ಆಸ್ಪತ್ರೆಯಲ್ಲಿ ಹಕ್ಕಿಪಿಕ್ಕಿ

DSC_0285

ಮೈಸೂರಿನ ಅತಿ ಹಳೆಯದಾದ ಐತಿಹಾಸಿಕ ಆಸ್ಪತ್ರೆಯೊಂದರ ಹಿಂಬದಿಯಲ್ಲಿರುವ ಹೊಸ ಕಟ್ಟಡವೊಂದರೊಳಗೆ ಬೆಳಬೆಳಗೆಯೇ ಸಿಹಿಮೂತ್ರ ಪರೀಕ್ಷೆಗಾಗಿ ಸರತಿಯಲ್ಲಿ ಕಾಯುತ್ತಿದ್ದೆ.

ಬೆಳಬೆಳಗೆಯೇ ಬರಿಹೊಟ್ಟೆಯಲ್ಲಿ ರಕ್ತಪರೀಕ್ಷೆಗೆ ಕಾಯುತ್ತಿರುವ ನಡು ವಯಸ್ಸಿನ ಬೊಕ್ಕತಲೆಯ ಬೊಜ್ಜು ಹೊಟ್ಟೆಯ ಮಧ್ಯಮ ವರ್ಗದ ಗಂಡಸರು, ಬೆಳಬೆಳಗೆಯೇ ಅರಸಿಣವನ್ನೂ ಪೌಡರನ್ನೂ ಏಕಪ್ರಕಾರವಾಗಿ ಮುಖಕ್ಕೆ ಬಳಿದುಕೊಂಡು ಟ್ರೆಡ್ ಮಿಲ್ಲಿನ ಮೇಲೆ ಏದುಸಿರು ಬಿಡುತ್ತಿರುವ ಸಂಕೋಚಮುಖದ ಸ್ತ್ರೀಯರು, ಮೂತ್ರದ ಚೀಲವನ್ನು ಅದರ ಮಿತಿಗಿಂತಲೂ ತುಂಬಿಸಿಕೊಂಡು ತಡೆಯಲಾಗದ ಆತುರವನ್ನು ಹತ್ತಿಕ್ಕಲು ಮುಖ ಕಿವಿಚುತ್ತಾ ಬೆಳಗಿನ ಪತ್ರಿಕೆಯನ್ನು ಓದುತ್ತಿರುವ ಸ್ತ್ರೀಪುರುಷರು!

ಅಕಸ್ಮಾತ್ ಕಾರ್ಲ್ ಮಾರ್ಕ್ಸನೂ,ಅಲೆಗ್ಸಾಂಡರನೂ, ಕುಮಾರವ್ಯಾಸನೂ, ಪಂಪನೂ ಎಲ್ಲರೂ ಬರಿಹೊಟ್ಟೆಯಲ್ಲಿ ಹೀಗೆ ಇಲ್ಲಿ ಕಾಯುತ್ತಾ ಕುಳಿತಿದ್ದರೆ ಜಗತ್ತಿನ ಇತಿಹಾಸವೂ ವರ್ತಮಾನವೂ ಅವರೆಲ್ಲರಿಗೆ ಹೇಗೆ ಕಾಣಬಹುದು ಎಂದು ಆ ಕಾಯುತ್ತಿರುವ ಸಾಲಿನಲ್ಲಿರುವವರ ಮುಖಚಹರೆಗಳನ್ನು ನೋಡುತ್ತಾ ಕುಳಿತಿದ್ದೆ.

ಅಷ್ಟು ಹೊತ್ತಿಗೆ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಬಾಗಿಲು ತೆರೆದುಕೊಂಡಿತು.ಆ ತೆರೆದ ಬಾಗಿಲಿನಿಂದ ಮುದುಕನೊಬ್ಬನ ದೇಹವನ್ನು ಅನಾಮತ್ತಾಗಿ ಎತ್ತಿಕೊಂಡು ಬಂದು ಕುರ್ಚಿಯೊಂದರ ಮೇಲೆ ಕುಳ್ಳಿರಿಸಿದರು.ಆ ಮುದುಕನಾದರೋ ಶಾಲೆಗೆ ಮೊದಲ ದಿನ ಬಲವಂತವಾಗಿ ದಾಖಲಾಗುತ್ತಿರುವ ಹಸುಳೆಯಂತೆ ಪ್ರತಿಭಟಿಸುತ್ತಿದ್ದ.ಆದರೆ ಪ್ರತಿಭಟಿಸುತ್ತಿದ್ದ ಆ ಮುದುಕನ ಗಂಟಲಿಗಿದ್ದ ಶಕ್ತಿ ಆತನ ದೇಹಕ್ಕೆ ಇರಲಿಲ್ಲ.ಆ ಅಸಹಾಯಕ ನೋವೂ ಆತನ ಧ್ವನಿಯಲ್ಲಿ ಇಮ್ಮಡಿಸಿ ಆತ ಇನ್ನಷ್ಟು ಜೋರಾಗಿ ಅವನದೇ ಭಾಷೆಯಲ್ಲಿ ಕೂಗಿಕೊಳ್ಳುತ್ತಿದ್ದ.

