ನಿಜದ ನಾಯಿಯೂ ಮಾಟದ ನಾಯಿಯೂ

KEN_0024ನಿನ್ನೆ ಶುಕ್ರವಾರ ಮಡಿಕೇರಿ ಸಂತೆಯಲ್ಲಿ ಕಾಡುಮಾವಿನ ಹಣ್ಣು ಹುಡುಕುತ್ತಾ ಅಲೆಯುತ್ತಿದ್ದೆ.`ಒಂದು ಕಾಡುಮಾವಿನ ಹಣ್ಣಿಗೆ ಒಂದು ವರಹವನ್ನಾದರೂ ಕೊಟ್ಟೇನು, ಎಲ್ಲಿಂದಾದರೂ ತಂದುಕೊಡಣ್ಣಾ’ ಎಂದು  ತಂಗಿ ಗೋಗರೆದಿದ್ದಳು.

ತಿರುಗುತ್ತಾ ನೋಡಿದರೆ ಸಂತೆಯ ಒಂದು ಮೂಲೆಯಲ್ಲಿ ಒಂದಿಷ್ಟು ನಾಟಿ ಪೈನಾಪಲ್ ಹಣ್ಣುಗಳನ್ನೂ, ಸಾರು ಬಾಳೆಕಾಯಿಗಳನ್ನೂ, ನಾಟಿಕೋಳಿ ಮೊಟ್ಟೆಗಳನ್ನೂ ಸುರುವಿ ಮುಂದೆ ಇಟ್ಟುಕೊಂಡು ಕುಳಿತಿದ್ದ ಪಾರ್ವತಿಯಮ್ಮನವರು, ‘ಸಾರ್ ಚೆನ್ನಾಗಿದೀರಾ?’ಎಂದು ನಾಚಿಕೊಂಡು ಕೇಳಿದರು.ಅವರು ತಮ್ಮ ಕಪ್ಪಾಗಿದ್ದ ಹಲ್ಲುಗಳನ್ನು ತೋರಿಸಿಕೊಂಡು ಕೆನ್ನೆಯ ಆ ಒಂದು ಗುಳಿಯನ್ನು ಇನ್ನಷ್ಟು ಗುಳಿಮಾಡಿಕೊಂಡು ಕೇಳಿದ ರೀತಿಯೇ ಚೆನ್ನಾಗಿತ್ತು.

ಒಂದು ಕಾಲದಲ್ಲಿ ಅಭೂತಪೂರ್ವ ಸುಂದರಿಯಾಗಿದ್ದಿರಬಹುದಾಗಿದ್ದ ಪಾರ್ವತಿ ಕಾಲನ ಹೊಡೆತಗಳಿಗೆ ಸಿಕ್ಕು ನಲುಗಿದ್ದರೂ ಆಕೆಯ ತುಂಟ ಕಣ್ಣುಗಳು ಮಾತ್ರ ಎಂದೆಂದಿಗೂ ತಾವು ಹೀಗೇ ಇರುವೆವು ಎಂಬಂತೆ ಹೊಳೆಯುತ್ತಿದ್ದವು.

ಈ ಪಾರ್ವತಿಯಮ್ಮನನ್ನು ಸುಮಾರು ಮೂರೂವರೆ ವರ್ಷಗಳ ಹಿಂದೆ ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೊದಲ ಬಾರಿ ನೋಡಿದ್ದೆ.

KEN_0002ಆಕೆ ಎರಡು ಹಗಲು ಎರಡುರಾತ್ರಿ ಕಾಡಿನಲ್ಲಿ ಕಳೆದು ಹೋಗಿದ್ದಳು.

ಕಳೆದುಹೋದ ಕೋಣವನ್ನು ಕಾಡಿನಲ್ಲಿ ಹುಡುಕಿಕೊಂಡು ಹೋದ ಇವಳನ್ನು ಕಡಂಗ ಕಾಡಿನಲ್ಲಿ ಕಾಡುಕೋಣಗಳು ಓಡಿಸಿಕೊಂಡು ಹೋಗಿದ್ದವು.

