ಲಡಾಖ್ ಪ್ರವಾಸ ಕಥನ ೨.ಹಿಮಕಣಿವೆಯ ಧರ್ಮಕಾರಣಗಳು

RAS_3299ಕಾಶ್ಮೀರದ ಲಡಾಕ್ ಪ್ರಾಂತ್ಯದಲ್ಲಿರುವ ಕಾರ್ಗಿಲ್ ಪಟ್ಟಣದಿಂದ ಸುಮಾರು ಇನ್ನೂರೈವತ್ತು ಕಿಲೋಮೀಟರ್ ದೂರದಲ್ಲಿರುವ ಜಂಸ್ಕಾರ್ ಕಣಿವೆಯ ಪದುಮ್ ಪಟ್ಟಣಕ್ಕೆ ತೆರಳಲು ಟ್ಯಾಕ್ಸಿಗೆ ಸುಮಾರು ಹತ್ತುಸಾವಿರ ರೂಪಾಯಿ ತೆರಬೇಕಾಗುತ್ತದೆ.

ಇದು ಅಲ್ಲಿನ ಟ್ಯಾಕ್ಸಿ ಚಾಲಕರ ಯೂನಿಯನ್ ನಿಗದಿಪಡಿಸಿರುವ ಮೊತ್ತ.

ಭಾರತ ದೇಶದ ಅತ್ಯಂತ ದುರ್ಗಮವೂ ಶೀತಲವೂ ಕೆಲವೊಮ್ಮೆ ಮಾರಣಾಂತಿಕವೂ ಆಗಿರುವ ಈ ಸ್ವರ್ಗಸದೃಶ ಕಣಿವೆಯನ್ನು ಜೀವನದಲ್ಲಿ ಒಮ್ಮೆಯಾದರೂ ಕಾಣಲು ಎಷ್ಟು ಕಾಸು ಬೇಕಾದರೂ ಸುರಿಯಲು ತಯಾರಿರುವ ಪುಣ್ಯವಂತ ಸ್ತ್ರೀಪುರುಷರಿದ್ದಾರೆ.

ಸ್ವರ್ಗವನ್ನೂ ಕಾಣಬೇಕು ಆದರೆ ಹೆಚ್ಚು ಕಾಸೂ ಖರ್ಚಾಗಬಾರದು, ಅಂತಹ ಕಷ್ಟವನ್ನೂ ಪಡಬಾರದು ಎಂದು ಸುತ್ತಾಡುವ ನನ್ನಂತಹ ಸುಖಪುರುಷರೂ ಇರುತ್ತಾರೆ.

ಹೇಗಾದರೂ ಸುತ್ತಿಬರಲಿ; ಬಂದ ನಂತರ ಎಲ್ಲರೂ ಒಂದು ತರಹದ ಹುಚ್ಚರಾಗಿ ಹೋಗುತ್ತಾರೆ.

ಹಿಮಬೆಟ್ಟಗಳ ನಡುವಿನ ಈ ಹಳದಿ ಕಣಿವೆಯ ಮೋಹವೇ ಒಂದು ತರಹದ ಸರ್ಪಚುಂಬನದ ಹಾಗೆ.

ಮತ್ತೆ ಮತ್ತೆ ಬೇಕೆನಿಸುವ ಸಾವಿನಂತಹ ಸುಖ.

RAS_3201ನಾನು ಕಾರ್ಗಿಲ್ ನಗರದಿಂದ ಪದುಂ ಪಟ್ಟಣಕ್ಕೆ ಕಡಿಮೆ ಖರ್ಚಿನಲ್ಲಿ ಹೋಗುವ ಉಪಾಯವನ್ನು ಹುಡುಕುತ್ತಿದ್ದೆ.ಕಾರ್ಗಿಲ್ ನಲ್ಲಿ ಇರುವ ಬಹುತೇಕರು ಪುರ್ಕಿ ಎಂಬುದಾಗಿ ಕರೆಯಲ್ಪಡುವ ಭಾಷೆಯನ್ನಾಡುವ ಶಿಯಾ ಮುಸಲ್ಮಾನರು. ಇವರಲ್ಲಿ ಬಹುತೇಕರು ಒಂದುಕಾಲದಲ್ಲಿ ಟಿಬೆಟಿನ ಕಡೆಯಿಂದ ಬಂದ ಬೌದ್ಧ ಗುರುವೊಬ್ಬನ ಪ್ರಭಾವದಿಂದಾಗಿ ಬುದ್ಧ ಧರ್ಮವನ್ನು ಸ್ವೀಕರಿಸಿದವರು..ಆನಂತರ ಪರ್ಷಿಯಾದ ಕಡೆಯಿಂದ ಬಂದ ಶಿಯಾ ಸಂತನೊಬ್ಬ ಇವರನ್ನು ಮುಸಲ್ಮಾನರನ್ನಾಗಿ ಮಾಡಿದ.

