ಹೆಣ್ಣುಕೋಳಿಯ ವೃದ್ದಾಪ್ಯದ ದಿನಗಳು

2012 08 08_7438ಮಡಿಕೇರಿಯಿಂದ ಮಂಗಳೂರಿಗೆ ಹೋಗುವ ಕಡಿದಾದ ದಾರಿಯಲ್ಲಿ ಸ್ವಲ್ಪ ಇಳಿದರೆ ಈ ಜಾಗ ಬರುತ್ತದೆ.

ಒಂದು ತುಕ್ಕು ಹಿಡಿದು ಹಳೆಯದಾದ ಅಕ್ಕಿಯ ಮಿಲ್ಲು, ಒಂದೆರೆಡು ಪುಡಿ ಅಂಗಡಿಗಳು ಮತ್ತು ಹೊಸದಾಗಿ ಆರಂಭಗೊಂಡಿರುವ ಒಂದು ವಿಹಾರಧಾಮ ಮತ್ತು ಯಾರೋ ಹಳೆಯ ಕಾಲದಲ್ಲಿ ನೆಟ್ಟು ಈಗ ಯಾರಿಗೂ ಬೇಡವಾಗಿ ಆಕಾಶದೆತ್ತರಕ್ಕೆ ನಿಂತಿರುವ ಅಡಿಕೆ ಮರಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ.

ನೀವು ಸುಯ್ಯೆಂದು ಇಳಿದು ಹೋದರೆ ಇದೊಂದು ಇಳಿಜಾರು ಅಷ್ಟೇ.

ನೀವು ಕೊಂಚ ನಿಧಾನಕ್ಕೆ ಹೋದರೆ ಇದೊಂದು ನಯನ ಮನೋಹರ ಗ್ರಾಮ.

ನೀವು ಇನ್ನೂ ನಿಧಾನಿಸಿ ಒಂದೊಂದು ಮನೆಯೊಳಕ್ಕೆ ಹೊಕ್ಕು ಹೊರಬಂದು ನಡೆಯುತ್ತಾ ಹೋದರೆ ಇಲ್ಲಿ ಒಂದೊಂದು ಕತೆ.ಒಂದೊಂದು ಬೇಸರ ಮತ್ತು ಒಂದೊಂದು ತಮಾಷೆ!

DSC_0037ಈ ಗ್ರಾಮದ ಅಂಗಡಿಗಳು ಕಳೆದು, ಮನೆಗಳು ಕಳೆದು ಮುಂದಕ್ಕೆ ಇರುವುದು ಬರೀ ಕಾಡು ಎಂದುಕೊಂಡು ನೀವು ಹೊರಟರೆ ಬಲ ಬದಿಗೆ ಸಣ್ಣ ಸಣ್ಣ ಮೆಟ್ಟಿಲುಗಳ ಕಡಿದಾದ ದಾರಿಯೊಂದು ಮೇಲಕ್ಕೆ ಬೆಟ್ಟ ಹತ್ತಿ ಹೋಗುವುದು ನಿಮಗೆ ಕಾಣಿಸುತ್ತದೆ,

ಆ ಮಣ್ಣಿನ ಮೆಟ್ಟಿಲುಗಳ ಬದಿಯಲ್ಲಿ ಇದೀಗ ತಾನೇ ನೆಟ್ಟಂತಿರುವ ಸೇವಂತಿಗೆ, ದಾಸವಾಳದ ಗಿಡಗಳು ಮತ್ತು ಒಂದೆರೆಡು ಹೂ ಬಿಟ್ಟಿರುವ ಗುಲಾಬಿ ಗಿಡಗಳನ್ನು ಕಂಡು ನಿಮ್ಮಲ್ಲಿರುವ ಜೀವನ ಪ್ರೀತಿ ಇನ್ನೂ ಉಕ್ಕಿ ಹರಿಯಲು ತೊಡಗುತ್ತದೆ.

ಮೈಯೆಲ್ಲಾ ಬೂದಿ ಮೆತ್ತಿಕೊಂಡಂತಿರುವ ದೊಡ್ಡ ಕಜ್ಜಿ ನಾಯಿಯೊಂದು ಮೈಕೊಡವಿ ಮಹಾಹುಲಿಯಂತೆ ಎದ್ದು ಬಂದು ನಿಮ್ಮನ್ನು ಕೊಂಚಹೊತ್ತು ಅಧೀರನನ್ನಾಗಿ ಮಾಡುತ್ತದೆ.