ಒಂದು ಕಾಡು ಕೋಣವಂತೂ ಈಕೆಯನ್ನು ದುರುಗುಟ್ಟಿಕೊಂಡು ನೋಡಿತ್ತಂತೆ.

ಹಾಗೆ ಆ ಕಾಡುಕೋಣ ದುರುಗುಟ್ಟಿಕೊಂಡು ನೋಡಿದಾಗ ಹೆದರಿಕೊಂಡು ಕಾಡಿನಲ್ಲಿ ಓಡಿಹೋದ ಈಕೆಯ ಕಾಲುಗಳಿಗೆ ಯಾವುದೋ ಕಾಣೆಯಾಗುವ ಬಳ್ಳಿ ಸಿಕ್ಕಿಕೊಂಡಿತಂತೆ.

ಆ ಬಳ್ಳಿಯೇನಾದರೂ ಕಾಲಿಗೆ ಸಿಕ್ಕಿಹಾಕಿಕೊಂಡರೆ ಆಮೇಲೆ ಗೊತ್ತಿರುವ ದಾರಿಗಳೂ ಗೊತ್ತಾಗದೇ ಹೋಗುತ್ತದಂತೆ.

ಹಾಗೆ ಈಕೆಗೆ ದಾರಿ ಗೊತ್ತಾಗದೆ ಎರಡು ರಾತ್ರಿ ಎರಡು ಹಗಲು ಕಾಡಿನಲ್ಲೇ ಕಾಲ ಕಳೆದಿದ್ದಳು.

ದೇಹವೆಲ್ಲಾ ಜಿಗಣೆ ಕಚ್ಚಿ ವೃಣಗಳಾಗಿ ಈಕೆ ಇನ್ನು ಬದುಕುವುದೇ ಇಲ್ಲ ಎಂಬಷ್ಟು ರಕ್ತ ಹೀನತೆಯಾಗಿ ಈಕೆಯನ್ನು ಕಾಡಿನಿಂದ ಹೊತ್ತುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ್ದರು.

ಕಾಡುಪಾಲಾದಾಗ ಈಕೆಯೊಡನೆ ಒಂದು ಸಾಕು ನಾಯಿಯಿತ್ತು.ಈಕೆಗೆ ಕಾಡಿನಲ್ಲಿ ದಾರಿ ತೋರಿಸಿದ ಕರಿಯ ಎಂಬ ಹೆಸರಿನ ಆ ನಾಯಿ ತಾನು ಮಾತ್ರ ಹೊಳೆ ದಾಟಲಾಗದೇ ಕಾಡಿನಲ್ಲೇ ಉಳಿದುಬಿಟ್ಟಿತ್ತು.

ನಾನು ನೋಡಲು ಹೋದಾಗ ಈಕೆ ಆ ನಾಯಿಯನ್ನು ನೆನೆದುಕೊಂಡು ಅತ್ತಿದ್ದಳು.

ಅದಾಗಿ ಮಾರನೆಯ ದಿನ ಆ ಸಾಕು ನಾಯಿಯನ್ನು ಹುಡುಕುತ್ತಾ ಜೋಡುಪಾಲದ ಬಳಿಯ ಕಾಡಿನಲ್ಲಿ ಒಂದು ಸಂಜೆ ಅಲೆದಿದ್ದೆ.
KEN_0025.JPGಹಾಗೆ ನೋಡಿದರೆ ಹೀಗೆ ನಾಯಿಯೊಂದನ್ನು ಹುಡುಕುತ್ತಾ ಕಾಡಿನಲ್ಲಿ ಆಲಸಿಯಾಗಿ ಓಡಾಡುವುದು ನಗು ತರಿಸುವ ವಿಷಯ. ಆದರೆ ಹಾಗೆ ಹುಡುಕುತ್ತಾ ನಡೆವಾಗ ಸಿಕ್ಕಿದ್ದ ಜಲಪಾತಗಳು, ಕಂಡ ನರಮನುಷ್ಯರು, ಕಣ್ಣಪಾಪೆಗಳಿಗೆ ಬಣ್ಣ ಹೊಡೆದಂತೆ ಆವರಿಸಿಕೊಂಡ ಹಸಿರು ಮತ್ತು ಇವೆಲ್ಲದರ ನಡುವೆ ಜೀವ ಹಿಂಡುವಂತೆ ತುಂಬಿಕೊಳ್ಳುತ್ತಿದ್ದ ವಿನಾಕಾರಣ ಸಂತೋಷ ಮತ್ತು ಸಂಕಟ.

