ಅಳಗು ಎಂಬ ಸಿಲೋನ್ ಅಣ್ಣಾಚಿಯ ಕಥೆ

2011-10-18_3342ಮಡಿಕೇರಿಯಿಂದ ಸುಳ್ಯ ಜಾಲ್ಸೂರು ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಸುಮಾರು ಎಪ್ಪತ್ತೈದು ಕಿಲೋಮೀಟರ್ ಅಂತರವಿದೆ.

ಅದೇ ನೀವು ಮಡಿಕೇರಿಯಿಂದ ಗಾಳಿಬೀಡು, ವಣಚಲು, ಕಡಮಕಲ್ಲು ಮುಖಾಂತರ ಹೋದರೆ ಅದರ ಅರ್ದದಷ್ಟು ದೂರವೂ ಇಲ್ಲ.

ಜೊತೆಗೆ ಕೊಡಗಿನ ಹಿತವಾದ ಚಳಿಯಿಂದ ಹೊರಟು ಘಟ್ಟದ ಕೆಳಗಿನ ಅಸಾಧ್ಯ ಶೆಖೆಗೆ ಸಿಲುಕಿಕೊಂಡು ಬೇಯಬೇಕಾದ ಪ್ರಮೇಯವೂ ಇಲ್ಲ.

ಆದರೆ ಸಮಸ್ಯೆ ಇರುವುದು ಹೋಗಲು ಬೇಕಾದ ದಾರಿಯದ್ದು.

ಏಕೆಂದರೆ ಈ ದಾರಿಯೇ ಈಗ ಇಲ್ಲ.ಒಂದು ಕಾಲದಲ್ಲಿ ಕಾಡು ಕಳ್ಳರಿಗೂ, ಟಿಂಬರು ಕೂಪಿನ ಲಾರಿಗಳಿಗೂ ಹೋಗಲು ಇದ್ದ ದಾರಿ ಈಗ ಮುಚ್ಚಿಹೋಗಿದೆ.ರಕ್ಷಿತ ಕಾಡಿನೊಳಗಡೆಯಿಂದ ರಸ್ತೆಗಳು ಹಾದು ಹೋಗಬಾರದೆಂಬ ಶ್ರೇಷ್ಟ ನ್ಯಾಯಾಲಯದ ತೀರ್ಪಿನಿಂದಾಗಿ ಹಳೆಯ ಕಾಲದ ಈ ಕಾಡು ದಾರಿಯನ್ನು ಮುಚ್ಚಲಾಗಿದೆ.ಇದರಿಂದಾಗಿ ಈ ಕಾಡಿನೊಳಗಡೆ ಮರಗಳು ಎಷ್ಟು ಉಳಿದುಕೊಂಡಿವೆ ಮತ್ತು ಪ್ರಾಣಿಗಳು ಎಷ್ಟು ಬದುಕಿಕೊಂಡಿವೆ ಎಂಬುದನ್ನು ಯಾರಾದರೂ ಪರಿಸರ ತಜ್ಞರೇ ಪರಿಶೀಲಿಸಿ ಹೇಳಬೇಕು.

ಆದರೆ ಈ ಕಾಡಿನ ಅಂಚಿನಲ್ಲಿ ಇರುವ ಮನುಷ್ಯರ ಬದುಕು ಮಾತ್ರ ಇನ್ನಷ್ಟು ನಿಗೂಡವೂ, ದುರ್ಗಮವೂ ಆಗಿ ಬಿಟ್ಟಿದೆ.

ಅದರಲ್ಲೂ ಈ ಕಾಡಿನ ಒಳಗಡೆ ಇರುವ ಟೀ ಮತ್ತು ರಬ್ಬರ್ ತೋಟಗಳಲ್ಲಿ ಬದುಕುತ್ತಿರುವ ಮನುಷ್ಯರ ಕಥೆಗಳು ಒಬ್ಬೊಬ್ಬರದು ಒಂದೊಂದು ಥರ.