ಹೆದರಿದ ನಿಮ್ಮನ್ನು ಕಂಡ ಆ ಪಾಪದ ನಾಯಿ ತಾನೂ ಹೆದರಿ ಹಿಮ್ಮುಖವಾಗಿ ಜೀವ ಭಯದಿಂದ ಓಡಲು ತೊಡಗುತ್ತದೆ.

ಆಗ ನಿಮ್ಮಲ್ಲಿ ಎಂತಹದೋ ಒಂದು ಮಂದಹಾಸ!

ಸಮಸ್ತ ಜೀವಸಂಕುಲದಲ್ಲಿ ಮಾನವ ಜನ್ಮವೇ ದೊಡ್ಡದು.ಉಳಿದ ಜೀವಿಗಳು ಮೊದಮೊದಲು ನಮ್ಮನ್ನು ಎಷ್ಟು ಹೆದರಿಸಿದರೂ ಕೊನೆಗೆ ಸೋತು ಶರಣಾಗಿ ನಮ್ಮ ಊಳಿಗದ ಪ್ರಾಣಿಗಳಾಗಿ ಬದುಕಬೇಕಾದವರು ಎಂಬ ಸತ್ಯ ನಿಮ್ಮನ್ನು ಬದುಕಿಸುತ್ತದೆ.

ಹಾಗೇ ಮುಂದಕ್ಕೆ ಮೆಟ್ಟಲು ಹತ್ತಿದರೆ ಮೇಲೊಂದು ಗುಡಿಸಲು.

ಆ ಗುಡಿಸಿಲಿನ ಮುಂದೆ ಒಬ್ಬ ಕಮ್ಮಾರನ ಕುಲುಮೆ.ಆರಿ ಹೋಗಿರುವ ಕುಲುಮೆಯ ತಿದಿ ಒತ್ತುತ್ತಾ, ಕಬ್ಬಿಣ ಕಾಯಿಸುತ್ತಾ ಕತ್ತಿಯನ್ನೋ ಪಿಕ್ಕಾಸಿಯನ್ನೋ ಬಡಿಯುತ್ತಿರುವ ಆತ ಒಂದು ಅಸಹಾಯಕ ನಗುವೊಂದನ್ನು ನಿಮಗಾಗಿ ಚೆಲ್ಲುತ್ತಾನೆ.

ಗೋಣಿಯಲ್ಲಿ ಉಳಿದಿರುವ ಒಂದಿಷ್ಟು ಇದ್ದಿಲು.ಮಾಡಲು ಉಳಿದಿರುವ ಒಂದಿಷ್ಟು ಹತ್ಯಾರುಗಳು.ತಲೆಯೊಳಗೆ ತಾನು ಮಾಡುತ್ತಿರುವ ಈ ಕೆಲಸ ಎಷ್ಟು ಶ್ರೇಷ್ಟ ಆದರೆ ಉಳಿದ ಮನುಷ್ಯರಿಗೆ ಇದು ಎಷ್ಟು ನಿಕೃಷ್ಟ ಎಂಬ ಸಣ್ಣ ಬೇಸರ.

DSC_0054ಆತನ ಕತೆ ಕೇಳಿ ನೋಡಿ.

ಆತ ಎಂತಹ ಕಥೆಗಾರ ಆದರೂ ಎಷ್ಟು ಕಷ್ಟ ಜೀವಿ ಎಂಬ ಅರಿವಾಗುತ್ತದೆ.

ಆತನ ಒಂದೊಂದು ಮಾತುಗಳೂ ಕತ್ತಿಗೆ ಬಡಿಯುತ್ತಿರುವ ಸುತ್ತಿಗೆಯ ಏಟುಗಳಂತೆ ಕೇಳಿಸಲು ತೊಡಗುತ್ತವೆ.

ಮನುಕುಲದ ಚರಿತ್ರೆ, ಮನುಷ್ಯ ಕಲ್ಲಿಗೆ ಕಲ್ಲು ಬಡಿದು ಬೆಂಕಿ ಉಂಟು ಮಾಡಿದ ಕತೆ, ಆನಂತರ ಆತ ಕಬ್ಬಿಣ ಕಂಡು ಹಿಡಿದದ್ದು ಎಲ್ಲವನ್ನೂ ಆತ ಕಬ್ಬಿಣ ಕಾಯಿಸುತ್ತಲೇ ವಿವರಿಸುತ್ತಾನೆ.