ಬೇರೆ ಏನು ಇಲ್ಲದಿದ್ದರೂ ಪರವಾಗಿಲ್ಲ.ಈ ಹುಚ್ಚು ಅಲೆದಾಟ ಇನ್ನೂ ಹೀಗೇ ಇರಲಿ ಪರಮಾತ್ಮಾ ಎಂದು ಈಗಲೂ ಕೇಳಿಕೊಳ್ಳುತ್ತಿರುವೆ.

‘ಸಾರ್, ನಮ್ಮ ಅಮ್ಮ ಕಾಡಿನಲ್ಲಿ ಕೂಲಿಗೆ ಹೋಗುವಾಗ ನಾಯಿಯೊಂದು ಸಿಕ್ಕಿದೆ ಸಾರ್, ಅನ್ನ ಹಾಕಿ ಮನೆಗೆ ತಂದು ಕಟ್ಟಿಹಾಕಿದ್ದೇವೆ. ಕರಿಯ ಅಂತ ಕರೆದರೆ ಬಾಲ ಆಡಿಸುತ್ತದೆ. ನೀವು ಹೇಳಿದ ಆ ನಾಯಿ ಇದೇ ಸಾರ್’ ಅಂತ ಹುಡುಗಿಯೊಬ್ಬಳು ಜೋಡುಪಾಲದಿಂದ ಫೋನಲ್ಲಿ ಮಾತನಾಡಿದ್ದಳು.

ನಾನು ಇದನ್ನು ಆಸ್ಪತ್ರೆಯಲ್ಲಿ ಕಾಡಿನ ನೆನಪುಗಳೊಂದಿಗೆ ಜರ್ಜರಿತವಾಗಿ ಮಲಗಿದ್ದ ಪಾರ್ವತಿಯವರಿಗೆ ಹೇಳಿದಾಗ ಸುಸ್ತಾಗಿದ್ದ ಅವರ ಕಣ್ಣುಗಳಲ್ಲಿ ಒಂದು ಕ್ಷೀಣ ಬೆಳಕು ಮೂಡಿತ್ತು.

ನೋಡಲು ಬಂದವರಿಗೆಲ್ಲಾ ಕಾಡಿನ ಕಥೆ ಹೇಳಿ ಹೇಳಿ ತಲೆಚಿಟ್ಟು ಹಿಡಿದು ಹೋಗಿದ್ದ ಅವರಿಗೆ ಅಲ್ಲಿಂದಲೂ ಎಲ್ಲಿಗಾದರೂ ಓಡಿಹೋಗಬೇಕು ಅನ್ನಿಸುತ್ತಿತ್ತು.

ನಾಯಿ ಹುಡುಕಲು ಹೋದಾಗ ಪಾರ್ವತಮ್ಮನವರ ಎರಡನೇ ಮಗ ನನ್ನ ಜೊತೆಗಿದ್ದ.

ಅವನು ಬೆಂಗಳೂರಿನ ಯಾವುದೋ ಬಾರ್ ಅಂಡ್ ರೆಸ್ಟೋರೆಂಟಿನಲ್ಲಿ ಕೆಲಸಕ್ಕಿದ್ದವನು ಕಾಡಿನಲ್ಲಿ ಕಾಣೆಯಾದ ತಾಯಿಯನ್ನು ಹುಡುಕಲು ಬಂದಿದ್ದ. ಈಗ ನಾಯಿಯನ್ನು ಹುಡುಕಲೂ ನನ್ನ ಜೊತೆ ಓಡಾಡುತ್ತಿದ್ದ.

