ಅಲ್ಲಾಡುತ್ತಿದ್ದ ಹಳೆಯ ಅಂಬಾಸಡರ್

1ಲೋಕ ಇಲ್ಲಿಯೇ ಕೊನೆಯಾಗುತ್ತದೆಯೇನೋ ಎಂಬಂತಿರುವ ಒಂಟಿದಾರಿಯ ತುದಿ.

ಮುಸ್ಸಂಜೆಯ ನಸುಗೆಂಪಲ್ಲಿ ಎದುರಿನಿಂದ ಅವಿತು ಅವಿತು ಬರುತ್ತಿರುವ ಮಂಜಿನ ತೆರೆ ಮಾಯಾವಿಯೊಬ್ಬನ ಕಂಬಳಿಯಂತೆ ನೆಲವನ್ನು ತಬ್ಬಿಕೊಳ್ಳುತ್ತಿತ್ತು.

ಕತ್ತಲಾಗುತ್ತಿರುವ ಆಕಾಶದಲ್ಲಿ ಮಂಜಿನ ನಡುವೆ ಬೆಳ್ಳಕ್ಕಿಗಳೂ ಹಾರತೊಡಗಿ ಈಗಲೇ ಇರುವ ದುಗುಡ ಇನ್ನಷ್ಟು ಭಾರವಾಗಿ ಕಣ್ಣು ಕತ್ತಲಿಟ್ಟಂತಾಗುತ್ತಿತ್ತು.

ಇನ್ನೂ ಹೋಗುವುದಾದರೆ ಪ್ರಪಾತವನ್ನು ಇಳಿದು ಕೆಳಗೆ ಹಾವಿನಂತೆ ಹರಿದುಹೋಗುವ ಟಾರುರೋಡನ್ನು ಸೇರಬೇಕು.

ಹೋಗಲು ಮನಸಿಲ್ಲದಿದ್ದರೆ ಇಲ್ಲೇ ನಿಂತುಕೊಂಡು ಹಬ್ಬಿರುವ ಮಂಜಿಗೆ ನಮ್ಮ ಉಸಿರನ್ನೂ ಸೇರಿಸಿಕೊಂಡು ಆಕಾಶದಲ್ಲಿ ನಕ್ಷತ್ರಗಳು ಹುಟ್ಟುವುದನ್ನು ನೋಡುತ್ತಾ ನಿಂತುಕೊಳ್ಳಬೇಕು.

ಹಾಗೇ ನಿಂತುಕೊಂಡಿದ್ದೆ.

ಅಷ್ಟು ಹೊತ್ತಿಗೆ ಹಳೆಯ ಕಾಲದ ಅಂಬಾಸಡರ್ ಕಾರೊಂದು ಅಲ್ಲಾಡುತ್ತಾ ಬಂದು ನನ್ನ ಎದುರೇ ಅನುಮಾನದಲ್ಲಿ ನಿಂತುಕೊಂಡು ನಾನು ಹೋಗುವುದನ್ನು ಕಾಯತೊಡಗಿತು.

ಹೀಗೇ ತುಂಬ ಸಲ ಆಗುತ್ತದೆ.

3ಕದ್ದು ಸಿಗರೇಟನ್ನೋ, ಗಾಂಜಾವನ್ನೋ ಸೇದಲು ಬರುವ ಎಳೆಯ ಪ್ರಾಯದ ತರುಣರು ಸುಮ್ಮನೇ ನಿಂತಿರುವ ನಾನು ಅಲ್ಲಿಂದ ತೊಲಗಲು ಕಾಯುತ್ತಿರುತ್ತಾರೆ.

ನಾನು ತೊಲಗದಿದ್ದರೆ ಇನ್ನೇನು ಮಾಡುವುದೆಂದು ಅರಿವಾಗದೆ ಸ್ವಲ್ಪ ಪ್ರಪಾತವನ್ನು ಇಳಿದು ಅಲ್ಲಿ ಕುಂತು ಬೆಂಕಿ ಹತ್ತಿಸಿ ಸೇದುತ್ತಾರೆ.

ಅವರು ಸೇದುತ್ತಿರುವುದು ಏನೆಂಬುದು ಕೆಳಗಿನಿಂದ ಏರಿ ಬರುವ ಪರಿಮಳದಿಂದ ಅರಿವಾಗುತ್ತದೆ.

