ನನ್ನದೇ ಹೆಸರಿನ ಅಸ್ಸಾಮಿ

 

196777_10151052168218246_2131064894_n

ಮಡಿಕೇರಿಯ ಹಳೆಯ ಬಸ್ಸು ನಿಲ್ದಾಣದ ಮೇಲ್ಮಹಡಿಯಲ್ಲಿ ರೈಲ್ವೇ ಬುಕಿಂಗ್ ಆಫೀಸು ಇದೆ .

ಕೊಡಗಿನಲ್ಲಿ ಎಲ್ಲೂ ರೈಲು ಸಂಚಾರ ಇಲ್ಲದಿರುವುದರಿಂದ ಈ ಆಫೀಸಿನಲ್ಲಿ ಜನರ ಸಂಖ್ಯೆಯೂ ವಿರಳವೇ.

ಆದರೂ ದೂರದ ಮೈಸೂರು, ಮಂಗಳೂರು, ಬೆಂಗಳೂರು ರೈಲು ನಿಲ್ದಾಣಗಳಿಂದ ರೈಲು ಹತ್ತಿ ಹೋಗಬೇಕಾದವರು ಇಲ್ಲಿಂದಲೇ ಸೀಟು ಕಾದಿರಿಸಿಕೊಳ್ಳಲು ಬರುವುದರಿಂದಾಗಿ ಒಮ್ಮೊಮ್ಮೆ ಸಣ್ಣಗಿನ ಜನಜಂಗುಳಿಯೂ ಇಲ್ಲಿ ನೆರೆದಿರುತ್ತದೆ.

ಒಂದು ರೀತಿಯ ಅನೂಹ್ಯವಾಗಿರುವ, ಒಬ್ಬರಿಗೊಬ್ಬರು ಅರ್ಥೈಸಿಕೊಳ್ಳಲು ಆಗದೇ ಇರುವ ಮುಖಗಳು ಇಲ್ಲಿ ಬಂದು, ಕಂಡಿಯೊಳಗೆ ಮುಖತೂರಿಸಿ, ತಮಗೆ ಬೇಕಾದ ಟಿಕೆಟ್ಟುಗಳನ್ನು ಪಡೆದುಕೊಂಡು ಹಾಗೇ ಹೊರಟು ಹೋಗುತ್ತವೆ.

ಇಲ್ಲಿ ಟಿಕೆಟ್ಟು ಕೊಡುವ ಉದ್ಯೋಗಿಗಳೂ ಹಾಗೆಯೇ.

ಹೀಗೆ ಬರುವ ಅಪರಿಚಿತ ಮುಖಗಳಿಗೆ ಅವರಿಗಿಂತಲೂ ಅಪರಿಚಿತವಾದ ಊರುಗಳಿಗೆ ಹೋಗಬೇಕಾದ ರಹದಾರಿಯನ್ನು ತಮ್ಮ ಕೈಯಿಂದಲೇ ಕೊಡಬೇಕಾದ ಬೇಡವಿಲ್ಲದ ಅಧಿಕಾರ ತಮ್ಮ ಕೈಗೆ ಯಾಕಾದರೂ ಬಂತೋ ಎನ್ನುವ ಒಂದು ರೀತಿಯ ಏಕಾಂತತೆ ಅವರ ಮುಖದಲ್ಲಿ ಇರುತ್ತದೆ.

ನನಗೂ ಇತ್ತೀಚೆಗೆ ಈ ರೈಲ್ವೇ ಬುಕಿಂಗ್ ಆಫೀಸಿಗೆ ಬರುವ ಚಾಳಿ ಹೆಚ್ಚಾಗಿದೆ.

ಬೆಳಗಿನ ಕೆಲಸ ಮುಗಿಸಿ ಒಂದು ಖಡಕ್ ಟೀ ಕುಡಿಯಲು ಬರುವವನು ಇಲ್ಲಿಗೂ ಒಂದು ಭೇಟಿ ನೀಡುತ್ತೇನೆ.

ಇಲ್ಲಿ ಭೇಟಿ ನೀಡಿದರೆ ಮಾಡಬೇಕಾದ ಕೆಲಸವೊಂದಿರುತ್ತದೆ.

521869_10151052166573246_40101022_nಅದೇನೆಂದರೆ ಇತ್ತೀಚೆಗೆ ಕೊಡಗಿಗೆ ಅತಿಯಾಗಿ ಆಗಮಿಸುತ್ತಿರುವ ಅಸ್ಸಾಮಿನ ಕೂಲಿಕಾರ್ಮಿಕರಿಗೆ ಊರಿಗೆ ವಾಪಾಸ್ಸು ಹೋಗಲು ಬೇಕಾದ ಟಿಕೆಟ್ಟುಗಳಿಗಾಗಿ ಅರ್ಜಿಗಳನ್ನು ತುಂಬಿಸಿಕೊಡುವುದು.

