಿ. ಆ ಜಟೆಯ ತುದಿಯಲ್ಲಿ ಉಳಿದಿದ್ದ ಮೋಟು ಕೂದಲನ್ನು ಸುರುಳಿ ಸುತ್ತಿ ಅದರ ತುದಿಗೆ ಮಣಿಹಾರವೊಂದನ್ನು ಸುತ್ತಿಕೊಂಡಿದ್ದ ಅವರು ಯಾವುದೋ ಒಂದು ಕಾಲದಲ್ಲಿ ಯಾರೋ ಒಬ್ಬಾತ ಖುಷಿಮುನಿಯ ಆಶ್ರಮದಲ್ಲಿ ಕೈಂಕರ್ಯಕ್ಕಿದ್ದ ವಯಸ್ಸಾದ ಸಖಿಯಂತೆ ಕಾಣಿಸುತ್ತಿದ್ದರು.

‘ಓ ಹಾಗಾದರೆ ಲೋಕಸಂಚಾರ ಎಂದು ತಿರುಗಾಡಲು ಹೋಗಿದ್ದ ನಿನ್ನ ಪರಮಾತ್ಮ ಆಷಾಡ ಶುಕ್ರವಾರಕ್ಕೆ ಸರಿಯಾಗಿ ವಾಪಾಸು ಬಂದಿರುವರು ಎಂದಾಯಿತು. ಸರಿ ತಾಯಿಯೇ ಬರುತ್ತೇನೆ.’ ಎಂದು ಆಕೆಯನ್ನು ಬೀಳ್ಕೊಡಲು ನೋಡಿದೆ.
ಆದರೆ ಹೀಗೆ ಹಠಾತ್ತನೆ ನನ್ನ ಬೀಳ್ಕೊಡುಗೆಯನ್ನು ಸಹಿಸದ ಆಕೆ ‘ ಅಯ್ಯೋ ಶಂಕರಾ, ಯಾಕಪ್ಪಾ ಇಷ್ಟು ಬೇಗ ಈ ತಾಯಿಯನ್ನು ಆಚೆ ಕಳಿಸುತ್ತೀಯಾ.. ಸ್ವಲ್ಪ ಅವಲಕ್ಕಿಯನ್ನಾದರೂ ಬಾಯಿಗೆ ಹಾಕಿಕೋ’ ಎಂದು ತನ್ನ ಜೋಳಿಗೆಯಿಂದ ಒಂದು ಪುರಾತನ ಗಂಟೊಂದನ್ನು ಬಿಚ್ಚಿ ಅದರೊಳಗಿಂದ ಒಂದು ಮುಷ್ಟಿ ಕುಟ್ಟವಲಕ್ಕಿಯನ್ನು ಹೊರ ತೆಗೆದು ನನಗೆ ನೀಡಿತು.

DSC_8911ಇದು ಬಹಳ ಪುರಾತನವೂ ಪವಿತ್ರವೂ ಆದ ಅವಲಕ್ಕಿ. ಪುರಾತನ ಯಾಕೆಂದರೆ ಈಕೆಯೂ ಈಕೆಯ ಭಗವಂತ ಸ್ವರೂಪಿಯೂ ಆದ ಗುರುವೂ ಹಲವು ವರ್ಷಗಳ ಹಿಂದೆ ಹಂಪಿಯ ಮಾತಂಗ ಪರ್ವತ ಪ್ರದೇಶದಲ್ಲಿ ಓಡಾಡುತ್ತಿರುವಾಗ ಅವರ ಹಸಿವನ್ನು ನೀಗಿಸಿದ್ದು ಈ ಅವಲಕ್ಕಿಯ ಗಂಟು.

ಯಾಕಾದರೂ ಈಕೆಯ ಈ ಕಮಟು ಪರಿಮಳದ ಅವಲಕ್ಕಿ ಮುಗಿಯುವುದಿಲ್ಲ ಭಗವಂತಾ ಎಂದು ನಾನೂ ಬೇಡುತ್ತಿರುತ್ತೇನೆ. ಆದರೆ ಈಕೆ ಹಠಕ್ಕೆ ಬಿದ್ದವಳಂತೆ ಆ ಒಂದು ಮುಷ್ಟಿ ಕಮಟು ಅವಲಕ್ಕಿಯನ್ನು ತಿನ್ನಿಸಿಯೇ ಹೋಗುತ್ತಾಳೆ.

