ಆಕಾಶ ಕಾಡು ಬೆಂಕಿ

DSC_0041ಬೆಳದಿಂಗಳಿನ ಹಾಗಿದ್ದ ಈ ತರುಣಿಯೂ ಈಗ ಹೊರಟುಹೋಗಿದ್ದಾಳೆ.

ಎಲ್ಲಿಂದಲೋ ಬಂದವಳು, ಕೊಂಚ ದಿನ ಇಲ್ಲಿದ್ದವಳು, ಥಾಯ್ಲೆಂಡ್ ತಿರುಗಿ ಮುಗಿಸಿ ಈಗ ಕೆನಡಾದ ಯಾವುದೋ ಹಿಮಪರ್ವತದ ತಪ್ಪಲಿಗೆ ಹೊರಟು ಹೋಗಿದ್ದಾಳೆ.

ಆಕೆ ಇಲ್ಲಿ ಇದ್ದಾಗ ಇಲ್ಲಿನ ಅನಾಥ ಮಕ್ಕಳ ಆಶ್ರಯದ ಮನೆಯಲ್ಲಿ ಬಹುಶಃ ತನ್ನ ಇಪ್ಪತ್ತಾರನೆಯ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು. ದಿನವೂ ಸಂಜೆ ಆ ಮಕ್ಕಳ ಜೊತೆ ಆಟವಾಡಲು ಬರುತ್ತಿದ್ದಳು. ಅವರನ್ನು ಇಲ್ಲೇ ಹತ್ತಿರದ ಕಲ್ಲು ಗುಡ್ಡವನ್ನು ಏರಲು ಕರೆದುಕೊಂಡು ಹೋಗುತ್ತಿದ್ದಳು. ಒಬ್ಬೊಬ್ಬರೇ ಅನಾಥ ಹುಡುಗರ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿ ಇವನು ದೊಡ್ಡ ಚಿತ್ರಗಾರನಾಗುತ್ತಾನೆ, ಈ ಇನ್ನೊಬ್ಬ ದೊಡ್ಡ ವಾಸ್ತು ಶಿಲ್ಪಿಯಾಗುತ್ತಾನೆ ಅಂತೆಲ್ಲ ಬೆರಗುಗಣ್ಣುಗಳಿಂದ ಹಾಡಿ ಹೊಗಳುತ್ತಿದ್ದಳು.

ನಾನು ಅಲ್ಲೇ ಓಡಾಡುತ್ತಿರುವ ಕೆಲವು ನಾಟಿ ಕೋಳಿಗಳನ್ನು ತೋರಿಸಿ, ‘ನೀನು ಹುಟ್ಟಿದ ಇಂಗ್ಲೆಂಡಿನ ಊರಲ್ಲೂ ಕೋಳಿಗಳು ಹೀಗೇ ಇರುತ್ತವೆಯಾ’ ಎಂದು ಕೇಳಿದ್ದೆ.

ಅದಕ್ಕೆ ‘ಥೇಟ್ ಹೀಗೆಯೇ’ ಅಂದಿದ್ದಳು.

ಅವಳ ಅಪ್ಪನೂ ತನ್ನ ಕೈ ತೋಟದ ಒಂದು ಮೂಲೆಯಲ್ಲಿ ಒಂದು ಕೋಳಿ ಗೂಡು ಕಟ್ಟಿಕೊಂಡಿದ್ದಾನಂತೆ.

ಒಂದು ಕೋಳಿಯನ್ನೂ ಕೊಲ್ಲಲು ಬಿಡುವುದಿಲ್ಲವಂತೆ.

ಯಾರೂ ಕೊಲ್ಲದ ಕೋಳಿಗಳು ತಾವಾಗಿಯೇ ವಯಸ್ಸಾಗಿ ಸಾಯುತ್ತವೆ ಎಂದು ನಕ್ಕಿದ್ದಳು.

ಅವಳಿಗೆ ಹೋಗುವ ಮೊದಲು ಭಾರತ ದೇಶದ ಎಲ್ಲವನ್ನೂ ಅರಿತು ಹೋಗಬೇಕೆಂಬ ಹತ್ತಿಕ್ಕಲಾಗದ ಆಸೆ. ಕೊನೆಯ ದಿನ ಇಲ್ಲಿನ ಶೈಲಿಯಲ್ಲಿ ಸೀರೆ ಉಟ್ಟುಕೊಂಡು ನೆರಿಗೆಗಳನ್ನು ಮೊಣಕಾಲವರೆಗೆ ಎತ್ತಿಕೊಂಡು ಆಕಾಶದಲ್ಲಿ ತೇಲುವ ಹಾಗೆ ನಡೆದು ಇದ್ದಕ್ಕಿದ್ದಂತೆ ಎಲ್ಲಿಯೋ ಮಾಯವಾಗಿದ್ದಳು.

