ಲಡಾಖ್ ಪ್ರವಾಸ ಕಥನ ೧. ಪದ್ಮಸಂಭವನ ಭವಸಾಗರದಲ್ಲಿ

RAS_3329

ಇದು ಖಿನ್ನತೆಯೋ ಆನಂದವೋ ದುಗುಡವೋ ನೀರವತೆಯೋ ಒಂದೂ ಅರಿವಾಗುತ್ತಿಲ್ಲ.ಹಿಮಾಲಯದ ತಪ್ಪಲಿನ ಸುರು ಮತ್ತು ಜಂಸ್ಕಾರ್ ಕಣಿವೆಗಳಲ್ಲಿ ಶರತ್ಕಾಲದಲ್ಲಿ ಹತ್ತು ದಿನ ಸುತ್ತು ಹಾಕಿ ವಾಪಾಸು ಬಂದು ಇಲ್ಲಿ ಮಡಿಕೇರಿಯಲ್ಲಿ ಸುಮ್ಮನೆ ಮೂಢನಂತೆ ಕುಳಿತಿರುವೆ.

ಇಲ್ಲಿನ ಪರಿಚಿತ ಮುಖಗಳು ಅಪರಿಚಿವಾಗಿ ಕಾಣಿಸುತ್ತಿವೆ.

ಗೊತ್ತಿರುವ ದಾರಿಗಳಲ್ಲೇ ದಾರಿತಪ್ಪಿ ಕಕ್ಕಾವಿಕ್ಕಿಯಾಗುತ್ತಿದ್ದೇನೆ.

ಕಾಶ್ಮೀರದ ರಾಜಧಾನಿ ಶ್ರೀನಗರ ಮತ್ತು ಲಡಾಕ್ ಪ್ರಾಂತ್ಯದ ನಡುವೆ ಕಾರ್ಗಿಲ್ ಎಂಬ ಯುದ್ದಭೂಮಿ ಬರುತ್ತದೆ.ಕಾರ್ಗಿಲ್ ಪಟ್ಟಣದ ಆಗ್ನೇಯ ದಿಕ್ಕಿನಲ್ಲಿ ಸುಮಾರು ಇನ್ನೂರು ಕಿಲೋಮೀಟರ್ ದೂರದಲ್ಲಿರುವ ಈ ಹಿಮಬೆಟ್ಟಗಳ ನಡುವಿನ ಮರುಭೂಮಿಯಂತಿರುವ ಕಣಿವೆಯಲ್ಲಿ ಶರತ್ಕಾಲ ಶುರುವಾಗುವ ಮೊದಲು ಒಂದೆರೆಡು ಸುತ್ತು ಮಳೆ ಸುರಿಯುತ್ತದೆ.ಅದೇ ಇಲ್ಲಿನ ಮಳೆಗಾಲ!

RAS_3730ವಸಂತದಲ್ಲಿ ಅರಳಿದ ಹೂಗಳು, ಗ್ರೀಷ್ಮದ ಕುರುಚಲು ಹಸಿರು, ಮತ್ತು ಪರ್ವತಗಳ ಇಳಿಜಾರಿನಲ್ಲಿ ಶಿಲೆಗಳ ಮೇಲೆ ಹರಡಿರುವ ಹಳದಿ ಹುಲ್ಲು ಎಲ್ಲವೂ ಈ ಮಳೆಗೆ ಒಂದಿಷ್ಟು ಮುದುಡಿ, ಒಂದಿಷ್ಟು ಕೊಳೆತು ಕುಂಕುಮ ಮಿಶ್ರಿತ ಹಳದಿ ಮತ್ತು ಹಸಿರು ಬಣ್ಣಗಳಲ್ಲಿ ಚಲ್ಲಾಪಿಲ್ಲಿಯಾಗಿ ಹರಡಿಕೊಂಡಿರುತ್ತದೆ.

ಹಿಮಗಡ್ಡೆಗಳು ಕರಗಿ ಹರಿಯುವ ನೀರಿನ ಬಣ್ಣ ತಿಳಿಹಸಿರು.