ಒಂದು ಕಾಲದಲ್ಲಿ ಬೌದ್ಧರಾಗಿದ್ದ ತಾವು ಶಿಯಾಗಳಾದ ಕಥೆಯನ್ನು ಕಾರ್ಗಿಲ್ ಪಟ್ಟಣದಲ್ಲಿ ಮಾತಿಗೆ ಸಿಕ್ಕಿದ್ದ ನಿವೃತ್ತ ಸರಕಾರೀ ನೌಕರನೊಬ್ಬ ತಮಾಷೆಯಾಗಿ ಹೇಳಿದ್ದ.

ಆ ಊರಲ್ಲಿ ದೇವರಂತೆ ನೆಲೆಸಿದ್ದ ಬೌದ್ಧ ಗುರುವಿಗೂ ಮತ್ತು ಅಲ್ಲಿಗೆ ಪರ್ಷಿಯಾದಿಂದ ಕಾಲ್ನಡಿಗೆಯಲ್ಲಿ ಆಗಮಿಸಿದ್ದ ಶಿಯಾ ಸಂತನಿಗೂ ತಮ್ಮಲ್ಲಿ ಯಾರು ಹೆಚ್ಚು ಶಕ್ತಿಶಾಲಿಗಳು ಎಂದು ತೋರಿಸಿಕೊಳ್ಳುವ ಹುಚ್ಚು ಹಠ ಬಂತಂತೆ.

ಸರಿ. ಸೇರಿದ್ದ ಊರವರ ಸಮ್ಮುಖದಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾದರಂತೆ.ಆದರೆ ಒಂದು ಶರತ್ತು!ಸೋತವನು ತನ್ನ ಧರ್ಮವನ್ನು ತ್ಯಜಿಸಿ ಗೆದ್ದವನ ಧರ್ಮಕ್ಕೆ ಸೇರಿಕೊಳ್ಳಬೇಕು.

ಅದಕ್ಕೆ ಸರಿ ಎಂದು ಒಪ್ಪಿ ಇಬ್ಬರೂ ಶಕ್ತಿ ಪ್ರದರ್ಶನಕ್ಕೆ ಕೂತರಂತೆ.

ಧರ್ಮದಲ್ಲೂ,ಜ್ಞಾನದಲ್ಲೂ, ವಾದದಲ್ಲೂ, ತರ್ಕದಲ್ಲೂ ಎಲ್ಲದರಲ್ಲೂ ಒಬ್ಬರಿಗೊಬ್ಬರು ಸರಿಸಮಾನರಾಗಿ ಯಾರು ಮೇಲು ಯಾರು ಕೀಳು ಎಂದು ಗೊತ್ತಾಗಲೇ ಇಲ್ಲವಂತೆ.

ಕೊನೆಯಲ್ಲಿ ಬೌದ್ಧ ಗುರು ತನ್ನ ಅತೀಂಧ್ರಿಯ ಶಕ್ತಿಯನ್ನು ತೋರಿಸಲೋ ಎಂಬಂತೆ ತನ್ನ ಶಿರದ ಟೋಪಿಯನ್ನು ಆಕಾಶಕ್ಕೆ ಹಾರಿಸಿದನಂತೆ.

ಅದು ಹಾರುತ್ತಾ ಹಾರುತ್ತಾ ಸ್ವರ್ಗವನ್ನು ತಲುಪಿತಂತೆ.ಅದನ್ನು ಕಂಡ ಭಕ್ತಜನ ಅವಕ್ಕಾದರಂತೆ.

