ಅರವತ್ತರ ದಶಕದಲ್ಲಿ ಮೈಸೂರಿನಲ್ಲಿ ಫೋಟೋಫ್ಲಾಷ್ ಸುಬ್ಬಣ್ಣಿ ಎಂದೇ ಹೆಸರಾಗಿದ್ದ ಕೆ.ವಿ.ಸುಬ್ಬರಾವ್ ಅವರು ಇದೀಗ ಸ್ವಲ್ಪ ಮೊದಲು ಮಹಡಿಯ ಮೇಲಿನ ತಮ್ಮ ಡಾರ್ಕ್ ರೂಂನಲ್ಲಿ ಕುಳ್ಳಿರಿಸಿಕೊಂಡು ಆ ಕಾಲದ ಮೈಸೂರಿನ ಕಥೆಗಳನ್ನು ಹೇಳುತ್ತಿದ್ದರು.
ಅವರಿಗೀಗ ಸುಮಾರು ಎಂಬತ್ತಮೂರು ವರ್ಷ.
ಅವರ ಹಳೆಯ ಕಾಲದ ಆ ಫೋಟೋಫ್ಲಾಷ್ ಸ್ಟುಡಿಯೋ ಮೈಸೂರಿನ ಧನ್ವಂತರಿ ರಸ್ತೆಯ ಮೂಲೆಯಲ್ಲಿತ್ತು.ಮಹಾ ಸಂಗೀತಗಾರರಾದ ಮೈಸೂರು ವಾಸುದೇವಾಚಾರ್ಯರೂ, ಬಹಳ ದೊಡ್ಡ ಬರಹಗಾರರಾದ ಆರ್.ಕೆ.ನಾರಾಯಣ್ ಅವರೂ, ಛಾಯಾಚಿತ್ರಗ್ರಾಹಕರಾದ ಸತ್ಯನ್ನರೂ ಆ ಕಾಲದಲ್ಲಿ ಇವರ ಸ್ಟುಡಿಯೋಕ್ಕೆ ಹರಟೆ ಹೊಡೆಯಲು ಹೋಗುತ್ತಿದ್ದರು.ಈ ಸ್ಟುಡಿಯೋ ಮೈಸೂರಿನ ದೇವರಾಜ ಮಾರುಕಟ್ಟೆಗೂ, ಕೃಷ್ಣರಾಜ ಆಸ್ಪತ್ರೆಗೂ ಬಹಳ ಹತ್ತಿರ ಇದ್ದ ಕಾರಣ ರೈತಾಪಿ ಜನರೂ ಈ ಸ್ಟುಡಿಯೋಕ್ಕೆ ಮುಗಿ ಬೀಳುತ್ತಿದ್ದರು. ಅದೂ ಅಲ್ಲದೆ ಆ ಕಾಲದಲ್ಲಿ ಮೈಸೂರಿನ ಮಹಾರಾಜರನ್ನು ಕಾಣಲು ದೇಶ ವಿದೇಶಗಳ ಗಣ್ಯರು ಆಗಮಿಸುತ್ತಿದ್ದುದರಿಂದ ಮಹಾರಾಜರ ಬಹಳ ಹತ್ತಿರಕ್ಕೆ ಹೋಗಿ ಆ ಗಣ್ಯರುಗಳ ಫೋಟೋ ತೆಗೆದವರೂ ಇದೇ ಸುಬ್ಬಣ್ಣಿಯವರಾಗಿದ್ದರು.
ಇಂತಹ ಗಣ್ಯರಲ್ಲಿ ಲಾರ್ಡ್ ಮೌಂಟ್ ಬ್ಯಾಟನ್, ಪಂಡಿತ್ ನೆಹರೂ, ರಾಜಾಜಿಯವರು, ರಾಜೇಂದ್ರಪ್ರಸಾದರು ಮೊದಲಾದವರು ಸೇರಿದ್ದಾರೆ.ಸೌದಿ ಅರೇಬಿಯಾದ ಸುಲ್ತಾನ ಮೈಸೂರಿಗೆ ಬಂದಾಗ ಸರ್ಕಾರಿ ಭವನದಲ್ಲಿ ಶ್ರೀಮಾನ್ ಮಹಾರಾಜರ ಜೊತೆ ಫೋಟೋ ತೆಗೆಸಿಕೊಂಡರಂತೆ.ತೆಗೆದವರು ಫೋಟೋ ನೋಡಿ ಖುಷಿಯಾಗಿ ಹತ್ತು ಸಾವಿರ ರೂಪಾಯಿ ಮತ್ತು ಒಂದು ಸವರನ್ ಚಿನ್ನ ಕೊಟ್ಟು ಶಹಬಾಸ್ ಅಂದರಂತೆ.
