ಹಳೆಯ ಬೈಕು ಅದೇ ಹಳೆಯ ಮನುಷ್ಯ

2011-09-29_1830ಸ್ವಲ್ಪ ಹೊತ್ತು ರಾಚಿದ ಮಳೆಯ ನಂತರ ಇಲ್ಲಿ ನಿನ್ನೆ ಮಧ್ಯಾಹ್ನ ಜೋರಾಗಿ ಮಂಜು ತುಂಬಿಕೊಂಡಿತ್ತು.

ನಂತರ ಸ್ವಲ್ಪವೇ ಚುರುಕು ಬಿಸಿಲು ಅಲ್ಲಲ್ಲಿ ಹಾದುಹೋಯಿತು.

ನಡು ಮಧ್ಯಾಹ್ನದ ಹೊತ್ತು ಮಳೆಯ ನಂತರ ಮಂಜಿನ ನಡುವೆ ಅಲ್ಲಲ್ಲಿ ಬಿಸಿಲೂ ಇಣುಕುತ್ತಿದ್ದರೆ ಇನ್ನೇನೂ ಬೇಕಾಗಿಲ್ಲ ಎನ್ನುವ ಹಾಗೆ ಇಳೆಗೆ ಇಳೆಯೇ ದೇವಲೋಕದಂತೆ ಬೆಳಗುತ್ತಿರುತ್ತದೆ.

ಎಂತಹ ಸೂರ್ಯಪ್ರಕಾಶದ ಹಗಲಲ್ಲೂ ಇರದಷ್ಟು ಚೆಲುವಿನ ಬೆಳಕು.

ಆದರೆ ನಡೆಯುವ ಜನರು, ನಿಂತಿರುವ ಮರಗಳು ಮತ್ತು ಅವುಗಳ ಚೂಪು ಎಲೆಗಳಿಂದ ಬೇಕೋ ಬೇಡವೋ ಎಂಬಂತೆ ಬೀಳುತ್ತಿರುವ ಮಳೆಯ ಹನಿಗಳು ಈ ಚೆಲುವಿಗೆ ಏನೋ ಒಂದು ತರಹದ ದುಗುಡವನ್ನೂ ಹೇಳಲಾಗದಂತಹ ಭಾರವನ್ನೂ ತಂದು ಬಿಡುತ್ತದೆ.

ಈ ಬೆಳಕಿನಲ್ಲಿ ಶಾಲೆಯಿಂದ ಆಟವಾಡುತ್ತಾ ಮರಳುತ್ತಿರುವ ಮಕ್ಕಳೋ, ಕೈಗೆ ಕೈ ಕೋಸಿಕೊಂಡು ಸಾಗುವ ಏರು ಯೌವನದ ಪ್ರೇಮಿಗಳೋ ಸಾಗುತ್ತಿದ್ದರೆ ಹೇಳುವುದೇ ಬೇಡ.

ಒಂಟಿಯಾಗಿರುವ ನೀವು ಇನ್ನಷ್ಟು ಒಂಟಿಯಾಗಿಬಿಡುತ್ತೀರಿ.

DSC_2565ಆದರೆ ಇದೇ ಬೆಳಕಿನಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ತಲೆಯ ಮೇಲೆ ಒಣಪುರಳೆಕಡ್ಡಿಗಳನ್ನು ಹೊತ್ತು ಸಾಗುವವರೋ,ಕುಡಿದು ತೂರಾಡುತ್ತಾ ಹಾದು ಹೋಗುವವರೋ ಎದುರಾದರೆ ಪರವಾಗಿಲ್ಲ.

