ಜೇಬುಕತ್ತರಿಸಿಕೊಂಡ ಟಿಬೆಟನ್ನನ ಕಥೆ.

 

2011-01-09_4176ಬೆಳ್ಳಂಬೆಳಗಿನ ಹೊತ್ತು ಕಾವಳ ತುಂಬಿಕೊಂಡ ಟಾರುರೋಡಿನಲ್ಲಿ ಒಬ್ಬನೇ ಹೋಗುತ್ತಿರುವಾಗ ಸೂರ್ಯನೂ ಮೆಲ್ಲಗೆ ಏಳುತ್ತಿರುತ್ತಾನೆ.

ಅರಬಿತಿಟ್ಟಿನ ಕುರುಚಲು ಕಾಡಿನಲ್ಲಿ ಬೆಳಬೆಳಗೆಯೇ ಒಂದೆರೆಡು ನವಿಲುಗಳು ಕೇಕೆ ಹಾಕುತ್ತವೆ.

ಹಿರಿಯ ಕಥೆಗಾರ ಚದುರಂಗರು ಬದುಕಿದ್ದಾಗ ಈ ಕಾಡಿಗೆ ಅರಬಿತಿಟ್ಟು ಎಂಬ ಹೆಸರು ಯಾಕೆ ಬಂತು ಎಂದು ಒಂದು ದೊಡ್ಡ ಕಥೆಯನ್ನೇ ಹೇಳಿದ್ದರು.ಹಿಂದಿನ ಕಾಲದಲ್ಲಿ ಅರೇಬಿಯಾ ದೇಶದಿಂದ ಬಂದಿದ್ದ ಚೋರನೊಬ್ಬ ಈ ಕಾಡಿನಲ್ಲಿ ಅಡಗಿ ಕುಳಿತು ದಾರಿಹೋಕರನ್ನು ಸುಲಿಯುತ್ತಿದ್ದನಂತೆ.

ಆದರೆ ಆತ ಸ್ವಲ್ಪ ಒಳ್ಳೆಯ ಚೋರನಂತೆ.

ಕದ್ದ ಹಣವನ್ನು ಕಷ್ಟದಲ್ಲಿರುವವರಿಗೆ ಕೊಟ್ಟುಹೋಗುತ್ತಿದ್ದನಂತೆ.

2011-02-03_4916ಅದಕ್ಕಾಗಿ ಈ ಜಾಗದ ಹೆಸರು ಅರಬಿತಿಟ್ಟು.

ಈಗ ಆ ಒಳ್ಳೆಯ ಚೋರನೂ ಇಲ್ಲ, ಕಥೆ ಹೇಳಲು ಚದುರಂಗರೂ ಇಲ್ಲ.ಕೇವಲ ಕೇಕೆಹಾಕುವ ವೈಯ್ಯಾರದ ನವಿಲುಗಳು ಮತ್ತು ಒಮ್ಮೊಮ್ಮೆ ಕಾಣಸಿಗುವ ಮುಂಗುಸಿಗಳು.

ಚದುರಂಗರು ಇದ್ದಿದ್ದರೆ ಕಥೆ ಹೇಳುತ್ತಿದ್ದರು ಮತ್ತು ಆ ಚೋರ ಇದ್ದಿದ್ದರೆ ಕದ್ದ ಹಣವನ್ನು ಕೈಗಿತ್ತು ಹೋಗುತ್ತಿದ್ದನು ಎಂದು ಆಸೆಪಡುತ್ತ ಮುಂದೆ ಹೋಗುತ್ತೇನೆ.

ಹುಣಸೂರು ಪಟ್ಟಣ ಕಳೆದರೆ ಲಕ್ಷ್ಮಣತೀರ್ಥ ನದಿಗೆ ಕಟ್ಟಿರುವ ಸೇತುವೆ ಬರುತ್ತದೆ.ಅದರ ಕೆಳಗೆ ಸದಾಕಾಲ ಪಾಚಿಕಟ್ಟಿಕೊಂಡಿರುವ ನದಿ. ಜೀವನದಲ್ಲಿ ಒಮ್ಮೆಯಾದರೂ ಈ ನದಿ ಮನೋಹರವಾಗಿ ಕಾಣಿಸಿಕೊಳ್ಳಬಾರದೇ ಎಂದು ಆಸೆ ಪಡುತ್ತೇನೆ.

