ಖಾನ್ ಸಾಹೇಬರು ಹೇಳಿದ ಬಿರಿಯಾನಿಯ ಕಥೆ

 

5829_10151287869638246_828821074_nನನಗೆ ಇತ್ತೀಚೆಗೆ ತೀರಾ ತಲೆ ತಿನ್ನುತ್ತಿದ್ದ ವಿಷಯ ತೀರಿಹೋಗಿರುವ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಬಿರಿಯಾನಿ ತಿನ್ನುತ್ತಿದ್ದರಾ ಎಂಬುದಾಗಿತ್ತು.

ಏಕೆಂದರೆ ನನಗೆ ಪರಿಚಯವಿದ್ದ ಬಿರಿಯಾನಿ ಮಾಡುವ ಅಡುಗೆ ಅಜ್ಜಿಯೊಬ್ಬಳು ೧೯೭೮ನೇ ಇಸವಿಯಲ್ಲಿ ಮಡಿಕೇರಿಗೆ ಆತ್ಮಕತೆ ಬರೆಯಲು ಬಂದಿದ್ದ ಇಂದಿರಾಗಾಂಧಿಗೆ ತಾನು ಕೈಯ್ಯಾರೆ ಬಿರಿಯಾನಿ ಮಾಡಿ ಕಳಿಸಿದ್ದೆ ಮತ್ತು ಆ ಬಿರಿಯಾನಿ ತಿಂದ ಇಂದಿರಾಗಾಂಧಿಯವರು ತನ್ನ ಅಡುಗೆಯನ್ನು ಹಾಡಿ ಹೊಗಳಿದ್ದರು ಎಂದು ತನ್ನನ್ನು ತಾನೇ ಹೊಗಳಿಕೊಂಡಿದ್ದಳು.

ಆಕೆ ಹೇಳಿದ ಈ ಇತಿಹಾಸಕ್ಕೆ ಲಿಖಿತ ದಾಖಲೆಗಳೇನಾದರೂ ಇರಬಹುದೇ ಎಂದು ನಾನು ಸಾಕಷ್ಟು ಓಡಾಡಿದರೂ ಅಂತಹದೇನೂ ಸುಲಭದಲ್ಲಿ ಸಿಲುಕಿರಲಿಲ್ಲ.

ಅಜ್ಜಿಯನ್ನೇ ಕೇಳೋಣವೆಂದರೆ ಗಾಳಿ ಮಳೆಗೆ ಸಿಲುಕಿ ಬಹಳ ಕಾಲದ ಹಿಂದೆಯೇ ಆಕೆಯೂ ತೀರಿಹೋಗಿದ್ದಳು.

ಅಂದು ಆ ಅಜ್ಜಿಯ ಕೈಲಿ ಬಿರಿಯಾನಿ ಮಾಡಿಸಿಕೊಂಡು ಇಂದಿರಾಗಾಂಧಿಗೆ ಕೊಟ್ಟು ಬಂದವರು ಜಾಣಮರೆವನ್ನು ತೋರಿಸಿ ‘ನಿನಗೆಲ್ಲೋ ಅರಳುಮರುಳಾಗಿರಬೇಕು, ಇಂದಿರಾ ಗಾಂಧಿ ಮಡಿಕೇರಿಗೆ ಬಂದಿದ್ದಾಗ ನೀನು ಹುಟ್ಟಿಯೇ ಇರಲಿಲ್ಲ’ ಎಂದು ತಾವೆಷ್ಟು ಹಿರಿಯರು ಎಂದು ತೋರಿಸಿಕೊಳ್ಳುತ್ತಿದ್ದರು.

ಇಂತಹ ಹೊತ್ತಲ್ಲೇ ನಾನು ಎಫ್.ಎಂ.ಖಾನ್ ಸಾಹೇಬರನ್ನು ನೋಡಲು ಹೋಗಿದ್ದು.

ನಾವು ಬಾಲಕರಾಗಿರುವಾಗ ಶ್ರೀಮತಿ ಇಂದಿರಾಗಾಂಧಿಯವರನ್ನು ದೆಹಲಿಯಿಂದ ಮಡಿಕೇರಿಗೆ ಕರೆದುಕೊಂಡು ಬಂದವರು ಇವರೇ ಎಂದು ಅದು ಹೇಗೋ ನನ್ನ ಅರಿವಿಗೆ ಬರಲಾಗಿ ಅವರನ್ನು ಹುಡುಕಲು ತೊಡಗಿದ್ದೆ.