ತಣ್ಣಗೆ ಉರಿಯುವ ಬಿಸಿಲಿಗೆ ಹೊಳೆಯುವ ಬೆಟ್ಟಗಳ ಬಣ್ಣ ರಂಜಕ.

ಆಕಾಶದ ಬಣ್ಣ ಕಡು ನೀಲಿ.ಹಿಮದ ಮುಖವಾಡ ತೊಟ್ಟಿರುವ ಮಲೆಶೃಂಗಗಳ ಕೋಡಿಗೆ ಸಿಕ್ಕಿಹಾಕಿಕೊಂಡಿರುವ ತೆಳುಮೋಡಗಳು ಬಿಳಿಗಿಂತ ಬೆಳ್ಳಗೆ.

ಶರತ್ಕಾಲದಲ್ಲಿ ಈ ಪರ್ವತಗಳ ಕೆಳಗೆ ಅಳ್ಳೆದೆಯ ಮನಸಿನವರು ಒಂಟಿಯಾಗಿ ಓಡಾಡಬಾರದೆಂದು ಯಾರೋ ಎಚ್ಚರಿಸಿದ್ದರು.ಆದರೂ ಎಲ್ಲವನ್ನೂ ಬಿಟ್ಟು ಒಬ್ಬನೇ ಬಂದಿದ್ದೆ.ಬಂದು ನೋಡಿದರೆ ಅದು ನಿಜವೆನ್ನಿಸಿತ್ತು.

ಹಳದಿ ಹಸಿರು ಮತ್ತು ಕೆಂಪಿನ ನಡುವಿರುವ ಅಸಂಖ್ಯಾತ ವರ್ಣಜಾಲಗಳು.ಸರಿದಷ್ಟೂ ಸರಿದಷ್ಟೂ ಮುಗಿಯದ ಹಿಮಪರ್ವತಗಳ ಸಾಲು.ಮನುಷ್ಯರೇ ಕಾಣದ ಉದ್ದನೆಯ ಹಾದಿ.

ಇನ್ನು ಒಂದು ತಿಂಗಳು ಕಳೆದರೆ ಇನ್ನು ಮುಂದಿನ ನಾಲ್ಕೈದು ಮಾಸಗಳ ಕಾಲ ಈ ಹಾದಿಯ ತುಂಬ ಆಳೆತ್ತರದ ಹಿಮರಾಶಿ ತುಂಬಿರುತ್ತದೆ.ಈ ಹಿಮಾವೃತ ಚಳಿಗಾಲಕ್ಕಾಗಿ ಇಲ್ಲಿನ ಜನ ಧಾನ್ಯವನ್ನೂ,ಮೇವನ್ನೂ, ಉರುವಲನ್ನೂ,ಉಡುಪನ್ನೂ ಸಂಗ್ರಹಿಸಿಡುತ್ತಿದ್ದಾರೆ.ಮುಂದಿನ ವಸಂತದ ತನಕ ಇಲ್ಲಿನವರು ಹಿಮ, ಪರ್ವತ ಮತ್ತು ದೇವರುಗಳ ಜೊತೆ ಏಕಾಂಗಿಯಾಗಿರುತ್ತಾರೆ.ಹಾಗಾಗಿಯೇ ಇವರು ಅಪರಿಚಿತರೊಡನೆ ಹೆಚ್ಚಾಗಿ ಮಾತನಾಡುವುದಿಲ್ಲ.

RAS_3742

ಇವರ ಮಾತಿನಲ್ಲಿ ಅಹಂಕಾರವೋ, ಅಶ್ಲೀಲತೆಯೋ ಲವಲೇಶವೂ ಇರುವುದಿಲ್ಲ.

ಒಬ್ಬನ ಒಂದು ನಗುವಿನಲ್ಲಿ ಎಷ್ಟೊಂದು ಚಹರೆಗಳ ಏರಿಳಿತ.

ಒಂದು ಸಣ್ಣಮಾತಿನಲ್ಲಿ ಎಷ್ಟೆಲ್ಲ ಧ್ವನಿವಿಸ್ತಾರ.