ಈ ಹಳೆಯ ಅಂಬಾಸಡರ್ ಕಾರೊಳಗಿರುವವರೂ ಹೀಗೇ ಏನೋ ಒಂದು ಉತ್ಕಟತೆಯನ್ನೋ ಉಲ್ಲಾಸವನ್ನೋ ಅನುಭವಿಸಲು ಬಂದಿರಬೇಕು.ಅವರ ಸಕಾರಣವಾಗಿರಬಹುದಾದ ಸುಖಕ್ಕೆ ಯಾಕೆ ಮುಳ್ಳಾಗಲಿ ಎಂದುಕೊಂಡು ಪ್ರಪಾತ ಇಳಿದು ನಡೆಯತೊಡಗಿದೆ.

ನಾಲಕ್ಕು ಚಕ್ರದ ಆ ಹಳೆಯ ಅಂಬಾಸೆಡರ್ ಕಾರು ಅಲ್ಲಾಡುತ್ತಾ ಇನ್ನೇನು ಪ್ರಪಾತಕ್ಕೆ ಬಿದ್ದೇ ಹೋಗುವುದೇನೋ ಎಂಬಂತೆ ಇನ್ನೂ ಮುಂದಕ್ಕೆ ಬಂದು ನಿಂತುಕೊಂಡಿತು.

ಅದರೊಳಗಿಂದ ಹೆಂಗಸರೂ ಗಂಡಸರೂ ಮಾತಾಡುವ ಸದ್ದು ಕೆಳಕ್ಕೂ ನಿಧಾನಕ್ಕೆ ಕೇಳಿಸುತ್ತಿತ್ತು.

ಗುಡ್ಡದ ಕೆಳಗೆ ನಡೆಯುತ್ತಾ ಹೋದರೆ ಶಿಶಿರದ ಚಳಿಗೆ ಹಳದಿ ಬಣ್ಣಕ್ಕೆ ತಿರುಗುತ್ತಿರುವ ಮರವೊಂದರ ಗೆಲ್ಲುಗಳಲ್ಲಿ ಕಿರಿಚುತ್ತಾ ಕೂತಿರುವ ಕಾಡು ಮೈನಾ ಹಕ್ಕಿಗಳು.

ಅಷ್ಟು ಎತ್ತರಕ್ಕೆ ಬೆಳೆದು ನಿಂತು ಕಾಲಿಗೆ ಸವರುತ್ತಿರುವ ಮುಳಿಹುಲ್ಲ ಚೂಪು ತುದಿ.

5ನೆಲ ಒದ್ದೆಯಾಗುತ್ತಿರುವುದು ಬೀಳುತ್ತಿರುವ ಮಂಜಿನಿಂದಲೋ ಅಥವಾ ನಿಜವಾಗಿ ಮಳೆ ಸುರಿಯುತ್ತಿರುವುದರಿಂದಲೋ ಎಂದು ಗೊತ್ತಾಗದೆ ತಲೆ ಎತ್ತಿ ನೋಡಿದರೆ ನಿಜವಾಗಿಯೂ ಮೇಲಿನಿಂದ ಸಣ್ಣಗಿನ ಮಳೆಹನಿಗಳು ಹಳದಿ ಎಲೆಗಳ ಮೇಲೆ ಬಿದ್ದು ಕೆಳಕ್ಕೆ ಉದುರುತ್ತಿದ್ದವು.

ಇನ್ನು ಈ ಮರದ ಕೆಳಗೆ ನಿಲಲಾಗುವುದಿಲ್ಲ ಎಂದು ಮೇಲಕ್ಕೆ ಬಂದರೆ ಪ್ರಪಾತಕ್ಕೆ ಮುಖಮಾಡಿಕೊಂಡು ನಿಂತಿದ್ದ ಆ ಹಳೆಯ ಅಂಬಾಸಡರ್ ಕಾರು ಸಣ್ಣಗೆ ಅಲುಗಾಡುತ್ತಿತ್ತು.

ಒಳಗಿನ ದೀಪ ಉರಿಯುತ್ತಿತ್ತು.

ಬಡವರ ಅರಮನೆಯಂತೆ ಅಲ್ಲಾಡುತ್ತಿದ್ದ ಆ ವಾಹನದ ಒಳಗೆ ಸ್ತ್ರೀಯರಿಬ್ಬರು ಮೆಲುದನಿಯಲ್ಲಿ ಮಾತನಾಡುತ್ತಿದ್ದರು.

