ರಾಜರ ಕಾಲದ ಬ್ರಾಯ್ಲರ್ ಕೋಳಿ

KEN_0012ಸುಮಾರು ಇನ್ನೂರು ವರ್ಷಗಳಿಗಿಂತಲೂ ಹೆಚ್ಚು ಕಾಲ ಕೊಡಗು ದೇಶವನ್ನು ಆಳಿದ್ದ ಹಾಲೇರಿ ರಾಜವಂಶದ ಕೊನೆಯ ದೊರೆ ಚಿಕವೀರರಾಜೇಂದ್ರ.

ಈ ದೊರೆಯ ಕುರಿತು ಮಾಸ್ತಿ ವೆಂಕಟೇಶ ಅಯ್ಯಂಗಾರರು ಬರೆದ ಕಾದಂಬರಿಯನ್ನು ನಿಮ್ಮಲ್ಲಿ ಕೆಲವರಾದರೂ ಓದಿರಬಹುದು.

ಬ್ರಿಟೀಷರು ಈತನನ್ನು ಅಧಿಕಾರದಿಂದ ಬಲವಂತವಾಗಿ ಇಳಿಸಿ, ಬೆಂಗಳೂರು, ವೆಲ್ಲೂರು ಹಾಗೂ ಕೊನೆಗೆ ಕಾಶಿಯಲ್ಲಿ ಕೂಡಿಟ್ಟಿದ್ದರು.ಈ ದೊರೆಯ ಮಗಳು ಗೌರಮ್ಮಳನ್ನು ಬ್ರಿಟನ್ನಿನ ರಾಣಿ ವಿಕ್ಟೋರಿಯಾ ಸಾಕುಮಗಳಂತೆ ಇಟ್ಟುಕೊಂಡಿದ್ದಳು.ಆಕೆಗೆ ಕ್ರೈಸ್ತ ಧರ್ಮ ದೀಕ್ಷೆ ನೀಡಿ ವಿಕ್ಟೋರಿಯಾ ಎಂಬ ಹೆಸರನ್ನೂ ಇಟ್ಟಿದ್ದಳು.

ಹನ್ನೆರಡು ವರ್ಷದ ಈ ವಿಕ್ಟೋರಿಯಾ ಎಂಬ ಗೌರಮ್ಮ ಲಂಡನ್ನಿನಲ್ಲೇ ಬೆಳೆದು ತನ್ನ ಇಪ್ಪತ್ತಮೂರನೇ ವಯಸಿನಲ್ಲೇ ಕಾಯಿಲೆಯಿಂದ ತೀರಿಕೊಂಡಳು.ಆ ಹೊತ್ತಿಗೆ ಆಕೆಗೆ ಬ್ರಿಟಿಷ್ ರಾಜಮನೆತನದ ಒಬ್ಬನೊಂದಿಗೆ ಮದುವೆಯೂ ಆಗಿತ್ತು.ಆತ ಕುಡುಕನೂ, ಜೂಜುಕೋರನೂ ಆಗಿದ್ದನಂತೆ.

ಕೊಡಗಿನ ರಾಜ ಕಿರೀಟದ ಅಮೂಲ್ಯ ಮುತ್ತು ರತ್ನಗಳನ್ನೂ ಈತನೇ ತನ್ನ ಕುಡುಕತನದಿಂದಾಗಿ ಹಾಳುಮಾಡಿದ ಎಂದು ಇತಿಹಾಸದ ಕಥೆಗಳು ಹೇಳುತ್ತವೆ.

DSC_0059_2.JPGಇಲ್ಲಿ ನಾನು ಹೇಳ ಹೊರಟಿರುವುದು ಈ ಇತಿಹಾಸವನ್ನಲ್ಲ.ಇದೇ ರಾಜವಂಶದ ಕುಡಿಯಾಗಿರುವ ಡಾಕ್ಟರ್ ಪ್ರವೀಣ್ ಸರ್ದೇಸಾಯಿ ಎಂಬವರು ರಜೆ ನಿಮಿತ್ತ ಕುಟುಂಬ ಸಮೇತರಾಗಿ ಮೊನ್ನೆ ಶುಕ್ರವಾರ ಮಡಿಕೇರಿಗೆ ಬಂದಿದ್ದರು.