ಒಂದು ಇರುಳು ಎಚ್ಚರಾಗಿ ನೋಡಿದರೆ ಆಕಾಶ ಬೆಳ್ಳಗೆ ಹೊಳೆಯುತ್ತಿತ್ತು.ಕಿಟಕಿಯಿಂದ ಕಾಣುತ್ತಿರುವ ಹಿಮಶಿಖರದ ತುದಿಯಲ್ಲಿ ಹೆಸರು ಗೊತ್ತಿಲ್ಲದ ಒಂದು ನಕ್ಷತ್ರ ಒಂಟಿಯಾಗಿ ಮಿನುಗುತ್ತಿತ್ತು.ಅದಕ್ಕೂ ಮೇಲೆ ಬೆಳಗುತ್ತಿರುವ ತುಂಡುಚಂದ್ರ.ಅವೆರಡರ ನಡುವೆ ಸಿಲುಕಿಕೊಂಡಿರುವ ಚಾದರದ ಹಾಗಿರುವ ತುಂಡುಮೋಡ.

ಯಾರೂ ಇಲ್ಲದ ಆ ತಾಣದಲ್ಲಿ ಆಕಾಶಕಾಯಗಳ ಜೊತೆ ಬೆಳಕ ಸಂಭಾಷಣೆ ನಡೆಸುತ್ತಿರುವ ಹಿಮಪರ್ವತ.

ನಾನು ಯಾಕೋ ಕಾಣಬಾರದ್ದ ಕಂಡಹಾಗೆ ಭಯಬೀತನಾದೆ.

RAS_3645

ಈ ಮನುಷ್ಯನೆಂಬವನು ಉಂಟಾಗುವುದಕ್ಕೂ ಮೊದಲು, ಈ ಪರ್ವತಗಳು ಉಂಟಾಗುವುದಕ್ಕೂ ಮೊದಲು ಇದ್ದದ್ದು ಬರೀ ಬೆಳಕು.ಅದು ಕೇವಲ ಬೆಳಕಲ್ಲ.ಅದೊಂದು ತರಹದ ಒಂಟಿತನ.

ಬೆಳಕಿನ ಈ ಒಂಟಿತನ ನೀಗಿಸಿಕೊಳ್ಳಲೋ ಎಂಬಂತೆ ಉಂಟಾದ ಹಿಮಶಿಖರಗಳು, ಮರುಭೂಮಿಗಳು, ಹಸಿರು ಹುಲ್ಲುಗಾವಲುಗಳು ಮತ್ತು ಕೊನೆಗೆ ಉಂಟಾದ ಮನುಷ್ಯ ಸಂತತಿ.ಒಂದು ಸಣ್ಣ ಸ್ವಪ್ನದಂತೆ ಕಳೆದು ಹೋಗುವ ಮನುಷ್ಯನ ಆಯಸ್ಸು.

ಈ ಆಯಸ್ಸಿನ ನಡುಗಾಲದಲ್ಲಿ ತಿರುಗಾಡಿಕೊಂಡು ಹೋಗಲು ಬಂದವನು ಪರ್ವತವೊಂದರ ನಕ್ಷತ್ರ ಪ್ರಣಯವನ್ನು ಕದ್ದು ವೀಕ್ಷಿಸಿ ಹೆದರಿಕೊಂಡುಬಿಟ್ಟಿದ್ದೆ.ಹೆದರಿದ್ದಕ್ಕೆ ನಗುವೂ ಬರುತ್ತಿತ್ತು.ಸ್ವಲ್ಪಹೊತ್ತಲ್ಲೇ ಭೂಮಿಯೇ ಬಿರಿದುಹೋಗುವಂತೆ ಸದ್ದುಮಾಡುತ್ತಾ ಗಾಳಿಬೀಸತೊಡಗಿ ಆ ಪರ್ವತವೂ ಆ ನಕ್ಷತ್ರವೂ ಆ ಮೋಡವೂ ಆ ಚಂದ್ರನೂ ಕಾವಳದಲ್ಲಿ ಕಾಣೆಯಾದವು.

ನಂತರ ಜೋರಾಗಿ ಮಳೆ ಸುರಿಯಲು ತೊಡಗಿತು.