ಇಂಗ್ಲಿಷೋ ಕನ್ನಡವೋ ಹಿಂದಿಯೋ ಏನೂ ಗೊತ್ತಿರದ ಇವರು ಅದು ಹೇಗೋ ಅಲ್ಲಿಂದ ಬಂದು ಇಲ್ಲಿ ತಲುಪಿರುತ್ತಾರೆ.

ಆದರೆ ವಾಪಾಸು ಹೋಗಲು ಬೇಕಾದ ಟಿಕೆಟ್ಟು ಅರ್ಜಿಗಳನ್ನು ತುಂಬಿಸಬೇಕಾದರೆ ಇವರ ಜೀವ ಅರ್ದವಾಗಿರುತ್ತದೆ.

ಇವರ ಭಾಷೆಯೂ, ಊರುಗಳ ಹೆಸರೂ, ಅವುಗಳ ಉಚ್ಚಾರವೂ ಅರ್ಥವಾಗಬೇಕಾದರೆ ಟಿಕೆಟ್ಟು ಕೊಡುವ ಕಾರಕೂನನ ಜೀವವೂ ಅರ್ದವಾಗಿರುತ್ತದೆ.

ಹಾಗಾಗಿ ನಾನೇ ಮುಂದೆ ನಿಂತು ಖಾಲಿ ಅರ್ಜಿ ಪಾರ್ಮುಗಳನ್ನು ಪಡಕೊಂಡು ಇವರೊಡನೆ ವಿವರಗಳನ್ನು ಕೇಳಿ ತುಂಬಿಸಿಕೊಡುತ್ತೇನೆ.

ಇವರಲ್ಲಿ ಕೆಲವರು ನಾನು ಬೇರೇನೂ ಕೆಲಸವಿಲ್ಲದೆ ಈ ಪಾರ್ಮುಗಳನ್ನು ತುಂಬಿಸಿಕೊಟ್ಟು ಬದುಕುತ್ತಿರುವುದರಿಂದ ನನಗೆ ಟೀ ಕುಡಿಯಲು ಬೇಕಾಗಬಹುದು ಎಂದು ಜೇಬಿಗೆ ಐದೋ ಹತ್ತೋ ರೂಪಾಯಿಗಳನ್ನು ತುರುಕಲು ಬಂದಾಗ ಈ ಭೂಮಿಯೇ ಬಾಯ್ಬಿಟ್ಟು ನುಂಗಬಾರದೇ ಎಂಬಷ್ಟು ಸಂಕಟವಾಗುತ್ತದೆ.

ಆಗ ನಾನೇ ಅವರನ್ನು ಹೋಟೆಲಿಗೆ ಕರೆದುಕೊಂಡು ಹೋಗಿ ಟೀ ಕುಡಿಸಿ ನಾನೂ ಕೆಲವು ವರ್ಷಗಳ ಕಾಲ ಅಸ್ಸಾಮಿನಲ್ಲಿ ಇದ್ದೆನೆಂದೂ, ಈಗಲೂ ನನಗೆ ಅಸ್ಸಾಮೆಂದರೆ ಒಂದು ರೀತಿಯ ಪ್ರಾಣವೆಂದೂ ಅದಕ್ಕಾಗಿಯೇ ಈಗಲೂ ಅಸ್ಸಾಮಿಗೆ ಹೋಗುತ್ತಿರುವ ಜನರಿಗೆ ಟಿಕೆಟ್ಟು ಪಡೆಡುಕೊಳ್ಳಲು ಸಹಾಯ ಮಾಡುತ್ತೇನೆಂದೂ ಹಾಗಾಗಿ ಅವರು ನನ್ನ ಕೆಲಸವನ್ನು ಅನ್ಯಥಾ ಭಾವಿಸಿ ಹಣಕೊಡಲು ಬರಬಾರದೆಂದೂ ವಿನಂತಿಸಿಕೊಳ್ಳುತ್ತೇನೆ.

542497_10151052169083246_1001350885_nಆಗ ಅವರ ಮುಖ ಅರಳುತ್ತದೆ.ಅವರ ಊರಿನ, ಕುಟುಂಬದ, ಸಂಸಾರದ, ಕಷ್ಟಸುಖಗಳ ಕಥೆ ಹೇಳುತ್ತಾರೆ.