ಅವನು ತುಂಬ ಒಳ್ಳೆಯ ಹುಡುಗ. ಸ್ವಲ್ಪ ಸ್ವಲ್ಪ ಕುಡಿಯಲೂ ಕಲಿತಿದ್ದ.

ನನ್ನ ಅನುಮತಿಯನ್ನು ಪಡೆದು ಸಿಗರೇಟೂ ಸೇದುತ್ತಿದ್ದ.‘ಜನ ಕೆಟ್ಟವರು ಸಾರ್’ ಅನ್ನುತ್ತಿದ್ದ. ಯಾಕೆ ಅಂತ ಕೇಳಿದೆ.

2011-10-19_3408‘ನನ್ನ ತಾಯಿ ಒಳ್ಳೆಯವರು ಸಾರ್. ಆದರೆ ಈಗ ನಮ್ಮ ಊರಿನಲ್ಲಿ ಇವನ ತಾಯಿ ಯಾರದೋ ಜೊತೆ ಕಾಡಿನಲ್ಲಿ ಎರಡು ರಾತ್ರಿ ಓಡಿಹೋಗಿದ್ದಾಳೆ ಅಂತ ತಮಾಷೆ ಮಾಡುತ್ತಿದ್ದಾರೆ. ನಿಮಗೂ ಯಾರಾದರೂ ಹೇಳಿದರೆ ನಂಬಬೇಡಿ ಸಾರ್’ ಎಂದು ಹೇಳುತ್ತಿದ್ದ.

‘ಓಡಿಹೋಗುವುದು ಕೆಟ್ಟ ಕೆಲಸವೇನಲ್ಲ ಮಾರಾಯಾ..ನನಗೂ ಆಗಾಗ ಯಾರದಾದರೂ ಜೊತೆ ಕಾಡಿಗೆ ಓಡಿಹೋಗಬೇಕು ಅನ್ನಿಸುತ್ತದೆ. ಆದರೆ ಯಾರೂ ಓಡಲು ರೆಡಿಯಿಲ್ಲ. ಜೊತೆಗೆ ಜಿಗಣೆ ಬೇರೆ.ನೀನು ಈ ಕುರಿತು ತಲೆಕೆಡಿಸಿಕೊಳ್ಳಬೇಡ. ನಾವು ಕರಿಯ ನನ್ನು ಹುಡುಕುವಾ..’ಎಂದು ಆತನಿಗೆ ಸಮಾಧಾನ ಹೇಳಿದ್ದೆ.

ಹೋಗಿ ನೋಡಿದರೆ ಆ ಹುಡುಗಿಯ ಮನೆಯ ಮುಂದೆ ನಾಯಿಯೊಂದು ಬಾಲ ಅಲ್ಲಾಡಿಸುತ್ತಾ ನನ್ನನ್ನು ಕರೆದುಕೊಂಡು ಹೋಗಿ ಎಂದು ಸ್ನೇಹದಲ್ಲಿ ಗೋಗರೆಯುತ್ತಿತ್ತು. ಆಕೆಯ ಅಮ್ಮ ಮುಖವೇ ಕಾಣಿಸದಷ್ಟು ದೊಡ್ಡ ಹುಲ್ಲಿನ ಹೊರೆಯನ್ನು ಹೊತ್ತುಕೊಂಡು ಬಂದವರು ಉಸ್ಸೆಂದು ನೆಲದಲ್ಲಿಟ್ಟು ‘ಕರೆದುಕೊಂಡು ಹೋಗಿ ನಿಮ್ಮ ನಾಯಿಯನ್ನು’ ಎಂದು ನಕ್ಕರು.

