ಕಣ್ಣಿಲ್ಲದ ಪ್ರೀತಿ, ಕಣ್ಣಿಲ್ಲದ ಜೀತ

DSC_0489ಆಕೆ ಕೊಡಗಿನ ಯುವತಿ, ಈತ ಬಯಲು ಸೀಮೆಯ ಹುಡುಗ.

ಇಬ್ಬರೂ ಹುಟ್ಟುವಾಗಲೇ ಅಂಧರು.

ಆಕೆ ರೇಡಿಯೋದಲ್ಲಿ ಯಾವತ್ತೋ ಒಂದು ದಿನ ಚಂದವಾಗಿ ಹಾಡಿದ್ದಳು. ಅದನ್ನು ಈತ ನಿಮೀಲಿತನಾಗಿ ಕೇಳಿದ್ದ.ಆಮೇಲೆ ಅವರಿಬ್ಬರು ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದರು. ಒಂದು ದಿನ ಇಬ್ಬರೂ ಯಾವುದೋ ಒಂದು ಬಸ್ಸು ನಿಲ್ದಾಣದಲ್ಲಿ ಭೇಟಿಯಾಗಿದ್ದರು.ಮದುವೆಯಾಗುವಾ ಎಂದು ತೀರ್ಮಾನಿಸಿಕೊಂಡು ದೇಗುಲವೊಂದರಲ್ಲಿ ತಾಳಿಕಟ್ಟಿ ಊರಿಗೆ ವಾಪಸಾಗಿದ್ದರು.ಎಲ್ಲವೂ ಸುಂದರವಾಗಿದೆ ಮತ್ತು ಸುಖವಾಗಿ ಮುಗಿದಿದೆ ಎಂದು ಅವರಿಬ್ಬರೂ ಖುಷಿಯಲ್ಲಿ ತಮ್ಮ ಪ್ರೇಮದ ಕಥೆಯನ್ನು ರೇಡಿಯೋದಲ್ಲಿ ಹೇಳಿದ್ದರು ಮತ್ತು ಅದಕ್ಕೆ ಸರಿ ಹೊಂದುವಂತಹ ಒಂದು ಸಿನೆಮಾ ಹಾಡನ್ನೂ ನಾವು ಪ್ರಸಾರ ಮಾಡಿದ್ದೆವು.

ಕಣ್ಣಿನ ಹಂಗೇ ಇಲ್ಲದ ಅವರಿಬ್ಬರ ಅಮರ ಪ್ರೇಮ!

ಅವರಿಬ್ಬರು ಆ ಬಸ್ಸು ನಿಲ್ದಾಣದಲ್ಲಿ ಒಬ್ಬರನ್ನೊಬ್ಬರು ಹೇಗೆ ಗುರುತು ಹಿಡಿದಿರಬಹುದು? ಹೇಗೋ ಗುರುತು ಹಿಡಿದ ನಂತರ ತಾವಿಬ್ಬರೂ ಹೀಗೆ ಇರುವೆವೆಂದು ಒಬ್ಬರಿಗೊಬ್ಬರು ಹೇಗೆ ಹೇಳಿರಬಹುದು?

ಅವರ ಗುರುತು ಪರಿಚಯದ ವಿಧಾನ ಹೇಗೆ?ಸ್ವರವೇ? ಪರಿಮಳವೇ .. ಎಂದೆಲ್ಲ ಯೋಚಿಸಿಕೊಂಡು ಅವರಿಬ್ಬರನ್ನು ಹುಡುಕಿಕೊಂಡು ಯಾವುದೋ ಹಳ್ಳಿಗಾಡಿನ ಟಾರುರೋಡಿನಲ್ಲಿ ಗಾಡಿ ಓಡಿಸುತ್ತಿದ್ದೆ.

ರೇಡಿಯೋದಲ್ಲಿ ಅವರಿಬ್ಬರು ತಮ್ಮ ಪ್ರೇಮದ ಕಥೆಯನ್ನು ವಿವರಿಸಿ ಹೇಳಿದ ಮೇಲೆ ನನಗೆ ಯಾಕೋ ಹೆದರಿಕೆಯಾಗುತ್ತಿತ್ತು.ಏಕೆಂದರೆ ಅವರಿಬ್ಬರೂ ಬೇರೆಬೇರೆ ಜಾತಿಗಳಿಗೆ ಸೇರಿದವರಾಗಿದ್ದರು.

