ಮಹಾದೇವ ಮಾಮನ ಜೊತೆಗೆ

 

1ಭಾರತಕ್ಕೆ ಗಣತಂತ್ರ ಬಂದು ಅರವತ್ಮೂರು ವರ್ಷಗಳಾದವು, ನೀವು ಕುಸುಮಬಾಲೆ ಬರೆದು ಮೂವತ್ತು ವರ್ಷ,ಲಂಕೇಶರು ತೀರಿಹೋಗಿ ಹದಿಮೂರು ವರ್ಷಗಳು.ಹೀಗೆ ವರ್ಷಗಳನ್ನು ನೆನೆನೆನೆದುಕೊಂಡು ನಾವೆಷ್ಟು ದಿನ ಕಾಲ ಕಳೆಯುವುದು?ಇಲ್ಲಿನ ಬಡತನ,ಇಲ್ಲಿನ ಜೀತ,ಇಲ್ಲಿನ ಖದೀಮತನ ಬರೀ ಇವನ್ನೇ ನೆನೆಸಿಕೊಂಡು ಎಷ್ಟು ಅಂತ ಮರುಗುವುದು? ಈ ದೇಶ,ಇಲ್ಲಿನ ಜನ,ಇಲ್ಲಿನ ಖುಷಿ,ಈ ಬಣ್ಣ,ಈ ಮಕ್ಕಳ ನಗು,ಇಲ್ಲಿನ ಕಥೆಗಳು ಇವನ್ನೆಲ್ಲ ನಾವು ಹೇಗೆ ಬರೆಯದಿರುವುದು?’ ಎಂದು ನಾನು ದೇವನೂರು ಮಹಾದೇವರನ್ನು ಒಂದಿಷ್ಟು ಆಕಾಶದ ಕಡೆ ಒಯ್ಯಲು ಹೆಣಗುತ್ತಿದ್ದೆ.

ಆದರೆ ಅವರು ಈ ಯಾವುದೇ ಬಣ್ಣದ ಮಾತುಗಳಿಗೆ ಮರುಳಾಗದೆ ನನ್ನನ್ನು ಮತ್ತೆ ನೆಲದ ಕಡೆ ಎಳೆಯುತ್ತಿದ್ದರು.

‘ನೋಡಿ ಮಾದೇವ,ಭಾರತ ಗಣತಂತ್ರದ ಕೂಸು ನೀವು.ಇಲ್ಲಿರುವ ಅಮಾಸ,ಯಾಡ,ಗಾರೆ ಸಿದ್ಮಾವ,ಕುರಿಯಯ್ಯ ಇವರೆಲ್ಲರೂ ಮೈಮೇಲೆ ಬಂದಂತೆ ಮಾತನಾಡಲು ಆಗಿರುವುದು ನಿಮ್ಮಿಂದಲೇ.ಆದರೂ ನೀವು ಯಾಕೆ ಖುಷಿಯಾಗಿರಬಾರದು’ ಎಂದು ಅವರನ್ನು ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದೆ

ಈ ನನ್ನ ಬೇಡಿಕೆಯು ಅವರಿಗೆ ಯಾಕೋ ಅರಿವಿಲ್ಲದ ಬಾಲಕನೊಬ್ಬನ ಹುಡುಗಾಟದಂತೆ ಅನಿಸಿ ಕೊಂಚ ಹೊತ್ತು ಯೋಚನಾಮಗ್ನರಾದರು.‘ನಿಮ್ಮ ನಿಮ್ಮ ಕನಸು ಮತ್ತು ಭ್ರಮೆಗಳಲ್ಲಿ ಮುಳುಗಲು ನೀವು ಸ್ವತಂತ್ರರು.ಆದರೆ ನಾನು ಪ್ರೀತಿ,ಸಮಾನತೆ ಹಾಗೂ ಸಹನೆಗಳನ್ನು ಹುಡುಕುತ್ತಾ ಇದು ತನಕ ಬದುಕಿ ಬಂದವನು.ಅವು ಈ ತನಕ ಈ ದೇಶದಲ್ಲಿ ನನಗೆ ಕಂಡುಬಂದಿಲ್ಲ.ಹಾಗಾಗಿ ಈ ಬೇಸರದಲ್ಲಿ ಬದುಕಲೂ ನಾನು ಸ್ವತಂತ್ರನು’ ಎಂದು ಅವರು ಅಂದರು.