ಎಲ್ಲೋ ಕೇಳಿದಂತಿರುವ ಬಹಳ ಪರಿಚಿತ ಭಾಷೆ.

ಎಲ್ಲೋ ನೋಡಿದಂತಿರುವ ಅವರೆಲ್ಲರ ಅಸ್ಪಷ್ಟ ಮುಖಚಹರೆ.

ಹತ್ತಿರ ಹೋಗಿ ನೋಡಿದರೆ ಆತ ನಮ್ಮ ಹುಣಸೂರಿನ ಬಳಿಯ ಹಕ್ಕಿ ಪಿಕ್ಕಿ ಕಾಲೊನಿಯ ಮುದುಕ.

ಅವನನ್ನು ಹಾಗೆ ಆಸ್ಪತ್ರೆಯ ಕುರ್ಚಿಗೆ ಒತ್ತಿ ಹಿಡಿದುಕೊಂಡಿದ್ದವರು ಆತನ ಮಗ ಮತ್ತು ಮಗಳು.

ಬೆಳಬೆಳಗೆಯೇ ಈ ನಗರದ ಮನುಷ್ಯರ ಮುಂದೆ ಉಡದ ಹಾಗೆ ಕೊಸರಿಕೊಳ್ಳುತ್ತಿರುವ ತಮ್ಮ ಹಠಮಾರಿ ಅಪ್ಪನನ್ನು ಹೀಗೆ ಅಮುಕಿ ಹಿಡಿದುಕೊಂಡು ಕಾಯಬೇಕಾಯಿಲ್ಲಾ ಎಂಬ ಸಂಕೋಚವೂ ಅವಮಾನವೂ ಅವರಿಬ್ಬರ ಮುಖದಲ್ಲಿ ಎದ್ದು ಕಾಣುತ್ತಿತ್ತು.ಹೀಗೆ ಸಣ್ಣ ಮಗುವಿನ ಹಾಗೆ ಅರಚಬೇಡ ಎಂದು ಅವರೂ ಅರಚುತ್ತಾ ಅಪ್ಪನನ್ನು ಸುಮ್ಮನಿರಿಸಲು ನೋಡುತ್ತಿದ್ದರು.

ಸಮಸ್ತ ಲೋಕದ ಎಲ್ಲ ಕಾಯಿಲೆ ಕಸಾಲೆಗಳನ್ನು ಉಡದ ಮಾಂಸದಿಂದಲೂ, ಹುಲಿಯ ತುಪ್ಪದಿಂದಲೂ ವಾಸಮಾಡಿರುವ ತನ್ನನ್ನು ಈ ಯಕಶ್ಚಿತ್ ಆಸ್ಪತ್ರೆಯ ಕುರ್ಚಿಯೊಂದಕ್ಕೆ ಒತ್ತಿಹಿಡಿದಿರುವ ತನ್ನ ಮಕ್ಕಳನ್ನು ಆತ ತನ್ನ ದೇವಭಾಷೆಯಲ್ಲಿ ಅಶ್ಲೀಲವಾಗಿ ಬೈಯುತ್ತಿರುವುದು ನನಗಂತೂ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.

‘ನೀವು ನಿಮ್ಮ ತಂದೆಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ಒತ್ತಿ ಹಿಡಿಯಬೇಡಿ.ಆತನಿಗೆ ಉಸಿರು ಕಟ್ಟುತ್ತಿದೆ.ಮೊದಲು ಉಸಿರಾಡಲು ಬಿಡಿ.ಸರಿ ಆಗುತ್ತಾನೆ’ ಅಂದೆ.