ನಮ್ಮ ಕೊಡಗಿನ ಕಾಡಿನ ನಡುವಲ್ಲಿ ಬದುಕಿದ್ದ ಕಣ್ಣು ಕಾಣದ ಈ ಬಾಲೆ ದೂರದ ಬಯಲು ಸೀಮೆಯ ಬಿಸಿಲಲ್ಲಿ ಹೇಗೆ ಇರುವಳೋ ಎಂದು ಕಣ್ಣಾರೆ ಕಾಣಬೇಕೆಂದು ನಾನು ಹೊರಟಿದ್ದೆ.

ನನಗೂ ಕಣ್ಣು ಕಾಣಿಸದೇ ಇದ್ದಿದ್ದರೆ ಇದೆಲ್ಲ ಹೇಗೆ ಕಾಣಿಸಬಹುದಿತ್ತು ಎಂದು ಕಣ್ಣುಬಿಟ್ಟುಕೊಂಡೇ ಗಾಡಿ ಓಡಿಸುತ್ತಿದ್ದೆ.

ಹತ್ತಾರು ಸರ್ಕಲ್ಲುಗಳಲ್ಲಿ ನಿಂತು ಅವರಿವರ ಬಳಿ ಕೇಳಿ ನವಿಲೂರು, ಶಾನುಭೋಗರಹಳ್ಳಿ, ಮಲ್ಲಿನಾಥಪುರ, ಮೂಕನಹಳ್ಳಿ, ಎಂದೆಲ್ಲ ತಿರುಗುತ್ತ ಕೊನೆಗೆ ಆ ಊರಿಗೆ ತಲುಪಿದಾಗ ಹಗಲು ನೆತ್ತಿಗೇರುತ್ತಿತ್ತು.

ಎಷ್ಟೋ ಕಾಲಗಳಿಂದ ಹೀಗೇ ಬಿಸಿಲಲ್ಲಿ ಬೇಯುತ್ತಾ ನಿಂತಿದೆಯೇನೋ ಎಂಬಂತೆ ಕುಸಿದು ನಿಂತಿರುವ ಮೂಡುಸೀಮೆಯ ಹಳ್ಳಿ.ಅಲ್ಲಿ ಇರುವ ಎಲ್ಲರೂ ಕಾಲಾನುಕಾಲದಿಂದ ಸುತ್ತಲಿನ ಹತ್ತೂ ಹಳ್ಳಿಗಳಲ್ಲಿ ಜೀತಕ್ಕೆ ಬದುಕುತ್ತಿದ್ದವರು ಇದೀಗ ಕೆಲಕಾಲದಿಂದ ಎಚ್ಚತ್ತು ಮೈಕೊಡವಿಕೊಳ್ಳುತ್ತಿದ್ದರು.

‘ಏನ್ ಸ್ವಾಮೀ, ನಾವು ಎಲ್ಲೂ ಓಡಿ ಹೋಗಬಾರದೆಂದು ಎಲ್ಲಾ ದೊಡ್ಡ ದೊಡ್ಡ ಜಾತಿಯವ್ರ ಹಳ್ಳಿಗಳ ನಡ್ವೆ ನಮ್ಮ ಬದುಕಕ್ಕೆ ಬಿಟ್ಟಿದ್ದಾರೆ,’ ಎಂದು ಅಗಲ ಮುಖದ ಅಪೂರ್ವ ಸುಂದರಿಯಾಗಿದ್ದ ಮುದುಕಿಯೊಬ್ಬಳು ನಕ್ಕಳು.

‘ಕಣ್ಣು ಕಾಣದ ಹೀರೋ ಮತ್ತು ಹೀರೋಯಿನ್ ಇರುವ ಮನೆ ಎಲ್ಲಿ’ಎಂದು ಕೇಳಿದೆ.

ಆಗ ಅವರು ಹೆದರಿದರು.

‘ ಹೆದರಬೇಡಿ ನಾನು ರೇಡಿಯೋದವನು.ನಮ್ಮ ರೇಡಿಯೋ ಹಾಡು ಕೇಳೀನೇ ನಿಂ ಹುಡುಗ ನಂ ಹುಡುಗೀನ ಹಾರಿಸಿಕೊಂಡು ಬಂದಿರೋದು’ ಎಂದು ಜೋಕು ಮಾಡಿದೆ.