ಅವರು ಇಲ್ಲೇ ಕಾಫಿ ಕಾಡಿನ ನಡುವೆ ಇರುವ ಪುರಾತನ ಬಂಗಲೆಯೊಂದರೊಳಗೆ ಹಳೆಯ ಹುಲಿಯಂತೆ ಬದುಕುತ್ತಿದ್ದಾರೆ ಎಂದು ಯಾರೋ ಹೇಳಿದ್ದರು.

67916_10151287867743246_1787605216_nಅವರು ನಿಮಗೆ ಫೋನಿನಲ್ಲಾದರೂ ಸಿಗುವುದು ಕಷ್ಟ ಎಂದೂ ಹೆದರಿಸಿದ್ದರು.

ಹೆದರಿಕೊಂಡೇ ಫೋನ್ ಮಾಡಿದರೆ ಖಾನ್ ಸಾಹೇಬರು, ‘ಯಾರೂಊ’ಎಂದು ಕ್ಷೀಣವಾಗಿ ಕೇಳಿದರು.

ಅವರ ಆ ಸದ್ದು ಹಳೆಯ ಹುಲಿಯೊಂದು ಮಗ್ಗಲು ಬದಲಾಯಿಸುವಾಗ ಮಾಡುವ ಸದ್ದಿನಂತಿತ್ತು.

‘ನಾನು ನಿಮ್ಮ ಹಳೆಯ ಅಭಿಮಾನಿ’ ಎಂದು ಹೇಳಿದೆ.

ಅವರ ಹಳೆಯ ಸಾಹಸದ ಕಥೆಗಳನ್ನು ಕೇಳಿ ಅವರ ಕುರಿತು ಅಭಿಮಾನವನ್ನೂ, ಒಂದು ರೀತಿಯ ಸಿಟ್ಟನ್ನೂ ಏಕಕಾಲದಲ್ಲಿ ಬೆಳೆಸಿಕೊಂಡಿದ್ದ ನನಗೆ ಈ ಹೊತ್ತಲ್ಲಿ ಸಿಟ್ಟನ್ನು ಮರೆತು ಅಭಿಮಾನವನ್ನು ಮಾತ್ರ ಉಳಿಸಿಕೊಳ್ಳುವುದು ಅನಿವಾರ್ಯವಾಗಿತ್ತು.

ಏಕೆಂದರೆ ಇಂದಿರಾಗಾಂಧಿಯವರು ನನ್ನ ಪರಿಚಯದ ಅಡುಗೆ ಅಜ್ಜಿ ಮಾಡಿದ್ದ ಬಿರಿಯಾನಿಯನ್ನು ನಿಜವಾಗಿಯೂ ಸವಿದಿದ್ದರೇ ಅಥವಾ ಅವರ ಹೆಸರಲ್ಲಿ ಬೇರೆ ಯಾರಾದರೂ ಮುಕ್ಕಿದ್ದರೇ ಎಂಬುದನ್ನು ಅರಿತುಕೊಳ್ಳುವುದು ಚಾರಿತ್ರಿಕವಾಗಿ ನನಗೆ ಮಹತ್ವದ್ದಾಗಿತ್ತು.

ಒಂದು ಮಂಗಳವಾರ ಪೂರ್ವಾಹ್ನ ಹನ್ನೊಂದು ಘಂಟೆಗೆ ಸರಿಯಾಗಿ ನಾನು ಖಾನರನ್ನು ಅವರ ಬಂಗಲೆಯಲ್ಲಿ ಭೇಟಿಯಾದೆ.

‘ನಾನು ಬೇರೆ ಏನಕ್ಕೆ ಬೆಲೆಕೊಡದಿದ್ದರೂ ಸಮಯಕ್ಕೆ ಮಾತ್ರ ಬೆಲೆಕೊಡುತ್ತೇನೆ’ ಎಂದು ಖಾನ್ ಸಾಹೇಬರು ನನ್ನನ್ನು ಹೆದರಿಸಿದ್ದರು.

ನಾನು ಸಮಯಕ್ಕೆ ಸರಿಯಾಗಿ ಹೋಗಿ ಅವರ ಬಂಗಲೆಯ ಹಳೆಯ ಕಬ್ಬಿಣದ ಗೇಟಿನ ಮುಂದೆ ನಿಂತದ್ದು ಅವರಿಗೆ ಖುಷಿಯಾಗಿತ್ತು.