‘ಓಹೋ ಹೀಗಾ ನಿನ್ನ ಶಕ್ತಿ.ಈಗ ನೋಡು ನನ್ನ ಶಕ್ತಿ’ ಎಂದು ಶಿಯಾ ಗುರು ತನ್ನ ಕೈಯಲ್ಲಿದ್ದ ಬಾರುಕೋಲನ್ನು ಆಕಾಶದ ಕಡೆ ಕಳಿಸಿದನಂತೆ.

ನೋಡುನೋಡುತ್ತಿದ್ದಂತೆ ಆ ಕೋಲೂ ಆಕಾಶದಲ್ಲಿ ಮಾಯವಾಗಿ ಸ್ವರ್ಗವನ್ನು ತಲುಪಿತಂತೆ.

ಸ್ವರ್ಗವನ್ನು ತಲುಪಿ ಆ ಬೌದ್ಧ ಗುರುವಿನ ಟೋಪಿಯನ್ನು ಕಂಡು ಹುಡುಕಿ ಅದನ್ನು ಕೋಲಿನಿಂದ ಬಾರಿಸುತ್ತಾ ಕರಕೊಂಡು ಕೆಳಕ್ಕೆ ಬಂತಂತೆ.

ಅದನ್ನು ಕಂಡ ಬೌದ್ಧ ಗುರುವೂ ಆತನ ಜನರೂ ಶಿಯಾಗಳಾದರಂತೆ.

RAS_3217‘ನೋಡಿ ಸಾಬ್ ಈ ಗುರುಗಳ ಟೋಪಿ ಮತ್ತು ಬಾರುಕೋಲಿನಿಂದಾಗಿ ನಾವು ಏನೇನೋ ಅವಸ್ಥೆಗಳನ್ನು ಎತ್ತಬೇಕಾಯಿತು.ಹಾಗೇ ದೇಶದೇಶಗಳ ನಡುವಿನ ಹಠಗಳಿಂದಾಗಿ ನಾವು ಸಾವುನೋವುಗಳನ್ನೂ ಅನುಭವಿಸಬೇಕಾಯಿತು.ಹಾಗೆ ನೋಡಿದರೆ ನಾವು ಯಾವ ಧರ್ಮಕ್ಕೂ ಸೇರಿರಲಿಲ್ಲ.ಯಾವ ದೇಶಕ್ಕೂ ಸೇರಿರಲಿಲ್ಲ.ಈಗ ನೋಡಿ ಎಲ್ಲರ ಕಣ್ಣೂ ನಮ್ಮ ಮೇಲೆ. ಹೆಂಡತಿ ನೋಡಲು ಚನ್ನಾಗಿದ್ದರೆ ಎಲ್ಲರೂ ಕಣ್ಣುಹಾಕುತ್ತಾರೆ.ಅದಕ್ಕೇ ನಾನು ಹೋತದಂತಹವಳನ್ನು ಮದುವೆಯಾಗಿರುವುದು’ ಎಂದು ಆತ ಕಣ್ಣು ಹೊಡೆದಿದ್ದ.

ನಾನು ಈತ ಹೇಳಿದ್ದ ಕಥೆಯನ್ನೂ ಊರಲ್ಲಿರುವ ಹೆಂಡತಿ ಮಕ್ಕಳನ್ನೂ ಯೋಚಿಸುತ್ತಾ ಕಾರ್ಗಿಲ್ಲಿನ ಟ್ಯಾಕ್ಸಿ ಸ್ಟಾಂಡಿನಲ್ಲಿ ಪದುಂ ಪಟ್ಟಣಕ್ಕೆ ತೆರಳುವ ಕಡಿಮೆ ಖರ್ಚಿನ ವಾಹನಕ್ಕಾಗಿ ಚೌಕಾಶಿ ನಡೆಸುತ್ತಿದ್ದೆ.