‘ಅಯ್ಯೋ ನೀವಾ ಬುದ್ದಿ ಹೆದರಿದ್ದೋ’ ಎಂದು ಮನೆಯೊಳಕ್ಕೆ ಕರೆದುಕೊಂಡು ಹೋದರು.

ಬೆಳಕಿನಿಂದ ಒಳಹೊಕ್ಕರೆ ಒಳಗಡೆ ಗವ್ವನೆ ಕತ್ತಲು.

ನಿಧಾನಕ್ಕೆ ತೋರಿಬರುವ ಬೆಳಕು.

ಅದರೊಳಗಡೆ ಉಸಿರಾಡುವ ಜೀವಗಳು, ಉರಿಯುವ ಒಲೆ ಮತ್ತು ಆ ಮನೆಯ ಸಕಲ ಸೌಭಾಗ್ಯವೆಂಬಂತೆ ಒಳಕೋಣೆಯ ಅರ್ದಕ್ಕಿಂತ ಹೆಚ್ಚು ಜಾಗವನ್ನು ಆವರಿಸಿರುವ ಭತ್ತ,ರಾಗಿ ತುಂಬಿಸಿಟ್ಟಿರುವ ಸುಣಗಲು ಕಣಜ.

ಅದರ ಎದುರಿನ ಕೋಲುಬೆಳಕಲ್ಲಿ ನನ್ನೊಡನೆ ಮಾತನಾಡಿಸುತ್ತಿರುವ ಆ ಕಣ್ಣು ಕಾಣದ ಯುವಕ ಶಿವನಂಜುವಿನ ಅಪ್ಪ ,ಅವ್ವ, ತಂಗಿ, ಚಿಕ್ಕವ್ವ ಚಿಗಪ್ಪ, ಮಾವಂದಿರು.

ಅವರಿಗೆ ಯಾರಿಗೂ ತಮ್ಮ ಮನೆಯ ಕಣ್ಣಿಲ್ಲದ ಯುವಕ ಇನ್ನೊಂದೂರಿನ ಕಣ್ಣಿಲ್ಲದ ಯುವತಿಯನ್ನು ಹಾರಿಸಿಕೊಂಡು ಮದುವೆಯಾಗಿರುವುದು ಸುತರಾಂ ಇಷ್ಟವಿರಲಿಲ್ಲ.

‘ಅಲ್ಲಾ ಸ್ವಾಮಿ, ಇವ್ನತ್ರ ನೂರು ರೂಪಾಯಿ ನೋಟು ಇದೆ ಅಂದ್ಕೊಳ್ಳಿ.ಅದು ಬಸ್ ಸ್ಟೇಂಡಲ್ಲಿ ಬಿದ್ದು ಹೋಯ್ತು ಅಂದ್ಕೊಳ್ಳಿ.ಕಣ್ಣು ಕಾಣೋ ಹೆಂಡ್ತಿ ಇದ್ರೆ ಅಯ್ಯೋ ಕಣ್ರೀ ನೋಟು ಬಿದ್ದೋಯ್ತು ಅಂತ ಎತ್ತಿ ಕೊಡ್ತಾಳೆ.ಆದ್ರೆ ಇವ್ನು ಕಣ್ಣಿಲ್ದವ್ಳೇ ಬೇಕು ಅಂತ ಮದುವೆಯಾಗಿದಾನೆ.ನೋಟು ಬಿದ್ದೋಯ್ತು ತಿಳ್ಕೊಳ್ಳಿ,ಬೇರೆಯವ್ರು ಎತ್ಕೋತಾರೆ.ಅಲ್ವಾ ಸ್ವಾಮೀ, ಎಲ್ಲಾ ನಂ ಗ್ರಾಚಾರ.ಏನ್ಮಾಡೋದು ನಂ ಜೀವ ಇರೋ ತನ್ಕ ಇಬ್ರನ್ನೂ ಕಾಪಾಡ್ತೀವಿ.ಆಮೇಲೆ ತಮ್ಮನ್ನ ತಾವು ಕಾಪಾಡೋದು ಅವ್ರಿಗೆ ಬಿಟ್ಟದ್ದು’

ಪ್ರೀತಿ ಎಂಬುದನ್ನ ಮುಖದ ತುಂಬ ತುಂಬಿಕೊಂಡಿದ್ದ ತಾಯಿ ನಿಟ್ಟುಸಿರು ಬಿಟ್ಟಳು.