ಟಿಬೆಟನ್ ಮುದುಕನೊಬ್ಬ ಆತನಷ್ಟೇ ದೊಡ್ಡದಾದ ಖಾಲಿ ಬ್ಯಾಗೊಂದನ್ನು ಹೆಗಲಲ್ಲಿ ಜೋತಾಡಿಸಿಕೊಂಡು ಖಾಲಿಯಾಗುತ್ತಿರುವ ನೀರಿನ ಬಾಟಲೊಂದನ್ನು ಬೆರಳಲ್ಲಿ ತೂಗಿಸಿಕೊಂಡು ನಡೆದುಹೋಗುತ್ತಿದ್ದಾನೆ.

ಅವನ ಮುಖದಲ್ಲಿ ಏನೋ ಸಂಕಟವೋ ಒಂಟಿತನವೋ ಗೊತ್ತಾಗದ ಖಾಲಿಖಾಲಿತನ.

ನಾನು ಜೀಪು ನಿಲ್ಲಿಸುತ್ತೇನೆ.

ಆತ ಗಮನಿಸದೆ ಮುಂದೆ ಸಾಗುತ್ತಾನೆ.

ನಾನು ಕೊಂಚ ಮುಂದೆ ಚಲಿಸಿ ಆತನಿಗಾಗಿ ಕಾಯುತ್ತೇನೆ.

ಆತ ಮುಂದೆ ಹೋಗಲು ಪ್ರಯತ್ನಿಸುತ್ತಾನೆ.

ಆದರೂ ಏನೋ ಒಂದು ಸಣ್ಣ ಆಸೆ ಆತನನ್ನು ನಿಲ್ಲಿಸುತ್ತದೆ.

`ಯಾಕೆ ಹೀಗೆ ಒಬ್ಬನೇ ನಡೆದುಹೋಗುತ್ತಿದ್ದೀಯಾ? ಎಲ್ಲಿಗೆ ಹೋಗುತ್ತಿದ್ದೀಯಾ’ ಎಂದು ನನ್ನ ಹರಕುಮುರುಕು ಹಿಂದಿಯಲ್ಲಿ ಕೇಳುತ್ತೇನೆ.

ಆತ ಏನೂ ಮಾತಾಡದೆ ತಲೆ ಅಲ್ಲಾಡಿಸುತ್ತಾನೆ.

`ಎಲ್ಲಿ ಬೈಲುಕುಪ್ಪೆಯ ಟಿಬೆಟನ್ ಕ್ಯಾಂಪಿಗಾ?’ ಎಂದು ಕೇಳುತ್ತೇನೆ.

`ಹೌದು’ ಅನ್ನುತ್ತಾನೆ.

`ಅಲ್ಲಿಗೆ ಸುಮಾರು ನಲವತ್ತು ಕಿಲೋಮೀಟರು ನಡೆದೇ ಹೋಗುತ್ತೀಯಾ?’ ಎಂದು ಕೇಳುತ್ತೇನೆ.

`ಹೌದು’ ಎನ್ನುತ್ತಾನೆ.

`ಯಾಕೆ ಏನಾಯಿತು’ ಎಂದು ಕೇಳುತ್ತೇನೆ.

ಆತ ತನ್ನ ಪ್ಯಾಂಟಿನ ಖಾಲಿ ಜೇಬನ್ನು ತೋರಿಸುತ್ತಾನೆ.

2011-01-28_4875ಯಾರೋ ಒಳ್ಳೆಯ ಜೇಬುಗಳ್ಳರು ಆತನ ಪ್ಯಾಂಟಿನ ಜೇಬನ್ನು ಬೆಳಬೆಳಗೆಯೇ ಕತ್ತರಿಸಿದ್ದಾರೆ.

ಮೈಸೂರಿಗೆ ಅಂತ ಬೆಳಗಿನ ಬಸ್ಸಲ್ಲಿ ಹೊರಟಿದ್ದವನು ಆ ನೋವು ಮತ್ತು ಅಸಹಾಯಕತನದಿಂದಾಗಿ ಕುಗ್ಗಿಹೋಗಿದ್ದಾನೆ.

ವಾಪಾಸು ಮನೆಗೆ ನಡೆಯುತ್ತಿದ್ದಾನೆ.

ಯಾರ ಸಹಾಯವೂ ಬೇಕಾಗಿಲ್ಲ.ನಡೆದೇ ಹೋಗುತ್ತೇನೆ ಎಂಬುದು ಆತನ ಹುಚ್ಚುಹಠ.