ತಮ್ಮ ಜೇಬಿನೊಳಗಿಂದ ಅಸ್ಸಾಮಿನ ಗ್ರಾಮಪಂಚಾಯಿತಿಗಳು ಕೊಟ್ಟಿರುವ ಗುರುತಿನ ಚೀಟಿಯನ್ನೂ , ಅಲ್ಲಿನ ವೋಟರು ಲಿಸ್ಟಿನಲ್ಲ್ರಿರುವ ತಮ್ಮ ಹೆಸರುಗಳ ಯಥಾನಕಲಿನ ಪ್ರತಿಯನ್ನೂ ಹೋಟೆಲ್ಲಿನ ಟೇಬಲಿನ ಮೇಲೆ ಹರಡಿಡುತ್ತಾರೆ.

ತಮ್ಮ ಮೊಬೈಲಿನಲ್ಲಿ ಶೇಖರಿಸಿಟ್ಟಿರುವ ತಮ್ಮ ಊರಿನ, ತಮ್ಮ ಕುಟುಂಬದ ತಮ್ಮ ಸಂಸಾರದ ಫೋಟೋಗಳನ್ನು ತೋರಿಸುತ್ತಾರೆ .

ಆಗ ನನಗೆ ಮತ್ತೆ ಅಸ್ಸಾಮಿಗೆ ಹೋದ ಹಾಗೆ ಅನಿಸುತ್ತದೆ.

ಯಾಕೋ ಮನಸ್ಸು ಒದ್ದೆ ಒದ್ದೆ ಆಗುತ್ತದೆ.

ಆದರೆ ಅದನ್ನೆಲ್ಲ ಇವರ ಜೊತೆ ವಿವರಿಸಿದರೆ ಊರಿಗೆ ಹೋಗವ ತರಾತುರಿಯಲ್ಲಿರುವ ಇವರಿಗೆ ಅರ್ಥವಾಗಲಾರದು ಅಂದುಕೊಳ್ಳುತ್ತೇನೆ.

ಅವರು ಹೋಗುವಾಗ ನನ್ನ ಮೊಬೈಲ್ ನಂಬರ್ ಪಡಕೊಳ್ಳುತ್ತಾರೆ.

ಇವರಿಂದ ನನ್ನ ನಂಬರು ಪಡಕೊಂಡ ಇವರ ಹಾಗೆಯೇ ಇರುವ ಬೇರೆ ಅಸ್ಸಾಮಿಗಳು ಫೋನ್ ಮಾಡುತ್ತಾರೆ.

ತಮಗೂ ವಾಪಾಸು ಊರಿಗೆ ಹೋಗಬೇಕಾಗಿದೆಯೆಂದೂ ತಮಗೂ ಟಿಕೆಟ್ಟಿನ ಅರ್ಜಿಯನ್ನು ತುಂಬಿಸಿಕೊಡಲು ಸಹಾಯಮಾಡಬೇಕೆಂದೂ ಕೇಳಿಕೊಳ್ಳುತ್ತಾರೆ.

ಅವರು ಹೇಳಿದ ಹೊತ್ತಿಗೆ ನಾನು ಮತ್ತೆ ಯಥಾಪ್ರಕಾರ ರೈಲ್ವೇ ಬುಕಿಂಗ್‌ಆಫೀಸಿಗೆ ಹೋಗುತ್ತೇನೆ.

ಹೋದಾಗ ಅವರೂ ಕಾಯುತ್ತಿರುತ್ತಾರೆ.

ಕಳೆದ ಮಂಗಳವಾರವೂ ಹೀಗೇ ಹೊರಟಿದ್ದೆ.

ಹೋದಾಗ ನನ್ನಷ್ಟೇ ಪ್ರಾಯದ ನನ್ನದೇ ಹೆಸರುಳ್ಳ ಆತ ಅಲ್ಲಿ ಕಾಯುತ್ತಿದ್ದ.

ಮೇಲ್ಮಹಡಿಗೆ ಹೋಗುವ ದಾರಿಯ ಮೆಟ್ಟಿಲಲ್ಲಿ ಈತನ ಇಡಿಯ ಸಂಸಾರಸಾಗರವೂ ಕುಕ್ಕುರುಗಾಲಲ್ಲಿ ಕೂತು ಕಾಯುತ್ತಿತ್ತು.