ತಿನ್ನುತ್ತಿರುವ ಅಷ್ಟು ಹೊತ್ತಿನಲ್ಲಿ ಒಂದಿಷ್ಟು ಹೊಸ ಕಥೆಗಳು, ನೂರಾರು ತಗಾದೆಗಳು, ಅವೆಲ್ಲದಕ್ಕಿಂತ ಹೆಚ್ಚಾಗಿ ಭಗವಂತ ಸ್ವರೂಪಿಯಾದ ಆಕೆಯ ಗುರುವಿನ ಹೆಚ್ಚಾಗುತ್ತಲೇ ಇರುವ ಲೋಕಸಂಚಾರದ ಕುರಿತ ಆಕೆಯ ದೂರುಗಳು.

ಕಳೆದ ಸಲ ಬಂದಾಗ ‘ಅಯ್ಯೋ ಶಂಕರಾ.. ಇವರದ್ದು ತಿರುಗಾಟ ಇತ್ತೀಚೆಗೆ ಹೆಚ್ಚೇ ಆಗುತ್ತಿದೆಯಪ್ಪಾ..ಜೊತೆಗೆ ಮುಂಗೋಪವೂ ಜಾಸ್ತಿಯಾಗುತ್ತಿದೆ. ಈ ಲೋಕದ ಯಾವುದರಲ್ಲೂ ಅವರಿಗೆ ಸಮಾಧಾನವೇ ಇಲ್ಲ. ನನ್ನನ್ನೂ ಬಾಯಿ ಬಿಚ್ಚಲು ಬಿಡುವುದಿಲ್ಲ. ಏನಾದರೂ ಒಂದು ಮಾತು ಹೇಳಿದರೆ ಕಮಂಡಲವನ್ನು ಎತ್ತಿಕೊಂಡು ಲೋಕಸಂಚಾರಕ್ಕೆ ಹೊರಟೇ ಬಿಡುತ್ತಾರೆ. ಇವರು ಹೀಗೆ ಹೊರಟು ಹೋದರೆ ಆಶ್ರಮದ ರಕ್ಷಣೆ ಯಾರದಪ್ಪಾ..ಶಂಕರಾ..’ ಎಂದು ತನ್ನ ಭಗವಂತ ಸ್ವರೂಪಿಯಾದ ಗುರುವನ್ನು ನವಿರಾಗಿ ಟೀಕಿಸಿದ್ದಳು. ಆಮೇಲೆ ಹಾಗೆ ಟೀಕಿಸಿದ್ದಕ್ಕೆ ತನ್ನನ್ನೇ ತಾನು ಹಳಿದಿದ್ದಳು. ಅವರು ಗುರುಸಮಾನ ಬ್ರಹ್ಮಸ್ವರೂಪಿ. ನಾನವರ ಪರಮದಾಸಿ . ‘ಅಯ್ಯೋ ಶಂಕರಾ ಅವರಿಗೇ ನಾನು ಬೈದೆನಾ’ ಎಂದು ಹೊರಟಿದ್ದರು. ಹೊರಡುವಾಗ ಯಾಕೋ ಏನೋ ವಯಸ್ಸಾದ ಆ ಜೀವದ ಕಣ್ಣತುದಿಯಿಂದ ಒಂದು ಹನಿ ನೀರು ಆಕೆಗೇ ಅರಿವಿಲ್ಲದಂತೆ ಹೊರಗೆ ಬರಲು ನೋಡುತ್ತಿತ್ತು.

ಇದೇ ರೀತಿ ಜಿಲ್ಲಾ ಪೋಲೀಸು ಖಚೇರಿಯ ಕುರ್ಚಿಯೊಂದರಲ್ಲಿ ಒಂದು ಹನಿ ಕಣ್ಣೀರು ಇಟ್ಟುಕೊಂಡು ಕೂತಿರಬೇಕಾದರೆ ನಾನು ಮೊದಲ ಸಲ ಈಕೆಯನ್ನ ಮಾತನಾಡಿಸಿದ್ದೆ. ‘ಶಂಕರಾ ನನ್ನ ದುಃಖವನ್ನು ಯಾರ ಬಳಿ ಹೇಳಲಿ ಎಂದು ಇಲ್ಲಿ ಕೂತಿದ್ದೆ.ಆ ಹೊತ್ತಿಗೆ ಸರಿಯಾಗಿ ನೀನು ಬಂದೆ’ ಎಂದು ಈಕೆ ತನ್ನ ಕಥೆಯೆಲ್ಲವನ್ನೂ ಹೇಳಿದ್ದಳು. ಈಕೆಯ ಜೋಳಿಗೆಯೊಳಗೆ ಅದಕ್ಕೆ ಪೂರಕವಾದ ಕಾಗದಪತ್ರಗಳು, ಫೋಟೋ ಆಲ್ಬಂಗಳು ಎಲ್ಲವೂ ಇದ್ದವು.