ಸುಬ್ಬಣ್ಣಿಯವರು ಇದೆಲ್ಲಾ ಕಥೆಗಳನ್ನು ಹೇಳುತ್ತಿದ್ದುದು ಧನ್ವಂತರಿ ರಸ್ತೆಯ ಅವರ ಹಳೆಯ ಕಾಲದ ಸ್ಟುಡಿಯೋದ ಡಾರ್ಕ್ ರೂಂನಲ್ಲಿ ಅಲ್ಲ.ಬದಲಾಗಿ ಅವರು ಇತ್ತೀಚೆಗೆ ಮೂರು ವರ್ಷಗಳ ಹಿಂದೆ ಹೊಸದಾಗಿ ಮೈಸೂರಿನ ಬಡಾವಣೆಯೊಂದರಲ್ಲಿ ಕಟ್ಟಿಸಿಕೊಂಡಿರುವ ಮನೆಯ ಮಹಡಿಯ ಮೇಲಿನ ಡಾರ್ಕ್ ರೂಮಿನಲ್ಲಿ.
ಅವರ ಐತಿಹಾಸಿಕ ಹಳೆಯ ಸ್ಟುಡಿಯೋ ಈಗ ಇಲ್ಲ.
ಅವರು ಆ ಸ್ಟುಡಿಯೋದಲ್ಲಿದ್ದ ಆ ಡಾರ್ಕ್ ರೂಮನ್ನು ಯಥಾವತ್ತಾಗಿ ಈ ಮಹಡಿಯ ಮೇಲಕ್ಕೆ ರೂಪಾಂತರಿಸಿದ್ದಾರೆ.ಹಾಗೇ ಕತ್ತಲು ಕತ್ತಲಾಗಿರುವ ಡಾರ್ಕ್ ರೂಂ.ನಡುವಲ್ಲಿ ನಿಗೂಢವಾಗಿ ಉರಿಯುತ್ತಿರುವ ಎರಡು ಮಂಕು ಬೆಳಕಿನ ಕೆಂಪು ದೀಪಗಳು.ಹಳೆಯ ಕಾಲದ ಫ್ಲಾಷ್ ಬಲ್ಬುಗಳು.ನೆಗೆಟಿವ್ ಗಳನ್ನು ಸಂಸ್ಕರಿಸಲು ಬೇಕಾದ ಅಗಲ ತಳದ ಮೂರು ದೊಡ್ಡ ಬಟ್ಟಲುಗಳು.ಮೂಲೆಯಲ್ಲಿ ಒಂದು ಗೋಣಿಚೀಲದಲ್ಲಿ ಹಾಗೇ ಬಿದ್ದುಕೊಂಡಿರುವ ರಾಸಾಯನಿಕಗಳು.ನಾನಾ ನಮೂನೆಯ ಎನ್ ಲಾರ್ಜರುಗಳು, ಫಿಲ್ಟರುಗಳು, ಮುಖದ ಮೇಲೆ ಹಾಕಲು ಬೇಕಾದ ಮುಸುಕುಗಳು ಮತ್ತು ಒಂದೊಂದು ಯುಗದ ಕಥೆ ಹೇಳುವ ಹಳೆಯ ಕಾಲದ ಹತ್ತಾರು ನಿರುಪಯುಕ್ತ ಕ್ಯಾಮರಾಗಳು.
ಒಂದು ಕಾಲದಲ್ಲಿ ಫೋಟೋಗ್ರಾಫರನೊಬ್ಬನ ಮೈಮೇಲಿನ ರತ್ನಖಚಿತ ಮಣಿಹಾರಗಳಂತೆ ಕಂಗೊಳಿಸುತ್ತಿದ್ದ ಈ ಎಲ್ಲ ಪರಿಕರಗಳೂ ಈಗ ಈ ಅಣುಕು ಡಾರ್ಕ್ ರೂಮಿನಲ್ಲಿ ಕಾಲನ ಹೊಡೆತಕ್ಕೆ ಸಿಲುಕಿ ಸುಸ್ತಾಗಿ ಬಿದ್ದುಕೊಂಡಿದ್ದವು.