KEN_0025.JPG‘ಇದು ನಮ್ಮ ನಾಯಿಯಲ್ಲ. ನಮ್ಮ ನಾಯಿ ಇನ್ನೂ ದೊಡ್ಡದು’ ಎಂದು ಪಾರ್ವತಮ್ಮನ ಮಗ ಹೇಳುತ್ತಿದ್ದುದು ನನಗೆ ಕೇಳಿಸುತ್ತಲೇ ಇರಲಿಲ್ಲ. ಏಕೆಂದರೆ ಕಾಡಿನ ಒಳಗಿನ ಆ ಮನೆಯ ಕೆಳಗೆ ದೊಡ್ಡದೊಂದು ತೊರೆ ಜಲಪಾತವಾಗಿ ಹರಿಯುತ್ತಾ ಸದ್ದು ಮಾಡುತ್ತಿತ್ತು.

‘ಇದು ನಮ್ಮ ನಾಯಿಯಲ್ಲ’ ಎಂದು ಆತ ಮತ್ತೆ ಮತ್ತೆ ಗೋಗರೆಯುತ್ತಿದ್ದ.

ಆ ನಾಯಿಯಾದರೋ ನನ್ನನ್ನು ಕರೆದುಕೊಂಡು ಹೋಗಿ ಎಂದು ಬಾಲವಾಡಿಸುತ್ತಾ ನಮ್ಮನ್ನು ಬೇಡಿಕೊಳ್ಳುತ್ತಿತ್ತು.

‘ಕರೆದುಕೊಂಡು ಹೋಗಿ, ಇದಕ್ಕೆ ಅನ್ನ ಹಾಕಲು ನಮಗೆ ಕಷ್ಟ’ ಎಂದು ಆ ಹುಡುಗಿಯ ಅಮ್ಮನೂ ಕೇಳಿಕೊಳ್ಳುತ್ತಿದ್ದರು.

ನಾನು ಜೀವನದಲ್ಲೇ ಇದುವರೆಗೆ ಕುಡಿದಿರದಷ್ಟು ರುಚಿಕರವಾದ ನಿಂಬೆ ಶರಬತ್ತು ಕೊಟ್ಟರು.

ಇನ್ನೂ ಬೇಕಾ ಎಂದು ಮತ್ತೆ ಮತ್ತೆ ಸುರಿಯುತ್ತಿದ್ದರು. ಈವತ್ತು ಇಲ್ಲೇ ಇದ್ದು ಹೋಗಿ ಎಂದು ಕೇಳಿಕೊಳ್ಳುತ್ತಿದ್ದರು.

ನಾವು ಆ ಅಪರಿಚಿತ ಕೆಂಚ ನಾಯಿಯನ್ನು ಅಲ್ಲೇ ಬಿಟ್ಟು ಬಂದೆವು.

ಏಕೆಂದರೆ ಅಪರಿಚಿತ ನಾಯಿಯನ್ನು ಸಾಕುವುದು ಒಳ್ಳೆಯದಲ್ಲ. ಅದು ಮಾಟದ ನಾಯಿಯಿರಬಹುದು ಎಂದು ಆತ ಹೆದರಿದ್ದ.

KEN_0023.JPGನನಗೂ ಈ ಮಾಟದ ನಾಯಿಗಳ ವಿಷಯವನ್ನು ಈ ಮೊದಲು ಯಾರೋ ಹೇಳಿದ್ದರು.

ನೀವು ದಾರಿಯಲ್ಲಿ ಯಾವುದಾದರೂ ನಾಯಿಯನ್ನು ಕಂಡರೆ, ಆ ನಾಯಿ ಅಸಹಜವಾಗಿ ಬಾಲ ಆಡಿಸುತ್ತಾ ಹಲ್ಲು ಕಿರಿದರೆ ಅದನ್ನು ಮನೆಗೆ ಒಯ್ಯಬಾರದಂತೆ.ಒಯ್ದರೆ ಆ ಮಾಟದ ನಾಯಿ ನಿಮ್ಮ ವಂಶವನ್ನೇ ನಿರ್ವಂಶ ಮಾಡಿಬಿಡುತ್ತದೆ ಎಂದು ಹೆದರಿಸಿದ್ದರು.