`ನೀನು ಸಣ್ಣಮಗುವಿನ ಹಾಗೆ ಹಠಮಾಡಬೇಡ.ನಾನು ನಿನ್ನನ್ನು ನಿನ್ನ ನಿರಾಶ್ರಿತ ಶಿಭಿರಕ್ಕೆ ಬಿಡುತ್ತೇನೆ’ ಎಂದು ನಾನೂ ಹಠ ಹಿಡಿಯುತ್ತೇನೆ.

ಆತ ಕೊಂಚ ಮೃದುವಾಗುತ್ತಾನೆ.

ಜೀಪಿನೊಳಗೆ ಕುಳಿತುಕೊಳ್ಳುತ್ತಾನೆ.

ಆದರೂ ಆತನ ಮುಖದಲ್ಲಿ ಏನೋ ಅಪನಂಬಿಕೆ.

ಬೆಳಬೆಳಗೆಯೇ ಯಾರಿಗಾದರೂ ಹೇಗೆ ಇನ್ನೊಬ್ಬನ ಜೇಬನ್ನು ಕತ್ತರಿಸುವ ಮನಸ್ಸು ಬರುತ್ತದೆ ಎಂಬುದು ಆತನ ಪ್ರಶ್ನೆ.

ಹಾಗೆಯೇ ನಾನು ಯಾಕೆ ಹೀಗೆ ವಿನಾಕಾರಣ ಆತನನ್ನು ಹಚ್ಚಿಕೊಂಡು ಸಹಾಯ ಮಾಡುತ್ತಿರುವೆ ಎಂಬುದೂ ಆತನಿಗೆ ಅಚ್ಚರಿ.

ನಾನು ಆತನಿಗೆ ಒಂದು ಸುಳ್ಳು ಕಥೆ ಹೇಳುತ್ತೇನೆ.

ನನ್ನ ಯೌವನದ ಕಾಲದಲ್ಲಿ ನನಗೊಬ್ಬಳು ಟಿಬೆಟನ್ ಗೆಳತಿಯದ್ದಳು.ಆಕೆಯನ್ನು ನಾನು ಹುಚ್ಚನ ಹಾಗೆ ಪ್ರೀತಿಸುತ್ತಿದ್ದೆ.ಆದರೆ ಆಕೆ ನನ್ನನ್ನು ಬಿಟ್ಟು ಟಿಬೆಟನ್ ಯುವಕನನ್ನೇ ಮದುವೆಯಾದಳು.ಆದರೂ ಯಾಕೋ ನನಗೆ ಆಕೆಯನ್ನು ಮರೆಯಲಾಗುತ್ತಿಲ್ಲ.ಹಾಗಾಗಿ ಆಕೆಯ ನೆನಪಿನಲ್ಲಿ ಹೀಗೆ ಒಮ್ಮೊಮ್ಮೆ ಟಿಬೆಟನ್ ನಿರಾಶ್ರಿತರಿಗೆ ಸಹಾಯ ಮಾಡುತ್ತಿರುತ್ತೇನೆ ಎಂದು ಕಥೆ ಕಟ್ಟಿ ಹೇಳುತ್ತೇನೆ.

ಈ ಕಥೆಗೆ ಆತ ಮರುಳಾಗುತ್ತಾನೆ.

ಬೊಚ್ಚುಬಾಯಲ್ಲಿ ‘ಓ ಹೌದಾ ಹಾಗೆಯಾ’ ಎಂದು ನಗುತ್ತಾನೆ.

`ನಿಮ್ಮ ಇಲ್ಲಿನ ಬಹಳ ಹುಡುಗರು ಹೀಗೇ ಮರುಳಾಗಿದ್ದಾರೆ,ಆದರೆ ನಮ್ಮ ಟಿಬೆಟನ್ ಹುಡುಗಿಯರು ತಂದೆ ತಾಯಂದಿರಿಗೆ ಬಹಳ ಹೆದರುತ್ತಾರೆ.ಅವರು ಹೇಳಿದವರನ್ನೇ ಮದುವೆಯಾಗುತ್ತಾರೆ.ಪಾಪ ನೀನು’ ಎಂದು ಇನ್ನೊಮ್ಮೆ ನಗುತ್ತಾನೆ.

