ನೀಲಿ ಕೊಡೆಯ ಚೆಲುವೆ

DSC_1651ಇಲ್ಲಿ ಬಿಸಿಲಿದ್ದರೂ, ಚಳಿಯಿದ್ದರೂ, ಮಂಜು ಮಳೆ ಸುರಿಯುತಿದ್ದರೂ ನಡುವಯಸ್ಸಿನ ಚೆಲುವೆಯೊಬ್ಬರು ನೀಲಬಣ್ಣದ ಕೊಡೆಯೊಂದನ್ನು ಹಿಡಿದುಕೊಂಡು ಈ ನಗರದ ಒಂದು ತುದಿಯಿಂದ ಇನ್ನೊಂದು ತುದಿಗೆ ನಡೆದು ಹೋಗುತ್ತಿರುತ್ತಾರೆ.

ಯಾವುದೋ ದೇಶ ಕಾಲ ಪ್ರಾಂತ್ಯ ಧರ್ಮಕ್ಕೆ ಸೇರಿದ ಸ್ವಲ್ಪ ವಯಸ್ಸಾದ ರಾಜಕುಮಾರಿಯೊಬ್ಬಳನ್ನು ಯಾರೋ ಈ ನಗರದಲ್ಲಿ ಇಳಿಸಿ ಮುಂದಿನ ನಿನ್ನ ದಾರಿಯನ್ನು ನೀನೇ ನೋಡಿಕೋ ಎಂದು ಬಿಟ್ಟು ಹೋಗಿರುವ ಹಾಗೆ ಆಕೆ ಕಾಣಿಸುತ್ತಾಳೆ.

ಕಿವಿಯ ತುಂಬ ಲೋಲಾಕುಗಳು,ಕೈಯ ತುಂಬಾ ಗಾಜಿನ ಬಳೆಗಳು ಮೈಯ ಒಂದಿಂಚೂ ಕಾಣಿಸದ ಹಾಗೆ ಸುತ್ತಿಕೊಂಡಿರುವ ಅವಳ ಸೀರೆಯ ಮೇಲೆ ಎದ್ದು ಕಾಣುವ ಹಾಗೆ ತೂಗುತ್ತಿರುವ ಒಂದು ದೊಡ್ಡ ಬೀಗದ ಗೊಂಚಲು.

ಅವಳು ನಡೆಯುತ್ತಿರುವ ಗಾಂಭೀರ್ಯವನ್ನು ಗಮನಿಸಿದರೆ ಆಕೆಯ ಸೊಂಟದಲ್ಲಿ ದೊಡ್ಡದೊಂದು ಚಿನ್ನದ ಉಡಿದಾರ ಜಂಬದಲ್ಲಿ ಅಡಗಿಕೊಂಡಿರುವಂತೆ ಅನಿಸದೇ ಇರದು.

ಆಕೆ ಹೀಗೆ ನಡೆದುಕೊಂಡು ಹೋಗುತ್ತಿರುವುದು ತನ್ನ ಮನೆಯಿಂದ ತನ್ನ ಗಂಡನ ಕಿರಾಣಿ ಅಂಗಡಿಗೆ ಅಥವಾ ಗಂಡನ ಕಿರಾಣಿ ಅಂಗಡಿಯಿಂದ ಮರಳಿ ಮನೆಯ ಕಡೆಗೆ.

ಬೆಳಗ್ಗೆಯೇ ಎದ್ದು ಹೊರಡುವ ಗಂಡನಿಗೆ ಬೆಳಗಿನ ನಾಷ್ಟಾ ಕಟ್ಟಿಕೊಂಡು ಬೆಳಗ್ಗೆ ಒಮ್ಮೆ ಮತ್ತೆ ಮಧ್ಯಾಹ್ನದ ಊಟದ ಬುತ್ತಿ ಹಿಡಿದುಕೊಂಡು ಇನ್ನೊಮ್ಮೆ ಹೀಗೆ ಈ ನಗರದಲ್ಲಿ ಈಕೆ ದಿನಕ್ಕೆ ಎರಡು ಬಾರಿ ಸಂಚರಿಸುತ್ತಾಳೆ

ಈ ನಗರದ ಜರಿದು ಹೋಗಲು ಸಿದ್ದವಾಗಿರುವ ಗುಡ್ಡದ ಮೇಲೆ ಆಕೆಯ ಮನೆ.

DSC_9082ಆ ಮನೆಯನ್ನು ಅವರು ಕಟ್ಟಲು ತೊಡಗಿ ದಶಕಗಳೇ ಕಳೆದಿದೆ.ಆದರೆ ಒಂದು ಮೂಲೆಯೂ ಪೂರ್ತಿಯಾಗಿಲ್ಲ.ಅರ್ದಕ್ಕೆ ಎದ್ದಿರುವ ಗೋಡೆಗಳು.ಅಪೂರ್ಣವಾಗಿರುವ ಕಿಟಕಿ ಬಾಗಿಲುಗಳು.ಮನೆಯ ಮೆಟ್ಟಿಲೂ ಅರ್ದದಲ್ಲೇ ಉಳಿದಿದೆ.ಒಂದು ಕೋಣೆಯಿಂದ ಹೊಕ್ಕು ಇನ್ನೊಂದು ಕೋಣೆಯನ್ನು ಸೇರಬೇಕಾದರೆ ನಡುವಲ್ಲಿ ವಿನಾಕಾರಣ ಎದ್ದಿರುವ ಹಲವು ಗೋಡೆಗಳು.

‘ಮನೆ ಕಟ್ಟುವಾಗ ನಮ್ಮ ಆಲೋಚನೆ ಏನೆಲ್ಲಾ ಇತ್ತು.ನಾನು ಒಂದು ಹೇಳಿದ್ದಕ್ಕೆ ಇವಳು ಇನ್ನೊಂದು ಸೇರಿಸಿದಳು,ಇವಳು ಹೇಳಿದ್ದನ್ನು ನಾನು ಅರ್ದದಲ್ಲೇ ಬೇಡ ಎಂದು ನಿಲ್ಲಿಸಿದೆ.ನೋಡಿ ಈ ಮನೆಯ ಅವಸ್ಥೆ ಈಗ ಯಾರಿಗೂ ಬೇಡ’ ಎಂದು ಅವಳ ಗಂಡ ದೊಡ್ಡದಾಗಿ ಮುಖಮಾಡಿಕೊಂಡು ನಗುತ್ತಾರೆ.

‘ಇವರು ಕಟ್ಟುತ್ತಿರುವುದು ಮೈಸೂರು ರಾಜರ ಅರಮನೆ.ಅದಕ್ಕೆ ಇದು ಮುಗಿಯುವುದೇ ಇಲ್ಲ.ಸುಮ್ಮನೆ ಒಂದು ಕೋಣೆ ಒಂದು ಹಾಲು ಒಂದು ಅಡುಗೆಮನೆ ಕಟ್ಟಿದ್ದರೆ ಈಗ ರಾಜರ ಹಾಗೆ ಬದುಕಬಹುದಿತ್ತು’ ಎಂದು ಆಕೆ ಗಂಡನನ್ನು ಜರಿಯುತ್ತಾಳೆ.

ಇವರಿಗೆ ಇರುವುದು ಒಬ್ಬನೇ ಮಗ.ಆತನನ್ನು ಚಿನ್ನದಂತೆ ಸಾಕಿದ್ದಾರೆ.

ಅವನೂ ಅಷ್ಟೆ.ಚಿನ್ನದಂತಹ ಮಗ.ಆದರೆ ಅವನ ತಲೆಗೆ ಒಂದು ಅಕ್ಷರವೂ ಹತ್ತುವುದಿಲ್ಲ.

ಹಾಗಾಗಿ ಪೋಲಿ ಬಿದ್ದಿದ್ದಾನೆ.

ಆದರೆ ಅವನು ಅದ್ಬುತ ಫುಟ್ ಬಾಲ್ ಆಟಗಾರ.ಮಳೆಯಿರಲಿ ಕೆಸರಿರಲಿ ಮೈದಾನದಲ್ಲಿ ಫುಟ್ ಬಾಲೇ ತನ್ನ ಆತ್ಮ ಎಂಬಂತೆ ಒದೆಯುತ್ತಿರುತ್ತಾನೆ.