ನನಗೆ ಈ ತರಹದ ಮಾಟಮಂತ್ರದ ಕಥೆಗಳಿಗಿಂತ ಕನ್ನಡ ಸಣ್ಣ ಕಥೆಗಳ ಮೇಲೆಯೇ ಹೆಚ್ಚು ಪ್ರೀತಿ ವಿಶ್ವಾಸ ಇದ್ದರೂ ಆ ಕರಿಯ ನಾಯಿ ಅಸಹಜವಾಗಿ ಬಾಲ ಅಲ್ಲಾಡಿಸುತ್ತಿದ್ದ ರೀತಿ ಯಾಕೋ ಹೆದರಿಕೆ ಹುಟ್ಟಿಸಿತ್ತು.

ಮೊನ್ನೆ ಸಂತೆಯಲ್ಲಿ ಪಾರ್ವತಮ್ಮನವರು ಸಿಕ್ಕಿದಾಗ ಎಲ್ಲ ಕಷ್ಟ ಸುಖಗಳನ್ನು ಮಾತಾಡಿ ಮುಗಿಸಿದ ಮೇಲೆ ಕರಿಯ ನಾಯಿಯ ಕಥೆಯನ್ನೂ ಕೇಳಿದೆ.
‘ಸಾರ್, ಅದು ಬಂದೂ ಆಯಿತು, ಹೋಗಿಯೂ ಆಯಿತು’ ಎಂದು ಪಾರ್ವತಮ್ಮನವರು ವಿಷಾದದಿಂದ ನಕ್ಕರು.

‘ಯಾಕೆ ಏನಾಯಿತು?’ಎಂದು ಕೇಳಿದೆ.

‘ ಅದಕ್ಕೆ ಬರುವಾಗಲೇ ಕಾಡಿನಲ್ಲಿ ಕುರ್ಕಗಳು ಕಚ್ಚಿ ಹುಚ್ಚು ಹಿಡಿದಿತ್ತು.ಹೇಗೋ ಕಾಡೊಳಗಿಂದ ಮನೆ ಹುಡುಕಿಕೊಂಡು ಬಂದಿತ್ತು.ಬಂದು ಮನೆಯಲ್ಲಿದ್ದ ಕೋಳಿಗಳಿಗೂ ಹಂದಿಗಳಿಗೂ ಕಚ್ಚಿ ಸಾಯಿಸಿ ಅದೂ ಸತ್ತು ಹೋಯಿತು,ಎಲ್ಲ ನನ್ನ ಹಣೆಬರಹ’ ಎಂದು ಕೆನ್ನೆಯನ್ನು ಇನ್ನಷ್ಟು ಗುಳಿಮಾಡಿಕೊಂಡು ಹೇಳಿದಳು.

2011-05-18_8103‘ಪರವಾಗಿಲ್ಲ ಬಿಡು ಪಾರ್ವತೀ, ದೊಡ್ಡದಾಗಿ ಬರಬೇಕಿದ್ದ ಕಷ್ಟ ಸಣ್ಣದಾಗಿ ಬಂದು ಹೋಯಿತು.ನಾವೇನಾದರೂ ಜೋಡುಪಾಲದ ಆ ಇನ್ನೊಂದು  ನಾಯಿಯನ್ನು ನಿಮ್ಮ ನಾಯಿ ಎಂದು ತಂದಿದ್ದರೆ ನೀನು ಇನ್ನೇನೆಲ್ಲಾ ಅನುಭವಿಸಬೇಕಿತ್ತೋ.ಆಗುವುದೆಲ್ಲಾ ಒಳ್ಳೆಯದಕ್ಕೇ ಅಂತ ತಿಳಿ.ಈಗ ನನಗೆ ನಿನ್ನಲ್ಲಿರುವ ಎಲ್ಲ ಕಾಡುಮಾವಿನ ಕಾಯಿ ಸುರಿದುಕೊಡು’ ಎಂದು ಕಾಸು ಎಣಿಸಿ ಕೊಟ್ಟು ಬಂದೆ.

(ಮೇ ೨೦೧೨)

(ಫೋಟೋಗಳೂ ಲೇಖಕರವು)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s