2‘ಈಗ ನೋಡಿ ನಮ್ಮ ಹಳ್ಳಿ.ಅಲ್ಲಿ ಎಲ್ಲಿಯವರೆಗೆ ಸಮಾನತೆ ಇರಬೇಕು ಅಂತ ಎಚ್ಚರ ಇರೋದಿಲ್ಲವೋ ಅಲ್ಲಿವರೆಗೆ ಸಾಮರಸ್ಯ ಇರುತ್ತದೆ.ಯಾವಾಗ ಎಲ್ಲರೂ ಸಮಾನರು ಅಂತ ಹೊರಡ್ತೀವೋ ಆವಾಗ ಅಲ್ಲಿ ಸಾಮರಸ್ಯ ಕೆಡ್ತದೆ.ಇದು ಇಂಡಿಯಾದ ವಿಚಿತ್ರವಾದ ಸಂಕೀರ್ಣತೆ.ನಾವು ಡಿ ಎಸ್ ಎಸ್ ನಿಂದ ಹಳ್ಳಿ ಕಡೆ ಹೊರಟಾಗ ಇವರೆಲ್ಲ ಊರನ್ನ ವಿಘಟಿಸಕ್ಕೆ ಹೊರಟಿದ್ದಾರೆ ಅನ್ನುವ ಆರೋಪಕ್ಕೆ ಒಳಗಾದೆವು.ಊರಲ್ಲಿ ಜಗಳ ತಂದು ಹಾಕಕ್ಕೆ ಬರ್ತಾ ಇದೀರಿ ಅಂದ್ರು.ಏಕೆಂದ್ರೆ ಅವರ ನ್ಯಾಯವೇ ಬೇರೆ,ನಾವು ಕೇಳ್ತಿರೋ ನ್ಯಾಯವೇ ಬೇರೆ.ಈ ತರಹ ಬೇರೆ ಬೇರೆ ನ್ಯಾಯಗಳು ಇರೋದು ನಮ್ಮ ದೇಶದಲ್ಲಿ ಮಾತ್ರ ಕಾಣುತ್ತೆ.’

“ಯಾವ ಕಾರಣಕ್ಕೆ ಜಾತಿ ಪದ್ಧತಿ ಆಯ್ತೋ,ಯಾವ ಕಾರಣಕ್ಕೆ ಅಸ್ಪ್ರಶ್ಯತೆ ಬಂತೋ ನಮಗೆ ಗೊತ್ತಿಲ್ಲ.ನೂರೆಂಟು ಕಾರಣ ಇರಬಹುದು ಆದರೆ ಅಸ್ಪ್ರಶ್ಯತೆಗೆ ಒಳಗಾದವನೂ ಅದನ್ನು ರೂಡಿಗತ ಮಾಡಿಕೊಂಡು ಹೋದ.ಅದನ್ನು ಆಚರಿಸುವವನೂ ರೂಡಿಗತ ಮಾಡಿಕೊಂಡು ಹೋದ’

‘ಮರಿಸ್ವಾಮಿ ಅಂತ ಒಬ್ರು ಇದ್ರು. ಅವರು ಹಿಂದಿ ಪ್ರೊಫೆಸರ್ ಆಗಿದ್ರು.ಕೊನೆಗೆ ಬೌದ್ಧ ಬಿಕ್ಷುವಾಗಿ ತೀರಿಕೊಂಡ್ರು.ಅವರು ಪ್ರೈಮರಿ ಸ್ಕೂಲಲ್ಲಿ ಮೇಷ್ಟರಾಗಿದ್ದಾಗ ಯಾರದೋ ಜಗುಲಿಯಲ್ಲಿ ಕೂತು ಬಸ್ಸಿಗೆ ಕಾಯ್ತಾ ಇದ್ರು.ಯಾರದೋ ಮೇಲುಜಾತಿಯವರ ಜಗುಲಿ. ಆ ಮನೆಯ ಯಜಮಾನನಿಗೆ ಸ್ವಲ್ಪ ಕಣ್ಣು ಕಾಣಿಸ್ತಿರ್ಲಿಲ್ಲ. ಇವರು ಬಿಳಿ ಬಟ್ಟೆ ಹಾಕಿಕೊಂಡು ಕೂತಿರ್ತಾರೆ.

