ಕಾರ್ಗಿಲ್ಲಿನಲ್ಲಿ ನಿಮಗೆ ಯಾರ ಜೊತೆಗಾದರೂ ಕನ್ನಡದಲ್ಲಿ ಮಾತನಾಡಬೇಕು ಅನಿಸಿದರೆ ಅಲ್ಲಿನ ಮುಖ್ಯಬೀದಿಯಲ್ಲಿರುವ ಟಿಬೆಟನ್ ಮಾರ್ಕೆಟ್ಟಿಗೆ ಹೋಗಬೇಕು.
ಅಲ್ಲಿ ಸ್ವೆಟರು ಜರ್ಕಿನ್ನು ಬ್ಯಾಗು ಇತ್ಯಾದಿಗಳನ್ನು ಮಾರುವ ಟಿಬೆಟನ್ ಹೆಂಗಸರಲ್ಲಿ ನಾಲ್ಕೈದು ಮಂದಿಗಾದರೂ ಕನ್ನಡ ಬರುತ್ತದೆ.
ಯಾಕೆಂದರೆ ಇವರು ಕರ್ನಾಟಕದ ಮುಂಡಗೋಡು, ಬೈಲುಕುಪ್ಪೆ ಅಥವಾ ಗುರುಪುರದ ಟಿಬೆಟನ್ ನಿರಾಶ್ರಿತರ ಶಿಭಿರಗಳಿಂದ ಬಂದು ಇಲ್ಲಿ ಚಳಿಗಾಲ ಶುರುವಾಗುವ ತನಕ ವ್ಯಾಪಾರ ಮಾಡಿಕೊಂಡು ಹಿಮಬೀಳಲು ತೊಡಗುವಾಗ ಇಲ್ಲಿಂದ ಬೇರೆಕಡೆಗೆ ಕಾಲು ಕೀಳುವವರು.
ಇಲ್ಲಿರುವ ಬೈಲುಕುಪ್ಪೆಯ ಟಿಬೆಟನ್ ಮಹಿಳಾ ವ್ಯಾಪಾರಿಯ ಜೊತೆ ನಾನು ಕನ್ನಡದಲ್ಲಿ ಮಾತನಾಡುತ್ತಾ ಕೈಗೆ ಹಾಕುವ ಗ್ಲೌಸುಕೊಳ್ಳಲು ಕನ್ನಡದಲ್ಲಿ ಚೌಕಾಶಿ ಮಾಡುತ್ತಿದ್ದೆ.
ಅವಳು ‘ಒಂದೇ ರೇಟು, ಚರ್ಚೆ ಇಲ್ಲ’ ಎಂದು ಅಚ್ಚಕನ್ನಡದಲ್ಲಿ ತಿರುಗೇಟು ನೀಡುತ್ತಿದ್ದಳು.
‘ಏನು ತಾಯೀ ನೀನು ಹುಟ್ಟಿದ ಬೈಲುಕುಪ್ಪೆಯ ಬಳಿಯ ಸುಂಟಿಕೊಪ್ಪದಲ್ಲಿ ಹುಟ್ಟಿದವನು ನಾನು ಅದಕ್ಕಾದರೂ ಕರುಣೆ ಬೇಡವಾ’ ಎಂದು ಆ ಸಂಜೆಯ ಚಳಿಯಲ್ಲಿ ಚೌಕಾಶಿಯ ಸುಖವನ್ನು ಅನುಭವಿಸುತ್ತಿದ್ದೆ.
ಅವಳು ಮೂರು ಜನ ಟಿಬೆಟನ್ ಸಹೋದರರ ಒಬ್ಬಳೇ ಹೆಂಡತಿ.
ಒಬ್ಬಾತ ಇಲ್ಲೇ ಹತ್ತಿರದಲ್ಲಿ ಭಾರತೀಯ ಸೇನೆಯಲ್ಲಿ ಸೈನಿಕನಾಗಿದ್ದಾನೆ.
ಇನ್ನೊಬ್ಬಾತ ಹಿಮಾಚಲದ ಧರ್ಮಶಾಲಾದಲ್ಲಿ ನೌಕರಿಯಲ್ಲಿದ್ದಾನೆ.