ಬಂದವರು ಹಳೆಯ ರಾಜರುಗಳು ಮಣ್ಣಲ್ಲಿ ಮಣ್ಣಾಗಿ ಮಲಗಿರುವ ಗದ್ದುಗೆಯನ್ನೂ,ಅವರು ಬದುಕಿದ್ದಾಗ ಕಟ್ಟಿಸಿದ ಅರಮನೆ,ಕೋಟೆಗಳನ್ನೂ ಮತ್ತು ಅವರು ಉಂಬಳಿ ನೀಡುತ್ತಿದ್ದ ದೇಗುಲಗಳನ್ನೂ ನೋಡಿಕೊಂಡು ಹೋದರು.

ಅವರ ಹೆಂಡತಿಯೂ ವೈದ್ಯರೇ.ಅವರಿಗೆ ಇಬ್ಬರು ಹೆಣ್ಣು ಮಕ್ಕಳು.ಇಬ್ಬರೂ ಚೂಟಿಯಾದ ಹುಡುಗಿಯರು.ತಮ್ಮ ತಂದೆಯ ತಾತನ ತಾತನ ತಾತ ಈ ಬೆಟ್ಟದ ಮೇಲಿಂದ ಕಾಣಿಸುವ ಸಾವಿರ ಸಾವಿರ ಹೆಕ್ಟೇರುಗಟ್ಟಲೆ ಭೂ ಪ್ರದೇಶವನ್ನು ಆಳುತ್ತಿದ್ದ ರಾಜನಾಗಿದ್ದ ಎಂಬ ಕಥೆ ಕೇಳಿ ಅವರ ಕಣ್ಣುಗಳು ಹೊಳೆಯುತ್ತಿದ್ದವು.

ಈ ಸಲದ ರಜೆ ಮುಗಿಸಿ ಮರಳಿ ಶಾಲೆಗೆ ಹೋದಾಗ ಈ ಕುರಿತು ಜಂಬ ಕೊಚ್ಚಿಕೊಳ್ಳುವುದಲ್ಲದೆ ಬೇರೆ ಇನ್ನೇನೂ ಮಾಡಲಾಗುವುದಿಲ್ಲ ಎಂಬ ಸರಳ ಸತ್ಯವೂ ಆ ಮಕ್ಕಳಿಗೆ ಆಗಲೇ ತಿಳಿದಂತಿತ್ತು.

DSC_1498ಆ ಮಕ್ಕಳ ತಂದೆ ಪ್ರವೀಣ್ ಸರ್ದೇಸಾಯಿಯವರು ಬಾಗಲಕೋಟೆ ಕಡೆಯವರು.ಚಿಕವೀರರಾಜೇಂದ್ರ ಎಂಬ ಅಂತಿಮ ರಾಜನಿಗೆ ಕಾಶಿಯಲ್ಲಿ ಉಂಟಾದ ಪುತ್ರನ ಮರಿ ಮೊಮ್ಮಗಳ ಮಗ ಇವರು.ಆದರೆ ತಾನು ರಾಜವಂಶಜ ಎಂಬ ಹಮ್ಮೇನೂ ಅವರ ಮುಖದಲ್ಲಿ ಇರಲಿಲ್ಲ.ಆದರೆ ತಮ್ಮ ಸ್ವಲ್ಪ ಕೀಟಲೆ ಸ್ವಭಾವದ ಮಡದಿಗೆ ತಾನು ಹೇಳುತ್ತಿರುವುದು ಸುಳ್ಳಲ್ಲ ಎಂಬುದನ್ನು ತೋರಿಸಿಕೊಡಲು ಕರೆದುಕೊಂಡು ಬಂದಿದ್ದರು.