‘ನೀವು ಏನು ಬೇಕಾದರೂ ಹೇಳಿ ಸಾಬ್.ಟ್ಯಾಕ್ಸಿ ಯೂನಿಯನ್ನಿಯನ್ನಿನವರು ನಿಗದಿಪಡಿಸಿದ ದರಕ್ಕಿಂತ ಕಡಿಮೆಗೆ ಎಲ್ಲಾದರೂ ನಿಮ್ಮನ್ನು ಕರೆದುಕೊಂಡು ಹೋದರೆ ನಮ್ಮನ್ನು ಒದ್ದು ಹೊರಗೆ ಹಾಕುತ್ತಾರೆ.ನೀವು ಒಂದು ಕೆಲಸ ಮಾಡಿ.ಇಲ್ಲಿಂದ ಹೊರಡುವ ಷೇರ್ ಟ್ಯಾಕ್ಸಿಯಲ್ಲಿ ಹೋಗಿ.ಕೇವಲ ಒಂದು ಸಾವಿರ.ಟ್ಯಾಕ್ಸಿಯಲ್ಲಿ ಏಳು ಜನ.ಹತ್ತು ಗಂಟೆಗಳ ಪಯಣ.ಹಣವಿಲ್ಲದವರು ಹೀಗೇ ಹೋಗುವುದು’ ಎಂದು ಅವರು ಉಪಾಯ ಸೂಚಿಸಿದರು.

‘ಹಾಗೆ ಆಗುವುದಿಲ್ಲ.ನನಗೆ ಬೇಕೆಂದಲ್ಲಿ ನಿಲ್ಲಬೇಕು.ಕಂಡಲ್ಲಿ ಇಳಿದು ಫೋಟೋ ತೆಗೆಯಬೇಕು.ಹಿಮಶಿಖರಗಳನ್ನೂ ಹೂ ಕಣಿವೆಗಳನ್ನೂ ನೋಡುತ್ತಾ ನಿದಾನಕ್ಕೆ ಸಾಗಬೇಕು.ಏಳು ಜನ ಅಪರಿಚಿತರ ಜೊತೆ ಹತ್ತು ಗಂಟೆಗಳ ಕಾಲ ಎಲ್ಲೂ ನಿಲ್ಲದೆ ಕಾರೊಂದರೊಳಗೆ ಕೂರಲು ನಾನು ಇಲ್ಲಿಗೇಕೆ ಬರಬೇಕಿತ್ತು’ ಎಂದು ನಾನು ಗೊಣಗುತ್ತಿದ್ದೆ.

ಅಷ್ಟು ಹೊತ್ತಿಗೆ ದೂರದಿಂದಲೇ ನನ್ನನ್ನು ಗಮನಿಸುತ್ತಿದ್ದ ಕಪ್ಪು ಕನ್ನಡಕದಾರಿ ಸುಂದರನೊಬ್ಬ ಹತ್ತಿರ ಬಂದು ನನ್ನನ್ನು ಮೂಲೆಯ ಕತ್ತಲೊಂದಕ್ಕೆ ಕರೆದುಕೊಂಡು ಹೋದ.

‘ನಿಮಗೆ ಎಷ್ಟು ಕೊಡಲಾಗುತ್ತದೆ?’ ಎಂದು ಕೇಳಿದ.

ಕಡಿಮೆ ಮೊತ್ತವೊಂದನ್ನು ಹೇಳಿದೆ.

‘ ಅದಕ್ಕಿಂತ ಹೆಚ್ಚು ಕೊಡಲಾಗುವುದಿಲ್ಲವೇ?’ ಎಂದು ಕೇಳಿದ.

‘ಸುತರಾಂ ಆಗುವುದಿಲ್ಲ’ ಎಂದು ಹೇಳಿದೆ.

‘ಸರಿ.ನಾಳೆ ಬೆಳಗ್ಗೆ ಆರು ಗಂಟೆಯ ಹೊತ್ತಿಗೆ ನಿಮ್ಮ ಎಲ್ಲ ಸಾಮಾನುಗಳನ್ನು ಎತ್ತಿಕೊಂಡು ಈ ಪಟ್ಟಣದ ಸೆರಗಿನಲ್ಲಿ ಹರಿಯುವ ಸಿಂಧೂ ನದಿಯ ಮೇಲಿನ ಸೇತುವೆಯಲ್ಲಿ ನಿಂತುಕೊಳ್ಳಿ.ನಾನು ಒಪ್ಪಿಕೊಂಡ ದರದ ಕುರಿತು ಯಾರಿಗೂ ಹೇಳಬೇಡಿ’ ಎಂದು ತನ್ನ ಮೊಬೈಲ್ ನಂಬರನ್ನು ಕೈಗಿತ್ತು ಮಾಯವಾದ.