ಅವರನ್ನು ಗಮನಿಸುತ್ತಾ ಅವರ ಬಡತನವನ್ನೋ ಅಜ್ಞಾನವನ್ನೋ ಲೆಕ್ಕಹಾಕುತ್ತಾ ಲೇಖಕನಂತೆಯೋ ಭಾವುಕನಂತೆಯೋ ಈ ಬೆಳಕನ್ನು ಎದುರಿಸಬಹುದು

ಈ ಒಂಟಿಯೂ ಅಲ್ಲದೆ ಭಾವುಕನೂ ಹಾಗದೆ ನೆಲದ ಮೇಲೆ ಬಿಸಿಲಲ್ಲಿ ಹೊಳೆಯುತ್ತಿರುವ ನೀರ ಹೊಂಡಗಳನ್ನು ಜಾಣತನದಿಂದ ದಾಟುತ್ತಾ ಸುಮ್ಮನೆ ನಡೆಯುತ್ತಿದ್ದೆ.

ಮೂಗಿನ ತುದಿಯಲ್ಲಿ ಸುಮ್ಮನೇ ಕುಳಿತು ರಾಗವಾಗಿ ಹರಿಯದೆ ಮೊಂಡು ಹಿಡಿದಿರುವ ಒಂದು ಹಳೆಯ ಹಾಡು,ಮಳೆ ಕಳೆದ ಮೇಲೆ ಹೊಳೆಯುತ್ತಿರುವ ಹೂವುಗಳ ಸುತ್ತ, ಗೆಲ್ಲುಗಳ ಸುತ್ತ ಲಗುಬಗೆಯಿಂದ ಹಾರುತ್ತಿರುವ ಬಣ್ಣಬಣ್ಣದ ಹಕ್ಕಿಗಳು.ಹುಟ್ಟಿದಂದಿನಿಂದ ಇಂದಿನವರೆಗೆ ಒಂದೇ ಒಂದು ಕೀರಲು ಜೀರುಂಡೆಯ ಸದ್ದು ಕೇಳಿ ಬೆಳೆದಿರುವೆನೋ ಎಂಬ ಹಾಗೆ ಅನಿಸುತ್ತಿರುವ ನೂರಾರು ಜೀರುಂಡೆಗಳ ಸಮೂಹಗಾನ,ಯಾರಿಲ್ಲದಿದ್ದರೂ ಯಾರ ಮಾತಿಲ್ಲದಿದ್ದರೂ ಅನಾಧಿ ಕಾಲದಿಂದಲೂ ನಾವು ಹೀಗೇ ಇರುವೆವು ಎಂದು ಮೈಯನ್ನೆಲ್ಲ ನೀಲನೀಲ ಮಾಡಿಕೊಂಡು ದೂರದಲ್ಲಿ ಧಾರ್ಷ್ಟ್ಯದಲ್ಲಿ ಎದ್ದು ನಿಂತಿರುವ ಪರ್ವತ ಶಿಖರಗಳು.

ಇನ್ನು ನಡೆದದ್ದು ಸಾಕು ಎಂದು ಎಡಕ್ಕೆ ತಿರುಗಿದೆ.

ಯಾರೋ ಪುಣ್ಯಾತ್ಮರು ಇಲ್ಲಿ ಒಂದಿಷ್ಟು ಮಣ್ಣು ಕಡಿದು ಎತ್ತಿ ಹಾಕಿ ಒಂದು ಕಿಟಕಿಯ ಹಾಗೆ ಮಾಡಿದ್ದಾರೆ.

ಈ ಕಿಟಕಿಯ ಮೂಲಕ ಸಣ್ಣ ಮಣ್ಣುದಾರಿಯೊಂದು ಪಾತಾಳಕ್ಕೆ ಇಳಿದು ಹೋಗುತ್ತದೆ.

ಆದರೆ ಇದುವರೆಗೆ ಈ ದಾರಿಯನ್ನು ಇಳಿದು ಹೋದವರನ್ನಾಗಲೀ ಹತ್ತಿ ಬರುವವರನ್ನಾಗಲೀ ನಾನಂತೂ ನೋಡಿಲ್ಲ.

DSC_0236

ಇಲ್ಲ.

ಒಂದು ಸಲ ಒಬ್ಬನನ್ನು ನೋಡಿದ್ದೆ.