ಮೊದಮೊದಲು ಹಳೆಹುಲಿಯೊಂದು ತೊಂಡು ದನವೊಂದನ್ನು ಅನುಮಾನದಲ್ಲಿಯೇ ನೋಡುವ ಹಾಗೆ ನೋಡಿದ ಖಾನ್ ಸಾಹೇಬರು ಆನಂತರ ನನ್ನೊಡನೆ ಮೂರು ಗಂಟೆಗಳ ಕಾಲ ನಿರಂತರ ಮಾತನಾಡಿದರು.

ಪೆದ್ದುಪೆದ್ದಾಗಿ ಕ್ಯಾಮರಾ ಹಿಡಿದುಕೊಳ್ಳುತ್ತಿದ್ದ ನನಗೆ ಸರಿಯಾಗಿ ಕ್ಯಾಮರಾ ಹಿಡಿದುಕೊಳ್ಳುವುದು ಹೇಗೆ ಎಂದು ತೋರಿಸಿಕೊಟ್ಟರು.

ಹಳೆಯ ಲುಂಗಿಯನ್ನೂ ಬನಿಯನ್ನನ್ನೂ ಹಾಕಿಕೊಂಡಿರುವ ತನ್ನ ಫೋಟೋ ತೆಗೆಯುತ್ತಿರುವ ನನ್ನ ಕಸಬುದಾರಿಕೆಯನ್ನೂ ಹಾಸ್ಯ ಮಾಡಿದರು.

ಜೊತೆಗೆ ಹೊಟ್ಟೆ ತುಂಬುವಷ್ಟು ರಾಜಕೀಯದ ಕಥೆಗಳನ್ನು ಹೇಳಿದರು.

ದೆಹಲಿಯ ರಾಜಮಾರ್ಗದಲ್ಲಿದ್ದ ತನ್ನ ಬಂಗಲೆ, ಅಲ್ಲಿನ ಹೂವಿನತೋಟ, ಅಲ್ಲಿನ ಔತಣಕೂಟ, ಇಂದಿರಾಗಾಂಧಿ, ಸಂಜಯ, ಗುಂಡೂರಾವ್, ದೇವರಾಜ ಅರಸರು, ತಾನು ಅಮೇರಿಕಾಕ್ಕೆ ಹೋಗಿದ್ದು, ತನ್ನ ಕುರಿತು ಇರುವ ಕಟ್ಟುಕಥೆಗಳು ಎಲ್ಲವನ್ನೂ ಮಾತನಾಡುತ್ತಿದ್ದರು.

ನಡುನಡುವಲ್ಲಿ ‘ಇದು ಆಫ್ ದಿ ರೆಕಾರ್ಡ್’ ಎಂದು ಇನ್ನೂ ಕೆಲವು ರಾಜ ರಹಸ್ಯ ಗಳನ್ನು ವಿವರಿಸಿದರು.

734695_10151287868908246_980439143_nತುರ್ತುಪರಿಸ್ಥಿತಿಯ ನಂತರ ಏಕಾಂಗಿಯಾಗಿದ್ದ ಅಸಹಾಯಕ ಹೆಣ್ಣುಮಗಳು ಇಂದಿರಾಗಾಂದಿಯನ್ನು ಕೊಡಗಿನ ನಾಗರಹೊಳೆಯ ಕಾಡಿನಲ್ಲಿ ಆತ್ಮವಿಮರ್ಶೆಗೆ ಹಚ್ಚಿದ್ದು, ಅವರಿಂದ ಬರೆಸಿದ್ದು, ಹಿಂದಿ ಸಿನೆಮಾವೊಂದನ್ನು ತೋರಿಸಿ ಅವರಲ್ಲಿ ಸ್ಥೈರ್ಯ ತುಂಬಿದ್ದು, ಮಡಿಕೇರಿಯ ಸಂತೆಯಲ್ಲಿ ಅವರನ್ನು ತಿರುಗಾಡಿಸಿ ಬಡತನವನ್ನು ಅವರಿಗೆ ತೋರಿಸಿದ್ದು…

ನಾನು ಹೊಸದಾಗಿ ಸಿನೆಮಾವೊಂದನ್ನು ನೋಡುತ್ತಿರುವ ಬಾಲಕನಂತೆ ಅವರು ಹೇಳುತ್ತಿದ್ದ ಕಥೆಗಳನ್ನು ರೀಲುಗಟ್ಟಲೆ ಶಿರದೊಳಗೆ ತುಂಬಿಸಿಕೊಳ್ಳುತ್ತಿದ್ದೆ.

‘ಕುಡಿಯಲು ಏನು ಬೇಕು?’ ಎಂದು ಕೇಳಿದರು. ‘ಹಾಲಿಲ್ಲದ ಒಂದು ಕಪ್ಪು ಖಾಲಿ ಟೀ ’ ಅಂದೆ.

ಅವರು ಬೆಲ್ಲು ಮಾಡಿದರು.

ಒಳಗಿಂದ ಒಂದು ಕಾಲದಲ್ಲಿ ಅಪೂರ್ವ ಸುಂದರಿಯಾಗಿದ್ದಿರಬಹುದಾದ ಕೆಲಸದ ಹೆಣ್ಣು ಮಗಳೊಬ್ಬಳು ಪ್ರತ್ಯಕ್ಷಳಾದಳು.

ಕೊಂಚ ಕೊತ್ತಲ್ಲೇ ಖಾಲಿ ಟೀಯನ್ನೂ ತಂದುಕೊಟ್ಟಳು.

ಆ ಟೀ ಕುಡಿಯುತ್ತಾ ನನಗೆ ಜ್ಞಾನೋದಯವಾಯಿತು.

ಬಂದ ಕೆಲಸವನ್ನೂ ಮರೆತು ಕಥೆ ಕೇಳುತ್ತಾ ಕುಳಿತ ನನ್ನ ಕುರಿತು ಮರುಕವೂ ಆಯಿತು.

‘ಖಾನ್ ಸಾಹೇಬರೇ, ನಾನು ಬಂದಿರುವ ವಿಷಯವನ್ನೇ ಮರೆತೆ. ಇಂದಿರಾಗಾಂಧಿಯವರು ಮಡಿಕೇರಿಯಲ್ಲಿದ್ದಾಗ ಬಿರಿಯಾನಿ ತಿಂದಿದ್ದರಾ?’ ಎಂದು ಆರ್ತನಾಗಿ ಕೇಳಿದೆ.

ಖಾನ್ ಸಾಹೇಬರು ತಲೆಗೆಟ್ಟ ಪಡ್ಡೆ ಹುಡುಗನ ನೋಡುವ ಹಾಗೆ ನನ್ನ ನೋಡಿದರು.

23377_10151287867138246_825420116_n‘ನಾನೊಂದು ಕಾದಂಬರಿ ಬರೆದಿರುವೆ. ಅದರಲ್ಲಿ ಬರುವ ಒಬ್ಬಳು ಅಜ್ಜಿಯು ಇಂದಿರಾಗಾಂಧಿಯವರಿಗೆ ಬಿರಿಯಾನಿ ಮಾಡಿ ಕಳುಹಿಸಬೇಕಿತ್ತು.ಅದನ್ನು ತಿಂದು ಇಂದಿರಾಗಾಂಧಿಯವರು ಆಕೆಯ ಅಡುಗೆಯನ್ನು ಹಾಡಿ ಹೊಗಳಬೇಕಿತ್ತು .ಆದರೆ ಇಂದಿರಾಗಾಂಧಿ ಬಿರಿಯಾನಿ ತಿಂದರೋ ಇಲ್ಲವೋ ಎಂಬುದು ಖಚಿತವಾಗಿ ಗೊತ್ತಿಲ್ಲದಿದ್ದುದರಿಂದ ಅದನ್ನು ಬರೆಯಲಿಲ್ಲ. ಅದನ್ನು ಅವರು ನಿಜವಾಗಿಯೂ ತಿಂದಿದ್ದರಾ?’ ಎಂದು ಕೇಳಿದೆ.

ಆಮೇಲೆ ವಿಷಯವನ್ನು ಇನ್ನಷ್ಟು ನಿಖರಗೊಳಿಸಿ, ‘ಆ ಅಜ್ಜಿಯು ನಿಜವಾಗಿಯೂ ಬಿರಿಯಾನಿ ಮಾಡಿ ಕಳಿಸಿದ್ದಳು. ಅದನ್ನು ನಿಜವಾಗಿಯೂ ಯಾರೋ ಒಬ್ಬರು ಕೊಟ್ಟು ಬಂದಿದ್ದರು. ಬಂದವರು ನಿಜವಾಗಿಯೂ ಇಂದಿರಾಗಾಂಧಿ ಅದನ್ನು ಮೆಚ್ಚಿಕೊಂಡರು ಎಂದು ಅಜ್ಜಿಯ ಬಳಿ ಹೇಳಿದ್ದರು. ಇದು ನಿಜವಾಗಿಯೂ ಸತ್ಯವೇ’ ಎಂದು ಖಾನ್ ಸಾಹೇಬರಲ್ಲಿ ಕೇಳಿದೆ.

ಖಾನ್ ಸಾಹೇಬರು ನನ್ನ ಕಾದಂಬರಿಯ ಬುಡವೇ ಅಲ್ಲಾಡುವ ಹಾಗೆ ‘ಎಲ್ಲಾ ಬಕ್ವಾಸ್’ ಎಂದು ಹೇಳಿದರು.

ಇಂದಿರಾಗಾಂಧಿ ಬರೇ ಹಣ್ಣು ಹಂಪಲು ಮತ್ತು ಒಣದ್ರಾಕ್ಷಿ, ಖರ್ಜೂರ, ಬಾದಾಮಿ ಮಾತ್ರ ತಿನ್ನುತ್ತಿದ್ದರಂತೆ.

ಯಾವಾಗಲೋ ಅನಿಸಿದಾಗ ರಾಜ್ಮಾದ ಜೊತೆ ರೋಟಿ ತಿನ್ನುತ್ತಿದ್ದರಂತೆ.

‘ಅಯ್ಯೋ ಹಾಗಾದರೆ ನಮ್ಮ ಪರಿಚಯದ ಅಜ್ಜಿ ಮಾಡಿದ ಬಿರಿಯಾನಿ ಏನಾಯ್ತು?’ಎಂದು ಖಾನ್ ಸಾಹೇಬರಿಗೂ ಕೇಳಿಸುವ ಹಾಗೆ ಮನಸಿನಲ್ಲೇ ಕೂಗಿಕೊಂಡೆ.

‘ಇದೇ ರಾಜಕೀಯ ನೋಡಿ. ಬೇರೆ ಯಾರಾದರೂ ತಿಂದಿರುತ್ತಾರೆ.ಇಂದಿರಾಗಾಂಧಿಯ ತಲೆಗೆ ಹಾಕಿರುತ್ತಾರೆ. ನನ್ನನ್ನೇ ನೋಡಿ, ಜನ ಏನೆಲ್ಲಾ ಹೇಳುತ್ತಾರೆ. ಎಫ್.ಎಂ.ಖಾನ್ ಅದು ತಿಂದಾ ಇದು ತಿಂದಾ ಎಂದು ಏನೆಲ್ಲಾ ಹೇಳುತ್ತಾರೆ. ಅದೂ ಹೀಗೆಯೇ..ಯಾರೋ ತಿಂದು ನನ್ನ ಬಾಯಿಗೆ ಒರೆಸಿದ್ದಾರೆ.ನಿಮ್ಮ ಕಾದಂಬರಿಯಲ್ಲಿ ಇಂದಿರಾಗಾಂಧಿ ಬಿರಿಯಾನಿ ತಿಂದ ಕಥೆಯೂ ಹೀಗೆಯೇ’ಎಂದು ಖಾನ್ ಸಾಹೇಬರು ಮತ್ತೆ ತಮ್ಮ ಕಥೆ ಹೇಳಲು ತೊಡಗಿದರು.

‘ಖಾನ್ ಸಾಹೇಬರೇ ಇನ್ನೊಮ್ಮೆ ಬರುತ್ತೇನೆ.ನನಗೆ ಅರ್ಜೆಂಟಾಗಿ ಇಂದಿರಾಗಾಂಧಿಯವರು ೧೯೭೮ರಲ್ಲಿ ಮಡಿಕೇರಿಯಲ್ಲಿ ನಮ್ಮ ಪರಿಚಯದ ಅಜ್ಜಿ ಮಾಡಿದ ಬಿರಿಯಾನಿ ತಿಂದಿದ್ದರೇ ಎಂದು ಗೊತ್ತಾಗಬೇಕಿತ್ತು.ಉಳಿದ ಕತೆಗಳನ್ನು ಇನ್ನೊಮ್ಮೆ ಮೊಖ್ತಾ ಬಂದು ಮಾತಾಡುವೆ.ನಿಮ್ಮ ಪ್ರೀತಿ ಹೀಗೇ ಇರಲಿ’ ಎಂದು ಅಂದು ಬಂದಿದ್ದೆ.483739_10151287863533246_1111052533_n

(Photos by Author)

(July 29 2012)

Advertisements

One thought on “ಖಾನ್ ಸಾಹೇಬರು ಹೇಳಿದ ಬಿರಿಯಾನಿಯ ಕಥೆ”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s