‘ಅಯ್ಯೋ ಬಿಡಿ ಸಾಮಿ ನಿಮಗೇನು ಗೊತ್ತು.ಆಸ್ಪತ್ರಿಯಿಂದ ನಾಕು ಸಲ ಓಡಿ ಹೋಗಿ ಅಡಗಿದಾನೆ.ಇನ್ನು ಅರ್ದ ಗಂಟೆಯಲ್ಲಿ ಆಪರೇಷನ್ ಇದೆ..ಹಾರ್ಟ್ ಬೀಟ್ ನೋಡಕ್ಕೆ ಕಳಿಸಿದಾರೆ.ಅಲ್ಲಿ ಕತ್ತರಿ ಹಿಡಕೊಂಡು ಡಾಕ್ಟರು ಕಾಯುತ್ತಿದ್ದಾರೆ.ಇಲ್ಲಿ ಇವನು ಕಿರುಚುತಿದಾನೆ.ಸ್ವಲ್ಪ ಬೇಗ ಚೆಕಪ್ ಮಾಡಲು ಹೇಳಿ ಬುದ್ದೀ’ ಅಪ್ಪನ ಮುಖವನ್ನೇ ಭೂಮಿಗೆ ಹೊತ್ತು ಬಂದಿದ್ದ ಮಗಳು ಉಗುಳು ನುಂಗುತ್ತಾ ಕೇಳಿದಳು.

ಅಪ್ಪನ ಹಾಗೆಯೇ ಜುಟ್ಟು ಕಟ್ಟಿಕೊಂಡಿದ್ದ ಮಗನೂ ಅದನ್ನೇ ಬೇಡಿಕೊಂಡ.

ನಾನು ಒಳಗೆ ಹೋಗಿ ಡಾಕ್ಟರ ಹತ್ತಿರ ಕೇಳಿಕೊಂಡೆ.ಆತ ನಿನಗೆ ಯಾಕೆ ಈ ಅಲೆಮಾರಿ ಹಕ್ಕಿಪಿಕ್ಕಿಗಳ ಉಸಾಬರಿ ಎಂಬಂತೆ ದುರುಗುಟ್ಟಿದ.

ನಾನೂ ದುರುಗುಟ್ಟಿದ ಮೇಲೆ ತಣ್ಣಗಾಗಿ ಸ್ವಲ್ಪ ಕಾಯಲು ಹೇಳಿ ಅಂದ.

ಈಗ ಆ ಹಕ್ಕಿಪಿಕ್ಕಿ ಮುದುಕ ಸ್ವಲ್ಪ ನಿಸೂರಾಗಿದ್ದ.

‘ನಂಗೆ ಏನೂ ಆಗಿಲ್ಲ ಸಾಮಿ. ಈ ಮುಂ… ನನ್ನ ಮಕ್ಕಳಿಗೆ ಬುದ್ದಿ ಇಲ್ಲ.ಕಾಡಲ್ಲಿ ಇದ್ದೋನನ್ನ ಇಲ್ಲಿಗೆ ಎಳಕೊಂಡು ಬಂದಿದ್ದಾರೆ.ಹೇಗೋ ಸತ್ತು ಹೋಗುತ್ತಿದ್ದೆ.ಈ ಕಲ್ಲು ಬಿಲ್ಡಿಂಗಿಗೆ ತಂದು ಸಾಯಿಸುತ್ತಿದ್ದಾರಲ್ಲ ಸ್ವಾಮಿ.ಏನು ಬುದ್ದಿ ಹೇಳೋದು ಇವರಿಗೆ’ ಎಂದು ಏದುಸಿರು ಬಿಡುತ್ತಿದ್ದ.

‘ಇಲ್ಲ ಸಾಮಿ ಬೆನ್ನು ಮೂಳೆ ಹೋಗಿದೆ ಇವರಿಗೆ.ಬಚ್ಚಲಲ್ಲಿ ಜಾರಿ ಬಿದ್ದಿದೆ.ನಮಗೆ ಮಲಗಿದಲ್ಲೆ ಹೇಲು ಉಚ್ಚೆ ಎತ್ತಿ ಸಾಕಾಯ್ತು.ಆಪರೇಷನ್ ಆದರೆ ಮುದುಕನಿಗೆ ಸರಿ ಆಗ್ತಾನೆ ಅಂತಿದಾರೆ ಡಾಕ್ಟರು’

‘ಇಲ್ಲ ಸ್ವಾಮಿ ನೋಡಿ ಇಲ್ಲಿ’ ಎಂದು ಆ ಹಕ್ಕಿ ಪಿಕ್ಕಿ ಮುದುಕ ಎಲ್ಲರ ಎದುರಿಗೇ ತನ್ನ ಶರಟು ಬನೀನು ಕಿತ್ತು ಬಿಸಾಕಿ ತನ್ನ ಉಡದಂತಹ ಬೆನ್ನನ್ನು ನನಗೆ ತೋರಿಸಿ ವಿವರಿಸಲು ತೊಡಗಿದ.

