,

ಜಿ. ಎಲ್. ಎನ್ ಅಯ್ಯನವರ ಹೂಬಿಟ್ಟ ಮರಗಳು

DSC_9166

ಮೈಸೂರಿನ ಶಾಂತಲಾ ಥಿಯೇಟರಿನ ಎದುರಿಗೆ ಸುಬ್ಬರಾಯನಕೆರೆ ಉಧ್ಯಾನವನವಿದೆ.

ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಮೈಸೂರಿನ ಆ ಕಾಲದ ಆದರ್ಶವಾದಿ ತರುಣರ ಆಡೊಂಬಲದಂತಿದ್ದ ಈ ಮೈದಾನ ಆನಂತರ ಕಸಕಡ್ಡಿ ಬಿಸಾಕುವ ತೊಪ್ಪೆಯಂತಾಗಿ, ಪೋಲಿದನಗಳಿಗೂ ಅಪಾಪೋಲಿ ಹುಡುಗರಿಗೂ ಆಶ್ರಯತಾಣದಂತಾಗಿದೆ ಎಂದು ಇಲ್ಲಿನ ನಾಗರಿಕರು ದೂರಿದ್ದರು.

ನಂತರದ ಕಾಲದಲ್ಲಿ ಮುಖ್ಯಮಂತ್ರಿಯೊಬ್ಬರ ಅನುಗ್ರಹದಿಂದಾಗಿ ಇಲ್ಲಿ ಒಂದು ಉಧ್ಯಾನವನವೂ, ದಂಡಿ ಸತ್ಯಾಗ್ರಾಹಿಗಳ ಶಿಲಾವಿಗ್ರಹಗಳೂ, ಮಕ್ಕಳಿಗೆ ಆಡಲು ಸಿಮೆಂಟಿನ ಅಂಗಳವೂ ಮತ್ತು ಅದೆಲ್ಲಕ್ಕಿಂತ ಮುಖ್ಯವಾಗಿ ಮೈಸೂರಿನ ಸ್ವಾತಂತ್ರ ಹೋರಾಟಗಾರರಿಗೆ ಒಂದು ಸ್ಮಾರಕಭವನವೂ ಮಂಜೂರಾಯಿತು.

ನಾನು ಇಲ್ಲಿ ಹೇಳಲು ಹೊರಟಿರುವುದು ಈ ಉಧ್ಯಾನವನದ ಕುರಿತಾಗಿಯೋ ಅಥವಾ ಈ ಸ್ಮಾರಕ ಭವನದ ಕುರಿತಾಗಿಯೋ ಅಲ್ಲ.

ಬದಲಿಗೆ ಪ್ರತಿ ಶುಕ್ರವಾರ ಸಂಜೆ ನಾಲಕ್ಕು ಗಂಟೆಗೆ ಸರಿಯಾಗಿ ಸರಸ್ವತಿಪುರಂನ ಒಂಬತ್ತನೇ ಮೇನ್ ನಲ್ಲಿರುವ ತಮ್ಮ ನಿವಾಸದಿಂದ ತಮ್ಮ ೧೯೭೩ನೇ ಮಾಡೆಲ್ಲಿನ ಹಳೆಯ ಫಿಯಟ್ ಕಾರನ್ನು ಚಾಲಿಸುತ್ತಾ ಹದಿನೈದು ನಿಮಿಷದಲ್ಲಿ ಈ ಉಧ್ಯಾನವನವನ್ನು ತಲುಪಿ, ಮೆಟ್ಟಿಲು ಇಳಿದು ಈ ಸ್ಮಾರಕ ಭವನವನ್ನು ಹೊಕ್ಕು ಸರ್ವಧರ್ಮ ಪ್ರಾರ್ಥನೆಗೆ ಸೇರಿಕೊಳ್ಳುವ ೯೨ ವರ್ಷ ವಯಸ್ಸಿನ ಶ್ರೀಯುತ ಕೆ.ಎಲ್.ಎನ್.ಅಯ್ಯ ಅವರ ಅತೀವ ಒಳ್ಳೆಯತನ ಮತ್ತು ಅಷ್ಟೇ ಸಹಜ ಸರಳತೆಯ ಕುರಿತು.