`ಇದು ನನ್ನ ಕಥೆಯಾಯಿತು.ಬೆಳಬೆಳಗೆಯೇ ಜೇಬು ಕತ್ತರಿಸಿಕೊಂಡ ನಿನ್ನ ಕಥೆ ಏನು?’ ಎಂದು ಕೇಳುತ್ತೇನೆ.

ಆತ ಹಣ ಕಳೆದುಕೊಂಡ ನೋವಿನ ನಡುವೆಯೂ ತನ್ನ ಕಥೆ ಹೇಳುತ್ತಾನೆ.

2011-01-28_4870ಈತ ಒಬ್ಬ ನಿವೃತ್ತ ಸೈನಿಕ.

ಭಾರತ ಬಾಂಗ್ಲಾ ವಿಮೋಚನಾ ಯುದ್ದದಲ್ಲಿ ಹೋರಾಡಿ ಪದಕ ಪಡೆದವನು.

ಈತ ಹುಟ್ಟಿದ್ದು ಟಿಬೆಟಿನ ಒಂದು ಹಳ್ಳಿಯಲ್ಲಿ.

ಅವರ ಧರ್ಮಗುರು ದಲಾಯಿಲಾಮಾ ಭಾರತಕ್ಕೆ ಪರಾರಿಯಾದಾಗ ಈತ ಇನ್ನೂ ಚಿಗುರು ಮೀಸೆಯ ಹುಡುಗನಂತೆ.ತಂದೆತಾಯಿ ಅಣ್ಣತಮ್ಮ ಅಕ್ಕತಂಗಿ ಎಲ್ಲರೂ ಕೈಗೆ ಸಿಕ್ಕಿದ್ದನ್ನು ಹಿಡಿದುಕೊಂಡು ತಾವೂ ಭಾರತಕ್ಕೆ ಪರಾರಿಯಾದರಂತೆ.ದಾರಿಯಲ್ಲಿ ಕಾಯಿಲೆಬಂದು ತಂದೆ ತೀರಿಹೋದರಂತೆ.ಆಮೇಲೆ ನಿರಾಶ್ರಿತರ ಕ್ಯಾಂಪಿನಲ್ಲಿ ಸುಮ್ಮನೇ ಇರಲು ಬೇಜಾರಾಗಿ ಈತ ಸೇನೆ ಸೇರಿದ್ದಂತೆ.ಅಲ್ಲಿ ಯುದ್ದ ಗಿದ್ದ ಎಲ್ಲ ಚೆನ್ನಾಗಿಯೇ ಇತ್ತಂತೆ.

ಆದರೆ ಅಮ್ಮ,` ನಾನು ಸಾಯುತ್ತೇನೆ.ಅದಕ್ಕೆ ಮೊದಲು ನೀನು ಸೇನೆ ಬಿಟ್ಟು ಬಾ’ ಎಂದು ಜೋರು ಮಾಡಿದಳಂತೆ.

ಅದಕ್ಕೆ ವಾಪಾಸು ಬಂದನಂತೆ.

ಆಗ ಮದುವೆ ಮಾಡಿಸಿದರಂತೆ.

ಆಮೇಲೆ ತಾಯಿ ತೀರಿಹೋದಳಂತೆ.

ಆಮೇಲೆ ಮಕ್ಕಳಾದರಂತೆ.

ಆಮೇಲೆ ಅವರಿಗೂ ಮಕ್ಕಳಾಗಿ ಅವರೂ ದೊಡ್ಡವರಾಗಿ ಈಗ ನೋಡಿದರೆ ಕಣ್ಣಿನ ಪೊರೆಗೆ ಔಷದಿ ತೆಗೆದುಕೊಂಡು ಹಾಗೆಯೇ ಸೇನೆಯ ಕ್ಯಾಂಟೀನಿನಿಂದ ಮನೆಗೆ ಬೇಕಾಗುವ ಸಾಮಾನು ಸರಂಜಾಮು ಎಣ್ಣೆಬೇಳೆ ತೆಗೆದುಕೊಳ್ಳಲು ಮೈಸೂರಿಗೆ ಬಸ್ಸು ಹತ್ತಿ ಹೊರಟಿದ್ದವನು ಜೇಬುಕಳ್ಳತನಕ್ಕೆ ಬಲಿಯಾಗಿದ್ದನು.