ಈತನ ಹೆಂಡತಿ ಮತ್ತು ಆರು ಮಕ್ಕಳು.ಈತನ ದೊಡ್ಡಪ್ಪನ ಮಗ ಹೆಂಡತಿ ಮತ್ತು ಮೂರು ಮಕ್ಕಳು ಮತ್ತು ಈತನ ದೊಡ್ಡಪ್ಪನ ಮಗನ ಹೆಂಡತಿಯ ಅಣ್ಣ ಮತ್ತು ಆತನ ದೊಡ್ಡಮಗ ಮತ್ತು ಹೆಂಡತಿ ಮಕ್ಕಳು ಎಲ್ಲರೂ ಸೇರಿ ಸುಮಾರು ಇಪ್ಪತ್ತು ಜೀವಗಳು ಮಂಗಳವಾರದ ಆ ಚುರುಕುಬೆಳಕಿನಲ್ಲಿ ತಮ್ಮ ಸಮಸ್ತ ಸಾಮಾನು ಸರಂಜಾಮುಗಳನ್ನು ಸುತ್ತ ಹರಡಿಕೊಂಡು ಅಲ್ಲಿ ಕೂತಿತ್ತು.

ಹೋಗಿ ನೋಡಿದರೆ ಅವರ ಕಥೆಯೇ ಬೇರೆಯಿತ್ತು ಮತ್ತು ಅವರಿಗೆ ಮೊನ್ನೆ ಶುಕ್ರವಾರ ರಾತ್ರಿಯೇ ರೈಲು ಹತ್ತಿ ಗುವಾಹಟಿ ತಲುಪಿ ಅಲ್ಲಿಂದ ಮಂಗಲ್ ದಾಯಿ ದಾರಿಯಾಗಿ ಕಲಾಯಿಗಾಂವ್ ಬಳಿ ಇರುವ ತಮ್ಮ ಹಳ್ಳಿಗೆ ಅರ್ಜೆಂಟಾಗಿ ಹೋಗಬೇಕಾಗಿತ್ತು.

ಕೊಡಗಿಗೆ ಕಾಫಿ ಕೊಯ್ಯುವ ಕೂಲಿ ಕೆಲಸಕ್ಕಾಗಿ ಅಸ್ಸಾಮಿನಿಂದ ಕಳೆದ ವಾರವಷ್ಟೇ ಬಂದಿದ್ದ ಇವರನ್ನು ಇಲ್ಲಿನ ಯಾರೋ ಬಾಂಗ್ಲಾದೇಶೀಯರೆಂದು ಅನುಮಾನಿಸಿ ಪೋಲೀಸಿಗೆ ಕೊಡುವುದಾಗಿ ಹೆದರಿಸಿದ್ದರು.

ಆದರೂ ಇವರು ಹೆದರದೆ ಪೋಲೀಸರಿಗೆ ತಮ್ಮ ಬಳಿಯಿದ್ದ ಗುರುತಿನ ಚೀಟಿಯನ್ನು ತೋರಿಸಿದ್ದರು.

ಪೋಲೀಸರು ಹೌದೆಂದು ಒಪ್ಪಿಕೊಂಡು ಸುಮ್ಮನಾಗಿದ್ದರು.

558575_10151052169243246_1139720220_nಈಗ ನೋಡಿದರೆ ಅವರ ಊರಿಂದ ಯಾರೋ ಫೋನು ಮಾಡಿ ಅವರ ಊರಿನಲ್ಲಿ ಆಧಾರ್ ಚೀಟಿ ಮಾಡಿಸಲು ಬರೀ ಮೂರುದಿನಗಳು ಮಾತ್ರ ಇದೆಯೆಂದೂ ಅದರೊಳಗೆ ಇವರು ಆ ಚೀಟಿ ಮಾಡಿಸದಿದ್ದರೆ ಇವರನ್ನು ಅಲ್ಲಿಯೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲವೆಂದೂ ಅಲ್ಲಿಯೂ ಇವರನ್ನು ಬಾಂಗ್ಲಾದೇಶೀಯರೆಂದು ತೀರ್ಮಾನಿಸಿಬಿಡಬಹುದೆಂದೂ ಹೆದರಿಸಿದ್ದರು.

ಅದನ್ನು ಕೇಳಿ ಜೀವವೇ ಹಾರಿಹೋದಂತಾದ ಇವರೆಲ್ಲ ಮತ್ತೆ ರೈಲು ಹತ್ತಿ ಅಸ್ಸಾಮಿಗೆ ಹೋಗಲು ಟಿಕೆಟ್ಟು ಅರ್ಜಿಪತ್ರ ತುಂಬಿಸಲು ನನಗಾಗಿ ಕಾಯುತ್ತಿದ್ದರು.