ಮಡಿಕೇರಿಯಿಂದ ಸುಳ್ಯ ಜಾಲ್ಸೂರು ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಸುಮಾರು ಎಪ್ಪತ್ತೈದು ಕಿಲೋಮೀಟರ್ ಅಂತರವಿದೆ.

ಅದೇ ನೀವು ಮಡಿಕೇರಿಯಿಂದ ಗಾಳಿಬೀಡು, ವಣಚಲು, ಕಡಮಕಲ್ಲು ಮುಖಾಂತರ ಹೋದರೆ ಅದರ ಅರ್ದದಷ್ಟು ದೂರವೂ ಇಲ್ಲ.ಜೊತೆಗೆ ಕೊಡಗಿನ ಹಿತವಾದ ಚಳಿಯಿಂದ ಹೊರಟು ಘಟ್ಟದ ಕೆಳಗಿನ ಅಸಾಧ್ಯ ಶೆಖೆಗೆ ಸಿಲುಕಿಕೊಂಡು ಬೇಯಬೇಕಾದ ಪ್ರಮೇಯವೂ ಇಲ್ಲ.

2011-10-18_3346.jpgಆದರೆ ಸಮಸ್ಯೆ ಇರುವುದು ಹೋಗಲು ಬೇಕಾದ ದಾರಿಯದ್ದು.

ಏಕೆಂದರೆ ಈ ದಾರಿಯೇ ಈಗ ಇಲ್ಲ.ಒಂದು ಕಾಲದಲ್ಲಿ ಕಾಡು ಕಳ್ಳರಿಗೂ, ಟಿಂಬರು ಕೂಪಿನ ಲಾರಿಗಳಿಗೂ ಹೋಗಲು ಇದ್ದ ದಾರಿ ಈಗ ಮುಚ್ಚಿಹೋಗಿದೆ.ರಕ್ಷಿತ ಕಾಡಿನೊಳಗಡೆಯಿಂದ ರಸ್ತೆಗಳು ಹಾದು ಹೋಗಬಾರದೆಂಬ ಶ್ರೇಷ್ಟ ನ್ಯಾಯಾಲಯದ ತೀರ್ಪಿನಿಂದಾಗಿ ಹಳೆಯ ಕಾಲದ ಈ ಕಾಡು ದಾರಿಯನ್ನು ಮುಚ್ಚಲಾಗಿದೆ.ಇದರಿಂದಾಗಿ ಈ ಕಾಡಿನೊಳಗಡೆ ಮರಗಳು ಎಷ್ಟು ಉಳಿದುಕೊಂಡಿವೆ ಮತ್ತು ಪ್ರಾಣಿಗಳು ಎಷ್ಟು ಬದುಕಿಕೊಂಡಿವೆ ಎಂಬುದನ್ನು ಯಾರಾದರೂ ಪರಿಸರ ತಜ್ಞರೇ ಪರಿಶೀಲಿಸಿ ಹೇಳಬೇಕು.

ಆದರೆ ಈ ಕಾಡಿನ ಅಂಚಿನಲ್ಲಿ ಇರುವ ಮನುಷ್ಯರ ಬದುಕು ಮಾತ್ರ ಇನ್ನಷ್ಟು ನಿಗೂಡವೂ, ದುರ್ಗಮವೂ ಆಗಿ ಬಿಟ್ಟಿದೆ.ಅದರಲ್ಲೂ ಈ ಕಾಡಿನ ಒಳಗಡೆ ಇರುವ ಟೀ ಮತ್ತು ರಬ್ಬರ್ ತೋಟಗಳಲ್ಲಿ ಬದುಕುತ್ತಿರುವ ಮನುಷ್ಯರ ಕಥೆಗಳು ಒಬ್ಬೊಬ್ಬರದು ಒಂದೊಂದು ಥರ.