2011 11 29_6231ಅವಳು ಮಾಯವಾದರೆ ನಾನಾದರೂ ಯಾಕೆ ಕೊರಗಬೇಕು ಎಂದು ನಡುಮಧ್ಯಾಹ್ನದ ಆ ತಂಗಾಳಿಯಲ್ಲಿ ಬೈಕು ಹತ್ತಿ ಹೋದರೆ ಇನ್ನು ಬೆಟ್ಟ ಹತ್ತಲಾರದೆ ನನ್ನ ಹಳೆಯ ಬೈಕು ಹಿಂದಕ್ಕೆ ಜಾರಲು ತೊಡಗಿತು. ಹಾಗೇ ಮೆಲ್ಲಮೆಲ್ಲಗೆ ಜಾರುತ್ತಾ ಹಿಂದಕ್ಕೆ ಬಂದರೆ ಕೆಳಗಿಂದ ಒಂದಿಷ್ಟು ಕೂಲಿಯಾಳು ಗಂಡು ಹೆಣ್ಣುಗಳು ಸಿಳ್ಳೆ ಹೊಡೆಯುತ್ತಾ, ಹಾಡು ಹೇಳುತ್ತಾ, ಕೆಳಗಿಂದ ಕಾಡು ಹತ್ತಿ ಮೇಲಕ್ಕೆ ಬರುತ್ತಿದ್ದರು. ಅವರ ಕೈಯಲ್ಲಿ ಊಟದ ಬುತ್ತಿ, ಅವರ ಮೈಯಿಂದ ಅಗ್ಗದ ಸಾರಾಯಿಯ ವಾಸನೆ. ಕೇಳಿದರೆ ತಾವು ಆಂದ್ರದ ಕೂಲಿಗಳು ಅಂದರು. ಇಲ್ಲೇ ಕಾಡೊಳಗೆ ವಿಹಾರದ ಹೋಟೆಲೊಂದನ್ನು ಕಟ್ಟುತ್ತಿದ್ದಾರಂತೆ. ದೀಪಾವಳಿ ರಜೆಯಿರುವುದರಿಂದ ಬೆಟ್ಟದ ತುದಿಗೆ ಬುತ್ತಿಯೂಟ ಮಾಡಲು ಹೋಗುತ್ತಿದ್ದಾರಂತೆ. ಇಂತಹ ಕಾಡು, ಇಂತಹ ಹಸಿರು ಅವರ ಊರಲ್ಲಿಲ್ಲವಂತೆ.

ವಾಪಾಸು ಬರುವ ದಾರಿಯಲ್ಲಿ ಹಸಿವಾಗುತ್ತಿತ್ತು. ಸೌದೆ ಆಯುವ ಮಕ್ಕಳು ಪುರುಳೆಗಳನ್ನು ಆಯ್ದು, ಕಟ್ಟುಮಾಡಿ ತಾವು ಕಾಡಿನಿಂದಿಳಿದ ದಾರಿಯನ್ನು ನಿರುಕಿಸುತ್ತ ನಿಂತಿದ್ದರು.‘ಏನು ಮಕ್ಕಳೇ’ ಎಂದು ಕೇಳಿದೆ. ‘ಅಂಕಲ್, ಬೆಂಕಿ’ ಎಂದು ಹೇಳಿದರು. ನೋಡಿದರೆ ಅವರು ನೋಡುತ್ತಿದ್ದ ಜಾಗದಲ್ಲಿ ಸಣ್ಣಗೆ ಬೆಂಕಿ ಏಳುತ್ತಿತ್ತು. ಹಾಗೆ ನೋಡು ನೋಡುತ್ತಿದ್ದಂತೆ ಉರಿಯುತ್ತಾ ಕಾಡನ್ನೇ ನುಂಗಬಲ್ಲ ಬೆಂಕಿ. ‘ಯಾರು ಬೆಂಕಿ ಕೊಟ್ಟವರು? ನಿಮ್ಮ ಯಾರ ಜೇಬಲ್ಲಿ ಬೆಂಕಿಪೆಟ್ಟಿಗೆ ಇದೆ ತೋರಿಸಿ’ ಅಂದೆ. ಅವರೆಲ್ಲ ಅವರ ಚಡ್ಡಿಗಳ ಜೇಬನ್ನು ಬರಿದು ಮಾಡಿ ತೋರಿದರು. ಅದರಲ್ಲೊಬ್ಬ ಪುಟಾಣಿಯ ಹರಿದ ಜೇಬಿನೊಳಗಿಂದ ಖಾಲಿ ಬೆಂಕಿಪೊಟ್ಟಣವೊಂದು ಜಾರಿ ಬಿತ್ತು. ಅದು ಬಿದ್ದೊಡನೆಯೆ ಮಂಕಾದ ಮಕ್ಕಳು ಸೌದೆ ಕಟ್ಟುಗಳನ್ನು ಅಲ್ಲೇ ಬಿಟ್ಟು ಓಡಲು ತೊಡಗಿದರು. ಶಾಲೆಗೆ ಹಾಕುವ ಸಮವಸ್ತ್ರದಲ್ಲೇ ಸೌದೆ ಆಯಲು ಬಂದಿದ್ದ ಸಿಂಬಳ ಬುರುಕ ಕಂದಮ್ಮಗಳು.