ಬೆಳಗೆ ಎದ್ದುನೋಡಿದರೆ ಬಿಸಿಲು ಆಗಲೇ ಜೋರಾಗಿ ಹೊಳೆಯುತ್ತಿತ್ತು.

ಹುಲ್ಲುಗಾವಲಿನಲ್ಲಿ ಮಿನುಗುತ್ತಿರುವ ಮಳೆಯ ನೀರು.

RAS_3434

ನಾನು ಉಳಕೊಂಡಿದ್ದ ಮನೆಯ ಯಜಮಾನನೂ, ಮಡದಿಯೂ, ಮಕ್ಕಳೂ ಒಗೆದು ಒಣಗಿಸಿ ಮಡಚಿಟ್ಟಿದ್ದ ಹಬ್ಬದ ದಿರಿಸುಗಳನ್ನು ದರಿಸಿ ಹೊರಡಲು ಅಣಿಯಾಗುತ್ತಿದ್ದರು.

ಈ ಪಟ್ಟಣದ ಉತ್ತರ ದಿಕ್ಕಿನಲ್ಲಿರುವ ಸರೋವರವೊಂದರ ನಡುವೆ ಹೊಸದಾಗಿ ನಿರ್ಮಿಸಲಾಗಿದ್ದ ಬೌದ್ಧಗುರು ಪದ್ಮಸಂಭವನ ವಿಗ್ರಹದ ಉದ್ಘಾಟನೆಗೆ ಅವರೆಲ್ಲ ಅಣಿಯಾಗುತ್ತಿದ್ದರು.

ಗುರು ಪದ್ಮಸಂಭವನನ್ನು ಇಲ್ಲಿನ ಬೌದ್ಧರು ಎರಡನೇ ಬುದ್ಧನೆಂದೇ ಪೂಜಿಸುವರು.

ಆಗಿನ ವಾಯುವ್ಯ ಭಾರತದ ಆದರೆ ಈಗ ಪಾಕಿಸ್ತಾನದಲ್ಲಿರುವ ಸ್ವಾತ್ ಕಣಿವೆಯಲ್ಲಿ ನೆಲೆಸಿದ್ದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಪದ್ಮಸಂಭವನ ತೇಜಸ್ಸು ಕೊನೆಯತನಕವೂ ಎಂಟರ ಹರೆಯದ ಬಾಲಕನ ಮುಖದ ಹೊಳಪಿನಂತೆ ಇತ್ತು ಎಂದು ಗ್ರಂಥಗಳು ಹೇಳುತ್ತವೆ.ಈತ ಹಿಮಾಚಲದ ರಾಜಕುಮಾರಿ ಮಂದಾರಳಿಗೆ ತಂತ್ರವಿದ್ಯೆಯನ್ನು ಕಲಿಸಿದನೆಂದೂ ಇದರಿಂದ ರೊಚ್ಚಿಗೆದ್ದ ಮಂದಾರಳ ತಂದೆಯಾಗಿದ್ದ ರಾಜ ಅವರಿಬ್ಬರನ್ನು ಸುಡಲು ನೋಡಿದನೆಂದೂ ಆದರೆ ಅವರಿಬ್ಬರೂ ಸುಟ್ಟುಕರಕಲಾಗದೆ ಬೆಂಕಿಯೊಳಗಡೆ ಯೋಗಭಂಗಿಯಲ್ಲಿ ಹೊಳೆಯುತ್ತಾ ಕುಳಿತಿದ್ದರೆಂದೂ ಇದನ್ನು ಕಂಡು ಕಂಗಾಲಾದ ಆ ರಾಜ ಅವರಿಬ್ಬರಿಗೆ ಕೈಮುಗಿದು ರಾಜ್ಯವನ್ನೊಪ್ಪಿಸಲು ನೋಡಿದನೆಂದೂ ಆದರೆ ಅವರಿಬ್ಬರು ಅದನ್ನು ಒಪ್ಪದೆ ನೇಪಾಳದ ಗುಹೆಯೊಂದರಲ್ಲಿ ಇನ್ನಷ್ಟು ತಪಸ್ಸಿಗೆ ಕುಳಿತರೆಂದೂ ಗ್ರಂಥಗಳು ಹೇಳುತ್ತವೆ.