ಆ ನೋವಲ್ಲಿ ಏಕಾಂಗಿಯಾಗಿ ನಡೆದುಹೋಗುತ್ತಿದ್ದವನು ನನ್ನ ಕೈಗೆ ಸಿಕ್ಕಿ ತನ್ನ ಕಥೆಯನ್ನೂ ನನ್ನಲ್ಲಿ ಹೇಳಿಕೊಳ್ಳಬೇಕಾದ ಸಂಕಷ್ಟಕ್ಕೆ ಸಿಲುಕಿದ್ದನು.

ದೊಡ್ಡ ಮೊತ್ತದ ಹಣವನ್ನೂ ಜೊತೆಗೆ ಸೇನೆಯ ಕ್ಯಾಂಟೀನಿನ ಗುರುತುಚೀಟಿಯನ್ನೂ ಕಳೆದುಕೊಂಡು ಮನಗೆ ಮರಳಿ ಹೆಂಡತಿಯ ಕೈಯಲ್ಲಿ ಏನೆಲ್ಲಾ ಬೈಸಿಕೊಳ್ಳಬೇಕಾಗಬಹುದು ಎಂದು ಊಹಿಸಿ ಆತನ ಆತಂಕವು ಹೆಚ್ಚಾಗುತ್ತಿತ್ತು.

2011-04-30_7459`ಆತಂಕ ಪಡಬೇಡ.ಹೆಂಡತಿಯರು ಬೈಯುವುದರಿಂದಲೇ ನಾವು ಗಂಡಸರು ಇನ್ನೂ ಮಾನಮರ್ಯಾದೆಯಿಂದ ಬದುಕುತ್ತಿರುವುದು.ನೀನು ಕರೆದರೆ ನಿನ್ನ ಮನೆಗೂ ಬರುತ್ತೇನೆ.ನಿನ್ನ ಹೆಂಡತಿ ಕುಡಿಯಲು ಕೊಟ್ಟರೆ ಟೀಯನ್ನೂ ಕುಡಿಯುತ್ತೇನೆ.ಇನ್ನು ಮುಂದೆ ನಾವಿಬ್ಬರೂ ಗೆಳೆಯರು’ ಎಂದು ಆತನ ಆತಂಕವನ್ನು ದೂರಮಾಡಲು ನೋಡಿದೆ.

ಸುಮಾರು ಎಪ್ಪತ್ತು ವರ್ಷಗಳಾಗಿರಬಹುದಾದ ಆ ಟಿಬೆಟನ್ ನಿವೃತ್ತ ಸೈನಿಕ ನನ್ನನ್ನು ಆತನ ಮನೆಗೆ ಕರೆದೊಯ್ದ.

ಟಿಬೆಟನ್ ಪೂಜಾ ಸಾಮಗ್ರಿಗಳೂ ಲಾಸಾದ ದಲಾಯಿಲಾಮಾರ ಅರಮನೆಯ ಹಳೆಯ ಫೋಟೋಗಳೂ ಎಲ್ಲವೂ ತುಂಬಿಕೊಂಡಿದ್ದ ಚಂದದ ಮನೆ.ಮನೆಯೊಳಗೆ ಆತನ ವಯಸ್ಸಾದ ಪತ್ನಿಯೂ ಇನ್ನೊಬ್ಬ ಟಿಬೆಟನ್ ಮುದುಕನೂ ಮೌನದಲ್ಲಿ ಜಪಮಣಿ ಹಿಡಿದುಕೊಂಡು ಕೂತಿದ್ದರು.

ಆ ಮುದುಕ ಈತನ ಅಣ್ಣನಂತೆ.ಅವರಿಗೆ ಈತ ಜೇಬುಕತ್ತರಿಸಿಕೊಂಡ ಕಥೆ ಹೇಳಿದೆ.

ಅವರು ಈತನ ಗತಿ ಕಂಡು ನಕ್ಕರು.

`ಈತ ಯಾವಾಗಲೂ ಹೀಗೆಯೇ ಸದಾ ಏನಾದರೊಂದು ಕಳೆದುಕೊಂಡು ಮರುಗುತ್ತಲೇ ಇರುತ್ತಾನೆ.ಪರವಾಗಿಲ್ಲ ನೀವು ಸಿಕ್ಕಿದರಲ್ಲಾ.ಈತ ಅಷ್ಟು ದೂರ ನಡೆಯುವುದು ತಪ್ಪಿತಲ್ಲಾ’ ಎಂದು ಖುಷಿಯಲ್ಲಿ ಟಿಬೆಟನ್ ಟೀ ಬಿಸ್ಕತ್ತು ಕೊಟ್ಟು ಸತ್ಕರಿಸಿದರು.