ನೀವೂ ಆತನೊಡನೆ ಬೆಂಕಿಯಲ್ಲಿ ಬೆಂದು ತಣ್ಣಗಾಗಿ ಗಟ್ಟಿಯಾಗಲು ನೀರಿಗಾಗಿ ಕಾಯುತ್ತೀರಿ.

ಅಷ್ಟು ಹೊತ್ತಿಗೆ ಶಾಲೆಯಿಂದ ಬಂದ ಆತನ ಮಗ ಗುಡಿಸಲ ಒಳಕ್ಕೆ ಹೊಕ್ಕು ತನ್ನ ತಂದೆಗೂ ನಿಮಗೂ ಕುಡಿಯಲು ನೀರು ತಂದುಕೊಡುತ್ತಾನೆ.

ಕಬ್ಬಿಣದ ಕಮ್ಮಾರನಾದ ತಂದೆಯ ಮೂಗಿನ ಹಾಗೇ ಇರುವ ಆತನ ಮೂಗು.

ಆದರೆ ತನ್ನ ಮಗ ಜೀವ ಬಿಟ್ಟರೂ ಪರವಾಗಿಲ್ಲ.ಆತ ತನ್ನ ಹಾಗೆ ಕಮ್ಮಾರನಾಗುವುದು ಬೇಡ ಎಂದು ತಂದೆ ನೀರು ಕುಡಿಯುತ್ತಾ ಹೇಳುತ್ತಾನೆ.ಯಾಕೆ ಅಂತ ಕೇಳಿ ನೋಡಿ.

‘ಸ್ವಾಮೀ ಕಬ್ಬಿಣ ಕಾಯಿಸಲು ಮರದ ಮಸಿ ಸಿಗುವುದಿಲ್ಲ.ಎಲ್ಲಿಂದಾದರೂ ಕಾಡಿ ಬೇಡಿ ತಂದರೆ ಫಾರೆಸ್ಟಿನವರು ಕೇಸು ಹಾಕುತ್ತಾರೆ.ನನ್ನ ಮಗ ಓದಿ ದೊಡ್ಡವನಾಗಿ ಪೋಲೀಸನಾದರೂ ಪರವಾಗಿಲ್ಲ.ಆದರೆ ಕಬ್ಬಿಣದ ಕತ್ತಿ ಮಾಡಲು ಹೋಗಿ ಕಳ್ಳನಾಗುವುದು ಬೇಡ’ ಎಂದು ಆತ ಸರಳ ಸತ್ಯವೊಂದನ್ನು ಹೇಳಿದ್ದು ನಿಮಗೆ ಆ ಹೊತ್ತಲ್ಲಿ ಮಹಾ ತತ್ವಜ್ಞಾನದಂತೆ ಕೇಳಿಸುತ್ತದೆ.

2011 12 11_6376ನೀವೇನಾದರೂ ಕವಿಯಾಗಿದ್ದು ಅಲ್ಲಿ ಮಳೆ ಏನಾದರೂ ಬೀಳಲು ಶುರುವಾದರಂತೂ ಮುಗಿಯಿತು.ಕೇಳುವುದೇ ಬೇಡ. ಸುರಿಯುತ್ತಿರುವ ಆ ಮಳೆ, ಆ ಕುಲುಮೆಯ ತುದಿಯಿಂದ ಹಾರುತ್ತಿರುವ ಬೆಂಕಿಯ ಆ ಕಿಡಿಗಳು,ಕಬ್ಬಿಣಕ್ಕೆ ಆ ಕಮ್ಮಾರ ಬಡಿಯುತ್ತಿರುವ ಆ ಸದ್ದಿನ ಸಂಗೀತ.ಎಲ್ಲವೂ ಸೇರಿ ಆ ಸ್ಥಳದಲ್ಲೇ ಮಹಾಕಾವ್ಯವೊಂದು ಹುಟ್ಟಿದರೆ ದಯವಿಟ್ಟು ನನ್ನನ್ನು ಬೈಯ್ಯಬೇಡಿ.