‘ಯಾರೋ ಅಲ್ಲಿ ಕೂತಿರೋನು?’ಅಂತ ಆ ಯಜಮಾನ ಮಗನಲ್ಲಿ ಕೇಳ್ತಾನೆ.ಅದಕ್ಕೆ ಆ ಮಗ ಹೇಳ್ತಾನೆ, ‘ ಅದು ಮೇಷ್ಟ್ರು ಅಪ್ಪಾ..ಅದೇ ಹೆಂಡ ಮಾರ್ತಾರಲ್ಲ ಮಾರಯ್ಯ ಅಂತ ಅವರ ಮಗ’ ಅಂತ.

‘ಏನು? ನಮ್ಮ ಮನೆ ಮುಂದೆ ಕೂತಿದಾನಾ?ಎದ್ದು ಹೋಗು ಅಂತ ಅನ್ನು’ ಅಂತ ಅಪ್ಪ ಕೂಗು ಹಾಕ್ತಾನೆ.

‘ಪಾಪ ಮರಿಸ್ವಾಮಿ, ಅಯ್ಯೋ ನಮ್ಮ ಹಣೆಬರಹ ಇಷ್ಟೇ ಅಂತ ಎದ್ದು ಬರ್ತಾರೆ.“

‘ಆಮೇಲೆ ಇನ್ನೊಮ್ಮೆ ಇನ್ನೊಂದು ಮೇಲುಜಾತಿಯ ಅವರ ಸಹೋಧ್ಯೋಗಿ ಗೆಳೆಯರೊಬ್ಬರು ಅವರನ್ನ ಮನೆಗೆ ಊಟಕ್ಕೆ ಕರ್ಕೊಂಡು ಹೋಗ್ತಾರೆ.ಹಜಾರದಲ್ಲಿ ಎಲೆ ಹಾಕಿ ಊಟಕ್ಕೆ ಬಡಿಸ್ತಾರೆ. ಊಟಮಾಡಿದ ಮೇಲೆ ಅವ್ರಿಗೆ ಒಂದು ಅನುಮಾನ ಬರುತ್ತೆ. ಎಲೆ ಎತ್ಬೇಕೋ ಬೇಡವೋ ಅಂತ ಸುಮ್ನೆ ನೋಡ್ತಿರ್ತಾರೆ.ಅದಕ್ಕೆ ಆ ಮೇಷ್ಟ್ರ ಅಣ್ಣ,‘ ರೀ ಮೇಷ್ಟ್ರೇ,ನಿಮಗೆ ಊಟ ಹಾಕೋದಲ್ದೇನೇ ಎಲೇನೂ ಎತ್ಬೇಕೇ? ತಗೊಂಡು ಎದ್ದೇಳಯ್ಯಾ’ಅಂತ ಬಹುವಚನದಲ್ಲಿ ಶುರು ಮಾಡಿ ಏಕವಚನದಲ್ಲಿ ಮುಗಿಸ್ತಾರೆ.

“ಆಮೇಲೆ ಮರಿಸ್ವಾಮಿಯವರು ಚಿಕ್ಕಮಗಳೂರಿಗೆ ಬರ್ತಾರೆ.ಅಲ್ಲಿ ಡಿ ಎಸ್ ಎಸ್, ತೇಜಸ್ವಿ,ಆರೆಸ್ಸೆಸ್ ಹೀಗೆ ಎಲ್ರೂ ಪರಿಚಯ ಆಗ್ತಾರೆ.ಎಲ್ರೂ ಸಮಾನರು ಅಂತಾರಲ್ಲಾ ಅಂತ ಆರೆಸ್ಸೆಸ್ಸಿಗೂ ಸೇರ್ತಾರೆ.