ಒಂದು ಅಣುವಷ್ಟೂ ಕೊಬ್ಬು ಇರದ ಬಿಲ್ಲಿನಂತಹ ಆತನ ದೇಹ ವೃದ್ಧ್ಯಾಪ್ಯದಿಂದಾಗಿ ಕೊಂಚ ಸುಕ್ಕುಗಟ್ಟಿರುವುದು ಬಿಟ್ಟರೆ ಉಳಿದಂತೆ ತಾನು ಯಾವ ಯುವಕನಿಗೂ ಕಮ್ಮಿ ಇಲ್ಲ ಎನ್ನುವಂತೆ ಬಿಗಿದುಕೊಂಡಿತ್ತು.

‘ನೋಡಿ ಸ್ವಾಮಿ ನಿಮ್ಮ ಡಾಕ್ಟರು ಹೇಳುವ ಸ್ಪೈನಲ್ಲು ಇರುವುದು ಇಲ್ಲಿ ಅಲ್ಲವಾ ಸಾಮಿ’ ಆತ ತನ್ನ ಬೆನ್ನ ಉದ್ದಕ್ಕೂ ಬೆರಳು ಓಡಿಸಿ ತೋರಿಸಿದ.

‘ಆದರೆ ನೋಡಿ ಸಾಮಿ ನನಗೆ ನೋವು ಇರುವುದು ಇಲ್ಲಿ ತಿಕದ ಮೇಲುಗಡೆಯಲ್ಲಿ.ಇಲ್ಲಿ ಉಡದ ಎಣ್ಣೆ ಹಚ್ಚಿ ಉಳುಕು ತೆಗೆದರೆ ಎಲ್ಲ ಹೋಗುತ್ತದೆ ಸ್ವಾಮಿ ಈ ಮುಂ… ಮಕ್ಕಳು ಕೇಳುವುದಿಲ್ಲ’ ಎಂದು ಮಕ್ಕಳಿಗೆ ಬೈದು ತಾನೂ ಜೋರಾಗಿ ನರಳಿ ಮಕ್ಕಳು ಎತ್ತಿಕೊಟ್ಟ ಶರಟು ಬನ್ನಿಯನ್ನು ಕೈಯಲ್ಲೇ ಹಿಡಿದುಕೊಂಡು ಕುಳಿತ.

ನಗು ಬರುತ್ತಿತ್ತು.ನಗರದ ನೌಕರರೂ, ವ್ಯಾಪಾರಸ್ತರೂ, ಗೃಹಿಣಿಯರೂ, ಬಸುರಿಯರೂ ಸಾಲುಸಾಲಾಗಿ ಅಸಹಜ ಗಾಂಭೀರ್ಯವನ್ನು ಮುಖಕ್ಕೆ ಎಳೆದುಕೊಂಡು ಕುಳಿತಿದ್ದರೆ ಅವರ ನಡುವೆ ಉಡದಂತೆ ಕುಳಿತಿರುವ ಈ ಮುದುಕ.ಆತನ ಹೋಚಿಮಿನ್ನನಂತಹ ಗಡ್ಡ, ತಿರುಚಿ ಹದಗೊಳಿಸಿದ ಮೀಸೆ ಮತ್ತು ವೇದವ್ಯಾಸರಂತಹ ಜುಟ್ಟು!

ನೀವೆಲ್ಲರೂ ಬದುಕಿರುವುದು ಸುಮ್ಮನೆ ಎಂಬಂತಹ ಆತನ ಮುಖದ ಕೊಂಕು ಆತನ ನೋವನ್ನೂ ಮೀರಿ ಕಾಣಿಸುತ್ತಿತ್ತು.

‘ನಿಮ್ಮ ಹಕ್ಕಿಪಿಕ್ಕಿ ಕಾಲನಿಯ ಉಳುಕು ತೆಗೆಯುವ ಮುಸ್ತಪಾ ಇದಾನಾ ಅಥವಾ ಸತ್ತೇ ಹೋದನಾ?’ ಎಂದು ಕೇಳಿದೆ.ಅವರೆಲ್ಲರ ಮುಖ ಒಮ್ಮೆಗೆ ಅರಳಿತು.

‘ಅಯ್ಯೋ ಅವನು ಸತ್ತು ಹೋದ ಸಾಮೀ ಇದ್ದಿದ್ದರೆ ಇಲ್ಲಿಗೆ ಯಾಕೆ ತರುತ್ತಿದ್ದರು ಸಾಮೀ’ ಮುದುಕ ಇನ್ನೊಮ್ಮೆ ನರಳಿದ.