ಅದು ಅವರಾಗಿಯೇ ಯಾರಿಗೂ ಹೇಳಿಕೊಳ್ಳದ ಒಳ್ಳೆಯತನ ಮತ್ತು ಅದಾಗೇ ಬಂದಿರುವ ಸಹಜ ಸರಳತೆ.

‘ಅದು ಹೇಗೆ ಇಷ್ಟು ವಯಸ್ಸಾದರೂ ನೀವು ಒಳ್ಳೆಯವರಾಗೇ ಉಳಿದಿದ್ದೀರಿ ಅಯ್ಯನವರೇ?’ ಎಂದು ಕೇಳಿದರೆ ನೀನು ಕೇಳಿದ ಪ್ರಶ್ನೆಯಲ್ಲೇ ಏನೋ ವ್ಯಾಕರಣ ದೋಷವಿದೆ ಅನ್ನುವ ಹಾಗೆ ಅವರು ನಕ್ಕರು.

‘ ನೀವು ಯಾವಾಗಲೂ ಸಂತೋಷದಲ್ಲೇ ಇರುವ ಹಾಗೆ ಕಾಣಿಸುತ್ತಿರುವಿರಲ್ಲಾ ಅಯ್ಯನವರೇ.ಏನು ಇದರ ಹಿಂದಿನ ಗುಟ್ಟು’ ಎಂದು ಕೇಳಿದರೆ ಅದಕ್ಕೂ ಅವರದು ಅದೇ ನಗು.

‘ನೀವು ಹೀಗೆ ಎಲ್ಲದಕ್ಕೂ ನಕ್ಕರೆ ನಮಗೆ ಏನೂ ಗೊತ್ತಾಗುವುದಿಲ್ಲ ಅಯ್ಯನವರೇ .ದಯವಿಟ್ಟು ಹೇಳಿ, ಅಂದಾಗ ಅವರು ಚುಟುಕಾಗಿ ಹೇಳಿದ್ದು ಇಷ್ಟೇ

DSC_9178‘ನೋಡಿ ಇವರೇ.ನಾನು ಈ ದೇಶದ ಈಶಾನ್ಯ ಭಾಗದಲ್ಲಿ ತುಂಬ ಆಯಕಟ್ಟಾದ ಜಾಗದಲ್ಲಿ ಬಹಳ ವರ್ಷಗಳ ಕಾಲ ದೊಡ್ಡ ಎಂಜಿನಿಯರನಾಗಿದ್ದೆ.ಯಾರನ್ನಾದರೂ ಭ್ರಷ್ಟನನ್ನಾಗಿಸಬಹುದಾಗಿದ್ದ ಹುದ್ದೆ ಅದು.ಆದರೆ ಕೊನೆಯವರೆಗೂ ನನಗೆ ಭ್ರಷ್ಟನಾಗದೇ ಇರಲು ಆ ದೇವರ ದಯೆಯಿಂದಲೂ ತಂದೆ ತಾಯಂದಿರ ಆಶೀರ್ವಾದದಿಂದಲೂ ಸಾಧ್ಯವಾಯಿತು.ಹಾಗಾಗಿಯೇ ನನಗೆ ಈ ತೊಂಬತ್ತು ವರ್ಷಗಳಾದರೂ ನಗುತ್ತಾ ಆರೋಗ್ಯದಲ್ಲಿ ಬದುಕಲು ಅನುಕೂಲವಾಯಿತು.ಇದೇ ನನ್ನ ಸಂತೋಷದ ಗುಟ್ಟು’ ಎಂದು ಅವರು ತನ್ನದೇ ಗುಟ್ಟನ್ನು ತಾನೇ ರಟ್ಟು ಮಾಡಿದ ಮಗುವಿನಂತೆ ಮತ್ತೆ ನಕ್ಕರು.

ನಾವೀಗ ನೇರವಾಗಿ ೧೯೩೪ನೇ ಇಸವಿಗೆ ಹೋಗೋಣ.

ಆ ವರ್ಷ ಮಹಾತ್ಮಾ ಗಾಂಧಿಯವರು ಮೈಸೂರಿಗೆ ಬಂದಿದ್ದರು.

ಆಗ ನಮ್ಮ ಅಯ್ಯನವರು ಲಕ್ಷ್ಮೀಪುರಂನಲ್ಲಿದ್ದ ಮಿಡ್ಲ್ ಸ್ಕೂಲಿನಲ್ಲಿ ಓದುತ್ತಿದ್ದ ಹುಡುಗ.ಈ ಹುಡುಗನ ಪೂರ್ತಿ ಹೆಸರು ಕೆ.ಜಿ.ಲಕ್ಷ್ಮೀನರಸಿಂಹಯ್ಯ.

ತಂದೆ ಕೆ.ಪಿ.ಗುಂಡಪ್ಪ.ಮೈಸೂರು ಮಹಾರಾಜರ ಸರಕಾರದಲ್ಲಿ ಎಂಜಿನಿಯರ್ ಆಗಿದ್ದವರು.

ಲಲಿತಮಹಲ್ ಅರಮನೆಯನ್ನೂ, ಸರಕಾರೀ ಅತಿಥಿಗೃಹವನ್ನೂ ಕಟ್ಟಲು ದೊಡ್ಡ ಪಾತ್ರ ವಹಿಸಿದ್ದವರು.

ನಿವೃತ್ತಿಯ ಕಾಲದಲ್ಲಿ ಕೃಷ್ಣರಾಜಸಾಗರ ಜಲಾಶಯದಲ್ಲೂ ಹಿರಿಯ ಹುದ್ದೆಯನ್ನು ನಿರ್ವಹಿಸಿದ್ದವರು.

DSC_9151ಇಂತಹ ದೊಡ್ಡ ಎಂಜಿನಿಯರರ ಮಗನಿಗೆ ಆ ಸಣ್ಣ ಪ್ರಾಯದಲ್ಲೇ ಗಾಂಧಿಯ ಹೋರಾಟದ ಹುಚ್ಚು.ಎಷ್ಟು ಹುಚ್ಚು ಅಂದರೆ ಸೈಕಲ್ ಸ್ಕ್ವಾಡ್ ಅಂತ ಮಾಡಿಕೊಂಡು ಮೈಸೂರಿನ ಓಣಿಗಳಲ್ಲಿ ಸ್ವರಾಜ್ಯದ ಪ್ರಚಾರ.ಜೊತೆಗೆ ಹೆಂಡದಂಗಡಿಗಳ ಮುಂದೆ ಹರತಾಳ.ಇವರಿಗೆ ಇದಕ್ಕೆಲ್ಲ ನಾಯಕರಂತಿದ್ದವರು ಆಮೇಲೆ ಹೆಸರಾಂತ ಸಿನೆಮಾ ಛಾಯಾಚಿತ್ರಗಾರರಾಗಿ ಫಾಲ್ಕೆ ಪ್ರಶಸ್ತಿಯನ್ನೂ ಪಡೆದ ವಿ.ಕೆ.ಮೂರ್ತಿಯವರು.

ಮೈಸೂರಿನ ಓಣಿಗಳಲ್ಲಿ ಪೋಲೀಸರಿಂದ ತಪ್ಪಿಸಿಕೊಂಡು ಸೈಕಲ್ಲು ಓಡಿಸುವ ಹುಡುಗರ ಸ್ವಾತಂತ್ರ್ಯದ ಖುಷಿಯನ್ನು ನೀವು ಅಯ್ಯನವರ ಮಾತುಗಳಲ್ಲೇ ಕೇಳಬೇಕು.