ದೊಡ್ಡ ಸಹೋದರ ಅಂದರೆ ಈಕೆಯ ದೊಡ್ಡ ಗಂಡ ಬೈಲುಕುಪ್ಪೆಯಲ್ಲಿ ಜೋಳದ ಹೊಲ ಮತ್ತು ವಯಸ್ಸಾದ ತಂದೆತಾಯಿಯರನ್ನು ನೋಡಿಕೊಂಡಿದ್ದಾನೆ.
ಈಕೆ ಅವರಿಗೆ ಮೂವರಿಗೂ ಸೇರಿ ಒಬ್ಬಳೇ ಹೆಂಡತಿ.
ಮೂರು ಕಡೆಯೂ ತಿರುಗಾಡಿಕೊಂಡು ತನ್ನ ಸಂಸಾರವನ್ನು ಸಂಬಾಳಿಸಿಕೊಂಡಿರುತ್ತಾಳೆ.
‘ನಮ್ಮ ಕಡೆಯ ಮಹಿಳೆಯರಿಗೆ ಇರುವ ಒಬ್ಬ ಗಂಡನ ಜೊತೆ ಏಗುವುದರಲ್ಲೇ ಜೀವನ ಸಾಕಾಗಿ ಹೋಗಿರುತ್ತದೆ.ಇನ್ನು ಮೂರು ಜನ ಗಂಡಂದಿರನ್ನು ಅದು ಹೇಗೆ ನಿಬಾಯಿಸುತ್ತೀಯೋ ತಾಯೀ’ ಎಂದು ಅರ್ದ ಕೀಟಲೆಯಲ್ಲೂ ಇನ್ನರ್ದ ಕುತೂಹಲದಲ್ಲೂ ಕೇಳಿದೆ.
‘ ಪಾಪ ಮೂರು ಜನರೂ ಒಳ್ಳೆಯವರು.ಮೂವರೂ ನನ್ನ ಮಾತು ಮೀರಿ ಹೋಗುವುದಿಲ್ಲ.ನಮ್ಮಲ್ಲಿ ಗಂಡಸರು ತುಂಬ ಪಾಪ.ನಿಮ್ಮ ಹಾಗಲ್ಲ’ ಎಂದು ಆಕೆಯೂ ತಮಾಷೆ ಮಾಡುತ್ತಿದ್ದಳು.
ಕನ್ನಡ ಬಲ್ಲವನೊಬ್ಬ ಬೇರೆ ಏನೂ ಕಾರಣವಿಲ್ಲದೆ ಬರೀ ತಿರುಗಾಡಲು ಕಾರ್ಗಿಲ್ಲಿನಂತಹ ಆ ಮೂಲೆಗೆ ಹೋಗಿದ್ದೇ ಆಕೆಗೆ ನಗು ಬಂದಿತ್ತು.
ಇನ್ನು ನಾನು ಅಲ್ಲಿಂದಲೂ ಮುಂದಕ್ಕೆ ಜಂಸ್ಕಾರ್ ಪ್ರಾಂತಕ್ಕೆ ಹೋಗುತ್ತಿರುವೆ ಅಂದಾಗ ಆಕೆ ಪಕಪಕ ನಕ್ಕಿದ್ದಳು.
ಏಕೆಂದರೆ ಅಲ್ಲಿನ ಜನ ಬೇರೇನೂ ಕೆಲಸವಿಲ್ಲದೆ ದಿನವಿಡೀ ಉಪ್ಪು ಮತ್ತು ಯಾಕ್ ಮೃಗದ ಹಾಲು ಬೆರೆಸಿದ ನಂಕೀನ್ ಚಹಾ ಕುಡಿಯುತ್ತಾ ಸೆತುವಿನ ಮುದ್ದೆ ಉಣ್ಣುತ್ತಾ ಕಾಲ ಕಳೆಯುವವರು ಎಂದು ಆಕೆಯ ಅಭಿಪ್ರಾಯವಾಗಿತ್ತು.
`ಹೌದು.ನಾನೂ ಸೋಮಾರಿಯೇ.ಅದಕ್ಕಾಗಿಯೇ ಅಲ್ಲಿ ಇರಲು ಹೋಗುತ್ತಿದ್ದೇನೆ.ರಾಗಿಮುದ್ದೆಯ ಹಾಗಿರುವ ಸೆತು ಮತ್ತು ಯಾಕಿನ ಹಾಲಿನ ನಂಕೀನ್.ಜೀವನದಲ್ಲಿ ಇನ್ನೇನು ಬೇಕು’ ಎಂದು ಅವಳನ್ನು ನಗಿಸಿ ಹೊರಟಿದ್ದೆ.
ಹೊರಟು ಈ ಊರಿಗೆ ತಲುಪಿದ ಮೇಲೆ ಅದು ನಿಜವೆನ್ನಿಸಿತ್ತು.
ಎಲ್ಲಿಯೂ ಚಲಿಸದೆ ಕೋಟಿಗಟ್ಟಲೆ ವರ್ಷಗಳಿಂದ ಹಾಗೇ ನಿಂತುಕೊಂಡಿರುವ ಹಿಮಭರಿತ ಗೋಡೆಗಳಂತಿರುವ ಪರ್ವತ ಸಾಲುಗಳು.
ಅವುಗಳ ಮೇಲೆ ಚಲಿಸದೇ ನಿಂತಿರುವ ಶರತ್ಕಾಲದ ಬೆಳ್ಳನೆಯ ಮೋಡಗಳು.
ಕೆಳಗೆ ಉತ್ತು ಹದಮಾಡಿ ತೇವಕ್ಕಾಗಿ ಹಿಮಪಾತವನ್ನು ಕಾಯುತ್ತಿರುವ ಕಪ್ಪು ಮಣ್ಣಿನ ಬಯಲು.
ಅದರ ನಡುವೆ ಗೌಣವಾಗಿ ಚಲಿಸುತ್ತಿರುವ ಇಲ್ಲಿನ ನಿವಾಸಿಗಳು.
ಪ್ರವಾಸಿಗಳು, ವ್ಯಾಪಾರಿಗಳು ಮತ್ತು ಕೂಲಿಯಾಳುಗಳನ್ನು ಬಿಟ್ಟರೆ ಉಳಿದ ಇಲ್ಲಿನ ನಿವಾಸಿಗಳಿಗೆ ಯಾವುದೇ ದಾವಂತಗಳಿರಲಿಲ್ಲ.
ಯಾರಿಗೂ ಅವಸರದಲ್ಲಿ ಏನೂ ಆಗಬೇಕಾಗಿರಲಿಲ್ಲ.
ಬರಲಿರುವ ಉದ್ದನೆಯ ಹಿಮಭರಿತ ಚಳಿಗಾಲಕ್ಕಾಗಿ ಅವರು ಬೇಸಗೆಯ ಕೊನೆಯ ದಿನದಿಂದಲೇ ತಯಾರಿ ನಡೆಸಿದ್ದರು.
ಹಣ್ಣು ತರಕಾರಿ ಸೊಪ್ಪುಗಳನ್ನು ಬಿಸಿಲಲ್ಲಿ ಒಣಗಿಸಿ ಜರಡಿಗಳಲ್ಲಿ ಚಳಿಗಾಲಕ್ಕಾಗಿ ತುಂಬಿಸಿಟ್ಟಿದ್ದರು.
ಶರತ್ಕಾಲದಲ್ಲಿ ಸಹಜವಾಗಿ ಮಾಗುತ್ತಿರುವ ಹುಲ್ಲುಗಳನ್ನೂ ಸೊಪ್ಪುಗಳನ್ನೂ ಕಂತೆಗಳನ್ನಾಗಿ ಮಾಡಿ ದನಕರುಗಳ ಮೇವಿಗೆ ಮನೆಯ ಚಾವಣಿಯಲ್ಲಿ ಪೇರಿಸಿಡುತ್ತಿದ್ದರು.
ಇರುವೆಗಳ ಸಮೂಹ ಸುದೀರ್ಘ ಮಳೆಗಾಲಕ್ಕಾಗಿ ಯಾವುದೇ ದಾವಂತವಿಲ್ಲದೆ ಕಾಯುವ ಹಾಗೆ.
ಆದರೆ ವ್ಯಾಪಾರಿಗಳೂ, ಪ್ರವಾಸಿಗರೂ, ಕೂಲಿಯಾಳುಗಳೂ ತಾವು ಬಂದಿರುವ ಕೆಲಸ ಮುಗಿಸಿ ಹಿಮಪಾತದ ಮೊದಲೇ ಇಲ್ಲಿಂದ ಕಾಲುಕೀಳುವ ಖುಷಿಯಲ್ಲಿ ಓಡಾಡುತ್ತಿದ್ದರು.
ನನಗೂ ಜೀವನದಲ್ಲಿ ದೊಡ್ಡ ಉದ್ದೇಶಗಳು ಯಾಕಿಲ್ಲ ಎಂದು ಯೋಚಿಸುತ್ತಾ ನಾನು ಪೋಲೀಸು ಶುಕೂರನ ಸಫಾರಿ ಜೀಪಿಗಾಗಿ ಕಾಯುತ್ತಿದ್ದೆ.
ಈ ಶುಕೂರ್ ಸುನ್ನಿ ಮುಸಲ್ಮಾನ.ಹಾಗಾಗಿ
ಈತನಿಗೆ ಶಿಯಾಗಳೇ ತುಂಬಿರುವ ಕಾರ್ಗಿಲ್ಲಿನ ಇತರ ಪಟ್ಟಣಗಳಲ್ಲಿ ಕೆಲಸ ಮಾಡಲು ಇಷ್ಟವಿರಲಿಲ್ಲ.
ಇತರ ಪಟ್ಟಣಗಳ ಪೋಲೀಸರಿಗೆ ವರ್ಷದ ಐದು ತಿಂಗಳೂ ಹಿಮತುಂಬಿಕೊಂಡು ಎಲ್ಲಿಯೂ ಹೋಗಲಾಗದ ಈ ಪಟ್ಟಣದಲ್ಲಿ ಕೆಲಸ ಮಾಡಲು ಇಷ್ಟವಿರಲಿಲ್ಲ.
ಹಾಗಾಗಿ ಶುಕೂರ್ ಈ ಪಟ್ಟಣದ ಪೋಲೀಸು ಠಾಣೆಯಲ್ಲಿ ಕಳೆದ ಇಪ್ಪತ್ತಕ್ಕಿಂತಲೂ ಹೆಚ್ಚು ವರ್ಷಗಳಿಂದ ಪೇದೆಯಾಗಿ ಕೆಲಸ ಮಾಡುತ್ತಿದ್ದಾನೆ.
ತನಗೆ ಭಡ್ತಿ ಸಿಕ್ಕಿದರೂ ಬೇಡ ಅನ್ನುತ್ತಾನೆ.ಎತ್ತರಕ್ಕೆ ಮೈಕೈ ತುಂಬಿಕೊಂಡು ಇರುವ ಶುಕೂರ್ ನೋಡಲಿಕ್ಕೂ ಸುಂದರವಾಗಿದ್ದಾನೆ.
ತಾನು ಯಾರನ್ನು ನೋಡುತ್ತಿರುವೆ ಎಂಬುದು ಯಾರಿಗೂ ಗೊತ್ತಾಗದಿರಲಿ ಎಂದು ಸದಾ ಕಪ್ಪು ಕನ್ನಡಕವನ್ನು ಹಾಕಿಕೊಂಡಿರುತ್ತಾನೆ.
ಈತ ಪೋಲೀಸನಾಗಿರುವುದರಿಂದ ಈ ಊರಿನ ಬೌದ್ಧ ಧರ್ಮೀಯರು ಮುಸಲ್ಮಾನರ ಮೇಲೆ ಹಾಕಿರುವ ಸಾಮಾಜಿಕ ಬಹಿಷ್ಕಾರ ಈತನಿಗೆ ಅನ್ವಯಿಸುವುದಿಲ್ಲ.
ಅದೂ ಅಲ್ಲದೆ ಈತ ಪೋಲೀಸನಾಗಿರುವುದರಿಂದ ಇಲ್ಲಿನ ಟ್ಯಾಕ್ಸಿ ಯೂನಿಯನ್ನಿನ ನಿಯಮಗಳಿಗೂ ಈತ ಅತೀತನಾಗಿದ್ದಾನೆ.
ಹಾಗಾಗಿ ಪೋಲೀಸು ಡ್ಯೂಟಿ ಮುಗಿಸಿ ಉಳಿದ ಸಮಯದಲ್ಲಿ ಈತ ತನ್ನ ಸಫಾರಿ ಜೀಪನ್ನು ಬಾಡಿಗೆಗೆ ಓಡಿಸುತ್ತಾನೆ.
ಅದೂ ಜನರೇ ಕಾಣಿಸದ ಮನಾಲಿ ರಸ್ತೆಯಲ್ಲಿ.
ಈ ರಸ್ತೆಯ ಕೆಲಸ ಶುರುವಾಗಿ ಹಲವು ವರ್ಷಗಳೇ ಕಳೆದಿದೆ. ಆದರೆ ನಲವತ್ತು ಕಿಲೋಮೀಟರಿನ ಕೆಲಸವೂ ಮುಗಿದಿಲ್ಲ.
ನೇಪಾಳದ ಕಡೆಯಿಂದ ಕೂಲಿಗೆ ಬಂದಿರುವ ನೇಪಾಳದ ಶೆರ್ಪಾಗಳು ಶುಕೂರನ ಜೀಪಿನಲ್ಲಿ ನಲವತ್ತು ಕಿಲೋಮೀಟರ್ ದೂರ ಸಾಗಿ ಅಲ್ಲಿಂದ ಎರಡು ರಾತ್ರಿ ಒಂದು ಹಗಲು ಪರ್ವತಗಳ ನಡುವೆ ನಡೆದು ಮನಾಲಿಯ ಬಳಿಯ ಹಳ್ಳಿಯೊಂದನ್ನು ತಲುಪಬೇಕಾಗಿತ್ತು.
ಅಲ್ಲಿಂದ ಬಸ್ಸು ಹತ್ತಿ ಮನಾಲಿ.ಅಲ್ಲಿಂದ ದೆಹಲಿ ಅಲ್ಲಿಂದ ಹರಿಧ್ವಾರ ಅಲ್ಲಿಂದ ಮುಂದೆ ನೇಪಾಳ ತಲುಪುವುದು ಅವರ ಆಲೋಚನೆಯಾಗಿತ್ತು.
ಹಾಗೇನಾದರೂ ಆ ದಾರಿಯಲ್ಲಿ ಹೋಗುವುದಿದ್ದರೆ ನನ್ನನ್ನೂ ಕರೆದುಕೊಂಡು ಹೋಗು ಎಂದು ನಾನು ಶುಕೂರನಲ್ಲಿ ಕೇಳಿಕೊಂಡಿದ್ದೆ.
ಅವನೂ ಒಪ್ಪಿಕೊಂಡಿದ್ದ.
ಶೆರ್ಪಾ ಕೂಲಿಯಾಳುಗಳೆಲ್ಲ ಹತ್ತಿ ಅವರ ತಲೆಹೊರೆಯನ್ನೆಲ್ಲ ಜೀಪಿನ ಮೇಲೆ ಎತ್ತಿಟ್ಟು.ಉಳಿದ ಜಾಗದಲ್ಲಿ ನನ್ನನ್ನೂ ಕೂರಿಸಿಕೊಂಡು ಆತ ಹೊರಟ.
ಇದುವರೆಗೆ ಈ ಐದುತಿಂಗಳುಗಳ ಕಾಲ ಕೂಲಿಯಾಳುಗಳಾಗಿ ದುಡಿದು ಈಗ ಊರಿಗೆ ಹೊರಟ ಅವರ ಕಲರವ ಚೇತೋಹಾರಿಯಾಗಿತ್ತು.
ಅವರು ನೇಪಾಳದ ಶೆರ್ಪಾ ಹಳ್ಳಿಯೊಂದರ ನಾಲ್ಕುಜನ ಯುವಕರು ಮತ್ತು ಒಬ್ಬಳು ಮಹಿಳೆ.
ಆಕೆ ಅವರಲ್ಲೊಬ್ಬನ ಹೆಂಡತಿಯಾಗಿದ್ದಳು ಮತ್ತು ಅವರೆಲ್ಲರಿಗೆ ಅಡುಗೆ ಮಾಡಿ ಬಡಿಸುವ ಕಾಯಕ ಅವಳದಾಗಿತ್ತು.