ಗಂಡಸೊಬ್ಬ ಕೊಂಚ ಜೋರಾಗಿಯೇ ಮಾತನಾಡುತ್ತಿರುವುದು ಕೇಳಿದರೆ ಆತನಿಗೆ ಬೇಕಾದಷ್ಟು ಕುಡಿಯಲು ಇನ್ನೂ ದೊರಕಿಲ್ಲ ಎಂಬುದು ಅರಿವಾಗುತ್ತಿತ್ತು.

ಆ ಚಳಿಯಲ್ಲಿ, ಸಣ್ಣಗಿನ ಮಳೆಯಲ್ಲಿ ಒಂಟಿಯಾಗಿ ಬರುತ್ತಿರುವ ನನ್ನನ್ನ ಕಂಡ ಆ ಹೆಂಗಸರ ಕರುಳು ಚುರುಗುಟ್ಟಿರಬೇಕು.

2ನನ್ನನ್ನು ಆ ಕಾರೊಳಕ್ಕೆ ಕರೆಯಲು ಅವರು ಆ ಗಂಡಸಿಗೆ ಆಜ್ಞಾಪಿಸುತ್ತಿರುವುದು ನನಗೆ ಕೇಳಿಸುತ್ತಿತ್ತು.

ಆತ ಕೊಂಚ ಹಿಂಜರಿಯುತ್ತಿರುವುದೂ ಆತನ ಮಾತುಗಳಿಂದ ಗೊತ್ತಾಗುತ್ತಿತ್ತು.

ಅನೈತಿಕ ಚಟುವಟಿಕೆಗಳನ್ನು ಹತ್ತಿಕ್ಕಲು ಬಂದಿರುವ ಮಾರುವೇಷದ ಪೋಲೀಸು ನಾನಾಗಿರಬೇಕೆಂಬುದು ಆತನ ಹೆದರಿಕೆಯಾಗಿತ್ತು.

ಯಾಕೋ ಆತನ ಹೆದರಿಕೆಯನ್ನು ಹೋಗಲಾಡಿಸಬೇಕೆನಿಸಿತು.

‘ ಮನುಷ್ಯರೇ, ನಾನು ಪೋಲೀಸಲ್ಲ.ನಿಮ್ಮ ಹಾಗೆಯೇ ಸಂಜೆಯನ್ನು ನೋಡುತ್ತಾ ಬಂದಿದ್ದೆ ಅಷ್ಟೇ’ ಅಂದೆ.

‘ಅಯ್ಯೋ ಸಾರೇ, ಈ ಕತ್ತಲಲ್ಲಿ ಯಾಕೆ ಒಬ್ಬರೇ ಹೊರಗೆ ನಿಂತಿದ್ದೀರಿ.ಒಳಗೆ ಬನ್ನಿ’ ಎಂದು ಆ ಮೂವರಲ್ಲಿ ವಯಸಿನಲ್ಲಿ ಕಿರಿಯವಳಂತೆಯೂ ಆದರೆ ಅಧಿಕಾರದಲ್ಲಿ ದೊಡ್ಡವಳಂತೆಯೂ ಕಾಣಿಸುತ್ತಿದ್ದ ಹೆಂಗಸು ನನ್ನನ್ನು ಕರೆದಳು.

ಕಾರಿನ ತೆರೆದೇ ಇದ್ದ ಬಾಗಿಲಿಂದ ಒಳನುಸುಳಿ ಒಂದು ಮೂಲೆಯಲ್ಲಿ ದೇಹವನ್ನು ಕುಗ್ಗಿಸಿ ಕುಳಿತೆ

.ಆ ಕಾರು ಒಂದು ಸಣ್ಣ ಮಧುಶಾಲೆಯ ಪರಿಮಳ ಸೂಸುತ್ತಿತ್ತು.

ಸ್ಟೀಲು ಲೋಟವೊಂದಕ್ಕೆ ಮಧುವನ್ನು ಸುರಿದು ಉಪ್ಪಿನಕಾಯಿಯನ್ನು ನೆಕ್ಕುತ್ತಾ ಅವರು ಮೂವರೂ ಕುಡಿಯುತ್ತಿದ್ದರು.

4ನನ್ನನ್ನೂ ಕುಡಿಯಲು ಆಹ್ವಾನಿಸಿದರು.