ಈ ಸುಬ್ಬರಾಯರು ಒಂದು ಕಾಲದಲ್ಲಿ ಮೈಸೂರಿನ ಬಹಳ ಒಳ್ಳೆಯ ಹಾಕಿ ಆಟಗಾರರಾಗಿದ್ದವರು.ಜೊತೆಗೆ ಫುಟ್ಬಾಲನ್ನೂ ಆಡುತ್ತಿದ್ದವರು.ಶಾಸ್ತ್ರೀಯ ಸಂಗೀತವನ್ನೂ ಚೆನ್ನಾಗಿ ತಿಳಿದುಕೊಂಡಿದ್ದರು.ಹಾಗಾಗಿ ಸಂಗೀತ ಕಲಾನಿದಿ ಮೈಸೂರು ವಾಸುದೇವಾಚಾರ್ಯರೇ ಇವರ ಸ್ಟುಡಿಯೋವನ್ನು ಉದ್ಘಾಟಿಸಿ ಆಶೀರ್ವದಿಸಿದ್ದರು.ಅಷ್ಟೇ ಅಲ್ಲದೆ ಮೂಡು ಬಂದಾಗ ಇವರ ಸ್ಟುಡಿಯೋದಲ್ಲೇ ಹಾಡಿಯೂ ಬಿಡುತ್ತಿದ್ದರು.ಹಾಗಾಗಿ ಯುವಕನಾಗಿದ್ದ ಸುಬ್ಬಣ್ಣಿಯವರಿಗೆ ಸ್ಟುಡಿಯೋದಲ್ಲಿ ಸುಮ್ಮನೆ ಕುಳಿತಿದ್ದಾಗ ಆ ದಾರಿಯಲ್ಲಿ ಅಕಸ್ಮಾತ್ತಾಗಿ ಮೈಸೂರು ವಾಸುದೇವಾಚಾರ್ಯರು ಬರಬಾರದೇ, ಬಂದು ಹಾಡಬಾರದೇ ಎಂಬ ಆಸೆಯಾಗುತ್ತಿತ್ತು.ಆಗ ಅಲ್ಲೇ ಹತ್ತಿರ ಯಾದವಗಿರಿಯಲ್ಲಿ ವಾಸವಿದ್ದ ಆಂಗ್ಲ ಲೇಖಕ ಆರ್.ಕೆ.ನಾರಾಯಣರು ಮೈಸೂರಿನ ಜನಸಾಮಾನ್ಯರನ್ನು ಹತ್ತಿರದಿಂದ ನೋಡಲು ದೇವರಾಜ ಮಾರುಕಟ್ಟೆಯ ಬಳಿ ಹೋಗುತ್ತಿದ್ದವರು ವಾಪಾಸು ಹೋಗುವಾಗ ಇವರಲ್ಲಿ ಬಂದು ಹರಟೆಗೆ ಕುಳಿತುಕೊಳ್ಳುತ್ತಿದ್ದರು.ಜೊತೆಗೆ ಹಿರಿಯ ಛಾಯಾಚಿತ್ರಗ್ರಾಹಕ ಟಿ.ಎಸ್.ಸತ್ಯನ್ ಇರುತ್ತಿದ್ದರು. ಅವರಿಬ್ಬರು ಕೂತು ಕಂಡ ಕತೆಗಳನ್ನು ಹಂಚಿಕೊಳ್ಳುತ್ತಿರುವಾಗ ಸುಬ್ಬಣ್ಣಿಯವರೂ ಅವುಗಳನ್ನು ಕೇಳಿಸಿಕೊಳ್ಳುತ್ತಿದ್ದರು.ಜೊತೆಗೆ ತಾವು ಹತ್ತಿರದಿಂದ ಕೇಳಿದ ರೈತಾಪಿ ಜನರ ಕಥೆಗಳನ್ನು ಅವರಿಬ್ಬರಲ್ಲಿ ಹಂಚಿಕೊಳ್ಳುತ್ತಿದ್ದರು.