ಬಾಗಲಕೋಟೆಯ ಅವರ ಮನೆಯಲ್ಲಿ ಲಿಂಗರಾಜೇಂದ್ರ ಅರಸನ ‘ಲಿಂ’ ಎಂಬ ರಾಜಮುದ್ರೆ ಇರುವ ದೀಪಗಳೂ, ‘ವಿ’ಎಂಬ ವೀರರಾಜನ ಮುದ್ರೆ ಇರುವ ಖಡ್ಗಗಳು ಇರುವುದನ್ನು ಹೇಳಿದಾಗ ಅವರನ್ನು ಆಗ ಪ್ರೇಮಿಸುತ್ತಿದ್ದ ಈಕೆ ನಂಬಿರಲಿಲ್ಲವಂತೆ.

‘ರೈಲು ಬಿಡುತ್ತಿದ್ದೀಯಾ’ ಅಂತ ಛೇಡಿಸುತ್ತಿದ್ದರಂತೆ.

‘ನಿನ್ನ ಬಾಯ್ ಫ್ರೆಂಡ್ ಯಾಕೋ ನಿನ್ನ ಮೆಚ್ಚಿಸಲು ಸುಳ್ಳು ಹೇಳುತ್ತಿದ್ದಾನೆ.ಈ ಪ್ರಾಯದಲ್ಲಿ ಹುಡುಗರು ಪ್ರೇಮಕ್ಕಾಗಿ ಎಂತ ಸುಳ್ಳನ್ನಾದರೂ ಹೇಳಬಲ್ಲರು.ಕೊಂಚ ಹುಶಾರು’ಎಂದು ಆಕೆಯ ತಂದೆಯೂ ಎಚ್ಚರಿಸಿದ್ದರಂತೆ.

ಆದರೂ ಎಷ್ಟು ಒಳ್ಳೆಯ ಎಷ್ಟು ಪಾಪದ ಹುಡುಗ ಎಂದು ಮೆಚ್ಚಿಕೊಂಡು ಮದುವೆಯಾಗಿದ್ದರು.

ಈಗ ಮಡಿಕೇರಿಯ ಅರಮನೆಯ ಬಾಗಿಲಲ್ಲಿಯೂ, ಇಲ್ಲಿನ ದೇಗುಲಗಳ ಗೋಡೆಗಳಲ್ಲಿಯೂ ಅದೇ ರಾಜಮುದ್ರೆಗಳನ್ನು ಕಂಡು ಆಕೆಯ ಕಣ್ಣುಗಳೂ ಅರಳಿಕೊಂಡು ಮಹಾರಾಜನಾಗಬಹುದಾಗಿದ್ದ ತನ್ನ ಪಾಪದ ಗಂಡನ ಮುಖವನ್ನು ಪ್ರೀತಿಯಿಂದ ನೋಡುತ್ತಿದ್ದವು.

‘ಅಯ್ಯೋ ಬಿಡಿ.ಇದೆಲ್ಲ ನಿಜವಾದರೂ ಒಂದು ರೀತಿ ತಮಾಷೆಯೇ.ಸ್ವಾತಂತ್ರ ಬಂದ ನಂತರ ಪ್ರಧಾನಿ ನೆಹರೂ ರವರು ಅಜ್ಜನಿಗೆ ಕೊಡಗಿನಲ್ಲಿ ಹತ್ತು ಎಕರೆ ಖಾಲಿ ಜಮೀನು ಕೊಡಲು ಮುಂದೆ ಬಂದಿದ್ದರಂತೆ.ಆದರೆ ಬಾಗಲಕೋಟೆಯ ನನ್ನ ಅಜ್ಜ, ಕಂಡಕಂಡವರಿಗೆ ಸಾವಿರಸಾವಿರ ಏಕರೆ ಜಮೀನು ಅಳೆದು ಕೊಡುತ್ತಿದ್ದ ನಮಗೆ ಹತ್ತು ಏಕರೆ ಯಾಕೆ ಅಂತ ಸುಮ್ಮನಾಗಿದ್ದರಂತೆ’.ಸಹಜ ಸರಳತೆಯ ಮುಖಭಾವ ಹೊಂದಿದ್ದ ಡಾಕ್ಟರ್ ಪ್ರವೀಣ್ ಸರ್ದೇಸಾಯಿಯವರು ಸ್ವಲ್ಪ ಹೊತ್ತು ಮಾತಾಡಿ ಜೊತೆಗಿದ್ದು ಹೋದರು.