‘ಇಲ್ಲ ಇವತ್ತು ಮಂಗಳವಾರ ನಾನು ಕುಡಿಯುವುದಿಲ್ಲ.ಬೇಕಾದರೆ ಕೊಂಚ ಉಪ್ಪಿನಕಾಯಿ ಕೊಡಿ.ಉಪ್ಪಿನಕಾಯಿಯೆಂದರೆ ನನಗೆ ಪಂಚಪ್ರಾಣ’ ಎಂದು ಕೇಳಿಕೊಂಡೆ.

‘ಮಂಗಳವಾರ ಮಾತ್ರ ಕುಡಿಯಬಾರದ ಯಾವ ಜಾತಿಯನ್ನೂ ನಾನು ಇದುವರೆಗೆ ಕಂಡಿಲ್ಲವಲ್ಲಾ.ಸಾರೇ,ನಿಮ್ಮ ಜಾತಿ ಯಾವುದು?’ಎಂದು ಆಕೆ ಅರ್ದ ಕುಡಿತದಿಂದಲೂ ಇನ್ನರ್ದ ತುಂಟತನದಿಂದಲೂ ಕೇಳಿದಳು.

ಖಾರದ ಉಪ್ಪಿನಕಾಯಿಯನ್ನು ನಾನು ಕೊಂಚ ಹೆಚ್ಚೇ ತಿಂದಿರುವುದರಿಂದ ನನಗೆ ಬಿಕ್ಕಳಿಕೆ ಬೇರೆ ಬರಲಾರಂಬಿಸಿತ್ತು.

‘ಬಿಕ್ಕಳಿಕೆ ಇರುವಾಗ ನನಗೆ ನನ್ನ ಜಾತಿಯ ಹೆಸರನ್ನು ಹೇಳಲಾಗುವುದಿಲ್ಲ.ಹೇಳುವಾಗ ಏನಾದರೂ ಹೆಚ್ಚುಕಡಿಮೆಯಾದರೆ ಆಮೇಲೆ ದೊಡ್ಡ ಗಲಾಟೆಯಾಗಬಹುದು’ಎಂದು ಜೋರಾಗಿಯೇ ನಕ್ಕೆ.

‘ಆಹಾ ನೀವು ದೊಡ್ಡ ತಮಾಷೆಗಾರರಂತೆ ಕಾಣಿಸುತ್ತಿದ್ದೀರಿ.ನಾವೂ ದೊಡ್ಡ ತಮಾಷೆಗಾರರೇ.ಕಷ್ಟಪಟ್ಟು ಕೆಲಸ ಮಾಡಿ ಬೇಸರ ಆದಾಗ ತಿಂಗಳಿಗೊಮ್ಮೆ ಇಲ್ಲಿ ಬಂದು ಕುಡಿದು ಉಪ್ಪಿನಕಾಯಿ ತಿಂದು ಮಾತಾಡಿ ಗಲಾಟೆ ಮಾಡಿ ಹೋಗುತ್ತೇವೆ ಅಷ್ಟೇ.ನೀವು ಬೇರೆ ಏನೂ ತಿಳಿದುಕೊಳ್ಳಬಾರದು ದಯವಿಟ್ಟು.’ ಕೊಂಚ ವಯಸ್ಸಾದ ಹೆಂಗಸು ಹೇಳಿದಳು.ಆಕೆಯ ಕನ್ನಡದಲ್ಲಿ ತುಳುವಿನ ಘಾಟು ಕೇಳಿಸುತ್ತಿತ್ತು.

DSC_2544‘ಹೌದು ಅಣ್ಣಾ, ಈ ಕಾರು ನನ್ನದೇನಲ್ಲ.ಇದು ಇವರ ಗಂಡನದು.ಇವರ ಗಂಡ ಕಾಯಿಲೆ ಬಂದು ತೀರಿಹೋದರು.ಕಾರು ಓಡಿಸಲು ನನ್ನನ್ನು ಇಟ್ಟುಕೊಂಡಿದ್ದಾರೆ.ಇವರು ಕರೆದಾಗ ಕಾರು ಓಡಿಸುವುದು.ಕೊಟ್ಟರೆ ಕುಡಿಯುವುದು.ಅಷ್ಟೇ ನನ್ನ ಕೆಲಸ.ಬೇರೇನೂ ಅಲ್ಲ.ನೀವು ತಪ್ಪು ತಿಳಿದುಕೊಳ್ಳಬಾರದು’ಗಂಡಸು ಹೇಳಿತು.