DSC_0290ಕೆಲವು ವರ್ಷಗಳ ಹಿಂದೆ ಇವರೆಲ್ಲರೂ ಇದ್ದ ಹುಣಸೂರಿನ ಬಳಿಯ ಹಕ್ಕಿಪಿಕ್ಕಿ ಕಾಲನಿಗೆ ನಾನು ಹೋಗಿದ್ದೆ.

ಯಾರೋ ಕೇಸು ಹಾಕಲು ಬಂದ ಸಿಐಡಿ ಪೋಲೀಸಿನವರಿರಬೇಕೆಂದು ಅಲ್ಲಿನವರು ಹೆದರಿಬಿಟ್ಟಿದ್ದರು.

ಆಮೇಲೆ  ನಾನೂ ನಿಮ್ಮ ಹಾಗೆಯೇ ಹಕ್ಕಿಪಿಕ್ಕಿ ಅಂದ ಮೇಲೆ ಟೀ ಬಿಸ್ಕೇಟು ಎಲ್ಲಾ ಕೊಟ್ಟು ಕಳಿಸಿದ್ದರು.

ಅಲ್ಲಿ ಮುಸ್ತಫಾ ಎಂಬ ಮುದುಕನ ಜೊತೆ ಈ ಮುದುಕನೂ ಇನ್ನೂ ಕೆಲವು ಮುದುಕರೂ ಸೇರಿ ಹಕ್ಕಿಪಿಕ್ಕಿಗಳ ಹಳೆಯ ಕಾಲದ ಅನೇಕ ಕಥೆಗಳನ್ನು ಹೇಳಿದ್ದರು.

ಆಗಲೇ ಆ ಮುಸ್ತಫಾನಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಆದರೂ ತನ್ನ ಕೈಯಲ್ಲಿ ಹಚ್ಚೆ ಹುಯ್ಯಿಸಿಕೊಂಡಿರುವ ಮುಸ್ತಫಾ ಎಂಬ ಹೆಸರು ಮಾಸ್ತಪ್ಪ ಎಂದು ವಾದಿಸುತ್ತಿದ್ದ. ಒಂದು ಕಾಲದಲ್ಲಿ ಈ ಕಾಲೋನಿಯಲ್ಲಿ ಮುಸ್ತಫಾನನ್ನು ಹಿಡಿಯುವವರೇ ಇರಲಿಲ್ಲವಂತೆ. ಹಾಗಾಗಿ ಹಗ್ಗ ಹಾಕಿ ಎಳೆದುಕೊಂಡು ಬರುತ್ತಿದ್ದರಂತೆ! ಅಷ್ಟೊಂದು ದೊಡ್ಡ ಗೂಂಡಾ ತರಹ ಆಡುತ್ತಿದ್ದನಂತೆ. ಒಂದು ಸಲ ತಮಾಷೆಗೆ ಅಂತ ಹೆಂಡತಿಗೆ ಒದೆಯಲು ಹೋದಾಗ ಆಕೆ ತೀರಿಯೇ ಹೋಗಿಬಿಟ್ಟಿದ್ದಳಂತೆ.

ಆವತ್ತಿನಿಂದ ಮುಸ್ತಫಾ ಒಳ್ಳೆಯವನಾಗಿಬಿಟ್ಟಿದ್ದ.ನವಿಲಿನ ತುಪ್ಪದಿಂದ ಉಜ್ಜಿ ಉಳುಕು ತೆಗೆಯುವುದನ್ನು ಕಸುಬುಮಾಡಿಕೊಂಡಿದ್ದ.ದೊಡ್ಡದೊಡ್ಡ ಮಂತ್ರಿಗಳೇ ಈತನ ಬಳಿ ಉಳುಕು ತೆಗೆಯಲು ಬರುತ್ತಿದ್ದರಂತೆ.

DSC_0286ಜಂಬದಿಂದ ಆತನೇ ಹೇಳಿಕೊಂಡಿದ್ದ.

ಈಗ ನೋಡಿದರೆ ಮುಸ್ತಪಾನ ಗೆಳೆಯ ಈ ಹಕ್ಕಿಪಿಕ್ಕಿ ಮುದುಕ ಸರಕಾರೀ ಆಸ್ಪತ್ರೆಯ ಕುರ್ಚಿಯಲ್ಲಿ ನಮ್ಮೆಲ್ಲರ ನಡುವೆ ಅಸಹನೆಯಿಂದ ಕುಳಿತು ತನ್ನ ಸರದಿಗಾಗಿ ಕಾಯುತ್ತಿದ್ದ.

(10 February 2013

Photos By the Author)

Advertisements