ಬಹುಶ: ೧೯೭೦ರ ಶುರುವಿನಲ್ಲಿ ಇಂದಿರಾಗಾಂಧಿಯವರ ಕಾಲದಲ್ಲಿ ಇರಬೇಕು.ಸಿಲೋನಿನಿಂದ ಬಂದ ತಮಿಳು ನಿರಾಶ್ರಿತರ ಸುಮಾರು ಒಂಬೈನೂರು ಕುಟುಂಬಗಳು ದಕ್ಷಿಣ ಕನ್ನಡ ಮತ್ತು ಕೊಡಗಿನ ಗಡಿಭಾಗದಲ್ಲಿರುವ ಕಾಡುಗಳಿಗೆ ಬಂದಿಳಿಯಿತು.ಸರಕಾರದ ಪ್ಲಾಂಟೇಷನ್  ಗಳಿಗೆ ನುರಿತ ಕಾರ್ಮಿಕರು ಬೇಕಾಗಿದ್ದರಿಂದ ಇವರನ್ನು ಕರೆತರಲಾಯಿತೋ ಅಥವಾ ಆಶ್ರಯ ಬಯಸಿ ಬಂದ ಇವರಿಗಾಗಿ ಕಾಡುಗಳನ್ನು ಕಡಿದು ಪ್ಲಾಂಟೇಷನ್ ಗಳನ್ನು ಯೋಚಿಸಲಾಯಿತೋ ಎಂಬುದನ್ನು ಆಗಿನ ಸರಕಾರೀ ದಾಖಲೆಗಳೇ ಹೇಳಬೇಕು.

DSC_8291ಆದರೆ ಆ ಕಾಲದಲ್ಲಿ ಇಲ್ಲಿಗೆ ಬಂದ ಈ ತಮಿಳಿನ ಮಂದಿ ನಮ್ಮ ಬಾಲ್ಯಕಾಲದ ಭಾಗವೇ ಆಗಿಹೋಗಿದ್ದರು.ನೋಡಲು ನಮ್ಮ ಹಾಗೆ ಇರದ ಆದರೆ ಕೆಲಸ ಕಾರ್ಯಗಳಲ್ಲಿ ನಮಗಿಂತಲೂ ನುರಿತವರಾಗಿದ್ದ ಈ ಸಿಲೋನ್ ಅಣ್ಣಾಚಿಗಳು ಒಬ್ಬೊಬ್ಬರು ಒಂದೊಂದು ಕಥೆಗಳಂತೆ ಕಾಣಿಸುತ್ತಿದ್ದರು.

ದೊಡ್ಡ ಮೂಗುತಿಯ ಗುಂಗುರು ಕೂದಲಿನ ಕಿವಿಯಲ್ಲಿ ಬಳೆಯಷ್ಟು ದೊಡ್ಡ ಓಲೆ ನೇತಾಡಿಸಿಕೊಂಡು ನಡೆಯುತ್ತಿದ್ದ ಇವರ ಹೆಂಗಸರೂ ನಮಗೆ ಕುತೂಹಲದ ಸಂಗತಿಗಳಾಗಿದ್ದರು.

ಆಗ ನನಗೆ ಆತ್ಮೀಯನಾಗಿದ್ದ ಸಿಲೋನಿನ ಇಂತಹ ಮುದುಕನೊಬ್ಬ ಮನೆಯ ತುಂಬ ನಾಟಿಕೋಳಿಗಳನ್ನು ಸಾಕಿದ್ದ ಮತ್ತು ರಬ್ಬರು ತೋಟದ ಕೆಲಸ ಮುಗಿಸಿ ಸಂಜೆ ಮೊಟ್ಟೆ ಮಾರಿಕೊಂಡು ರಸ್ತೆಯಲ್ಲಿ ನಡೆಯುತ್ತಿದ್ದ.

ಒಮ್ಮೆ ಹೀಗೆ ಆತ ಮೊಟ್ಟೆ ಮಾರಿಕೊಂಡು ರಸ್ತೆ ದಾಟುತ್ತಿದ್ದಾಗ ಆ ದಾರಿಯಲ್ಲಿ ಬರುತ್ತಿದ್ದ ‘ಜೈ ಬಾಹುಬಲಿ’ ಎಂಬ ಹೆಸರಿನ ಲಾರಿಯೊಂದರ ಕೆಳಗೆ ಸಿಲುಕಿ ತೀರಿ ಹೋದ.