‘ ನಾನೆಲ್ಲಿ ತಪ್ಪು ತಿಳಿದುಕೊಂಡೆ?ಮಳೆಯಲ್ಲಿ ನೆನೆಯುತ್ತಿದ್ದಾಗ ಕಾರಿನಲ್ಲಿ ಜಾಗಕೊಟ್ಟಿದ್ದೀರಿ.ಉಪ್ಪಿನಕಾಯಿಯನ್ನೂ ಕೊಟ್ಟಿದ್ದೀರಿ.ನಿಮಗಾದರೋ ಕಷ್ಟಸುಖ ಹೇಳಿಕೊಳ್ಳಲು ನೀವು ಮೂರು ಮಂದಿ ಇದ್ದೀರಿ.ನನಗೆ ಯಾರಿದ್ದಾರೆ.ನಾನು ಪರಮ ಒಂಟಿ.ನಿಮ್ಮ ಒಬ್ಬೊಬ್ಬರ ಕಥೆಯನ್ನಾದರೂ ಹೇಳಿ.ಕೇಳಿಸಿಕೊಳ್ಳುತ್ತೇನೆ’ ಅಂದೆ.

ಆವತ್ತು ಸಂಜೆ ಆ ಮಳೆಯಲ್ಲಿ, ಪ್ರಪಾತಕ್ಕೆ ಮುಖಮಾಡಿಕೊಂಡು ಅಲ್ಲಾಡುತ್ತಾ ನಿಂತಿದ್ದ ಆ ಹಳೆಯ ಅಂಬಾಸಡರ್ ಕಾರಿನಲ್ಲಿ ಅವರು ಅರ್ದಂಬರ್ದ ಹೇಳಿ ನಿಲ್ಲಿಸಿದ್ದ ಆ ಮೂವರ ಕಥೆಗಳು ಆ ಸಂಜೆಯ ತಳಮಳವನ್ನೂ, ಒಂಟಿತನವನ್ನೂ ತುಂಬಾ ತಮಾಷೆಯಾಗಿ ವರ್ಣಿಸಿದ್ದವು.

ಮೂವರೂ ಘಟ್ಟ ಹತ್ತಿ ಕೊಡಗು ದೇಶಕ್ಕೆ ಎಲ್ಲೆಲ್ಲಿಂದಲೋ ಬಂದಿದ್ದ ಸಂತತಿಗೆ ಸೇರಿದ್ದವರು.

ಅವರು ಮೂವರೂ ಅವರವರ ಜೀವನವನ್ನು ಆವತ್ತಿನ ಆ ಸಂಜೆ ಅಪರಿಚಿತನಾದ ನನ್ನ ಬಳಿ ಅರ್ದ ಸಂಕೋಚದಿಂದಲೂ, ಅರ್ದ ಹೆದರಿಕೆಯಿಂದಲೂ, ತೀರಾ ತಮಾಷೆಯಿಂದಲೂ ಹಂಚಿಕೊಂಡಿದ್ದರು.

ಅದೆಲ್ಲ ದೊಡ್ಡ ಕಥೆ.ಇಂದಿನ ಈ ಅಂಕಣದಲ್ಲಿ ಅದರಲ್ಲಿ ಕಿರಿಯವಳಾದವಳ ಕಥೆಯನ್ನು ಸ್ವಲ್ಪವೇ ಹೇಳಿ ನಿಲ್ಲಿಸುತ್ತೇನೆ.

ಆಕೆ ತಮಿಳುನಾಡಿನ ದೊಡ್ಡ ಜಾತಿಯೊಂದಕ್ಕೆ ಸೇರಿದ ಹುಡುಗಿ.

ಲೋಕ ಏನು ಎಂದು ಗೊತ್ತಾಗುವ ಮೊದಲೇ ಒಬ್ಬನೊಡನೆ ಓಡಿ ಬಂದಿದ್ದಳು.

ಗಂಡಸು ಅಂದರೆ ಏನೆಂದು ಗೊತ್ತಾಗುವ ಮೊದಲೇ ಆತನೂ ತೀರಿಕೊಂಡಿದ್ದ.