ನೇಪಾಳದ ಆ ಗುಹೆಯಲ್ಲಿ ಕುಳಿತಿದ್ದ ಪದ್ಮಸಂಭವನನ್ನು ಈ ಊರಿನ ಆಗಿನ ಕಾಲದ ರಾಜ ಈ ಸರೋವರಕ್ಕೆ ಆಹ್ವಾನಿಸಿದ್ದನಂತೆ.ಯಾಕೆಂದರೆ ಈ ಸರೋವರದಲ್ಲಿ ರಕ್ಕಸರೂ ಡಾಕಿಣಿಯರೂ ತುಂಬಿಕೊಂಡು ಈ ಊರಿನವರಿಗೆ ಪಡಬಾರದ ಕಷ್ಟಗಳನ್ನು ಕೊಡುತ್ತಿದ್ದುವಂತೆ.ಅಲ್ಲಿಗೆ ಆಗಮಿಸಿದ ಪದ್ಮಸಂಭವ ತನ್ನ ಯೋಗನೃತ್ಯದಿಂದ ಈ ರಕ್ಕಸ ಡಾಕಿಣಿಯರ ಮನಪರಿವರ್ತಿಸಿ ಅವರನ್ನೂ ಒಳ್ಳೆಯವರನ್ನಾಗಿ ಮಾಡಿ ಈ ಸರೋವರದ ಸುತ್ತಮುತ್ತ ಶಾಂತಿ ಮತ್ತು ಸಮೃದ್ಧಿ ನೆಲೆಸುವಂತೆ ಮಾಡಿದನಂತೆ.

ಕ್ರಿಸ್ತಪೂರ್ವ ಎಂಟನೇ ಶತಮಾನದಲ್ಲಿ ನಡೆದ ಈ ಸಂಭವವನ್ನು ಇದೀಗ ನೆನ್ನೆತಾನೇ ಆಯಿತೇನೋ ಎನ್ನುವ ಹಾಗೆ ವಿವರಿಸುತ್ತಾ ಆ ಮನೆಯ ಯಜಮಾನ ಲಗುಬಗೆಯಿಂದ ಹೊರಡಲು ತಯಾರಾಗುತ್ತಿದ್ದ.

RAS_3607ಇರುಳೆಲ್ಲ ನಕ್ಷತ್ರ ಹಿಮಪರ್ವತಗಳ ಕನಸು ಕಂಡಿದ್ದ ನಾನೂ ಹಾಗೇ ಭಾವಿಸಿಕೊಂಡು ಅವರೊಡನೆ ಹೊರಡಲು ಅಣಿಯಾಗುತ್ತಿದ್ದೆ.

ಶರತ್ಕಾಲದ ಬಿಸಿಲಿನ ಉರಿಗೆ ಸುಟ್ಟು ಕೊಂಚ ಕರಕಲಾಗಿರುವ ಅವರ ಮುಖದ ನಸುಗೆಂಪು ಚರ್ಮ.ಇನ್ನು ಚಳಿಗಾಲದ ಹಿಮಪಾತ ಶುರುವಾಗುತ್ತಿದ್ದಂತೆ ಮುಖದ ಚರ್ಮ ಬಾಡಿಹೋಗಬಾರದೆಂದು ಇಲ್ಲಿನ ಸ್ತ್ರೀಯರು ಕುರಿಯ ತುಪ್ಪಳವನ್ನು ಮೂರು ತಿಂಗಳುಗಳ ಕಾಲ ಮುಖಕ್ಕೆ ಅಂಟಿಸಿಕೊಳ್ಳುತ್ತಾರಂತೆ.

‘ಆಗ ನೀವು ಬಂದು ನೋಡಬೇಕು.ಆಗ ಇಲ್ಲಿನ ಸ್ತ್ರೀಯರಿಗೆಲ್ಲ ಮುಖದ ಮೇಲೆ ನಿಮ್ಮ ಹಾಗೇ ಬೆಳ್ಳಗಿನ ಗಡ್ಡ ಬೆಳೆದಿರುತ್ತದೆ’ ಎಂದು ಯಜಮಾನ ಹಿಂದಿನ ಇರುಳು ಪಕಪಕ ನಕ್ಕಿದ್ದ.