2011-07-20_9565ಅವರು ಹೆಂಡತಿ ಮಕ್ಕಳೊಡನೆ ಕಾರು ಹತ್ತಿ ಹೊರಟಾಗ ಸುಮ್ಮನೆ ನೋಡುತ್ತಿದ್ದೆ.ರಾಜಮಹಾರಾಜರ ಕಾಲದಿಂದ ಬೀಸುತ್ತಿರುವ ಅದೇ ಗಾಳಿ ಅದೇ ಮಂಜು ಮತ್ತು ಅಂದಿಗಿಂತಲೂ ಭಾರವಾಗಿ ಈಗಲೂ ಆಕಾಶದಲ್ಲಿ ಹಾಗೇ ಉಳಕೊಂಡಿರುವ ಒಂದು ವಿಷಣ್ಣ ಕುಳಿರು.ಕಣ್ಣ ರೆಪ್ಪೆಗಳ ಮೇಲೆ ಕುಳಿತಿರುವ ಮಂಜುಮಂಜು.

ಅವರು ಹೊರಟು ಹೋದ ಮೇಲೆ ಅವರ ಪೂರ್ವಜರಿಂದ ಆಳಿಸಿಕೊಳ್ಳುತ್ತಿದ್ದ ಈ ಕೊಡಗು ದೇಶದ ಒಂದು ರಸ್ತೆಯಲ್ಲಿ ಸುಮ್ಮನೆ ಗಾಡಿ ಓಡಿಸುತ್ತಿದ್ದೆ.ಬಹಳ ನಾಜೂಕಾದ ರಸ್ತೆ.ಇತ್ತೀಚೆಗೆ ಕೆಲವು ಸಮಯದವರೆಗೆ ಈ ದಾರಿಯಲ್ಲಿ ಒಬ್ಬೊಬ್ಬರೇ ಹೋಗಬೇಕಾದರೆ ತುಂಬಾ ಧೈರ್ಯ ಬೇಕಾಗುತ್ತಿತ್ತು.ತುಂಬ ಒಳ್ಳೆಯವರೂ ಸರಳರೂ ಆಗಿರುವ ಇಲ್ಲಿನ ಮಂದಿ ಅದು ಯಾಕೋ ಅಪರಿಚಿತರು ಯಾರಾದರೂ ಈ ಹಾದಿಯಲ್ಲಿ ಕತ್ತಲು ಕತ್ತಲು ಹೊತ್ತಿನಲ್ಲಿ ಹೋದರೆ ವಿನಾಕಾರಣ ಮುಗಿಬೀಳುತ್ತಿದ್ದರು.ಆದರೆ ಈಗ ಈ ಹಾದಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಹೋಟೆಲುಗಳೂ, ರಿಸಾರ್ಟುಗಳೂ ಇರುವುದರಿಂದ ಹಾಗೆ ಏನೂ ಸಂಭವಿಸುವುದಿಲ್ಲ.

ಈ ರಿಸಾರ್ಟುಗಳನ್ನೂ, ಹೋಟೆಲ್ಲುಗಳನ್ನೂ ದಾಟಿ ಒಬ್ಬನೇ ಸುಮ್ಮನೇ ಹೋಗುತ್ತಿದ್ದೆ.ಒಂಟಿಮನೆಗಳ ಮಾಡಿನಿಂದ ಏಳುತ್ತಿರುವ ಹೊಗೆ.ಹಂದಿ ದನಗಳಿಗೆ ಕಲಗಚ್ಚು ಬೇಯಿಸುವ ಪರಿಮಳ.ಮಳೆ ನಿಂತ ಮೇಲೆ ಎಂದಿನಂತೆ ಟಾರು ರಸ್ತೆಯಲ್ಲಿ ಏಳುತ್ತಿರುವ ಹಭೆ.