ಈತ ತನ್ನ ಹಳೆಯ ಕಾಲದ ಲಠಾರಿ ಬೈಕೊಂದನ್ನು ಈ ಕಿಟಕಿಯ ಹಾಗಿರುವ ಜಾಗದಲ್ಲಿ ಮಣ್ಣಿನ ಬರೆಗೆ ಒರಗಿಸಿ ನಿಲ್ಲಿಸಿ ಅದನ್ನು ಒದ್ದು ಸ್ಟಾರ್ಟ್ ಮಾಡಲು ಆಗದೆ ಏದುಸಿರು ಬಿಡುತ್ತಾ ಕುಸಿದು ಹೋದವನಂತೆ ನಿಲ್ಲಿಸಿದ್ದ.

೧೯೭೦ನೇ ಇಸವಿಯ ಯಜ್ದಿ ಬೈಕಂತೆ ಅದು.

ಆತ ಯೌವನದಲ್ಲಿರುವಾಗ ರಾಜಾರೋಷವಾಗಿ ಕೊಂಡುಕೊಂಡದ್ದು.

ಈಗ ಅದು ಹಳೆಯ ಕಾಲದ ವಯಸ್ಸಾದ ಜೀರುಂಡೆಯೊಂದರಂತೆ ವಾಲಿ ನಿಂತುಕೊಂಡಿತ್ತು.

ನಾನೂ ಅದನ್ನು ಒದ್ದು ಸ್ಟಾರ್ಟ್ ಮಾಡಲು ನೋಡಿ ಆಗದೆ ಏದುಸಿರು ಬಿಟ್ಟಿದ್ದೆ.

ಆಮೇಲೆ ನಾವಿಬ್ಬರೂ ಸೇರಿ ಅದನ್ನು ದೂಡಿ ಕಾಡಿನಲ್ಲಿ ಮರಗಳ ನಡುವೆ ಮರೆಮಾಡಿ ನಿಲ್ಲಿಸಿ ನಡೆಯುತ್ತಾ ವಾಪಾಸು ಬಂದಿದ್ದೆವು.

ಬರುವಾಗ ಆತ ತನ್ನ ಕಥೆ ಹೇಳಿದ್ದ.

ಹೇಳಿದ ಮೇಲೆ ‘ಇದನ್ನು ಯಾರಿಗೂ ಹೇಳಬೇಡಿ ನಿಮ್ಮಲ್ಲಿ ಮಾತ್ರ ಇದು ಇರಲಿ’ ಅಂದಿದ್ದ.

ಆದರೆ ಇನ್ನೂ ಕೊಂಚ ನಡೆದ ಮೇಲೆ ‘ತಥ್, ಹಾಳಾದ ನನ್ನ ಜೀವನ.ಪರವಾಗಿಲ್ಲ.ಯಾರಿಗೆ ಬೇಕಾದರೂ ಹೇಳಿ.ನನ್ನ ದರಿದ್ರ ಅವಸ್ಥೆ ಎಲ್ಲರಿಗೂ ಗೊತ್ತಾಗಲಿ’ ಎಂದು ನೆಲಕ್ಕೆ ಉಗಿದಿದ್ದ.

ಆತ ಬೊಂಬಾಯಿಯಲ್ಲಿ ಯಾವುದೋ ಪೇಂಟ್ ಕಂಪನಿಯಲ್ಲಿ ಕೆಲಸಕ್ಕಿದ್ದನಂತೆ.

ಒಳ್ಳೆ ಸಂಬಳವೂ ಇತ್ತಂತೆ.

ಅಲ್ಲೇ ಯಾರೋ ಒಬ್ಬಳು ಪ್ರೀತಿಯನ್ನೂ ಮಾಡಿದ್ದಳಂತೆ.

ಆದರೆ ಆ ಪ್ರೀತಿ ಇನ್ನೇನು ಫಲ ಬಿಡಬೇಕು ಅನ್ನುವಾಗ ಅವನ ಹಾಳಾದ ಅಪ್ಪ ಸತ್ತು ಹೋದನಂತೆ.