`no sir’ 

ಅಂಧ ಯುವಕ ಶಿವನಂಜು ಎದ್ದು ನಿಂತ

`blind should give life to blind, ಕಣ್ಣು ಕಾಣದವರಿಗೆ ಮಾತ್ರ ಕಣ್ಣು ಕಾಣದವರ ಫೀಲಿಂಗ್ಸ್ ಗೊತ್ತಾಗೋದು.ನಮ್ಮ ಅಪ್ಪ ಅವ್ವಂಗೆ ಇದೆಲ್ಲಾ ಗೊತ್ತಾಗಲ್ಲ ಸಾರ್’ ಆತ ಮಾತನಾಡುತ್ತಾ ಹೋದ.

ಅಂಬೇಡ್ಕರ್, ಗಾಂಧಿ, ಹೆಲೆನ್ ಕೆಲ್ಲರ್ ಕುವೆಂಪು ಎಲ್ಲರನ್ನೂ ತಿಳಕೊಂಡಿದ್ದ ಯುವಕ.

ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಡಿಗ್ರಿ ಓದುತ್ತಿರುವವನು.

‘ಆಕೆ ದೊಡ್ಡ ಜಾತಿಯವಳಾದ್ರೇನು ಸರ್.ಕೊನೆಗೂ ಅವಳ ಕಷ್ಟ ಗೊತ್ತಾಗಿದ್ದು ನನ್ನಂತ ಒಬ್ಬ ಕುರುಡಂಗೆ ಮಾತ್ರ ಸಾರ್’ ಆತ ಆವೇಶದಲ್ಲಿ ಹೇಳುತ್ತಾ ಹೋದ ಹಾಗೆ ಅವರೆಲ್ಲರೂ ಆ ಮನೆಯೊಳಗೆ ತುಂಬಿಕೊಳ್ಳುತ್ತಿದ್ದ ಬೆಳಕಿನಲ್ಲಿ ಅದನ್ನು ಕೇಳುತ್ತಾ ಕುಳಿತಿದ್ದರು.

‘ ಬಿಡಿ ಸಾರ್, ಅವನ್ದೇನು ಮಾತು ಕೇಳೀರಿ ನನ್ ಸ್ಟೋರಿ ಕೇಳಿ ಸಾರ್..’ ಅದುವರೆಗೆ ಸುಮ್ಮಗಿದ್ದ ಮನೆಯ ಯಜಮಾನ ತನ್ನ ಕಥೆ ಶುರು ಮಾಡಿದ.ಅದು ಇನ್ನೂ ದೊಡ್ಡ ಕಥೆ. ಸುಮಾರು ಹತ್ತು ವರ್ಷಗಳ ನಿರಂತರ ಜೀತದ ಕಥೆ.

‘ಗೊತ್ತಾ ಸಾರ್, ಆಗ ನಾನು ಮೂರ್ನೇ ಕ್ಲಾಸ್ ಓದ್ತಾ ಇದ್ದೆ.ನಮ್ಮಪ್ಪಂಗೆ ಒಂದು ಹಸಾ ತಗೋಬೇಕಿತ್ತು,ಕಾಸು ಇರ್ಲಿಲ್ಲ.ಪಕ್ಕದೂರಲ್ಲಿ ಒಬ್ರು ಈಡಿಗ್ರೋರು ಯಜಮಾನ್ರಿದ್ರು.ಅವ್ರ ಮುಂದೆ ತಗೊಂಡೋಗಿ ನನ್ನ ನಿಲ್ಲಿಸಿದ್ರು.ಸ್ವಾಮೀ ಹಸಾ ತಗೋಬೇಕು ಇವನ್ನ ಜೀತಕ್ಕಿಟ್ಟು ಕಾಸು ಕೊಡಿ ಅಂದ್ರು.ಅವ್ರು ನೂರು ರೂಪಾಯಿ ಕೊಟ್ಟು ನೂರೈವತ್ತು ರೂಪಾಯಿಗೆ ಪ್ರಾಮಿಸರಿ ನೋಟು ಬರ್ಸಿ ನನ್ನ ಜೀತಕ್ಕೆ ಇಟ್ಕೊಂಡಿದ್ರು.ಹತ್ತು ವರ್ಷ ಜೀತಕ್ಕಿದ್ದೆ ಸಾ.ಒಂಥರಾ ಅಲ್ಲೇ ಚೆನ್ನಾಗಿತ್ತು.ಹೊಟ್ಟೆ ತುಂಬಾ ಮುದ್ದೆನಾದ್ರೂ ಸಿಗ್ತಿತ್ತು. ಜೀತ ಬಿಟ್ಟು ಬರುವಾಗ್ಲೂ ಒಂಥರಾ ಆಯ್ತು’ ಅಪ್ಪ ಹಳೆಯ ವ್ಯಥೆಯನ್ನ ನೆನಪಿಸಿಕೊಳ್ಳುತ್ತಿದ್ದ.