ನಿನ್ನೆ ಪುನಃ ಬೈಲುಕುಪ್ಪೆಯ ಅವರ ಮನೆಗೆ ಹೋಗಿದ್ದೆ..ಟಿಬೇಟಿನ ಹಳ್ಳಿಯ ಹಳೆಯ ಕಾಲದ ಕಥೆಗಳನ್ನೂ, ಇಲ್ಲಿನ ನಿರಾಶ್ರಿತರ ಶಿಭಿರದ ಇತ್ತೀಚೆಗಿನ ಕಥೆಗಳನ್ನೂ ಆ ಮೂವರೂ ನನ್ನೊಡನೆ ಹಂಚಿಕೊಂಡರು..ಅವರು ನನ್ನೊಡನೆ ಇನ್ನೊಂದು ವಿಷಯವನ್ನೂ ಹೇಳಿದರು.

ಅದೇನೆಂದರೆ ಅವರಿಬ್ಬರು ಅಣ್ಣ ತಮ್ಮಂದಿರು ಮದುವೆಯಾಗಿರುವುದು ಒಬ್ಬಳೇ ಹೆಂಗಸನ್ನು.

ಇದು ಅವರ ಹಳೆಯ ಸಂಪ್ರದಾಯ.

‘ಈಗ ಹಾಗೆಲ್ಲಾ ಇಲ್ಲ.ಒಬ್ಬಳು ಹೆಂಡತಿಗೆ ಒಂದೇ ಗಂಡ’ ಎಂದರು.

`ಈಗ ಹಾಗೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.ನನ್ನ ಟಿಬೆಟನ್ ಗೆಳತಿ ಅವಳ ಗಂಡನೊಡನೆಯೂ, ನನ್ನೊಡನೆಯೂ ಏಕಕಾಲದಲ್ಲಿ ಸಂಸಾರ ನಡೆಸಬಹುದಿತ್ತು’ ಎಂದೆ.

‘ಆಹಾ ಹಾಗೇನಿಲ್ಲ. ನೀನು ಹಾಗೆಲ್ಲಾ ಆಸೆ ಪಡಬೇಡ .ಹಾಗೆ ಇದ್ದರೂ ಮದುವೆಯಾಗಬಹುದಾಗಿದ್ದು ಟಿಬೆಟರನ್ನು ಮಾತ್ರ ಅದೂ ಟಿಬೆಟನ್ ಸಹೋದರರನ್ನು ಮಾತ್ರ.ನಿನ್ನ ಹಾಗಿನ ಹೊರಗಿನ ಗಂಡಸರನ್ನಲ್ಲ’ ಎಂದು ಅವರೂ ನಕ್ಕರು.2011-04-30_745416 December 2012                                                                         Photos by the Author

 

One thought on “ಜೇಬುಕತ್ತರಿಸಿಕೊಂಡ ಟಿಬೆಟನ್ನನ ಕಥೆ.

  1. ಆಹಾ ಏನು ಆಸೆಯೋ ಗಂಡಸರದು ವಿಚಿತ್ರ. ಎಕಪತ್ನಿವೃತಸ್ಥರಂತೆ, ರಾಜಾ ಬಹುಪತ್ನಿತ್ವ ವಲಭನಂತೆ. ಸ್ವತಂತ್ರ್ಯವೋ ಸ್ವಚ್ಛಂದವೊ?
    ಮನುಷ್ಯ ಅವನಿಷ್ಟ ಪಟ್ಟಂತೆ ಸಂಸ್ಕೃತಿ, ಅನುಕೂಲಕ್ಕೆ ತಕ್ಕಂತೆ ನಾಗರೀಕತೆ, ಅವಕಾಶಕ್ಕೆ ತಕ್ಕಂತೆ ಲೈಂಗಿಕ ಸ್ವಾತಂತ್ರ್ಯ ರೂಪಿಸಿಕೊಂಡ ಅನುಕೂಲಸ್ಥ.
    ಲೇಖಕರು ಚೆನ್ನಾಗಿ ಬೆಳೆಸುತ್ತಾರೆ ಅನುಭವ, ಆಲೋಚನೆ
    ಚಂದದ ಬರಹ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s