ಹಾಳಾದ ಅಪ್ಪ ಅಂತ ಯಾಕೆ ಹೇಳಿದನಂದರೆ ಅವನ ಅಪ್ಪ ತುಂಬ ಕುಡಿದು ಹೊಡೆದು ಬಡಿದು ಸಾಕಿದ್ದನಂತೆ.

ಆ ಹಾಳಾದ ಅಪ್ಪ ಸತ್ತು ಹೋದ ಮೇಲೆ ಆ ಅಪ್ಪನಿಗೆ ಪೂರ್ವಾರ್ಜಿತವಾಗಿ ಸಿಕ್ಕಿದ್ದ ಬೆಟ್ಟದ ಕೆಳಗಿರುವ ಏಲಕ್ಕಿ ಮಲೆಯನ್ನೂ ಬೆಟ್ಟದ ಈ ಕಡೆ ಇದ್ದ ಕಾಫಿ ತೋಟವನ್ನೂ ಇವನೇ ನೋಡಬೇಕಾಯಿತಂತೆ.

ಅಮ್ಮ ಹೇಳಿದವಳನ್ನು ಮದುವೆಯೂ ಆಗ ಬೇಕಾಯಿತಂತೆ.

ಮದುವೆಯಾದ ಮೇಲೆ ಮಕ್ಕಳೂ ಆದವಂತೆ.

ಮಗಳು ಮದುವೆಯಾಗುವಾಗ ಬೆಟ್ಟದ ಈ ಕಡೆಯ ಕಾಫಿ ತೋಟವನ್ನು ಮಾರಿಸಿ ಚಿನ್ನ ಮಾಡಿಸಿ ಗೋರಿಕೊಂಡು ಹೋದಳಂತೆ.

ನಡೆಯುತ್ತಾ ನಡೆಯುತ್ತಾ ಆತ ಬೆಟ್ಟದ ಈ ಕಡೆಗಿದ್ದ ತನ್ನದಾಗಿದ್ದ ಕಾಫಿ ತೋಟವನ್ನು ತೋರಿಸಿದ.

‘ಚಿನ್ನದಂತ ತೋಟ ಸ್ವಾಮೀ’ ಎಂದು ಕಣ್ಣು ತುಂಬಿಕೊಂಡ.

ಈಗ ಮಡಿಕೇರಿ ಪೇಟೆಯಲ್ಲಿ ಬಾಡಿಗೆ ಮನೆಯಲ್ಲಿರುವ ಹೆಂಡತಿಯೂ ಮಗನೂ ಉಳಿದಿರುವ ಏಲಕ್ಕಿ ತೋಟದ ಮೇಲೆ ಕಣ್ಣಿಟ್ಟಿದ್ದಾರಂತೆ.

‘ತೋಟ ಮಾರು, ಮಡಿಕೇರಿಯಲ್ಲಿ ಫ್ಲಾಟು ತಗೊಳ್ಳುವಾ’ ಅಂತ ಜೀವ ತಿನ್ನುತ್ತಿದ್ದಾರಂತೆ.

‘ಸ್ವಾಮಿ, ನಿಮಗೆ ಗೊತ್ತಾ ಇಡೀ ಕೊಡಗಿಗೇ ಏಲಕ್ಕಿ ಕಟ್ಟೆ ರೋಗ ಬಂದಾಗ ನನ್ನ ಏಲಕ್ಕಿ ತೋಟವನ್ನು ಉಳಿಸಿಕೊಂಡೆ.ಆದರೆ ಈಗ ಹೆಂಡತಿ ಮಗನ ಕಾಕ ದೃಷ್ಟಿಯಿಂದ ಅದನ್ನು ಉಳಿಸಿಕೊಳ್ಳಲಾಗುತ್ತಿಲ್ಲ’ ಅಂದ.