ಅದ್ರೆ ಎಲ್ರೂ ಸಮಾನ ಅನ್ನೋವವರು ಸುಳ್ಳು ಹೇಳ್ತಿದಾರೆ ಅಂತ ಗೊತ್ತಾದಾಗ ಅಲ್ಲಿಂದ್ಲೂ ವಾಪಾಸು ಬರ್ತಾರೆ.

‘ಅಂಬೇಡ್ಕರ್ ಪುಸ್ತಕ ಓದ್ತಾರೆ,ಕೊನೆಗೆ ಅವರು ಒಂದು ಮಾತು ಹೇಳ್ತಾರೆ ‘ಆವಾಗ್ಲೆ ನಂಗೆ ಅಸ್ಪ್ರಶ್ಯತೆ ಅಂದ್ರೆ ಗಾಯಾಂತ ಗೊತ್ತಾಗಿದ್ದು’ ಅಂತ.

‘ಅಲ್ಲಿವರೆಗೂ ನಂಗೆ ಗಾಯ ಗಾಯ ಅಂತಾನೇ ಅನಿಸ್ತಿರಲಿಲ್ಲ’ ಅಂತ ಹೇಳ್ತಾರೆ.

3ನನ್ನ ಪ್ರೀತಿಯ ದೇವನೂರು ಮಹಾದೇವ ಕಥೆ ಹೇಳುತ್ತಾ ಮೆಲ್ಲಗೆ ತೀವ್ರವಾಗುತ್ತಿದ್ದರು.

‘ನೋಡಿ ಗಣರಾಜ್ಯ ಸುಂದರವಾಗಿದೆ ಅಂತ ನಿಮಗೆಲ್ಲಾ ಅನಿಸುವ ಸಲುವಾಗಿ ಅಸ್ಪ್ರಶ್ಯತೆಯನ್ನು ಅಸ್ಪ್ರಶ್ಯತೆಯಲ್ಲ ಎಂದು ನಾವು ಅಂದುಕೊಂಡು ಬದುಕಬೇಕು,ನಮಗೆ ಅದು ಅಸ್ಪ್ರಶ್ಯತೆ ಅಂತ ಅನಿಸಿದ ತಕ್ಷಣ ನಿಮ್ಮ ಸಾಮರಸ್ಯ ಕೆಡುತ್ತದೆ.ಇದನ್ನು ನೀವು ಹೆಂಗೆ ಬ್ಯಾಲೆನ್ಸ್ ಮಾಡ್ತೀರಾ? ಮಾದೇವ ಅಚಾನಕ್ಕಾಗಿ ಆ ಪ್ರಶ್ನೆಯನ್ನು ನನ್ನ ಕಡೆಯೇ ಎಸೆದರು.

ಹಿಂದೆ ಒಂದು ಸಲ ಈ ಮಾದೇವಮಾಮ, ಅನಂತಮೂರ್ತಿ ಮತ್ತು ಆಲನಹಳ್ಳಿ ಕೃಷ್ಣ ಹುಣಸೂರು ಹತ್ತಿರದ ಬಿಳಿಕೆರೆ ಎನ್ನುವ ಹಳ್ಳಿಗೆ ಹೋಗಿದ್ರಂತೆ.ಅಲ್ಲೊಂದು ಜಾತಿ ಜಗಳವಾಗಿತ್ತಂತೆ.ಕುಂಬಾರರ ಹೋಟಲ್ಲಿಗೆ ದಲಿತರಿಗೆ ಪ್ರವೇಶವಿಲ್ಲ ಅನ್ನುವುದು ಜಗಳಕ್ಕೆ ಕಾರಣ.ಅಲ್ಲಿ ಹೋಗಿ ನೋಡಿದರೆ ಆ ಹೋಟಲ್ಲು ಹೋಟಲ್ಲಿನ ತರಹ ಇಲ್ಲದೆ ನೊಣಗಳು ಮುತ್ತಿಕೊಂಡು ಗಲೀಜಾಗಿತ್ತಂತೆ.