ಆತ ಬರಲಾರ ಎಂದು ತಿಳಿದುಕೊಂಡೇ ಮಾರನೆಯ ಮುಂಜಾನೆ ಸಿಂಧೂ ನದಿಯ ಸೇತುವೆಯ ಮೇಲೆ ಕಾಯುತ್ತಿದ್ದೆ.RAS_3255

ಹೇಳಿದ ಸಮಯಕ್ಕೆ ಸರಿಯಾಗಿ ಬಂದು ತನ್ನ ಸ್ಕಾರ್ಪಿಯೋದ ಗಾಜು ಇಳಿಸಿ `ಸಲಾಂ ಸಾಬ್. ಅದು ಹೇಗೆ ಇಷ್ಟು ಕಡಿಮೆ ಹಣಕ್ಕೆ ನಾನು ಒಪ್ಪಿಕೊಂಡೆ ಎಂದು ನಿಮಗೆ ನಂಬಲಾಗುತ್ತಿಲ್ಲ ಅಲ್ಲವೇ’ ಎಂದ.

‘ಹೌದು’ ಅಂದೆ.

‘ ಈ ಪ್ರಪಂಚ ಬಹಳ ಕೆಟ್ಟದು ಸಾಬ್.ಅದಕ್ಕೆ ಎಲ್ಲರಿಗೂ ಪಾಠ ಕಲಿಸಬೇಕು.ನನಗೆ ಹಣ ಲಾಸಾದರೂ ಪರವಾಗಿಲ್ಲ.ಇದೇ ನನ್ನ ಜೀವನದ ಗುರಿ’ ಅಂದ.

ದಾರಿಯಲ್ಲಿ ಹೋಗುತ್ತಾ ಅವನ ಕಥೆ ಕೇಳಿದೆ.

ಅದು ಚುಟುಕಾಗಿ ಇಲ್ಲಿದೆ.

ಆತ ನಾನು ಹೋಗುತ್ತಿರುವ ಪದುಂ ಪಟ್ಟಣದ ನಿವಾಸಿ.

ಪದುಂ ಪಟ್ಟಣದ ತೊಂಬತ್ತೈದು ಶೇಖಡಾ ನಿವಾಸಿಗಳು ಬೌದ್ಧ ಧರ್ಮೀಯರು.

ಉಳಿದ ಐದು ಶೇಖಡಾ ಮಂದಿ ಸುನ್ನಿ ಮುಸಲ್ಮಾನರು.

ಈತ ಈ ಸುನ್ನಿ ಪಂಗಡಕ್ಕೆ ಸೇರಿದವನು.

ಒಂದು ಕಾಲದಲ್ಲಿ ಇವರೆಲ್ಲರೂ ಜೊತೆಗೆ ಚೆನ್ನಾಗಿ ಬಾಳುತ್ತಿದ್ದರು.

RAS_3286ಪದುಂ ಮತ್ತು ಲೇಹ್ ಪ್ರಾಂತ್ಯದ ಬೌದ್ಧರಲ್ಲೂ ಅಸ್ಪೃಶ್ಯರಿದ್ದಾರೆ.ಈ ಅಸ್ಪೃಶ್ಯರು ಚಮ್ಮಾರ ಕಮ್ಮಾರ ಇತ್ಯಾದಿ ಕಸುಬು ಮಾಡುವವರು.ಇವರೇ ಮದುವೆಗಳಲ್ಲೂ ಬೌದ್ಧ ಮೆರವಣಿಗೆಗಳಲ್ಲೂ ವಾಧ್ಯಗಳನ್ನೂ ಡೋಲುಗಳನ್ನೂ ಬಾರಿಸುವವರು.

ಮೇಲುಜಾತಿಯ ಬೌದ್ಧರು ಇವರನ್ನು ಜೊತೆಯಲ್ಲಿ ಊಟಕ್ಕೆ ಸೇರಿಸುವುದಿಲ್ಲ.ನೆಂಟಸ್ತಿಕೆ ಬೆಳೆಸುವುದಿಲ್ಲ.

ಕೆಲವು ವರ್ಷಗಳ ಹಿಂದೆ ಪದುಂ ನಗರದಲ್ಲಿ ಕಾಲಚಕ್ರ ಹಬ್ಬ ನಡೆದಾಗ ದಲಾಯಿಲಾಮಾ ಬಂದಿದ್ದರಂತೆ.