`ಆದರೆ ಏನು ಮಾಡುವುದು ಸ್ವಾಮೀ ನನಗೂ ಈಗ ಬೈಕು ಹತ್ತಿಸಿಕೊಂಡು ಆ ಬೆಟ್ಟ ಹತ್ತಿ ಬರಲು ಆಗುವುದಿಲ್ಲ.ನಡುವಲ್ಲಿ ಒಂದೆರೆಡು ಕಡೆ ದೂಡಿ ಹತ್ತಿಸಬೇಕು.ನನಗೆ ಹತ್ತಿಸಲಾಗುವುದಿಲ್ಲ.ಉಬ್ಬಸ’ ಎಂದು ತನ್ನ ಬಡವಾಗಿದ್ದ ಎದೆಯನ್ನು ಆ ಕತ್ತಲೆಯಲ್ಲೂ ತೋರಿಸಿ ನೀವಿಕೊಂಡ.

‘ಸ್ವಾಮಿ ನನಗೆ ನೀವು ಯಾರೋ ಗೊತ್ತಿಲ್ಲ.ನಿಮಗೆ ನಾನು ಯಾರೋ ಗೊತ್ತಿಲ್ಲ.ಆದರೆ ಒಮ್ಮೆ ನೀವು ನನ್ನ ಏಲಕ್ಕಿ ತೋಟಕ್ಕೆ ಬರಬೇಕು.ಅದು ಬರಿ ತೋಟವಲ್ಲ ಸ್ವಾಮೀ ನಂದನವನ’ ಎಂದು ಆ ತೋಟದಲ್ಲಿ ಏನೇನೆಲ್ಲ ಗಿಡಬಳ್ಳಿಗಳಿವೆ, ಹಣ್ಣು ಬಿಡುವ ಹೂವು ಬಿಡುವ ಮರಗಳಿವೆ ಎಂಬುದನ್ನು ಹೇಳುತ್ತಾ ಹೋದ.

ಇಬ್ಬರ ದಾರಿ ಬೇರೆ ಬೇರೆಯಾಗುವುದಕ್ಕೆ ಮೊದಲು ಇನ್ನಷ್ಟು ಹೊತ್ತು ನಡುದಾರಿಯಲ್ಲಿ ನಿಲ್ಲಿಸಿಕೊಂಡು ಇನ್ನೂ ಕಥೆ ಹೇಳಿದ.

‘ ಸ್ವಾಮೀ ನಾನು ಹೋಗಬೇಕು.ನನಗೆ ಬೆಳ್ತಕ್ಕಿ ಅನ್ನ ಆಗುವುದಿಲ್ಲ.ಕುಸುಬಲಕ್ಕಿಯೇ ಆಗಬೇಕು.ನಾನೇನಾದರೂ ಹೋಗುವುದು ತಡವಾದರೆ ಅವಳು ಬೆಳ್ತಕ್ಕಿಯನ್ನೇ ಬೇಯಿಸಿ ಬೇಕಾದರೆ ತಿನ್ನಿ ಎಂದು ಸೋಟೆ ತಿವಿಯುತ್ತಾಳೆ.ಬೆಳಗ್ಗೆ ಮಾರ್ಕೆಟ್ಟಿನಿಂದ ತಂದ ಮೀನೂ ಹಾಗೇ ಇರುತ್ತದೆ.ನಾನೇ ಕುಯಿದು ಕ್ಲೀನ್ ಮಾಡಿ ಸಾರು ಮಾಡಬೇಕು.ಬರುತ್ತೇನೆ ಸ್ವಾಮಿ .ಇನ್ನೊಮ್ಮೆ ಸಿಗುತ್ತೇನೆ’ ಎಂದು ಮಾಯವಾಗಿದ್ದ,

ಆಮೇಲೆ ಈ ಕಿಟಕಿಯಂತಹ ಜಾಗಕ್ಕೆ ಹಲವು ಬಾರಿ ಬಂದಿದ್ದರೂ ಆತ ಕಾಣಿಸಿರಲಿಲ್ಲ.ಆದರೆ ಆತನ ಆ ಹಳೆಯ ಬೈಕು ಮಾತ್ರ ಕುಡಿದು ಬಿದ್ದಿರುವ ಮುದುಕನೊಬ್ಬನ ಹಾಗೆ ಅಲ್ಲಿ ಮಣ್ಣಿನ ಬರೆಗೆ ಒರಗಿಕೊಂಡಿರುತ್ತಿತ್ತು.ಆತ ಈಗ ಬೆಟ್ಟ ಹತ್ತಿ ಬರಬಹುದು ಮತ್ತೆ ಬರಬಹುದು ಎಂದು ಬಹಳ ಸಲ ಕಾದಿದ್ದೆ,

2010-10-20_1553ಆದರೆ ಇಂದೂ ಆತ ಕಾಣಿಸುತ್ತಿರಲಿಲ್ಲ.ಗೋಡೆಗೆ ಒರಗಿಸಿರುತ್ತಿದ್ದ ಆ ಬೈಕೂ ಇವತ್ತು ಅಲ್ಲಿ ಇರಲಿಲ್ಲ.ಬಹುಶಃ ಆ ಮನುಷ್ಯನೂ ಆತನ ಹಳೆಯ ಬೈಕೂ ಕಾಲಪ್ರವಾಹದಲ್ಲಿ ತೀರಿಯೇ ಹೋಗಿರಬಹುದು ಅನಿಸುತ್ತಿತ್ತು.

ಸುಮ್ಮನೇ ನೋಡುತ್ತಿದ್ದೆ.

ಬಂದ ಸಣ್ಣ ಮಳೆಗೇ ತುಂಬಿಕೊಂಡು ಹೊಳೆಯುತ್ತಿದ್ದ ಭತ್ತದ ಖಾಲಿ ಗದ್ದೆಗಳು.

ಬೆಟ್ಟದ ಮೇಲಿಂದ ನೋಡಿದರೆ ಮಕ್ಕಳು ಆಟಕ್ಕೆಂದು ಪೇರಿಸಿ ಕಟ್ಟಿದಂತಿರುವ ಮಣ್ಣಿನ ಗೋಡೆಯ ಹಳೆಯದೊಂದು ಮನೆ.

ಅದಕ್ಕೆ ಅಂಟಿಕೊಂಡಂತಿರುವ ಬಚ್ಚಲು ಮನೆ, ದನದ ಕೊಟ್ಟಿಗೆ.ಅದರ ಎದುರಿಗೇ ಅದೇ ಮಾದರಿಯ ಸ್ವಲ್ಪ ಹೊಸತಿನಂತೆ ಕಾಣಿಸುವ ಇನ್ನೊಂದು ಮನೆ.

ಬಹುಶ: ಅಪ್ಪನೋ ಮಗನೋ ಅಣ್ಣನೋ ತಮ್ಮನೋ ಜಗಳ ಮಾಡಿಕೊಂಡು ಪಾಲು ಮಾಡಿಕೊಂಡು ಕಟ್ಟಿರುವ ಮನೆ ಇರಬೇಕು ಅದು.

ಅದರ ಪಕ್ಕದಲ್ಲೂ ಒಂದು ಬಚ್ಚಲು ಮನೆ.ದನದ ಕೊಟ್ಟಿಗೆ.ಸುತ್ತಲೂ ಭತ್ತದ ಗದ್ದೆಗಳು.

ಇನ್ನೆರೆಡು ಮಳೆ ಹೊಡೆದರೆ ಅಲ್ಲಿ ಕೊಕ್ಕರೆಗಳಂತೆ ನಡುಬಗ್ಗಿಸಿ ಬಿತ್ತನೆಗೆ ತೊಡಗಲಿರುವ ಮನುಷ್ಯ ದೇಹಗಳನ್ನು ಕಲ್ಪಿಸಿಕೊಂಡೆ.