ಗಂಡಸರೆಲ್ಲರೂ ತೀಕ್ಷ್ಣ ಚಳಿ ಮತ್ತು ಸೂರ್ಯನ ಉರಿಯಲ್ಲಿ ಸಿಲುಕಿ ಗುರುತೇ ಸಿಗದ ಹಾಗೆ ಕಪ್ಪಾಗಿ ಹೋಗಿದ್ದರೆ ಆಕೆ ಮಾತ್ರ ಬಹುಶಃ ನೆರಳಲ್ಲೇ ಅಡುಗೆ ಮಾಡುತ್ತಿದ್ದುದರಿಂದ ಹಾಗೇ ಚೆಲುವೆಯಾಗಿ ಉಳಿದಿದ್ದಳು.
ಐದು ತಿಂಗಳ ಹಿಂದೆ ಹಿಮದ ಮೇಲೆ ಹೆಜ್ಜೆಯಿಕ್ಕುತ್ತಾ ನಡೆದುಬಂದ ಅವರೆಲ್ಲರೂ ಈಗ ಅದೇ ದಾರಿಯಲ್ಲಿ ತಿರುಗಿ ಹೋಗುತ್ತಿದ್ದರು.
ಆದರೆ ವಾಪಾಸು ಹೋಗುವಾಗ ಆಕೆ ಜೀಪಿನಲ್ಲೇ ವಾಂತಿಮಾಡಲು ತೊಡಗಿದುದರಿಂದ ಅವಳು ಇನ್ನು ಹೇಗೆ ಈ ಸುಸ್ತಿನಲ್ಲಿ ಎರಡು ಇರುಳು ಒಂದು ಹಗಲು ಪರ್ವತಗಳನ್ನು ಹತ್ತಿ ಇಳಿಯುತ್ತಾಳೋ ಎಂಬುದು ಅವರೆಲ್ಲರ ಆತಂಕಕ್ಕೆ ಕಾರಣವಾಗಿತ್ತು.
‘ಬರೀ ಜೀಪಿನಲ್ಲಿ ಕುಳಿತದ್ದಕ್ಕೆ ವಾಂತಿ ಬಂದಿದೆಯಾ ಅಥವಾ ಬೇರೇನಾದರೂ ಕಾರಣವಿದೆಯಾ?’ ಜೀಪು ಓಡಿಸುತ್ತಿದ್ದ ಶುಕೂರ್ ಪೋಲೀಸು ಧ್ವನಿಯಲ್ಲಿ ಗದರಿಸಿದ.
ಆತ ಕೇಳಿದ್ದು ನಿಜವಾಗಿತ್ತು.
ಆಕೆ ಬಸುರಿಯಾಗಿದ್ದಳು.
‘ಇಂಡಿಯಾಕ್ಕೆ ಬರುವಾಗ ಡಬಲ್ ವಾಪಾಸು ಹೋಗುವಾಗ ತ್ರಿಬಲ್’ ಶುಕೂರ್ ಗಡಸು ದನಿಯಲ್ಲಿ ಹಾಸ್ಯ ಮಾಡುತ್ತಿದ್ದ.
ಆದರೆ ಅವರು ಯಾರೂ ಅದನ್ನು ಕೇಳಿಸಿಕೊಳ್ಳುವ ಮೂಡಿನಲ್ಲಿರಲಿಲ್ಲ.
ಅದಾಗ ತಾನೇ ಮುಸುಕುತ್ತಿದ್ದ ಕತ್ತಲು,ಬೀಸುತ್ತಿದ್ದ ಹಿಮದಂತಹ ಗಾಳಿ, ಜೊತೆಗೆ ಇನ್ನು ಈ ಬಸುರಿ ಹೆಂಗಸನ್ನೂ ಕರೆದುಕೊಂಡು ನಡೆಯಬೇಕಾದ ಎರಡು ಇರುಳು ಮತ್ತು ಒಂದು ಹಗಲಿನ ಪರ್ವತದಾರಿಯ ಕುರಿತೇ ಅವರೆಲ್ಲರು ಯೋಚಿಸುತ್ತಿದ್ದಂತಿತ್ತು.
Photos by the author
1 December, 2013
(ಮುಂದುವರಿಯುವುದು)
“ಲಡಾಖ್ ಪ್ರವಾಸ ಕಥನ ೪: ಗುರಿಯೇ ಇಲ್ಲದ ಹಗಲು ದಾರಿ” ಗೆ ಒಂದು ಪ್ರತಿಕ್ರಿಯೆ
great sir