ಯಜಮಾನರೊಬ್ಬರು ರಸ್ತೆಯಲ್ಲಿ ಕುಡಿದು ಮಲಗಿದ್ದ ಇನ್ನೊಬ್ಬ ಯಜಮಾನರನ್ನು ಏಳಿಸಲು ಹೋಗಿ ತಾವೂ ರಸ್ತೆಯಲ್ಲಿ ಬಿದ್ದು ಹೋಗುತ್ತಿದ್ದರು.ಅವರಿಬ್ಬರ ಕೈಯಲ್ಲಿದ್ದ ಬ್ಯಾಗಿನಲ್ಲಿ ಪೇಟೆಯಿಂದ ಖರೀದಿಸಿಕೊಂಡು ಹೋಗುತ್ತಿದ್ದ ಎರಡು ಜೀವಂತ ಬಿಳಿಯ ಬ್ರಾಯ್ಲರ್ ಕೋಳಿಗಳು ತಾವೂ ಸುಮ್ಮನಿರುವುದು ಯಾಕೆ ಎಂದು ಅಷ್ಟಿಷ್ಟು ಸದ್ದು ಮಾಡುತ್ತಿದ್ದವು.

ಹೀಗಾದರೆ ಇವರಿಬ್ಬರು ದಾರಿ ಬಿಡುವುದಿಲ್ಲವೆಂದು ಅರಿವಾಗಿ ಅವರನ್ನು ಬಿದ್ದಲ್ಲಿಂದ ಎಬ್ಬಿಸಲು ಹೋದರೆ ಅವರಿಬ್ಬರೂ ಕ್ಷಿಪ್ರವಾಗಿ ಜಾಗೃತರಾಗಿ ನನ್ನೊಡನೆ ಹಿಂದಿಯಲ್ಲಿ ಜಗಳಕ್ಕೆ ಏರಿ ಬಂದರು.

ಇದು ನಮ್ಮ ಜಾಗ ಇಲ್ಲಿಗೆ ಬರಲು ಇವನು ಯಾರು ಎಂಬ ಕೋಪವು ಅವರಿಂದ ಕೇಳಿ ಬರುತ್ತಿದ್ದ ಹಿಂದಿಯಲ್ಲಿ ವ್ಯಕ್ತವಾಗುತ್ತಿತ್ತು.

gaalibeedu6.jpg‘ ದಾರಿ ಬಿಡಿ ಮಾರಾಯರೇ.ಈಗ ತಾನೇ ಕೊಡಗು ದೇಶದ ಈಗಿನ ಮಹಾರಾಜರನ್ನು ನೋಡಿ ಬಂದಿದ್ದೇನೆ.ಅವರು ಇನ್ನೂರ ವರ್ಷಗಳ ಹಿಂದೆ ಕುದುರೆಗಳಲ್ಲಿ ಸೈನಿಕರಿಗೆ ಓಡಾಡಲು ತೋಡಿಸಿದ್ದ ಕಡಂಗಗಳು ಹಾಳು ಬಿದ್ದಿವೆಯಾ ಹಾಗೇ ಇದೆಯಾ ಎಂದು ನೋಡಿಕೊಂಡು ಬರಲು ಕಳಿಸಿದ್ದಾರೆ.ಇಲ್ಲಿ ನೋಡಿದರೆ ನೀವು ರಸ್ತೆಯಲ್ಲಿ ಕುಡಿದು ಬಿದ್ದು ನನ್ನ ರಾಜಕಾರ್ಯಕ್ಕೆ ಅಡ್ಡಿ ಪಡಿಸುತ್ತಿದ್ದೀರಿ.ನೀವು ಮಾಡುತ್ತಿರುವುದು ನ್ಯಾಯವೇ’ ಎಂದು ತಮಾಷೆಗೆ ಗೋಗರೆಯಲು ಶುರುಮಾಡಿದೆ.