DSC_8270ಕಾಡಿಗೆ ಬಿದ್ದ ಬೆಂಕಿ ವಯ್ಯಾರಿಯಂತೆ ಏಳುತ್ತ ಆರುತ್ತ ಉರಿಯುತ್ತ ಕಾಡಿನೊಳಗಡೆ ಹೊಗೆಯೆಬ್ಬಿಸುತ್ತಿತ್ತು.‘ಅಯ್ಯೋ ತಾಯೀ ನಿನ್ನ ಮನೆಯ ಮೇಲಿನ ಕಾಡಿಗೆ ಬೆಂಕಿ ಬಿದ್ದಿದೆ. ನಾನು ಅದನ್ನು ಉಳಿಸಲು ನೋಡುತ್ತಿರುವೆ ’ಎಂದು ಇಲ್ಲಿ ನನ್ನನ್ನು ಚೆನ್ನಾಗಿ ಅರಿತುಕೊಂಡಿರುವ ತಾಯೊಬ್ಬಳ ಬಳಿ ಅರುಹಿದೆ.

‘ಅದಾ ಆ ಪೈರ್ ಎಂಜಿನ್ ಬೆಟ್ಟಹತ್ತಿ ನಿನ್ನ ಬಳಿಗೇ ಬರುತ್ತಿದೆ. ನಿನ್ನ ಜೇಬಲ್ಲೇನಾದರೂ ಬೆಂಕಿಪೆಟ್ಟಿಗೆ ಇದ್ದರೆ ನಿನ್ನನ್ನೂ ಹಿಡಿದುಕೊಳ್ಳುತ್ತಾರೆ. ಆಗ ನಿನಗೆ ದೇವರೇ ಗತಿ. ಇದ್ದರೆ ಅಡಗಿಸಿಡು’ಎಂದು ಗದರಿಸಿದಳು. ‘ಬೆಂಕಿ ನನ್ನ ಜೇಬಲ್ಲೂ, ಎದೆಯಲ್ಲೂ, ಹೊಟ್ಟೆಯಲ್ಲೂ ಇದೆ ’ ಎಂದು ನಕ್ಕೆ.‘ಗಡ್ಡಕ್ಕೆ ಬೆಂಕಿ ಬಿದ್ದರೂ ನಿನಗೆ ತಮಾಷೆ. ಈಗ ಫೋನ್ ಇಡು. ಅವರಿಗೆ ಬೆಂಕಿ ತೋರಿಸು’ ಎಂದು ಆ ತಾಯಿ ಫೋನ್ ಇಟ್ಟಳು.

ನಾನು ಫೈರ್ ಎಂಜಿನನ್ನು ಕಾಯುತ್ತ ನಿಂತಿದ್ದೆ. ಒಂದು ತರಹದ ಬೆಂಕಿ ಕಾಯುವ ಕೆಲಸ. ನಿಂತು ಮತ್ತೆ ಹೊತ್ತಿ ಉರಿದು ಮತ್ತೆ ಮೆಲ್ಲಗಾಗಿ ಮೆಲ್ಲನೆ ಮೇಲೆದ್ದು ಬರುವ ಕಾಡಿನ ಬೆಂಕಿ. ಯಾವಾಗಲೂ ಸುಮ್ಮಗಿರುವ ಮಡಿಕೇರಿ ಆ ಬಿಸಿಲಲ್ಲಿ ಇನ್ನಷ್ಟು ಮೌನವಾಗಿ ಆ ಕಾಡಿನ ಕೆಳಗೆ ಕಾಣಿಸುತ್ತಿತ್ತು. ದೂರದಿಂದ ಧಾವಿಸಿ ಬರುತ್ತಿರುವ ಫೈರ್ ಎಂಜಿನ್ನಿನ ಸದ್ದು ಅಷ್ಟು ದೂರದಿಂದಲೇ ಕೇಳಿಸುತ್ತಿತ್ತು. ಬಳಸು ಬಳಸು ದಾರಿಯಲ್ಲಿ ಬಳುಕುತ್ತಾ ಬರುತ್ತಿರುವ ನೀರು ತುಂಬಿದ ಆ ವಾಹನದ ಸದ್ದು. ಇದೇನು ಕನಸೋ ಹಸಿವೋ, ಕಾಠಿಣ್ಯವೋ ಎಂದು ಅರಿವಾಗದ ಹಾಗೆ ಸಣ್ಣಗೆ ಉರಿಯುತ್ತಿರುವ ಬೆಂಕಿ. ನಾನು ಯಾಕಾದರೂ ಹೀಗೆ ಬದುಕಿರುವೆನೋ ಅನ್ನಿಸುವ ಏಕಾಂತ.