ಆತ ಈಕೆಗೆ ಬಿಟ್ಟು ಹೋಗಿರುವುದು ಒಂದು ಹಳೆಯ ಹುಲ್ಲಿನ ಮನೆ ಮತ್ತು ಒಂದು ಹಳೆಯ ಅಂಬಾಸಡರ್ ಕಾರು.

ಆ ಕಾರಿಗೆ ಒಬ್ಬ ಡ್ರೈವರನನ್ನು ಇಟ್ಟುಕೊಂಡು ಅದರಲ್ಲಿ ಕಾಫಿ ತೋಟಕ್ಕೆ ಕೂಲಿಯಾಳುಗಳನ್ನು ಕರೆದುಕೊಂಡು ಬಂದು ಈಕೆ ಜೀವಿಸುತ್ತಿದ್ದಳು.

ಈ ಭಾಗದಲ್ಲಿ ತುಂಬ ಒಳ್ಳೆಯ ಮೇಸ್ತ್ರಿ ಎಂಬ ಹೆಸರು ಈಕೆಗಿದೆಯಂತೆ.

‘ಏನಿದ್ದರೇನು.ಭಾವನೆಗಳನ್ನು ಹಂಚಿಕೊಳ್ಳಲು ಒಂದು ಜೀವ ಇಲ್ಲದ ಮೇಲೆ’ ಎಂದು ಆಕೆ ಕೊರಗುತ್ತಿದ್ದಳು.

‘ಅಯ್ಯೋ ಅಕ್ಕಾ ನಾನಿಲ್ಲವಾ?’ ಕುಡಿದ ಮತ್ತಿನಲ್ಲಿ ತಾನು ಚಾಲಕನೆಂಬುದನ್ನು ಮರೆತು ಆತ ತೊದಲುತ್ತಿದ್ದ.

‘ಹೌದು ನೀನಿದ್ದೀಯಾ.. ಹೆಂಡತಿಯ ಸ್ವರ ಕೇಳಿದರೆ ಚಡ್ಡಿಯನ್ನು ಒದ್ದೆ ಮಾಡುತ್ತೀಯಾ.ಗಂಡಸು’ ಆಕೆಯೂ ತಿರುಗೇಟು ನೀಡಿದಳು.

‘ಅಯ್ಯೋ ನಾನಿಲ್ಲವೇ ತಂಗೀ..’ ವಯಸ್ಸಾದ ಹೆಂಗಸು ಆಕೆಯ ಕೆನ್ನೆಗಳಿಗೆ ತನ್ನ ಕುಡಿದು ಮತ್ತಾದ ಕೆನ್ನೆಯನ್ನು ಒತ್ತಿ ಮುದ್ದು ಮಾಡುತ್ತಿದ್ದಳು.

‘ಹೌದು ಸಾರೇ, ನನಗಿರುವುದು ಇವಳು ಮಾತ್ರ.ಆದರೆ ಇವಳಿಗೆ ವಯಸ್ಸಾಗಿದೆ.ಇವಳು ಸತ್ತು ಹೋದರೆ ನನಗೆ ಇರುವವರು ಯಾರು?’

ತಮಿಳಿನ ಆ ಸಣ್ಣ ವಯಸ್ಸಿನ ಹೆಂಗಸು ತುಳುವಿನ ವಯಸ್ಸಾದ ಹೆಂಗಸಿನ ಸಾವನ್ನು ಊಹಿಸಿಕೊಂಡು ದುಃಖಿಸುತ್ತಿದ್ದಳು

.ಆ ಇರುಳಿನಲ್ಲಿ ಆ ಹೆಂಗಸರಿಬ್ಬರ ಕಾಮದಂತಹ ಅಳು ಮತ್ತು ಅದನ್ನು ಪೆಚ್ಚುಪೆಚ್ಚಾಗಿ ನೋಡುತ್ತಿದ್ದ ಆ ಪಾಪದ ಚಾಲಕ ಮತ್ತು ನಮ್ಮೆಲ್ಲರನ್ನೂ ಆ ಚಳಿಯಲ್ಲಿ ಒಳಗಿಟ್ಟುಕೊಂಡು ಅಲ್ಲಾಡುತ್ತಿದ್ದ ಆ ಅಂಬಾಸಡರ್ ಕಾರು.

ನೆನೆಸಿಕೊಂಡರೆ ಈಗಲೂ ಇನ್ನಷ್ಟು ಚಳಿಯಾಗುತ್ತಿದೆ

6

( December 2, 2012)

(Photos by the author )

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s