DSC_8878ಅದೊಂದು ದೊಡ್ಡ ಕಥೆ.

ರಾಮಾಪುರದ ಕಡೆಯ ಶಿಲ್ಪಿಗಳ ಜಾತಿಗೆ ಸೇರಿದ್ದ ಈಕೆ ಪುಟ್ಟ ಹುಡುಗಿಯಾಗಿರುವಾಗಲೇ ಮದುವೆಯಾಗಿದ್ದು, ಮದುವೆಯಾದಾತ ಮೈಸೂರಿನ ದೊಡ್ಡಾಸ್ಪತ್ರೆಯಲ್ಲಿ ಫ್ಲೂಜ್ವರ ಬಂದು ತೀರಿಹೋಗಿದ್ದು, ತೀರಿಹೋದವನಿಗೆ ಯಾರೂ ದಿಕ್ಕಿಲ್ಲದೆ ಇಲ್ಲದೆ ತಾನೇ ತಳ್ಳುಗಾಡಿಯೊಂದರಲ್ಲಿ ಆತನ ದೇಹವನ್ನು ತಳ್ಳುತ್ತಾ ಚಾಮುಂಡಿಯ ಪಾದದವರೆಗೆ ಹೋಗಿ ಮಣ್ಣು ಮಾಡಿದ್ದು, ಅಲ್ಲೇ ಸ್ಮಶಾನವಾಸಿಯಂತೆ ವಾಸಿಸುತ್ತಿದ್ದುದು, ಆ ಹೊತ್ತಲ್ಲಿ ಅಲ್ಲಿಗೆ ಪರಮಾತ್ಮನಂತೆ ಬಂದ ಈ ಗುರು ತನಗೆ ಧೀಕ್ಷೆ ನೀಡಿದ್ದು, ನಂತರ ಆತನ ಜೊತೆ ತಾನು ಪಾದುಕೆಯಂತೆ ಊರೂರು ಮಲೆ ಸ್ಮಶಾನ ಪರ್ವತಗಳನ್ನು ತುಳಿಯುತ್ತಾ ಸವೆದದ್ದು, ಸವೆಯುತ್ತಾ ಸವೆಯುತ್ತಾ ತಾನೆಂಬುದು ಅಳಿದು ತಾನು ಗುರುವೆಂಬ ಆ ಬೆಳಕಿನ ಒಂದು ಭಾಗವೇ ಆಗಿಹೋಗಿದ್ದು, ಕಾವೇರಿ ತಟದ ಪುರಾತನ ಪಟ್ಟಣವೊಂದರ ಸ್ನಾನಘಟ್ಟದ ಬಳಿ ಆ ಪರಮಾತ್ಮನಿಗಾಗಿ ತಾನೇ ಕೈಯ್ಯಾರೆ ಕಟ್ಟಿದ ಆಶ್ರಮ, ತಾನೇ ನೆಟ್ಟ ಆಲದ ಮರಗಳು, ಈಗ ಅದೆಲ್ಲವೂ ಭೂಗಳ್ಳರ ಪಾಲಾಗುತ್ತಿರುವುದು, ಇದೆಲ್ಲವನ್ನೂ ರಕ್ಷಿಸಬೇಕಾದ ಈ ಜೀವಂತ ಪರಮಾತ್ಮ ವಿನಾಕಾರಣ ಸಿಟ್ಟುಕೊಂಡು ಲೋಕಸಂಚಾರ ಹೊರಟಿರುವುದು, ಇದನ್ನು ಅರಿತ ಭೂಗಳ್ಳ ಪಾತಕಿಗಳು ತನ್ನನ್ನು ಕೊಲ್ಲಲು ಸಂಚು ಹೂಡಿರುವುದು, ತನ್ನ ಪ್ರಾಣ ರಕ್ಷಣೆಗಾಗಿ ಮೊರೆಯಿಡಲು ತಾನು ಜಿಲ್ಲೆಯ ಪೋಲೀಸ್ ಅಧಿಕಾರಿಯ ಕಚೇರಿಯ ಈ ಕುರ್ಚಿಯಲ್ಲಿ ಕೂತಿರುವುದು ಇದೆಲ್ಲವನ್ನೂ ಆಕೆ ಹೇಳಿದ್ದಳು.