ಅಷ್ಟು ಖುಷಿ!

ಆದರೆ ಅಯ್ಯನವರ ತಂದೆ ಗುಂಡಪ್ಪನವರಿಗೆ ಮಗನ ಸಾಹಸಗಳು ಒಂದಿನಿತು ಖುಷಿಯನ್ನೂ ನೀಡಿರಲಿಲ್ಲ.ಮಗನ ಮೇಲೆ ಅವರಿಗೆ ಎಷ್ಟು ಸಿಟ್ಟಿತ್ತು ಅಂದರೆ ೧೯೪೨ ರಲ್ಲಿ ಮಗ ಲಕ್ಷ್ಮೀನರಸಿಂಹಯ್ಯ ಮೈಸೂರಿನ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿದ್ದಾಗ ತಂದೆ ಗುಂಡಪ್ಪನವರು ಆ ಜೇಲಿನ ಕಟ್ಟಡದ ದುರಸ್ತಿಯ ಮೇಲ್ವಿಚಾರಣೆಗಾಗಿ ಆಗಾಗ ಬಂದು ಹೋಗುತ್ತಿದ್ದರು.ಸರಳುಗಳ ಹಿಂದೆ ಬಂಧಿಯಾಗಿದ್ದ ಮಗ ಅಪ್ಪ ಒಮ್ಮೆಯಾದರೂ ನೋಡಲಿ ಎಂದು ಕೊರಳು ಎತ್ತಿ ನಿಂತಿದ್ದರೆ ಸಿಟ್ಟಿನ ಅಪ್ಪ ಮುಖ ತಿರುಗಿಸಿ ಕಂಡೂಕಾಣದಂತೆ ಮುಂದೆ ನಡೆಯುತ್ತಿದ್ದರಂತೆ.

‘ಪಾಪ ಅಪ್ಪ’ ಎಂದು ಅದನ್ನು ನೆನಪಿಸಿಕೊಂಡು ಈ ತೊಂಬತ್ತೊಂದನೆಯ ವಯಸ್ಸಿನಲ್ಲಿ ಅಯ್ಯನವರು ನಗುತ್ತಾರೆ.

‘ಅಲ್ಲ ಅಯ್ಯನವರೇ ನಿಮಗೆ ಆಕಾಲದಲ್ಲಿ ಎಲ್ಲ ಸಂತೋಷಗಳೂ ಇದ್ದವು.ಅಪ್ಪ ಬಹಳ ದೊಡ್ಡ ಎಂಜಿನಿಯರಾಗಿದ್ದರು.ಆದರೂ ನೀವು ಬಡಪಾಯಿಯಂತೆ ಕಾಣಿಸುತ್ತಿದ್ದ ಮಹಾತ್ಮನ ಹಿಂದೆ ಯಾಕೆ ಹೋದಿರಿ?’ ಎಂದು ಕೇಳಿದರೆ ಅದಕ್ಕೂ ಅವರು ಭುಜ ಕುಣಿಸಿ ನಗುತ್ತಾರೆ.

‘ ‘ಗಾಂಧೀಜಿಯವರ ಚಳುವಳಿಯ ಉದ್ದೇಶ ಅಷ್ಟೊಂದು ಘನವಾಗಿತ್ತು’ ಎಂದು ತಣ್ಣಗಿನ ಆದರೆ ಅಷ್ಟೇ ಕಡುವಾದ ಕನ್ನಡದಲ್ಲಿ ಉತ್ತರಿಸುತ್ತಾರೆ.