ಅದು ಬಹುಶ: ನಾನು ಕಂಡ ಮೊದಲ ಸಾವು.

ಈಗಲೂ ಶ್ರೀಲಂಕಾದ ತಮಿಳರ ದುರಂತ ಯೋಚಿಸಿದಾಗಲೆಲ್ಲಾ ನನಗೆ ನೆನಪಾಗುವುದು ನನ್ನ ಪ್ರೀತಿಯ ಮುದುಕನ ದೇಹ ಮತ್ತು ಅವನ ಮೇಲೆ ಹರಿದಿದ್ದ ಜೈ ಬಾಹುಬಲಿ ಎಂಬ ಆ ಲಾರಿ.

ಕವಿ ರತ್ನಾಕರ ವರ್ಣಿಯ ‘ಭರತೇಶ ವೈಭವ’ ಕಾವ್ಯವನ್ನು ಯಾರೋ ಓದಿ ‘ಭರತ ಬಾಹುಬಲಿ ಕಾಳಗ’ದ ಅರ್ಥ ಹೇಳುವಾಗಲೂ ನನಗೆ ಗೋಚರವಾಗುತ್ತಿದ್ದುದು ಅದೇ ಲಾರಿ ಮತ್ತು ಸಿಲೋನಿನ ಆ ಮುದುಕ!

ಈಗ ನಾನು ಇಲ್ಲಿ ಹೇಳಹೊರಟಿರುವುದು ಸಿಲೋನಿನ ಈ ಮುದುಕನ ಕತೆಯಲ್ಲ.

ಇದು ಇನ್ನೊಬ್ಬ ಮುದುಕನ ಕಥೆ.

ಈ ಕಥೆ ನಡೆದದ್ದು ನನ್ನ ಬಾಲ್ಯಕಾಲದಲ್ಲೂ ಅಲ್ಲ.ಇದು ಒಂದು ವರ್ಷದ ಹಿಂದೆ ಆಗಿದ್ದು.

ಸುಳ್ಯ ಜಾಲ್ಸೂರಿನ ಮಾರ್ಗವಾಗಿ ಇರುವ ರಸ್ತೆ ನಮಗೆ ಬೇಡ.ನಮಗೆ ಕಡಮಕಲ್ಲು ಮಾರ್ಗವಾಗಿ ಇದ್ದ ಹಳೆಯ ರಸ್ತೆಯನ್ನು ತೆರೆದುಕೊಡಿ ಎಂದು ಈ ಕಾಡಿನೊಳಗಡೆ ಇರುವ ಪಾಪದ ಮಂದಿ ಒಂದಿಷ್ಟು ಕತ್ತಿ, ಗುದ್ದಲಿ, ಬುಲ್ಡೋಜರು, ಜೆಸಿಬಿ ಯಂತ್ರಗಳನ್ನು ಹಿಡಿದುಕೊಂಡು ಈ ಕಾಡಿನೊಳಗೆ ಹೊರಟರು.

ಇವರು ಹೊರಟು ಅರ್ದ ದಾರಿ ಸರಿಮಾಡುವ ಹೊತ್ತಿಗೆ ಇದನ್ನು ನಿಲ್ಲಿಸಿ ಎಂದು ನ್ಯಾಯಾಲಯ ಹೇಳಿತು.

ಹಾಗಾಗಿ ಈ ಕೆಲಸ ಅರ್ದಕ್ಕೆ ನಿಂತು, ಮಳೆಬಂದು,ಕಾಡು ಮತ್ತೆ ಬೆಳೆದು,ಕಾಡಾನೆಗಳು ಲದ್ದಿ ಹಾಕಿ ಹೇಸಿಗೆ ಮಾಡಿ,ಜಿಗಣೆಗಳು ಮತ್ತೆ ಮುತ್ತಿಕೊಂಡು ಯಾರೋ ಅರ್ದ ಉಂಡು ಬಿಸಾಕಿದ ಬಾಳೆಯ ಎಲೆಯಂತೆ ಆ ಕಾಡು ದಾರಿ ಗೋಚರಿಸುತಿತ್ತು.