ಬಹುಶ: ಈಗ ಅಲ್ಲಿ ಯಾರೂ ಬದುಕಿ ಉಳಿದಿಲ್ಲ ಅನ್ನುವ ಹಾಗೆ ಆ ಗದ್ದೆಗಳು ನಿಶ್ಚಲವಾಗಿದ್ದವು.

ನಡುವಲ್ಲಿ ಬೆಳೆದಿದ್ದ ಒಂದಿಷ್ಟು ಅಡಿಕೆ ಮರಗಳು ಕಾಯಿಲೆಬಿದ್ದು ಕೃಷವಾಗಿ ಕಾಣಿಸುತ್ತಿದ್ದವು.

ಮನುಷ್ಯರು ಇರಬಹುದು ಎಂಬುದರ ಕುರುಹಾಗಿ ಅಲ್ಲಿಂದ ಒಂದಿಷ್ಟು ಹೊಗೆಯಾದರೂ ಮೇಲೇಳಬಾರದೇ ಎಂದು ಆಸೆಪಟ್ಟೆ.

ಇದೆಲ್ಲ ನಿಜವಲ್ಲ ಬರಿಯ ಕನಸು ಎನ್ನುವ ಹಾಗೆ ಆ ನಡು ಮದ್ಯಾಹ್ನ ಮಳೆ ಬಂದ ನಂತರದ ಬಿಸಿಲಲ್ಲಿ ಆ ಜಾಗದಲ್ಲಿದ್ದ ಕೊಳವೊಂದು ನೀರು ತುಂಬಿಕೊಂಡು ಹೊಳೆಯುತ್ತಿತ್ತು.ಇನ್ನೇನು ಉಳುಮೆ ಶುರುವಾದರೆ ಒಂದಷ್ಟು ಬೆಳ್ಳಕ್ಕಿಗಳು ಆ ಗದ್ದೆಯಲ್ಲಿ ಹುಳಗಳನ್ನು ಹುಡುಕುತ್ತಾ ಉಳುವ ಮನುಷ್ಯರ ನಡುವೆ ನಡೆದಾಡಬಹುದು ಅನಿಸುತ್ತಿತ್ತು.

ಅಷ್ಟು ಹೊತ್ತಿಗೆ ಕೆಳಗಿನಿಂದ ಬೈಕಿನ ಸದ್ದು ಕೇಳಿಸತೊಡಗಿತು.

ನೋಡಿದರೆ ಅದು ಅದೇ ಹಳೆಯ ಬೈಕು.

ಅದರ ಮೇಲೆ ಅದೇ ಮನುಷ್ಯ.

ಅವನು ಇದುವರೆಗೆ ಹೇಳಿದ ಅವನದೇ ಕಥೆಯಲ್ಲಿ ಲವಲೇಶವೂ ಸತ್ಯ ಇರಲಿಲ್ಲ ಎನ್ನುವ ಹಾಗೆ ಒಂದಿಷ್ಟೂ ಸುಸ್ತು ತೋರಿಸದೆ ಆ ಬೈಕು ಆತನನ್ನು ಹೊತ್ತುಕೊಂಡು ಬೆಟ್ಟವನ್ನೇರಿ ಮೇಲೆ ಬರುತಿತ್ತು.

ಬಹುಶಃ ಆತ ನನ್ನ ಪರಿಚಯವೇ ಇಲ್ಲವೇನೋ ಎಂಬಂತೆ ಮುಖ ತಿರುಗಿಸಿ ಹೋಗಬಹುದು ಅದಕ್ಕೂ ಮೊದಲು ನಾನು ಅಲ್ಲಿಂದ ಮರೆಯಾಗುವುದು ಒಳಿತು ಎಂದು ಅನಿಸುತ್ತಿತ್ತು

2012 06 11_5187.JPG

(ಜುಲೈ, ೧, ೨೦೧೨)

(ಫೋಟೋಗಳೂ ಲೇಖಕರವು)

Advertisements