ಹಾಗಾಗಿ ಕಥೆ ಯಾವುದು ಮತ್ತು ನಿಜ ಯಾವುದು.ಕಥೆಯೊಂದು ಹೊರಬಂದಾಗ ಅದರಲ್ಲಿ ನಿಜದ ರಕ್ತ ಎಷ್ಟಿರುತ್ತದೆ ಮತ್ತು ಕಲ್ಪನೆಯ ಬಣ್ಣ ಎಷ್ಟಿರುತ್ತದೆ ಎಂಬುದು ಸುಬ್ಬಣ್ಣಿಯವರಿಗೆ ನಿಖರವಾಗಿ ಗೊತ್ತಿತ್ತು.
ಕಥೆಗಾರರು ಹಾಗೆ ಮಾಡುವುದು ಬಹುಶಃ ಸರಿ ಎಂಬುದಾಗಿ ಅವರು ಇದೀಗ ಸ್ವಲ್ಪ ಮೊದಲು ತಮ್ಮ ರೂಪಾಂತರಿಸಿದ ಡಾರ್ಕ್ ರೂಮಿನಲ್ಲಿ ಕುಳಿತಿದ್ದಾಗ ಹೇಳಿದರು.
ಕಥೆಯನ್ನು ಇದ್ದ ಹಾಗೆಯೇ ಬರೆದರೆ ಅದು ನಿರ್ಜೀವವಾಗಿರುವುದಿಲ್ಲವೇ.. ಹಾಗೆಯೇ ನಾವು ಫೋಟೋಗ್ರಾಫರುಗಳೂ ಕೂಡಾ ಟಚ್ ಅಪ್ ಮಾಡುವುದಿಲ್ಲವೇ ಎಂದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಡೆದ ನಿಜ ಘಟನೆಯೊಂದನ್ನು ಹೇಳಿದರು.
ನಂಜನಗೂಡಿನ ಕಡೆಯ ರೈತನೊಬ್ಬನ ತಾಯಿ ವಯಸ್ಸಾಗಿ ತೀರಿಹೋದರಂತೆ.
ತಾಯಿ ತೀರಿಹೋದ ಮೇಲೆ ಮಗನಿಗೆ ತಾಯಿಯ ನೆನಪನ್ನು ಶಾಶ್ವತವಾಗಿ ಇಟ್ಟುಕೊಳ್ಳುವ ಆಸೆ.
ಹಾಗಾಗಿ ತಾಯಿಯ ಶವಸಂಸ್ಕಾರದಲ್ಲಿ ಯಾರೋ ತೆಗೆದ ಸಣ್ಣ ಫೋಟೋ ಒಂದನ್ನುತೆಗೆದುಕೊಂಡು ಬಂದು ‘ಸುಬ್ಬಣ್ಣಿಯವರೇ ಇದು ನನ್ನ ತಾಯಿ.ಆದರೆ ಅವರು ಬದುಕಿರುವಾಗ ಅವರ ಮುಖ ಹೀಗೆ ಸತ್ತ ಹಾಗೆ ಇರಲಿಲ್ಲ.ಅವರ ಮುಖದಲ್ಲಿ ಯಾವಾಗಲೂ ಲಕ್ಷ್ಮಿಯ ಹಾಗೆ ಇರುವ ನಗುವಿತ್ತು.ದೊಡ್ಡ ಮೂಗು ಬೊಟ್ಟಿತ್ತು.ಚಿನ್ನದ ಬೆಂಡಿನ ಸರ ಇತ್ತು. ನಮ್ಮ ಅವ್ವ ತುಂಬ ಚೆನ್ನಾಗಿದ್ದಳು.ಈ ಫೋಟೋವನ್ನು ದೊಡ್ಡದು ಮಾಡಿಕೊಡಿ.ಆದರೆ ಮುಖ ಸತ್ತ ಹಾಗೆ ಇರಬಾರದು.ಲಕ್ಷ್ಮಿಯ ಹಾಗಿರಬೇಕು’ ಎಂದು ದುಂಬಾಲು ಬಿದ್ದನಂತೆ.