DSC_8296ಆ ರಸ್ತೆ ಹೇಗಿರಬಹುದು ಎಂದು ನೋಡಿಕೊಂಡು ಬರೋಣವೆಂದು ನಾನೂ ಗೆಳೆಯನೊಬ್ಬನ ಜೊತೆ ಹೊರಟಿದ್ದೆ.

ದಾರಿಯಲ್ಲಿ ಆನೆ ಲದ್ದಿಯ ಹಸಿಹಸಿ ವಾಸನೆ.

ಗೆರಿಲ್ಲಾಗಳಂತೆ ಮೈಮೇಲೆ ಏರಿ ಬರುತ್ತಿರುವ ಜಿಗಣೆಗಳ ಪಡೆ ಜೊತೆಗೆ ಕೆಟ್ಟ ದಾಹ.

ಏನು ಮಾಡುವುದೆಂದು ಗೊತ್ತಾಗದೆ ಒಂದು ಕಾಲುದಾರಿ ಇಳಿದು ಈತನ ಮನೆಯ ಮುಂದೆ ನಿಂತರೆ ತೀರಾ ಲಾಚಾರಾಗಿದ್ದ ನಾಯಿಯೊಂದು ನಿತ್ರಾಣದಿಂದ ಬೊಗಳಿತ್ತು.

ಅದರ ಹೆಸರು ಟೈಗರ್ ಎಂದು ಆಮೇಲೆ ಗೊತ್ತಾಗಿತ್ತು.

ಬೊಗಳಿ ಓಡಿಹೋದ ಆ ಟೈಗರ್ ಎಂಬ ನಾಯಿಯ ಯಜಮಾನನೇ ನಾನು ಈಗ ಹೇಳಲು ಹೊರಟಿರುವ ‘ಅಳಗು’ ಎಂಬಾತ.

DSC_8270‘ಅಳಗು’ ಅಂದರೆ ತಮಿಳಿನಲ್ಲಿ ಸುಂದರನಾಗಿರುವವನು ಅಂತ ಅರ್ಥ.

ಆತನ ತಂದೆಯ ಹೆಸರು ‘ಪಿ.ಅಳಗು’.

‘ಪಿ’ ಅಂದರೆ ‘ಪೆರಿಯ’ ಅಂತ.

ಅಂದರೆ ದೊಡ್ಡ ಅಳಗು.

ಈ ದೊಡ್ಡದಾದ ಅಳಗುವಿನ ಮಗನೇ ಸಣ್ಣ ಅಳಗು.

ಇಂದಿರಾ ಗಾಂಧಿಯ ಕಾಲದಲ್ಲಿ ಈ ಕಾಡಿನ ನಡುವೆ ಇರುವ ರಬ್ಬರು ತೋಟವೊಂದರಲ್ಲಿ ಕೆಲಸಕ್ಕೆ ಬಂದಾಗ ಈತನಿಗೆ ಇಪ್ಪತ್ತಾರು ವರ್ಷ.

ಈಗ ಸರಕಾರ ರಬ್ಬರು ಬೆಳೆಸಿದ್ದು ಸಾಕು ಮತ್ತೆ ಕಾಡುಬೇಕು ಎಂದು ತೀರ್ಮಾನಿಸಿದ ಪ್ರಕಾರ ಈತನ ಈ ಕೆಲಸವೂ ಹೊರಟು ಹೋಗಿದೆ.

ಹಾಗಾಗಿ ಈತ ಅಲ್ಲೇ ಪಕ್ಕದಲ್ಲಿ ಪೈಸಾರಿ ಕಾಡುಕಡಿದು ಸಣ್ಣಗೆ ಅಡಿಕೆ, ಕೋಕೋ, ಬಾಳೆ, ಗೇರುಮರ ಬೆಳೆದುಕೊಂಡು ಒಬ್ಬನೇ ಇದ್ದಾನೆ.

ಈತನಿಗೆ ಒಬ್ಬಳು ಒಳ್ಳೆಯ ಹೆಂಡತಿಯೂ ಇದ್ದಳು.

ಅದೇನೋ ಕಾಯಿಲೆ ಬಂದು, ಬಂದ ಆ ಕಾಯಿಲೆ ಎಷ್ಟು ಕಾಲವಾದರೂ ವಾಸಿಯಾಗದಿದ್ದರೂ ಆಕೆ ಅದು ಹೇಗೋ ಬದುಕಿದ್ದಳಂತೆ.

ಆದರೆ ಡಾಕ್ಟರೊಬ್ಬರು ಈಕೆಯ ಕಾಯಿಲೆ ವಾಸಿಯಾಗಿಯೇ ತೀರುವುದೆಂದು ಒಂದು ಇಂಜೆಕ್ಷನ್ ಕೊಟ್ಟಾಗ ಆಕೆ ತೀರಿಯೇ ಹೋದಳಂತೆ.

DSC_8265ಅಳಗು ತನ್ನ ತೀರಿಹೋದ ಹೆಂಡತಿಯ ವಿಷಯ ಹೇಳುವಾಗ ಆತನ ಹಣೆಯಲ್ಲಿದ್ದ ಗಂಟು ಇನ್ನೂ ದೊಡ್ಡದಾಗಿ ನಿಟ್ಟುಸಿರುಬಿಡುವಂತೆ ಕಾಣಿಸುತ್ತಿತ್ತು.

ಅಕಾಲ ವೃದ್ಧನಂತೆ ಆತ ಹಣೆಯ ಆ ಚಿಂತೆಯ ಗಂಟನ್ನು ಹಿಗ್ಗಲಿಸಿಕೊಂಡು ಮಾತಾಡುತಿದ್ದ.

ಆತನಿಗೂ ಸತ್ತು ಹೋಗಲು ಇಷ್ಟವಂತೆ.

ಆದರೆ ಈ ಹಾಳಾದ ದೇವರು ಸಾಯಲು ಬಿಡುತ್ತಿಲ್ಲ ಅಂತ ಶಾಪ ಹಾಕಿದ.

ಆತನನ್ನು ನೋಡಿದರೇ ಸಾಕು ಆತನಿಗೆ ಬೇರೆ ಯಾರೂ ದಿಕ್ಕಿಲ್ಲ ಎಂದು ಅರಿವಾಗುತ್ತಿತ್ತು.

ಆದರೆ ಅದು ಯಾಕೋ ಆತ ತಾನು ಒಬ್ಬನೇ ಒಬ್ಬನೇ ಅಂತ ಮತ್ತೆ ಮತ್ತೆ ಒತ್ತಿ ಹೇಳುತ್ತಿದ್ದ.

ಹೀಗೆ ಹೇಳುತ್ತಿರುವುದನ್ನು ನೋಡಿದರೆ ಮನೆಯೊಳಗೆ ಯಾರನ್ನೋ ಅಡಗಿಸಿಟ್ಟುಕೊಂಡಿದ್ದಾನೆ ಎಂಬ ಅನುಮಾನ ಹುಟ್ಟುತ್ತಿತ್ತು.

ಅದಕ್ಕೆ ಸರಿಯಾಗಿ ಮನೆಯೊಳಗೆ ಯಾರೋ ಹಲ್ಲು ಕಡಿಯುತ್ತಿರುವ ಹಾಗೆ ಕೇಳುತ್ತಿರುವ ಸದ್ದು.

‘ಯಾರೂ ಇಲ್ಲ ಎಂದು ಮತ್ತೆ ಮತ್ತೆ ಹೇಳುತ್ತಿರುವೆ ಆದರೆ ಯಾರೋ ಇರುವ ಹಾಗೆ ಏನೋ ಸದ್ದಾಗುತ್ತಿದೆಯಲ್ಲಾ’ ಎಂದು ಹೇಳಿದೆ.