ಈ ತಮಾಷೆ ಅವರಿಗೂ ಖುಷಿಯಾದಂತೆ ಕಂಡಿತು.

‘ಓ ತಮಾಷೆಗಾರಾ.. ನೀನೂ ನಮ್ಮವನೇಯಾ’ ಎಂದು ಅವರೂ ಬಹಳ ಹೊತ್ತು ಮಾತಾಡಿದರು.

`ಅದು ಸರಿ ನೀವು ಕನ್ನಡವೋ,ಕೊಡವವೋ, ತುಳುವೋ ಇವನ್ನೆಲ್ಲ ಬಿಟ್ಟು ಹಿಂದಿಯಲ್ಲಿ ಯಾಕೆ ನನ್ನೊಡನೆ ಹೋರಾಡಲು ಬಂದಿರಿ?’ ಎಂದು ಕೇಳಿದೆ.

2010-10-20_1553ಅವರಿಬ್ಬರೂ ಮಡಿಕೇರಿ ಸಂತೆಯ ದಿನ ಶುಕ್ರವಾರ  ಸಂತೆಗೆ ಹೋಗಿ ವಾಪಾಸು ಬರುವಾಗ ಇಬ್ಬರೂ ಒಂದೊಂದು ಬ್ರಾಯ್ಲರ್ ಕೋಳಿ ಹಿಡಿದುಕೊಂಡು ಮನೆಗೆ ಮರಳುತ್ತಿದ್ದವರು.ಮನೆಯಲ್ಲಿರುವ ನಾಟಿಕೋಳಿ ಮೊಟ್ಟೆಗೆ ಬೇಕಂತೆ.ಅಥವಾ ಪ್ರವಾಸಿಗರಿಗೆ ನಾಟಿ ಕೋಳಿಯೇ ಬೇಕೆಂದು ರೆಸಾರ್ಟಿನವರು ಹುಡುಕಿಕೊಂಡು ಬರುತ್ತಾರಂತೆ.ಆ ಕೋಳಿ ಹುಡುಕಿಕೊಂಡು ಬರುವ ರೆಸಾರ್ಟಿನ ಹುಡುಗರೂ ಹಿಂದಿಯಲ್ಲೇ ಮಾತಾಡುತ್ತಾರಂತೆ. ಆ ನಾಟಿಕೋಳಿ ಮಾರಿದ ದುಡ್ಡೂ, ನಾಟಿ ಮೊಟ್ಟೆ ಮಾರಿದ ದುಡ್ಡೂ ಎಲ್ಲವೂ ಹೆಂಡತಿಯರಿಗೇ ಸೇರಿದ್ದಂತೆ.ಇವರಿಗೇನೂ ಇಲ್ಲವಂತೆ.

ಇವರಿಬ್ಬರು ಹೆಂಡತಿಯರ ಮೇಲಿನ ಈ ಸಿಟ್ಟನ್ನೂ ಸೆಡವನ್ನೂ ಹಂಚಿಕೊಂಡು ಮನಸ್ಸು ಹಗುರಮಾಡಿಕೊಂಡು ಬರುತ್ತಿರುವಾಗ ನನ್ನನ್ನು ಕಂಡು ನಾನೂ ನಾಟಿಕೋಳಿ ಹುಡುಕಿಕೊಂಡು ಬಂದ ರೆಸಾರ್ಟಿನವನು ಅಂತ ಅವರಿಬ್ಬರಿಗೆ ಸಿಟ್ಟು ತಾರಾಮಾರ ತಲೆಗೆ ಹತ್ತಿ ಅದಕ್ಕೇ ಹಿಂದಿಯಲ್ಲಿ ಬೈದರಂತೆ.