ಆಗ ಇಲ್ಲಿನ ಅಸ್ಪೃಶ್ಯ ಬೌದ್ಧರು ತಮ್ಮ ನೋವನ್ನು ಅವರಲ್ಲಿ ತೋಡಿಕೊಂಡರಂತೆ.

ಅದನ್ನು ಕೇಳಿ ದಂಗಾದ ದಲಾಯಿಲಾಮಾ ಈ ಅಸ್ಪೃಶ್ಯತೆಯನ್ನು ನಿಲ್ಲಿಸುವಂತೆ ಅಲ್ಲಿನ ಬೌದ್ಧರಿಗೆ ಆಜ್ಞಾಪಿಸಿದರಂತೆ.

ಆದರೆ ಅವರ ಮಾತಿಗೆ ಯಾರೂ ಕ್ಯಾರೇ ಅನ್ನಲಿಲ್ಲವಂತೆ.

ಹಾಗಾಗಿ ಅಲ್ಲಿನ ಅಸ್ಪೃಶ್ಯರು ತಾವೂ ಸುನ್ನಿಗಳಾಗಲು ಹೊರಟರಂತೆ.

ಹೀಗಾಗಿ ಈಗ ಪದುಂ ಪಟ್ಟಣದಲ್ಲಿ ಧರ್ಮಕಾರಣ.

ಸುನ್ನಿಗಳಿಗೆ ಬಹಿಷ್ಕಾರ ಹಾಕಿರುವರಂತೆ.ಇವನನ್ನು ಅಲ್ಲಿನ ಟ್ಯಾಕ್ಸಿ ಯೂನಿಯನ್ನಿಂದ ಹೊರಹಾಕಲಾಗಿದೆಯಂತೆ.

ಹಾಗಾಗಿ ಇವನ ಟ್ಯಾಕ್ಸಿಗೆ ಯಾರೂ ಹತ್ತುವುದಿಲ್ಲವಂತೆ.

‘ಸರಿ ಮಾರಾಯ.ಕಾರ್ಗಿಲ್ಲಿನಲ್ಲೇ ಟ್ಯಾಕ್ಸಿ ಓಡಿಸಬಹುದಲ್ಲಾ’ ಅಂದೆ.

‘ಅಯ್ಯೋ ಸಾಬ್ ಕಾರ್ಗಿಲ್ ಪದುಂಗಿಂತಲೂ ಖತರ್ನಾಕ್’ ಅಂದ.

‘ಯಾಕೆ?’ ಎಂದು ಕೇಳಿದೆ.

‘ ಸಾರ್ ಅಲ್ಲಿ ಇರುವುದು ಎಲ್ಲರೂ ಶಿಯಾಗಳು.ಬುದ್ಧಿಷ್ಟುಗಳನ್ನಾದರೂ ನಂಬಬಹುದು ಶಿಯಾಗಳನ್ನಲ್ಲ’ ಅಂದ.

ಆಮೇಲೆ ಕೊಂಚ ಆತಂಕದಲ್ಲಿ ‘ನೀವು ಶಿಯಾವೋ ಸುನ್ನಿಯೋ?’ ಎಂದು ಕೇಳಿದ.

‘ಗೊತ್ತಿಲ್ಲ ಮಾರಾಯ ಮುಖ ನೋಡಿದರೆ ಹೇಗೆ ಅನ್ನಿಸುತ್ತಿದೆ ? ಎಂದು ಕೇಳಿದೆ.

‘ ಮುಖನೋಡಿದರೆ ಸಿಂಗಾಪೂರಿನವರ ಹಾಗೆ ಇದೀರಿ’ ಅಂದ

‘ಸಿಂಗಾಪೂರಲ್ಲ ಮಾರಾಯ, ಸಿಂಗಾನಲ್ಲೂರಿನವನು.ಡಾ.ರಾಜ್ ಕುಮಾರ್ ಗೊತ್ತಾ?’ ಎಂದು ಕೇಳಿದೆ.

‘ನಹೀ ಸಾಬ್’ ಎಂದು ಹಳೆಯ ಹಿಂದಿ ಹಾಡನ್ನು ಗುನುಗುತ್ತಾ ರಾಜೇಶ್ ಖನ್ನಾನ ಹಾಗೆ ಗಾಡಿ ಓಡಿಸಲು ತೊಡಗಿದRAS_3262

Photos by the author    

20 October 2013                                                                                 (ಮುಂದುವರಿಯುವುದು)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: