ಕವಿ ಹೃದಯ ಮತ್ತು ಕಾಡುಹಂದಿ

DSC_1810ಅಮವಾಸ್ಯೆಯ ನಡು ಇರುಳು, ‘ಇನ್ನೆಂದೂ ಹೀಗೆ ಸುರಿಯಲಾರೆ. ಈಗ ಸುರಿಯುತ್ತಿರುವ ನನ್ನನ್ನು ಮೊಗೆದು ಮೊಗೆದು ಕುಡಿ’ ಎಂಬಂತೆ ರಾಚುತ್ತಿರುವ ರಕ್ಕಸಿ ಮಳೆ.

`ಈ ಹೊತ್ತು ಇಲ್ಲಿ ಎಲ್ಲವೂ ಅಂದುಕೊಂಡಂತೆ ಆಗುತ್ತಿದೆಯಲ್ಲ ದೇವರೇ ಎಂದು ಕಣ್ಣು ತುಂಬಿಕೊಳ್ಳುತ್ತಿತ್ತು.

ಈ ಕಣ್ಣು ತುಂಬಿಕೊಳ್ಳುವುದು, ಎದೆ ಒದ್ದೆಯಾಗುವುದು ಇತ್ಯಾದಿಗಳೆಲ್ಲ ವಯಸ್ಸಾಗುತ್ತಿರುವಾಗ ಕಾಣಿಸಿಕೊಳ್ಳುವ ಕೆಟ್ಟ ರೋಗಗಳು ಎಂದು ಇದನ್ನೆಲ್ಲ ಅನುಭವಿಸುತ್ತಿರುವ ಗೆಳೆಯ ಅಂದಿದ್ದ.

ಇನ್ನು ಮುಂದೆ ನಾನು ಹೀಗೆ ಬದುಕಬಾರದು, ಕಠಿಣ ಹೃದಯಿಯಾಗಿರಬೇಕು, ನನಗೆ ಬೇಕಾದ ಹಾಗೆ ಎಲ್ಲವನ್ನೂ ಬಗ್ಗಿಸಿ ಬದುಕಬೇಕು ಎಂದು ಅವನು ನಿರ್ದರಿಸಿಕೊಂಡ ಕೆಲವೇ ಹೊತ್ತಿನಲ್ಲಿ ಅವನಿಗೆ ಈ ಅಳುವ ಕಾಯಿಲೆ ಶುರುವಾಗಿತ್ತಂತೆ.

ಸುಮ್ಮಸುಮ್ಮನೆ ಚಂದ ಅನಿಸಿದಾಗಲೆಲ್ಲ ತುಂಬಿಕೊಳ್ಳುವ ಕಣ್ಣುಗಳು.

ಅದನ್ನು ಹಾಗೇ ಬಿಟ್ಟರೆ ಕೆನ್ನೆಯ ಮೇಲೆ ಹರಿದೇ ಹೋಗುವ ಶುದ್ಧ ಕಣ್ಣೀರು,

ಒದ್ದೆ ಒದ್ದೆ ಹಸಿ ಮದುಮಗನ ಮೈಯ್ಯಂತೆ ಆ ದ್ರಗೊಳ್ಳುವ ಹೃದಯ.

ಅಯ್ಯೋ ತನಗೆ ಹೀಗೆಲ್ಲಾ ಆಗುತ್ತಿದೆಯಲ್ಲಾ ಎಂಬ ಖುಷಿಯಲ್ಲಿ ಮತ್ತೆ ಗಂಟಲು ಒತ್ತರಿಸಿ ಹೃದಯದಿಂದ ನುಗ್ಗಿ ಬರುವ ಉಮ್ಮಳ.

ಅವನು ಮತ್ತೆ ಹೊಸದಾಗಿ ಪುಟ್ಟ ಮಗುವಾಗಿ ಕಣ್ಣು ತುಂಬಿಕೊಂಡು ವಿವರಿಸುತ್ತಿದ್ದ.

‘ಗುರುವೇ, ನೀನು ಕನ್ನೆಯೊಬ್ಬಳ ಪ್ರೇಮದಲ್ಲಿ ಹೊಸತಾಗಿ ಸಿಲುಕಿಕೊಂಡಿರಬೇಕು ಅದಕ್ಕೇ ಹೀಗೆಲ್ಲ ಆಗುತ್ತಿದೆ.ಇದು ಕಾಯಿಲೆಯಲ್ಲ.ಪೂರ್ವಾರ್ಜಿತ ಪುಣ್ಯ.ಅನುಭವಿಸು ಮಗೂ’ಎಂದು ಅಂದು ವಾಪಾಸಾಗುತ್ತಿದ್ದರೆ ಈ ಕಾಡು ದಾರಿಯಲ್ಲಿ ಸುರಿಯುತ್ತಿರುವ ರಕ್ಕಸಿ ಮಳೆಯಲ್ಲಿ ನನಗೂ ಹಾಗೇ ಅನಿಸುತ್ತಿತ್ತು.

ಆಕಾಶದಿಂದ ಇಳಿವ ನೀರಲ್ಲಿ ಕಾಣುತ್ತಿರುವ ಒಂದು ಅನೂಹ್ಯ ಮುಖ.

ಸುಖವೆಂದರೆ ಹೀಗೆ ವಿಲವಿಲ ಒದ್ದಾಡುವಷ್ಟು ಚೆಲುವಿಂದ ತುಂಬಿಕೊಂಡಿರಬೇಕು ಎಂಬಂತೆ ಇಳಿವ ನೀರ ಬೆಳಕಲ್ಲಿ ಹೊಳೆಯುತ್ತಿರುವ ಅಮವಾಸ್ಯೆಯ ಕತ್ತಲು.

ಒಬ್ಬಳು ವನದೇವತೆಯ ಪಾದಗಳು ಹಣೆಯ ಮೇಲೆ ಒತ್ತಿಕೊಂಡಿದೆಯೇನೋ ಅನಿಸುವ ಹಾಗೆ ಕಳೆಯುತ್ತಿರುವ ದೇವರ ಕಾಡಿನ ಹಾದಿ.

ಸುಮ್ಮನೇ ಜೀಪು ನಿಲ್ಲಿಸಿ ಅನುಭವಿಸುತ್ತಿದ್ದೆ.

DSC_1718ಇದ್ದಕ್ಕಿದ್ದಂತೆ ‘ದಡ್’ ಎಂದು ದೊಡ್ಡದಾದ ಕಾಡುಹಂದಿಯೊಂದು ಕಾಡಿನ ಬರೆಯಿಂದ ಟಾರುರೋಡಿಗೆ ಬಿದ್ದು ಚೇತರಿಸಿಕೊಂಡು ಜೀಪಿನ ದೀಪದ ಬೆಳಕನ್ನು ಧೈನ್ಯವಾಗಿ ನೋಡಿ ತಗ್ಗು ಇಳಿದು ಮಾಯವಾಯಿತು.

‘ನೀವು ಮನುಷ್ಯರು ಎಷ್ಟಾದರೂ ಇಷ್ಟೇ.ಇಂದಲ್ಲ ನಾಳೆಯಾದರೂ ನನ್ನನ್ನು ಹುಡುಕಿ ಹಿಡಿದು ತಿವಿದು ತಿನ್ನುವವರೇ.ನೀವು ಕೇಳುವ ಸಂಗೀತಕ್ಕೂ,ನೀವು ಓದುವ ಸಾಹಿತ್ಯಕ್ಕೂ ನನ್ನ ಪ್ರಕಾರ ನಯಾ ಪೈಸೆ ಬೆಲೆಯಿಲ್ಲ’ ಎಂಬಂತೆ ಅದರ ಮುಖಭಾವ ಇತ್ತು.

ನನಗೂ ‘ಹೌದಲ್ಲಾ’ಅನಿಸಿತು.

ಅಷ್ಟು ಹೊತ್ತಿಗೆ ಅದೇ ಬರೆಯನ್ನು ಇಳಿದುಕೊಂಡು ಒಂದಿಷ್ಟು ಮನುಷ್ಯರೂ ಬಂದರು.

ಅವರ ಕೈಯಲ್ಲಿ ಕೋಲುಗಳೂ ಕೋವಿಗಳೂ ಇದ್ದವು.

ಅವರ ಕೈಯಲ್ಲಿ ಮಳೆಯನ್ನೂ ಆಕಾಶವನ್ನೂ ತೂರಿಹೋಗಬಲ್ಲ ತೀಕ್ಷ್ಣ ಬೆಳಕಿನ ಟಾರ್ಚುಗಳು.

‘ಸಾರ್ ಈ ದಾರಿಯಲ್ಲಿ ಹಂದಿಯೊಂದು ಹೋಯಿತಾ’ಎಂದು ಕೇಳಿದರು.

‘ಹೌದು’ ಎಂದು ಅದು ಹೋದ ತಗ್ಗನ್ನು ತೋರಿಸಿದೆ.

‘ಛೆ ಇನ್ನು ಆ ಸೈತಾನು ಸಿಕ್ಕಲಿಕ್ಕುಂಟಾ.ಆ ಗುಂಡಿ ಇಳಿದು ನಾವು ಹೋಗಲಿಕ್ಕುಂಟಾ’ ಎಂದು ಅವರು ಮಳೆಯನ್ನೂ ರಾತ್ರಿಯನ್ನೂ ಶಪಿಸಿದರು.ಜೊತೆಯಲ್ಲಿದ್ದ ತಮ್ಮ ಸಹಚರನೊಬ್ಬನನ್ನು ಅಶ್ಲೀಲವಾಗಿ ಬೈದರು.

ಅವರೆಲ್ಲರೂ ಮಳೆಯಲ್ಲಿ ಪೆಗ್ಗು ಹಾಕಿಕೊಂಡು ಕ್ಲಬ್ಬಿನಲ್ಲಿ ಕೂತಿದ್ದರಂತೆ.

ಅವರಲ್ಲಿ ಒಬ್ಬನಿಗೆ ಇದ್ದಕ್ಕಿದ್ದಂತೆ ಹಂದಿ ಹೊಡೆಯುವ ಆಸೆ ಆಯಿತಂತೆ.

ಅವನ ಅತಿ ಆಸೆಯೇ ಅವರನ್ನೆಲ್ಲ ಈ ಮಳೆಯಲ್ಲಿ ಹೀಗೆ ಅವಸ್ಥೆ ಪಡುವ ಹಾಗೆ ಮಾಡಿತಂತೆ.

ಅದಕ್ಕಾಗಿ ಅವರು ಅವನನ್ನು ಬೈಯುತ್ತಾ ‘ಬರುತ್ತೇವೆ ಸಾರ್’ ಎಂದು ಹೊರಟರು.

‘ದುಷ್ಟರು ನಾನು ಈ ಮಳೆಯಲ್ಲಿ ಈ ಅಮವಾಸ್ಯೆ ಇರುಳಿನಲ್ಲಿ ಯಾಕೆ ಹೀಗೆ 2011-09-28_1813 ಕವಿಹೃದಯಿಯಾಗಿ ಸಂಗೀತ ಕೇಳುತ್ತಿರುವೆ ಎಂದೂ ಕೇಳಲಿಲ್ಲ.ನಾರಾಯಣಾ, ಎಂಥ ನರಜನ್ಮ’ಎಂದು ಅವರಿಗೆ ಬೈಯುತ್ತಾ ಅಲ್ಲಿಂದಲೂ ಹೊರಟೆ.

(ಜೂನ್ ೨೪, ೨೦೧೨)

(ಫೋಟೋಗಳೂ ಲೇಖಕರವು)

Advertisements