‘ನನಗೇನೂ ತೊಂದರೆ ಇಲ್ಲ ಸಾರ್, ಇಲ್ಲಿ ಇವರು ಜೀವಕ್ಕಿಂತ ಜಾಸ್ತಿಯಾಗಿ ನೋಡಿಕೊಳ್ಳುತ್ತಿದ್ದಾರೆ.ಅಲ್ಲಿಯಾದ್ರೆ ಒಂಟಿ ಮನೆ. ಒಬ್ಬಳೇ ಒಂಥರಾ ಆಗುತ್ತಿತ್ತು.ಇಲ್ಲಿ ನೋಡಿ ಎಷ್ಟು ಜನ! ಖುಷಿಯಾಗುತ್ತಿದೆ’ ಕೊಡಗಿನ ಯುವತಿ ಎಲ್ಲವನ್ನೂ ಕಂಡವಳ ಹಾಗೆ ಸಂಭ್ರಮಿಸುತ್ತಿದ್ದಳು.

ಅವರಿಬ್ಬರಿಗೆ ಮದುವೆಯ ಶುಭಾಶಯಗಳನ್ನು ಹೇಳಿ ಬರುವಾಗ ಅಂಧನಾಗಿದ್ದ ಮಗನೂ ಜೀತಕ್ಕಿದ್ದ ತಂದೆಯೂ ಹುಣಸೂರು ಸರ್ಕಲ್ಲಿನ ತನಕ ನನ್ನನ್ನ ಬೀಳ್ಕೊಡಲು ಬಂದರು.
‘ಸಾರ್ ನಿಮ್ಮ ಕೊಡಗಿನವರಿಗೆ ಹೇಳಿ ಸಾರ್, ಜಾತಿಗೀತಿ ಮುಖ್ಯ ಅಲ್ಲ.ಕುರುಡರ ಕಷ್ಟ ಕುರುಡರಿಗೆ ಮಾತ್ರ ಗೊತ್ತಾಗೋದು ಅಂತ ಹೇಳಿ ಸಾರ್’ ಶಿವನಂಜು ದಾರಿಯುದ್ದಕ್ಕೂ ಇದನ್ನೇ ಹೇಳುತ್ತಿದ್ದ.

‘ಅದೇ ಸಾ ನೋಡಿ ನಾ ಜೀತಕ್ಕಿದ್ದ ಮನೆ’ ಶಿವನಂಜುವಿನ ಅಪ್ಪ ದಾರಿಯಲ್ಲಿ ಕಂಡ ಹಳ್ಳಿಯೊಂದರ ಬಿದ್ದು ಹೋಗುವಂತಿದ್ದ ಒಂದು ಮನೆಯನ್ನ ತೋರಿಸಿದ.

ಜೀತಕ್ಕಿದ್ದ ಈತನ ಮನೆಗಿಂತ ಬಹಳ ದೊಡ್ಡದೇನೂ ಅಲ್ಲದ ಊರ ಯಜಮಾನರ ಆ ಮನೆಯೂ ಆ ಬಿಸಿಲಲ್ಲಿ ಹಾಗೇ ಒಣಗಿಕೊಂಡಿತ್ತು.

ಆ ಹಳ್ಳಿಯೂ ಹಾಗೇ ಇತ್ತು.

ಜೀತಕ್ಕಿದ್ದವರ ಹಳ್ಳಿಗಿಂತ ಅದೇನೂ ಭಿನ್ನವಾಗಿರಲಿಲ್ಲ.DSC_048221,April 2013

Photos by Author

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s