ಅದನ್ನು ನೋಡಿದ ಆಲನಹಳ್ಳಿ ಕೃಷ್ಣ,‘ ಅಲ್ಲ ಮಾದೇವ ಈ ಗಲೀಜು ಹೋಟಲ್ಲಿಗೆ ದಲಿತರು ಹೋಗದಿರುವುದೇ ಒಳ್ಳೆಯದಲ್ಲವಾ?’ ಅಂದರಂತೆ.ಅದಕ್ಕೆ ನಮ್ಮ ಮಾದೇವ, ‘ಅಲ್ಲ ಕೃಷ್ಣಾ, ನಾವು ಎಂಟ್ರಿ ಕೇಳುತ್ತಿರುವುದು ಹೋಟಲ್ಲಿನೊಳಕ್ಕೆ ಅಲ್ಲ. ಮನಸ್ಸಿನ ಒಳಕ್ಕೆ’ ಅಂದ್ರಂತೆ.

‘ಅಲ್ಲ ಮಾದೇವ, ಕನ್ನಡ ಸಾಹಿತ್ಯವನ್ನು ಕುಮಾರವ್ಯಾಸನಿಂದ ದೇವನೂರು ಮಹಾದೇವನವರೆಗೆ ಎಂದುಕೊಂಡು ನಾವೆಲ್ಲಾ ಆನಂದಿಸುತ್ತಿರುತ್ತೇವೆ.ನಾನಂತೂ ನಮ್ಮ ಗಣರಾಜ್ಯದ ಅತ್ಯುತ್ತಮ ಫಲ ನೀವು ಎಂದು ದೂರದಿಂದಲೇ ಖುಷಿಪಡುತ್ತಿರುತ್ತೇನೆ.ಆದರೆ ನೀವಾದರೋ ನಾನು ಅಸ್ಪ್ರಶ್ಯ ಅಂತ ಬೇಸರದಲ್ಲಿರುವಿರಿ.ಹೇಳಿ ಮಾಮಾ ನಿಮಗೆ ನಿಜವಾಗಲೂ ನೀವು ಅಸ್ಪ್ರಶ್ಯ ಅಂತ ಅನ್ನಿಸಿದೆಯಾ’ ಎಂದು ತಡೆಯಲಾರದೆ ಕೇಳಿದೆ.

‘ಹಾಗೇನಿಲ್ಲ, ನಮ್ಮಪ್ಪ ಪೋಲೀಸಾಗಿದ್ದರು.ಹಾಗಾಗಿ ಬೇರೆ ಬೇರೆ ಊರುಗಳನ್ನು ಸುತ್ತಿದೆವು.ಜೊತೆಗೆ ನಮಗೆ ಒಳ್ಳೆಒಳ್ಳೆಯ ಮೇಷ್ಟರುಗಳು ಸಿಕ್ಕಿದರು.ಅವರು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾ ಇದ್ದರು.ಮತ್ತೆ ನನ್ನ ಸ್ನೇಹಕ್ಕೆ ಬೇರೆ ಜಾತಿಯ ಹುಡುಗರೇ ಹಾತೊರೆಯುತ್ತಿದ್ದರು. ಹಂಗಾಗಿ ಸಣ್ಣ ಪುಟ್ಟ ಇದು ಇದ್ರೂವೇ ನೇರವಾಗಿ ನನಗೆ ಹಾಗೆ ಹಾಗಿದ್ದು ಕಮ್ಮಿ.ಆದರೆ ಯಾರಿಗಾದರೂ ಅವಮಾನ ಆದರೆ ಅವನಿಗೆ ಆಗದಷ್ಟು ನೋವು ನನಗೆ ಆಗುವುದು.[ಇಲ್ಲಿ ಮಾದೇವ ಕೊಂಚ ನಕ್ಕರು]

ಆಮೇಲೆ ನಾವಿಬ್ಬರೂ ಮುಂದಿನ ಭವಿಷ್ಯ,ಎಳೆತಲೆಮಾರು,ಹಸ್ತಸಾಮುದ್ರಿಕೆ,ಜ್ಯೋತಿಷ್ಯ,ಯಂಡಮೂರಿ ವೀರೇಂದ್ರನಾಥ್,ಆರುಂದತಿರಾಯ್,ಕುಕ್ಕುಟಪಂಚಾಂಗ,ಮೀನಿನ ಉಪ್ಪಿನಕಾಯಿ ಇತ್ಯಾದಿ ನಮಗಿಷ್ಟದ ಬಹಳ ವಿಷಯಗಳ ಬಗ್ಗೆ ಮಾತನಾಡಿದೆವು.