ಅವರೆಲ್ಲರಿಗೂ ಅದೇ ಮಂಗಳವಾರದ ರಾತ್ರಿಯೇ ಟಿಕೆಟ್ಟು ಬೇಕಾಗಿತ್ತು ಮತ್ತು ಅವರು ಹೋಗುವ ದಾರಿಯಲ್ಲಿ ಸದಾ ಕೋಮುಗಲಭೆಗಳು ನಡೆಯುವುದರಿಂದ ಅವರೆಲ್ಲರಿಗೂ ಒಂದೇ ಟ್ರೈನಿನ ಒಂದೇ ಡಬ್ಬಿಯ ಒಂದೇ ಕಡೆ ಒತ್ತೊತ್ತಾಗಿ ಕೂರುವಂತಹ ಟಿಕೆಟ್ಟುಗಳೇ ಬೇಕಾಗಿತ್ತು.

ಅದಕ್ಕಾಗಿ ಅವರು ಈ ಲೋಕದ ಯಾರ ಕಾಲಿಗಾದರೂ ಬೀಳಲು ರೆಡಿಯಾಗಿದ್ದರು.

ಆದರೆ ಮಂಗಳವಾರ ರಾತ್ರಿ ಬೆಂಗಳೂರಿನಿಂದ ಗೌಹಾಟಿಗೆ ಯಾವ ಟ್ರೇನೂ ಇರುವುದಿಲ್ಲ. ಒಂದು ವೇಳೆ ಇದ್ದರೂ ಒಂದೇ ಟ್ರೇನಿನ ಒಂದೇ ಡಬ್ಬಿಯ ಒಂದೇ ಕಡೆ ಒತ್ತೊತ್ತಾಗಿ ಕೂರುವ ಟಿಕೆಟ್ಟು ಕೊಡಿಸುವುದು ಈ ಲೋಕದ ಯಾವ ದೇವರಿಂದಲೂ ಆಗುವುದಿಲ್ಲ ಎಂಬುದು ನನ್ನ ನಂಬಿಕೆಯಾಗಿತ್ತು ಮತ್ತು ಇದನ್ನೆಲ್ಲಾ ನನ್ನದೇ ಹೆಸರಿನ ಆತನಿಗೆ ಹೇಗೆ ವಿವರಿಸಿ ಹೇಳುವುದು ಎಂಬುದು ನನ್ನ ಆ ಹೊತ್ತಿನ ಚಿಂತೆಯಾಗಿತ್ತು.

ಇದೀಗ ಇದನ್ನು ಬರೆಯುವ ಸ್ವಲ್ಪ ಹೊತ್ತಿನ ಮೊದಲು ನನ್ನದೇ ಹೆಸರಿನ ಆ ಅಸ್ಸಾಮಿ ಗುವಾಹಟಿಯಿಂದ ಫೋನ್ ಮಾಡಿದ.

ತಾವು ಹೆಂಗಸರು ಮತ್ತು ಮಕ್ಕಳನ್ನು ಅಲ್ಲೇ ಬಿಟ್ಟು ಮತ್ತೆ ಕೊಡಗಿಗೆ ಬರುತ್ತಿರುವುದಾಗಿ ಹೇಳಿದ.

ಆವತ್ತು ತಾವೆಲ್ಲರೂ ಮದರಾಸಿಗೆ ಹೋಗುವ ಮೇಲ್ ಗಾಡಿಯನ್ನು ಹತ್ತಿ, ಅಲ್ಲಿಂದ ಕೊಲಕತ್ತಾ ಹೋಗುವ ರೈಲಿನ ಸಾಮಾನ್ಯ ಬೋಗಿಯನ್ನು ಹತ್ತಿ ಅಲ್ಲಿಂದ ಗುವಾಹಟಿ ತಲುಪಿ ಊರು ಮುಟ್ಟಿದ್ದೆವು ಎಂದೂ ಆದರೆ ಅಲ್ಲಿ ತಲುಪಿದಾಗ ಅಲ್ಲೆಲ್ಲ ಪುನಃ ಗಲಾಟೆಯಾಗಿ ಆಧಾರ್ ಚೀಟಿಯ ಕೆಲಸ ಅರ್ದದಲ್ಲೇ ನಿಂತು ಹೋಗಿರುವುದಾಗಿಯೂ ಅದು ಪುನಃ ಶುರುವಾಗುವವರೆಗೆ ಅಲ್ಲಿ ಇನ್ನೇನು ಮಾಡುವುದು ಅದಕ್ಕಾಗಿ ಕೊಡಗಿಗೆ ಬರುತ್ತಿರುವುದಾಗಿಯೂ ಹೇಳಿದ.582694_10151052168798246_180469754_n(March 10, 2013)

(Photos by the author)

 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s