ಹೆಂಗಸರು ನಾಚಿಕೊಂಡಿದ್ದರು.

RAS_3603ಆ ದಾರಿಯಲ್ಲಿ ಸಾಗುತ್ತಿದ್ದ ಪಿಕ್ ಅಪ್ ವ್ಯಾನೊಂದಕ್ಕೆ ಕೈ ಒಡ್ಡಿ ತಡೆದು ನಿಲ್ಲಿಸಿ ಅದರೊಳಕ್ಕೆ ಆಗಲೇ ತುಂಬಿಕೊಂಡಿದ್ದ ನೂರಾರು ಭಕ್ತಜನರ ಕಾಲಬುಡದಲ್ಲಿ ಕುಳಿತುಕೊಂಡು ನಾನೂ ಪದ್ಮಸಂಭವನ ಪ್ರತಿಮೆ ನೋಡಲು ಅವರೊಡನೆ ಹೊರಟಿದ್ದೆ. ಅವರೆಲ್ಲರ ದಿರಿಸುಗಳ ನಡುವಿಂದ ಕಾಣುತ್ತಿದ್ದ ನೀಲ ಆಕಾಶ ಮತ್ತು ಹಿಮಾವೃತ ಗಿರಿಶಿಖರಗಳು.ಸಾವಿರಾರು ವರ್ಷಗಳ ಹಿಂದೆ ರಕ್ಕಸರನ್ನು ಡಾಕಿಣಿಯರನ್ನೂ ಯೋಗನೃತ್ಯದಿಂದ ಮಣಿಸಿದ ಪದ್ಮಸಂಭವ ಈ ದಾರಿಯಲ್ಲಿ ಸಂಚರಿಸಿದಾಗ ಹೇಗೆ ಇತ್ತೋ ಹಾಗೇ ಈಗಲೂ ಇರುವ ಈ ಮುಖಗಳ ಸುಕ್ಕುಗಳು ಮತ್ತು ನಗು.

ಎಳೆಯ ಪ್ರಾಯದ ತರುಣ ತರುಣಿಯರು ಡಾಕಿಣಿಯರನ್ನೂ ರಕ್ಕಸರನ್ನೂ ದೇವತೆಯರನ್ನೂ ಮರೆತು ಆ ಪುಟ್ಟ ವ್ಯಾನಿನೊಳಗೆ ಸಿಕ್ಕಿದ ಆ ಸಣ್ಣ ಅವಕಾಶದಲ್ಲೇ ಕಣ್ಣಲ್ಲೇ ಪ್ರೇಮ ಸಂಭಾಷಣೆಯಲ್ಲಿ ತೊಡಗಿದ್ದರು.

ಬಹುಶಃ ಕ್ರಿಸ್ತಪೂರ್ವ ಎಂಟನೇ ಶತಮಾನದಲ್ಲಿ ಈ ಪ್ರದೇಶಕ್ಕೆ ಪದ್ಮಸಂಭವ ಬಂದ ಕಾಲದಲ್ಲೂ ಹಲವಷ್ಟು ತರುಣತರುಣಿಯರು ಯಾರಿಗೂ ಕ್ಯಾರೇ ಅನ್ನದೆ ಪ್ರೇಮಸಲ್ಲಾಪದಲ್ಲಿ ಮುಳುಗಿದ್ದಿರಬಹುದು ಅಂದುಕೊಳ್ಳುತ್ತಾ ನಿಂತುಕೊಂಡ ವ್ಯಾನಿನಿಂದ ಇಳಿದೆ.

ನೋಡಿದರೆ ಪದ್ಮಸಂಭವನ ಹಿತ್ತಾಳೆಯ ಮೂರ್ತಿ ಅದಾಗಲೇ ಸರೋವರದ ನಡುವೆ ಬಿಸಿಲಿಗೆ ಹೊಳೆಯುತ್ತಿತ್ತು.

RAS_3618Photos by the author      6 October 2013                                                                                 (ಮುಂದುವರಿಯುವುದು)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s