ಅವರಿಬ್ಬರೂ ಸಾರಿ ಸಾರಿ ಅಂತ ಇಂಗ್ಲಿಷಿನಲ್ಲಿ ಕ್ಷಮೆ ಕೇಳುತಿದ್ದರು.ರಾಜನ ಕಡೆಯವನು ಎಂದು ಸುಳ್ಳು ಹೇಳಿದ್ದಕ್ಕೆ ನಾನೂ ಅವರಿಬ್ಬರ ಕ್ಷಮೆ ಕೇಳಿದೆ.ಆಮೇಲೆ ಅವರಿಬ್ಬರನ್ನು ಸ್ವಲ್ಪ ದೂರ ನನ್ನ ಗಾಡಿಯಲ್ಲೇ ಬಿಡಬೇಕಾಯಿತು.ಆ ದಾರಿಯೂ ಚೆನ್ನಾಗಿತ್ತು.ಜೊತೆಗೆ ಅಸಹಜವಾಗಿ ಕೊಕ್ಕರಿಸುತ್ತ ಅವರ ಚೀಲದೊಳಗಿಂದ ಸದ್ದು ಮಾಡುತ್ತಿದ್ದ ಆ ಎರಡು ಬ್ರಾಯ್ಲರ್ ಕೋಳಿಗಳು.

madikeri-yesterday4-1‘ಅಲ್ಲ ಮನುಷ್ಯರೇ ಇವೆರಡನ್ನು ಅಲ್ಲಿ ಮಡಿಕೇರಿಯಲ್ಲೇ ಕೊಯ್ದು, ಚರ್ಮ ಸುಲಿದು, ಕತ್ತರಿಸಿ, ತುಂಡುಗಳನ್ನಾಗಿ ಮಾಡಿಕೊಡುತ್ತಾರಲ್ಲಾ ಯಾಕೆ ಜೀವಂತ ಹಿಡಿದುಕೊಂಡು ಹೊರಟಿದ್ದೀರಿ’ ಎಂದು ಕೇಳಿದೆ.

‘ಅಯ್ಯೋ ಇದೇನು ಸಾರ್.ಇಲ್ಲಿನವರಾಗಿ ನೀವೂ ಇಂತಹ ಮಾತಾಡುತ್ತೀರಿ?ಜೀವಂತ ಕೋಳಿಯನ್ನು ಬಿಸಿಬಿಸಿ ಇರುವಾಗಲೇ ಕೊಯ್ದು ಸಾರು ಮಾಡಿ ಬಿಸಿಬಿಸಿಯಾಗಿ ತಿನ್ನುವ ಮಜವೇ ಬೇರೆ.ಕತ್ತರಿಸಿ ತಂದದ್ದನ್ನು ತಿನ್ನುವ ನರಕವೇ ಬೇರೆ.ಅಯ್ಯೋ ಎಲ್ಲಾದರೂ ಉಂಟೇ’ ಎಂದು ಅವರು ನನ್ನನ್ನೇ ತಮಾಷೆ ಮಾಡಿದರು.

ಟಾರು ದಾರಿ ಮುಗಿದು ಕಾಡೊಳಗೆ ಮೂರು ದಾರಿ ಸೇರುವಲ್ಲಿ ಅವರಿಬ್ಬರು ತಮ್ಮ ಕೋಳಿಗಳ ಜೊತೆ ಇಳಿದರು.
2010-10-20_1570‘ಸರ್ ಥ್ಯಾಂಕ್ಸ್’ ಎಂದು ಇಬ್ಬರೂ ಒಂದೊಂದು ದಾರಿ ಹಿಡಿದು ಮರೆಯಾದರು.

‘ಅಯ್ಯೋ ಮನುಷ್ಯರೇ ನನ್ನನ್ನೂ ನಿಮ್ಮ ಕೋಳಿ ಊಟಕ್ಕೆ ಕರೆಯಬಾರದಿತ್ತೇ’ ಎಂದು ಮರುಗುತ್ತ ವಾಪಾಸಾದೆ.

(ಮೇ ೨೦, ೨೦೧೨)

(ಫೋಟೋಗಳೂ ಲೇಖಕರವು)

Advertisements

One thought on “ರಾಜರ ಕಾಲದ ಬ್ರಾಯ್ಲರ್ ಕೋಳಿ”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s