DSC_8291ಬಂದ ಅಗ್ನಿಶಾಮಕ ದಳದವರಿಗೆ ಬೆಂಕಿ ತೋರಿಸಿದೆ. ‘ಈ ಮಡಿಕೇರಿಯಲ್ಲಿ ಇನ್ನು ಇದೇ ಕಥೆ ಸಾರ್, ಮಕ್ಕಳನ್ನು ಕಳಿಸಿ ಅವರ ಕೈಯಿಂದ ಬೆಂಕಿ ಹಾಕಿಸಿ ಸಂಜೆ ಬಂದು ಸೌದೆ ಮಾಡಿಕೊಂಡು ಹೋಗುತ್ತಾರೆ ಬಡವರು’ ಅಂದರು. ನೋಡಿದರೆ ಅಗ್ನಿಶಾಮಕದಳದ ಚಾಲಕ ನನ್ನ ಹಳೆಯ ಶಾಲೆಯ ಗೆಳೆಯ. ‘ಇದೇನು ಮಾರಾಯಾ,ಇಲ್ಲಿ ನೀನಿದ್ದೀಯಾ’ಎಂದು ಅವನ ಕುರಿತು ನಾನೂ, ನನ್ನ ಕುರಿತು ಅವನೂ ಅಚ್ಚರಿಪಟ್ಟು ಹರಟಲು ತೊಡಗಿದೆವು. ಅಗ್ನಿಶಾಮಕ ದಳವನ್ನು ಕಾಣಲೆಂದೇ ಕಾಯುತ್ತಿದ್ದ ಆ ಬೆಂಕಿಯೂ ಅಷ್ಟು ಹೊತ್ತಿಗೆ ನಂದಲು ತೊಡಗಿತ್ತು.

ಆಮೇಲೆ ಬಂದು ಒಂದು ದೊಡ್ಡ ನಿದ್ದೆ ಹೋದೆ. ಎದ್ದು ನೋಡಿದರೆ ಇಡಿಯ ಮಡಿಕೇರಿ ಸಂಜೆಯ ಬೆಳಕಲ್ಲಿ ನಿಗಿನಿಗಿ ಹೊಳೆಯುತ್ತಿತ್ತು. ಕೈಗೆ ಕೈ ಕೋಸಿ ಕನಸಲ್ಲಿ ನಡೆಯುತ್ತಿರುವವರಂತೆ ಕಣ್ಣಲ್ಲಿ ಕಣ್ಣಿಟ್ಟು ನಡೆಯುತ್ತಿರುವ ನವ ವಿವಾಹಿತರು, ‘ಸಾರ್ ಇಲ್ಲಿ ತರಕಾರಿ ಹೋಟೆಲ್ ಎಲ್ಲಿ ಸಿಗುತ್ತದೆ?’ಎಂದು ಊರೆಲ್ಲ ಅಲೆದು ಸುಸ್ತಾಗಿ ಕಳಾಹೀನರಾಗಿ ಹೋಗಿರುವ ನಡುವಯಸ್ಸಿನ ಸಸ್ಯಾಹಾರಿ ದಂಪತಿಗಳು, ಸಂಜೆಯ ಬೆಳಕಲ್ಲಿ ಕೆಂಪು ನಿಲುವಂಗಿ ತೊಟ್ಟು ನಡೆಯುತ್ತಿರುವ ಟಿಬೆಟನ್ ಕ್ಯಾಂಪಿನ ಬೌದ್ಧ ಬಿಕ್ಷುಗಳು, ಏನನ್ನೋ ಅರಸುತ್ತಿರುವಂತೆ ಊರೆಲ್ಲ ತದೇಕಚಿತ್ತರಾಗಿ ಓಡಾಡುತ್ತಿರುವ ವಿದೇಶೀ ಪ್ರವಾಸಿಗರು.

ನಾನು ಯಾವುದೋ ಮಲಯಾಳೀ ಹೋಟೆಲ್ಲೊಂದಕ್ಕೆ ಹೊಕ್ಕು ಕಪ್ಪು ಚಾ ತರಲು ಹೇಳಿ ಬೆಂಕಿ ಬಿದ್ದ ಹಾಗೆ ಕಾಣಿಸುತ್ತಿದ್ದ ಸಂಜೆಯ ಆಕಾಶವನ್ನು ನೋಡುತ್ತ ತುಂಬ ಹೊತ್ತು ಕೂತಿದ್ದೆ.DSC_8019(12 Nov 2012)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s