ಅವನು ನಕ್ಕ. ನೋಡಿದರೆ

ಅದು ಅವನ ಮನೆಯ ಮಸಿಹಿಡಿದ ಗೋಡೆಗೆ ಸಾಯುವ ಹಾಗೆ ನೇತುಕೊಂಡಿದ್ದ ಹಳೆಯ ಕಾಲದ ಕೀಲಿಕೊಡುವ ಗೋಡೆ ಗಡಿಯಾರವಾಗಿತ್ತು.

ಅದಕ್ಕೆ ಸುಮ್ಮನಿರಲು ಬೇಸರವಾಗಿ ಏನೋ ಗೊಣಗುತ್ತಿರುವಂತೆ ಅದರ ಸದ್ದು ಕೇಳಿಸುತ್ತಿತ್ತು.

‘ಇಲ್ಲಿ ಆನೆ ಕಾಟವಿದೆಯಲ್ಲಾ ಅಳಗು ಏನು ಮಾಡುತ್ತೀಯಾ’ ಎಂದು ಕೇಳಿದೆ.

‘ಅದೇನೂ ದೊಡ್ಡ ಪ್ರಶ್ನೆಯಲ್ಲ. ಓಡಿಸುತ್ತೇನೆ’ ಎಂದು ಹೇಳಿದ.

‘ಹೇಗೆ’ ಎಂದು ಕಣ್ಣರಳಿಸಿದೆ.

ಮನೆಯ ಕತ್ತಲೆಯೊಳಗಿಂದ ಸ್ಟೀಲಿನ ತಟ್ಟೆಯೊಂದನ್ನು ತಂದು ಅನ್ನ ಬಡಿಸುವ ಸೌಟಿನಿಂದ ಅದಕ್ಕೆ ಬಡಿದು ಸದ್ದು ಮಾಡಿ ‘ಈ ಸದ್ದಿಗೆ ಆನೆಗಳು ಓಡಿಹೋಗುತ್ತವೆ’ ಎಂದು ಹೇಳಿದ.

DSC_8186‘ಅಲ್ಲಾ ಮಾರಾಯ ಅಲ್ಲಿ ಶ್ರೀಲಂಕಾದಲ್ಲಿ ತಮಿಳು ಹುಲಿಗಳನ್ನು ಬಾಂಬು ಹಾಕಿಯೇ ಕೊಂದು ಬಿಟ್ಟರು. ನೀನು ನೋಡಿದರೆ ಹಳೆಯದಾದ ಈ ಸ್ಟೀಲು ತಟ್ಟೆಯಿಂದಲೇ ಆನೆಗಳನ್ನು ಓಡಿಸುತ್ತಿರುವೆಯಲ್ಲಾ’ ಎಂದು ಏನೋ ಮಹಾ ತಮಾಷೆ ಹೇಳಿದ್ದೆ,

ಹೊರಟು ಬರುವಾಗ ಆ ತಮಿಳು ಮುದುಕ ‘ಇನ್ನು ಯಾವಾಗ ಬರುತ್ತೀಯಾ,ಈ ಕಾಡೊಳಗೆ ಯಾರೂ ಬರುವುದೇ ಇಲ್ಲ’ಎಂದು ಕಣ್ಣು ತುಂಬಿಕೊಂಡು ಕೇಳಿದ್ದ.

‘ಖಂಡಿತ ಬರುತ್ತೇನೆ’ ಎಂದು ಹೇಳಿ ಬಂದಿದ್ದೆ.

DSC_8182ಹೇಳಿ ಒಂದು ವರ್ಷವಾಯಿತು.

ಈಗ ಆ ಕಾಡೊಳಗೆ ಯಾರಿಗೂ ಪ್ರವೇಶವಿಲ್ಲ.

(ಜೂನ್ ೩ ೨೦೧೨)

(ಫೋಟೋಗಳೂ ಲೇಖಕರವು)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s