ಅವನನ್ನು ಹಿಡಿದು ಕೂರಿಸಿ ಬೈದು ರಿಕ್ಷಾ ಓಡಿಸಲು ಬಿಟ್ಟಿದ್ದಾರೆ.

ಆತ ದೊಡ್ಡದಾಗಿ ಕೆಟ್ಟ ಸಂಗೀತ ಹಾಕಿಕೊಂಡು ರಾತ್ರಿ ಪಾಳಿಯಲ್ಲಿ ರಿಕ್ಷಾ ಅಡ್ಡಾದಿಡ್ಡಿಯಾಗಿ ಓಡಿಸುತ್ತಾನೆ.

ಹಗಲು ಮನೆಯಲ್ಲಿ ನಿದ್ದೆಯಲ್ಲೂ ಅವನ ಕಾಲುಗಳು ಕಾಲ್ಚೆಂಡನ್ನು ಒದೆಯುತ್ತಿರುತ್ತಂತೆ.

‘ಇವನಿಗೊಂದು ಹೆಂಡತಿ ಸಿಕ್ಕಿದರೆ ಈ ಬಾಲು ಒದೆಯುವ ಹುಚ್ಚನ್ನು ಬಿಡುತ್ತಾನೆ.ನಮ್ಮವರು ಯಾರಾದರೂ ಹುಡುಗಿ ಇದ್ದರೆ ಹೇಳಿ ಮದುವೆ ಮಾಡಿಸೋಣ’ ಎಂದು ಗಂಡ ಹೇಳಿದ್ದರು.

‘ ಮೊದಲು ನಿಮ್ಮ ಅರಮನೆಯನ್ನು ಕಟ್ಟಿಮುಗಿಸಿ. ಆಮೇಲೆ ಪುತ್ರನಿಗೆ ಮದುವೆ ಮಾಡಿಸಿ.ನೆಂಟರನ್ನು ಈ ಮನೆಗೆ ಕರೆಯಲು ನಾಚಿಕೆಯಾಗುತ್ತದೆ’ ಎಂದು ಹೆಂಡತಿ ಗಂಡನಿಗೆ ರೋಪು ಹಾಕಿದ್ದಳು.

‘ಅಯ್ಯೋ ನಿಮ್ಮ ಜಗಳ ಮುಗಿಯುವುದೇ ಇಲ್ಲವಲ್ಲಾ’ಎಂದು ಹೊರಟುಬಂದವನು ಕೆಲಕಾಲದಿಂದ ಹೋಗಿಯೇ ಇರಲಿಲ್ಲ.

2011-06-29_9005ಮೊನ್ನೆ ನಿಂತ ಮಳೆಯ ನಂತರ ಬಿಸಿಲು ಹೊಳೆಯುತ್ತಿತ್ತು.

ರಸ್ತೆ ಬದಿಯ ಕೆಸರು ಹೊಂಡಗಳನ್ನು ತಪ್ಪಿಸಿಕೊಂಡು ಆಕೆ ನಡೆದು ಬರುತ್ತಿದ್ದಳು.

ಆಕೆ ಯಾವತ್ತೂ ರಸ್ತೆಯಲ್ಲಿ ಮಾತನಾಡಿಸಿದವಳೇ ಅಲ್ಲ.

ಆದರೆ ಮೊನ್ನೆ ಆಕೆಯೇ ‘ಒಂದು ನಿಮಿಷ ನಿಲ್ಲಿ’ ಎಂದು ಜೋರಾಗಿ ಕರೆದಳು.

ನಿಲ್ಲಿಸಿದೆ.

ಹತ್ತಿರ ಬಂದಳು.

ಅದೇ ಬಣ್ಣದ ಕೊಡೆ.ಅದೇ ತೀಕ್ಷ್ಣವರ್ಣದ ಮೈಪೂರಾ ಹೊದ್ದುಕೊಂದಿರುವ ಸೀರೆ.ಅದೇ ಲೋಲಾಕುಗಳು.

ಆಕೆಯ ಕಣ್ಣುಗಳು ಮಾತ್ರ ವಿಷಣ್ಣವಾಗಿ ಸತ್ತು ಹೋದ ಹಾಗೆ ಕಾಣುತ್ತಿದ್ದಳು.

‘ಇಷ್ಟು ದಿನವಾದರೂ ನಿಮಗೆ ಗೊತ್ತೇ ಆಗಲಿಲ್ಲವಾ’ ಎಂದು ಚೀರಿದಳು.

‘ನಮ್ಮ ಕಣ್ಣೀರು ಒರೆಸಲು ಬರಬೇಕೆಂದು ನಿಮಗೆ ಅನಿಸಲೇ ಇಲ್ಲವಲ್ಲಾ’ ಎಂದೂ ಚೀರಿದಳು.

‘ ನಾನು ಈ ನಗರದಲ್ಲಿ ಕೆಲಕಾಲದಿಂದ ಇರಲಿಲ್ಲ. ಏನಾಯ್ತು?’ ಎಂದು ಕೇಳಿದೆ.

`ಇಲ್ಲ ನಿಮ್ಮ ತಪ್ಪಲ್ಲ.ನಿಜ ಹೇಳಬೇಕೆಂದರೆ ನಾವು ಯಾರಿಗೂ ಹೇಳಲೇ ಇಲ್ಲ.ನೇರವಾಗಿ ಆಸ್ಪತ್ರೆಯಿಂದ ಮಗನ ದೇಹವನ್ನು ತಂದು ಮಣ್ಣುಮಾಡಿದೆವು’ ಎಂದು ಹೇಳಿದಳು.

ಮಗನಿಗೆ ಏನಾಗಿತ್ತು ಎಂದು ಕೇಳುವ ದೈರ್ಯ ನನ್ನಲ್ಲಿ ಉಡುಗಿ ಹೋಗಿತ್ತು.

ಆದರೆ ಅವಳಿಗೂ ಮಗನಿಗೆ ಏನಾಗಿತ್ತು ಎಂದು ಗೊತ್ತಿರಲಿಲ್ಲ.

ಯಾರೋ ಸಂಜೆ ಇರುಳಾಗುವ ಹೊತ್ತಲ್ಲಿ ಮಗನ ದೇಹವನ್ನು ಮನೆಗೆ ಹೊತ್ತುಕೊಂಡು ಬಂದರಂತೆ.

`ಚೆನ್ನಾಗಿಯೇ ಇದ್ದ.ಮೈದಾನದಲ್ಲಿ ಆಡುತ್ತಲೇ ಇದ್ದ.ಇದ್ದಕ್ಕಿದ್ದಂತೆ ಬಿದ್ದ.ಇಲ್ಲಿ ತಲುಪುವ ತನಕವೂ ಇತ್ತು.ಈಗ ತಾನೇ ಜೀವ ಹೋಯಿತು’ ಎಂದು ದೇಹವನ್ನು ಅಲ್ಲೇ ಇಟ್ಟು ಕತ್ತಲಲ್ಲಿ ಹೋದರಂತೆ.

ಯಾರೋ ಆಟದ ಗೆಳೆಯರೇ ಮಗನನ್ನು ಕೊಂದು ಹಾಕಿರಬಹುದೆಂದು ಆ ದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಕೊಯ್ಯಿಸಿ ಈಗ ಅದರ ವರದಿಗಾಗಿ ಕಾಯುತ್ತಿದ್ದಾರಂತೆ

2011-07-15_9316ಅವಳು ರಸ್ತೆಯಲ್ಲಿ ನಿಲ್ಲಿಸಿಕೊಂಡು ಹೇಳುತ್ತಿದ್ದಳು.

ಯಾರದೋ ಕಥೆಯನ್ನು ತಾನು ಮುಂದುವರಿಸುತ್ತಿರುವೆ ಎಂಬಂತೆ ಆಕೆ ಅದನ್ನು ವಿವರಿಸುತ್ತಿದ್ದ ರೀತಿ ಈಗಲೂ ಕಿವಿಯಲ್ಲಿ ಕೇಳಿಸುತ್ತಿದೆ.

(ಜೂನ್ , ೨೦೧೨)

(ಫೋಟೋಗಳೂ ಲೇಖಕರವು)

Advertisements