ಸುಬ್ಬಣಿಯವರು ‘ಹಾಗೆಲ್ಲಾ ಮಾಡಲು ನಾನೇನು ದೇವರಾ ಆಗುವುದಿಲ್ಲ ಹೋಗು’ ಎಂದು ಆಚೆ ಕಳಿಸಿದರಂತೆ.
ಆದರೆ ಆ ರೈತ ಅಳುತ್ತಾ ಕಾಲಿಗೆ ಬಿದ್ದನಂತೆ.
ಇನ್ನೇನು ಮಾಡುವುದು ಎಂದು ಸುಬ್ಬಣ್ಣಿಯವರು ಹಗಲೂ ರಾತ್ರಿ ಡಾರ್ಕ್ ರೂಮಿನಲ್ಲಿ ಕುಳಿತು ಆ ರೈತನ ತಾಯಿಯ ಫೋಟೋವನ್ನು ಮರುಸೃಷ್ಠಿಸಿದರಂತೆ.
ಅದು ಹೇಗೆ ಅಂದರೆ ತೀರಿಹೋದ ತಮ್ಮದೇ ತಾಯಿಯ ಮುಖದಲ್ಲಿದ್ದ ಫೋಟೋದ ನೆಗೆಟಿವ್ ನಲ್ಲಿದ್ದ ನಗುವನ್ನೂ, ದೊಡ್ಡ ಮೂಗಿನ ಬೊಟ್ಟನ್ನೂ,ಚಿನ್ನದ ಬೆಂಡಿನ ಸರವನ್ನೂ ರೈತನ ತಾಯಿಯ ಫೋಟೋದ ಮೇಲೆ ಡಾರ್ಕ್ ರೂಮಿನಲ್ಲಿ ಹಾಯಿಸಿ ಹಾಯಿಸಿ ಹತ್ತಾರು ಪ್ರಿಂಟುಗಳನ್ನು ತೆಗೆದು ಕೊನೆಗೆ ಈಗ ಇದು ರೈತನ ತಾಯಿಯೇ ಆಗಿದೆ ಅನಿಸಿದಾಗ ನಿಲ್ಲಿಸಿದರಂತೆ.
ಆ ರೈತನೂ ಕೊನೆಯ ಆ ಪ್ರಿಂಟನ್ನು ಎತ್ತಿಕೊಂಡು ಕಣ್ಣಿಗೊತ್ತಿಕೊಂಡು ನನ್ನ ತಾಯಿ ಹೀಗೇ ಲಕ್ಷ್ಮಿಯ ಹಾಗೇ ಇದ್ದಳು ಎಂದು ಸಂಭ್ರಮಿಸಿ ಕಣ್ಣೀರು ಹಾಕಿದನಂತೆ.
ಕಥೆ ಹೇಳಿದ ಸುಬ್ಬಣ್ಣಿಯವರು ಕಥೆ ಕೊನೆಯಾಗುವಾಗ ತಾವೂ ಕಣ್ಣು ತುಂಬಿಕೊಂಡಿದ್ದರು.
ಕಥೆಗಾರರಾದರೂ ಫೋಟೋಗ್ರಾಫರಾದರೂ ನಮ್ಮ ಎಲ್ಲರ ಕಥೆಯೂ ಹೀಗೇ ಅಲ್ಲವೇ.ಹೇಳಲು ಹೋದರೆ ನನ್ನದೂ ಇಂತಹದೇ ಇನ್ನೊಂದು ಕಥೆ. ಮುಂದೆ ಯಾವತ್ತಾದರೂ ಹೇಳುವೆ’ ಎಂದು ಭಾರವಾದ ಹಸ್ತಲಾಘವ ಇತ್ತು ಬೀಳ್ಕೊಟ್ಟರು.
27 July 2014
Photos By the author
“ಡಾರ್ಕ್ ರೂಮಿನಲ್ಲಿ ಸುಬ್ಬಣ್ಣಿಯವರು ಹೇಳಿದ ಹಳೆಯ ಸಂಗತಿಗಳು” ಗೆ 2 ಪ್ರತಿಕ್ರಿಯೆಗಳು
ಚೆನ್ನಾಗಿದೆ
ಸರ್, ಮನಮುಟ್ಟುವ ಲೇಖನ. ತುಂಬಾ ಚೆನ್ನಾಗಿದೆ. ಧನ್ಯವಾದಗಳು