ನೀವು ಅಕಸ್ಮಾತ್ ಕವಿ ಆಗಿರದಿದ್ದರೆ ಸಾವರಿಸಿಕೊಂಡು ಅಲ್ಲಿಂದ ಮೆಲ್ಲಗೆ ಎದ್ದು ಬರುತ್ತೀರಿ.

ಎದ್ದು ಬಂದು ಮುಂದೆ ಒಂದು ಹೋಟೆಲ್ಲು ಇದೆ.

ಅಲ್ಲಿ ಸಿಗುವುದು ಚಾ ಮತ್ತು ಬನ್ಸ್ ಮಾತ್ರ.ಆ ಬನ್ಸ್ ಅನ್ನು ಚಾದಲ್ಲಿ ಮುಳುಗಿಸಿ ನೀವು ಇದೀಗ ಕಂಡು ಬಂದ ಕಮ್ಮಾರನ ಬಗ್ಗೆ ಆ ಹೋಟೆಲ್ಲಿನವನಲ್ಲಿ ಕೇಳಿ ನೋಡಿ.

‘ಅಯ್ಯೋ ಅವನು ಮಹಾ ಸುಳ್ಳ ಸಾರ್.ನಂಬಬೇಡಿ.ಅವನಿಗೆ ಕೆಲಸವೇ ಬರುವುದಿಲ್ಲ.ಬರೀ ಸುಳ್ಳು ಹೇಳುತ್ತಾ ತಿರುಗಾಡುತ್ತಾನೆ ಈ ಕಾಲದಲ್ಲಿ ಸತ್ಯ ಹೇಳುವವರು ಯಾರಿದ್ದಾರೆ.ಎಲ್ಲರೂ ಕಳ್ಳರು ಎಲ್ಲರೂ ಸುಳ್ಳರು ಎಲ್ಲರೂ ಕುಡುಕರು.’ ಎಂದು ಚೀರಾಡಲು ಶುರು ಮಾಡುತ್ತಾನೆ.

ಈಗ ಒಂದು ತಿಂಗಳ ಹಿಂದಿನ ತನಕ ಈತನೂ ದೊಡ್ಡ ಕುಡುಕನಾಗಿದ್ದನಂತೆ.

ಈತನೇ ಹೇಳುತ್ತಾನೆ.

ಎಷ್ಟು ದೊಡ್ಡ ಕುಡುಕ ಅಂದರೆ.ಸಂಜೆ ಐದರ ಹೊತ್ತಿಗೆ ಐದನೇ ಮೈಲುಕಲ್ಲಿನ ಬಳಿ ಕುಡಿದು ಬಿದ್ದಿರುತ್ತಿದ್ದ ಈತನ ದೇಹ ರಾತ್ರಿ ಒಂಬತ್ತು ಗಂಟೆಯ ಹೊತ್ತಿಗೆ ಹತ್ತನೇ ಮೈಲುಕಲ್ಲಿನ ಬಳಿ ಕುಡಿದು ಬಿದ್ದಿರುತ್ತಿತ್ತಂತೆ.

ಕೇಳಿದರೆ ಇವನದೂ ದೊಡ್ಡ ಕಥೆಯೇ.ಈಗ ಈತ ಮದ್ಯವರ್ಜನ ಶಿಭಿರಕ್ಕೆ ಸೇರಿ ಕುಡಿಯುವುದನ್ನು ಬಿಟ್ಟು ಹೋಟೆಲ್ಲಿಗೆ ಬಂದವರೊಡನೆ ಗಂಟೆಗಟ್ಟಲೆ ನೈತಿಕತೆಯ ಭಾಷಣ ಹೊಡೆಯುತ್ತಾನೆ.

2012 04 10_3037ನೀವೇನಾದರೂ ಕೀಟಲೆಯ ಸ್ವಭಾವದವನಾಗಿದ್ದರೆ ‘ಅಯ್ಯೋ ನೀನು ಕುಡುಕನಾಗಿಯೇ ಇರಬೇಕಿತ್ತು ಮಾರಾಯ.ಹಾಗೆ ಇದ್ದಿದ್ದರೆ ಮೈಲುಕಲ್ಲಿನ ಬಳಿ ಅಲುಗಾಡದೇ ಬಿದ್ದಿರುತ್ತಿದ್ದ ನಿನ್ನ ದೇಹಕ್ಕೆ ನಮಸ್ಕರಿಸಿ ಮುಂದೆ ಹೋಗುತ್ತಿದ್ದೆ.ಹೀಗೆ ನಿನ್ನ ಭಾಷಣ ಕೇಳುವ ದೌರ್ಭಾಗ್ಯ ನನಗೆ ಬರುತ್ತಿರಲಿಲ್ಲ’ ಎಂದು ಮುಂದೆ ಹೋಗುತ್ತಿದ್ದಿರಿ.

ಆದರೆ ನೀವೂ ಆತನ ಹಾಗೇ ವಿವೇಕಶಾಲಿಯಾಗಿದ್ದರೆ ಆತನ ಮಾತು ಕೇಳುತ್ತಾ ಇನ್ನೊಂದೆರಡು ಬನ್ಸ್ ಗಳನ್ನು ತಿಂದು ಮುಗಿಸಿಯೂ ಅಲ್ಲೇ ಕುಳಿತಿರುತ್ತೀರಿ!

ನೀವು ಈ ದಾರಿಯಲ್ಲಿ ಯಾಕೆ ಬಂದಿದ್ದೀರಿ ಎಂಬುದು ನಿಮಗೂ ಮರೆತು ಹೋಗಿರುತ್ತದೆ.

ಹಾಗಿರುತ್ತದೆ ಆತನ ನೈತಿಕತೆಯ ಮಾತುಗಳು.

ಹಾಗೇ ಇದೆ ದಾರಿ ತಪ್ಪಿಸುವ ಇಳಿಜಾರಿನ ಈ ಹಾದಿ.

ನನ್ನ ಉದಾಹರಣೆಯನ್ನೇ ನೋಡಿ.ನಾನು ಬರೆಯಲು ಹೊರಟಿದ್ದು ಇಲ್ಲಿ ಇರುವ ಮಹಿಳೆಯೊಬ್ಬರ ಹೇಂಟೆ ಕೋಳಿಯೊಂದರ ಕಥೆಯನ್ನು.

ಈ ಸುತ್ತ ಮುತ್ತ ಬದುಕಿ ಉಳಿದಿರುವ ಎಲ್ಲ ಹೇಂಟೆಗಳಿಗಿಂತಲೂ ವಯಸ್ಸಿನಲ್ಲಿ ಹಿರಿಯದಾಗಿರುವ ಈ ಹೇಂಟೆಗೆ ಈಗ ಹದಿಮೂರು ವರ್ಷಗಳು ತುಂಬಿ ಹದಿನಾಲ್ಕನೇ ವಯಸ್ಸು ನಡೆಯುತ್ತಿದೆ.

ನಡೆಯುವಾಗ ಸ್ವಲ್ಪ ಕುಂಟಿಕೊಂಡು ನಡೆಯುತ್ತದೆ ಎಂಬುದನ್ನು ಬಿಟ್ಟರೆ ಉಳಿದಂತೆ ಆರೋಗ್ಯಕರವಾಗಿಯೇ ಇರುವ ಈ ಹೇಂಟೆ ಇದುವರೆಗೆ ತನ್ನ ಮರಿಗಳಿಂದ ಹಾಗೂ ಮೊಟ್ಟೆಗಳಿಂದ ಕಳೆದ ಹದಿಮೂರು ವರ್ಷಗಳಿಂದ ಸಾವಿರಾರು ರೂಪಾಯಿಗಳನ್ನು ಸಂಪಾದಿಸಿದೆ.

ಅದರ ಸಂಪಾದನೆಯಿಂದ ಈ ಮಹಿಳೆ ಒಂದು ರೇಡಿಯೋವನ್ನೂ, ಒಂದು ಟಿವಿ ಯನ್ನೂ, ಒಂದು ಫ್ಲಾಸ್ಕನ್ನೂ ಕೊಂಡು ಕೊಂಡಿದ್ದಾರೆ.ಇ

ವರ ಮಕ್ಕಳು ಮೊಮ್ಮಕ್ಕಳು ಹಬ್ಬಕ್ಕೆ ಕೊಂಡುಕೊಂಡಿರುವ ಬಟ್ಟೆಬರೆಯೆಲ್ಲವೂ ಈ ಕೋಳಿಯ ಮರಿಗಳನ್ನೂ ಮೊಟ್ಟೆಗಳನ್ನೂ ಮಾರಿದ ಹಣದಿಂದ ಕೊಂಡುಕೊಂಡವುಗಳಾಗಿವೆ.

‘ನನ್ನ ಹೇಂಟೆ ಕೋಳಿಗೆ ಆಯಸ್ಸಿಗೂ ಮೀರಿದ ವಯಸ್ಸಾಗಿದೆ.ಕಳೆದ ವರ್ಷ ದೊಡ್ಡ ಕಾಡುಮಾವಿನ ಕಾಯಿಯಷ್ಟು ದೊಡ್ಡ ಮೊಟ್ಟೆಯೊಂದನ್ನು ಇಟ್ಟ ಮೇಲೆ ಅದು ಇನ್ನು ಮೊಟ್ಟೆ ಇಟ್ಟಿಲ್ಲ.ಇನ್ನು ಇಡುವುದೂ ಇಲ್ಲ.ಅದನ್ನು ಮುಟ್ಟಲು ಹೋದರೆ ಅದರ ಎದೆಯಿಂದ ಎಂತದೋ ಆರ್ತನಾದದಂತೆ ಕೊರಕೊರ ಸದ್ದು ಕೇಳಿಸುತ್ತದೆ.ಆಗ ನನಗೆ ಅದು ಇನ್ನು ಇರುತ್ತದೋ ಎಂದು ಹೆದರಿಕೆಯಾಗುತ್ತದೆ.ಅದರ ನೆನಪಿಗೆ ಒಂದು ಫೋಟೋ ತೆಗೆದು ತೆಗೆದುಕೊಡಿ’ ಎಂದು ಈಕೆ ಯಾರನ್ನೋ ಕೇಳಿದ್ದರು.

ಅದನ್ನು ಕೇಳಿದ ಅವರು ನನ್ನಲ್ಲಿ ಹೇಳಿದ್ದರು.

ನಾನು ಅದರ ಫೋಟೋ ತೆಗೆಯಲು ಹೋದರೆ ಆ ವಯೋವೃದ್ದ ಹೇಂಟೆ ಎಂತದೋ ಒಂದು ಸಂಕಟವನ್ನು ತಲೆಯೊಳಗೆ ಇಟ್ಟುಕೊಂಡು ಮನೆಯ ಮುಂದೆ ಅಡ್ಡಾಡುತ್ತಿತ್ತು.

ಕಾಲು ನೋವಿನ ಸಂಕಟವನ್ನು ಕಣ್ಣುಗಳಿಂದಲೇ ತಿಳಿಯಪಡಿಸುವ ವೃದ್ದೆಯೊಬ್ಬಳ ಅಸಹಾಯಕ ನೋವು ಆ ಹೇಂಟೆಯ ಕಣ್ಣಲ್ಲೂ ಕಾಣಿಸುತ್ತಿತ್ತು.

ಅದರ ಕಣ್ಣ ಮುಂದೆಯೇ ಅವನತಿ ಹೊಂದಿದ ಅದರ ಮಕ್ಕಳು, ಮರಿ ಮಕ್ಕಳು, ಮರಿಮರಿ ಮಕ್ಕಳು. ಅದರ ಕಣ್ಣ ಮುಂದೆಯೇ ಅದರ ಸಂತತಿಯನ್ನು ತಿಂದು ತೇಗಿ ವಿಸರ್ಜಿಸಿ ಹೋದ ನೆಂಟರು ಇಷ್ಟರು.

ತನಗೆ ಮನುಷ್ಯರ ಬಗ್ಗೆ ಎಲ್ಲ ತಿಳಿದಿದೆ ಎಂಬಂತೆ ವಿವೇಕದಲ್ಲಿ ಆಡುತ್ತಿದ್ದ ಅದರ ತಲೆ.

ನೋಡಿ ಎಲ್ಲವನ್ನೂ ನೋಡಿ ಬಂದು ಅದರ ಕುರಿತು ಬರೆಯಲು ಹೊರಟವನು ದಾರಿ ತಪ್ಪಿ ಏನೆಲ್ಲಾ ಬರೆದಿರುವೆ!2012 08 08_7433

(12 August 2012)

(Photos by the author)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s