DSC_9185ಕೆ.ಜಿ.ಲಕ್ಷ್ಮೀನರಸಿಂಹಯ್ಯ ಅವರ ಹೆಸರು ಜಿ.ಎಲ್.ಎನ್.ಅಯ್ಯ ಎಂದು ಆಗಿದ್ದರ ಹಿಂದೆಯೂ ಒಂದು ಕಥೆಯಿದೆ. ಇವರು ತಮ್ಮ ಸೇವಾಜೀವಿತದ ಕೊನೆಯ ಮೂರು ದಶಕಗಳನ್ನು ಅಸ್ಸಾಂ ಅರುಣಾಚಲ ಗಡಿಯ ದುಲಿಯಾಜಾನ್ ಎಂಬಲ್ಲಿ ತೈಲಶೋಧ ಕಂಪೆನಿಯೊಂದರಲ್ಲಿ ಸಿವಿಲ್ ಎಂಜಿನಿಯರಾಗಿ ಕಳೆದರು.ಅಲ್ಲಿನವರದು ಸಣ್ಣ ಸಣ್ಣ ಹೆಸರುಗಳು.ಅಲ್ಲಿನವರಿಗೆ ಇವರ ಉದ್ದದ ಹೆಸರು ಉಚ್ಛರಿಸಲು ಕಷ್ಟವಾಗುತಿತ್ತು.ಅದಕ್ಕಾಗಿ ಅವರು ಅದನ್ನು ಕತ್ತರಿಸಿ ಸಣ್ಣದಾಗಿ ಕರೆದರು.ಅದು ಅಯ್ಯನವರಿಗೂ ಇಷ್ಟವಾಗಿ ಅವರೂ ಅದನ್ನೇ ಇಟ್ಟುಕೊಂಡರು.

ಜೊತೆಗೆ ಅಲ್ಲಿಯೇ ಖರೀದಿಸಿದ ಮಾಡೆಲ್ಲಿನ ಫಿಯೆಟ್ ಕಾರು.

ನಿವೃತ್ತಿಯಾದ ಮೇಲೆ ಮೈಸೂರಿಗೆ ಅದನ್ನು ತಂದು ಕಳೆದ ಮೂವತ್ತು ವರ್ಷಗಳಿಂದ ಅದನ್ನೇ ಓಡಿಸುತ್ತಿರುವರು.

ಒಂದೇ ಜೀವನ, ಒಂದೇ ಕಾರು,ಒಬ್ಬಳೇ ಹೆಂಡತಿ ಮತ್ತು ಅಪರಿಮಿತವಾದ ಪ್ರಾಮಾಣಿಕತೆ!

ಜೀವನ ಎಂದರೆ ಸುಂದರವೂ ಸುರಬಿಲವೂ ಆಗಿರಲು ಇನ್ನೇನು ಬೇಕು ಎಂದು ಇಂದು ಬೆಳಗ್ಗೆ ಕ್ವಿಟ್ ಇಂಡಿಯಾ ಚಳವಳಿಯ ನೆನಪಿಗಾಗಿ ಅದೇ ಹಳೆಯ ಕಾರು ಚಾಲಿಸಿಕೊಂಡು ಸುಬ್ಬರಾಯನಕೆರೆಗೆ ಹೋಗಿ ಧ್ವಜಾರೋಹಣಗೈದು ಬಂದ ಅಯ್ಯನವರನ್ನೂ ಅವರ ಎದುರಿಗೆ ಕುಳಿತಿದ್ದ ಅವರ ಮಡದಿಯನ್ನೂ ನೋಡುತ್ತಾ ಯೋಚಿಸುತ್ತಾ ಕುಳಿತಿದ್ದೆ.

ಇದು ಯಾವುದು ಇಲ್ಲದೆಯೂ ಸುಖಪುರುಷರಂತೆ ಬದುಕುತ್ತಿರುವ ನನ್ನಂತಹ ಖಳರು!

ಮೂರು ವರ್ಷಗಳ ಹಿಂದೆ ಅಯ್ಯನವರೂ, ಮಡದಿಯೂ ವಿದೇಶದಲ್ಲಿರುವ ಮಕ್ಕಳು ಮೊಮ್ಮಕ್ಕಳನ್ನು ಕಟ್ಟಿಕೊಂಡು ಅಸ್ಸಾಂ ಅರುಣಾಚಲ ಗಡಿಯ ದುಲಿಯಾಜಾನ್ ಗೆ ಹೋಗಿ ಬಂದರಂತೆ.