4ಕೊನೆಯಲ್ಲಿ ನಾನು ಅವರಲ್ಲಿ ಕ್ಷಮೆಯನ್ನೂ ಕೇಳಿಕೊಂಡೆ.ಏಕೆಂದರೆ ಅವರ ಜೊತೆಗಿನ ಈ ಸಂದರ್ಶನದ ಉದ್ದಕ್ಕೂ ಅವರನ್ನು ನಾನು ಮಾಮಾ ಮಾಮಾ ಎಂದೇ ಕರೆದು ಬಿಟ್ಟಿದ್ದೆ.

‘ಸಂಬಂಜ ಅನ್ನೋದು ದೊಡ್ಡದು ಕನಾ’ ಎನ್ನುವ ಅವರ ಕಾದಂಬರಿಯ ಸಾಲನ್ನು ಅವರಿಗೇ ತಿರುಗಿಸಿ ಹೇಳಿ ಒಂದು ದೊಡ್ಡ ನಗುವನ್ನೂ ಅವರಿಂದ ಗಿಟ್ಟಿಸಿಕೊಂಡು ವಾಪಸ್ಸು ಬಂದಿದ್ದೆ.

16 June 2013

Photos By the author

2 thoughts on “ಮಹಾದೇವ ಮಾಮನ ಜೊತೆಗೆ

  1. Love u sir. ಅಭಿಮಾನಕ್ಕೆ, ಪ್ರೀತಿಗೆ ಅಸ್ಪೃಶ್ಯ, ಬ್ರಾಹ್ಮಣ ಅಂತ ವ್ಯತ್ಯಾಸ ಇರೋಲ್ಲ. ಗಾಯಕ್ಕೆ ಪ್ರೀತಿಯೊಂದೆ ಮದ್ದು. ಶಿಕ್ಷಣ, ಅಲೆಮಾರಿತನದ ಓಡಾಟವೊಂದೆ. ಒಳಿತಿನ ಹೃದಯಗಳು ಭೂಮಿ ಯಲ್ಲಿ ಅನಂತವಾಗಿವೆ. ಆ ಹೃದಯಗಳು ಎಲ್ಲರ ಎದೆಯನ್ನು ತಬ್ಬಲಿ. ಗಾಯಕ್ಕೆ ಅಮೃತಸಿಂಚನವಾಗಲಿ ಎಂದು ಹಾರೈಸುವೆ.

  2. ಹೌದು! ಈ ದೇಶದಲ್ಲಿ ಒಬ್ಬೊಬ್ಬರಿಗೆ ಒಂದು ನ್ಯಾಯ ಇದೆ. ಚಿಕನ್ ತರಲು ಅಂಗಡಿಗೆ ಹೋಗಿದ್ದೆ. ಅಂಗಡಿಯಾತ ಮಾತಾಡುತ್ತ ‘ಗೋ ಹತ್ಯೆ ಮಹಾ ಪಾಪ, ನಾವು ಅದನ್ನು ಪೂಜೆ ಮಾಡ್ತೀವಿ, ಗೋ ಹತ್ಯೆ ನಿಷೇಧ ಮಾಡ್ಬೇಕು ಸಾ…. ಅಂದ’. ಆತ ಕೂತಿದ್ದ ಸೀಟಿನ ಮೇಲೆ ಗೋಡೆಯನ್ನೊಮ್ಮೆ ನೋಡಿದೆ. ಮುಸ್ಲಿಮರ ಧಾರ್ಮಿಕ ಶ್ಲೋಕಗಳ ಹಲವು ಫೋಟೊ ಇದ್ದವು. ಅಂಗಡಿಯಾತ ಮುಸ್ಲಿಂನಲ್ಲ ಹಿಂದೂ. ಗಿರಾಕಿಗಳನ್ನು ಸೆಳೆಯಲು ಮುಸ್ಲಿಂ ಫೋಟೊಗಳು ಬೇಕು ಆದರೆ ಅವರು ಗೋಮಾಂಸ ತಿನ್ನಬಾರದು. ಈತನ ವ್ಯಾಪಾರ ಆಗಬೇಕು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s