ತಾನು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿರುವಾಗ ರಕ್ಷಿಸಬೇಕಾದ ತನ್ನ ಗುರುಪರಮಾತ್ಮನೇ ಕಾಣೆಯಾಗಿರುವರಲ್ಲಾ ಎಂದು ಕಣ್ಣೀರು ಹಾಕಿದ್ದಳು.

DSC_8888ನಿನ್ನೆ ಆಷಾಡ ಶುಕ್ರವಾರ ಮುಂಜಾವ ಕಾವೇರಿ ತೀರದ ಈ ಪರಮಾತ್ಮನ ಆಶ್ರಮಕ್ಕೆ ಹೋಗಿದ್ದೆ.

ಇದು ಭಾರತದ ನಿಜವಾದ ಸಂಸತ್ತು, ನಾನು ಭಾರತದ ಪೂಜ್ಯ ಪುಣ್ಯಪುರುಷ ಎಂಬ ಬೋರ್ಡು ಹಾಕಿಕೊಂಡು ಅದರ ಕೆಳಗಿನ ಮುರುಕು ಮಂಚದಲ್ಲಿ ಕಂಬಳಿ ಹೊದ್ದುಕೊಂಡು ಆ ಪುಣ್ಯಪುರುಷರು ಮಲಗಿದ್ದರು. ಅವರು ಇಲ್ಲಿ ಹೀಗೆ ನನ್ನ ಸನಿಹದಲ್ಲೇ ಹೀಗೆ ಪವಡಿಸಿರುವರಲ್ಲಾ ಎಂಬ ಸಂಭ್ರಮದಲ್ಲೇ ಆ ಮಹಿಳೆ ಚುರುಕಾಗಿ ಓಡಾಡುತ್ತಿದ್ದಳು. ಇದು ಭಾರತದ ನಿಜವಾದ ಬ್ಯಾಂಕು. ಇಲ್ಲಿ ಸಾಲಕ್ಕೆ ಬಡ್ಡಿ ಇರುವುದಿಲ್ಲ, ಇದು ಭೂಲೋಕದ ನಿಜವಾದ ಸತ್ಯಪೀಠ ಎಂಬಿತ್ಯಾದಿ ಬೋರ್ಡುಗಳು ಕಂಬಳಿ ಹೊದ್ದು ಮಲಗಿದ್ದ ಆ ಭಗವಂತನ ಸುತ್ತಮುತ್ತ ತೂಗಾಡುತ್ತಿದ್ದವು.

‘ನಿಮ್ಮ ಗುರುವಿನ ಜೊತೆ ಮಾತಾಡಬೇಕಲ್ಲಾ’ ಎಂದು ಕೇಳಿದರೆ ‘ಈಗ ಬೇಡ ಶಂಕರಾ..ದಣಿದು ಬಂದು ಮಲಗಿದ್ದಾರೆ. ಇನ್ನೊಮ್ಮೆ’ ಎಂದು ಮಾವಿನ ಹಣ್ಣೊಂದನ್ನು ಗುರುವಿನ ಪಾದಕ್ಕೆ ತಾಗಿಸಿ ಕಣ್ಣಿಗೊತ್ತಿಕೊಂಡು ತಿನ್ನಲು ಇತ್ತು ಕಳಿಸಿದಳು.

‘ಪರಮಾತ್ಮನ ಸಂಸತ್ತಿನಲ್ಲಿ ವಿಶೇಷ ಪೂಜೆ ಎಂದು ಕರೆದಿದ್ದರಲ್ಲಾ’ ಎಂದರೆ ‘ಅಯ್ಯೋ ಶಂಕರಾ.. ಪರಮಾತ್ಮನಿಗೆ ತುಂಬಾ ಸಿಟ್ಟು ಬಂದಿದೆ. ಪೂಜೆಯೂ ಬೇಡ ಪುನಸ್ಕಾರವೂ ಬೇಡ.ಜಗತ್ತು ಹಾಳಾಗಿ ಹೋಗಲಿ ನಾಳೆಯೇ ಪ್ರಳಯವಾಗಲಿ ಎಂದು ಶಾಫ ಹಾಕಿ ಮಲಗಿದ್ದಾರೆ. ಸಾಧ್ಯವಾದರೆ ಪ್ರಳಯ ಆಗದೇ ಹೋದರೆ ಮುಂದಿನ ಶುಕ್ರವಾರ ಬನ್ನಿ, ಈಗ ದಯವಿಟ್ಟು ಹೋಗಿ’ ಎಂದು ಅರ್ಜೆಂಟಾಗಿ ಬೀಳ್ಕೊಟ್ಟಳು.DSC_8891

13th July 2014

Photos By the author

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: