ಖ್ಯಾತ ಸಹಾಯಕ ನಿರ್ದೇಶಕರ ಕಥೆ

904209_10151883979658246_454476290_oಸಾಕಷ್ಟು ಹೆಸರುವಾಸಿಯಾಗಿರುವ ಸಹಾಯಕ ನಿರ್ದೇಶಕರೊಬ್ಬರು ಬೆಳಬೆಳಗೆಯೇ ಫೋನು ಮಾಡಿದ್ದರು.

ಈ ಸಹಾಯಕ ನಿರ್ದೇಶನ ಎಂಬುದು ಅವರ ಬೃಹತ್ ಜೀವನ ಗಾಥೆಯ ಹತ್ತನೆಯದೋ ಹನ್ನೊಂದನೆಯದೋ ಅವತಾರ ಇರಬೇಕು.

ಇದಕ್ಕೂ ಮೊದಲು ಅವರು ಕವಿಯಾಗಿ, ನಟರಾಗಿ, ಬಾತ್ಮೀದಾರರಾಗಿ, ಸಂಸಾರಸ್ತರಾಗಿ,ಕೆಲವು ಕಾಲ ಯೋಗಿಯಾಗಿ ಹಲವು ಅವತಾರಗಳನ್ನು ತಳೆದಿದ್ದರು.

ಎಲ್ಲದರಲ್ಲೂ ತಮ್ಮ ವಿಶಿಷ್ಟ ಚಾಪನ್ನು ಮೂಡಿಸುವ ಹಠ ಅವರದ್ದು.ಹಾಗಾಗಿ ಅವರಿಂದ ಕೆಲಸ ತೆಗೆಯಬೇಕಾದ ಯಜಮಾನರುಗಳು ಅವರ ಬಗ್ಗೆ ಅಸಹನೆಯೋ ಅಥವಾ ಅಸೂಯೆಯೋ ಏನೋ ಒಂದನ್ನು ಬೆಳೆಸಿಕೊಂಡು ಅವರನ್ನು ಮನೆಗೆ ಕಳಿಸುತ್ತಿದ್ದರು.

ಹಾಗೆ ಕಳಿಸಿದಾಗಲೆಲ್ಲ ಅವರ ಹೊಸ ಅವತಾರವೊಂದು ರೆಡಿಯಾಗುತ್ತಿತ್ತು,ಹೀಗೆ ಹಲವು ಹತ್ತು ಅವತಾರಗಳನ್ನು ಎತ್ತಿದ್ದ ಅವರು ಈಗ ತಮ್ಮ ಹನ್ನೊಂದನೇ ಅವತಾರವನ್ನು ಮೈಮೇಲೆ ಬರಿಸಿಕೊಂಡು ಬೆಳಬೆಳಗೆಯೇ ಫೋನು ಮಾಡಿದ್ದರು.

ಅವರನ್ನು ನಾನು ತಮಾಷೆಯಾಗಿ ‘ಗುರೂ’ ಎಂದು ಕರೆದರೆ ಅವರು ಆ ತಮಾಷೆಯನ್ನೇ ಗಂಭೀರವಾಗಿ ತೆಗೆದುಕೊಂಡು ನನ್ನನ್ನು ಶಿಷ್ಯ ಎಂತಲೇ ತಿಳಿದುಕೊಂಡಿದ್ದರು.

‘ ಗುರುಗಳೇ ಇದೇನು ಬೆಳಗೆ ಬೆಳಗೆ.ಬೇಗ ಬೇಗ ಅರುಹಿ’ಅಂದೆ.

ಅದಕ್ಕೆ ಅವರು ‘ಮೂಳೆ ಮತ್ತು ಚಕ್ಕಳ ಮಾತ್ರ ಕಾಣಿಸುತ್ತಿರುವ, ನೀಳವಾಗಿ ಕೃಶವಾಗಿರುವ, ಮುಖದಲ್ಲಿ ಕ್ಷಯರೋಗದ ಲಕ್ಷಣವಿರುವ ನಾಲ್ಕೈದಾರು ಮಂದಿ ಗಂಡಸರು ಚಿತ್ರೀಕರಣಕ್ಕಾಗಿ ಬೇಕಾಗಿದ್ದಾರೆ.ಒಂದು ಗ್ರೂಪ್ ಶಾಟ್.ಅಭಿನಯಿಸಬೇಕಾಗಿಲ್ಲ.ಗುಂಪಿನಲ್ಲಿ ಬಂದು ಹೋದರೆ ಸಾಕು,ಗೊತ್ತಿದ್ದರೆ ರೈಲು ಹತ್ತಿಸಿ ಕಳಿಸಿ.ಸ್ಥಳದಲ್ಲೇ ಸಂಬಳ.ಊಟ ಮತ್ತು ವಸತಿಯೂ ಇದೆ.ದಯವಿಟ್ಟು ಇದ್ದರೆ ತಿಳಿಸಿ.ನಾನು ಸಿಕ್ಕಾಪಟ್ಟೆ ಟೆನ್ಸನ್ ನಲ್ಲಿರುವೆ’ ಅಂದರು.

ನನಗೆ ಗೊತ್ತಿರುವ ಗೆಳೆಯರಲ್ಲಿ ಅವರು ಹೇಳಿದ ಲಕ್ಷಣಗಳು ಇರುವವರು ಯಾರಿರುವರು ಎಂದು ಯೋಚಿಸಿದೆ.ಯಾರೂ ಕಾಣಲಿಲ್ಲ

1402136_10151883979908246_1067453178_o‘ಗುರುಗಳೇ ಒಂದು ಕಾಲದಲ್ಲಿ ನಿಮ್ಮನ್ನೂ ಸೇರಿಸಿದಂತೆ ನಾವೆಲ್ಲರೂ ಹಾಗೇ ಇದ್ದೆವು.ಆದರೆ ಈಗ ಸುಖವಾಗಿ ತಿಂದುಂಡು ನಾವೆಲ್ಲರೂ ಖಳನಾಯಕರ ಪಾತ್ರಕ್ಕೆ ಮಾತ್ರ ಲಾಯಖ್ಖಾಗಿರುವ ದುರಂತಕ್ಕೆ ತಲುಪಿರುವೆವು.ಏನು ಮಾಡುವುದು’ ಎಂದೆ.

‘ಹಾಗಾದರೆ ಇನ್ನೊಂದು ಸಹಾಯ ಮಾಡಬಹುದಾ.ಅದೇ ಚಿತ್ರಕ್ಕೆ ಒಂದಿಷ್ಟು ಯುರೋಪಿಯನ್ ಮುಖಗಳೂ ಬೇಕು.ಅದೂ ಗುಂಪಲ್ಲಿ ಬಂದು ಹೋಗುವ ಮುಖಗಳು.ಆದರೆ ಯುರೋಪಿಯನ್ನರಿಗಾದರೆ ಸಣ್ಣ ಸಣ್ಣ ಸೀನಿಗೂ ಸಾಕಷ್ಟು ದುಡ್ಡು ಚೆಲ್ಲಬೇಕು.ಅದಕ್ಕೆ ನಾನೊಂದು ಐಡಿಯಾ ಮಾಡಿರುವೆ.ನಿಮ್ಮ ಕಡೆಯ ಸಾಬರ ಮುಖಗಳೂ ಹೆಚ್ಚು ಕಡಿಮೆ ಯುರೋಪಿಯನ್ನರ ಹಾಗೇ ಇದೆಯಲ್ಲಾ.ಇರದಿದ್ದರೂ ಪರವಾಗಿಲ್ಲ.ಕೊಂಚ ಬಣ್ಣ ಹಚ್ಚಿದರೆ ಸಾಕು.ಹಾಗೇ ಕಾಣುತ್ತಾರೆ.ಅವರನ್ನಾದರೂ ರೈಲು ಹತ್ತಿಸಿ ಕಳಿಸುತ್ತೀರಾ’ ಎಂದು ಕೇಳಿದರು.

ಆಗ ನನಗೆ ಅನುಮಾನಗಳು ಶುರುವಾದವು.

ಇವರು ಸಿನೆಮಾಗಳಿಗೆ ಎಕ್ಸ್ ಟ್ರಾಗಳನ್ನು ಪೂರೈಸುವ ಬೇರೆ ಯಾರಿಗೋ ಕರೆ ಮಾಡಬೇಕಿದ್ದವರು ತಪ್ಪಾಗಿ ನನಗೆ ಮಾಡಿದ್ದಾರೆ,

ಇಷ್ಟು ಹೊತ್ತು ಮಾತಾಡಿದರೂ ಆ ತಪ್ಪು ಗೊತ್ತಾಗದೆ ಅದೇ ಮಾತನ್ನು ಮುಂದುವರಿಸುತ್ತಿದ್ದಾರೆ.

ಆದರೆ ಅವರ ತಪ್ಪನ್ನು ಅವರ ಗಮನಕ್ಕೆ ತಂದರೆ ಅವರು ಬೆಳಬೆಳಗೆಯೇ ಖಿನ್ನತೆಗೆ ಒಳಗಾಗಿ ತಮ್ಮ ಹನ್ನೊಂದನೆಯ ಅವತಾರದಿಂದಲೂ ಹೊರಹಾಕಲ್ಪಡುವ ಎಲ್ಲಾ ಸಂಭವಗಳಿವೆ.

ಹಾಗೆ ನೋಡಿದರೆ ಅವರೂ ನಾನೂ ಇವರೂ ಎಲ್ಲರೂ ಹೀಗೆಯೇ ಜೀವನವೆಂಬ ಗ್ರೂಪ್ ಶಾಟ್ ನಲ್ಲಿ ಮುಖ ತೋರಿಸಿ ಹೋಗಲೆಂದೇ ಜನ್ಮ ತಳೆದವರಲ್ಲವೇ.

ಪರವಾಗಿಲ್ಲ.ಕವಿಯಾದರೇನು, ಕಥೆಗಾರನಾದರೇನು, ಬಾತ್ಮೀದಾರನಾದರೇನು ನಾವೆಲ್ಲರೂ ಅಲ್ಲದ ಜನರನ್ನೆಲ್ಲ ಅದೇ ಎಂದು ತೋರಿಸಿ ಹೊಟ್ಟೆಪಾಡಿಗಾಗಿ ಬದುಕುತ್ತಿಲ್ಲವೇ.

ಇವರು ಹಾಗೆ ಮಾಡುವುದರಲ್ಲಿ ತಪ್ಪೇನಿದೆ.

ಜೀವನವೆಂದರೆ ತಪ್ಪಾಗಿ ತಿಳಕೊಂಡವರ ಜೊತೆ ಹೊಂದಿಕೊಂಡು ಬಾಳುವುದೇ ಅಲ್ಲವೇ ಎಂದುಕೊಂಡು ಅವರ ಜೊತೆ ದೊಡ್ಡ ದೊಡ್ಡ ನಾಯಕರ ಬಗ್ಗೆ, ಚಂದ ಚಂದದ ನಾಯಕಿಯರ ಬಗ್ಗೆ ಹರಟಿದೆ.

1483544_10151883980033246_1978426725_o‘ಗುರುಗಳೇ ನಿಮ್ಮ ಕಾಲು ಹಿಡಿಯುತ್ತೇನೆ.ಐಶ್ವರ್ಯಾ ರೈ ಅಥವಾ ವಿದ್ಯಾಬಾಲನ್ ಈ ಇಬ್ಬರಲ್ಲಿ ಯಾರಾದರೂ ಒಬ್ಬರು ನಿಮ್ಮ ಚಿತ್ರದಲ್ಲಿ ಕಾಣಿಸಿಕೊಳ್ಳುವುದಾದರೆ ದಯವಿಟ್ಟು ಹತ್ತಿರದಿಂದ ಶೂಟಿಂಗ್ ನೋಡಲಿಕ್ಕಾದರೂ ನನ್ನನ್ನು ಬಿಡುತ್ತೀರಾ? ಹಾಗೆ ಬಿಡುವುದಾದಲ್ಲಿ ನಿಮಗೆ ಲೋಡುಗಟ್ಟಲೆ ಕ್ಷಯರೋಗಿಗಳ ಹಾಗೆ ಕಾಣುವವರನ್ನೂ ಯುರೋಪಿಯನ್ನರ ಹಾಗೆ ಕಾಣಿಸುವ ಸಾಬರನ್ನೂ ರೈಲು ಹತ್ತಿಸಿ ಕಳಿಸುತ್ತೇನೆ.ಸಹಾಯಕ ನಿರ್ದೇಶಕರಾದ ನಿಮ್ಮ ಗುಲಾಮನಾಗಲೂ ನಾನು ರೆಡಿ’ ಅಂದೆ.

ಆಗ ಅವರಿಗೆ ಅನುಮಾನ ಬರಲು ಶುರುವಾಯಿತು.‘ನನ್ನೊಡನೆ ಮಾತಾಡುತ್ತಿರುವ ನೀನು ಯಾರು ಎಂದು ಹೇಳು’ ಎಂದು ಗುಡುಗಿದರು.

‘ಗುರುಗಳೇ ನೀವು ಯಾರೊಡನೆ ಮಾತಾಡುತ್ತಿದ್ದೀರೋ ನಾನೇ ಅವನು’ ಅಂದೆ.

1462634_10151883980653246_1321526223_o‘ಅಯ್ಯಾ ದಯವಿಟ್ಟು ನೀವು ಯಾರು ಎಂದು ಹೇಳಿ’ಎಂದು ಬೇಡಿಕೊಂಡರು.

‘ಯಾರಾದರೂ ಅದರಲ್ಲೇನಿದೆ ಗುರುಗಳೇ ನಾಳೆ ಬೆಳಗ್ಗೆ ನಿಮ್ಮ ಶೂಟಿಂಗ್ ಜಾಗಕ್ಕೆ ಗುಂಪಿನಲ್ಲಿ ಮುಖ ತೋರಿಸಲು ಬೇಕಾದ ಒಂದು ಲಾರಿ ಲೋಡಿನಷ್ಟು ಜನ ಬಂದರೆ ಸಾಕಲ್ಲವೇ’ಎಂದು ನಾನೇ ಫೋನ್ ಇಟ್ಟೆ.

(July 8 2012)

Advertisements

3 thoughts on “ಖ್ಯಾತ ಸಹಾಯಕ ನಿರ್ದೇಶಕರ ಕಥೆ”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s