ಮೂವತ್ತು ವರುಷಗಳ ಕಾಲ ದುಡಿಯುತ್ತಾ ಬದುಕಿದ್ದ ಊರು ಮೂವತ್ತು ವರ್ಷಗಳಾದರೂ ಹಾಗೇ ಇತ್ತಂತೆ.

ಅಯ್ಯನವರೇ ನಿರ್ಮಿಸಿದ್ದ ತೈಲಶೋಧ ಕಂಪನಿಯ ನೌಕರರ ಸಾಲು ಸಾಲು ವಸತಿಗೃಹಗಳು.

ತೈಲಕ್ಕಾಗಿ ಭೂಮಿಯನ್ನು ಕೊರೆಯುವ ರಿಗ್ ಯಂತ್ರಗಳ ಚಲನೆಗಾಗಿ ಅಯ್ಯನವರೇ ನಿರ್ಮಿಸಿದ್ದ ಟಾರು ರಸ್ತೆಗಳು.

DSC_9170ರಸ್ತೆಯ ಎರಡೂ ಬದಿ, ಮನೆಗಳ ಸುತ್ತಮುತ್ತ ಅಯ್ಯನವರೇ ನೆಡಿಸಿದ್ದ ಹೂಬಿಡುವ ಸಾಲುಸಾಲು ಮರಗಳು.

‘ಯಾವಾಗಲೂ ಹೂವು, ಯಾವಾಗಲೂ ಹೂವು, ಇದ್ದಾಗಲೂ ಹೂವು, ಮೂರು ವರ್ಷಗಳ ಹಿಂದೆ ಹೋದಾಗಲೂ ಹೂವು..’ ಅಯ್ಯನವರು ಯಾವುದೇ ಉಧ್ವೇಗ ತೋರಿಸಬಾರದೆಂದು ಅನ್ನುತ್ತಿದ್ದರೂ ಅವರ ಕಣ್ಣುಗಳಲ್ಲಿ ಕಾಣಿಸುತ್ತಿದ್ದ ಹೂ ಬಿಟ್ಟ ಮರಗಳು.

ದೇವರೇ ಇವರ ಹಾಗೆ ಯಾವಾಗಲೂ ಒಳ್ಳೆಯವನಾಗಿರುವುದು ಹೇಗೆ ಎಂದು ಈಗಲೂ ಯೋಚಿಸುತ್ತಿರುವೆ.

(10 August 2014)

(Photos by the author)

“ಜಿ. ಎಲ್. ಎನ್ ಅಯ್ಯನವರ ಹೂಬಿಟ್ಟ ಮರಗಳು” ಗೆ 2 ಪ್ರತಿಕ್ರಿಯೆಗಳು

  1. ಅಸ್ಸಾಮಿನಲ್ಲಿ ನನ್ನ ತಮ್ಮನ ಬಾಸ್, ನಿವೃತ್ತರಾಗಿ ಮೈಸೂರಿಗೆ ಬಂದ ಮೇಲೆ ನಮ್ಮ ತಂದೆ ಹಾಗೂ ಕುಟುಂಬದ ಆತ್ಮೀಯ ಗೆಳೆಯ, ಸಂಗೀತ ಮುಖ್ಯವಾಗಿ ಲಲಿತಕಲೆಗಳ ಪೋಷಣೆಗಾಗಿಯೇ ಹುಟ್ಟಿಕೊಂಡ ಗಾನಬಾರತಿಯಲ್ಲಿ ಅವಿರತ ಸಂಘಟಕ ಅಯ್ಯನವರ ಬಗ್ಗೆ ಏನು ಹೇಳಿದರೂ ಕಡಿಮೆಯೇ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: